ಭಾರತೀಯ ಚಿತ್ರರಂಗದ ಅತ್ಯಂತ ಗಣ್ಯ ಹಾಗೂ ಗೌರವಾನ್ವಿತ ‘ 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ‘ ಪ್ರದಾನ ಸಮಾರಂಭವು ಗುಜರಾತ್‌ನ ಏಕತಾ ನಗರದಲ್ಲಿ ಅತ್ಯಂತ ವೈಭವದಿಂದ ಜರುಗಿದೆ. ದೇಶದ ನಾನಾ ಭಾಷೆಗಳ ಶ್ರೇಷ್ಠ ಕಲಾವಿದರು ಮತ್ತು ತಾಂತ್ರಿಕ ವರ್ಗದವರನ್ನ ಗೌರವಿಸುವ ಈ ವೇದಿಕೆಯಲ್ಲಿ, ಭಾರತದ ಗೌರವಾನ್ವಿತ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಭಾಗವಹಿಸಿ ವಿಜೇತರಿಗೆ ಪ್ರಶಸ್ತಿಗಳನ್ನ ಪ್ರದಾನ ಮಾಡಿದರು. ಈ ಬಾರಿಯ ಸಮಾರಂಭದಲ್ಲಿ ಕನ್ನಡ ಚಿತ್ರರಂಗದ ಕಲಾವಿದರು ಮತ್ತು ತಾಂತ್ರಿಕ ವರ್ಗದವರು ಹಲವು ಪ್ರಮುಖ ಪ್ರಶಸ್ತಿಗಳನ್ನ ಪಡೆದಿದ್ದಾರೆ. ಕನ್ನಡ ಚಿತ್ರರಂಗದ ಹಿರಿಯ ನಟ ಅನಂತ್ ನಾಗ್ ಅವರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ʻದಾದಾಸಾಹೇಬ್ ಫಾಲ್ಕೆʼ ಗೌರವ ಸ್ವೀಕರಿಸಿದರು. ಅವರ ದಶಕಗಳ ಕಾಲದ ಸಿನಿಮಾ ಸೇವೆಯನ್ನ ಈ ಸಂದರ್ಭದಲ್ಲಿ ಸ್ಮರಿಸಲಾಯಿತು.
ರಕ್ಷಿತ್ ಶೆಟ್ಟಿ ಅವರ ʻಪರಂವಃ ಪಿಕ್ಚರ್ಸ್ʼ ನಿರ್ಮಿಸಿದ ಚಿತ್ರಕ್ಕೆ ಪ್ರಶಸ್ತಿ!
ರಕ್ಷಿತ್ ಶೆಟ್ಟಿ ಅವರ ʻಪರಂವಃ ಪಿಕ್ಚರ್ಸ್ʼ ನಿರ್ಮಿಸಿದ ‘ಮಿಥ್ಯ’ ಚಿತ್ರವು ಅತ್ಯುತ್ತಮ ಕನ್ನಡ ಚಿತ್ರ ಪ್ರಶಸ್ತಿಯನ್ನ ಮುಡಿಗೇರಿಸಿಕೊಂಡಿತು. ಚಿತ್ರದ ನಿರ್ದೇಶಕ ಸುಮಂತ್ ಭಟ್ ಅವರು ರಾಷ್ಟ್ರಪತಿಗಳಿಂದ ಈ ಗೌರವವನ್ನ ಸ್ವೀಕರಿಸಿದರು. ಇದೇ ‘ಮಿಥ್ಯ’ ಸಿನಿಮಾದಲ್ಲಿನ ಮನೋಜ್ಞ ಅಭಿನಯಕ್ಕಾಗಿ ಅತ್ಯುತ್ತಮ ಬಾಲನಟ ಪ್ರಶಸ್ತಿಯನ್ನ ಅತೀಶ್ ಎಸ್. ಶೆಟ್ಟಿ ಪಡೆದುಕೊಂಡರೆ, ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿಯನ್ನ ರೂಪಾಶ್ರೀ ವಾರ್ಕಡಿ ಸ್ವೀಕರಿಸಿದರು. ಕನ್ನಡದ ಜೊತೆಗೆ ವಿವಿಧ ಭಾಷೆಗಳ ಹೆಸರಾಂತ ನಟ-ನಟಿಯರು ಹಾಗೂ ತಾಂತ್ರಿಕರ ಸಾಧನೆಯನ್ನ ಈ ಪ್ರಶಸ್ತಿ ಸಮಾರಂಭದಲ್ಲಿ ಗುರುತಿಸಲಾಯಿತು. ಈ ಪೈಕಿ, ಮಲಯಾಳಂನ ‘ಬ್ರಮಯುಗಂ’ ಸಿನಿಮಾದ ಅದ್ಭುತ ನಟನೆಗಾಗಿ ಮಮ್ಮುಟ್ಟಿ ಹಾಗೂ ‘ಚಂದು ಚಾಂಪಿಯನ್’ ಸಿನಿಮಾದ ಅಮೋಘ ಅಭಿನಯಕ್ಕಾಗಿ ಕಾರ್ತಿಕ್ ಆರ್ಯನ್ ಜಂಟಿಯಾಗಿ ಅತ್ಯುತ್ತಮ ನಟ ಪ್ರಶಸ್ತಿಯನ್ನ ಪಡೆದುಕೊಂಡರು.
ಒಟ್ಟಿನಲ್ಲಿ ʻ72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿʼ ಪ್ರದಾನ ಸಮಾರಂಭವು ಭಾರತೀಯ ಚಿತ್ರರಂಗದ ವೈವಿಧ್ಯತೆ ಮತ್ತು ಪ್ರತಿಭೆಯನ್ನ ಕೊಂಡಾಡುವ ವೇದಿಕೆಯಾಯಿತು.