ಕರಾವಳಿ ಯಾವ ತಾಲೂಕಲ್ಲಿ ಏನೇನ್ ಆಯ್ತು?
* ಕಾಪು: ಹೊಟೇಲೊಂದರ ಬಳಿ ಬೈಕ್ ಗೆ ಬಸ್ ಡಿಕ್ಕಿ
* ಬೈಂದೂರು: ಗ್ರಾಹಕನ ಹೆಸರಿನಲ್ಲಿ ಚಿನ್ನಾಭರಣ ಕಳುವು
* ಮಂಗಳೂರು: ಬಾಲ ಕಾರ್ಮಿಕರ ರಕ್ಷಣೆ
* ಪುತ್ತೂರು: ದನ ಮಾರಾಟ ಮಾಡಿರುವ ವ್ಯಕ್ತಿ ವಿರುದ್ಧ ಕೇಸ್!
* ಬೆಳ್ತಂಗಡಿ: ಜೀಪ್ ಮತ್ತು ಸ್ಕೂಟರ್ ನಡುವೆ ಅಪಘಾತ
* ಬ್ರಹ್ಮಾವರ: ಕರಿಮಣಿ ಸರ ಕದ್ದು ಕಳ್ಳ ಪರಾರಿ
* ಸುಳ್ಯ: ನೇಣು ಬಿಗಿದುಕೊಂಡು ವೃದ್ಧ ಆತ್ಮಹತ್ಯೆ
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಕಾಪು: ಶಿಬಿನ್ ಎನ್ನುವ ವ್ಯಕ್ತಿಯು ಬೈಕ್ ನಲ್ಲಿ ಪಡುಬಿದ್ರಿಯತ್ತ ಸಾಗಲು ಆರಾಫಾ ಹೊಟೇಲ್ ಬಳಿ ಬಂದ ಸಂದರ್ಭದಲ್ಲಿ, ಬಸ್ ಒಂದು ಢಿಕ್ಕಿ ಹೊಡೆದ ಘಟನೆ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಮಂಗಳವಾರದಂದು ನಡೆದಿದೆ. ಶಿಬಿನ್ ಗಾಯಗೊಂಡಿದ್ದು, ಆತನನ್ನು ಸೂರತ್ಕಲ್ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿಯನ್ನು ಪ್ರವೇಶಿಸುತ್ತಿರುವ ಸಮಯದಲ್ಲಿ ಈ ಪರಿಸ್ಥಿತಿ ಎದುರಾಗಿದೆ ಎಂದು ಹೇಳಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
* ಬೈಂದೂರು: ಗ್ರಾಹಕನ ಹೆಸರಿನಲ್ಲಿ ಚಿನ್ನಾಭರಣ ಕಳುವು
ಬೈಂದೂರು: ಪುರುಷೋತ್ತಮ ಎಂಬ ಹೆಸರಿನ ವ್ಯಕ್ತಿಯು, ಸೋಮವಾರದಂದು ಚಿನ್ನಾಭರಣವನ್ನು ಖರೀದಿಸುವ ನೆಪದಲ್ಲಿ ಆಭರಣ ಅಂಗಡಿಯವೊಂದಕ್ಕೆ ಬಂದು, ಚಿನ್ನಾಭರಣ ಕಳುವು ಮಾಡಿರುವ ಘಟನೆ ಉಪ್ಪುಂದ ಗ್ರಾಮದ ಧನಲಕ್ಷ್ಮೀ ಜ್ಯುವೆಲರಿ ಅಂಗಡಿಯಲ್ಲಿ ನಡೆದಿದೆ. ತಾನು ದೊಡ್ಡ ಮೊತ್ತದ ಆಭರಣಗಳನ್ನು ಖರೀದಿಸುವುದಾಗಿ ಮಾಲೀಕರಿಗೆ ನಂಬಿಸಿ, ಎರಡು ಚಿನ್ನದ ಬಳೆಗಳನ್ನು ಮತ್ತು ಒಂದು ನೆಕ್ಲೇಸ್ ಅನ್ನು ತೆಗೆದಿರಿಸಿ, ಮನೆಯಿಂದ ಹಣ ತೆಗೆದುಕೊಂಡು ಬರುವುದಾಗಿ ಹೇಳಿ ಹೋಗಿದ್ದಾನೆ. ಸಂಜೆ ಮರಳಿ ಬಂದ ಪುರುಷೋತ್ತಮ 5,00,000 ಮೌಲ್ಯದ 50 ಗ್ರಾಂ ಚಿನ್ನಾಭರಣಕ್ಕೆ ಬಿಲ್ ಮಾಡಿಸಿ, ಕಾರಿನಲ್ಲಿ ಇಟ್ಟಿರುವ ಹಣವನ್ನು ತರುವುದಾಗಿ ಹೇಳಿ, ಆಭರಣದ ಚೀಲದ ಸಮೇತ ಹೊರಬಂದು, ಕಾರಿನಲ್ಲಿ ಪರಾರಿಯಾಗಿದ್ದಾನೆ. ಮಾಲೀಕರು ತಕ್ಷಣ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಕಾರ್ಯಪ್ರವೃತ್ತರದ ಬೈಂದೂರು, ಗಂಗೊಳ್ಳಿ ಮತ್ತು ಕುಂದಾಪುರದ ಪೊಲೀಸರು ಸಿಸಿ ಕ್ಯಾಮೆರಾ ಮಾಹಿತಿಯ ಆಧಾರದ ಮೇಲೆ, ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ನಿರತರಾದರು. ಬಳಿಕ ಬೈಂದೂರಿನ ಪೊಲೀಸರು ಪುರುಷೋತ್ತಮನನ್ನು ಕುಂದಾಪುರ ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ 66ರ ಸಮೀಪದ ಅರಾಟೆ ಸೇತುವೆಯ ಬಳಿ ಸೆರೆ ಹಿಡಿಯುವಲ್ಲಿ ಯಶಸ್ವಿಯಾದರು. ಪುರುಷೋತ್ತಮನನ್ನು ವಿಚಾರಣೆ ನಡೆಸಿದಾಗ, ಆತ ಮೂಲತಃ ಬೆಂಗಳೂರಿನವನು, ಪತ್ನಿ ಬೀಜೂರು ಗ್ರಾಮದವರು ಎಂದು ತಿಳಿದುಬಂದಿದ್ದು, ಪುರುಷೋತ್ತಮ ಕೊಲ್ಲೂರು ಸೇರಿದಂತೆ ಮೊದಲಾದ ಕಡೆಗಳಲ್ಲಿ ಉದ್ಯಮವನ್ನು ನಡೆಸುತ್ತಿದ್ದು, ನಷ್ಟ ಉಂಟಾಗಿರುವ ಹಿನ್ನೆಲೆಯಲ್ಲಿ ಈ ಕೃತ್ಯವನ್ನು ಎಸಗಿರುವುದಾಗಿ ತಿಳಿಸಿದ್ದಾನೆ. ಈ ಸಂದರ್ಭದಲ್ಲಿ ಆತ ಕಳುವು ಮಾಡಿದ ಚಿನ್ನಾಭರಣವನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು ಎನ್ನುವ ಸಂಗತಿ ತಿಳಿದುಬಂದಿದೆ.
* ಮಂಗಳೂರು: ಬಾಲ ಕಾರ್ಮಿಕರ ರಕ್ಷಣೆ
ಮಂಗಳೂರು: ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿನ ಫಿಶ್ ಕಟ್ಟಿಂಗ್ ಘಟಕದ ಮೇಲೆ ಕಾರ್ಮಿಕ ಇಲಾಖೆ ಮತ್ತು ಪೊಲೀಸ್ ಇಲಾಖೆ ಜಂಟಿಯಾಗಿ ದಾಳಿ ನಡೆಸಿದೆ. ಈ ಸಂದರ್ಭದಲ್ಲಿ ಅಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಹತ್ತು ಜನ ಬಾಲಕಾರ್ಮಿಕರನ್ನು ಪತ್ತೆ ಹಚ್ಚಿ, ಮಕ್ಕಳನ್ನು ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರುಪಡಿಸಲಾಗಿದ್ದು, ಬಳಿಕ ಕಾವೂರಿನ ಶಾಂತಿನಗರದಲ್ಲಿರುವ ಬಾಲಕಿಯರ ಬಾಲಮಂದಿರದಲ್ಲಿ ಪುನರ್ವಸತಿಯ ವ್ಯವಸ್ಥೆಯನ್ನು ಮಾಡಿಕೊಡಲಾಯಿತು. ಕಾರ್ಯಾಚರಣೆಯ ಸಮಯದಲ್ಲಿ ಕಾರ್ಮಿಕ ಇಲಾಖೆಯ ಸಹಾಯಕ ಕಾರ್ಮಿಕ ಆಯುಕ್ತೆ ನಾಜಿಯಾ ಸುಲ್ತಾನ್, ಕಾರ್ಮಿಕ ಅಧಿಕಾರಿ ಕುಮಾರ್ ಬಿ. ಆರ್, ಹಿರಿಯ ಕಾರ್ಮಿಕ ನಿರೀಕ್ಷಕರಾದ ರಾಜಶೇಖರ ರೆಡ್ಡಿ, ಯೋಜನಾ ನಿರ್ದೇಶಕರಾದ ಶ್ರೀನಿವಾಸ್ ನಾಯಕ, ಜಿಲ್ಲಾ ಬಾಲಕಾರ್ಮಿಕ ಯೋಜನೆಯ ಪಣಂಬೂರು ಪೊಲೀಸ್ ಠಾಣೆಯ ಅಧಿಕಾರಿಗಳು ಕೈಜೋಡಿಸಿದ್ದರು ಎನ್ನಲಾಗಿದೆ.
* ಪುತ್ತೂರು: ದನ ಮಾರಾಟ ಮಾಡಿರುವ ವ್ಯಕ್ತಿ ವಿರುದ್ಧ ಕೇಸ್!
ಪುತ್ತೂರು: ದನವನ್ನು ಸಾಗಿಸುತ್ತಿರುವ ಖಚಿತ ಮಾಹಿತಿ ಬಂದ ಹಿನ್ನೆಲೆಯಲ್ಲಿ, ಪುತ್ತೂರು ನಗರದ ಪೊಲೀಸ್ ಠಾಣೆಯ ಎಸ್ ಐ ಆಂಜನೇಯ ರೆಡ್ಡಿ ಮತ್ತು ಅವರ ತಂಡ ಸಂಪ್ಯ ಕಡೆಯಿಂದ ಕಬಕ ಕಡೆಗೆ ಪಿಕಪ್ ವಾಹನವನ್ನು ಅಡ್ಡಗಟ್ಟಿ, ಪರಿಶೀಲನೆ ನಡೆಸಿದಾಗ ವಾಹನದೊಳಗೆ ದನವನ್ನು ಕಟ್ಟಿ ಹಾಕಿರುವುದು ಕಂಡುಬಂದಿದೆ. ಇದಕ್ಕೆ ಸಂಬಂಧಿಸಿದಂತೆ ಯಾವುದೇ ಪರವಾನಿಗೆ ಕೂಡ ಇರಲಿಲ್ಲ. ದನವನ್ನು ತಿಂಗಳಾಡಿ ಗಟ್ಟಿಮನೆ ಪ್ರದೇಶದ ಪೂವಪ್ಪ ಎನ್ನುವ ವ್ಯಕ್ತಿಯಿಂದ ಹದಿನೇಳು ಸಾವಿರ ರೂಪಾಯಿಗೆ ಖರೀದಿಸಿ, ಕೆದಿಲದ ಮನೆಯೊಂದರಲ್ಲಿ ಮಾಂಸ ಮಾಡಿ ಮಾರಾಟ ಮಾಡಲು ತೆಗೆದುಕೊಂಡು ಹೋಗಲಾಗುತ್ತಿತ್ತು ಎಂದು, ಪಿಕಪ್ ಚಾಲಕ ಮಾಹಿತಿ ನೀಡಿರುವ ಸಂಗತಿ ತಿಳಿದುಬಂದಿದೆ. ದನವನ್ನು ಪೊಲೀಸರು ರಕ್ಷಿಸಿದ್ದು, ಮಾರಾಟ ಮಾಡಲು ತೆಗೆದುಕೊಂಡು ಹೋಗುತ್ತಿದ್ದ ಅಬ್ದುಲ್ ಕರೀಂ ಕೆದಿಲ, ಅಬ್ದುಲ್ ಜಮೀರ್ ಕೆದಿಲ ಮತ್ತು ಅವರಿಗೆ ದನವನ್ನು ಮಾರಾಟ ಮಾಡಿರುವ ಪೂವಪ್ಪನ ವಿರುದ್ಧ ಪುತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
* ಬೆಳ್ತಂಗಡಿ: ಜೀಪ್ ಮತ್ತು ಸ್ಕೂಟರ್ ನಡುವೆ ಅಪಘಾತ
ಬೆಳ್ತಂಗಡಿ: ಹರ್ಷಿತ್ ಎನ್ನುವ ವ್ಯಕ್ತಿಯು ಬಿ.ಸಿ.ರಸ್ತೆಯಿಂದ ಪುಂಜಾಲುಕಟ್ಟೆ ಕಡೆಗೆ ತೆರಳುತ್ತಿದ್ದ ಸಂದರ್ಭದಲ್ಲಿ, ಬೈಕ್ ನಿಯಂತ್ರಣ ತಪ್ಪಿ ಜೀಪ್ ಗೆ ಢಿಕ್ಕಿ ಹೊಡೆದಿರುವ ಘಟನೆ ಬಂಟ್ವಾಳ ಬೆಳ್ತಂಗಡಿ ರಾಷ್ಟ್ರೀಯ ಹೆದ್ದಾರಿ ಸಮೀಪದ ಪಿಲಾತಬೆಟ್ಟು ಗ್ರಾಮದಲ್ಲಿ ಮಂಗಳವಾರ ಬೆಳಿಗ್ಗೆ ನಡೆದಿದೆ. ಧರ್ಮಸ್ಥಳ ಪೊಲೀಸ್ ಠಾಣೆಯ ಪಿಎಸ್ಐ ಅವರು, ಇಲಾಖೆಯ ಬೊಲೆರೋ ಜೀಪ್ ನ ಚಾಲಕನೊಂದಿಗೆ ಮಂಗಳೂರು ಕಡೆಗೆ ಹೋಗುತ್ತಿದ್ದ ಸಮಯದಲ್ಲಿ ಈ ಅಪಘಾತ ಸಂಭವಿಸಿದೆ. ಹರ್ಷಿತ್ ಜೀಪ್ ಗೆ ಢಿಕ್ಕಿ ಹೊಡೆದು, ಬೈಕ್ ಸಹಿತವಾಗಿ ರಸ್ತೆಗೆ ಬಿದ್ದಿರುವ ಪರಿಣಾಮವಾಗಿ ತಲೆಗೆ ಪೆಟ್ಟು ಬಿದ್ದಿದ್ದು, ಅವರನ್ನು ಆ್ಯಂಬುಲೆನ್ಸ್ ಮೂಲಕ ತುಂಬೆಯ ಫಾದರ್ ಮುಲ್ಲರ್ಸ್ ಆಸ್ಪತ್ರೆಗೆ ಕಳುಹಿಸಲಾಯಿತು ಎನ್ನುವ ಮಾಹಿತಿ ಲಭಿಸಿದೆ.
* ಬ್ರಹ್ಮಾವರ: ಕರಿಮಣಿ ಸರ ಕದ್ದು ಕಳ್ಳ ಪರಾರಿ
ಬ್ರಹ್ಮಾವರ: ರಮಾಬಾಯಿ ಎನ್ನುವ ಉಪ್ಪೂರು ಗ್ರಾಮದ ಮಹಿಳೆಯು ಕಳೆದೆರಡು ದಿನಗಳ ಹಿಂದೆ, ಸಾಮಗ್ರಿಗಳನ್ನು ಕೊಂಡು ಮನೆಗೆ ಹಿಂತಿರುಗುತ್ತಿದ್ದ ಸಮಯದಲ್ಲಿ, ಕರಿಮಣಿ ಕಳುವಾಗಿರುವ ಘಟನೆ ನಡೆದಿದೆ. ದ್ವಿಚಕ್ರ ವಾಹನದಲ್ಲಿ ಆಗಮಿಸಿದ ಇಬ್ಬರು ವ್ಯಕ್ತಿಗಳಲ್ಲಿ, ಹಿಂದೆ ಕುಳಿತಿದ್ದ ವ್ಯಕ್ತಿಯು ರಮಾಬಾಯಿಯ ಕುತ್ತಿಗೆಯಲ್ಲಿದ್ದ ಸುಮಾರು 4.5 ಪವನ್ ತೂಕದ ಕರಿಮಣಿ ಸರವನ್ನು ಎಳೆದುಕೊಂಡಿದ್ದಾನೆ. ಬಳಿಕ ಇನ್ನೊಬ್ಬ ವ್ಯಕ್ತಿಯು ಕೂಡಲೇ ಬೈಕ್ ಅನ್ನು ವೇಗವಾಗಿ ಓಡಿಸಿಕೊಂಡು ಹೋಗುವ ಮೂಲಕ ಇಬ್ಬರು ಪರಾರಿಯಾಗಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ರಮಾಬಾಯಿಯವರು ಪೊಲೀಸರಿಗೆ ದೂರು ನೀಡಿದ್ದು, ದೂರಿನ ಆಧಾರದ ಮೇಲೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
* ಸುಳ್ಯ: ನೇಣು ಬಿಗಿದುಕೊಂಡು ವೃದ್ಧ ಆತ್ಮಹತ್ಯೆ
ಸುಳ್ಯ: ವೃದ್ಧ ವ್ಯಕ್ತಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ, ದೇವಚಳ್ಳ ಗ್ರಾಮದ ದೇವ ಎನ್ನುವಲ್ಲಿ ನಡೆದಿದೆ. ಮೃತ ವೃದ್ಧ ಬಾಬು ಆಚಳ್ಳಿ ಎನ್ನುವವರಾಗಿದ್ದು, ಆತ್ಮಹತ್ಯೆಗೆ ಕಾರಣ ಏನೆಂಬುದು ತಿಳಿದುಬಂದಿಲ್ಲ. ಸುಳ್ಯ ಪೊಲೀಸರು ಸ್ಥಳಕ್ಕೆ ಆಗಮಿಸಿ, ಪರಿಶೀಲನೆಯನ್ನು ನಡೆಸಿದ್ದಾರೆ.







