ಕರಾವಳಿ ಟಾಪ್ ನ್ಯೂಸ್
* ಪುತ್ತೂರು: ಚಾರಣಕ್ಕೆ ಹೋದ ಯುವಕನಿಗೆ ಹೃದಯಾಘಾತ
* ಭಟ್ಕಳ: ದೇವಾಲಯದಲ್ಲಿ ಕಳ್ಳತನ
* ಮಂಗಳೂರು: ಗೋ ಕಳ್ಳತನ ಪ್ರಕರಣ; ಆರೋಪಿಗಳು ಸೆರೆ
* ಸುಳ್ಯ: ಮೂರು ವಾಹನಗಳ ನಡುವೆ ಸರಣಿ ಅಪಘಾತ
* ಉಡುಪಿ: ಮನೆಯಲ್ಲಿದ್ದ ವಜ್ರ ಮತ್ತು ಚಿನ್ನಾಭರಣ ಕಳುವು
* ಕುಂದಾಪುರ: ವ್ಯವಹಾರಸ್ಥನ ಆತ್ಮಹತ್ಯೆ
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
* ಪುತ್ತೂರು: ಚಾರಣಕ್ಕೆ ಹೋದ ಯುವಕನಿಗೆ ಹೃದಯಾಘಾತ
ಪುತ್ತೂರು: ಮನೋಜ್ ಎನ್ನುವ ಯುವಕನು ತನ್ನ ಸ್ನೇಹಿತರೊಂದಿಗೆ ಚಾರಣಕ್ಕೆಂದು ಹೋದ ಸಂದರ್ಭದಲ್ಲಿ, ಹೃದಯಾಘಾತವಾಗಿ ಮೃತಪಟ್ಟ ಘಟನೆ ಕೊಣಾಜೆಕಲ್ಲುವಿನಲ್ಲಿ ನಡೆದಿದೆ. ಕೊಣಾಜೆಕಲ್ಲು ಗುಡ್ಡದ ಎತ್ತರವಾದ ಪ್ರದೇಶಕ್ಕೆ ಹೋಗುವಾಗ ಎದೆ ನೋವು ಕಾಣಿಸಿಕೊಂಡಿದ್ದು, ಮನೋಜ್ ಅಲ್ಲಿಯೇ ವಿಶ್ರಾಂತಿ ಪಡೆಯಲು ಕುಳಿತುಕೊಂಡಿದ್ದಾರೆ. ಇದೇ ವೇಳೆ ಹೃದಯಾಘಾತ ಸಂಭವಿಸಿ, ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅವರೊಂದಿಗೆ ತೆರಳಿದ್ದ ಸ್ನೇಹಿತರು ಎಷ್ಟೇ ಉಪಚರಿಸಿದರು ಪ್ರಯೋಜನವಾಗಲಿಲ್ಲ. ಎದೆ ನೋವು ಕಾಣಿಸಿಕೊಂಡ ಕೆಲವೇ ನಿಮಿಷಗಳೊಳಗೆ ಸಾವನ್ನಪ್ಪಿದ್ದಾರೆ ಎನ್ನುವ ಸಂಗತಿ ತಿಳಿದುಬಂದಿದೆ.
* ಭಟ್ಕಳ: ದೇವಾಲಯದಲ್ಲಿ ಕಳ್ಳತನ
ಭಟ್ಕಳ: ಸೋಮವಾರ ರಾತ್ರಿ ಶ್ರೀಶೇಡಬರಿ ಜಟಕಾ ಮಹಾಸತಿ ದೇವಸ್ಥಾನಕ್ಕೆ ಕಳ್ಳರು ನುಗ್ಗಿದ್ದು, ಬಟ್ಟೆ ಲೋಟ ಮುಚ್ಚಿದ ಹುಂಡಿಯೊಡೆದು ಕಾಣಿಕೆ ಹಣವನ್ನು ಕದ್ದುಕೊಂಡು ಹೋಗಿರುವುದು ಸಿಸಿಟಿವಿ ಮೂಲಕ ಕಂಡುಬಂದಿದ್ದು, ಇವರನ್ನು ಕೇವಲ 24 ಗಂಟೆಗಳ ಒಳಗಾಗಿ ಭಟ್ಕಳದ ಸಿಪಿಐ ಮಂಜುನಾಥ್ ಲಿಂಗಾರೆಡ್ಡಿ ಅವರ ನೇತೃತ್ವದಲ್ಲಿ ಪೊಲೀಸರು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳನ್ನು ಶಿರಾಲಿಯ ಅಮೀರ್ ಹಸನ್ ಬ್ಯಾರಿ ಮತ್ತು ಮೊಹಮ್ಮದ್ ಇಮ್ರಾನ್ ಅಬ್ದುಲ್ ಗಫರ್ ಎಂದು ಗುರುತಿಸಲಾಗಿದೆ. ಪ್ರಕರಣ ಕುರಿತು ವಿಚಾರ ತಿಳಿಯುತ್ತಿದ್ದಂತೆ ದೇವಸ್ಥಾನದ ಆಡಳಿತ ಸಮಿತಿಯವರು ಭಟ್ಕಳದ ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಪೊಲೀಸರು ತನಿಖೆಯನ್ನು ಪ್ರಾರಂಭಿಸಿದರು. ವಿಚಾರಣೆಯ ಸಮಯದಲ್ಲಿ ದೊರೆತ ಮಾಹಿತಿಯ ಆಧಾರದ ಮೇಲೆ ಸುಳಿವು ದೊರೆತು, ಕಳ್ಳರನ್ನು ಪತ್ತೆ ಹಚ್ಚಲು ಸಾಧ್ಯವಾಯಿತು ಎನ್ನಲಾಗಿದೆ. ಈ ಸಂದರ್ಭದಲ್ಲಿ ಆರೋಪಿಗಳಿಂದ 1.80 ಲಕ್ಷ ರೂಪಾಯಿ ನಗದು ಹಣ ಮತ್ತು ಬೈಕ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.
* ಮಂಗಳೂರು: ಗೋಕಳ್ಳತನ ಪ್ರಕರಣ; ಆರೋಪಿಗಳು ಸೆರೆ
ಮಂಗಳೂರು: ಸೆಪ್ಟೆಂಬರ್ 13ರ ಶನಿವಾರದಂದು ಅಡ್ಯಾರ್ ನ ತಜಿಪೋಡಿ ಎನ್ನುವಲ್ಲಿ, ಉಮೇಶ್ ಆಳ್ವಾ ಅವರ ಅಂಗಳದಿಂದ ಜರ್ಸಿ ಹಸುವನ್ನು ಕಳ್ಳತನ ಮಾಡಲಾಗಿತ್ತು. ಈ ಕುರಿತು ಕಂಕನಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸರು ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದರು. ಬುಧವಾರದಂದು ಆರೋಪಿಗಳನ್ನು ಪತ್ತೆ ಹಚ್ಚಿ, ಸೆರೆ ಹಿಡಿಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆರೋಪಿಗಳನ್ನು ಅಡ್ಯಾರ್ ನ ಶಾಬಾಜ್ ಅಹಮ್ಮದ್, ವಳಚ್ಚಿಲ್ ನ ಖಾದರ್ ಮೊಹಮ್ಮದ್ ಮತ್ತು ಅರ್ಕುಳ ವಳಚ್ಚಿಲ್ ನ ಮೊಹಮ್ಮದ್ ಸುಹಾನ್ ಎಂದು ಗುರುತಿಸಲಾಗಿದೆ. ಹಾಗೂ ಜೀವಂತ ದನವನ್ನು ಪತ್ತೆಹಚ್ಚಲಾಗಿದೆ. ವಿಚಾರಣೆಯ ಬಳಿಕ ಶಾಬಾಜ್ ಮತ್ತು ಸುಹಾನ್ ದನವನ್ನು ಕಳ್ಳತನ ಮಾಡಿ, ಅದನ್ನು ಖಾದರ್ ಮೊಹಮ್ಮದ್ ಗೆ ಮಾರಾಟ ಮಾಡಿದ್ದರು. ಖಾದರ್ ಅದನ್ನು ಮಾಂಸ ಮಾಡಲು ಖರೀದಿಸಿದ್ದ ಎನ್ನುವ ಸಂಗತಿ ತಿಳಿದುಬಂದಿದೆ.
* ಸುಳ್ಯ: ಮೂರು ವಾಹನಗಳ ನಡುವೆ ಸರಣಿ ಅಪಘಾತ
ಸುಳ್ಯ: ಸುಳ್ಯದಿಂದ ಪೈಚಾರು ಕಡೆಗೆ ಹೋಗುತ್ತಿದ್ದ ಮೂರು ವಾಹನಗಳ ನಡುವೆ, ಮಾಣಿ ಮೈಸೂರು ಹೆದ್ದಾರಿಯಲ್ಲಿ ಬುಧವಾರದಂದು ಸರಣಿ ಅಪಘಾತ ನಡೆದಿದೆ. ಮುಂದೆ ಇದ್ದ ಕಾರ್ ತಾಂತ್ರಿಕ ಸಮಸ್ಯೆಯಿಂದಾಗಿ ಇದ್ದಕ್ಕಿದ್ದಂತೆ ರಸ್ತೆಯ ನಡುವೆ ನಿಂತುಬಿಟ್ಟಿದ್ದು, ಅದರ ಹಿಂದೆ ಇದ್ದ ಆಟೋ ಕಾರಿಗೆ ಢಿಕ್ಕಿ ಹೊಡೆದಿದೆ. ಇದರ ಪರಿಣಾಮವಾಗಿ ಆಟೋದ ಹಿಂದೆ ಇದ್ದ ಬುಲೆಟ್ ಬೈಕ್ ನಿಯಂತ್ರಣ ತಪ್ಪಿ ಆಟೋಗೆ ಗುದ್ದಿದೆ. ಯಾವುದೇ ರೀತಿಯ ಪ್ರಾಣಾಪಾಯ ಸಂಭವಿಸದಿದ್ದರೂ, ಬೈಕ್ ಸವಾರನ ಕಾಲಿಗೆ ಗಾಯವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮತ್ತು ಮೂರು ವಾಹನಗಳು ಜಖಂಗೊಂಡಿವೆ ಎನ್ನುವ ಮಾಹಿತಿ ಲಭಿಸಿದೆ.
* ಉಡುಪಿ: ಮನೆಯಲ್ಲಿದ್ದ ವಜ್ರ ಮತ್ತು ಚಿನ್ನಾಭರಣ ಕಳುವು
ಉಡುಪಿ: ಅನಾರೋಗ್ಯಪೀಡಿತ ಮಹಿಳೆಯನ್ನು ನೋಡಿಕೊಳ್ಳಲು ಬಂದಿದ್ದ ದಾದಿಯೊಬ್ಬಳು, ಮನೆಯಲ್ಲಿದ್ದ ಚಿನ್ನಾಭರಣಗಳನ್ನು ದೋಚಿಕೊಂಡು ಹೋಗಿರುವ ಘಟನೆ ಅಜ್ಜರಕಾಡು ವಸತಿ ಸಮುಚ್ಚಯವೊಂದರಲ್ಲಿ ನಡೆದಿದೆ. ಕಳೆದೆರಡು ತಿಂಗಳ ಹಿಂದೆ ನಾಗಮಾಲಿನಿ ಎನ್ನುವ ಮಹಿಳೆಯನ್ನು ನೋಡಿಕೊಳ್ಳಲು ಜಸಿಂತಾ ಎಂಬ ಹೆಸರಿನ ದಾದಿಯಯೊಬ್ಬರನ್ನು ನೇಮಕ ಮಾಡಿಕೊಳ್ಳಲಾಗಿತ್ತು. ಈಕೆ ಪರ್ಸ್ ವೊಂದರಲ್ಲಿ ಇಟ್ಟಿದ್ದ, 20 ಗ್ರಾಂ ತೂಕದ ಚಿನ್ನ ಮತ್ತು ವಜ್ರದ ಹರಳುಗಳನ್ನು ಹೊಂದಿರುವ ಸುಮಾರು ಎಂಟು ಲಕ್ಷ ಮೌಲ್ಯದ ಬಳೆ, 44 ಗ್ರಾಂ ತೂಕದ ಸುಮಾರು ಏಳು ಲಕ್ಷ ರೂಪಾಯಿಯಷ್ಟು ಬೆಲೆಬಾಳುವ ವಜ್ರದ ಪದಕವುಳ್ಳ ಚಿನ್ನದ ಸರವನ್ನು ಲಪಟಾಯಿಸಿದ್ದು. ಒಟ್ಟು 15 ಲಕ್ಷ ರೂಪಾಯಿಯಷ್ಟು ನಷ್ಟ ಉಂಟಾಗಿದೆ ಎಂದು ಸಂಬಂಧಿತ ವ್ಯಕ್ತಿಗಳು ದೂರಿನಲ್ಲಿ ತಿಳಿಸಿದ್ದಾರೆ.
* ಕುಂದಾಪುರ: ವ್ಯವಹಾರಸ್ಥನ ಆತ್ಮಹತ್ಯೆ
ಕುಂದಾಪುರ: ಉದಯ ಚಾತ್ರ ಎಂಬ ವ್ಯಾಪಾರಸ್ಥರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ, ಕಮಲಶಿಲೆ ಗ್ರಾಮದ ಬರೆಗುಂಡಿಯಲ್ಲಿ ನಡೆದಿದೆ. ಮಿತಭಾಷಿಯಾಗಿದ್ದ ಉದಯ್ ಅವರು ಎಲ್ಲರೊಂದಿಗೂ ಬೆರೆಯುವ ಮೂಲಕ ಜನಾನುರಾಗಿಯಾಗಿದ್ದರು ಎನ್ನಲಾಗಿದೆ. ಬುಧವಾರದಂದು ವ್ಯವಸಾಯ ಸೇವಾ ಸಹಕಾರಿ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ತಂದೆ ತಾಯಿ ಮತ್ತು ಪತ್ನಿಯೊಂದಿಗೆ ಪಾಲ್ಗೊಂಡಿದ್ದು, ಬಳಿಕ ತಮ್ಮ ಕೆಲಸಕ್ಕೆ ಹೋಗುವುದಾಗಿ ಹೇಳಿ ಅಲ್ಲಿಂದ ತೆರಳಿದ್ದರು. ಆದರೆ ಅವರು ಕೆಲಸಕ್ಕೆ ಹೋಗದೆ, ನೇರವಾಗಿ ಮನೆಗೆ ಬಂದು, ಮಹಡಿಯಲ್ಲಿರುವ ಕೋಣೆಯೊಂದಕ್ಕೆ ಹೋಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಭೆಯನ್ನು ಮುಗಿಸಿ ತಂದೆ ತಾಯಿ ಮತ್ತು ಪತ್ನಿ ಮನೆಗೆ ಮರಳಿದಾಗ, ಹೊರಗಡೆ ಉದಯ್ ಅವರ ಕಾರು ನಿಂತಿರುವುದು ಕಂಡುಬಂದಿದೆ. ಆದರೆ ಮನೆಯಬೀಗ ತೆರೆದಿರಲಿಲ್ಲ. ಬಳಿಕ ಮನೆಯ ಸುತ್ತಮುತ್ತ ಹುಡುಕಾಡಿ, ನಂತರ ಬೀಗ ತೆರೆದು ಒಳಗಡೆ ಹೋಗಿ ಪರಿಶೀಲನೆ ನಡೆಸಿದಾಗ,ಉದಯ್ ಅವರು ನೇಣು ಬಿಗಿದುಕೊಂಡಿರುವುದು ಬೆಳಕಿಗೆ ಬಂದಿದೆ. ಉದಯ್ ಅವರು ಚಾತ್ರ ಎಂಟರ್ಪ್ರೈಸಸ್ ಅಂಗಡಿಯನ್ನು ನಡೆಸುತ್ತಿದ್ದು, ವ್ಯವಹಾರ ಕೂಡ ಚೆನ್ನಾಗಿಯೇ ಇತ್ತು. ಎಲ್ಲರೊಂದಿಗೆ ಬೆರೆಯುತ್ತಿದ್ದ ಕಾರಣ ಜನರ ಪ್ರೀತಿಗೂ ಪಾತ್ರರಾಗಿದ್ದರು. ಆದರೂ ಈ ರೀತಿ ಮಾಡಿಕೊಳ್ಳಲು ಕಾರಣ ಏನೆಂಬುದು ತಿಳಿದುಬಂದಿಲ್ಲ. ಪತಿಯ ಆತ್ಮಹತ್ಯೆಗೆ ಸಂಬಂಧಿಸಿದಂತೆ ಪತ್ನಿ ಅಕ್ಷರ ಚಾತ್ರ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ







