Categories
ಕೊಪ್ಪ

ಕೊಪ್ಪದಲ್ಲಿ ಏ.1ಕ್ಕೆ ಕಾಂಗ್ರೆಸ್ ಸಮಾವೇಶ!

ಕೊಪ್ಪದಲ್ಲಿ ಏ.1ಕ್ಕೆ ಕಾಂಗ್ರೆಸ್ ಸಮಾವೇಶ!
– ಉಡುಪಿ-ಚಿಕ್ಕಮಗಳೂರು ಲೋಕಸಭಾ ಪ್ರಚಾರ ಚುರುಕು
– ಶಾಸಕ ರಾಜೇಗೌಡ ನೇತೃತ್ವದಲ್ಲಿ ಸಮಾವೇಶ
– ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಸೇರಿ ಅನೇಕ ನಾಯಕರ ಆಗಮನ

NAMMUR EXPRESS NEWS
ಕೊಪ್ಪ: ಏ.1ರ ಸೋಮವಾರ ಕೊಪ್ಪ ಪಟ್ಟಣದ ಪುರಭವನದಲ್ಲಿ ಮಧ್ಯಾಹ್ನ 2:30ಕ್ಕೆ ಸರಿಯಾಗಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಮಾವೇಶವನ್ನು ಕೊಪ್ಪ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಆಯೋಜಿಸಲಾಗಿದೆ. ಈ ಸಮಾವೇಶದಲ್ಲಿ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಕೆ. ಜಯಪ್ರಕಾಶ್ ಹೆಗ್ಡೆ, ಕೆ.ಪಿ.ಸಿ.ಸಿ ಕಾರ್ಯಧ್ಯಕ್ಷರು ಹಾಗೂ ಕರ್ನಾಟಕ ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ ಭಂಡಾರಿ, ಚಿಕ್ಕಮಗಳೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಡಾ.ಕೆ.ಪಿ ಅಂಶುಮಂತ್ , ಕೆ.ಪಿ.ಸಿ.ಸಿ ಕಿಸಾನ್ ಘಟಕದ ರಾಜ್ಯಾಧ್ಯಕ್ಷರಾದ ಸಚಿನ್ ಮಿಗಾ, ಕೊಪ್ಪ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬಾಳೆಮನೆ ನಟರಾಜ್, ಕೆಪಿಸಿಸಿ ವಕ್ತಾರರಾದ ಸುಧೀರ್ ಕುಮಾರ್ ಮುರೊಳ್ಳಿ, ಚುನಾವಣಾ ಉಸ್ತುವಾರಿ ಸಮಿತಿಯ ಅಧ್ಯಕ್ಷರಾದ ಕೆ.ಎಸ್ ರವೀಂದ್ರ ಕುಕ್ಕುಡಿಗೆ, ಕೆ.ಪಿ.ಸಿ.ಸಿ ಓ.ಬಿ.ಸಿ ಘಟಕದ ಪ್ರಧಾನ ಕಾರ್ಯದರ್ಶಿಗಳಾದ ಹೆಚ್.ಎಮ್ ಸತೀಶ್ ಹಾಗೂ ಪಕ್ಷದ ಮುಖಂಡರುಗಳು ಜನಪ್ರತಿನಿಧಿಗಳು, ಕಾರ್ಯಕರ್ತರು ಉಪಸ್ಥಿತರಿರಲಿದ್ದಾರೆ. ಈ ಸಮಾವೇಶದಲ್ಲಿ ಕಾಂಗ್ರೆಸ್ ಕುಟುಂಬದ ಎಲ್ಲಾ ಬಂಧುಗಳು ಭಾಗವಹಿಸಿ ಯಶಸ್ವಿಗೊಳಿಸಿ ಕೊಡಬೇಕಾಗಿ ಶಾಸಕರು, ಕೆ.ಆರ್.ಇ.ಡಿ ಎಲ್ ಅಧ್ಯಕ್ಷರಾದ ರಾಜೇಗೌಡ ಮನವಿ ಮಾಡಿದ್ದಾರೆ.

Categories
ಮಾಹಿತಿ ರಾಜ್ಯ ರಾಷ್ಟ್ರೀಯ ವಾರ್ತೆ ವ್ಯವಹಾರ

ಹೊಸ ಆರ್ಥಿಕ ವರ್ಷಕ್ಕೆ ಸ್ವಾಗತ!

ಹೊಸ ಆರ್ಥಿಕ ವರ್ಷಕ್ಕೆ ಸ್ವಾಗತ!
– ಏ.1ರಿಂದ ಏನೇನ್ ಜಾಸ್ತಿ ಆಗುತ್ತೆ?
– ಹಲವು ನಿಯಮ ಬದಲು: ಏನೇನು ಬದಲಾಗುತ್ತೆ?

NAMMUR EXPRESS NEWS
ಏ.1ರಿಂದ ಹೊಸ ಆರ್ಥಿಕ ವರ್ಷ ಆರಂಭವಾಗಲಿದೆ. ಎನ್ ಪಿ ಎಸ್‌ಗೆ ಲಾಗಿನ್ ಆಗಲು ಆಧಾರ್ ಕಡ್ಡಾಯ, ಎಸ್ ಬಿ ಐ ಡೆಬಿಟ್ ಕಾರ್ಡ್ ಶುಲ್ಕ ಹೆಚ್ಚಳ, ಇಪಿಎಫ್‌ ಒ ನಿಯಮ ಬದಲಾವಣೆ, ಫಾಸ್‌ ಟ್ಯಾಗ್‌ ಗೆ ಕೆವೈಸಿ ಇವೂ ಸೇರಿದಂತೆ ಏ.1ರಿಂದ ವಿತ್ತೀಯ ಜಗತ್ತಿನಲ್ಲಿ ಹಲವು ಬದಲಾವಣೆಗಳು ಆಗಲಿವೆ. ಜನಸಾಮಾನ್ಯರ ಜೇಬಿಗೆ ನೇರ ಪರಿಣಾಮ.

-ಫಾಸ್‌ಟ್ಯಾಗ್ ಕೆವೈಸಿ ಕಡ್ಡಾಯ

ಏ . 1ಕ್ಕೂ ಮೊದಲು ಫಾಸ್ಟ್‌ ಟ್ಯಾಗ್ ಕೆವೈಸಿ ಅನ್ನು ಅಪ್‌ಡೇಟ್ ಮಾಡುವಂತೆ ಎನ್ ಎಚ್ ಎಐ ಸೂಚನೆ ನೀಡಿದೆ. ಒಂದೊಮ್ಮೆ ಕೆವೈಸಿ ಮಾಡಲು ವಿಫಲವಾದರೆ ನಿಮ್ಮ ಫಾಸ್ಟ್ ಟ್ರ್ಯಾಕ್ ಖಾತೆ ನಿಷ್ಕ್ರಿಯವಾಗಲಿದೆ. ನಂತರ ಖಾತೆಯಲ್ಲಿ ಹಣವಿದ್ದರೂ, ನಿಮ್ಮ ಟೋಲ್ ಪಾವತಿಸಲು ನಿಮಗೆ ಸಾಧ್ಯವಾಗುವುದಿಲ್ಲ.

– ಇನ್ಮುಂದೆ ಇ-ಇನ್ಸೂರೆನ್ಸ್ ಅಷ್ಟೇ !

ಏ .1ರ ಬಳಿಕ ಲೈಫ್, ಹೆಲ್ತ್ ಅಥವಾ ಯಾವುದೇ ಜನರಲ್ ವಿಮೆ ಪಾಲಿಸಿ ಖರೀದಿಸಿದರೂ, ವಿಮಾ ಕಂಪನಿಗಳು ಕಾಗದದ ರೂಪದ ದಾಖಲೆ ಪತ್ರಗಳನ್ನು ನೀಡುವುದಿಲ್ಲ. ಕೇವಲ ಡಿಜಿಟಲ್ ಫಾರ್ಮೆಟ್‌ ನಲ್ಲಷ್ಟೇ ಪಾಲಿಸಿಯನ್ನು ಗ್ರಾಹಕರಿಗೆ ನೀಡುತ್ತವೆ.

-ಮ್ಯೂಚುವಲ್ ಫಂಡ್ ಬಂದ್ ಆಗಬಹುದು!

ಮ್ಯೂಚುವಲ್ ಫಂಡ್ ಗಳಿಗೂ ಕೆವೈಸಿ ಏ.1ರಿಂದ ಕಡ್ಡಾಯವಾಗಲಿದೆ ಯಾರು ಕೆವೈಸಿ ಮಾಡಿಸಿಲ್ಲವೋ ಅವರ ಎಂಎಫ್ ವಹಿವಾಟುಗಳು ಸ್ಥಗಿತಗೊಳ್ಳಲಿದೆ.

– ವಿಮೆ ನಿಯಮ ಬದಲಾವಣೆ

ಏಪ್ರಿಲ್ 1ರಿಂದ ವಿಮಾ ಕ್ಷೇತ್ರದಲ್ಲೂ ಮಹತ್ವದ ಬದಲಾವಣೆ ಆಗಲಿದೆ. ಐಆರ್ ಡಿಎಐ ನಿಯಮಗಳನ್ನು ಬದಲಾಯಿಸುವ ಮೂಲಕ ಸರೆಂಡರ್ ಮೌಲ್ಯದ ನಿಯಮಗಳನ್ನು ಬದಲಾಯಿಸಿದೆ. ಇನ್ನು ಮುಂದೆ ಗ್ರಾಹಕರು ಪಾಲಿಸಿಯನ್ನು ಎಷ್ಟು ತಡವಾಗಿ ಸರೆಂಡರ್ ಮಾಡುತ್ತಾರೋ ಅಷ್ಟು ಹೆಚ್ಚು ಸರೆಂಡರ್ ಮೌಲ್ಯ ಪಡೆಯಲಿದ್ದಾರೆ. ಪ್ರಸ್ತುತ ವರ್ಷಗಳೊಳಗೆ ಪಾಲಿಸಿಯನ್ನು ಸರೆಂಡರ್ ಮಾಡಿದರೆ ಮುಖ ಬೆಲೆಗಿಂತ ಕಡಿಮೆ ಮೌಲ್ಯ ದೊರೆಯುತ್ತಿದೆ.

– ಎನ್‌ಪಿಎಸ್‌ ಗೆ ಆಧಾರ್ ಭದ್ರತೆ

ಎನ್‌ಪಿಎಸ್‌ ಖಾತೆಗೆ ಲಾಗಿನ್ ಆಗುವ ನಿಯಮಗಳನ್ನು ಪಿಂಚಣಿ ನಿಯಂತ್ರಕ ಸಂಸ್ಥೆ ಪಿಇಆ‌ರ್ ಡಿವಿ ಬದಲಾಯಿಸಿದೆ. ಇನ್ನು ಮುಂದೆ ‘ಎನ್‌ಪಿಎಸ್’ ಖಾತೆಗೆ ಲಾಗಿನ್ ಆಗಲು ಬಳಕೆದಾರರ ಐಡಿ ಮತ್ತು ಪಾಸ್ ವರ್ಡ್ ಅಲ್ಲದೆ ಆಧಾ‌ರ್ ಲಿಂಕ್ ಮಾಡಲಾದ ಮೊಬೈಲ್ ಸಂಖ್ಯೆಯೂ ಅಗತ್ಯವಾಗಿದೆ. ನಿಮ್ಮ ಆಧಾ‌ರ್ ಗೆ ಲಿಂಕ್ ಮಾಡಲಾದ ಮೊಬೈಲ್ ಸಂಖ್ಯೆಗೆ ಒಟಿಪಿ ಬರಲಿದ್ದು, ಇದನ್ನು ನಮೂದಿಸಿದ ನಂತರದೇ ನೀವು ಎನ್‌ಪಿಎಸ್ ಖಾತೆಗೆ ಲಾಗಿನ್ ಆಗಬಹುದು.

– ಹೊಸ ತೆರಿಗೆ ಪದ್ಧತಿ ಡೀಫಾಲ್ಟ್ ಆಯ್ಕೆ

ಏಪ್ರಿಲ್ 1ರಿಂದ ಆದಾಯ ತೆರಿಗೆ ನಿಯಮಗಳಲ್ಲಿಯೂ ಪ್ರಮುಖ ಬದಲಾವಣೆ ಜಾರಿಗೆ ಬರಲಿದೆ. ಇದರ ಅಡಿಯಲ್ಲಿ ಹೊಸ ತೆರಿಗೆ ಪದ್ಧತಿಯು ಡೀಫಾಲ್ಟ್ ತೆರಿಗೆ ಪದ್ಧತಿಯಾಗಿರಲಿದೆ. ಅಂದರೆ, ನೀವು ಹಳೆಯ ಮತ್ತು ಹೊಸ ತೆರಿಗೆ ಪದ್ಧತಿಯ ನಡುವೆ ನಿಮಗೆ ಬೇಕಾದ ಆಯ್ಕೆಯನ್ನು ಆಯ್ದು ಕೊಳ್ಳದೇ ಇದ್ದಲ್ಲಿ ನಿಮ್ಮ ಐಟಿಆರ್ ‘ಅನ್ನು ಹೊಸ ತೆರಿಗೆ ಪದ್ದತಿಯ ಅಡಿಯಲ್ಲಿ ಸಲ್ಲಿಸಲಾಗುತ್ತದೆ. ಒಮ್ಮೆ ಹೊಸ ತೆರಿಗೆ ಪದ್ಧತಿ ಆಯ್ದುಕೊಂಡರೆ ಹಳೆ ತೆರಿಗೆ ಪದ್ದತಿ ಆಯ್ದುಕೊಳ್ಳುವ ಆಯ್ಕೆ ಇರುವುದಿಲ್ಲ, ಹೊಸ ತೆರಿಗೆ ಪದ್ಧತಿಯಲ್ಲಿ 7 ಲಕ್ಷ ರೂ.ವರೆಗೂ ತೆರಿಗೆ ಪಾವತಿಸಬೇಕಾಗಿಲ್ಲ,

– ಕ್ರೆಡಿಟ್ ಕಾರ್ಡ್ ಗ್ರಾಹಕರಿಗೆ ಸೌಲಭ್ಯ

• “ಯೆಸ್ ಬ್ಯಾಂಕ್’ ತನ್ನ ಕ್ರೆಡಿಟ್ ಕಾರ್ಡ್ ನಿಯಮಗಳನ್ನು ಬದಲಾಯಿಸಿದೆ. ಕ್ರೆಡಿಟ್ ಕಾರ್ಡ್ ಬಳಕೆದಾರರು ತ್ರೈಮಾಸಿಕದಲ್ಲಿ ಕನಿಷ್ಠ 10,000 ರೂ.ಗಳನ್ನು ಖರ್ಚು ಮಾಡಿದರೆ, ಅವರು ದೇಶೀಯ ವಿಮಾನ ನಿಲ್ದಾಣದ ಲಾಂಜ್ ಪ್ರವೇಶವನ್ನು ಪಡೆಯುತ್ತಾರೆ. ಈ ಸೌಲಭ್ಯ ಏ.1ರಿಂದ ಜಾರಿಗೆ ಬರಲಿದೆ.

• ದೇಶದ ಪ್ರಮುಖ ಖಾಸಗಿ ಬ್ಯಾಂಕ್ ‘ಐಸಿಐಸಿಐ ತನ್ನ ಗ್ರಾಹಕರಿಗೆ ಒಂದು ತ್ರೈಮಾಸಿಕದಲ್ಲಿ 35,000 ರೂ.ವರೆಗೆ ವೆಚ್ಚ ಮಾಡಿದಲ್ಲಿ ಕಾಂಪ್ಲಿಮೆಂಟರಿ ಏರ್ ಪೋರ್ಟ್ ಲಾಂಜ್ ಪ್ರವೇಶವನ್ನು ನೀಡುತ್ತಿದೆ.

– ಇಪಿಎಫ್‌ಒ ನಿಯಮ ಬದಲು

ಏಪ್ರಿಲ್ 1ರಿಂದ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ನಿಯಮಗಳಲ್ಲಿ ದೊಡ್ಡ ಬದಲಾವಣೆಯೊಂದು ಜಾರಿಗೆ ಬರುತ್ತಿದೆ. ಇನ್ನು ಮುಂದೆ ಉದ್ಯೋಗ ಬದಲಾವಣೆಯ ಸಂದರ್ಭದಲ್ಲಿ ಉದ್ಯೋಗಿಯ ಇಪಿಎಫ್ ಒ ಖಾತೆಯನ್ನು ಸ್ವಯಂಚಾಲಿತವಾಗಿ ಹೊಸ ಉದ್ಯೋಗದಾತರಿಗೆ ವರ್ಗಾಯಿಸಲಾಗುತ್ತದೆ. ಈ ಹಿಂದೆ ಖಾತೆದಾರರ ಕೋರಿಕೆಯ ಮೇರೆಗೆ ಮಾತ್ರ ಖಾತೆಗಳನ್ನು ವರ್ಗಾಯಿಸಲಾಗುತ್ತಿತ್ತು.

Categories
ರಾಜ್ಯ

ಬಿಸಿಲಿನ ಹೊಡೆತಕ್ಕೆ ರಾಜ್ಯದಲ್ಲಿ ಮೊದಲ ಜೀವ ಬಲಿ?

ಬಿಸಿಲಿನ ಹೊಡೆತಕ್ಕೆ ರಾಜ್ಯದಲ್ಲಿ ಮೊದಲ ಜೀವ ಬಲಿ?
– ಕಲಬುರಗಿ ಜಿಲ್ಲೆಯ ಆಳಂದ ತಾಲ್ಲೂಕಿನಲ್ಲಿ ಸಂಭವಿಸಿದ ಘಟನೆ
– ರಾಜ್ಯದಲ್ಲಿ ದಾಖಲೆಯ ತಾಪಮಾನ ದಾಖಲು!

NAMMUR EXPRESS NEWS
ಕಲಬುರಗಿ: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ತಾಪ ಹೆಚ್ಚುತಿದ್ದು, ಕಲಬುರಗಿಯಲ್ಲಿ ರಣ ಬಿಸಿಲಿಗೆ ಜೀವವೇ ಬಲಿಯಾಯ್ತಾ ಅನ್ನುವ ಅನುಮಾನ ಸೃಷ್ಟಿಯಾಗಿದೆ. ಹೌದು.. ನರೇಗಾ ಕೂಲಿ ಕೆಲಸ ಮಾಡುವಾಗ ವ್ಯಕ್ತಿಯೊಬ್ಬರು ಕುಸಿದು ಬಿದ್ದು ಸಾವನ್ನಪ್ಪಿದ್ದು, ಬಿಸಿಲಿನ ತಾಪದಿಂದ ಅಥವಾ ಹೃದಯಾಘಾತದಿಂದ ಸಾವನ್ನಪ್ಪಿರುವ ಬಗ್ಗೆ ಅವರ ಪತ್ನಿ ಶಂಕೆ ವ್ಯಕ್ತಪಡಿಸಿದ್ದಾರೆ. ಕಲಬುರಗಿ ಜಿಲ್ಲೆಯ ಆಳಂದ ತಾಲ್ಲೂಕಿನ ದಣ್ಣೂರ ಗ್ರಾಮದಲ್ಲಿ ಈ ಘಟನೆ ಸಂಭವಿಸಿದ್ದು, ಶರಣಪ್ಪ ಸಮಗಾರ (42) ಎಂಬುವರು ನರೇಗಾ ಕೆಲಸ ಮಾಡುವಾಗ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಬಿಸಿಲಿನ ಹೊಡೆತಕ್ಕೆ ಶರಣಪ್ಪನ ಸಾವನ್ನಪ್ಪಿದ್ರಾ? ಅಥವಾ ಹೃದಯಾಘಾತದಿಂದ ಸಾವನ್ನಪ್ಪಿರೋದಾ ಎಂಬ ಬಗ್ಗೆ ಅನುಮಾನ ವ್ಯಕ್ತವಾಗಿದ್ದು, ಶರಣಪ್ಪ ಸಮಗಾರ ಮರಣೋತ್ತರ ಪರೀಕ್ಷೆ ವರದಿಗಾಗಿ ಅಧಿಕಾರಿಗಳು ಕಾಯುತ್ತಿದ್ದಾರೆ. ಘಟನೆ ಸಂಬಂಧ ಕಲಬುರಗಿ ಜಿಲ್ಲೆಯ ನರೋಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಜ್ಯದಲ್ಲಿ ದಾಖಲೆಯ ತಾಪಮಾನ ದಾಖಲು!

ಈ ಬಾರಿ ರಾಜ್ಯದ ಎರಡು ಜಿಲ್ಲೆಗಳಲ್ಲಿ ಬಿಸಿಲಿನ ತಾಪಮಾನ 40° ದಾಟಿದ್ದು, ಬಾಗಲಕೋಟೆ 40.6° ಹಾಗೂ ಕಲಬುರಗಿಯಲ್ಲಿ 40.9° ತಾಪಮಾನ ದಾಖಲಾಗಿದೆ. ಬೆಂಗಳೂರಲ್ಲಿ 1996ರ ಬಳಿಕ ಅತಿ ಹೆಚ್ಚು ತಾಪಮಾನ ಮಾರ್ಚ್ ನಲ್ಲಿ ದಾಖಲಾಗಿದೆ. 1996ರಲ್ಲಿ ಬೆಂಗಳೂರಲ್ಲಿ 37.3° ನಷ್ಟು ತಾಪಮಾನ ದಾಖಲಾಗಿತ್ತು. ಈ ಬಾರಿ ಬೆಂಗಳೂರಲ್ಲಿ ಮಾಚ್‌ರ್ನಲ್ಲಿ 36° ಸರಾಸರಿಯಲ್ಲಿ ತಾಪಮಾನ ದಾಖಲಾಗಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಉಳಿದಂತೆ ಈ ಬೇಸಿಗೆಯಲ್ಲಿ ಉತ್ತರ ಕರ್ನಾಟಕದ ಕೆಲವು ಭಾಗದಲ್ಲಿ ದಾಖಲೆಯ ತಾಪಮಾನ ದಾಖಲಾಗಿದೆ. ಕೊಪ್ಪಳ, ರಾಯಚೂರು, ಗದಗ, ಬಳ್ಳಾರಿ, ವಿಜಯಪುರ ಜಿಲ್ಲೆಗಳಲ್ಲಿ ಅಧಿಕ ತಾಪಮಾನ ಇದೆ. 1996ರಲ್ಲಿ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಗರಿಷ್ಠ 44.6°ಕ್ಕೆ ಏರಿದ್ದ ಬೇಸಿಗೆಯ ಧಗೆ, ಬಳಿಕ ಇದೇ ಮೊದಲ ಬಾರಿಗೆ ಉತ್ತರ ಕರ್ನಾಟಕ ಭಾಗದಲ್ಲಿ 40° ದಾಟಿದೆ.

Categories
ಕರಾವಳಿ

ಕರಾವಳಿಯಲ್ಲಿ ಜೀವ ಹಿಂಡುವ ಬಿಸಿಲಿನ ತಾಪ..!

ಕರಾವಳಿಯಲ್ಲಿ ಜೀವ ಹಿಂಡುವ ಬಿಸಿಲಿನ ತಾಪ..!
– ಸುಡು ಬಿಸಿಲಿನಿಂದ ಪಾರಾಗಲು ಮನೆ ಮೇಲೆ ಸ್ಪ್ರಿಂಕ್ಲಾರ್ ಅಳವಡಿಕೆ!
– ಜನರ ನೆತ್ತಿ ಸುಡುತ್ತಿರುವ ಬಿರು ಬಿಸಿಲು

NAMMUR EXPRESS NEWS
ಮಂಗಳೂರು: ಕರ್ನಾಟಕದಲ್ಲಿ ಕೆಲ ವಾರಗಳಿಂದ ಒಂದೇ ಸಮನೆ ರೌದ್ರಾವತಾರ ತೋರುತ್ತಿರುವ ಬಿಸಲು ಜನರ ನೆತ್ತಿ ಸುಡುತ್ತಿದೆ. ಸುಡುವ ಬಿಸಿಲಿಗೆ ಬೆದರಿ ಜನರು ಮನೆಯಿಂದ ಹೊರ ಬರೋಕೆ ಹೆದರುತ್ತಿದ್ದು, ಹವಾಮಾನ ಇಲಾಖೆ ಕೂಡ ಬಿಸಿಲಿನಿಂದ ಪರಾಗಲು ಜನರು ಎಚ್ಚರದಿಂದ ಇರುವಂತೆ ಸೂಚನೆ ನೀಡಿದೆ. ಇನ್ನು ಕಡಲ ನಗರಿ ಮಂಗಳೂರಿನಲ್ಲೂ ಬಿಸಿಲಿನ ತಾಪ ಏರಿದ್ದು, 35° ಸರಾಸರಿಯಲ್ಲಿ ಕರಾವಳಿ ಭಾಗದಲ್ಲಿ ಈ ಬಾರಿಯ ಮಾರ್ಚ್‌ನಲ್ಲಿ ತಾಪಮಾನ ದಾಖಲಾಗಿದೆ. ಬಿಸಿಲಿನ ತಾಪ ಏರಿದ್ದರಿಂದ ಮನೆಯೊಳಗೆ ಹಗಲು ಹೊತ್ತು ಕೂರದಂತಹ ಸ್ಥಿತಿ ತುಳುನಾಡಿನಲ್ಲಿ ನಿರ್ಮಾಣವಾಗಿದ್ದು, ಜನರು ಬಿಸಿಲಿನ ಬೇಗೆಯಿಂದ ತಪ್ಪಿಸಿಕೊಳ್ಳಲು ಇನ್ನಿಲ್ಲದ ಸರ್ಕಸ್‌ ಮಾಡುತ್ತಿದ್ದಾರೆ. ಈತನ್ಮಧ್ಯೆ ಪುತ್ತೂರಿನ ಪರ್ಲಡ್ಕ ಸಮೀಪ ಮನೆಯೊಂದರಲ್ಲಿ ಹಂಚಿನ ಮನೆಯ ಮೇಲೆ ಸ್ಪ್ರಿಂಕ್ಲಾರ್ ಮೂಲಕ ನೀರು ಹಾಕಿ ತಾಪಮಾನದಿಂದ ಪಾರಾಗಲು ಪ್ರಯತ್ನ ಪಟ್ಟಿದ್ದಾರೆ.

ಮನೆಯ ಮೇಲೆ ಸ್ಪ್ರಿಂಕ್ಲಾರ್ ಹಾಕಿ ನೀರು ಸಿಂಪಡಿಸುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದರಿಂದ ಜನರು ಯಾವ ಮಟ್ಟಿಗೆ ಬಿಸಿಲಿನ ಬೇಗೆಯಿಂದ ಬಳಲುತ್ತಿರಬಹುದು ಎಂದು ಅಂದಾಜಿಸಲಾಗಿದೆ. ಪುತ್ತೂರಿನಲ್ಲಿ 41 ಡಿಗ್ರಿ ಸೆಲ್ಸಿಯಸ್ ನವರೆಗೆ ಮಧ್ಯಾಹ್ನದ ವೇಳೆ ಬಿಸಿಲಿನ ತಾಪ ಏರಿಕೆಯಾಗಿದ್ದು, ಸುಡುವ ಬಿಸಿಲಿನಿಂದ ಪಾರಾಗಲು ಜನರು ಮಧ್ಯಾಹ್ನ ವೇಳೆಗೆ ಮನೆಯಿಂದ ಹೊರಗೆ ಬಾರದೆ ಮನೆಯಲ್ಲೇ ಕಾಲ ಕಳೆಯುತ್ತಿದ್ದಾರೆ.

Categories
ಹೊಸನಗರ

ಒಡವೆಗಾಗಿ ಕಾರಲ್ಲಿ ಕರೆದುಕೊಂಡು ಕೊಲೆ ಮಾಡಿ ಕೆರೆಗೆ ಎಸೆದರು!

ಒಡವೆಗಾಗಿ ಕಾರಲ್ಲಿ ಕರೆದುಕೊಂಡು ಕೊಲೆ ಮಾಡಿ ಕೆರೆಗೆ ಎಸೆದರು!
– ಹೊಸನಗರದ ಹುಂಚ ಕೆರೆಯಲ್ಲಿ ವೃದ್ದೆ ಶವ ಪತ್ತೆ ಪ್ರಕರಣ
– ಸಾಲ ತೀರಿಸಲು ಮರ್ಡರ್ ಪ್ಲಾನ್ ಮಾಡಿದ ಸ್ನೇಹಿತರು!

NAMMUR EXPRESS NEWS
ಹೊಸನಗರ: ಹೊಸನಗರ ತಾಲೂಕು ರಿಪ್ಪನ್‌ಪೇಟೆ ಸಮೀಪದ ಹುಂಚ ಗ್ರಾಮದ ಮುತ್ತಿನಕೆರೆಯಲ್ಲಿ ಮಹಿಳೆಯೊಬ್ಬರನ್ನು ಹತ್ಯೆಗೈದು ಕೆರೆಯಲ್ಲಿ ಎಸೆದ ಪ್ರಕರಣದ ಆರೋಪಿಗಳ ಹೆಡೆಮುರಿ ಕಟ್ಟುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಹೊಳಲೂರು ಗ್ರಾಮದ ಜಯಮ್ಮ(62) ಎಂಬುವವರನ್ನು ಕೋಡೂರು ನಿವಾಸಿ ಮಯೂರ (24) ತನ್ನ ಅಪ್ರಾಪ್ತ ಸ್ನೇಹಿತನೊಂದಿಗೆ ಸೇರಿಕೊಂಡು ಮೈಮೇಲಿದ್ದ ಒಡವೆಗಾಗಿ ಕೊಲೆ ಮಾಡಿದ್ದಾರೆ. ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹುಂಚ ಗ್ರಾಮದ ಮುತ್ತಿನಕೆರೆಯಲ್ಲಿ ಅಪರಿಚಿತ ಮಹಿಳೆಯ ಶವವೊಂದು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿ ಹಲವಾರು ಅನುಮಾನಗಳಿಗೆ ಎಡೆಮಾಡಿಕೊಟ್ಟಿತ್ತು.

ಪ್ರಕರಣವನ್ನು ಕೈಗೆತ್ತಿಕೊಂಡ ಸಿಪಿಐ ಗುರಣ್ಣ ಹೆಬ್ಬಾಳ್ ಹಾಗೂ ಪಿಎಸ್‌ಐ ನಿಂಗರಾಜ್ ಕೆ ವೈ ನೇತ್ರತ್ವದ ಸಿಬ್ಬಂದಿಗಳ ತಂಡ ಆರೋಪಿಗಳ ಬಂಧನಕ್ಕೆ ಜಾಲ ಬೀಸಿದ್ದರು. ಈ ಪ್ರಕರಣದಲ್ಲಿ ಹೊಸನಗರ ತಾಲೂಕು ರಿಪ್ಪನ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಕೋಡೂರು ಯಳಗಲು ಗ್ರಾಮದ ಮಯೂರ ಕೆ( 24) ಅಪ್ರಾಪ್ತ ಸ್ನೇಹಿತ ನೊಂದಿಗೆ ಹಣ ಹಾಗೂ ಬಂಗಾರದ ಆಸೆಯಿಂದ ತನ್ನ ಅತ್ತೆ ಹೊಳಲೂರು ಗ್ರಾಮದ ಸೀತಾ ಕೆಲಸ ಮಾಡುತ್ತಿದ್ದ ಮಠದಲ್ಲಿ, ಕಸಗುಡಿಸುವ ಕೆಲಸ ಮಾಡುತ್ತಿದ್ದ. ಜಯಮ್ಮ ಕೋಂ ಕುಮಾರ, 62 ವರ್ಷ ರವರ ಹತ್ತಿರ ಕೈಸಾಲವಾಗಿ ಹಣತೆಗೆದುಕೊಂಡು ಅದನ್ನು ವಾಪಾಸ್ ಕೊಡಲಾಗದೇ ಆಕೆಯ ಹತ್ತಿರ ಹಣ ಮತ್ತು ಬಂಗಾರವಿರುವುದನ್ನು ಗಮನಿಸಿ ಬುದ್ದಿವಂತಿಕೆಯಿಂದ ರಿಪ್ಪನ್ ಪೇಟೆಯಲಿ ಸೈಟ್ ಕೊಡಿಸುವುದಾಗಿ ನಂಬಿಸಿ ರಿಪ್ಪನ್ ಪೇಟೆಗೆ ಕರೆದುಕೊಂಡು ಬಂದು ನಂತರ ಮಾರುತಿ ವ್ಯಾಗನಾ‌ರ್ ಕಾರಿನಲ್ಲಿ ಕೂರಿಸಿಕೊಂಡು ಬಾಳೂರು ಗ್ರಾಮದ ಹತ್ತಿರ ಕಾರಿನಲಿಯೇ ಹಿಂಬದಿಯಿಂದ ಹಗ್ಗದಿಂದ ಕುತ್ತಿಗೆಗೆ ಬಿಗಿದು ಕೊಲೆ ಮಾಡಿ, ಕೊಲೆಯನ್ನು ಮರೆ ಮಾಚುವ ಉದ್ದೇಶದಿಂದ ಬೇಲಿ ಕಂಬದ ಕಲ್ಲನ್ನು ಜೊತೆಗೆ ಪ್ಲಾಸ್ಟಿಕ್ ಹಗ್ಗದಿಂದ ಸುತ್ತಿ ಬಿಗಿದು ಅದೇ ದಿನ ರಾತ್ರಿ ಸುಮಾರು 10-45 ಗಂಟೆಗೆ ಹುಂಚಾ ಮುತ್ತಿನ ಕೆರೆಯಲ್ಲಿ ಮೃತದೇಹವನ್ನು ಹಾಕಿ ಹೋಗಿದ್ದ.

ಕಾರ್ಯಾಚರಣೆಯಲ್ಲಿ ಮಾನ್ಯ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ರವರು ಹಾಗೂ ಹೆಚ್ಚುವರಿ ಪೊಲೀಸ್‌ ಅಧೀಕ್ಷಕರ ಮಾರ್ಗದರ್ಶನದಲ್ಲಿ, ಡಿವೈಎಸ್ ಪಿ ಗಜಾನನ ವಾಮನ ಸುತಾರ ನಿರ್ದೇಶನದಲಿ, ಸಿಪಿಐ ಜಿಎಸ್ ಹೆಬ್ಬಾಳ್ ರವರು ಮತ್ತು ಚಾಣಾಕ್ಷ ಅಧಿಕಾರಿ ರಿಪ್ಪನ್ ಪೇಟೆ ಠಾಣಾ ಪಿಎಸ್ ಐ ನಿಂಗರಾಜ್ ಕೆ ವೈ ನೇತ್ರತ್ವದಲ್ಲಿ ಸಿಬ್ಬಂದಿಯವರಾದ ನಗರ ಠಾಣೆಯ ಕಿರಣ್ ಕುಮಾರ ,ರಿಪ್ಪನ್‌ಪೇಟೆ ಠಾಣೆಯ ಶಿವಕುಮಾರ ನಾಯ್ ಸಂತೋಷ್ ಕೊರವರ, ಹೊಸನಗರ ಠಾಣೆಯ ಸುನೀಲ್ ರಿಪ್ಪನ್‌ಪೇಟೆ ಠಾಣೆಯ ಉಮೇಶ್ ಹೆಚ್ ಸಿ ಹಾಗೂ ಮಧುಸೂಧನ್ ರವರನೊಳಗೊಂಡ ತಂಡವು ತೀವ್ರ ಕಾರ್ಯಾಚರಣೆಯಿಂದ ಆರೋಪಿತರನ್ನು ಪತ್ತೆ ಹಚ್ಚಿ, ಮಾನ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

Categories
ಬೆಂಗಳೂರು ರಾಜ್ಯ

ಕರ್ನಾಟಕದಲ್ಲಿ ನಡೆಯುವ ಮತದಾನದ 2 ದಿನವೂ ಸಾರ್ವತ್ರಿಕ ರಜೆ

ಕರ್ನಾಟಕದಲ್ಲಿ ನಡೆಯುವ ಮತದಾನದ 2 ದಿನವೂ ಸಾರ್ವತ್ರಿಕ ರಜೆ
– ಏ.26, ಮೇ 7ರಂದು ರಜೆ ಘೋಷಣೆ
– ಈ ರಜೆ ತುರ್ತು ಸೇವೆಗಳಿಗೆ ಅನ್ವಯಿಸುವುದಿಲ್ಲ

NAMMUR EXPRESS NEWS
ಬೆಂಗಳೂರು: ಲೋಕಸಭೆಗೆ ರಾಜ್ಯದಲ್ಲಿ ಎರಡು ಹಂತದಲ್ಲಿ ಚುನಾವಣೆ ನಡೆಯಲಿದ್ದು, ಮತದಾನದ ದಿನ ಆಯಾ ಭಾಗದ ಸರಕಾರಿ, ಸರಕಾರಿ ಸ್ವಾಮ್ಯದ ಸಂಸ್ಥೆಗಳು, ಸರಕಾರಿ ಮತ್ತು ಅನುದಾನಿತ ಶಾಲಾ-ಕಾಲೇಜುಗಳ ನೌಕರರಿಗೆ ವೇತನ ಸಹಿತ ಸಾರ್ವತ್ರಿಕ ರಜೆ ಘೋಷಿಸಲಾಗಿದೆ.

ಏ. 26 ಮತ್ತು ಮೇ 7ರಂದು ಚುನಾವಣೆ ಮತ್ತು ಒಂದು ವಿಧಾನಸಭಾ ಕ್ಷೇತ್ರದ ಉಪಚುನಾವಣೆ ನಡೆಯಲಿದೆ. ಆಯಾ ಚುನಾವಣಾ ಕ್ಷೇತ್ರಗಳ ವ್ಯಾಪ್ತಿ ಯಲ್ಲಿರುವ ಎಲ್ಲಾ ರಾಜ್ಯ ಸರಕಾರಿ ಕಚೇರಿ ಗಳು, ಶಾಲಾ- ಕಾಲೇಜು (ಅನುದಾನಿತ ಶಿಕ್ಷಣ ಸಂಸ್ಥೆಗಳು ಒಳಗೊಂಡಂತೆ) ಹಾಗೂ ಸರಕಾರಿ ಸ್ವಾಮ್ಯದ ಸಂಸ್ಥೆಗಳು ಒಳಗೊಂಡಂತೆ ಆಯಾ ಚುನಾವಣಾ ಕ್ಷೇತ್ರಗಳಿಗೆ ಸೀಮಿತಗೊಳಿಸಿ ಸಾರ್ವತ್ರಿಕ ರಜೆ ಘೋಷಿಸಿದೆ. ಈ ರಜೆ ತುರ್ತು ಸೇವೆಗಳಿಗೆ ಅನ್ವಯಿಸುವುದಿಲ್ಲ.

Categories
ರಾಜ್ಯ

ಏ. 1, 2ರಂದು ಪೋಸ್ಟ್ ಆಫೀಸ್ ಸೇವೆ ಲಭ್ಯವಿಲ್ಲ

ಏ. 1, 2ರಂದು ಪೋಸ್ಟ್ ಆಫೀಸ್ ಸೇವೆ ಲಭ್ಯವಿಲ್ಲ
– ವ್ಯವಹಾರ, ಬ್ಯಾಂಕಿಂಗ್‌ ಸೇವೆ ಇರುವುದಿಲ್ಲ

NAMMUR EXPRESS NEWS
ಅಂಚೆ ಕಚೇರಿಗಳಲ್ಲಿ ಏಪ್ರಿಲ್ 1 ಸೋಮವಾರ ಮತ್ತು 2 ಮಂಗಳವಾರದಂದು ಬ್ಯಾಂಕಿಂಗ್ ಸೇವೆ ಲಭ್ಯವಿರುವುದಿಲ್ಲ. ವರ್ಷಾಂತ್ಯದ ಲೆಕ್ಕಾಚಾರಗಳು ಮತ್ತು ಬಡ್ಡಿ ಲೆಕ್ಕಾಚಾರಗಳು ನಡೆಯಲಿರುವುದರಿಂದ ಏ. 1 ಮತ್ತು 2 ರಂದು ಅಂಚೆ ವಿಭಾಗದ ಯಾವುದೇ ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆಗಳಿಗೆ ಸಂಬಂಧಿಸಿದಂತೆ ವ್ಯವಹಾರ, ಬ್ಯಾಂಕಿಂಗ್‌ ಸೇವೆ ಇರುವುದಿಲ್ಲ. ಇದನ್ನು ಹೊರತುಪಡಿಸಿ ಪತ್ರದ ಅಂಚೆ ಸೇವೆ, ಎಟಿಎಂ ಸೇವೆ ನಿರಂತರವಾಗಿರುತ್ತದೆ ಎಂದು ಹೇಳಲಾಗಿದೆ.

Categories
ಉಡುಪಿ

ಹಂತಕನಿಗೆ ಕೋರ್ಟ್ ಜಾಮೀನಿಲ್ಲ!

ಹಂತಕನಿಗೆ ಕೋರ್ಟ್ ಜಾಮೀನಿಲ್ಲ!
– ಉಡುಪಿಯ ನಾಲ್ವರ ಹತ್ಯೆ ಕೇಸ್: ಆರೋಪಿಗೆ ಜಾಮೀನು ತಿರಸ್ಕಾರ
– ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಹಂತಕ

NAMMUR EXPRESS NEWS
ಉಡುಪಿ: ಉಡುಪಿಯ ನೇಜಾರಿನಲ್ಲಿ ಒಂದೇ ಕುಟುಂಬದ ನಾಲ್ವರನ್ನು ಹತ್ಯೆ ಮಾಡಿರುವ ಪ್ರಕರಣದ ಆರೋಪಿ ಪ್ರವೀಣ್‌ ಚೌಗುಲೆ ಜಾಮೀನು ಅರ್ಜಿಯನ್ನು ಉಡುಪಿಯ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ತಿರಸ್ಕರಿಸಿ ಶನಿವಾರ ಆದೇಶ ಹೊರಡಿಸಿದೆ. ಮಾ.13ರಂದು ಜಾಮೀನು ಕೋರಿ ಚೌಗುಲೆಯು ವಕೀಲರ ಮೂಲಕ ಅರ್ಜಿ ಸಲ್ಲಿಸಿದ್ದು, ಇದಕ್ಕೆ ಸರ್ಕಾರಿ ಅಭಿಯೋಜಕರಾದ ಶಿವಪ್ರಸಾದ್‌ ಹೆಗ್ಡೆ ಅವರು ಆಕ್ಷೇಪಣೆ ಸಲ್ಲಿಸಿದ್ದರು. ಆರೋಪಿ ಪರ ವಕೀಲರು ಹಾಗೂ ಸರ್ಕಾರಿ ಅಭಿಯೋಜಕರ ನಡುವಿನ ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶ ದಿನೇಶ್‌ ಹೆಗ್ಡೆ ಜಾಮೀನನ್ನು ತಿರಸ್ಕರಿಸಿ ಶನಿವಾರ ಆದೇಶ ಹೊರಡಿಸಿದ್ದಾರೆ.

ಸದ್ಯ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಪ್ರವೀಣ್‌ ಚೌಗುಲೆಯನ್ನು ಮೂರು ದಿನಗಳ ಹಿಂದೆ ಉಡುಪಿಯ 2ನೇ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಕೋರ್ಟ್‌ ಆವರಣದಲ್ಲಿಯೂ ಬಿಗಿ ಭದ್ರತೆ ಕೈಗೊಳ್ಳಲಾಗಿತ್ತು. ವಿಚಾರಣೆ ವೇಳೆ ತನ್ನ ಮೇಲಿನ ಆರೋಪಗಳನ್ನು ನಿರಾಕರಿಸಿತ್ತು.

ಈ ಮೊದಲು ಅಂದರೆ ಕಳೆದ ಡಿಸೆಂಬರ್‌ನಲ್ಲಿ ಕೂಡ ಪ್ರವೀಣ್‌ ಚೌಗುಲೆಯು ಜಾಮೀನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ. ಆಗ ನ್ಯಾಯಾಲಯವು ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ತನಿಖೆಯಲ್ಲಿ ಸಂಗ್ರಹಿಸಿರುವ ಸಾಕ್ಷ್ಯಾಧಾರಗಳಿಂದ ಆರೋಪಿ ಅಪರಾಧ ಎಸಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಅಲ್ಲದೆ ಈ ಪ್ರಕರಣದಲ್ಲಿ ಪ್ರತ್ಯಕ್ಷ ಸಾಕ್ಷ್ಯಗಳು ಕೂಡ ಇರುವ ಕಾರಣ ಜಾಮೀನು ನೀಡಲು ಸಾಧ್ಯವಿಲ್ಲ ಎಂದು ಹೇಳಿತ್ತು.

Categories
ಜಾತಕ

ಮಾರ್ಚ್ ತಿಂಗಳ ಕೊನೆ ದಿನದ ಜ್ಯೋತಿಷ್ಯ ಹೇಗಿದೆ?

ಮಾರ್ಚ್ ತಿಂಗಳ ಕೊನೆ ದಿನದ ಜ್ಯೋತಿಷ್ಯ ಹೇಗಿದೆ?
– ಯಾವ ರಾಶಿಯವರಿಗೆ ಶುಭ? ಯಾರಿಗೆ ಅಶುಭ?
– ಎಲ್ಲರ ರಾಶಿ ಫಲ ಇಲ್ಲಿದೆ ನೋಡಿ…!

NAMMUR EXPRESS NEWS
ಮಾರ್ಚ್ 31ರ ಭಾನುವಾರ ದಿನವಾದ ಇಂದು ನಿಮ್ಮ ದಿನವು ಹೇಗಿರಲಿದೆ..? ಇಂದು ಯಾವ ರಾಶಿಯವರಿಗೆ ಶುಭ.? ಯಾವ ರಾಶಿಯವರು ಎಚ್ಚರಿಕೆ.?

* ಮೇಷ ರಾಶಿ
ಕೆಲವು ಘಟನೆಗಳು ಅಚ್ಚರಿ ಮೂಡಿಸುತ್ತವೆ. ವೃತ್ತಿಪರ ಉದ್ಯೋಗಗಳಲ್ಲಿ ನಿಮ್ಮ ಪ್ರಾಮುಖ್ಯತೆ ಹೆಚ್ಚಾಗುತ್ತದೆ. ಬಂಧು ಮಿತ್ರರ ಬೆಂಬಲ ಹೆಚ್ಚಾಗುತ್ತದೆ. ಎಲ್ಲ ಕ್ಷೇತ್ರಗಳಿಗೂ ಅನುಕೂಲಕರ ವಾತಾವರಣವಿರುತ್ತದೆ. ಹೊಸ ವಾಹನ ಖರೀದಿಸಲಾಗುತ್ತದೆ. ವ್ಯಾಪಾರ ಅಭಿವೃದ್ಧಿ ಉಂಟಾಗುತ್ತದೆ.

* ವೃಷಭ ರಾಶಿ :
ಹಣದ ವಿಚಾರದಲ್ಲಿ ಸಂಕಷ್ಟ ಎದುರಾಗುತ್ತದೆ. ಹಠಾತ್ ಪ್ರಯಾಣ ಸೂಚನೆಗಳಿವೆ. ಇತರ ಜನರ ವ್ಯವಹಾರಗಳಲ್ಲಿ ಜಾಗರೂಕರಾಗಿರಿ. ಕುಟುಂಬದ ಸದಸ್ಯರು ನಿಮ್ಮ ಮಾತಿಗೆ ಒಪ್ಪುವುದಿಲ್ಲ. ಹೊಸ ಉದ್ಯಮಗಳನ್ನು ಪ್ರಾರಂಭಿಸದಿರುವುದು ಉತ್ತಮ.

* ಮಿಥುನ ರಾಶಿ :
ವೃತ್ತಿಪರ ವ್ಯವಹಾರದಲ್ಲಿ ಕಠಿಣ ಪರಿಶ್ರಮಕ್ಕೆ ತಕ್ಕ ಫಲ ದೊರೆಯುವುದಿಲ್ಲ. ಕೆಲಸಗಳು ನಿಧಾನವಾಗಿ ಸಾಗುತ್ತವೆ. ಪ್ರಮುಖ ವಿಷಯಗಳಲ್ಲಿ ನಿರ್ಧಾರ ತೆಗೆದುಕೊಳ್ಳುವುದು ಕಷ್ಟಕರವಾಗಿರುತ್ತದೆ. ದೇಗುಲಕ್ಕೆ ಭೇಟಿ ನೀಡುತ್ತೀರಿ. ಸ್ಥಿರ ಆಸ್ತಿಗೆ ಸಂಬಂಧಿಸಿದ ಒಪ್ಪಂದಗಳು ಕೂಡಿಬರುವುದಿಲ್ಲ ನಿರುದ್ಯೋಗಿಗಳು ಇನ್ನಷ್ಟು ಕಷ್ಟ ಪಡಬೇಕು.

* ಕರ್ಕ ರಾಶಿ :
ಆತ್ಮೀಯ ಸ್ನೇಹಿತರಿಂದ ಶುಭ ಸುದ್ದಿ ದೊರೆಯುತ್ತದೆ. ಹಠಾತ್ ಆರ್ಥಿಕ ಲಾಭ ಉಂಟಾಗುತ್ತದೆ. ವೃತ್ತಿಪರ ಉದ್ಯೋಗಗಳಲ್ಲಿ ಪ್ರಗತಿ ಕಂಡುಬರುತ್ತದೆ. ಕೆಲವು ವ್ಯವಹಾರಗಳಲ್ಲಿ ನಿರ್ಧಾರಗಳು ಕೂಡಿ ಬರುತ್ತವೆ. ಮೌಲ್ಯದ ವಸ್ತು ಮತ್ತು ವಾಹನಗಳನ್ನು ಖರೀದಿಸಲಾಗುತ್ತದೆ. ಆತ್ಮೀಯರೊಂದಿಗೆ ವಿವಾದಗಳು ಇತ್ಯರ್ಥವಾಗುತ್ತವೆ.

* ಸಿಂಹ ರಾಶಿ :
ಕುಟುಂಬ ಸದಸ್ಯರೊಂದಿಗೆ ಭೋಜನಾ ಮನರಂಜನಾ ಕಾರ್ಯಕ್ರಮದಲ್ಲಿ ಭಾಗವಹಿಸುತ್ತೀರಿ. ಕೆಲವು ಸಮಸ್ಯೆಗಳನ್ನು ಪರಿಹರಿಸುತ್ತೀರಿ. ಹೊಸ ಪರಿಚಯಗಳಿಂದ ಅಮೂಲ್ಯವಾದ ವಿಷಯಗಳು ತಿಳಿದುಬರುತ್ತವೆ. ನಿರುದ್ಯೋಗ ಸಮಸ್ಯೆಗಳು ದೂರವಾಗಲಿದ್ದು, ಉದ್ಯೋಗ ದೊರೆಯುತ್ತದೆ. ವ್ಯಾಪಾರದಲ್ಲಿ ಉತ್ಸಾಹದಾಯಕ ವಾತಾವರಣ ಇರುತ್ತದೆ.

* ಕನ್ಯಾ ರಾಶಿ :
ಬಂಧುಗಳಿಂದ ಸಾಲದ ಒತ್ತಡ ಹೆಚ್ಚಾಗುತ್ತದೆ. ಹಠಾತ್ ಪ್ರಯಾಣದ ಸೂಚನೆಗಳಿವೆ. ಸೋದರ ಸಂಬಂಧಿಗಳೊಂದಿಗೆ ಸ್ಥಿರಾಸ್ತಿ ವಿವಾದಗಳಿರುತ್ತದೆ. ಕೈಗೆತ್ತಿಕೊಂಡ ಕೆಲಸ ನಿಧಾನಗತಿಯಲ್ಲಿ ಸಾಗುತ್ತದೆ. ವೃತ್ತಿಪರ ಉದ್ಯೋಗಗಳಲ್ಲಿ ಸಮಸ್ಯೆಗಳು ಹೆಚ್ಚಾಗುತ್ತವೆ. ಗೃಹ ನಿರ್ಮಾಣ ಪ್ರಯತ್ನಗಳುಮುಂದೂಡಲ್ಪಡುತ್ತವೆ.

* ತುಲಾ ರಾಶಿ :
ಮನೆಯ ಹೊರಗೆ ಸಮಸ್ಯಾತ್ಮಕ ವಾತಾವರಣವಿರುತ್ತದೆ. ತಲೆನೋವು ಹೆಚ್ಚಾಗುತ್ತದೆ. ಸ್ನೇಹಿತರಿಂದ ಸಮಸ್ಯೆ ಉಂಟಾಗುತ್ತದೆ. ಹಣಕಾಸಿನ ಪರಿಸ್ಥಿತಿ ಅನುಕೂಲಕರವಾಗಿರುವುದಿಲ್ಲ. ಮಕ್ಕಳಿಗೆ ಆರೋಗ್ಯ ಸಮಸ್ಯೆಗಳಿರುತ್ತವೆ. ಉದ್ಯೋಗಕ್ಕೆ ಸಂಬಂಧಿಸಿದ ವಿವಾದಗಳಿಂದ ದೂರವಿರುವುದು ಉತ್ತಮ.

* ವೃಶ್ಚಿಕ ರಾಶಿ :
ಸಾಲದ ಪ್ರಯತ್ನಗಳು ಕೂಡಿ ಬರುತ್ತವೆ. ಕುಟುಂಬ ಸದಸ್ಯರಿಂದ ಸಹಾಯ ದೊರೆಯುತ್ತದೆ. ಉದ್ಯೋಗದಲ್ಲಿನ ಅಡೆತಡೆಗಳು ನಿವಾರಣೆಯಾಗುತ್ತವೆ. ಆರ್ಥಿಕವಾಗಿ ಅನುಕೂಲತೆ ಉಂಟಾಗುತ್ತದೆ. ದೂರದ ಸಂಬಂಧಿಕರಿಂದ ಆಹ್ವಾನಗಳು ಬರುತ್ತವೆ. ವ್ಯಾಪಾರಗಳು ತೃಪ್ತಿಕರವಾಗಿರುತ್ತವೆ. ಸಮಯಕ್ಕೆ ಸರಿಯಾಗಿ ಕೆಲಸಗಳು ಪೂರ್ಣಗೊಳ್ಳುತ್ತದೆ.

* ಧನು ರಾಶಿ :
ಸಹೋದರರೊಂದಿಗೆ ವಿವಾದಗಳು ಉಂಟಾಗುತ್ತದೆ. ವೃತ್ತಿಪರ ಉದ್ಯೋಗಗಳಲ್ಲಿ ಶ್ರಮ ಶೀಲತೆ ಹೆಚ್ಚಾಗುತ್ತದೆ. ಆಧ್ಯಾತ್ಮಿಕ ಚಿಂತನೆಮೂಡುತ್ತದೆ. ಪ್ರಮುಖ ಕಾರ್ಯಗಳನ್ನು ಮುಂದೂಡುವುದು ಉತ್ತಮ. ಉದ್ಯೋಗ ಪ್ರಯತ್ನಗಳು ಮಂದಗತಿಯಲ್ಲಿ ಸಾಗುತ್ತವೆ. ವ್ಯಾಪಾರ ವ್ಯವಹಾರಗಳನ್ನು ಸಮರ್ಥವಾಗಿ ನಿರ್ವಹಿಸಲಾಗುತ್ತದೆ.

* ಮಕರ ರಾಶಿ :
ಕೈಗೆತ್ತಿಕೊಂಡ ಕೆಲಸಗಳು ತ್ವರಿತವಾಗಿ ಪೂರ್ಣಗೊಳ್ಳುತ್ತವೆ. ಮನೆಯಲ್ಲಿ ಶುಭ ಕಾರ್ಯಗಳು ವೇಗವಾಗಿ ಪೂರ್ಣಗೊಳ್ಳುತ್ತವೆ. ಸ್ಥಿರಾಸ್ತಿ ವಿವಾದಗಳು ಬಗೆಹರಿಯುತ್ತವೆ. ಹಳೆ ಸಾಲಗಳನ್ನು ವಸೂಲಿ ಮಾಡಲಾಗುತ್ತದೆ. ದೈವಿಕ ಸೇವಾ ಕಾರ್ಯಗಳಲ್ಲಿ ಭಾಗವಹಿಸುತ್ತೀರಿ. ಉದ್ಯೋಗದಲ್ಲಿ ಹೆಚ್ಚಿನ ಪ್ರಗತಿ ಕಂಡುಬರುತ್ತದೆ

* ಕುಂಭ ರಾಶಿ :
ಸಾಲಗಾರರಿಂದ ಒತ್ತಡ ಹೆಚ್ಚಾಗುತ್ತದೆ. ಕೆಲವು ವ್ಯವಹಾರಗಳು ನಿರಾಶಾದಾಯಕವಾಗಿರುತ್ತವೆ. ಅಗತ್ಯವಿಲ್ಲದ ವಸ್ತುಗಳಿಗೆ ಹಣ ಖರ್ಚಾಗುತ್ತದೆ. ವೆಚ್ಚವನ್ನು ನಿಯಂತ್ರಿಸಲು ಕಷ್ಟವಾಗುತ್ತದೆ. ವ್ಯಾಪಾರಗಳು ಮಿಶ್ರ ಫಲಿತಾಂಶಗಳನ್ನು ಹೊಂದಿರುತ್ತವೆ. ಉದ್ಯೋಗದಲ್ಲಿ ಪ್ರಮುಖ ದಾಖಲೆಗಳ ಬಗ್ಗೆ ಕಾಳಜಿ ವಹಿಸಬೇಕು.

* ಮೀನ ರಾಶಿ :
ವೃತ್ತಿಪರ ಉದ್ಯೋಗಗಳಲ್ಲಿ ಮಾಡಿದ ಕೆಲಸಕ್ಕೆ ಮೆಚ್ಚುಗೆ ದೊರೆಯುತ್ತದೆ. ಹೊಸ ವ್ಯಕ್ತಿಗಳ ಪರಿಚಯಗಳಾಗುತ್ತವೆ ಕುಟುಂಬ ಸದಸ್ಯರ ನಡುವೆ ಮದುವೆಯ ಪ್ರಸ್ತಾಪವಿರುತ್ತದೆ. ಹೊಸ ಕಾರ್ಯಕ್ರಮಗಳನ್ನು ಆರಂಭಿಸಲಾಗುತ್ತದೆ. ಉದ್ಯೋಗ ಸಂಬಂಧಿತ ವಿವಾದಗಳನ್ನು ಪರಿಹರಿಸಿಕೊಳ್ಳುತ್ತೀರಿ.

Categories
ತೀರ್ಥಹಳ್ಳಿ ರಾಜಕೀಯ ಶಿವಮೊಗ್ಗ

ರಾಘವೇಂದ್ರ ಅಧಿಕೃತ ಪ್ರಚಾರ ತೀರ್ಥಹಳ್ಳಿಯಲ್ಲಿ ಶುರು!

ರಾಘವೇಂದ್ರ ಅಧಿಕೃತ ಪ್ರಚಾರ ತೀರ್ಥಹಳ್ಳಿಯಲ್ಲಿ ಶುರು!
– ಆರಗ ಜ್ಞಾನೇಂದ್ರ ನೇತೃತ್ವದಲ್ಲಿ ತೀರ್ಥಹಳ್ಳಿಯಲ್ಲಿ ಸಭೆ
– 1000ಕ್ಕೂ ಹೆಚ್ಚು ಮಂದಿ ಮಹಿಳಾ ಕಾರ್ಯಕರ್ತರು ಭಾಗಿ
– ಬಿಜೆಪಿ ಗೆಲ್ಲೋದು ಪಕ್ಕಾ ಎಂದ ರಾಘವೇಂದ್ರ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯಲ್ಲಿ ಶನಿವಾರ ಲೋಕಸಭಾ ಚುನಾವಣೆಯ ಶಿವಮೊಗ್ಗ ಕ್ಷೇತ್ರದ ಅಭ್ಯರ್ಥಿ ಬಿ ವೈ ರಾಘವೇಂದ್ರ ಅವರ ಅಧಿಕೃತ ಪ್ರಚಾರ ಶುರುವಾಗಿದೆ. ತೀರ್ಥಹಳ್ಳಿಯ ದರಲಗೋಡಿನಲ್ಲಿ ಹಮ್ಮಿಕೊಂಡಿದ್ದ ಮಹಿಳಾ ಮೋರ್ಚಾದ ಆರಗ ಮಹಾ ಶಕ್ತಿ ಕೇಂದ್ರದ ಸಭೆಗೆ ಆಗಮಿಸಿ ಅಲ್ಲಿ ಮಾತನಾಡಿದರು. ಸುದ್ದಿಗಾರರ ಜತೆ ಮಾತನಾಡಿದ ಅವರು, ಚುನಾವಣೆ ಅಧಿಕೃತವಾಗಿ ಅಭ್ಯರ್ಥಿಯಾಗಿ ಘೋಷಣೆಯಾದ ಮೇಲೆ ಮೊದಲನೆಯ ಕಾರ್ಯಕ್ರಮವನ್ನು ಇಂದು ಮಾತೃಶಕ್ತಿ ಸಮಾವೇಶದ ಮುಖಾಂತರ ತೀರ್ಥಹಳ್ಳಿ ಕ್ಷೇತ್ರದಲ್ಲಿ ನಮ್ಮ ನಾಯಕ ಜ್ಞಾನೇಂದ್ರ ಅವರ ನೇತೃತ್ವದಲ್ಲಿ ನಡೆಸುತ್ತಿದ್ದೇವೆ.ಈ ಬಾರಿಯ ಚುನಾವಣೆ ಯಾವುದೇ ಗ್ಯಾರಂಟಿ ಅಥವಾ ಯಾವೊಬ್ಬ ವ್ಯಕ್ತಿಯನ್ನು ಎಂಪಿ ಮಾಡಲು ನಡೆಯುತ್ತಿರುವಂತಹ ಚುನಾವಣೆ ಅಲ್ಲ. ಈ ಬಾರಿಯ ಚುನಾವಣೆ ದೇಶದ ಭವಿಷ್ಯವಾಗಿದೆ. ದೇಶದ ಪ್ರಜೆಗಳ ಭವಿಷ್ಯವನ್ನು ಕಣ್ಣು ಮುಂದೆ ಇಟ್ಟುಕೊಂಡು, ಹಿಂದುತ್ವಕ್ಕೆ ಹೆಚ್ಚು ಶಕ್ತಿಯನ್ನು ಈ ಚುನಾವಣೆಯಲ್ಲಿ ತುಂಬುವಂತ ಕೆಲಸವನ್ನು ಇಟ್ಟುಕೊಂಡು ಹಾಗೂ ಈ ಭಾಗದ ಬಡವರ, ಮಹಿಳೆಯರ, ಯುವಕರ ಹಾಗೂ ರೈತರ ಶ್ರೇಯಾಭಿವೃದ್ಧಿಗೋಸ್ಕರ ನಡೆಯುತ್ತಿರುವ ಚುನಾವಣೆಯಾಗಿದೆ ಎಂದರು.

ಸ್ವಾತಂತ್ರ್ಯ ಬಂದು 2047 ನೇ ಇಸವಿಗೆ 100 ವರ್ಷ ತುಂಬುತ್ತಿರುವಂತ ಈ ಸಂದರ್ಭದಲ್ಲಿ ವಿಕಸಿತ ಭಾರತ ಆಗಬೇಕು, ಅದರ ಮುಖಾಂತರ ಈ ನಾಡಿನ ಪ್ರಜೆಗಳ ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಶಕ್ತಿ ತುಂಬುವಂತಹ ಚುನಾವಣೆಯನ್ನು ಕಣ್ಣ ಮುಂದೆ ಇಟ್ಟುಕೊಂಡು ನಾವು ಮಾಡುತ್ತಿದ್ದೇವೆ. ವಿಶೇಷವಾಗಿ ತೀರ್ಥಹಳ್ಳಿ ಕ್ಷೇತ್ರ ಒಂದು ರಾಷ್ಟ್ರೀಯ ವಿಚಾರಗಳಲ್ಲಿ ಭಾವನಾತ್ಮಕವಾದ ಸಂಬಂಧಗಳನ್ನು ಇಟ್ಟುಕೊಂಡಿರುವುದು ಈ ಪವಿತ್ರವಾದ ಮಣ್ಣಿನ ಗುಣ. ಅನೇಕ ಹಿರಿಯ ರಾಜಕಾರಣಿಗಳನ್ನು ಕೊಟ್ಟಂತ ಒಂದು ಕ್ಷೇತ್ರ ಇದಾಗಿದೆ. ದೌರ್ಭಾಗ್ಯ ಎಂದರೆ ನಮ್ಮ ಜಿಲ್ಲೆಯಲ್ಲಾಗುತ್ತಿರುವಂತಹ ರಾಜಕಾರಣ, ಸಭೆ ಸಮಾರಂಭಗಳಲ್ಲಿ ವಿರೋಧ ಪಕ್ಷಗಳು ತಮ್ಮ ವಿಚಾರಗಳನ್ನು ಮಂಡಿಸಲು ವಿಚಾರ, ಸಿದ್ಧಾಂತ, ಒಂದು ಅಭಿವೃದ್ಧಿಯ ಗುರಿ ಯಾವುದು ಇಲ್ಲದ ಕಾರಣ ವಿರೋಧ ಪಕ್ಷಗಳು ಟೀಕೆ ಮಾಡುವುದೇ ಒಂದು ಪ್ರಚಾರ ಎಂದುಕೊಂಡು ಚುನಾವಣಾ ಪ್ರಚಾರ ಮಾಡುತ್ತಿದೆ ಎಂದರು.

5 ಲಕ್ಷಕ್ಕಿಂತ ಹೆಚ್ಚಿನ ರೈತ ಕುಟುಂಬಗಳಿಗೆ ಕಳೆದ ಆರು ತಿಂಗಳಿನಿಂದ ಐದು ರೂಪಾಯಿ ಪ್ರೋತ್ಸಾಹ ಧನ ನೀಡಲು ಕಾಂಗ್ರೆಸ್ ಸರ್ಕಾರಕ್ಕೆ ಆಗುತ್ತಿಲ್ಲ. ಯಾವುದೇ ಅಭಿವೃದ್ಧಿ ಕಾರ್ಯ ಆಗುತ್ತಿಲ್ಲ. ಎಲ್ಲಾ ಪ್ರಜ್ಞಾವಂತ ಮತದಾರರು ಇದನ್ನು ಗಮನಿಸುತ್ತಿದ್ದಾರೆ, ಯಾವುದೇ ವೈಯಕ್ತಿಕ ಟಿಕೆ ಟಿಪ್ಪಣಿಗಳು ನಡೆದರೆ ಅದು ಚುನಾವಣೆಯಲ್ಲ. ನಮ್ಮ ಮೋದಿಜಿ ಅವರ ನೇತೃತ್ವದಲ್ಲಾದಂತಹ ಅಭಿವೃದ್ಧಿಯ ಕೆಲಸ, ನಮ್ಮ ಜ್ಞಾನೇಂದ್ರ ಅವರ ನೇತೃತ್ವದಲ್ಲಿ ಆದಂತಹ ತೀರ್ಥಹಳ್ಳಿಯ ಅಭಿವೃದ್ಧಿ ಕೆಲಸಗಳನ್ನು ನಾವು ಕಣ್ಣ ಮುಂದೆ ಇಟ್ಟುಕೊಂಡು ಈ ಬಾರಿ ತೀರ್ಥಹಳ್ಳಿ ಕ್ಷೇತ್ರದಲ್ಲಿ ನಾವು ಚುನಾವಣೆಯನ್ನು ಎದುರಿಸಲಿದ್ದೇವೆ. ತೀರ್ಥಹಳ್ಳಿ ಕ್ಷೇತ್ರ ವ್ಯಕ್ತಿಗಿಂತ ಪಕ್ಷ ಪಕ್ಷಕ್ಕಿಂತ ದೇಶ ಮುಖ್ಯ ಎಂದು ಚಿಂತನೆ ಮಾಡುವಂತಹ ಮತದಾರರು ಇದ್ದಾರೆ. ಈ ಬಾರಿ ನೂರಕ್ಕೆ ನೂರು ದೇಶದ ಹಿತ ದೃಷ್ಟಿಯಿಂದ ಮೋದಿಜಿಯವರಿಗೆ ಸುಮಾರು ಒಂದು ಕಾಲು ಲಕ್ಷಕ್ಕಿಂತ ಹೆಚ್ಚಿನ ಮತವನ್ನು ನಮ್ಮ ತೀರ್ಥಹಳ್ಳಿ ಕ್ಷೇತ್ರದ ಜನ ಬಿಜೆಪಿಗೆ ನೀಡುತ್ತಾರೆ ಎನ್ನುವುದರಲ್ಲಿ ಯಾವುದೇ ಅನುಮಾನ ಇಲ್ಲ ಎಂದರು.

ತೀರ್ಥಹಳ್ಳಿ ಜೆಡಿಎಸ್ ಅಧ್ಯಕ್ಷರಾದ ಕಿರಣ್, ರಾಜ್ಯದ ಮಹಿಳಾ ಮೋರ್ಚಾದ ಅಧ್ಯಕ್ಷರಾದ ಮಂಜುಳಾ ಭದ್ರಾವತಿ, ಜಿಲ್ಲಾ ಮಹಿಳಾ ಮೋರ್ಚಾದ ಅಧ್ಯಕ್ಷರಾದ ಗಾಯತ್ರಿ, ಪ್ರಧಾನ ಕಾರ್ಯದರ್ಶಿ ಮಂಗಳ ನಾಗೇಂದ್ರ, ತೀರ್ಥಹಳ್ಳಿ ಮಂಡಲದ ಮಹಿಳಾ ಮೋರ್ಚಾದ ಅಧ್ಯಕ್ಷರಾದ ಯಶೋಧ ಮಂಜುನಾಥ್, ಮಹಿಳಾ ಘಟಕದ ತೀರ್ಥಹಳ್ಳಿ ಜೆಡಿಎಸ್ ಅಧ್ಯಕ್ಷರಾದ ಶೈಲಾ ನಾಗರಾಜ್, ಜೆಡಿಎಸ್ ಜಿಲ್ಲಾ ಪದಾಧಿಕಾರಿ ಚಂದ್ರಕಲಾ, ಹೆದ್ದೂರು ನವೀನ್ ಸೇರಿ ಹಲವರು ಇದ್ದರು.