Categories
ಉಡುಪಿ

ನೂತನ ಉದ್ಯಮ ಶುರು ಮಾಡಿದ ಗೋವಿಂದ ಬಾಬು ಪೂಜಾರಿ!

ನೂತನ ಉದ್ಯಮ ಶುರು ಮಾಡಿದ ಗೋವಿಂದ ಬಾಬು ಪೂಜಾರಿ!

– ವಿನಯ್ ಗುರೂಜಿ ಅವರಿಂದ ಬೈಂದೂರಿನ ಹೇರಂಜಾಲುವಿನಲ್ಲಿ ಶೆಫ್ ಟಾಕ್ ನ್ಯೂಟ್ರಿಫುಡ್ಸ್ ಸಂಸ್ಥೆಯ ಚಿಕ್ಕಿ, ಚಕ್ಕುಲಿ, ಖಾದ್ಯಗಳ ಘಟಕ
– ಹಳ್ಳಿಯಲ್ಲಿ ಉದ್ಯೋಗ ಸೃಷ್ಟಿ: ಗಣ್ಯರ ಮೆಚ್ಚುಗೆ

NAMMUR EXPRESS NEWS
ಉಡುಪಿ: ಬೈಂದೂರು ತಾಲೂಕಿನ ಹೇರಂಜಾಲುವಿನಲ್ಲಿ ಶೆಫ್ ಟಾಕ್ ನ್ಯೂಟ್ರಿಫುಡ್ಸ್ ಪ್ರೈವೇಟ್‌ ಲಿಮಿಟೆಡ್‌ ಕೇಂದ್ರದ ವತಿಯಿಂದ ಹೊಸದಾಗಿ ಸ್ಥಾಪಿಸಲಾಗಿರುವ ಚಿಕ್ಕಿ, ಚಕ್ಕುಲಿ ಮತ್ತು ಇತರ ಖಾದ್ಯಗಳ ಉತ್ಪಾದನಾ ಘಟಕದ ಉದ್ಘಾಟನೆ ಗಣ್ಯರ ಸಮ್ಮುಖದಲ್ಲಿ ನಡೆಯಿತು.

ಕೊಪ್ಪದ ಗೌರಿಗದ್ದೆ ಆಶ್ರಮದ ವಿನಯ ಗುರೂಜಿ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್, ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದರಾದ ಕೋಟಾ ಶ್ರೀನಿವಾಸ ಪೂಜಾರಿ, ರಾಜು ಪೂಜಾರಿ, ವಿಜಯ್ ಶೆಟ್ಟಿ, ಸಂಜೀವ್, ಗ್ರಾಮ ಪಂಚಾಯತಿ ಅಧ್ಯಕ್ಷೆ ನಾಗಮ್ಮ ದೇವಾಡಿಗ, ಗೌರಿ ದೇವಾಡಿಗ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಖ್ಯಾತ ಉದ್ಯಮಿ ಗೋವಿಂದ ಬಾಬು ಪೂಜಾರಿ ಮಾಲೀಕತ್ವದ ಈ ಉದ್ಯಮ ಸಾವಿರಾರು ಜನರಿಗೆ ಉದ್ಯೋಗ ನೀಡಲಿದೆ. ಕಾರ್ಯಕ್ರಮ ಉದ್ಘಾಟನೆ ಮಾಡಿದ ವಿನಯ್ ಗುರೂಜಿ ಸೇರಿ ಎಲ್ಲಾ ಗಣ್ಯರು ಬಾಬು ಅವರ ಉದ್ಯಮ, ಸಮಾಜ ಸೇವೆಯನ್ನು ಬಣ್ಣಿಸಿದರು.

ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಹೇರಂಜಾಲುವಿನಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಶೆಫ್ ಟಾಕ್ ನ್ಯೂಟ್ರಿಫುಡ್ಸ್ ಪ್ರೈವೇಟ್‌ ಲಿಮಿಟೆಡ್‌ ಕೇಂದ್ರದ ಉದ್ಘಾಟನಾ ಸಮಾರಂಭಕ್ಕೆ ಆಗಮಿಸಿ ಶುಭ ಹಾರೈಸಿದ ಗಣ್ಯರು, ಎಲ್ಲಾ ಅಭಿಮಾನಿಗಳು, ಸಿಬ್ಬಂದಿಗೆ ಗೋವಿಂದ ಬಾಬು ಪೂಜಾರಿ ಅವರು ಧನ್ಯವಾದಗಳನ್ನು ಅರ್ಪಿಸಿದರು.

Categories
ಚಿತ್ರದುರ್ಗ

ನಗರಸಭೆ ಸದಸ್ಯತ್ವಕ್ಕೆ ಕೆ.ಸಿ.ಎನ್.ರಾಜು ರಾಜಿನಾಮೆ!

ನಗರಸಭೆ ಸದಸ್ಯತ್ವಕ್ಕೆ ಕೆ.ಸಿ.ಎನ್.ರಾಜು ರಾಜಿನಾಮೆ!

– ಚಳ್ಳಕೆರೆ ನಗರ ಸಭೆಯಲ್ಲಿ ಸಕ್ರಿಯರಾಗಿದ್ದ ಸದಸ್ಯ
– ವಯುಕ್ತಿಕ ಕಾರಣ ನೀಡಿ ರಾಜೀನಾಮೆ

NAMMUR EXPRESS NEWS
ಚಳ್ಳಕೆರೆ: ನಗರಸಭೆ ಸದಸ್ಯತ್ವ ಸ್ಥಾನಕ್ಕೆ ಸದಸ್ಯರೊಬ್ಬರು ಜಿಲ್ಲಾಧಿಕಾರಿಗಳ ಕಚೇರಿಗೆ ಮನವಿ ನಿಡಿದ್ದಾರೆ.
ಹೌದು ಇದು ಚಳ್ಳಕೆರೆ ನಗರದ ನಾಲ್ಕನೇ ವಾರ್ಡ್ ಸದಸ್ಯ ಕೆ.ಸಿ.ನಾಗರಾಜ್‌ ನಗರಸಭೆ ಸದಸ್ಯತ್ವಕ್ಕೆ ಜಿಲ್ಲಾಧಿಕಾರಿಗಳಿಗೆ ರಾಜೀನಾಮೆ ಪತ್ರ ನೀಡಿದ್ದಾರೆ. ಮನವಿಯಲ್ಲಿ ನಾನು ನನ್ನ ವೈಯಕ್ತಿಕ ಕಾರಣದಿಂದ ನನ್ನ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೇಯನ್ನು ನೀಡುತ್ತಿದ್ದೇನೆ, ನನ್ನ ರಾಜೀನಾಮೇಯನ್ನು ಅಂಗೀಕರಿಸಿ ಸದಸ್ಯ ಸ್ಥಾನದಿಂದ ಬಿಡುಗಡೆಗೊಳಿಸಲು ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೀದ್ದೇನೆ, ನಾನು ನನ್ನ ಸ್ವ-ಇಚ್ಚೆಯಿಂದ ಯಾವುದೇ ಒತ್ತಡ ಇಲ್ಲದೆ ರಾಜೀನಾಮೇಯನ್ನು ನೀಡುತ್ತಿದ್ದೇನೆ ಈವರೆಗೂ ನಗರಸಭೆಯ ಎಲ್ಲಾ ಸಿಬ್ಬಂದಿ ವರ್ಗದವರಿಗೂ ನನ್ನ ನಮಸ್ಕಾರಗಳು ಎಂದು ಧನ್ಯವಾದಗಳನ್ನು ತಿಳಿಸಿದ್ದಾರೆ.

 

 

Categories
ಚಿಕ್ಕಮಗಳೂರು

ಹಾಲು ದುಬಾರಿ: ಕಾಫಿ ನಾಡಲ್ಲಿ ಬಿಜೆಪಿ ಪ್ರತಿಭಟನೆ!

ಹಾಲು ದುಬಾರಿ: ಕಾಫಿ ನಾಡಲ್ಲಿ ಬಿಜೆಪಿ ಪ್ರತಿಭಟನೆ!

– ಬಿಜೆಪಿ ಜಿಲ್ಲಾ ಪ್ರಮುಖರು ಹಾಜರ್
– ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರುದ್ಧ ಆಕ್ರೋಶ

NAMMUR EXPRESS NEWS
ಚಿಕ್ಕಮಗಳೂರು: ಹಾಲು ಸೇರಿದಂತೆ ದಿನ ನಿತ್ಯದ ಅಗತ್ಯ ವಸ್ತುಗಳ ಬೆಲೆ ಏರಿಸಿ ಜನ ಸಾಮಾನ್ಯರಿಗೆ ಹೊರಲಾರದ ಹೊರೆ ಹೊರಿಸಿರುವ ಕಾಂಗ್ರೆಸ್ ಸರ್ಕಾರದ ವಿರುದ್ದ ಚಿಕ್ಕಮಗಳೂರು ಜಿಲ್ಲಾ ರೈತ ಮೋರ್ಚಾ ವತಿಯಿಂದ ಬೃಹತ್ ಪ್ರತಿ ಭಟನೆ ನಡೆಸಲಾಯಿತು .

ಚಿಕ್ಕಮಗಳೂರು ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ದೇವರಾಜ್ ಶೆಟ್ಟಿ ರಾಜ್ಯ ರೈತ ಮೋರ್ಚಾ, ಪ್ರಧಾನ ಕಾರ್ಯದರ್ಶಿ ಕಲ್ಮೂರ್ಡಪ್ಪ ರಾಜ್ಯ ಎಸ್ಸಿ ಮೋರ್ಚ ಕಾರ್ಯದರ್ಶಿ ಸೀತಾರಾಮರಣ್ಯ ನಗರ ಬಿಜೆಪಿ ಅಧ್ಯಕ್ಷರಾದ ಪುಷ್ಪರಾಜ್, ಪ್ರಧಾನ ಕಾರ್ಯದರ್ಶಿಗಳಾದ ಕೌಶಿಕ್ ಸತೀಶ್, ನಗರ ರೈತ ಮೋರ್ಚ ಅಧ್ಯಕ್ಷರಾದ ನಿಶಾಂತ್, ಜಿಲ್ಲಾ ಉಪಾಧ್ಯಕ್ಷರಾದ ನಾಗರಾಜ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ್ ನಿಕಟ ಪೂರ್ವ ಅಧ್ಯಕ್ಷರಾದ ಮಧುಕುಮಾರ್ ರಾಜ್ ಅರಸ್ ಜಿಲ್ಲಾ ಎಸ್ ಸಿ ಮೋರ್ಚ ಅಧ್ಯಕ್ಷರಾದ ಕುರುವಂಗಿ ವೆಂಕಟೇಶ್, ಓಬಿಸಿ ಮೋರ್ಚದ ಅಧ್ಯಕ್ಷರಾದ ಜಯ ವರ್ಧನ್ ಭರಣಿ, ಪಕ್ಷದ ಜಿಲ್ಲಾ ಯುವ ಮೋರ್ಚಾದ ಅಧ್ಯಕ್ಷರಾದ ಸಂತೋಷ್ ಕೋಟ್ಯಾನ್,ಎಸ್ ಸಿ ಮೋರ್ಚದ ಅಧ್ಯಕ್ಷರಾದ ಜಗದೀಶ್, ಮುಖಂಡರುಗಳಾದ ರಾಜೀವ್ ಈಶ್ವರಹಳ್ಳಿ, ಮಹೇಶ್ ಕೋಟೆ ರಂಗಣ್ಣ, ಹಂಪಣ್ಣ, ನಗರಸಭಾ ಸದಸ್ಯರಾದ ಅರುಣ್ ಕುಮಾರ್ ಹಾಗೂ ಜಿಲ್ಲೆಯ ಮತ್ತು ನಗರ ವಿವಿಧ ಮೋರ್ಚಾದ ರೈತ ಮೋರ್ಚಾ ಎಸ್ಸಿ ಮೋರ್ಚಾ ಎಸ್ ಟಿ ಮೋರ್ಚ ಒಬಿಸಿ ಮೋರ್ಚಾ ಯುವ ಮೋರ್ಚಾ ಅಧ್ಯಕ್ಷರು ಉಪಾಧ್ಯಕ್ಷರು ಪ್ರಧಾನ ಕಾರ್ಯದರ್ಶಿಗಳು ಮತ್ತು ಪಕ್ಷದ ಮಾಧ್ಯಮ ಸಂಚಾಲಕರು.

ಸಹಸಂಚಾಲಕರು ನಗರದ ಮಹಾಶಕ್ತಿ ಕೇಂದ್ರದ ಅಧ್ಯಕ್ಷರು ಹಾಗೂ ಕಾರ್ಯದರ್ಶಿ, ಜಿಲ್ಲಾ ಮತ್ತು ನಗರ ವಕ್ತಾರರು ಹಾಗೂ ನಗರಸಭಾ ಸದಸ್ಯರು ಮತ್ತು ಜಿಲ್ಲಾ ಪಂಚಾಯತ್ ತಾಲುಕ್ ಪಂಚಾಯತ್ ಗ್ರಾಮ ಪಂಚಾಯತ್ ಸದಸ್ಯರು ಹಾಗೂ ವಿವಿಧ ಸ್ಥರದ ಕಾರ್ಯಕರ್ತರು ಭಾಗವಹಿಸಿದ್ದರು.

Categories
ರಾಜ್ಯ

ಮಹಿಳೆಯರಿಗೆ ಹಣ ಬರುತ್ತೆ!

ಮಹಿಳೆಯರಿಗೆ ಹಣ ಬರುತ್ತೆ!

– ಗೃಹಲಕ್ಷ್ಮೀ ಯೋಜನೆ ಫಲಾನುಭವಿಗಳ ಖಾತೆಗೆ ಹಣ ಜಮೆ
– ಇಂದು ಅಥವಾ ನಾಳೆ ಹಣ ವರ್ಗಾವಣೆ?

NAMMUR EXPRESS NEWS
ರಾಜ್ಯ ಸರ್ಕಾರದ ಬಹು ನಿರೀಕ್ಷಿತ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮೀ ಯ ಹಣ ಯಜಮಾನಿಯ ಖಾತೆಗೆ ಇಂದು ಅಥವಾ ನಾಳೆ ಜಮೆ ಆಗಲಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಭರವಸೆ ನೀಡಿದ್ದಾರೆ. ಎರಡು ತಿಂಗಳಿನಿಂದ ಗೃಹಲಕ್ಷ್ಮೀ ಹಣ ಬಾರದ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಮಹಿಳೆಯರು ನಡೆಸುತ್ತಿರುವ ಪ್ರತಿಭಟನೆಗೆ ಪ್ರತಿಕ್ರಿಯೆ ನೀಡಿರುವ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌, ʼʼಮೇ, ಜೂನ್‌ ತಿಂಗಳ ಹಣ ಹಾಕಿದ್ದೇವೆ. ಇಂದು ಅಥವಾ ನಾಳೆ ಜಮೆ ಆಗಲಿದೆʼʼ ಎಂದು ವಿವರಿಸಿದ್ದಾರೆ.

– ಯೋಜನೆಯನ್ನು ಎಂದು ನಿಲ್ಲಿಸುವುದಿಲ್ಲ

ಗೃಹ ಲಕ್ಷ್ಮೀ ಸೇರಿದಂತೆ ಗ್ಯಾರಂಟಿ ಯೋಜನೆಗಳು ಸ್ಥಗಿತಗೊಳ್ಳುತ್ತವೆ ಎನ್ನುವ ವದಂತಿಯನ್ನು ಸ್ಪಷ್ಟವಾಗಿ ನಿರಾಕರಿಸಿದ ಅವರು, ʼʼರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಗೃಹಲಕ್ಷ್ಮೀ ಯೋಜನೆ ನಿಲ್ಲುವುದಿಲ್ಲ. ಐದು ವರ್ಷಗಳವರೆಗೂ ಇದು ಮುಂದುವರಿಯಲಿದೆ. ಬಿಜೆಪಿಯವರು ಸುಮ್ಮನೆ ಅಪಪ್ರಚಾರ ಮಾಡುತ್ತಿದ್ದಾರೆʼʼ ಎಂದು ಹೇಳಿದ್ದಾರೆ.

ಆಧಾರ್‌ ಸೀಡಿಂಗ್ ಕಡ್ಡಾಯ

ಇನ್ನೂ ಸಾಕಷ್ಟು ಫಲಾನುಭವಿಗಳು ಬ್ಯಾಂಕ್‌ನಲ್ಲಿ ಖಾತೆ ಹೊಂದಿದ್ದರು ಕೂಡ ಆಧಾರ್‌ ಸೀಡಿಂಗ್ ಮಾಡಿಕೊಂಡಿಲ್ಲ. ಹೀಗಾಗಿ ಅವರಿಗೆ ಹಣ ಬರುತ್ತಿಲ್ಲ. ಗೃಹಲಕ್ಷ್ಮೀ ಯೋಜನೆಯಡಿ ನೋಂದಾಯಿಸಿಕೊಂಡರೂ ಸಹಾಯಧನ ಪಾವತಿಯಾಗದ ಫಲಾನುಭವಿಗಳು ಕೂಡಲೇ ಅರ್ಜಿಯೊಂದಿಗೆ ಇ-ಕೆವೈಸಿ ಸಂಬಂಧಿತ ಸಮಸ್ಯೆಗಳನ್ನು ಬ್ಯಾಂಕ್‌ಗಳಲ್ಲಿ ಪರಿಹರಿಸಿಕೊಳ್ಳಬೇಕು. ಬಳಿಕ ನ್ಯಾಯಬೆಲೆ ಅಂಗಡಿಗಳಿಗೆ ಹೋಗಿ, ಇ-ಕೆವೈಸಿ ಅಪ್‌ಡೇಟ್‌ ಮಾಡಿಸಿ, ದೃಢೀಕರಣ ಪಡೆದು ಅವುಗಳನ್ನು ತಮ್ಮ ಸಮೀಪದ ನ್ಯಾಯಬೆಲೆ ಅಂಗಡಿ ಕೇಂದ್ರಗಳ ಕಾರ್ಯಕರ್ತೆಯರಿಗೆ ಒದಗಿಸಿದರೆ, ಸಹಾಯಧನ ಪಾವತಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Categories
ಕರಾವಳಿ ಮಲ್ನಾಡ್

ಕರಾವಳಿಗೆ ರೆಡ್‌, ಮಲೆನಾಡಿಗೆ ಆರೆಂಜ್ ಅಲರ್ಟ್..!

ಕರಾವಳಿಗೆ ರೆಡ್‌, ಮಲೆನಾಡಿಗೆ ಆರೆಂಜ್ ಅಲರ್ಟ್..!

– ತಿಂಗಳಾಂತ್ಯದವರೆಗೆ ಮೀನುಗಾರರಿಗೆ ನಿರ್ಬಂಧ
– ಹಾಸನ ಜಿಲ್ಲೆಗೆ ಯೆಲ್ಲೋ ಎಚ್ಚರಿಕೆ

NAMMUR EXPRESS NEWS
ಬೆಂಗಳೂರು: ರಾಜ್ಯಾದ್ಯಂತ ಧಾರಾಕಾರ ಮಳೆಯಾಗುತ್ತಿದ್ದು, ಅವಾಂತರವನ್ನೇ ಸೃಷ್ಟಿಸಿದೆ. ಇನ್ನೊಂದು ವಾರ ಮಳೆಯು ಅಬ್ಬರಿಸುವ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ. ಇಂದು ಕರ್ನಾಟಕ ಕರಾವಳಿಯಲ್ಲಿ ಸಾಧಾರಣದಿಂದ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಮಲೆನಾಡು ಭಾಗದಲ್ಲಿ ಚದುರಿದಂತೆ ಸಾಧಾರಣ ಮಳೆಯಾಗುವ ನಿರೀಕ್ಷೆ ಇದೆ. ದಕ್ಷಿಣ ಒಳನಾಡಿನಲ್ಲಿ ಪ್ರತ್ಯೇಕವಾಗಿ ಮಧ್ಯಮ ಮಳೆಯಾದರೆ, ಉತ್ತರ ಒಳನಾಡಿನಲ್ಲಿ ಹಗುರವಾದ ವರ್ಷಧಾರೆಯಾಗಲಿದೆ. ರಾಜ್ಯದ ವಿವಿಧೆಡೆ ಗುಡುಗು ಸಹಿತ 30-40 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ.

ದಕ್ಷಿಣ ಒಳನಾಡಿನ ಭಾಗಗಳಲ್ಲಿ ಹಗುರದಿಂದ ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಒಳನಾಡಿನಲ್ಲಿ ಪ್ರತ್ಯೇಕವಾಗಿ ಚದುರಿದಂತೆ ಹಗುರದಿಂದ ಮಧ್ಯಮ ಮಳೆಯಾಗುವ ಸಾಧ್ಯತೆಯಿದೆ. ಆದರೆ ಬೆಳಗಾವಿಯಲ್ಲಿ ಭಾರೀ ಮಳೆಯಾಗುವ ಎಚ್ಚರಿಕೆಯನ್ನು ನೀಡಲಾಗಿದೆ. ಮಲೆನಾಡಿನ ಚಿಕ್ಕಮಗಳೂರು, ಕೊಡಗು, ಹಾಸನ, ಶಿವಮೊಗ್ಗ ಸುತ್ತಮುತ್ತ ಸಾಧಾರಣ ಮಳೆಯೊಂದಿಗೆ ಪ್ರತ್ಯೇಕವಾಗಿ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಕರಾವಳಿಯಲ್ಲಿ ವ್ಯಾಪಕವಾದ ಮಧ್ಯಮದಿಂದ ಭಾರಿ ಮಳೆಯಾಗಲಿದ್ದು, ಪ್ರತ್ಯೇಕ ಸ್ಥಳಗಳಲ್ಲಿ ಅತಿ ಹೆಚ್ಚು ಮಳೆಯಾಗುವ ಸಾಧ್ಯತೆಯಿದೆ.
ಬೆಂಗಳೂರಿನಲ್ಲಿ ಶುಕ್ರವಾರ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ಉಷ್ಣಾಂಶ 28 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ಇರಲಿದೆ.

ಈ ಜಿಲ್ಲೆಗಳಲ್ಲಿ ಭಯಂಕರ ಮಳೆ!

ಗುಡುಗು ಸಹಿತ ಭಾರಿ ಮಳೆಯೊಂದಿಗೆ ಗಂಟೆಗೆ 45-55 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದ್ದು, ದಕ್ಷಿಣ ಕನ್ನಡ ಜಿಲ್ಲೆಗೆ ರೆಡ್ ಅಲರ್ಟ್ ನೀಡಲಾಗಿದೆ. ಉಡುಪಿ, ಉತ್ತರ ಕನ್ನಡ, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಹಾಸನ ಜಿಲ್ಲೆಗೆ ಯೆಲ್ಲೋ ಎಚ್ಚರಿಕೆ ನೀಡಲಾಗಿದೆ.

ಮೀನುಗಾರರಿಗೆ ಮುಂದುವರಿದ ಎಚ್ಚರಿಕೆ:

ಕರ್ನಾಟಕ ಕರಾವಳಿಯಲ್ಲಿ ಗಂಟೆಗೆ 35 ಕಿ.ಮೀ ನಿಂದ 45 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ. ಹೀಗಾಗಿ ಜೂನ್ 30ರವರೆಗೆ ಮೀನುಗಾರರು ಸಮುದ್ರ ಪ್ರದೇಶಗಳಿಗೆ ಹೋಗದಂತೆ ಸೂಚಿಸಲಾಗಿದೆ.

Categories
ಕಾರ್ಕಳ

ಡೇಂಜರ್…ಕಾರ್ಕಳದ ಮರ್ಣೆ ನೀರಿನ ಟ್ಯಾಂಕ್‌!

ಡೇಂಜರ್…ಕಾರ್ಕಳದ ಮರ್ಣೆ ನೀರಿನ ಟ್ಯಾಂಕ್‌!

– ಯಾವುದೇ ಕ್ಷಣದಲ್ಲಿ ಬೀಳುತ್ತೆ ನೀರಿನ ಟ್ಯಾಂಕ್ ಹುಷಾರ್
– ಸುಮಾರು 30 ವರ್ಷಗಳ ಹಿಂದೆ ನಿರ್ಮಾಣಗೊಂಡ ಟ್ಯಾಂಕ್

NAMMUR EXPRESS NEWS
ಕಾರ್ಕಳ: ಕಾರ್ಕಳ ತಾಲೂಕಿನ ಮರ್ಣೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿಯುವ ನೀರು ಸರಬರಾಜು ಮಾಡುವ 5000 ಲೀಟರ್‌ ಸಾಮರ್ಥ್ಯದ ಹಳೆಯ ಟ್ಯಾಂಕ್‌ ಶಿಥಿಲಾವಸ್ಥೆಯಲ್ಲಿದ್ದು, ಯಾವುದೇ ಕ್ಷಣದಲ್ಲೂ ಕುಸಿದು ಬೀಳುವ ಅಪಾಯ ಎದುರಿಸುತ್ತಿದೆ.

ಸ್ಥಳೀಯ ಜನರು ಅಪಾಯಕಾರಿಯಾಗಿರುವ ಈ ಬೃಹತ್‌ ನೀರಿನ ಟ್ಯಾಂಕರ್‌ ತೆರವಿಗೆ ಸೂಕ್ತ ಕ್ರಮ ಜರುಗಿಸುವಂತೆ ಪಂಚಾಯತ್‌ನವರಿಗೆ ಹಲವು ಬಾರಿ ಮನವಿ ಮಾಡಿದರೂ ಸಂಬಂಧಪಟ್ಟವರು ಎಚ್ಚೆತ್ತುಕೊಂಡಿಲ್ಲ ಎನ್ನುವ ಆರೋಪ ಕೇಳಿಬಂದಿದೆ.

ಪಂಚಾಯತ್‌ ವಠಾರದಲ್ಲೇ ಇರುವ ಈ ಎರಡು ಟ್ಯಾಂಕ್‌ಗಳ ಪೈಕಿ ಸುಮಾರು ಮೂವತ್ತು ವರ್ಷಗಳ ಹಿಂದೆ ನಿರ್ಮಾಣಗೊಂಡ ಹಳೇಯ ನೀರಿನ ಟ್ಯಾಂಕ್‌ ಸಂಪೂರ್ಣ ದುಸ್ಥಿತಿಯಲ್ಲಿದ್ದು, ಕಾಂಕ್ರಿಟ್‌ನ ರಾಡ್‌ಗಳು ಕೂಡ ತುಕ್ಕು ಹಿಡಿದಿವೆ.

ಶಿಥಿಲಾವಸ್ಥೆಯ ನೀರಿನ ಟ್ಯಾಂಕ್‌ನ ಪಕ್ಕದಲ್ಲೇ ಪಂಚಾಯತ್‌, ವಿಎ ಕಚೇರಿಯಿದೆ. ರೈತ ಸಂಪರ್ಕ ಕೇಂದ್ರ, ಗ್ರಾಮ ಒನ್‌ ಸೇರಿದಂತೆ ಹಲವು ಸಾರ್ವಜನಿಕ ಸೇವಾ ಕೇಂದ್ರಗಳು ಇಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಪ್ರತಿದಿನ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಇಲ್ಲಿಗೆ ಬಂದು ಹೋಗುತ್ತಾರೆ. ಹೀಗಿರುವಾಗ, ಈ ಅಪಾಯದ ಮುನ್ಸೂಚನೆಯನು ಅರಿತು ಸಂಬಂಧಪಟ್ಟವರು ಎಚ್ಚೆತ್ತುಕೊಳ್ಳದಿದ್ದರೆ ಅನಾಹುತ ಸಂಭವಿಸುವ ಎಲ್ಲ ಸಾಧ್ಯತೆಗಳಿವೆ.
ಗ್ರಾಮ ಸಭೆಯಲ್ಲಿಯೂ ಈ ವಿಚಾರ ಪ್ರಸ್ತಾಪವಾಗಿದ್ದರೂ ಪ್ರಯೋಜನವಾಗಿಲ್ಲ. ಈಗ ಮಳೆಗಾಲ ಆರಂಭವಾಗಿದ್ದು, ಮತ್ತಷ್ಟು ಅಪಾಯದ ಮುನ್ಸೂಚನೆ ನೀಡಿದೆ.

Categories
ಮೈಸೂರು ಹಾಸನ

ಮೈಸೂರು ಅರಮನೆಗೆ ಈಗ ಪಾರಿವಾಳಗಳೇ ಕಂಟಕ!

ಮೈಸೂರು ಅರಮನೆಗೆ ಈಗ ಪಾರಿವಾಳಗಳೇ ಕಂಟಕ!

– ಪಾರಿವಾಳದ ಹಿಕ್ಕೆಯಿಂದ ಅರಮನೆ ಸೌಂದರ್ಯಕ್ಕೆ ಧಕ್ಕೆ
– ಪಾರಿವಾಳಗಳಿಗೆ ಕಾಳು ಹಾಕುವುದಕ್ಕೆ ಜಿಲ್ಲಾಡಳಿತ ನಿಷೇಧ?!

NAMMUR EXPRESS NEWS
ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರು ಅರಮನೆಗೆ ಹೆಸರುವಾಸಿ. ಅರಮನೆ ನೋಡಲು ವಿಶ್ವದ ಮೂಲೆ ಮೂಲೆಯಿಂದ ಜನ ಬರುತ್ತಾರೆ..! ಆದರೆ ಈಗ ವಿಶ್ವವಿಖ್ಯಾತ ಮೈಸೂರು ಅರಮನೆಗೆ ಪಾರಿವಾಳಗಳ ಹಿಕ್ಕೆಯಿಂದ ಕಂಟಕ ಎದುರಾಗಿದೆ.
ಹೌದು. ಪಾರಿವಾಳಗಳು ಹಾಕುವ ಹಿಕ್ಕೆಯಲ್ಲಿ, ಯೂರಿಕ್‌ ಆಸಿಡ್ ಇರುತ್ತದೆ. ಯೂರಿಕ್ ಆಸಿಡ್ ಇಂದ ಕೂಡಿರುವ ಈ ಹಿಕ್ಕೆಗಳು ಪಾರಂಪರಿಕ ಕಟ್ಟಡಗಳ ಮೇಲೆ ಬೀಳುವುದರಿಂದ, ಕಟ್ಟಡಗಳು ವಿರೂಪಗೊಳ್ಳುತ್ತವೆ ಎಂದು ಇತಿಹಾಸ ತಜ್ಞ ಪ್ರೋ. ರಂಗರಾಜು ಹೇಳಿದ್ದಾರೆ.

ಈ ಬಗ್ಗೆ ಮಾತನಾಡಿದ ಪ್ರೋ. ರಂಗರಾಜು, ಈ ಹಿಕ್ಕೆಗಳನ್ನು ತಾಮ್ರ ಅಥವಾ ಸ್ಟೀಲ್‌ ಪಾತ್ರೆಯಲ್ಲಿ ಹಾಕಿ ಕೆಲವು ದಿನಗಳು ಬಿಟ್ಟರೆ, ರಂಧ್ರ ಬೀಳುತ್ತದೆ. ಮೈಸೂರಿನ ಹತ್ತನೇ ಚಾಮರಾಜ ವೃತ್ತ ಮತ್ತು ನಾಲ್ವಡಿ ಕೃಷ್ಣರಾಜ ವೃತ್ತಗಳನ್ನು ಮಾರ್ಬಲ್ ಕಲ್ಲಿನಿಂದ ಮಾಡಲಾಗಿದೆ. ಈ ವೃತ್ತದಲ್ಲಿ ಪಾರಿವಾಳಗಳು ಹಿಕ್ಕೆ ಹಾಕುವುದರಿಂದ ಮಾರ್ಬಲ್‌ಗೆ ಹಾನಿಯಾಗಲಿದೆ. ಈ ಹಿಕ್ಕೆಗಳಿಂದ ಅರಮನೆಗೆ ಬಹಳ ಮಾರಕವಾಗಲಿದೆ ಎಂದಿದ್ದಾರೆ.

ಹೀಗಾಗಿ, ಅರಮನೆ, ಈ ವೃತ್ತಗಳ ಬಳಿ ಪಾರಿವಾಳಗಳಿಗೆ ಕಾಳು ಹಾಕುವುದನ್ನು ತಡೆಯಬೇಕು. ಈ ಬಗ್ಗೆ ಅನೇಕರು ಧ್ವನಿ ಎತ್ತಿದ್ದಾರೆ. ಈ ಪಾರಿವಾಳಗಳು ಅರಮನೆ, ರಾಜರ ವೃತ್ತಗಳಿಂದ ದೂರ ಹೋಗುವಂತೆ ಮಾಡಬೇಕು. ಪಾರಿವಾಳಗಳು ದೂರ ಹೋಗಬೇಕೆಂದರೆ ಕಾಳುಗಳನ್ನು ಹಾಕುವುದು ನಿಲ್ಲಿಸಬೇಕು. ಪಾರಿವಾಳಗಳಿಗೆ ಹಾಕುವ ಕಾಳುನ್ನು ಅರಮನೆ ಅಕ್ಕ- ಪಕ್ಕ ಮಾರಾಟ ಮಾಡಲು ಆರಂಭಿಸಿದ್ದಾರೆ. ಇದನ್ನೂ ತಡೆಯಬೇಕು. ಅರಮನೆ ಸೇರಿ ಪಾರಂಪರಿಕ ಕಟ್ಟಡದ ರಕ್ಷಣೆಗೆ ಕ್ರಮ ವಹಿಸುವಂತೆ ಮನವಿ ಮಾಡಿದರು.

ಪಾರಿವಾಳಗಳಿಗೆ ಕಾಳು ಹಾಕುವುದನ್ನು ತಡೆಯಬೇಕು: ಜಿಲ್ಲಾಧಿಕಾರಿ

ಮೈಸೂರು ಜಿಲ್ಲಾಧಿಕಾರಿ ಡಾ. ಕೆ.ವಿ ರಾಜೇಂದ್ರ ಮಾತನಾಡಿ, ಅರಮನೆಯ ಮುಂಭಾಗದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ನಿತ್ಯ ಪಾರಿವಾಳಗಳಿಗೆ ಮೂಟೆಗಟ್ಟಲೆ ಗೋಧಿ, ಜೋಳ, ಭತ್ತವನ್ನು ನೀಡುತ್ತಿದ್ದಾರೆ. ಪ್ರವಾಸಿಗರು ಹಾಗೂ ಸಾರ್ವಜನಿಕರು ಕೂಡ ಆಹಾರ ಧಾನ್ಯಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಹಾಕುತ್ತಿದ್ದಾರೆ. ಇದರಿಂದ ಪಾರಿವಾಳಗಳು ಅರಮನೆ ಸುತ್ತಮುತ್ತ ವಾಸಿಸಲು ಆರಂಭಿಸಿವೆ. ಈ ಪಾರಿವಾಳಗಳು ಅರಮನೆಯ ಕಟ್ಟಡದ ಮೇಲೆಲ್ಲ ಹಿಕ್ಕೆಗಳನ್ನು ಹಾಕಿ, ಹಾನಿ ಮಾಡುತ್ತಿವೆ. ಇದು ಹೀಗೆ ಮುಂದುವರೆದರೆ ಮುಂಬರುವ ದಿನಗಳಲ್ಲಿ ಸಾಂಸ್ಕೃತಿಕ ಕಟ್ಟಡ ತನ್ನ ಸೌಂದರ್ಯ ಕಳೆದುಕೊಳ್ಳುತ್ತದೆ. ಹೀಗಾಗಿ ಇದನ್ನು ಈಗಲೇ ತಡೆಗಟ್ಟಬೇಕು ಎಂದರು. ಪಾರಿವಾಳಗಳಿಗೆ ಕಾಳು ಹಾಕುವುದನ್ನು ಪಾರಂಪರಿಕ ತಜ್ಞರು ಹಾಗೂ ಪರಿಸರ ಪ್ರೇಮಿಗಳು ಅಪಾಯಕಾರಿ ಎಂದು ಹೇಳಿದ್ದಾರೆ. ಹಾಗಾಗಿ ಸಾರ್ವಜನಿಕರು ತಮ್ಮ ಖುಷಿಗಾಗಿ ಪಕ್ಷಿಗಳಿಗೆ ತೊಂದರೆ ನೀಡದಂತೆ ಪ್ರವಾಸಿಗರಿಗೆ ಜಾಗೃತಿ ಮೂಡಿಸಬೇಕು ಎಂದು ಸೂಚನೆ ನೀಡಿದರು.

Categories
ಕರಾವಳಿ

ಟಾಪ್ 7 ನ್ಯೂಸ್ ಕರಾವಳಿ

ಟಾಪ್ 7 ನ್ಯೂಸ್ ಕರಾವಳಿ

– ನಾಯಿ ಮಹಿಳೆಯ ಜೀವ ಉಳಿಸಿತು..! 
– ಉಪ್ಪಿನಂಗಡಿ: ಮನೆಯೊಡತಿಯ ಆತ್ಮಹತ್ಯೆ ತಡೆದ ಶ್ವಾನ!
– ಬೆಳ್ತಂಗಡಿ: ಬೆಳ್ಳಂಬೆಳಗ್ಗೆ ಭೀಕರ ಕಾರು ಅಪಘಾತ, ಚಾಲಕ ಮೃತ್ಯು!
– ಮಂಗಳೂರು: ಗಾಂಜಾ ಸೇವನೆ; ಮೂವರು ವಶಕ್ಕೆ
– ಕಾರ್ಕಳ: ನಾಯಿ ಅಡ್ಡ ಬಂದು ಬೈಕ್ ಪಲ್ಟಿ: ನವ ವಿವಾಹಿತೆ ಸಾವು
– ಉಡುಪಿ: ಮಹಿಳೆಯ 8 ಕೆಜಿ ಗಡ್ಡೆ ಬೇರ್ಪಡಿಸಿದ ವೈದ್ಯರು
– ಬೆಳ್ತಂಗಡಿ: ಶಾಸಕ ಹರೀಶ್ ಪೂಂಜ ಹಾಗೂ 65 ಮಂದಿಗೆ ಸಮನ್ಸ್
– ಸುಳ್ಯ: ಮಳೆಗೆ ಮತ್ತೊಂದು ಬಲಿ: ಹೊಳೆಗೆ ಬಿದ್ದು ಸಾವು

NAMMUR EXPRESS NEWS
ಉಪ್ಪಿನಂಗಡಿ: ನಾಯಿಯೊಂದು ಮಹಿಳೆಯ ಜೀವ ಉಳಿಸಿದ ಘಟನೆ ಕರಾವಳಿಯಲ್ಲಿ ನಡೆದಿದೆ.
ಪತಿಯೊಂದಿಗೆ ಮುನಿಸಿಕೊಂಡು ಆತ್ಮಹತ್ಯೆ ಮಾಡುವ ಸಲುವಾಗಿ ನೇತ್ರಾವತಿ ಸೇತುವೆಯ ತಡೆಗೋಡೆ ಏರಿದ್ದ 36 ವರ್ಷದ ಮಹಿಳೆಯ ಜೀವ ಅವರನ್ನು ಹಿಂಬಾಲಿಸಿಕೊಂಡು ಬಂದಿದ್ದ ಸಾಕು ನಾಯಿಯಿಂದಾಗಿ ಉಳಿಸಿದೆ. ಪಿಲಿಗೂಡು ನಿವಾಸಿ ಮಹಿಳೆ ಪತಿಯೊಂದಿಗೆ ಗಲಾಟೆ ಮಾಡಿಕೊಂಡು ಗುರುವಾರ ರಾತ್ರಿ ನಡೆದುಕೊಂಡೇ 4 ಕಿ.ಮೀ. ದೂರದ ನೇತ್ರಾವತಿ ಸೇತುವೆಗೆ ಬಂದು ನದಿಗೆ ಹಾರಲು ಯತ್ನಿಸುತ್ತಿದ್ದರು. ಆದರೆ ಅವರನ್ನು ಮನೆಯಿಂದಲೇ ಹಿಂಬಾಲಿಸಿಕೊಂಡು ಬಂದಿದ್ದ ಸಾಕು ನಾಯಿ ಅಪಾಯವನ್ನು ಅರಿತು ಮಹಿಳೆಯ ಚೂಡಿದಾರವನ್ನು ಕಚ್ಚಿ ಹಿಡಿದು, ಬೊಗಳುತ್ತಾ ರಸ್ತೆಯಲ್ಲಿ ಹೋಗುತ್ತಿರುವವರ ಗಮನ ಸೆಳೆಯುವ ಪ್ರಯತ್ನ ನಡೆಸುತ್ತಿತ್ತು. ಇದೇ ವೇಳೆ ಬೈಕ್‌ನಲ್ಲಿ ಬಂದ ವ್ಯಕ್ತಿಯೋರ್ವರು ಇದನ್ನು ಕಂಡು ಪರಿಚಯದ ಸಮಾಜ ಸೇವಕರೋರ್ವರ ಮೂಲಕ ಇನ್ನೇನು ನದಿಗೆ ಹಾರುವಂತಿದ್ದ ಮಹಿಳೆಯನ್ನು ರಕ್ಷಿಸಿದ ಘಟನೆ ರಾತ್ರಿ ಸಂಭವಿಸಿದೆ. ಒಟ್ಟಾರೆ ಮೂಕಪ್ರಾಣಿಯಾದ ನಾಯಿಯ ತುಡಿತ ಮತ್ತು ಪ್ರಯತ್ನ ಮಹಿಳೆಯನ್ನು ರಕ್ಷಿಸಲು ನೆರವಾದಂತಾಗಿದೆ.

ಬೆಳ್ಳಂಬೆಳಗ್ಗೆ ಭೀಕರ ಕಾರು ಅಪಘಾತ, ಚಾಲಕ ಮೃತ್ಯು!

ಬೆಳ್ತಂಗಡಿ: ಉಜಿರೆ ಮುಖ್ಯದ್ವಾರದಿಂದ ಕಾಲೇಜು ರಸ್ತೆಯಲ್ಲಿ ಅತಿ ವೇಗದಲ್ಲಿ ಬಂದ ಕಾರು ನಿಯಂತ್ರಣ ಕಳೆದುಕೊಡು ಡಿವೈಡರ್ ಗೆ ಢಿಕ್ಕಿ ಹೊಡೆದ ಪರಿಣಾಮ ಕಾರು ಚಾಲಕ ಮೃತಪಟ್ಟಿರುವ ಘಟನೆ ಉಜಿರೆಯಲ್ಲಿ ಶನಿವಾರ ಮುಂಜಾನೆ ನಡೆದಿದೆ. ಮೃತ ಕಾರು ಚಾಲಕ ಬೆಳ್ತಂಗಡಿ ಪ್ರಜ್ವಲ್ ಕಾಂಪ್ಲೆಕ್ಸ್ ಮಾಲೀಕರ ಪುತ್ರ ಪ್ರಜ್ವಲ್ ನಾಯಕ್ (35) ಎಂದು ಗುರುತಿಸಲಾಗಿದೆ.ಮುಂಜಾನೆ 4 ಗಂಟೆ ಸುಮಾರಿಗೆ ಘಟನೆ ನಡೆದಿದ್ದು, ಕಾಲೇಜು ರಸ್ತೆಯಿಂದ ಬೆಳ್ತಂಗಡಿ ಸಾಗುವ ಮಧ್ಯೆ ಡಿವೈಡರ್ ನ ಬೀದಿ ದೀಪದ ಕಂಬಗಳಿಗೆ ಕಾರು ಢಿಕ್ಕಿ ಹೊಡೆದಿದೆ. ಢಿಕ್ಕಿ ರಭಸಕ್ಕೆ ಕಾರು ಮುಂಭಾಗ ನಜ್ಜು ಗುಜ್ಜಾದರೆ, ಒಂದು ವಿದ್ಯುತ್ ಕಂಬ ಬುಡ ಸಮೇತ ಕಿತ್ತು ಬಿದ್ದಿದೆ. ಅಪಘಾತ ರಭಸಕ್ಕೆ ಚಾಲಕ ಪ್ರಜ್ವಲ್ ತಲೆಗೆ ಗಂಭೀರ ಗಾಯವಾಗಿದ್ದು, ಆತನನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ.

– ಮಂಗಳೂರು: ಗಾಂಜಾ ಸೇವನೆ; ಮೂವರು ವಶಕ್ಕೆ

ಮಂಗಳೂರು: ಗಾಂಜಾ ಸೇವನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಗರ್‌, ಪ್ರಸನ್ನ ಕಾಮತ್‌ ಮತ್ತು ಅಜಯ್‌ ಎಂಬವನ್ನು ಕಂಕನಾಡಿ ನಗರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಿಚಾರಣೆ ಮಾಡುವ ವೇಳೆ ಮಾದಕ ವಸ್ತು ಸೇವಿಸಿರುವ ಘಾಟು ವಾಸನೆ ಬಂದಿದ್ದು, ಗಾಂಜಾ ಸೇವನೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ. ವೈದ್ಯಕೀಯ ತಪಾಸಣೆ ನಡೆಸಿದಾಗ ಗಾಂಜಾ ಹಾಗೂ ನಿಷೇಧಿತ ಮಾದಕ ವಸ್ತುಗಳನ್ನು ಸೇವನೆ ಮಾಡಿರುವುದು ದೃಢಪಟ್ಟಿದೆ. ಈ ಬಗ್ಗೆ ಎನ್‌ಡಿಪಿಎಸ್‌ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

– ನಾಯಿ ಅಡ್ಡ ಬಂದು ಬೈಕ್‌ ಅಪಘಾತ: ನವ ವಿವಾಹಿತೆ ಸಾವು

ಕಾರ್ಕಳ: ಗುರುವಾಯನಕೆರೆ ರಸ್ತೆಯ ಹೊಸ್ಮಾರು ಸೇತುವೆ ಬಳಿ ಬೈಕ್‌ಗೆ ನಾಯಿಯೊಂದು ಅಡ್ಡ ಬಂದ ಪರಿಣಾಮ ಬೈಕ್‌ ಅಪಘಾತಗೊಂಡು ನವವಿವಾಹಿತೆ ದಾರುಣವಾಗಿ ಮೃತಪಟ್ಟ ಘಟನೆ ಶುಕ್ರವಾರ ಸಂಜೆ ಹೊಸ್ಮಾರು ಬಳಿ ನಡೆದಿದೆ. ಈದು ಗ್ರಾಮದ ಕರೆಂಬಾಲುವಿನ ವಿಶಾಲ್ ಅವರ ಪತ್ನಿ ನೀಕ್ಷಾ (26) ಎಂಬವರೇ ಮೃತಪಟ್ಟ ಮಹಿಳೆ. ಮದುವೆಯಾಗಿ ಮೂರು ತಿಂಗಳು ಕಳೆದಿದ್ದು ಇವರು ಗಂಡನೊಂದಿಗೆ ಬೈಕ್‌ನಲ್ಲಿ ಹೋಗುತ್ತಿದ್ದ ವೇಳೆ ನಾಯಿ ರಸ್ತೆಗೆ ಅಡ್ಡ ಬಂದಿದ್ದು, ಪರಿಣಾಮ ಬೈಕ್‌ ರಸ್ತೆಗೆಸೆಯಲ್ಪಟ್ಟಿತ್ತು. ಘಟನೆಯಿಂದ ಸಹಸವಾರೆ ನೀಕ್ಷಾ ಅವರಿಗೆ ತೀವ್ರ ಸ್ವರೂಪದ ಗಾಯವಾಗಿದ್ದು, ಆಸ್ಪತ್ರೆ ಕರೆದೊಯ್ಯುವ ವೇಳೆ ದಾರಿ ಮಧ್ಯೆ ಕೊನೆಯುಸಿರೆಳೆದರು. ನೀಕ್ಷಾ ಅವರ ತಂದೆ ಪ್ರೀತಿ ಟೈಮ್ಸ್ ಸೆಂಟ‌ರ್ ಮಾಲಿಕ ಪ್ರಕಾಶ್ ಅವರು 9 ತಿಂಗಳ ಹಿಂದೆಯಷ್ಟೇ ನಿಧನರಾಗಿದ್ದರು. ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣದ ದಾಖಲಾಗಿದೆ.

– ಉಡುಪಿ: ಮಹಿಳೆ ಹೊಟ್ಟೆಯಲ್ಲಿದ್ದ 8 ಕೆಜಿ ಗಡ್ಡೆ ಬೇರ್ಪಡಿಸಿದ ವೈದ್ಯರು

ಉಡುಪಿ: ಸುಮಾರು 32 ವರ್ಷಗಳಿಂದ ದುರ್ಮಾಂಸ ಗಡ್ಡೆಯಿಂದ ಬಳಲುತ್ತಿದ್ದ ಮಹಿಳೆಗೆ ಶಸ್ತ್ರಚಿಕಿತ್ಸೆ ಮೂಲಕ ಸುಮಾರು 8 ಕೆಜಿ ದುಮಾಂಸವನ್ನು ಜಿಲ್ಲಾಸ್ಪತ್ರೆಯ ಶಸ್ತ್ರಚಿಕಿತ್ಸಾ ತಜ್ಞರು ಯಶಸ್ವಿಯಾಗಿ ಬೇರ್ಪಡಿಸಿದ್ದಾರೆ. ಕಾರ್ಕಳದ ನಿವಾಸಿ ಪುಷ್ಪಾ (71) ಅವರ ಭುಜದ ಭಾಗದಲ್ಲಿ ಈ ಗಡ್ಡೆ ಇತ್ತು. ಅವರನ್ನು ಚಿಕಿತ್ಸೆಗಾಗಿ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಜೂ.26ರಂದು ಶಸ್ತ್ರಚಿಕಿತ್ಸ ತಜ್ಞ ಡಾ| ಸುಜಿತ್‌ ಅವರು ತಮ್ಮ ತಂಡದೊಂದಿಗೆ ಸುಮಾರು 3 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿ ಈ ಗಡ್ಡೆಯನ್ನು ಹೊರತೆಗೆದಿದ್ದಾರೆ. ಆಸ್ಪತ್ರೆಯ ಜನರಲ್‌ ಸರ್ಜನ್‌ ಆಗಿರುವ ಡಾ| ಸುಜಿತ್‌ ಅವರ ನೇತೃತ್ವದಲ್ಲಿ ಅರವಳಿಕೆ ತಜ್ಞರಾದ ಡಾ| ಉಮೇಶ್‌ ಉಪಾಧ್ಯಾಯ ಹಾಗೂ ಡಾ| ವಿಶ್ವನಾಥ್‌ ಶೆಟ್ಟಿ ಹಾಗೂ ನುರಿತ ಶುಶ್ರೂಷಕ ಅಧಿಕಾರಿಗಳ ಸಹಯೋಗದೊಂದಿಗೆ ಈ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಪ್ರಸ್ತುತ ರೋಗಿಯು ಚೇತರಿಕೆ ಕಾಣುತಿದ್ದಾರೆ.

– ಶಾಸಕ ಹರೀಶ್ ಪೂಂಜ ಹಾಗೂ 65 ಮಂದಿಗೆ ಸಮನ್ಸ್ ಜಾರಿ

ಬೆಳ್ತಂಗಡಿ: ಬಿಜೆಪಿ ಯುವಮೋರ್ಚಾದ ತಾಲೂಕು ಅಧ್ಯಕ್ಷ
ಶಶಿರಾಜ್ ಶೆಟ್ಟಿ ಪರ ಪ್ರತಿಭಟನೆ ನಡೆಸಿದ ವೇಳೆ ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಆರೋಪದಡಿ ಎರಡು ಪ್ರತ್ಯೇಕ ಕೇಸ್‌ಗೆ ಸಂಬಂಧಪಟ್ಟಂತೆ ಶಾಸಕ ಹರೀಶ್ ಪೂಂಜ, ಬಿಜೆಪಿ ಮಂಡಲ ಅಧ್ಯಕ್ಷ ಶ್ರೀನಿವಾಸ ರಾವ್ ಧರ್ಮಸ್ಥಳ ಸೇರಿದಂತೆ 65 ಮಂದಿ ವಿರುದ್ಧ ಬೆಂಗಳೂರಿನಲ್ಲಿರುವ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ. ಮೊದಲ ಕೇಸ್‌ನಲ್ಲಿ 28 ಮಂದಿ ಮತ್ತು 2ನೇ ಕೇಸ್‌ನಲ್ಲಿ 37 ಮಂದಿಗೆ ಸಮನ್ಸ್ ಜಾರಿ ಮಾಡಲಾಗಿದ್ದು, ಜುಲೈ 10ರಂದು ಚೀಫ್ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಕೋರ್ಟ್‌ನ ನ್ಯಾಯಾಧೀಶರ ಎದುರು ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ ಎಂದು ತಿಳಿದು ಬಂದಿದೆ.

ಸುಳ್ಯ: ಕಾಲು ಜಾರಿ ಹೊಳೆಗೆ ಬಿದ್ದು ವ್ಯಕ್ತಿ ಸಾವು

ಸುಳ್ಯ: ವ್ಯಕ್ತಿಯೋರ್ವರು ಕಾಲು ಜಾರಿ ಹೊಳೆಗೆ ಬಿದ್ದು ಮೃತಪಟ್ಟ ಘಟನೆ ಅರಂತೋಡು ಗ್ರಾಮದ ಬಾಜಿನಡ್ಕದಲ್ಲಿ ನಡೆದಿದೆ. ಮೃತಪಟ್ಟ ವ್ಯಕ್ತಿಯನ್ನು ಬಾಜಿನಡ್ಕದ ಚನಿಯ(50) ಎಂದು ಗುರುತಿಸಲಾಗಿದೆ.ಚನಿಯ ಅವರು ಶುಕ್ರವಾರ ಬೆಳಗ್ಗೆ 7 ಗಂಟೆ ಸುಮಾರಿಗೆ ಮನೆ ಸಮೀಪದ ಹೊಳೆಗೆ ಹೋಗಿದ್ದಾರೆ. ಈ ವೇಳೆ ಹೊಳೆಗೆ ಕಾಲು ಜಾರಿ ಬಿದ್ದಿದ್ದಾರೆ. ಚನಿಯ ಅವರು ಹೊಳೆಗೆ ಬಿದ್ದಿದ್ದನ್ನು ಕಂಡ ಮನೆಯವರು ಬೊಬ್ಬೆ ಹಾಕಿದಾಗ ಹತ್ತಿರ ಇರುವ ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷ ಮನ್ಸ ಮುಗೇರರವರು ಓಡಿಬಂದು ನೀರಿಗಿಳಿದು ಚನಿಯರವರನ್ನು ನೀರಿನಿಂದ ಮೇಲೆತ್ತಿದ್ದದರಾದರೂ, ಅವರು ಆಗಲೇ ಮೃತಪಟ್ಟಿದ್ದರೆಂದು ತಿಳಿದುಬಂದಿದೆ.

Categories
ಅಪಘಾತ

ಶಿಕಾರಿಪುರ: ಆಂಬುಲೆನ್ಸ್-ಬೈಕ್‌ ಅಪಘಾತ: ಮೂವರ ಸಾವು

ಶಿಕಾರಿಪುರ: ಆಂಬುಲೆನ್ಸ್-ಬೈಕ್‌ ಅಪಘಾತ: ಮೂವರ ಸಾವು

– ಭದ್ರಾವತಿ ಘಟನೆ ಮಾಸುವ ಮುನ್ನವೇ ಮತ್ತೊಂದು ದುರಂತ
– ಭದ್ರಾವತಿ: 13 ಜನರ ಅಂತ್ಯಕ್ರಿಯೆ: ಊರಲ್ಲಿ ನೀರವ ಮೌನ
– ಹೊಸ ಟಿಟಿ 13 ಜನರ ಕನಸು ಕಸಿಯಿತು!
– ಇಂಡಿಯಾ ಟೀಮಲ್ಲಿ ಆಡಿದ್ದ ಯುವತಿ ಕೂಡ ಸಾವು

NAMMUR EXPRESS NEWS
ಶಿವಮೊಗ್ಗ: ಹಾವೇರಿಯಲ್ಲಿ ಭದ್ರಾವತಿ ಮೂಲದ 13 ಮಂದಿ ಅಪಘಾತಕ್ಕೆ ಬಲಿಯಾದ ಘಟನೆ ನಡುವೆ ಆಂಬುಲೆನ್ಸ್ ಮತ್ತು ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಮೂವರು ಬೈಕ್ ಸವಾರರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಶುಕ್ರವಾರ ತಡರಾತ್ರಿ ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ತರಲಘಟ್ಟ ಬಳಿ ನಡೆದಿದೆ. ಮೃತರನ್ನು ಪ್ರಸನ್ನ (25), ಕಾರ್ತಿಕ್ (27) ಮತ್ತು ಅಜಯ್ (25) ಎಂದು ಗುರುತಿಸಲಾಗಿದೆ. ಮೃತರು ಹೊಸ ಜೋಗದ ನಿವಾಸಿಗಳು ಎಂದು ವರದಿಯಾಗಿದೆ.
ಆಂಬುಲೆನ್ಸ್ ಶಿವಮೊಗ್ಗದಿಂದ ಹಾವೇರಿಗೆ ತೆರಳುತ್ತಿತ್ತು. ಬೈಕ್ ಶಿಕಾರಿಪುರದಿಂದ ಸ್ವಗ್ರಾಮಕ್ಕೆ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ.

– 13 ಮೃತರಿಗೆ ತಲಾ 2 ಲಕ್ಷ ರೂ. ಪರಿಹಾರ ಘೋಷಿಸಿದ ಸಿಎಂ

ಹಾವೇರಿ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟವರಿಗೆ ಸಿಎಂ ಸಿದ್ದರಾಮಯ್ಯ ಅವರು ಸಂತಾಪ ಸೂಚಿಸಿದ್ದು, 13 ಮೃತರಿಗೆ ತಲಾ 2 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ಹಾವೇರಿ ಜಿಲ್ಲಾಸ್ಪತ್ರೆಗೆ 13 ಮೃತದೇಹಗಳನ್ನು ರವಾನಿಸಿದ್ದು, ಈ ವೇಳೆ ಮೃತರ ಕುಟುಂಬಗಳಿಗೆ ಪರಿಹಾರ ನೀಡಬೇಕು, ಇಲ್ಲದಿದ್ದರೆ ಶವಗಳನ್ನು ತೆಗೆದುಕೊಂಡು ಹೋಗುವುದಿಲ್ಲ ಎಂದು ಸಂಬಂಧಿಕರು, ಗ್ರಾಮಸ್ಥರು ಆಗ್ರಹಿಸಿದರು. ಇದರ ಬೆನ್ನಲ್ಲೇ ರಾಜ್ಯ ಸರ್ಕಾರ ಪರಿಹಾರ ಘೋಷಣೆ ಮಾಡಿದೆ. ಶುಕ್ರವಾರ ಮುಂಜಾನೆ ಭೀಕರ ಅಪಘಾತ ನಡೆದು 13 ಮಂದಿ ಸಾವನ್ನಪ್ಪಿದ್ದರೂ ಜಿಲ್ಲಾಸ್ಪತ್ರೆಗೆ ಯಾರೂ ಜನಪ್ರತಿನಿಧಿಗಳು ಬಾರದ ಹಿನ್ನೆಲೆಯಲ್ಲಿ ಸಂಬಂಧಿಕರು, ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದರು.

– ಸಚಿವ ಶಿವಾನಂದ ಪಾಟೀಲ್‌ ವೈಯಕ್ತಿಕ ನೆರವು ತಲಾ 50 ಸಾವಿರ ಪರಿಹಾರ

ಹಾವೇರಿಯಲ್ಲಿ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟ 13 ಜನರಿಗೆ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ್ ಅವರು ವೈಯಕ್ತಿಕವಾಗಿ ತಲಾ 50 ಸಾವಿರ ಪರಿಹಾರ ನೀಡಿದ್ದಾರೆ. 13 ಜನರಿಗೆ 6.50 ಲಕ್ಷ ವೈಯಕ್ತಿಕ ಪರಿಹಾರ ನೀಡಿದ್ದಾರೆ.

ಭಾರತ ತಂಡಕ್ಕೆ ಆಡಿದ್ದ ಮಾನಸ ಇನ್ನು ನೆನಪು ಮಾತ್ರ

ಹಾವೇರಿಯಲ್ಲಿ ನಡೆದ ಅಪಘಾತದಲ್ಲಿ ಮೃತರಾದವರನ್ನ ನೆನೆದು ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕು ಎಮ್ಮೆಹಟ್ಟಿ ಗ್ರಾಮದಲ್ಲಿ ನೀರವ ಮೌನ ಮನೆ ಮಾಡಿದೆ. ಎಮ್ಮೆಹಟ್ಟಿ ಗ್ರಾಮದ ಶಾಲಾ ಆವರಣದಲ್ಲಿ ಮೃತರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತಿದ್ದು, ಹಿಂದೂ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ನಡೆದಿದೆ. ಮಾನಸ ಎಂಬ ಯುವತಿ ಐಎಎಸ್‌ ಅಧಿಕಾರಿಯಾಗುವ ಕನಸು ಕಂಡಿದ್ದರು. ಅದಕ್ಕಾಗಿ ಇನ್ನಿಲ್ಲದ ಶ್ರಮವಹಿಸುತ್ತಿದ್ದ ಅವರು ಬೆಂಗಳೂರಿನಲ್ಲಿ ಐಎಎಸ್‌ಗಾಗಿ ತರಭೇತಿ ಪಡೆಯುತ್ತಿದ್ದರು. ಅಂಧತ್ವವನ್ನು ಮೀರಿ ಸಾಧನೆ ಮಾಡುತ್ತಿದ್ದರು. ಭಾರತದ ಅಂಧರ ಪುಟ್ ಬಾಲ್ ತಂಡ ಕ್ಯಾಪ್ಟನ್ ಆಗಿದ್ದ ಮಾನಸ ಈಗಾಗಲೇ ಹಲವು ಪ್ರಶಸ್ತಿಗಳನ್ನ ಪಡೆದಿದ್ದರು. ದೇವಸ್ಥಾನಕ್ಕೆ ಹೋಗುವ ಕಾರಣಕ್ಕಾಗಿ ಅವರು ಎಮ್ಮೆಹಟ್ಟಿ ಗ್ರಾಮಕ್ಕೆ ಕಳೆದ ಭಾನುವಾರ ಬಂದಿದ್ದರು. ಆ ಬಳಿಕ ಟಿಟಿಯಲ್ಲಿ ದೇವರ ದರ್ಶನಕ್ಕೆ ತೆರಳಿದ್ದರು.

Categories
ಮಂಗಳೂರು ರಾಜ್ಯ

ಗೂಗಲ್ ಟ್ರಾನ್ಸ್ಲೇಟ್ ಅಲ್ಲಿ ಇನ್ಮೇಲೆ ತುಳು ಭಾಷೆ!

ಗೂಗಲ್ ಟ್ರಾನ್ಸ್ಲೇಟ್ ಅಲ್ಲಿ ಇನ್ಮೇಲೆ ತುಳು ಭಾಷೆ!

– ಕರಾವಳಿಯ ಶ್ರೀಮಂತ ಭಾಷೆ ತುಳು ಈಗ ಜಾಗತಿಕ ಮಾನ್ಯತೆ
– ಗೂಗಲ್ ಮೂಲಕ ತುಳು ಕಲಿಯಬಹುದು..!

NAMMUR EXPRESS NEWS
ಮಂಗಳೂರು: ಕರಾವಳಿಯ ಶ್ರೀಮಂತ ಭಾಷೆ ತುಳು ಈಗ ಜಾಗತಿಕ ಮಾನ್ಯತೆ ಪಡೆದಿದೆ. ಇತ್ತೀಚಿನ ದಿನಗಳಲ್ಲಿ ಎಲ್ಲರು ಹೆಚ್ಚಾಗಿ ಗೂಗಲ್ ಮೇಲೆ ಅವಲಂಬಿತರಾಗಿರುವುದು ಸಾಮಾನ್ಯ. ಏನನ್ನಾದರು ಹುಡುಕಲು, ಯಾವುದಾದರೂ ಪದಗಳ ಅರ್ಥ ತಿಳಿಯಲು ಅಥವಾ ಇನ್ನಿತರ ವಿಷಯಗಳಿಗಾಗಿ ಎಲ್ಲರು ಹೆಚ್ಚಾಗಿ ಗೂಗಲ್ ಮೇಲೆಯೇ ಡಿಪೆಂಡ್ ಆಗಿರುತ್ತಾರೆ. ಅದೇ ಗೂಗಲ್ ನಲ್ಲಿ ಇದೀಗ ಕರಾವಳಿಗರ ಮಾತೃಭಾಷೆ ತುಳುವಿನಲ್ಲಿಯೂ ಮಾಡಬಹುದಾಗಿದೆ. ಗೂಗಲ್ ಭಾಷಾಂತರದಲ್ಲಿ ತುಳು ಭಾಷೆಯನ್ನು ಸೇರಿಸಿದೆ. ಈ ಮೂಲಕ ಕರಾವಳಿಗರಿಗೆ ಸಂತಸದ ವಿಚಾರವನ್ನು ಗೂಗಲ್ ನೀಡಿದೆ.

ಮೊದಲೆಲ್ಲ ಇಂಗ್ಲೀಷ್ ನಿಂದ ಕನ್ನಡ, ಹಿಂದಿ ಅಥವಾ ಮಲಯಾಳಂ ಹೀಗೆ ಬೇರೆ ಭಾಷೆಗಳಿಗೆ ಮಾತ್ರ ಟ್ರಾನ್ಸ್ಲೇಟ್ ಮಾಡಬಹುದಾಗಿತ್ತು. ಇದೀಗ ಗೂಗಲ್ ಟ್ರಾಟ್ ನಲ್ಲಿ ತುಳುಭಾಷೆ ಕೂಡ ಇದ್ದು, ತುಳುವರಿಗೆ ಸಂತಸದ ವಿಚಾರವೊಂದು ಸಿಕ್ಕಿದಂತಾಗಿದೆ ಎಂದು ತಾರಾನಾಥ್ ಗಟ್ಟಿ, (ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ) ಸಂತಸ ವ್ಯಕ್ತಪಡಿಸಿದ್ದಾರೆ.
ಇನ್ಮುಂದೆ ಮಕ್ಕಳಿಗೂ ಇಂಗ್ಲಿಷ್ ನಲ್ಲಿ ಬರುವ ಕೆಲ ಶಬ್ದಗಳು ಹಾಗೂ ವಿಚಾರಗಳಿಗೆ ತುಳುವಿನಲ್ಲಿ ಏನು ಹೇಳುತ್ತಾರೆ ಎಂಬುದನ್ನು ತಿಳಿಯಲು ಗೂಗಲ್ ಅಲ್ಲಿ ತುಳುಭಾಷೆ ಇರುವುದು ಸುಲಭವಾಗಲಿದೆ.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ್ ಗಟ್ಟಿ ಈ ಬಗ್ಗೆ ಪ್ರತಿಕ್ರಿಯಿಸಿ, “ಗೂಗಲ್ ಟ್ರಾನ್ಸೆಟ್‌ನಲ್ಲಿ ತುಳು ಭಾಷೆ ಸೇರ್ಪಡೆಗೊಂಡಿರುವುದು ತುಳು ಭಾಷೆಗೆ ಜಾಗತಿಕವಾಗಿ ಸಂದ ಗೌರವ. ಇದು ತುಳುವರು ಸಂಭ್ರಮಪಡುವ ವಿಚಾರವಾಗಿದೆ. ಗೂಗಲ್ ಟ್ರಾನ್ಸೆಟ್‌ನಲ್ಲಿ ಕೆಲವು ಸಂದರ್ಭದಲ್ಲಿ ಶಬ್ದಗಳು ತಪ್ಪಾಗಿ ಉಲ್ಲೇಖವಾಗುವುದು ಸಾಮಾನ್ಯ ವಿಚಾರ. ಇಂತಹ ಸಂದರ್ಭಗಳಲ್ಲಿ ಅಲ್ಲೇ ಇರುವ ಫೀಡ್ ಬ್ಯಾಕ್ ಕಾಲಮ್ಮಲ್ಲಿ ಸರಿಯಾದ ಶಬ್ದವನ್ನು ಉಲ್ಲೇಖಿಸಿ ಪ್ರತಿಕ್ರಿಯಿಸಿದರೆ ಗೂಗಲ್ ಅದನ್ನು ಮುಂದಕ್ಕೆ ಸರಿಮಾಡಿಕೊಳ್ಳುತ್ತದೆ. ಈ ಅಂಶವನ್ನು ತುಳುವರು ಸಮರ್ಪಕವಾಗಿ ಬಳಸಿಕೊಂಡರೆ ತುಳುವರಿಗೆ ಹಾಗೂ ತುಳುವೇತರರಿಗೂ ಪ್ರಯೋಜನವಾಗಲಿದೆ” ಎಂದು ತಿಳಿಸಿದ್ದಾರೆ.