Categories
ತೀರ್ಥಹಳ್ಳಿ ಮಲ್ನಾಡ್ ಶಿವಮೊಗ್ಗ

ವಿಧಿ ಆಟಕ್ಕೆ ನಾಬಳ ಅಚಲ ಹೆಗ್ಡೆ ಬಲಿ!

ವಿಧಿ ಆಟಕ್ಕೆ ನಾಬಳ ಅಚಲ ಹೆಗ್ಡೆ ಬಲಿ!
– ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಶಚೀಂದ್ರ ಹೆಗ್ಡೆ ಪತ್ನಿ ಕ್ಯಾನ್ಸರ್ ರೋಗದಿಂದ ಸಾವು
– ಏ.1ಕ್ಕೆ ಅಂತ್ಯ ಕ್ರಿಯೆ: ತೀರ್ಥಹಳ್ಳಿಯಲ್ಲಿ ಅಂತಿಮ ದರ್ಶನ

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲ್ಲೂಕಿನ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ, ಹೊನ್ನೇತ್ತಾಳು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ, ಸಮಾಜ ಸೇವಕ ನಾಬಳ ಶಚಿಂದ್ರ ಹೆಗ್ಡೆ ಧರ್ಮಪತ್ನಿ ಅಚಲ ಹೆಗ್ಡೆ (52) ಮಂಗಳವಾರ ಮುಂಜಾನೆ ಅಲ್ಪಕಾಲದ ಅನಾರೋಗ್ಯದಿಂದ ನಿಧನ ಹೊಂದಿದ್ದಾರೆ. ಪತಿ ಸಾಮಾಜಿಕ ಸೇವೆ ಜತೆಗೆ ತಾನೂ ಸಮಾಜದಲ್ಲಿ ಸೇವೆಗೆ ಮೂಡುಪಾಗಿದ್ದರು.ತೀರ್ಥಹಳ್ಳಿ ಕುಶಾವತಿ ಒಕ್ಕಲಿಗರ ಸಂಘದ ಎದುರು ದರ್ಶನಕ್ಕೆ ಅವಕಾಶ ಮಾಡಿ ಕೊಡಲಾಗಿತ್ತು. ಬುಧವಾರ ನಾಬಳದಲ್ಲಿ ಅಂತ್ಯ ಕ್ರಿಯೆ ನಡೆಯಲಿದೆ.

ಶಾಲಾ ಕಾಲೇಜು ದಿನಗಳಲ್ಲಿ ಅತ್ಯುತ್ತಮ ಕೋಕೋ ಆಟಗಾರ್ತಿಯಾಗಿ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಿದ್ದ ಅಚಲ ಅವರು ಕೊಡಚಾದ್ರಿ ಮಹಿಳಾ ಪತ್ತಿನ ಸಹಕಾರ ಸಂಘ, ಅನಘ ಮಹಿಳಾ ಸಹಕಾರ ಸಂಘದ ನಿರ್ದೇಶಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಹಲವು ಸಂಘ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತ ಕ್ರಿಯಾಶೀಲರಾಗಿದ್ದರು.ಅವರು ಪತಿ, ಇಬ್ಬರು ಮಕ್ಕಳು, ಹಾಗೂ ಅಪಾರ ಬಂಧುವರ್ಗವನ್ನು ಅಗಲಿದ್ದಾರೆ. ಅತ್ಯಂತ ಸಜ್ಜನ ಹಾಗೂ ಘನತೆಯ ವ್ಯಕ್ತಿತ್ವದಿಂದ ಎಲ್ಲರ ಗೌರವಕ್ಕೆ ಪಾತ್ರರಾಗಿರುವ ಶಚಿಂದ್ರ ಹೆಗ್ಡೆ ಯವರಿಗೆ ಅನಿರೀಕ್ಷಿತವಾಗಿ ಎರಗಿರುವ ಈ ಅಘಾತಕ್ಕೆ ಅವರ ಆಪ್ತರು, ಹಿತೈಷಿಗಳು, ಬಂಧು ವರ್ಗ ತೀವ್ರ ಸಂತಾಪ ವ್ಯಕ್ತ ಪಡಿಸಿದ್ದು ಮೃತರ ಆತ್ಮಕ್ಕೆ ಚಿರಶಾಂತಿ ಕೋರಿದ್ದಾರೆ.

ಭಾವ ಪೂರ್ಣ ಶ್ರದ್ಧಾoಜಲಿಗಳು

Categories
ತೀರ್ಥಹಳ್ಳಿ ಮಲ್ನಾಡ್ ಶಿವಮೊಗ್ಗ

ತೀರ್ಥಹಳ್ಳಿ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಯಶಸ್ವಿ ಎಂಐಒ ಶಸ್ತ್ರಚಿಕಿತ್ಸೆ

ತೀರ್ಥಹಳ್ಳಿ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಯಶಸ್ವಿ ಎಂಐಒ ಶಸ್ತ್ರಚಿಕಿತ್ಸೆ
– 27 ವರ್ಷದ ಯುವತಿಯೊಬ್ಬರಿಗೆ ವರದಾನವಾದ ಆಸ್ಪತ್ರೆ
– ಹಿರಿಯ ಅಂಕಾಲಜಿಸ್ಟ್ ಆದ ಡಾ.ಸುರೇಶ್ ರಾವ್ ನೇತೃತ್ವದಲ್ಲಿ ಚಿಕಿತ್ಸೆ

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ತೀರ್ಥಹಳ್ಳಿ: 27 ವರ್ಷದ ಯುವತಿಯೊಬ್ಬರಿಗೆ ಕಳೆದ ಎರಡು ತಿಂಗಳಿನಿಂದ ಮಲದಲ್ಲಿ ರಕ್ತ ಹಾಗೂ ಅತಿಯಾದ ಹೊಟ್ಟೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ತೀರ್ಥಹಳ್ಳಿಯ ಗ್ರಾಮೀಣ ಕ್ಯಾನ್ಸರ್ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರೊಂದಿಗೆ ಸಮಾಲೋಚನೆ ನಡೆಸಿದರು. ಇದರಿಂದಾಗಿ ಅವರಿಗೆ ಕ್ಯಾನ್ಸರ್ ಎದುರಾಗಿರುವುದು ದೃಢಪಟ್ಟಿತು. ಯುವತಿಯ ಕೌಟುಂಬಿಕ ಹಿನ್ನೆಲೆಯನ್ನು ಪರಿಶೀಲಿಸಿದಾಗ ತಾಯಿ ರೆಕ್ಟಮ್ ಕ್ಯಾನ್ಸರ್ ನಿಂದ, ಮಾವ ಕೂಡ ರೆಕ್ಟಮ್ ಕ್ಯಾನ್ಸರ್ ನಿಂದ ಸಾವನ್ನಪ್ಪಿದ್ದು, ಮತ್ತೋರ್ವ ಮಾವ ಕೂಡ ಎಂಐಒ ನಲ್ಲಿ ರೆಕ್ಟಮ್ ಕ್ಯಾನ್ಸರ್ ಗೆ ಚಿಕಿತ್ಸೆ ಪಡೆದಿರುವುದು ಬೆಳಕಿಗೆ ಬಂದಿದೆ.

ಇದರಿಂದಾಗಿ ಯುವತಿಯು ತನ್ನ ಭವಿಷ್ಯವನ್ನು ನಿರಾತಂಕಗೊಳಿಸಲು ಮುನ್ನೆಚ್ಚರಿಕೆಯ ಕ್ರಮವಾಗಿ ಶಸ್ತ್ರ ಚಿಕಿತ್ಸೆಗೆ ಒಳಗಾಗಲು ನಿರ್ಧರಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಕೋಲೊನೊಸ್ಕೋಪಿ ಪರೀಕ್ಷೆಯನ್ನು ನಡೆಸಿದ್ದು, ದೊಡ್ಡ ಆಂತ್ರದಲ್ಲಿ ನೂರಕ್ಕಿಂತ ಹೆಚ್ಚು ಪೋಲಿಪ್ ಗಳು ಕಂಡುಬಂದಿದೆ.‌ ಮತ್ತು ದೊಡ್ಡ ಪೊಲಿಪ್ ಗಳಿಂದ ತೆಗೆದ ಬಯಾಪ್ಸಿಯಲ್ಲಿ ಟ್ಯೂಬ್ಯೂಲರ್ ಅಡಿನೋಮಾ ಎನ್ನುವ ಕ್ಯಾನ್ಸರ್ ನ ಪೂರ್ವ ಸ್ಥಿತಿ ಕಂಡು ಬಂದಿದೆ.‌ ಈ ಕಾರಣದಿಂದಾಗಿ ಯುವತಿಯನ್ನು ಶಸ್ತ್ರಚಿಕಿತ್ಸೆಗೆ ಒಳಪಡಿಸಿದ್ದು, ತೀರ್ಥಹಳ್ಳಿಯ ಗ್ರಾಮೀಣ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆದಿದೆ.

ಬಳಿಕ ಯುವತಿಯ ಕುಟುಂಬಕ್ಕೆ ಆರ್ಥಿಕವಾಗಿ ಹೊರೆಯಾಗದಂತೆ ನೋಡಿಕೊಳ್ಳಲು ಸಂಜೀವಿನಿ ಕ್ಯಾನ್ಸರ್ ಸೇವಾ ಟ್ರಸ್ಟ್, ವಾಗ್ದೇವಿ ಚಾರಿಟೇಬಲ್ ಟ್ರಸ್ಟ್, ಓಂಕಾರಂ ಪ್ರತಿಷ್ಠಾನ ಮತ್ತು ಸ್ಥಳೀಯ ದಾನಿಗಳ ನೆರವಿನೊಂದಿಗೆ ಆಕೆಯ ಶಸ್ತ್ರಚಿಕಿತ್ಸೆ, ಪರೀಕ್ಷೆಗಳು, ಆಸ್ಪತ್ರೆವಾಸ ಮತ್ತು ಆಹಾರ, ಸಂಪೂರ್ಣ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಮಂಗಳೂರು ಇನ್ಸ್ಟಿಟ್ಯೂಟ್ ಆಫ್ ಅಂಕಾಲಜಿಯ ನಿರ್ದೇಶಕರು ಹಾಗೂ ಹಿರಿಯ ಅಂಕಾಲಜಿಸ್ಟ್ ಆದ ಡಾ.ಸುರೇಶ್ ರಾವ್ ಅವರು ಯಶಸ್ವಿಯಾಗಿ ಶಸ್ತ್ರಚಿಕಿತ್ಸೆಯನ್ನು ನೆರವೇರಿಸಿದ ತೀರ್ಥಹಳ್ಳಿಯ ಗ್ರಾಮೀಣ ಕ್ಯಾನ್ಸರ್ ಆಸ್ಪತ್ರೆಯ ಅಂಕಾಲಜಿಸ್ಟ್ ಗಳಾದ ಡಾ. ದಿವ್ಯ ಜ್ಯೋತಿ, ಡಾ. ಸುಹಾಸ್ ನವಡ ಮತ್ತು ಅವರ ತಂಡಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.‌

Categories
ಮಾಹಿತಿ ಸುದ್ದಿ ರಾಜ್ಯ ಹಬ್ಬಗಳು

ಅಹಿಂಸೆ, ತ್ಯಾಗದ ಪ್ರತೀಕ ಭಗವಾನ್ ಮಹಾವೀರ

ಅಹಿಂಸೆ, ತ್ಯಾಗದ ಪ್ರತೀಕ ಭಗವಾನ್ ಮಹಾವೀರ
– ಮಹಾವೀರ ಜಯಂತಿಯಂದು ಶಾಂತಿ ಸಂದೇಶ ಸಾರೋಣ

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಜೈನ ಧರ್ಮದ 24ನೇ ಮತ್ತು ಕೊನೆಯ ತೀರ್ಥಂಕರರಾದ ಭಗವಾನ್ ಮಹಾವೀರ ಜಗತ್ತಿಗೆ ಅಹಿಂಸೆ ಮತ್ತು ತ್ಯಾಗದ ಮಹತ್ವವನ್ನು ಸಾರುವ ಮೂಲಕ ದೈವತ್ವಕ್ಕೇರಿದವರು. ಅವರ ಆದರ್ಶಗಳನ್ನು ಎಲ್ಲರೂ ಪಾಲಿಸೋಣ. ಆರನೇ ಶತಮಾನದಲ್ಲಿ ಬಿಹಾರದ ಕುಂಡಲಗ್ರಾಮದಲ್ಲಿ ರಾಜಮನೆತನದ ಸಿದ್ಧಾರ್ಥ ಮತ್ತು ತ್ರಿಶಾಲಾದೇವಿಯ ಮಗನಾಗಿ ಜನಿಸಿದ ಮಹಾವೀರ, ತನ್ನ 30ನೇ ವಯಸ್ಸಿನಲ್ಲಿ ಅಣ್ಣನಾದ ಭರತನ ವಿರುದ್ಧ ಮೂರು ಯುದ್ಧಗಳಲ್ಲಿ ಗೆಲುವು ಸಾಧಿಸಿದರೂ, ರಾಜ್ಯಲಕ್ಷ್ಮೀಯ ಚಂಚಲತೆಯನ್ನು ಅರಿತು, ರಾಜ ವೈಭೋಗವನ್ನು ತ್ಯಜಿಸಿ, ಎಲ್ಲವನ್ನು ಸಹೋದರ ಭರತನಿಗೆ ಬಿಟ್ಟುಕೊಟ್ಟು ದಿಗಂಬರನಾಗಿ ಕಾಡಿನತ್ತ ತೆರಳಿ ಬಾಹುಬಲಿ ಎನಿಸಿಕೊಂಡ.

12 ವರ್ಷಗಳ ಕಾಲ ಕಠಿಣ ತಪಸ್ಸನ್ನು ಆಚರಿಸಿ, ಕೈವಲ್ಯ ಜ್ಞಾನವನ್ನು ಪಡೆದುಕೊಂಡ ಪುಣ್ಯಪುರುಷ.ಈ ಹಿನ್ನೆಲೆಯಲ್ಲಿ ಕರ್ನಾಟಕದ ಪ್ರಸಿದ್ಧ ಜೈನ ಕ್ಷೇತ್ರವಾದ ಶ್ರವಣಬೆಳಗೊಳದಲ್ಲಿ ಹನ್ನೆರಡು ವರ್ಷಗಳಿಗೊಮ್ಮೆ ಮಹಾಮಸ್ತಕಾಭಿಷೇಕ ನಡೆಯುತ್ತದೆ. ತನ್ನ ಕೈವಲ್ಯ ಜ್ಞಾನದ ಮೂಲಕ ಅಹಿಂಸೆ(ಕಾಯ, ವಾಚ ಮತ್ತು ಮನಸ್ಸಿನಿಂದ ಯಾವುದೇ ಜೀವಿಗಳಿಗೆ ಹಿಂಸೆ ಮಾಡದಿರುವುದು) ಸತ್ಯ(ಸತ್ಯವನ್ನು ಮಾತನಾಡುವುದು), ಅಸ್ತೇಯ(ಕಳ್ಳತನ ಮಾಡದಿರುವುದು), ಬ್ರಹ್ಮಚರ್ಯ(ಇಂದ್ರಿಯ ನಿಗ್ರಹ) ಮತ್ತು ಅಪರಿಗ್ರಹ(ಭೌತಿಕ ವಸ್ತುಗಳ ಮೇಲೆ ಆಸೆ/ಸಂಗ್ರಹಣೆ ಇಲ್ಲದಿರುವುದು)ಎನ್ನುವ ಮೂರು ಮುಖ್ಯ ಅಂಶಗಳನ್ನು ಬೋಧಿಸಿದರು.

ಬಿಹಾರದ ಪಾವಪುರಿಯಲ್ಲಿ ತನ್ನ 72ನೇ ವಯಸ್ಸಿಗೆ ದೀಪಾವಳಿಯ ದಿನದಂದು ಮೋಕ್ಷವನ್ನು ಪಡೆದರು. ಈತನ ಅನುಯಾಯಿಗಳನ್ನು ದಿಗಂಬರರು ಎಂದು ಕರೆಯುತ್ತಾರೆ. ಇವರ ಅನುಯಾಯಿಗಳು ಆಚರಿಸುವ ನಿಯಮಗಳು ಬಹುಕಠಿಣವಾಗಿದ್ದು, ಇದರಿಂದಲೇ ಮಹಾವೀರನ ಬದುಕು ಎಷ್ಟು ಕಷ್ಟದಾಯಕವಾಗಿತ್ತು ಎನ್ನುವುದರ ಅರಿವಾಗುತ್ತದೆ.‌ ಈ ಸಂದರ್ಭದಲ್ಲಿ ಮನುಷ್ಯರಾದ ನಾವು ಮಹಾವೀರನ ಬೋಧನೆಗಳನ್ನು ಅಳವಡಿಸಿಕೊಂಡು ಜಗತ್ತಿಗೆ ಶಾಂತಿಯ ಸಂದೇಶ ಸಾರೋಣ.

Categories
ಬೆಂಗಳೂರು ಮಂಗಳೂರು ರಾಜ್ಯ

ಟಾಪ್ ನ್ಯೂಸ್ ನ್ಯೂಸ್ ಕರ್ನಾಟಕ

ಟಾಪ್ ನ್ಯೂಸ್ ನ್ಯೂಸ್ ಕರ್ನಾಟಕ

ದೆವ್ವ ಬಂದಿದೆ ಎಂದು ವಿಮಾನದ ತುರ್ತು ಬಾಗಿಲು ತೆಗೆದವ ಅರೆಸ್ಟ್!
– ಮಂಗಳೂರು: ಕುಕ್ಕರ್ ಬಾಂಬ್ ಪ್ರಕರಣ; ಆರೋಪಿಗೆ ಶಿಕ್ಷೆ
– ರೀಲ್ಸ್ ಮೂಲಕ ಕನ್ನಡಿಗರ ಮನೆಮಾತಾಗಿದ್ದ ಅಜ್ಜಿ ಇನ್ನಿಲ್ಲ
– ಅಪ್ರಾಪ್ತ ಬಾಲಕಿಯರ ಮೇಲಿನ ಅತ್ಯಾಚಾರ; ಬೆಂಗಳೂರಲ್ಲೇ ಹೆಚ್ಚು!

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಬೆಂಗಳೂರು: ಬೆಂಗಳೂರಿನಿಂದ ವಾರಣಾಸಿಗೆ ತೆರಳುತ್ತಿದ್ದ ಇಂಡಿಗೋ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬ, ವಿಮಾನದ ತುರ್ತು ನಿರ್ಗಮನದ ದ್ವಾರವನ್ನು ಎರಡು ಬಾರಿ ತೆರೆಯಲು ಯತ್ನಿಸಿದ ಘಟನೆ ಶನಿವಾರ ರಾತ್ರಿ ನಡೆದಿದೆ ನಡೆದಿದೆ. ರಾತ್ರಿ 8:15ಕ್ಕೆ ಬೆಂಗಳೂರಿನಿಂದ ವಾರಣಾಸಿಗೆ ಹೊರಟಿದ್ದ ವಿಮಾನದಲ್ಲಿ, ಟೇಕಾಫ್ ಆದ ಹದಿನೈದು ನಿಮಿಷಕ್ಕೇ ವ್ಯಕ್ತಿಯೊಬ್ಬ ತುರ್ತು ನಿರ್ಗಮನದ ದ್ವಾರವನ್ನು ತೆರೆಯಲು ಪ್ರಯತ್ನಿಸಿದ್ದಾನೆ.

ಇದಕ್ಕೆ ಸಂಬಂಧಿಸಿದಂತೆ ವ್ಯಕ್ತಿಯನ್ನು ಪ್ರಶ್ನಿಸಿದಾಗ ಆತ ‘ನನ್ನ ಮೈ ಮೇಲೆ ದೆವ್ವ ಬಂದಿದೆ’ಎನ್ನುವಂತಹ ವಿಚಿತ್ರ ರೀತಿಯಲ್ಲಿ ಉತ್ತರ ನೀಡಿದ್ದಾನೆ ಎನ್ನಲಾಗಿದೆ. ವ್ಯಕ್ತಿಯನ್ನು ಉತ್ತರ ಪ್ರದೇಶದ ಮೌ ಜಿಲ್ಲೆಯ ಮೊಹಮ್ಮದ್ ಅದ್ನಾನ್ ಎಂದು ಗುರುತಿಸಲಾಗಿದೆ. ವಾರಣಾಸಿಯಲ್ಲಿ ವಿಮಾನವು ಭೂಸ್ಪರ್ಶ ಮಾಡುತ್ತಿದ್ದಂತೆ ಪೊಲೀಸರು ಆತನನ್ನು ಬಂಧಿಸಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ.

• ಮಂಗಳೂರು: ಕುಕ್ಕರ್ ಬಾಂಬ್ ಪ್ರಕರಣ; ಆರೋಪಿಗೆ ಶಿಕ್ಷೆ?

ಮಂಗಳೂರು: ಕದ್ರಿ, ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಾಲಯ ಸೇರಿದಂತೆ ದಕ್ಷಿಣ ಭಾರತದ ಪ್ರಮುಖ ದೇವಾಲಯಗಳಲ್ಲಿ ಬಾಂಬ್ ಸ್ಪೋಟಿಸುವುದಾಗಿ ಭಯದ ವಾತಾವರಣ ಸೃಷ್ಟಿಸಿ, ಕುಕ್ಕರ್ ಬಾಂಬ್ ಸ್ಪೋಟಿಸಿದ್ದ ಆರೋಪಿ ಮೊಹಮ್ಮದ್ ಶಾರೀಕ್ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು 170 ಮಂದಿಯ ಸಾಕ್ಷಿಗಳ ಹೇಳಿಕೆಯನ್ನು ಉಲ್ಲೇಖಿಸಿ ಶಾರೀಕ್ ವಿರುದ್ಧ ಆರೋಪ ಪಟ್ಟಿಯನ್ನು ಸಲ್ಲಿಸಿದ್ದು, ಈಗಾಗಲೇ 46ಕ್ಕೂ ಹೆಚ್ಚು ಸಾಕ್ಷಿಗಳ ವಿಚಾರಣೆಯನ್ನು ನಡೆಸಲಾಗಿದೆ. ಇದರ ನಡುವೆ ಶಾರೀಕ್ ಅಧಿಕಾರಿಗಳು ತನ್ನ ವಿರುದ್ಧ ಸಲ್ಲಿಸಿರುವ ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಿರುವ ಆರೋಪವನ್ನು ತಾನು ಒಪ್ಪಿಕೊಳ್ಳುತ್ತೇನೆ ಎಂದು ಡಿಸೆಂಬರ್ ತಿಂಗಳಿನಲ್ಲಿಯೇ ಅರ್ಜಿ ಸಲ್ಲಿಸಿದ್ದ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಮೂರು ತಿಂಗಳುಗಳ ಕಾಲ ವಿಚಾರಣೆ ನಡೆಸಿರುವ ನ್ಯಾಯಾಲಯವು ಏಪ್ರಿಲ್ 10ರಂದು ಶಿಕ್ಷೆಯ ಪ್ರಮಾಣವನ್ನು ಪ್ರಕಟಪಡಿಸುತ್ತದೆ ಎನ್ನುವ ಸಂಗತಿ ತಿಳಿದುಬಂದಿದೆ.

ರೀಲ್ಸ್ ಮೂಲಕ ಕನ್ನಡಿಗರ ಮನೆಮಾತಾಗಿದ್ದ ಅಜ್ಜಿ ಇನ್ನಿಲ್ಲ

ಯಲ್ಲಾಪುರ: ಸಾಮಾಜಿಕ ಜಾಲತಾಣಗಳನ್ನು ಬಳಸುವುದು, ಅದರಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳುವುದು ಬಹುತೇಕ ಇಂದಿನ ಯುವಜನರ ಒಂದು ಹವ್ಯಾಸ. ಆದರೆ, ತಮ್ಮ 9೦ನೇ ವಯಸ್ಸಿನಲ್ಲಿ ರೀಲ್ಸ್ ಗಳನ್ನು ಮಾಡುವ ಮೂಲಕ ದೇಶದ ಅತ್ಯಂತ ಹಿರಿಯ ಸೋಶಿಯಲ್ ಮೀಡಿಯಾ ಇನ್ಫ್ಲೂಯೆನ್ಸರ್ ಎನ್ನುವ ಖ್ಯಾತಿ ಪಡೆದಿದ್ದ ಲಕ್ಷ್ಮೀ ಮಾಸ್ತಪ್ಪ ನಾಯ್ಕ ಅವರು ವಯೋಸಹಜವಾಗಿ ಸಾವನ್ನಪ್ಪಿದ್ದಾರೆ. ಸೂರಜ್ ಆಚಾರಿ ಅವರ ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲಿ ರೀಲ್ಸ್ ಮಾಡುವ ಮೂಲಕ ಲಕ್ಷಾಂತರ ಅನುಯಾಯಿಗಳ ಮನಗೆದ್ದಿದ್ದರು. ತಮ್ಮ ಮುಗ್ದತೆಯ ಅಭಿನಯದ ಮೂಲಕ ಕನ್ನಡಿಗರನ್ನು ನಗಿಸುತ್ತಿದ್ದ ಲಕ್ಷ್ಮೀ ಅಜ್ಜಿಯ ಅಗಲಿಕೆಗೆ ರೀಲ್ಸ್ ಪ್ರಿಯರು ವಿಷಾದ ವ್ಯಕ್ತಪಡಿಸಿದ್ದಾರೆ.

ಅಪ್ರಾಪ್ತ ಬಾಲಕಿಯರ ಮೇಲಿನ ಅತ್ಯಾಚಾರ; ಬೆಂಗಳೂರಲ್ಲೇ ಹೆಚ್ಚು!

ಬೆಂಗಳೂರು: 14 ರಿಂದ 18 ವರ್ಷದ ಒಳಗಿನ ಬಾಲಕಿಯರ ಮೇಲಿನ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಸರ್ವೆಯೊಂದು ನಡೆದಿದ್ದು, ಇದರ ಪರಿಣಾಮವಾಗಿ ಅತಿ ಚಿಕ್ಕ ವಯಸ್ಸಿನಲ್ಲಿಯೇ ಗರ್ಭಿಣಿಯಾದ ಬಾಲಕಿಯರ ಸಂಖ್ಯೆ 5975 ಎನ್ನುವುದು ಬೆಳಕಿಗೆ ಬಂದಿದೆ. ಈ ವಿಚಾರದಲ್ಲಿ ಕರ್ನಾಟಕದ ರಾಜಧಾನಿ, ಉದ್ಯಾನನಗರಿ, ಸಿಲಿಕಾನ್ ಸಿಟಿ ಎನ್ನುವ ಖ್ಯಾತಿಗೆ ಒಳಗಾಗಿರುವ ಬೆಂಗಳೂರು ಮೊದಲ ಸ್ಥಾನದಲ್ಲಿರುವುದು ದುರಂತ. ಇದರ ಕುರಿತು ಮಕ್ಕಳ ರಕ್ಷಣಾ ನೀತಿ 2023ರ ಅನ್ವಯ ಎಲ್ಲಾ ಶಾಲಾ ಕಾಲೇಜುಗಳಲ್ಲಿ ಅರಿವು ಮೂಡಿಸಲಾಗುತ್ತಿದೆ. ಅಲ್ಲದೆ ಮಕ್ಕಳ ಪಾಲನಾ ಕೇಂದ್ರಗಳಲ್ಲಿ ದಾಖಲಾಗುವ ಬಾಲ ಗರ್ಭಿಣಿಯರು, ಬಾಲ ತಾಯಂದಿರು ಮತ್ತು ನವಜಾತ ಶಿಶುಗಳಿಗೆ ಸಂಬಂಧಿಸಿದಂತೆ ಪಾಲಿಸಬೇಕಾದ ಕ್ರಮಬದ್ಧ ಕಾರ್ಯವಿಧಾನವನ್ನು ಕೂಡ ಹೊರಡಿಸಲಾಗಿದೆ.

ಈ ಹಿನ್ನೆಲೆಯಲ್ಲಿ ರಾಜ್ಯದ ಶಾಲಾ- ಕಾಲೇಜು, ವಸತಿ ನಿಲಯ ಮತ್ತು ತರಬೇತಿ ಸಂಸ್ಥೆಗಳಲ್ಲಿ ಮಕ್ಕಳ ಹಕ್ಕುಗಳು, ಬಾಲ್ಯವಿವಾಹ, ಬಾಲಗರ್ಭಿಣಿ, ಮಕ್ಕಳ ಸಹಾಯವಾಣಿ-1098 ಪೋಕ್ಸೋ ಕಾಯ್ದೆ ಕುರಿತು ಅರಿವು ಮೂಡಿಸಲು ವಿವಿಧ ಇಲಾಖೆಗಳು ನಿಗಾವಹಿಸಬೇಕೆಂದು ಆದ್ಯತೆಯ ಅಂಶಗಳ ಕುರಿತು ಏಳು ಇಲಾಖೆಗಳಿಂದ ಸುತ್ತೋಲೆಯನ್ನು ಹೊರಡಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಎಲ್ಲಾ ಜಿಲ್ಲಾ ಮತ್ತು ತಾಲ್ಲೂಕು ಹಂತಗಳಲ್ಲಿ ಸಾಮರ್ಥ್ಯಾಭಿವೃದ್ಧಿ ತರಬೇತಿಯನ್ನು ನೀಡಲು ಎಲ್ಲಾ ಭಾಗಿದಾರ ಇಲಾಖೆಗಳ ಅಧಿಕಾರಿಗಳನ್ನು, ಸಿಬ್ಬಂದಿಗಳನ್ನು ಯೋಜಿಸಲಾಗುತ್ತಿದೆ ಎನ್ನುವ ಮಾಹಿತಿ ಮೂಲಗಳಿಂದ ಲಭಿಸಿದೆ.

Categories
ಕರಾವಳಿ ಬೆಳ್ತಂಗಡಿ ಮಂಗಳೂರು

ಟಾಪ್ ನ್ಯೂಸ್ ಕರಾವಳಿ

ಟಾಪ್ ನ್ಯೂಸ್ ಕರಾವಳಿ

ತಿಂಡಿ ಜತೆಗೆ ವಿಷ ಸೇವಿಸಿದ್ದ ಉದ್ಯಮಿ ಆತ್ಮಹತ್ಯೆ!
– ಬೆಳ್ತಂಗಡಿ: ಭಾರಿ ಗಾಳಿ ಮಳೆಗೆ ಕುಸಿದು ಬಿದ್ದ ಕೋಳಿ ಫಾರ್ಮ್
– ಬೈಂದೂರು: ಅಪಘಾತಕ್ಕೆ ಒಂದೇ ಕುಟುಂಬದ ಇಬ್ಬರು ಬಲಿ!

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಬೆಳ್ತಂಗಡಿ: ಕಳೆದ ತಿಂಗಳು ಮದುವೆಯಾಗಿದ್ದ ವಿವಾಹಿತ ಉದ್ಯಮಿ ಮಾ.17ರಂದು ತಿಂಡಿಯ ಜೊತೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಜೀವನ್ಮರಣ ಹೊರಟದಲ್ಲಿದ್ದವನು ಚಿಕಿತ್ಸೆ ಫಲಿಸದೆ ಮಾ.29 ರಂದು ಬೆಳಗ್ಗೆ ಸಾವನ್ನಪ್ಪಿದ ಘಟನೆ ನಡೆದಿದೆ. ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮದ ಕರ್ನೋಡಿಯಲ್ಲಿ ಅಜ್ಜನ ಮನೆಯಲ್ಲಿ ವಾಸವಾಗಿದ್ದ ಮೂಲತಃ ಪುತ್ತೂರು ತಾಲೂಕಿನ ನೆಲ್ಯಾಡಿ ನಿವಾಸಿ ಬಿ.ಸುದೀಪ್ ರೈ (36) ಪುತ್ತೂರು ಸಬ್ ರಿಜಿಸ್ಟರ್ ಕಚೇರಿಯಲ್ಲಿ ಕಾರ್ಕಳ ತಾಲೂಕಿನ ಕಜೆ ನಿವಾಸಿ ಸೌಮ್ಯ ಶೆಟ್ಟಿ(28) ಜೊತೆ ಮನೆಮಂದಿಗೆ ಹೇಳದೆ ಫೆ.17 ರಂದು ವಿವಾಹ ನೊಂದಣಿ ಮಾಡಿಸಿಕೊಂಡದ್ದರು ಎನ್ನಲಾಗಿದೆ.

ಅತ್ಮಹತ್ಯೆ ಮಾಡಿಕೊಂಡ ಸುದೀಪ್ ಕಳೆದ ಕೆಲವು ವರ್ಷಗಳಿಂದ ಬೆಳ್ತಂಗಡಿ ತಾಲೂಕಿನಲ್ಲಿ SRN ಗ್ರೂಪ್ ಹೆಸರಿನಲ್ಲಿ ಎಲೆಕ್ಟ್ರಾನಿಕ್ ಹಾಗೂ ಸೋಲಾರ್ ಉದ್ಯಮವನ್ನು ಮಾಡಿಕೊಂಡಿದ್ದರು. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಪೊಲೀಸರ ತನಿಖೆಯಿಂದ ಕಾರಣ ಬಯಲಾಗಬೇಕಿದೆ. ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಉದ್ಯಮಿಯ ತಂದೆ ದಾಮೋದರ ರೈ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

•ಬೆಳ್ತಂಗಡಿ: ಭಾರಿ ಗಾಳಿ ಮಳೆಗೆ ಕುಸಿದು ಬಿದ್ದ ಕೋಳಿ ಫಾರ್ಮ್

ಬೆಳ್ತಂಗಡಿ: ಬಿರುಗಾಳಿ ಸಹಿತ ಸುರಿದ ಭಾರಿ ಮಳೆಗೆ ಕೋಳಿ ಫಾರ್ಮ್ ಕುಸಿದು ಬಿದ್ದಿರುವ ಘಟನೆ, ಪಡಂಗಡಿ ಗ್ರಾಮದಲ್ಲಿ ನಡೆದಿದೆ. ತುಂಗಮ್ಮ ಶೆಟ್ಟಿ ಎನ್ನುವವರಿಗೆ ಸೇರಿದ ಕೋಳಿ ಫಾರ್ಮ್ ಗಾಳಿಯ ರಭಸಕ್ಕೆ ಸಂಪೂರ್ಣ ನೆಲಸಮವಾಗಿದೆ. ಇದರಿಂದಾಗಿ ಸಾಕಷ್ಟು ಕೋಳಿಗಳು ಸಾವನ್ನಪ್ಪಿದ್ದು, ಕೆಲವು ಕೋಳಿಗಳು ಗಾಯಗೊಂಡಿದ್ದು, ಲಕ್ಷಾಂತರ ರೂಪಾಯಿ ನಷ್ಟವಾಗಿದೆ ಎನ್ನಲಾಗಿದೆ.

• ಬೈಂದೂರು: ಕಂಟೈನರ್ ಕಾರು ಡಿಕ್ಕಿ; ಕುಟುಂಬಕ್ಕೆ ಆಘಾತ

ಬೈಂದೂರು: ಒಂದೇ ಕುಟುಂಬದ ಸದಸ್ಯರು ಪ್ರವಾಸಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ, ಕುಟುಂಬಸ್ಥರು ಪ್ರಯಾಣಿಸುತ್ತಿದ್ದ ಕಾರು ನಿಂತಿದ್ದ ಕಂಟೈನರ್ ಗೆ ಢಿಕ್ಕಿ ಹೊಡೆದಿರುವ ಘಟನೆ, ನಾವುಂದ ಬಳಿ ಭಾನುವಾರದಂದು ನಡೆದಿದೆ. ಪರಿಣಾಮವಾಗಿ ತಾಯಿ ಮತ್ತು ಓರ್ವ ಮಗಳು ಸ್ಥಳದಲ್ಲೇ ಮೃತಪಟ್ಟಿದ್ದು, ಪತಿ, ಇಬ್ಬರು ಮಕ್ಕಳು ಹಾಗೂ ಕಾರು ಚಾಲಕನಿಗೆ ಗಂಭೀರವಾಗಿ ಗಾಯಗಳಾಗಿವೆ ಎನ್ನಲಾಗಿದೆ. ಮೃತಪಟ್ಟವರನ್ನು ಮಮತಾ ಹಾಗೂ ಅವರ ಮಗಳು ಧೃತಿಕಾ ಎಂದು ಗುರುತಿಸಲಾಗಿದೆ. ಗಾಯಾಳುಗಳಾದ ತಂದೆ ಮತ್ತು ಇಬ್ಬರು ಮಕ್ಕಳಿಗೆ ಕುಂದಾಪುರದ ಖಾಸಗಿ ಆಸ್ಪತ್ರೆಗೆ ಹಾಗೂ ಕಾರು ಚಾಲಕನನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎನ್ನುವ ಮಾಹಿತಿ ಲಭಿಸಿದೆ. ಮೂಲತಃ ಬೆಂಗಳೂರಿನವರಾದ ಇವರು ಪ್ರವಾಸಕ್ಕೆಂದು ಆಗಮಿಸಿದ್ದು ಉಡುಪಿ ಜಿಲ್ಲೆಯ ಹಲವಾರು ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡಿ, ನಂತರ ಮುರುಡೇಶ್ವರ ಮತ್ತು ಗೋಕರ್ಣ ಕ್ಷೇತ್ರಕ್ಕೆ ತೆರಳಲು ಬೈಂದೂರು ಮಾರ್ಗವಾಗಿ ಪ್ರಯಾಣಿಸುತ್ತಿದ್ದರು ಎನ್ನುವ ಸಂಗತಿ ತಿಳಿದುಬಂದಿದೆ.

Categories
ಹವಾಮಾನ ಸುದ್ದಿ

ಬಂಗಾಳಕೊಲ್ಲಿ ವಾಯುಭಾರ ಕುಸಿತ: ಭಾರೀ ಮಳೆ!

ಬಂಗಾಳಕೊಲ್ಲಿ ವಾಯುಭಾರ ಕುಸಿತ: ಭಾರೀ ಮಳೆ!
– 2 ದಿನ ಭಾರೀ ಮಳೆ ಅಲರ್ಟ್: ಗುಡುಗು ಮಿಂಚು ಸಾಧ್ಯತೆ
– ಕೃಷಿ ಚಟುವಟಿಕೆಗೆ ಭಾರೀ ಹಾನಿ: ಜನ ಜೀವನ ಅಸ್ತವ್ಯಸ್ತ

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಬಂಗಾಳಕೊಲ್ಲಿ ಮತ್ತು ಅರಬ್ಬಿ ಸಮುದ್ರದ ಹವಾಮಾನ ವೈಪರಿತ್ಯದ ಪರಿಣಾಮ ಕರ್ನಾಟಕದ 14 ಜಿಲ್ಲೆಗಳಲ್ಲಿ ಮುಂದಿನ ಎರಡು ದಿನ ಭಾರೀ ಮಳೆ, ಗಾಳಿ ಹಾಗೂ ಗುಡುಗು ಮಿಂಚಿನ ಮುನ್ಸೂಚನೆ ನೀಡಲಾಗಿದೆ. ಬಂಗಾಳಕೊಲ್ಲಿ ಹಾಗೂ ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ಹವಾಮಾನ ವೈಪರಿತ್ಯ ಪರಿಣಾಮವಾಗಿ ಕರ್ನಾಟಕದಲ್ಲಿ ಮಳೆಯ ಚಟುವಟಿಕೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮುಂದಿನ ಎರಡು ದಿನಗಳ ಕಾಲ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ.

ಹವಾಮಾನ ವೈಪರಿತ್ಯದ ಕಾರಣ ಬಂಗಾಳಕೊಲ್ಲಿ ಮತ್ತು ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ಪ್ರತ್ಯಾವರ್ತ ಮಾರುತಗಳು ರಾಜ್ಯದ ವಾತಾವರಣದಲ್ಲಿ ಅಸ್ಥಿರತೆ ಉಂಟುಮಾಡಿವೆ. ಇದರ ಪರಿಣಾಮವಾಗಿ ವಾಯುಭಾರ ಕುಸಿತ ನಿರ್ಮಾಣವಾಗಿ ಮಳೆಯ ಸಾಧ್ಯತೆ ಹೆಚ್ಚಾಗಿದೆ. ಈಗಾಗಲೇ ದಕ್ಷಿಣ ಕನ್ನಡ, ಉಡುಪಿ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಮಳೆಯಾಗಿದೆ. ಇದರ ಜೊತೆಗೆ ಬೆಂಗಳೂರು ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಹಗುರ ಮಳೆಯ ಅನುಭವವಾಗಿದೆ. ಶಿವಮೊಗ್ಗ ಚಿಕ್ಕಮಗಳೂರು, ಹಾಸನ, ಚಾಮರಾಜನಗರ, ಮೈಸೂರು ಹಾಗೂ ಬೆಂಗಳೂರು ಜಿಲ್ಲೆಗಳಲ್ಲಿ 30ರಿಂದ 40 ಕಿ.ಮೀ. ವೇಗದ ಗಾಳಿ ಬೀಸುವ ಸಾಧ್ಯತೆ ಇದೆ. ಈ ಪ್ರದೇಶಗಳಲ್ಲಿ ಹಗುರದಿಂದ ಸಾಧಾರಣ ಮಳೆಯ ನಿರೀಕ್ಷೆಯಿದೆ.

ಮಾರ್ಚ್ 31ರ ಮುನ್ಸೂಚನೆ: ಮಾರ್ಚ್ 31ರಂದು ಶಿವಮೊಗ್ಗ, ಹಾಸನ, ಕೊಡಗು, ಚಿಕ್ಕಮಗಳೂರು, ಮೈಸೂರು ಹಾಗೂ ಬೆಂಗಳೂರು ಜಿಲ್ಲೆಯ ಕೆಲ ಭಾಗಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ. ವಿಶೇಷವಾಗಿ ಮಲೆನಾಡು ಪ್ರದೇಶಗಳಲ್ಲಿ ಮಳೆಯ ಪ್ರಮಾಣ ಹೆಚ್ಚು ಇರಬಹುದು. ಕೃಷಿ ಮೇಲೆ ಪರಿಣಾಮ ಈ ಮಳೆಯು ಕೃಷಿ ಚಟುವಟಿಕೆಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ರೈತರು ಬೆಳೆ ರಕ್ಷಣೆಗೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು.

ಭಾರೀ ಗುಡುಗು ಮಿಂಚು ಸಾಧ್ಯತೆ!

ಗುಡುಗು-ಮಿಂಚು ಸಂಭವಿಸುವ ಸಾಧ್ಯತೆ ಇರುವುದರಿಂದ ಹೊರಗಡೆ ಹೆಚ್ಚು ಸಮಯ ಉಳಿಯಬೇಡಿ. ಮರಗಳ ಕೆಳಗೆ ನಿಲ್ಲಬೇಡಿ. ವಿದ್ಯುತ್ ಸಾಧನಗಳಿಂದ ದೂರವಿರಿ. ಒಣಹವಾಮಾನ ಇರುವ ಪ್ರದೇಶಗಳು ಉತ್ತರ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಒಣಹವಾಮಾನ ಮುಂದುವರಿಯುವ ಸಾಧ್ಯತೆ ಇದೆ. ಹೀಗಾಗಿ ರಾಜ್ಯದಲ್ಲಿ ಮಿಶ್ರ ಹವಾಮಾನ ಕಾಣಿಸಿಕೊಳ್ಳಲಿದೆ. ಬಂಗಾಳಕೊಲ್ಲಿಯ ಹವಾಮಾನ ಬದಲಾವಣೆ ರಾಜ್ಯದ ಹಲವೆಡೆ ಮಳೆಯ ವಾತಾವರಣವನ್ನು ಉಂಟುಮಾಡಿದ್ದು, ಮುಂದಿನ ಎರಡು ದಿನಗಳು ಜನರು ಎಚ್ಚರಿಕೆಯಿಂದ ಇರುವಂತೆ ಹವಾಮಾನ ಇಲಾಖೆ ಸೂಚಿಸಿದೆ.

Categories
ಕೊಪ್ಪ ತೀರ್ಥಹಳ್ಳಿ ಮಂಗಳೂರು ಶಿವಮೊಗ್ಗ

ಟಾಪ್ ನ್ಯೂಸ್ ನ್ಯೂಸ್ ಮಲ್ನಾಡ್

ಟಾಪ್ ನ್ಯೂಸ್ ನ್ಯೂಸ್ ಮಲ್ನಾಡ್

ಮಂಗಳೂರು: ಕುಕ್ಕರ್ ಬಾಂಬ್ ಕೇಸ್: ಏ.10ರಂದು ಶಿಕ್ಷೆ ಪ್ರಕಟ!
ಶಿವಮೊಗ್ಗ: ಸುಟ್ಟ ಸ್ಥಿತಿಯಲ್ಲಿ ಮೃತದೇಹ ಪತ್ತೆ: ಕೊಲೆ ಶಂಕೆ!
ತೀರ್ಥಹಳ್ಳಿ: ಅನುಮಾನ ಹುಟ್ಟಿಸಿದ ವೃದ್ಧೆಯ ನಡತೆ!
ಕೊಪ್ಪ: ಮತ್ತೊಂದು ಹಿಟ್ ಆ್ಯಂಡ್ ರನ್: ಮಣಿಪಾಲ ದಾಖಲು

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಶಿವಮೊಗ್ಗ: ಶಿವಮೊಗ್ಗದ ಖಾಸಗಿ ಕಾಲೇಜೊಂದರಲ್ಲಿ ಸೇವೆ ಸಲ್ಲಿಸುತ್ತಿದ್ದ ಉಪನ್ಯಾಸಕರೊಬ್ಬರು ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ ಭದ್ರಾವತಿ ಮತ್ತು ಹೊಳೆಹೊನ್ನೂರು ಸಮೀಪದ ಹನುಮಂತಾಪುರ ಗ್ರಾಮದಲ್ಲಿ ನಡೆದಿದೆ.‌ ತಮ್ಮದೇ ತೋಟದ ಮಧ್ಯೆ, ಬೆಂಕಿ ಹೊತ್ತಿ ಉರಿದಿರುವ ಸ್ಥಿತಿಯಲ್ಲಿ ಉಪನ್ಯಾಸಕರಾದ ಸುರೇಶ್ ಅವರ ಶವ ಪತ್ತೆಯಾಗಿರುವುದು ಆಘಾತಕಾರಿಯಾಗಿದೆ. ಶನಿವಾರದಂದು ಮದುವೆಗೆ ಹೋಗುತ್ತೇನೆ ಎಂದು ಹೇಳಿ ಹೋಗಿದ್ದ ಸುರೇಶ್ ಅವರು, ಭಾನುವಾರ ಬೆಳಿಗ್ಗೆ ತೋಟದಲ್ಲಿ ಈ ರೀತಿ ಪತ್ತೆಯಾಗಿದ್ದಾರೆ.‌

ಆಗಲೂ ಕೂಡ ಶವವು ಉರಿಯುತ್ತಿದ್ದು, ಸುತ್ತಮುತ್ತಲಿನ ಗರಿಗಳು ಕೂಡ ಬೆಂಕಿಯಿಂದ ಉರಿಯುತ್ತಿತ್ತು ಎನ್ನಲಾಗಿದೆ. ಮಾಹಿತಿ ಲಭಿಸುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಹೊಳೆಹೊನ್ನೂರು ಠಾಣೆಯ ಪೊಲೀಸರು ಪರಿಶೀಲನೆಯನ್ನು ನಡೆಸಿದ್ದಾರೆ.‌ ಸುರೇಶ್ ಅವರ ಸಾವು ಕೊಲೆಯೇ ಅಥವಾ ಆತ್ಮಹತ್ಯೆಯೇ ಎನ್ನುವುದು ಸಂದೇಹವನ್ನು ಉಂಟು ಮಾಡಿದ್ದು, ಪೊಲೀಸರು ಈ ವಿಚಾರವಾಗಿ ತನಿಖೆಯನ್ನು ಪ್ರಾರಂಭಿಸಿದ್ದಾರೆ. ಶವವು ಸಂಪೂರ್ಣವಾಗಿ ಸುಟ್ಟು ಕರಕಲಾಗಿರುವ ಕಾರಣದಿಂದ ತಜ್ಞವೈದ್ಯರಿಂದ ಶವಪರೀಕ್ಷೆ ನಡೆಸಲು ಪೊಲೀಸರು ನಿರ್ಧರಿಸಿದ್ದಾರೆ.‌

• ಮಂಗಳೂರು: ಕುಕ್ಕರ್ ಬಾಂಬ್ ಪ್ರಕರಣ; ಆರೋಪಿ ತಪ್ಪೊಪ್ಪಿಗೆ

ಮಂಗಳೂರು: ಕದ್ರಿ, ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಾಲಯ ಸೇರಿದಂತೆ ದಕ್ಷಿಣ ಭಾರತದ ಪ್ರಮುಖ ದೇವಾಲಯಗಳಲ್ಲಿ ಬಾಂಬ್ ಸ್ಪೋಟಿಸುವುದಾಗಿ ಭಯದ ವಾತಾವರಣ ಸೃಷ್ಟಿಸಿ, ಕುಕ್ಕರ್ ಬಾಂಬ್ ಸ್ಪೋಟಿಸಿದ್ದ ಆರೋಪಿ ಮೊಹಮ್ಮದ್ ಶಾರೀಕ್ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು 170 ಮಂದಿಯ ಸಾಕ್ಷಿಗಳ ಹೇಳಿಕೆಯನ್ನು ಉಲ್ಲೇಖಿಸಿ ಶಾರೀಕ್ ವಿರುದ್ಧ ಆರೋಪ ಪಟ್ಟಿಯನ್ನು ಸಲ್ಲಿಸಿದ್ದು, ಈಗಾಗಲೇ 46ಕ್ಕೂ ಹೆಚ್ಚು ಸಾಕ್ಷಿಗಳ ವಿಚಾರಣೆಯನ್ನು ನಡೆಸಲಾಗಿದೆ.

ಇದರ ನಡುವೆ ಶಾರೀಕ್ ಅಧಿಕಾರಿಗಳು ತನ್ನ ವಿರುದ್ಧ ಸಲ್ಲಿಸಿರುವ ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಿರುವ ಆರೋಪವನ್ನು ತಾನು ಒಪ್ಪಿಕೊಳ್ಳುತ್ತೇನೆ ಎಂದು ಡಿಸೆಂಬರ್ ತಿಂಗಳಿನಲ್ಲಿಯೇ ಅರ್ಜಿ ಸಲ್ಲಿಸಿದ್ದ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಮೂರು ತಿಂಗಳುಗಳ ಕಾಲ ವಿಚಾರಣೆ ನಡೆಸಿರುವ ನ್ಯಾಯಾಲಯವು ಏಪ್ರಿಲ್ 10ರಂದು ಶಿಕ್ಷೆಯ ಪ್ರಮಾಣವನ್ನು ಪ್ರಕಟಪಡಿಸುತ್ತದೆ ಎನ್ನುವ ಸಂಗತಿ ತಿಳಿದುಬಂದಿದೆ.

•ತೀರ್ಥಹಳ್ಳಿ: ಅನುಮಾನ ಹುಟ್ಟಿಸಿದ ವೃದ್ಧೆಯ ನಡತೆ

ತೀರ್ಥಹಳ್ಳಿ: ದೇವಂಗಿಯ ನಿವಾಸಿಯಾದ 90 ವರ್ಷದ ಲಕ್ಷ್ಮೀದೇವಿ ಅವರು ಶಿವಮೊಗ್ಗದಲ್ಲಿದ್ದ ತಮ್ಮ ಮಗಳ ಮನೆಯಿಂದ ಆಸ್ಪತ್ರೆಗೆ ಹೋಗುತ್ತೇನೆಂದು ತಿಳಿಸಿ ಬಂದಿದ್ದು ತೀರ್ಥಹಳ್ಳಿಯ ತುಂಗಾ ಸೇತುವೆಯ ಹತ್ತಿರ ಓಡಾಡುತ್ತಿದ್ದು, ಆಕೆ ಆತ್ಮಹತ್ಯೆ ಮಾಡಿಕೊಳ್ಳಲು ಯೋಚಿಸಿರಬಹುದು ಎನ್ನುವ ಅನುಮಾನ ಸ್ಥಳೀಯರಲ್ಲಿ ಮೂಡಿಸಿದೆ. ಎಷ್ಟೇ ತಿಳಿ ಹೇಳಿದರೂ ಮಗ ಮತ್ತು ಮಗಳು ಚೆನ್ನಾಗಿ ನೋಡಿಕೊಳ್ಳುತ್ತಿಲ್ಲ ಎನ್ನುವ ನೆಪವೊಡ್ಡಿ ಮನೆಗೆ ಹಿಂತಿರುಗಿ ಹೋಗಲು ನಿರಾಕರಿಸಿದ್ದಾರೆ.

ಅಲ್ಲದೆ ಅವರ ಮೈಮೇಲೆ ಚಿನ್ನಾಭರಣವನ್ನು ಗಮನಿಸಿದ ಸ್ಥಳೀಯರು ಏನಾದರೂ ಅನಾಹುತ ಸಂಭವಿಸಿದರೆ ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ತೀರ್ಥಹಳ್ಳಿಯ ಡಿವೈಎಸ್ ಪಿ ಅರವಿಂದ್ ಕಲಗುಜ್ಜಿ ಪೊಲೀಸ್ ಇನ್ಸ್ಪೆಕ್ಟರ್ ಆದ ಇಮ್ರಾನ್ ಬೇಗ್, ಎಸ್ಐ ಸುರೇಖಾ, ಚಾಲಕ ಸುನಿಲ್ ಡಿಸೋಜಾ ಮತ್ತು ಹೈವೇ ಪೆಟ್ರೋಲಿಯಂನವರು ವೃದ್ಧೆಯನ್ನು ಸಮಾಧಾನಪಡಿಸಿ, ಮಹಿಳಾ ಸಾಂತ್ವನ ಕೇಂದ್ರಕ್ಕೆ ಕರೆದುಕೊಂಡು ಹೋಗಿದ್ದಾರೆ. ನಂತರ ಶಿವಮೊಗ್ಗದಲ್ಲಿರುವ ಅವರ ಮಗಳಿಗೆ ಕರೆ ಮಾಡಿ ತಿಳಿಸಿ, ಅಲ್ಲಿಂದ ಮನೆಗೆ ಕಳುಹಿಸಿಕೊಟ್ಟಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ.

• ಕೊಪ್ಪ: ಮತ್ತೊಂದು ಹಿಟ್ ಆ್ಯಂಡ್ ರನ್: ಮಣಿಪಾಲ ದಾಖಲು

ಕೊಪ್ಪ: ವಾಕಿಂಗ್ ಗೆ ತೆರಳಿದ್ದ ಸಂದರ್ಭದಲ್ಲಿ ವ್ಯಕ್ತಿಯೊಬ್ಬರಿಗೆ ವಾಹನವೊಂದು ಡಿಕ್ಕಿ ಹೊಡೆದು, ಚಾಲಕ ಅಲ್ಲಿಂದ ಪರಾರಿಯಾಗಿರುವ ಘಟನೆ ಸೋಮವಾರ ಬೆಳಿಗ್ಗೆ ಬಾಳಗಡಿಯ ಮೆಸ್ಕಾಂ ರಸ್ತೆಯಲ್ಲಿ ನಡೆದಿದೆ. ಪರಿಣಾಮವಾಗಿ ವ್ಯಕ್ತಿಯು ಗಂಭೀರವಾಗಿ ಗಾಯಗೊಂಡಿದ್ದು, ತಕ್ಷಣ ಅವರನ್ನು ಗಮನಿಸಿದ ಶಿಕ್ಷಕರೊಬ್ಬರು ಆಟೋ ಚಾಲಕರೊಬ್ಬರ ಸಹಾಯದಿಂದ ವ್ಯಕ್ತಿಯನ್ನು ಕೊಪ್ಪ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದ್ದಾರೆ. ವ್ಯಕ್ತಿಯ ಪರಿಸ್ಥಿತಿ ಗಂಭೀರವಾಗಿರುವುದರಿಂದ ಅವರನ್ನು ಮಣಿಪಾಲ ಕರೆದುಕೊಂಡು ಹೋಗಲಾಗಿದೆ ಎನ್ನುವ ಸಂಗತಿ ತಿಳಿದುಬಂದಿದೆ.

Categories
ಕರಾವಳಿ ಮಲ್ನಾಡ್

ಸ್ಕ್ರೀಮ್ ಆಮಿಷಕ್ಕೆ ಮುಗ್ದರ ಕೋಟಿ ಕೋಟಿ ಹಣ ಹೋಯ್ತು!

ಸ್ಕ್ರೀಮ್ ಆಮಿಷಕ್ಕೆ ಮುಗ್ದರ ಕೋಟಿ ಕೋಟಿ ಹಣ ಹೋಯ್ತು!
– ಜನರ 3 ಕೋಟಿ ನುಂಗಿದ ವಂಚಕರು: ಹೊಸನಗರದಲ್ಲಿ ಸಿಕ್ಕಿ ಬಿದ್ದ ಆರೋಪಿಗಳು
– ಸ್ಕ್ರೀಮ್ ಗಳಿಗೆ ಹಣ ಹಾಕುವ ಮುನ್ನ ಎಚ್ಚರ ಎಚ್ಚರ!

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಮಲೆನಾಡು/ಕರಾವಳಿ: ಜನರಿಗೆ ಆಸೆ ಹುಟ್ಟಿಸಿ. ಗೃಹ ಉಪಯೋಗಿ ಸ್ಕೀಮ್ ಹೆಸರಲ್ಲಿ ಜನರಿಗೆ ವಂಚನೆ ಮಾಡುವ ಪ್ರಕರಣ ಹೆಚ್ಚಾಗಿದೆ. ಈ ನಡುವೆ ಕಡಿಮೆ ಹೂಡಿಕೆ, ಬಂಪರ್ ಬಹುಮಾನ ಎಂದು ಬಹುತೇಕರನ್ನು ವಂಚಿಸಿದ ಘಟನೆ ನಡೆದಿದೆ. ಮಲೆನಾಡು, ಕರಾವಳಿ ಭಾಗದಲ್ಲಿ ಇಂತಹ ಅನೇಕ ಸ್ಕ್ರೀಮ್ ಕೆಲಸ ಮಾಡುತ್ತಿವೆ. ಆಮಿಷಗಳಿಗೆ ಬಲಿಯಾಗಿ ರಾಜ್ಯದಲ್ಲಿ ಸಾವಿರಾರು ಜನರು ಕಷ್ಟಪಟ್ಟು ಸಂಪಾದಿಸಿದ ಕೋಟ್ಯಾಂತರ ರೂಪಾಯಿ ಕಳೆದುಕೊಳ್ಳುತ್ತಿದ್ದಾರೆ. ತಿಂಗಳ ಕಂತು ಕಟ್ಟಿ ವರ್ಷ ಕಳೆದರೂ ಅನೇಕರಿಗೆ ದುಡ್ಡು ಬರಲಿಲ್ಲ, ಬಹುಮಾನವೂ ಬರಲಿಲ್ಲ ಎಂಬ ಆರೋಪ ಕೇಳಿ ಬಂದಿದೆ.

ಹೊಸನಗರ ಮತ್ತು ಉಡುಪಿ ಭಾಗದಲ್ಲಿ ಬೆಳಕಿಗೆ ಬಂದಿರುವ ‘ ಗ್ರೂಪ್ನ 3 ಕೋಟಿ ರೂಪಾಯಿ ವಂಚನೆ ಮಾಡಿದೆ ಎಂಬ ಆರೋಪ ಕೇಳಿ ಬಂದಿದೆ. “ಅಲ್ಪ ಹೂಡಿಕೆ, ಬಂಪರ್ ಲಾಭ” ಎಂಬ ಮರೀಚಿಕೆಯ ಬೆನ್ನೇರಿ ಹೋದ ಸಾವಿರಾರು ಮುಗ್ಧರು ಇದೀಗ ಬೀದಿಗೆ ಬಿದ್ದಿದ್ದಾರೆ. ಗೃಹೋಪಯೋಗಿ ವಸ್ತುಗಳು ಹಾಗೂ ಆಕರ್ಷಕ ಬಹುಮಾನದ ಆಮಿಷವೊಡ್ಡಿ ಬರೋಬ್ಬರಿ 3 ಕೋಟಿ ರೂಪಾಯಿಗಳಿಗೂ ಅಧಿಕ ಹಣವನ್ನು ಉಡುಪಿ ಮೂಲದ ವಂಚನಾ ಜಾಲ ಕೊನೆಗೂ ಬಯಲಾಗಿದೆ. ಪ್ರಕರಣದ ಪ್ರಮುಖ ರೂವಾರಿ ಅಬ್ದುಲ್ ರಜಾಕ್‌ನನ್ನು ಹೊಸನಗರ ಪೊಲೀಸರು ಬಂಧಿಸಿದ್ದು, ಠಾಣೆಯ ಮುಂದೆ ವಂಚನೆಗೊಳಗಾದ ನೂರಾರು ಜನರು ಜಮಾಯಿಸಿ ಆಕ್ರೋಶ ಹೊರಹಾಕಿದ್ದಾರೆ.

ಏನಿದು ಘಟನೆ?

​ಉಡುಪಿ ಜಿಲ್ಲೆಯ ಉಚ್ಚಿಲ ಬಾಡದ ನಿವಾಸಿಗಳಿಬ್ಬರು ಸೇರಿ ಜನರನ್ನು ಯಾಮಾರಿಸಲು 13, 16 ಮತ್ತು 21 ತಿಂಗಳ ಆಕರ್ಷಕ ಸ್ಕೀಮ್‌ಗಳನ್ನು ಮಾರುಕಟ್ಟೆಗೆ ಬಿಟ್ಟಿದ್ದರು. ​ಗ್ರಾಹಕರು ಪ್ರತಿ ತಿಂಗಳು ಕೇವಲ 1,000 ರೂ. ಕಂತು ಕಟ್ಟಿದರೆ ಸಾಕು, ಸ್ಕೀಮ್ ಮಧ್ಯದಲ್ಲಿ ಹಾಗೂ ಕೊನೆಯಲ್ಲಿ ಬೆಲೆಬಾಳುವ ಬಹುಮಾನ ಮತ್ತು ನಗದು ನೀಡುವುದಾಗಿ ನಂಬಿಸಿದ್ದರು. ಗ್ರಾಹಕರನ್ನು ಕರೆತರುವ ಏಜೆಂಟರಿಗೆ ಪ್ರತಿ ಕಾರ್ಡ್‌ಗೆ ತಲಾ 300 ರೂ. ಭರ್ಜರಿ ಕಮಿಷನ್ ಕೊಡುವ ಆಮಿಷವೊಡ್ಡಿ ಇಡೀ ಜಾಲವನ್ನು ರಾಜ್ಯಾದ್ಯಂತ ವಿಸ್ತರಿಸಿದ್ದರು.

​ಕಮಿಷನ್ ಆಸೆಗೆ ಬಿದ್ದು 24 ಲಕ್ಷ ಕಳೆದುಕೊಂಡ ಯುವಕ!

​ಹೊಸನಗರ ತಾಲೂಕಿನ ಹಳೇ ಸಾಗರ ರಸ್ತೆಯ ದ್ರಾವರ್ಸ ನಿವಾಸಿ 27 ವರ್ಷದ ಯುವಕ ನಿಹಾಲ್, ಈ ವಂಚಕರ ಜೇನುತುಪ್ಪದ ಮಾತಿಗೆ ಮರುಳಾದವರಲ್ಲಿ ಒಬ್ಬ. 2023ರ ಮೇ ತಿಂಗಳಿನಿಂದ ಈ ಸ್ಕೀಮ್‌ಗೆ ಏಜೆಂಟ್ ಆಗಿ ಸೇರಿದ ಈತ, ಕಮಿಷನ್ ಆಸೆಗೆ ಬಿದ್ದು ತನ್ನ ಸ್ನೇಹಿತರು ಹಾಗೂ ಪರಿಚಯಸ್ಥರಾದ ಬರೋಬ್ಬರಿ 150 ಜನರನ್ನು ಈ ಖೆಡ್ಡಾಗೆ ಕೆಡವಿದ್ದ.​ಗ್ರಾಹಕರಿಂದ ಕಂತಿನ ರೂಪದಲ್ಲಿ ಸಂಗ್ರಹಿಸಿದ ಒಟ್ಟು 24 ಲಕ್ಷ ರೂ. ಹಣವನ್ನು ಆರೋಪಿಗಳ ಫೋನ್ ಪೇ ಖಾತೆಗಳಿಗೆ ನಿಯತ್ತಾಗಿ ಜಮಾ ಮಾಡಿದ್ದ. ಆದರೆ, ದಿನಾಂಕ 04/05/2025 ರಂದು ಸ್ಕೀಮ್ ಮುಕ್ತಾಯಗೊಂಡರೂ ಆರೋಪಿಗಳು ಕವಡೆ ಕಾಸು ಕೂಡ ವಾಪಸ್ ನೀಡದೆ ಸತಾಯಿಸಲು ಶುರುಮಾಡಿದರು. ಇತ್ತ ಹಣ ಕಳೆದುಕೊಂಡ ಗ್ರಾಹಕರು ಏಜೆಂಟ್ ನಿಹಾಲ್ ಮನೆಗೆ ಮುತ್ತಿಗೆ ಹಾಕಿ, ಹಿಂಸೆ ನೀಡತೊಡಗಿದ್ದರಿಂದ, ದಿಕ್ಕುತೋಚದ ಆತ ಮಾನಸಿಕವಾಗಿ ಜರ್ಜರಿತನಾಗಿ ಕಡೆಗೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ.

​1960ಕ್ಕೂ ಹೆಚ್ಚು ಜನರಿಗೆ ಮೋಸ!

ಠಾಣೆ ಮುಂದೆ ಹೈಡ್ರಾಮಾ ​ದೂರುದಾರ ನಿಹಾಲ್ ನೀಡಿದ ಮಾಹಿತಿಯಂತೆ, ಇದು ಕೇವಲ 24 ಲಕ್ಷದ ವಂಚನೆಯಲ್ಲ. ನಿಹಾಲ್‌ನಂತೆಯೇ ಕಮಿಷನ್ ಆಸೆಗೆ ಬಿದ್ದ ಇತರೆ 7-8 ಏಜೆಂಟರುಗಳು ಸಾರ್ವಜನಿಕರಿಂದ ಕೋಟ್ಯಾಂತರ ರೂಪಾಯಿ ಸಂಗ್ರಹಿಸಿ ಆಯಾನ್ ಗ್ರೂಪ್‌ಗೆ ಸುರಿದಿದ್ದಾರೆ. ಬರೋಬ್ಬರಿ 1960ಕ್ಕೂ ಹೆಚ್ಚು ಮುಗ್ಧ ಜನರಿಗೆ ಈ ಜಾಲ ವಂಚಿಸಿದ್ದು, ಲೂಟಿ ಹೊಡೆದ ಒಟ್ಟು ಮೊತ್ತ 3 ಕೋಟಿ ರೂಪಾಯಿ ದಾಟಿದೆ.

​ಆರೋಪಿ ಸೆರೆ, ಭುಗಿಲೆದ್ದ ಆಕ್ರೋಶ:

ಪ್ರಕರಣ ದಾಖಲಿಸಿಕೊಂಡ ಹೊಸನಗರ ಪೊಲೀಸರು, ಕ್ಷಿಪ್ರ ಕಾರ್ಯಾಚರಣೆ ನಡೆಸಿ ಶನಿವಾರ (ಮಾ. 28) ಪ್ರಮುಖ ಆರೋಪಿ ಅಬ್ದುಲ್ ರಜಾಕ್‌ನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ವಂಚಕನ ಬಂಧನದ ಸುದ್ದಿ ಕಾಳ್ಗಿಚ್ಚಿನಂತೆ ಹರಡುತ್ತಿದ್ದಂತೆ, ರೊಚ್ಚಿಗೆದ್ದ ನೂರಾರು ಹೂಡಿಕೆದಾರರು ಹೊಸನಗರ ಪೊಲೀಸ್ ಠಾಣೆಯ ಮುಂದೆ ದಿಢೀರ್ ಜಮಾಯಿಸಿದರು.

​ಸಾರ್ವಜನಿಕರಿಗೊಂದು ಎಚ್ಚರಿಕೆಯ ಗಂಟೆ

​ಯಾವುದೇ ಶ್ರಮವಿಲ್ಲದೆ, ರಾತ್ರೋರಾತ್ರಿ ಶ್ರೀಮಂತರಾಗುವ ಕನಸು ಬಿತ್ತುವ ಇಂತಹ ನಕಲಿ ಸ್ಕೀಮ್‌ಗಳಿಗೆ ಸಾರ್ವಜನಿಕರು ಮತ್ತೆ ಮತ್ತೆ ಬಲಿಯಾಗುತ್ತಿರುವುದು ದುರಂತ. ಯಾವುದೇ ಅಧಿಕೃತ ಮಾನ್ಯತೆ (RBI Approval) ಇಲ್ಲದ, ಕೇವಲ ಬಾಯಿ ಮಾತಿನ ಆಮಿಷವೊಡ್ಡುವ ಕಂಪನಿಗಳಲ್ಲಿ ಹಣ ಹೂಡಿಕೆ ಮಾಡುವ ಮುನ್ನ ನೂರು ಬಾರಿ ಯೋಚಿಸಬೇಕು ಎಂಬುದಕ್ಕೆ ಈ ‘ಆಯಾನ್ ಗ್ರೂಪ್‘ ಪ್ರಕರಣವೇ ಕನ್ನಡಿಯಾಗಿದೆ. ಸದ್ಯ ತಲೆಮರೆಸಿಕೊಂಡಿರುವ ಮತ್ತೋರ್ವ ಆರೋಪಿ ಶೇಕ್ ಮಹಮ್ಮದ್ ಫಜಲ್‌ಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

– ವರದಿ ಮಾಹಿತಿ: ರಫಿ ರಿಪ್ಪನ್ ಪೇಟೆ

Categories
ಮಾಹಿತಿ ಸುದ್ದಿ ರಾಜ್ಯ ರಾಷ್ಟ್ರೀಯ ವಾರ್ತೆ

ಯುದ್ಧ ಮುಂದುವರಿದರೆ ಸೀಮೆ ಎಣ್ಣೆ ಬುಡ್ಡಿಯೇ ಗತಿ?!

ಯುದ್ಧ ಮುಂದುವರಿದರೆ ಸೀಮೆ ಎಣ್ಣೆ ಬುಡ್ಡಿಯೇ ಗತಿ?!
– ಪಡಿತರ ಅಂಗಡಿಗಳಲ್ಲಿ ಇನ್ನು ಮುಂದೆ ಸೀಮೆ ಎಣ್ಣೆ ಲಭ್ಯ
– ಗ್ಯಾಸ್ ಮುಂದೆ ಕಷ್ಟ ಆಗುತ್ತಾ? ಕೇಂದ್ರದ ನಿಯಮ ಏನು?

ನವದೆಹಲಿ: ಮಧ್ಯಪ್ರಾಚ್ಯದ ಯುದ್ಧದಿಂದಾಗಿ ಭಾರತದಲ್ಲಿ ತಲೆದೋರಬಹುದಾದ ಸಿಲಿಂಡರ್ ಪುರೈಕೆಯಲ್ಲಿನ ವ್ಯತ್ಯಯಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಒಂದು ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. ಪರಿಣಾಮವಾಗಿ ಇನ್ನು ಮುಂದೆ ಮನೆಯಲ್ಲಿ ಅಡುಗೆಗೆ ಸಿಲಿಂಡರ್ ಬದಲಾಗಿ ಸೀಮೆಎಣ್ಣೆಯನ್ನು ಬಳಸಲು ಅವಕಾಶ ಕಲ್ಪಿಸಿದೆ.‌ ಇದಕ್ಕೆ ಸಂಬಂಧಿಸಿದಂತೆ ಆದೇಶವನ್ನು ಹೊರಡಿಸಿರುವ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ದೇಶದ ಎಲ್ಲಾ ರಾಜ್ಯಗಳ ಪಡಿತರ ಅಂಗಡಿಗಳಿಗೆ 1 ಲಕ್ಷ ಕಿಲೋಲೀಟರ್ ನಷ್ಟು, ನಿಯಮಿತ ಕೋಟಾದ ಜೊತೆಗೆ, ಇನ್ನೂ ಹೆಚ್ಚುವರಿಯಾಗಿ 48,000 ಕಿಲೋಲೀಟರ್ ಸೀಮೆಎಣ್ಣೆಯನ್ನು ಹಂಚಿಕೆ ಮಾಡಿದೆ. ಮೊದಲಿಗೆ ಬಡ ಕುಟುಂಬಗಳಿಗೆ ಇದನ್ನು ಅಡುಗೆಯ ಇಂಧನವಾಗಿ ವಿತರಿಸಲಾಗುತ್ತದೆ ಎನ್ನುವ ಮಾಹಿತಿ ಲಭಿಸಿದೆ.

ಹೊಟೇಲ್ ಮತ್ತು ರೆಸ್ಟೋರೆಂಟ್ ಗಳಿಗೆ ಸಿಲಿಂಡರ್ ಗೆ ಪರ್ಯಾಯ ಇಂಧನವಾಗಿ ಬಯೋಮಾಸ್, ಆರ್ ಡಿಎಫ್ ಪೆಲೆಟ್ ಮತ್ತು ಕಲ್ಲಿದ್ದಲನ್ನು ಒಂದು ತಿಂಗಳ ಕಾಲ ಬಳಸಲು ಅವಕಾಶ ಕಲ್ಪಿಸುವಂತೆ, ಕೇಂದ್ರ ಸರ್ಕಾರವು ಪರಿಸರ ಸಂಸ್ಥೆಗಳಿಗೆ ಮನವಿ ಮಾಡಿಕೊಂಡಿದೆ ಎನ್ನಲಾಗಿದೆ. ಅಲ್ಲದೆ ಇದು ಎಲ್ ಪಿಜಿ ಮೇಲಿನ ಒತ್ತಡವನ್ನು ಕೂಡ ಕಡಿಮೆ ಮಾಡುವ ಸಾಧ್ಯತೆ ಇದೆ ಎನ್ನುವ ಉದ್ದೇಶದಿಂದ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ.

ಎಲ್ ಪಿಜಿ ಸಿಲಿಂಡರ್ ಪೂರೈಕೆಯ ಸಮಸ್ಯೆಯು ಮುಖ್ಯವಾಗಿ ಗ್ರಾಮೀಣ ಭಾಗದ ಜನರಿಗೆ ಹೆಚ್ಚು ಪರಿಣಾಮ ಬೀರಿದ್ದು, ಸಿಲಿಂಡರ್ ಬುಕ್ಕಿಂಗ್ ಅವಧಿಯನ್ನು ಹೆಚ್ಚಿಸಿರುವುದೇ ಇದಕ್ಕೆ ಕಾರಣವಾಗಿದೆ. ಮೊದಲಿಗೆ ಗ್ರಾಹಕರು 25 ದಿನಕ್ಕೊಮ್ಮೆ ಸಿಲಿಂಡರ್ ಅನ್ನು ಪಡೆಯಬಹುದಿತ್ತು. ಆದರೆ ಪೂರೈಕೆಯ ವ್ಯತ್ಯಯದಿಂದಾಗಿ 45 ದಿನಗಳಿಗೆ ಹೆಚ್ಚಿಸಲಾಗಿದೆ. ಅಂದರೆ ಗ್ರಾಮೀಣ ಭಾಗದ ಜನರು 25 ದಿನಗಳಿಗೆ ಬದಲಾಗಿ 45 ದಿನಗಳಿಗೊಮ್ಮೆ ಸಿಲಿಂಡರ್ ಅನ್ನು ಬುಕ್ಕಿಂಗ್ ಮಾಡಿ, ಪಡೆಯಬೇಕು ಎನ್ನುವ ಆದೇಶವನ್ನು ಹೊರಡಿಸಲಾಗಿದೆ.

ಇದಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಜಂಟಿ ಕಾರ್ಯದರ್ಶಿಗಳಾದ ಸುಜಾತ ಶರ್ಮಾ ಅವರು “ಹಾರ್ಮುಜ್ ಜಲಸಂಧಿಯನ್ನು ಮುಚ್ಚಿದ ನಂತರ ದೇಶಿಯ ಸರಬರಾಜುಗಳ ಮೇಲೆ ತೀವ್ರ ಪರಿಣಾಮ ಬೀರಿದೆ. ದೇಶವು ಹಿಂದೆಂದೂ ಈ ರೀತಿಯ ಪರಿಸ್ಥಿತಿಯನ್ನು ಎದುರಿಸಿರಲಿಲ್ಲ. ಗ್ರಾಮೀಣ ಭಾಗದ ಗ್ರಾಹಕರು 45 ದಿನಗಳ ನಂತರ ಮಾತ್ರ ಸಿಲಿಂಡರ್ ಗಳನ್ನು ಬುಕ್ ಮಾಡಲು ಸಾಧ್ಯವಾಗುತ್ತಿರುವುದು ನಿಜಕ್ಕೂ ಕಷ್ಟಕರವಾದ ಸಂಗತಿಯಾಗಿದೆ” ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.

2012ರಲ್ಲಿ ಎಲ್‌ಪಿಜಿ ಅಡುಗೆ ಅನಿಲ ಬಳಸುವ ಅಭಿಯಾನವನ್ನು ಪ್ರಾರಂಭಿಸಲಾಗಿತ್ತು, ಇದರ ಮೂಲಕ ಉಜ್ವಲ ಯೋಜನೆಯನ್ನು ಪ್ರಾರಂಭಿಸಿ, ಈ ಯೋಜನೆಯ ಅಡಿಯಲ್ಲಿ ಬಡ ಕುಟುಂಬಗಳಿಗೆ ಕೇಂದ್ರ ಸರ್ಕಾರವು ಸಬ್ಸಿಡಿ ದರದಲ್ಲಿ ಸಿಲಿಂಡರ್ ಅನ್ನು ನೀಡುತ್ತಿತ್ತು. ಆದರೆ ಈಗಿನ ಪರಿಸ್ಥಿತಿಗೆ ಅದು ಸಾಧ್ಯವಾಗದಿರುವ ಕಾರಣ ಕೇಂದ್ರ ಸರ್ಕಾರವು ಸೀಮೆಎಣ್ಣೆ ಬಳಕೆಗೆ ಅನುಮತಿ ನೀಡುವ ಮೂಲಕ ಪ್ರಸ್ತುತ ಎದುರಾಗಿರುವ ಸಮಸ್ಯೆಗೆ ಸಧ್ಯಕ್ಕೆ ಪರಿಹಾರ ಒದಗಿಸಿದೆ ಎನ್ನಲಾಗಿದೆ.

Categories
ಕ್ರಿಕೆಟ್ ಕ್ರೀಡಾ ಸುದ್ದಿ ರಾಜ್ಯ

ಶುರುವಾಯ್ತು ಐಪಿಎಲ್ ರಂಗು..!

ಶುರುವಾಯ್ತು ಐಪಿಎಲ್ ರಂಗು..!
– ಬೆಂಗಳೂರಲ್ಲೇ ಮೊದಲ ಮ್ಯಾಚ್: ಅಭಿಮಾನಿಗಳ ಕಾತುರ
– ದೇಶದ ಮಹಾ ನಗರಗಳಲ್ಲಿ ಪಂದ್ಯ: ಬೆಟ್ಟಿಂಗ್ ಬ್ಯಾನ್..!
– 11 ಮಂದಿ ಮೃತರ ನೆನಪಲ್ಲಿ 11 ಕುರ್ಚಿ ಖಾಲಿ!

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಕ್ರಿಕೆಟ್ ಪ್ರೇಮಿಗಳ ಮೆಚ್ಚಿನ ಕ್ರಿಕೆಟ್ ಪಂದ್ಯಾವಳಿ ಐಪಿಎಲ್ 19ನೇ ಆವೃತ್ತಿಗೆ ಕ್ಷಣಗಣನೆ ಆರಂಭವಾಗಿದೆ., ದೇಶ ವಿದೇಶದ ನೂರಾರು ಸ್ಟಾರ್ ಆಟಗಾರರು ಈ ಪ್ರತಿಷ್ಠಿತ ಟೂರ್ನಿಯಲ್ಲಿ ಆಟ ಆಡಲಿದ್ದಾರೆ.
ಐಪಿಎಲ್ ಮೊದಲ 20 ಪಂದ್ಯಗಳ ವಿವರವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು (ಬಿಸಿಸಿಐ) ಬಿಡುಗಡೆಗೊಳಿಸಿದೆ. ಮಾರ್ಚ್ 28ರಂದು ಐಪಿಎಲ್ ಗೆ ಅದ್ಧೂರಿ ಚಾಲನೆ ದೊರೆಯಲಿದ್ದು, ಈ ಬಾರಿ ಐಪಿಎಲ್ ಉದ್ಘಾಟನಾ ಪಂದ್ಯ ಕರ್ನಾಟಕದ ರಾಜಧಾನಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ಸಂಜೆ 7:30ಕ್ಕೆ ನಡೆಯಲಿದೆ. ಐಪಿಎಲ್ ನೂರಾರು ಕೋಟಿ ವ್ಯವಹಾರ. ಆದರೆ ಜನ ಬೆಟ್ಟಿಂಗ್ ಗೀಳಿಗೆ ಬೀಳುವ ಸಾಧ್ಯತೆ ಇದೆ. ಪೊಲೀಸ್ ಹಾಗೂ ಭಾರತ ಸರ್ಕಾರ ಇಂತಹ ಚಟುವಟಿಕೆ ಮೇಲೆ ನಿಗಾ ಇಡಬೇಕಿದೆ.

ಮೊದಲ ಪಂದ್ಯದಲ್ಲೇ ಆರ್.ಸಿ.ಬಿ ಆಟ!

ಐಪಿಎಲ್ ಕ್ರಿಕೆಟ್ ನ ಮೊದಲ ಪಂದ್ಯವು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್ರೈಸರ್ಸ್ ಹೈದರಾಬಾದ್ ನಡುವೆ ನಡೆಯಲಿದೆ. ಬಳಿಕ ಏಪ್ರಿಲ್ 5ರ ಭಾನುವಾರದಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಚೆನ್ನೈ ಸೂಪರ್ ಕಿಂಗ್ಸ್ ಜೊತೆಗೆ ಸೆಣಸಾಡಲಿದೆ. ಅಂತಿಮ ಪಂದ್ಯ 31 ಮೇ 2026ರಂದು ನಡೆಯಲಿದೆ. ಸುಮಾರು 84 ಪಂದ್ಯಗಳಿದ್ದು, ಪ್ರತಿಯೊಂದು ತಂಡ ಸುಮಾರು 14 ಲೀಗ್ ಪಂದ್ಯಗಳನ್ನು ಆಡಲಿದೆ. ಅಗ್ರ 4 ತಂಡಗಳು ಪ್ಲೇಆಫ್‌ಗೆ ಪ್ರವೇಶಿಸುತ್ತವೆ. ದೇಶದ ವಿವಿಧ ನಗರಗಳಾದ ಬೆಂಗಳೂರು, ಮುಂಬೈ, ದೆಹಲಿ, ಚೆನ್ನೈ, ಅಹಮದಾಬಾದ್ ಅಲ್ಲಿ ಪಂದ್ಯಗಳು ನಡೆಯಲಿದ್ದು ಕ್ರಿಕೆಟ್ ಅಭಿಮಾನಿಗಳಿಗೆ ದೊಡ್ಡ ಕ್ರೀಡಾ ಹಬ್ಬವಾಗಲಿದೆ.

11 ಜನರ ನೆನಪಿಗೆ 11 ಕುರ್ಚಿ ಖಾಲಿ!
ಕಳೆದ ವರ್ಷ 18 ವರ್ಷದ ಬಳಿಕ ಕಪ್ ಗೆದ್ದ ಆರ್.ಸಿ.ಬಿ ಸಂಭ್ರಮಾಚರಣೆ ವೇಳೆ 11 ಮಂದಿ ಅಭಿಮಾನಿಗಳು ಕಾಲು ತುಳಿತಕ್ಕೆ ಬಲಿಯಾದ ಘಟನೆ ನಡೆದಿತ್ತು. ಅವರ ಸ್ಮರಣಾರ್ಥ 11 ಕುರ್ಚಿಗಳನ್ನು ಖಾಲಿ ಬಿಡಲಾಗಿದೆ. ಮೆಟ್ರೋ, ಬಸ್, ವಾಹನ ಟ್ರಾಫಿಕ್ ಇರಲಿದೆ.

ಭಾಗವಹಿಸುವ ತಂಡಗಳು

ರಾಯಲ್ ಚಾಲೆಂಜರ್ಸ್ ಬೆಂಗಳೂರು
ಚೆನೈ ಸೂಪರ್ ಕಿಂಗ್ಸ್
ಮುಂಬೈ ಇಂಡಿಯನ್ಸ್
ಕೊಲ್ಕತ್ತಾ ನೈಟ್ ರೈಡರ್ಸ್
ಡೆಲ್ಲಿ ಕ್ಯಾಪಿಟಲ್ಸ್
ಪಂಜಾಬ್ ಕಿಂಗ್ಸ್
ರಾಜಸ್ತಾನ್ ರಾಯಲ್ಸ್
ಸನ್ ರೈಸರ್ಸ್ ಹೈದರಾಬಾದ್
ಗುಜರಾತ್ ಟೈಟಾನ್ಸ್
ಲಕ್ನೌ ಸೂಪರ್ ಗೈಟ್ಸ್