ಬೆಂಗಳೂರು: ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮರು ತನಿಖೆಗೆ ಆದೇಶ ನೀಡಿದೆ. ಈ ಬಗ್ಗೆ ಧರ್ಮಸ್ಥಳ ದೇವಸ್ಥಾನ ಆಡಳಿತ ಮಂಡಳಿಯು ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದ್ದು, ಪ್ರಕರಣಕ್ಕೆ ತಾರ್ಕಿಕ ಅಂತ್ಯ ದೊರಕಲಿ ಎಂದು ಮರು ತನಿಖೆಯನ್ನು ಸ್ವಾಗತಿಸಲಾಗಿದೆ.
ಶ್ರೀಕ್ಷೇತ್ರ ಧರ್ಮಸ್ಥಳದ ದೇವಾಲಯ ಕಚೇರಿಯ ವ್ಯವಸ್ಥಾಪಕ ಪಾರ್ಶ್ವನಾಥ್ ಜೈನ್ ಅವರು ಹೇಳಿಕೆ ನೀಡಿದ್ದು, ” ಈ ನಿರ್ಧಾರವನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಪರವಾಗಿ ನಾವು ಮುಕ್ತಮನಸ್ಸಿನಿಂದ ಸ್ವಾಗತಿಸುತ್ತೇವೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಕಳೆದ ಹಲವು ವರ್ಷಗಳಿಂದ ಶ್ರೀ ಕ್ಷೇತ್ರದ ಮೇಲೆ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ವ್ಯವಸ್ಥಿತವಾಗಿ ಹಾಗೂ ನಿರಂತರವಾಗಿ ಅಪಪ್ರಚಾರ ನಡೆಸಿ, ಕಳಂಕ ತರುವ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಆದರೆ, ಕುಮಾರಿ ಸೌಜನ್ಯಾಳಿಗೆ ನ್ಯಾಯ ದೊರೆಯಬೇಕು ಎಂಬುದು ಶ್ರೀ ಕ್ಷೇತ್ರದ ದೃಢವಾದ ಆಶಯವಾಗಿದೆ ” ಎಂದಿದ್ದಾರೆ.
ಈಗ ಸುಪ್ರೀಂಕೋರ್ಟ್ನಿಂದ ಆದೇಶಿಸಲಾಗಿರುವ ಮರು ತನಿಖೆಯು ಸಂಪೂರ್ಣ ನಿಷ್ಪಕ್ಷಪಾತವಾಗಿ ಹಾಗೂ ಪಾರದರ್ಶಕವಾಗಿ ನಡೆಯಲಿ ಮತ್ತು ಈ ಮೂಲಕ ಪ್ರಕರಣಕ್ಕೆ ತಾರ್ಕಿಕ ಅಂತ್ಯ ದೊರೆಯಲಿ ” ಎಂದು ನಾವು ಆಶಿಸುತ್ತೇವೆ ಎಂದು ತಿಳಿಸಿದ್ದಾರೆ.
17 ವರ್ಷಗಳ ಹಿಂದಿನ ಪ್ರಕರಣ; ಮರುಜೀವ
2012ರ ಅಕ್ಟೋಬರ್ನಲ್ಲಿ ಧರ್ಮಸ್ಥಳದಲ್ಲಿ 17 ವರ್ಷದ ಕಾಲೇಜು ವಿದ್ಯಾರ್ಥಿನಿ ಸೌಜನ್ಯಾ ಅತ್ಯಾಚಾರ ಹಾಗೂ ಹತ್ಯೆ ನಡೆದಿತ್ತು. ಈ ಪ್ರಕರಣದಲ್ಲಿ ಸಂತೋಷ್ ರಾವ್ ಎಂಬಾತನನ್ನು ಪೊಲೀಸರು ಬಂಧಿಸಿದ್ದರು. ಸಿಬಿಐ ವಿಶೇಷ ನ್ಯಾಯಾಲಯವು 2023 ರಲ್ಲಿ ಸಾಕ್ಷ್ಯಾಧಾರಗಳ ಕೊರತೆ ಹಿನ್ನೆಲೆಯಲ್ಲಿಸಂತೋಷ್ ರಾವ್ ಅವರನ್ನು ದೋಷಮುಕ್ತಗೊಳಿಸಿ ತೀರ್ಪು ನೀಡಿತ್ತು. 2024 ರಲ್ಲಿ, ಕುಸುಮಾವತಿ ಹೊಸದಾಗಿ ಸಿಬಿಐ ತನಿಖೆ ಕೋರಿ ಕರ್ನಾಟಕ ಹೈಕೋರ್ಟ್ ಮೊರೆ ಹೋದರು. ಆ.20, 2024 ರಂದು, ಹೈಕೋರ್ಟ್ ಅವರ ಅರ್ಜಿಯನ್ನು ವಜಾಗೊಳಿಸಿತು. ಈ ಆದೇಶದ ವಿರುದ್ಧ ಸೌಜನ್ಯ ಕುಟುಂಬ ಸುಪ್ರೀಂಕೋರ್ಟ್ಗೆ ಮೇಲ್ಮನವಿ ಅರ್ಜಿ ಸಲ್ಲಿಸಿತ್ತು.
ತನಿಖಾ ತಂಡವನ್ನು ರಚಿಸಲು ಸಿದ್ಧಎಂದ ಕರ್ನಾಟಕ ಸರ್ಕಾರ
ವಿಚಾರಣೆ ಸಮಯದಲ್ಲಿ‘‘ನ್ಯಾಯಲಯ ಹೊಸದಾಗಿ ತನಿಖೆ ನಡೆಸಲು ಆದೇಶಿಸಿದರೆ ಹೊಸ ವಿಶೇಷ ತನಿಖಾ ತಂಡವನ್ನು ರಚಿಸಲು ಸಿದ್ಧವಿದೆ,’’ ಎಂದು ರಾಜ್ಯ ಸರಕಾರದ ಪರ ವಕೀಲರು ಹೇಳಿದ್ದರು. ಇದರ ಅನ್ವಯ ಕೋರ್ಟ್ ಸೋಮವಾರ ಆದೇಶ ನೀಡಿದೆ. ಎಸ್ಐಟಿ ಹೊಸದಾಗಿ ತನಿಖೆ ಮಾಡಬೇಕು, ಎಸ್ಐಟಿಯಲ್ಲಿ ಹಿಂದೆ ಪ್ರಕರಣದ ತನಿಖೆಯಲ್ಲಿ ಭಾಗಿಯಾಗಿದ್ದ ಪೊಲೀಸ್ ಅಥವಾ ಸಿಬಿಐ ಅಧಿಕಾರಿಗಳನ್ನು ಸೇರಿಸಬಾರದು ಎಂದು ಸ್ಪಷ್ಟಪಡಿಸಿದೆ.







