ಬೆಂಗಳೂರು: ಆರೋಗ್ಯ ಕವಚ- 108 ಆ್ಯಂಬುಲೆನ್ಸ್ ಸಿಬ್ಬಂದಿಗಳು ಕಳೆದ ಕೆಲವು ದಿನಗಳ ಹಿಂದೆ ವೇತನ ಪರಿಷ್ಕರಣೆ ಸೇರಿದಂತೆ ಹಲವು ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಂತೆ ಕೋರಿ ರಾಜ್ಯ ಸರ್ಕಾರಕ್ಕೆ 15 ದಿನಗಳ ಗುಡುವನ್ನು ನೀಡಿತ್ತು. ಆದರೆ, ಸರ್ಕಾರದಿಂದ ಸಿಬ್ಬಂದಿಗಳಿಗೆ ನಿರೀಕ್ಷಿತ ಸ್ಪಂದನೆ ದೊರೆಯದೆ, ಗಡುವು ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಕಠಿಣ ಹೋರಾಟವನ್ನು ನಡೆಸಲು ನಿರ್ಧಾರವನ್ನು ಕೈಗೊಂಡಿದ್ದಾರೆ.
ಸೆಪ್ಟೆಂಬರ್ 22ರ ಮಂಗಳವಾರದಿಂದ ರಾತ್ರಿ 8:00ಗಂಟೆಯ ನಂತರ ರಾಜ್ಯಾದ್ಯಂತ 108 ಆ್ಯಂಬುಲೆನ್ಸ್ ಸೇವೆಯನ್ನು ಸ್ಥಗಿತಗೊಳಿಸುವ ನಿರ್ಣಯವನ್ನು ಕೈಗೊಂಡಿದ್ದು, ಸಾಮೂಹಿಕ ರಾಜೀನಾಮೆಗೆ ಮುಂದಾಗಿದ್ದಾರೆ.
ಆ್ಯಂಬುಲೆನ್ಸ್ ಸಿಬ್ಬಂದಿಗಳು ಪ್ರತಿ ವರ್ಷ ವೇತನ ಪರಿಷ್ಕರಣೆ ಕೈಗೊಳ್ಳುವಂತೆ, ಎಲ್ಲಾ ಸಿಬ್ಬಂದಿಗಳಿಗೂ ಏಕರೂಪವಾದ ವೇತನ ಪದ್ಧತಿಯನ್ನು ತರುವಂತೆ, ಸೇವಾ ಅವಧಿ ಮತ್ತು ಜೇಷ್ಠತೆಯ ಆಧಾರದ ಮೇಲೆ ವೇತನವನ್ನು ನಿಗದಿಗೊಳಿಸುವಂತೆ, ಸಿಬ್ಬಂದಿಗಳಿಗೆ ಸೂಕ್ತ ಕೆಲಸದ ಸೌಲಭ್ಯಗಳನ್ನು ಒದಗಿಸುವ ಕುರಿತು ಬೇಡಿಕೆಗಳನ್ನು ಮುಂದಿಟ್ಟಿದ್ದರು. ಅಷ್ಟೇ ಅಲ್ಲದೆ ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ಸಿಬ್ಬಂದಿಗಳು ಅಪಘಾತಕ್ಕೆ ಒಳಗಾಗಿ ಮೃತಪಟ್ಟಲ್ಲಿ, ಅವರ ಕುಟುಂಬಗಳಿಗೆ ಸೂಕ್ತ ಪರಿಹಾರವನ್ನು ನೀಡಬೇಕು ಹಾಗೂ ಸಿಬ್ಬಂದಿಗೆ ಉದ್ಯೋಗ ಭದ್ರತೆಯನ್ನು ಕಲ್ಪಿಸಬೇಕು ಎನ್ನುವ ಮನವಿಯನ್ನು ಕೂಡ ಸಲ್ಲಿಸಿದ್ದರು. ಆದರೆ, ಆ್ಯಂಬುಲೆನ್ಸ್ ಸಿಬ್ಬಂದಿಗಳ ನೇಮಕಾತಿಯ ಸಂದರ್ಭದಲ್ಲಿ ಪ್ರತಿವರ್ಷ ವೇತನ ಪರಿಷ್ಕರಣೆಯ ಭರವಸೆಯನ್ನು ನೀಡಿದ್ದರೂ ಸಹ, ಹಲವು ವರ್ಷಗಳ ಕಾಲ ವೇತನವನ್ನು ಹೆಚ್ಚಳಗೊಳಿಸಿಲ್ಲ ಎಂದು ಸಿಬ್ಬಂದಿಗಳು ಆರೋಪಿಸಿದ್ದಾರೆ. ಆ್ಯಂಬುಲೆನ್ಸ್ ಸಿಬ್ಬಂದಿಗಳ ಈ ನಿರ್ಣಯದಿಂದ ಸಾರ್ವಜನಿಕರಲ್ಲಿ ಆತಂಕ ಉಂಟಾಗಿದ್ದು, ಸಿಬ್ಬಂದಿಗಳು ಸಾಮೂಹಿಕವಾಗಿ ರಾಜೀನಾಮೆಯನ್ನು ನೀಡಿ ಸೇವೆಯನ್ನು ಸ್ಥಗಿತಗೊಳಿಸಿದರೆ ಅಪಘಾತ, ಹೃದಯಾಘಾತ ಹೆರಿಗೆಯಂತಹ ತುರ್ತು ಪರಿಸ್ಥಿತಿಯ ಸಂದರ್ಭಗಳಲ್ಲಿ ರೋಗಿಗಳನ್ನು ಆಸ್ಪತ್ರೆಗೆ ತಲುಪಿಸುವ ಸೇವೆಯಲ್ಲಿ ವ್ಯತ್ಯಯ ಉಂಟಾದರೆ ಜೀವಗಳನ್ನು ಉಳಿಸಿಕೊಳ್ಳುವ ವಿಚಾರದಲ್ಲಿ ಹೆಚ್ಚು ಕಡಿಮೆಯಾಗುವ ಸಾಧ್ಯತೆ ಇರುವುದರಿಂದ ಆತಂಕಪಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
108 ಸಂಖ್ಯೆಯನ್ನು ರಾಜ್ಯದ ಅಧಿಕೃತ ಜಿಲ್ಲಾಡಳಿತದ ಸಹಾಯವಾಣಿ ಪಟ್ಟಿಗಳಲ್ಲೂ ಆ್ಯಂಬುಲೆನ್ಸ್ ಸೇವೆಗಾಗಿ ಸೂಚನೆಯನ್ನು ನೀಡಲಾಗಿದೆ. ಅಲ್ಲದೆ ಸರ್ಕಾರ ಮತ್ತು ಆ್ಯಂಬುಲೆನ್ಸ್ ಸಿಬ್ಬಂದಿಗಳ ನಡುವೆ ಶೀಘ್ರದಲ್ಲಿ ಮಾತುಕತೆಯ ಮೂಲಕ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಲೇಬೇಕಾದ ಅನಿವಾರ್ಯತೆ ಎದುರಾಗಿದೆ.







