ಕರಾವಳಿಯಲ್ಲಿ ಏನೇನ್ ಆಯ್ತು?
– ಪ್ರಮುಖ 10 ಸುದ್ದಿಗಳು
* ಹೆಬ್ರಿ: ಬ್ಯಾರಿಕೇಡ್ ಗೆ ಡಿಕ್ಕಿ ಹೊಡೆದ ಬೈಕ್
* ಪುತ್ತೂರು: ಮೂರು ವರ್ಷದ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ
* ಸುಳ್ಯ: ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ವ್ಯಕ್ತಿ
•ಕುಂದಾಪುರ: ವಿದೇಶದಲ್ಲಿ ಉದ್ಯೋಗ ನೆಪದಲ್ಲಿ ಹಣದ ವಂಚನೆ
* ಬ್ರಹ್ಮಾವರ: ಕಳಪೆ ಗುಣಮಟ್ಟದ ಆಭರಣ ಅಡವಿಟ್ಟು ಸಾಲ
* ಬಂಟ್ವಾಳ: ನೇಣು ಬಿಗಿದುಕೊಂಡು ಯುವಕ ಆತ್ಮಹತ್ಯೆ
* ಮೂಲ್ಕಿ: ಸುಳ್ಳು ಹೇಳಿ ಲಕ್ಷಾಂತರ ರೂಪಾಯಿ ಸಂಗ್ರಹ!
* ಕಾರ್ಕಳ: ರೈಲು ಢಿಕ್ಕಿ ಹೊಡೆದು ವ್ಯಕ್ತಿ ಸಾವು
* ಉಡುಪಿ: ಪೊಲೀಸರ ಟೋಪಿಯಲ್ಲಿ ಬದಲಾವಣೆ
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಹೆಬ್ರಿ: ರಸ್ತೆ ಬದಿಯಲ್ಲಿ ಇರಿಸಿದ್ದ ಬ್ಯಾರಿಕೇಡ್ ಗೆ ಬೈಕ್ ವೊಂದು ಢಿಕ್ಕಿ ಹೊಡೆದ ಘಟನೆ, ಕಳೆದ ಕೆಲವು ದಿನಗಳ ಹಿಂದೆ ಮುದ್ರಾಡಿಯ ಆಟೋ ನಿಲ್ದಾಣದ ಬಳಿ ನಡೆದಿದೆ. ಮುದ್ರಾಡಿ ಗ್ರಾಮದ ಹರೀಶ್ ಎನ್ನುವವರು ಬೈಕ್ ನಲ್ಲಿ ಬಚ್ಚಪ್ಪು ಕಡೆಯಿಂದ ಮುದ್ರಾಡಿಯತ್ತ ತೆರಳುತ್ತಿದ್ದಾಗ ಈ ರೀತಿ ಸಂಭವಿಸಿದೆ. ಗಂಭೀರವಾಗಿ ಗಾಯಗೊಂಡಿದ್ದ ಹರೀಶ್ ಅವರನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ, ಹರೀಶ್ ಅವರು ಕಳೆದೆರಡು ದಿನಗಳ ಹಿಂದೆ ಮೃತಪಟ್ಟರು. ಅಪಘಾತಕ್ಕೆ ಸಂಬಂಧಿಸಿದಂತೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
* ಪುತ್ತೂರು: ಮೂರು ವರ್ಷದ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ
ಪುತ್ತೂರು: ಮೊಬೈಲ್ ಟವರ್ ತೋರಿಸುವ ನೆಪದಲ್ಲಿ ಕರೆದುಕೊಂಡು ಹೋಗಿ, ಮೂರು ವರ್ಷದ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲಾಗಿದೆ. ದುಷ್ಕರ್ಮಿಯನ್ನು ಸುಳ್ಯ ತಾಲ್ಲೂಕಿನ ಮಡಪ್ಪಾಡಿ ಗ್ರಾಮದ ಹಾಡಿಕಲ್ಲು ನಿವಾಸಿ ಚೇತನ್ ಎಂದು ಗುರುತಿಸಲಾಗಿದೆ. ದುಷ್ಕರ್ಮಿಯ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣವನ್ನು ದಾಖಲೆಸಿಕೊಂಡು, ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಪುತ್ತೂರು 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಅವನಿಗೆ ಜೈಲು ಶಿಕ್ಷೆ ನೀಡುವಂತೆ ಆದೇಶವನ್ನು ಹೊರಡಿಸಿದೆ.
* ಸುಳ್ಯ: ವಿಷ ಸೇವಿಸಿ ಅತ್ಮಹತ್ಯೆಗೆ ಶರಣಾದ ವ್ಯಕ್ತಿ
ಸುಳ್ಯ: ಅಮಲು ಪದಾರ್ಥ ಸೇವಿಸುತ್ತಿದ್ದ ವ್ಯಕ್ತಿಯೊಬ್ಬರು, ಮದ್ಯವನ್ನು ಕುಡಿದು ಮನೆಗೆ ಬಂದು, ನಂತರ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ, ಕೊಳ್ತಿಗೆ ಗ್ರಾಮದಲ್ಲಿ ನಡೆದಿದೆ. ತಕ್ಷಣ ಮಾಲತ್ತೋಡಿ ಧರ್ಮ ಅವರನ್ನು ಮನೆಯವರು ಪುತ್ತೂರಿನ ಆಸ್ಪತ್ರೆಗೆ ಸೇರಿಸಿದ್ದಾರೆ. ಆದರೆ ಧರ್ಮ ಅವರನ್ನು ಪರೀಕ್ಷಿಸಿದ ವೈದ್ಯರು, ಆಸ್ಪತ್ರೆಗೆ ಕರೆದುಕೊಂಡ ಬರುವ ಮೊದಲೇ ಮೃತಪಟ್ಟಿದ್ದಾರೆ ಎಂದು ತಿಳಿಸಿದರು. 2018ರಲ್ಲಿ ಕೂಡ ಧರ್ಮ ಅವರು ವಿಷ ಪದಾರ್ಥ ಸೇವಿಸಿದ್ದು, ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು ಎನ್ನುವ ಮಾಹಿತಿ ಲಭಿಸಿದೆ. ಅಲ್ಲದೆ ಅಮಲು ಪದಾರ್ಥವನ್ನು ಹೆಚ್ಚಾಗಿ ಸೇವಿಸಿದಾಗ, ತಾನು ವಿಷ ಕುಡಿದು ಸಾಯುತ್ತೇನೆ ಎಂದು ಮನೆಯವರಿಗೆ ತಿಳಿಸುತ್ತಿದ್ದರು ಎನ್ನಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಎಂದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
* ಕುಂದಾಪುರ: ವಿದೇಶದಲ್ಲಿ ಉದ್ಯೋಗ ನೆಪದಲ್ಲಿ ಹಣದ ವಂಚನೆ
ಕುಂದಾಪುರ: ಕಾವೂರು ಠಾಣಾ ವ್ಯಾಪ್ತಿಯಲ್ಲಿ, ಸಾರ್ವಜನಿಕರಿಗೆ ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ಮತ್ತು ವೀಸಾ ಮಾಡಿಸಿಕೊಡುವುದಾಗಿ ನಂಬಿಸಿ, ಅವರಿಂದ ಒಂದು ಕೋಟಿಗೂ ಹೆಚ್ಚು ಹಣವನ್ನು ವಸೂಲಿ ಮಾಡಿರುವ ಇಬ್ಬರು ವ್ಯಕ್ತಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ಜನರಿಂದ ಪಡೆದುಕೊಂಡ ಪಾಸ್ ಪೋರ್ಟ್ ಗಳನ್ನು ಮನೆಯಲ್ಲಿ ಅಕ್ರಮವಾಗಿ ಇಟ್ಟುಕೊಳ್ಳುತ್ತಿದ್ದರು ಎನ್ನುವ ಮಾಹಿತಿ ಲಭಿಸಿದೆ. ಆರೋಪಿಗಳನ್ನು ಬೆಂಗಳೂರು ಮೂಲದ ಪ್ರಕೃತಿ ಮತ್ತು ಕುಂದಾಪುರ ತಾಲ್ಲೂಕಿನ ಗಂಗೊಳ್ಳಿಯ ಆಲ್ಡನ್ ರೆಬೇರೋ ಎಂದು ಗುರುತಿಸಲಾಗಿದೆ. ಅಕ್ರಮ ಚಟುವಟಿಕೆಯ ಸುಳಿವು ಲಭಿಸುತ್ತಿದ್ದಂತೆ, ಮಂಗಳೂರು ಉತ್ತರ ಉಪವಿಭಾಗದ ಎಸಿಪಿ ಶ್ರೀಕಾಂತ್ ಅವರ ಮಾರ್ಗದರ್ಶನದಲ್ಲಿ, ಕಾವೂರು ಠಾಣೆಯ ಇನ್ಸ್ಪೆಕ್ಟರ್ ಆಗಿರುವ ರಾಘವೇಂದ್ರ ಬೈಂದೂರು, ಎಸ್ ಐ ಆಗಿರುವ ಮಲ್ಲಿಕಾರ್ಜುನ ಬಿರಾದಾರ ಮತ್ತು ಸಿಬ್ಬಂದಿಗಳಾದ ನಾಗರತ್ನ, ರಾಘವೇಂದ್ರ, ಪ್ರವೀಣ್, ರಿಯಾಜ್ ಅವರು ಕಾರ್ಯಾಚರಣೆಯನ್ನು ನಡೆಸಿ, ಆರೋಪಿಗಳನ್ನು ಬಂಧಿಸಿದರು. ಈ ಸಂದರ್ಭದಲ್ಲಿ ಆರೋಪಿಗಳ ಬಳಿಯಿದ್ದ 24 ಪಾಸ್ ಪೋರ್ಟ್, 4.30.000 ರೂಪಾಯಿ ಮೌಲ್ಯದ 43 ಗ್ರಾಂ ಬಂಗಾರ, ಎರಡು ಮೊಬೈಲ್ ಗಳನ್ನು ವಶಪಡಿಸಿಕೊಳ್ಳಲಾಯಿತು. ಬಳಿಕ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.
* ಬ್ರಹ್ಮಾವರ: ಕಳಪೆ ಗುಣಮಟ್ಟದ ಆಭರಣ ಅಡವಿಟ್ಟು ಸಾಲ
ಬ್ರಹ್ಮಾವರ: ಯಶವಂತ್ ಕುಮಾರ್ ಎನ್ನುವ ವ್ಯಕ್ತಿಯು, ಕಡಿಮೆ ಗುಣಮಟ್ಟದ ಚಿನ್ನಾಭರಣವನ್ನು ಅಡವಿಟ್ಟು, ಸಾಲ ಪಡೆಯುವ ಮೂಲಕ ಸಹಕಾರಿ ಸಂಘಕ್ಕೆ ವಂಚಿಸಿದ್ದಾರೆ. ಸಿಂಡಿಕೇಟ್ ರೈತರ ಸೇವಾ ಸಹಕಾರಿ ಸಂಘ ಕೊಕ್ಕರ್ಣೆ ಶಾಖೆಯಲ್ಲಿ ಜುಲೈ ತಿಂಗಳಿನಲ್ಲಿ ಕಡಿಮೆ ಗುಣಮಟ್ಟದ 69.400 ಗ್ರಾಂ ತೂಕದ ಚಿನ್ನಾಭರಣ ಅಡವಿಟ್ಟು, ಸುಮಾರು 4.60.000 ರೂಪಾಯಿ ಸಾಲ ಪಡೆದುಕೊಂಡಿದ್ದನು. ಕೆಲವು ದಿನಗಳ ಬಳಿಕ ಸಹಕಾರಿ ಸಂಘದವರು ಆತ ಅಡವಿಟ್ಟ ಆಭರಣಗಳನ್ನು ಪರೀಕ್ಷಿಸಿದಾಗ, ಅದು ಕಡಿಮೆ ಗುಣಮಟ್ಟದ್ದೆಂದು ತಿಳಿದುಬಂದಿದೆ. ಇದರ ನಂತರ ಆರೋಪಿಯು ಸಂಘದವರ ಸಂಪರ್ಕಕ್ಕೆ ಸಿಕ್ಕಿಲ್ಲ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಆರೋಪಿಯ ವಿರುದ್ಧ ಸಹಕಾರಿ ಸಂಘಕ್ಕೆ ಆರ್ಥಿಕ ನಷ್ಟ ಮತ್ತು ನಂಬಿಕೆ ದ್ರೋಹ ಮಾಡಿದಂತಾಗಿದೆ ಎಂದು ದೂರು ನೀಡಲಾಗಿದೆ. ಮತ್ತು ಆರೋಪಿಯೊಂದಿಗೆ ವಂಚನೆಯಲ್ಲಿ ಉಮಾನಾಥ ಶೆಟ್ಟಿ ಎನ್ನುವ ವ್ಯಕ್ತಿಯು ಜೊತೆಯಾಗಿದ್ದಾರೆ ಎಂದು ಸರಕಾರಿ ಸಂಘದ ಶಾಖಾ ವ್ಯವಸ್ಥಾಪಕಿಯಾಗಿರುವ ಸುರೇಖಾ ಕುಮಾರಿ ಅವರು ದೂರಿನಲ್ಲಿ ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
* ಬಂಟ್ವಾಳ: ನೇಣು ಬಿಗಿದುಕೊಂಡು ಯುವಕ ಆತ್ಮಹತ್ಯೆ
ಬಂಟ್ವಾಳ: ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ, ಕೊಳ್ನಾಡು ಗ್ರಾಮದ ಮುಂಡಾಜೆ ಕಾನ ಎಂಬಲ್ಲಿ ನಡೆದಿದೆ. ದಿನೇಶ್ ಎಂಬ ಹೆಸರಿನ ಯುವಕನು ಕೂಲಿ ಕೆಲಸ ಮಾಡಿಕೊಂಡಿದ್ದು, ಆತ್ಮಹತ್ಯೆ ಮಾಡಿಕೊಂಡು ಸಾವಿಗೆ ಶರಣಾಗಿದ್ದಾನೆ. ಸಾವಿಗೆ ಕಾರಣ ಏನೆಂಬುದು ತಿಳಿದುಬಂದಿಲ್ಲ. ಘಟನೆಗೆ ಸಂಬಂಧಿಸಿದಂತೆ ಮಾಹಿತಿಯನ್ನು ಸಂಗ್ರಹಿಸಿ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
* ಮೂಲ್ಕಿ: ಸುಳ್ಳು ಹೇಳಿಕೆಯ ಮೂಲಕ ಲಕ್ಷಾಂತರ ರೂಪಾಯಿ ಸಂಗ್ರಹ
ಮೂಲ್ಕಿ: ಉಡುಪಿ ಮತ್ತು ಕಾಸರಗೋಡು ಟ್ರಾನ್ಸ್ ಮಿಷನ್ ಲಿಮಿಟೆಡ್ ಕಂಪನಿಯವರು, ವಿದ್ಯುತ್ ಕಂಬ ಹಾಕುವ ಮತ್ತು ವಯರ್ ಎಳೆಯುವ ಸಂದರ್ಭದಲ್ಲಿ , ಹಲವಾರು ಮನೆಗಳಿಗೆ ಹಾನಿಯಾಗಿದೆ ಎಂದು ಸುಳ್ಳು ಹೇಳಿ ನಂಬಿಸಿ, ಉಳೆಪಾಡಿ ಗ್ರಾಮದ ರಾಮಚಂದ್ರ ಕಂಗೋರಿ ಕೆಲಸ ಮಾಡುವುದನ್ನು ನಿಲ್ಲಿಸಿ ಎಂದು ಹೇಳಿ, ಬಳಿಕ ಮುಂದುವರಿಸಬೇಕಾದರೆ 25.000 ರೂಪಾಯಿ ನೀಡುವಂತೆ ಬೆದರಿಸಿದ್ದಾರೆ. ರಾಮಚಂದ್ರ ಕಂಗೋರಿಯ ಬೆದರಿಕೆಗೆ ಮಣಿದ ಕಂಪನಿಯವರು 25,000 ಕೊಟ್ಟು ಕಳುಹಿಸಿದ್ದಾರೆ. ಬಳಿಕ ಸದಾಶಿವ ಎನ್ನುವ ವ್ಯಕ್ತಿ, ಕೊಟ್ಟಾರ ಚೌಕಿಯಲ್ಲಿರುವ ಕಂಪನಿಯ ಕಛೇರಿಗೆ ಬಂದು, ರಾಮಚಂದ್ರ ಅವರು ಕೇಳಿರುವ ಎರಡು ಲಕ್ಷ ರೂಪಾಯಿಯಷ್ಟು ಹಣವನ್ನು ಪಾವತಿಸಿ ಎಂದು ಒತ್ತಡ ಹೇರಿದ್ದಾರೆ. ಹಾನಿಯಾದ ಮನೆಗಳಿಗೆ ಪರಿಹಾರವಾಗಿ ಹಣವನ್ನು ನೀಡುತ್ತೇನೆಂದು ನಂಬಿಸಿ, ಡಿಡಿ ಮೂಲಕ ರಾಮಚಂದ್ರ ಎರಡು ಲಕ್ಷ ರೂಪಾಯಿ ಹಣವನ್ನು ಸದಾಶಿವನ ಮೂಲಕ ತರಿಸಿಕೊಂಡಿದ್ದಾನೆ. ಕೆಲವು ದಿನಗಳ ನಂತರ ಗುತ್ತಿಗೆದಾರರು ಕೆಲಸವನ್ನು ಮುಂದುವರಿಸಲೆಂದು ಉಳೆಪಾಡಿ ಗ್ರಾಮಕ್ಕೆ ತೆರಳಿದಾಗ, ರಾಮಚಂದ್ರ ಕಂಪನಿಯವರಿಂದ ತೆಗೆದುಕೊಂಡ ಹಣವನ್ನು ಸಂತ್ರಸ್ತರಿಗೆ ನೀಡಿಲ್ಲ ಎನ್ನುವ ವಿಚಾರ ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಕಂಪನಿಯ ಮ್ಯಾನೇಜರ್ ಅವರು ರಾಮಚಂದ್ರ ಕಂಗೋರಿ ಮತ್ತು ಸದಾಶಿವ ವಿರುದ್ಧ ಮೂಲ್ಕಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
* ಕಾರ್ಕಳ: ರೈಲು ಢಿಕ್ಕಿ ಹೊಡೆದು ವ್ಯಕ್ತಿ ಸಾವು
ಕಾರ್ಕಳ: ಕಳೆದೆರಡು ದಿನಗಳ ಹಿಂದೆ, ಬೆಳಿಗ್ಗೆ 7:45ರ ಸುಮಾರಿಗೆ ರೈಲು ಢಿಕ್ಕಿ ಹೊಡೆದು, ವ್ಯಕ್ತಿಯೊಬ್ಬರು ಸಾವನ್ನಪ್ಪಿದ ಘಟನೆ ಹಳೆಯಂಗಡಿಯ ಇಂದಿರಾನಗರದ ರೈಲ್ವೆ ಕ್ರಾಸಿಂಗ್ ಬಳಿ ನಡೆದಿದೆ. ಮೃತಪಟ್ಟ ವ್ಯಕ್ತಿಯನ್ನು ಕಾರ್ಕಳದ ನಲ್ಲೂರಿನ ಪ್ರಭಾಕರ್ ಶೆಟ್ಟಿ ಎಂದು ಗುರುತಿಸಲಾಗಿದೆ. ಪ್ರಭಾಕರ್ ಶೆಟ್ಟಿ ವಿಪರೀತ ಮದ್ಯವ್ಯಸನಿಯಾಗಿದ್ದು, ಮೂಡುಬೆಳ್ಳಿಯ ಬಾರ್ ಒಂದರಲ್ಲಿ ಕೆಲಸ ಮಾಡುತ್ತಿದ್ದರು ಎಂದು ಅವರ ಕುಟುಂಬಸ್ಥರು ಹೇಳಿಕೆ ನೀಡಿದ್ದಾರೆ. ಅದನ್ನು ಹೊರತುಪಡಿಸಿ ಸಾವಿಗೆ ಸಂಬಂಧಿಸಿದಂತೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಅಪಘಾತಕ್ಕೆ ಸಂಬಂಧಿಸಿದಂತೆ ಮೂಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು, ತನಿಖೆಯನ್ನು ನಡೆಸಲಾಗಿದೆ.
* ಮಂಗಳೂರು: ಕೊಳಲು ಊದುತ್ತಾ 700 ಮೀಟರ್ ದೂರ ಈಜುವ ಮೂಲಕ ದಾಖಲೆ
ಮಂಗಳೂರು: ಸಂಗೀತ ಶಿಕ್ಷಕರಾದ ರುಬೆನ್ ಜೇಸನ್ ಅವರು ಇದೀಗ ಎಲ್ಲರ ಮಾತಿನ ಪ್ರಮುಖ ವಿಷಯವಾಗಿದ್ದಾರೆ. ಕಾರಣ ಬಹುಮುಖ ಪ್ರತಿಭೆಯುಳ್ಳ ಇವರು, ಬುಧವಾರದಂದು ಸಂತ ಅಲೋಷಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ಈಜುಕೊಳದಲ್ಲಿ, ಬೆಳಿಗ್ಗೆ ಹತ್ತರಿಂದ ಕೊಳಲನ್ನು ನುಡಿಸುತ್ತಾ ಪ್ರಾರಂಭಿಸಿ, ಐದು ಸುತ್ತು ಮತ್ತು 75 ಮೀಟರ್ ಪೂರ್ಣಗೊಳಿಸಿ, ಒಟ್ಟು 700 ಮೀಟರ್ ಗಿಂತ ಹೆಚ್ಚು ದೂರ ಹಿಮ್ಮುಖವಾಗಿ ಈಜುವ ಮೂಲಕ ಸಾಧನೆ ಮಾಡಿದ್ದಾರೆ. ಅಷ್ಟೇ ಅಲ್ಲ ಈ ಸಂದರ್ಭದಲ್ಲಿ ಅವರು ಕೊಳಲನ್ನು ನುಡಿಸುತ್ತಿದ್ದರು ಎನ್ನುವುದು ಮತ್ತೊಂದು ಆಶ್ಚರ್ಯಕರ ಸಂಗತಿಯಾಗಿದೆ. ಈ ಎರಡು ಬಗೆಯ ಸಾಧನೆಯ ಮೂಲಕ ರುಬೆನ್ ಅವರ ಹೆಸರು ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ನಲ್ಲಿ ದಾಖಲಾಗಿದೆ. ರುಬೆನ್ ಅವರು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವಾಟರ್ ಸೇಫ್ಟಿ ತಂಡದ ಅಧಿಕೃತ ಜೀವ ರಕ್ಷಕರಾಗಿದ್ದು, ಹಿಂದೂಸ್ತಾನಿ ಮತ್ತು ವಿದೇಶಿ ಕೊಳಲು ವಾದನದಲ್ಲಿ ಪರಿಣತಿ ಪಡೆದುಕೊಂಡಿದ್ದು, 15 ವರ್ಷಗಳ ಅನುಭವ ಹೊಂದಿದ್ದಾರೆ. ಇವುಗಳೊಂದಿಗೆ ಸ್ಯಾಕ್ಸೋಫೋನ್, ಗಿಟಾರ್ ಮತ್ತು ಇತರ ವಾದ್ಯಗಳು ನುಡಿಸುವುದರಲ್ಲಿಯೂ ಖ್ಯಾತಿ ಪಡೆದಿದ್ದಾರೆ. ಅಲ್ಲದೆ ಬಾಲಿವುಡ್, ಚಂದನವನ ಮತ್ತು ಕರಾವಳಿ ಭಾಗದ ಚಲನಚಿತ್ರಗಳಿಗೆ ಸಂಗೀತವನ್ನು ನೀಡಿದ್ದು, ದೇಶಾದ್ಯಂತ ಹಲವಾರು ಸಂಗೀತ ಕಾರ್ಯಕ್ರಮಗಳನ್ನು ನೀಡಿದ್ದಾರೆ. 2016ರಲ್ಲಿ ನಡೆದ ವರ್ಲ್ಡ್ ಕಲ್ಚರ್ ಫೆಸ್ಟಿವಲ್ ನಲ್ಲಿ 150ಕ್ಕೂ ಹೆಚ್ಚು ದೇಶಗಳ ಸಂಗೀತಗಾರರೊಂದಿಗೆ ಗಿನ್ನಿಸ್ ವಿಶ್ವ ದಾಖಲೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ಸಂತ ಅಲೋಷಿಯಸ್ ಕಾಲೇಜಿನಲ್ಲಿ ಪತ್ರಿಕೋದ್ಯಮ ವಿಭಾಗದಲ್ಲಿ ಎರಡು ವರ್ಷಗಳ ಕಾಲ ಉಪನ್ಯಾಸಕರಾಗಿ ಸೇವೆ ಸಲ್ಲಿಸಿರುವ ರುಬೆನ್ ಅವರ ಹೆಸರನ್ನು ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ನಲ್ಲಿ ದಾಖಲಿಸುವ ಸಂದರ್ಭದಲ್ಲಿ ಸಂತ ಅಲೋಷಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ಉಪಕುಲಪತಿಗಳಾದ ಡಾ. ಪ್ರವೀಣ್ ಮಾರ್ಟಿಸ್, ರುಬೆನ್ ಅವರ ಪತ್ನಿ ಅನುಷಾ ಮತ್ತು ಕುಟುಂಬಸ್ಥರು ಹಾಜರಿದ್ದರು.
* ಉಡುಪಿ: ಪೊಲೀಸರ ಟೋಪಿಯಲ್ಲಿ ಬದಲಾವಣೆ
ಉಡುಪಿ: ಪೊಲೀಸರು ಇದುವರೆಗೂ ಧರಿಸುತ್ತಿದ್ದ ಟೋಪಿ ಇದೀಗ ಮರೆಯಾಗುತ್ತಿದೆ. ದೇವರಾಜ ಅರಸು ಅವರು ಮುಖ್ಯಮಂತ್ರಿಗಳಾಗಿದ್ದ ಸಮಯದಲ್ಲಿ ಬಳಕೆಗೊಂಡ ಈ ಸ್ಲೋಚ್ ಟೋಪಿಗಳ ಬದಲಾಗಿ, ಪೀಕ್ ಟೋಪಿಗಳನ್ನು ನೀಡಲು ರಾಜ್ಯ ಸರ್ಕಾರವು ನಿರ್ಧರಿಸಿದ್ದು, ಬೆಂಗಳೂರಿನಲ್ಲಿ ಪೀಕ್ ಟೋಪಿಗಳ ಹಸ್ತಾಂತರ ಕಾರ್ಯಕ್ರಮ ಜರುಗಿದ್ದು, ಇದರಲ್ಲಿ ಅನೇಕ ಜನರು ಭಾಗವಹಿಸಿದ್ದರು. ಉಡುಪಿ ಜಿಲ್ಲೆ ಸೇರಿದಂತೆ ಉಳಿದ ಪೊಲೀಸರಿಗೆ ಇನ್ನಷ್ಟೇ ಪೀಕ್ ಟೋಪಿಗಳು ಲಭಿಸಬೇಕಿದೆ ಎಂದು ಪೊಲೀಸ್ ಇಲಾಖೆಯು ತಿಳಿಸಿದೆ. ಉಡುಪಿ ಜಿಲ್ಲೆಯಾದ್ಯಂತ ಸುಮಾರು 24 ಪೊಲೀಸ್ ಠಾಣೆಗಳಿದ್ದು, 1400 ಜನ ಕಾನ್ಸ್ಟೇಬಲ್ ಗಳು ಮತ್ತು ಹೆಡ್ ಕಾನ್ಸ್ಟೇಬಲ್ ಗಳು ಕಾರ್ಯನಿರ್ವಹಿಸುತ್ತಿದ್ದಾರೆ ಎನ್ನಲಾಗಿದೆ. ಈ ಹಿಂದೆ ಬಳಸುತ್ತಿದ್ದ ಹಳೆಯ ಟೋಪಿಗಳನ್ನು ಹಸ್ತಾಂತರಿಸುವ ಕುರಿತು ಸರ್ಕಾರ ಯಾವುದೇ ಸೂಚನೆಯನ್ನು ನೀಡಿಲ್ಲ. ಹಿಂದಿನ ಪೊಲೀಸ್ ಟೋಪಿಗಳೆಲ್ಲ ಪೊಲೀಸರಿಗೆ ಸಂಬಂಧಿಸಿದ ಸ್ಟೇಷನರಿಗಳಲ್ಲಿ ಲಭಿಸುತ್ತಿದ್ದವು. ಆದರೆ ಹೊಸದಾಗಿ ನೀಡಲಾಗುತ್ತಿರುವ ಪೀಕ್ ಟೋಪಿಗಳನ್ನು ಸರ್ಕಾರವೇ ಒದಗಿಸುತ್ತಿರುವುದರಿಂದ, ಮುಂಬರುವ ದಿನಗಳಲ್ಲಿ ಹಂತಹಂತವಾಗಿ ಎಲ್ಲಾ ಪೊಲೀಸ್ ಸ್ಟೇಷನರಿಗಳಲ್ಲಿ ದೊರೆಯಬಹುದು, ಕೆಲವೊಮ್ಮೆ ವರ್ಷಕ್ಕೆ ಎರಡರಿಂದ ಮೂರು ಟೋಪಿಗಳ ಅವಶ್ಯಕತೆ ಉಂಟಾಗುವುದರಿಂದ ಅಂಗಡಿಗಳಲ್ಲೇ ಪಡೆದುಕೊಳ್ಳಬೇಕಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ