ಬೆಳ್ತಂಗಡಿ: ಚಿರತೆಯೊಂದು 30 ಅಡಿ ಆಳದ ಬಾವಿಗೆ ಬಿದ್ದಿದ್ದು, ಅದನ್ನು ರಕ್ಷಿಸಿದ ಘಟನೆ ಸೋಮವಾರದಂದು ಕರಿಮಣೇಲು ಗ್ರಾಮದ ಬಕ್ಯರಡ್ಡ ಎನ್ನುವಲ್ಲಿ ನಡೆದಿದೆ. ಆಹಾರವನ್ನು ಹುಡುಕುತ್ತಾ ಬಂದ ಚಿರತೆಯು, ಬಕ್ಯರಡ್ಡ ನಿವಾಸಿಯಾದ ಅಶೋಕ್ ಪೂಜಾರಿ ಎನ್ನುವವರಿಗೆ ಸೇರಿದ್ದ ಬಾವಿಗೆ ಬಿದ್ದಿದೆ ಎನ್ನಲಾಗಿದೆ. ಬಾವಿಯು 30 ಅಡಿ ಆಳವಾಗಿದ್ದು, 6 ಅಡಿಗಳಷ್ಟು ನೀರಿತ್ತು ಎನ್ನುವ ಮಾಹಿತಿ ಲಭಿಸಿದೆ.
ಮನೆಯವರು ಬಾವಿಯತ್ತ ತೆರಳಿದ ಸಂದರ್ಭದಲ್ಲಿ ಇದು ಬೆಳಕಿಗೆ ಬಂದಿದೆ. ತಕ್ಷಣ ಮನೆಯವರು ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಿದ್ದು, ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆಯ ಸಿಬ್ಬಂದಿಗಳು ಸ್ಥಳೀಯರ ನೆರವಿನೊಂದಿಗೆ ಕಾರ್ಯಾಚರಣೆಯನ್ನು ನಡೆಸಿ ಬಾವಿಗೆ ಬಿದ್ದಿದ್ದ ಚಿರತೆಯನ್ನು ಸುರಕ್ಷಿತವಾಗಿ ಮೇಲಕ್ಕೆ ತಂದಿದ್ದಾರೆ.
•ಕಡಬ: ಹೃದಯಾಘಾತದಿಂದ ಯುವಕ ಸಾವು
ಕಡಬ: ಯುವಕರೊಬ್ಬರು ಹೃದಯಾಘಾತಕ್ಕೆ ಒಳಗಾಗಿ ಸಾವನ್ನಪ್ಪಿರುವ ಘಟನೆ, ಮಂಗಳವಾರದಂದು ರಾಮಕುಂಜದ ಕಾಜರುಕ್ಕು ಎನ್ನುವಲ್ಲಿ ನಡೆದಿದೆ. ಕರ್ನಾಟಕ ಗೇರು ಅಭಿವೃದ್ಧಿ ನಿಗಮ ಮಂಗಳೂರು ವಿಭಾಗದಲ್ಲಿ ಗುತ್ತಿಗೆ ಆಧಾರದ ಮೇಲೆ ಅರಣ್ಯ ವೀಕ್ಷಕನಾಗಿ ಕಾರ್ಯನಿರ್ವಹಿಸುತ್ತಿದ್ದ 33 ವರ್ಷದ ಸಚಿನ್ ಅವರು ಮೃತ ದುರ್ದೈವಿಯಾಗಿದ್ದಾರೆ.
•ಬೈಂದೂರು: ಮಹಿಳೆಯ ಮೇಲೆ ಕಲ್ಲಿನಿಂದ ಹಲ್ಲೆ
ಬೈಂದೂರು: ಬಸ್ ಒಂದು ಸಮೀಪದಲ್ಲೇ ಹಾದುಹೋದ ವಿಚಾರಕ್ಕೆ ಸಂಬಂಧಿಸಿದಂತೆ ಮಹಿಳೆಯೊಬ್ಬರ ಮೇಲೆ ಕಲ್ಲಿನಿಂದ ಹಲ್ಲೆ ನಡೆಸಿದ ಘಟನೆ, ಸೋಮವಾರದಂದು ಕಂಬದಕೋಣೆ ಬಸ್ ನಿಲ್ದಾಣದಲ್ಲಿ ನಡೆದಿದೆ. ರಾತ್ರಿ 9.30ರ ಸುಮಾರಿಗೆ ಹೆರಂಜಾಲು ಗ್ರಾಮದ ನಿವಾಸಿಯಾದ ಚಂದ್ರಕಲಾ ಎನ್ನುವವರು ಕಂಬದಕೋಣೆ ಬಸ್ ನಿಲ್ದಾಣದಲ್ಲಿ ನಿಂತು, ಫೋನಿನಲ್ಲಿ ಮಾತನಾಡುತ್ತಿದ್ದರು ಎನ್ನಲಾಗಿದೆ. ಆಗ ಬಸ್ ಒಂದು ಅವರ ಸಮೀಪದಲ್ಲಿಯೇ ಹಾದುಹೋಗಿದ್ದು, ಗಾಬರಿಗೊಂಡ ಚಂದ್ರಕಲಾ ಅವರು ಬಸ್ ನವರಿಗೆ ಬೈದಿದ್ದಾರೆ. ಇದೇ ಸಂದರ್ಭದಲ್ಲಿ ಅಲ್ಲಿಗೆ ಆಗಮಿಸಿದ ಕಂಬದಕೋಣೆಯ ನಿವಾಸಿಗಳಾದ ರೇಷ್ಮಾ ಮತ್ತು ಅವರ ಅಕ್ಕನ ಮಗ ಚಂದ್ರಕಲಾ ಅವರಿಗೆ ಅನವಶ್ಯಕವಾಗಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಕಲ್ಲಿನಿಂದ ಹೊಡೆದು ಹಲ್ಲೆ ನಡೆಸಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ. ಹಲ್ಲೆಗೆ ಕಾರಣವೇನು ಎನ್ನುವುದು ಸ್ಪಷ್ಟವಾಗಿ ತಿಳಿದುಬಂದಿಲ್ಲ. ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
•ಉಳ್ಳಾಲ: ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ ಯುವಕ
ಉಳ್ಳಾಲ: ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಚಿಕಿತ್ಸೆ ಫಲಕಾರಿಯಾಗದೆ ಯುವಕನೊಬ್ಬ ಮೃತಪಟ್ಟ ಘಟನೆ, ಮಂಗಳವಾರದಂದು ನಡೆದಿದೆ. ಸೆಪ್ಟೆಂಬರ್ 19ರ ಶನಿವಾರದಂದು ಸತೀಶ್ ಮತ್ತು ಮೊಹಮ್ಮದ್ ಇಸಾಕ್ ಎನ್ನುವವರು ಬೈಕ್ ನಲ್ಲಿ ಮುಡಿಪು-ಪಜೀರು ಮಾರ್ಗವಾಗಿ ಕೊಣಾಜೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ವಿರುದ್ಧ ದಿಕ್ಕಿನಿಂದ ಬಂದ ಮತ್ತೊಂದು ಬೈಕ್ ಢಿಕ್ಕಿ ಹೊಡೆದಿತ್ತು. ಪರಿಣಾಮವಾಗಿ ತಲೆಗೆ ಗಂಭೀರವಾಗಿ ಗಾಯಗೊಂಡಿದ್ದ ಸತೀಶ್ ಅವರನ್ನು ತಕ್ಷಣ ದೇರಳಕಟ್ಟೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸತೀಶ್ ಅವರು ನಿನ್ನೆಯ ದಿನ ಮೃತಪಟ್ಟರು ಎನ್ನುವ ಮಾಹಿತಿ ಲಭಿಸಿದೆ. ಘಟನೆಗೆ ಸಂಬಂಧಿಸಿದಂತೆ ಮಂಗಳೂರು ದಕ್ಷಿಣ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಬ್ರಿ: ಕಪ್ಪು ಚಿರತೆ ಪ್ರತ್ಯಕ್ಷ: ಗ್ರಾಮಸ್ಥರಲ್ಲಿ ಹೆಚ್ಚಿದ ಆತಂಕ
ಉಡುಪಿ: ಹೆಬ್ರಿ ತಾಲ್ಲೂಕಿನ ಕುಚ್ಚೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಬೇಳಂಜೆ ದೊಡ್ಡಮನೆ ಗಣೇಶ್ ಶೆಟ್ಟಿ ಅವರ ಮನೆಯ ಹಟ್ಟಿಯ ಹಿಂಭಾಗದಲ್ಲಿ ಕಪ್ಪು ಚಿರತೆಯೊಂದು ಕಾಣಿಸಿಕೊಂಡಿದೆ. ಬೇಳಂಜೆ ಪರಿಸರದಲ್ಲಿ ಭಯದ ಸ್ಥಿತಿ ನಿರ್ಮಾಣವಾಗಿದೆ. ಅರಣ್ಯ ಇಲಾಖೆಯವರು ಕೂಡಲೇ ಸ್ಪಂದಿಸಿ ಚಿರತೆಯನ್ನು ಸೆರೆ ಹಿಡಿಯುವಂತೆ ಸ್ಥಳೀಯ ಮುಖಂಡರಾದ ಅಮೃತ್ ಕುಮಾರ್ ಶೆಟ್ಟಿ ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.






