ಹೊಸನಗರ: ಹೊಸನಗರ ತಾಲೂಕು ನಗರದ ಶ್ರೀ ನೀಲಕಂಠೇಶ್ವರ ಸೊಸೈಟಿಯ ಸಂಘದ ಸರ್ವ ಸದಸ್ಯರ ಮಹಾಸಭೆಯಲ್ಲಿ ಕಸ್ತೂರಿರಂಗನ್ ವರದಿಯ ಕುರಿತು ಚರ್ಚಿಸಿ, ರೈತರ ಹಿತಾಸಕ್ತಿ ಹಾಗೂ ನಮ್ಮ ಪ್ರದೇಶದ ಭವಿಷ್ಯದ ದೃಷ್ಟಿಯಿಂದ ಸರ್ಕಾರದ ಗಮನಕ್ಕೆ ನಮ್ಮ ಆಕ್ಷೇಪಣೆಗಳನ್ನು ತಲುಪಿಸುವ ಉದ್ದೇಶದಿಂದ ಸುಮಾರು 764 ಆಕ್ಷೇಪಣೆ ಅರ್ಜಿಗಳನ್ನು ರೈತರಿಂದ ಸಂಗ್ರಹಿಸಲಾಯಿತು.
ಇತ್ತೀಚಿನ ದಿನಗಳಲ್ಲಿ ಕೇವಲ ಹೋರಾಟ, ಪ್ರತಿಭಟನೆ ಅಥವಾ ಮನವಿ ಮಾಡುವುದರಿಂದ ಮಾತ್ರ ನಮ್ಮ ಬೇಡಿಕೆಗಳಿಗೆ ಸೂಕ್ತ ಸ್ಪಂದನೆ ದೊರೆಯುತ್ತದೆ ಎಂಬುದು ಖಚಿತವಲ್ಲ. ಆದ್ದರಿಂದ ಸರ್ಕಾರದ ಅಧಿಕೃತ ದಾಖಲೆಗಳಲ್ಲಿ ನಮ್ಮ ಆಕ್ಷೇಪಣೆಗಳು ದಾಖಲಾಗುವಂತೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರತ್ಯೇಕ ಆಕ್ಷೇಪಣೆ ಅರ್ಜಿಗಳನ್ನು ಸಲ್ಲಿಸುವುದು ಅಗತ್ಯ ಎಂಬುದನ್ನು ಮನಗಂಡು ಈ ಕ್ರಮ ಕೈಗೊಳ್ಳಲಾಗಿದೆ.
ಮಲೆನಾಡು ಭಾಗದ ಎಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಆಕ್ಷೇಪಣೆಗಳನ್ನು ಸಲ್ಲಿಸುತ್ತೇವೆಯೋ, ಅಷ್ಟು ಹೆಚ್ಚಿನ ಪ್ರಮಾಣದಲ್ಲಿ ರೈತರ ಅಭಿಪ್ರಾಯ ಮತ್ತು ವಿರೋಧ ಸರ್ಕಾರದ ಗಮನಕ್ಕೆ ಬರುವ ಸಾಧ್ಯತೆ ಇರುತ್ತದೆ. ಇದೇ ಉದ್ದೇಶದಿಂದ ಸಂಘದ ವತಿಯಿಂದ ರೈತರಿಂದ ಸಂಗ್ರಹಿಸಲಾದ ಸುಮಾರು 764 ಆಕ್ಷೇಪಣೆ ಅರ್ಜಿಗಳನ್ನು ಅಂಚೆ ಮೂಲಕ ಸಂಬಂಧಪಟ್ಟ ಇಲಾಖೆಗೆ ಕಳುಹಿಸಲಾಗಿದೆ.
ಇದು ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯ ವಿರುದ್ಧದ ಹೋರಾಟವಲ್ಲ. ನಮ್ಮ ರೈತರ ಜಮೀನು, ಜೀವನೋಪಾಯ ಮತ್ತು ನಮ್ಮ ಪ್ರದೇಶದ ಭವಿಷ್ಯದ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು, ಪ್ರಜಾಸತ್ತಾತ್ಮಕ ರೀತಿಯಲ್ಲಿ ಅಭಿಪ್ರಾಯವನ್ನು ದಾಖಲಿಸುವ ಒಂದು ಪ್ರಯತ್ನವಾಗಿದೆ.
ಈ ಪ್ರಯತ್ನ ಮಾಡಿದ ಅಧ್ಯಕ್ಷರು ಹಾಗೂ ನಿರ್ದೇಶಕರು ಶ್ರೀ ನೀಲಕಂಠೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ, ನಗರ ಇವರಿಗೆ ರೈತ ವಲಯದಿಂದ ಮೆಚ್ಚುಗೆ ವ್ಯಕ್ತವಾಗಿದೆ.







