Categories
ತೀರ್ಥಹಳ್ಳಿ

ಸರ್ಜಾಶಂಕರ್‌ ಹರಳಿಮಠ ಅವರ ಸಂಶೋಧನಾ ಕೃತಿ ಕನ್ನಡತನ ಪುಸ್ತಕ ಬಿಡುಗಡೆ

ಸರ್ಜಾಶಂಕರ್‌ ಹರಳಿಮಠ ಅವರ ಸಂಶೋಧನಾ ಕೃತಿ ಕನ್ನಡತನ ಪುಸ್ತಕ ಬಿಡುಗಡೆ
– ಪುಸ್ತಕದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಗಣ್ಯರು

– ಜನಮನ ಸೆಳೆದ “ಜೊತೆಗಿರುವನು ಚಂದಿರ” ನಾಟಕ

NAMMUR EXPRESS NEWS
ತೀರ್ಥಹಳ್ಳಿ: ‘ದೇಶದಲ್ಲಿ ಜಾತಿ, ಕೋಮು ಸಂಘರ್ಷ ನಡೆದಾಗ ಸಾಮೂಹಿಕ ಬೆಂಬಲ ಇರುವುದಿಲ್ಲ. ಸೌಹಾರ್ದ, ಪ್ರೀತಿ ಬಯಸುವ ಬಹುಸಂಖ್ಯಾತರು ದೇಶದಲ್ಲಿದ್ದಾರೆ. ಆದರೆ ಒಗ್ಗಟ್ಟಿಗಾಗಿ ಧ್ವನಿಗೂಡಿಸು ವಲ್ಲಿ ಹಿಂದೆ ಬಿದ್ದಿದ್ದಾರೆ’ ಎಂದು ಕರ್ನಾಟಕ ಬಯಲಾಟ ಅಕಾಡೆಮಿ ಅಧ್ಯಕ್ಷ ಕೆ.ಆ‌ರ್.ದುರ್ಗಾದಾಸ್ ಅಭಿಪ್ರಾಯಪಟ್ಟರು. ಸರ್ಜಾಶಂಕರ್‌ ಹರಳಿಮಠ ಅವರ ಸಂಶೋಧನಾ ಕೃತಿ ‘ಕನ್ನಡತನ’ ಬಿಡುಗಡೆಗೊಳಿಸಿ ಮಾತನಾಡಿದರು. ಶನಿವಾರ ‘ಸಂಸ್ಕೃತ, ಹಿಂದಿ ಭಾಷಾ ಹೇರಿಕೆ ಭಿನ್ನವಾಗಿಲ್ಲ. ಕನ್ನಡದ ಯಜಮಾನಿಕೆಯ ಗಟ್ಟಿತನವನ್ನೇ ಕನ್ನಡದ ಕವಿಗಳು ಜಾಗೃತಗೊಳಿಸಿದ್ದಾರೆ. ಕುವೆಂಪು ಆ ಸಾಲಿಗೆ ಸೇರುವ ಅಗ್ರ ಗಣ್ಯರು. ಹಗೆತನ, ದ್ವೇಷ, ಅಸೂಯೆ ಬಿಟ್ಟು ಕನ್ನಡಿಗರು ಒಗ್ಗೂಡಬೇಕು. ಕನ್ನಡದ ಜೊತೆಗೆ ಬದುಕುವ ತುಳು, ಕೊಡವ, ಬಂಜಾರ ಮುಂತಾದ ಭಾಷೆಗಳಿಗೂ ಆದ್ಯತೆ ನೀಡಬೇಕು’ ಎಂದು ಸಲಹೆ ನೀಡಿದರು.
ಸಾಹಿತಿ ಜೆ.ಕೆ. ರಮೇಶ್ , ಪಂಚಾಯಿತಿ ಅಧ್ಯಕ್ಷ ಟಿ. ರಹಮತ್ ಉಲ್ಲಾ ಅಸಾದಿ, ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಟಿ.ಕೆ. ರಮೇಶ್ ಶೆಟ್ಟಿ, ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಸಂಘಟನಾ ಕಾರ್ಯದರ್ಶಿ ವೆಂಕಟೇಶ ಹೆಗಡೆ, ಲೇಖಕ ಸರ್ಜಾಶಂಕರ ಹರಳಿಮಠ ಇದ್ದರು.

ಜನಮನ ಸೆಳೆದ “ಜೊತೆಗಿರುವನು ಚಂದಿರ” ನಾಟಕ

ತೀರ್ಥಹಳ್ಳಿ: ಅದ್ಭುತವಾದ ರಂಗ ಪ್ರಯೋಗದೊಂದಿಗೆ ತೀರ್ಥಹಳ್ಳಿಯಲ್ಲಿ ಭಾನುವಾರ ಸಂಜೆ ಶಾಂತವೇರಿ ಗೋಪಾಲಗೌಡ ರಂಗಮಂದಿರ, ತೀರ್ಥಹಳ್ಳಿಯಲ್ಲಿ “ಜೊತೆಗಿರುವವನು ಚಂದಿರ” ನಾಟಕ ಪ್ರದರ್ಶನಗೊಂಡಿತು.
ಅಪರೂಪದ ರಂಗ ರೂಪ ರಷ್ಯನ್ ಕವಿ ತೊಕೋಮ್ ಅಲೈಖೆಮ್- ಜೋಸೆಫ್ ಸ್ಟೀನ್ ರಚಿತ “ಫಿಡ್ಲರ್ ಆನ್ ದಿ ರೂಫ್” ಕಥೆಗಳನ್ನು ಆಧರಿಸಿ ರಚಿಸಿದ ನಾಟಕದಲ್ಲಿ ಯುದ್ದ, ದೇಶವಿಭಜನೆ, ಅಭಿವೃದ್ದಿ, ಅಣೆಕಟ್ಟು ಇತ್ಯಾದಿಗಳ ನೆಪದಲ್ಲಿ ಮನುಷ್ಯನ ಸ್ಥಾನಾಂತರ ಮತ್ತು ಉಚ್ಚಾಟಣೆಗಳು ವಿಶ್ವದೆಲ್ಲಡೆ ನಡೆದೇ ಇವೆ. ಭಾರತದ ದೇಶವಿಭಜನೆಯ ಸಂಧರ್ಭವನ್ನು ಕಣ್ಣಲ್ಲಿ ಕಟ್ಟುವಂತೆ ಮಾಡಿತು.
ಖ್ಯಾತ ಕವಿ ಶ್ರೀ ಜಯಂತ್ ಕಾಯ್ಕಿಣಿ ಇವರು ಈ ಮೂಲ ಕಥೆಯನ್ನು ಕನ್ನಡಕ್ಕೆ ಭಾಷಾಂತರಿಸಿ ರಂಗರೂಪ ಮಾಡಿದ್ದರು. 350ಕ್ಕೂ ಹೆಚ್ಚು ತೀರ್ಥಹಳ್ಳಿ ರಂಗ ಆಸಕ್ತರು ಭಾಗವಹಿಸಿದ್ದರು.

Categories
ಅಡಿಕೆ-ದರ

ಅಡಿಕೆ ದರ ಎಷ್ಟಿದೆ?

ಅಡಿಕೆ ದರ ಎಷ್ಟಿದೆ?
– ಅಡಿಕೆ ಬೆಲೆ ಹೆಚ್ಚಳವೋ? ಕಡಿಮೆಯೋ?

NAMMUR EXPRESS NEWS

ಗೊರಬಲು 17009  34109

ಬೆಟ್ಟೆ 46169  55710

ರಾಶಿ 32836  49058

ಸರಕು 64009  89110

Categories
ರಾಜ್ಯ

7 ಕೋಟಿ ರೂ.ಆನ್ಲೈನ್ ವಂಚನೆ: ಗ್ಯಾಂಗ್ ಅರೆಸ್ಟ್!

7 ಕೋಟಿ ರೂ.ಆನ್ಲೈನ್ ವಂಚನೆ: ಗ್ಯಾಂಗ್ ಅರೆಸ್ಟ್!
– ಮೈಸೂರು: ಹೆದ್ದಾರಿಯಲ್ಲಿ ಕೆಎಸ್‌ಆರ್ ಟಿ ಸಿ ಬಸ್‌ ಭೀಕರ ಅಪಘಾತ!
* ಬಳ್ಳಾರಿ: ಶಾಸಕ ಜನಾರ್ದನ ರೆಡ್ಡಿಗೆ ಬಿಗ್ ರಿಲೀಫ್
* ಮೈಸೂರು ಅನುಮಾನಾಸ್ಪದವಾಗಿ ವೈದ್ಯೆ ಸಾವು!
* ಪಿತೃಪಕ್ಷ ಪೂಜೆ ಬಳಿಕ ಎಣ್ಣೆ ಪಾರ್ಟಿ, ಸ್ನೇಹಿತನ ಬಗೆದು ಕೊಂದ!

NAMMUR EXPRESS NEWS
ಬೆಂಗಳೂರು: ಪ್ರಮುಖ ಕೈಗಾರಿಕೋದ್ಯಮಿ ಪ್ರತಿಷ್ಠಿತ ವರ್ದಮಾನ್ ಗ್ರೂಪ್ ಮಾಲಿಕರಾದ ಶ್ರೀಪಾಲ್ ಓಸ್ವಾಲ್ ಅವರಿಗೆ 7 ಕೋಟಿ ರೂಪಾಯಿ ವಂಚಿಸಿದ ಆರೋಪಿ ಗ್ಯಾಂಗ್‌ನ ಇಬ್ಬರು ಸದಸ್ಯರನ್ನು ಪಂಜಾಬ್ ಪೊಲೀಸರು ಬಂಧಿಸಿದ್ದಾರೆ. ಆನ್‌ಲೈನ್ ಮೂಲಕ ವಂಚಿಸಲಾದ ಆರೋಪಿಗಳಿಂದ ಈಗಾಗಲೇ 5.25 ಕೋಟಿ ರೂಪಾಯಿ ವಶಪಡಿಸಿಕೊಳ್ಳಲಾಗಿದೆ ಎಂದು ಲೂಧಿಯಾನ ಪೊಲೀಸ್‌ ಆಯುಕ್ತ ಕುಲದೀಪ್ ಸಿಂಗ್ ಚಾಹಲ್ ಹೇಳಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಏಳು ಮಂದಿ ಹೆಚ್ಚುವರಿ ಗ್ಯಾಂಗ್ ಸದಸ್ಯರನ್ನು ಗುರುತಿಸಿದ್ದಾರೆ. ಎಲ್ಲರೂ ಅಸ್ಸಾಂ ಮತ್ತು ಪಶ್ಚಿಮ ಬಂಗಾಳದಿಂದ ಬಂದವರು ಮತ್ತು ಅವರನ್ನು ಬಂಧಿಸಲು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವಂಚಕರು ವರ್ಧಮಾನ್ ಗ್ರೂಪ್ ಮಾಲೀಕ ಓಸ್ವಾಲ್‌ ಅವರ ಬ್ಯಾಂಕ್ ಖಾತೆಯಿಂದ 7 ಕೋಟಿ ರೂ ಕೊಳ್ಳೆ ಹೊಡೆದಿದ್ದರು.
ಇಡೀ ಪ್ರಕರಣ ಒಂದು ಸಿನಿಮೀಯ ಮಾದರಿಯಲ್ಲಿ ನಡೆದಿದೆ. ಬಂಧಿತ ವ್ಯಕ್ತಿಗಳಲ್ಲಿ ಒಬ್ಬರು ಸಿಬಿಐ ಅಧಿಕಾರಿಯಂತೆ ನಟಿಸಿದ್ದಾರೆ. ಓಸ್ವಾಲ್ ಅವರ ಮೇಲೆ ನಕಲಿ ಬಂಧನ ವಾರಂಟ್ ಅನ್ನು ಅವರ ಮುಂದೆ ಇಟ್ಟಿದ್ದಾರೆ ಮತ್ತು ಓಸ್ವಾಲ್‌ ಅವರು ಅದನ್ನು ಪಾಲಿಸದಿದ್ದರೆ ಡಿಜಿಟಲ್ ಬಂಧನಕ್ಕೆ ಬೆದರಿಕೆ ಹಾಕಿದ್ದರು.
ಓಸ್ವಾಲ್ ಅವರ ದೂರಿನ ಮೇರೆಗೆ ಸೈಬರ್ ಸೆಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು 48 ಗಂಟೆಗಳಲ್ಲಿ ಶಂಕಿತ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಇಬ್ಬರನ್ನು ಅಸ್ಸಾಂನ ಗುವಾಹಟಿ ಮೂಲದ ಅಟಾನೂ ಚೌಧರಿ ಮತ್ತು ಆನಂದ್ ಕುಮಾರ್ ಚೌಧರಿ ಎಂದು ಗುರುತಿಸಲಾಗಿದೆ.
ಈ ಘಟನೆಯ ಹಿಂದೆ ಒಂದು ವಾರದೊಳಗೆ ಈ ಪ್ರದೇಶದಲ್ಲಿ ವರದಿಯಾದ ಸೈಬ‌ರ್ ವಂಚನೆಯ ಎರಡನೇ ಪ್ರಮುಖ ಪ್ರಕರಣವಾಗಿದೆ. ಈ ಹಿಂದೆ, ಸ್ಥಳೀಯ ಕೈಗಾರಿಕೋದ್ಯಮಿ ರಜನೀಶ್ ಅಹುಜಾ ಅವರಿಗೆ ಇದೇ ರೀತಿಯಾಗಿ ಆನ್‌ಲೈನ ಸುಲಿಗೆ ಪಾವತಿಗೆ ಸಂಬಂಧಿಸಿದಂತೆ ಇದೇ ರೀತಿಯ ನಕಲಿ ಬಂಧನ ವಾರಂಟ್ ಮೂಲಕ ಬೆದರಿಕೆ ಹಾಕಿ 1.01 ಕೋಟಿ ರೂಪಾಯಿ ವಂಚಿಸಲಾಗಿದೆ

ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಕೆಎಸ್‌ಆರ್ ಟಿ ಸಿ ಬಸ್‌ ಭೀಕರ ಅಪಘಾತ!

ಬೆಂಗಳೂರು:ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಕೆಎಸ್‌ಆರ್ ಟಿ ಸಿ ಬಸ್‌ ಭೀಕರ ಅಪಘಾತವಾಗಿದ್ದು, ಅನೇಕ ಮಂದಿ ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿವೆ. ಚಾಲಕನ ಅಜಾಗರೂಕತೆ ಮತ್ತು ಅವೈಜ್ಞಾನಿಕ ರಸ್ತೆ ಕಾಮಗಾರಿಯೇ ಈ ಅಪಘಾತಕ್ಕೆ ಕಾರಣ ಎಂಬ ಮಾತುಗಳು ಕೇಳಿ ಬಂದಿವೆ. ಪಲ್ಟಿ ಹೊಡೆದ ಜಾಗದಲ್ಲಿ ಕಂಟೇನರ್ ಗೆ ಗುದ್ದಿದ ಪರಿಣಾಮ ಹಲವರಿಗೆ ತೀವ್ರ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.
ಕುಣಿಗಲ್ ಡಿಪೋಗೆ ಸಂಬಂಧಿಸಿದ ಬಸ್ ಇದಾಗಿದ್ದು, ಮಂಡ್ಯ ಪಟ್ಟಣದ ಸರ್ವೀಸ್ ರಸ್ತೆಯಲ್ಲಿ ಸಂಭವಿಸಿದ ಈ ಅಪಘಾತದಲ್ಲಿ 20ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯಗಳಾಗಿವೆ. ಬಸ್ ನಲ್ಲಿ ಸುಮಾರು 60 ಮಂದಿ ಪ್ರಯಾಣಿಕರಿದ್ದರು. ಅದರಲ್ಲೂ ವಿದ್ಯಾರ್ಥಿಗಳು ಹೆಚ್ಚಾಗಿದ್ದರು ಎಂದು ತಿಳಿದು ಬಂದಿದೆ.

ಅಕ್ರಮ ಗಣಿಗಾರಿಕೆ ಪ್ರಕರಣ: ಶಾಸಕ ಜನಾರ್ದನ ರೆಡ್ಡಿಗೆ ಬಿಗ್ ರಿಲೀಫ್!

ಬೆಂಗಳೂರು :ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಜನಾರ್ದನ ರೆಡ್ಡಿಗೆ ಸಿಬಿಐ ವಿಶೇಷ ಕೋರ್ಟ್ ವಿಧಿಸಿದ್ದ ನಿರ್ಬಂಧಕ್ಕೆ ಮುಕ್ತಿ ಸಿಕ್ಕಿದೆ. ಶಾಸಕ ಜನಾರ್ದನ ರೆಡ್ಡಿಗೆ ಕೋರ್ಟ್ ಬಿಗ್ ರಿಲೀಫ್ ನೀಡಿದ್ದು, ಬಳ್ಳಾರಿ ಜಿಲ್ಲೆ ಪ್ರವೇಶಕ್ಕೆ ವಿಧಿಸಿದ್ದ ನಿರ್ಬಂಧವನ್ನು ತೆರವುಗೊಳಿಸಲಾಗಿದೆ.
ಹಲವು ಬಾರಿ ಕೋರ್ಟ್ ಅವಕಾಶ ಕೇಳಿ ಸಲ್ಲಿಸಿದ್ದ ಮನವಿಯನ್ನು ತಳ್ಳಿ ಹಾಕಿತ್ತು. ಆದರೆ ಇದೀಗ ಬಳ್ಳಾರಿ ಪ್ರವೇಶಕ್ಕೆ ವಿಧಿಸಿದ್ದ ನಿರ್ಬಂಧವನ್ನು ತೆರವುಗೊಳಿಸಲಾಗಿದೆ. ಈ ಮೂಲಕ ಶಾಸಕ ಜನಾರ್ದನ ರೆಡ್ಡಿಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ.

ಮೈಸೂರು ಅನುಮಾನಾಸ್ಪದವಾಗಿ ವೈದ್ಯೆ ಸಾವು!

ಮೈಸೂರು: ಮೈಸೂರಲ್ಲಿ ಅನುಮಾನಾಸ್ಪದವಾಗಿ ವೈದ್ಯೆಯೊಬ್ಬರು ಮೃತಪಟ್ಟಿದ್ದಾರೆ. ಮೈಸೂರಿನ ಚೆಲುವಾಂಬ ಆಸ್ಪತ್ರೆಯ ಪ್ರಸೂತಿ ತಜ್ಞೆ ಡಾ.ಜಿ.ಎಸ್.ವಿದ್ಯಾಧರೆ ಮೃತರು. ಗಂಡನ ಕಿರುಕುಳ ಹಾಗೂ ಕೊಲೆ ಆರೋಪ ಕೇಳಿ ಬಂದಿದೆ.
ಮಂಡ್ಯದ ಗೌಡಗೆರೆಯ ವಿದ್ಯಾಧರೆಯನ್ನು ಕೆ.ಆರ್.ಆಸ್ಪತ್ರೆಯ ಮೂಳೆ ತಜ್ಞ ಡಾ.ಷಣ್ಮುಖ ವಿವಾಹವಾಗಿದ್ದರು. 14 ವರ್ಷದ ಹಿಂದೆ ವಿವಾಹವಾಗಿದ್ದ ದಂಪತಿಗೆ ಕಳೆದ ನಾಲ್ಕೈದು ತಿಂಗಳಿಂದ ಮನಸ್ತಾಪ ಹೆಚ್ಚಾಗಿತ್ತು. ಹೀಗಾಗಿ ಒಂದೇ ಅಪಾರ್ಟ್‌ಮೆಂಟ್‌ನ ಬೇರೆ ಬೇರೆ ಫ್ಲೋರ್‌ಗಳಲ್ಲಿ ಪ್ರತ್ಯೇಕ ವಾಸಕ್ಕೆ ನ್ಯಾಯ ಪಂಚಾಯಿತಿ ಮಾಡಿಕೊಂಡಿದ್ದರು.
ತವರು ಮನೆಯಿಂದ ಗಂಡನ ಮನೆಗೆ ಬಂದಿದ್ದ ವೈದ್ಯೆ ವಿದ್ಯಾಧರೆ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ. ಪತಿ ಷಣ್ಮುಖ ಮೇಲೆ‌ ವಿದ್ಯಾಧರೆ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ. ಸದ್ಯ ಈ ಸಂಬಂಧ ಮೈಸೂರಿನ ಲಕ್ಷ್ಮೀಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ನಡೆಸಲಾಗುತ್ತಿದೆ.

ಪಿತೃಪಕ್ಷ ಪೂಜೆ ಬಳಿಕ ಎಣ್ಣೆ ಪಾರ್ಟಿ, ಸ್ನೇಹಿತನ ಬಗೆದು ಕೊಂದ ಪಾಪಿ!

ಬೆಂಗಳೂರು: ಬೆಂಗಳೂರಿನಲ್ಲಿ ಚಾಕುವಿನಿಂದ ಇರಿದು ವ್ಯಕ್ತಿಯ ಕೊಲೆಯಾಗಿದೆ. ಕೀರ್ತಿ (32) ಎಂಬಾತ ಮೂರ್ತಿ(52) ಎಂಬುವವರಿಗೆ ಚಾಕುವಿನಿಂದ ಇರಿದು ಕೊಂದಿದ್ದಾನೆ. ಬೆಂಗಳೂರಿನ ಜ್ಞಾನಭಾರತಿ ಠಾಣಾ ವ್ಯಾಪ್ತಿಯ ಸಣ್ಣೇನ ಹಳ್ಳಿಯಲ್ಲಿ ಘಟನೆ ನಡೆದಿದೆ.
ಮೂರ್ತಿ ಹಸು ಸಾಕಾಣಿಕೆ ಕೆಲಸ ಮಾಡುತ್ತಿದ್ದರೆ, ಆರೋಪಿ ಕೀರ್ತಿ ಸ್ನೇಹಿತನಾಗಿದ್ದು ಫೈನಾನ್ಸ್ ವ್ಯವಹಾರ ನಡೆಸುತ್ತಿದ್ದ.
ಮನೆಯಲ್ಲಿ ಮಹಾಲಯ ಅಮಾವಾಸ್ಯೆಯ ಹಬ್ಬ ಮಾಡಿ, ಮದ್ಯ ಸೇವನೆ‌ ಮಾಡಿದ್ದರು. ಈ ಸಮಯದಲ್ಲಿ ಗಲಾಟೆ ನಡೆದಿದ್ದು ಸಿಟ್ಟಿನಲ್ಲಿ ಕೀರ್ತಿ ಮೂರ್ತಿಯ ಹೊಟ್ಟೆಗೆ ಚಾಕುವಿನಿಂದ ಇರಿದು ಕೊಂದಿದ್ದಾನೆ.
ಇನ್ನೂ ಮೂರ್ತಿಯನ್ನು ಕೊಂದು ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸೆ. 29 ರಾತ್ರಿ 7 ಗಂಟೆ ಸುಮಾರಿಗೆ ಕೊಲೆ ಮಾಡಿ ಎಸ್ಕೇಪ್ ಆಗಿದ್ದ. ಕನಕಪುರ ರಸ್ತೆ ಮಾರ್ಗವಾಗಿ ಬೈಕ್‌ನಲ್ಲಿ ಪ್ರಯಾಣ ಬೆಳೆಸುತ್ತಿದ್ದ. ಈ ವೇಳೆ ಟ್ರ್ಯಾಕ್ ಮಾಡಿ ಆರೋಪಿಯನ್ನು ಹಿಡಿದಿದ್ದಾರೆ. ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಪ್ರಕರಣ ದಾಖಲಾಗಿದ್ದು ತನಿಖೆಯನ್ನು ಮುಂದುವರಿಸಿದ್ದಾರೆ.

Categories
ಮಲ್ನಾಡ್

ಶೃಂಗೇರಿಯಲ್ಲಿ ಭದ್ರಾವತಿ ಮೂಲದ 10 ನೇ ಕ್ಲಾಸ್ ವಿದ್ಯಾರ್ಥಿ  ಆತ್ಮಹತ್ಯೆ

ಶೃಂಗೇರಿಯಲ್ಲಿ ಭದ್ರಾವತಿ ಮೂಲದ 10 ನೇ ಕ್ಲಾಸ್ ವಿದ್ಯಾರ್ಥಿ  ಆತ್ಮಹತ್ಯೆ!
– ಪರೀಕ್ಷೆಗೆ ಹಾಜರಾಗದೆ ಪಿಜಿಯಲ್ಲಿ ಆತ್ಮಹತ್ಯೆ: ಕಾರಣ ನಿಗೂಢ
– ಕಳಸದಲ್ಲಿ ತೋಟದಲ್ಲಿದ್ದ ರೈತನಿಗೆ ಕಾಡು ಕೋಣ ತಿವಿದು ಗಾಯ!

NAMMUR EXPRESS NEWS
ಶೃಂಗೇರಿ: ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಮೂಲದ 10ನೇ ಕ್ಲಾಸ್ ವಿದ್ಯಾರ್ಥಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲ್ಲೂಕಿನಲ್ಲಿ ನಡೆದಿದೆ.
ಧ್ರುವ ಎಸ್ ಕೆ (16) ಆತ್ಮಹತ್ಯೆ ಮಾಡಿಕೊಂಡ ಎಸ್.ಎಸ್.ಎಲ್.ಸಿ ವಿದ್ಯಾರ್ಥಿ. ಶೃಂಗೇರಿಯ ಶಾಲೆಯೊಂದರಲ್ಲಿ 10ನೇ ತರಗತಿ ವ್ಯಾಸಾಂಗ ಮಾಡುತ್ತಿದ್ದ ಧ್ರುವ, ಸೋಮವಾರ ಮಧ್ಯಾಹ್ನ 11:30 ಸುಮಾರಿಗೆ ಪಿಜಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಸೋಮವಾರ ಶಾಲೆಯಲ್ಲಿ ಪೂರ್ವಸಿದ್ಧತಾ ಪರೀಕ್ಷೆ ಇದ್ದು, ಆದರೆ, ದ್ರುವ ಗೈರುಹಾಜರಾಗಿದ್ದಾನೆ. ಗೈರುಹಾಜರಾದ ಕಾರಣ ಶಾಲೆಯಿಂದ ಧ್ರುವನ ಪೋಷಕರಿಗೆ ಕರೆ ಮಾಡಿದ್ದಾರೆ. ನಂತರ ಪೋಷಕರು ಧ್ರುವ ಉಳಿದಿರುವ ಬಾಯ್ಸ್ ಪಿಜಿಯ ಮಾಲೀಕರಿಗೆ ಕರೆ ಮಾಡಿದ್ದಾರೆ. ಪಿಜಿಯ ಮಾಲೀಕರು ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವ ವಿಷಯ ಬೆಳಕಿಗೆ ಬಂದಿದೆ. ಆದರೆ, ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಘಟನಾ ಸ್ಥಳಕ್ಕೆ ಶೃಂಗೇರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ತೋಟದಲ್ಲಿದ್ದ ರೈತನಿಗೆ ಕಾಡು ಕೋಣ ತಿವಿದು ಗಾಯ!

ಕಳಸ: ತಾಲೂಕಿನ ಮುಜೇಕಾನು ಸಮೀಪದಲ್ಲಿ ತೋಟದ ಕೆಲಸಕ್ಕೆ ಹೋಗಿದ್ದ ಕಾರ್ಮಿಕರ ಮೇಲೆ ಕಾಣುಕೋಣ ದಾಳಿ ಮಾಡಿ ತಿವಿದು ಒಬ್ಬರಿಗೆ ಗಂಭೀರ ಗಾಯವಾದ ಘಟನೆ ಭಾನುವಾರ ನಡೆದಿದೆ. ನಲ್ಲಿತೋಟ ಸುಬ್ರಮಣ್ಯ ಎಂಬುವರ ತೋಟದ ಕೆಲಸಕ್ಕೆ ತೆರಳಿದ್ದ ವೇಳೆ ಕಾಡುಕೋಣ ದಾಳಿ ಮಾಡಿದೆ. ಈ ಸಂದರ್ಭದಲ್ಲಿ ಸುಬ್ಬೇಗೌಡ (65) ಎಂಬ ಕಾರ್ಮಿಕನಿಗೆ ಏಕಾಏಕಿ ನುಗ್ಗಿ ಕೋಡಿನಿಂದ ತಿವಿದು ಎತ್ತಿ ದೂರಕ್ಕೆ ಎಸೆದ ಪರಿಣಾಮ ಸುಬ್ಬೇಗೌಡರಿಗೆ ಗಂಭೀರ ಗಾಯಗಳಾಗಿವೆ. ಅವರ ಜೊತೆಯಲ್ಲಿದ್ದ ಇನ್ನೊಬ್ಬ ಕಾರ್ಮಿಕ ಮಂಜಪ್ಪ ಮೆಣಸಿನಬಳ್ಳಿ ಮರೆಯಲ್ಲಿ ಅವಿತು ತಪ್ಪಿಸಿಕೊಂಡಿದ್ದಾರೆ. ಕಾಡು ಕೋಣ ದಾಳಿಗೆ ಸುಬ್ಬೇಗೌಡರವರ ತಲೆ, ಕುತ್ತಿಗೆ ಭಾಗದಲ್ಲಿ ಗಂಭೀರ ಗಾಯವಾಗಿದ್ದು, ಬೆನ್ನು ಮೂಳೆಗೆ ಪೆಟ್ಟಾಗಿದೆ. ಚಿಕಿತ್ಸೆಗಾಗಿ ಮಂಗಳೂರಿನ ಅಸ್ಪತ್ರೆಗೆ ದಾಖಲಿಸಲಾಗಿದೆ.

Categories
ಕಾರ್ಕಳ

ಕಾರ್ಕಳದಲ್ಲಿ ಭೀಕರ ಅಪಘಾತಕ್ಕೆ ನಾಲ್ವರು ಬಲಿ!

BREAKING NEWS

ಕಾರ್ಕಳದಲ್ಲಿ ಭೀಕರ ಅಪಘಾತಕ್ಕೆ ನಾಲ್ವರು ಬಲಿ!
– ನಲ್ಲೂರು ಬಳಿ ಬೈಕ್‌ ಗೂಡ್ಸ್ ವಾಹನ ಅಪಘಾತ
– ಮಕ್ಕಳು ಸೇರಿ 4 ಮಂದಿ ಮೃತ್ಯು ದುರ್ಮರಣ

NAMMUR EXPRESS NEWS
ಕಾರ್ಕಳ: ಕಾರ್ಕಳದ ನಲ್ಲೂರು ಪಾಜೆ ಗುಡ್ಡೆ ಬಳಿ ಬೈಕ್ ನಲ್ಲಿ ಬರುತ್ತಿದ್ದ 5 ಮಂದಿ ಗೂಡ್ಸ್ ವಾಹನಕ್ಕೆ ಡಿಕ್ಕಿ ಹೊಡೆದು 4 ಮಂದಿ ಮೃತ ಪಟ್ಟ ಹೃದಯ ವಿದ್ರಾವಕ ಘಟನೆ ನಡೆದಿದೆ.
ಬೈಕ್ ನಲ್ಲಿ ಪತಿ, ಪತ್ನಿ ಹಾಗೂ 3 ಮಕ್ಕಳು ಬರುತ್ತಿದ್ದಾಗ ಪಾಜೇಗುಡ್ಡೆ ಬಳಿ ಗೂಡ್ಸ್ ವಾಹನ ಕ್ಕೆ ಡಿಕ್ಕಿ ಹೊಡೆದಿದೆ. ಮೃತ ಪಟ್ಟವರು ವೇಣೂರು ಗಾಂಧಿ ನಗರದವರೆಂದು ಹೇಳಲಾಗಿದೆ. ಇನ್ನಷ್ಟೇ ಮಾಹಿತಿ ತಿಳಿದು ಬರಬೇಕಿದೆ.

Categories
ಉಡುಪಿ ಮೈಸೂರು

ಸಂಭ್ರಮದಿಂದ ನಡೆದ ಬಿಜೆಪಿ ಸಾಹಿತ್ಯ ಸಮಾವೇಶ!

ಸಂಭ್ರಮದಿಂದ ನಡೆದ ಬಿಜೆಪಿ ಸಾಹಿತ್ಯ ಸಮಾವೇಶ!
– ಮೈಸೂರು ಸಂಸದ ಯದುವೀರ್‌‌ ಭೇಟಿ: ಉದ್ಘಾಟನೆ
– ಸಾಹಿತಿಗಳು, ಬರಹಗಾರರ ಸಮಾಗಮ: ಗೌರವ

NAMMUR EXPRESS NEWS
ಉಡುಪಿ: ಕನ್ನಡ ಭಾಷೆಯ ಮೂಲಕ ರಾಜ್ಯದ ಒಗ್ಗೂಡುವಿಕೆಗಾಗಿ ಹೋರಾಟ ಮಾಡಿದ ಏಕೈಕ ಸಮುದಾಯ ಸಾಹಿತಿಗಳು, ಕಲಾವಿದರು ಹಾಗೂ ಕವಿಗಳು. ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ವತಿಯಿಂದ ಸಾಹಿತ್ಯ ಸಮ್ಮೇಳನ ಆಯೋಜನೆ ಅಭಿನಂದನಾರ್ಹ ಎಂದು ಮೈಸೂರು ಸಂಸದ ಯದುವೀರ್ ಒಡೆಯ‌ರ್ ಹೇಳಿದರು.
ಉಡುಪಿಯಲ್ಲಿ ಜಿಲ್ಲಾ ಬಿಜೆಪಿ ವತಿಯಿಂದ ಕುಂಜಿಬೆಟ್ಟು ಶಾರದ ಮಂಟಪದಲ್ಲಿ ಜರುಗಿದ ಬಿಜೆಪಿ ಸಾಹಿತ್ಯ ಸಮಾವೇಶ ಕಾರ್ಯಕ್ರಮದಲ್ಲಿ ಭಾಗವಹಿಸಿ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಮೈಸೂರು ಚಾಮುಂಡಿ ಬೆಟ್ಟ ಧಾರ್ಮಿಕ ಕ್ಷೇತ್ರ, ಅದು ಚಾಮುಂಡೇಶ್ವರಿ ತಾಯಿಯ ಆಸ್ತಿ. ನಾವು ಆ ತಾಯಿಯನ್ನು ಮಹಿಷಾಸುರಮರ್ದಿನಿ ಎಂದು ನಂಬುತ್ತೇವೆ. ಈ ಧಾರ್ಮಿಕ ಭಾವನೆಗೆ ಧಕ್ಕೆ ಆಗದಂತೆ ಮಹಿಷ ದಸರಾ ಆಚರಿಸಬಹುದು. ಆದರೆ ಚಾಮುಂಡಿಬೆಟ್ಟದ ಮೇಲೆ ಮಹಿಷ ದಸರಾ ಸರಿಯಲ್ಲ. ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ನಿಷೇಧಾಜ್ಞೆ ಜಾರಿಯಾಗಿದೆ. ಸಾರ್ವಜನಿಕರಿಗೆ ಪ್ರವೇಶ ನಿಷೇಧಿಸಲಾಗಿದ್ದು, ಚಾಮುಂಡಿ ತಾಯಿ ದರ್ಶನಕ್ಕೂ ಯಾರಿಗೂ ಅವಕಾಶ ಇಲ್ಲ. ಹೀಗಾಗಿ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ ಎಂದರು.
ಚುನಾವಣೆಗೆ ಮೊದಲು ನನಗೆ ನಾನು ಯಾವ ಜಾತಿ ಎಂಬುದೇ ಗೊತ್ತಿರಲಿಲ್ಲ. ಮೈಸೂರು ರಾಜ ವಂಶಸ್ಥರು ಹಿಂದುಳಿದ ವರ್ಗಕ್ಕೆ ಸೇರಿದವರು ಎಂಬುದು ನನಗೆ ತಿಳಿದಿರಲಿಲ್ಲ. ಆದರೆ ಚುನಾವಣೆಯ ಸಂದರ್ಭದಲ್ಲಿ ನಾನು ಹಿಂದುಳಿದ ವರ್ಗಗಳ ಅಭ್ಯರ್ಥಿ ಎಂಬ ವಿಚಾರದಿಂದ ನನ್ನ ಜಾತಿ ಗೊತ್ತಾಯಿತು ಎಂದರು.
ಪ್ರತಿಯೊಬ್ಬ ಭಾರತೀಯ ಕನ್ನಡಿಗನ್ನಲ್ಲ ಆದರೆ ಪ್ರತಿಯೊಬ್ಬ ಕನ್ನಡಿಗ ಭಾರತೀಯ. ಈ ತತ್ವದೊಂದಿಗೆ ನಾವು ಮುಂದುವರಿಯಬೇಕಾಗಿದೆ. ತನ್ಮೂಲಕ ದೇಶದ ಸುಭದ್ರತೆಗಾಗಿ ಕಾರ್ಯನಿರ್ವಹಿಸೋಣ ಎಂದರು.
ಉಡುಪಿ ಜಿಲ್ಲಾ ಓಬಿಸಿ ಮೋರ್ಚಾ ಅಧ್ಯಕ್ಷರಾದ ಶ್ರೀ ವಿಜಯ್ ಕುಮಾ‌ರ್ ಕೊಡವೂರು ಅಧ್ಯಕ್ಷತೆ ವಹಿಸಿದ್ದರು. ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದರಾದ ಕೋಟ ಶ್ರೀನಿವಾಸ್ ಪೂಜಾರಿ, ಬೈಂದೂರು ಶಾಸಕರಾದ ಗುರುರಾಜ ಗಂಟಿಹೊಳೆ, ಕುಂದಾಪುರ ಶಾಸಕರಾದ ಕಿರಣ್ ಕೊಡ್ಲಿ, ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಓಬಿಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷರಾದ ಶ್ರೀ ವಿಠಲ ಪೂಜಾರಿ ಐರೋಡಿ, ಓಬಿಸಿ ಮೋರ್ಚಾ ರಾಜ್ಯ ಕಾರ್ಯದರ್ಶಿ ಆರ್ ಸಿ ನಾರಾಯಣ ರೆಂಜ, ಬಿಜೆಪಿ ಉಡುಪಿ ಜಿಲ್ಲಾ ಅಧ್ಯಕ್ಷರಾದ ಕಿಶೋ‌ರ್ ಕುಮಾ‌ರ್, ಉಡುಪಿ ನಗರಸಭಾ ಅಧ್ಯಕ್ಷ ಪ್ರಭಾಕ‌ರ್ ಪೂಜಾರಿ, ಉಪಾಧ್ಯಕ್ಷೆ ರಜನಿ ಹೆಬ್ಬಾರ್, ಹಿಂದುಳಿದ ವರ್ಗಗಳ ಮೋರ್ಚಾದ ರಾಜ್ಯ ಉಪಾಧ್ಯಕ್ಷರಾದ ಈಶ್ವ‌ರ್ ನಾಯಕ್, ಉಡುಪಿ ನಗರ ಬಿಜೆಪಿ ಅಧ್ಯಕ್ಷ ದಿನೇಶ್‌ ಅಮೀನ್, ಪರಿಶಿಷ್ಠ ಪಂಗಡ ಜಿಲ್ಲಾಧ್ಯಕ್ಷ ಕುಮಾರ್‌ದಾಸ್, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಸಂಧ್ಯಾ ರಮೇಶ್, ರೈತ ಮೋರ್ಚಾ ಜಿಲ್ಲಾಧ್ಯಕ್ಷ ಕಮಲಾಕ್ಷ ಹೆಬ್ಬಾರ್, ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷ ರುಡಾಲ್ಫ್ ಡಿಸೋಜ, ಪರಿಶಿಷ್ಟ ಪಂಗಡ ಮೊರ್ಚಾದ ಜಿಲ್ಲಾಧ್ಯಕ್ಷ ಚಂದ್ರ ಪಂಚವಟಿ, ಚಿಕ್ಕಮಗಳೂರು ಕ್ಷೇತ್ರದ ಮಹಾಂತೇಶ್‌, ಆ‌ರ್. ಸಿ. ನಾರಾಯಣ್,ಯುವಮೋರ್ಚಾ ಜಿಲ್ಲಾಧ್ಯಕ್ಷ ಪೃಥ್ವಿರಾಜ್ ಶೆಟ್ಟಿ, ಮಾಜಿ ಶಾಸಕ ಲಾಲಾಜಿ ಮೆಂಡನ್, ಉಡುಪಿ ಜಿಲ್ಲಾ ನಿಕಟಪೂರ್ವ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಾಹಿತಿಗಳು, ಬರಹಗಾರರ ಸಮಾಗಮ

ಕರಾವಳಿಯ ಸಾಹಿತಿಗಳು, ಕಲಾವಿದರು, ಲೇಖಕರು, ಕವಿಗಳು ಮತ್ತು ಚುಟುಕು ಬರಹಗಾರರ ಸಮ್ಮೇಳನದಲ್ಲಿ ನೂರಾರು ಮಂದಿ ಸಾಹಿತಿ,ಕಲಾವಿದರು ರಾಜ್ಯದ ವಿವಿಧ ಭಾಗದಿಂದ ಭಾಗವಹಿಸಿದ್ದರು. ಸಮ್ಮೇಳನದಲ್ಲಿ ಹಲವು ಮಂದಿ ಸಾಧಕರನ್ನು ಗೌರವಿಸಲಾಯಿತು.

Categories
ಮಂಗಳೂರು

ಕೌನ್‌ ಬನೇಗಾ ಕರೋಡ್‌ಪತಿ: 6.40 ಲ.ರೂ. ಗೆದ್ದ ಮಂಗಳೂರಿನ ಅಪೂರ್ವಾ ಶೆಟ್ಟಿ!

ಕೌನ್‌ ಬನೇಗಾ ಕರೋಡ್‌ಪತಿ: 6.40 ಲ.ರೂ. ಗೆದ್ದ ಮಂಗಳೂರಿನ ಅಪೂರ್ವಾ ಶೆಟ್ಟಿ!
– ತುಳುವಿನಲ್ಲಿಯೇ ಮಾತನಾಡಿ ಗಮನ ಸೆಳೆದ ಕುಡ್ಲದ ಹುಡುಗಿ
– ತುಳುನಾಡ ಪ್ರತಿಭೆಗೆ ನಮ್ಮೂರ್ ಎಕ್ಸ್ ಪ್ರೆಸ್ ಅಭಿನಂದನೆಗಳು

NAMMUR EXPRESS NEWS
ಮಂಗಳೂರು: ಸೋನಿ ಟಿವಿಯಲ್ಲಿ ಪ್ರಸಾರವಾಗುವ “ಕೌನ್‌ ಬನೇಗಾ ಕರೋಡ್‌ಪತಿ’ (ಕೆಬಿಸಿ) ಕಾರ್ಯಕ್ರಮದಲ್ಲಿ ಮಂಗಳೂರು ಪಂಪ್‌ವೆಲ್‌ನ ಯುವತಿ ಅಪೂರ್ವಾ ಶೆಟ್ಟಿ 6.40 ಲ.ರೂ. ಬಹುಮಾನ ಗೆದ್ದುಕೊಂಡಿದ್ದಾರೆ. ಅಲ್ಲದೆ ಅವರು ಕಾರ್ಯಕ್ರಮದ ವೇದಿಕೆಯಲ್ಲಿ ತಂದೆ ಮತ್ತು ಮಾವನ ಜತೆ ತುಳುವಿನಲ್ಲೇ ಮಾತನಾಡಿರುವುದಕ್ಕೆ ತುಳುವರಿಂದ ಶ್ಲಾಘನೆ ವ್ಯಕ್ತವಾಗಿದೆ.
ಸೆ. 27ರಂದು ರಾತ್ರಿ ಅಪೂರ್ವಾ ಅವರ ಸಂಚಿಕೆ ಪ್ರಸಾರವಾಗಿದೆ. ಅಪೂರ್ವಾ 10 ಪ್ರಶ್ನೆಗಳಿಗೆ ಸರಿ ಉತ್ತರ ನೀಡಿದ್ದರು. 11ನೇ ಪ್ರಶ್ನೆಯಾಗಿ “ಮ್ಯಾನ್‌ ಗ್ರೋವ್‌ ಫಾರೆಸ್ಟ್‌(ಕಾಂಡ್ಲಾವನ) ಹೆಚ್ಚಿರುವ ದೇಶ ಯಾವುದು?’ ಪ್ರಶ್ನೆಯನ್ನು ಕೇಳಲಾಗಿತ್ತು. ಬ್ರೆಜಿಲ್‌, ನೈಜಿರೀಯಾ, ಬಾಂಗ್ಲಾದೇಶ ಹಾಗೂ ಇಂಡೋನೇಶ್ಯಾದ ಆಯ್ಕೆ ನೀಡಲಾಗಿತ್ತು. ಉತ್ತರಿಸಲು ಗೊಂದಲಕ್ಕೀಡಾದ ಅಪೂರ್ವಾ ಉತ್ತರಕ್ಕಾಗಿ ಮಾವನಿಗೆ ಕರೆ ಮಾಡಿದರು. ಅವರೊಂದಿಗೆ ತುಳುವಿನಲ್ಲೇ ಪ್ರಶ್ನೆ ಕೇಳಿದ್ದರು. ಅವರು ನೈಜೀರಿಯಾ ಆಗಿರಬೇಕೆಂದು ಉತ್ತರಿಸಿದ್ದರು. ಆ ಉತ್ತರದ ಬಗ್ಗೆ ಸ್ಪಷ್ಟತೆ ಇಲ್ಲದ ಕಾರಣ, ತಪ್ಪಾಗಿ ಉತ್ತರಿಸಿದರೆ ಹಣ ಕಡಿತವಾಗುವುದರಿಂದ 10 ಪ್ರಶ್ನೆಗಳ ಉತ್ತರಕ್ಕೆ ದೊರಕಿದ್ದ 6.40 ಲಕ್ಷ ರೂ.ಗಳಿಗೇ ಖುಷಿ ಪಟ್ಟು ಸ್ಪರ್ಧೆಯಿಂದ ಹಿಂದೆ ಸರಿದರು.
ತುಳುವಿನಲ್ಲೇ ಸಂಭಾಷಣೆ ಸ್ಪರ್ಧೆಯ ವೇಳೆ ಅಪೂರ್ವಾ ಅವರು ಅಮಿತಾಬ್‌ ಬಚ್ಚನ್‌ ಅವರಲ್ಲಿ “ನನ್ನ ತಂದೆ ನಿಮ್ಮ ದೊಡ್ಡ ಅಭಿಮಾನಿ’ ಎಂದು ಹೇಳಿದಾಗ ಅಮಿತಾಭ್‌ ಬಚ್ಚನ್‌ ಆಕೆಯ ತಂದೆ ಲೋಕನಾಥ್‌ ಶೆಟ್ಟಿಗೆ ವೀಡಿಯೋ ಕರೆ ಮಾಡಿ ಮಾತನಾಡಿದ್ದಾರೆ. ಆಗ ಲೋಕನಾಥ ಶೆಟ್ಟಿ ಪುತ್ರಿ ಜತೆ ತುಳುವಿನಲ್ಲಿ ಮಾತನಾಡಿ ತುಳುವಿನ ಮಹತ್ವವನ್ನು ಮೆರೆಸಿದ್ದಾರೆ. ಲೋಕನಾಥ ಶೆಟ್ಟಿ ಅವರು ಅಮಿತಾಭ್‌ ಜತೆಗೆ ಮಾತನಾಡುತ್ತಾ ಆನಂದಭಾಷ್ಪ ಸುರಿಸಿದ್ದಾರೆ. ಆಗ ಅಪೂರ್ವಾ ಕಣ್ಣಲ್ಲೂ ನೀರು ಬರುವುದನ್ನು ನೋಡಿ ಅಮಿತಾಭ್‌ ಪೇಪರ್‌ ಕರ್ಚೀಫ್ ನೀಡಿದ್ದಾರೆ.
ಅಗರಿ ಪಾಲ್ತಾಜೆ ಶ್ರೀ ಲೋಕನಾಥ ಶೆಟ್ಟಿ ಹಾಗೂ ಶ್ರೀಮತಿ ಮಧುರಾ ಎಲ್ ಶೆಟ್ಟಿ ಇವರ ಸುಪುತ್ರಿಯಾದ ಅಪೂರ್ವ ಎಲ್.ಶೆಟ್ಟಿಯವರಿಗೆ ಹಾರ್ದಿಕ ಅಭಿನಂದನೆಗಳು

Categories
ತೀರ್ಥಹಳ್ಳಿ ಮಲ್ನಾಡ್

ತೀರ್ಥಹಳ್ಳಿಯಲ್ಲಿ ಅ.10 ರಂದು ದಸರಾ ಕವಿಗೋಷ್ಠಿ

ತೀರ್ಥಹಳ್ಳಿಯಲ್ಲಿ ಅ.10 ರಂದು ದಸರಾ ಕವಿಗೋಷ್ಠಿ
– ವಾಗ್ದೇವಿ ಶಾಲೆಯ ನಾಲ್ಕು ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ
– ಮಾಳೂರು ಪ್ರೌಢ ಶಾಲೆ ವಿದ್ಯಾರ್ಥಿ ದೀಕ್ಷಿತ್ ಸಾಧನೆ
– ಹೋರಾಟಗಾರ ರಿಪ್ಪನ್ ಪೇಟೆಯ ಕೃಷ್ಣಪ್ಪ, ಸೊರಬದ ವಾಮದೇವ ಗೌಡರಿಗೆ ಗೌರವ
– ದಸರಾ ಕ್ರೀಡಾಕೂಟಕ್ಕೆ ತುಂಗಾ ಕಾಲೇಜಿನ ಜಯಸೂರ್ಯ ಆಯ್ಕೆ

NAMMUR EXPRESS NEWS
ತೀರ್ಥಹಳ್ಳಿ : ಭದ್ರಾವತಿಯಲ್ಲಿ ನಡೆದ ಜಿಲ್ಲಾಮಟ್ಟದ ಚೆಸ್ ಹಾಗೂ ಯೋಗಾಸನ ಸ್ಪರ್ಧೆಗಳಲ್ಲಿ ಪಟ್ಟಣದ ಪ್ರತಿಷ್ಠಿತ ವಾಗ್ದೇವಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ತೇಜಸ್ ಎಂ ಶೆಣೈ ( 10 ನೆಯ ತರಗತಿ ), ಪ್ರಥಮ್ ಟಿ ಎನ್ ರಾವ್ (8 ನೆಯ ತರಗತಿ), ಆದ್ಯ ಹೆಚ್ ಕೆ ( 7 ನೆಯ ತರಗತಿ) ಚೆಸ್ ನಲ್ಲಿ ಪ್ರಥಮ ಸ್ಥಾನವನ್ನು ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾದರೆ ಸಂಹಿತಾ (6 ನೆಯ ತರಗತಿ) ರಿದಮಿಕ್ ಯೋಗದಲ್ಲಿ ಡಿವಿಜನ್ ಗೆ ಆಯ್ಕೆಯಾಗಿದ್ದಾರೆ.
ಇವರ ಈ ಸಾಧನೆಯನ್ನು ವಾಗ್ದೇವಿ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಜಗದೀಶ್ ಸದಸ್ಯರು, ಶಿಕ್ಷಕರು ಹಾಗೂ ಪೋಷಕರು ಅಭಿನಂದಿಸಿ ಮುಂದಿನ ಸ್ಪರ್ಧೆಗೆ ಶುಭ ಹಾರೈಸಿದ್ದಾರೆ.

ತೀರ್ಥಹಳ್ಳಿಯಲ್ಲಿ ಅ.10 ರಂದು ದಸರಾ ಕವಿಗೋಷ್ಠಿ

ತೀರ್ಥಹಳ್ಳಿ: ಪ್ರತಿ ವರ್ಷದಂತೆ ಶ್ರೀ ರಾಮೇಶ್ವರ ದೇವರ ದಸರಾ ಉತ್ಸವದ ಅಂಗವಾಗಿ ದಸರಾ ಸಾಂಸ್ಕೃತಿಕ ಸಮಿತಿ ವಿಭಾಗದ ವತಿಯಿಂದ ಈ ವರ್ಷ ಕೂಡಾ ಅಕ್ಟೋಬರ್ 10 ನೇ ತಾರೀಕಿನಂದು ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ಮಟ್ಟದ ಕವಿಗೋಷ್ಠಿಯನ್ನು ಪಟ್ಟಣದ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ಆಯೋಜಿಸಲಾಗಿದೆ.ದಸರಾ ಕವಿಗೋಷ್ಠಿ ಸಂಚಾಲಕರಾದ ಡಾನ್ ರಾಮಣ್ಣ ತಿಳಿಸಿದ್ದಾರೆ.
ಪಟ್ಟಣದ ತುಂಗಾ ಮಹಾವಿದ್ಯಾಲಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಕೋಣಂದೂರಿನ ಶರಾವತಿ ಪ್ರಥಮದರ್ಜೆಕಾಲೇಜಿನ
ಸಹಯೋಗದೊಂದಿಗೆ ನಡೆಯುವ ಈ ಕವಿಗೋಷ್ಠಿಯಲ್ಲಿ ಕರಾವಳಿ ಮತ್ತು ಮಲೆನಾಡಿನ ಹಿರಿಯ ಮತ್ತು ಉದಯೋನ್ಮುಖ ಸಾಹಿತಿಗಳು
ಈ ಕವಿಗೋಷ್ಠಿಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಪ್ರಥಮ ಬಹುಮಾನ 5000 ರೂ, ದ್ವಿತೀಯ 3000 ರೂ, ತೃತೀಯ 2000 ಹಾಗೂ ಸಮಾಧಾನಕರ 1000 ರೂ ನಗದು ಬಹುಮಾನದೊಂದಿಗೆ ಸ್ಮರಣಿಕೆ ನೀಡಿ ಗೌರವಿಸಲಾಗುವುದು. ತಾಲೂಕಿನವರನ್ನು ಹೊರತು ಪಡಿಸಿ ಹೊರಗಿನಿಂದ ಬರುವವರಿಗೆ ಬಸ್ ಪ್ರಯಾಣ ವೆಚ್ಚವನ್ನೂ ನೀಡಲಾಗುವುದು.
ಕವನವನ್ನು ಕಳುಹಿಸಲು ಕೊನೆಯ ದಿನ 9-10-2024 ಆಗಿರಲಿದೆ. ಈ ಮೊದಲು ಬೇರೆಡೆ ಪ್ರಸ್ತುತ ಪಡಿಸದ ಸಾಮಾಜಿಕ ಕಳಕಳಿಯ ಕವನಗಳಿಗೆ ಸ್ವಾಗತ. ಒಂದು ಪುಟಕ್ಕೆ ಸೀಮಿತವಾಗಿದ್ದು ವಾಚನ ಸಮಯ ಮೂರು ನಿಮಿಷ ಮೀರದಂತಿರಲಿ. ಕವನವನ್ನು
ಕಳುಹಿಸುವವರು ಪೂರ್ಣ ವಿಳಾಸದೊಂದಿಗೆ ತಮ್ಮ
ಪರಿಚಯವನ್ನು ಈ ಕೆಳಗಿನ ವಿಳಾಸಕ್ಕೆ ಕಳುಹಿಸಬೇಕು.ಕವನ ಕಳುಹಿಸಿದವರಿಗೆ ಮಾಹಿತಿ ನೀಡಲಾಗುವುದು ಎಂದು ಡಾನ್ ರಾಮಣ್ಣ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 9480924888, 9480924088

ಮಾಳೂರುಶಾಲೆ ವಿದ್ಯಾರ್ಥಿ ದೀಕ್ಷಿತ್ ಸಾ ಪ್ರೌಢ ಧನೆ

ಭದ್ರಾವತಿಯಲ್ಲಿ ನಡೆದ ಪ್ರೌಢಶಾಲಾ ವಿಭಾಗದ ಚೆಸ್ ಪಂದ್ಯಾವಳಿಯಲ್ಲಿ ಮಾಳೂರು ಪ್ರೌಢ ಶಾಲೆ ವಿದ್ಯಾರ್ಥಿ ದೀಕ್ಷಿತ್ ಪ್ರಥಮ ಸ್ಥಾನ ಪಡೆಯುವ ಮುಖಾಂತರ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿ ಶಾಲೆಗೆ ಹಾಗೂ ಪೋಷಕರಿಗೆ,ತಾಲ್ಲೂಕಿಗೆ ಕೀರ್ತಿಯನ್ನು ತಂದಿದ್ದಾನೆ.

ಹೋರಾಟಗಾರ ರಿಪ್ಪನ್ ಪೇಟೆಯ ಕೃಷ್ಣಪ್ಪ, ಸೊರಬದ ವಾಮದೇವ ಗೌಡರಿಗೆ ಗೌರವ

ತೀರ್ಥಹಳ್ಳಿ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ತೀರ್ಥಹಳ್ಳಿ ಶಾಖೆಗೆ ಸೌಹಾರ್ಧಯುತ ಭೇಟಿ ನೀಡಿದ್ದ ಹಿರಿಯ ಸೈಕ್ಲಿಷ್ಟ್, ಸಾಮಾಜಿಕ ಹೋರಾಟಗಾರ ರಿಪ್ಪನ್ ಪೇಟೆಯ ಕೃಷ್ಣಪ್ಪ ಹಾಗೂ ಹಿರಿಯ ಸಾಮಾಜಿಕ ಹೋರಾಟಗಾರ ಸೊರಬದ ವಾಮದೇವ ಗೌಡರನ್ನು ಆತ್ಮೀಯವಾಗಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಮೋಹನ್ ಮುನ್ನೂರು, ಸಂಘದ ಮ್ಯಾನೇಜರ್ ಕಾಡಪ್ಪ ಗೌಡ ಇದ್ದರು.

ದಸರಾ ಕ್ರೀಡಾಕೂಟಕ್ಕೆ ತುಂಗಾ ಕಾಲೇಜಿನ ಜಯಸೂರ್ಯ ಆಯ್ಕೆ

ತೀರ್ಥಹಳ್ಳಿ: ತುಮಕೂರು ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದಂತಹ ವಿಭಾಗ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ತುಂಗಾ ಕಾಲೇಜಿನ ದ್ವಿತೀಯ ಬಿ.ಕಾಂ ವಿಭಾಗದ ವಿದ್ಯಾರ್ಥಿಯಾದ ಜಯಸೂರ್ಯರವರು 110 ಮೀಟರ್ ಹರ್ಡಲ್ಸ್ ನಲ್ಲಿ ದ್ವಿತೀಯ ಸ್ಥಾನವನ್ನು ಪಡೆದು ಹೆಸರಾಂತ ಮೈಸೂರು ಜಿಲ್ಲೆಯಲ್ಲಿ ನಡೆಯುವ ರಾಜ್ಯ ಮಟ್ಟದ ದಸರಾ ಕ್ರೀಡಾಕೂಟಕ್ಕೆ ಆಯ್ಕೆ ಆಗಿರುತ್ತಾರೆ.ಇವನು ರಾಜ್ಯ ಮಟ್ಟದ ಕ್ರೀಡಾ ಪಟು ಹಾಗೂ ದೇವಂಗಿ ಶಾಲೆಯ ಮುಖ್ಯ ಶಿಕ್ಷಕಿ ಭಾರತಿ ಅವರ ಪುತ್ರ. ತುಂಗಾ ಕಾಲೇಜಿನ ಪ್ರಾಂಶುಪಾಲರು ಮತ್ತು ಆಡಳಿತ ಮಂಡಳಿ ಶುಭ ಹಾರೈಸಿದ್ದಾರೆ.

 

Categories
ಚಿಕ್ಕಮಗಳೂರು

ಮೂಡಿಗೆರೆ ಪಟ್ಟಣಕ್ಕೆ ಬಂದ ಕಾಡಾನೆ!

ಮೂಡಿಗೆರೆ ಪಟ್ಟಣಕ್ಕೆ ಬಂದ ಕಾಡಾನೆ!
– ಬೆಳ್ಳಂಬೆಳಿಗ್ಗೆ ಗಜರಾಜನ ಸಿಟಿ ರೌಂಡ್ಸ್
* ಅರಣ್ಯ ಇಲಾಖೆಯಿಂದ ಕಾರ್ಯಚರಣೆ
* ಜನರಿಗೆ ಎಚ್ಚರಿಕೆಯಿಂದಿರಲು ಸೂಚನೆ

NAMMUR EXPRESS NEWS
ಚಿಕ್ಕಮಗಳೂರು: ಮೂಡಿಗೆರೆ ಪಟ್ಟಣದ ರಸ್ತೆಯಲ್ಲಿ ಸೋಮವಾರ ಬೆಳಗಿನ ಜಾವ ಒಂಟಿ ಸಲಗ ಅಡ್ಡಾದಿಡ್ಡಿ ಓಡಾಡಿ ಜನರಲ್ಲಿ ಆತಂಕ ಸೃಷ್ಠಿಸಿದೆ. ಒಂಟಿಸಲಗ ಓಡಾಡಿದ ವಿಡಿಯೋ ಹೆಸ್ಗಲ್ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೇ ನಂದ ಮೂರ್ತಿಯವರ ಮನೆಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಮೂಡಿಗೆರೆ ಪಟ್ಟಣದ ಸಂತೆ ಮೈದಾನ, ಪಟ್ಟಣ ಪಂಚಾಯಿತಿ ರಸ್ತೆ, ಹೊಯ್ಸಳ ಕ್ರೀಡಾಂಗಣದ ಪಕ್ಕದಲ್ಲಿ ಒಂಟಿಸಲಗ ರೌಂಡ್ಸ್ ನಡೆಸಿದ್ದು ಜನರು ಆತಂಕಗೊಂಡಿದ್ದಾರೆ.
ಒಂಟಿಸಲಗವನ್ನು ಕಾಡಿಗಟ್ಟುವ ನಿಟ್ಟಿನಲ್ಲಿ ಕಾರ್ಯಚಾರಣೆಯಲ್ಲಿ ತೊಡಗಿರುವ ಅರಣ್ಯ ಇಲಾಖೆ ಸಾರ್ವಜನಿಕರಿಗೆ ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಿದೆ.

Categories
ಹಾಸನ

ಕಾಂಗ್ರೆಸ್ ಸರ್ಕಾರಕ್ಕೆ ಯಾವುದೇ ಅಡ್ಡಿ ಇಲ್ಲ

ಕಾಂಗ್ರೆಸ್ ಸರ್ಕಾರಕ್ಕೆ ಯಾವುದೇ ಅಡ್ಡಿ ಇಲ್ಲ
– ಬಡ, ಜನ ಪರ ಸರ್ಕಾರ ನಿರಾತಂಕವಾಗಿ ಅವಧಿ ಪೂರೈಸಲಿದೆ: ಶ್ರೇಯಸ್ ಪಟೇಲ್
– ಹಾಸನ ತಾಲೂಕಿನ ಗೊರೂರಿನ ಹೇಮಾವತಿ ಜಲಾಶಯಕ್ಕೆ ಬಾಗಿನ ಅರ್ಪಣೆ

NAMMUR EXPRESS NEWS
ಹಾಸನ: ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಡ್ಡಿ, ಆತಂಕ ಇಲ್ಲದೆ ಮುಂದುವರಿಯಲಿದೆ ಎಂದು ಸಂಸದ ಶ್ರೇಯಸ್ ಪಟೇಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಹಾಸನ ತಾಲೂಕಿನ ಗೊರೂರಿನ ಹೇಮಾವತಿ ಜಲಾಶಯಕ್ಕಿಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ, ಶಾಸಕರು, ಅಧಿಕಾರಿಗಳೊಂದಿಗೆ ಬಾಗಿನ ಅರ್ಪಿಸಿ ಮಾತನಾಡಿದ ಅವರು, ನಮ್ಮದು ಜನಪರ, ಬಡವರ ಪರ ಇರುವ ಸರ್ಕಾರ, ಈ ಸರ್ಕಾರಕ್ಕೆ ಯಾವುದೇ ಸಮಸ್ಯೆ ಎದುರಾಗದು, ಅಜರಾಮರ ಅನ್ನೋ ಹಾಗೆ ನಿರಾತಂಕವಾಗಿ ಅವಧಿ ಪೂರೈಸಲಿದೆ ಎಂದು ನುಡಿದರು.
ಜಿಲ್ಲೆಯ ಹಾಗೂ ನಾಡಿನ ಸಮಸ್ತ ಜನರ ಆಶೀರ್ವಾದ ನಮ್ಮ ಸರ್ಕಾರದ ಮೇಲೆ ಹೀಗೆಯೇ ಇರಲಿ ಎಂದು ಮನವಿ ಮಾಡಿದರು.

ಸಚಿವ ರಾಜಣ್ಣ ಬಗ್ಗೆ ಮೆಚ್ಚುಗೆ

ರಾಜಣ್ಣ ಅವರು ನಮ್ಮ ಜಿಲ್ಲೆಯ ಉಸ್ತುವಾರಿ ಸಚಿವರಾಗಿ ಬಂದ ಮೇಲೆ ಸಾಕಷ್ಟು ಅಭಿವೃದ್ಧಿ ಕೆಲಸ ಆಗುತ್ತಿವೆ. ಹಾಸನ ಜಿಲ್ಲೆ ಅಭಿವೃದ್ಧಿ ಪಥದತ್ತ ಸಾಗುತ್ತಿದೆ. ಜಿಲ್ಲೆಯ ಎಲ್ಲಾ ಅಧಿಕಾರಿಗಳು ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ಜಿಲ್ಲಾಧಿಕಾರಿ, ಹಾಸನ ಉಪ ವಿಭಾಗಾಧಿಕಾರಿ ಹಾಗೂ ನಾಲ್ವರು ತಹಸೀಲ್ದಾರರು, ಈ ವರ್ಷದ ಉತ್ತಮ ಕಂದಾಯ ಅಧಿಕಾರಿ ಪ್ರಶಸ್ತಿಗೆ ಭಾಜರಾಗಿರುವುದೇ ಕಣ್ಣ ಮುಂದಿನ ಉದಾಹರಣೆ ಎಂದರು.
ಪ್ರಶಸ್ತಿಗೆ ಭಾಜನರಾಗಿರುವ ನಮ್ಮ ಅಧಿಕಾರಿಗಳಿಗೆ ಮತ್ತೊಮ್ಮೆ ಅಭಿನಂದನೆ ಸಲ್ಲಿಸುವೆ ಎಂದರು. ಹೀಗೆಯೇ ಮುಂದಿನ ದಿನಗಳಲ್ಲೂ ಜಿಲ್ಲೆಯ ಅಭಿವೃದ್ಧಿ ಜೊತೆಗೆ ಬಡವರ ಏಳಿಗೆಗಾಗಿ ಕೆಲಸ ಮಾಡಿ ಎಂದು ಮನವಿ ಮಾಡಿದರು.
ಋಣಾನುಬಂಧವೋ ಏನೋ ಹೇಮಾವತಿ ಜಲಾಶಯಕ್ಕೆ ರಾಜಣ್ಣ ಅವರೇ ಬಾಗಿನ ಸಲ್ಲಿಸಬೇಕು ಎಂದು ಇತ್ತು. ಅದು ಇಂದು ನೆರವೇರಿದೆ. ಈ ಕಾರ್ಯದಲ್ಲಿ ತಡ ಆಗಿರಬಹುದು. ಅದೇನೇ ಇದ್ದರೂ, ಮಂಗಳ ಕಾರ್ಯ ಇಂದು ಹೇಮಾವತಿ ತಾಯಿಗೆ ನೆರವೇರಿದೆ. ಇದೇ ಪ್ರತಿ ವರ್ಷವೂ ಹೇಮಾವತಿ ಜಲಾಶಯ ಭರ್ತಿ ಆಗಬೇಕು. ಅದರಿಂದ ಹಾಸನ ಜಿಲ್ಲೆ ಸೇರಿದಂತೆ ತುಮಕೂರು, ಮಂಡ್ಯ, ಮೈಸೂರು ಜಿಲ್ಲೆಗಳ ಜನ-ಜಾನುವಾರುಗಳಿಗೂ ಅನುಕೂಲ ಆಗಬೇಕು ಎಂದು ಆಶಿಸಿದರು. ಹೇಮಾವತಿ ಈ ಭಾಗದ ಪ್ರಮುಖ ಜಲಾಶಯಗಳಲ್ಲಿ ಒಂದಾಗಿದ್ದು, ಇದರಿಂದ ಮೂರ‍್ನಾಲ್ಕು ಜಿಲ್ಲೆಗಳಿಗೆ ಅನುಕೂಲವಾಗುತ್ತಿದೆ ಎಂದು ತಿಳಿಸಿದರು