Categories
ಟೆಕ್

ವಾಟ್ಸ್ಅಪ್ 2 ಜಿಬಿ ಫೈಲ್ ಶೇರ್ ಮಾಡಲು ಅವಕಾಶ!

  • ವಾಟ್ಸಪ್ ಬಳಕೆದಾರರಿಗೆ ಸಿಹಿ ಸುದ್ದಿ: ಇನ್ನು ವಿಡಿಯೋ ಕಳುಹಿಸೋದು ಸುಲಭ

NAMMUR EXPRESS NEWS
ವಾಟ್ಸ್ಅಪ್ ಬಹುಶಃ ಅತ್ಯಂತ ಹೆಚ್ಚು ಬಳಕೆಯಲ್ಲಿರುವ ಮತ್ತು ಅತಿ ಸುಲಭವಾಗಿ ಪದೇ ಪದೇ ಫೈಲ್‌ಗಳನ್ನು ಶೇರ್ ಮಾಡಬಹುದಾದ ಜನಪ್ರಿಯ ತ್ವರಿತ ಮೆಸ್ಸೇಜಿಂಗ್ ಆಪ್. ಆದರೆ ನಿರ್ದಿಷ್ಟ ಗಾತ್ರಕ್ಕಿಂತ ಹೆಚ್ಚಿನ ಫೈಲ್ ಕಳುಹಿಸಲು ಆಗುತ್ತಿರಲಿಲ್ಲ. ಈಗ ಈ ತೊಂದರೆ ಹೆಚ್ಚು ಕಡಿಮೆ ಬಗೆಹರಿದಂತಿದೆ. ಕಂಪನಿ ಅಂತಿಮವಾಗಿ ಈ ವ್ಯಾಪಕ ಸಮಸ್ಯೆಯನ್ನು ಪರಿಹಿಸಿದಂತೆ ತೋರುತ್ತದೆ. ಇತ್ತೀಚಿನ ವರದಿಯ ಪ್ರಕಾರ, ವಾಟ್ಸ್ಅಪ್ 2 ಜಿಬಿ ಗಾತ್ರದ ಫೈಲ್‌ಗಳನ್ನು ಶೇರ್ ಮಾಡುವ ಸಾಮರ್ಥ್ಯವನ್ನು ಪರೀಕ್ಷಿಸುತ್ತಿದೆ.
ವಾಟ್ಸ್‌ಅಪ್ ಈಗಾಗಲೇ 2 ಜಿಬಿ ಗಾತ್ರದ ಫೈಲ್‌ಗಳನ್ನು ಶೇರ್ ಮಾಡುವ ಸಾಮರ್ಥ್ಯವನ್ನು ಅರ್ಜಂಟೈನಾದ ಹಲವಾರು ಆಂಡ್ರಾಯ್ಡ್ ಮತ್ತು ಐಓಸ್ ಬಳಕೆದಾರಿಂದ ಪರೀಕ್ಷಿಸಿದೆ. ಸದ್ಯ ವಾಟ್ಸ್ಅಪ್ 100 MB ಗಾತ್ರದ ಫೈಲ್‌ಗಳನ್ನು ಮಾತ್ರ ಫ್ರೆಂಡ್ಸ್ ಗಳಿಗೆ ಶೇರ್ ಮಾಡಲು ಅನುಮತಿಸುತ್ತದೆ. ಆದರೆ ಈ ರೀತಿಯ ಸಮಸ್ಯೆಗಳು ಟೆಲಿಗ್ರಾಂ ಬಳಕೆದಾರಲ್ಲಿ ಕಾಣಿಸುವುದಿಲ್ಲ. ಅಲ್ಲಿ ದೊಡ್ಡ ಗಾತ್ರದ ಫೈಲ್‌ಗಳನ್ನು ಸುಲಭವಾಗಿ ಶೇರ್ ಮಾಡಬಹುದಾಗಿದೆ. ಟೆಲಿಗ್ರಾಂ ಮತ್ತು ವಾಟ್ಸಪ್ ಅತ್ಯಂತ ಪೈಪೋಟಿಯಿರುವ ತ್ವರಿತ ಮೆಸ್ಸೇಜಿಂಗ್ ಆಪ್‌ಗಳು, ಟೆಲಿಗ್ರಾಂ 2 ಜಿಬಿಗಳವರೆಗೆ ಮಲ್ಟಿಮೀಡಿಯಾ ಫೈಲ್‌ಗಳನ್ನು ಕಳುಹಿಸಲು ಅವಕಾಶ ಒದಗಿಸಿದೆ. ಒಂದು ವೇಳೆ ವ್ಯಾಟ್ಸ್ಅಪ್ ತನ್ನ ಸಾಮರ್ಥ್ಯ ಹೆಚ್ಚಿಸಿಕೊಳ್ಳದಿದ್ದರೆ, ಟಿಲಿಗ್ರಾಂನ ಪೈಪೋಟಿಯಲ್ಲಿ ದೂರವಿರಬೇಕಾಗಬಹುದು.
ಆದರೆ ವಾಟ್ಸ್ಅಪ್ ಮೇಲೆ ಹೇಳಿದಂತೆ 2 ಜಿಬಿ ಗಾತ್ರದ ಫೈಲ್‌ಗಳನ್ನು ಶೇರ್ ಮಾಡಬಹುದಾದ ಸಾಮರ್ಥ್ಯದ ಫೀಚರ್ ಅನ್ನು ಅದಾಗಲೇ ಪರೀಕ್ಷಿಸಿದೆ. ಆದರೆ ತನ್ನ ಎಲ್ಲಾ ಆಂಡ್ರಾಯ್ಡ್ ಮತ್ತು ಐಓಎಸ್ ಬಳಕೆದಾರರಿಗೆ ಈ ಅವಕಾಶವನ್ನು ಎಂದು ಬಿಡುಗಡೆಗೊಳಿಸುತ್ತದೆ ಎಂಬುದು ತಿಳಿದಿಲ್ಲ. ವಾಟ್ಸ್ಅಪ್ ಇತ್ತೀಚಿಗೆ ಐಓಎಸ್ ನ ಬೀಟಾ ಟೆಸ್ಟರ ಗಳಿಗೆ ಹೆಚ್ಚು ಪ್ರಚೋದಿತ ಪ್ರತ್ಯುತ್ತರ ನೀಡುವ ವೈಶಿಷ್ಟ್ಯ ಪರಿಚಯಿಸಿತ್ತು. ಒಂದು ನಿಶ್ಚಿತ ಮೆಸ್ಸೇಜ್‌ಗಳಿಗೆ ಲೈಕ್, ಲವ್ಹಾರ್ಟ್, ಲಾಫ್, ಸಪ್ರೈಸ್, ಸ್ಯಾಡ್ ಮತ್ತು ಥ್ಯಾಂಕ್ಸ್ 6 ಇಮೋಜಿಗಳನ್ನು ಉಪಯೋಗಿಸಿ ರಿಯಾಕ್ಟ್ ಮಾಡುವ ಫೀಚರ್ ಅದಾಗಿತ್ತು.

Categories
ರಾಜಕೀಯ

ರಾಜ್ಯದಲ್ಲಿ ಪಕ್ಷ ಸಂಘಟನೆಗಾಗಿ ಬಿಜೆಪಿ ಭರ್ಜರಿ ತಯಾರಿ

  • ಮಂಗಳವಾರದಿಂದ ಮೂರು ತಂಡಗಳ ಪ್ರವಾಸ

NAMMUR EXPRESS NEWS
ಮುಂಬರುವ ಚುನಾವಣೆಗೆ ಮತ್ತು ಪಕ್ಷ ಸಂಘಟನೆಗಾಗಿ ಮಂಗಳವಾರದಿಂದ 13 ದಿನಗಳ ಕಾಲ ರಾಜ್ಯ ಪ್ರವಾಸಕ್ಕೆ ಮೂರು ತಂಡಗಳನ್ನು ಬಿಜೆಪಿ ಪ್ರಕಟಿಸಿದೆ.
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಬಿಜೆಪಿ,
ಉಸ್ತುವಾರಿಯಾಗಿರುವ ಅರುಣ್ ಸಿಂಗ್ ಮತ್ತು ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಮೂರು ತಂಡಗಳು ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳಲಿವೆ. ಈ ತಂಡದಲ್ಲಿ ಕೇಂದ್ರ ಹಾಗೂ ರಾಜ್ಯ ಸಚಿವರು ಸಂಸದರು ಶಾಸಕರು ಸೇರಿದಂತೆ ಇನ್ನಿತರ ನಾಯಕರು ಇರಲಿದ್ದು ಹತ್ತು ವಿಭಾಗಗಳಲ್ಲಿ ಪ್ರವಾಸ ನಡೆಸಿ ಜಿಲ್ಲಾಮಟ್ಟದ ಕೋರ್ ಕಮಿಟಿ ಸಭೆ ಪದಾಧಿಕಾರಿಗಳ ಸಭೆ ಜಿಲ್ಲಾ ಪ್ರಮುಖರೊಂದಿಗೆ ಸಮಾಲೋಚನೆಯನ್ನು ನಡೆಸಲಿದ್ದಾರೆ. ಅಲ್ಲಲ್ಲಿ ಸಮಾವೇಶ ಆಯೋಜಿಸುವ ಮೂಲಕ ಪಕ್ಷ ಸಂಘಟನೆಗೆ ತಯಾರಿ ನಡೆಸಲಾಗಿದೆ. ಎ.16.17 ರಂದು ವಿಜಯನಗರದಲ್ಲಿ ನಡೆಯಲಿರುವ ಪಕ್ಷದ ಕಾರ್ಯ ಕಾರಿನಲ್ಲಿ ಎಲ್ಲಾ ನಾಯಕರು ಸಮಾವೇಶಗೊಳ್ಳಲಿದ್ದಾರೆ.
ತಂಡ-1
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಉಪಾಧ್ಯಕ್ಷರಾದ ಪ್ರತಾಪ್ ಸಿಂಹ, ತೇಜಸ್ವಿನಿ ಅನಂತಕುಮಾರ್, ಎಂ ರಾಜೇಂದ್ರ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಸಚಿವರಾದ ಕೆಎಸ್ ಈಶ್ವರಪ್ಪ ವಿ ಸೋಮಣ್ಣ ತಂಡದ ಸಂಯೋಜಕರಾಗಿ ರಾಜ್ಯ ಬಿಜೆಪಿ ಕಾರ್ಯದರ್ಶಿ ಮುನಿರಾಜು ಗೌಡ ಇರಲಿದ್ದಾರೆ. ಎ.12 ಮತ್ತು 13ರಂದು ಮೈಸೂರು ವಿಭಾಗ ಎ.19 ಮತ್ತು 20 ರಂದು ಬಳ್ಳಾರಿ ವಿಭಾಗ, ಎ.21 ಮತ್ತು 22ರಂದು ಧಾರವಾಡ ವಿಭಾಗ, ಎ.23 ಹಾಗೂ 24ರಂದು ಬೆಂಗಳೂರು ನಗರ ವಿಭಾಗದಲ್ಲಿ ಪ್ರವಾಸ ನಡೆಯಲಿದೆ.
ತಂಡ – 2
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಅರುಣ್ ಸಿಂಗ್, ಸೀಟಿ ರವಿ ರಾಜ್ಯ ಉಪಾಧ್ಯಕ್ಷರಾದ ಮಾಲಿಕಯ್ಯ ಗುತ್ತೇದಾರ್, ಎಂ ಶಂಕರಪ್ಪ, ಎಂ ಬಿ ನಂದೀಶ್, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಸಚಿವರಾದ ಗೋವಿಂದ ಕಾರಜೋಳ, ಆರ್ ಅಶೋಕ್, ರಾಜ್ಯ ಕಾರ್ಯದರ್ಶಿ ಕೆ ಎಸ್ ನವೀನ್ ಸಂಯೋಜಕರಾಗಿ ಇರಲಿದ್ದಾರೆ.
ತಂಡ -3
ಸಿಎಂ ಬಸವರಾಜ ಬೊಮ್ಮಾಯಿ ಮಾಜಿ ಸಿಎಂ ಡಿವಿ ಸದಾನಂದಗೌಡ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸಚಿವರಾದ ಡಾ. ಸಿ ಎನ್ ಅಶ್ವಥನಾರಾಯಣ, ಬಿ ಶ್ರೀರಾಮುಲು ರಾಜ್ಯ ಉಪಾಧ್ಯಕ್ಷರಾದ ನಿರ್ಮಲ್ ಕುಮಾರ್ ಸುರಾಣಿ, ವಿಜಯೇಂದ್ರ, ನಯನ ಗಣೇಶ್, ಲಕ್ಷ್ಮಣ ಸವದಿ ತಂಡದಲ್ಲಿ ಇರಲಿದ್ದು ರಾಜ್ಯ ಕಾರ್ಯದರ್ಶಿ ವಿನಯ್ ಬಿದರೆ ಅವರು ಸಂಯೋಜಿಸಲಿದ್ದಾರೆ.

Categories
ಬೆಂಗಳೂರು

ದ್ವಿಚಕ್ರ ವಾಹನಗಳಿಗೆ ಎರಡು ಕಡೆ ಮಿರರ್

  • ಇಂಡಿಕೇಟರ್ ಇಲ್ಲದಿದ್ದರೆ ₹500 ದಂಡ
  • ವಾಹನ ಅಪಘಾತಗಳಿಗೆ ಕಡಿವಾಣ ಹಾಕಲು ಕಠಿಣ ಕ್ರಮ

NAMMUR EXPRESS NEWS
ನಾಗರಿಕರೆ ದ್ವಿಚಕ್ರವಾಹನಗಳನ್ನು ಮನೆಯಿಂದ ಹೊರ ತೆಗೆಯುವ ಮುನ್ನ ಜಾಗ್ರತೆ ಇರಲಿ, ನಿಮ್ಮ ವಾಹನಗಳಿಗೆ ಎರಡು ಕಡೆ ಕನ್ನಡಿ ಹಾಗೂ ಇಂಡಿಕೇಟರ್ ಇಲ್ಲದೆ ಹೋದರೆ ₹500 ದಂಡ ತರಬೇಕಾಗುತ್ತದೆ.
ನಗರದ ವ್ಯಾಪ್ತಿ ರಸ್ತೆ ಅಪಘಾತಗಳಿಗೆ ಬ್ರೇಕ್ ಹಾಕಲು ಮುಂದಾಗಿರುವ ಸಂಚಾರ ವಿಭಾಗದ ಪೊಲೀಸರು, ಈಗ ವಾಹನಗಳಿಗೆ ಎರಡು ಕಡೆ ಕನ್ನಡಿ ಹಾಗೂ ಇಂಡಿಕೇಟರ್ ದೀಪಗಳ ಅಳವಡಿಕೆಯನ್ನು ಕಡ್ಡಾಯಗೊಳಿಸಿದ್ದಾರೆ. ಮುಂದಿನ ವಾರದಿಂದ ಈ ನಿಯಮ ಜಾರಿಗೆ ಬರಲಿದೆ ಈ ನಿಯಮ ಉಲ್ಲಂಘಿಸಿದರೆ ಮುಲಾಜಿಲ್ಲದೆ ದಂಡ ವಿಧಿಸಲಾಗುತ್ತದೆ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.
ನಗರದಲ್ಲಿ ಸಂಭವಿಸುತ್ತಿರುವ ಅಪಘಾತಗಳಲ್ಲಿ ಹೆಚ್ಚಿನದಾಗಿ ದ್ವಿಚಕ್ರವಾಹನಗಳೇ ತುತ್ತಾಗುತ್ತಿದ್ದು ಮರಣ ಪ್ರಮಾಣದಲ್ಲಿ ಸಹ ದ್ವಿಚಕ್ರ ಸವಾರರ ಸಾವಿನ ಪ್ರಮಾಣವೇ ಅಧಿಕವಾಗಿದೆ ಎಂಬುದು ಅಪಘಾತಗಳ ವಿಮರ್ಶೆಯಿಂದ ಗೊತ್ತಾಗಿದೆ. ಈ ದ್ವಿಚಕ್ರ ವಾಹನಗಳ ಅಪಘಾತಗಳ ಪೈಕಿ ಹೆಲ್ಮೆಟ್ ಧರಿಸದೆ ವಾಹನ ಚಲಾಯಿಸಿದರೆ, ಸೈಡ್ ಮಿರರ್ ಗಳನ್ನು ಅಳವಡಿಸಿಕೊಳ್ಳದೆ ಹಾಗೂ ಇಂಡಿಕೇಟರ್ ದೀಪಗಳನ್ನು ಬಳಸದೆ ಅಡ್ಡಾದಿಡ್ಡಿಯಾಗಿ ಚಲಾಯಿಸುವುದರಿಂದ ಸಂಭವಿಸಿದೆ ಎಂದು ತಿಳಿದು ಬಂದಿದೆ ಈ ಹಿನ್ನೆಲೆಯಲ್ಲಿ ಸೈಡ್ ಮಿರರ್ ಮತ್ತು ಇಂಡಿಕೇಟರ್ ದೀಪಗಳ ಬಳಸದಿರುವ ದ್ವಿಚಕ್ರವಾಹನಗಳ ವಿರುದ್ಧ ಕ್ರಮ ಜರುಗಿಸಲು ನಿರ್ಧರಿಸಲಾಗಿದೆ ಎಂದು ಜಂಟಿ ಆಯುಕ್ತ ಡಾ. ಬಿ ಆರ್ ರವಿಕಾಂತೇಗೌಡ ತಿಳಿಸಿದ್ದಾರೆ.

Categories
ಮಲ್ನಾಡ್

ನನ್ನ ಸಾವಿಗೆ ಸಚಿವ ಈಶ್ವರಪ್ಪ ಕಾರಣ

  • ಡೆತ್‌ನೋಟ್ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ
  • ಉಡುಪಿಯ ಲಾಡ್ಜ್‌ವೊಂದರಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆ

NAMMUR EXPRESS NEWS
ಬೆಳಗಾವಿ: ಸಚಿವ ಕೆ.ಎಸ್. ಈಶ್ವರಪ್ಪ ವಿರುದ್ಧ ಶೇಕಡಾ 40 ಪರ್ಸೆಂಟೇಜ್ ಆರೋಪ ಮಾಡಿದ್ದ ಬೆಳಗಾವಿ ಬಿಜೆಪಿ ಕಾರ್ಯಕರ್ತ ಹಾಗೂ ಗುತ್ತಿಗೆದಾರ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಮಾಧ್ಯಮದ ಪ್ರತಿನಿಧಿಗಳಿಗೆ ವಾಟ್ಸಪ್ ಸಂದೇಶ ರವಾನಿಸಿ ಉಡುಪಿಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಬೆಳಗಾವಿ ತಾಲ್ಲೂಕಿನ ಹಿಂಡಲಗಾ ಗ್ರಾಮದ ಗುತ್ತಿಗೆದಾರ ಮತ್ತು ಬಿಜೆಪಿ ಕಾರ್ಯಕರ್ತರಾಗಿದ್ದ ಸಂತೋಷ್ ಪಾಟೀಲ್ ಮಾಧ್ಯಮ ಪತ್ರಿನಿಧಿಗಳಿಗೆ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ತಡರಾತ್ರಿ ವಾಟ್ಸಪ್ ಮೆಸೇಜ್ ಮಾಡಿದ್ದಾರೆ. ಈ ಬಗ್ಗೆ ಮಾಧ್ಯಮಪ್ರತಿನಿಧಿಗಳು ಬೆಳಗಾವಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಅವರಿಗಾಗಿ ಹುಡುಕಾಟ ನಡೆಸಿದ ಪೊಲೀಸರಿಗೆ ಉಡುಪಿಯ ಲಾಡ್ಜ್‌ವೊಂದರಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಸಂತೋಷ್ ಪಾಟೀಲ್ ಪತ್ತೆಯಾಗಿದ್ದಾರೆ. ಮೊಬೈಲ್‌ನಲ್ಲಿ ವಾಟ್ಸಾಪ್ ಸಂದೇಶ ಕಳುಹಿಸಿದ್ದ ಸಂತೋಷ್ ಪಾಟೀಲ್ ನನ್ನ ಸಾವಿಗೆ ಕೆ.ಎಸ್.ಈಶ್ವರಪ್ಪ ಕಾರಣ ಎಂದು ಉಲ್ಲೇಖಿಸಿದ್ದರು. ಈಶ್ವರಪ್ಪ ಅವರಿಗೆ ಶಿಕ್ಷೆಯಾಗಬೇಕು. ನನ್ನೆಲ್ಲಾ ಆಸೆ ಬದಿಗೊತ್ತಿ ಆತ್ಮಹತ್ಯೆ ನಿರ್ಧಾರ ಮಾಡಿದ್ದೇನೆ. ನನ್ನ ಹೆಂಡತಿ ಮಕ್ಕಳಿಗೆ ಪ್ರಧಾನಿಗಳು, ಮುಖ್ಯಮಂತ್ರಿಗಳು, ಬಿ.ಎಸ್.ಯಡಿಯೂರಪ್ಪ ಸಹಾಯ ಮಾಡಬೇಕೆಂದು ಪತ್ರದಲ್ಲಿ ತಿಳಿಸಿದ್ದರು.
ಪತ್ರದ ಸಾರಾಂಶ:
ನನ್ನ ಸಾವಿಗೆ ನೇರ ಕಾರಣ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವ ಕೆ.ಎಸ್. ಈಶ್ವರಪ್ಪ, ಕರ್ನಾಟಕ ಸರ್ಕಾರದಿಂದ ಇವರಿಗೆ ತಕ್ಕ ಶಿಕ್ಷೆ ಆಗಬೇಕು. ನನ್ನೆಲ್ಲಾ ಆಸೆಗಳನ್ನು ಬದಿಗೊತ್ತಿ ಈ ನಿರ್ಧಾರ ಮಾಡಿರುತ್ತೇನೆ. ನನ್ನ ಹೆಂಡತಿ ಮಗುವಿಗೆ ಸರ್ಕಾರ ಅಂದರೆ ಮಾನ್ಯ ಪ್ರಧಾನ ಮಂತ್ರಿಗಳು ಹಾಗೂ ಮಾನ್ಯ ಮುಖ್ಯ ಮಂತ್ರಿಗಳು ಹಾಗೂ ನಮ್ಮ ಹಿರಿಯ ಲಿಂಗಾಯತ ನಾಯಕರಾದ ಬಿ.ಎಸ್.ಯಡಿಯೂರಪ್ಪನವರು ಹಾಗೆ ಅವರಿವರೆನ್ನದೇ ಎಲ್ಲರು ಸಹಾಯಹಸ್ತ ನೀಡಬೇಕೆಂದು ಕೈ ಮುಗಿದು ಕೇಳಿಕೊಳ್ಳುತ್ತೇನೆ. ಮಾಧ್ಯಮ ಮಿತ್ರರಿಗೆ ಕೋಟಿ ಕೋಟಿ ಧನ್ಯವಾದಗಳು. ನನ್ನ ಜೊತೆ ಬಂದ ನನ್ನ ಗೆಳೆಯರಾದ ಸಂತೋಷ್ ಮತ್ತು ಪ್ರಶಾಂತ್‌ಗೆ ನಾನು ಪ್ರವಾಸ ಹೋಗೋಣ ಎಂದು ನನ್ನ ಜೊತೆಗೆ ಕರೆದುಕೊಂಡ ಬಂದಿರುತ್ತೇನೆ ಅಷ್ಟೇ. ಅವರಿಗೂ ನನ್ನ ಸಾವಿಗೂ ಯಾವುದೇ ಸಂಬಂಧ ಇರುವುದಿಲ್ಲ ಎಂದಿದ್ದಾರೆ.

Categories
ಮಲ್ನಾಡ್

ಅಕಾಲಿಕ ಮಳೆಗೆ ಜನ ತತ್ತರ..!

  • ಹಲವೆಡೆ ಭಾರೀ ಮಳೆಗೆ ಮರ ಧರೆಗೆ: ವಿದ್ಯುತ್ ಇಲ್ಲ
  • ಮಲೆನಾಡಿನ ಅನೇಕ ಕಡೆ ನೆಟ್ವರ್ಕ್ ಇಲ್ಲ

NAMMUR EXPRESS NEWS
ಮಲೆನಾಡು/ಬೆಂಗಳೂರು: ಅಕಾಲಿಕ ಮಳೆಗೆ ಜನಜೀವನ ತತ್ತರಗೊಂಡಿದೆ. ಮಲೆನಾಡಿನಲ್ಲಿ ಪ್ರತಿ ದಿನವೂ ಮಳೆ ಅಬ್ಬರ ಹೆಚ್ಚಾಗಿದೆ. ಒಂದು ಕಡೆ ಮಳೆಯಿಂದ ದುರಂತ ಸಂಭವಿಸಿದರೆ ಮತ್ತೊಂದು ಕಡೆ ಅಡಿಕೆಗೆ ಕೊಳೆ ಬರುವ ಆತಂಕ ಎದುರಾಗಿದೆ. ಕಳೆದ ಎರಡು ದಿನದಿಂದ ಬಿರುಗಾಳಿಗೆ ಮನೆಯ ಮೇಲೆ ಉರುಳಿದ ತೆಂಗಿನ ಮರ ಉರುಳಿವೆ. ಯಾವುದೇ ಪ್ರಾಣಪಾಯ ಆದ ಬಗ್ಗೆ ವರದಿ ಆಗಿಲ್ಲ.
ನರಸಿಂಹರಾಜಪುರ ತಾಲೂಕು ಉಂಬಳೇಬೈಲು ಗ್ರಾಮದ ಕಣಗಲಸರ ಕ್ಯಾಂಪ್ ನ ಉಪೇಂದ್ರ ರವರ ಮನೆ ಮೇಲೆ ಮರ ಬಿದ್ದು ಸಂಪೂರ್ಣ ಹಾನಿಯಾಗಿದೆ.
ಬಿರುಗಾಳಿ ಸಹಿತ ಭಾರಿ ಮಳೆ, ಸಿಡಿಲು ಬಡಿದು 14 ಕುರಿ, ಕುದುರೆ ಸಾವು: ಹುಬ್ಬಳ್ಳಿ ಸೇರಿ ಧಾರವಾಡ ಜಿಲ್ಲೆಯಲ್ಲಿ ವರುಣ ಅಬ್ಬರಿಸಿದ್ದು, ಕುಂದಗೋಳ ತಾಲೂಕಿನಲ್ಲಿ ಸಿಡಿಲಿಗೆ 14 ಕುರಿ, ಒಂದು ಕುದುರೆ ಬಲಿಯಾಗಿವೆ.
ಉತ್ತರ ಕರ್ನಾಟಕ, ಕರಾವಳಿ, ಮೈಸೂರು, ಬೆಂಗಳೂರು ಭಾಗದಲ್ಲೂ ಅಕಾಲಿಕ ಮಳೆಯಾಗುತ್ತಿದೆ.

ಅಡಿಕೆಗೆ ರೋಗ ಭೀತಿ..!?
ಅಕಾಲಿಕ ಮಳೆ ಕಾರಣ ಅಡಿಕೆಗೆ ರೋಗ ಭೀತಿ ಉಂಟಾಗಿದೆ. ಎಲ್ಲರೂ ಔಷಧಿ ಹೊಡೆಯಲು ಶುರು ಮಾಡಿದ್ದಾರೆ. ಇನ್ನು ಅಡಿಕೆ ಕಾಯಿ ಹಲವೆಡೆ ಉದುರುತ್ತಿದೆ.

Categories
ಮಲ್ನಾಡ್

ಮಲೆನಾಡಿಗರನ್ನು ಉಳಿಸಿ ಆಂದೋಲನ ಶುರು!

  • ಪಕ್ಷಾತೀತ ಹೋರಾಟಕ್ಕೆ ಸಜ್ಜು: ಪೂರ್ವಭಾವಿ ಸಭೆ
  • ಏ.18ಕ್ಕೆ ಶೃಂಗೇರಿಯಲ್ಲಿ ಸಭೆ: ಸಹಿ ಸಂಗ್ರಹ ಸಿದ್ಧತೆ
  • ಮಲೆನಾಡು ಜನಪರ ಒಕ್ಕೂಟದ ಆಯೋಜನೆ

NAMMUR EXPRESS NEWS
ಮಲೆನಾಡು ಹೊರಗಿನವರಿಗೆ ನೋಡಲು ಚಂದ. ಆದರೆ ಮಲೆನಾಡಿನ ಮಡಿಲಿನಲ್ಲಿ ಬದುಕು ನಡೆಸುತ್ತಿರುವ ಮಲೆನಾಡ ಮಕ್ಕಳ ಕಷ್ಟಗಳು ಹೇಳತೀರದಾಗಿದೆ. ಕೆಲವೊಂದು ಸಮಸ್ಯೆಗಳು ತಕ್ಷಣಕ್ಕೆ ಹೊಳೆದರೆ ಇನ್ನುಳಿದ ಭೀಕರ ಸಮಸ್ಯೆಗಳು ಮುಂದಿನ ದಿನಗಳಲ್ಲಿ ನಮ್ಮ ಕಾಲಕ್ಕೂ ಅಥವಾ ನಮ್ಮ ಮಕ್ಕಳ ಕಾಲಕ್ಕೂ ನಮ್ಮನ್ನು ತಬ್ಬಲಿ ಮಾಡುವುದರಲ್ಲಿ ಎರಡು ಮಾತಿಲ್ಲ. ಹಾಗಾಗಿ ನಮಗೆ ಬಂದೊದಗಿರುವ ಹಾಗೂ ಮುಂದೆ ಬರಲಿರುವ ಸಮಸ್ಯೆಗಳ ಬಗ್ಗೆ ನಾವು ನೀವು ಅರಿತುಕೊಂಡು – ಒಬ್ಬ ಮಲೆನಾಡಿಗನಾಗಿ ಹಾಗೂ ಪಕ್ಷಾತೀತವಾಗಿ ಒಗ್ಗಟಾಗಿ ಒಂದು ಆಂದೋಲನವನ್ನೇ ರೂಪಿಸಬೇಕಿದೆ. ಈ ಮಲೆನಾಡ ನೆಲ ಹೋರಾಟದ ನೆಲವಾಗಬೇಕಿದೆ. ಈ ನಿಟ್ಟಿನಲ್ಲಿ ನಮ್ಮನ್ನ ಆಳುವವರಿಗೆ ನಮ್ಮ ಸಮಸ್ಯೆಗಳ ಬಗ್ಗೆ ಆಂದೋಲನದ ಮೂಲಕ ಕಣ್ಣು ತೆರೆಸಬೇಕಾಗಿದೆ.
ಈಗಾಗಲೇ “ಸಹಿ ಸಂಗ್ರಹ” ದ ಆಂದೋಲನವನ್ನು ಆರಂಭಿಸಿದ್ದು, ಮುಂದಿನ ದಿನಗಳಲ್ಲಿ “ಮಲೆನಾಡಿನಲ್ಲಿ ಮತ್ತು ಬೆಂಗಳೂರಿನಲ್ಲಿ ಮುಷ್ಕರ ಹೂಡುವ ಕುರಿತು” ಚರ್ಚಿಸಲು ಪೂರ್ವಭಾವಿ ಸಭೆಯನ್ನು 18-4-2022 ರ ಸೋಮವಾರ, ಸಂಜೆ: 4.30ಕ್ಕೆ ಸರಿಯಾಗಿ ಶೃಂಗೇರಿಯ ಹೋಟೆಲ್ ಶಾರದಾ ಕಂಫರ್ಟ್‌ನ ಸಭಾಂಗಣದಲ್ಲಿ ಸಭೆ ಕರೆದಿದ್ದು, ತಾವುಗಳು ಈ ಸಭೆಗೆ ಆಗಮಿಸಿ ಸೂಕ್ತವಾದ ಸಲಹೆ-ಸಹಕಾರಗಳನ್ನು ಕೊಡಬೇಕಾಗಿ ವಿನಂತಿಸಿಕೊಳ್ಳುತ್ತೇವೆ.
ಎಲ್ಲಾ ಮಲೆನಾಡಿಗರ ಪರವಾಗಿ: ಮಲೆನಾಡು ಜನಪರ ಒಕ್ಕೂಟ
9480070279 | 9480070163 | 9448241148
mokkuta@gmail.com
anilhosakoppa@gmail.com

Categories
ಬೆಂಗಳೂರು

ರಾಜಧಾನಿಯಲ್ಲಿ ಆರಗ ಅಭಿಮಾನ..!

  • 5000ಕ್ಕೂ ಹೆಚ್ಚು ತೀರ್ಥಹಳ್ಳಿ, ಮಲೆನಾಡಿಗರ ಸಮ್ಮಿಲನ
  • ರಾಜಕೀಯ, ಉದ್ಯಮ, ಸಂಘಟನಾ ಕ್ಷೇತ್ರದ ಸಮಾಗಮ
  • ಕಾರ್ಯಕ್ರಮದಲ್ಲಿ ಭಾವುಕರಾದ ಆರಗ ಜ್ಞಾನೇಂದ್ರ!
  • ಸಿಎಂ ಬೊಮ್ಮಾಯಿ, ಯಡಿಯೂರಪ್ಪ, ಅಶ್ವಥನಾರಾಯಣ, ರಾಘವೇಂದ್ರ, ಹಾಲಪ್ಪ, ಕುಮಾರ್ ಬಂಗಾರಪ್ಪ, ಜೀವರಾಜ್ ಸೇರಿ ಗಣ್ಯರ ಮನದ ಮಾತು

NAMMUR EXPRESS NEWS
ಬೆಂಗಳೂರು: ಅದೊಂದು ಭಾವುಕ ಕ್ಷಣ. ತೀರ್ಥಹಳ್ಳಿ ಕ್ಷೇತ್ರದ ಮತದಾರರಿಗೆ ಕೃತಜ್ಞತೆ ಅರ್ಪಿಸುವ ಸಲುವಾಗಿ ಬೆಂಗಳೂರು ಅರಮನೆ ಆವರಣದಲ್ಲಿ ತೀರ್ಥಹಳ್ಳಿ ಕ್ಷೇತ್ರದ ಬೆಂಗಳೂರು ನಿವಾಸಿಗಳ ‘ಸ್ನೇಹ ಸಮ್ಮಿಲನ’ ಕಾರ್ಯಕ್ರಮವನ್ನು ಗೃಹ ಸಚಿವ, ತೀರ್ಥಹಳ್ಳಿ ಕ್ಷೇತ್ರದ ಶಾಸಕ ಆರಗ ಜ್ಞಾನೇಂದ್ರ ಮತ್ತು ಅವರ ತಂಡ ಆಯೋಜಿಸಿದ್ದು ನಿರೀಕ್ಷೆಗೂ ಮೀರಿ ಜನ ಸೇರಿತ್ತು.
ತೀರ್ಥಹಳ್ಳಿ ಮೂಲದ ರಾಜಕೀಯ, ಉದ್ಯಮ, ಸಂಘಟನೆ, ಸಿನಿಮಾ, ಸಾಂಸ್ಕೃತಿಕ ಕ್ಷೇತ್ರ ಸೇರಿ ಎಲ್ಲಾ ಜನತೆ ಆಗಮಿಸಿದ್ದರು.
ಎಲ್ಲಾ ಅತಿಥಿಗಳು ಮಲೆನಾಡಿನ ನಾಯಕರ ಬಗ್ಗೆ, ತೀರ್ಥಹಳ್ಳಿ ಜನತೆ, ಪರಿಸರದ ಬಗ್ಗೆ ಹೊಗಳಿದರು.
ಅರಮನೆ ಮೈದಾನದಲ್ಲಿ ಬೃಹತ್ ವೇದಿಕೆ ನಿರ್ಮಾಣವಾಗಿದ್ದು, 5000 ಮಂದಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಖ್ಯಾತ ಕಲಾವಿದ ಕೋಟೆಗದ್ದೆ ರವಿ ಆರಗ ಚಿತ್ರ ಬಿಡಿಸಿ ಚಿತ್ರ ನಮನ ಸಲ್ಲಿಸಿದರು.
ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಸಚಿವ ಅಶ್ವಥನಾರಾಯಣ, ಬಿಜೆಪಿ ನಾಯಕರಾದ ಜೀವರಾಜ್, ಹಾಲಪ್ಪ, ಸಂತೋಷ್ ಗುರೂಜಿ, ಸಂಸದ ರಾಘವೇಂದ್ರ, ಕುಮಾರ್ ಬಂಗಾರಪ್ಪ, ಆರ್.ಮದನ್, ರಾಘವೇಂದ್ರ ಬಾಳೆಬೈಲು,ಬೇಗುವಳ್ಳಿ ಸತೀಶ್, ಕವಿರಾಜ್ ಬೇಗುವಳ್ಳಿ, ನವೀನ್ ಹೆದ್ದೂರು, ಕುಕ್ಕೆ ಪ್ರಶಾಂತ್, ಚಂದವಳ್ಳಿ ಸೋಮಶೇಖರ್, ಬ್ಯಾಟರಂಗೇಗೌಡ, ದತ್ತಾತ್ರಿ ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ.
ಸಾಂಸ್ಕೃತಿಕ ರಂಗು: ಸಭಾ ಕಾರ್ಯಕ್ರಮ ಸಾಂಸ್ಕೃತಿಕ ಕಾರ್ಯಕ್ರಮವನ್ನು ಪದ್ಮಿನಿ ಮತ್ತು ತಂಡ ನಡೆಸಿಕೊಟ್ಟರು.
ಉದ್ಯಮಿಗಳು ಹಾಜರ್: ಮಲೆನಾಡು ಮೂಲದ ಪ್ರಸಿದ್ಧ ಉದ್ಯಮಿಗಳಾದ ಅಚ್ಯುತ್ ಗೌಡ, ಸುಧೀಂದ್ರ ಚಿಕ್ಕಳ್ಳಿ, ವನಮಾಲಯ್ಯ ಇಳಿಮನೆ, ಅಮರಾವತಿ ಕೃಷ್ಣಮೂರ್ತಿ, ಶಶಿಕಾಂತ್ ಅತ್ತಿಕೊಡಿಗೆ, ಶ್ರೀಕರ ಗೌಡ ಕೊಳಿಗೆ ಸೇರಿದಂತೆ ಅನೇಕರು ಹಾಜರಿದ್ದರು.
ತಾರೆಯರ ಆಗಮನ!: ಮಲೆನಾಡ ಪ್ರಸಿದ್ಧ ತಾರೆಯರಾದ ಪ್ರವೀಣ್ ತೇಜ್, ನಿಶ್ಚಿತ್ ಕೆರೋಡಿ, ಶಮಿತಾ ಮಲ್ನಾಡ್, ಕೋಡ್ಲು ರಾಮಕೃಷ್ಣ ಸೇರಿದಂತೆ ಅನೇಕರು ಹಾಜರಿದ್ದರು.
ಸಂಘಟನೆ, ರಾಜಕಾರಣಿಗಳ ದಂಡು: ಮಲೆನಾಡು ಮೂಲದ ಸಂಘಟನೆಗಳ ಒಕ್ಕೂಟದ ನಾಗರಾಜ್ ಕೊಳಿಗೆ, ಕನ್ನಡ ಪರ ಸಂಘಟನೆ ಮುಖ್ಯಸ್ಥ ನಾಗರಾಜ್, ಮಲೆನಾಡು ಮಿತ್ರವೃಂದದ ಸುಬ್ಬಯ್ಯ ನಂಟೂರು, ತೀರ್ಥಹಳ್ಳಿ ಕರವೇ ಅಧ್ಯಕ್ಷ ಸುರೇಂದ್ರ ಗೌಡ ಯಡೂರು, ವಾಟೆಗದ್ದೆ ದಿನೇಶ್ ಸೇರಿದಂತೆ ನೂರಾರು ಮಂದಿ ಸಂಘಟಕರು ಇದ್ದರು. ಮಲೆನಾಡು ಮೂಲದ ಪತ್ರಕರ್ತರು ಕೂಡ ಹಾಜರಿದ್ದರು. ಅತ್ಯುತ್ತಮ ಸಂಘಟನೆ ಗಮನ ಸೆಳೆಯಿತು.
ಆರಗ ಅವರ ಅಭಿಮಾನಕ್ಕೆ ಮಿನಿ ತೀರ್ಥಹಳ್ಳಿ ಅರಮನೆ ಮೈದಾನದಲ್ಲಿ ಕಂಡಿತು.
( ಇನ್ನು ನಿರೀಕ್ಷಿಸಿ..ಕಾರ್ಯಕ್ರಮದ ಕುರಿತ ವಿಭಿನ್ನ ವರದಿಗಳು… ನಮ್ಮೂರ್ ಎಕ್ಸ್ ಪ್ರೆಸ್ ಮಾಧ್ಯಮದಲ್ಲಿ ಮಾತ್ರ)