Categories
ತೀರ್ಥಹಳ್ಳಿ

ಆಗುಂಬೆ ಬಳಿಗೆ ಬಂದ ಕಾಡಾನೆ..!

ಆಗುಂಬೆ ಬಳಿಗೆ ಬಂದ ಕಾಡಾನೆ..!
– ಜನರಿಗೆ ಭಯ, ಫಸಲು ಹಾನಿಯ ಭೀತಿ
– ಮಲೆನಾಡಿಗೆ ಕಾಡಾನೆ ಕಂಟಕ

NAMMUR EXPRESS NEWS
ತೀರ್ಥಹಳ್ಳಿ : ವಿಶ್ವ ಪ್ರಸಿದ್ಧ ಆಗುಂಬೆಯ ಬಳಿ ಆನೆ ಒಂದು ಪತ್ತೆಯಾಗಿದ್ದು ಇದೀಗ ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ. ಇತ್ತೀಚಿಗೆ ಸುಮಾರು 20 ವರ್ಷದ ಆನೆಯೊಂದು ಓಡಾಡುತ್ತಿದ್ದು. ಆದರೆ ಇದುವರೆಗೆ ಯಾವುದೇ ಕ್ಯಾಮೆರಾದ ಕಣ್ಣಿಗೂ ಬಿದ್ದಿಲ್ಲ, ಸ್ಥಳೀಯರು ಈ ಬಗ್ಗೆ ಮಾಹಿತಿ ನೀಡಿದ್ದು ಆತಂಕಕ್ಕೆ ಒಳಗಾಗಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಒಂಟಿ ಸಲಗ ಒಂದು ಓಡಾಡುತ್ತಿದ್ದು ಆಸ್ತಿಪಾಸ್ತಿಯನ್ನು ಹಾನಿ ಮಾಡಿದ್ದು, ಹಲವರನ್ನ ಬಲಿ ಕೂಡ ಪಡೆದಿತ್ತು, ಇದೀಗ ಈ ಆನೆ ಬೇರೆ ಆನೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಕೂಡಲೇ ಅರಣ್ಯ ಇಲಾಖೆಯು ಗಮನಿಸಬೇಕು ಹಾಗೂ ಸ್ಥಳೀಯರ ಭಯವನ್ನು ಹೋಗಲಾಡಿಸಬೇಕೆಂದು ನಮ್ಮೂರ್ ಎಕ್ಸ್ಪ್ರೆಸ್ ಮನವಿ ಮಾಡುತ್ತದೆ. ಈಗಾಗಲೇ ಕೊಪ್ಪ, ಎನ್.ಆರ್ ಪುರ, ಹೊಸ ನಗರ ಗಡಿಯಲ್ಲಿ ಆನೆಗಳ ಕಾಟ ಹೆಚ್ಚಾಗಿದೆ.

Categories
Uncategorized

ಸಾರ್ವಜನಿಕರ ಕುಂದು ಕೊರತೆ ಆಲಿಸಿದ ಸಂಸದ ಕೋಟಾ..

ಸಾರ್ವಜನಿಕರ ಕುಂದು ಕೊರತೆ ಆಲಿಸಿದ ಸಂಸದ ಕೋಟಾ..
– ಸಮಸ್ಯೆ ಪರಿಹರಿಸಲು ಅಧಿಕಾರಿಗಳಿಗೆ ಸ್ಥಳದಲ್ಲೇ ಸೂಚನೆ
– ವಿಶ್ವಕರ್ಮ ಯೋಜನೆ ಬಗ್ಗೆ ಸಭೆ

NAMMUR EXPRESS NEWS
ಚಿಕ್ಕಮಗಳೂರು: ಜಿಲ್ಲೆಯ ಸಂಸದರ ಕಚೇರಿಯಲ್ಲಿ ಮಂಗಳವಾರ ಉಡುಪಿ – ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಸಂಸದ ಕೋಟಾ ಶ್ರೀನಿವಾಸ ಪೂಜಾರಿಯವರು ಕ್ಷೇತ್ರದ ಸಾರ್ವಜನಿಕರಿಂದ ಕುಂದುಕೊರತೆ ಆಲಿಸಿದರು.
ಕೊರತೆ ಆಲಿಸಿ ಅಹವಾಲು ಸ್ವೀಕರಿಸಿದ ಸಂಸದ ಕೆಲ ಅರ್ಜಿಗಳಿಗೆ ಸ್ಥಳದಲ್ಲಿಯೇ ಸಂಬಂಧಪಟ್ಟ ಅಧಿಕಾರಿಗಳಿಗೆ ಕರೆಮಾಡಿ ಸಮಸ್ಯೆಗಳ ಪರಿಹಾರಕ್ಕೆ ಸೂಚಿಸಿದರು.
ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳಿಂದ ಮನವಿ ಸ್ವೀಕರಿಸಿದರು. ವಿಶ್ವಕರ್ಮ ಯೋಜನೆ ಸೇರಿದಂತೆ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಬಗ್ಗೆ ಫಲಾನುಭವಿಗಳ ಸಮಸ್ಯೆ ಆಲಿಸಿದರು.

ವಿಶ್ವಕರ್ಮ ಯೋಜನೆಗೆ ಸಮರ್ಪಕ ಜಾರಿಗೆ ಆಗ್ರಹಿಸಿ ಪತ್ರ..
ವಿಶ್ವಕರ್ಮ ಯೋಜನೆಯ ಸಮರ್ಪಕ‌ ಅನುಷ್ಠಾನಕ್ಕಾಗಿ ಎಲ್ಲಾ ಜಿಲ್ಲಾಧಿಕಾರಿಗಳ‌ ಸಭೆ ಕರೆಯುವಂತೆ ಕರ್ನಾಟಕ ಸರಕಾರದ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಪತ್ರವನ್ನು ಬರೆದಿದ್ದಾರೆ. ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಸುಮಾರು 60,000ಕ್ಕೂ ಹೆಚ್ಚು ಫಲಾನುಭವಿಗಳು ವಿಶ್ವಕರ್ಮ ಯೋಜನೆಗೆ ಅರ್ಜಿ ಸಲ್ಲಿಸಿದ್ದು, ಇಲಾಖೆಗಳ ಸಮನ್ವಯತೆ ಕೊರತೆಯಿಂದ ಯೋಜನೆ, ಕುಶಲಕರ್ಮಿಗಳಿಗೆ ಅದರಲ್ಲೂ ಬಡವರಿಗೆ ತಲುಪಲು ವಿಳಂಬವಾಗುತ್ತಿದೆ. ಕೌಶಲ್ಯಾಭಿವೃದ್ಧಿ ಮತ್ತು ಕೈಗಾರಿಕಾ ಇಲಾಖೆಗಳೊಂದಿಗೆ ರಾಷ್ಟ್ರೀಕೃತ ಬ್ಯಾಂಕ್‌ ಗಳ ಸಹಯೋಗದಲ್ಲಿ ಪ್ರಕಟಿತ ಸಾಂಪ್ರದಾಯಿಕ ಕುಲಕಸುಬುದಾರರಿಗೆ ಸಿಗಲಿರುವ ವಿಶ್ವಕರ್ಮ ಯೋಜನೆಯ ಜಿಲ್ಲಾ ಅನುಷ್ಠಾನಾಧಿಕಾರಿಯಾಗಿ ಪ್ರತಿ ಜಿಲ್ಲೆಯ ಜಿಲ್ಲಾಧಿಕಾರಿಗಳಿರುತ್ತಾರೆ. ಆದರೆ, ಜಿಲ್ಲಾಧಿಕಾರಿಗಳು ಮತ್ತು ಇತರ ಇಲಾಖಾಧಿಕಾರಿಗಳ ಸಮನ್ವಯದ ಕೊರತೆಯಿಂದ ಕೇಂದ್ರ ಸರ್ಕಾರ 13,000 ಕೋಟಿ ರೂ. ಭದ್ರತೆ ಹೊಂದಿರುವ ವಿಶ್ವಕರ್ಮ ಯೋಜನೆಯ ಪ್ರಗತಿಯಲ್ಲಿ ಹಿನ್ನಡೆಯಲ್ಲಿದೆ. ಬಡವರ ಕಲ್ಯಾಣ ಯೋಜನೆ ಎಂಬ ಮಾಹಿತಿಯನ್ನು ಪ್ರತಿ ಜಿಲ್ಲಾಧಿಕಾರಿಗಳಿಗೆ ಮಾಹಿತಿ ತಲುಪಿಸಿ, ವಿಶ್ವಕರ್ಮ ಯೋಜನೆಯ ಬಗ್ಗೆ ಜಿಲ್ಲೆಯಲ್ಲಿ ಪ್ರತಿ 15 ದಿನಗಳಿಗೊಮ್ಮೆ ಪ್ರಗತಿ ಪರಿಶೀಲನೆ ಮಾಡಲು ಆದೇಶ ನೀಡಬೇಕೆಂದು ಕೋರಿದ್ದಾರೆ. ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳು ಹಾಗೂ ಸಂಬಂಧಿತ ಅಧಿಕಾರಿಗಳ ಜೊತೆ ವಿಧಾನಸೌಧದಲ್ಲಿ ಸಭೆ ಕರೆದು ಅಗತ್ಯ ನಿರ್ದೇಶನ ನೀಡಬೇಕೆಂದು ಕೋರಿದ್ದಾರೆ. ಈ ಮೂಲಕ ಕುಶಲಕರ್ಮಿಗಳಿಗೆ ಬೆಂಬಲ ನೀಡುವ ಉದ್ದೇಶದಿಂದ ಆರಂಭಿಸಿರುವ ವಿಶ್ವಕರ್ಮ ಯೋಜನೆಯನ್ನು ಸರ್ಕಾರವು ಸಮರ್ಪಕವಾಗಿ ಅನುಷ್ಠಾನಗೊಳಿಸಿ ಕುಶಲಕರ್ಮಿಗಳು ಮತ್ತು ಬಡವರಿಗೆ ನೆರವಾಗುವಂತೆ ಪತ್ರದಲ್ಲಿ ಮನವಿ ಮಾಡಿದ್ದಾರೆ.

Categories
ತೀರ್ಥಹಳ್ಳಿ

ರಾಮೇಶ್ವರ ಜಾತ್ರೆಯ ರಥೋತ್ಸವ ಸಂಭ್ರಮ!

ರಾಮೇಶ್ವರ ಜಾತ್ರೆಯ ರಥೋತ್ಸವ ಸಂಭ್ರಮ!
– ರಥೋತ್ಸವಕ್ಕೆ ಸಾವಿರಾರು ಜನ ಭಕ್ತಾದಿಗಳ ಆಗಮನ, ದೇವರ ದರ್ಶನ
– ಎಳ್ಳಮಾವ್ಯಾಸೆ ಜಾತ್ರೆಯ ಎರಡನೇ ದಿನದ ಸಾವಿರಾರು ಜನ: ರಾತ್ರಿ ಅತೀ ಹೆಚ್ಚು ಜನ ಸಾಧ್ಯತೆ

NAMMUR EXPRESS NEWS
ತೀರ್ಥಹಳ್ಳಿ :
ರಾಮೇಶ್ವರ ಜಾತ್ರೆಯ 2ನೇ ದಿನದ ಜಾತ್ರೆಯ ರಂಗು ಜೋರಾಗಿದೆ. ಮೊದಲನೇ ದಿನದಂದು ತೀರ್ಥ ಸ್ನಾನ ನಡೆದಿದ್ದು ಸಾವಿರಾರು ಜನರು ಹೊರ ಊರುಗಳಿಂದ ಭಕ್ತರು ತೀರ್ಥ ಸ್ನಾನ ಮಾಡಿದ್ದಾರೆ. ಮೊದಲನೇ ದಿನ 10,000ಕ್ಕೂ ಹೆಚ್ಚು ಮಂದಿ ಭೇಟಿ ನೀಡಿ ವಿವಿಧ ಅಂಗಡಿಗಳಲ್ಲಿ ಖರೀದಿ ಮಾಡಿದರು ಜೊತೆಗೆ ಆಟಗಳನ್ನು ಆಡಿ ಸಂತಸ ಪಟ್ಟರು. ಇನ್ನೂ ರಥೋತ್ಸವಕ್ಕೆ ಈಗಾಗಲೇ ಸಾವಿರಾರು ಭಕ್ತರು ಆಗಮಿಸಿ ರಥ ಎಳೆದು ಸಂಭ್ರಮ ಪಟ್ಟರು.
ಸಿಂಗಾರಗೊಂಡ ರಥವನ್ನು ರಾಮೇಶ್ವರ ದೇವಸ್ಥಾನದ ಅವರಣದಿಂದ ರಥವನ್ನು ಗಾಂಧಿ ಚೌಕದವರೆಗೆ ಎಳೆಯಲಾಯಿತು. ರಥೋತ್ಸವದ ವೇಳೆ ಅಡಕೆ ಹೊಸ ಫಸಲನ್ನು ರಥದತ್ತ ಭಕ್ತರು ತೂರಿದರು. ರಥಕ್ಕೆ ತಾಗಿ ಕೆಳಗೆ ಬೀಳುತ್ತಿದ್ದ ಅಡಕೆ ಫಸಲನ್ನು ಪ್ರಸಾದದ ರೂಪದಲ್ಲಿ ಸ್ವೀಕರಿಸಿದರು. ರಥೋತ್ಸವಕ್ಕೂ ಮೊದಲು ಶ್ರೀ ರಾಮೇಶ್ವರ ದೇವಸ್ಥಾನದಲ್ಲಿ ದೇವರ ದರ್ಶನಕ್ಕೆ ಭಾರೀ ಸಂಖ್ಯೆಯ ಭಕ್ತರು ಸೇರಿದ್ದರು. ದೇವರನ್ನ ಹೊತ್ತು ಉತ್ಸವಕ್ಕೆ ಕರೆದೊಯ್ಯುವ ರಥ, ಹೂವು, ಹಣ್ಣು, ಹಾರಗಳಿಂದ, ವಿದ್ಯುತ್ ದೀಪಗಳಿಂದ, ಅಲಂಕಾರಿಕ ವಸ್ತುಗಳಿಂದ ಕಂಗೊಳಿಸುತ್ತಿತ್ತು. ಸಾವಿರಾರು ಸಂಖ್ಯೆಯಲ್ಲಿ ಭಕ್ತರು ದೇವರ ದರ್ಶನ ಪಡೆದು ನಂತರ ರಥವನ್ನು ಎಳೆಯುವ ಮೂಲಕ ದೇವರ ಕೃಪೆಗೆ ಪಾತ್ರರಾದರು. ಸುಮಾರು 15 ಸಾವಿರ ಭಕ್ತರು ಅನ್ನ ಪ್ರಸಾದ ಸ್ವೀಕರಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಎಳ್ಳಮಾವ್ಯಾಸೆ ಜಾತ್ರೆಯ ಎಲ್ಲಾ ವಿಡಿಯೋ ಹಾಗೂ ಸುದ್ದಿಗಳಿಗಾಗಿ ನಮ್ಮೂರ ಎಕ್ಸಪ್ರೆಸ್ ಯೂಟ್ಯೂಬ್ ಚಾನಲ್ ಅನ್ನ ವೀಕ್ಷಿಸಿ subscribe ಮಾಡಿ ಮಲೆನಾಡಿನ ಎಲ್ಲರಿಗೂ ಶೇರ್ ಮಾಡಿ…

Categories
ರಾಜ್ಯ

2024ಕ್ಕೆ ಗುಡ್‌ ಬೈ… 2025 ಹಾಯ್.. ಹಾಯ್..!

2024ಕ್ಕೆ ಗುಡ್‌ ಬೈ… 2025 ಹಾಯ್.. ಹಾಯ್..!
– ಕ್ಷಣಗಣನೆ ಶುರು: ಹೊಸ ವರ್ಷಕ್ಕೆ ಸ್ವಾಗತ
– ಪ್ರವಾಸಿ ತಾಣಗಳಲ್ಲಿ ಜನರಿಂದ ರಶ್ ರಶ್
– ಹೋಂ ಸ್ಟೇ, ರೆಸಾರ್ಟ್, ಹೋಟೆಲ್ ಫುಲ್ ಫುಲ್

NAMMUR EXPRESS NEWS
2024ಕ್ಕೆ ಗುಡ್‌ ಬೈ ಹೇಳಿ 2025ಕ್ಕೆ ಹಾಯ್ ಹೇಳುವುದಕ್ಕೆ ಕ್ಷಣಗಣನೆ ಶುರುವಾಗಿದೆ. ಇದಕ್ಕಾಗಿ ರಾಜ್ಯಾದ್ಯಂತ ಸಿದ್ದತೆಗಳು ಭರದಿಂದ ಸಾಗಿವೆ. ಕಡಲ ತೀರಗಳು, ರಾಜ್ಯದ ಪ್ರಮುಖ ಪ್ರವಾಸಿ ತಾಣಗಳಿಗೆ ಜನ ಭೇಟಿ ನೀಡಿ ಹೊಸ ವರ್ಷವನ್ನು ಬರ ಮಾಡಿಕೊಳ್ಳುತ್ತಿದ್ದಾರೆ. ಕುಟುಂಬಸ್ಥರು, ಸ್ನೇಹಿತರೊಂದಿಗೆ ಮೋಜು ಮಸ್ತಿ ಮಾಡುತ್ತಾ ಹೊಸ ವರ್ಷದ ಆಚರಣೆಗೆ ಕಾತುರದಿಂದ ಕಾಯುತ್ತಿದ್ದಾರೆ.
ಬೆಂಗಳೂರು ನಗರದ ಪ್ರಮುಖ ಸ್ಥಳಗಳಲ್ಲಿ ಆಚರಣೆಗೆ ಸಿದ್ಧತೆಗಳು ಭರದಿಂದ ಸಾಗಿವೆ. ಎಂಜಿ ರೋಡ್, ಬ್ರಿಗೇಡ್ ರೋಡ್ ಸೇರಿದಂತೆ ನಗರದ ಪ್ರಮುಖ ಬೀದಿಗಳಲ್ಲಿ ಪೊಲೀಸ್ ಕಾವಲು ಇರಿಸಲಾಗಿದೆ. ಅಲ್ಲದೆ ಅಲ್ಲಲ್ಲಿ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದ್ದು ಇದರ ಮೇಲ್ವಿಚಾರಣೆಗೆ ನಾಲ್ಕು ಸಬ್‌ ಇನ್ಪೆಕ್ಟರ್‌ಗಳನ್ನು ನಿಯೋಜನೆ ಮಾಡಲಾಗಿದೆ. ಜೊತೆಗೆ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಹದ್ದಿನ ಕಣ್ಣು ಇಟ್ಟಿದೆ. ಇನ್ನೂ ಬಹುತೇಕ ಬೆಂಗಳೂರಿನ ಜನ ರಾಜ್ಯದ ವಿವಿಧ ಪ್ರವಾಸಿ ತಾಣಗಳಿಗೆ ಭೇಟಿ ನೀಡಿ ಅಲ್ಲಿ ಹೊಸ ವರ್ಷದ ಆಚರಣೆಯಲ್ಲಿ ಪಾಲ್ಗೊಂಡಿದ್ದಾರೆ.

– ಚಿಕ್ಕಮಗಳೂರಿನಲ್ಲಿ ಜೋರಾದ ಹೊಸ ವರ್ಷದ ಆಚರಣೆ

ಹೊಸ ವರ್ಷಾಚರಣೆಗೆ ಕಾಫಿನಾಡು ಚಿಕ್ಕಮಗಳೂರಿಗೆ ರಾಜ್ಯಾದ್ಯಂತ ಪ್ರವಾಸಿಗರ ದಂಡೇ ಆಗಮಿಸುತ್ತಿದೆ. ಹೀಗಾಗಿ ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಇಂದು ಸಂಜೆ ಆರು ಗಂಟೆಯಿಂದ ಬೆಳಗ್ಗೆ ನಾಲ್ಕು ಗಂಟೆವರೆಗೆ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರಿಗೆ ಪ್ರವೇಶವನ್ನು ನಿರ್ಬಂಧ ವಿಧಿಸಲಾಗಿದೆ. ನೈತಿಕ ಪೊಲೀಸ್ ಗಿರಿ ವಿಧಿಸಲಾಗಿದೆ. ಬಾರ್‌ ಆಂಡ್ ರೆಸ್ಟೋರೆಂಟ್ ಗಳಿಗೆ ಎಚ್ಚರಿಕೆ ನೀಡಲಾಗಿದೆ. ರಾತ್ರಿ ಹತ್ತು ಗಂಟೆ ನಂತರ ಯಾವುದೇ ಡಿಜೆ ಸೌಂಡ್ ಬಳಸುವಂತಿಲ್ಲ. ಪ್ರವಾಸಿ ತಾಣಗಳಲ್ಲಿ ಆಚರಣೆ ಮಾಡುವಂತಿಲ್ಲ. ಹೀಗೆ ಹಲವಾರು ನಿರ್ಬಂಧವನ್ನು ಹೇರಲಾಗಿದೆ. ಸೂಕ್ಷ್ಮ ಪ್ರದೇಶಗಳಲ್ಲಿ ನೂರಾರು ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.

– ಚಾಮುಂಡಿ ಬೆಟ್ಟದಲ್ಲಿ ಪ್ರವಾಸಿಗರಿಗೆ ನಿರ್ಬಂಧ

ಇನ್ನೂ ಮೈಸೂರು ಚಾಮುಂಡಿ ಬೆಟ್ಟದಲ್ಲಿ ಇಂದು ಸಂಜೆ ಏಳು ಗಂಟೆಯಿಂದ ಆರು ಗಂಟೆ ವರೆಗೂ ಪ್ರವಾಸಿಗರಿಗೆ ನಿರ್ಬಂಧ ವಿಧಿಸಲಾಗಿದೆ. ಚಾಮುಂಡಿ ಬೆಟ್ಟದಲ್ಲಿ ಹೊಸ ವರ್ಷದ ಸೆಲೆಬ್ರೇಷನ್‌ಗೆ ಬ್ರೇಕ್ ಹಾಕಲಾಗಿದೆ. ಬೆಟ್ಟಕ್ಕೆ ಹೋಗುವ ಪ್ರವಾಸಿಗರೂ ಬೇಗ ಹೊರಬರಬೇಕು ಎಂದು ಸೂಚನೆ ನೀಡಲಾಗಿದೆ. ಮೈಸೂರಿನಲ್ಲಿ ಹೊಸ ವರ್ಷ ಬರಮಾಡಿಕೊಳ್ಳಲು ತಯಾರಿ ಜೋರಾಗಿದೆ. ಸಾವಿರಾರು ಜನ ಒಂದೆಡೆ ಸೆರುವುದರಿಂದ ಸಾವಿರಾರು ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಅಲ್ಲದೆ ಮೈಸೂರು ಪ್ರವಾಸಿ ತಾಣಗಳಲ್ಲೂ ಪೊಲೀಸ್ ನಿಯೋಜನೆ ಮಾಡಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ನಿಯೋಜನೆ ಮಾಡಲಾಗಿದೆ. ಮಧ್ಯರಾತ್ರಿ ಒಂದು ಗಂಟೆವರೆಗೂ ಮಾತ್ರ ಹೊಸ ವರ್ಷ ಆಚರಣೆಗೆ ಅವಕಾಶ ಇದೆ. ಒಂದು ಗಂಟೆ ನಂತರ ಆಚರಣೆಗೆ ಅವಕಾಶ ಇಲ್ಲ.

Categories
ಚಿಕ್ಕಮಗಳೂರು

ಮಲೆನಾಡಲ್ಲಿ ವ್ಯಾಘ್ರ ನಡಿಗೆ..!!

ಮಲೆನಾಡಲ್ಲಿ ವ್ಯಾಘ್ರ ನಡಿಗೆ..!!
– ನಾಡಿಗೆ ಬಂದ ಹುಲಿಗೆ ಹಸು ಬಲಿ ಶಂಕೆ
– ಸ್ಥಳೀಯರಲ್ಲಿ ಹೆಚ್ಚಿದ ಆತಂಕ

NAMMUR EXPRESS NEWS
ಶೃಂಗೇರಿ: ಕೆಲವು ದಿನಗಳ ಹಿಂದೆ ತಾಲೂಕಿನ ಉಳುವೆ ಬೈಲ್ ಎಂಬಲ್ಲಿ ಪ್ರವಾಸಿಗರ ಕಣ್ಣಿಗೆ ಕಾಣಿಸಿದ್ದ ಹುಲಿ ನಿನ್ನೆ ತಾಲೂಕಿನ ನಲ್ಲೂರು ಸಮೀಪದ ಗ್ರಾಮದಲ್ಲಿ ಹಸುವಿನ ಮೇಲೆ ದಾಳಿ ಮಾಡಿ ಕೊಂದಿದೆ ಎಂದು ತಿಳಿದಿದೆ. ಹಸುವಿನ ಕುತ್ತಿಗೆ ಭಾಗ ಹಾಗು ದೇಹದ ಮೇಲಿನ ಹಲ್ಲಿನ ಗುರುತುಗಳು ಬಿದ್ದಿದ್ದು ಇದು ಹುಲಿಯಿಂದ ಆದ ದಾಳಿ ಎಂದು ಶಂಕಿಸಲಾಗಿದೆ.ಇದರಿಂದ ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಆತಂಕ ಮನೆಮಾಡಿದೆ. ಅರಣ್ಯ ಇಲಾಖೆ ಈ ಬಗ್ಗೆ ಗಮನಹರಿಸಿ ಹುಲಿಯನ್ನು ಸೆರೆ ಹಿಡಿಯುವ ಬಗ್ಗೆ ಕಾರ್ಯಪ್ರವೃತರಾಗಬೇಕಿದೆ ಹಾಗೂ ಮುಂದೆ ಆಗಲಿರುವ ಅನಾಹುತವನ್ನು ತಪ್ಪಿಸಿ ಜನರ ಜೀವ ಉಳಿಸಬೇಕಿದೆ.

Categories
ರಾಜ್ಯ

ಟಾಪ್ 3 ನ್ಯೂಸ್

ಟಾಪ್ 3 ನ್ಯೂಸ್

– ಹುಬ್ಬಳ್ಳಿ : ಸಿಲಿಂಡರ್ ಸ್ಫೋಟ ಪ್ರಕರಣದಲ್ಲಿ ಮತ್ತೋರ್ವ ಅಯ್ಯಪ್ಪ ಮಾಲಾಧಾರಿ ಸಾವು
– ಹಾಸನ: ಪತ್ನಿಯು ಪ್ರಿಯಕರನ ಜೊತೆ ಸೇರಿ ಪತಿಯ ಹತ್ಯೆ
– ಕಲಬುರಗಿ: ಅತ್ತೆ ಬೇಗ ಸಾಯುವಂತೆ ಮಾಡು ಎಂದು 20 ರೂ ನೋಟಿನಲ್ಲಿ ದೇವರಿಗೆ ವಿಚಿತ್ರ ಕೋರಿಕೆ.

NAMMUR EXPRESS NEWS
ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಅಗ್ನಿ ಅವಘಡದಿಂದ ಗಂಭೀರ ಗಾಯಗೊಂಡಿದ್ದ ಮತ್ತೊಬ್ಬ ಅಯ್ಯಪ್ಪ ಮಾಲಾಧಾರಿ ಕಿಮ್ಸ್​​ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮಂಗಳವಾರ ಬೆಳಗ್ಗೆ ಮೃತಪಟ್ಟಿದ್ದಾರೆ. ಇದರೊಂದಿಗೆ, ಘಟನೆಯಲ್ಲಿ ಮೃತಪಟ್ಟವರ ಸಂಖ್ಯೆ 8ಕ್ಕೆ ಏರಿಕೆಯಾಗಿದೆ. ಹುಬ್ಬಳ್ಳಿಯ ಉಣಕಲ್ ನಿವಾಸಿ ಪ್ರಕಾಶ ಬಾರಕೇರ (42) ಮೃತ ಮೃತ ಅಯ್ಯಪ್ಪ ಮಾಲಾಧಾರಿ. ಸೋಮವಾರ ರಾತ್ರಿಯಷ್ಟೇ ಅಯ್ಯಪ್ಪ ಮಾಲಾಧಾರಿ ತೇಜಸ್ವರ್ (27)​​ ಮೃತಪಟ್ಟಿದ್ದರು. ಇದೀಗ 9 ಗಾಯಾಳುಗಳ ಪೈಕಿ 8 ಅಯ್ಯಪ್ಪ ಮಾಲಾಧಾರಿಗಳು ಮೃತಪಟ್ಟಿದ್ದು, ಪ್ರಕಾಶ್ ಬಾರಕೇರ ಅವರ ಮಗ ವಿನಾಯಕ್ ಕಿಮ್ಸ್‌ನಲ್ಲಿ ಚಿಕಿತ್ಸೆ ಮುಂದುವರಿದಿದೆ. ಅವರ ಆರೋಗ್ಯ ಸ್ಥಿರವಾಗಿದ್ದು, ಅವರಿಗೆ ಚಿಕಿತ್ಸೆ ಮುಂದುವರಿದಿದೆ.

– ಹಾಸನ: ಪತ್ನಿಯು ಪ್ರಿಯಕರನ ಜೊತೆ ಸೇರಿ ಪತಿಯ ಹತ್ಯೆ

ಹಾಸನ: ಮಹಿಳೆಯೊಬ್ಬಳು ತನ್ನ ಪ್ರಿಯಕರನ ಜೊತೆ ಸೇರಿ ಪತಿಯನ್ನೆ ಕೊಲೆಗೈದ ಘಟನೆ ಅರಸೀಕೆರೆಯ ಹೊರ ವಲಯದ ತಿರುಪತಿ ಕ್ರಾಸ್ ಬಳಿ ನಡೆದಿದೆ. ಮುಜಾಮಿಲ್ ಕೊಲೆಯಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ಆತನ ಪತ್ನಿ ಹಾಗೂ ಆಕೆಯ ಪ್ರಿಯಕರ ಯಾಸೀನ್ ಕೊಲೆಗೈದ ಆರೋಪಿಗಳಾಗಿದ್ದಾರೆ. ಅಕ್ರಮ ಸಂಬಂಧಕ್ಕೆ ಮುಜಾಮಿಲ್ ಅಡ್ಡಿಯಾಗಿದ್ದಕ್ಕೆ ಆರೋಪಿಗಳು ಈ ಕೃತ್ಯ ಎಸಗಿದ್ದಾರೆ ಎಂಬುದು ತನಿಖೆ ವೇಳೆ ತಿಳಿದು ಬಂದಿದೆ. ಕೊಲೆಯಾದ ಮುಜಾಮಿಲ್‍ನ ಪತ್ನಿ ಜೊತೆ ಯಾಸೀನ್ ಅಕ್ರಮ ಸಂಬಂಧ ಹೊಂದಿದ್ದ. ಇದೇ ವಿಚಾರಕ್ಕೆ ಪತ್ನಿ ಜೊತೆ ಮುಜಾಮಿಲ್ ಜಗಳವಾಡುತ್ತಿದ್ದ. ಇದರಿಂದ ಆತನ ಕೊಲೆಗೆ ಸ್ಕೆಚ್ ಹಾಕಿದ್ದ ಪತ್ನಿ ಹಾಗೂ ಯಾಸೀನ್ ಡಿ.15ರಂದು ಮದ್ಯ ಸೇವಿಸಿದ್ದ ಮುಜಾಮಿಲ್‍ನನ್ನು ನಗರದ ಹೊರ ವಲಯಕ್ಕೆ ಕರೆದೊಯ್ದು ತಲೆ ಮೇಲೆ ಕಲ್ಲು ಎತ್ತಿಹಾಕಿ ಹತ್ಯೆಗೈದಿದ್ದರು. ಬಳಿಕ ಶವವನ್ನು ಚರಂಡಿಗೆ ಹಾಕಿ ಮೂರು ದಿನಗಳ ಕಾಲ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದರು. ಅಲ್ಲದೆ, ಹೊಗೆ ಬರದಂತೆ ಗುಜರಿ ಅಂಗಡಿಯಿಂದ ಕಬ್ಬಿಣದ ವಸ್ತುಗಳನ್ನು ತಂದು ಚರಂಡಿ ಮುಚ್ಚಿದ್ದರು. ಎರಡು ದಿನಗಳ ನಂತರ ಆರೋಪಿ ಮಹಿಳೆ ಹಾಗೂ ಆಕೆಯ ಪುತ್ರ ಜಾಹೀದ್ ಖಾನ್ ಪೊಲೀಸ್ ಠಾಣೆಗೆ ತೆರಳಿ ಮುಜಾಮಿಲ್ ಕಾಣೆಯಾಗಿದ್ದ ಬಗ್ಗೆ ದೂರು ದಾಖಲಿಸಿದ್ದರು. ತನಿಖೆ ನಡೆಸಿದ್ದ ಪೊಲೀಸರು ಸುಟ್ಟ ಸ್ಥಿತಿಯಲ್ಲಿದ್ದ ಮುಜಾಮಿಲ್ ಶವವನ್ನು ಪತ್ತೆ ಹಚ್ಚಿದ್ದರು. ಬಳಿಕ ಆರೋಪಿಯನ್ನು ವಿಚಾರಣೆ ನಡೆಸಿದಾಗ ಕೊಲೆ ರಹಸ್ಯ ಬಯಲಾಗಿದೆ. ಈ ಘಟನೆ ಸಂಬಂಧ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

– ಕಲಬುರಗಿ: ಅತ್ತೆ ಬೇಗ ಸಾಯುವಂತೆ ಮಾಡು ಎಂದು 20 ರೂ ನೋಟಿನಲ್ಲಿ ದೇವರಿಗೆ ವಿಚಿತ್ರ ಕೋರಿಕೆ.

ಕಲಬುರಗಿ: ಹುಂಡಿ ಹಣ ಎಣಿಕೆ ವೇಳೆ ನೋಟಿನ ಮೇಲೆ ಭಕ್ತರೊಬ್ಬರು ಬರೆದಿದ್ದ ಸಾಲುಗಳನ್ನು ನೋಡಿ ದೇವಸ್ಥಾನದ ಸಿಬ್ಬಂದಿಗಳೇ ತಬ್ಬಿಬಾದ ಘಟನೆ ಕರ್ನಾಟಕದಲ್ಲಿ ನಡೆದಿದೆ. ಕರ್ನಾಟಕದ ಕಲಬುರಗಿ ಜಿಲ್ಲೆ ಅಫಜಲಾಪುರ ತಾಲೂಕಿನ ಘತ್ತರಗಿ ಗ್ರಾಮದ ಭಾಗ್ಯವಂತಿ ದೇವಿ ದೇವಸ್ಥಾನದಲ್ಲಿ ಘಟನೆ ನಡೆದಿದ್ದು, ಭಕ್ತೆಯೊಬ್ಬರು ದೇವಸ್ಥಾನದ ಹುಂಡಿಯಲ್ಲಿ ಹಾಕಿದ್ದ ನೋಟಿನ ಮೇಲೆ ‘ನಮ್ಮ ಅತ್ತೆ ಬೇಗ ಸಾಯಬೇಕು ಎಂದು ಬರೆದು ಹಾಕಿದ್ದಾರೆ. ಇತ್ತೀಚೆಗೆ ದೇಗುಲದ ಹುಂಡಿ ಹಣ ಎಣಿಕೆ ವೇಳೆ ಸಿಬ್ಬಂದಿ ಈ ನೋಟನ್ನು ನೋಡಿ ತಬ್ಬಿಬ್ಬಾಗಿದ್ದಾರೆ. ಭಾಗ್ಯವಂತಿ ದೇವಿ ದೇವಸ್ಥಾನದಲ್ಲಿ ಹುಂಡಿ ಎಣಿಕೆ ಮಾಡುವಾಗ ಈ 20 ರೂಪಾಯಿ ನೋಟು ಪತ್ತೆಯಾಗಿದೆ. ನೋಟಿನ ಮೇಲೆ ಬರೆದಿರುವ ಈ ವಾಕ್ಯ ನೋಡಿ ಸಿಬ್ಬಂದಿ ಅಚ್ಚರಿಗೊಂಡರು. ಕೂಡಲೇ ಸಿಬ್ಬಂದಿ ದೇವಸ್ಥಾನದ ಅಧಿಕಾರಿಗಳ ಗಮನಕ್ಕೆ ತಂದಿದ್ದು, ಇದೀಗ ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ. ಅಂದಹಾಗೆ ಭಾಗ್ಯವಂತಿ ದೇವಿ ದೇವಸ್ಥಾನದಲ್ಲಿ ಪ್ರತಿ ವರ್ಷ ಹುಂಡಿ ಎಣಿಕೆ ನಡೆಯುತ್ತದೆ. ಈ ವರ್ಷ ಹುಂಡಿಯಿಂದ ಸುಮಾರು ರೂ. 60 ಲಕ್ಷ ನಗದು ಹಾಗೂ 1 ಕೆಜಿ ಬೆಳ್ಳಿ ವಸ್ತುಗಳನ್ನು ಸಂಗ್ರಹಿಸಲಾಗಿದೆ ಎಂದು ದೇವಸ್ಥಾನದ ಅಧಿಕಾರಿಗಳು ತಿಳಿಸಿದ್ದಾರೆ. ದೇಗುಲಕ್ಕೆ ಬರುವ ಕೆಲ ಭಕ್ತರು ತಮ್ಮ ಕೋರಿಕೆಗಳನ್ನು ಬರೆದು ಅದನ್ನು ಹುಂಡಿಗೆ ಹಾಕುತ್ತಾರೆ. ಇದೇ ರೀತಿ ಸೊಸೆಯೊಬ್ಬರು ತಮ್ಮ ಅತ್ತೆ ಸಾವಿನ ಕೋರಿಕೆ ಕೋರಿ ಹುಂಡಿಗೆ ಹಣ ಹಾಕಿದ್ದಾರೆ.

Categories
ಕರಾವಳಿ

ಮಂಗಳೂರು: ಹೊಸ ವರ್ಷಕ್ಕೆ ಸಿದ್ಧತೆ ಹೇಗಿದೆ?

ಮಂಗಳೂರು: ಹೊಸ ವರ್ಷಕ್ಕೆ ಸಿದ್ಧತೆ ಹೇಗಿದೆ?
– ಹೊಸ ವರ್ಷಾಚರಣೆಯ ಸಂಭ್ರಮ, ಕರಾವಳಿಗೆ ಭಾರೀ ಸಂಖ್ಯೆಯ ಪ್ರವಾಸಿಗರ ಆಗಮನ
– ವ್ಯಾಪಕ ಪೊಲೀಸ್‌ ಬಂದೋಬಸ್ತ್

NAMMUR EXPRESS NEWS
ಮಂಗಳೂರು/ಉಡುಪಿ: ಹೊಸ ವರ್ಷಾಚರಣೆಯ ಸಂಭ್ರಮಕ್ಕಾಗಿ ಕರಾವಳಿಗೆ ಭಾರೀ ಸಂಖ್ಯೆಯ ಪ್ರವಾಸಿಗರು ಆಗಮಿಸಿದ್ದಾರೆ. ಕರಾವಳಿಯ ಎಲ್ಲೆಡೆ ಭಾರೀ ವಾಹನ ದಟ್ಟಣೆ ಕೂಡ ಕಂಡು ಬಂದಿದೆ. ಸುಗಮ ವ್ಯವಸ್ಥೆ ಕಲ್ಪಿಸಲು ಪೊಲೀಸರು ವ್ಯಾಪಕ ಬಂದೋಬಸ್ತ್ ಕೈಗೊಂಡಿದ್ದಾರೆ. ಮಂಗಳೂರು ಸೇರಿದಂತೆ ದ.ಕ ಜಿಲ್ಲೆಯ ಪ್ರಸಿದ್ಧ ಯಾತ್ರ ಸ್ಥಳಗಳು ಪ್ರವಾಸಿಗರಿಂದ ಗಿಜಿಗುಡುತ್ತಿವೆ. ಮಂಗಳೂರು-ಬೆಂಗಳೂರು ಹೆದ್ದಾರಿ, ಮಂಗಳೂರು-ಗೋವಾ ಹೆದ್ದಾರಿಗಳಲ್ಲಿ ಸಂಚಾರ ದಟ್ಟಣೆ ನಿರಂತರವಾಗಿ ಹೆಚ್ಚುತ್ತಲೇ ಇದು, ದಟ್ಟಣೆ ಅವಧಿ ಹೊರತಾಗಿಯೂ ಇದು ಮುಂದುವರಿದಿದೆ.

ಹೆಚ್ಚುವರಿ ಬಂದೋಬಸ್ತ್!

ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಡಿ. 31ರ ಮಧ್ಯಾಹ್ನದಿಂದ ಮಂಗಳೂರು ನಗರದ ವಿವಿಧೆಡೆ ಹೆಚ್ಚುವರಿ ಬಂದೋಬಸ್ತ್, ತಪಾಸಣೆ ಮಾಡಲಾಗುವುದು.
ಪ್ರಮುಖ ಪಾಯಿಂಟ್‌ಗಳಲ್ಲಿ ಪೊಲೀಸ್‌ ಅಧಿಕಾರಿಗಳನ್ನು, ಕೆಎಸ್‌ಆರ್‌ಪಿ, ಸಿಎಆರ್‌ ತುಕಡಿ ನಿಯೋಜಿಸಲಾಗುವುದು. ಹೆಚ್ಚುವರಿ ಚೆಕ್‌ಪೋಸ್ಟ್‌ಗಳಲ್ಲಿ ವಿಶೇಷ ತಪಾಸಣೆ ನಡೆಸಲಾಗುವುದು. ಮದ್ಯಸೇವಿಸಿ ವಾಹನ ಚಾಲನೆ, ಡ್ರಗ್ಸ್‌ ಸೇವನೆ ತಪಾಸಣೆ ಕೂಡ ನಡೆಸಲಾಗುವುದು. ವ್ಹೀಲಿಂಗ್‌, ಅತೀವೇಗ, ನಿರ್ಲಕ್ಷ್ಯದ ಚಾಲನೆ ಮೊದಲಾದವುಗಳ ಮೇಲೆಯೂ ನಿಗಾ ಇಡಲಾಗುವುದು. ಹೊಸ ವರ್ಷಾಚರಣೆಯ ಸಂದರ್ಭದಲ್ಲಿ ಸಮಾಜ ಘಾತುಕ ಶಕ್ತಿಗಳು ಕಾನೂನು ಕೈಗೆತ್ತಿಕೊಳ್ಳಲು ಅವಕಾಶ ನೀಡುವುದಿಲ್ಲ. ಎಲ್ಲರೂ ಕಾನೂನು ಚೌಕಟ್ಟಿನೊಳಗೆ ಹೊಸ ವರ್ಷ ಆಚರಿಸಬೇಕು ಎಂದು ಪೊಲೀಸ್‌ ಆಯುಕ್ತ ಅನುಪಮ್‌ ಅಗರ್‌ವಾಲ್‌ ತಿಳಿಸಿದ್ದಾರೆ.

Categories
ರಾಜ್ಯ

ಕರ್ನಾಟಕದೆಲ್ಲೆಡೆ ಮಳೆ ಕಡಿಮೆಯಾಗಿ ಚುಮು ಚುಮು ಚಳಿ ಆರಂಭ

ಕರ್ನಾಟಕದೆಲ್ಲೆಡೆ ಮಳೆ ಕಡಿಮೆಯಾಗಿ ಚುಮು ಚುಮು ಚಳಿ ಆರಂಭ
– ಹಲವೆಡೆ ಚಳಿಯ ಪ್ರಮಾಣ ತುಸು ಹೆಚ್ಚಾದಂತಿದೆ
– ಕೆಲವು ಜಿಲ್ಲೆಯಲ್ಲಿ ಅತಿ ಕಡಿಮೆ ಉಷ್ಣಾಂಶ ದಾಖಲು

NAMMUR EXPRESS NEWS
ಕರ್ನಾಟಕದಾದ್ಯಂತ ಮಳೆ ಕಡಿಮೆಯಾಗಿ ಚುಮುಚುಮು ಚಳಿ ಶುರುವಾಗಿದೆ. ಗದಗ ಹಾಗೂ ಬೀದರ್​ನಲ್ಲಿ 14.4 ಡಿಗ್ರಿ ಸೆಲ್ಸಿಯಸ್ ಅತ್ಯಂತ ಕನಿಷ್ಠ ಉಷ್ಣಾಂಶ ದಾಖಲಾಗಿದೆ. ಬೆಂಗಳೂರಿನ ಎಚ್​ಎಎಲ್​ನಲ್ಲಿ 28.0 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 17.2 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ನಗರದಲ್ಲಿ 28.2 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 17.8 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಕೆಐಎಎಲ್​ನಲ್ಲಿ 28.6 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 18.8 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಜಿಕೆವಿಕೆಯಲ್ಲಿ 27.4 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 17.0 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ.

ಹೊನ್ನಾವರದಲ್ಲಿ 34.4 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 21.5 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಕಾರವಾರದಲ್ಲಿ 36.6 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 21.5 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಪಣಂಬೂರಿನಲ್ಲಿ 34.9 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 22.7 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ.

ಬೀದರ್​ನಲ್ಲಿ 22.7 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 14.4 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ವಿಜಯಪುರದಲ್ಲಿ 30.5 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 14.5 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಬಾಗಲಕೋಟೆಯಲ್ಲಿ 32.2 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 13.5 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ. ಧಾರವಾಡದಲ್ಲಿ 29.2 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 14.5 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಗದಗದಲ್ಲಿ 30.7 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 14.4 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಕಲಬುರಗಿಯಲ್ಲಿ 33.6 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 19.2 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಹಾವೇರಿಯಲ್ಲಿ 31.0 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 15.2 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ.

ವಿಜಯನಗರ, ತುಮಕೂರು, ಶಿವಮೊಗ್ಗ, ರಾಮನಗರ, ಮೈಸೂರು, ಮಂಡ್ಯ, ಕೋಲಾರ, ಕೊಡಗು, ಹಾಸನ, ದಾವಣಗೆರೆ, ಚಿತ್ರದುರ್ಗ, ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರದಲ್ಲಿ ಚಳಿ ಇದೆ. ಯಾದಗಿರಿ, ಕೊಪ್ಪಳ, ರಾಯಚೂರು, ಕಲಬುರಗಿ, ಹಾವೇರಿ, ಗದಗ, ಧಾರವಾಡ, ಬೀದರ್, ಬೆಳಗಾವಿ, ಬಾಗಲಕೋಟೆ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿಯಲ್ಲಿ ಚಳಿಯ ವಾತಾವರಣವಿದೆ.

Categories
ಉಡುಪಿ

ಕುಕ್ಕುಂದೂರು ದೇಗುಲ ಅಭಿವೃದ್ಧಿಗೆ ಕಂಕಣ!

ಕುಕ್ಕುಂದೂರು ದೇಗುಲ ಅಭಿವೃದ್ಧಿಗೆ ಕಂಕಣ!
-ಜೀರ್ಣೋದ್ಧಾರದ ಮನವಿ ಪತ್ರ ಬಿಡುಗಡೆ ಮಾಡಿದ ಖ್ಯಾತ ನಟ ಟೆನ್ನಿಸ್‌ಕೃಷ್ಣ
– ಪರಪು ಗುತ್ತು ಕರೆ ಪಿಲಿಚಂಡಿ, ಬೊಬ್ಬರ್ಯ, ನೀಚ ಹಾಗೂ ಗುಳಿಗ ದೈವಸ್ಥಾನಕ್ಕೆ ಬೇಕು ಭಕ್ತರ ಸಹಾಯ

NAMMUR EXPRESS NEWS
ಕಾರ್ಕಳ :
ಐತಿಹಾಸಿಕ ಪರಪು ಗುತ್ತ ಕರೆಯ ಪಿಲಿಚಂಡಿ ಬೊಬ್ಬರ್ಯ, ನೀಚ ಹಾಗೂ ಗುಳಿಗ ದೈವಗಳ ದೇಗುಲ ತೀರಾ ಹಳೆಯದಾಗಿದ್ದು ಶಿಥಿಲಾವಸ್ಥೆಗೆ ಒಳಗಾಗಿದೆ. ಈ ದೈವಸ್ಥಾನವನ್ನು ಜೀರ್ಣೋದ್ದಾರಗೊಳಿಸಲು ಪರಪು ಗುತ್ತು ಕರೆಯ ಹಾಗೂ ಸಂಬಂಧಪಟ್ಟ ಗುತ್ತು ಬರ್ಕೆಯವರೊಂದಿಗೆ ಎಲ್ಲಾ ದೈವ ಭಕ್ತರ ಇಚ್ಛೆಯಂತೆ ನವೀಕರಣಗೊಳಿಸಲು ಊರಿನ ಹತ್ತು ಸಮಸ್ತರ ಸಮ್ಮುಖದಲ್ಲಿ ನಿರ್ಧರಿಸಲಾಗಿದೆ. ಕುಕ್ಕುಂದೂರು ಗ್ರಾಮದ ಪರಪು ಗುತ್ತುಕರೆಯ ದೈವಸ್ಥಾನದ ಜೀರ್ಣೋದ್ಧಾರ ಮಾಡುವ ಸಲುವಾಗಿ ಮನವಿ ಪತ್ರವನ್ನು ಖ್ಯಾತ ಕನ್ನಡ ಚಲನಚಿತ್ರ ಹಾಸ್ಯ ನಟ ಟೆನ್ನಿಸ್‌ ಕೃಷ್ಣ ಅವರು ಡಿಸೆಂಬರ್‌ 29ರಂದು ಗುತ್ತುಕರೆಯ ಸನ್ನಿಧಾನದಲ್ಲಿ ಬಿಡುಗಡೆಗೊಳಿಸಿದರು. ರಾಜೇಶ್‌ ರಾವ್‌ ಪರಪ್ಪು, ಶಿವರಾಂ ರಾವ್‌, ಬೆಂಗಳೂರು ಉದ್ಯಮಿ ಚಂದ್ರು, ವಸಂತ್‌ ಅತಿಕಾರಿ, ದೇವರಾಜ ಅಧಿಕಾರಿ, ಉದ್ಯಮಿ ಸುಭಾಷ್‌ ಕಾಮತ್‌, ರವೀಂದ್ರ ಶೆಟ್ಟಿ, ಗೀತಾ ಶೆಟ್ಟಿ, ವೆಂಕಪ್ಪ ಶೆಟ್ಟಿ ಹಾಗೂ ಸ್ಥಳೀಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ವಿನಯ್‌ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

Categories
ಜಾತಕ

ಈ ದಿನದ ರಾಶಿ ಭವಿಷ್ಯ ಹೇಗಿದೆ?

ಈ ದಿನದ ರಾಶಿ ಭವಿಷ್ಯ ಹೇಗಿದೆ?
– ಹನುಮಂತನ ವಿಶೇಷ ಕೃಪೆಯಿಂದ ಯಾವ ರಾಶಿಯವರಿಗೆ ಒಳಿತು ? ಯಾವ ರಾಶಿಯವರಿಗೆ ಕೆಡಕು ?

NAMMUR EXPRESS NEWS
ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು?

** ಮೇಷ ರಾಶಿ :
ಇಂದು ನಿಮಗೆ ಶುಭ ದಿನವಾಗಿರುತ್ತದೆ. ಆದಾಯ ಹೆಚ್ಚಲಿದೆ. ವೃತ್ತಿ ಜೀವನದಲ್ಲಿ ಸ್ಪರ್ಧೆಯ ವಾತಾವರಣವಿರುತ್ತದೆ. ಅಗತ್ಯ ಗೃಹೋಪಯೋಗಿ ವಸ್ತುಗಳ ಖರೀದಿ ಸಾಧ್ಯ. ವಿದ್ಯಾರ್ಥಿಗಳು ಯಶಸ್ಸಿಗೆ ಶ್ರಮಿಸಬೇಕಾಗುತ್ತದೆ. ಸಾಮಾಜಿಕ ಸ್ಥಾನಮಾನ ಮತ್ತು ಪ್ರತಿಷ್ಠೆ ಹೆಚ್ಚಾಗುತ್ತದೆ. ಉದ್ಯೋಗ ಮತ್ತು ವ್ಯವಹಾರದಲ್ಲಿ ಪ್ರಗತಿಯ ಸಾಧ್ಯತೆ ಇರುತ್ತದೆ. ಕೌಟುಂಬಿಕ ಜೀವನದಲ್ಲಿ ಸಂತೋಷ ಇರುತ್ತದೆ. ಇಂದು ನೀವು ನಿಮ್ಮ ಸಂಗಾತಿಯೊಂದಿಗೆ ಎಲ್ಲೋ ಪ್ರಯಾಣಿಸಲು ಯೋಜಿಸಬಹುದು.

** ವೃಷಭ ರಾಶಿ :
ಇಂದು ಹಣಕಾಸಿನ ವಿಚಾರದಲ್ಲಿ ಜಾಗರೂಕರಾಗಿರಿ. ತರಾತುರಿಯಲ್ಲಿ ಏನನ್ನೂ ಖರೀದಿಸುವ ಯೋಚನೆಗಳನ್ನು ಮಾಡಬೇಡಿ. ಇಂದು ಹೆಚ್ಚು ಹಣ ಖರ್ಚಾಗುತ್ತದೆ. ಹಿರಿಯರು ವ್ಯಾಪಾರ ಪ್ರವಾಸಗಳಿಗೆ ಅವಕಾಶಗಳನ್ನು ಪಡೆಯುತ್ತಾರೆ. ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ. ನಿಮ್ಮ ಕೆಲಸವು ಉತ್ತಮ ಫಲಿತಾಂಶವನ್ನು ನೀಡುತ್ತದೆ. ಕೌಟುಂಬಿಕ ಜೀವನ ಸುಖಮಯವಾಗಿರುತ್ತದೆ.

** ಮಿಥುನ ರಾಶಿ :
ಇಂದು ನೀವು ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದ ಸ್ವಲ್ಪ ಪರಿಹಾರವನ್ನು ಪಡೆಯುತ್ತೀರಿ. ಕಚೇರಿಯಲ್ಲಿ ನಿಮ್ಮ ಕಾರ್ಯಕ್ಷಮತೆ ಉತ್ತಮವಾಗಿರುತ್ತದೆ. ಸಂಗಾತಿಯೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯುವಿರಿ. ನೀವು ವಿಹಾರಕ್ಕೆ ಯೋಜಿಸುತ್ತಿದ್ದರೆ, ಇಂದು ಪರಿಪೂರ್ಣ ದಿನವಾಗಿದೆ. ಶೈಕ್ಷಣಿಕ ಕೆಲಸದಲ್ಲಿ ನೀವು ಆಹ್ಲಾದಕರ ಫಲಿತಾಂಶಗಳನ್ನು ಪಡೆಯುತ್ತೀರಿ. ಯಶಸ್ಸಿನ ಮೆಟ್ಟಿಲುಗಳನ್ನು ಏರುವಿರಿ. ಸುಖಮಯ ಜೀವನ ನಡೆಸುವಿರಿ.

** ಕರ್ಕಾಟಕ ರಾಶಿ :
ಇಂದು ನಿಮ್ಮ ಮನಸ್ಸು ಅತಿಯಾದ ಖರ್ಚುಗಳಿಂದ ತೊಂದರೆಗೊಳಗಾಗುತ್ತದೆ. ವೃತ್ತಿ ಜೀವನದಲ್ಲಿ ಉತ್ತಮ ಪ್ರದರ್ಶನ ನೀಡುವಿರಿ. ಉದ್ಯೋಗಸ್ಥರಿಗೆ ಬಡ್ತಿಯ ಅವಕಾಶಗಳು ಹೆಚ್ಚಾಗುತ್ತವೆ. ಇಂದು, ಕುಟುಂಬದ ಬೆಂಬಲದೊಂದಿಗೆ, ಕೆಲಸದಲ್ಲಿನ ಅಡೆತಡೆಗಳು ನಿವಾರಣೆಯಾಗುತ್ತವೆ. ಕೆಲವರು ಕುಟುಂಬ ಮತ್ತು ಸ್ನೇಹಿತರೊಂದಿಗೆ ವಿಹಾರಕ್ಕೆ ಯೋಜಿಸಬಹುದು. ಆಸ್ತಿಗೆ ಸಂಬಂಧಿಸಿದಂತೆ ವಿವಾದ ಸಾಧ್ಯ. ಕಾನೂನು ವಿಷಯಗಳಿಂದ ದೂರವಿರಿ.

** ಸಿಂಹ ರಾಶಿ :
ಇಂದು ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ನೀಡಿ. ಕೆಲವರು ತಮ್ಮ ವ್ಯವಹಾರವನ್ನು ವಿಸ್ತರಿಸಲು ಸುಲಭವಾಗಿ ಸಾಲವನ್ನು ಪಡೆಯುತ್ತಾರೆ. ವೃತ್ತಿಪರ ಜೀವನದಲ್ಲಿ, ಗ್ರಾಹಕರು ನಿಮ್ಮ ಕೆಲಸದಿಂದ ಸಂತೋಷವಾಗಿರುತ್ತಾರೆ. ಇದು ಹೊಸ ಯೋಜನೆಗಳ ಜವಾಬ್ದಾರಿಯನ್ನು ಸಹ ನೀಡುತ್ತದೆ. ಕೌಟುಂಬಿಕ ಪ್ರವಾಸಕ್ಕೆ ಹೋಗಬಹುದು. ಭೂಮಿ ಅಥವಾ ವಾಹನ ಖರೀದಿ ಸಾಧ್ಯ. ಇಂದು, ಕಠಿಣ ಪರಿಶ್ರಮ ಮತ್ತು ಉತ್ತಮ ನೆಟ್‌ವರ್ಕಿಂಗ್ ವೃತ್ತಿ ಬೆಳವಣಿಗೆಗೆ ಸಾಕಷ್ಟು ಅವಕಾಶಗಳನ್ನು ಒದಗಿಸುತ್ತದೆ. ನೀವು ಶೈಕ್ಷಣಿಕ ಕೆಲಸದಲ್ಲಿಯೂ ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ.

** ಕನ್ಯಾ ರಾಶಿ :
ಇಂದು ಕಠಿಣ ಪರಿಶ್ರಮ ಮತ್ತು ಸಮರ್ಪಣಾ ಮನೋಭಾವದಿಂದ ಕೆಲಸಗಳನ್ನು ಪೂರ್ಣಗೊಳಿಸಿ. ಇದು ಎಲ್ಲಾ ಕಾರ್ಯಗಳಲ್ಲಿ ಉತ್ತಮ ಫಲಿತಾಂಶವನ್ನು ನೀಡುತ್ತದೆ. ನಿಮ್ಮ ವೃತ್ತಿಪರ ಕೌಶಲ್ಯಗಳನ್ನು ಸುಧಾರಿಸಲು ಇಂದು ನೀವು ಸಾಕಷ್ಟು ಅವಕಾಶಗಳನ್ನು ಪಡೆಯುತ್ತೀರಿ. ಕುಟುಂಬದಲ್ಲಿ ಶುಭ ಕಾರ್ಯಗಳನ್ನು ಆಯೋಜಿಸಲು ಸಾಧ್ಯವಿದೆ. ಆಸ್ತಿ ಸಂಬಂಧಿತ ವಿವಾದಗಳಿಗೆ ಸಂಬಂಧಿಸಿದಂತೆ ಕೆಲವರು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.

** ತುಲಾ ರಾಶಿ :
ಇಂದು ವೃತ್ತಿ ಜೀವನದಲ್ಲಿ ಯಶಸ್ಸಿನ ಮೆಟ್ಟಿಲುಗಳನ್ನು ಏರುವಿರಿ. ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ನೀವು ಬಯಸಿದ ಯಶಸ್ಸನ್ನು ಪಡೆಯುತ್ತೀರಿ. ವೃತ್ತಿಪರ ಜೀವನದಲ್ಲಿ ಹೊಸ ಜವಾಬ್ದಾರಿಗಳಿಗೆ ಸಿದ್ಧರಾಗಿರಿ. ಕೆಲಸದ ನಿಮಿತ್ತ ಪ್ರಯಾಣ ಮಾಡುವ ಅವಕಾಶವಿರುತ್ತದೆ. ಇದರಿಂದಾಗಿ ಕುಟುಂಬದೊಂದಿಗೆ ವಾಸಿಸಲು ಕೆಲವು ತೊಂದರೆಗಳು ಉಂಟಾಗುತ್ತವೆ. ನೀವು ಶೈಕ್ಷಣಿಕ ಕೆಲಸದಲ್ಲಿ ಉತ್ತಮ ಯಶಸ್ಸನ್ನು ಪಡೆಯುತ್ತೀರಿ. ಶತ್ರುಗಳ ಮೇಲೆ ಜಯ ದೊರೆಯಲಿದೆ.

** ವೃಶ್ಚಿಕ ರಾಶಿ :
ಇಂದು ಹೊಸ ಫಿಟ್‌ನೆಸ್ ದಿನಚರಿಯನ್ನು ಅನುಸರಿಸಿ. ಪ್ರತಿದಿನ ಯೋಗ ಮತ್ತು ವ್ಯಾಯಾಮ ಮಾಡಿ. ಆರೋಗ್ಯಕರ ಜೀವನಶೈಲಿಯನ್ನು ಕಾಪಾಡಿಕೊಳ್ಳಿ. ಇಂದು ಅನಿರೀಕ್ಷಿತ ವೆಚ್ಚಗಳು ಹೆಚ್ಚಾಗುತ್ತವೆ. ಕೆಲವರಿಗೆ ಉದ್ಯೋಗದಲ್ಲಿ ಕೆಲಸದ ಹೆಚ್ಚುವರಿ ಜವಾಬ್ದಾರಿಗಳು ಸಿಗುತ್ತವೆ. ಕೆಲವರಿಗೆ ಅಧಿಕೃತ ಪ್ರವಾಸಕ್ಕೆ ಅವಕಾಶ ಸಿಗಲಿದೆ. ಆಸ್ತಿ ಸಂಬಂಧಿತ ವಿವಾದಗಳಿಂದ ನೀವು ಪರಿಹಾರವನ್ನು ಪಡೆಯುತ್ತೀರಿ. ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ಒಂಟಿ ಜನರು ವಿಶೇಷ ವ್ಯಕ್ತಿಯನ್ನು ಭೇಟಿಯಾಗುತ್ತಾರೆ.

** ಧನಸ್ಸು ರಾಶಿ :
ಇಂದು ನಿಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚಾಗಲಿದೆ. ಹಳೆಯ ಹೂಡಿಕೆಗಳಿಂದ ಆರ್ಥಿಕ ಲಾಭವಿದೆ. ನಿಮ್ಮ ಕೌಶಲ್ಯ ಮತ್ತು ಪ್ರತಿಭೆಯನ್ನು ಕಚೇರಿಯಲ್ಲಿ ಪ್ರಶಂಸಿಸಲಾಗುತ್ತದೆ. ನೀವು ಕುಟುಂಬದೊಂದಿಗೆ ವಿಹಾರವನ್ನು ಯೋಜಿಸಬಹುದು. ಇದರಿಂದಾಗಿ ಕುಟುಂಬ ಜೀವನದಲ್ಲಿ ಸಂತೋಷ ಮಾತ್ರ ಬರುತ್ತದೆ. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಅಂಕ ಗಳಿಸುವರು. ಇಂದು ನೀವು ಸಾಮಾಜಿಕ ಕಾರ್ಯಕ್ರಮಗಳಲ್ಲಿ ಉತ್ಸಾಹದಿಂದ ಭಾಗವಹಿಸುವಿರಿ.

** ಮಕರ ರಾಶಿ :
ಇಂದು ಬಹು ಆದಾಯದ ಮೂಲಗಳಿಂದ ಹಣ ಬರುತ್ತದೆ. ಪ್ರಮುಖ ಯೋಜನೆಯಲ್ಲಿ ಕೆಲಸ ಮಾಡಲು ನಿಮಗೆ ಅವಕಾಶ ಸಿಗುತ್ತದೆ. ಕುಟುಂಬದಲ್ಲಿ ಒಳ್ಳೆಯ ಸುದ್ದಿ ಇರುತ್ತದೆ. ಪ್ರಯಾಣದ ಅವಕಾಶವಿರುತ್ತದೆ. ಜೀವನದಲ್ಲಿ ಸಂತೋಷದ ವಾತಾವರಣ ಇರುತ್ತದೆ. ಆಸ್ತಿಯನ್ನು ಖರೀದಿಸಲು ಅನೇಕ ಅವಕಾಶಗಳಿವೆ. ನೀವು ಶೈಕ್ಷಣಿಕ ಕೆಲಸದಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ. ವೃತ್ತಿ ಜೀವನದಲ್ಲಿ ಹೊಸ ಸಾಧನೆಗಳನ್ನು ಸಾಧಿಸುವಿರಿ. ಪ್ರೇಮ ಜೀವನ ಚೆನ್ನಾಗಿರುತ್ತದೆ.

** ಕುಂಭ ರಾಶಿ :
ಇಂದು ಆರೋಗ್ಯದ ಬಗ್ಗೆ ಮನಸ್ಸು ಚಿಂತಿಸಲಿದೆ. ವೃತ್ತಿ ಜೀವನದಲ್ಲಿ ಕೆಲವು ಬದಲಾವಣೆಗಳಾಗಲಿವೆ. ಕೆಲಸವು ಕ್ರಮೇಣ ಉತ್ತಮ ಫಲಿತಾಂಶಗಳನ್ನು ನೀಡುತ್ತದೆ. ಕುಟುಂಬ ಅಥವಾ ಸ್ನೇಹಿತರೊಂದಿಗೆ ಪ್ರವಾಸದ ಯೋಜನೆಗಳನ್ನು ಮಾಡಲಾಗುತ್ತದೆ. ಬಹಳ ದಿನಗಳಿಂದ ಬಾಕಿ ಉಳಿದಿರುವ ಹಣ ವಾಪಸ್ ಬರಲಿದೆ. ಹಲವು ಆದಾಯ ಮೂಲಗಳು ಸೃಷ್ಟಿಯಾಗಲಿವೆ. ಕಚೇರಿಯಲ್ಲಿ ಸಹೋದ್ಯೋಗಿಗಳೊಂದಿಗೆ ಉತ್ತಮ ನಡವಳಿಕೆಯನ್ನು ಕಾಪಾಡಿಕೊಳ್ಳಿ.

** ಮೀನ ರಾಶಿ :
ಇಂದು ಅದೃಷ್ಟ ನಿಮ್ಮ ಕೈ ಹಿಡಿಯಲಿದೆ. ಎಲ್ಲಾ ಕಾರ್ಯಗಳಲ್ಲಿ ನೀವು ಬಯಸಿದ ಫಲಿತಾಂಶಗಳನ್ನು ಪಡೆಯುತ್ತೀರಿ. ಉದ್ಯೋಗ ಮತ್ತು ವ್ಯವಹಾರದಲ್ಲಿ ಪ್ರಗತಿಗೆ ಹಲವು ಅವಕಾಶಗಳು ದೊರೆಯಲಿವೆ. ವ್ಯಾಪಾರ ಪರಿಸ್ಥಿತಿ ಬಲವಾಗಿರುತ್ತದೆ. ಇತ್ಯಾದಿ ನಿಮ್ಮ ನೆಚ್ಚಿನ ಹವ್ಯಾಸಕ್ಕಾಗಿ ಸ್ವಲ್ಪ ಸಮಯ ತೆಗೆದುಕೊಳ್ಳಿ. ಸ್ವ-ಆರೈಕೆ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ. ಆರೋಗ್ಯಕರ ಆಹಾರವನ್ನು ತೆಗೆದುಕೊಳ್ಳಿ. ಪ್ರತಿದಿನ ವ್ಯಾಯಾಮ ಮಾಡಿ.