ಬಂಟ್ವಾಳ: ಯುವತಿಯ ಗೌರವಕ್ಕೆ ಧಕ್ಕೆಯಾಗುವಂತಹ ಕ್ರಮವನ್ನು ಕೈಗೊಳ್ಳುವುದಾಗಿ ಬೆದರಿಸಿ, ಚಿನ್ನಾಭರಣ ದೋಚಿಕೊಂಡ ಘಟನೆ ನಡೆದಿದೆ. ಜುಲೈ ತಿಂಗಳಲ್ಲಿ ಯುವತಿಗೆ ಇನ್ಸ್ಟಾಗ್ರಾಮ್ ಮೂಲಕ ಪರಿಚಯವಾದ ಸುಪ್ರೀತ್ ಗೌಡ ಅಲಿಯಾಸ್ ಲತೀಶ್ ಗೌಡ ಯುವತಿಯ ಮೊಬೈಲ್ ಸಂಖ್ಯೆಯನ್ನು ಪಡೆದು ಆಕೆಯ ಅಶ್ಲೀಲ ಫೋಟೋಗಳನ್ನು ಕಳುಹಿಸುವಂತೆ ತಿಳಿಸಿದ್ದಾನೆ ಎನ್ನಲಾಗಿದೆ. ನಂತರ ಯುವತಿಯ ಬಳಿಯಲ್ಲಿರುವ ಚಿನ್ನಾಭರಣವನ್ನು ನೀಡುವಂತೆ ಕೇಳಿದ್ದಾನೆ. ಇಲ್ಲವೆಂದಾದರೆ ಯುವತಿಯ ಫೋಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುವುದಾಗಿ ಬೆದರಿಸಿದ್ದಾನೆ ಎನ್ನುವ ಮಾಹಿತಿ ಲಭಿಸಿದೆ. ಇದರಿಂದಾಗಿ ಯುವತಿಯು ಚಿನ್ನಾಭರಣಗಳನ್ನು ನೀಡಲು ಒಪ್ಪಿದ್ದಾಳೆ. ಹೀಗಾಗಿ ಲತೀಶ್ ಗೌಡ ತನ್ನೊಬ್ಬ ಸ್ನೇಹಿತನನ್ನು ಯುವತಿಯು ನೀಡಿದ ಲೊಕೇಶನ್ ಗೆ ಕಳುಹಿಸಿದ್ದಾನೆ. ಆಗ ಯುವತಿಯು 10 ಪವನ್ ಚಿನ್ನಾಭರಣ ಕೊಟ್ಟು ಕಳುಹಿಸಿದ್ದಾಳೆ ಎನ್ನುವ ಸಂಗತಿ ತಿಳಿದುಬಂದಿದೆ. ಇದಾದ ಬಳಿಕ ಲತೀಶ್ ಗೌಡ ಮತ್ತೆ ಚಿನ್ನಾಭರಣಕ್ಕೆ ಬೇಡಿಕೆ ಇಟ್ಟಾಗ, ಯುವತಿಯು ತನ್ನ ತಂದೆ ತಾಯಿಗಳಿಗೆ ವಿಷಯ ತಿಳಿಸಿದ್ದು, ಯುವತಿಯ ಪೋಷಕರು ಲತೀಶ್ ಗೌಡನನ್ನು ಸಂಪರ್ಕಿಸಿದಾಗ ಎಲ್ಲವನ್ನು ಹಿಂತಿರುಗಿಸುವುದಾಗಿ ತಿಳಿಸಿದ್ದು, ಇದೀಗ ಲಪಟಾಯಿಸಿರುವ ಚಿನ್ನಾಭರಣವನ್ನು ಹಿಂತಿರುಗಿಸದೆ ವಂಚನೆ ಮಾಡಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
•ಸುಳ್ಯ: ಢಿಕ್ಕಿ ಹೊಡೆದ ಲಾರಿ; ಪಾದಚಾರಿ ಸಾವು
ಸುಳ್ಯ: ಪಾದಚಾರಿಯೊಬ್ಬರಿಗೆ ಲಾರಿಯೊಂದು ಹಿಂಬದಿಯಿಂದ ಬಂದು ಢಿಕ್ಕಿ ಹೊಡೆದ ಘಟನೆ, ಜಾಲ್ಲೂರು ಗ್ರಾಮದ ವಿನೋಬನಗರದಲ್ಲಿ ನಡೆದಿದೆ. ಬಸ್ಸಿನಿಂದ ಇಳಿದ ಪಾದಚಾರಿಯೊಬ್ಬರು ರಸ್ತೆಯನ್ನು ದಾಟುತ್ತಿದ್ದ ಸಂದರ್ಭದಲ್ಲಿ ಈ ದುರಂತ ಸಂಭವಿಸಿದೆ ಎನ್ನಲಾಗಿದೆ. ಢಿಕ್ಕಿಯ ರಭಸಕ್ಕೆ ರಸ್ತೆಗೆ ಬಿದ್ದ ಪಾದಚಾರಿಯು ಲಾರಿಯ ಹಿಂಬದಿಯ ಚಕ್ರಕ್ಕೆ ಸಿಲುಕಿ ತೀವ್ರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ. ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆಯನ್ನು ನಡೆಸಿದ್ದು, ವ್ಯಕ್ತಿಯ ಬಳಿಯಿದ್ದ ವಸ್ತುಗಳ ಆಧಾರದ ಮೇಲೆ ಅವರ ಗುರುತನ್ನು ಪತ್ತೆ ಹಚ್ಚಿ, ಕುಟುಂಬಸ್ಥರಿಗೆ ತಿಳಿಸಿದ್ದಾರೆ ಎನ್ನುವ ಸಂಗತಿ ತಿಳಿದುಬಂದಿದೆ.
•ಬೆಳ್ತಂಗಡಿ: ಕಾಡುಹಂದಿ ಬೇಟೆ; ವ್ಯಕ್ತಿ ಬಂಧನ
ಬೆಳ್ತಂಗಡಿ: ಕಾಡುಹಂದಿಯನ್ನು ಬೇಟೆಯಾಡಿ, ಅದರ ಮಾಂಸವನ್ನು ಸಂಗ್ರಹಿಸಿಟ್ಟ ಹಿನ್ನೆಲೆಯಲ್ಲಿ ಅರಣ್ಯ ಅಧಿಕಾರಿಗಳು ದಾಳಿ ನಡೆಸಿದ ಘಟನೆ, ಭಾನುವಾರದಂದು ನೆರಿಯ ಗ್ರಾಮದ ಮುಚ್ಚರಾಳಿ ಎನ್ನುವಲ್ಲಿ ನಡೆದಿದೆ. ಬೆಳ್ತಂಗಡಿ ವಲಯ ಅರಣ್ಯಾಧಿಕಾರಿ ಮಹೇಶ್ ಎಂ. ದೇವಾಡಿಗ ಅವರ ಮಾರ್ಗದರ್ಶನಲ್ಲಿ, ನೆರಿಯ ಶಾಖೆಯ ಉಪವಲಯ ಅರಣ್ಯಾಧಿಕಾರಿ ರವಿಚಂದ್ರ ಅವರು ತನಿಖೆಯನ್ನು ನಡೆಸಿ, ಆರೋಪಿಯನ್ನು ಬಂಧಿಸಿದ್ದಾರೆ ಎನ್ನಲಾಗಿದೆ. ಆರೋಪಿಯನ್ನು ನೆರಿಯ ಗ್ರಾಮದ ಮುಚ್ಚಳ್ಳಿ ಮನೆ ನಿವಾಸಿ ಸುರೇಶ್ ಎಂ.ಕೆ ಎಂದು ಗುರುತಿಸಲಾಗಿದೆ. ಈ ಸಂದರ್ಭದಲ್ಲಿ ಬೇಟೆಗೆ ಬಳಸಿದ ಕೋವಿ, ಕತ್ತಿ ಮತ್ತು ಇತರ ಸಾಮಗ್ರಿಗಳನ್ನು ಅಧಿಕಾರಗಳು ವಶಪಡಿಸಿಕೊಂಡಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ. ಅರಣ್ಯ ಇಲಾಖೆಯ ಅಧಿಕಾರಿಗಳು ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ ಎನ್ನುವ ಸಂಗತಿ ತಿಳಿದುಬಂದಿದೆ.
•ಕಡಬ: ಮದ್ಯದ ಲೋಡ್ ನ ಲಾರಿ ಪಲ್ಟಿ; ಸರಣಿ ಅಪಘಾತ
ಕಡಬ: ಲಾರಿಯೊಂದು ಪಲ್ಟಿ ಹೊಡೆದು ಸರಣಿ ಅಪಘಾತಕ್ಕೆ ಕಾರಣವಾದ ಘಟನೆ, ಭಾನುವಾರದಂದು ನೆಲ್ಯಾಡಿ ಗ್ರಾಮದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಲಾರಿಯೊಂದು ಮತ್ತೊಂದು ಲಾರಿಗೆ ಢಿಕ್ಕಿ ಹೊಡೆದು, ಬಳಿಕ ಅದು ರಸ್ತೆಯ ಪಕ್ಕದಲ್ಲಿ ನಿಲ್ಲಿಸಿದ್ದ ಗ್ಯಾಸ್ ಟ್ಯಾಂಕರ್ ಗೆ ಢಿಕ್ಕಿ ಹೊಡೆದು, ಮುಂದಕ್ಕೆ ಹೋಗಿ ಪಲ್ಟಿ ಹೊಡೆದಿದೆ ಎನ್ನಲಾಗಿದೆ. ಸಕಲೇಶಪುರ ಕಡೆಯಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಲಾರಿಯನ್ನು ಶಮೀರ್ ಎನ್ನುವವರು ಚಲಾಯಿಸಿಕೊಂಡು ಬರುತ್ತಿದ್ದರು. ಅದೇ ಸಮಯದಲ್ಲಿ ಸಕಲೇಶಪುರದಿಂದ ಬರುತ್ತಿದ್ದ ಬೆಂಗಳೂರಿನ ನೆಲಮಂಗಲದ ನಿವಾಸಿ ರಾಜು ಎಂ ಎನ್ನುವವರಿಗೆ ಸೇರಿದ, ಮದ್ಯದ ಲೋಡ್ ತುಂಬಿದ್ದ ಲಾರಿಗೆ ಹಿಂಬದಿಯಿಂದ ಬಲವಾಗಿ ಢಿಕ್ಕಿ ಹೊಡೆದಿದೆ ಎನ್ನುವ ಮಾಹಿತಿ ಲಭಿಸಿದೆ. ಅದರ ರಭಸಕ್ಕೆ ಮದ್ಯದ ಲೋಡ್ ತುಂಬಿದ್ದ ಲಾರಿಯು ರಸ್ತೆಯ ಬದಿಯಲ್ಲಿ ನಿಲ್ಲಿಸಿದ್ದ ಗ್ಯಾಸ್ ಟ್ಯಾಂಕರ್ ಗೆ ವೇಗವಾಗಿ ತಾಗಿಸಿಕೊಂಡು, ಮುಂದೆ ಹೋಗಿ ಪಲ್ಟಿ ಹೊಡೆದಿದೆ. ಪರಿಣಾಮವಾಗಿ ಮದ್ಯದ ಲೋಡ್ ತುಂಬಿಕೊಂಡಿದ್ದ ಲಾರಿಯೊಂದಿಗೆ ಇತರ ಮೂರು ವಾಹನಗಳು ಕೂಡ ಜಖಂಗೊಂಡಿವೆ ಎನ್ನುವ ಸಂಗತಿ ತಿಳಿದುಬಂದಿದೆ. ಮಾಹಿತಿ ಲಭಿಸುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ನೆಲ್ಯಾಡಿ ಠಾಣೆಯ ಪೊಲೀಸರು ಪರಿಶೀಲನೆಯನ್ನು ನಡೆಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಲಾರಿಯ ಮಾಲೀಕರಾದ ರಾಜು ಎಂ ಅವರು ಪೊಲೀಸರಿಗೆ ದೂರು ನೀಡಿದ್ದು, ದೂರಿನ ಆಧಾರದ ಮೇಲೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







