ಬೆಂಗಳೂರು: ರಾಜ್ಯದ ಕಾಲೇಜು ಶಿಕ್ಷಣ ಇಲಾಖೆಯು ಶೈಕ್ಷಣಿಕ ಪ್ರವಾಸಕ್ಕೆ ಸಂಬಂಧಿಸಿದಂತೆ ಮಹತ್ವದ ನಿರ್ಣಯವನ್ನು ಕೈಗೊಂಡಿದ್ದು, ಅದನ್ನು ಮತ್ತಷ್ಟು ಸುರಕ್ಷಿತವಾಗಿ ಹಾಗೂ ಶಿಸ್ತುಬದ್ಧವಾಗಿ ನಡೆಸುವ ನಿಟ್ಟಿನಲ್ಲಿ ಮಾರ್ಗಸೂಚಿಯೊಂದನ್ನು ಹೊರಡಿಸಿದೆ.
ಇನ್ನು ಮುಂದೆ ಶೈಕ್ಷಣಿಕ ಪ್ರವಾಸಕ್ಕೆ ತೆರಳುವ ವಿದ್ಯಾರ್ಥಿಗಳು ಸೆಲ್ಫಿ ತೆಗೆದುಕೊಳ್ಳುವುದನ್ನು ಮತ್ತು ರೀಲ್ಸ್ ಮಾಡುತ್ತಾ ಕಾಲಹರಣ ಮಾಡುವುದನ್ನು, ಇದರಿಂದಾಗಿ ಅಪಾಯಕ್ಕೆ ಸಿಲುಕುವುದನ್ನು ಸಂಪೂರ್ಣವಾಗಿ ನಿರ್ಬಂಧಿಸಿದೆ. ಅದರಲ್ಲೂ ಮುಖ್ಯವಾಗಿ ಅಪಾಯಕಾರಿ ಸ್ಥಳಗಳು, ಜಲಾಶಯಗಳು, ಬೆಟ್ಟಗುಡ್ಡಗಳು, ಜಲಪಾತಗಳು ಮತ್ತು ಇತರೆ ಪ್ರವಾಸಿ ಸ್ಥಳಗಳಲ್ಲಿ ಇಂತಹ ಚಟುವಟಿಕೆಗಳನ್ನು ಯಾವುದೇ ಕಾರಣಕ್ಕೂ ಕೈಗೊಳ್ಳಬಾರದೆಂದು ನಿಯಮವನ್ನು ಜಾರಿಗೊಳಿಸಿದೆ.
ಮಾರ್ಗಸೂಚಿಯಲ್ಲಿ ಏನೇನು..?
ಮಾರ್ಗಸೂಚಿಗೆ ಸಂಬಂಧಿಸಿದಂತೆ ಕಾಲೇಜುಗಳು ತಮ್ಮ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರವಾಸವನ್ನು ಕೈಗೊಳ್ಳುವ ಸಂದರ್ಭದಲ್ಲಿ ಕಾಲೇಜು ಶಿಕ್ಷಣ ಇಲಾಖೆಯಿಂದ ಮೊದಲಿಗೆ ಪೂರ್ವಾನುಮತಿಯನ್ನು ಪಡೆದುಕೊಳ್ಳಬೇಕಿದೆ. ಬಳಿಕ ಪ್ರವಾಸವನ್ನು ಕೈಗೊಂಡಿರುವ ಉದ್ದೇಶ, ಸ್ಥಳ, ವಿದ್ಯಾರ್ಥಿಗಳ ಸಂಖ್ಯೆ, ಜೊತೆಗೆ ತೆರಳುವ ಉಪನ್ಯಾಸಕರು ಮತ್ತು ಸಿಬ್ಬಂದಿಗಳ ಅಗತ್ಯ ಮಾಹಿತಿಗಳನ್ನು ನಿಯಮಾನುಸಾರವಾಗಿ ಸಲ್ಲಿಸಬೇಕಿದೆ.
ಪ್ರವಾಸಕ್ಕೂ ಮೊದಲು ವಿದ್ಯಾರ್ಥಿಗಳಿಗೆ ಇಲಾಖೆಯ ಮಾರ್ಗಸೂಚಿಗಳು ಮತ್ತು ಸುರಕ್ಷತಾ ಕ್ರಮಗಳ ಕುರಿತು ಸ್ಪಷ್ಟವಾದ ಮಾಹಿತಿಯನ್ನು ನೀಡುವುದು ಕಡ್ಡಾಯವಾಗಿದೆ. ವಿದ್ಯಾರ್ಥಿಗಳು ಮಾಹಿತಿಯ ಅನುಸಾರವಾಗಿ ಪ್ರವಾಸದ ಸಮಯದಲ್ಲಿ ನಡೆದುಕೊಳ್ಳುವಂತೆ ನೋಡಿಕೊಳ್ಳುವ ಜವಾಬ್ದಾರಿಯು ಉಪನ್ಯಾಸಕರು ಮತ್ತು ಸಿಬ್ಬಂದಿಗಳದ್ದಾಗಿರುತ್ತದೆ. ಶೈಕ್ಷಣಿಕ ಪ್ರವಾಸವು ಕೇವಲ ಮನರಂಜನೆಯಾಗಿ ಅಷ್ಟೇ ಅಲ್ಲದೆ ಸುರಕ್ಷಿತವಾಗಿ ಮತ್ತು ಉದ್ದೇಶಪೂರಿತ ಕಲಿಕಾ ಅನುಭವವನ್ನು ಪಡೆದುಕೊಳ್ಳುವಂತೆ ನೋಡಿಕೊಳ್ಳಬೇಕೆಂದು ಕಾಲೇಜು ಶಿಕ್ಷಣ ಇಲಾಖೆಯು ಈ ಮೂಲಕ ತಿಳಿಸಿದೆ.