ನಮ್ಮೂರ್ ಎಕ್ಸ್ಪ್ರೆಸ್ ಸ್ಪೋರ್ಟ್ಸ್ ನ್ಯೂಸ್
ಐಪಿಎಲ್ -2025
* ತವರಲ್ಲೇ ಲಖನೌಗೆ ಪಂಚ್ ನೀಡಿದ ಪಂಜಾಬ್
* ಪಾಯಿಂಟ್ ಟೇಬಲ್ನಲ್ಲಿ 2 ನೇ ಸ್ಥಾನಕ್ಕೆ
* ಇಂದು ಬೆಂಗಳೂರಲ್ಲಿ ಆರ್ಸಿಬಿ vs ಗುಜರಾತ್ ಪಂದ್ಯ
NAMMUR EXPRESS SPORTS NEWS
ಲಖನೌ: ಇಲ್ಲಿನ ಏಕನಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತನ್ನ ಆಲ್ರೌಂಡರ್ ಪ್ರದರ್ಶನದಿಂದ 8 ವಿಕೆಟ್ಗಳ ಅಮೋಘ ಗೆಲುವು ಸಾಧಿಸಿ, ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿತು. ಈ ಮೂಲಕ ಲಖನೌ ತಂಡಕ್ಕೆ ತವರಲ್ಲೇ ಪಂಚ್ ನೀಡಿದೆ.
ಮೊದಲು ಬ್ಯಾಟ್ ಮಾಡಿದ ಲಖನೌ, ನಿರ್ಣಾಯಕ ಹಂತಗಳಲ್ಲಿ ಪ್ರಮುಖ ಬ್ಯಾಟರ್ಗಳ ವಿಕೆಟ್ ಕಳೆದುಕೊಂಡು 20 ಓವರ್ನಲ್ಲಿ 7 ವಿಕೆಟ್ಗೆ 171 ರನ್ ಗಳಿಸಿತು. ಸ್ಪಿನ್ ಸ್ನೇಹಿ ಪಿಚ್ನಲ್ಲಿ ಈ ಟಾರ್ಗೆಟ್ ಚೇಸ್ ಮಾಡುವುದು ಅಷ್ಟು ಸುಲಭವಲ್ಲ ಅನಿಸಿದರೂ ಪಂಜಾಬ್ ಬ್ಯಾಟರ್ಗಳು ಅರಾಮಾಗಿ ಬ್ಯಾಟ್ ಬೀಸಿ, ಇನ್ನೂ 3.4 ಓವರ್ ಬಾಕಿ ಇರುವಂತೆಯೇ ತಂಡವನ್ನು ಗೆಲುವಿನ ಗುರಿ ಸೇರಿಸಿದರು. ಇದರೊಂದಿಗೆ ಪಂಜಾಬ್ ನೆಟ್ ರನ್ರೇಟ್ ಸಹ ಏರಿಕೆಗೊಂಡಿದೆ.
ಲಖನೌ ಮೊದಲ ಓವರಲ್ಲೇ ಮಿಚೆಲ್ ಮಾರ್ಷ್ ವಿಕೆಟ್ ಕಳೆದುಕೊಂಡಿತು. ಅರ್ಶ್ದೀಪ್ ಸಿಂಗ್ ಲಖನೌಗೆ ಆರಂಭಿಕ ಆಘಾತ ನೀಡಿದರು. ಮಾರ್ಕ್ರಮ್ 28 ರನ್ ಗಳಿಸಿ ಔಟಾದರೆ, ನಾಯಕ ರಿಷಭ್ ಪಂತ್ 5 ಬಾಲ್ನಲ್ಲಿ 2 ರನ್ಗಳಿಸಿ ಪೆವಿಲಿಯನ್ಗೆ ನಡೆದರು. ಆದರೆ ಲಖನೌಗೆ ಭಾರಿ ಹಿನ್ನಡೆ ಉಂಟಾಗಿದ್ದು ನಿಕೋಲಸ್ ಪೂರನ್ ಔಟಾದಾಗ. 12ನೇ ಓವರ್ನಲ್ಲಿ 44 ರನ್ಗಳಿಸಿದ್ದಾಗ ಚಹಲ್ಗೆ ವಿಕೆಟ್ ಒಪ್ಪಿಸಿ ಹೊರನಡೆದರು. ಆ ಬಳಿಕ ಆಯುಷ್ ಬದೋನಿ (41), ಅಬ್ದುಲ್ ಸಮದ್ (27)ರ ಹೋರಾಟ ದಿಂದ ತಂಡ ಸ್ಪರ್ಧಾತ್ಮಕ ಮೊತ್ತ ದಾಖಲಿಸಿತು.
ಪಂಜಾಬ್ ಕೂಡ ತನ್ನ ಓಪನಿಂಗ್ ಬ್ಯಾಟರ್ ಪ್ರಿಯಾನ್ಸ್ ಆರ್ಯಾ (08)ರನ್ನು ಬೇಗನೆ ಕಳೆದುಕೊಂಡಿತು. ಆದರೆ ಪ್ರಬ್ಸಿಮ್ರನ್ ಸಿಂಗ್ 34 ಎಸೆತದಲ್ಲಿ 9 ಬೌಂಡರಿ, 3 ಸಿಕ್ಸರ್ ಬಾರಿಸಿ ತಂಡವನ್ನು ಸುರಕ್ಷಿತ ಸ್ಥಿತಿಗೆ ತಂದು ನಿಲ್ಲಿಸಿದರು.
ಶ್ರೇಯಸ್ ಅಯ್ಯರ್ ಹಾಗೂ ಇಂಪ್ಯಾಕ್ಟ್ ಆಟಗಾರನಾಗಿ ಕಣಕ್ಕಿಳಿದ ನೇಹಲ್ ವಧೇರಾ, ಲಖನೌ ಬೌಲರ್ಗಳ ಬೆವರಿಳಿಸಿದರು. ಶ್ರೇಯಸ್ 30 ಬಾಲ್ನಲ್ಲಿ 52 ರನ್ ಗಳಿಸಿದರೆ, ನೇಹಲ್ 25 ಬಾಲ್ನಲ್ಲಿ 43 ರನ್ ಗಳಿಸಿದರು. ಇಬ್ಬರೂ ತಲಾ 3 ಬೌಂಡರಿ, 4 ಸಿಕ್ಸರ್ ಸಿಡಿಸಿದರು. ಲೆಗ್ ಸ್ಪಿನ್ನರ್ ದಿಗ್ಗೇಶ್ ರಾಠಿ ಆಕರ್ಷಕ ಬೌಲಿಂಗ್ ನಡೆಸಿ ಗಮನ ಸೆಳದರು.
* ಇಂದು ಬೆಂಗಳೂರಲ್ಲಿ ಆರ್ಸಿಬಿ vs ಗುಜರಾತ್ ಪಂದ್ಯ
ಬೆಂಗಳೂರು: ಇಂದು ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಆರ್ಸಿಬಿ ಹಾಗೂ ಗುಜರಾತ್ ಟೈಟಾನ್ಸ್ ನಡುವಿನ ಪಂದ್ಯದಲ್ಲಿ ಎರಡೂ ತಂಡಗಳು ಗೆಲುವಿನ ನಿರೀಕ್ಷೆಯಲ್ಲಿವೆ.ಆರ್ಸಿಬಿ ತವರಲ್ಲಿ ಪಂದ್ಯ ಗೆದ್ದು ತನ್ನ ಗೆಲುವಿನ ಓಟ ಮುಂದುವರೆಸುವ ತವಕದಲ್ಲಿದೆ. ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ಪಂದ್ಯವು ಈ ಆವೃತ್ತಿಯ ಮೊದಲ ಪಂದ್ಯವಾಗಿದ್ದು,ಆರ್ಸಿಬಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.
ಪಂದ್ಯಕ್ಕೂ ಮುನ್ನ ಸಮಾರಂಭ – ವಿಜಯ್ ಪ್ರಕಾಶ್ ಗಾಯನ
ಬಿಸಿಸಿಐ ಈ ಬಾರಿ ಐಪಿಎಲ್ಗೆ ಆತಿಥ್ಯ ವಹಿಸುವ ಎಲ್ಲಾ 13 ನಗರಗಳಲ್ಲೂ ಉದ್ಘಾಟನಾ ಸಮಾರಂಭ ನಡೆಸಲು ನಿರ್ಧರಿಸಿದ್ದು, ಬೆಂಗಳೂರಿನಲ್ಲಿ ಇಂದು ನಡೆಯುವ ಪಂದ್ಯಕ್ಕೂ ಮುನ್ನ ಅದ್ದೂರಿ ಕಾರ್ಯಕ್ರಮ ನಡೆಯಲಿದೆ. ಖ್ಯಾತ ಗಾಯಕ ವಿಜಯ್ ಪ್ರಕಾಶ್ರವರಿಂದ ಗಾಯನ ಇರಲಿದೆ ಎಂದು ಐಪಿಎಲ್ ಆಡಳಿತ ಮಂಡಳಿ ಸಾಮಾಜಿಕ ತಾಣಗಳಲ್ಲಿ ಮಾಹಿತಿ ಹಂಚಿಕೊಂಡಿದೆ.








