Categories
ಅಡಿಕೆ-ದರ

ಅಡಿಕೆ ದರ 30-04-2024

ಅಡಿಕೆ ದರ
30-04-2024
ಸರಕು 53569 85730
ಬೆಟ್ಟೆ 48009 56399
ರಾಶಿ 43009 52310
ಗೊರಬಲು 28100 35109
Nammur Express
Categories
ಮಾಹಿತಿ

ಮೇ ತಿಂಗಳಲ್ಲಿ ಬ್ಯಾಂಕುಗಳಿಗೆ 10 ದಿನ ರಜೆ.!

ಮೇ ತಿಂಗಳಲ್ಲಿ ಬ್ಯಾಂಕುಗಳಿಗೆ 10 ದಿನ ರಜೆ.!
– ಕಾರ್ಮಿಕರ ದಿನ, ಬಸವ ಜಯಂತಿ ಇತ್ಯಾದಿ ರಜಾ ದಿನ
– ಯಾವತ್ತು ಸರ್ಕಾರಿ ರಜೆ: ಯಾವತ್ತು ಬ್ಯಾಂಕ್ ರಜೆ?

NAMMUR EXPRESS NEWS
ಬೆಂಗಳೂರು: ಆರ್​ಬಿಐ ಕ್ಯಾಲಂಡರ್ ಪ್ರಕಾರ 2024ರ ಮೇ ತಿಂಗಳಲ್ಲಿ ಬ್ಯಾಂಕುಗಳಿಗೆ 11 ದಿನ ರಜೆ ಇದೆ. ಚುನಾವಣೆಯ ಮೂರರಿಂದ ಆರು ಹಂತಗಳ ಮತದಾನದ ಹಿನ್ನೆಲೆಯಲ್ಲಿ ಕೆಲವೆಡೆ ರಜೆ ಇರುವುದು ಸೇರಿ ಮೇ ತಿಂಗಳಲ್ಲಿ 14 ದಿನ ಬ್ಯಾಂಕ್ ರಜೆ ಇದೆ. ಕರ್ನಾಟಕದಲ್ಲಿ 10 ದಿನ ರಜೆ ಇದೆ. ಮೇ 1ರಂದು ಕಾರ್ಮಿಕರ ದಿನದ ನಿಮಿತ್ತ ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ 11 ರಾಜ್ಯಗಳಲ್ಲಿ ಬ್ಯಾಂಕುಗಳು ಬಂದ್ ಆಗಲಿವೆ. ಮೇ 7, 13, 20 ಮತ್ತು 25ರಂದು ವಿವಿಧೆಡೆ ಮತದಾನ ನಡೆಯಲಿದೆ. ಮೇ 7ರಂದು ಕರ್ನಾಟಕದ 14 ಕ್ಷೇತ್ರಗಳಲ್ಲಿ ಮತದಾನ ಇರುವುದರಿಂದ ಅಲ್ಲಿನ ಬ್ಯಾಂಕುಗಳು ಬಂದ್ ಇರುತ್ತವೆ. ಮೇ ತಿಂಗಳಲ್ಲಿ ನಾಲ್ಕು ಭಾನುವಾರ ಮತ್ತು ಎರಡು ಶನಿವಾರ ರಜೆಗಳೂ ಇವೆ.

ಕರ್ನಾಟಕದಲ್ಲಿ 10 ದಿನ ರಜೆ:

ಕರ್ನಾಟಕದಲ್ಲಿ ಮೇ 1ಕ್ಕೆ ಕಾರ್ಮಿಕರ ದಿನದ ನಿಮಿತ್ತ ರಜೆ ಇದೆ. ಮೇ 7ಕ್ಕೆ 3ನೇ ಹಂತದ ಚುನಾವಣೆ ಇರುವುದರಿಂದ 14 ಲೋಕಸಭಾ ಕ್ಷೇತ್ರಗಳಲ್ಲಿ ಬ್ಯಾಂಕ್ ರಜೆ ಇರುತ್ತದೆ. ಮೇ 10ರಂದು ಬಸವ ಜಯಂತಿ, ಮೇ 23ರಂದು ಬುದ್ಧ ಪೂರ್ಣಿಮಾ ಇರುವುದರಿಂದ ಕರ್ನಾಟಕದಲ್ಲಿ ಬ್ಯಾಂಕುಗಳಿಗೆ ಆರ್​ಬಿಐ ರಜೆ ಕಲ್ಪಿಸಿದೆ.

ಮೇ ತಿಂಗಳಲ್ಲಿ ಕರ್ನಾಟಕದಲ್ಲಿ ಬ್ಯಾಂಕುಗಳಿಗೆ ಇರುವ ರಜೆಗಳು:

ಮೇ 1, ಬುಧವಾರ: ಕಾರ್ಮಿಕರ ದಿನ
ಮೇ 5: ಭಾನುವಾರ
ಮೇ 7, ಮಂಗಳವಾರ: ಚುನಾವಣೆ (ಉತ್ತರ ಕರ್ನಾಟಕ ಭಾಗದ 14 ಕ್ಷೇತ್ರಗಳಲ್ಲಿ)
ಮೇ 10, ಶುಕ್ರವಾರ: ಬಸವ ಜಯಂತಿ/ ಅಕ್ಷಯ ತೃತೀಯ
ಮೇ 11: ಎರಡನೇ ಶನಿವಾರ
ಮೇ 12: ಭಾನುವಾರ
ಮೇ 19: ಭಾನುವಾರ
ಮೇ 23, ಗುರುವಾರ: ಬುದ್ಧ ಪೂರ್ಣಿಮಾ
ಮೇ 25: ನಾಲ್ಕನೇ ಶನಿವಾರ
ಮೇ 26: ಭಾನುವಾರ

ಬ್ಯಾಂಕುಗಳು ಬಂದ್ ಆಗಿದ್ದರೂ ಬಹುತೇಕ ಬ್ಯಾಂಕಿಂಗ್ ಸೇವೆಗಳು ಆನ್​ಲೈನ್​ನಲ್ಲಿ ಸದಾ ಲಭ್ಯ ಇರುತ್ತವೆ. ಎಟಿಎಂ, ನೆಟ್ ಬ್ಯಾಂಕಿಂಗ್, ಫೋನ್ ಬ್ಯಾಂಕಿಂಗ್, ಯುಪಿಐ ಇತ್ಯಾದಿ ಮೂಲಕ ಹಣದ ವಹಿವಾಟು ನಡೆಸಬಹುದು.

Categories
ರಾಜ್ಯ ರಾಷ್ಟ್ರೀಯ ವಾರ್ತೆ

ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಗ್ಯಾಸ್ ಫ್ರೀ!

ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಗ್ಯಾಸ್ ಫ್ರೀ!
– ಸಿಗಲಿದೆ ಉಚಿತ ಗ್ಯಾಸ್ ಸಿಲಿಂಡರ್‌ ಸಂಪರ್ಕ
– ವರ್ಷಕ್ಕೆ ಮೂರು ಉಚಿತ ಸಿಲಿಂಡರ್‌

NAMMUR EXPRESS NEWS
ನವದೆಹಲಿ: ಗ್ಯಾಸ್ ಉಚಿತವಾಗಿ ಸಿಗುವ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ. 2016 ರಲ್ಲಿ, ಕೇಂದ್ರ ಸರ್ಕಾರವು ಅರಣ್ಯನಾಶವನ್ನು ತಡೆಗಟ್ಟುವುದರ ಜೊತೆಗೆ ಮನೆಯಲ್ಲಿ ಅಡುಗೆ ಮಾಡುವ ಪ್ರಕ್ರಿಯೆಯನ್ನ ಸುಲಭಗೊಳಿಸುವ ಉದ್ದೇಶದಿಂದ ಎಲ್ಲಾ ಅರ್ಹ ಜನರಿಗೆ ಉಚಿತ ಗ್ಯಾಸ್ ಸಂಪರ್ಕವನ್ನು ನೀಡಲು ಪ್ರಾರಂಭಿಸಿತು. ಇದರ ಭಾಗವಾಗಿ ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಉಜ್ವಲ ಯೋಜನೆ ಅಡಿಯಲ್ಲಿ ವರ್ಷಕ್ಕೆ 3 ಸಿಲಿಂಡರ್‌’ಗಳನ್ನ ನೀಡುವ ಯೋಜನೆಯನ್ನು ಪರಿಚಯಿಸಿದೆ. ಆದರೆ ಬಿಪಿಎಲ್ ಪಡಿತರ ಚೀಟಿದಾರರು ಮಾತ್ರ ಈ ಯೋಜನೆಯ ಮೂಲಕ 3 ಸಿಲಿಂಡರ್ ಪಡೆಯಲು ಅರ್ಹರಾಗಿರುತ್ತಾರೆ. 2016ರಲ್ಲಿ ಆರಂಭವಾದ ಈ ಯೋಜನೆ ಈಗಲೂ ಮುಂದುವರಿದಿದೆ. ಈ ಯೋಜನೆಯಿಂದ ಈಗಾಗಲೇ ಅನೇಕ ಅರ್ಹರು ಪ್ರಯೋಜನ ಪಡೆದಿದ್ದಾರೆ.
ಈ ಯೋಜನೆಯ ಮೂಲಕ ಪ್ರಯೋಜನಗಳನ್ನ ಪಡೆಯಲು, ನೀವು ಖಚಿತವಾಗಿ ಅರ್ಜಿ ಸಲ್ಲಿಸಬೇಕು. ಅಲ್ಲದೆ ಅರ್ಜಿದಾರರು ಬಿಪಿಎಲ್ ಪಡಿತರ ಚೀಟಿ ಹೊಂದಿರಬೇಕು. ಆಗ ಮಾತ್ರ ನೀವು ಈ ಯೋಜನೆಗೆ ಅರ್ಹರಾಗುತ್ತೀರಿ. ಆದ್ದರಿಂದ ಅರ್ಹ ಕುಟುಂಬಗಳು ಈ ಯೋಜನೆಯ ಪ್ರಯೋಜನಗಳನ್ನ ಪಡೆಯಲು ವೆಬ್‌ಸೈಟ್ www.pmuy.gov.in ಮೂಲಕ ಅರ್ಜಿ ಸಲ್ಲಿಸಬಹುದು.

ಅಗತ್ಯ ದಾಖಲೆಗಳು.!

ಈ ಯೋಜನೆಗೆ ಅರ್ಜಿ ಸಲ್ಲಿಸಲು ಆಧಾರ್ ಕಾರ್ಡ್, ಬ್ಯಾಂಕ್ ವಿವರಗಳು ಮತ್ತು ಇತರ ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕು. ಪ್ರತಿ ವರ್ಷ ಮೂರು ಉಚಿತ ಸಿಲಿಂಡರ್‌ಗಳನ್ನ ನೀಡುವ ಮೂಲಕ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಬೆಂಬಲ ನೀಡುವ ಗುರಿಯನ್ನ ಕೇಂದ್ರ ಸರ್ಕಾರ ಹೊಂದಿದೆ. .

Categories
ರಾಜ್ಯ ವ್ಯವಹಾರ

ಚಿನ್ನ ಇನ್ನು ಮುಟ್ಟೋಕೂ ಆಗಲ್ಲ!

ಚಿನ್ನ ಇನ್ನು ಮುಟ್ಟೋಕೂ ಆಗಲ್ಲ!
– ಚಿನ್ನದ ಬೆಲೆ ಶೀಘ್ರದಲ್ಲೇ 1 ಲಕ್ಷ ರೂಪಾಯಿ?
– ದಿನೇ ದಿನೇ ಏರುತ್ತಿದೆ ಚಿನ್ನದ ದರ!

NAMMUR EXPRESS NEWS
ಚಿನ್ನ ಭಾರತೀಯರು ಅತೀ ಹೆಚ್ಚು ಇಷ್ಟ ಪಡುವ ವಸ್ತು. ಆದರೆ ಈಗ ಚಿನ್ನವನ್ನು ಸಾಮಾನ್ಯ ಜನರು ಮುಟ್ಟದ ಸ್ಥಿತಿ ಬಂದಿದೆ. ಚಿನ್ನದ ಬೆಲೆ ಇದೇ ವರ್ಷ 1 ಲಕ್ಷ ರೂಪಾಯಿ ತಲುಪುವ ಸಾಧ್ಯತೆ ದಟ್ಟವಾಗಿದೆ. ಭಾರತದಲ್ಲಿ ಇದೀಗ 10 ಗ್ರಾಂನ 22 ಕ್ಯಾರಟ್ ಚಿನ್ನದ ಬೆಲೆ 66,850 ರೂಪಾಯಿ ಇದ್ರೆ, 24 ಕ್ಯಾರಟ್‌ನ ಅಪರಂಜಿ ಚಿನ್ನದ ಬೆಲೆ 72,930 ರೂಪಾಯಿಗೆ ತಲುಪಿದೆ. 100 ಗ್ರಾಂ ಬೆಳ್ಳಿ ಬೆಲೆ 8,400 ರೂಪಾಯಿ ಇದ್ದರೆ, ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಂಗೆ ಬರೋಬ್ಬರಿ 66,850 ರೂಪಾಯಿಗೆ ತಲುಪಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಈಗ ರಾಜಕೀಯ ಪರಿಸ್ಥಿತಿ, ಯುದ್ಧ ಹಾಗೂ ಭಾರತದ ಆರ್ಥಿಕತೆ ಕಾರಣಗಳಿಂದ ಚಿನ್ನದ ಬೆಲೆ ಇದೀಗ ಹೆಚ್ಚಾಗುತ್ತಿದೆ. 22 ಕ್ಯಾರಟ್‌ನ 10 ಗ್ರಾಂ ಚಿನ್ನಕ್ಕೆ ಬೆಂಗಳೂರು ನಗರದಲ್ಲಿ 66,850 ರೂಪಾಯಿ, ಚೆನ್ನೈನಲ್ಲಿ 67,700 ರೂಪಾಯಿ, ಮುಂಬೈ ನಗರದಲ್ಲಿ 66,850 ರೂಪಾಯಿ, ದೆಹಲಿಯಲ್ಲಿ 67,000 ರೂಪಾಯಿ, ಕೊಲ್ಕತ್ತಾ ನಗರದಲ್ಲಿ 66,850 ರೂ. ಕೇರಳದಲ್ಲಿ 66,850 ರೂಪಾಯಿ ಇದೆ.

ಮದುವೆ ಸೀಸನ್ ಚಿನ್ನ ದುಬಾರಿ!

ರಾಜ್ಯದಲ್ಲಿ ಮದುವೆ ಮತ್ತು ಕಾರ್ಯಕ್ರಮಗಳ ಸೀಜನ್ ಇದು. ಇಲ್ಲಿ ಚಿನ್ನ ಕೊಳ್ಳಲೇ ಬೇಕು. ಆದರೆ ದರ ಏರಿಕೆ ಬರೆ ಜನರನ್ನು ಕಾಡುತ್ತಿದೆ.

Categories
ಶಿವಮೊಗ್ಗ

ಅಜಾದ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮಾದರಿ ಹೆಜ್ಜೆ

ಅಜಾದ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮಾದರಿ ಹೆಜ್ಜೆ
– ಸಂಸ್ಥೆಯ ವಿದ್ಯಾರ್ಥಿಗಳಿಗೆ ಸಿ.ಎನ್.ಸಿ ಪ್ರಮಾಣ ಪತ್ರ ವಿತರಣೆಯ ಜತೆಗೆ ಜೀವನ ಪಾಠ
– ಪೊಲೀಸ್ ಅಧಿಕಾರಿಗಳಿಂದ ವಿದ್ಯಾರ್ಥಿಗಳಿಗೆ ಕಾನೂನು ಮಾಹಿತಿ

NAMMUR EXPRESS NEWS
ಶಿವಮೊಗ್ಗ: ಶಿವಮೊಗ್ಗದ ಪ್ರತಿಷ್ಠಿತ ಸಂಸ್ಥೆಯಾದ ಅಜಾದ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಇತ್ತೀಚಿಗೆ ಸಂಸ್ಥೆಯ ಎಲ್ಲಾ ವಿಧ್ಯಾರ್ಥಿಗಳಿಗೂ ಸಿ.ಎನ್.ಸಿ ಟ್ರೈನಿಂಗ್ ನಲ್ಲಿ ಮಾನ್ಯತೆ ಪಡೆದ ಪ್ರಮಾಣ ಪತ್ರ ವಿತರಿಸಲಾಯಿತು. ಈ ಶುಭ ಸಮಾರಂಭಕ್ಕೆ ಸಂಸ್ಥೆಯ ಮುಖ್ಯಸ್ಥರಾದ ಮಹಮದ್ ಷಫಿ ಮತ್ತು ಮುಖ್ಯ ಅತಿಥಿಯಾಗಿ ಶಿವಮೊಗ್ಗದ ಕೋಟೆ ರಸ್ತೆ ವಿಭಾಗದ ಆರಕ್ಷಕ ಠಾಣೆಯ ನಿರೀಕ್ಷಕರಾದ ನಾಗೇಶ್, ಶ್ರೀನಿವಾಸ್ ಹಾಗೂ ರವಿ ಕುಮಾರ್ ಆಗಮಿಸಿದ್ದರು.
ವಿದ್ಯಾರ್ಥಿಗಳ ಕುರಿತು ಸಭೆಯಲ್ಲಿ ಮಾತನಾಡಿದ ರವಿ ಕುಮಾರ್ ಅವರು ವಿದ್ಯಾರ್ಥಿ ಜೀವನ ಅತ್ಯಮೂಲ್ಯವಾದದ್ದು. ಮೊಬೈಲ್ ಬಳಕೆಯಿಂದ ವಿದ್ಯಾರ್ಥಿ ಜೀವನ ಹಾಳು ಮಾಡಿಕೊಳ್ಳಬೇಡಿ. ಪ್ರೀತಿ ಪ್ರೇಮ ಎಂಬ ಆಟಕ್ಕೆ ಬಿದ್ದು ಜೀವನದ ಅತ್ಯಮೂಲ್ಯ ಸಮಯ ಕಳೆಯದಂತೆ ನೋಡಿಕೊಳ್ಳಿ ಎಂದರು.

ಪಿ.ಎಸ್.ಐ ನಾಗೇಶ್ ಮತ್ತು ಶ್ರೀನಿವಾಸ್ ಮಾತನಾಡಿ ವಿದ್ಯಾರ್ಥಿಗಳಿಗೆ ಕಾನೂನಿನ ಅರಿವು ಮೂಡಿಸುವಲ್ಲಿ ಯಶಸ್ವಿಯಾದರು. ಸಂಸ್ಥೆಯ ಸಿ.ಎನ್.ಸಿ. ಪ್ರೋಗ್ರಾಂ ತರಬೇತುದಾರರಾದ ಷಣ್ಮುಖ ಕಾರ್ಯಕ್ರಮವನ್ನು ನಿರೂಪಿಸಿದರು‌. ಶಾಹೀದ್, ನಾಜಿರ್ ಸೇರಿದಂತೆ ಸಂಸ್ಥೆಯ ಪ್ರತಿನಿಧಿಗಳು ಹಾಜರಿದ್ದರು. ಅಜಾದ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಶಿವಮೊಗ್ಗದ ಪ್ರಮಾಣಪತ್ರ ವಿತರಣಾ ಸಮಾರಂಭವು ವಿಧ್ಯಾರ್ಥಿಗಳಿಗೆ ಕಾನೂನು ಅರಿವು ಮೂಡಿಸುವಲ್ಲಿ ಹಾಗೂ ಮುಂದಿನ ಭವಿಷ್ಯಕ್ಕೆ ಪ್ರೇರಣೆ ನೀಡುವಲ್ಲಿ ಯಶಸ್ವಿಯಾಯಿತು.

Categories
ರಾಜ್ಯ ಹವಾಮಾನ ಸುದ್ದಿ

ಏಪ್ರಿಲಿನಲ್ಲಿ 100 ವರ್ಷಗಳ ದಾಖಲೆ ಬಿಸಿಲು!

ಏಪ್ರಿಲಿನಲ್ಲಿ 100 ವರ್ಷಗಳ ದಾಖಲೆ ಬಿಸಿಲು!
– ಮೇನಲ್ಲೂ ಮುಂದುವರೆಯಲಿದೆ ಬಿಸಿಲಿನ ತಾಪ
– ಕೃಷಿ, ಕೆಲಸಕ್ಕೂ ಬಿಸಿಲು ತೊಂದರೆ: ಮುಂದೆ ಕಷ್ಟ ಕಷ್ಟ!

NAMMUR EXPRESS NEWS
ಅಯ್ಯೋ ಬಿಸಿಲು ಹೆಚ್ಚಿದೆ. ಹೊರಗಡೆ ಬರುವುದು ಕೂಡ ಕಷ್ಟ. ರಾಜ್ಯದಲ್ಲಿ ಬಿಸಿಲಿನ ಬೇಗೆಗೆ ಜನರು ತತ್ತರಿಸಿದ್ದಾರೆ. ಪ್ರಯಾಣ, ಕೆಲಸ, ಕೃಷಿ ಕೂಡ ಕಷ್ಟವಾಗುತ್ತಿದೆ. ಈ ನಡುವೆ ವರದಿಯೊಂದು ಬಿಡುಗಡೆಯಾಗಿದ್ದು, ಏಪ್ರಿಲ್ ತಿಂಗಳ ಉಷ್ಣಾಂಶವು ಎಲ್ಲಾ ದಾಖಲೆಗಳನ್ನು ಮುರಿದಿದೆ. ಇದು 103 ವರ್ಷಗಳ ನಂತರ ಸಂಭವಿಸಿದೆ, ಅನೇಕ ಸ್ಥಳಗಳಲ್ಲಿ ತಾಪಮಾನವು 43 ಡಿಗ್ರಿಗಳನ್ನು ತಲುಪಿದೆ. ಹವಾಮಾನ ಇಲಾಖೆಯು 1921-2024 ರ ನಡುವಿನ ಏಪ್ರಿಲ್ ನಲ್ಲಿನ ಶಾಖದ ಡೇಟಾವನ್ನು ಹಂಚಿಕೊಂಡಿದೆ. ಈ ದತ್ತಾಂಶವು ಇದು ದೇಶದ ಅನೇಕ ಭಾಗಗಳಲ್ಲಿ ಗಮನಿಸಲಾದ ಅತ್ಯಂತ ಬಿಸಿಯಾದ ತಿಂಗಳು ಎಂದು ಸೂಚಿಸುತ್ತದೆ. ಮುಂದಿನ ಐದು ದಿನಗಳು ಇನ್ನೂ ಬಿಸಿಯಾಗಲಿವೆ.

ಮುಂದಿನ 5 ದಿನಗಳ ಕಾಲ ಬಿಸಿಗಾಳಿ ಈ ತೀವ್ರ ಸ್ವರೂಪದ ಶಾಖವು ಮುಂದಿನ ಐದು ದಿನಗಳವರೆಗೆ ಮುಂದುವರಿಯುತ್ತದೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಈ ಮಧ್ಯೆ, ಮತದಾನ ನಡೆಯುವ ಸ್ಥಳಗಳಲ್ಲಿ, ಶಾಖವು ಹೆಚ್ಚಾಗಿರುತ್ತದೆ. ಏಪ್ರಿಲ್ ಮತ್ತು ಮೇ ತಿಂಗಳಿಗೆ ಸಂಬಂಧಿಸಿದಂತೆ, ಈ ಎರಡು ತಿಂಗಳುಗಳು ಇತರ ವರ್ಷಗಳಿಗಿಂತ ಹೆಚ್ಚು ಬಿಸಿಯಾಗಿರಬಹುದು ಎಂದು ಹವಾಮಾನ ಇಲಾಖೆ ಈ ಹಿಂದೆ ಹೇಳಿತ್ತು. ಪ್ರಧಾನಿ ಮೋದಿ ಅವರೊಂದಿಗಿನ ಸಭೆಯಲ್ಲಿ ಹವಾಮಾನ ಇಲಾಖೆಯ ಅಧಿಕಾರಿಗಳು ಇದನ್ನು ತಿಳಿಸಿದ್ದಾರೆ. ಈ ಸಮಯದಲ್ಲಿ ಜನರು ತಮ್ಮ ಬಗ್ಗೆ ವಿಶೇಷ ಕಾಳಜಿ ವಹಿಸುವಂತೆ ಮನವಿ ಮಾಡಲಾಯಿತು. ಇಲ್ಲಿಯವರೆಗೆ, ಎರಡು ಹಂತದ ಮತದಾನದಲ್ಲಿ, ಅನೇಕ ಸ್ಥಳಗಳಲ್ಲಿ ಶಾಖದಿಂದಾಗಿ ಮತದಾನದ ಮೇಲೂ ಪರಿಣಾಮ ಬೀರಿದೆ.

Categories
ಆರೋಗ್ಯ

ಕೋವಿಶೀಲ್ಡ್‌ನಿಂದ ಅಡ್ಡ ಪರಿಣಾಮ ನಿಜ!

ಕೋವಿಶೀಲ್ಡ್‌ನಿಂದ ಅಡ್ಡ ಪರಿಣಾಮ ನಿಜ!
– ಕೊನೆಗೂ ಒಪ್ಪಿಕೊಂಡ ತಯಾರಿಕೆ ಕಂಪನಿ ಅಸ್ಟ್ರಾಜೆನೆಕಾ
– ರಕ್ತ ಹೆಪ್ಪುಗಟ್ಟುವಿಕೆ, ಪ್ಲೇಟೈಟ್ ಇಳಿಕೆ ಸಮಸ್ಯೆ ಸಾಧ್ಯತೆ

NAMMUR EXPRESS NEWS
ಹೊಸದಿಲ್ಲಿ: ಕರೋನಾ ಎದುರಿಸಲು ನಾವು ನೀವೆಲ್ಲ ತೆಗೆದುಕೊಂಡ ಕೋವಿಶೀಲ್ಡ್‌ ಲಸಿಕೆ ಅಡ್ಡ ಪರಿಣಾಮವನ್ನು ಹೊಂದಿದೆ ಎಂದು ಸ್ವತಃ ಅದನ್ನು ತಯಾರಿಸಿದ ಕಂಪನಿಯೇ ಇದೀಗ ಒಪ್ಪಿಕೊಂಡಿದೆ. ಇದರೊಂದಿಗೆ, ಕೊರೊನಾ ನಂತರದ ದಿನಗಳ ಅಸ್ವಸ್ಥತೆ, ಹೃದಯಾಘಾತಗಳ ಬಗ್ಗೆ ಮೂಡಿದ್ದ ಆತಂಕಕ್ಕೆ ಇನ್ನಷ್ಟು ಆಧಾರ ದೊರೆತಿದೆ. ಬ್ರಿಟಿಷ್ ಫಾರ್ಮಾ ದೈತ್ಯ ಅಸ್ಟ್ರಾಜೆನೆಕಾ ತನ್ನ ಕೋವಿಡ್ ಲಸಿಕೆ ಕೋವಿಶೀಲ್ಡ್‌ ಅಪರೂಪವಾಗಿ ಅಡ್ಡ ಪರಿಣಾಮವನ್ನು ಉಂಟುಮಾಡಬಹುದು ಎಂದು ಒಪ್ಪಿಕೊಂಡಿದೆ. ಕೋವಿಶೀಲ್ಡ್ ಅಪರೂಪದ ಸಂದರ್ಭಗಳಲ್ಲಿ, ರಕ್ತ ಹೆಪ್ಪುಗಟ್ಟುವಿಕೆ ಮತ್ತು ಕಡಿಮೆ ಪ್ಲೇಟ್‌ಲೆಟ್ ಎಣಿಕೆಗೆ ಕಾರಣವಾಗುವ ಸ್ಥಿತಿಯನ್ನು ಉಂಟುಮಾಡಬಹುದು ಎಂದು ಲಸಿಕೆ ತಯಾರಕರು ನ್ಯಾಯಾಲಯದಲ್ಲಿ ಹೇಳಿದ್ದಾರೆ.

ಸಾಂಕ್ರಾಮಿಕ ಸಮಯದಲ್ಲಿ ಅಸ್ಟ್ರಾಜೆನೆಕಾ ಮತ್ತು ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದಿಂದ ಅಭಿವೃದ್ಧಿಪಡಿಸಲಾದ ಕೋವಿಶೀಲ್ಡ್ ಅನ್ನು ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಉತ್ಪಾದಿಸಿತು ಮತ್ತು ದೇಶದಲ್ಲಿ ವ್ಯಾಪಕವಾಗಿ ನೀಡುತ್ತಿದೆ. AstraZeneca ಯುಕೆಯಲ್ಲಿ ತನ್ನ ಲಸಿಕೆಯು ಹಲವಾರು ಪ್ರಕರಣಗಳಲ್ಲಿ ಸಾವುಗಳು ಮತ್ತು ತೀವ್ರ ಅಸ್ವಸ್ಥತೆಗೆ ಕಾರಣವಾಯಿತು ಎಂಬ ಆರೋಪದ ಮೇಲೆ ಕ್ಲಾಸ್ ಆಕ್ಷನ್ ಮೊಕದ್ದಮೆಯನ್ನು ಎದುರಿಸುತ್ತಿದೆ. ಯುಕೆ ಹೈಕೋರ್ಟ್‌ನಲ್ಲಿ 51 ಪ್ರಕರಣಗಳಲ್ಲಿ ಸಂತ್ರಸ್ತರು 100 ಮಿಲಿಯನ್ ಪೌಂಡ್‌ಗಳವರೆಗೆ ನಷ್ಟ ಪರಿಹಾರ ಬಯಸಿದ್ದಾರೆ.ಪ್ರಕರಣದ ಮೊದಲ ದೂರುದಾರರಾದ ಜೇಮೀ ಸ್ಕಾಟ್ ಅವರು ಏಪ್ರಿಲ್ 2021ರಲ್ಲಿ ಲಸಿಕೆಯನ್ನು ಪಡೆದಿದ್ದೇನೆ. ಇದು ರಕ್ತ ಹೆಪ್ಪುಗಟ್ಟುವಿಕೆಯ ನಂತರ ಶಾಶ್ವತ ಮಿದುಳಿನ ಗಾಯಕ್ಕೆ ಕಾರಣವಾಯಿತು. ಇದು ಮೆದುಳು ಚುರುಕಾಗಿರುವುದನ್ನು ತಡೆಯಿತು. ಆಸ್ಪತ್ರೆಯು ನಾನು ಸಾಯುತ್ತೇನೆ ಎಂದು ನನ್ನ ಹೆಂಡತಿಗೆ ಮೂರು ಬಾರಿ ಹೇಳಿದೆ ಎಂದು ಅವರು ಆರೋಪಿಸಿದ್ದಾರೆ.

Categories
ಮಲ್ನಾಡ್

ಟಾಪ್ ನ್ಯೂಸ್ ಮಲ್ನಾಡ್

ಟಾಪ್ ನ್ಯೂಸ್ ಮಲ್ನಾಡ್
ಪತ್ನಿಯ ಕತ್ತು ಸೀಳಿ ಬರ್ಬರ ಕೊಲೆ!
– ಜಾತ್ರೆಗೆ ಬಂದಿದ್ದ ಪತ್ನಿ ಹಿಂಬಾಲಿಸಿ ಮಚ್ಚಲ್ಲಿ ಕೊಚ್ಚಿ ಹತ್ಯೆ
– ಶಿವಮೊಗ್ಗ : ಖಾಸಗಿ ಬಸ್ ನಿಲ್ದಾಣದಲ್ಲಿದ್ದ ಮೊಬೈಲ್ ಅಂಗಡಿ ಬೆಂಕಿಗೆ ಆಹುತಿ!
– ಶಿಕಾರಿಪುರ : ಬೊಲೇರೋ ಡಿಕ್ಕಿಯಾಗಿ ಮಹಿಳೆ ಸಾವು
– ಶಿವಮೊಗ್ಗ : ಕಾಳಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ಕಳ್ಳತನ
– ಶಿವಮೊಗ್ಗ : ಕಸ ಹಾಕಲು ತೆರಳಿದ್ದ ವೃದ್ಧೆ ಶವವಾಗಿ ಪತ್ತೆ
– ಮೂಡಿಗೆರೆ: ವಿದ್ಯಾರ್ಥಿ ಕೃಷಿ ಹೊಂಡದಲ್ಲಿ ಮುಳುಗಿ ಸಾವು

NAMMUR EXPRESS NEWS
ತರೀಕೆರೆ: ಪ್ರೀತಿಸಿ ವಿವಾಹವಾಗಿ ದೂರವಾಗಿದ್ದ ಪತ್ನಿ ತವರು ಮನೆಗೆ ಜಾತ್ರೆಗೆ ಬಂದಿದ್ದ ವೇಳೆ ಮಚ್ಚಿನಿಂದ ಕೊಚ್ಚಿ ಪತಿ ಕೊಲೆ ಮಾಡಿದ್ದಾನೆ. ಮೇಘಾ (20) ಹತ್ಯೆಯಾದ ದುರ್ಧೈವಿ. ಬಟ್ಟೆ ಒಗೆಯಲು ಹೋದಾಗ ಹಿಂಬಾಲಿಸಿ ಬಂದು ಬರ್ಬರವಾಗಿ ಕೊಂದು ಭದ್ರಾ ಚಾನಲ್‌ನಲ್ಲಿ ರಕ್ತದೊಕುಳಿ ಹರಿಸಿದ್ದಾನೆ. ಪ್ರೀತಿಸುವಾಗಲೇ ಅತ್ಯಾಚಾರ ಎಸಗಿ ಪೋಕೋ ಪ್ರಕರಣ ಹಾಕಿಸಿಕೊಂಡು ಅದೇ ಬಾಲಕಿಯ ವಿವಾಹವಾಗಿ ನಿತ್ಯ ಕಿರುಕುಳ ಕೊಟ್ಟು ದೂರಾಗಿದ್ದ ಪತಿ ಹೊಂಚು ಹಾಕಿ ತವರಿಗೆ ಮುಳಕಟ್ಟಮ್ಮ ಜಾತ್ರೆಗೆ ಬಂದಿದ್ದ ಪತ್ನಿಯನ್ನು ಮಚ್ಚಿನಿಂದ ಕುತ್ತಿಗೆ ಸೀಳಿ ಹತ್ಯೆ ಮಾಡಿದ್ದಾನೆ. ತಾಲ್ಲೂಕಿನ ಕರಕುಚ್ಚಿ ಗ್ರಾಮದ ಮೇಘನಾಳನ್ನು ಅದೇ ಗ್ರಾಮದ ಚರಣ್ ಪ್ರೀತಿಸಿ ವಿವಾಹವಾಗಿದ್ದ ಬಾಲಕಿಯಾಗಿದ್ದ ಕಾರಣ ವಿವಾಹಕ್ಕೂ ಮೊದಲು ಅತ್ಯಾಚಾರ ಎಸಗಿದ್ದ ಕಾರಣ ಪೋಕ್ಸೋ ಪ್ರಕರಣ ದಾಖಲಾಗಿತ್ತು, ನಂತರ ಎರಡೂ ಮನೆಯವರು ಸೇರಿ ಇಬ್ಬರಿಗೂ ಮದುವೆ ಮಾಡಿದ್ದರು. ಕೆಲ ಕಾಲದ ಬಳಿಕ ನಿತ್ಯ ಪತ್ನಿಗೆ ಕಿರುಕುಳ ಕೊಡಲಾರಂಭಿಸಿದ ಇದರಿಂದ ಬೇಸತ್ತ ಮೇಘನಾ ಮನೆಯವರು ಅವಳನ್ನು ಅಜ್ಜಿಯ ಮನೆ ಬಿ.ಆರ್.ಪಿ ಗೆ ಕಳುಹಿಸಿದ್ದರು. ಕರಕುಚ್ಚಿಯಲ್ಲಿ ಮುಳಕಟ್ಟಮ್ಮ ಜಾತ್ರೆ ಇರುವ ಕಾರಣ ತವರು ಮನೆಗೆ ಬಂದಿದ್ದ ಅವಳು ಇಂದು ಹೊಳೆಯಲ್ಲಿ ಬಟ್ಟೆ ತೊಳೆಯಲು ತೆರಳಿದ್ದ ವೇಳೆ ಹಿಂಬಾಲಿಸಿ ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿದ್ದಾನೆ. ಸದ್ಯ ಆರೋಪಿ ಶರಣ್ ತಲೆಮರೆಸಿಕೊಂಡಿದ್ದು ಲಕ್ಕವಳ್ಳಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆತನಿಗಾಗಿ ಹುಡುಕಾಟ ಆರಂಭಿಸಿದ್ದಾರೆ.

ಖಾಸಗಿ ಬಸ್ ನಿಲ್ದಾಣದಲ್ಲಿದ್ದ ಮೊಬೈಲ್ ಅಂಗಡಿ ಬೆಂಕಿಗೆ ಆಹುತಿ!

ಶಿವಮೊಗ್ಗ: ಖಾಸಗಿ ಬಸ್ ನಿಲ್ದಾಣದಲ್ಲಿದ್ದ ಅಂಗಡಿಯೊಂದು ಧಗ ಧಗ ಹೊತ್ತಿ ಉರಿದಿದೆ. ಸುಮಾರು 4 ಲಕ್ಷ ರೂ ಮೌಲ್ಯದ ಕಂಪ್ಯೂಟರ್ ಮತ್ತು ರಿಪೇರಿಗೆ ಬಂದ ಮೊಬೈಲ್ ಹಾಗೂ ಮಾರಾಟದ ಹೊಸ ಮೊಬೈಲ್ ಅಂಗಡಿ ಬೆಂಕಿಗೆ ಆಹುತಿಯಾಗಿದೆ. ಖಾಸಗಿ ಬಸ್ ನಿಲ್ದಾಣದಲ್ಲಿ ವಾಸಿಂ ಎಂಬುವರಿಗೆ ಸೇರಿದ ಮೊಬೈಲ್ ಅಂಗಡಿಗೆ ಶಾರ್ಟ್ ಸೆರ್ಕ್ಯೂಟ್ ನಿಂದಾಗಿ ಬೆಂಕಿಗೆ ಆಹುತಿಯಾಗಿದೆ. ಬಸ್ ನಿಲ್ದಾಣದ ಜನರಿಗೆ ಈ ದೃಶ್ಯಗಳನ್ನ ಒಮ್ಮಲೆ ಕಂಡು ಭಯಗೊಂಡಿದ್ದಾರೆ. ಘಟನೆ ದೊಡ್ಡಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

– ಶಿಕಾರಿಪುರ : ಬೊಲೇರೋ ಡಿಕ್ಕಿಯಾಗಿ ಮಹಿಳೆ ಸಾವು

ಶಿಕಾರಿಪುರ : ಬೊಲೇರೊ ಡಿಕ್ಕಿಯಾಗಿ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ. ಶಿಕಾರಿಪುರ ತಾಲೂಕು ತರಲಘಟ್ಟ ಗ್ರಾಮದಲ್ಲಿ ಘಟನೆ ಸಂಭವಿಸಿದೆ. ತರಲಘಟ್ಟ ನಿವಾಸಿ ಮುತ್ತಮ್ಮ (60) ಮೃತರು. ಮುನೆ ಮುಂಭಾಗ ರಸ್ತೆ ದಾಟುತ್ತಿದ್ದ ಮುತ್ತಮ್ಮಗೆ ಶಿವಮೊಗ್ಗ ಕಡೆಯಿಂದ ಶಿಕಾರಿಪುರಕ್ಕೆ ತೆರಳುತ್ತಿದ್ದ ಬೊಲೇರೊ ವಾಹನ ಡಿಕ್ಕಿ ಹೊಡೆದಿದೆ. ಗಂಭೀರ ಗಾಯಗೊಂಡಿದ್ದ ಅವರನ್ನು ಶಿಕಾರಿಪುರದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಪರೀಕ್ಷಿಸಿ ವೈದ್ಯರು ಮುತ್ತಮ್ಮ ಮೃತಪಟ್ಟಿದ್ದಾರೆ ಎಂದು ತಿಳಿಸಿದರು.

– ಶಿವಮೊಗ್ಗ : ಕಾಳಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ಕಳ್ಳತನ

ಶಿವಮೊಗ್ಗ: ಗಾಂಧಿ ಬಜಾರ್ ನಲ್ಲಿರುವ ಕಾಳಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ಬಾಗಿಲು ಮುರಿದು ಕಳ್ಳತನ ನಡೆದಿದೆ. ಸುಮಾರು 2 ಲಕ್ಷ ರೂ ಮೌಲ್ಯದ ನಗದ ಮತ್ತು ಚಿನ್ನಾಭರಣ ಕಳುವಾಗಿದೆ. ಗಾಂಧಿಬಜಾರ್ ಮುಖ್ಯರಸ್ತೆಯಲ್ಲಿರುವ ಶ್ರೀ ಕಾಳಿಕಾ ಪರಮೇಶ್ವರಿ ದೇವಾಸ್ಥಾನದಲ್ಲಿ ಬೀಗ ಮುರಿದು ದೇವಾಸ್ಥಾನದ ಗರ್ಭಗುಡಿಗೆ ಹಾಕಿದ್ದ ಬೀಗಗಳನ್ನು ಸಹ ಮುರಿದು ದೇವರಿಗೆ ಧರಿಸಿದ್ದ ಬೆಳ್ಳಿಯ ಕಿರೀಟ 480 ಗ್ರಾಂ ತೂಕದ ಬೆಳ್ಳಿಯ ತ್ರಿಶೂಲ, ಬೆಳ್ಳಿಯ ಸೊಂಟದ ಪಟ್ಟಿ ಬಂಗಾರದ ತಾಳಿ, ತಾಮ್ರದ ಶೆಡ್ಡಪ್ಪ, 13 ಪಂಚಲೋಹದ ವಿಗ್ರಹಗಳು ಟೇಬಲ್ ಡ್ರಾ ದಲ್ಲಿಟ್ಟಿದ್ದ ನಗದು 52,000 /- ರೂ ಕಳುವಾಗಿದೆ. ಮತ್ತು ದೇವಿಯ ಮೂತರ್‌ ಮುಖದ ಮೇಲೆ ಗೀಚಿ ಡ್ಯಾಮೇಜ್ ಮಾಡಿದ್ದಾರೆ. ದೇವಸ್ಥಾನದ ಅಧ್ಯಕ್ಷ ರಮೇಶ್ ಅವರ ಮನೆಯ ಗೃಹಪ್ರವೇಶ ಕಾರ್ಯಕ್ರಮ ಇದ್ದುದ್ದರಿಂದ ಊಟದ ವ್ಯವಸ್ಥೆ ಶ್ರೀ ಕಾಳಿಕಾ ಪರಮೇಶ್ವರಿ ದೇವಾಸ್ಥಾನದ ಮೇಲ್ಬಾಗದ ಹಾಲ್ ನಲ್ಲಿ ಇಟ್ಟುಕೊಂಡಿದ್ದರು. ಏ.27 ರಾತ್ರಿ 11-30 ಏ‌28 ರ ಬೆಳಿಗ್ಗೆ,, 07-00 ಗಂಟೆಯ ಮದ್ಯಾವಧಿಯಲ್ಲಿ ನಡೆದಿರಬಹುದು ಎಂದು ಅಂದಾಜಿಸಲಾಗಿದೆ.‌ ಬೆಳ್ಳಿಯ, ಬಂಗಾರದ, ಪಂಚಲೋಹದ ಸಾಮಾಗ್ರಿಗಳನ್ನು ಹಾಗೂ ನಗದು ಹಣ ಸೇರಿ ಒಟ್ಟು 1.97.300 /- ರೂ ಬೆಳೆ ಬಾಳುವ ವಸ್ತುಗಳನ್ನು ಕಳ್ಳತನ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

– ಶಿವಮೊಗ್ಗ : ಕಸ ಹಾಕಲು ತೆರಳಿದ್ದ ವೃದ್ಧೆ ಶವವಾಗಿ ಪತ್ತೆ

ಶಿವಮೊಗ್ಗ: ಕಸ ಹಾಕಲು ಹೋಗಿದ್ದ ವೃದ್ಧೆ ಹಿಟ್ ಅಂಡ್ ರನ್ ಪ್ರಕರಣದಲ್ಲಿ ಸಾವನ್ನಪ್ಪಿದ್ದಾರೆ. ಪ್ರಕರಣ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಭದ್ರಾವತಿಯ ಶ್ರೀರಾಮ ನಗರದ ನಿವಾಸಿ ರಾಮೇಗೌಡರ ಪತ್ನಿ ಪದ್ಮ @ ಪದ್ಮಮ್ಮ(53), ಇಬ್ಬರು ಕೂಲಿ ಕೆಲಸ ಮಾಡಿಕೊಂಡು ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಬೆಳಗ್ಗಿನ ಜಾವ ಸುಮಾರು 5.30 ಗಂಟೆಗೆ ಪದ್ಮ ಎದ್ದು ಮನೆ ಕಸ ಗುಡಿಸಿ, ಕಸ ಮತ್ತು ಕೋಳಿ ಕಸವನ್ನು ಬಿಸಾಕಿ ಬರಲು ಮನೆಯಿಂದ ಸ್ವಲ್ಪ ದೂರದಲ್ಲಿ ಇರುವ ಚಾನಲ್ ಹತ್ತಿರ ಹೋಗಿದ್ದಾರೆ.‌ ನಂತರ ಸುಮಾರು ಬೆಳಿಗ್ಗೆ 06.00 ಗಂಟೆಗೆ ಪದ್ಮರರವರ ಪಕ್ಕದ ಮಬೆಯವರು ಬಂದು ರಾಮೇಗೌಡರನ್ನ ಜೆ.ಕೆ ಇಂಡಸ್ಟ್ರೀಸ್ ಹತ್ತಿರ ಕರೆದುಕೊಂಡು ಹೋಗಿದ್ದಾರೆ. ಜೆ.ಕೆ ಇಂಡಸ್ಟ್ರಿಟೀಸ್ ಮುಂದೆ ಇರುವ ಭದ್ರಾವತಿ-ಚನ್ನಗಿರಿ ರಾಜ್ಯ ಹೆದ್ದಾರಿ ಟಾರ್ ರಸ್ತೆಯ ಮೇಲೆ ಪದ್ಮರವರ ಮೃತ ದೇಹ ಪತ್ತೆಯಾಗಿದ್ದಾರೆ. ಬೆಳಗಿನ ಜಾವ ಸುಮಾರು 05.50 ಗಂಟೆಗೆ ಕಸ ಬಿಸಾಕಲು ತೆರಳಿದ್ದ ವೃದ್ಧೆ ಪದ್ಮರಿಗೆ ಜೆ.ಕೆ ಇಂಡಸ್ಟ್ರೀಸ್ ಮುಂದೆ ಇರುವ ಭದ್ರಾವತಿ-ಚೆನ್ನಗಿರಿ ರಾಜ್ಯ ಹೆದ್ದಾರಿ ರಸ್ತೆಯಲ್ಲಿ ನಡೆದುಕೊಂಡು ರಸ್ತೆ ದಾಟುತ್ತಿದ್ದಾಗ ಭದ್ರಾವತಿ ಕಡೆಯಿಂದ ಬಂದ ಕಾರು ಗುದ್ದಿದೆ.‌ ಗುದ್ದಿದ ಕಾರು ಪದ್ಮರವರ ಜೀವ ತೆಗೆದಿದೆ. ಚಾಲಕ ನಿಲ್ಲಸದೆ ಪರಾರಿಯಾಗಿದ್ದಾನೆ. ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.‌

– ಮೂಡಿಗೆರೆ: ಕೃಷಿ ಹೊಂಡದಲ್ಲಿ ಮುಳುಗಿ ಸಾವು !

ಮೂಡಿಗೆರೆ : ಪ್ರವಾಸಕ್ಕೆ ಬಂದಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಕಾಫಿ ತೋಟದ ಮಾಲಿಕರೊಬ್ಬರ ಜಮೀನಿನಲ್ಲಿದ್ದ ಬೃಹತ್‌ ಕೃಷಿ ಹೊಂಡದಲ್ಲಿ ಈಜಲು ಹೋಗಿ ಮೃತಪಟ್ಟಿರುವ ಘಟನೆ ಮೂಡಿಗೆರೆ ತಾಲೂಕಿನ ಗೋಣಿಬೀಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರದಿಯಾಗಿದೆ. ಮೃತ ಯುವಕನನ್ನು ಹಾವೇರಿ ಜಿಲ್ಲೆಯ ಮಕರವಳ್ಳಿ ಗ್ರಾಮದ ಆಕಾಶ್ ಎಂ.ಪಿ (21) ಎಂದು ಗುರುತಿಸಲಾಗಿದ್ದು, ಈತ ಕಳೆದ 15 ವರ್ಷಗಳಿಂದbಬೆಂಗಳೂರಿನಲ್ಲಿರುವ ತನ್ನ ಅಣ್ಣನ ಮನೆಯಲ್ಲಿ ಉಳಿದುಕೊಂಡಿದ್ದ. ಏ.27ರಂದು ತನ್ನ ಅಣ್ಣ ಕುಶಾಲ್ ಹಾಗೂ ಸ್ನೇಹಿತದಾರ ಭರತ್, ಶ್ರೇಯಸ್‌ ಎಂಬುವವರೊಂದಿಗೆ ಆಕಾಶ್ ಬೆಂಗಳೂರಿನಿಂದ ಚಿಕ್ಕಮಗಳೂರು ಪ್ರವಾಸಕ್ಕೆ ಬಂದಿದ್ದ ಎನ್ನಲಾಗಿದೆ.

ಗೋಣಿಬೀಡು ಗ್ರಾಮದಲ್ಲಿರುವ ಜಯ ರಾಮೇಗೌಡ ಎಂಬುವವರ ಹೋಮ್ ಸ್ಟೇನಲ್ಲಿ ಉಳಿದು ಕೊಂಡಿದ್ದರು. ಭಾನುವಾರ ಸಂಜೆ ನಾಲ್ವರು ಜಯ ರಾಮೇಗೌಡ ಅವರ ಜಮೀನಿನಲ್ಲಿದ್ದ ಬೃಹತ್ ಕೃಷಿ ಹೊಂಡದಲ್ಲಿ ಈಜಲು ಹೋಗಿದ್ದರು ಎಂದು ಹೇಳಲಾಗಿದೆ. ಈ ವೇಳೆ ಕೃಷಿ ಹೊಂಡದ ಆಳದ ಅರಿವಿದರ ಆಕಾಶ್ ಈಜಾಡುತ್ತ ಆಳದ ಗುಂಡಿಗೆ ಇಳಿದಿದ್ದಾನೆ. ಈ ವೇಳೆ ಗುಂಡಿಯ ಕೆಸರಿನಲ್ಲಿ ಸಿಲುಕಿಕೊಂಡ ಆಕಾಶ್‌ ಮೇಲೆ ಬರಲಾರದೇ ನಾಪತ್ತೆಯಾಗಿದ್ದ. ಸಹೋದರ ಹಾಗೂ ಸ್ನೇಹಿತರು ಕೃಷಿ ಹೊಂಡದಲ್ಲಿ ಆಕಾಶ್‌ಗಾಗಿ ಎಷ್ಟೇ ಹುಡುಕಿದರೂ ಪತ್ತೆಯಾಗಿಲ್ಲ. ನಂತರ ಸ್ಥಳೀಯ ಮುಳುಗುತಜ್ಞ ಸ್ನೇಕ್ ಆರೀಫ್‌ ಜತೆ ಗೋಣಿಬೀಡು ಪೊಲೀಸರು ಹಾಗೂ ಅಗ್ನಿಶಾಮಕದಳದ ಸಿಬ್ಬಂದಿ ಸಂಜೆ, ರಾತ್ರಿವರೆಗೂ ಹುಡುಕಾಡಿದರೂ ಆಕಾಶ್ ಮೃತದೇಹ ಪತ್ತೆಯಾಗಿಲ್ಲ. ಸೋಮವಾರ ಬೆಳಗ್ಗೆ ಮಂಗಳೂರು ಮೂಲದ ಮುಳುಗುತಜ್ಞರು ಹಾಗೂ ಸ್ನೇಕ್ ಆರೀಫ್ ಆಕಾಶ್ ಶವಕ್ಕಾಗಿ ಹುಡುಕಾಡಿದ ಸುಮಾರು 2 ಗಂಟೆಗಳ ಬಳಿಕ ಮೃತದೇಹ ಪತ್ತೆಯಾಗಿದೆ. ಘಟನೆ ಸಂಬಂಧ ಗೋಣಿಬೀಡು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Categories
ತೀರ್ಥಹಳ್ಳಿ ರಾಜಕೀಯ ಶಿವಮೊಗ್ಗ

ತೀರ್ಥಹಳ್ಳಿಯಲ್ಲಿ ಸಂತೋಷ್ ಲಾಡ್ ಬೆಂಕಿ ಭಾಷಣ!

ತೀರ್ಥಹಳ್ಳಿಯಲ್ಲಿ ಸಂತೋಷ್ ಲಾಡ್ ಬೆಂಕಿ ಭಾಷಣ!
– ರೋಡ್ ಶೋ ನಡೆಯಲಿಲ್ಲ…ಗೀತಾ, ಶಿವಣ್ಣ ಹಾಜರ್
– ಗಾಂಧಿ ಚೌಕದಲ್ಲಿ ಸಾವಿರಾರು ಜನರ ಜೋಷ್
– ಬಾರದ ನಟ ನಟಿಯರು: ರೋಡ್ ಶೋ ಇಲ್ಲ!

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯಲ್ಲಿ ನಡೆದ ರೋಡ್ ಶೋ ಕೊನೆಗೆ ಶಿವರಾಜ್ ಕುಮಾರ್ ಹಾಗೂ ಸಚಿವ ಸಂತೋಷ್ ಲಾಡ್ ಭಾಷಣದ ಮೂಲಕ ಅಂತ್ಯಗೊಂಡಿತು. ಕಾಂಗ್ರೆಸ್ ಕಾರ್ಯಕರ್ತರು, ಎನ್ ಎಸ್ ಯು ಐ ಕಾರ್ಯಕರ್ತರು ಭಾರೀ ಮೆರವಣಿಗೆಯಲ್ಲಿ ಸೀಬಿನಕೆರೆಯಿಂದ ಗಾಂಧಿ ಚೌಕದವರೆಗೆ ಕರೆ ತಂದು ಅಲ್ಲಿ ಭಾರೀ ಹೂಮಳೆ ಸುರಿಸಲಾಯಿತು. ಬಳಿಕ ನಡೆದ ಸಭೆಯಲ್ಲಿ ಸಚಿವ ಸಂತೋಷ್ ಲಾಡ್ ಭಾಷಣಕ್ಕೆ ಅಭಿಮಾನಿಗಳು ಶಿಳ್ಳೆ, ಚಪ್ಪಾಳೆ ಹೊಡೆದರು. ಮೋದಿ ಅವರ ಯೋಜನೆಗಳು, ಅವರ ಹೇಳಿಕೆಗಳು ಹಾಗೂ ಕಾಂಗ್ರೆಸ್ ಸರ್ಕಾರದ ಯೋಜನೆಗಳ ಬಗ್ಗೆ ವಿವರವಾಗಿ ಬಯಲು ಸೀಮೆ ಹಾಗೂ ಹಿಂದಿ ಭಾಷೆಯಲ್ಲಿ ಹೇಳುವ ಮೂಲಕ ಸಾವಿರಾರು ಜನರನ್ನು ಅರ್ಧ ಗಂಟೆ ಸೆಳೆದರು. ಬಳಿಕ ಮಾತನಾಡಿದ ಅಭ್ಯರ್ಥಿ, ಗೀತಾ ಶಿವರಾಜ್ ಕುಮಾರ್, ನನಗೆ ಒಂದು ಅವಕಾಶ ಕೊಡಿ. ನಿಮ್ಮೆಲ್ಲರ ಸೇವೆಗೆ ನಾನು ಬದ್ಧ. ನಿಮ್ಮ ಧ್ವನಿಯಾಗಿ ಕೆಲಸ ಮಾಡುತ್ತೇನೆ ಎಂದರು. ಕಿಮ್ಮನೆ ರತ್ನಾಕರ್, ಡಾ. ಮಂಜುನಾಥ್ ಗೌಡ, ಶೃಂಗೇರಿ ಶಾಸಕ ರಾಜೇಗೌಡ, ಮುಡುಬ ರಾಘವೇಂದ್ರ ಸೇರಿ ಹಲವರು ಇದ್ದರು.

ಸಂತೋಷ್ ಲಾಡ್ ಭಾಷಣಕ್ಕೆ ಜನರ ಚಪ್ಪಾಳೆ!

ಸಚಿವ ಸಂತೋಷ್ ಲಾಡ್ ಮಾತನಾಡಿ, ಮೋದಿ ಒಬ್ಬ ಸುಳ್ಳುಗಾರ. ಕಾಂಗ್ರೆಸ್ ಏನೂ ಮಾಡಿಲ್ಲ ಅಂತ ಅಧಿಕಾರಕ್ಕೆ ಬಂದು 10 ವರ್ಷ ದೇಶವನ್ನು ಕೊಳ್ಳೆ ಹೊಡೆದಿದ್ದಾರೆ. ಅಂಬಾನಿ, ಅದಾನಿಗೆ ಹಣ ಮಾಡಿಕೊಡಲು ಜನರಿಗೆ ಬರೆ ಹಾಕಿದ್ದಾರೆ. ಪ್ರತಿ ವಸ್ತುವಿನ ಬೆಲೆ ಗಗನಕ್ಕೆ ಏರಿದೆ. ದೇಶದಲ್ಲಿ ಸುಳ್ಳು ಭಾಷಣ ಬಿಟ್ಟರೆ ಬೇರೇನೂ ಮಾಡಿಲ್ಲ. ಐಪಿಎಲ್ ಬೆಟ್ಟಿಂಗ್, ಡ್ರಗ್ಸ್, ಮಾಫಿಯಾದಿಂದ ಹಣ ಮಾಡುತ್ತಿದ್ದಾರೆ. ಅವರಿಗೆ ಇದ್ಯಾವುದು ಗೊತ್ತೇ ಇಲ್ವಾ? ಎಂದು ಬೆಂಕಿ ಭಾಷಣ ಮಾಡಿ ಕಾಂಗ್ರೇಸ್ ಕಾರ್ಯಕರ್ತರನ್ನೇ ಪ್ರಶ್ನೆ ಮಾಡುತ್ತಾ ಜೋಷ್ ತುಂಬಿದರು.

ಸಿದ್ದರಾಮಯ್ಯ ರಾಜ್ಯದಲ್ಲಿ ಬಡವರಿಗೆ ಹಲವು ಯೋಜನೆ ಕೊಟ್ಟಿದ್ದಾರೆ. ದೇಶದಲ್ಲಿ ಕಾಂಗ್ರೆಸ್ 60 ವರ್ಷ ಆಳಿ ಊಟಕ್ಕಿಲ್ಲದ ಹಂತದಿಂದ ದೇಶವನ್ನು ಯುದ್ಧ, ಅಭಿವೃದ್ಧಿ ಎಲ್ಲವನ್ನು ಮಾಡಿದೆ. ಆದರೆ ಬಿಜೆಪಿ ಹಾಗೂ ಮೋದಿ ಅವರು, ಪಾಕಿಸ್ತಾನ, ಮುಸ್ಲಿಂ, ತಾಲಿಬಾನ್ ಅಂತ ಇಲ್ಲಿ ಕೋಮು ದ್ವೇಷ ಬಿತ್ತಿ ತನ್ನ ರಾಜಕೀಯ ಬೇಯಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.

ಗಮನ ಸೆಳೆದ ಶಿವಣ್ಣ!

ಬಡವರು, ಶ್ರೀಮಂತ ಅಂತ ಬೇಧ ಭಾವ ಬೇಡ, ಎಲ್ಲರೂ ಹಾರ್ಟ್ ಅಲ್ಲಿ ಪ್ರೀತಿಸಬೇಕು. ರಾಘವೇಂದ್ರ ಅವರಿಗೆ ಅವಕಾಶ ಕೊಟ್ಟಿದ್ದೀರಿ. ಗೀತಾಳಿಗೆ ಒಮ್ಮೆ ಅವಕಾಶ ಕೊಡಿ. ಅವಳಿಗೆ ನಾನು ಗ್ಯಾರಂಟಿ. ಮೇ 7ಕ್ಕೆ ಮತ ಹಾಕಿ ಗೆಲ್ಲಿಸಿ ಎಂದು ಮನವಿ ಮಾಡಿ ತಮ್ಮ ಡೈಲಾಗ್ ಮತ್ತು ಹಾಡಿನ ಮೂಲಕ ಗಮನ ಸೆಳೆದರು.

ಬಾರದ ಚಿತ್ರ ನಟ ನಟಿಯರು!

ಖ್ಯಾತ ಚಲನ ಚಿತ್ರ ನಟರಾದ ಡಾಲಿ ಧನಂಜಯ್, ದುನಿಯಾ ವಿಜಯ್, ಪ್ರೇಮ್, ವಿಜಯ ರಾಘವೇಂದ್ರ ,ಚಿಕ್ಕಣ್ಣ, ನಿಶ್ವಿಕಾ ನಾಯ್ಡು , ಚಂದನ್ ಶೆಟ್ಟಿ , ಅನುಶ್ರೀ , ಅಕುಲ್ ಬಾಲಾಜಿ ಹಾಗೂ ಅನೇಕ ಚಿತ್ರನಟರು ಈ ಬೃಹತ್ ರೋಡ್ ಶೋನಲ್ಲಿ ಭಾಗವಹಿಸಬೇಕಿತ್ತು. ಆದರೆ ರಿಪ್ಪಿನಪೇಟೆ ಹಾಗೂ ಹೊಸನಗರ ಕಾರ್ಯಕ್ರಮಗಳು ತಡವಾದ ಕಾರಣ ಬರಲಿಲ್ಲ.

Categories
ಜಾತಕ

ಈ ದಿನದ ರಾಶಿ ಭವಿಷ್ಯ ಹೇಗಿದೆ?

ಈ ದಿನದ ರಾಶಿ ಭವಿಷ್ಯ ಹೇಗಿದೆ?
– ಯಾವ ರಾಶಿಗೆ ಲಾಭ? ಯಾವ ರಾಶಿಗೆ ನಷ್ಟ?

NAMMUR EXPRESS NEWS
2024 ಏಪ್ರಿಲ್ 30ರ ಮಂಗಳವಾರ ದಿನವಾದ ಇಂದು ನಿಮ್ಮ ದಿನವು ಹೇಗಿರಲಿದೆ..? ಇಂದು ಯಾವ ರಾಶಿಯವರಿಗೆ ಶುಭ.? ಯಾವ ರಾಶಿಯವರು ಅಶುಭ..?

** ಮೇಷ :
ವ್ಯವಹಾರದಲ್ಲಿ ಸ್ವಂತ ನಿರ್ಧಾರಗಳನ್ನು ತೆಗೆದುಕೊಂಡು ಲಾಭವನ್ನು ಪಡೆಯುತ್ತೀರಿ . ಹಣಕಾಸಿನ ಪರಿಸ್ಥಿತಿಯು ನಿರೀಕ್ಷಿತ ಮಟ್ಟದಲ್ಲಿರುತ್ತದೆ ಮತ್ತು ಕೈಗೆತ್ತಿಕೊಂಡ ಕೆಲಸವು ಸ್ನೇಹಿತರ ಸಹಾಯದಿಂದ ಪೂರ್ಣಗೊಳ್ಳುತ್ತದೆ. ದೀರ್ಘ ಪ್ರಯಾಣಗಳನ್ನು ಕೈಗೊಳ್ಳಲಾಗುತ್ತದೆ. ವೃತ್ತಿಪರ ಕೆಲಸಗಳು ತೃಪ್ತಿಕರವಾಗಿ ಸಾಗಲಿವೆ. ಸಹೋದರರಿಂದ ಶುಭಕಾರ್ಯಕ್ಕೆ ಆಹ್ವಾನಗಳು ಬರಲಿವೆ.

** ವೃಷಭ ರಾಶಿ :
ದೀರ್ಘಾವಧಿ ಸಾಲದ ಒತ್ತಡ ಹೆಚ್ಚಾಗುತ್ತದೆ. ವೃಥಾ ಖರ್ಚು ಹೆಚ್ಚಾಗುತ್ತದೆ. ಕುಟುಂಬ ಸದಸ್ಯರೊಂದಿಗೆ ವಿನಾಕಾರಣವಾದ ವಿವಾದಗಳು ಕಿರಿಕಿರಿಯನ್ನುಂಟು ಮಾಡುತ್ತವೆ. ವೃತ್ತಿಪರ ವ್ಯವಹಾರಗಳಲ್ಲಿನ ಹೂಡಿಕೆಗಳ ಬಗ್ಗೆ ಮರುಚಿಂತನೆ ಮಾಡುವುದು ಒಳ್ಳೆಯದು. ಕುಟುಂಬದ ಮುಖ್ಯಸ್ಥರ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಉತ್ತಮ.

** ಮಿಥುನ ರಾಶಿ :
ಸಂತಾನ ಶುಭಕಾರ್ಯದ ಬಗ್ಗೆ ಕುಟುಂಬದವರೊಂದಿಗೆ ಚರ್ಚೆ ನಡೆಯಲಿದೆ. ಆರ್ಥಿಕ ಪರಿಸ್ಥಿತಿ ಸ್ವಲ್ಪಮಟ್ಟಿಗೆ ಸುಧಾರಿಸುತ್ತದೆ. ವೃತ್ತಿಪರ ವ್ಯವಹಾರಗಳು ಲಾಭದಾಯಕವಾಗಿರುತ್ತವೆ ಮತ್ತು ನಿರುದ್ಯೋಗಿಗಳಿಗೆ ಉದ್ಯೋಗಾವಕಾಶಗಳು ದೊರೆಯುತ್ತವೆ. ಹಳೆಯ ಸಾಲಗಳು ಇತ್ಯರ್ಥವಾಗುತ್ತವೆ. ಮತ್ತು ಹೊಸ ಕಾರ್ಯಕ್ರಮಗಳನ್ನು ಪ್ರಾರಂಭಿಸಲಾಗುವುದು.

** ಕಟಕ ರಾಶಿ :
ಹಣಕಾಸಿನ ವಹಿವಾಟುಗಳು ನಿರುತ್ಸಾಹಗೊಳಿಸುತ್ತವೆ ಮತ್ತು ಜಂಟಿ ಉದ್ಯಮಗಳು ನಿಧಾನಗೊಳ್ಳುತ್ತವೆ. ಪ್ರಮುಖ ವ್ಯವಹಾರಗಳಲ್ಲಿ ಕುಟುಂಬ ಸದಸ್ಯರ ಸಹಾಯ ಸಿಗುವುದಿಲ್ಲ. ನಿರುದ್ಯೋಗಿಗಳು ತಮಗೆ ಸಿಕ್ಕ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು. ವೃತ್ತಿಪರ ಕೆಲಸಗಳಲ್ಲಿ ದುಡಿಮೆಗೆ ತಕ್ಕ ಮನ್ನಣೆ ದೊರೆಯುವುದಿಲ್ಲ.

** ಸಿಂಹ ರಾಶಿ :
ಆರ್ಥಿಕ ಪರಿಸ್ಥಿತಿ ಸ್ವಲ್ಪ ಮಟ್ಟಿಗೆ ಅನುಕೂಲಕರವಾಗುತ್ತದೆ. ದೂರದ ಸ್ಥಳಗಳಿಂದ ಪಡೆದ ಮಾಹಿತಿಯು ಆಸಕ್ತಿದಾಯಕವಾಗಿರುತ್ತದೆ. ಬಂಧುಮಿತ್ರರೊಂದಿಗಿನ ವಿವಾದಗಳು ಬಗೆಹರಿಯಲಿವೆ. ವೃತ್ತಿ ಮತ್ತು ವ್ಯಾಪಾರ ವ್ಯವಹಾರಗಳಿಗೆ ಸಂಬಂಧಿಸಿದಂತೆ ಒಳ್ಳೆಯ ಸುದ್ದಿಯನ್ನು ಸ್ವೀಕರಿಸಲಾಗುವುದು.

** ಕನ್ಯಾ ರಾಶಿ :
ಕುಟುಂಬದ ಸದಸ್ಯರೊಂದಿಗೆ ಶುಭ ಕಾರ್ಯಗಳಲ್ಲಿ ಪಾಲ್ಗೊಳ್ಳುವಿರಿ. ಕೈಗೆತ್ತಿಕೊಂಡ ವ್ಯವಹಾರಗಳಲ್ಲಿ ಅಡೆತಡೆಗಳು ಎದುರಾದರೂ ಅದನ್ನು ನಿವಾರಿಸಿಕೊಂಡು ಮುನ್ನಡೆಯುವಿರಿ. ವೃತ್ತಿಪರ ಉದ್ಯೋಗಗಳಲ್ಲಿ ಬಡ್ತಿಗಳು ಹೆಚ್ಚಾಗುತ್ತವೆ ಮತ್ತು ದೂರ ಪ್ರಯಾಣಗಳು ಲಾಭದಾಯಕವಾಗುತ್ತವೆ. ಭೂಮಿ ಮಾರಾಟದಲ್ಲಿ ಹೊಸ ಲಾಭ ದೊರೆಯಲಿದೆ.

** ತುಲಾ ರಾಶಿ :
ದೂರದ ಸಂಬಂಧಿಕರಿಂದ ಪ್ರಮುಖ ವಸ್ತುಗಳನ್ನು ಸಂಗ್ರಹಿಸಲಾಗುತ್ತದೆ. ಮಕ್ಕಳ ಶಿಕ್ಷಣ ಮತ್ತು ಉದ್ಯೋಗದ ವಿಷಯದಲ್ಲಿ ತೃಪ್ತಿ ಹೊಂದುತ್ತೀರಿ. ವೃತ್ತಿಪರ ಉದ್ಯೋಗಗಳಲ್ಲಿ ನಿರೀಕ್ಷಿತ ಸ್ಥಾನಗಳು ದೊರೆಯುತ್ತವೆ. ದೈವಿಕ ಚಿಂತನೆ ಹೆಚ್ಚಾಗುತ್ತದೆ. ವ್ಯವಹಾರದಲ್ಲಿನ ಸಮಸ್ಯೆಗಳು ಹೆಚ್ಚಾಗಿ ಮುಂದಕ್ಕೆ ಸಾಗುತ್ತೀರಿ. ಮತ್ತು ಹಣಕಾಸಿನ ವ್ಯವಹಾರಗಳು ಆಶಾದಾಯಕವಾಗಿರುತ್ತವೆ.

** ವೃಶ್ಚಿಕ ರಾಶಿ :
ಪ್ರಯಾಣದಲ್ಲಿ ವಾಹನ ತೊಂದರೆಗಳು ಉಂಟಾಗುತ್ತವೆ. ಸ್ನೇಹಿತರೊಂದಿಗೆ ವಿನಾಕಾರಣ ವಿವಾದಗಳು ಸೃಷ್ಟಿಯಾಗಿ ಮಾನಸಿಕ ನೆಮ್ಮದಿಯ ಕೊರತೆಯನ್ನು ಉಂಟುಮಾಡುತ್ತದೆ. ಉದ್ಯೋಗದಲ್ಲಿ ಅಧಿಕಾರಿಗಳೊಂದಿಗೆ ಜಾಗರೂಕರಾಗಿರಿ. ವೃತ್ತಿ ವ್ಯವಹಾರದಲ್ಲಿ ಅಲ್ಪ ಲಾಭವಾಗಲಿದೆ.

** ಧನುಸ್ಸು ರಾಶಿ :
ಬೆಲೆಬಾಳುವ ಗೃಹೋಪಯೋಗಿ ವಸ್ತುಗಳನ್ನು ಖರೀದಿಸುತ್ತೀರಿ ಮತ್ತು ದೀರ್ಘಾವಧಿಯ ಸಾಲದ ಹೊರೆಯಿಂದ ಹೊರಬರುತ್ತೀರಿ. ಬಾಲ್ಯದ ಗೆಳೆಯರೊಂದಿಗೆ ಭೋಜನ ಮನರಂಜನೆ ಕಾರ್ಯಕ್ರಮದಲ್ಲಿ ಭಾಗವಹಿಸುತ್ತೀರಿ. ವ್ಯಾಪಾರದಿಂದ ಲಾಭವಾಗಲಿದೆ ಪ್ರೀತಿಪಾತ್ರರಿಂದ ಶುಭ ಕಾರ್ಯಗಳಿಗೆ ಆಹ್ವಾನ ಸಿಗಲಿದೆ ವೃತ್ತಿಪರ ಉದ್ಯೋಗಗಳಲ್ಲಿ ಹೊಸ ಪ್ರೋತ್ಸಾಹ ಸಿಗಲಿದೆ.

** ಮಕರ ರಾಶಿ :
ಉದ್ಯೋಗಿಗಳಿಗೆ ಅಧಿಕಾರಿಗಳಿಂದ ಒಲವು ಮತ್ತು ಸ್ಥಾನಮಾನ ಏರಿಕೆಯಾಗುತ್ತದೆ. ಬಹಳ ದಿನಗಳಿಂದ ಕಾಡುತ್ತಿದ್ದ ಸಮಸ್ಯೆಗಳಿಂದ ಸ್ವಲ್ಪ ಪರಿಹಾರ ಸಿಗಲಿದೆ. ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ. ಆತ್ಮೀಯರಿಂದ ಅನಿರೀಕ್ಷಿತ ಆಹ್ವಾನಗಳು ಬರುತ್ತವೆ ಸಂಗಾತಿಯ ಸಲಹೆಯೊಂದಿಗೆ ಹೊಸ ಚಟುವಟಿಕೆಗಳು ಪ್ರಾರಂಭವಾಗುತ್ತವೆ.

** ಕುಂಭ ರಾಶಿ :
ಆರ್ಥಿಕ ಪರಿಸ್ಥಿತಿ ತೀರಾ ಕಳಪೆಯಾಗಿದ್ದರೂ ಅಗತ್ಯಕ್ಕೆ ತಕ್ಕಂತೆ ಹಣ ದೊರೆಯಲಿದೆ. ನಿರುದ್ಯೋಗಿಗಳಿಗೆ ಹೊಸ ಉದ್ಯೋಗಾವಕಾಶಗಳು ದೊರೆಯಲಿವೆ. ಸಂತಾನ, ಉದ್ಯೋಗ, ವಿವಾಹ ಪ್ರಯತ್ನಗಳು ಫಲಿಸುತ್ತವೆ. ದೂರ ಪ್ರಯಾಣದಲ್ಲಿ ಹೊಸ ವ್ಯಕ್ತಿಗಳ ಪರಿಚಯವಾಗುತ್ತದೆ. ವೃತ್ತಿಪರ ವ್ಯವಹಾರದಲ್ಲಿ ಸ್ವಂತ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೀರಿ.

** ಮೀನ ರಾಶಿ :
ಕುಟುಂಬ ಸದಸ್ಯರ ನಡವಳಿಕೆ ಸ್ವಲ್ಪ ಕಿರಿಕಿರಿ ಉಂಟುಮಾಡುತ್ತದೆ. ಕೈಗೊಂಡ ಕಾರ್ಯಗಳಲ್ಲಿ ಅಡೆತಡೆಗಳು ಎದುರಾಗುತ್ತವೆ. ವೃತ್ತಿಪರ ಉದ್ಯೋಗಗಳಲ್ಲಿ, ಅಧಿಕಾರಿಗಳೊಂದಿಗೆ ಎಚ್ಚರಿಕೆಯಿಂದ ವ್ಯವಹರಿಸಬೇಕು. ಹೊಸ ವ್ಯವಹಾರವನ್ನು ಪ್ರಾರಂಭಿಸುವಲ್ಲಿ ಅಡೆತಡೆಗಳು ಉಂಟಾಗುತ್ತವೆ. ಸಾಲದ ಬಾಧೆ ಹೆಚ್ಚಾಗುವುದು. ವಾಹನ ಖರೀದಿಯ ಪ್ರಯತ್ನಗಳು ನಿಧಾನವಾಗುವುದು.