ನಮ್ಮೂರ್ ಎಕ್ಸ್ಪ್ರೆಸ್ ಸ್ಫೋರ್ಟ್ಸ್ ನ್ಯೂಸ್
ಐಪಿಎಲ್ -2025
* ಪಂಜಾಬ್ ಫೈನಲ್ಗೆ ಎಂಟ್ರಿ,ಮುಂಬೈ ಮನೆಗೆ
* ನಾಳೆ ಆರ್ಸಿಬಿ ಮತ್ತು ಪಂಜಾಬ್ ತಂಡಗಳ ನಡುವೆ ಫೈನಲ್ ಹಣಾಹಣಿ
NAMMMUR EXPRESS SPORTS NEWS
ಅಹಮದಾಬಾದ್: ಐಪಿಎಲ್ ಸೀಸನ್ 18 ರ ಕ್ವಾಲಿಫೈರ್-2 ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡ ಮುಂಬೈ ಇಂಡಿಯನ್ಸ್ ತಂಡವನ್ನು ಮಣಿಸಿ ಫೈನಲ್ಗೆ ಪ್ರವೇಶ ಪಡೆದುಕೊಂಡಿತು.
ಅಹಮದಾಬಾದ್ನ ನರೇಂದ್ರ ಮೋದಿ ಮೈದಾನದಲ್ಲಿ ನಡೆದಿದ್ದ ಮಾಡು ಇಲ್ಲ ಮಡಿ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಮ್ಮ ಶಕ್ತಿಯನ್ನು ಪ್ರದರ್ಶಿಸಿತು. ನಾಯಕ ಶ್ರೇಯಸ್ ಅಯ್ಯರ್ (81*) ಭರ್ಜರಿ ಪ್ರದರ್ಶನದಿಂದಾಗಿ ತಂಡವು ಐಪಿಎಲ್ 2025ರ ಫೈನಲ್ಗೆ ಎಂಟ್ರಿ ಪಡೆದುಕೊಂಡಿದೆ.
ಮುಂಬೈ ನೀಡಿದ ಗುರಿಯನ್ನು ಬೆನ್ನತ್ತಿದ ಪಂಜಾಬ್ ಆರಂಭಿಕ ಆಘಾತ ಎದುರಾಯ್ತು. ಪ್ರಭ್ಸಿಮ್ರಾನ್ 6 ರನ್ಗಳಿಸಿ ಪೆವಿಲಿಯನ್ ಸೇರಿದರು. ಆದರು ಪಂಜಾಬ್ ಆತ್ಮವಿಶ್ವಾಸದೊಂದಿಗೆ ಆಟವಾಡಿತು. ಬಳಿಕ ಇಂಗ್ಲಿಸ್ (38) ಕೆಲವು ಅದ್ಭುತ ಹೊಡೆತಗಳೊಂದಿಗೆ ಫ್ಯಾನ್ಸ್ಗಳನ್ನು ರಂಜಿಸಿದರು. ಪ್ರಿಯಾಂಶ್ ಆರ್ಯ (20) ಕೂಡ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. ಆದರೆ ಅಶ್ವನಿ ಬೌಲಿಂಗ್ನಲ್ಲಿ ವಿಕೆಟ್ ಒಪ್ಪಿಸಿ ಹೊರ ನಡೆದರು. ಆರನೇ ಓವರ್ನಲ್ಲಿ ಅವರು ಔಟಾದಾಗ ಪಂಜಾಬ್ ಸ್ಕೋರ್ 55 ಆಗಿತ್ತು. ಎಂಟನೇ ಓವರ್ನಲ್ಲಿ ಇಂಗ್ಲಿಸ್ ಕೂಡ ಔಟಾದರೂ. ಈ ವೇಳೆ ಶ್ರೇಯಸ್ ಮತ್ತು ನೆಹಾಲ್ ವಧೇರಾ ಉತ್ತಮ ಬ್ಯಾಟಿಂಗ್ ಮೂಲಕ ಪಂಜಾಬ್ ತಂಡದ ಫೈನಲ್ ಆಸೆಯನ್ನು ಜೀವಂತವಾಗಿರಿಸಿದರು.
ಪಂಜಾಬ್ 15 ಓವರ್ಗಳಲ್ಲಿ 147/3 ಸ್ಕೋರ್ ದಾಖಲಿಸಿ ಗೆಲುವಿನತ್ತ ಸಾಗುವ ಲಕ್ಷಣ ಕಾಣುತ್ತಿತ್ತು. ಆದರೆ ಮುಂದಿನ ಓವರ್ನಲ್ಲಿ ವಧೇರಾ ಔಟಾದರೂ ಮತ್ತು 17ನೇ ಓವರ್ನಲ್ಲಿ ಶಶಾಂಕ್ ಸಿಂಗ್ ಕೂಡ ರನೌಟ್ ಬಲೆಗೆ ಬಿದ್ದರು. ಆದರೆ ಶ್ರೇಯಸ್ ಆತ್ಮವಿಶ್ವಾಸ ಕಳೆದುಕೊಳ್ಳದೆ ಬ್ಯಾಟಿಂಗ್ ಮುಂದುವರಿಸಿ ಪಂಜಾಬ್ ತಂಡವನ್ನು ಗೆಲುವಿನ ದಡಕ್ಕೆ ಕೊಂಡೊಯ್ದರು. ಕೊನೆಯ ಎರಡು ಓವರ್ಗಳಲ್ಲಿ ಪಂಜಾಬ್ ಗೆಲುವಿಗೆ 23 ರನ್ಗಳು ಬೇಕಾಗಿದ್ದವು. ಈ ವೇಳೆ ಅಯ್ಯರ್ ತಮ್ಮ ಸ್ಫೋಟಕ ಬ್ಯಾಟಿಂಗ್ ಮುಂದುವರಿಸಿ ಕೇವಲ ಆರು ಎಸೆತಗಳಲ್ಲಿ ಗೆಲುವನ್ನು ಖಚಿತ ಪಡಿಸಿದರು.
ಇದಕ್ಕೂ ಮೊದಲು, ಟಾಸ್ ಸೋತು ಬ್ಯಾಟಿಂಗ್ ಮಾಡಿದ್ದ ಮುಂಬೈ ಪರ ಆರಂಭಿಕ ಆಟಗಾರ ಬೈರ್ಸ್ಟೋವ್ ಮತ್ತೊಮ್ಮೆ ಉತ್ತಮ ಪ್ರದರ್ಶನ ನೀಡಿದರು. ಅವರು ಅದ್ಭುತ ಇನ್ನಿಂಗ್ಸ್ ಮೂಲಕ ತಂಡಕ್ಕೆ ಬಲವಾದ ಅಡಿಪಾಯ ಹಾಕಿದರು. ಆದರೆ, ಕಳೆದ ಪಂದ್ಯದಲ್ಲಿ ಅರ್ಧಶತಕ ಸಿಡಿಸಿ ಮಿಂಚಿದ್ದ ಮತ್ತೊಬ್ಬ ಆರಂಭಿಕ ಆಟಗಾರ ರೋಹಿತ್ ಶರ್ಮಾ (8) ಈ ಬಾರಿ ಬೇಗನೆ ಪೆವಿಲಿಯನ್ ಸೇರಿದರು.
ರೋಹಿತ್ ನಿರ್ಗಮನವು ಬೈರ್ಸ್ಟೋವ್ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ. ಅವರು ತಮ್ಮ ಆಕ್ರಮಣಕಾರಿ ಆಟದ ಮೂಲಕ ತಂಡದ ಸ್ಕೋರ್ ವೇಗವನ್ನು ಹೆಚ್ಚಿಸಿದರು. ಪವರ್ಪ್ಲೇ ಅಂತ್ಯದ ವೇಳೆಗೆ ಮುಂಬೈ ಸ್ಕೋರ್ 65/1 ಆಗಿತ್ತು.ಏಳನೇ ಓವರ್ನಲ್ಲಿ ಅಪಾಯಕಾರಿ ಬೈರ್ಸ್ಟೋವ್ ಅವರನ್ನು ಔಟ್ ಮಾಡುವ ಮೂಲಕ ವೈಶಾಖ್ ಮುಂಬೈಗೆ ಕೊಂಚ ಹಿನ್ನಡೆ ಉಂಟುಮಾಡಿದರು. ಬಳಿಕ ತಿಲಕ್ ವರ್ಮಾ (44), ಸೂರ್ಯಕುಮಾರ್ ಯಾದವ್ (44) ನಮನ್ಧೀರ್ (37) ಬ್ಯಾಟಿಂಗ್ ಸಹಾಯದಿಂದ ಮುಂಬೈ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 203 ರನ್ ಕಲೆಹಾಕಿತು.
ನಾಳೆ ಆರ್ಸಿಬಿ ಮತ್ತು ಪಂಜಾಬ್ ತಂಡಗಳು ಫೈನಲ್ನಲ್ಲಿ ಮುಖಾಮುಖಿ ಆಗಲಿವೆ. ಎರಡೂ ತಂಡಗಳು ಚೊಚ್ಚಲ ಟ್ರೋಫಿಗಾಗಿ ಸೆಣಸಾಡಲಿವೆ.ಆರ್ಸಿಬಿ ಟ್ರೋಫಿ ಗೆಲ್ಲುವ ಫೆವರೀಟ್ ತಂಡವಾಗಿದೆ.








