ನಮ್ಮೂರ್ ಎಕ್ಸ್ಪ್ರೆಸ್ ಸ್ಪೋರ್ಟ್ಸ್ ನ್ಯೂಸ್ !!
ಐಪಿಎಲ್ – 2025
* ಟೂರ್ನಿಯಲ್ಲಿ ಮೊದಲ ಗೆಲುವು ದಾಖಲಿಸಿದ ಮುಂಬೈ
* ಪಾದಾರ್ಪಣೆ ಪಂದ್ಯದಲ್ಲೇ ಮಿಂಚಿದ ವೇಗಿ ಅಶ್ವನಿ ಕುಮಾರ್
NAMMUR EXPRESS SPORTS NEWS
ಮುಂಬೈ: ಐಪಿಎಲ್ 2025 ರ 12 ನೇ ಪಂದ್ಯದಲ್ಲಿ, ಮುಂಬೈ ಇಂಡಿಯನ್ಸ್ ಸೀಸನ್ನ ತನ್ನ ಮೊದಲ ಗೆಲುವು ದಾಖಲಿಸಿದೆ. ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಎದುರಾಳಿ ತಂಡವನ್ನು 8 ವಿಕೆಟ್ಗಳಿಂದ ಸೋಲಿಸಿ ಗೆಲುವು ದಾಖಲಿಸಿತು. ಮುಂಬೈ ತಂಡದ ಈ ಗೆಲುವಿನಲ್ಲಿ ವೇಗಿ ಅಶ್ವನಿ ಕುಮಾರ್ ಮತ್ತು ಆರಂಭಿಕ ಆಟಗಾರ ರಯಾನ್ ರಿಕಲ್ಟನ್ ಪ್ರಮುಖ ಪಾತ್ರವಹಿಸಿದರು.
ಈ ಎರಡು ತಂಡಗಳು ಸತತ ಸೋತು ಬಂದಿದ್ದರಿಂದ ಎರಡೂ ತಂಡಗಳಿಗೂ ಗೆಲುವು ಅವಶ್ಯಕವಾಗಿತ್ತು. ಅಂತಿಮವಾಗಿ ತನ್ನ ತವರಿನಲ್ಲಿ ಮೊದಲ ಪಂದ್ಯವನ್ನು ಆಡಿದ ಮುಂಬೈ ಏಕಪಕ್ಷೀಯವಾಗಿ ಕೆಕೆಆರ್ ತಂಡವನ್ನು ಮಣಿಸಿತು.
ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕೋಲ್ಕತಾ ತಂಡ 20 ಓವರ್ಗಳಲ್ಲಿ 10 ವಿಕೆಟ್ ಕಳೆದುಕೊಂಡು ಕೇವಲ 116 ರನ್ ಗಳಿಸಲಷ್ಟೇ ಶಕ್ತವಾಯಿತು. ಇದಕ್ಕೆ ಉತ್ತರವಾಗಿ ಮುಂಬೈ ತಂಡ ಕೇವಲ 12.5 ಓವರ್ಗಳಲ್ಲಿ ಎರಡು ವಿಕೆಟ್ಗಳ ನಷ್ಟಕ್ಕೆ 121 ರನ್ ಗಳಿಸಿ ಎಂಟು ವಿಕೆಟ್ಗಳ ಅಂತರದಿಂದ ಪಂದ್ಯವನ್ನು ಗೆದ್ದುಕೊಂಡಿತು.
* ಪಾದಾರ್ಪಣೆ ಪಂದ್ಯದಲ್ಲೇ ಮಿಂಚಿದ ವೇಗಿ ಅಶ್ವನಿ ಕುಮಾರ್
ಮುಂಬೈ ಇಂಡಿಯನ್ಸ್ನ ಯುವ ವೇಗಿ ಅಶ್ವನಿ ಕುಮಾರ್ ಅವರು ತನ್ನ ಪಾದಾರ್ಪಣೆ ಪಂದ್ಯದ ಬೌಲ್ ಮಾಡಿದ ಮೊದಲ ಎಸೆತದಲ್ಲಿ ವಿಕೆಟ್ ಪಡೆದಿದ್ದಾರೆ.
ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ 2025ರ ಪಂದ್ಯದಲ್ಲಿ 23 ವರ್ಷದ ಆಟಗಾರ ಅಶ್ವನಿ ಕುಮಾರ್ ಕೆಕೆಆರ್ ನಾಯಕ ಅಜಿಂಕ್ಯ ರಹಾನೆಯನ್ನು ತಮ್ಮ ಮೊದಲ ಎಸೆತದಲ್ಲಿ ಔಟ್ ಮಾಡಿದರು. ಕೆಕೆಆರ್ನ ನಾಲ್ಕನೇ ಓವರ್ ನಲ್ಲಿ ರಹಾನೆ 7 ಎಸೆತಗಳಲ್ಲಿ 11 ರನ್ ಗಳಿಸಿ ಔಟಾದರು.
ಎಡಗೈ ವೇಗಿಯಾದ ಅಶ್ವನಿ ಕುಮಾರ್ ಪಂಜಾಬ್ಗಾಗಿ ದೇಶೀಯವಾಗಿ ಆಡಿರುತ್ತಾರೆ ಮತ್ತು ಇದುವರೆಗೆ ಎರಡು ಪ್ರಥಮ ದರ್ಜೆ ಪಂದ್ಯಗಳು, ನಾಲ್ಕು ಲಿಸ್ಟ್ ಎ ಪಂದ್ಯಗಳು ಮತ್ತು ನಾಲ್ಕು ಟಿ 20 ಪಂದ್ಯಗಳಲ್ಲಿ ಆಡಿದ್ದಾರೆ.
ಇಂದು ಲಖನೌ ಹಾಗೂ ಪಂಜಾಬ್ ನಡುವೆ ಪಂದ್ಯ ನಡೆಯಲಿದ್ದು ಯಾರಿಗೆ ಗೆಲುವು ಸಿಗಲಿದೆ ಎಂಬ ಕುತೂಹಲವಿದೆ.








