ಬೆಂಗಳೂರು: ರಾಜ್ಯಾದ್ಯಂತ ತೀವ್ರ ಸಂಚಲನ ಮೂಡಿಸಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಮತ್ತೆ ಟ್ವಿಸ್ಟ್ ಸಿಕ್ಕಿದೆ.
ಪ್ರಕರಣದ ಸಮಗ್ರ ಮರು ತನಿಖೆಗಾಗಿ ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡವನ್ನು ರಚಿಸಿ ಅಧಿಕೃತ ಆದೇಶ ಹೊರಡಿಸಿದೆ.
ಐಪಿಎಸ್ ಅಧಿಕಾರಿ ಎನ್. ಶಶಿಕುಮಾರ್ ಅವರ ನೇತೃತ್ವದಲ್ಲಿ ಈ 5 ಮಂದಿ ಹಿರಿಯ ಪೊಲೀಸ್ ಅಧಿಕಾರಿಗಳ ವಿಶೇಷ ತಂಡವನ್ನು ರಚಿಸಲಾಗಿದೆ. ಇದೇ ವೇಳೆ ಪ್ರಕರಣದಲ್ಲಿ ಸಂತೋಷ್ ರಾವ್ ಈಗಾಗಲೇ ವಿಚಾರಣೆ ಎದುರಿಸಿ ಸೆಷನ್ಸ್ ಕೋರ್ಟ್ನಿಂದ ಖುಲಾಸೆಯಾಗಿರುವ ಹಿನ್ನೆಲೆಯಲ್ಲಿ, ಅವರ ವಿರುದ್ಧ ಇದೇ ಪ್ರಕರಣದಲ್ಲಿ ಮತ್ತೊಮ್ಮೆ ತನಿಖೆ ಅಥವಾ ವಿಚಾರಣೆ ನಡೆಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.
ಹೊಸ SIT ತನಿಖೆಯನ್ನು ಮೂರು ತಿಂಗಳೊಳಗೆ ಪೂರ್ಣಗೊಳಿಸಿ, ಸಂಬಂಧಪಟ್ಟ ನ್ಯಾಯಾಲಯಕ್ಕೆ ಕಾನೂನು ಪ್ರಕಾರ ಪೊಲೀಸ್ ವರದಿ ಸಲ್ಲಿಸಬೇಕು ಎಂದು ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ. ತನಿಖೆಯನ್ನು ಯಾವುದೇ ವ್ಯಕ್ತಿ ಅಥವಾ ಹಿಂದಿನ ಆದೇಶದಲ್ಲಿನ ಅಭಿಪ್ರಾಯಗಳಿಂದ ಪ್ರಭಾವಿತರಾಗದೆ ಸ್ವತಂತ್ರವಾಗಿ ನಡೆಸಬೇಕು ಎಂದೂ ನ್ಯಾಯಾಲಯ ಸೂಚಿಸಿದೆ.
ಎಸ್ಐಟಿ ತಂಡದಲ್ಲಿರುವ ಅಧಿಕಾರಿಗಳು ಯಾರು ಯಾರು?
ಎನ್. ಶಶಿಕುಮಾರ್, ಐ.ಪಿ.ಎಸ್. (ಪೊಲೀಸ್ ಮಹಾನಿರೀಕ್ಷಕರು) – ಮುಖ್ಯಸ್ಥರು, ಸಿ.ಎಚ್. ಸುಧೀರ್ ಕುಮಾರ್ ರೆಡ್ಡಿ, ಐ.ಪಿ.ಎಸ್. (ಪೊಲೀಸ್ ಕಮಿಷನರ್, ಮಂಗಳೂರು ನಗರ) – ಸದಸ್ಯರು, ನಿಶಾ ಜೇಮ್ಸ್, ಐ.ಪಿ.ಎಸ್. (ಪೊಲೀಸ್ ಅಧೀಕ್ಷಕರು, ರಾಜ್ಯ ಗುಪ್ತವಾರ್ತೆ, ಬೆಂಗಳೂರು) – ಸದಸ್ಯರು, ಲೋಕೇಶ್ ಜಗಲಸಾರ್, ಐ.ಪಿ.ಎಸ್. (ಪೊಲೀಸ್ ಅಧೀಕ್ಷಕರು, ಸಿ.ಐ.ಡಿ, ಬೆಂಗಳೂರು) – ಸದಸ್ಯರು, ವೆಂಕಟೇಶ್ ಪ್ರಸನ್ನ (ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಬೆಂಗಳೂರು ಗ್ರಾಮಾಂತರ ಜಿಲ್ಲೆ) – ಸದಸ್ಯರು. ಈ ವಿಶೇಷ ತನಿಖಾ ತಂಡವನ್ನು ಕರ್ನಾಟಕ ರಾಜ್ಯ ವ್ಯಾಪ್ತಿಗೆ ಸಂಬಂಧಿಸಿದಂತೆ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ-2023ರ ಕಲಂ 2(1)(ಯು) ಅಡಿಯಲ್ಲಿ ರಚಿಸಿ ಆದೇಶಿಸಲಾಗಿದೆ.







