ಬೆಂಗಳೂರು: ರಾಜ್ಯದಲ್ಲಿ ಗುಟ್ಕಾ, ಪಾನ್ ಮಸಾಲಾ ಬ್ಯಾನ್ ಮಾಡಲಾಗಿದೆ. ರಾಜ್ಯ ಸರ್ಕಾರವು ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಮಹತ್ವವಾದ ನಿರ್ಣಯವೊಂದನ್ನು ಕೈಗೊಂಡಿದ್ದು ಸಂಬಂಧಿಸಿದಂತೆ ತಂಬಾಕು ಮತ್ತು ನಿಕೋಟಿನ್ ಯುಕ್ತ ಗುಟ್ಕಾ ಮತ್ತು ಪಾನ್ ಮಸಾಲಾದಂತಹ ಉತ್ಪಾದನೆ, ಶೇಖರಣೆ, ವಿತರಣೆ, ಸಾಗಣೆ ಮತ್ತು ಮಾರಾಟವನ್ನು ಒಂದು ವರ್ಷಗಳ ಕಾಲ ನಿಷೇಧಿಸುವಂತೆ ಆದೇಶವನ್ನು ಹೊರಡಿಸಿದೆ.
ತಂಬಾಕು ಅಥವಾ ನಿಕೋಟಿನ್ ಅಂಶವನ್ನು ಪ್ರತ್ಯೇಕ ಪ್ಯಾಕೆಟ್ ಗಳಲ್ಲಿ ನೀಡಿ, ಗ್ರಾಹಕರು ಅದನ್ನು ಮತ್ತೊಂದು ಉತ್ಪನ್ನದೊಂದಿಗೆ ಸುಲಭವಾಗಿ ಮಿಶ್ರಣ ಮಾಡಿಕೊಂಡು, ಸೇವಿಸುವಂತೆ ಮಾರಾಟ ಮಾಡುವಂತಹ ಉತ್ಪನ್ನಗಳಿಗೂ ಕಡಿವಾಣ ಹಾಕಿದೆ.
ಆಹಾರ ಭದ್ರತೆ ಮತ್ತು ಗುಣಮಟ್ಟ ಕಾಯ್ದೆ-20೦6ರ ಸೆಕ್ಷನ್ 30(2)(ಎ) ಹಾಗೂ ಆಹಾರ ಭದ್ರತೆ ಮತ್ತು ಗುಣಮಟ್ಟ ನಿಯಮಾವಳಿ-2011ರ ನಿಯಮ 2.3.4ರ ಅಡಿಯಲ್ಲಿ ರಾಜ್ಯ ಆಹಾರ ಸುರಕ್ಷತಾ ಆಯುಕ್ತರು ಈ ಅಧಿಸೂಚನೆಯನ್ನು ಹೊರಡಿಸಿದ್ದಾರೆ ಎನ್ನಲಾಗಿದೆ.
ಮೂಲಗಳ ಪ್ರಕಾರ ಸಾರ್ವಜನಿಕ ಆರೋಗ್ಯ ಮತ್ತು ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಜಾರಿಗೊಳಿಸಿರುವ ಈ ನಿಷೇಧ, ಅಧಿಸೂಚನೆಯನ್ನು ಹೊರಡಿಸಿದ ದಿನದಿಂದಲೇ ಜಾರಿಗೆ ಬರಲಿದೆ. ಇದಕ್ಕೂ ಮೀರಿ ರಾಜ್ಯದಲ್ಲಿ ನಿಷೇಧಿತ ಉತ್ಪನ್ನಗಳ ಮಾರಾಟ ಮತ್ತು ಸಾಗಣೆ ನಡೆಯದಂತೆ ಎಚ್ಚರಿಕೆವಹಿಸಲು ಆಹಾರ ಸುರಕ್ಷತಾ ಅಧಿಕಾರಿಗಳು ಮತ್ತು ಸಂಬಂಧಿತ ಇಲಾಖೆಯವರು ಪರಿಶೀಲನೆಯನ್ನು ನಡೆಸುವುದು ಮತ್ತು ನಿಯಮವನ್ನು ಉಲ್ಲಂಘಿಸುವವರ ವಿರುದ್ಧ ಕಠಿಣ ಕಾನೂನು ಕ್ರಮವನ್ನು ಕೂಡ ಕೈಗೊಳ್ಳುವ ಸಾಧ್ಯತೆ ಇದೆ.





