ಪುತ್ತೂರು: ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸಿದ ಘಟನೆ, ಬುಧವಾರದಂದು ಪಡುಮನ್ನೂರು ಗ್ರಾಮದ ಪದಡ್ಕ ಎನ್ನುವಲ್ಲಿ ನಡೆದಿದೆ. ಪರವಾನಿಗೆ ರಹಿತವಾಗಿ ಪಿಕಪ್ ವಾಹನ ಒಂದರಲ್ಲಿ ಅಕ್ರಮವಾಗಿ ದನ ಸಾಗಾಟ ಮಾಡುತ್ತಿದ್ದಾರೆ ಎನ್ನುವ ಖಚಿತವಾದ ಮಾಹಿತಿ ಬಂದ ಹಿನ್ನೆಲೆಯಲ್ಲಿ, ಪೊಲೀಸರು ಪದಡ್ಕ ಜಂಕ್ಷನ್ ಬಳಿ ವಾಹನವನ್ನು ಬೆನ್ನಟ್ಟಿದಾಗ ಪರವಾನಿಗೆಯ ಜೊತೆಗೆ ವೈದ್ಯಾಧಿಕಾರಿಗಳ ಪ್ರಮಾಣ ಪತ್ರ ಕೂಡ ಇಲ್ಲದಿರುವುದು ಬೆಳಕಿಗೆ ಬಂದಿದೆ. ಇದಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಪಿಕಪ್ ವಾಹನ ಚಾಲಕ ಕುಂಟಾರು ಆಡೂರು ಮಿಂಚಿನಪದವು ನಿವಾಸಿ ಸೀತಾರಾಮ ಮಣಿಯಾಣಿ, ಮುಳ್ಳೇರಿಯ ಕುಂಟಾರು ಪೆರಿಕೊಚ್ಚಿ ನಿವಾಸಿ ಕೇಲು ಮಣಿಯಾಣಿ ಮತ್ತು ಪಿಕಪ್ ವಾಹನದ ಮಾಲೀಕನ ವಿರುದ್ಧ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
•ಕಾರ್ಕಳ: ಮಟ್ಕಾ ಜುಗಾರಿ ಅಡ್ಡೆ ಮೇಲೆ ದಾಳಿ
ಕಾರ್ಕಳ: ಮಟ್ಕಾ ಜುಗಾರಿ ನಡೆಸುತ್ತಿದ್ದ ವಾಣಿಜ್ಯ ಸಂಕೀರ್ಣ ಕಟ್ಟಡವೊಂದರ ಮೇಲೆ ಪೊಲೀಸರು ದಾಳಿ ನಡೆಸಿದ ಘಟನೆ, ಕಸಬ ಗ್ರಾಮದ ಕಲ್ಲೊಟ್ಟೆ- ಪತ್ತೊಂಜಿಕಟ್ಟೆ ಬಳಿ ನಡೆದಿದೆ. ಸಾಗರ್ ಎನ್ನುವ ವ್ಯಕ್ತಿಯು ಮಟ್ಕಾ ಜುಗಾರಿಗೆ ಸಾರ್ವಜನಿಕರಿಂದ ಹಣ ಸಂಗ್ರಹಿಸುತ್ತಿದ್ದ ಖಚಿತವಾದ ಮಾಹಿತಿ ಬಂದ ಹಿನ್ನೆಲೆಯಲ್ಲಿ, ಪೊಲೀಸರು ದಾಳಿ ನಡೆಸಿದಾಗ ಆತ ಕಾರ್ಕಳ ತಾಲ್ಲೂಕಿನ ಸುತ್ತಮುತ್ತಲಿನ ಭಾಗಗಳಲ್ಲಿ ಮಟ್ಕಾ ಅಷ್ಟೇ ಅಲ್ಲದೆ ಗಾಂಜಾ ಕೂಡ ಮಾರಾಟ ಮಾಡುತ್ತಿದ್ದ ಎನ್ನುವ ಸಂಗತಿ ಬೆಳಕಿಗೆ ಬಂದಿದೆ. ಈ ಸಂದರ್ಭದಲ್ಲಿ ಸಾಗರ್ ಬಳಿ ಇದ್ದ 3440ರೂಪಾಯಿ ನಗದು ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಆರೋಪಿಯ ವಿರುದ್ಧ ಕಠಿಣ ಕಾನೂನು ಕ್ರಮವನ್ನು ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಪಡಿಸಿದ್ದಾರೆ.
•ಬ್ರಹ್ಮಾವರ: ಲಕ್ಷಾಂತರ ರೂಪಾಯಿ ವಂಚನೆ
ಬ್ರಹ್ಮಾವರ: ಸಾಲವನ್ನು ನೀಡುವುದಾಗಿ ನಂಬಿಸಿ, 7 ಲಕ್ಷ ರೂಪಾಯಿ ಪಡೆದುಕೊಂಡು ವಂಚಿಸಿದ ಹಿನ್ನೆಲೆಯಲ್ಲಿ, ವಿನಯ್ ಕುಮಾರ್ ಎನ್ನುವವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ, ವಾರಂಬಳ್ಳಿಯಲ್ಲಿ ನಡೆದಿದ್ದು ಇದೀಗ ಬೆಳಕಿಗೆ ಬಂದಿದೆ. ಆರೋಪಿಯು ಬೀಜಾಡಿಯಲ್ಲಿರುವ ತನ್ನ ಏಕದಂತ ಸೌಹಾರ್ದ ಸಹಕಾರಿ ಸಂಘದಲ್ಲಿ 5 ಲಕ್ಷ ರೂಪಾಯಿಗಳಷ್ಟು ಠೇವಣಿ ಇಟ್ಟಲ್ಲಿ, 15ಲಕ್ಷ ರೂಪಾಯಿ ಸಾಲ ನೀಡುವುದಾಗಿ ವಿನಯ್ ಕುಮಾರ್ ಅವರಿಗೆ ತಿಳಿಸಿದ್ದ ಎನ್ನಲಾಗಿದೆ. ಹೀಗಾಗಿ ವಿನಯ್ ಕುಮಾರ್ ಅವರು ಸಹಕಾರಿಯ ಸದಸ್ಯತ್ವವನ್ನು ಪಡೆದುಕೊಂಡು 5ಲಕ್ಷ ರೂಪಾಯಿಗಳಷ್ಟು ಠೇವಣಿ ಇರಿಸಿ, ರಸೀದಿ ಮತ್ತು ಬಾಂಡ್ ಗಳನ್ನು ಪಡೆದುಕೊಂಡಿದ್ದರು ಎನ್ನುವ ಮಾಹಿತಿ ಲಭಿಸಿದೆ. ಬಳಿಕ ಆರೋಪಿಯು 15ಲಕ್ಷ ಸಾಲವನ್ನು ನೀಡದೆ ಠೇವಣಿ ಇರಿಸಿದ್ದ 5ಲಕ್ಷ ರೂಪಾಯಿ ಮತ್ತು ಹೆಚ್ಚುವರಿಯಾಗಿ ಪಡೆದ 2 ಲಕ್ಷ ರೂಪಾಯಿ ಸೇರಿ ಒಟ್ಟು 7ಲಕ್ಷ ರೂಪಾಯಿಗಳನ್ನು ಹಿಂತಿರುಗಿಸದೆ ವಂಚಿಸಿದ್ದಾರೆ. ಪರಿಣಾಮವಾಗಿ ವಿನಯ್ ಕುಮಾರ್ ಅವರಿಗೆ ಏನು ಮಾಡಲು ತೋಚದೆ, ಮಾನಸಿಕವಾಗಿ ನೊಂದು ಕಳೆದ ವರ್ಷ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಮಗನ ಸಾವಿನ ನಂತರ ವಿನಯ್ ಕುಮಾರ್ ಅವರ ಪೋಷಕರು ಆರೋಪಿಗೆ ಕರೆ ಮಾಡಿ ಹಣವನ್ನು ಹಿಂತಿರುಗಿಸು ಎಂದು ಕೇಳಿದಾಗ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಜೀವ ಬೆದರಿಕೆ ಒಡ್ಡಿದ್ದಾನೆ ಎನ್ನುವ ಸಂಗತಿ ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ವಿನಯ್ ಕುಮಾರ್ ಅವರ ತಾಯಿಯು ಮಾನ್ಯ ನ್ಯಾಯಾಲಯದಲ್ಲಿ ಖಾಸಗಿ ದೂರು ನೀಡಿದ್ದು, ದೂರಿನ ಆಧಾರದ ಮೇಲೆ ಮತ್ತು ನ್ಯಾಯಾಲಯದ ನಿರ್ದೇಶನದಂತೆ ಅಪರಾಧ ಕ್ರಮ 82/2026 ಭಾರತೀಯ ನ್ಯಾಯ ಸಂಹಿತೆ ಕಲಂ 108, 351 ಮತ್ತು 352ರ ಅಡಿಯಲ್ಲಿ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ಕೈಗೊಂಡಿದ್ದಾರೆ.
•ಕುಂದಾಪುರ: ಕೋಟಿತೀರ್ಥ ಕೆರೆಗೆ ಹಾರಿ ಯುವಕ ಆತ್ಮಹತ್ಯೆ
ಕುಂದಾಪುರ: ಯುವಕನೊಬ್ಬ ಕೋಟಿತೀರ್ಥ ಪುಷ್ಕರಣಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ, ಬುಧವಾರದಂದು ಕೋಟೇಶ್ವರದಲ್ಲಿ ನಡೆದಿದೆ. ಮೃತ ಯುವಕನನ್ನು ಹೊದ್ರಾಳಿ ಕೊಳನಕಟ್ಟೆ ನಿವಾಸಿ, ಕುಂದಾಪುರದ ಹೆಂಚಿನ ಕಾರ್ಖಾನೆಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪದ್ಮನಾಭ ಆಚಾರ್ಯ ಎಂದು ಗುರುತಿಸಲಾಗಿದೆ. ಪದ್ಮನಾಭ ಅವರು ಕಳೆದ ನಾಲ್ಕು ತಿಂಗಳಿನಿಂದ ಕೆಲಸಕ್ಕೆ ಹೋಗದೆ ಮನೆಯಲ್ಲೇ ಇದ್ದು, ಮಂಗಳವಾರದಂದು ಬೆಳಿಗ್ಗೆ ಮನೆಯಿಂದ ಹೊರಟವರು ರಾತ್ರಿಯವರೆಗೂ ಮನೆಗೆ ಹಿಂತಿರುಗಿ ಬಂದಿರಲಿಲ್ಲ ಎನ್ನಲಾಗಿದೆ. ಇದರಿಂದ ಆತಂಕಕ್ಕೆ ಒಳಗಾದ ಪದ್ಮನಾಭ ಅವರ ಕುಟುಂಬಸ್ಥರು ಹುಡುಕಾಟ ನಡೆಸಿದಾಗ ದೇವಸ್ಥಾನದ ಸಮೀಪದಲ್ಲಿ ಅವರ ದ್ವಿಚಕ್ರ ವಾಹನ ಮತ್ತು ಕೋಟಿತೀರ್ಥ ಪುಷ್ಕರಣಿಯ ಮೆಟ್ಟಿಲ ಮೇಲೆ ಅವರ ಚಪ್ಪಲಿ ಹಾಗೂ ಟೋಪಿ ಪತ್ತೆಯಾಯಿತು ಎನ್ನುವ ಮಾಹಿತಿ ಲಭಿಸಿದೆ. ಹೀಗಾಗಿ ಪದ್ಮನಾಭ ಅವರು ಕೆರೆಗೆ ಹಾರಿರುವ ಕುರಿತು ಅನುಮಾನ ವ್ಯಕ್ತವಾಯಿತು. ವಿಚಾರ ತಿಳಿದ ತಕ್ಷಣ ಬುಧವಾರ ಬೆಳಿಗ್ಗೆ ಸ್ಥಳೀಯರಾದ ಸುಧೀರ್ ಕುಮಾರ್ ಶೆಟ್ಟಿ, ಪ್ರಭಾಕರ್ ಶೆಟ್ಟಿ ಮತ್ತು ಸತ್ಯನಾರಾಯಣ ಮಂಜ ಮೊದಲಾದವರು ದೋಣಿಯ ಸಹಾಯದಿಂದ ಶೋಧನಾ ಕಾರ್ಯವನ್ನು ಕೈಗೊಂಡರು ಎನ್ನುವ ಸಂಗತಿ ತಿಳಿದುಬಂದಿದೆ. ಆಗ 9:೦೦ಗಂಟೆಯ ಸುಮಾರಿಗೆ ಪದ್ಮನಾಭ ಅವರ ಮೃತದೇಹ ಪುಷ್ಕರಣಿಯಲ್ಲಿ ಕಂಡುಬಂದಿದ್ದು, ಮುಳುಗು ತಜ್ಞರಾದ ಈಶ್ವರ ಮಲ್ಪೆ ಮತ್ತು ಅವರ ತಂಡವು ಸ್ಥಳೀಯ ಈಜುಗಾರರ ಸಹಕಾರದೊಂದಿಗೆ ಮೃತದೇಹವನ್ನು ಮೇಲಕ್ಕೆ ತಂದಿದ್ದು, ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಕುಂದಾಪುರದ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಯಿತು.







