ನಮ್ಮೂರ್ ಎಕ್ಸ್ಪ್ರೆಸ್ ಸ್ಪೋರ್ಟ್ಸ್ ನ್ಯೂಸ್
* ಆಂಗ್ಲರ ನಾಡಲ್ಲಿ ಪ್ರಾಕ್ಟೀಸ್ ಶುರುಮಾಡಿದ ಟೀಂ ಇಂಡಿಯಾ
* ರೋಲ್ಯಾಂಡ್ ಗ್ಯಾರೋಸ್ನಲ್ಲಿ ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
NAMMMUR EXPRESS SPORTS NEWS
* ಆಂಗ್ಲರ ನಾಡಲ್ಲಿ ಪ್ರಾಕ್ಟೀಸ್ ಶುರುಮಾಡಿದ ಟೀಂ ಇಂಡಿಯಾ
ಇಂಗ್ಲೆಂಡ್: ಜೂನ್ 20 ರಿಂದ ಇಂಗ್ಲೆಂಡ್ ವಿರುದ್ಧ ಆರಂಭವಾಗಲಿರುವ 5 ಟೆಸ್ಟ್ ಪಂದ್ಯಗಳ ಸರಣಿಯೊಂದಿಗೆ ಟೀಂ ಇಂಡಿಯಾದ ನಾಲ್ಕನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಕೂಡ ಆರಂಭವಾಗಲಿದೆ. ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್ನಿಂದ ನಿವೃತ್ತರಾದ ನಂತರ, ಶುಭ್ಮನ್ ಗಿಲ್ ಅವರ ನಾಯಕತ್ವದಲ್ಲಿ ಟೀಂ ಇಂಡಿಯಾ ಹೇಗೆ ಪ್ರದರ್ಶನ ನೀಡುತ್ತದೆ ಎಂಬುದನ್ನು ನೋಡಲು ಎಲ್ಲರೂ ಕಾತುರರಾಗಿದ್ದಾರೆ. ಈಗಾಗಲೇ ಭಾರತ ಯುವ ಪಡೆ ಇಂಗ್ಲೆಂಡ್ಗೆ ತೆರಳಿದ್ದು, ತರಬೇತಿಯನ್ನು ಸಹ ಪ್ರಾರಂಭಿಸಿದೆ.
ಲಾರ್ಡ್ಸ್ ಒಳಾಂಗಣ ತರಬೇತಿ ಕೇಂದ್ರದಲ್ಲಿ ಅಭ್ಯಾಸ
ಜೂನ್ 6 ರಂದು ಲಂಡನ್ ತಲುಪಿದ ಭಾರತ ತಂಡದ ಆಟಗಾರರು ಲಂಡನ್ನ ಲಾರ್ಡ್ಸ್ ಕ್ರಿಕೆಟ್ ಮೈದಾನದ ಒಳಾಂಗಣ ತರಬೇತಿ ಕೇಂದ್ರದಲ್ಲಿ ಅಭ್ಯಾಸ ಆರಂಭಿಸಿದ್ದಾರೆ. ಈ ವೇಳೆ ತಂಡದ ಅನುಭವಿ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಬೌಲಿಂಗ್ ಕೋಚ್ ಮೋರ್ನೆ ಮಾರ್ಕೆಲ್ ಅವರೊಂದಿಗೆ ದೀರ್ಘಕಾಲ ಮಾತನಾಡುತ್ತಿರುವುದು ಕಂಡುಬಂತು. ಈ ಪ್ರವಾಸದಲ್ಲಿ ಬುಮ್ರಾ ಅವರ ಪ್ರದರ್ಶನವು ಟೀಂ ಇಂಡಿಯಾಕ್ಕೆ ಬಹಳ ಮುಖ್ಯವಾಗಲಿದೆ. ಬುಮ್ರಾ ಅವರಲ್ಲದೆ, ಈ ಪ್ರವಾಸದಲ್ಲಿ ಭಾರತೀಯ ತಂಡವು ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ ಮತ್ತು ಅರ್ಶ್ದೀಪ್ ಸಿಂಗ್ ಅವರಂತಹ ವೇಗದ ಬೌಲರ್ಗಳನ್ನು ಹೊಂದಿರುತ್ತದೆ.
ಹೆಡಿಂಗ್ಲಿಯಲ್ಲಿ ಮೊದಲ ಟೆಸ್ಟ್
ಇಂಗ್ಲೆಂಡ್ ಪ್ರವಾಸದಲ್ಲಿ, ಭಾರತ ತಂಡವು ಜೂನ್ 20 ರಂದು ಹೆಡಿಂಗ್ಲಿ ಮೈದಾನದಲ್ಲಿ ಟೆಸ್ಟ್ ಸರಣಿಯ ಮೊದಲ ಪಂದ್ಯವನ್ನು ಆಡಲಿದೆ. ಇದರ ನಂತರ, ಟೀಂ ಇಂಡಿಯಾ ಜುಲೈ 2 ರಿಂದ ಎಡ್ಜ್ಬಾಸ್ಟನ್ ಮೈದಾನದಲ್ಲಿ ಎರಡನೇ ಟೆಸ್ಟ್ ಪಂದ್ಯವನ್ನು ಆಡಲಿದೆ. ಮೂರನೇ ಟೆಸ್ಟ್ ಪಂದ್ಯ ಜುಲೈ 10 ರಿಂದ ಲಾರ್ಡ್ಸ್ ಮೈದಾನದಲ್ಲಿ ನಡೆಯಲಿದೆ. ಅದೇ ಸಮಯದಲ್ಲಿ, ನಾಲ್ಕನೇ ಟೆಸ್ಟ್ ಪಂದ್ಯ ಜುಲೈ 23 ರಿಂದ ಮ್ಯಾಂಚೆಸ್ಟರ್ ಮೈದಾನದಲ್ಲಿ ನಡೆಯಲಿದ್ದು, ಈ ಟೆಸ್ಟ್ ಸರಣಿಯು ಜುಲೈ 31 ರಿಂದ ಲಂಡನ್ನ ಓವಲ್ ಮೈದಾನದಲ್ಲಿ ನಡೆಯಲಿರುವ ಕೊನೆಯ ಟೆಸ್ಟ್ ಪಂದ್ಯದೊಂದಿಗೆ ಕೊನೆಗೊಳ್ಳಲಿದೆ.
* ರೋಲ್ಯಾಂಡ್ ಗ್ಯಾರೋಸ್ನಲ್ಲಿ ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಪ್ಯಾರಿಸ್: ರೋಲ್ಯಾಂಡ್ ಗ್ಯಾರೋಸ್ ಮೈದಾನದಲ್ಲಿ ನಡೆದ ಫ್ರೆಂಚ್ ಓಪನ್ ಫೈನಲ್ನಲ್ಲಿ ಯಾನಿಕ್ ಸಿನ್ನರ್ ಅವರನ್ನು ಸೋಲಿಸಿ ಕಾರ್ಲೋಸ್ ಅಲ್ಕರಾಝ್ ಚಾಂಪಿಯನ್ ಪಟ್ಟ ಅಲಂಕರಿಸಿದ್ದಾರೆ. ಇದು ಕ್ಲೇ ಕೋರ್ಟ್ನಲ್ಲಿ 22 ವರ್ಷದ ಅಲ್ಕರಾಝ್ ಅವರ 2ನೇ ಪ್ರಶಸ್ತಿ ಎಂಬುದು ವಿಶೇಷ.
ಜಿದ್ದಾಜಿದ್ದಿನ ಪೈಪೋಟಿಗೆ ಸಾಕ್ಷಿಯಾಗಿದ್ದ ಈ ಪಂದ್ಯದ ಮೊದಲ ಸೆಟ್ ಅನ್ನು ಯಾನಿಕ್ ಸಿನ್ನರ್ 4-6 ಅಂತರದಿಂದ ಗೆದ್ದುಕೊಂಡಿದ್ದರು. ದ್ವಿತೀಯ ಸೆಟ್ನಲ್ಲಿ ಅಲ್ಕರಾಝ್ ಕಂಬ್ಯಾಕ್ ಮಾಡುವ ಪ್ರಯತ್ನ ಮಾಡಿದರೂ ಅಂತಿಮವಾಗಿ 6-7 ಅಂತರದಿಂದ ಸೋಲೊಪ್ಪಿಕೊಂಡರು.
ಆದರೆ ಮೂರನೇ ಸೆಟ್ನಲ್ಲಿ ಅತ್ಯುತ್ತಮ ಸರ್ವ್ಗಳ ಮೂಲಕ ಗಮನ ಸೆಳೆದ ಕಾರ್ಲೋಸ್ ಅಲ್ಕರಾಝ್ 6-4 ಅಂತರದಿಂದ ಯಾನಿಕ್ ಸಿನ್ನರ್ಗೆ ಸೋಲುಣಿಸುವಲ್ಲಿ ಯಶಸ್ವಿಯಾದರು. ಆ ಬಳಿಕ ನಡೆದ ಎರಡು ಸೆಟ್ಗಳು ರಣರೋಚಕ ಕಾಳಗಕ್ಕೆ ಸಾಕ್ಷಿಯಾಯಿತು. ದಾಳಿಗೆ ಪ್ರತಿದಾಳಿ ಎಂಬಂತೆ ಕಂಡು ಬಂದ 4ನೇ ಸೆಟ್ ಅನ್ನು ಅಲ್ಕರಾಝ್ 7-6 ಗೆದ್ದುಕೊಂಡರು.
ಆದಾಗ್ಯೂ ಕೊನೆಯ ಸೆಟ್ನಲ್ಲಿ ತನ್ನ ಅನುಭವವನ್ನು ಧಾರೆಯೆರೆದ ಯಾನಿಕ್ ಸಿನ್ನರ್ ಕಾರ್ಲೊಸ್ ಮೇಲೆ ಒತ್ತಡ ಹಾಕುವಲ್ಲಿ ಯಶಸ್ವಿಯಾದರು. ಆದರೆ ಅಂತಿಮ ಸುತ್ತಿನಲ್ಲಿ ಛಲದಂಕ ಮಲ್ಲನಂತೆ ಚಲಿಸಿದ ಕಾರ್ಲೋಸ್ ಅಲ್ಕರಾಝ್ 7-6 ಅಂತರದಿಂದ ಗೆದ್ದುಕೊಂಡರು.
ಈ ಮೂಲಕ 4-6, 6-7 (4), 6-4, 7-6 (3), 7-6 (2) ಸೆಟ್ಗಳ ಅಂತರದ ಮೂಲಕ ಯಾನಿಕ್ ಸಿನ್ನರ್ಗೆ ಸೋಲುಣಿಸಿ ಕಾರ್ಲೋಸ್ ಅಲ್ಕರಾಝ್ ಎರಡನೇ ಬಾರಿ ಫ್ರೆಂಚ್ ಓಪನ್ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.
* ಹೊಸ ಇತಿಹಾಸ ಸೃಷ್ಠಿ
ಈ ಬಾರಿಯ ಫ್ರೆಂಚ್ ಓಪನ್ ಫೈನಲ್ ಪಂದ್ಯ ನಡೆದದ್ದು ಬರೋಬ್ಬರಿ 5 ಗಂಟೆ 29 ನಿಮಿಷಗಳು. ಅಂದರೆ ರೋಲ್ಯಾಂಡ್ ಗ್ಯಾರೋಸ್ನಲ್ಲಿ ನಡೆದ ಈ ಯುಗದ ಅತ್ಯಂತ ದೀರ್ಘಾವಧಿಯ ಫೈನಲ್ ಪಂದ್ಯ ಇದಾಗಿದೆ. ಇದಕ್ಕೂ ಮುನ್ನ ಓಪನ್ ಯುಗದಲ್ಲಿ ಅತಿ ದೀರ್ಘಾವಧಿಯ ಫ್ರೆಂಚ್ ಓಪನ್ ಫೈನಲ್ ನಡೆದದ್ದು 1982 ರಲ್ಲಿ. ಅಂದು ಮ್ಯಾಟ್ಸ್ ವಿಲಾಂಡರ್ ಹಾಗೂ ಗಿಲ್ಲೆರ್ಮೊ ವಿಲಾಸ್ 4 ಗಂಟೆ 47 ನಿಮಿಷಗಳ ಫೈನಲ್ ಮ್ಯಾಚ್ ಆಡಿ ಇತಿಹಾಸ ನಿರ್ಮಿಸಿದ್ದರು.
ಈ ಬಾರಿ ಇಟಲಿಯ ಯಾನಿಕ್ ಸಿನ್ನರ್ ಹಾಗೂ ಸ್ಟೇನ್ನ ಕಾರ್ಲೋಸ್ ಅಲ್ಕರಾಝ್ ನಡುವೆ ಕಂಡು ಬಂದ ಫೈನಲ್ ಪಂದ್ಯವು ಹೊಸ ಇತಿಹಾಸವನ್ನು ಸೃಷ್ಟಿಸಿದೆ. ಈ ಇತಿಹಾಸದೊಂದಿಗೆ ಅಲ್ಕರಾಝ್ ಫ್ರೆಂಚ್ ಓಪನ್ ಕಿರೀಟಕ್ಕೆ ಮುತ್ತಿಕ್ಕಿದ್ದಾರೆ.








