ಹೊಸದಿಲ್ಲಿ: ದೇಶಾದ್ಯಂತ ಬ್ಯಾಂಕ್ ಒಕ್ಕೂಟಗಳು ಕರೆ ನೀಡಿರುವ ಮೂರು ದಿನಗಳ ಮುಷ್ಕರದ ಹಿನ್ನೆಲೆಯಲ್ಲಿ, ಗ್ರಾಹಕರಿಗೆ ಬ್ಯಾಂಕಿಂಗ್ ಸೇವೆಗಳಲ್ಲಿ ಯಾವುದೇ ತೊಂದರೆಯಾಗದಂತೆ ತಡೆಯಲು ಕೇಂದ್ರ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದೆ. ಮುಂಬರುವ ಸೆಪ್ಟೆಂಬರ್ 27ರ ಭಾನುವಾರದಂದು ಎಲ್ಲಾ ಸಾರ್ವಜನಿಕ ವಲಯದ ಬ್ಯಾಂಕ್ಗಳು ಹಾಗೂ ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.
ಸೆಪ್ಟೆಂಬರ್ 26 ನಾಲ್ಕನೇ ಶನಿವಾರ ಹಾಗೂ ಸೆಪ್ಟೆಂಬರ್ 27 ಭಾನುವಾರದ ರಜಾ ದಿನಗಳಾಗಿವೆ. ಇದರ ಬೆನ್ನಲ್ಲೇ ಸೆಪ್ಟೆಂಬರ್ 28, 29 ಮತ್ತು 30 ರಂದು ಬ್ಯಾಂಕ್ ನೌಕರರ ಒಕ್ಕೂಟಗಳು ಮುಷ್ಕರ ನಡೆಸಲು ನಿರ್ಧರಿಸಿವೆ. ಈ ರೀತಿ ಸತತ 5 ದಿನಗಳ ಕಾಲ ಬ್ಯಾಂಕ್ ಶಾಖೆಗಳು ಮುಚ್ಚಲ್ಪಟ್ಟರೆ ಸಾರ್ವಜನಿಕರು, ವ್ಯಾಪಾರಿಗಳು ಹಾಗೂ ತುರ್ತು ಆರ್ಥಿಕ ವಹಿವಾಟು ನಡೆಸುವವರು ತೀವ್ರ ಸಂಕಷ್ಟಕ್ಕೆ ಒಳಗಾಗುವ ಸಾಧ್ಯತೆ ಇದೆ. ಹೀಗಾಗಿ, ಗ್ರಾಹಕರ ಅನುಕೂಲಕ್ಕಾಗಿ ಸೆಪ್ಟೆಂಬರ್ 27ರಂದು ಶಾಖೆಗಳನ್ನು ತೆರೆದು ಸಾಮಾನ್ಯ ದಿನಗಳಂತೆಯೇ ಸೇವೆ ಒದಗಿಸಲು ಆದೇಶಿಸಲಾಗಿದೆ.
ಸೆಪ್ಟೆಂಬರ್ 27ರಂದು ಎಲ್ಲಾ ಬ್ಯಾಂಕ್ ಶಾಖೆಗಳು, ಆಡಳಿತ ಕಚೇರಿಗಳು, ಎಟಿಎಂ-ಲಿಂಕ್ ಶಾಖೆಗಳು ಹಾಗೂ ಕರೆನ್ಸಿ ಚೆಸ್ಟ್ಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸಲು ಭಾರತೀಯ ರಿಸರ್ವ್ ಬ್ಯಾಂಕ್ ಅನುಮೋದನೆ ನೀಡಿದೆ.
– ಡಿಜಿಟಲ್ ಸೇವೆ ಬಳಸಲು ಸಲಹೆ
ಸೆಪ್ಟೆಂಬರ್ 28ರಿಂದ 30 ರವರೆಗೆ ನಡೆಸಲು ಉದ್ದೇಶಿಸಿರುವ ಬ್ಯಾಂಕ್ ಮುಷ್ಕರದ ಹಿನ್ನೆಲೆಯಲ್ಲಿ ಗ್ರಾಹಕರು ತಮ್ಮ ತುರ್ತು ಬ್ಯಾಂಕಿಂಗ್ ವ್ಯವಹಾರಗಳನ್ನು ಮುಂಚಿತವಾಗಿ ಪೂರ್ಣಗೊಳಿಸುವಂತೆ ಕರ್ನಾಟಕ ರಾಜ್ಯಮಟ್ಟದ ಬ್ಯಾಂಕರ್ಗಳ ಸಮಿತಿ (ಎಸ್ಎಲ್ಬಿಸಿ) ಮನವಿ ಮಾಡಿದೆ. ಮುಷ್ಕರದ ಅವಧಿಯಲ್ಲಿ ಬ್ಯಾಂಕ್ಗಳ ಶಾಖೆ ಆಧಾರಿತ ಸೇವೆಗಳಿಗೆ ವ್ಯತ್ಯಯ ಉಂಟಾಗುವ ಸಾಧ್ಯತೆ ಇರುವುದರಿಂದ ನಗದು ಹಣ ತೆಗೆಯುವುದು, ನಗದು ಠೇವಣಿ, ಹಣ ವರ್ಗಾವಣೆ, ಚೆಕ್ ವ್ಯವಹಾರ, ಬಿಲ್ ಪಾವತಿ, ಸರಕಾರಿ ಸಂಬಂಧಿತ ಪಾವತಿಗಳು ಹಾಗೂ ಸಾಲದ ಕಂತು ಪಾವತಿಗಳನ್ನು ಸೆಪ್ಟೆಂಬರ್ 28ಕ್ಕೂ ಮುನ್ನವೇ ಪೂರ್ಣಗೊಳಿಸುವಂತೆ ಸಲಹೆ ನೀಡಲಾಗಿದೆ.
ಗ್ರಾಹಕರು ಯುಪಿಐ ಮತ್ತು ಕ್ಯೂ ಆರ್ ಕೋಡ್ ಆಧಾರಿತ ಪಾವತಿಗಳು, ಮೊಬೈಲ್ ಬ್ಯಾಂಕಿಂಗ್, ಇಂಟರ್ನೆಟ್ ಬ್ಯಾಂಕಿಂಗ್, ಎಟಿಎಂಗಳು, ನಗದು ಠೇವಣಿ ಯಂತ್ರಗಳು, ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್ಗಳು, ಪಾಯಿಂಟ್ ಆಫ್ ಸೇಲ್ ಯಂತ್ರಗಳು ಮತ್ತು ಭಾರತ್ ಬಿಲ್ ಪೇಮೆಂಟ್ ವ್ಯವಸ್ಥೆಗಳನ್ನು ಬಳಸಬಹುದಾಗಿದೆ. ಬಿಸಿನೆಸ್ ಕರೆಸ್ಪಾಂಡೆಂಟ್ಗಳು ಹಾಗೂ ಗ್ರಾಹಕ ಸೇವಾ ಕೇಂದ್ರಗಳ ಮೂಲಕವೂ ಕೆಲವು ಮೂಲ ಬ್ಯಾಂಕಿಂಗ್ ಸೇವೆಗಳು ಲಭ್ಯವಿರಲಿವೆ. ಎಟಿಎಂಗಳು ಮತ್ತು ನಗದು ಠೇವಣಿ ಯಂತ್ರಗಳಲ್ಲಿ ಅಗತ್ಯ ಪ್ರಮಾಣದ ಹಣ ಲಭ್ಯವಾಗುವಂತೆ ಬ್ಯಾಂಕ್ಗಳು ಕ್ರಮ ಕೈಗೊಳ್ಳಬೇಕು ಎಂದು ಎಸ್ಎಲ್ಬಿಸಿ ಸೂಚಿಸಿದೆ. ಬ್ಯಾಂಕ್ಗಳ ಅಧಿಕೃತ ವೆಬ್ಸೈಟ್, ಮೊಬೈಲ್ ಆ್ಯಪ್, ಎಸ್ಎಂಎಸ್ ಎಚ್ಚರಿಕೆಗಳು ಹಾಗೂ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಪ್ರಕಟವಾಗುವ ಮಾಹಿತಿಯನ್ನು ಮಾತ್ರ ಗ್ರಾಹಕರು ನಂಬಬೇಕು.







