ಉಳ್ಳಾಲ: ವಿವಾಹಿತ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿರುವ ಘಟನೆ, ತಲಪಾಡಿ ನಾರ್ಲಪಡೀಲ್ ಎನ್ನುವಲ್ಲಿ ನಡೆದಿದೆ. ಮೃತ ಯುವಕನನ್ನು ನಾರ್ಲಪಡೀಲ್ ನಿವಾಸಿ 35 ವರ್ಷದ ರಂಜಿತ್ ಎಂದು ಗುರುತಿಸಲಾಗಿದೆ. ತಾಯಿಗೆ ಊಟ ಮಾಡುವಂತೆ ತಿಳಿಸಿದ ರಂಜಿತ್ ತನ್ನ ಕೋಣೆಗೆ ಹೋಗಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ರಂಜಿತ್ ಗೆ ಆರು ತಿಂಗಳ ಮಗುವಿತ್ತು ಎನ್ನುವ ಮಾಹಿತಿ ಲಭಿಸಿದೆ. ಆತ್ಮಹತ್ಯೆಗೆ ಕಾರಣವೇನು ಎನ್ನುವುದು ಸ್ಪಷ್ಟವಾಗಿ ತಿಳಿದುಬಂದಿಲ್ಲ. ಘಟನೆಗೆ ಸಂಬಂಧಿಸಿದಂತೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ಕೈಗೊಂಡಿದ್ದಾರೆ.
•ಬೈಂದೂರು: ಅಕ್ರಮ ಕೆಂಪುಕಲ್ಲು ಗಣಿಗಾರಿಕೆ ಮೇಲೆ ದಾಳಿ
ಬೈಂದೂರು: ಅಕ್ರಮ ಕೆಂಪುಕಲ್ಲು ಗಣಿಗಾರಿಕೆಗೆ ಸಂಬಂಧಿಸಿದಂತೆ ಪೊಲೀಸರು ದಾಳಿ ನಡೆಸಿದ ಘಟನೆ, ಕಾಲ್ತೋಡು ಗ್ರಾಮದ ಬ್ಯಾಟಿಯಾಣಿ ಎನ್ನುವಲ್ಲಿ ನಡೆದಿದೆ. ಬೀಟ್ ಅಧಿಕಾರಿಗಳು ನೀಡಿದ ಖಚಿತವಾದ ಮಾಹಿತಿಯ ಹಿನ್ನೆಲೆಯಲ್ಲಿ ಬೈಂದೂರು ಠಾಣೆಯ ಪಿಎಸ್ಐ ಸುನಿಲ್ ಕುಮಾರ್ ಅವರು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿಕೊಂಡು, ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಕೆಂಪುಕಲ್ಲು ಗಣಿಗಾರಿಕೆಯ ಮೇಲೆ ದಾಳಿ ನಡೆಸಿದ್ದಾರೆ. ಆರೋಪಿಗಳಾದ ರವೀಂದ್ರ ಪೂಜಾರಿ ಮತ್ತು ಸತೀಶ್ ಶೆಟ್ಟಿ ಅವರನ್ನು ಬಂಧಿಸಿದರು. ಈ ಸಂದರ್ಭದಲ್ಲಿ ಕೆಂಪುಕಲ್ಲುಗಳನ್ನು ತುಂಬಿದ 2 ಟಿಪ್ಪರ್ ಗಳು, ಬ್ಲೇಡ್ ಅಳವಡಿಸಿರುವ 2 ಪವರ್ ಟಿಲ್ಲರ್ ಮಿಷನ್ ಗಳು ಮತ್ತು 2 ಕಲ್ಲುಗಳನ್ನು ಎತ್ತುವ ಟ್ರ್ಯಾಲಿ ಮಿಷನ್ ಗಳು ಸೇರಿ ಸುಮಾರು 16.00.000 ಮೌಲ್ಯದ ಸ್ವತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ. ಘಟನೆಗೆ ಸಂಬಂಧಿಸಿದಂತೆ ಆರೋಪಿಗಳ ವಿರುದ್ಧ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಾನೂನು ಕ್ರಮವನ್ನು ಕೈಗೊಂಡಿದ್ದಾರೆ ಎನ್ನುವ ಸಂಗತಿ ತಿಳಿದುಬಂದಿದೆ.
•ಬೆಳ್ತಂಗಡಿ: ನಾಪತ್ತೆಯಾಗಿದ್ದ ವ್ಯಕ್ತಿ ಶವವಾಗಿ ಪತ್ತೆ
ಬೆಳ್ತಂಗಡಿ: ವ್ಯಕ್ತಿಯೊಬ್ಬರು ಕಳೆದ ಮೂರು ನಾಲ್ಕು ದಿನಗಳ ಹಿಂದೆ ನಾಪತ್ತೆಯಾಗಿದ್ದು, ಇದೀಗ ಶವವಾಗಿ ಕಂಡುಬಂದ ಘಟನೆ, ಬುಧವಾರದಂದು ಶಿಶಿಲ ಗ್ರಾಮದಲ್ಲಿ ನಡೆದಿದೆ. ಇಲ್ಲಿನ ಗುಂಡಿಕ್ಕಾಡು ನಿವಾಸಿಯಾದ ತನಿಯಪ್ಪ ಗೌಡ ಅವರು ಕಾಣೆಯಾಗಿದ್ದ ಹಿನ್ನೆಲೆಯಲ್ಲಿ, ಶೌರ್ಯ ವಿಪತ್ತು ನಿರ್ವಹಣಾ ತಂಡದ ಸದಸ್ಯರಾದ ರಾಧಾಕೃಷ್ಣ ಗುತ್ತು, ಕುಶಾಲಪ್ಪ ಗೌಡ ಬದ್ರಿಜಾಲು, ಸುಬ್ರಾಯ ಗೌಡ ಬದ್ರಿಜಾಲು ಮತ್ತು ಶೀನಪ್ಪ ನಾಯ್ಕ ಮುಚ್ಚಿರಡ್ಕ ಅವರು ಶೋಧನಾ ಕಾರ್ಯ ನಡೆಸಿದಾಗ ಮನೆಯಲ್ಲೇ ತನಿಯಪ್ಪ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಸೆಪ್ಟೆಂಬರ್ 23ರ ಬುಧವಾರದಂದು ಈ ಪ್ರಕರಣ ಬೆಳಕಿಗೆ ಬಂದಿದೆ ಎನ್ನಲಾಗಿದೆ. ಇತ್ತೀಚೆಗೆ ತನಿಯಪ್ಪ ಅವರ ಪತ್ನಿ ಚಿನ್ನಮ್ಮ ಅವರು ಕೂಡ ಸಾವಿಗೀಡಾಗಿದ್ದು, ಜಮೀನಿನ ಕೆರೆಯಲ್ಲಿ ಅವರ ಮೃತದೇಹ ಪತ್ತೆಯಾಗಿತ್ತು ಎನ್ನುವ ಮಾಹಿತಿ ಲಭಿಸಿದೆ. ಆದರೆ, ಚಿನ್ನಮ್ಮ ಅವರ ಸಾವಿಗೆ ಮತ್ತು ತನಿಯಪ್ಪ ಅವರ ಆತ್ಮಹತ್ಯೆಗೆ ಕಾರಣವೇನೆಂಬುದು ಸ್ಪಷ್ಟವಾಗಿ ತಿಳಿದುಬಂದಿಲ್ಲ. ಈಗಾಗಲೇ ಚಿನ್ನಮ್ಮ ಅವರ ಸಾವಿಗೆ ಸಂಬಂಧಿಸಿದಂತೆ ಅವರ ಸಹೋದರರಾದ ಗಂಗಾಧರ ಗೌಡ ಅವರು ಸಾವಿನ ಕುರಿತು ಅನುಮಾನವಿದೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಮತ್ತು ತನಿಯಪ್ಪ ಅವರ ಆತ್ಮಹತ್ಯೆಯ ಕುರಿತು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
•ಉಡುಪಿ: ಮಾದಕ ವಸ್ತು ಮಾರಾಟ; 9ಮಂದಿ ಬಂಧನ
ಉಡುಪಿ: ಶಿರ್ವ ಮತ್ತು ಉಡುಪಿ ನಗರ ಠಾಣೆಯ ಪೊಲೀಸರು ಕಾರ್ಯಾಚರಣೆಯನ್ನು ನಡೆಸಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸಿದ ಘಟನೆ, ಮಂಗಳವಾರದಂದು ಬೆಳ್ಳೆ ಗ್ರಾಮದ ಪಡುಬೆಳ್ಳೆಯ ಭದ್ರಮ್ಮ ರಸ್ತೆಯಲ್ಲಿ ನಡೆದಿದೆ. ಕೆಲವು ವ್ಯಕ್ತಿಗಳು ಈ ಪ್ರದೇಶದಲ್ಲಿ ಎರಡು ಕಾರುಗಳು ಮತ್ತು ಒಂದು ಸ್ಕೂಟರ್ ನಲ್ಲಿ ಮಾದಕ ವಸ್ತುಗಳನ್ನು ಹೊಂದಿದ್ದು, ಮಾರಾಟ ಮಾಡಲು ಯತ್ನಿಸುತ್ತಿದ್ದಾರೆ ಎನ್ನುವ ಖಚಿತವಾದ ಮಾಹಿತಿ ಬಂದ ಹಿನ್ನೆಲೆಯಲ್ಲಿ ಉಡುಪಿ ನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಮಹೇಶ್ ಪ್ರಸಾದ್, ಕಾಪು ವೃತ್ತ ನಿರೀಕ್ಷಕರಾದ ಅಜ್ಮತ್ ಅಲಿ ಅವರ ನೇತೃತ್ವದಲ್ಲಿ ಶಿರ್ವ ಎಸ್ಐ ಅನಿಲ್, ಕಾಪು ಎಸ್ಐ ಶುಭಕರ್, ಎಎಸ್ಐ ಗಳಾದ ಸುದೇಶ್, ಸುಂದರ ಗೌಡ, ಸಿಬ್ಬಂದಿಗಳಾದ ಮಂಜುನಾಥ್, ಹರ್ಷ, ಅರುಣ್, ನಾಗರಾಜ್, ಶರಣ್, ಕಿಶೋರ್, ಸೆನ್ ಪೊಲೀಸ್ ಠಾಣಾ ಸಿಬ್ಬಂದಿಗಳಾದ ಪ್ರವೀಣ್, ದೀಕ್ಷಿತ್, ಮಣಿಪಾಲ್ ಪೊಲೀಸ್ ಠಾಣೆಯ ವಿಶ್ವಜಿತ್, ಉಡುಪಿ ನಗರ ಪೊಲೀಸ್ ಠಾಣೆಯ ಭರತೇಶ ಕಂಕಣವಾಡಿ, ಪ್ರಕಾಶ್, ಠಾಣಾ ಸಿಬ್ಬಂದಿಗಳಾದ ಬಶೀರ್ ಅಹ್ಮದ್, ಆನಂದ ಗಾಣಿಗ, ಸೊಕೊ ಅಧಿಕಾರಿಗಳು ಮತ್ತು ಇತರ ಸಿಬ್ಬಂದಿಗಳು ಕಾರ್ಯಾಚರಣೆಯನ್ನು ನಡೆಸಿ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳನ್ನು ಅಲ್ನಾಜ್ ಅನಾಸ್, ಅಲ್ತಾಫ್, ಸ್ಟ್ಯಾನಿ ಸಂದೀಪ್, ಶಾಕೀಬ್, ಫೈಜಲ್, ಇಮ್ತಿಯಾಜ್, ಅಜಯ್ ಕುಮಾರ್, ಸಂತೋಷ್ ದೇವಾಡಿಗ ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಶ್ರೀವತ್ಸ ಎಂದು ಗುರುತಿಸಲಾಗಿದ್ದು, ಬಂಧನಕ್ಕೆ ಒಳಪಡಿಸಲಾಗಿದೆ. ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದಾಗ ಕೇರಳದ ಉಪ್ಪಳ ಎನ್ನುವ ಪ್ರದೇಶದಿಂದ ಗಾಂಜಾವನ್ನು ಆಮದು ಮಾಡಿಕೊಂಡು ಮಾರಾಟ ಮಾಡುತ್ತಿರುವುದಾಗಿ ತಿಳಿಸಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ.







