ಮೂಡಿಗೆರೆ: ಪೊಲೀಸರ ಗಸ್ತು ವಾಹನವನ್ನು ಕಂಡು ವ್ಯಕ್ತಿಯೊಬ್ಬ ಅನುಮಾನಾಸ್ಪದವಾಗಿ ಪರಾರಿಯಾಗಲು ಪ್ರಯತ್ನಿಸಿದ ಘಟನೆ, ಬಣಕಲ್-ಚಕ್ಕಮಕ್ಕಿ ರಸ್ತೆಯಲ್ಲಿನ ಮಸೀದಿಯ ಸಮೀಪದಲ್ಲಿ ನಡೆದಿದೆ. ಕಾರಿನಲ್ಲಿ ಕುಳಿತಿದ್ದ ಸ್ಥಳೀಯ ನಿವಾಸಿಯಾದ ಮೊಹಮ್ಮದ್ ಆಸೀಫ್ ಎನ್ನುವ ವ್ಯಕ್ತಿಯು ಸಮವಸ್ತ್ರದಲ್ಲಿ ಗಸ್ತು ಕರ್ತವ್ಯದಲ್ಲಿದ್ದ ಪೊಲೀಸರನ್ನು ಕಂಡು ಗಾಬರಿಯಾಗಿ ಅನುಮಾನಾಸ್ಪದವಾಗಿ ಪರಾರಿಯಾಗಲು ಯತ್ನಿಸಿದ್ದಾನೆ ಎನ್ನಲಾಗಿದೆ. ಇದರಿಂದ ಸಂದೇಹಗೊಂಡ ಪೊಲೀಸರು ಆತನನ್ನು ಸೆರೆಹಿಡಿದು, ಮೂಡಿಗೆರೆಯ ಎಂಜಿಎಂ ಆಸ್ಪತ್ರೆಗೆ ಕರೆದುಕೊಂಡು ಹೋಗಿ ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ, ಆತ ಗಾಂಜಾ ಸೇವಿಸಿರುವುದು ದೃಢಪಟ್ಟಿದೆ ಎನ್ನುವ ಮಾಹಿತಿ ಲಭಿಸಿದೆ. ಈ ಸಂದರ್ಭದಲ್ಲಿ ಪೊಲೀಸರು ಆತನ ಕಾರನ್ನು ಸಹ ವಶಪಡಿಸಿಕೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಆರೋಪಿಯ ವಿರುದ್ಧ ಎನ್ ಡಿಪಿಎಸ್ ಕಾಯ್ದೆಯಡಿಯಲ್ಲಿ ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
•ಕಡೂರು: ರೌಡಿಶೀಟರ್ ಗಳ ಜೊತೆ ಎಣ್ಣೆ ಪಾರ್ಟಿ ಮಾಡಿದ ಎಎಸ್ಐ ಅಮಾನತು
ಕಡೂರು: ಕರ್ತವ್ಯಭ್ರಷ್ಟರಾಗಿ, ಸಾರ್ವಜನಿಕರಿಗೆ ತೊಂದರೆ ನೀಡುವಂತೆ ರೌಡಿಶೀಟರ್ ಗಳ ಜೊತೆಗೆ ಎಣ್ಣೆ ಪಾರ್ಟಿ ನಡೆಸಿದ ಹಿನ್ನೆಲೆಯಲ್ಲಿ ಎಎಸ್ಐ ಅಮಾನತುಗೊಂಡ ಘಟನೆ, ಸಖರಾಯಪಟ್ಟಣದಲ್ಲಿ ನಡೆದಿದೆ. ಇಲ್ಲಿನ ಠಾಣೆಯ ಎಎಸ್ಐ ಆದ ವೀರೇಂದ್ರ ಅವರು ಬಾರ್ ನಲ್ಲಿ ಪಾರ್ಟಿಯನ್ನು ಆಯೋಜಿಸಿ, ಇಡೀ ರಾತ್ರಿ ಜೋರಾಗಿ ಹಾಡನ್ನು ಹಾಕಿಕೊಂಡು ಸ್ಥಳೀಯರಿಗೆ ತೊಂದರೆಯನ್ನುಂಟು ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಮಹಿಳೆಯರು ಸೇರಿದಂತೆ ನೂರಾರು ಜನ ಗ್ರಾಮಸ್ಥರು ರಾತ್ರೋರಾತ್ರಿ ಪ್ರತಿಭಟನೆಯನ್ನು ನಡೆಸಿದ್ದಾರೆ. ಕಳೆದ ವಾರ ಎಮ್ಮೆದೊಡ್ಡಿ ಮುಸ್ಲಾಪುರ ಗ್ರಾಮದಲ್ಲಿ ಕೂಡ ಇದೇ ರೀತಿಯ ಘಟನೆ ನಡೆದಿದ್ದು, ಎಎಸ್ಐ ವಿರುದ್ಧ ನಿರಂತರವಾಗಿ ದೂರುಗಳು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಚಿಕ್ಕಮಗಳೂರಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಜಿತೇಂದ್ರ ಕುಮಾರ್ ದಯಾಮ ಅವರು ವೀರೇಂದ್ರ ಅವರನ್ನು ಅಮಾನತುಗೊಳಿಸುವಂತೆ ಆದೇಶವನ್ನು ಹೊರಡಿಸಿದ್ದಾರೆ.
•ಶಿವಮೊಗ್ಗ: ಮಕ್ಕಳಿಗೆ ಮೊಬೈಲ್ ನೋಡಲು ಕೊಟ್ಟು ಲಕ್ಷಾಂತರ ರೂಪಾಯಿ ಕಳೆದುಕೊಂಡ ಶಿಕ್ಷಕಿ!
ಶಿವಮೊಗ್ಗ: ಶಿಕ್ಷಕಿಯೊಬ್ಬರು ಶಾಲಾ ವಿದ್ಯಾರ್ಥಿಗಳಿಗೆ ಯೂಟ್ಯೂಬ್ ವಿಡಿಯೋವನ್ನು ನೋಡಲು ತಮ್ಮ ಮೊಬೈಲ್ ಅನ್ನು ಕೊಟ್ಟು, ಲಕ್ಷಾಂತರ ರೂಪಾಯಿ ವಂಚನೆಗೆ ಒಳಗಾದ ಘಟನೆ ನಡೆದಿದೆ. ಶಿವಮೊಗ್ಗದ ಶಾಲೆಯೊಂದರಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕಿಯು ಶಾಲೆಗೆ ತೆರಳಿದ ಸಮಯದಲ್ಲಿ ವಿದ್ಯಾರ್ಥಿಗಳು ಪಠ್ಯ ಅಥವಾ ಸಾಂಸ್ಕೃತಿಕ ಚಟುವಟಿಕೆಗೆ ಸಂಬಂಧಿಸಿದಂತೆ ಯೂಟ್ಯೂಬ್ ನಲ್ಲಿ ವಿಡಿಯೋ ನೋಡಲು ಅವರ ಬಳಿ ಮೊಬೈಲ್ ಅನ್ನು ಪಡೆದುಕೊಂಡಿದ್ದಾರೆ. ಈ ಸಂದರ್ಭದಲ್ಲಿ ಶಿಕ್ಷಕಿಯ ಮೊಬೈಲ್ ಗೆ ಅಪರಿಚಿತ ಸಂಖ್ಯೆಯಿಂದ ಸಂದೇಶ ಬಂದಿದ್ದು, ಆರ್ ಟಿಒ ಚಲನ್ ಗೆ ಸಂಬಂಧಿಸಿದಂತೆ ಎಪಿಕೆ ಫೈಲ್ ಅನ್ನು ಡೌನ್ ಲೋಡ್ ಮಾಡುವಂತೆ ಸಂದೇಶದಲ್ಲಿ ತಿಳಿಸಿದೆ ಎನ್ನಲಾಗಿದೆ. ಆರ್ ಟಿಒ ಅಧಿಕಾರಿಗಳಂತೆ ವರ್ತಿಸಿದ ಸೈಬರ್ ವಂಚಕರು ನಕಲಿ ಆರ್ ಟಿಒ ಚಲನ್ ಇರುವ ಎಪಿಕೆ ಫೈಲ್ ಅನ್ನು ಇನ್ ಸ್ಟಾಲ್ ಮಾಡಿಸುವ ಮೂಲಕ ಶಿಕ್ಷಕಿಯ ವೈಯಕ್ತಿಕ ಮಾಹಿತಿಗಳನ್ನು ಹ್ಯಾಕ್ ಮಾಡಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ. ಬಳಿಕ ಶಿಕ್ಷಕಿಯ ಗಮನಕ್ಕೆ ಬರದೆ ಹಂತಹಂತವಾಗಿ ಅವರ ಬ್ಯಾಂಕ್ ಖಾತೆಯಿಂದ ಹಣ ವರ್ಗಾವಣೆಗೊಂಡಿದೆ. ವಿದ್ಯಾರ್ಥಿಗಳಿಂದ ಮೊಬೈಲ್ ಅನ್ನು ಪಡೆದುಕೊಂಡ ಬಳಿಕ ಶಿಕ್ಷಕಿಯು ತನ್ನ ಖಾತೆಯಿಂದ ಹಣ ಹೋಗಿರುವ ಕುರಿತು ಬಂದಿರುವ ಸಂದೇಶವನ್ನು ನೋಡಿ ಅನುಮಾನಗೊಂಡು, ತಮ್ಮ ಖಾತೆ ಇರುವ ಬ್ಯಾಂಕ್ ಗೆ ತೆರಳಿ ವಿಚಾರಿಸಿದಾಗ ತಾನು ಸೈಬರ್ ವಂಚನೆಗೆ ಒಳಗಾಗಿರುವ ಸಂಗತಿ ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಶಿಕ್ಷಕಿಯು ಪೊಲೀಸರಿಗೆ ದೂರು ನೀಡಿದ್ದು, ದೂರಿನ ಆಧಾರದ ಮೇಲೆ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಂಚಕರ ಪತ್ತೆಗೆ ಕ್ರಮವನ್ನು ಕೈಗೊಳ್ಳಲಾಗಿದೆ.
•ಹೊಸನಗರ: ಬಸ್ ಮತ್ತು ಕಾರಿನ ನಡುವೆ ಢಿಕ್ಕಿ; ಇಬ್ಬರಿಗೆ ಗಂಭೀರ ಗಾಯ
ಹೊಸನಗರ: ಗಜಾನನ ಸಂಸ್ಥೆಗೆ ಸೇರಿದ ಬಸ್ ಮತ್ತು ಮಾರುತಿ ಆಲ್ಟೊ ಕಾರಿನ ನಡುವೆ ಅಪಘಾತ ಸಂಭವಿಸಿರುವ ಘಟನೆ, ರಿಪ್ಪನ್ ಪೇಟೆ ಸಮೀಪದ ಸೂಡೂರಿನಲ್ಲಿ ನಡೆದಿದೆ. ರಾಜ್ಯ ಹೆದ್ದಾರಿಯಲ್ಲಿ ಗಜಾನನ ಸಂಸ್ಥೆಯ ಬಸ್ ಶಿವಮೊಗ್ಗದಿಂದ ರಿಪ್ಪನ್ ಪೇಟೆ ಕಡೆಗೆ ತೆರಳುತ್ತಿದ್ದು, ಆವಿನಹಳ್ಳಿಯಿಂದ ಶಿವಮೊಗ್ಗದ ಕಡೆಗೆ ಕಾರು ತೆರಳುತ್ತಿದ್ದ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. ಢಿಕ್ಕಿಯ ರಭಸದ ಪರಿಣಾಮವಾಗಿ ಆಲ್ಟೊ ಕಾರು ತೀವ್ರವಾಗಿ ಜಖಂಗೊಂಡಿದ್ದು, ಅದರಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರಿಗೆ ಗಂಭೀರ ಗಾಯಗಳಾಗಿವೆ ಎನ್ನುವ ಸಂಗತಿ ತಿಳಿದುಬಂದಿದೆ. ಅಪಘಾತವನ್ನು ಗಮನಿಸಿದ ಸ್ಥಳೀಯರು ತಕ್ಷಣ ಗಾಯಾಳುಗಳನ್ನು ಕರೆದುಕೊಂಡು ಹೋಗಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಿದ್ದಾರೆ.







