ನಮ್ಮೂರ್ ಎಕ್ಸ್ಪ್ರೆಸ್ ಸ್ಪೋರ್ಟ್ಸ್ ನ್ಯೂಸ್ !!
ಐಪಿಎಲ್ – 2025
ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಗೆಲವು ದಾಖಲಿಸಿದ ಆರ್ಸಿಬಿ
* ವಿರಾಟ ರೂಪ ಪ್ರದರ್ಶಿಸಿದ ಚೇಸಿಂಗ್ ಮಾಸ್ಟರ್
* ಸಾಲ್ಟ್ ಭರ್ಜರಿ ಪ್ರದರ್ಶನ,ಕೃನಾಲ್ಗೆ 3 ವಿಕೆಟ್
* ಸೀಸನ್ 18 ಕ್ಕೆ ರಂಗು ರಂಗಿನ ಅದ್ದೂರಿ ಚಾಲನೆ
NAMMUR EXPRESS SPORTS NEWS
ಕೊಲ್ಕತ್ತಾ: ಕೋಲ್ಕತ್ತಾದ ಈಡನ್ ಗಾರ್ಡನ್ನಲ್ಲಿ ನಡೆದ ಕೆಕೆಆರ್ ವಿರುದ್ಧದ ಉದ್ಘಾಟನಾ ಪಂದ್ಯದಲ್ಲಿ ಆರ್ಸಿಬಿ ರಾಯಲ್ ಗೆಲವು ದಾಖಲಿಸಿದೆ. ಈ ಮೂಲಕ ಆರ್ಸಿಬಿ ಕಳೆದ ಆವೃತ್ತಿಯಲ್ಲಿ ನಾಲ್ಕು ಪಂದ್ಯಗಳಲ್ಲಿ ಅನುಭವಿಸಿದ ಸೋಲಿಗೆ ಸೇಡು ತೀರಿಸಿಕೊಂಡಿದೆ.
ಕೆಕೆಆರ್ ನೀಡಿದ್ದ 175 ರನ್ಗಳ ಗುರಿಯನ್ನು 16.2 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು ಸುಲಭವಾಗಿ ಚೇಸ್ ಮಾಡಿದ ಆರ್ಸಿಬಿ ಭರ್ಜರಿ ಜಯ ದಾಖಲಿಸಿತು. ಆರಂಭಿಕರಾಗಿ ಕಣಕ್ಕಿಳಿದ ಫಿಲ್ ಸಾಲ್ಟ್ ಮತ್ತು ವಿರಾಟ್ ಕೊಹ್ಲಿ ಮೊದಲ ಎಸೆತದಿಂದಲೇ ಕೆಕೆಆರ್ ಬೌಲರ್ಗಳ ಬೆವರಿಳಿಸಿದ್ರು. ಕೇವಲ 25 ಎಸೆತಗಳಲ್ಲೇ ಅರ್ಧ ಶತಕ ಪೂರೈಸಿದ ಸಾಲ್ಟ್ ಭದ್ರ ಬುನಾದಿ ಹಾಕಿದ್ರು.
ಇತ್ತ ವಿರಾಟ್ ಕೊಹ್ಲಿ ಕೂಡ ಬೌಂಡರಿ, ಸಿಕ್ಸರ್ಗಳನ್ನು ಸಿಡಿಸುತ್ತ 30 ಎಸೆತಗಳಲ್ಲೇ ಅರ್ಧ ಶತಕ ಸಿಡಿಸಿ ಬೆಂಗಳೂರು ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ಈ ಮೂಲಕ ಮೊದಲ ಪಂದ್ಯದಲ್ಲೇ ಗೆಲುವು ದಾಖಲಿಸಿದ ಆರ್ಸಿಬಿ 2 ಅಂಕಗಳನ್ನು ಪಡೆದುಕೊಂಡು ಶುಭಾರಂಭ ಮಾಡಿದೆ.
ಇದಕ್ಕೂ ಮುನ್ನ ಟಾಸ್ ಸೋತು ಬ್ಯಾಟಿಂಗ್ ಮಾಡಿದ ಕೆಕೆಆರ್ ಸ್ಪೋಟಕ ಆರಂಭ ಪಡೆಯಿತು. ಮೊದಲ ಓವರ್ನಲ್ಲೇ ಡಿ ಕಾಕ್ ಔಟಾದರೂ, 2ನೇ ವಿಕೆಟ್ಗೆ ನಾಯಕ ಅಜಿಂಕ್ಯ ರಹಾನೆ ಹಾಗೂ ಸುನಿಲ್ ನರೈನ್ 55 ಎಸೆತಗಳಲ್ಲಿ 103 ರನ್ ಜೊತೆಯಾಟವಾಡಿದರು. ಆದರೆ 10ನೇ ಓವರ್ನ ಕೊನೆ ಎಸೆತದಲ್ಲಿ ನರೈನ್(44) ಔಟಾಗುವುದರೊಂದಿಗೆ ತಂಡ ದಿಢೀರ್ ಕುಸಿಯಿತು. ನಾಯಕ ಅಜಿಂಕ್ಯ ರಹಾನೆ 31 ಎಸೆತಕ್ಕೆ 56 ರನ್ ಗಳಿಸಿ ಔಟಾದರು. ಆರಂಭಿಕ 10 ಓವರಲ್ಲಿ 2 ವಿಕೆಟ್ಗೆ 107, 14 ಓವರ್ ಗಳಲ್ಲಿ 4 ವಿಕೆಟ್ಗೆ 141 ರನ್ ಕಲೆಹಾಕಿದ್ದ ತಂಡ, ಡೆತ್ ಓವರ್ಗಳಲ್ಲಿ ರನ್ ಗಳಿಸಲು ಪರದಾಡಿತು. ಕೊನೆ 6 ಓವರಲ್ಲಿ ತಂಡ 4 ವಿಕೆಟ್ ಕಳೆದುಕೊಂಡು ಕೇವಲ 33 ರನ್ ಸೇರಿಸಿತು. ಆರ್ಸಿಬಿ ಪರ ಕೃನಾಲ್ ಪಾಂಡ್ಯ 29 ರನ್ಗೆ 3 ವಿಕೆಟ್ ಕಿತ್ತರು.
4 ತಂಡದ ವಿರುದ್ಧ 1000 ರನ್: ಕೊಹ್ಲಿ ಮೊದಲಿಗ
ಐಪಿಎಲ್ನಲ್ಲಿ ಕೊಹ್ಲಿ ಕೆಕೆಆರ್ ವಿರುದ್ಧ ಸಾವಿರ ರನ್ ಪೂರ್ಣಗೊಳಿಸಿದರು. ಅವರು ಒಟ್ಟಾರೆ 4 ತಂಡಗಳ ವಿರುದ್ಧ ಈ ಸಾಧನೆ ಮಾಡಿದ್ದಾರೆ. ಚೆನ್ನೈ, ಡೆಲ್ಲಿ, ಪಂಜಾಬ್ ಇತರ ತಂಡಗಳು. ಬೇರೆ ಯಾವುದೇ ಆಟಗಾರ 2ಕ್ಕಿಂತ ಹೆಚ್ಚು ತಂಡಗಳ ವಿರುದ್ಧ 1000 ರನ್ ಕಲೆಹಾಕಿಲ್ಲ, ಡೇವಿಡ್ ವಾರ್ನರ್, ರೋಹಿತ್ ತಲಾ 2 ತಂಡಗಳ ವಿರುದ್ಧ ಈ ಸಾಧನೆ ಮಾಡಿದ್ದಾರೆ.
ಕೊಹ್ಲಿಗೆ ಸನ್ಮಾನ ಮಾಡಿದ ಬಿಸಿಸಿಐ
18 ವರ್ಷಗಳಿಂದ ಆರ್ಸಿಬಿ ಪರ ಆಡುತ್ತಿರುವ ವಿರಾಟ್ ಕೊಹ್ಲಿಗೆ ಶನಿವಾರ ಉದ್ಘಾಟನಾ ಸಮಾರಂಭದ ವೇಳೆ ಬಿಸಿಸಿಐ ಅಧಿಕಾರಿಗಳು ಸನ್ಮಾನ ಮಾಡಿದರು.
ಸೀಸನ್ 18 ಕ್ಕೆ ರಂಗುರಂಗಿನ ಅದ್ದೂರಿ ಚಾಲನೆ
ಬಹುನಿರೀಕ್ಷಿತ 18ನೇ ಆವೃತ್ತಿಯ ಐಪಿಎಲ್ಗೆ ಅದ್ದೂರಿ ಚಾಲನೆ ಸಿಕ್ಕಿದೆ. ಕೋಲ್ಕತಾದ ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ಶನಿವಾರ ಅದ್ದೂರಿ, ವರ್ಣರಂಜಿತ ಉದ್ಘಾಟನಾ ಸಮಾರಂಭದೊಂದಿಗೆ ಟೂರ್ನಿ ಆರಂಭಗೊಂಡಿತು.
ಖ್ಯಾತ ಸಂಗೀತ ತಾರೆಗಳು, ಬಾಲಿವುಡ್ ನಟ-ನಟಿಯರು ಸಮಾರಂಭದ ಮೆರುಗು ಹೆಚ್ಚಿಸಿದರು. ಸಂಜೆ 6 ಗಂಟೆಗೆ ಉದ್ಘಾಟನಾ ಕಾರ್ಯಕ್ರಮ ಆರಂಭಗೊಂಡಿತು. ಕೆಕೆಆರ್ ಮಾಲಿಕ, ಖ್ಯಾತ ನಟ ಶಾರುಖ್ ಖಾನ್, ಗಾಯಕಿ ಶ್ರೇಯಾ ಘೋಷಲ್, ರಾಪರ್ ಕರಣ್ ಹಿಜ್ಜಾ, ಬಾಲಿವುಡ್ ನಟಿ ದಿಶಾ ಪಟಾನಿ ಕಾರ್ಯಕ್ರವಲ್ಲಿ ಪ್ರದರ್ಶನ ನೀಡಿದರು. ಈ ವೇಳೆ ಕ್ರೀಡಾಂಗಣದ ಲೈಟ್ ಶೋ ಮತ್ತಷ್ಟು ಆಕರ್ಷಣೀಯಗೊಳಿಸಿತು.








