Categories
ಕರಾವಳಿ ದಕ್ಷಿಣ ಕನ್ನಡ ಬೆಳ್ತಂಗಡಿ ಮಂಗಳೂರು

ಜೆಇಇ, ಬಿ ಆರ್ಕ್ ಫಲಿತಾಂಶದಲ್ಲಿ ಎಕ್ಸೆಲ್ ಸಾಧನೆ

ಜೆಇಇ, ಬಿ ಆರ್ಕ್ ಫಲಿತಾಂಶದಲ್ಲಿ ಎಕ್ಸೆಲ್ ಸಾಧನೆ
– ಎಕ್ಸೆಲ್ ಕಾಲೇಜಿನ ಸುಪ್ರೀತ್ ಎಂ ಬಡಿಗೇರ ಜಿಲ್ಲೆಗೆ ಪ್ರಥಮ
– ಎಕ್ಸೆಲ್ ಸಮೂಹ ವಿದ್ಯಾ ಸಂಸ್ಥೆಗಳ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಅಭಿನಂದನೆ

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಬೆಳ್ತಂಗಡಿ: ರಾಷ್ಟ್ರ ಮಟ್ಟದ ಜೆಇಇ ಮೈನ್ಸ್ ಬಿ.ಆರ್ಕ್ ಫಲಿತಾಂಶ ಪ್ರಕಟವಾಗಿದ್ದು, ಎಕ್ಸೆಲ್ ನ ಸುಪ್ರೀತ್ ಮಂಜುನಾಥ್ ಬಡಿಗೇರ ಅವರು ದಕ್ಷಿಣ ಕನ್ನಡ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ. 98.5567 ಪರ್ಸೆಂಟೈಲ್ ಪಡೆದಿದ್ದು, ಡ್ರಾಯಿಂಗ್ ನಲ್ಲಿ99.94 ಪಡೆದಿದ್ದಾರೆ. ಸುನೈನಾ 98.1738 ಪರ್ಸಂಟೈಲ್ ಪಡೆದು, ಬಿ ಪ್ಲಾನಿಂಗ್ ನಲ್ಲಿ 92. 4194 ಪರ್ಸೆಂಟೈಲ್ ಪಡೆದಿದ್ದಾರೆ. ಸಾನ್ವಿ ಪಿ ಎನ್ – 95. 8945, ಹೃಷಿಕೇಶ್ – 95.1993, ಎಂ.ಇಶಾನ್ – 94.4292, ಲಹರಿ ಎನ್ 93.1026, ಪ್ರತೀಕ್ಷಾ ಎಂ.ಕೆ 92.3237 ಪರ್ಸೆಂಟೈಲ್ ಪಡೆದಿದ್ದಾರೆ.
ಶೈಕ್ಷಣಿಕ ಸಾಧಕರನ್ನು ಎಕ್ಸೆಲ್ ಸಮೂಹ ವಿದ್ಯಾ ಸಂಸ್ಥೆಗಳ ಅಧ್ಯಕ್ಷರಾದ ಸುಮಂತ್ ಕುಮಾರ್ ಜೈನ್,ಪ್ರಾಂಶುಪಾಲರು, ಪ್ರಾಧ್ಯಾಪಕರು ಅಭಿನಂದಿಸಿದ್ದಾರೆ.

Categories
ತೀರ್ಥಹಳ್ಳಿ ಮಲ್ನಾಡ್ ರಾಜಕೀಯ ರಾಜ್ಯ ಶಿವಮೊಗ್ಗ

ಸಿಎಂ ರೇಸ್ ಅಲ್ಲಿ ಕಿಮ್ಮನೆ ಹೆಸರು!

ಸಿಎಂ ರೇಸ್ ಅಲ್ಲಿ ಕಿಮ್ಮನೆ ಹೆಸರು!
– ಸಿದ್ದು v/s ಎಚ್‌ಡಿಕೆ ವಾಕ್ ಸಮರ ವೇಳೆ ಪ್ರಸ್ತಾಪ
– ಕಿಮ್ಮನೆ ರತ್ನಾಕರ್ ಹೆಸರು ಕೂಡ ಪ್ರಸ್ತಾಪಿಸಿದ ಸಿದ್ದರಾಮಯ್ಯ

ಶಿವಮೊಗ್ಗ: ರಾಜ್ಯ ಕಂಡ ಅಪರೂಪದ ರಾಜಕಾರಣಿ, ಮಾಜಿ ಸಚಿವರು, ಮಾಜಿ ಶಾಸಕರು ಆದ ಕಿಮ್ಮನೆ ರತ್ನಾಕರ್ ಅವರ ಹೆಸರು ಇದೀಗ ಸಿಎಂ ರೇಸ್ ಅಲ್ಲಿ ಬಂದಿದೆ. ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಪ್ರಸ್ತಾಪ ಮಾಡಿದ್ದಾರೆ. ರಾಜ್ಯ ಕಾಂಗ್ರೆಸ್ನಲ್ಲಿ ನಾಯಕತ್ವದ ಬದಲಾವಣೆಯ ಚರ್ಚೆ ಬಿರುಸಾಗಿ ಈಗದು ಮಾಜಿ ಪ್ರಧಾನಿ ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ನಡುವೆ ವಾಗ್ವಾದವಾಗಿ ಬದಲಾಗಿದೆ.

ಸಿದ್ದರಾಮಯ್ಯ ರಾಜ್ಯದಲ್ಲಿ ಪರ್ಯಾಯ ಒಕ್ಕಲಿಗ ನಾಯಕತ್ವ ಬೆಳೆಯಲು ತೊಡರುಗಾಲು ಹಾಕಿದ್ದೇ ದೇವೇಗೌಡರು ಮತ್ತು ಕುಮಾರಸ್ವಾಮಿ ಎಂದು ಮಾತಿನ ಬಾಣ ಹೂಡಿದರೆ ಪ್ರತಿಯಾಗಿ ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿ ಬಹುತೇಕರು ಜೆಡಿಎಸ್ ಪಡಸಾಲೆಯಿಂದ ಹೊರಬಂದವರೇ ಆಗಿದ್ದಾರೆ. ಅಂದಮೇಲೆ ದೇವೇಗೌಡರು ಯಾರನ್ನು ಬೆಳೆಸಿಲ್ಲ ಎಂದು ಹೇಳುವುದು ಯಾವ ಅರ್ಥದಲ್ಲಿ ಎಂದು ಪ್ರಶ್ನಿಸಿದ್ದಾರೆ.

ಅದರೆ ಇಂದಿಗೂ ಚಾಲ್ತಿಯಲ್ಲಿರುವ ಮಾತೆಂದರೆ ಒಕ್ಕಲಿಗ ಸಮುದಾಯದ ನಾಯಕತ್ವದ ಪ್ರಶ್ನೆ ಬಂದಾಗ ಈಗಲೂ ಬಹುಮಂದಿ ದೇವೇಗೌಡರು ಮತ್ತು ಕುಮಾರಸ್ವಾಮಿ ಅವರನ್ನೇ ಒಪ್ಪುತ್ತಾರೆ ಎನ್ನುವುದು. ಕಾಂಗ್ರೆಸ್ನ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಒಕ್ಕಲಿಗ ಸಮಾಜದ ಮೇಲಿನ ದೇವೇಗೌಡ ಕುಟುಂಬದ ಹಿಡಿತವನ್ನು ಕಡಿಮೆ ಮಾಡಿ ಆ ಸ್ಥಾನಕ್ಕೆ ಏರಲು ಬೇಕಾದಷ್ಟು ತಯಾರಿ ಮಾಡಿಕೊಂಡಿದ್ದರಾದರೂ ರಾಜಕಾರಣದ ಚಿತ್ರ ವಿಚಿತ್ರ ವ್ಯೂಹಗಳು ಅವರ ಆಸೆಯನ್ನು ಇನ್ನೂ ಈಡೇರಲು ಬಿಟ್ಟಿಲ್ಲ.

ಈ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮರ್ಥ ನಾಯಕತ್ವ ನೀಡಲು ಸಾಧ್ಯವಿರುವವರು ಈಗಲೂ ಕಾಂಗ್ರೆಸ್ ಪಕ್ಷದಲ್ಲಿಯೇ ಇರುವುದು ಡಿ.ಕೆ.ಶಿವಕುಮಾರ್, ಟಿ.ಬಿ.ಜಯಚಂದ್ರ, ಕಿಮ್ಮನೆ ರತ್ನಾಕರ್, ಎಂ.ಕೃಷ್ಣಪ್ಪ, ಕೃಷ್ಣೇಬೈರೇಗೌಡ, ಪಿರಿಯಾಪಟ್ಟಣ ವೆಂಕಟೇಶ್ ಹೀಗೆ ಒಕ್ಕಲಿಗ ನಾಯಕರ ದೊಡ್ಡ ಪಟ್ಟಿಯೇ ಇದೆ. ಆದರೆ ಜೆಡಿಎಸ್ನಲ್ಲಿ ದೇವೇಗೌಡರ ಕುಟುಂಬ ಹೊರತುಪಡಿಸಿ ಯಾರಿದ್ದಾರೆ. ಒಕ್ಕಲಿಗ ಸಮಾಜದಿಂದ ಮುಂದೆ ಯಾರಾದರೂ ಮುಖ್ಯಮಂತ್ರಿ ಆದಲ್ಲಿ ಅದು ಕಾಂಗ್ರೆಸ್ ಪಕ್ಷದಿಂದಲೇ ಆಗಲಿದೆ ಎಂದು ಹೇಳಿರುವುದು ರಾಜ್ಯ ರಾಜಕಾರಣದಲ್ಲಿ ಸಂಚಲನ ಎಬ್ಬಿಸಿದೆ.

ರಾಜ್ಯ ಮಟ್ಟದಲ್ಲಿ ತೀರ್ಥಹಳ್ಳಿ ರಾಜಕಾರಣಿಗಳ ಸದ್ದು!

ಸಿದ್ದರಾಮಯ್ಯ ಉಲ್ಲೇಖಿಸಿರುವ ಹೆಸರುಗಳ ಪಟ್ಟಿಯಲ್ಲಿ ಮಾಜಿ ಶಿಕ್ಷಣ ಸಚಿವ ತೀರ್ಥಹಳ್ಳಿಯ ಕಿಮ್ಮನೆ ಹೆಸರು ಇದೀಗ ಸಂಚಲನ ಮೂಡಿಸಿದೆ. ತೀರ್ಥಹಳ್ಳಿ ರಾಜ್ಯ, ದೇಶಕ್ಕೆ ಅನೇಕ ಮುಂಚೂಣಿ ರಾಜಕಾರಣಿಗಳನ್ನು ಕೊಟ್ಟಿದೆ. ಪ್ರಾಮಾಣಿಕತೆಗೆ ಮತ್ತೊಂದು ಹೆಸರಾಗಿದ್ದ ಕಡಿದಾಳು ಮಂಜಪ್ಪ ಅವಿಭಜಿತ ತೀರ್ಥಹಳ್ಳಿ ಕ್ಷೇತ್ರದ ಶಾಸಕರಾಗಿ ಮುಖ್ಯಮಂತ್ರಿಯಾಗಿದ್ದರು (ಆಗ ತೀರ್ಥಹಳ್ಳಿ ಶೃಂಗೇರಿ ಸೇರಿ ಒಂದೇ ಕ್ಷೇತ್ರವಿತ್ತು).

ದೇಶ ಕಂಡ ಮಹಾನ್ ಸಮಾಜವಾದಿಗಳಲ್ಲಿ ಒಬ್ಬರಾಗಿದ್ದ ಶಾಂತವೇರಿ ಗೋಪಾಲಗೌಡರು ಇಂದಿಗೂ ಈ ರಾಜ್ಯಕಂಡ ಅತ್ಯಂತ ಶ್ರೇಷ್ಠ ವಿರೋಧ ಪಕ್ಷದ ನಾಯಕರಾಗಿದ್ದವರು ಮತ್ತು ಒಂದು ಹಂತದಲ್ಲಿ ಸರ್ಕಾರ ರಚನೆಗೆ ನೀಡಿದ ಬೆಂಬಲವನ್ನು ಹಿಂಪಡೆದು ಸಮಾಜವಾದಿ ಪಕ್ಷಕ್ಕೆ ನೀಡುವ ಭರವಸೆ ಬಂದಾಗ ಅದನ್ನವರು ಅನೈತಿಕ ಎಂದು ತಿರಸ್ಕರಿಸಿ ಮುಖ್ಯಮಂತ್ರಿ ಆಗುವ ಅವಕಾಶ ತ್ಯಜಿಸಿ ಜನರ ಮನಸ್ಸಿನಲ್ಲಿ ಚಿರಸ್ಥಾಯಿಯಾಗಿ ಉಳಿದರು.

ಮುಂದೆ ಕೋಣಂದೂರು ಲಿಂಗಪ್ಪ ತೀರ್ಥಹಳ್ಳಿಯಲ್ಲಿ ಬೆರಳೆಣಿಕೆ ಸಮುದಾಯದ ಹಿನ್ನಲೆಯಿಂದ ಬಂದು ಕ್ಷೇತ್ರದ ಏಕೈಕ ಒಕ್ಕಲಿಗೇತರ ಶಾಸಕರಾಗಿ ವಿಕ್ರಮ ಸಾಧಿಸಿದವರು. ಕಡಿದಾಳು ದಿವಾಕರ್ 26ನೇ ಹರೆಯದಲ್ಲಿಯೇ ಶಾಸಕರಾಗಿ ಇಡೀ ವಿಧಾನಸಭೆಯ ಕೇಂದ್ರ ಬಿಂದುವಾಗಿದ್ದವರು. ಪಟಮಕ್ಕಿ ರತ್ನಾಕರ್ ರಾಜ್ಯಕಂಡ ಅತ್ಯುತ್ತಮ ವಾಗ್ಮಿಗಳಲ್ಲಿ ಒಬ್ಬರಾಗಿದ್ದವರು. ಡಿ.ಬಿ.ಚಂದ್ರೇಗೌಡ ಸ್ವೀಕರ್ ಆಗಿ ಕ್ಷೇತ್ರಕ್ಕೆ ಗೌರವ ತಂದವರು. ಸಹಕಾರ ಕ್ಷೇತ್ರದಲ್ಲಿ ರಾಜ್ಯದಲ್ಲಿ ಮಂಜುನಾಥ ಗೌಡ ಮುಂಚೂಣಿಯಲ್ಲಿದ್ದಾರೆ. ರಾಜಕೀಯ ಮಾತ್ರವಲ್ಲ, ಸಹಕಾರ ಕ್ಷೇತ್ರದಲ್ಲಿ ತೀರ್ಥಹಳ್ಳಿ ಮುಂಚೂಣಿಯಲ್ಲಿದೆ.

ಮತ್ತೊರ್ವ ಸಿಎಂ ಸ್ಥಾನಕ್ಕೆ ಪಕ್ಕಾ ನಾಯಕ ಆರಗ ಜ್ಞಾನೇಂದ್ರ

ಬಡ ಕುಟುಂಬದಿಂದ ಬಂದ ಆರಗ ಜ್ಞಾನೇಂದ್ರ ಪ್ರಖರ ಸಮಾಜವಾದ, ಕಮುನಿಸ್ಟ್, ಕಾಂಗ್ರೆಸ್ ಚಿಂತನೆಯ ನೆಲದಲ್ಲಿ ಇಡೀ ರಾಜ್ಯವೇ ದಂಗಾಗುವಂತೆ ಬಿಜೆಪಿಯನ್ನು ಗೆಲ್ಲಿಸಿದ ಹಾಗೂ ಪ್ರತಿಭಾವಂತ ಚರ್ಚಾಪಟು. ಹಂಗಾಮಿ ಸ್ಪೀಕರ್ ಆಗಿ, ಗೃಹಮಂತ್ರಿಯಾಗಿ ಅತ್ಯುನ್ನತ ಗೌರವಕ್ಕೆ ಪಾತ್ರರಾದವರು. ಆರಗ ಜ್ಞಾನೇಂದ್ರ ಇದೀಗ ರಾಜ್ಯ ಬಿಜೆಪಿ ನಾಯಕರಲ್ಲಿ ಮುಂಚೂಣಿ ಹೆಸರು.

ಪ್ರಾಮಾಣಿಕ ರಾಜಕಾರಣಿ ಕಿಮ್ಮನೆ ರತ್ನಾಕರ್

ಕಿಮ್ಮನೆ ರತ್ನಾಕರ್ ಶಿಕ್ಷಣ ಸಚಿವರಾಗಿ ರಾಜ್ಯದಲ್ಲಿಯೇ ಪ್ರಶ್ನೆ ಪತ್ರಿಕೆ ಸೋರಿಕೆಯನ್ನು ತಡೆಯುವ ನಿಟ್ಟಿನಲ್ಲಿ ಉತ್ತಮ ಕ್ರಮಗಳನ್ನು ಕೈಗೊಂಡಿದ್ದಲ್ಲದೇ ಹಲವು ಕ್ರಾಂತಿಕಾರಕ ಬದಲಾವಣೆಯನ್ನು ತಂದರು. ಸದ್ಯ ಕಿಮ್ಮನೆ ರತ್ನಾಕರ್ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದ ಸಂದರ್ಭದಲ್ಲಿಯೂ ಯಾವ ಅಧಿಕಾರದಲ್ಲೂ ಇಲ್ಲ. ಮನಸ್ಸು ಮಾಡಿದ್ದರೆ ನಿಗಮ ಮಂಡಳಿ ಅಧ್ಯಕ್ಷರಾಗಿ, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿಯಾಗಿ ಮಿಂಚಬಹುದಿತ್ತು. ಗೂಟದ ಕಾರಿನಲ್ಲಿ ಓಡಾಡಬಹುದಿತ್ತು.

ಆದರೆ ಎಲ್ಲವನ್ನು ತಿರಸ್ಕರಿಸಿ ಈಗಲೂ ತೀರ್ಥಹಳ್ಳಿ ಬಿಜೆಪಿಗೆ ಸಮರ್ಥ ಎದುರಾಳಿಯಾಗಿಯೇ ಉಳಿದುಕೊಂಡಿದ್ದಾರೆ. ಹಾಗೆ ಅಧಿಕಾರವಿಲ್ಲದಾಗಲೂ ರಾಜಕೀಯವಾಗಿ ಅತ್ಯಂತ ಬಿಕ್ಕಟ್ಟಿನ ಸಮಯದಲ್ಲಿ ಸಾವಿರಾರು ಕೋಟಿಗಳಿಗೆ ತೂಗುವ ಶ್ರೀಮಂತರಿರುವ ಆಡಳಿತರೂಢ ಕಾಂಗ್ರೆಸ್ ಪಕ್ಷದಲ್ಲಿ ಸಿದ್ದರಾಮಯ್ಯನವರ ಹೇಳಿಕೆಯಲ್ಲಿ ಅವರ ಹೆಸರು ಸಂಭವನೀಯ ಒಕ್ಕಲಿಗ ನಾಯಕತ್ವ ಮತ್ತು ಮುಖ್ಯಮಂತ್ರಿ ಪಟ್ಟಕ್ಕೆ ಉಲ್ಲೇಖಗೊಂಡಿರುವುದು ರಾಜ್ಯದಾದ್ಯಂತ ಚರ್ಚೆಯನ್ನು ಹುಟ್ಟುಹಾಕಿದೆ.

Categories
ಕೊಪ್ಪ ಚಿಕ್ಕಮಗಳೂರು ತೀರ್ಥಹಳ್ಳಿ ಮಲ್ನಾಡ್ ಶಿವಮೊಗ್ಗ

ಮಲ್ನಾಡ್ ಪ್ರಮುಖ ಸುದ್ದಿಗಳು

ಮಲ್ನಾಡ್ ಪ್ರಮುಖ ಸುದ್ದಿಗಳು

ಆರಗ ಜ್ಞಾನೇಂದ್ರ ಅವರಿಗೆ ಮಹತ್ವದ ಹುದ್ದೆ
– ರಾಜ್ಯ ಅಡಿಕೆ ಮಹಾಮಂಡಲದ ಅಧ್ಯಕ್ಷರಾಗಿ ಶಾಸಕ ಆರಗ ಜ್ಞಾನೇಂದ್ರ ಅವಿರೋಧ ಆಯ್ಕ
– ಕಾಡು ಆನೆ ಓಡಾಟ: 12 ಗ್ರಾಮದಲ್ಲಿ ನಿಷೇಧಾಜ್ಞೆ
– ಕೊಪ್ಪ: ಕಾಡುಕೋಣ ದಾಳಿ: ಓರ್ವನಿಗೆ ಗಂಭೀರ ಗಾಯ!
– ನರಸಿಂಹರಾಜಪುರ: ಪ್ರತ್ಯಕ್ಷಗೊಂಡ ಒಂಟಿ ಸಲಗದ ಭಯ!
– ದೇವಂಗಿ ಬಳಿ ಭೀಕರ ಅಪಘಾತ: ಓರ್ವ ಮಣಿಪಾಲಕ್ಕೆ

ಶಿವಮೊಗ್ಗ: ರಾಜ್ಯ ಮಾಜಿ ಗೃಹ ಸಚಿವ, ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಅವರು ರಾಜ್ಯ ಅಡಿಕೆ ಮಹಾಮಂಡಲದ ಅಧ್ಯಕ್ಷರಾಗಿ ಶಾಸಕ ಆರಗ ಜ್ಞಾನೇಂದ್ರ ಅವಿರೋಧ ಆಯ್ಕೆ ಆಗಿದ್ದಾರೆ.ಅಡಿಕೆ ಮಹಾಮಂಡಲ ಅಧ್ಯಕ್ಷ ಸ್ಥಾನ ಬಯಸಿ ಶಾಸಕ ಆರಗ ಜ್ಞಾನೇಂದ್ರರವರು ಇಂದು ಶಿವಮೊಗ್ಗ ಉಪವಿಭಾಗಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದ್ದರು. ಯಾರೂ ಅಧ್ಯಕ್ಷ ಸ್ಥಾನ ಅಪೇಕ್ಷಿಸಿ ನಾಮ ಪತ್ರ ಸಲ್ಲಿಸದೇ ಇದ್ದ ಕಾರಣ ಮುಂದಿನ 5 ವರ್ಷಗಳ ಅವಧಿಗೂ ಜ್ಞಾನೇಂದ್ರರವರೇ ರಾಜ್ಯ ಅಡಿಕೆ ಮಹಾಮಂಡಲದ ಅಧ್ಯಕ್ಷರಾಗಿ ಶಾಸಕ ಆರಗ ಜ್ಞಾನೇಂದ್ರ ಅವಿರೋಧವಾಗಿ ಆಯ್ಕೆ ಆಗಿದ್ದಾರೆ.

ಕೊಪ್ಪ: ಕಾಡುಕೋಣ ದಾಳಿ: ಓರ್ವನಿಗೆ ಗಂಭೀರ ಗಾಯ!

ಜಯಪುರ: ತೋಟಕ್ಕೆ ನೀರು ಹಾಯಿಸಲು ಹೋಗಿದ್ದ ಶಿವಪ್ಪಗೌಡ ಎನ್ನುವ ರೈತರೊಬ್ಬರ ಮೇಲೆ ದಾಳಿ ನಡೆಸಿದ ಘಟನೆ ನಡೆದಿದೆ. L ಕಾಡುಕೋಣವು ಹಿಂಬದಿಯಿಂದ ಬಂದು ದಾಳಿ ನಡೆಸಿದೆ. ಪರಿಣಾಮವಾಗಿ ಶಿವಪ್ಪಗೌಡರ ತೊಡೆ ಹಾಗೂ ಬೆನ್ನಿನ ಭಾಗದಲ್ಲಿ ತೀವ್ರತರವಾಗಿ ಪೆಟ್ಟಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಮಣಿಪಾಲ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ನರಸಿಂಹರಾಜಪುರ: ಪ್ರತ್ಯಕ್ಷಗೊಂಡ ಒಂಟಿ ಸಲಗದ ಭಯ!

ನರಸಿಂಹರಾಜಪುರ: ಬಾಳೆಹೊನ್ನೂರು ವಲಯ ಅರಣ್ಯ ವ್ಯಾಪ್ತಿಯ ಹುಯಿಗೆರೆ-ಅಂಡವಾನೆ ರಸ್ತೆಯಲ್ಲಿ ಒಂಟಿ ಸಲಗ ರಸ್ತೆ ದಾಟುತ್ತಿರುವ ದೃಶ್ಯ ಕಂಡು ಬಂದಿದ್ದು, ಸ್ಥಳೀಯರಲ್ಲಿ ಆತಂಕ ಸೃಷ್ಟಿ ಮಾಡಿದೆ. ಸ್ಥಳೀಯರು ಅದನ್ನು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಕಾಡು ಆನೆ ಓಡಾಟ: 12 ಗ್ರಾಮದಲ್ಲಿ ನಿಷೇಧಾಜ್ಞೆ

ಚಿಕ್ಕಮಗಳೂರು: ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಾಡಾನೆಗಳ ಓಡಾಟ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ, ಮುನ್ನೆಚ್ಚರಿಕೆಯ ಕ್ರಮವಾಗಿ ತಾಲ್ಲೂಕಿನ ಮೂಗ್ತಿಹಳ್ಳಿ, ವಸ್ತಾರೆ, ಮತ್ತಾವರ, ದಂಬದಹಳ್ಳಿ, ನಲ್ಲೂರು,ಕಾರೇಮನೆ, ಉಕ್ಕುಂದ, ಗಡಬನಹಳ್ಳಿ, ಜೋಳದಾಳು, ಶಿರಗುಂದ ಸೇರಿದಂತೆ 12 ಗ್ರಾಮಗಳಲ್ಲಿ ನಿಷೇಧಾಜ್ಞೆಯನ್ನು ಅಳವಡಿಸುವಂತೆ ಆಡಳಿತವು ಕಟ್ಟುನಿಟ್ಟಿನ ಕ್ರಮವನ್ನು ಜಾರಿಗೊಳಿಸಿದೆ.

ತಹಸೀಲ್ದಾರರು ಹೊರಡಿಸಿರುವ ಈ ಆದೇಶದ ಪ್ರಕಾರ ಸಂಜೆ 4:00 ಗಂಟೆಯಿಂದ ಬೆಳಗಿನ 6:00 ಗಂಟೆಯವರೆಗೆ ಸಾರ್ವಜನಿಕರ ಸಂಚಾರವನ್ನು ಸಂಪೂರ್ಣವಾಗಿ ನಿಯಂತ್ರಿಸಲಾಗಿದೆ. ಇದು ಫೆಬ್ರವರಿ 26ರ ಗುರುವಾರದ ತನಕ ಜಾರಿಯಲ್ಲಿರುತ್ತದೆ ಎಂದು ಸಂಬಂಧಿತ ಅಧಿಕಾರಿಗಳು ತಿಳಿಸಿದ್ದಾರೆ.

ಇತ್ತೀಚೆಗೆ ಹುಣಸೆಹಳ್ಳಿ ಗ್ರಾಮದಲ್ಲಿ ಕಾಡಾನೆ ದಾಳಿಗೆ ಕಾಫಿ ತೋಟದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಯಲ್ಲಪ್ಪ ಮತ್ತು ಅದೇ ತೋಟದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಹೊಸಪೇಟೆ ಮೂಲದ ಬೋರಮ್ಮ ಎನ್ನುವ ಮಹಿಳೆಯು ಸಾವನ್ನಪ್ಪಿದ್ದರು. ಇದಾದ ಬಳಿಕ ಅರಣ್ಯ ಇಲಾಖೆಯು ಈ ಸಂಗತಿಯನ್ನು ಗಂಭೀರವಾಗಿ ಪರಿಗಣಿಸಿ ಕಾರ್ಯಾಚರಣೆಯನ್ನು ನಡೆಸುವುದರ ಮೂಲಕ ‘ಕಿಲ್ಲರ್ ಸಲಗ’ ಎಂದು ಗುರುತಿಸಿಕೊಂಡಿದ್ದ ಕಾಡಾನೆಯನ್ನು ಸೆರೆಹಿಡಿದಿದ್ದರು.

ಇದರ ನಂತರವೂ ಚಿಕ್ಕೊಳಲೆ ಅರಣ್ಯ ಪ್ರದೇಶದಲ್ಲಿ ಮತ್ತೆರಡು ಕಾಡಾನೆಗಳು ವಾಸ್ತವ್ಯ ಹೂಡಿರುವುದು ಆತಂಕಕ್ಕೆ ಕಾರಣವಾಗಿದೆ. ಇದಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆಯು ಅವುಗಳ ಚಲನವಲನಗಳ ಮೇಲೆ ಗಮನಹರಿಸಿದ್ದಾರೆ ಎನ್ನುವ ಸಂಗತಿ ತಿಳಿದುಬಂದಿದೆ.

ದೇವಂಗಿ ಬಳಿ ಭೀಕರ ಅಪಘಾತ: ಓರ್ವ ಮಣಿಪಾಲಕ್ಕೆ

ತೀರ್ಥಹಳ್ಳಿ ತಾಲೂಕು ದೇವಂಗಿ ಸಮೀಪ ಮಳೂರಿನಲ್ಲಿ ಭೀಕರ ಅಪಘಾತ ಕಾರು ಬೈಕು ನಡುವೆ ಸಂಭವಿಸಿದೆ. ಕಾರು ಬೈಕ್ ನಡುವೆ ಮುಖಾಮುಖಿ ಆಗಿದ್ದು ಸವಾರನಿಗೆ ತಲೆ ಹಾಗೂ ಕಾಲು ಮುರಿದಿದ್ದು ಕಿವಿ ಓಪನ್ ಆಗಿದ್ದು ಮಣಿಪಾಲ ಆಸ್ಪತ್ರೆಯ ನಿಗಾ ಘಟಕದಲ್ಲಿ ಇಡಲಾಗಿದೆ.

Categories
ತೀರ್ಥಹಳ್ಳಿ ಮಲ್ನಾಡ್ ಶಿವಮೊಗ್ಗ ಹೊಸನಗರ

ಯಡೂರು ಕ್ರಿಕೆಟ್ ಲೀಗ್ ರಂಗು: ಮಾದರಿಯಾದ ಟೂರ್ನಿ!

ಯಡೂರು ಕ್ರಿಕೆಟ್ ಲೀಗ್ ರಂಗು: ಮಾದರಿಯಾದ ಟೂರ್ನಿ!
– 2 ದಿನಗಳ ಕಾಲ ಕ್ರಿಕೆಟ್ ಮಹಾ ಹಬ್ಬ: ಆಟದ ಜತೆ ಸಮಾಜಸೇವೆ
– ಯಡೂರಿಗೆ ಬರಲಿದ್ದಾರೆ ಗಣ್ಯರ ದಂಡು: ಸರ್ವರಿಗೂ ಸ್ವಾಗತ

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಹೊಸನಗರ/ತೀರ್ಥಹಳ್ಳಿ: ಹೊಸನಗರ ತೀರ್ಥಹಳ್ಳಿ ತಾಲೂಕುಗಳ ಗಡಿ ಭಾಗ ಯಡೂರಿನಲ್ಲಿ ಯಡೂರು ಕ್ರಿಕೆಟ್ ಲೀಗ್ ಸೀಸನ್ 8 ಫೆ. 21, 22ರಂದು ಸುಳುಗೋಡು-ಯಡೂರು ಗ್ರಾಮದ ವಿ.ಟಿ. ಮೈದಾನದಲ್ಲಿ ನಡೆದಿದ್ದು, ಅತ್ಯಂತ ಯಶಸ್ವಿಯಾಗಿ ನಡೆಯಿತು. ಯಡೂರು ಸುಳುಗೋಡು ಗ್ರಾಮ ಪಂಚಾಯತ್ ಅನ್ನು ಹೊಸನಗರ ತಾಲೂಕಿನಿಂದ ತೀರ್ಥಹಳ್ಳಿ ತಾಲೂಕಿಗೆ ಸೇರಿಸಿ ಎಂಬ ಅಗ್ರಹ ಇದೇ ವೇದಿಕೆಯಲ್ಲಿ ವ್ಯಕ್ತವಾಯಿತು.

ಫೆ. 21ರ ಶನಿವಾರ ಟೂರ್ನಿಯನ್ನು ಉದ್ಘಾಟನೆ ಮಾಡಲಾಯಿತು. ಎರಡು ದಿನಗಳ ವೇದಿಕೆ ಕಾರ್ಯಕ್ರಮ ಅತ್ಯಂತ ಅರ್ಥಪೂರ್ಣವಾಗಿ ನಡೆದಿದ್ದು, ಭಾಗವಹಿಸಿದ ಎಲ್ಲರೂ ವೈ.ಸಿ.ಎಲ್ ತಂಡದ ಸಾಮಾಜಿಕ ಸೇವೆ ಬಗ್ಗೆ ಮೆಚ್ಚುಗೆ ಮಾತನಾಡಿದರು. ಉದ್ಘಾಟನೆ ವೇಳೆ ಸತೀಶ್ ಈರೇಗೌಡ, ಡಾಕ್ಟರ್ ಸುನೀಲ್ , ಶ್ರುತಿ ಡಾಕಪ್ಪ, ಲೋಹಿತ್ಇದ್ದರು.

ಸಮಾರೋಪದಲ್ಲಿ ಊರಿನ ಪ್ರಮುಖರಾದ ಭಾಸ್ಕರ ಜೋಯ್ಸ, ಶಂಕರಪ್ಪ ಗೌಡ, ಸಹ್ಯಾದ್ರಿ ಪಾಲಿಟೆಕ್ನಿಕ್ ಅನಿತಾ ನಾಗರಾಜ್, ವಕೀಲ ಶಶಾಂಕ ಕೊಳವಾಡಿ, ಉದ್ಯಮಿಗಳಾದ ಆದಿತ್ಯ ಕಿಮ್ಮನೆ, ಯುವ ಸಹಕಾರಿ ಅಜಿತ್ ಗೌಡ, ಕೃಷಿಕರಾದ ಮೂರ್ತಿಗೌಡ , ರಾಘವೇಂದ್ರ ( ನಮ್ಮೂರ್ ಎಕ್ಸ್ಪ್ರೆಸ್ ಮುಖ್ಯಸ್ಥರು ), ಶ್ರುತಿ ಡಾಕಪ್ಪ ನ್ಯೂಸ್ 18,  ರಾಜುಗೌಡ ಕೋಣಂದೂರು, ಕಲ್ಪನಾ ಖುಷಿ, HG, ಡಾ ಸುನೀಲ್, ಡಾ ಪ್ರತೀಕ್, ಸಂದೀಪ್ ಈಚಲಬೈಲ್, ಅನಿಲ್ ಗೋವಿನ ಹಳ್ಳಿ, YCL ನ ಹತ್ತು ತಂಡದ ಮಾಲೀಕರು ಹಾಜರಿದ್ದರು. ಆಯೋಜಕರಾದ ಪ್ರೇಮ್ ಯಡೂರು, ಸುಂದರೇಶ್ ಯಡೂರು, ಚಿದಾನಂದ್, ವಿನಯ್ ಸೇರಿ ಸರ್ವರೂ ಇದ್ದರು.

ಸಾಧಕರಿಗೆ ಸನ್ಮಾನ: ಸಾಂಸ್ಕೃತಿಕ ಕಾರ್ಯಕ್ರಮ

ಪ್ರತಿಷ್ಠಿತ ರೋಲ್ಸ್ ರಾಯ್ ಕಂಪನಿಯಲ್ಲಿ ಕೆಲಸ ಪಡೆದುಕೊಂಡ ಹೆಮ್ಮೆಯ ಕನ್ನಡತಿ ಕುಮಾರಿ ರಿತುಪರ್ಣ ಸುರೇಶ್, ಎಸ್ ಎಸ್ ಎಲ್ ಸಿ ಯಲ್ಲಿ ರಾಜ್ಯಕ್ಕೆ 5ನೇ ಸ್ಥಾನವನ್ನು ಪಡೆದುಕೊಂಡ ಬಂಗ್ಲಗಲ್ಲು ಕುಮಾರಿ ನಿಧಿ ಬಿ.ಕೆ ಅವರನ್ನು ಸಮಾರೋಪ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಉಡುಪಿ ವಿ ರಾಕ್ಸ್ ತಂಡದ ನೃತ್ಯ ಕಾರ್ಯಕ್ರಮ ನಡೆಯಿತು. ಪಟಾಕಿ ಪ್ರದರ್ಶನ ಗಮನ ಸೆಳೆಯಿತು.

ಗೆದ್ದವರು ಯಾರು..?
– ಪ್ರಥಮ ಸ್ಥಾನವನ್ನು ಮಲ್ನಾಡ್ ಫಾರ್ಮರ್ಸ್ ತಂಡ
– ಎರಡನೇ ಸ್ಥಾನ ಪಡೆದ ಯಡೂರು ಲಯನ್ಸ್ ತಂಡ
– ಮೂರನೇ ಸ್ಥಾನ ಪಡೆದ ಲಚ್ಚಿ ಬ್ರದರ್ಸ್ ತಂಡ
– ನಾಲ್ಕನೇ ಸ್ಥಾನ ಪಡೆದ ಹನಿ ಸ್ಟ್ರೈಕರ್ ತಂಡ

ಅಚ್ಚುಕಟ್ಟಿನ ಆಯೋಜನೆಗೆ ಹೆಸರು!

ಕ್ರಿಕೆಟ್ ಜತೆಗೆ ಸಾಮಾಜಿಕ ಸೇವೆ ಕೆಲಸ ಮಾಡುವ ಕೆಲಸವನ್ನು ಈ ಯಡೂರು ಹುಡುಗರು 8 ವರ್ಷದಿಂದ ಮಾಡಿಕೊಂಡು ಬಂದಿದ್ದಾರೆ. ಬರೀ ಕ್ರಿಕೆಟ್ ಸೀಮಿತವಾಗದೆ ಅನೇಕ ಜನಪರ ಕೆಲಸಗಳನ್ನು ಮಾಡುತ್ತಿದ್ದಾರೆ. ಯಡೂರು ಪ್ರೇಮ್, ಸುಂದರೇಶ್ ಸೇರಿ 25ಕ್ಕೂ ಹೆಚ್ಚು ಮಂದಿ ಸ್ನೇಹಿತರು ಈ ಕೆಲಸ ಮಾಡುತ್ತಿದ್ದಾರೆ.

Categories
ಉಡುಪಿ ಕರಾವಳಿ ಕಾರ್ಕಳ

ರಾಷ್ಟ್ರ ಮಟ್ಟದಲ್ಲಿ ಕ್ರಿಯೇಟಿವ್ ವಿದ್ಯಾರ್ಥಿ ನಂಬರ್ 1

ರಾಷ್ಟ್ರ ಮಟ್ಟದಲ್ಲಿ ಕ್ರಿಯೇಟಿವ್ ವಿದ್ಯಾರ್ಥಿ ನಂಬರ್ 1
– ಜೆಇಇ ಪೇಸ್ 1 ಪರೀಕ್ಷೆಯಲ್ಲಿ ನಾಗದೇವ್ ಎಂ ಜಿ ದೇಶಕ್ಕೆ ಪ್ರಥಮ
– ಜೆಇಇ-ಬಿ ಪ್ಲಾನಿಂಗ್ ನಲ್ಲಿ ಸಾಧನೆ: ಶುಭಾಶಯಗಳು
– ರಾಜ್ಯದಲ್ಲಿ ಮಾತ್ರವಲ್ಲ… ದೇಶದಲ್ಲೂ ಕ್ರಿಯೇಟಿವ್ ಹೆಸರು

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಕಾರ್ಕಳ: ಕ್ರಿಯೇಟಿವ್ ಕಾಲೇಜಿನ ವಿದ್ಯಾರ್ಥಿ ಇದೀಗ ರಾಷ್ಟ್ರ ಮಟ್ಟದಲ್ಲಿ ಜೆಇಇಯಲ್ಲಿ ಸ್ಥಾನ ಪಡೆಯುವ ಮೂಲಕ ರಾಷ್ಟ್ರ ಮಟ್ಟದಲ್ಲಿ ಕ್ರಿಯೆಟಿವ್ ಪಿಯು ಕಾಲೇಜು ಸಾಧನೆ ಮಾಡಿದೆ.

ನಂಜನಗೂಡಿನ ಗುರುಸ್ವಾಮಿ ಎಂ.ಡಿ ಹಾಗೂ ಶಿಕ್ಷಕಿಯಾಗಿ ಸೇವೆಯನ್ನು ಸಲ್ಲಿಸುತ್ತಿರುವ ನೇತ್ರಾವತಿಯವರ ಪುತ್ರ ನಾಗದೇವ್ ಎಂ ಜಿ ಅವರು ಜೆಇಇ ಪೇಸ್ 1 ಪರೀಕ್ಷೆಯಲ್ಲಿ ಶೇಕಡ 99.45 ರಷ್ಟು ಹಾಗೂ ಜೆಇಇ-ಬಿ ಪ್ಲಾನಿಂಗ್ ನಲ್ಲಿ ಶೇಕಡ 99.97 ಅಂಕಗಳನ್ನು ಗಳಿಸುವುದರ ಜೊತೆಗೆ, ಅಖಿಲ ಭಾರತ ಮಟ್ಟದಲ್ಲಿ ಇಡಬ್ಲುಎಸ್ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಪಡೆದುಕೊಳ್ಳುವುದರ ಮೂಲಕ ಕ್ರಿಯೇಟಿವ್ ವಿದ್ಯಾಸಂಸ್ಥೆಗೆ ಕೀರ್ತಿಯನ್ನು ತಂದಿದ್ದು, ಸಂಸ್ಥೆಯ ಸಂಸ್ಥಾಪಕರು, ಉಪನ್ಯಾಸಕರಲ್ಲಿ ಹೆಮ್ಮೆಯನ್ನು ಮೂಡಿಸಿದ್ದಾರೆ.

ವೈಜ್ಞಾನಿಕ ಸಂಶೋಧನೆಯನ್ನು ಕೈಗೊಳ್ಳುವಲ್ಲಿ ವಿಶೇಷ ಆಸಕ್ತಿಯನ್ನು ಹೊಂದಿರುವ ನಾಗದೇವ್ ಅವರ ಯಶಸ್ಸಿನ ಪಯಣ ಮುಂದುವರಿಯಲಿ ಎಂದು ಸಂಸ್ಥೆಯ ಮುಖ್ಯಸ್ಥರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಕ್ರಿಯೇಟಿವ್ ಕಾಲೇಜು ರಾಜ್ಯದ ಪ್ರತಿಷ್ಠಿತ ಕಾಲೇಜುಗಳಲ್ಲಿ ಒಂದಾಗಿದ್ದು, ಶೈಕ್ಷಣಿಕ, ಸಾಂಸ್ಕೃತಿಕ, ಕ್ರೀಡೆ, ಸ್ಪರ್ಧಾತ್ಮಕ ಪರೀಕ್ಷೆ ಎಲ್ಲದರಲ್ಲೂ ರಾಜ್ಯದಲ್ಲಿ ಮುಂಚೂಣಿಯಲ್ಲಿದೆ. ಕಾರ್ಕಳ, ಉಡುಪಿ, ಹಾಸನ, ಶಿವಮೊಗ್ಗದಲ್ಲಿ ಕ್ರಿಯೇಟಿವ್ ಶಾಖೆ ಇದೆ.

Categories
jathre ತೀರ್ಥಹಳ್ಳಿ ಮಲ್ನಾಡ್ ಶಿವಮೊಗ್ಗ

ತೀರ್ಥಹಳ್ಳಿ ಮಾರಿಕಾಂಬಾ ಜಾತ್ರೆಗೆ ಇಂದು ತೆರೆ!

ತೀರ್ಥಹಳ್ಳಿ ಮಾರಿಕಾಂಬಾ ಜಾತ್ರೆಗೆ ಇಂದು ತೆರೆ!
– ಪ್ರತಿ ಸಾವಿರಾರು ಜನರ ಭೇಟಿ: ಇಂದು ಮೆರವಣಿಗೆ
– ಗೊಂಬೆ ಪೂಜೆ: ರಾತ್ರಿ ಸಾರ್ವಜನಿಕ ಭೋಜನ

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ತೀರ್ಥಹಳ್ಳಿ: ಶ್ರೀ ಮಾರಿಕಾಂಬೆ ಜಾತ್ರೆಯ ಕೊನೆಯ ದಿನಕ್ಕೆ ಬಂದಿದೆ. ಮಂಗಳವಾರ ಸಂಜೆ ಎಣ್ಣೆ ಭಂಡಾರ ಪೂಜೆ ಸಾಂಪ್ರದಾಯದಂತೆ ನಾಡ್ತಿಯ ಮಾರಿಕಾಂಬಾ ಸಭಾ ಭವನದಲ್ಲಿ ಗೊಂಬೆಪೂಜೆ, ಮಾಡಿ ಮೆರವಣಿಗೆ ಮೂಲಕ ದೇವಸ್ಥಾನದ ಆವರಣದಲ್ಲಿ ಗೊಂಬೆಯನ್ನು ಗದ್ದುಗೆಯಲ್ಲಿ ಪ್ರತಿಷ್ಠಾಪಿಸಲಾಯಿತು.

ದೇವಸ್ಥಾನ ಆಡಳಿತ ಮಂಡಳಿ ಸದಸ್ಯರ ಜತೆಗೆ ಸಾವಿರಾರು ಭಕ್ತರು ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಬೆಳಿಗ್ಗೆಯಿಂದಲೂ ವಿಶೇಷ ಪೂಜೆ ಮಾರಿ ಗೊಂಬೆಗೆ ಮಾಡಲಾಯಿತು.. ಈ ಸಂದರ್ಭದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಸೇರಿ ಪೂಜೆ ಸಲ್ಲಿಸಿ, ದೇವಿಯ ಕೃಪೆಗೆ ಪಾತ್ರರಾಗುತ್ತಾರೆ. ಇಂದು ಮಧ್ಯಾಹ್ನ ಮಾರಿ ಗೊಂಬೆಯನ್ನು ರಾಜಭೀದಿ ಉತ್ಸವದೊಂದಿಗೆ ಸಂಜೆ ಕುಶಾವತಿಯ ತುಂಗಾ ನದಿಯಲ್ಲಿ ವಿಸರ್ಜನೆ ಮಾಡಲಾಗುವುದು. ನಂತರ ನಾಡ್ತಿಯ ಶ್ರೀ ಮಾರಿಕಾಂಬ ಸಭಾಭವನದಲ್ಲಿ, ಎಲ್ಲಾ ಭಕ್ತಾದಿಗಳಿಗೆ ಭೋಜನದ ವ್ಯವಸ್ಥೆ ಇರುತ್ತದೆ.

ಈ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಿಗೆ ಅತಿಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಬಂದು ಅಮ್ಮನ ಪ್ರಸಾದ ಸ್ವೀಕರಿಸಿ ಶ್ರೀದೇವಿಯ ಕೃಪೆಗೆ ಪಾತ್ರರಾಗಬೇಕೆಂದು ಸಮಿತಿಯು ಕೇಳಿಕೊಂಡಿದೆ.

Categories
ಉಡುಪಿ ಕರಾವಳಿ ಕುಂದಾಪುರ ಪುತ್ತೂರು

ಕರಾವಳಿ ಟಾಪ್ ನ್ಯೂಸ್

ಕರಾವಳಿ ಟಾಪ್ ನ್ಯೂಸ್

• ಪುತ್ತೂರು: ಹಣ ವರ್ಗಾವಣೆ ವಂಚನೆ
• ಬಂಟ್ವಾಳ: ಹೃದಯಾಘಾತಕ್ಕೆ ಯುವಕ ಬಲಿ
• ಸುಳ್ಯ: ಕಾರಿನ ಮೇಲೆ ಉರುಳಿದ ಮರ
• ಉಡುಪಿ: ಬಾಲಕನ ವೀಡಿಯೋ ಚಿತ್ರೀಕರಣ: ಅರೆಸ್ಟ್!

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಪುತ್ತೂರು: ಕೆಯ್ಯೂರು ಗ್ರಾಮದ ನಿವಾಸಿಯಾದ ಹಸೈನಾರ್ ಎನ್ನುವವರು ಬ್ಯಾಂಕ್ ಆಫ್ ಬರೋಡ ಶಾಖೆಯಲ್ಲಿ ಉಳಿತಾಯ ಖಾತೆಯನ್ನು ಹೊಂದಿದ್ದು, ಅದರಿಂದ ಬೇರೊಂದು ಖಾತೆಗೆ ಹಣ ವರ್ಗಾವಣೆಯಾದ ಘಟನೆ, ನಡೆದಿದೆ. ಫೆಬ್ರವರಿ 9ರಂದು ಹಸೈನಾರ್ ಖಾತೆಯಿಂದ 49.೦೦೦ ಹಾಗೂ ಕೆಲವು ದಿನಗಳ ಹಿಂದೆ 25.600 ವರ್ಗಾವಣೆಗೊಂಡಿರುವ ಕುರಿತು ಮೊಬೈಲ್ ಸಂದೇಶ ಬಂದಿದೆ. ಹಸೈನಾರ್ ಬ್ಯಾಂಕ್ ಗೆ ತೆರಳಿ ಇದರ ಬಗ್ಗೆ ವಿಚಾರಿಸಿದಾಗ ಒಟ್ಟು 75.599 ರೂಪಾಯಿಯಷ್ಟು ಹಣ ಅಪರಿಚಿತನ ಖಾತೆಗೆ ವರ್ಗಾವಣೆಗೊಂಡಿರುವುದು ಬೆಳಕಿಗೆ ಬಂದಿದೆ.

ತಕ್ಷಣ ಹಸೈನಾರ್ ಅವರು ತಮ್ಮ ಖಾತೆಯನ್ನು ಸ್ಥಗಿತಗೊಳಿಸಿದ್ದಾರೆ. ಬಳಿಕ 1930ಕ್ಕೆ ಕರೆ ಮಾಡಿ ಯಾರೋ ಅಪರಿಚಿತರು ತಮ್ಮ ಖಾತೆಯಿಂದ ಹಣವನ್ನು ವರ್ಗಾಯಿಸಿಕೊಂಡಿದ್ದಾರೆ ಅವರ ವಿರುದ್ಧ ಸೂಕ್ತ ಕ್ರಮವನ್ನು ಕೈಗೊಳ್ಳಬೇಕೆಂದು ದೂರು ನೀಡಿದ್ದಾರೆ. ಗ್ರಾಹಕರಾದ ಹಸೈನಾರ್ ಅವರು ನೀಡಿರುವ ದೂರಿನ ಆಧಾರದ ಮೇಲೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

• ಬಂಟ್ವಾಳ: ಹೃದಯಾಘಾತಕ್ಕೆ ಯುವಕ ಬಲಿ

ಬಂಟ್ವಾಳ: ಹೃದಯಾಘಾತಕ್ಕೆ ಒಳಗಾಗಿ ಯುವಕನೊಬ್ಬ ಸಾವನ್ನಪ್ಪಿರುವ ಘಟನೆ, ಕುಕ್ಕಿಪಾಡಿ ಎನ್ನುವಲ್ಲಿ ನಡೆದಿದೆ. ಮೃತ ಯುವಕನನ್ನು ಪ್ರಶಾಂತ್ ಆಚಾರ್ಯ ಎಂದು ಹೇಳಲಾಗಿದೆ. ಸಿದ್ಧಕಟ್ಟೆಯ ಯಂತ್ರೋಪಕರಣ ಅಂಗಡಿಯೊಂದರಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಪ್ರಶಾಂತ್ ಆಚಾರ್ಯ ಅವರು ಭಾನುವಾರ ರಜಾ ದಿನವಾದ್ದರಿಂದ ಅರಂತಾಡಿಯ ಮನೆಯೊಂದರಲ್ಲಿ ಕೃಷಿ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಈ ಸಂದರ್ಭದಲ್ಲಿ ಅವರಿಗೆ ಎದೆ ನೋವು ಕಾಣಿಸಿಕೊಂಡಿತು ಎನ್ನಲಾಗಿದೆ.

ತಕ್ಷಣ ಅವರನ್ನು ಸಿದ್ಧಕಟ್ಟೆಯ ವೈದ್ಯರ ಸಲಹೆಯ ಮೇರೆಗೆ ಮೂಡುಬಿದಿರೆಯ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಆಸ್ಪತ್ರೆಗೆ ತಲುಪುತ್ತಿದ್ದಂತೆ ತಪಾಸಣೆ ನಡೆಸಿದ ವೈದ್ಯರು ಪ್ರಶಾಂತ್ ಆಚಾರ್ಯ ಅವರು ಆಗಲೇ ಮೃತಪಟ್ಟಿದ್ದಾರೆ ಎಂದು ಘೋಷಿಸಿದರು ಎನ್ನುವ ಸಂಗತಿ ತಿಳಿದುಬಂದಿದೆ.

• ಸುಳ್ಯ: ಕಾರಿನ ಮೇಲೆ ಉರುಳಿದ ಮರ

ಸುಳ್ಯ: ಚಲಿಸುತ್ತಿದ್ದ ಕಾರಿನ ಮೇಲೆ ಮರವೊಂದು ಉರುಳಿ ಬಿದ್ದ ಘಟನೆ, ಸೋಮವಾರದಂದು ಬೆಂಗಮಲೆಯಲ್ಲಿ ನಡೆದಿದೆ. ಸುಳ್ಯದ ಬ್ಯಾಂಕ್ ಮ್ಯಾನೇಜರ್ ಆಗಿರುವ ಉತ್ಸವ್ ಚಕ್ರವರ್ತಿ ಮತ್ತು ಅವರೊಂದಿಗೆ ಮತ್ತೊಬ್ಬ ವ್ಯಕ್ತಿ ಸುಳ್ಯದ ಉಮ್ಮರ್ ಅವರಿಗೆ ಸೇರಿದ ಬಾಡಿಗೆ ಸ್ವಿಫ್ಟ್ ಡಿಸೈರ್ ಕಾರಿನಲ್ಲಿ ಸಾಲ ವಸೂಲಾತಿಗಾಗಿ ಪಂಜಾದತ್ತ ತೆರಳುತ್ತಿದ್ದ ಸಂದರ್ಭದಲ್ಲಿ ಈ ಸನ್ನಿವೇಶ ಎದುರಾಗಿದೆ.

ಪರಿಣಾಮವಾಗಿ ಕಾರು ಸಂಪೂರ್ಣವಾಗಿ ನುಜ್ಜುಗುಜ್ಜಾಗಿದ್ದು, ಇಬ್ಬರು ವ್ಯಕ್ತಿಗಳು ಸಣ್ಣಪುಟ್ಟ ಗಾಯಗಳೊಂದಿಗೆ ಕೂದಲೆಳೆಯ ಅಂತರದಿಂದ ಪಾರಾಗಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ.ರಸ್ತೆಯ ಮಧ್ಯದಲ್ಲಿ ಮರ ಬಿದ್ದ ಕಾರಣದಿಂದಾಗಿ ಅರ್ಧ ಗಂಟೆ ಕಾಲ ಇತರ ವಾಹನಗಳ ಸಂಚಾರದಲ್ಲಿ ಅಡಚಣೆಯುಂಟಾಯಿತು ಎನ್ನಲಾಗಿದೆ. ನಂತರ ಸ್ಥಳೀಯರು ಒಗ್ಗೂಡಿ ಮರವನ್ನು ತೆರವುಗೊಳಿಸಿ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು ಎನ್ನುವ ಸಂಗತಿ ತಿಳಿದುಬಂದಿದೆ.

• ಉಡುಪಿ: ಬಾಲಕನ ವೀಡಿಯೋ ಚಿತ್ರೀಕರಣ; ಇಬ್ಬರ ಬಂಧನ

ಉಡುಪಿ: ಕಟಿಂಗ್ ಶಾಪ್ ಒಂದರಲ್ಲಿ ಬಾಲಕನ ವೀಡಿಯೋ ಚಿತ್ರೀಕರಿಸಿ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟ ಘಟನೆ, ಕಂಡೂರು ಪೇಟೆಯಲ್ಲಿ ನಡೆದಿದೆ. ಬಿಹಾರ ಮೂಲದ ಬಾಲಕನೊಬ್ಬ ಕಟಿಂಗ್ ಶಾಪ್ ಗೆ ಬಂದಿದ್ದ ಸಂದರ್ಭದಲ್ಲಿ ಹೇಳಿರುವ ವಿಷಯವನ್ನು ವೀಡಿಯೋ ಮಾಡಿಕೊಂಡು, ಸಾರ್ವಜನಿಕರನ್ನು ಗಲಾಟೆಗೆ ಪ್ರಚೋದಿಸುವ ಉದ್ದೇಶದಿಂದ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ ಬಾಲಕ ಕೂಡ ಕಾನೂನು ಸಂಘರ್ಷಕ್ಕೆ ಒಳಗಾದವನು ಎನ್ನುವ ಸಂಗತಿ ತಿಳಿದುಬಂದಿದೆ.

ಈ ಹಿನ್ನೆಲೆಯಲ್ಲಿ ಬಾಲಕನ ತಂದೆಯು ಕುಂದಾಪುರ ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದಾರೆ. ಮತ್ತೊಂದೆಡೆ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಕಟಿಂಗ್ ಶಾಪ್ ಬಳಿ 20 ರಿಂದ 30 ಜನ ಗುಂಪುಗೂಡಿ ಬೆದರಿಕೆ ಹಾಕಿರುವುದರ ಕುರಿತು ಕಟಿಂಗ್ ಶಾಪ್ ನ ಮಾಲೀಕರಾದ ಶಶಾಂಕ್ ಭಂಡಾರಿ ಕೂಡ ದೂರು ನೀಡಿದ್ದಾರೆ. ಪೊಲೀಸರು ದೂರಿನ ಆಧಾರದ ಮೇಲೆ ವೀಡಿಯೋ ಚಿತ್ರೀಕರಿಸಿದ ಶಶಾಂಕ್ ಭಂಡಾರಿ ಮತ್ತು ಪ್ರಮೋದ್ ಡಿಸೋಜಾ ಅವರ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಂಡು, ಅವರನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎನ್ನುವ ಮಾಹಿತಿ ಲಭಿಸಿದೆ.

Categories
jathre ಮಲ್ನಾಡ್ ಶಿವಮೊಗ್ಗ

ಶಿವಮೊಗ್ಗ ಮಾರಿ ಜಾತ್ರೆ: ದರ್ಶನಕ್ಕೆ ಕಿಲೋ ಮೀಟರ್‌ ಕ್ಯೂ!

ಶಿವಮೊಗ್ಗ ಮಾರಿ ಜಾತ್ರೆ: ದರ್ಶನಕ್ಕೆ ಕಿಲೋ ಮೀಟರ್‌ ಕ್ಯೂ!
– ಗಮನ ಸೆಳೆದ ದೇವಿಯ ಅಲಂಕಾರ: ಜನವೋ ಜನ
– ಭಾರೀ ಪೊಲೀಸ್ ಬಂದೋಬಸ್ತ್: ಸರ್ವರಿಗೂ ಸ್ವಾಗತ

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಶಿವಮೊಗ್ಗ: ಕೋಟೆ ಶ್ರೀ ಮಾರಿಕಾಂಬಾ ದೇವಿ ಜಾತ್ರೆಗೆ ವಿದ್ಯುಕ್ತ ಚಾಲನೆ ಸಿಕ್ಕಿದೆ. ದೇವಿಯ ಅಲಂಕಾರ ಗಮನ ಸೆಳೆದಿದೆ. ಇಡೀ ಶಿವಮೊಗ್ಗದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಇಡೀ ಶಿವಮೊಗ್ಗದಲ್ಲಿ ಫ್ಲೆಕ್ಸ್, ಬ್ಯಾನರ್ ತುಂಬಿ ಹೋಗಿವೆ. ದೇವರ ಅಲಂಕಾರ ಗಮನ ಸೆಳೆದಿದೆ. ಪ್ರಥಮ ಪೂಜೆ ನೆರವೇರುತ್ತಿದ್ದಂತೆ ಭಕ್ತರು ಘೋಷಣೆಗಳನ್ನು ಕೂಗಿ, ದೇವಿಗೆ ನಮಸ್ಕರಿಸಿದರು. ಬೆಳಗ್ಗೆಯಿಂದ ಗಾಂಧಿ ಬಜಾರ್‌ನಲ್ಲಿ ಮಾರಿಕಾಂಬ ದೇವಿ ದರ್ಶನ ಆರಂಭವಾಗಿದೆ.

ಗಾಂಧಿ ಬಜಾರ್ ತಾಯಿಯ ತವರು ಮನೆ ಎಂಬ ನಂಬಿಕೆ ಇದೆ. ಈ ಹಿನ್ನೆಲೆ ಗಾಂಧಿ ಬಜಾರ್‌ನಲ್ಲಿ ಮಂಟಪ ನಿರ್ಮಿಸಿ ಶ್ರೀ ಮಾರಿಕಾಂಬ ದೇವಿಯನ್ನು ಪ್ರತಿಷ್ಠಾಪಿಸಲಾಗಿದೆ. ಪ್ರಥಮ ಪೂಜೆಗೂ ಮುನ್ನ ಪರದೆ ಸರಿಸಲಾಯಿತು. ಈ ಸಂದರ್ಭಭಕ್ತರು ಘೋಷಣೆಗಳನ್ನು ಮೊಗಳಗಿಸಿದರು.ಬಿಬಿ ರಸ್ತೆಯ ಬ್ರಾಹ್ಮಣ ಸಮಾಜದ ನಾಡಿಗರ ಕುಟುಂಬವರು ಕೋಟೆ ಶ್ರೀ ಮಾರಿಕಾಂಬ ದೇವಿಗೆ ಪ್ರಥಮ ಪೂಜೆ ಸಲ್ಲಿಸಿದರು.

ಮಂಗಳಾರತಿ ಬೆಳಗುತ್ತಿರುವುದನ್ನು ಕಂಡು ಭಕ್ತರು ಪುನೀತರಾದರು. ದೇವಿಗೆ ಪ್ರಾರ್ಥನೆ ಸಲ್ಲಿಸಿದರು ತಾಯಿಯ ತವರು ಗಾಂಧಿ ಬಜಾರ್‌ನಲ್ಲಿ ದರ್ಶನ ಪಡೆಯಲು ಭಕ್ತ ಸಾಗರ ಹರಿದು ಬಂದಿದೆ. ಬೆಳಗಿನ ಜಾವದಿಂದಲೇ ಸರತಿಯಲ್ಲಿ ನಿಂತಿರುವ ಜನರು, ದೇವಿಯ ದರ್ಶನ ಪಡೆಯುತ್ತಿದ್ದಾರೆ. ಜನರಿಗೆ ಗೊಂದಲ ಆಗದಂತೆ ತಡೆಯಲು ಸ್ವಯಂ ಸೇವಕರು, ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ರಾಷ್ಟ್ರ ಮಟ್ಟದ ಟಗರು ಕಾಳಗ ಗಮನ ಸೆಳೆದಿದೆ.

Categories
ತೀರ್ಥಹಳ್ಳಿ ಮಲ್ನಾಡ್ ಶಿವಮೊಗ್ಗ ಸಾಗರ

ಕಾಡು ಪ್ರಾಣಿ ಡಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಸಾವು!

ಕಾಡು ಪ್ರಾಣಿ ಡಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಸಾವು!
– ಮಗ ಅಪಘಾತಕ್ಕೆ ಬಲಿ, ಮಗನ ಹೆಣ ನೋಡಿ ತಂದೆಯೂ ಆತ್ಮಹತ್ಯೆ!
– ತೀರ್ಥಹಳ್ಳಿ – ಹೊಸ ನಗರ ಗಡಿಯಲ್ಲಿ ನಡೆದ ದುರಂತ ಘಟನೆ

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಹೊಸ ನಗರ: ಹೊಸ ನಗರ ತಾಲೂಕಿನ ಯಡೂರು ಸಮೀಪದ ಕುಂಬ್ರಿ ಗದ್ದೆಯಲ್ಲಿ ಭಾನುವಾರ ರಾತ್ರಿ ಕಾಡು ಪ್ರಾಣಿಯೊಂದು ಬೈಕಿಗೆ ಡಿಕ್ಕಿ ಹೊಡೆದ ಘಟನೆ ಪರಿಣಾಮ ಯುವಕನೊಬ್ಬ ಮೃತಪಟ್ಟ ದುರಂತ ಸಂಭವಿಸಿದೆ. ಮಗನ ಶವ ನೋಡಿದ ತಂದೆಯೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಹೋಟೆಲ್ ಅಲ್ಲಿ ಕೆಲಸ ಮಾಡಿಕೊಂಡಿದ್ದ ವರದರಾಜ ಎಂಬ ಯುವಕ ಭಾನುವಾರ ತಡ ರಾತ್ರಿ ತೀರ್ಥಹಳ್ಳಿಯಿಂದ ಕೆಲಸ ಮನೆಗೆ ತೆರಳುವ ವೇಳೆ ಕೌರಿ ಕಾನುಗೋಡು ಸಮೀಪ ಕಾಡು ಪ್ರಾಣಿಯೊಂದು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಯಿಂದ ಬಿದ್ದು ತಲೆಗೆ ಗಂಭೀರ ಗಾಯವಾಗಿ ಪ್ರಾಣ ಬಿಟ್ಟಿದ್ದು ಮಗನ ನೋಡಲು ಬಂದ ತಂದೆ ಮಂಜಪ್ಪ ನಾಯ್ಕ್ ಮಗನ ಶವವನ್ನು ನೋಡಿ ಮನೆಗೆ ಹೋಗಿ ತಾನು ಕೂಡ ಮಂಗನ ಕಾಯಲೆ ಕ್ರಿಮಿನಾಶಕವನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಬಡ ಕುಟುಂಬದ ವಿವಾಹಿತನಾಗಿರುವ ವರದ ರಾಜ ಪತ್ನಿ ಹಾಗೂ 2 ವರ್ಷದ ಹೆಣ್ಣು ಮಗುವನ್ನು ಅಗಲಿರುತ್ತಾರೆ ಎಂದು ತಿಳಿದು ಬಂದಿದೆ. ಕುಟುಂಬಕ್ಕೆ ಪರಿಹಾರ ನೀಡಬೇಕು ಎಂಬ ಒತ್ತಾಯ ಕೇಳಿ ಬಂದಿದೆ. ಮೃತರು ಶಿರಸಿ ಮೂಲದವರಾಗಿದ್ದು, ಮೃತರ ಊರಿಗೆ ತೆಗೆದುಕೊಂಡು ಹೋಗಿದ್ದು, ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ.

Categories
ಉಡುಪಿ ಕರಾವಳಿ ಕುಂದಾಪುರ ಬೆಳ್ತಂಗಡಿ

ಕರಾವಳಿ ಟಾಪ್ ನ್ಯೂಸ್

ಕರಾವಳಿ ಟಾಪ್ ನ್ಯೂಸ್

• ಉಡುಪಿ: ಪೆಟ್ರೋಲ್ಗೆ ಹಾಕಿ ಬೆಂಕಿ ಹಚ್ಚಿಕೊಂಡ ಯುವಕ!
• ಬಂಟ್ವಾಳ: ಕೆರೆಯಲ್ಲಿ ವಿದ್ಯಾರ್ಥಿನಿಯ ಮೃತದೇಹ ಪತ್ತೆ
• ಉಳ್ಳಾಲ: ಕರೆಂಟ್ ಶಾಕ್ ಹೊಡೆದು ಯುವಕ ಸಾವು..!
• ಬೈಂದೂರು: ಕಾಲೇಜು ವಾಹನ ಅಪಘಾತ: ಶಾಲಾ ವಿದ್ಯಾರ್ಥಿಗಳಿಗೆ ಗಾಯ

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಉಡುಪಿ: ಯುವಕನೊಬ್ಬ ಪೆಟ್ರೋಲ್ ಸುರಿದುಕೊಂಡು, ಬೆಂಕಿ ಹಚ್ಚಿಕೊಂಡು ವಿಚಿತ್ರವಾಗಿ ವರ್ತಿಸಿದ ಘಟನೆ, ಸದಾ ಸಂಚಾರದಟ್ಟಣೆಯಿಂದ ಕೂಡಿರುವ ಉಡುಪಿಯ ಕಲ್ಸಂಕ ಜಂಕ್ಷನ್ ಬಳಿ ನಡೆದಿದೆ.‌ ಪರಿಣಾಮವಾಗಿ ಕೆಲವು ಕಾಲ ಭಯದ ವಾತಾವರಣ ಸೃಷ್ಟಿಯಾಗಿದ್ದು, ಟ್ರಾಫಿಕ್ ಪೊಲೀಸರ ಕರ್ತವ್ಯಕ್ಕೂ ಅಡಚಣೆಯುಂಟಾಯಿತು.ಈ ಹಿಂದೆ ಕೂಡ ಯುವಕ ಬಾಟಲಿಯಲ್ಲಿ ಪೆಟ್ರೋಲ್ ತುಂಬಿಸಿಕೊಂಡು ತಂದು, ಮೈಮೇಲೆ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳುವುದಾಗಿ ಕಿರುಚಿಕೊಂಡಿದ್ದು, ಆಗ ಪೊಲೀಸರು ಬಾಟಲಿಯನ್ನು ಕಸಿದುಕೊಂಡು, ಆತನನ್ನು ಪಾರು ಮಾಡಿದ್ದರು ಎನ್ನಲಾಗಿದೆ.

ಇದೀಗ ಪುನಃ ಅದೇ ರೀತಿಯ ಸನ್ನಿವೇಶ ಎದುರಾಗಿದ್ದು, ಟ್ರಾಫಿಕ್ ಪೊಲೀಸರ ಸಮಯಪ್ರಜ್ಞೆಯಿಂದ ಆಗಲಿದ್ದ ಅನಾಹುತವೊಂದು ತಪ್ಪಿದ್ದು, ಇದಕ್ಕೆ ನಿತ್ಯಾನಂದ ಒಳಕಾಡು ಅವರು ಕೂಡ ಸಹಕಾರ ನೀಡಿದರು. ಬಳಿಕ ಪೊಲೀಸರು ಯುವಕನನ್ನು ಸಮಾಧಾನಪಡಿಸಿ, ಆತನ ಊರಾದ ಗದಗಕ್ಕೆ ಕಳುಹಿಸಿಕೊಟ್ಟರು ಎನ್ನುವ ಮಾಹಿತಿ ಲಭಿಸಿದೆ. ಯುವಕನ ಈ ಹುಚ್ಚಾಟ್ಟಕ್ಕೆ ಕಾರಣವೇನೆಂಬುದು ಸ್ಪಷ್ಟವಾಗಿ ತಿಳಿದುಬಂದಿಲ್ಲ.

• ಬಂಟ್ವಾಳ: ಕೆರೆಯಲ್ಲಿ ವಿದ್ಯಾರ್ಥಿನಿಯ ಮೃತದೇಹ ಪತ್ತೆ

ಬಂಟ್ವಾಳ: ಹತ್ತನೇ ತರಗತಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯೊಬ್ಬಳು ಕೆರೆಯಲ್ಲಿ ಶವವಾಗಿ ಕಂಡುಬಂದ ಘಟನೆ, ಕೊಡಂಗಾಯಿಯಲ್ಲಿ ನಡೆದಿದೆ. ಮೃತ ಬಾಲಕಿಯನ್ನು ಮೂರುಕಜೆಯ ಮೈತ್ರೆಯಿ ಗುರುಕುಲ ಶಾಲೆಯ ವಿದ್ಯಾರ್ಥಿನಿ, ಬೆಂಗಳೂರು ಮೂಲದ ವೈಗಲಕ್ಷ್ಮೀ ಎಂದು ಗುರುತಿಸಲಾಗಿದೆ. ವೈಗಲಕ್ಷ್ಮೀ 22ರ ಭಾನುವಾರದಿಂದ ನಾಪತ್ತೆಯಾಗಿದ್ದರು. ಈ ಹಿನ್ನೆಲೆಯಲ್ಲಿ ಎಲ್ಲೆಡೆ ಹುಡುಕಾಟ ನಡೆಸಿದರೂ ಯಾವುದೇ ಸುಳಿವು ಲಭಿಸಿರಲಿಲ್ಲ. ಆದರೆ ಕಾರ್ಯಾಚರಣೆಯ ಸಂದರ್ಭದಲ್ಲಿ ಸೋಮವಾರದಂದು ಸಮೀಪದಲ್ಲಿದ್ದ ಕೆರೆಯಲ್ಲಿ ಆಕೆಯ ಮೃತದೇಹ ಪತ್ತೆಯಾಗಿದೆ.

ಮಾಹಿತಿ ಲಭಿಸುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ವಿಟ್ಲ ಠಾಣೆಯ ಪೊಲೀಸರು ಪರಿಶೀಲನೆಯನ್ನು ನಡೆಸಿದರು. ಬಾಲಕಿಯು ಕೆರೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಅನುಮಾನಿಸಲಾಗಿದೆ. ಕೆರೆಯಲ್ಲಿದ್ದ ವಿದ್ಯಾರ್ಥಿನಿಯ ಮೃತದೇಹವನ್ನು ಫ್ರೆಂಡ್ಸ್ ವಿಟ್ಲದ ಮುರುಳಿಧರ ಮತ್ತು ತಂಡದವರು ಮೇಲಕ್ಕೆ ತಂದಿದ್ದು, ಬಳಿಕ ಮರಣೋತ್ತರ ಪರೀಕ್ಷೆಗಾಗಿ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ರವಾನಿಸಲಾಯಿತು ಎನ್ನುವ ಸಂಗತಿ ತಿಳಿದುಬಂದಿದೆ. ಮರಣೋತ್ತರ ಪರೀಕ್ಷೆಯ ವರದಿಯ ನಂತರ ಇನ್ನಷ್ಟೇ ಸ್ಪಷ್ಟ ಮಾಹಿತಿ ಲಭಿಸಬೇಕಿದೆ.

•ಉಳ್ಳಾಲ: ಕರೆಂಟ್ ಶಾಕ್ ಹೊಡೆದು ಯುವಕ ಸಾವು

ಉಳ್ಳಾಲ: ಹೊಸ ಬಟ್ಟೆ ಅಂಗಡಿಯನ್ನು ತೆರೆಯುವ ಹುಮ್ಮಸ್ಸಿನಲ್ಲಿದ್ದ ಯುವಕ, ಅದೇ ಅಂಗಡಿಯಲ್ಲಿ ಕರೆಂಟ್ ಶಾಕ್ ಹೊಡೆದು ಮೃತಪಟ್ಟ ಘಟನೆ, ಸೋಮವಾರದಂದು ತೊಕ್ಕೊಟಿಯಲ್ಲಿ ನಡೆದಿದೆ. ಮೃತ ಯುವಕನನ್ನು ಪಾಂಡೇಶ್ವರದ ಸಲ್ಮಾನ್ ಫಾರಿಶ್ ಎಂದು ಗುರುತಿಸಲಾಗಿದೆ. ತೊಕ್ಕೊಟ್ಟಿನ ಸ್ಮಾರ್ಟ್ ಸಿಟಿ ವಾಣಿಜ್ಯ ಮಳಿಗೆಯಲ್ಲಿ ಸಲ್ಮಾನ್ ಫಾರಿಶ್ ತಮ್ಮ ಮಾಲೀಕತ್ವದಲ್ಲಿ ‘ಝೀರೋ’ ಎಂಬ ಹೆಸರಿನ ವಸ್ತ್ರ ಮಳಿಗೆಯನ್ನು ತೆರೆಯುವ ಸಿದ್ಧತೆಯಲ್ಲಿದ್ದ ಸಂದರ್ಭದಲ್ಲಿ ಈ ದುರಂತ ಸಂಭವಿಸಿದೆ.

ಶುಕ್ರವಾರದಂದು ಉದ್ಘಾಟನೆಗೊಳ್ಳಲಿರುವ ವಸ್ತ್ರ ಮಳಿಗೆಗೆ ಸಂಬಂಧಿಸಿದಂತೆ ಭಾನುವಾರದಂದು ಎಲೆಕ್ಟ್ರಿಷಿಯನ್ ಕೆಲಸ ಭರದಿಂದ ಸಾಗುತ್ತಿತ್ತು. ಮುಂದೆ ನಿಂತು ಕೆಲಸ ಮಾಡಿಸುತ್ತಿದ್ದ ಸಲ್ಮಾನ್ ಫರಿಶ್ ಅವರಿಗೆ ನಡುರಾತ್ರಿ 1:30ರ ಸುಮಾರಿಗೆ ವಿದ್ಯುತ್ ಶಾಕ್ ಹೊಡೆದಿದೆ. ತಕ್ಷಣ ಅವರನ್ನು ಆಟೋ ಮೂಲಕ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೂ, ಆಸ್ಪತ್ರೆಗೆ ತಲುಪುವ ಮೊದಲೇ ಸಲ್ಮಾನ್ ಮೃತಪಟ್ಟರು ಎನ್ನುವ ಸಂಗತಿ ತಿಳಿದುಬಂದಿದೆ. ಮಾಹಿತಿ ಲಭಿಸುತ್ತಿದ್ದಂತೆ ಆಗಮಿಸಿದ ಉಳ್ಳಾಲ ಠಾಣೆಯ ಪೊಲೀಸರು ಸ್ಥಳದ ಪರಿಶೀಲನೆಯನ್ನು ನಡೆಸಿದರು ಎನ್ನಲಾಗಿದೆ.

• ಬೈಂದೂರು: ಕಾಲೇಜು ವಾಹನ ಅಪಘಾತ

ಬೈಂದೂರು: ವಿದ್ಯಾರ್ಥಿಗಳನ್ನು ಒಳಗೊಂಡ ಕಾಲೇಜು ವಾಹನ ಅಪಘಾತಗೊಂಡ ಘಟನೆ, ಮಂಗಳವಾರ ಬೆಳಿಗ್ಗೆ ಹಳ್ಳಿಹೊಳೆ ಗ್ರಾಮದ ಶೆಟ್ಟಿಪಾಲು ಬಳಿ ನಡೆದಿದೆ. ಸುಳಗೋಡು ಶಾಲೆಯಲ್ಲಿ ನಡೆಯುತ್ತಿರುವ ಎನ್ಎಸ್ಎಸ್ ಶಿಬಿರಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಬಸ್ ಉರುಳಿಬಿದ್ದಿದೆ. ಪರಿಣಾಮವಾಗಿ ವಿದ್ಯಾರ್ಥಿಗಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಉರುಳಿ ಬಿದ್ದ ರಭಸಕ್ಕೆ ಬಸ್ಸಿನ ಮುಂಭಾಗಕ್ಕೆ ಹಾನಿಯಾಗಿದೆ.‌ ಘಟನೆಗೆ ಸಂಬಂಧಿಸಿದಂತೆ ಯಾವುದೇ ಪ್ರಕರಣ ದಾಖಲಾಗಿಲ್ಲ ಎನ್ನುವ ಸಂಗತಿ ತಿಳಿದುಬಂದಿದೆ.