Categories
ತೀರ್ಥಹಳ್ಳಿ

ನ.6 ರಂದು ಮಂಜುನಾಥ್ ಗೌಡರಿಗೆ ಗೌರವ

ನ.6 ರಂದು ಮಂಜುನಾಥ್ ಗೌಡರಿಗೆ ಗೌರವ
– ತೀರ್ಥಹಳ್ಳಿಯಲ್ಲಿ ಅದ್ದೂರಿ ಕಾರ್ಯಕ್ರಮಕ್ಕೆ ಸಿದ್ಧತೆ
– ತೀರ್ಥಹಳ್ಳಿ ಸಹಕಾರಿ ನಾಯಕ ವಿಜಯದೇವ್ ಮಾಹಿತಿ

NAMMUR EXPRESS NEWS
ತೀರ್ಥಹಳ್ಳಿ: ಸಹಕಾರ ಕ್ಷೇತ್ರದ ದಿಗ್ಗಜ, ಶಿವಮೊಗ್ಗ ಡಿಸಿಸಿ ಬ್ಯಾಂಕಿಗೆ 10ನೇ ಬಾರಿಗೆ ಅಧ್ಯಕ್ಷರಾಗಿ ಸರ್ವಾನು ಮತದಿಂದ ಆಯ್ಕೆಯಾಗಿರುವ ಕರ್ನಾಟಕದ ಹೆಮ್ಮೆಯ ಸಹಕಾರಿ, ಸಹಕಾರ ರತ್ನ ಡಾ ಆರ್ ಎಂ ಮಂಜುನಾಥ್ ಗೌಡರಿಗೆ ತೀರ್ಥಹಳ್ಳಿಯಲ್ಲಿ ತಾಲೂಕು ಸರ್ವ ಸಹಕಾರಿಗಳ ಪರವಾಗಿ ತೌರೂರ ಸನ್ಮಾನ ನ.6 ರಂದು ಹಮ್ಮಿಕೊಳ್ಳಲಾಗಿದೆ.
ತೀರ್ಥಹಳ್ಳಿಯ ಎಲ್ಲಾ ಸಹಕಾರಿಗಳು ಸೇರಿ ಈ ಕಾರ್ಯಕ್ರಮವನ್ನು ಪಕ್ಷಾತೀತವಾಗಿ ಆಯೋಜಿಸಿದ್ದಾರೆ. ಸಹಕಾರಿ ನಾಯಕ ವಿಜಯದೇವ್ ಮಾತನಾಡಿ, ಅ.6ರಂದು ಗೋಪಾಲಗೌಡ ರಂಗಮಂದಿರದಲ್ಲಿ ಈ ಕಾರ್ಯಕ್ರಮ ನಿಗದಿ ಪಡಿಸಲಾಗಿತ್ತು. ಆದರೆ ಕೆಲವು ಕಾರಣಾಂತರಗಳಿಂದ ಕಾರ್ಯಕ್ರಮ ರದ್ದು ಮಾಡಿ ಮುಂದೂಡಲಾಗಿತ್ತು. ಈಗ ನವೆಂಬರ್ 6 ರಂದು ಅದ್ದೂರಿಯಾಗಿ ಮಾಡಲು ತೀರ್ಮಾನಿಸಲಾಗಿದೆ.

ಈ ಕಾರ್ಯಕ್ರಮದಲ್ಲಿ 4 ರಿಂದ 5 ಸಾವಿರ ಜನ ಸೇರುವ ನಿರೀಕ್ಷೆ ಇದ್ದು ಎಲ್ಲರಿಗೂ ಊಟದ ವ್ಯವಸ್ಥೆ ಮಾಡಲಾಗಿದೆ. ಇದೇ ಸಂದರ್ಭದಲ್ಲಿ ಸಹಕಾರಿ ಧುರಿಣರಾಗಿದ್ದ ಬಿ.ಎಸ್.ವಿಶ್ವನಾಥ್ ಹಾಗೂ ನರಸಿಂಹ ನಾಯಕ್ ಅವರ ಮಹಾದ್ವಾರ ನಿರ್ಮಾಣ ಮಾಡಲಿದ್ದೇವೆ. ಕಾರ್ಯಕ್ರಮದಲ್ಲಿ ಸಹಕಾರಿ ಕ್ಷೇತ್ರದ ಪ್ರತಿಯೊಬ್ಬ ನಾಯಕರು ಇರಲಿದ್ದಾರೆ ಎಂದರು. ಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕರಾದ ರಾಜಣ್ಣ ರೆಡ್ಡಿ ಅಭಿನಂದನಾ ಭಾಷಣ ಮಾಡಲಿದ್ದಾರೆ. 1000 ಕ್ಕೂ ಅಧಿಕ ಬೈಕ್ ಗಳಿಂದ ರ್‍ಯಾಲಿ ನಡೆಯಲಿದ್ದು ಮೆರವಣಿಗೆ ಮೂಲಕ ಆರ್ ಎಂ ಮಂಜುನಾಥ್ ಗೌಡರನ್ನು ಕರೆದುಕೊಂಡು ಬರಲಾಗುತ್ತದೆ ಎಂದರು. ಈ ಸಂದರ್ಭದಲ್ಲಿ ಯುವ ಸಹಕಾರಿ ರಾಘವೇಂದ್ರ ಶೆಟ್ಟಿ ಇದ್ದರು. ಸಹಕಾರಿ ವೇದಿಕೆ ಸರ್ವರನ್ನು ಸ್ವಾಗತಿಸಿದೆ.

Categories
ತೀರ್ಥಹಳ್ಳಿ

ನಮ್ಮೂರ್ ಎಕ್ಸ್ ಪ್ರೆಸ್ ಕಚೇರಿಯಲ್ಲಿ ಪುನೀತ್ ನಮನ!

ನಮ್ಮೂರ್ ಎಕ್ಸ್ ಪ್ರೆಸ್ ಕಚೇರಿಯಲ್ಲಿ ಪುನೀತ್ ನಮನ!
– ಪುನೀತ್ ರಾಜಕುಮಾರ್ ಅವರ ಸ್ಮರಣಾರ್ಥ ಕಾರ್ಯಕ್ರಮ
– ತೀರ್ಥಹಳ್ಳಿಯ ಕಲಾವಿದರು, ಗಾಯಕರಿಗೆ ಸನ್ಮಾನ
– ಪುನೀತ್ ಬ್ರಿಗೇಡ್, ವಿಶ್ವ ಮಾನವ ಕನ್ನಡ ವೇದಿಕೆ ಸಹಯೋಗ

NAMMUR EXPRESS NEWS
ಪುನೀತ್ ರಾಜ್ ಕುಮಾರ್ ಅವರ ಸ್ಮರಣೆ ಅಂಗವಾಗಿ ನಮ್ಮೂರ್ ಎಕ್ಸ್ ಪ್ರೆಸ್ ಮಲೆನಾಡು ಪ್ರಾದೇಶಿಕ ಕಚೇರಿಯಲ್ಲಿ ಪುನೀತ್ ನಮನ ಕಾರ್ಯಕ್ರಮ ನಡೆಯಿತು. ನಮ್ಮೂರ್ ಎಕ್ಸ್ ಪ್ರೆಸ್, ಪುನೀತ್ ಬ್ರಿಗೇಡ್, ವಿಶ್ವ ಮಾನವ ಕನ್ನಡ ವೇದಿಕೆ ಕುಪ್ಪಳ್ಳಿ ಕಲ್ಲುಕೊಡುಗೆ ಸಹಯೋಗದೊಂದಿಗೆ ಪುನೀತ್ ನಮನ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ಪುನೀತ್ ಅವರ ಭಾವಚಿತ್ರಕ್ಕೆ ಪುಷ್ಪ ನಮನವನ್ನು ಅರ್ಪಿಸಿರುವ ಡಿ.ವೈ.ಎಸ್.ಪಿ ಗಜಾನನ ವಾಮನ ಸುತಾರ ಅವರು ಮಾತನಾಡಿ, ಪುನೀತ್ ಅವರ ವ್ಯಕ್ತಿತ್ವ ಪ್ರೇರಣೆಯುತವಾದದು. ಅವರ ಸಮಾಜ ಸೇವೆ ಎಲ್ಲರಿಗೂ ಮಾದರಿ. ನಾವೆಲ್ಲರೂ ಸೇರಿ ಅವರ ಸೇವೆಯನ್ನು ಮುಂದುವರಿಸೋಣ ಎಂದು ಕರೆ ನೀಡಿದರು.

ತೀರ್ಥಹಳ್ಳಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಗೀತಾ ರಮೇಶ್ ಭಾಗವಹಿಸಿ ಪುನೀತ್ ಅವರಿಗೆ ನಮನ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಇತ್ತೀಚಿಗೆ ಮೈಸೂರು ದಸರಾದಲ್ಲಿ ಭಾಗವಹಿಸಿದ ಪಾಲ್ಗೊಂಡ ತೀರ್ಥಹಳ್ಳಿಯ ಪ್ರತಿಭೆಗಳಾದ ಗಾಯಕಿ ಹಾಗೂ ಸಹ್ಯಾದ್ರಿ ಶಾಲೆಯಲ್ಲಿ ಸಂಗೀತ ಶಿಕ್ಷಕರಾಗಿರುವ ಉಷಾ ಬಾಳೆಬೈಲು, ಸಾಕ್ಸೋಫೋನ್ ವಾದ್ಯದ ಮೂಲಕ ತಮ್ಮ ಪ್ರತಿಭೆಯನ್ನು ಮೈಸೂರು ದಸರಾದಲ್ಲಿ ಪ್ರದರ್ಶನ ಮಾಡಿರುವಂತಹ ಮಹೇಶ್ ಮೊಯ್ಲಿ, ಖ್ಯಾತ ಸಂಗೀತ ನಿರ್ದೇಶಕ ಗಜಲ್ ಗಾಯಕ ಶಿಕ್ಷಕ ಇಮ್ತಿಯಾಜ್ ಸುಲ್ತಾನ್ ಕೋಣಂದೂರು, ಜೀ ಕನ್ನಡ ಸರಿಗಮಪ ಸ್ಪರ್ದಿ ಅಪೂರ್ವ ಹಾಗೂ ಇತ್ತೀಚಿಗೆ ಅನೇಕ ಸ್ಪರ್ಧೆಗಳಲ್ಲಿ ಗೆಲುವನ್ನು ಸಾಧಿಸಿರುವ ತೀರ್ಥಹಳ್ಳಿಯ ಫ್ಯಾಶನ್ ಕ್ಷೇತ್ರದಲ್ಲಿ ಹೆಜ್ಜೆ ಇಡುತ್ತಿರುವ ಬಾಲ ಪ್ರತಿಭೆ ನಿರೀಕ್ಷಾ ಸುಬ್ರಮಣ್ಯ, ಕೋರಿಯೋಗ್ರಾಫರ್ ಹರ್ಷಿತಾ, ಖ್ಯಾತ ಕೊಳಲು ಹಾಗೂ ಜಾನಪದ ಕಲಾವಿದ ಯೋಗೀಶ್ ಹೆಗ್ಗಡೆಮನೆ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ವರ್ಷಿಣಿ ಭಟ್, ರೋಹಿತ್ ಹಾಗೂ ಇತರೆ ಕಲಾವಿದರು ಪುನೀತ್ ಅವರ ಹಾಡು, ನೃತ್ಯದ ಮೂಲಕ ಗಮನ ಸೆಳೆದರು. ಸುಧಾಕರ್ ಕುಪ್ಪಳ್ಳಿ, ಸೂರ್ಯನಾರಾಯಣ ಚಿಡುವ ಸೇರಿದಂತೆ ಅನೇಕರು ಹಾಜರಿದ್ದರು.

Categories
ರಾಜ್ಯ

ಕನ್ನಡ ರಾಜ್ಯೋತ್ಸವ ಆಚರಣೆ: ನಿಯಮಗಳೇನು?

ಕನ್ನಡ ರಾಜ್ಯೋತ್ಸವ ಆಚರಣೆ: ನಿಯಮಗಳೇನು?
– ಹಣತೆ ಹಚ್ಚುವ ಮೂಲಕ ಕನ್ನಡ ಜ್ಯೋತಿ ಬೆಳಗಿಸಬೇಕು
– ಕೆಂಪು, ಹಳದಿ ಬಣ್ಣದ ರಂಗೋಲಿ ಹಾಕೋದು ಕಡ್ಡಾಯ

NAMMUR EXPRESS NEWS
ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣವಾಗಿ 50 ವರ್ಷಗಳು ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಈ ವರ್ಷದ ಕನ್ನಡ ರಾಜ್ಯೋತ್ಸವವನ್ನು ವಿಶೇಷವಾಗಿ ಆಚರಿಸಲು ಉದ್ದೇಶಿಸಿದ್ದು, ಮುಖ್ಯಮಂತ್ರಿ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಕಾರ್ಯಕ್ರಮದ ಸ್ವರೂಪ ಸಿದ್ದಪಡಿಸಲಾಗಿದೆ. ನ.1 ರಂದು ಎಲ್ಲಾ ಜಿಲ್ಲಾಧ್ಯಂತ ಎಲ್ಲ ಮನೆಗಳ ಮುಂದ ಕೆಂಪು ಮತ್ತು ಹಳದಿ ಬಣ್ಣದ ರಂಗೋಲಿಯ ಜೊತೆಗೆ ಕರ್ನಾಟಕ ಸಂಭ್ರಮ-50 ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ ಎಂಬ ಘೋಷವಾಕ್ಯದ ರಂಗೋಲಿ ಬಿಡಿಸುವುದು. ನ.1 ರ ಬೆಳಗ್ಗೆ 9 ಕ್ಕೆ ಆಕಾಶವಾಣಿಯಲ್ಲಿ ನಾಡಗೀತೆ ಪ್ರಸಾರವಾಗಲಿದ್ದು ಆ ಸಮಯದಲ್ಲಿ ಜಿಲ್ಲೆಯ ಎಲ್ಲ ನಾಗರಿಕರು ಎದ್ದು ನಿಂತು ಗೌರವ ಸಲ್ಲಿಸಬೇಕು. ಸಂಜೆ ಐದಕ್ಕೆ ಜಿಲ್ಲೆಯ ಎಲ್ಲ ಗ್ರಾಮಗಳಲ್ಲಿ ಕೆಂಪು ಮತ್ತು ಹಳದಿ ಬಣ್ಣದ ಗಾಳಿಪಟಗಳನ್ನು ಹಾರಿಸುವ ಮೂಲಕ ಸುವರ್ಣ ಸಂಭ್ರಮ ಗಾಳಿಪಟ ಉತ್ಸವ ಆಚರಿಸಬೇಕು.

ನ.1ರ ಸಂಜೆ ಏಳಕ್ಕೆ ಎಲ್ಲ ಮನೆಗಳು, ಕಚೇರಿ, ಅಂಗಡಿ ಮಳಿಗೆಗಳ ಮುಂದೆ ಹಣತೆ ಹಚ್ಚುವ ಮೂಲಕ ಕನ್ನಡ ಜ್ಯೋತಿ ಬೆಳಗಿಸಬೇಕು. ನಾಗರಿಕರು ಹಾಗೂ ಕನ್ನಡ ಪರ ಸಂಘಟನೆಗಳು, ವಿವಿಧ ಸಂಘ ಸಂಸ್ಥೆಗಳು ನಾಡು ನುಡಿಯ ಅಭಿಮಾನದೊಂದಿಗೆ ಪ್ರತಿಯೊಬ್ಬರೂ ಇದಕ್ಕೆ ಕೈಜೋಡಿಸಬೇಕೆಂದು ಸರ್ಕಾರದ ಪ್ರಕಟಣೆ ತಿಳಿಸಿದೆ.

Categories
ಸಿನಿಮಾ

ಮಲೆನಾಡಿನ ಮೀನು ಬೇಟೆ ಈಗ ಸಿನಿಮಾ!

ಮಲೆನಾಡಿನ ಮೀನು ಬೇಟೆ ಈಗ ಸಿನಿಮಾ!
– ತೀರ್ಥಹಳ್ಳಿ ಮೂಲದ ಗೌರಿಶಂಕರ್ ನಾಯಕರಾಗಿ ನಟನೆ
– ಪೋಸ್ಟರ್ ಬಿಡುಗಡೆ: ಸಿನಿಮಾ ಬಗ್ಗೆ ಒಳ್ಳೆ ಸ್ಪಂದನೆ

NAMMUR EXPRESS NEWS
ಸ್ಯಾಂಡಲ್ ವುಡ್‌ ನಲ್ಲಿ ಬೇಟೆ ಕಥೆಯ ಸಿನಿಮಾಗಳು ಬಂದಿವೆ. ಇದೀಗ ಕೆರೆಬೇಟೆ ಎಂಬ ಸಿನಿಮಾ ತೆರೆಗೆ ಬರಲು ಸಿದ್ಧತೆ ನಡೆಸಿದೆ. ಅಪ್ಪಟ ಹಳ್ಳಿ ಸೊಗಡಿನ ಸಿನಿಮಾ ಇದಾಗಿದ್ದು, ತೀರ್ಥಹಳ್ಳಿ ಮೂಲದ ಗೌರಿಶಂಕರ್ ನಾಯಕರಾಗಿ ನಟಿಸಿದ್ದಾರೆ. ಗೌರಿಶಂಕರ್ ಈ ಹಿಂದೆ ‘ಜೋಕಾಲಿ’ ಮತ್ತು ‘ರಾಜಹಂಸ’ ಎಂಬ ಸಿನಿಮಾಗಳಲ್ಲಿ ನಾಯಕರಾಗಿ ನಟಿಸಿದ್ದರು. ಆ ಎರಡೂ ಸಿನಿಮಾಗಳಲ್ಲಿ ಅವರ ನಟನೆ ಬಗ್ಗೆ ಉತ್ತಮ ಮಾತುಗಳು ಕೇಳಿ ಬಂದಿದ್ದವು. ಈಗ ಬಹಳ ದಿನಗಳ ನಂತರ ಅವರು ತೆರೆಮೇಲೆ ಬರುತ್ತಿದ್ದು, ಅದು ಸಹ ‘ಕೆರೆಬೇಟೆಯಂತಹ ಸಿನಿಮಾದ ಮೂಲಕ ಎಂಬುದು ವಿಶೇಷ ಈ ಸಿನಿಮಾಗೆ ರಾಜ್‌ ಗುರು ಎಂಬವರು ಆ್ಯಕ್ಷನ್ ಕಟ್ ಹೇಳಿದ್ದಾರೆ. ರಾಜ್‌ಗುರು ಕಳೆದ ಹತ್ತು ವರ್ಷಗಳಿಂದ ಸಿನಿಮಾರಂಗದಲ್ಲಿ ಎ.ಆರ್. ಬಾಬು, ಒಡೆಯರ್ ಹಾಗೂ ಇತರೆ ನಿರ್ದೇಶಕರ ಜೊತೆ ಸಹನಿರ್ದೇಶಕರಾಗಿ ಕೆಲಸ ಮಾಡಿದವರು, ‘ಕೆರೆಬೇಟೆ’ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದಾರೆ.

ಕೆರೆಬೇಟೆ’ ಎಂದರೇನು?:

‘ಕೆರೆಬೇಟೆ ಎಂದರೆ ಮಲೆನಾಡು ಭಾಗದಲ್ಲಿ ಮೀನು ಬೇಟೆಯಾಡುವ ಒಂದು ಪದ್ಧತಿ, ಮಲೆನಾಡಿನಲ್ಲಿ ವರ್ಷಕ್ಕೊಮ್ಮೆ ‘ಕೆರೆಬೇಟೆಯಾಡುತ್ತಾರೆ. ತುಂಬಾ ವಿಸ್ತಾರವಾದ ಮತ್ತು ದೊಡ್ಡ ಕೆರೆಗಳಲ್ಲಿ ಹತ್ತಾರು ಮಂದಿ ಒಟ್ಟಿಗೆ ವಿಶೇಷವಾದ ಮೀನು ಹಿಡಿಯುವ ಬುಟ್ಟಿ ಹಿಡಿದು ಕೆರೆಗೆ ಇಳಿದು ಮೀನು ಹಿಡಿಯುತ್ತಾರೆ. ಅದನ್ನು “ಕೆರೆಬೇಟೆ’ ಎನ್ನುತ್ತಾರೆ. ಇದೇ ಈ ಸಿನಿಮಾದ ಮುಖ್ಯ ಎಳೆ, ಅವಟ ಹಳ್ಳಿ ಸೊಗಡಿನ ಸಿನಿಮಾ ಇದಾಗಿದ್ದು, ಚಿತ್ರಕ್ಕೆ ಗಗನ್ ಬಡೇರಿಯಾ ಸಂಗೀತ ಸಂಯೋಜನೆ ಮಾಡಿದ್ದಾರೆ. ಶೂಟಿಂಗ್ ಈಗಾಗಲೇ ಪೂರ್ಣಗೊಂಡಿದ್ದು ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಸಿನಿಮಾ ತಂಡ ಬಿಝಿಯಾಗಿದೆ. ಈ ನಡುವೆ ಸಿನಿಮಾ ತಂಡ ಫಸ್ಟ್ ಲುಕ್ ಬಿಡುಗಡೆ ಮಾಡಿದೆ. ಈಗಾಗಲೇ ಪೋಸ್ಟರ್ ಕೆರೆ ಬೇಟೆ ಕಥೆ ಬಹಳ ವಿಶೇಷವಾಗಿದೆ.

‘ಕೆರೆ ಬೇಟೆ’ ಕಥೆಯ ಸುತ್ತ ಈ ಸಿನಿಮಾ ನಡೆಯಲಿದ್ದು, ಅದರ ಜತೆಗೆ ಮಲೆನಾಡಿನ ಹಳ್ಳಿಯ ಜನರ ಬದುಕನ್ನು ಇದರಲ್ಲಿ ತೋರಿಸಲಿದ್ದೇವೆ. ಸಿನಿಮಾ ಬಹಳ ನ್ಯಾಚುರಲ್ ಆಗಿ ಮೂಡಿ ಬಂದಿದ್ದು, ಈ ಬಾರಿ ವಿಶೇಷವಾದ ಕಥೆಯೊಂದಿಗೆ ನಾನು ತೆರೆಮೇಲೆ ಬರುತ್ತಿದ್ದೇನೆ’ ಎಂದಿದ್ದಾರೆ ನಟ ಗೌರಿಶಂಕರ್. ಈ ಸಿನಿಮಾವನ್ನು ಸಂಪೂರ್ಣವಾಗಿ ಶಿವಮೊಗ್ಗ ಜಿಲ್ಲೆಯ ಸಿಗಂದೂರು ಹಾಗೂ ಸೊರಬ ಸುತ್ತಮುತ್ತ ಚಿತ್ರೀಕರಣ ಮಾಡಲಾಗಿದೆ.

Categories
ಬೆಂಗಳೂರು

ಇನ್ನೂ 1 ವಾರ ಭಾರೀ ಮಳೆ ಸಾಧ್ಯತೆ?

ಇನ್ನೂ 1 ವಾರ ಭಾರೀ ಮಳೆ ಸಾಧ್ಯತೆ?
– ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಣೆ
– ಮಲೆನಾಡು, ಕರಾವಳಿ ಭಾಗದಲ್ಲಿ ಮಳೆ

NAMMUR EXPRESS NEWS
ಬೆಂಗಳೂರು: ಕರ್ನಾಟಕದ ಕರಾವಳಿ, ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನ ಬಹುತೇಕ ಕಡೆ ನವೆಂಬರ್ 5ರವರೆಗೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಕ್ಷಿಣ ಕನ್ನಡ, ಉಡುಪಿ, ಬಾಗಲಕೋಟೆ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಮಳೆಯಾಗಲಿದೆ. ಪಣಂಬೂರು, ಮಂಗಳೂರು ವಿಮಾನ ನಿಲ್ದಾಣದಲ್ಲಿ ಮಳೆಯಾಗಿದೆ. ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಕೆಲವು ಕಡೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಕಾರವಾರದಲ್ಲಿ 36.1 ಡಿಗ್ರಿ ಸೆಲ್ಸಿಯಸ್ ಅತ್ಯಂತ ಗರಿಷ್ಠ ಉಷ್ಣಾಂಶ, ವಿಜಯಪುರದಲ್ಲಿ 16.0 ಡಿಗ್ರಿ ಸೆಲ್ಸಿಯಸ್ ಅತ್ಯಂತ ಕನಿಷ್ಠ ಉಷ್ಣಾಂಶ ದಾಖಲಾಗಿದೆ. ಈ ಬಾರಿ ಮುಂಗಾರಿನಲ್ಲಿ ಮಳೆ ತುಂಬಾ ಕಡಿಮೆಯಾಗಿದೆ, ಹಲವು ಜಿಲ್ಲೆಗಳು ಬರದಿಂದ ಕಂಗೆಟ್ಟಿವೆ, ಹಿಂಗಾರು ಮಳೆಯಾದರೂ ಉತ್ತಮವಾಗಿ ಬಂದಲ್ಲಿ, ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಕೊಂಚ ಕಡಿಮೆಯಾಗಬಹುದು ಎಂದು ನಿರೀಕ್ಷಿಸಲಾಗಿದೆ.

Categories
ಕರಾವಳಿ

ಆಳ್ವಾಸ್ ಡಾ.ಮೋಹನ್ ಆಳ್ವರ ತಂದೆ ಆನಂದ ಆಳ್ವ ಇನ್ನಿಲ್ಲ!

ಆಳ್ವಾಸ್ ಡಾ.ಮೋಹನ್ ಆಳ್ವರ ತಂದೆ ಆನಂದ ಆಳ್ವ ಇನ್ನಿಲ್ಲ!
– 106 ವರ್ಷದ ಹಿರಿಯ ಜೀವ ವಿಧಿವಶ
– ದಾನಿಯಾಗಿ, ಕ್ರೀಡಾ ಪ್ರೋತ್ಸಾಹಕರಾಗಿ ಸೇವೆ

NAMMUR EXPRESS NEWS
ಮಂಗಳೂರು: ಮೂಡಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಆಧ್ಯಕ್ಷ ಡಾ. ಮೋಹನ್ ಆಳ್ವರ ತಂದೆ ಆನಂದ ಆಳ್ವ (106) ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಆನಂದ ಆಳ್ವ ಇಳಿ ವಯಸ್ಸಿನಲ್ಲೂ ಅತ್ಯಂತ ಕ್ರೀಯಾಶೀಲರಾಗಿ ಗುರುತಿಸಿಕೊಂಡಿದ್ದರು. ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ನಡೆಯುವ ಎಲ್ಲಾ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲೂ ಮುಂಚೂಣಿಯಲ್ಲಿ ಭಾಗವಹಿಸುವ ಕೆಲವೇ ಮಂದಿಗಳಲ್ಲಿ ಆನಂದ ಆಳ್ವರೂ ಒಬ್ಬರಾಗಿದ್ದಾರೆ. ದೇವಸ್ಥಾನಗಳ ಜೀರ್ಣೋದ್ಧಾರ ಸೇರಿದಂತೆ ಹಲವು ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಆನಂದ ಆಳ್ವ ಮೂಡಬಿದಿರೆ ಪರಿಸರದಲ್ಲಿ ಜನಾನುರಾಗಿಯಾಗಿ ಗುರುತಿಸಿಕೊಂಡಿದ್ದರು.

ಪ್ರಗತಿಪರ ರೈತರೂ ಆಗಿದ್ದು, 1979 ರಿಂದ 1989 ರವರೆಗೆ ತಮ್ಮ ವಿಶಾಲವಾದ ಭತ್ತದ ಗದ್ದೆಯಲ್ಲಿ ಕಂಬಳವನ್ನು ಪ್ರವೇಶ ಟಿಕೆಟ್‌ಗಳೊಂದಿಗೆ ಆಯೋಜಿಸಿದ್ದ ಕೀರ್ತಿ ಕೂಡ ಆನಂದ ಆಳ್ವರಿಗೆ ಸಲ್ಲುತ್ತಿದೆ.ಅವರು ತಮ್ಮ ನೆರೆಹೊರೆಯ ಅನೇಕ ದೇವಾಲಯಗಳು ಮತ್ತು ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ವಿವಿಧ ದೇವಾಲಯಗಳ ಜೀರ್ಣೋದ್ಧಾರಕ್ಕೆ ಗಮನಾರ್ಹ ಕೊಡುಗೆಗಳನ್ನು ನೀಡಿದ್ದಾರೆ. ಮೃತರು ಮಕ್ಕಳಾದ ಸೀತಾರಾಮ, ಬಾಲಕೃಷ್ಣ, ಡಾ.ಮೋಹನ್ ಆಳ್ವ, ಮೀನಾಕ್ಷಿ ಸೇರಿದಂತೆ ಅಸಂಖ್ಯಾತ ಬಂಧು-ಮಿತ್ರರನ್ನು ಅಗಲಿದ್ದಾರೆ. ಅವರ ನಿಧನಕ್ಕೆ ಗಣ್ಯರು ಕಂಬನಿ ಮಿಡಿದಿದ್ದಾರೆ

Categories
ರಾಜ್ಯ

ರಾಜ್ಯೋತ್ಸವ ದಿನ ಹಾಡಬೇಕಾದ 5 ಹಾಡುಗಳು!

ರಾಜ್ಯೋತ್ಸವ ದಿನ ಹಾಡಬೇಕಾದ 5 ಹಾಡುಗಳು!
– ರಾಜ್ಯೋತ್ಸವ ಸಂಭ್ರಮದಲ್ಲಿ ಗಾಯನ ಕಡ್ಡಾಯ
– ರಾಜ್ಯದ ಎಲ್ಲೆಡೆ ರಾಜ್ಯೋತ್ಸವದ ಸಂಭ್ರಮ

NAMMUR EXPRESS NEWS
ಬೆಂಗಳೂರು: ನವೆಂಬರ್‌ 1. ಕನ್ನಡ ರಾಜ್ಯೋತ್ಸವ ನಾಡಿನೆಲ್ಲೆಡೆ ಈ ಹಬ್ಬವನ್ನು ಸಂಭ್ರಮದಿಂದ ಆಚರಿಸಲು ಸಿದ್ಧತೆ ನಡೆದಿದೆ. ರಾಜ್ಯ ಸರ್ಕಾರ ಅಧಿಕೃತ ಕಾರ್ಯಕ್ರಮಗಳಲ್ಲಿ ಐದು ಕನ್ನಡ ಗೀತೆಗಳ ಗಾಯನವನ್ನು ಕಡ್ಡಾಯಗೊಳಿಸಿದೆ.
ಕರ್ನಾಟಕ ಸಂಭ್ರಮ 50ನೇ ವರ್ಷಾಚರಣೆ ನಡೆಯುತ್ತಿದೆ. ಮೈಸೂರು ರಾಜ್ಯವು ಕರ್ನಾಟಕ ಎಂದು ಮರುನಾಮಕರಣಗೊಂಡು ಈ ವರ್ಷದ ನವೆಂಬರ್‌ 1ಕ್ಕೆ 50 ವರ್ಷ ಪೂರ್ಣಗೊಳ್ಳಲಿದೆ. ಈ ಶುಭ ಸಂದರ್ಭದಲ್ಲಿ ಐದು ಕನ್ನಡಗೀತೆಗಳನ್ನು ಕಡ್ಡಾಯವಾಗಿ ಹಾಡುವ ಮೂಲಕ ನುಡಿ ನಮನ ಸಲ್ಲಿಸಬೇಕು ಎನ್ನುವುದು ರಾಜ್ಯ ಸರ್ಕಾರದ ಮನವಿ.
ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ’ ಎಂಬ ಹೆಸರಿನಲ್ಲಿ ಇಡೀ ವರ್ಷ ಕರ್ನಾಟಕ ಇತಿಹಾಸ, ಕಲೆ, ಸಾಹಿತ್ಯ, ಸಂಸ್ಕೃತಿ ಹಾಗೂ ನಾಡು ನುಡಿಗೆ ಸಂಬಂಧಿಸಿದಂತೆ ಯುವ ಜನತೆಯಲ್ಲಿ ಕನ್ನಡ-ಕನ್ನಡಿಗ-ಕರ್ನಾಟಕ ಅರಿವು ಮೂಡಿಸುವ ಯೋಜನೆ ಹಮ್ಮಿಕೊಳ್ಳುವಂತೆ ರಾಜ್ಯ ಸರ್ಕಾರ ಸೂಚಿಸಿದೆ.

ನ.1ರಂದು ರಾಜ್ಯದೆಲ್ಲೆಡೆ ಆಚರಿಸುವ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕರ್ನಾಟಕ ಸಂಭ್ರಮ 50 ಅಭಿಯಾನದ ಅಂಗವಾಗಿ ಆಯ್ಕೆ ಮಾಡಿರುವ ನಾಡಿನ ಹೆಸರಾಂತ ಕವಿಗಳ 5 ಕನ್ನಡ ಗೀತೆಗಳನ್ನು ಹಾಡುವ ಮೂಲಕ ಸಮಸ್ತ ಕನ್ನಡಿಗರು ಕನ್ನಡಾಂಬೆಗೆ ನುಡಿ ನಮನ (ಗೀತೆ ಗಾಯನ) ಸಲ್ಲಿಸಬೇಕು ಎಂದು ಸೂಚಿಸಲಾಗಿದೆ.

ಹಾಡಬೇಕಾಗಿರುವ ಹಾಡುಗಳು ಇವು
1. ಹುಯಿಲಗೋಳ ನಾರಾಯಣ ರಾಯರ ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು
2. ಕುವೆಂಪು ವಿರಚಿತ ಎಲ್ಲಾದರೂ ಇರು ಎಂತಾದರು ಇರು
3. ದ. ರಾ. ಬೇಂದ್ರೆ ಅವರ ಒಂದೇ ಒಂದೇ ಕರ್ನಾಟಕ ಒಂದೇ
4. ಸಿದ್ದಯ್ಯ ಪುರಾಣಿಕ ಅವರ ಹೊತ್ತಿತೋ ಹೊತ್ತಿತು ಕನ್ನಡ ದೀಪ
5. ಚನ್ನವೀರ ಕಣವಿ ಅವರ ಹೆಸರಾಯಿತು ಕರ್ನಾಟಕ

Categories
ತೀರ್ಥಹಳ್ಳಿ

ತೀರ್ಥಹಳ್ಳಿಯಲ್ಲಿ ಸ್ನೇಹ ಜೀವಿ ತಂಡದ ಸೇವೆ!

ತೀರ್ಥಹಳ್ಳಿಯಲ್ಲಿ ಸ್ನೇಹ ಜೀವಿ ತಂಡದ ಸೇವೆ!
– ಕ್ಯಾನ್ಸರ್ ಪೀಡಿತ ರೋಗಿಗಳಿಗಾಗಿ ನೆರವಿನ ಹಸ್ತ
– ತೀರ್ಥಹಳ್ಳಿ ಯುವಕರ ಮಾನವೀಯ ಕೆಲಸ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಸ್ನೇಹಜೀವಿ ಗೆಳೆಯರ ಬಳಗ ಇದೀಗ ತಮ್ಮ ಮಾನವೀಯತೆ ಮೂಲಕ ಗಮನ ಸೆಳೆದಿದ್ದಾರೆ.
ವಿಜಯದಶಮಿ ದಿನದಂದು ತೀರ್ಥಹಳ್ಳಿ ತಾಲೂಕಿನ ಕ್ಯಾನ್ಸರ್ ಪೀಡಿತ ರೋಗಿಗಳಿಗಾಗಿ ನೆರವಿನ ಹಸ್ತ ಎಂಬ ಕಾರ್ಯಕ್ರಮದ ಮೂಲಕ ತೀರ್ಥಹಳ್ಳಿಯ ಪ್ರಜ್ಞಾವಂತ ನಾಗರೀಕರಿಂದ ಧನ ಸಹಾಯವನ್ನು ಸಂಗ್ರಹಿಸಿ ಸಂಗ್ರಹಣೆ ಆದಂತಹ ಹಣವನ್ನು ಬೆಟ್ಟಮಕ್ಕಿಯ ಯಶೋಧ ದಂಪತಿಗಳಿಗೆ ಹಾಗೂ ಇಂದಿರಾನಗರದ ರಮೇಶ್ ಆಚಾರ್ ಅವರಿಗೆ ಸಹಾಯ ಮಾಡಲಾಯಿತು.

ಪಟ್ಟಣ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷರಾದ ರತ್ನಾಕರ ಶೆಟ್ಟಿ(ದತ್ತ )ಇವರ ನೇತೃತ್ವದಲ್ಲಿ ಸ್ನೇಹಜೀವಿ ಗೆಳೆಯರ ಬಳಗದ ಸದಸ್ಯರೊಂದಿಗೆ ಹಸ್ತಾಂತರ ಮಾಡಲಾಯಿತು. ಈ ಸಂದರ್ಭದಲ್ಲಿ ನೆರವು ನೀಡಿದಂತಹ ಬೆಟ್ಟಮಕ್ಕಿ ಸ್ನೇಹಿತರಿಗೂ ಹಾಗೂ ಧನ ಸಹಾಯ ಮಾಡಿದಂತಹ ತೀರ್ಥಹಳ್ಳಿಯ ಸಮಸ್ತ ನಾಗರಿಕರಿಗೆ ಸ್ನೇಹ ಜೀವಿ ತಂಡ ಧನ್ಯವಾದ ಅರ್ಪಿಸಿದ್ದಾರೆ.
ಹುಲಿವೇಷ ಧರಿಸಿ ಗಮನ ಸೆಳೆದ ಪುನೀತ್ ಅವರಿಗೂ ಧನ್ಯವಾದಗಳು. ತೀರ್ಥಹಳ್ಳಿಯಲ್ಲಿ ಮೊದಲ ಬಾರಿಗೆ ವೇಷದ ಮೂಲಕ ರೋಗಿಗಳಿಗೆ ಸಹಾಯ ಮಾಡಿದ್ದಾರೆ.

Categories
ತೀರ್ಥಹಳ್ಳಿ ಶಿವಮೊಗ್ಗ

ಆಭರಣದ ಅಂಗಡಿ ಮೇಲೆ ಐಟಿ ದಾಳಿ!

ಆಭರಣದ ಅಂಗಡಿ ಮೇಲೆ ಐಟಿ ದಾಳಿ!
– ಶಿವಮೊಗ್ಗ, ತೀರ್ಥಹಳ್ಳಿ ಸೇರಿ ಹಲವೆಡೆ ದಾಳಿ

NAMMUR EXPRESS NEWS
ತೀರ್ಥಹಳ್ಳಿ/ಶಿವಮೊಗ್ಗ: ಮಲೆನಾಡು ಸೇರಿದಂತೆ ರಾಜ್ಯದ ಹಲವೆಡೆ ತೆರಿಗೆ ಇಲಾಖೆ ಅಧಿಕಾರಿಗಳು ಪ್ರಸಿದ್ಧ ಆಭರಣ ಸಂಸ್ಥೆ ಆಭರಣ್ ಜ್ಯುವೆಲ್ಲರಿ ಮೇಲೆ ದಾಳಿ ಮಾಡಿದ್ದಾರೆ. ಶಿವಮೊಗ್ಗ, ತೀರ್ಥಹಳ್ಳಿ ಆಭರಣ ಜ್ಯುವೇಲ್ಲರಿ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸಲಾಗುತ್ತಿದೆ. 10ಕ್ಕೂ ಹೆಚ್ಚು ಕಾರುಗಳಲ್ಲಿ ಬಂದಿದ್ದ ಅಧಿಕಾರಿಗಳು ಪರಿಶೀಲನೆ ಮಾಡುತ್ತಿದ್ದಾರೆ. ಇನ್ನಷ್ಟು ಮಾಹಿತಿ ಹೊರ ಬರಬೇಕಿದೆ.

[embedyt] https://www.youtube.com/watch?v=qs4Luiy5iWU%5B/embedyt%5D

Categories
ಉದ್ಯೋಗ ಸುದ್ದಿ

ಶಿವಮೊಗ್ಗ, ಭದ್ರಾವತಿ, ಸಾಗರ, ಸೊರಬ, ತೀರ್ಥಹಳ್ಳಿ, ಹೊಸನಗರದಲ್ಲಿ ಉದ್ಯೋಗ

ಶಿವಮೊಗ್ಗ, ಭದ್ರಾವತಿ, ಸಾಗರ, ಸೊರಬ, ತೀರ್ಥಹಳ್ಳಿ, ಹೊಸನಗರದಲ್ಲಿ ಉದ್ಯೋಗ
– ಜಿಲ್ಲಾ ಪಂಚಾಯಿತಿಯಲ್ಲಿ ಕೆಲಸ… ಏನಿದು ಉದ್ಯೋಗ?

NAMMUR EXPRESS NEWS
ಶಿವಮೊಗ್ಗ ಜಿಲ್ಲಾ ಪಂಚಾಯಿತಿಯಲ್ಲಿ ವಿವಿಧ ಹುದ್ದೆಗಳಿಗೆ ಹೊರಗುತ್ತಿಗೆಯಡಿಯಲ್ಲಿ ಅರ್ಜಿ ಆಹ್ವಾನ ಮಾಡಲಾಗಿದೆ. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ಅಭ್ಯರ್ಥಿಗಳ ನೇಮಕಕ್ಕೆ ಅರ್ಜಿ ಕರೆಯಲಾಗಿದೆ. ಶಿವಮೊಗ್ಗ, ಭದ್ರಾವತಿ, ಸಾಗರ, ಸೊರಬ, ತೀರ್ಥಹಳ್ಳಿ, ಹೊಸನಗರ ತಾಲ್ಲೂಕಿನಲ್ಲಿ ತಾಂತ್ರಿಕ ಸಹಾಯಕರು (ಅರಣ್ಯ) – 4 ಹುದ್ದೆ, ತಾಂತ್ರಿಕ ಸಹಾಯಕರು (ಕೃಷಿ) 3 ಹುದ್ದೆ, ತಾಂತ್ರಿಕ ಸಹಾಯಕರು (ತೋಟಗಾರಿಕೆ) 4 ಹುದ್ದೆ, ತಾಂತ್ರಿಕ ಸಹಾಯಕರು (ಸಿವಿಲ್)‌ 2 ಹುದ್ದೆಗಳು, ಡೇಟಾ ಎಂಟ್ರಿ ಆಪರೇಟರ್‌ 3 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಶೈಕ್ಷಣಿಕ ಅರ್ಹತೆ :
ಡಾಟಾ ಎಂಟ್ರಿ ಆಪರೇಟರ್ – ಪಿಯುಸಿ ಜೊತೆಗೆ ಕನ್ನಡ ಮತ್ತು ಇಂಗ್ಲೀಷ್ ಟೈಪಿಂಗ್ ಜ್ಞಾನ, ಕಂಪ್ಯೂಟರ್ ತರಬೇತಿ ಪ್ರಮಾಣಪತ್ರ ಹೊಂದಿರಬೇಕು.
ತಾಂತ್ರಿಕ ಸಹಾಯಕರು (ತೋಟಗಾರಿಕೆ) – ಬಿ.ಎಸ್ಸಿ ಹೊರ್ಟಿಕಲ್ಚರ್
ತಾಂತ್ರಿಕ ಸಹಾಯಕರು (ಅರಣ್ಯ) – ಬಿ.ಎಸ್ಸಿ ಫಾರೆಸ್ಟ್ರಿ
ತಾಂತ್ರಿಕ ಸಹಾಯಕರು (ಕೃಷಿ) – ಬಿ.ಎಸ್ಸಿ ಅಗ್ರಿಕಲ್ಚರ್
ತಾಂತ್ರಿಕ ಸಹಾಯಕರು (ಸಿವಿಲ್) – ಬಿಇ (ಸಿವಿಲ್)

ವಯೋಮಾನ :
• ಡಾಟಾ ಎಂಟ್ರಿ ಆಪರೇಟರ್ – ಗರಿಷ್ಠ 35 ವರ್ಷ
• ತಾಂತ್ರಿಕ ಸಹಾಯಕರು – ಕನಿಷ್ಠ 21 ವರ್ಷ, ಗರಿಷ್ಠ 40 ವರ್ಷ

ಅ.20 ರಿಂದಲೇ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗಿದ್ದು, ಬರುವ ನವೆಂಬರ್​ ಮೂರು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ, ಇನ್ನೂ ಈ ಸಂಬಂಧ ಜಾಹಿರಾತು ಪ್ರಕಟಿಸಲಾಗಿದೆ. ಇನ್ನೂ ಬಿಆರ್‌ಕೆ ಸರ್ವೀಸ್ ಪ್ರವೇಟ್ ಲಿಮಿಟೆಡ್, ರಾಜಾಜಿನಗರ ಬೆಂಗಳೂರು ಹೊರಗುತ್ತಿಗೆಯಡಿಯಲ್ಲಿ ಅಭ್ಯರ್ಥಿಗಳನ್ನು ಭರ್ತಿ ಮಾಡುತ್ತಿದೆ.
ಆಸಕ್ತ, ಅರ್ಹ ಅಭ್ಯರ್ಥಿಗಳು https://shimoga.nic.in ಲಿಂಕ್ ಮೂಲಕ 3/11/2023ರೊಳಗೆ ಅರ್ಜಿಗಳನ್ನು ಸಲ್ಲಿಸಬಹುದು.