ಬೆಂಗಳೂರು: ನಂದಿನಿ ಹಾಲಿನ ಬೆಲೆಯನ್ನು ಲೀಟರ್ ಗೆ 5 ರೂಪಾಯಿಗಳಷ್ಟು ಹೆಚ್ಚಳಗೊಳಿಸಲು ರಾಜ್ಯ ಸರ್ಕಾರವು ಸಮ್ಮತಿ ಸೂಚಿಸಿದ್ದು, ಇದರಿಂದಾಗಿ ರಾಜ್ಯದ ಜನರಿಗೆ ಮತ್ತೊಂದು ಬೆಲೆ ಏರಿಕೆಯ ಬಿಸಿ ತಟ್ಟುವ ಸನ್ನಿವೇಶ ಎದುರಾಗಿದೆ. ರಾಜ್ಯದ 16 ಹಾಲು ಒಕ್ಕೂಟಗಳು ಹಾಲು ಉತ್ಪಾದನೆ, ಸಂಗ್ರಹಣೆ ಮತ್ತು ನಿರ್ವಹಣೆಗೆ ಸಂಬಂಧಿಸಿದಂತೆ ವೆಚ್ಚಗಳು ಅಧಿಕವಾಗಿರುವ ಹಿನ್ನೆಲೆಯಲ್ಲಿ ಹಾಲಿನ ಮಾರಾಟದ ದರವನ್ನು ಪರಿಷ್ಕರಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರಿತ್ತು. ಮೊದಲಿಗೆ ಒಕ್ಕೂಟಗಳು ಹಾಲಿನ ದರವನ್ನು 10 ರೂಪಾಯಿಗಳಷ್ಟು ಹೆಚ್ಚಳಗೊಳಿಸುವಂತೆ ಬೇಡಿಕೆಯನ್ನಿಟ್ಟಿದ್ದವು. ಅಷ್ಟೇ ಅಲ್ಲದೆ ಹಾಲಿನ ದರದಲ್ಲಿ ಏರಿಕೆ ಮಾಡದಿದ್ದರೆ ವಿಧಾನಸೌಧ ಚಲೋ ನಡೆಸುವ ಎಚ್ಚರಿಕೆಯನ್ನು ಸಹ ಸರ್ಕಾರಕ್ಕೆ ನೀಡಿತ್ತು ಎನ್ನುವ ಮಾಹಿತಿ ಲಭಿಸಿದೆ. ಇದರೊಂದಿಗೆ ಹಾಲು ಉತ್ಪಾದಕರ ಹಿತವನ್ನು ಕಾಪಾಡಲು ದರ ಪರಿಷ್ಕರಣೆಯು ಅಗತ್ಯವಾಗಿದೆ ಎನ್ನುವುದನ್ನು ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟಿದ್ದವು. ಇದಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಗ್ರಾಹಕರಿಗೆ ಹೊರೆಯಾಗದಂತೆ ಮತ್ತು ಹಾಲು ಉತ್ಪಾದಕ ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ಮಾರ್ಗವನ್ನು ಅನುಸರಿಸಲು ಮುಂದಾಗಿದ್ದು, ಪ್ರತಿ ಲೀಟರ್ ಗೆ 4 ರೂಪಾಯಿಗಳಿಂದ 5 ರೂಪಾಯಿಗಳಿಗೆ ಹೆಚ್ಚಿಸಲು ನಿರ್ಧಾರ ಕೈಗೊಂಡಿದೆ. ದರ ಹೆಚ್ಚಳದ ಕುರಿತು ರಾಜ್ಯ ಸರ್ಕಾರದಿಂದ ಅಧಿಕೃತ ಆದೇಶ ಹೊರಬಂದರೆ ಗ್ರಾಹಕರ ಮಾಸಿಕ ಖರ್ಚು ಮತ್ತಷ್ಟು ಅಧಿಕಗೊಳ್ಳುವ ಸಾಧ್ಯತೆ ಇದೆ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ. ಆದರೆ ಈ ಬೆಲೆ ಏರಿಕೆ ಯಾವ ದಿನಾಂಕದಂದು ಜಾರಿಯಾಗಲಿದೆ ಮತ್ತು ಯಾವ ಯಾವ ನಂದಿನಿ ಹಾಲಿನ ಉತ್ಪನ್ನಗಳ ಬೆಲೆಗಳಲ್ಲಿ ಬದಲಾವಣೆಗಳು ಬರಲಿವೆ ಎನ್ನುವುದು ಇನ್ನಷ್ಟೇ ತಿಳಿದುಬರಬೇಕಿದೆ.
ಪಂಪ್ ಸೆಟ್ ಗಳಿಗೆ 7ಗಂಟೆಗಳ ಕಾಲ ವಿದ್ಯುತ್; ಕೆ.ಜೆ.ಜಾರ್ಜ್ ಘೋಷಣೆ
ಬೆಂಗಳೂರು: ಈಗಾಗಲೇ ಕೃಷಿಗೆ ಸಂಬಂಧಿಸಿದಂತೆ ಪಂಪ್ ಸೆಟ್ ಗಳ ಮೂಲಕ ಕೃಷಿಭೂಮಿಗೆ ನೀರನ್ನು ಪೂರೈಕೆ ಮಾಡಲು ರಾಜ್ಯ ಸರ್ಕಾರದಿಂದ 6:೦೦ಗಂಟೆಗಳ ಕಾಲ ವಿದ್ಯುತ್ ಅನ್ನು ಸರಬರಾಜು ಮಾಡಲಾಗುತ್ತಿದೆ. ಆದರೆ ಇನ್ನೂ ಮೂರು ನಾಲ್ಕು ದಿನಗಳಲ್ಲಿ ಈ ಸಮಯವು ಒಂದು ಗಂಟೆ ಹೆಚ್ಚಳಗೊಳ್ಳಲಿದ್ದು, ಕೃಷಿ ಪಂಪ್ ಸೆಟ್ ಗಳಿಗೆಂದೇ ಏಳು ಗಂಟೆಗಳ ಕಾಲ ವಿದ್ಯುತ್ ಪೂರೈಕೆ ಮಾಡಲು ರಾಜ್ಯ ಸರ್ಕಾರವು ನಿರ್ಧರಿಸಿದೆ. ಬರ ಪರಿಸ್ಥಿತಿಯ ಕುರಿತು ಚರ್ಚೆ ನಡೆಸುತ್ತಿದ್ದ ಸಂದರ್ಭದಲ್ಲಿ, ಬಿಜೆಪಿ ಪಕ್ಷದ ಸದಸ್ಯರು ಕೃಷಿ ಪಂಪ್ ಸೆಟ್ ಗಳಿಗೆ ಸಮರ್ಪಕವಾಗಿ ವಿದ್ಯುತ್ ಪೂರೈಕೆಯಾಗುವ ಕುರಿತು ವಿಷಯ ಪ್ರಸ್ತಾಪಿಸಿದಾಗ ಇದಕ್ಕೆ ಪ್ರತಿಕ್ರಿಯಿಸಿರುವ ಇಂಧನ ಸಚಿವರಾದ ಕೆ.ಜೆ.ಜಾರ್ಜ್ ಅವರು “ಈ ಹಿಂದೆ ಸಿದ್ಧರಾಮಯ್ಯ ಅವರು ಮುಖ್ಯಮಂತ್ರಿಗಳಾಗಿದ್ದಾಗ ರೈತರ ಪಂಪ್ ಸೆಟ್ ಗಳಿಗೆ ಪ್ರತಿದಿನ ಏಳು ಗಂಟೆಗಳ ಕಾಲ ವಿದ್ಯುತ್ ಅನ್ನು ಪೂರೈಸುವ ನಿರ್ಧಾರವನ್ನು ಕೈಗೊಳ್ಳಲಾಗಿತ್ತು. ಆದರೆ, ಸಧ್ಯ ನಿಗದಿಗಿಂತ ಹೆಚ್ಚಿನ ವಿದ್ಯುತ್ ಬೇಡಿಕೆ, ವಿದ್ಯುತ್ ಉತ್ಪಾದನೆಯಲ್ಲಿನ ವ್ಯತ್ಯಯದಿಂದಾಗಿ ಕೃಷಿ ಪಂಪ್ ಸೆಟ್ ಗಳಿಗೆ ವಿದ್ಯುತ್ ಪೂರೈಕೆಯಲ್ಲಿ ಒಂದು ಗಂಟೆ ಕಡಿತಗೊಳಿಸಲಾಗಿದೆ. ಇನ್ನು ಮೂರು ನಾಲ್ಕು ದಿನಗಳಲ್ಲಿ ಹೆಚ್ಚುವರಿ ಒಂದು ಗಂಟೆ ವಿದ್ಯುತ್ ಪೂರೈಕೆ ಮಾಡುವ ಕ್ರಮವನ್ನು ಮುಂದುವರಿಸಲಾಗುವುದು” ಎಂದು ತಿಳಿಸಿದ್ದಾರೆ.
ಯುಪಿಐ ವ್ಯವಹಾರ ಶುಲ್ಕ: ಶೀಘ್ರದಲ್ಲಿ ಬಂದ್?
ನವದೆಹಲಿ: ಯುಪಿಐ ಮೂಲಕ ನಡೆಸುವ ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದಂತೆ, ಕೇಂದ್ರ ಸರ್ಕಾರವು ಶುಲ್ಕವನ್ನು ವಿಧಿಸುವ ಕುರಿತು ನಿರ್ಣಯ ಕೈಗೊಂಡಿದ್ದು, ಅಕ್ಟೋಬರ್ 15ರಿಂದ ಜಾರಿಗೆ ತರಲು ಸಿದ್ಧತೆ ನಡೆಸಿರುವ ಬೆನ್ನಲ್ಲೇ, ಇದಕ್ಕೆ ಸಣ್ಣಪುಟ್ಟ ವ್ಯಾಪಾರಸ್ಥರಿಂದ ವಿರೋಧ ವ್ಯಕ್ತವಾಗಿದೆ. ವ್ಯಾಪಾರಸ್ಥರ ಮೇಲೆ ಯಾವುದೇ ತೀವ್ರ ರೀತಿಯ ಪರಿಣಾಮ ಬೀರುವುದಿಲ್ಲ ಎಂದು ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮ್ ಅವರು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ ಯುಪಿಐ ಮೂಲಕ ತಿಂಗಳಿಗೆ ಒಂದು ಲಕ್ಷ ರೂಪಾಯಿವರೆಗೆ ಹಣವನ್ನು ಸ್ವೀಕರಿಸುವ ವ್ಯಾಪಾರಸ್ಥರನ್ನು ಶುಲ್ಕದ ವ್ಯಾಪ್ತಿಯಿಂದ ಹೊರಗಿಡಲಾಗಿದ್ದು, ಬೀದಿಬದಿಯಲ್ಲಿ ಹಣ್ಣು, ತರಕಾರಿ, ಹೂವು ಮಾಡುವವರಿಗೆ ಮತ್ತು ಸಣ್ಣ ಕಿರಾಣಿ ವ್ಯಾಪಾರಸ್ಥರಿಗೆ ಯಾವುದೇ ಆತಂಕವಿಲ್ಲ. ಜೊತೆಗೆ ವ್ಯಾಪಾರಸ್ಥರು ಎಂಡಿಆರ್ ಶುಲ್ಕವನ್ನು ಗ್ರಾಹಕರಿಗೆ ವರ್ಗಾಯಿಸದಂತೆ ನೋಡಿಕೊಳ್ಳಬೇಕೆಂದು ಕೇಂದ್ರ ಸರ್ಕಾರವು ಸೂಚನೆಯನ್ನು ಸಹ ನೀಡಿದೆ. ಆದರೂ ಈ ವಿಚಾರವಾಗಿ ಗ್ರಾಹಕರಿಗೆ ವಿಶ್ವಾಸವಿದ್ದಂತೆ ತೋರುತ್ತಿಲ್ಲ, ಮತ್ತು ದೇಶದ ವರ್ತಕ ಸಮುದಾಯದವರಿಂದ ಕೂಡ ಇದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಒಂದೆಡೆ ಶುಲ್ಕದ ವ್ಯಾಪ್ತಿಯಿಂದ ಸಣ್ಣ ವರ್ತಕರನ್ನು ಹೊರಗಿಟ್ಟಿದ್ದರು ಕೂಡ, ದೊಡ್ಡಮಟ್ಟದ ವ್ಯವಹಾರ ನಡೆಸುವವರು ನಮಗೆ ಇದರಿಂದ ಕಿರಿಕಿರಿ ಉಂಟಾಗುವ ಸಾಧ್ಯತೆ ಇದೆ ಎಂದು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಶೀಘ್ರದಲ್ಲಿ ಈ ಬಗ್ಗೆ ದೊಡ್ಡ ಹೋರಾಟ ಕೂಡ ನಡೆಯುವ ಸಾಧ್ಯತೆ ಇದೆ.







