ನಮ್ಮೂರ್ ಎಕ್ಸ್ಪ್ರೆಸ್ ಸ್ಪೋರ್ಟ್ಸ್ ನ್ಯೂಸ್
ಐಪಿಎಲ್ -2025
* ಜೈಪುರದಲ್ಲಿ ರನ್ ಮಳೆ – 14 ರ ಪೋರ ವೈಭವ್ ದಾಖಲೆಯ ಶತಕ
* ಗುಜರಾತ್ ಟೈಟಾನ್ಸ್ ವಿರುದ್ಧ ಜಯಗಳಿಸಿದ ರಾಜಸ್ಥಾನ್ ರಾಯಲ್ಸ್
NAMMMUR EXPRESS SPORTS NEWS
ಜೈಪುರ್: ರಾಜಸ್ಥಾನದ ಸವಾಯಿ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ನಡೆದ ರಾಜಸ್ಥಾನ್ ರಾಯಲ್ಸ್ ಹಾಗೂ ಗುಜರಾತ್ ಟೈಟಾನ್ಸ್ ನಡುವಿನ ಪಂದ್ಯದಲ್ಲಿ ರನ್ ಮಳೆಯೇ ಹರಿದಿದ್ದು,ಎರಡೂ ತಂಡದ ಸ್ಟಾರ್ ಬ್ಯಾಟ್ಸ್ಮನ್ಗಳು ರನ್ಗಾಗಿ ನಾ ಮುಂದು ತಾ ಮುಂದು ಎಂಬಂತೆ ಹಠಕ್ಕೆ ಬಿದ್ದಂತಿತ್ತು,ಈ ಪಂದ್ಯದಲ್ಲಿ ಕೊನೆಗೆ ರಾಜಸ್ಥಾನ್ ರಾಯಲ್ಸ್ ಬೃಹತ್ ಮೊತ್ತ ಚೇಸ್ ಮಾಡಿ ಗೆದ್ದಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ತಂಡ 210 ರನ್ಗಳ ಬೃಹತ್ ಮೊತ್ತ ಕಲೆಹಾಕಿತು. ಈ ಗುರಿ ಬೆನ್ನಟ್ಟಿರುವ ರಾಜಸ್ಥಾನಕ್ಕೆ ಯುವ ಆರಂಭಿಕರಾದ ಯಶಸ್ವಿ ಜೈಸ್ವಾಲ್ ಹಾಗೂ ವೈಭವ್ ಸೂರ್ಯವಂಶಿ ಸಿಡಿಲಬ್ಬರದ ಆರಂಭ ಒದಗಿಸಿಕೊಟ್ಟರು. ಅದರಲ್ಲೂ ಮೊದಲ ಐಪಿಎಲ್ ಸೀಸನ್ ಆಡುತ್ತಿರುವ 14 ವರ್ಷದ ವೈಭವ್ ತಮ್ಮ ಹೊಡಿಬಡಿ ಆಟದ ಮೂಲಕ ಗುಜರಾತ್ ಬೌಲರ್ಗಳ ಬೆವರಿಳಿಸುವುದರೊಂದಿಗೆ ಕೇವಲ 17 ಎಸೆತಗಳಲ್ಲಿ ಅರ್ಧಶತಕ, ಕೇವಲ 35 ಬಾಲ್ಗಳಲ್ಲಿ ಶತಕ ಪೂರೈಸಿ ಈ ಸೀಸನ್ನ ಅತಿ ವೇಗದ ಅರ್ಧಶತಕ,ಶತಕ ಸಿಡಿಸಿದ ದಾಖಲೆ ಬರೆದಿದ್ದಾರೆ.
ಇದಕ್ಕೂ ಮುನ್ನ ಗುಜರಾತ್ ಉತ್ತಮ ಮೊತ್ತ ಕಲೆಹಾಕಿತು. ಶುಭಮನ್ ಗಿಲ್, ಸಾಯ್ ಸುದರ್ಶನ್ ಹಾಗೂ ಜೋಸ್ ಬಟ್ಲರ್ ಮತ್ತೆ ಮಿಂಚಿದರು. ಗಿಲ್ 50 ಎಸೆತಕ್ಕೆ 84 ರನ್ ಸಿಡಿಸಿದರೆ, ಬಟ್ಲರ್ 26 ಎಸೆತಗಳಲ್ಲಿ ಔಟಾಗದೆ 50 ರನ್ ಬಾರಿಸಿದರು. ಸಾಯ್ ಸುದರ್ಶನ್ 39 ರನ್ ಕೊಡುಗೆ ನೀಡಿದರು.
14 ರ ಪೋರ ಸೂರ್ಯವಂಶಿ ದಾಖಲೆಯ ಸುರಿಮಳೆ !!
14 ವರ್ಷದ ವೈಭವ್ ಸೂರ್ಯವಂಶಿ ಗುಜರಾತ್ ವಿರುದ್ದ ಕೇವಲ 35 ಎಸೆತಗಳಲ್ಲೇ ಶತಕ ಬಾರಿಸಿ, ಹಲವು ದಾಖಲೆಗಳನ್ನು ಬರೆದಿದ್ದಾರೆ. ಅವರು ಟಿ20 ಕ್ರಿಕೆಟ್ನಲ್ಲಿ ಶತಕ ಬಾರಿಸಿದ ವಿಶ್ವದ ಅತಿ ಕಿರಿಯ ಆಟಗಾರ. ಅವರಿಗೆ ಈಗ 14 ವರ್ಷ, 32 ದಿನ ವಯಸ್ಸು, 2013ರಲ್ಲಿ ಮಹಾರಾಷ್ಟ್ರದ ವಿಜಯ್ ಜೋಲ್ ತಮಗೆ 18 ವರ್ಷ 118 ದಿನಗಳಾಗಿದ್ದಾಗ
ಮುಂಬೈ ವಿರುದ್ಧ ಶತಕ ಬಾರಿಸಿದ್ದರು. ಅಲ್ಲದೆ ಐಪಿಎಲ್ನಲ್ಲಿ 2ನೇ ಅತಿ ವೇಗದ ಸೆಂಚುರಿ ದಾಖಲೆಯನ್ನೂ ಬರೆದಿದ್ದಾರೆ. ಐಪಿ ಎಲ್ನಲ್ಲಿ ಅತಿ ವೇಗದ ಶತಕದ ದಾಖಲೆ ಇರುವುದು ಕ್ರಿಸ್ ಗೇಲ್ ಹೆಸರಿನಲ್ಲಿ, ಅವರು 30 ಎಸೆತಗಳಲ್ಲೇ ಈ ಸಾಧನೆ ಮಾಡಿದ್ದರು.








