ತೀರ್ಥಹಳ್ಳಿ: ತೀರ್ಥಹಳ್ಳಿ ಕೊಪ್ಪ ರಸ್ತೆಯಲ್ಲಿರುವ ಸಹ್ಯಾದ್ರಿ ಪೆಟ್ರೋಲ್ ಬಂಕ್ ನಲ್ಲಿ ಆಯಿಲ್ ರೂಮಿನ ಮಾಡಿನ ಶೀಟನ್ನು ಕೊರೆದು ಕಳ್ಳರು ಒಳನುಗ್ಗಿ ಆಯಿಲ್ ಬಾಕ್ಸ್ಗಳು ಹಾಗೂ ನಗದು ಹಣವನ್ನೂ ಕೊಂಡೊಯ್ದಿದ್ದಾರೆ.
ಆಯಿಲ್ ರೂಮಿನ ಕೊಠಡಿಯ ಕಿಟಕಿಯ ಗ್ಲಾಸು ಒಡೆದು ಆಫೀಸು ರೂಮಿಗೂ ನುಗ್ಗಿದ ಕಳ್ಳರು ಕಂಪ್ಯೂಟರ್ ಹಾಗೂ ಪೋಡಕ್ಟ್ ಬರುವ ಸಿಸ್ಟಮ್ ಗಳನ್ನೂ ಡ್ಯಾಮೇಜ್ ಮಾಡಿರುವುದರಿಂದ ಬಂಕಿನಲ್ಲಿ ಗ್ರಾಹಕರಿಗೆ ಇಂಧನವನ್ನೂ ಪೂರೈಸದಂತಾಗಿದೆ. ಆಫೀಸ್ ರೂಮಿನ ಸಿಸಿ ಕ್ಯಾಮರಾದ ಮೇಲೆ ಕಳ್ಳ ಬಟ್ಟೆಯೊಂದನ್ನು ಹಾಕಿದ್ದಾನೆ. ಬಂಕಿನ ಮಾಲೀಕರಾದ ಗೌತಮ್ ಕೊಳಾವರ ಅವರು ಈ ಸಂಬಂಧ ತೀರ್ಥಹಳ್ಳಿ ಪೋಲಿಸರಲ್ಲಿ ದೂರು ನೀಡಿ ಶೀಘ್ರ ಕಳ್ಳರನ್ನು ಪತ್ತೆ ಹಚ್ಚುವಂತೆ ವಿನಂತಿಸಿದ್ದಾರೆ. ಪೆಟ್ರೋಲ್ ಬಂಕ್ ವಿತರಕರ ಸಂಘದವರು ಕೂಡ ಕಳ್ಳರನ್ನು ಶೀಘ್ರ ಪತ್ತೆ ಹಚ್ಚುವಂತೆ ಪೋಲಿಸರಿಗೆ ಕೋರಿದ್ದಾರೆ.
•ಮೂಡಿಗೆರೆ: ಸಾರಿಗೆ ಬಸ್ ಮತ್ತು ಸ್ಕೂಟಿ ಅಪಘಾತ; ಸವಾರ ಸಾವು
ಮೂಡಿಗೆರೆ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಬಸ್ ಗೆ ಸ್ಕೂಟಿ ಢಿಕ್ಕಿ ಹೊಡೆದ ಘಟನೆ, ಶುಕ್ರವಾರದಂದು ಗೋಣಿಬೀಡು ಸಮೀಪದ ಕಸ್ಕೇಬೈಲ್ ಎನ್ನುವಲ್ಲಿ ನಡೆದಿದೆ. ಮೂಡಿಗೆರೆಗೆ ತೆರಳುತ್ತಿದ್ದ ಸಾರಿಗೆ ಬಸ್ ಎದುರಿಗೆ ಸ್ಕೂಟಿ ವೇಗವಾಗಿ ಮತ್ತು ಆಜಾಗರೂಕತೆಯಿಂದ ಬಂದ ಪರಿಣಾಮವಾಗಿ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. ಪರಿಣಾಮವಾಗಿ ಸ್ಕೂಟಿಯನ್ನು ಚಲಾಯಿಸುತ್ತಿದ್ದ ಕಮ್ಮರಗೋಡು ಮೂಲದ ಸವಾರ ಗಂಭೀರವಾಗಿ ಗಾಯಗೊಂಡು, ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ. ಮಾಹಿತಿ ಲಭಿಸುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆಯನ್ನು ನಡೆಸಿದ್ದು, ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಆಸ್ಪತ್ರೆಗೆ ರವಾನಿಸಿದ್ದಾರೆ.
•ಚಿಕ್ಕಮಗಳೂರು: ವಿದ್ಯುತ್ ಶಾಕ್ ಗೆ ಬೆದರಿ ಪರಾರಿಯಾದ ಒಂಟಿ ಸಲಗ
ಚಿಕ್ಕಮಗಳೂರು: ಒಂಟಿ ಸಲಗವೊಂದು ಪ್ರತ್ಯಕ್ಷವಾಗಿ ಸ್ಥಳೀಯರಲ್ಲಿ ಆತಂಕವನ್ನುಂಟು ಮಾಡಿದ ಘಟನೆ, ಬಸವರಹಳ್ಳಿ ಗ್ರಾಮದ ಸಮೀಪದ ರಾಜ್ಯ ಹೆದ್ದಾರಿಯಲ್ಲಿ ನಡೆದಿದೆ. ರಸ್ತೆಯಲ್ಲಿ ರಾಜಾರೋಷವಾಗಿ ಹೆಜ್ಜೆ ಹಾಕುತ್ತಿದ್ದ ಒಂಟಿ ಸಲಗವು, ಬಳಿಕ ರಸ್ತೆಯನ್ನು ದಾಟಿ ಪಕ್ಕದಲ್ಲಿದ್ದ ಕಾಫಿ ತೋಟಕ್ಕೆ ನುಗ್ಗಲು ಪ್ರಯತ್ನಿಸಿದೆ. ಆಗ ತೋಟದ ರಕ್ಷಣೆಗೆಂದು ಹಾಕಲಾಗಿದ್ದ ಸೋಲಾರ್ ಬೇಲಿಯತ್ತ ಸಾಗಿ, ಅದನ್ನು ಮುಂಭಾಗದ ಕಾಲುಗಳಿಂದ ಮುರಿದು ಹಾಕಲು ಪ್ರಯತ್ನಿಸಿದೆ ಎನ್ನಲಾಗಿದೆ. ಈ ಸಂದರ್ಭದಲ್ಲಿ ಸೋಲಾರ್ ಬೇಲಿಯು ಭದ್ರವಾಗಿದ್ದು, ಶಾಕ್ ಕೂಡ ಹೊಡೆದ ಪರಿಣಾಮವಾಗಿ ಒಂಟಿ ಸಲಗದ ಯೋಜನೆ ವಿಫಲವಾಗಿದೆ. ಆದ್ದರಿಂದ ಸೋಲಾರ್ ಬೇಲಿಯಿಂದ ಹಿಂದೆ ಸರಿದು, ತಾನು ಮೊದಲಿದ್ದ ಸ್ಥಳಕ್ಕೆ ಹಿಂತಿರುಗಲು ರಾಜ್ಯ ಹೆದ್ದಾರಿಯಲ್ಲೇ ಹೆಜ್ಜೆ ಹಾಕಿದೆ ಎನ್ನುವ ಮಾಹಿತಿ ಲಭಿಸಿದೆ. ಇದಕ್ಕೆ ಸಂಬಂಧಿಸಿದಂತೆ ಸ್ಥಳೀಯರು ಮತ್ತು ಕಾಫಿ ಬೆಳೆಗಾರರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.
•ಶಿವಮೊಗ್ಗ: ಲೋಕಾಯುಕ್ತರ ಬಲೆಗೆ ಬಿದ್ದ ಅಗ್ನಿಶಾಮಕ ಅಧಿಕಾರಿ
ಶಿವಮೊಗ್ಗ: ನಿರಾಪೇಕ್ಷಣಾ ಪತ್ರವನ್ನು ನೀಡಲು ಅಗ್ನಿಶಾಮಕ ಅಧಿಕಾರಿ 1ಲಕ್ಷ ಲಂಚ ಪಡೆಯುತ್ತಿದ್ದ ಸಂದರ್ಭದಲ್ಲಿ ಲೋಕಾಯುಕ್ತರ ಬಲೆಗೆ ಬಿದ್ದ ಘಟನೆ ನಡೆದಿದೆ. ಶಿಕಾರಿಪುರದ ಖಾಸಗಿ ಶಾಲೆಯ ನೂತನ ಕಟ್ಟಡಕ್ಕೆ ಅಗ್ನಿಶಾಮಕ ಇಲಾಖೆಯಿಂದ ನಿರಪೇಕ್ಷಣ ಪತ್ರವನ್ನು ನೀಡಬೇಕಾದಂತಹ ಸಂದರ್ಭದಲ್ಲಿ ಅದರ ಅಧಿಕಾರಿಯಾದ ಅಶೋಕ್ ಕುಮಾರ್ ಅವರು 1ಲಕ್ಷ ರೂಪಾಯಿಗಳ ಬೇಡಿಕೆಯನ್ನು ಇಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಶಿಕಾರಿಪುರದ ಅನೂಪ್ ಎನ್ನುವವರು ಲೋಕಾಯುಕ್ತ ಪೊಲೀಸರಿಗೆ ದೂರನ್ನು ನೀಡಿದ್ದರು. ದೂರಿನ ಆಧಾರದ ಮೇಲೆ ಎಸ್ ಪಿ ಆ್ಯಂಟನಿ ಜಾನ್ ಅವರ ಮಾರ್ಗದರ್ಶನದಲ್ಲಿ ಡಿವೈಎಸ್ ಪಿ ಚಂದ್ರಶೇಖರ್ ಅವರ ನೇತೃತ್ವದಲ್ಲಿ ಇನ್ಸ್ಪೆಕ್ಟರ್ ಗಳಾದ ವೀರಬಸಪ್ಪ, ರುದ್ರೇಶ್ ಮತ್ತು ಲೋಕಾಯುಕ್ತ ಸಿಬ್ಬಂದಿಗಳು ಕಾರ್ಯಾಚರಣೆಯನ್ನು ನಡೆಸಿ, ಅನೂಪ್ ಅವರಿಂದ ಅಶೋಕ್ ಕುಮಾರ್ 1ಲಕ್ಷ ರೂಪಾಯಿ ಹಣವನ್ನು ಲಂಚವಾಗಿ ಸ್ವೀಕರಿಸುತ್ತಿದ್ದ ಸಂದರ್ಭದಲ್ಲಿ ದಾಳಿ ನಡೆಸಿ ಆತನನ್ನು ಬಂಧಿಸಿದ್ದಾರೆ. ಈ ಸಂದರ್ಭದಲ್ಲಿ 1ಲಕ್ಷ ರೂಪಾಯಿ ಹಣವನ್ನು ಲೋಕಾಯುಕ್ತ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಅಶೋಕ್ ಕುಮಾರ್ ಅವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಲೋಕಾಯುಕ್ತ ಪೊಲೀಸರು ತನಿಖೆಯನ್ನು ಕೈಗೊಂಡಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ.
•ಸೊರಬ: ದೇವಾಲಯಗಳ ಕಾಣಿಕೆ ಹುಂಡಿ ಕಳ್ಳತನ; ಆರೋಪಿ ಬಂಧನ
ಸೊರಬ: ಕುಂಬತ್ತಿ ದುರ್ಗಾಂಬ ದೇವಸ್ಥಾನದಲ್ಲಿ ನಡೆದ ಕಳ್ಳತನಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸಿರುವ ಘಟನೆ ನಡೆದಿದೆ. ಆಗಸ್ಟ್ 26ರಂದು ನಡೆದ ಕಳ್ಳತನ ಪ್ರಕರಣದ ಹಿನ್ನೆಲೆಯಲ್ಲಿ, ಸಿಪಿಐ ಮಹಾಂತೇಶ್ ಕಂಬಿ ಅವರ ಮೇಲ್ವಿಚಾರಣೆಯಲ್ಲಿ, ಪಿಎಸ್ಐ ನವೀನ್ ಅವರ ನೇತೃತ್ವದಲ್ಲಿ ಅಪರಾಧ ವಿಭಾಗದ ಸಿಬ್ಬಂದಿಗಳಾದ ರಾಘವೇಂದ್ರ ಮತ್ತು ವಿನಯ್ ಅವರನ್ನು ಒಳಗೊಂಡ ತಂಡವನ್ನು ರಚಿಸಿ ಕಾರ್ಯಾಚರಣೆಯನ್ನು ಕೈಗೊಳ್ಳಲಾಗಿತ್ತು. ಇದೀಗ ತಂಡವು ಆರೋಪಿಯನ್ನು ಪತ್ತೆ ಹಚ್ಚಿ, ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಯನ್ನು ಶಿಕಾರಿಪುರದ ಪುಣೆದಹಳ್ಳಿ ನಿವಾಸಿಯಾದ ರಾಕೇಶ್ ಎಂದು ಗುರುತಿಸಲಾಗಿದೆ.