Month: April 2022
- ಪುಸ್ತಕ ಬರೆಯುವ, ಓದುವವರಿಗೆ ನಮ್ಮ ಸೇವೆ
ಇಂದು ಪುಸ್ತಕ ದಿನ.. ಪುಸ್ತಕ ಓದುವ ಹವ್ಯಾಸ ಕಡಿಮೆಯಾಗುತ್ತಿದ್ದು, ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕಿದೆ..!
ನಮ್ಮೂರ್ ಎಕ್ಸ್ ಪ್ರೆಸ್ ಮಾಧ್ಯಮ ಸಂಸ್ಥೆ ಇನ್ನು ಪುಸ್ತಕ, ಮ್ಯಾಗ್ ಜಿನ್, ವಿಶೇಷ ಬರಹಗಳ ವಿಮರ್ಶೆ ಪ್ರಕಟ ಮಾಡಲಿದೆ. ಜೊತೆಗೆ ಪುಸ್ತಕ ಬರೆಯುವ, ಮುದ್ರಣ ಮಾಡುವ, ಪುಸ್ತಕವನ್ನು ಪ್ರಚಾರ ಮಾಡುವ, ಓದುಗರಿಗೆ ಪುಸ್ತಕದ ಬಗ್ಗೆ ಮಾಹಿತಿ ನೀಡುವ ಕೆಲಸಕ್ಕೆ ಮುನ್ನುಡಿ ಬರೆಯಲಿದೆ. ಈ ಮೂಲಕ ಜನತೆಗೆ ಪುಸ್ತಕ ಓದುವ ಅಭಿರುಚಿ ಬೆಳೆಸಲು ಸಣ್ಣ ಪ್ರಯತ್ನ ಮಾಡಲಿದೆ.
ಪುಸ್ತಕ ವಿಮರ್ಶೆ, ಪ್ರಚಾರ, ಡಿಸೈನ್ ಅಂಡ್ ಪ್ರಿಂಟ್, ಪಬ್ಲಿಶ್ ಸೇವೆಗೆ ಸಂಪರ್ಕಿಸಿ: 9483937620( ವಾಟ್ಸಾಪ್ ಮಾಡಿ)
ಪುಸ್ತಕ ದಿನದಿಂದ ವಿಶೇಷ ಸೇವೆ..!
ಸಮಸ್ತ ಜನತೆ ಪುಸ್ತಕ ಓದುವ, ಬರೆಯುವ ಮೂಲಕ ಪುಸ್ತಕ ದಿನ ಆಚರಣೆ ಮಾಡೋಣ..!
ಬೈಕಲ್ಲಿ ರೊಮಾನ್ಸ್: ಯುವಕ ಅರೆಸ್ಟ್!
- ಬೈಕ್ ಟ್ಯಾಂಕ್ ಮೇಲೆ ಕುಳಿತು ಕಿಸ್: ಜನರಿಂದ ವಿಡಿಯೋ ವೈರಲ್
NAMMUR EXPRESS NEWS
ಚಾಮರಾಜನಗರ: ಚಲಿಸುವ ಬೈಕ್ ಮೇಲೆ ರೊಮಾನ್ಸ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಚಾಮರಾಜನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲು ಮಾಡಿಕೊಂಡಿದ್ದು, ಬೈಕ್ ಹಾಗೂ ಯುವಕನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಅಜಾಗರೂಕ, ಹೆಲ್ಮೆಟ್ ರಹಿತ, ಅಪಾಯಕಾರಿ ಚಾಲನೆ ಮೂಲಕ ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಚಲಿಸುವ ಬೈಕ್ ಮೇಲೆ ರಸ್ತೆಯಲ್ಲಿ ರೊಮಾನ್ಸ್ ಮಾಡಿದ ಪ್ರೇಮಿಗಳ ವಿಡಿಯೊಗೆ ಸಾರ್ವಜನಿಕರಿಂದ ಆಕ್ಷೇಪ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಮೋಟಾರು ವಾಹನ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಎಚ್.ಡಿ.ಕೋಟೆ ಶಿವಪುರ ಗ್ರಾಮದ ಸ್ವಾಮಿ ವಿರುದ್ಧ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ವಿಚಾರಣೆ ವೇಳೆ ಯುವತಿ ಜೊತೆಗೆ ಜಾಲಿ ರೈಡ್ ಬಂದಿದ್ದಾಗಿ ಸ್ವಾಮಿ ಒಪ್ಪಿಕೊಂಡಿದ್ದಾರೆ.
ನಡುರಸ್ತೆಯಲ್ಲಿ ಇವರಿಬ್ಬರ ರೊಮಾನ್ಸ್ನ ವಿಡಿಯೊ ಭಾರಿ ವೈರಲ್ ಆಗಿತ್ತು. ಪೆಟ್ರೋಲ್ ಟ್ಯಾಂಕ್ ಮೇಲೆ ಯುವತಿಯನ್ನು ಕೂರಿಸಿಕೊಂಡು ರೈಡ್ ಮಾಡಿ ಯುವಕ ತನ್ನ ಪ್ರೀತಿ ಪ್ರದರ್ಶನ ಮಾಡಿದ್ದ.
- ತೋಟದಲ್ಲಿದ್ದಾಗ ಘಟನೆ: ಅಭಿಮಾನಿಗಳ ಕಣ್ಣೀರು
- ಮೂರು ಪಕ್ಷದ ಜಿಲ್ಲಾ ಅಧ್ಯಕ್ಷರಾಗಿದ್ದ ನಾಯಕ!
NAMMUR EXPRESS NEWS
ಚಿಕ್ಕಮಗಳೂರು ಜಿಲ್ಲಾ ಬಿಜೆಪಿ ಮಾಜಿ ಅದ್ಯಕ್ಷರು ಹಾಗೂ 2 ಬಾರಿ ಕಾಫಿ ಮಂಡಳಿ ಅದ್ಯಕ್ಷರು ಆಗಿದ್ದ ಎಂ ಎಸ್ ಭೋಜೆಗೌಡರು ಹೆಜ್ಜೇನಿನ ದಾಳಿಯಿಂದಶನಿವಾರ ಮರಣ ಹೊಂದಿದ್ದಾರೆ.
ಕಾಫಿ ಮಂಡಳಿ ಮಾಜಿ ಅಧ್ಯಕ್ಷ ಎಂ.ಎಸ್. ಬೋಜೇಗೌಡ(73) ಮೃತರು. ಅರಶಿನಗುಪ್ಪೆ ಸಮೀಪದ ಕೃಷ್ಣಗಿರಿ ಕಾಫಿ ತೋಟದಲ್ಲಿ ಈ ದುರ್ಘಟನೆ ಸಂಭವಿಸಿದೆ. ಒಮ್ಮೆಲೆ ನೂರಾರು ಜೇನು ನೊಣಗಳು ದಾಳಿ ಮಾಡಿದ್ದು, ಗಂಭೀರ ಸ್ಥಿತಿಯಲ್ಲಿದ್ದ ಬೋಜೇಗೌಡರನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತ್ತಾದರೂ ಮಾರ್ಗಮಧ್ಯೆಯೇ ಕೊನೆಯುಸಿರೆಳೆದರು.
ಎರಡು ಬಾರಿ ಬೋಜೇಗೌಡರು ಕಾಫಿ ಮಂಡಳಿ ಅಧ್ಯಕ್ಷರಾಗಿದ್ದರು. ಎರಡು ಭಾರಿ ಬಿಜೆಪಿ ಜಿಲ್ಲಾ ಅಧ್ಯಕ್ಷರು ಕೂಡ ಆಗಿದ್ದರು. ಒಂದು ಬಾರಿ ಜನತಾ ಪಕ್ಷದ ಜಿಲ್ಲಾಧ್ಯಕ್ಷರಾಗಿದ್ದರು. ಒಮ್ಮೆ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದರು.
ಜಿಲ್ಲೆಯ ಎಲ್ಲಾ ನಾಯಕರು ಇವರ ಸಾವಿಗೆ ಕಂಬನಿ ಮಿಡಿದಿದ್ದಾರೆ.
2022-23ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಬಿಡುಗಡೆ
- ಮೇ 16ರಂದು ಶಾಲೆಗಳು ಪುನರಾರಂಭ
- ಕರೋನಾ ಮಾರ್ಗಸೂಚಿ ಮರೆತ ಸರ್ಕಾರ..!?
NAMMUR EXPRESS NEWS
ಬೆಂಗಳೂರು: ಕರ್ನಾಟಕದಲ್ಲಿ ಶೈಕ್ಷಣಿಕ ವೇಳಾಪಟ್ಟಿ ಬಿಡುಗಡೆಗೊಂಡಿದ್ದು ಮೇ 16ರಂದು ಶಾಲೆಗಳು ಆರಂಭವಾಗಲಿವೆ.
ಶೈಕ್ಷಣಿಕ ವರ್ಷದಲ್ಲಿ 60 ಸರ್ಕಾರಿ ರಜಾ ದಿನಗಳಿದ್ದು 270 ದಿನಗಳನ್ನು ಶೈಕ್ಷಣಿಕ ಚಟುವಟಿಕೆಗಳಿಗೆ ಮೀಸಲಿಡಲಾಗಿದೆ. ದಸರಾಗೆ 14 ದಿನ ರಜೆ ಘೋಷಿಸಲಾಗಿದೆ. ಪಠ್ಯೇತರ ಚಟುವಟಿಕೆಗಳಿಗೆ 10 ದಿನ, ಪರೀಕ್ಷೆ ಮತ್ತು ಸಿಸಿ ಮೌಲ್ಯಂಕ ವಿಶ್ಲೇಷಣೆ 12 ದಿನ ನೀಡಲಾಗಿದ್ದು ಪ್ರಸಕ್ತ ವರ್ಷದ ಬೋಧನಾ ಕಲಿಕೆ ಪ್ರಕ್ರಿಯೆ 228 ದಿನ ಇರಲಿದೆ.
ಕರೋನಾ ಕಾರಣದಿಂದ 3 ವರ್ಷಗಳಿಂದ ಪೂರ್ಣ ಪ್ರಮಾಣದಲ್ಲಿ ತರಗತಿ ನಡೆಸಲು ಆಗಿರಲಿಲ್ಲ, ಶಾಲಾ ಕರ್ತವ್ಯದ ಮೊದಲನೆ ಅವಧಿ ಮೇ 16ರಿಂದ ಅ.2 ರ ವರೆಗೆ ಇರಲಿದೆ ಎರಡನೇ ಅವಧಿ ಅ.17 ನಿಂದ 2023ರ ಎ.10 ರ ವರೆಗೆ ಇರಲಿದೆ. ಅ.3 ರಿಂದ 16 ರವರೆಗೆ ದಸರಾ ರಜೆ ಇರಲಿದ್ದು, ಎ.11 ರಿಂದ ಮೇ 28ರವರೆಗೆ ಬೇಸಿಗೆ ರಜೆ ಇರಲಿದೆ.
ಸರ್ಕಾರದ ನಿಯಮವೇನು..?
ಮಕ್ಕಳ ಶಾಲಾ ಪ್ರವೇಶಾತಿಯನ್ನು ಮೇ 16ಕ್ಕೆ ಆರಂಭಿಸಿ, ಜೂ.31ರೊಳಗೆ ಮುಕ್ತಾಯ ಮಾಡಬೇಕು. ಬೌದ್ಧಿಕವಾಗಿ ಪ್ರಾರಂಭಿಸಲು ಪರಿಸ್ಥಿತಿ ಸಹಕಾರಿಯಾಗದಿದ್ದಲ್ಲಿ ಶೈಕ್ಷಣಿಕ ಚಟುವಟಿಕೆಗಳಿಗೆ ಪರ್ಯಾಯ ಮಾರ್ಗ ಕಂಡುಕೊಳ್ಳಬೇಕು. ಕನ್ನಡ ರಾಜ್ಯೋತ್ಸವ ಮತ್ತು ಮಕ್ಕಳ ಮೇಳ ಆಯೋಜಿಸಬೇಕು. ಮುಷ್ಕರ ಅಥವಾ ಇನ್ನಿತರ ಕಾರಣಗಳಿಂದ ಶಾಲೆಗಳಿಗೆ ರಜೆ ಘೋಷಣೆಯದಲ್ಲಿ, ಆ ಅವಧಿಯ ಶಾಲಾ ಕರ್ತವ್ಯದ ದಿನಗಳನ್ನು ಮುಂದಿನ ರಜಾದಿನಗಳಲ್ಲಿ ಪೂರ್ಣಪ್ರಮಾಣದಲ್ಲಿ ಶಾಲೆಗಳನ್ನು ನಡೆಸಲಾಗುತ್ತದೆ. ಆ ಮೂಲಕ ನಿಗದಿಪಡಿಸಿದ ಶಾಲಾ ಕರ್ತವ್ಯದ ದಿನಗಳು ಕಡಿಮೆಯಾಗದಂತೆ ಸರಿದೂಗಿಸಿಕೊಳ್ಳಲು ಆಯಾ ಜಿಲ್ಲಾ ಉಪನಿರ್ದೇಶಕರು ಕ್ರಮವಹಿಸಬೇಕು. ಸಾವಿತ್ರಿಬಾಯಿ ಫುಲೆ, ವಿವೇಕಾನಂದ ಜಯಂತಿ ಕನಕದಾಸ ಜಯಂತಿ ಸೇರಿ ವಿವಿಧ ದಾರ್ಶನಿಕರ ಜಯಂತಿ ಆಚರಣೆಗೆ ಆದೇಶ ನೀಡಲಾಗಿದೆ.
ಹೊಸ ವೇಳಾಪಟ್ಟಿಗೆ ಪಟ್ಟು!
ಅಕ್ಟೋಬರ್ ಅವಧಿಯಲ್ಲಿ 22 ದಿನ ಬೋಧನೆ ಮಾಡಬೇಕು, ಮಧ್ಯವಾರ್ಷಿಕ ಪರೀಕ್ಷೆ ನಡೆಸಬೇಕು ಎಂದು ಹೇಳಲಾಗಿದೆ, ಆದರೆ ದಸರಾ ಮತ್ತು ದೀಪಾವಳಿ ರಜೆ 16 ದಿನಗಳು ಇರಲಿದ್ದು ಎಲ್ಲಿಂದ ಬೋಧನೆ ಮಾಡಲು ಸಾಧ್ಯವೆಂದು ಖಾಸಗಿ ಶಾಲಾ ಆಡಳಿತ ಮಂಡಳಿಗಳು ಪ್ರಶ್ನಿಸಿವೆ. ಶಿಕ್ಷಣ ಇಲಾಖೆ ವೇಳಾಪಟ್ಟಿ ರೂಪಿಸುವಾಗ ಎಚ್ಚರಿಕೆವಹಿಸಬೇಕು, ಅವರೇ ರಜೆ ನೀಡಿ ಪಾಠವನ್ನು ಮಾಡಿ ಎಂದರೆ ಹೇಗೆ ಮಾಡಲು ಸಾಧ್ಯ? ತಕ್ಷಣ ಪರಿಷ್ಕೃತ ವೇಳಾಪಟ್ಟಿ ರೂಪಿಸಬೇಕೆಂದು ಕ್ಯಾಮ್ಸ್ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಡಿ. ಶಶಿಕುಮಾರ್ ಆಗ್ರಹಿಸಿದ್ದಾರೆ.
ಕರೋನಾ ಮರೆತ ಸರ್ಕಾರ
ಕರೋನಾ 4ನೇ ಅಲೆ ಸುಳಿವು ಇದೆ. ಆದ್ರೆ ಸರ್ಕಾರ ಎಲ್ಲಿಯೂ ಎಚ್ಚರ ವಹಿಸಿದಂತೆ ಕಾಣುತ್ತಿಲ್ಲ. ಮಕ್ಕಳ ಬಗ್ಗೆ ಎಚ್ಚರ ಅಗತ್ಯ.
- ಮಂಜುನಾಥ್ ಭಂಡಾರಿ, ಮಧು ಬಂಗಾರಪ್ಪ, ಕಲಗೋಡು ರತ್ನಾಕರ್, ಶಿವಕುಮಾರ್, ರಾಜನಂದಿನಿಗೆ ಹುದ್ದೆ
NAMMUR EXPRESS NEWS
ಶಿವಮೊಗ್ಗ: ಕೆಪಿಸಿಸಿ ಪ್ರಕಟಿಸಿದ ಪದಾಧಿಕಾರಿಗಳ ಪಟ್ಟಿಯಲ್ಲಿ ಶಿವಮೊಗ್ಗ ಜಿಲ್ಲೆಯ ಐವರು ಸೇರ್ಪಡೆಯಾಗಿದ್ದಾರೆ.
ಕೆಪಿಸಿಸಿ ನೂತನ ಉಪಾಧ್ಯಕ್ಷರಾಗಿ ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ,ಮಾಜಿ ಶಾಸಕ ಮಧು ಬಂಗಾರಪ್ಪ ನೇಮಕಗೊಂಡಿದ್ದಾರೆ.
ಪ್ರಧಾನ ಕಾರ್ಯದರ್ಶಿಗಳಾಗಿ ಮಾಜಿ ಜಿ.ಪಂ ಸದಸ್ಯ ಕಲಗೋಡು ರತ್ನಾಕರ್,ನಿವೃತ್ತ ಪೊಲೀಸ್ ಅಧಿಕಾರಿ ಪಿ.ಓ ಶಿವಕುಮಾರ್, ಕಾಗೋಡು ರಾಜನಂದಿನಿ ನೇಮಕಗೊಂಡಿದ್ದಾರೆ.
ನೂತನವಾಗಿ ನೇಮಕಗೊಂಡಿರುವ ಪದಾಧಿಕಾರಿಗಳನ್ನು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹೆಚ್.ಎಸ್. ಸುಂದರೇಶ್ ಭದ್ರಾವತಿ ಶಾಸಕ ಬಿ.ಕೆ ಸ೦ಗಮೇಶ್, ರಾಜ್ಯ ಕಾಂಗ್ರೆಸ್ ಮುಖಂಡರಾದ ಕಿಮ್ಮನೆ ರತ್ನಾಕರ್, ಡಾ.ಆರ್.ಎಂ ಮಂಜುನಾಥ ಗೌಡ, ಸಾಗರದ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ಘಟಕದ ಅಧ್ಯಕ್ಷ ರಮೇಶ್ ಇಕ್ಕೇರಿ,ಭದ್ರಾವತಿ ಗ್ರಾಮಾಂತರ ಕಾಂಗ್ರೆಸ್ ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷ ರಮೇಶ್ ಶಂಕರಘಟ್ಟ ಶಿವಮೊಗ್ಗದ ಕಾಂಗ್ರೆಸ್ ಮುಖಂಡ ಜಿ.ಡಿ ಮಂಜುನಾಥ ಅಭಿನಂದಿಸಿದ್ದಾರೆ.
- ಸ್ಥಳಿಯರಿಂದ ಧರ್ಮದೇಟು: ಪೊಲೀಸರ ರಕ್ಷಣೆ
- ಆನೇಕಲ್ ಬಳಿ ನಡೆದ ಘಟನೆ: ಊಟಕ್ಕಾಗಿ ವೇಷ
- ದೇಶದ ನಿರುದ್ಯೋಗ ಸಮಸ್ಯೆ ಅನಾವರಣ…!
NAMMUR EXPRESS NEWS
ಆನೇಕಲ್: ಆತ ಅಲ್ಪ ಸ್ವಲ್ಪ ಓದಿದ್ದ.. ಬಾಗಲಕೋಟೆಯಿಂದ ರೈಲು ಹತ್ತಿ ಬೆಂಗಳೂರಲ್ಲಿ ಕೆಲಸ ಹುಡುಕಿ ಬಂದಿದ್ದ.. ಆದರೆ ರಾಜಧಾನಿಯಲ್ಲಿ ಎಷ್ಟು ಅಲೆದಾಟ ನಡೆಸಿದರೂ ಕೆಲಸ ಸಿಗಲಿಲ್ಲ. ಹೊಟ್ಟೆಪಾಡಿಗೆ ದಾರಿ ಕಾಣದೆ ಕೊನೆಗೆ ಆನೇಕಲ್ ಬಳಿ ಸೀರೆ ಉಟ್ಟು ಭಿಕ್ಷೆ ಬೇಡಿ ಹೊಟ್ಟೆ ಹೊರೆಯುತ್ತಿದ್ದ. ಈತನ ಮುಖವಾಡ ಯಾರಿಗೋ ಗೊತ್ತಾಗಿದೆ.
ಹೀಗೆ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಯುವಕ ಸೀರೆಯುಟ್ಟ ಯುವಕನನ್ನು ನೋಡಿ ಹಿಡಿದು ಕಟ್ಟಿಹಾಕಿದ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ಪಟ್ಟಣದ ಎಸ್ ಆರ್ ಆರ್ ಬಡಾವಣೆಯ ನಿವಾಸಿಗಳು ಆತನಿಗೆ ಧರ್ಮದೇಟು ನೀಡಿದ್ದಾರೆ. ಕೊನೆಗೆ ಪೊಲೀಸರು ಮಧ್ಯ ಪ್ರವೇಶ ಮಾಡಿ ರಕ್ಷಣೆ ಮಾಡಿದ್ದಾರೆ. ಆತ ಪೊಲೀಸರ ಬಳಿಯೂ ಊಟಕ್ಕಾಗಿ ಈ ಕೆಲಸ ಮಾಡಿದ್ದೇನೆ ಎಂದಿದ್ದಾನೆ.
ಏನಿದು ಘಟನೆ?: ಬಾಗಲಕೋಟೆ ಮೂಲದ ಯುವಕ ಸೀರೆ ಕುಪ್ಪಸ ತೊಟ್ಟು ಮಂಗಳವಾರ ರಾತ್ರಿ ಬಡಾವಣೆ ಅಕ್ಕಪಕ್ಕದಲ್ಲಿ ಓಡಾಡುತ್ತಿದ್ದ. ಯುವಕನ ಹಾವಭಾವ ನೋಡಿ ಅನುಮಾನಗೊಂಡ ಸ್ಥಳೀಯರು ಈ ಬಗ್ಗೆ ಪ್ರಶ್ನಿಸಲು ಹೋದಾಗ ಪರಾರಿಯಾಗಲು ಯತ್ನಿಸಿದ. ಬಳಿಕ ಸ್ಥಳೀಯರು ಯುವಕನನ್ನು ಹಿಡಿದು ಕಂಬಕ್ಕೆ ಕಟ್ಟಿಹಾಕಿ ಯುವಕನ ಬಗ್ಗೆ ಆನೇಕಲ್ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ.
ರಾಜ್ಯದಲ್ಲಿ ಉದ್ಯೋಗ ಸೃಷ್ಟಿ ಮೊದಲ ಅಧ್ಯತೆ ಆಗಲಿ..!
ಬೆಂಗಳೂರಿಗೆ ಕೆಲಸ ಅರಸಿ ಕೆಲದಿನಗಳ ಹಿಂದೆ ಬಾಗಲಕೋಟೆಯಿಂದ ಬಂದಿದ್ದೆ. ಬೆಂಗಳೂರಿನ ಜೆಪಿ ನಗರದಲ್ಲಿ ವಾಸವಿದ್ದು ಕೆಲದಿನಗಳಿಂದ ಕೆಲಸ ಇಲ್ಲದೆ ಅಲೆದಾಟ ನಡೆಸಿದೆ. ಎಲ್ಲಿಯೂ ಕೆಲಸ ಸಿಗದೆ ಸೀರೆ ಉಟ್ಟು ಭಿಕ್ಷೆ ಬೇಡುತ್ತಿದ್ದೆ. ವಾಪಾಸ್ ಊರಿಗೆ ಹೋಗಲು ಆಗಲಿಲ್ಲ.. ಇಲ್ಲಿ ಕೆಲಸ ಸಿಗಲೂ ಇಲ್ಲ ಎಂದಿದ್ದಾನೆ.
ಸಚಿವ ಈಶ್ವರಪ್ಪ ತಲೆದಂಡ..!
- ರಾಜೀನಾಮೆಗೆ ಹೈಕಮಾಂಡ್ ಸೂಚನೆ: ಈಶ್ವರಪ್ಪ ವಿವರಣೆಗೆ ಹೈಕಮಾಂಡ್ ಗರಂ
- ರಾಜ್ಯದಲ್ಲಿ ಹೆಚ್ಚಾದ ಆಕ್ರೋಶ
NAMMUR EXPRESS NEWS
ಬೆಂಗಳೂರು: ಉಡುಪಿ ಲಾಡ್ಜ್ ನಲ್ಲಿ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ಕೆ.ಎಸ್ ಈಶ್ವರಪ್ಪ ಹೆಸರು ಕೇಳಿಬರುತ್ತಿದ್ದಂತೆಯೇ ಬಿಜೆಪಿ ಹೈಕಮಾಂಡ್ ಗರಂ ಆಗಿದ್ದು, ರಾಜೀನಾಮೆ ನೀಡುವಂತೆ ಸೂಚನೆ ನೀಡಿದೆ.
ಹೈಕಮಾಂಡ್ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಬುಧವಾರ ಸಂಜೆ ಸಚಿವ ಸ್ಥಾನಕ್ಕೆ ಈಶ್ವರಪ್ಪ ರಾಜೀನಾಮೆ ನೀಡುವ ಸಾಧ್ಯತೆ ಇದೆ. ಅಲ್ಲದೆ ಹೈಕಮಾಂಡ್ ಸೂಚನೆ ಬೆನ್ನಲ್ಲೇ ಸಚಿವರು ಮೈಸೂರು ಪ್ರವಾಸ ಮೊಟಕುಗೊಳಿಸಿ ಬೆಂಗಳೂರಿಗೆ ವಾಪಸ್ಸಾಗಿದ್ದಾರೆ. ಬುಧವಾರ ಮಧ್ಯಾಹ್ನ ಸಿಎಂ ಭೇಟಿಯಾಗಿ ರಾಜೀನಾಮೆ ಸಲ್ಲಿಕೆ ಮಾಡುವ ಸಾಧ್ಯತೆಗಳಿವೆ. ಇತ್ತ ಮಂಗಳೂರು ಪ್ರವಾಸದಲ್ಲಿರುವ ಸಿಎಂ ಮಧ್ಯಾಹ್ನ ರಾಜಧಾನಿಗೆ ವಾಪಸ್ಸಾಗಲಿದ್ದಾರೆ.
ಕಳೆದ ರಾತ್ರಿ ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸಂತೋಷ್ ಅವರು ದೆಹಲಿಯಲ್ಲಿ ಅಮಿತ್ ಶಾ ಜೊತೆ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದ ಕುರಿತು ಚರ್ಚೆ ನಡೆಸಿದ್ದಾರೆ. ಪ್ರಕರಣ ರಾಜ್ಯದಲ್ಲಿ ಸರ್ಕಾರ ಮತ್ತು ಪಕ್ಷದ ಮೇಲೆ ಉಂಟಾಗಬಹುದಾದ ಪರಿಣಾಮಗಳ ಬಗ್ಗೆ ಸಮಾಲೋಚನೆ ನಡೆಸಿದ್ದಾರೆ. ಮಾಹಿತಿ ಪಡೆದುಕೊಂಡ ಬಳಿಕ ಹೈಕಮಾಂಡ್ ಈಶ್ವರಪ್ಪ ರಾಜೀನಾಮೆಗೆ ಸೂಚನೆ ಕೊಟ್ಟಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಬುಧವಾರ ಬೆಳಗ್ಗೆ ಹೈಕಮಾಂಡ್ ಜೊತೆ ಸಿಎಂ ಬಸವರಾಜ ಬೊಮ್ಮಾಯಿ ಕೂಡ ಮಾತುಕತೆ ನಡೆಸಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಮೂಲಕ ಹೈಕಮಾಂಡ್ ಗೆ ವಿವರಣೆ ನೀಡಲಾಗಿದೆ. ಈಶ್ವರಪ್ಪ ಅವರಿಂದ ವಿವರಣೆ ಪಡೆದು ಹೈಕಮಾಂಡ್ ಗೆ ರವಾನೆ ಮಾಡಲಾಗಿದೆ. ಈಶ್ವರಪ್ಪ ವಿವರಣೆಗೆ ಹೈಕಮಾಂಡ್ ಗರಂ ಆಗಿದೆ.
ಏನಿದು ಘಟನೆ…?… ಏಕೆ ರಾಜೀನಾಮೆ..?
ಬೆಳಗಾವಿ ತಾಲ್ಲೂಕಿನ ಹಿಂಡಲಗಾ ಗ್ರಾಮದ ಗುತ್ತಿಗೆದಾರ ಮತ್ತು ಬಿಜೆಪಿ ಕಾರ್ಯಕರ್ತರಾಗಿದ್ದ ಸಂತೋಷ್ ಪಾಟೀಲ್ ಮಾಧ್ಯಮ ಪತ್ರಿನಿಧಿಗಳಿಗೆ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಸೋಮವಾರ ತಡರಾತ್ರಿ ವಾಟ್ಸಪ್ ಮೆಸೇಜ್ ಮಾಡಿದ್ದರು. ತಮ್ಮ ವಾಟ್ಸಪ್ ಸಂದೇಶದಲ್ಲಿ ನನ್ನ ಸಾವಿಗೆ ಕೆ.ಎಸ್.ಈಶ್ವರಪ್ಪ ಕಾರಣ ಎಂದು ಉಲ್ಲೇಖಿಸಿದ್ದರು. ಈಶ್ವರಪ್ಪ ಅವರಿಗೆ ಶಿಕ್ಷೆಯಾಗಬೇಕು. ನನ್ನೆಲ್ಲಾ ಆಸೆ ಬದಿಗೊತ್ತಿ ಆತ್ಮಹತ್ಯೆ ನಿರ್ಧಾರ ಮಾಡಿದ್ದೇನೆ. ನನ್ನ ಹೆಂಡತಿ ಮಕ್ಕಳಿಗೆ ಪ್ರಧಾನಿಗಳು, ಮುಖ್ಯಮಂತ್ರಿಗಳು, ಬಿ.ಎಸ್.ಯಡಿಯೂರಪ್ಪ ಸಹಾಯ ಮಾಡಬೇಕೆಂದು ಪತ್ರದಲ್ಲಿ ಉಲ್ಲೇಖಿಸಿದ್ದರು.
ನನ್ನ ಸಾವಿಗೆ ನೇರ ಕಾರಣ ಗ್ರಾಮೀಣ ಅಭಿವೃದ್ಧಿ ಪಂಚಾಯಿತ ರಾಜ್ ಇಲಾಖೆ ಸಚಿವ ಕೆ.ಎಸ್. ಈಶ್ವರಪ್ಪ, ಕರ್ನಾಟಕ ಸರ್ಕಾರ ಇವರಿಗೆ ತಕ್ಕ ಶಿಕ್ಷೆ ಆಗಬೇಕು. ನನ್ನೆಲ್ಲಾ ಆಸೆಗಳನ್ನು ಬದಿಗೋತ್ತಿ ಈ ನಿರ್ಧಾರ ಮಾಡಿರುತ್ತೇನೆ. ನನ್ನ ಹೆಂಡತಿ ಮಗುವಿಗೆ ಸರ್ಕಾರ ಅಂದರೆ ಮಾನ್ಯ ಪ್ರಧಾನ ಮಂತ್ರಿಗಳು ಹಾಗೂ ಮಾನ್ಯ ಮುಖ್ಯ ಮಂತ್ರಿಗಳು ಹಾಗೂ ನಮ್ಮ ಹಿರಿಯ ಲಿಂಗಾಯತ ನಾಯಕರಾದ ಬಿ.ಎಸ್.ಯಡಿಯೂರಪ್ಪನವರು ಹಾಗೆ ಅವರಿವರೆನ್ನದೇ ಎಲ್ಲರು ಸಹಾಯಹಸ್ತ ನೀಡಬೇಕೆಂದು ಕೈ ಮುಗಿದು ಕೇಳಿಕೊಳ್ಳುತ್ತೇನೆ. ಮಾಧ್ಯಮ ಮಿತ್ರರಿಗೆ ಕೋಟಿ ಕೋಟಿ ಧನ್ಯವಾದಗಳು. ನನ್ನ ಜೊತೆ ಬಂದ ನನ್ನ ಗೆಳೆಯರಾದ ಸಂತೋಷ್ ಮತ್ತು ಪ್ರಶಾಂತ್ಗೆ ನಾನು ಪ್ರವಾಸ ಹೋಗೋಣ ಎಂದು ನನ್ನ ಜೊತೆಗೆ ಕರೆದುಕೊಂಡ ಬಂದಿರುತ್ತೇನೆ ಅಷ್ಟೇ. ಅವರಿಗೂ ನನ್ನ ಸಾವಿಗೂ ಯಾವುದೇ ಸಂಬಂಧ ಇರುವುದಿಲ್ಲ ಎಂದಿದ್ದರು.
ಸರ್ಕಾರದ ವಿರುದ್ಧ ಸಿಡಿದೆದ್ದ ಗುತ್ತಿಗೆದಾರರು!
- ಸಂತೋಷ್ ಆತ್ಮಹತ್ಯೆಗೆ ಈಶ್ವರಪ್ಪ ಕಾರಣ: ಗುತ್ತಿಗೆ ದಾರರ ಸಂಘ: 1 ತಿಂಗಳು ಕೆಲಸ ಮಾಡಲ್ಲ..!
- ರಾಜ್ಯದ ಅನೇಕ ಬಿಜೆಪಿ ಸಚಿವರು, ಶಾಸಕರು ಗುತ್ತಿಗೆ ಕಾಂಟ್ರಾಕ್ಟ್ ಪಡೆದು ಗೋಲ್ ಮಾಲ್
- ಭ್ರಷ್ಟಾಚಾರ ಬಯಲು ಮಾಡಿದ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ
NAMMUR EXPRESS NEWS
ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಎಲ್ಲಾ ಕಡೆ ಕಮಿಷನ್ ವಂಚನೆ ಆಗುತ್ತಿದೆ. ಸಿಎಂ ಕಚೇರಿ ಕೂಡ ಭ್ರಷ್ಟಾಚಾರದ ಕೇಂದ್ರವಾಗಿದೆ. ಬಿಜೆಪಿ ಶಾಸಕರು, ಸಚಿವರು ಕೂಡ ಭ್ರಷ್ಟಾಚಾರ ಮಾಡುತ್ತಿದ್ದೂ ಅವರ ಕುಟುಂಬದವರೇ ಟೆಂಡರ್ ಹಿಡಿಯುತ್ತಿದ್ದಾರೆ. 5% ಕೊಡದಿದ್ದರೆ ಟೆಂಡರ್ ಕೊಡಲ್ಲ ಎಂದು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಆರೋಪಿಸಿದ್ದಾರೆ.
ಸಂತೋಷ್ ಪಾಟೀಲ್ ಆತ್ಮಹತ್ಯೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಗುತ್ತಿಗೆದಾರರ ಸಂಘದಿಂದ ಮಹತ್ವದ ಸಭೆ ನಡೆಸಿ ಮಾತನಾಡಿದ ಅವರು, 15 ದಿನಗಳ ಒಳಗೆ ದಾಖಲೆ ಬಿಡುಗಡೆ ಮಾಡಲಾಗುವುದು. 1 ತಿಂಗಳು ಎಲ್ಲಾ ಕಡೆ ಕೆಲಸ ಬಹಿಷ್ಕಾರ ಮಾಡಲಾಗುವುದು ಎಂದು ಎಚ್ಚರಿಸಿದರು.
ಶಿವಮೊಗ್ಗಕ್ಕೆ ಆಗಮಿಸಿದ ಈಶ್ವರಪ್ಪ!:
ಗುತ್ತಿಗೆದಾರ, ಬಿಜೆಪಿ ಕಾರ್ಯಕರ್ತ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಅವರಿಗೆ ಕಂಟಕವಾಗಿ ಪರಿಣಮಿಸುವ ಎಲ್ಲ ಲಕ್ಷಣಗಳೂ ದಟ್ಟವಾಗುತ್ತಿವೆ. ಮೈಸೂರು ಪ್ರವಾಸದಲ್ಲಿದ್ದ ಸಚಿವ ಕೆ.ಎಸ್.ಈಶ್ವರಪ್ಪ ಮೈಸೂರಿನಿಂದ ಬೆಂಗಳೂರಿಗೆ ತೆರಳುತ್ತಾರೆ ಎಂದು ಹೇಳಲಾಗುತ್ತಿತ್ತು. ಆದರೆ ಅವರು ದಿಢೀರನೇ ಮೈಸೂರಿನಿಂದ ಶಿವವೊಗ್ಗಕ್ಕೆ ತೆರಳಿದ್ದು ಕುತೂಹಲ ಮೂಡಿಸಿದೆ. ಅಲ್ಲದೇ ಮಧ್ಯಾಹ್ನ 1 ಗಂಟೆಗೆ ಸಚಿವ ಈಶ್ವರಪ್ಪ ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿ ನಡೆಸಲಿದ್ದಾರೆ. ಈ ಸುದ್ದಿಗೋಷ್ಠಿಯಲ್ಲಿ ಸಚಿವ ಕೆ ಎಸ್ ಈಶ್ವರಪ್ಪ ಏನು ಹೇಳಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.
ರಾಜ್ಯದಲ್ಲಿ ಹೆಚ್ಚಿದ ಹೋರಾಟದ ಕಿಚ್ಚು
ಸಚಿವ ಈಶ್ವರಪ್ಪ ರಾಜೀನಾಮೆಗೆ ಕಾಂಗ್ರೆಸ್ ಪಟ್ಟು ಹಿಡಿದಿದ್ದು ಗುರುವಾರ ಸಿಎಂ ಮನೆ ಘೆರಾವ್ ಹಾಕಲು ಪ್ಲಾನ್ ಸಿದ್ಧತೆ ನಡೆಸಲಾಗಿದೆ. ಅಮಿತ್ ಶಾ ಮನೆಗೆ ದೆಹಲಿಯಲ್ಲಿ ಮುತ್ತಿಗೆ ಹಾಕಲಾಗಿದೆ. ಘಟನೆ ಹಿನ್ನೆಲೆಯಲ್ಲಿ ಸಚಿವ ಈಶ್ವರಪ್ಪ ಅವರ ಮನೆಗೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಗಾಂಧಿ ಭವನದ ರಸ್ತೆಯಲ್ಲಿ ರುವ ಈಶ್ವರಪ್ಪ ಸರ್ಕಾರಿ ನಿವಾಸಕ್ಕೆ ಕಾಂಗ್ರೆಸ್ ಕಾರ್ಯಕರ್ತರಿಂದ ಮುತ್ತಿಗೆ ಸಾಧ್ಯತೆ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಭದ್ರತೆ ಒದಗಿಸಿದ್ದಾರೆ.
ರಾಜ್ಯ ಬಿಜೆಪಿ ಸರ್ಕಾರದ ಸಚಿವರಾದ ಕೆ.ಎಸ್.ಈಶ್ವರಪ್ಪ ವಿರುದ್ಧ 40% ಕಮಿಷನ್ ಆರೋಪ ಮಾಡಿದ್ದ ಬೆಳಗಾವಿ ಮೂಲದ ಗುತ್ತಿಗೆದಾರ ಸಂತೋಷ್ ಪಾಟೀಲ್ ಮಂಗಳವಾರ ಉಡುಪಿಯ ಶಾಂಭವಿ ಲಾಡ್ಜ್ ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.
ಸಂತೋಷ್ ಆತ್ಮಹತ್ಯೆ: ಈಶ್ವರಪ್ಪ ವಿರುದ್ಧ ಕೇಸ್!
- ಉಡುಪಿಯಲ್ಲಿ ಪ್ರಕರಣ ದಾಖಲು: ಮೊದಲ ಆರೋಪಿ
- ಈಶ್ವರಪ್ಪ ವಿರುದ್ಧ ಕುಟುಂಬಸ್ಥರ ಆಕ್ರೋಶ
NAMMUR EXPRESS NEWS
ಉಡುಪಿ: ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಸಚಿವ ಕೆ.ಎಸ್. ಈಶ್ವರಪ್ಪ ವಿರುದ್ಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆತ್ಮಹತ್ಯೆ ಮಾಡಿಕೊಂಡಿರುವ ಸಂತೋಷ್ ಪಾಟೀಲ್ ಸಹೋದರ ಪ್ರಶಾಂತ್ ಅವರು ಉಡುಪಿ ನಗರ ಪೊಲೀಸ್ ಠಾಣೆಗೆ ಮಧ್ಯರಾತ್ರಿ ಆಗಮಿಸಿದ್ದು, ನನ್ನ ತಮ್ಮನ ಸಾವಿಗೆ ಈಶ್ವರಪ್ಪ ಕಾರಣ ಎಂದು ದೂರು ನೀಡಿದ್ದಾರೆ. ಸಾವಿಗೆ ಪ್ರಚೋದನೆ ನೀಡಿದ ಆರೋಪದ ಹಿನ್ನೆಲೆಯಲ್ಲಿ IPC-306, 34ರ ಅಡಿಯಲ್ಲಿ ಸಚಿವ ಕೆ.ಎಸ್.ಈಶ್ವರಪ್ಪ ಹಾಗೂ ಆಪ್ತರಾಗಿರುವ ಬಸವರಾಜ್ ಹಾಗೂ ರಮೇಶ್ ಅವರ ವಿರುದ್ಧ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.
ಗುತ್ತಿಗೆದಾರ ಸಂತೋಷ್ ಪಾಟೀಲ್ ತನ್ನ ಸ್ನೇಹಿತರ ಜೊತೆಗೆ ಉಡುಪಿಗೆ ಪ್ರವಾಸಕ್ಕೆ ಬಂದಿದ್ದು, ಈ ವೇಳೆಯಲ್ಲಿ ನಗರದ ಲಾಡ್ಜ್ ವೊಂದರಲ್ಲಿ ತಂಗಿದ್ದರು. ಲಾಡ್ಜ್ ರೂಂನಲ್ಲಿ ಸಂತೋಷ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೂ ಮುನ್ನ ಸಂತೋಷ್ ಡೆತ್ನೋಟ್ ಬರೆದಿಟ್ಟಿದ್ದು, ಅದರಲ್ಲಿ ತನ್ನ ಸಾವಿಗೆ ಸಚಿವ ಈಶ್ವರಪ್ಪ ಕಾರಣ ಎಂದು ಉಲ್ಲೇಖಿಸಿದ್ದರು. ಇದರ ಬೆನ್ನಲ್ಲೇ ಈಶ್ವರಪ್ಪ ವಿರುದ್ಧ ಕ್ರಮಕೈಗೊಳ್ಳುವಂತೆ ಕಾಂಗ್ರೆಸ್ ಪಟ್ಟು ಹಿಡಿದಿತ್ತು. ಅಲ್ಲದೇ ಸಂತೋಷ್ ಪಾಟೀಲ್ ಪತ್ನಿ ಈಶ್ವರಪ್ಪ ವಿರುದ್ಧವೇ ಗಂಭೀರ ಆರೋಪವನ್ನು ಮಾಡಿದ್ದರು.
ಇದೀಗ ಕುಟುಂಬ ಸದಸ್ಯರು ನೀಡಿದ ದೂರಿನ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿದೆ. ಮಂಗಳೂರಿನಿಂದ ವಿಧಿ ವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು ಉಡುಪಿಗೆ ಆಗಮಿಸಿ ಲಾಡ್ಜ್ನಲ್ಲಿ ಪರಿಶೀಲನೆಯನ್ನು ನಡೆಸಿದ್ದಾರೆ. ಆದರೆ ಸಂತೋಷ್ ಪಾಟೀಲ್ ಪತ್ನಿ ತಾನು ಸ್ಥಳಕ್ಕೆ ಬರುವವರೆಗೂ ಮೃತ ದೇಹವನ್ನು ಸ್ಥಳಾಂತರ ಮಾಡದಿರುವಂತೆ ಪಟ್ಟು ಹಿಡಿದಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಆತ್ಮಹತ್ಯೆ ಮಾಡಿಕೊಂಡಿರುವ ಕೊಠಡಿಗೆ ಭದ್ರತೆ ಒದಗಿಸಿದ್ದಾರೆ.