ಕಳಸ ಅಭಿವೃದ್ಧಿ ಮಾಡಿಸೋ ಕಳಸೇಶ್ವರ..!
– ಮಳೆ ಬಂದರೆ ದ್ವೀಪ, ಶಿಥಿಲಗೊಂಡ ಕಾಲು ಸಂಕ: ಕಳಸದ ಕಾರ್ಲೆ ಗ್ರಾಮದ ದುಸ್ಥಿತಿ
* ಕಳಸ ತಾಲೂಕಾದ್ರೂ ಅಭಿವೃದ್ಧಿ ಮಾತ್ರ ಆಗಲೇ ಇಲ್ಲ..!
* ನಕ್ಸಲರಿದ್ದಾಗಲೇ ಸರಿಯಾಗಿತ್ತು ಅಂತಾರೆ ಜನ!
ನಮ್ಮೂರ್ ಪ್ರಾಬ್ಲಮ್
NAMMMUR EXPRESS NEWS
ಕಳಸ: ಹತ್ತಾರು ಪ್ರಸಿದ್ಧ ದೇವಾಲಯಗಳು, ನಿಸರ್ಗದ ಮಡಿಲಲ್ಲಿ ಇರುವ ಊರು ಕಳಸ. ಇದೀಗ ಕಳಸ ತಾಲೂಕಾಗಿ ವರ್ಷಗಳೇ ಸಂದಿವೆ. ಅದರೆ ಅಭಿವೃದ್ಧಿ ಮಾತ್ರ ಶೂನ್ಯ.
ಸರ್ಕಾರಿ ಕಚೇರಿಗಳು, ಮೂಲಭೂತ ಸೌಲಭ್ಯ, ಜನರಿಗೆ ಅವಕಾಶ, ಆದಾಯ ಮೂಲಗಳು ಇಲ್ಲಿ ಇಲ್ಲವೇ ಇಲ್ಲ. ಹಾಗಾಗಿ ಚಂದದ ಊರಿಗೆ ಬೇಕು ಸರ್ಕಾರದ ಸೌಲಭ್ಯ. ಇದು ಜನರ ಹಕ್ಕು.
ಕಳಸದ ಕಾರ್ಲೆ ಗ್ರಾಮದ ದುಸ್ಥಿತಿ ಒಂದು ನಿದರ್ಶನ
ಕಳಸ ತಾಲೂಕಿನ ಸಂಸೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕುಗ್ರಾಮ ಕಾರ್ಲೆ. ಕಾಡಿನ ಮಧ್ಯೆ ಇರುವ ಗ್ರಾಮದ ಸುತ್ತ ಹಳ್ಳ.ಮಳೆಗಾಲ ಬಂತೆಂದರೆ ದ್ವೀಪವಾಗೋ ಗ್ರಾಮದಲ್ಲಿ ಪರಿಶಿಷ್ಟ ವರ್ಗಕ್ಕೆ ಸೇರಿದ ಗೌಡಲು ಕುಟುಂಬಗಳೇ ವಾಸಿಸುತ್ತಿದ್ದಾರೆ.ಮಳೆಗಾಲದಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳು, ವೃದ್ಧರು, ಸಾರ್ವಜನಿಕರಿಗೆ ತೀವ್ರ ಸಂಕಷ್ಟ ಎದುರಾಗುತ್ತಿದೆ.
ಸುತ್ತಲೂ ಹರಿಯುವ ಹಳ್ಳಗಳು ಮಳೆಗಾಲದಲ್ಲಿ ಅಪಾಯಕಾರಿ ಪ್ರವಾಹದ ರೀತಿಯಲ್ಲಿ ಹರಿಯುತ್ತವೆ. ಹಾಗೇ ಇಲ್ಲಿಗೆ ಸಂಪರ್ಕ ಕಲ್ಪಿಸುವ ರಸ್ತೆಯೂ ಮಳೆಗಾಲದಲ್ಲಿ ಕಟ್ಟೆಮನೆ ಹಳ್ಳದಿಂದ ಕಡಿತಗೊಳ್ಳುವುದರಿಂದ ಗ್ರಾಮಸ್ಥರ ಬದುಕೇ ಸಾಹಸವಾಗುತ್ತದೆ.
ಶಾಲಾ, ಕಾಲೇಜು, ಆಸ್ಪತ್ರೆ, ದಿನಬಳಕೆಯ ವಸ್ತು ಖರೀದಿಗೆ ಕಳಸ ಪೇಟೆಗೇ ಹೋಗಬೇಕಾಗಿರುವುದರಿಂದ ಗಿರಿಜನರಿಗೆ ಮಳೆಗಾಲದಲ್ಲಿ ತೀವ್ರ ಕಷ್ಟವಿದೆ. ‘ಮಳೆ ಬಂದು ಬಿಡುವು ನೀಡಿದಾಗ ನಾವು ಹಳ್ಳ ದಾಟಿಕೊಂಡು ಬರುತ್ತೇವೆ. ಆದರೆ ದೊಡ್ಡ ಮಳೆ ಸುರಿದಾಗ ಈ ಹಳ್ಳ ದಾಟಲು ಸಾಧ್ಯವಿಲ್ಲ ಎಂದು ಗ್ರಾಮಸ್ಥರು ತಮ್ಮ ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ.
ಕಟ್ಟೆಮನೆ ಹಳ್ಳ ದಾಟಿದರೆ ಕಾರ್ಲೆಯ 7 ಗಿರಿಜನರ ಮನೆಗಳಿಗೆ ಸಂಪರ್ಕ ಸಿಗುತ್ತದೆ. ಅಲ್ಲಿಂದ ಮತ್ತಷ್ಟು ದೂರ ಸಾಗಿದರೆ ಕಾರ್ಲೆಯ ಕಟ್ಟಕಡೆಯ ಕುರುಮುಡುಕದ ಒಂಟಿ ಮನೆ ಸಿಗುತ್ತದೆ. ಈ ಎಲ್ಲ ಮನೆಗಳಿಗೂ ಮಳೆಗಾಲ ಬಂತೆಂದರೆ ಜೀವ ಕೈಯಲ್ಲಿ ಹಿಡಿದು ಬದುಕಬೇಕಾದ ಸ್ಥಿತಿ ಎದುರಾಗುತ್ತದೆ. ಗ್ರಾಮಸ್ಥರು ಈಗಲೂ ಶಿಥಿಲಗೊಂಡ ಕಾಲುಸಂಕದ ಮೇಲೆ ಸರ್ಕಸ್ ಮಾಡಿಕೊಂಡು ನಡೆಯುತ್ತಾರೆ.
ವಿದ್ಯುತ್ ಇರಲ್ಲ…ಮೊಬೈಲ್ ನೆಟ್ವರ್ಕ್ ಇಲ್ಲವೇ ಇಲ್ಲ!
ಮೊಬೈಲ್ ನೆಟ್ವರ್ಕ್ ಇಲ್ಲದೇ ಗಿರಿಜನರು ಸಂವಹನಕ್ಕಾಗಿ ತಮ್ಮ ದೊಡ್ಡ ದನಿಯ ಕೂಗನ್ನೇ ಈಗಲೂ ಬಳಸುತ್ತಿದ್ದಾರೆ. ಯಾರಿಗಾದರೂ ಅನಾರೋಗ್ಯ ಸಮಸ್ಯೆ ಎದುರಾದರೆ ಹಳ್ಳದ ಬದಿಯಲ್ಲಿ ನಡೆದು ಬಂದು ಬೇರೆ ಮನೆಯವರನ್ನು ಸಹಾಯಕ್ಕಾಗಿ ಕೂಗಿ ಕರೆಯುತ್ತಾರೆ. ಮಳೆಗಾಲದಲ್ಲಿ ದಿನಗಟ್ಟೆಲೆ ವಿದ್ಯುತ್ ಸಂಪರ್ಕ ಕಡಿತಗೊಂಡಾಗ ಗ್ರಾಮ ಅಕ್ಷರಶಃ ಕತ್ತಲಿನಲ್ಲಿ ಮುಳುಗುತ್ತದೆ.
ನಕ್ಸಲರಿದ್ದಾಗಲೇ ಸರಿಯಾಗಿತ್ತು ಅಂತಾರೆ ಜನ!
* ನಕ್ಸಲರಿದ್ದಾಗ ಪೊಲೀಸರು ಬರುತ್ತಿದ್ದರು ಆಗ ಅನೇಕ ಕೆಲಸ ಆಗ್ತಿತ್ತು
ಹಿಂದೆ ನಕ್ಸಲ್ ಸಮಸ್ಯೆ ಇದ್ದಾಗ ಪೊಲೀಸರು ನಮ್ಮ ಗ್ರಾಮಕ್ಕೆ ಬರುತ್ತಿದ್ದರು. ಆಗ ನಮ್ಮ ಅನೇಕ ಕೆಲಸ ಮಾಡಿಕೊಡುತ್ತಿದ್ದರು. ಈಗ ನಮ್ಮ ಗ್ರಾಮಕ್ಕೆ ಯಾವುದೇ ಅಧಿಕಾರಿಗಳು, ಜನಪ್ರತಿನಿಧಿಗಳು ಕೂಡ ಬರುತ್ತಿಲ್ಲ, ನಮ್ಮ ಸಮಸ್ಯೆ ಕೇಳುವವರೇ ಇಲ್ಲ ಎಂದು ಗಿರಿಜನರು ತಮ್ಮ ಬೇಸರ ಹೊರ ಹಾಕುತ್ತಿದ್ದಾರೆ.
ನಮ್ಮ ಮಕ್ಕಳನ್ನು ಸಂಸೆ, ಹೊರನಾಡಿನ ಆಶ್ರಮ ಶಾಲೆಗೆ ಸೇರಿಸಿದ್ದೀವಿ. ಹೊಳೆ ದಾಟಲು ಕಷ್ಟ ಅಂತ ಮಳೆಗಾಲದ 6 ತಿಂಗಳು ಮಕ್ಕಳು ಮನೆಗೇ ಬರುವುದಿಲ್ಲ. ನಮಗೂ ಮಕ್ಕಳನ್ನು ಮನೆಗೆ ಕರ್ಕೊಂಡು ಬರಬೇಕಂತ ಆಸೆ. ಆದರೆ, ಈ ಹಳ್ಳ ದಾಟಲು ಮಕ್ಕಳಿಗೆ ಆಗಲ್ಲ. ಅದಕ್ಕೆ ನವರಾತ್ರಿಗೆ ಮಾತ್ರ ಅವರು ಮನೆಗೆ ಬರ್ತಾರೆ ಎಂದು ಕಾರ್ಲೆಯ ಗಿರಿಜನ ತಾಯಂದಿರು ತಮ್ಮ ಮಕ್ಕಳನ್ನು ನೆನೆದು ದುಃಖ ಪಡುತ್ತಿದ್ದಾರೆ.
* ಸಮಸ್ಯೆ ಬಗ್ಗೆ ಶಾಸಕಿ ನಯನ ಮೋಟಮ್ಮ ಹೇಳೋದೇನು?
ಕಾರ್ಲೆ ಗ್ರಾಮಸ್ಥರ ಈ ಸಮಸ್ಯೆಗಳ ಬಗ್ಗೆ ಮೂಡಿಗೆರೆ ಕ್ಷೇತ್ರದ ಶಾಸಕಿ ನಯನಾ ಮೋಟಮ್ಮ ಪ್ರತಿಕ್ರಿಯಿಸಿದ್ದು ಕಾರ್ಲೆ ಗ್ರಾಮಸ್ಥರ ಬಹುದಿನಗಳ ಸೇತುವೆ ಬೇಡಿಕೆಯನ್ನು ಸದ್ಯದಲ್ಲೇ ಮಲೆನಾಡು ಅಭಿವೃದ್ಧಿ ಮಂಡಳಿ ಅನುದಾನದಲ್ಲಿ ಈಡೇರಿಸುತ್ತೇವೆ. ಉಳಿದ ಸಮಸ್ಯೆಗಳ ಬಗ್ಗೆ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸುತ್ತಾರೆ ಎಂದು ಹೇಳಿದ್ದಾರೆ.
ಹಲವು ಸೌಕರ್ಯಗಳಿಂದ ವಂಚಿತವಾಗಿ ತೊಂದರೆ ಅನುಭವಿಸುತ್ತಿರುವ ತಾಲೂಕಿನ ಸಂಸೆ ಗ್ರಾ ಪಂ ವ್ಯಾಪ್ತಿಯ ಕಾರ್ಲೆ ಗ್ರಾಮಸ್ಥರ ಸಮಸ್ಯೆಗೆ ಕೂಡಲೇ ಜನಪ್ರತಿನಿಧಿಗಳು,ಅಧಿಕಾರಿಗಳು ಸ್ಪಂದಿಸಿ ಸಮಸ್ಯೆ ಬಗೆಹರಿಸಿ ಅಲ್ಲಿಯ ಜನರ ಸುಗಮ ಜೀವನಕ್ಕೆ ದಾರಿ ಮಾಡಿಕೊಡಬೇಕೆಂಬುದು ನಮ್ಮೂರ್ ಎಕ್ಸ್ಪ್ರೆಸ್ ಕಳಕಳಿ.








