Categories
ಕಾರ್ಕಳ

ಭರತನಾಟ್ಯ ಜೂನಿಯರ್ ವಿಭಾಗದಲ್ಲಿ ಅನ್ವಿ ಹೆಚ್ ಅಂಚನ್ ಮತ್ತು ಅನುಜ್ಞ ಎನ್ ರಾವ್ ರವರಿಗೆ ಪ್ರಥಮ ಸ್ಥಾನ.

ಭರತನಾಟ್ಯ ಜೂನಿಯರ್ ವಿಭಾಗದಲ್ಲಿ ಅನ್ವಿ ಹೆಚ್ ಅಂಚನ್ ಮತ್ತು ಅನುಜ್ಞ ಎನ್ ರಾವ್ ರವರಿಗೆ ಪ್ರಥಮ ಸ್ಥಾನ.

ಸಂಚಾರಿ ಕಲಾ ಪರಿಷತ್ ಬೆಂಗಳೂರು ಇವರು ನಡೆಸುವ ಭರತನಾಟ್ಯ ಪರೀಕ್ಷೆಯ ಜೂನಿಯರ್ ವಿಭಾಗದಲ್ಲಿ ಅನ್ವಿ ಹೆಚ್ ಅಂಚನ್ ಮತ್ತು ಅನುಜ್ಞಾ ಎನ್ ರಾವ್ ರವರು ಭಾಗವಹಿಸಿ ಶೇಕಡ 90 ಅಂಕ ಪಡೆಯುವ ಮೂಲಕ ಪ್ರಥಮ ಸ್ಥಾನಿಗಳಾಗಿದ್ದಾರೆ.
ವಿದುಷಿ ಶ್ರೀಮತಿ ಸುಶ್ಮಿತಾ ನೀರೇಶ್ವಲಾಯ ಇವರ ಕಾರ್ಕಳ ಪುಲ್ಕೇರಿ ಶಾಂತಿ ನೃತ್ಯ ನಿಕೇತನದಲ್ಲಿ ಭರತನಾಟ್ಯ ತರಬೇತಿ ಪಡೆಯುತಿದ್ದು ಸದ್ರಿ ತರಬೇತಿ ಶಾಲೆಯ 17 ಮಂದಿ ಭರತನಾಟ್ಯ ವಿದ್ಯಾರ್ಥಿಗಳು ಈ ಬಾರಿ ಜೂನಿಯರ್ ಪರೀಕ್ಷೆ ಬರೆದಿದ್ದು ಇದರಲ್ಲಿ ಇಬ್ಬರು ವಿದ್ಯಾರ್ಥಿಗಳು ಪ್ರಥಮ ಸ್ಥಾನ ಗಳಿಸಿ ಹಾಗೂ ಉಳಿದ ವಿದ್ಯಾರ್ಥಿನಿಯರು ವಿಶಿಷ್ಟ ಶ್ರೇಣಿಯಲ್ಲಿ ತೆರ್ಗಡೆ ಹೊಂದಿರುತ್ತಾರೆ. ಹಾಗೆಯೇ ಸೀನಿಯರ್ ವಿಭಾಗದಲ್ಲಿ ಸಮೃದ್ಧಿ ಶೆಟ್ಟಿ ಶೇಕಡ 82 ಅಂಕ ಪಡೆದು ಉತ್ತೀರ್ಣರಾಗಿರುತ್ತಾರೆ.
ಪ್ರಥಮ ಸ್ಥಾನಿಗಳಾದ ಅನ್ವಿ ಹೆಚ್ ಅಂಚನ್ ಜ್ಞಾನಸುಧ ಆಂಗ್ಲ ಮಾಧ್ಯಮ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿನಿಯಾಗಿದ್ದು, ಅನುಜ್ಞಾ ಎನ್ ರಾವ್ ಎಸ್.ವಿ.ಟಿ ಆಂಗ್ಲ ಮಾಧ್ಯಮ ಶಾಲೆಯ 6ನೇ ತರಗತಿ ವಿದ್ಯಾರ್ಥಿನಿ ಆಗಿರುತ್ತಾರೆ.

Categories
ಚಿಕ್ಕಮಗಳೂರು

ಕಾಫಿನಾಡಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿತ – ಬಿಜೆಪಿ ಆರೋಪ

ಕಾಫಿನಾಡಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿತ – ಬಿಜೆಪಿ ಆರೋಪ

* ಹೆಚ್ಚಾಯ್ತು ಪುಡಿ ರೌಡಿಗಳ ಹಾವಳಿ,ಸೆಟಲ್‌ಮೆಂಟ್ ಸೆಂಟರ್‌ಗಳಾದ ಪೊಲೀಸ್ ಸ್ಟೇಷನ್‌ಗಳು
* ಇದು ಹೀಗೆ ಮುಂದುವರೆದರೆ ಪ್ರತಿಭಟನೆಯ ಎಚ್ಚರಿಕೆ

NAMMMUR EXPRESS NEWS
ಚಿಕ್ಕಮಗಳೂರು: ಜಿಲ್ಲೆಯಾದ್ಯಂತ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದ್ದು,ಚಿಕ್ಕಮಗಳೂರು ನಗರದಲ್ಲಿ ಪುಡಿ ರೌಡಿಗಳ ಅಟ್ಟಹಾಸ ಜೋರಾಗಿದೆ ಇದನ್ನು ತಡೆಯ ಬೇಕಾದ ಪೋಲಿಸ್ ಠಾಣೆಗಳು ಸೆಟಲ್‌ಮೆಂಟ್ ಸೆಂಟರ್‌ಗಳಾಗಿ ಬದಲಾಗಿವೆ. ಕೇವಲ ಕಾಂಗ್ರೆಸ್ ನಾಯಕರ ಅಡ್ಡೆಗಳಾಗಿದ್ದು,ಏನೇ ಕೇಸ್ ಇದ್ರೂ ಹೋಗಿ ಸೆಟಲ್‌ಮೆಂಟ್ ಮಾಡಿಸ್ತಾರೆ ಹಾಗಾಗಿ ಜಿಲ್ಲೆಯಲ್ಲಿ ಕ್ರೈಂ ರೇಟ್ ಜಾಸ್ತಿಯಾಗಿದೆ. ರಾಜಕೀಯ ಹಸ್ತಕ್ಷೇಷ ಮಾಡಿ ಪೊಲೀಸರ ಕೈ ಕಟ್ಟಿಹಾಕಲಾಗುತ್ತಿದ್ದು,ತಪ್ಪಿತಸ್ಥರ ಮೇಲೆ ಯಾವುದೇ ಕ್ರಮ ಕೈಗೊಳ್ಳಲು ಆಗುತ್ತಿಲ್ಲ ಇದು ನಿಲ್ಲದೇ ಹೋದಲ್ಲಿ ಉಗ್ರ ಹೋರಾಟ ಮಾಡುವ ಎಚ್ಚರಿಕೆಯನ್ನು ಜಿಲ್ಲಾ ಬಿಜೆಪಿ ಮುಖಂಡರು ನೀಡಿದ್ದಾರೆ.
ದಿನಗೂಲಿ ಕಾರ್ಮಿಕರ ಮಕ್ಕಳು ಕೇವಲ 17-18 ವರ್ಷದ ಎಸ್‌ಎಸ್ಎಲ್‌ಸಿ,ಪಿಯುಸಿ ಶಿಕ್ಷಣ ಅಪೂರ್ಣಗೊಂಡ ಯುವಕರು ಗಲಾಟೆ,ಹೊಡೆದಾಟ ಮಾಡಿಕೊಳ್ಳುತ್ತಾರೆ ಇವರ ತಂದೆ ತಾಯಿಗಳಿಗೆ ಈ ಬಗ್ಗೆ ಮಾಹಿತಿಯೇ ಇರೋದಿಲ್ಲ ಕಷ್ಟಪಟ್ಟು ಕೂರಿ ಕೆಲಸ ಮಾಡಿ ಮಕ್ಕಳನ್ನ ಸಾಕುತ್ತಿರುತ್ತಾರೆ. ಕೇವಲ17 ರಿಂದ 23 ವರ್ಷದೊಳಗಿನ ಯುವಕರು ದಾರಿ ತಪ್ಪುತ್ತಿದ್ದಾರೆ ಇದಕ್ಕೆ ಕಾರಣ ಜಿಲ್ಲೆಯರಲ್ಲಿನ ಲಾ ಅಂಡ್ ಆರ್ಡರ್ ವ್ಯವಸ್ಥೆ ಸಣ್ಣಪುಟ್ಟ ತಪ್ಪುಗಳನ್ನ ಮಾಡಿ ಸಿಕ್ಕಿಬಿದ್ದಾಗಲೇ ಇವರನ್ನು ಶಿಕ್ಷಿಸದೇ ಬಿಟ್ಟಿದ್ದೇ ಇಂದಿನ ಪರಿಸ್ಥಿತಿಗೆ ಕಾರಣ, ತಪ್ಪಿತಸ್ಥರಿಗೆ ಕಾನೂನಿಡಿಯಲ್ಲಿ ತಕ್ಕ ಶಿಕ್ಷೆ ಕೊಡಿಸೋ ಬದಲು ಯಾರೋ ಬಂದು ತನ್ನ ರಾಜಕೀಯ ಪ್ರಭಾವ ಬಳಸಿ ಸೆಟಲ್‌ಮೆಂಟ್ ಮಾಡಿ ಕಳಿಸಿಸ್ತಾರೆ ಇದರಿಂದ ಈ ಪುಡಿ ರೌಡಿಗಳಿಗೆ ಪೋಲಿಸ್,ಕಾನೂನು ವ್ಯವಸ್ಥೆಯ ಬಗ್ಗೆ ಭಯವಿಲ್ಲದಂತಾಗಿದೆ. ಗಲಾಟೆ ಹೊಡೆದಾಟ ಅಂತ ಹೋಗಿ ಗಾಯ,ಪೆಟ್ಟುಗಳಾಗಿ ಬರ್ತಾರೆ ಆಗ ಸೆಟೆಲ್‌ಮೆಂಟ್ ಮಾಡಿಸಿದವರು ಬರಲ್ಲ ಇವರ ಪೋಷಕರೆ ಕಷ್ಟಪಟ್ಟು ನಾಲ್ಕುಮನೆಯ ಕೆಲಸ ಮಾಡಿ ಇವರಿಗೆ ಚಿಕಿತ್ಸೆ ಕೊಡಿಸಬೇಕು ಹಾಗಾಗಿ ದಯವಿಟ್ಟು ಯುವಕರು ಇಂತಹ ಪ್ರಚೋದನೆಗೆ ಬಲಿಯಾಗದೆ ಉತ್ತಮ ಜೀವನ ನಡೆಸಬೇಕು ಎಂದು ಸ್ಥಳೀಯ ಬಿಜೆಪಿ ಮುಖಂಡರು ಮನವಿ ಮಾಡಿದ್ದಾರೆ.
ಕಳೆದ ಎರಡೂ ಮೂರು ವರ್ಷಗಳಿಂದ ಚಿಕ್ಕಮಗಳೂರು ಇತಿಹಾಸ ಸಂಪೂರ್ಣ ಬದಲಾಗಿದ್ದು ಸಣ್ಣ ಸಣ್ಣ ಆಟವಾಡೋ ಮಕ್ಕಳ ಕೈಲಿ ಕತ್ತಿ,ಡ್ರ್ಯಾಗರ್,ಚಾಕುಗಳಂತಹ ಮಾರಕಾಸ್ತ್ರಗಳನ್ನು ನೋಡುವ ಪರಿಸ್ಥಿತಿ ಬಂದಿದ್ದು, ನಗರದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಸ್ಟೇಷನ್‌ಗಳಲ್ಲಿ ಸಣ್ಣ ಪುಟ್ಟ ಪುಡಿ ರೌಡಿಗಳನ್ನು ಬೆಳಸುತ್ತಿರುವವರು ಯಾರು? ಏನೇ ಸಣ್ಣಪುಟ್ಟ ಗಲಾಟೆಗಳಾದರೂ ರಾಜಕೀಯ ಪಕ್ಷದ ಲೀಡರ್‌ಗಳು ಹೋಗಿ ಸೆಟಲ್‌ಮೆಂಟ್ ಮಾಡ್ತಿದ್ದಾರೆ, ಕಾಂಗ್ರೆಸ್‌ನ ಕೆಲ ಲೀಡರ್‌ಗಳಿಗೆ ದಿನ ಬೆಳಗಾದರೆ ಇದೇ ಕೆಲಸ ದಿನವೂ ಸ್ಟೇಷನ್‌ಗೆ ಹೋಗೋದು ಈ ತರಹದ ಪುಡಿ ರೌಡಿಗಳ ಪರ ನಿಂತು ಅವರ ಮೇಲೆ ಕ್ರಮಗಳಾಗದಂತೆ ತಡೆಯುವುದು,ಅಲ್ಲೇ ಸೆಟಲ್‌ಮೆಂಟ್ ಮಾಡೋದು ಕೊನೆಗೆ ತಮ್ಮ ಪಕ್ಷದ ಪರ ಆ ಯುವಕರನ್ನು ಕೆಲಸ ಮಾಡುವಂತೆ ನೋಡಿಕೊಳ್ಳೋದು, ಇಂತಹ ಹೊಸ ಸಂಸ್ಕೃತಿಯೊಂದನ್ನ ಈಗ ಚಿಕ್ಕಮಗಳೂರಿನಲ್ಲಿ ಹುಟ್ಟುಹಾಕಲಾಗಿದೆ. ಶಾಸಕರು ಯಾವಾಗಲೂ ಹೇಳುವ ಚಿಕ್ಕಮಗಳೂರು ಶಾಂತವಾಗಿರಬೇಕು ಎಂಬುದರ ಅರ್ಥ ಇದೇನಾ? ಯಾಕೆ ಇಂತಹ ಚಟುವಟಿಕೆಗಳಿಗೆ ನೀವು ಬೆಂಬಲಿಸುತ್ತಿದ್ದೀರಾ ? ಪೋಲಿಸರಿಗೆ ನಿರ್ಭೀತಿಯಿಂದ ತಮ್ಮ ಕೆಲಸ ಮಾಡಲಾಗುತ್ತಿಲ್ಲ,ಈ ಎಲ್ಲ ಚಟುವಟಿಕೆಗಳ ಬಗ್ಗೆ ಇಲಾಖೆಗೆ ಮಾಹಿತಿ ಇದ್ದರೂ ಏನೂ ಮಾಡದಂತೆ ಪೋಲಿಸರ ಕೈ ಕಟ್ಟಿಹಾಕಲಾಗಿದೆ.ತಮಗೆ ಬೇಕಾದ ಅಧಿಕಾರಿಗಳನ್ನು ತಂದು ತಾವು ಹೇಳಿದಂತೆ ಕೆಲಸ ಮಾಡಿಸಲಾಗುತ್ತಿದೆ. ಒಂದು ವೇಳೆ ಚಿಕ್ಕಮಗಳೂರಿನ ಶಾಂತಿ ಕದಡಿದ ಹೆಸರೇನಾದರೂ ಕೊಡೋದಿದ್ದರೆ ಅದು ಕ್ಷೇತ್ರದ ಶಾಸಕರು ಹಾಗೂ ಕಾಂಗ್ರೆಸ್ ನಾಯಕರಿಗೆ ಸಲ್ಲುತ್ತದೆ ಎಂದು ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಸಂತೋಷ್ ಕೋಟ್ಯಾನ್ ಆಕ್ರೋಶ ವ್ಯಕ್ತಪಡಿಸಿದರು ಹಾಗೂ ಇದೇ ಸಂಸ್ಕೃತಿ ಮುಂದುವರಿದಲ್ಲಿ ಉಗ್ರ ಹೋರಾಟದ ಎಚ್ಚರಿಕೆ ನೀಡಿದರು.

Categories
ತೀರ್ಥಹಳ್ಳಿ

ಮೋದಿ ಸರ್ಕಾರದ ವಿರುದ್ಧ ತೀರ್ಥಹಳ್ಳಿಯಲ್ಲಿ ಕಾಂಗ್ರೆಸ್ ಪ್ರತಿಭಟನೆ!

ಮೋದಿ ಸರ್ಕಾರದ ವಿರುದ್ಧ ತೀರ್ಥಹಳ್ಳಿಯಲ್ಲಿ ಕಾಂಗ್ರೆಸ್ ಪ್ರತಿಭಟನೆ!
– ಕೇಂದ್ರ ಸರ್ಕಾರದ ಜನ ವಿರೋಧಿ ನೀತಿ ಮತ್ತು ಸ್ಥಳೀಯ ಶಾಸಕರ ದ್ವೇಷ ರಾಜಕಾರಣದ ವಿರುದ್ಧ ಕಾಂಗ್ರೆಸ್ ಪಕ್ಷದಿಂದ ಪ್ರತಿಭಟನೆ
– ಬಿಜೆಪಿ ಸರ್ಕಾರ ಈ ದೇಶದ ಶ್ರಮಿಕರು, ಬಡವರು, ರೈತರನ್ನು ಸಂಕಷ್ಟಕ್ಕೆ ತಳ್ಳಿದೆ: ಮೋದಿ ಸರ್ಕಾರದ ಬಗ್ಗೆ ಕುಟುಕಿದ ಕಿಮ್ಮನೆ

NAMMUR EXPRESS NEWS
ತೀರ್ಥಹಳ್ಳಿ: ಅಚ್ಚೇದಿನ್ ಆಯೇಗಾ ಎಂದು ಹೇಳಿಕೊಂಡೆ ಕೇಂದ್ರದಲ್ಲಿ ಅಧಿಕಾರದ ಗದ್ದುಗೆ ಹಿಡಿದ ಬಿಜೆಪಿ ಆರಂಭದಿಂದಲೂ ಜನಸಾಮಾನ್ಯರ ಮೇಲೆ ಗದಾಪ್ರಹಾರ ಮಾಡುತ್ತಲೆ ಬಂದಿದೆ. ಈ ದೇಶದ ಶ್ರಮಿಕರು, ಬಡವರು, ರೈತರನ್ನು ಸಂಕಷ್ಟಕ್ಕೆ ತಳ್ಳಿದೆ. ಕೇಂದ್ರದ ಮೋದಿ ಸರ್ಕಾರ ರೈತರ ಅಗತ್ಯ ಬಳಕೆ ವಸ್ತಗಳಾದ ರಸಗೊಬ್ಬರ, ರೈತೋಪಯೋಗಿ ಯಂತ್ರಗಳಾದ ಟ್ಯಾಕ್ಟರ್ , ಟಿಲ್ಲರ್ ಮತ್ತು ಇನ್ನಿತರ ಕೃಷಿ ಉಪಕರಣಗಳ ಬೆಲೆಯನ್ನು ವಿಪರೀತವಾಗಿ ಹೆಚ್ಚಿಸಿದ್ದು, ಇದಲ್ಲದೆ ಡೀಸೆಲ್ ಪೆಟ್ರೊಲ್ ಮತ್ತು ಜನರ ದಿನನಿತ್ಯದ ಅಗತ್ಯ ವಸ್ತುಗಳ ಬೆಲೆಯನ್ನು ಏರಿಸಿರುವುದು ರೈತರ, ಬಡವರ, ಶ್ರಮಿಕರ, ಮಧ್ಯಮವರ್ಗದ ಜನರ ಸಂಕಷ್ಟ ಹೆಚ್ಚಿಸಿದೆ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಟೀಕಿಸಿದ್ದಾರೆ.
ತೀರ್ಥಹಳ್ಳಿಯಲ್ಲಿ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯ ಸರ್ಕಾರದ ಅತ್ಯುತ್ತಮ ಯೋಜನೆಗಳಾದ ಐದು ಗ್ಯಾರೆಂಟಿಗಳನ್ನು ಸದಾ ಟೀಕಿಸುತ್ತಾ ಬಿಜೆಪಿ ಸರ್ಕಾರ ಅದನ್ನು ರದ್ದುಪಡಿಸುವುಂತೆ ಆಗ್ರಹಿಸುತ್ತಿದೆ. ಇದರ ಪ್ರಯೋಜನ ಪಡೆದು ಜೀವನ ಕಟ್ಟಿಕೊಳ್ಳುತ್ತಿರುವ ಕರ್ನಾಟಕದ ಜನತೆಗೆ ಅವಮಾನಿಸುವ, ಮತ್ತಷ್ಟು ಸಂಕಷ್ಟಕ್ಕೆ ಈಡು ಮಾಡುವ ಹುನ್ನಾರವನ್ನು ಸಭೆಯಲ್ಲಿ ಪ್ರಸ್ತಾಪಿಸಲಾಯಿತು .
2014ರ ನಂತರ ಇಡಿ, ಐಟಿ, ಸಿಬಿಐಗಳು ಕೇಂದ್ರ ಸರ್ಕಾರದ ಕೈಗೊಂಬೆಯಾಗಿದ್ದು ಬಿಜೆಪಿ ಹೊರತು ಪಡಿಸಿ ಇತರೆ ಪಕ್ಷಗಳ
ಕಾರ್ಯಕರ್ತರನ್ನು ಮುಖಂಡರನ್ನು ಗುರಿಯಾಗಿಸಿ ದಾಳಿ ನಡೆಸುತ್ತಿದೆ. ವಿನಾಕಾರಣ ಬಂಧನಕ್ಕೆ ಒಳಪಡಿಸಿ ರಾಜಕೀಯ ಮುಖಂಡರಿಗೆ ಹಿಂಸೆ ನೀಡಲಾಗುತ್ತಿದೆ. ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷರಾದ ಬಿ ವೈ ವಿಜಯೇಂದ್ರರ ಮೇಲೆ ಈಡಿ ಪ್ರಕರಣ ಬಾಕಿ ಇದ್ದರು ಸರಿಯಾಗಿ ವಿಚಾರಣೆ ನಡೆಸದೇ ಇತರೆ ಪಕ್ಷದ ನಾಯಕರನ್ನು ಅದರಲ್ಲೂ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಅರ್.ಎಂ ಮಂಜುನಾಥಗೌಡರನ್ನು ಹಳೆಯ ಪ್ರಕರಣದಲ್ಲಿ ವಿನಾಕಾರಣ ಬಂಧಿಸಿರುವುದನ್ನು ಸಭೆ ಸಂಪೂರ್ಣವಾಗಿ ಖಂಡನೆ ಮಾಡಲಾಗಿದೆ. ಶರಾವತಿ ಮುಳುಗಡೆ ಸಂತ್ರಸ್ತರ ಪುನರವಸತಿ ಯೋಜನೆಯ ಸರ್ವೆ ಕಾರ್ಯದಲ್ಲಿ ಲೋಪಗಳು ಆಗುತ್ತಿದ್ದು ಶಿವಮೊಗ್ಗ ಜಿಲ್ಲೆಯಾದ್ಯಂತ 1962ರಿಂದ 1963ನೇ ಸಾಲಿನಲ್ಲಿ ಶರಾವತಿ ಮುಳುಗಡೆ ಸಂತ್ರಸ್ತರ ಪುನರ್ವಸತಿಯಡಿಯಲ್ಲಿ ವಿವಿಧ ಅರಣ್ಯ ಪ್ರದೇಶಗಳಲ್ಲಿ ನೆಲೆಯೂರಿ ಜಮೀನಿನ ಹಕ್ಕು ದಾಖಲೆಗಳನ್ನು ಹೊಂದಿ ಸುಮಾರು ಆರು ದಶಕಗಳ ಅಂತರದಲ್ಲಿ ಆಗುತ್ತಿರುವ ಸರ್ವೆ ಕಾರ್ಯದಲ್ಲಾದ ಲೋಪಗಳನ್ನು ಸರಿಪಡಿಸುವವರೆಗೆ ಸರ್ಕಾರ ಈಗ ಮಾಡುತ್ತಿರುವ ಸರ್ವೆಯನ್ನು ತಡೆಹಿಡಿಯಬೇಕು ಎಂದು ತಿಳಿಸಲಾಗಿದೆ .
ಕೋಮುವಾದವನ್ನು ಪ್ರತಿದಿನ ಜಪಿಸಿ ಧರ್ಮ ಧರ್ಮಗಳ ನಡುವೆ, ಜಾತಿ ಜಾತಿಗಳ ನಡುವೆ ವಿಷಪೂರಿತ ವಾತಾವರಣ ಸೃಷ್ಟಿಸುವ ಹುನ್ನಾರ ನಡೆಸುತ್ತಿರುವ ಈ ಕ್ಷೇತ್ರದ ಶಾಸಕರಾದ ಆರಗ ಜ್ಞಾನೇಂದ್ರರವರು ಧರ್ಮಾಧಾರಿತವಾಗಿ ಟೀಕೆ ಟಿಪ್ಪಣಿಗಳನ್ನು ಮಾಡುತ್ತಿರುವುದನ್ನು ಈ ಸಭೆ ಖಂಡಿಸುತ್ತದೆ. ದ್ವೇಷ ಭಾಷಣ, ಸ್ಥಳೀಯ ಬಿಜೆಪಿ ಶಾಸಕರಾದ ಆರಗ ಜ್ಞಾನೇಂದ್ರರವರು ಸರ್ಕಾರಿ ಕಾರ್ಯಕ್ರಮಗಳಲ್ಲಿ ದ್ವೇಷಪೂರಿತ ಭಾಷಣಗಳನ್ನು ಮಾಡುತ್ತಿರುವುದು, ಕೋಮು ಸೌಹಾರ್ದ ಕದಡುವ ಯತ್ನ ಮಾಡುತ್ತಿರುವುದು ಹಾಗು ಅಧಿಕೃತ ಕೆಡಿಪಿ, ಬಗರ್ ಹುಕುಂ ಸಮಿತಿ ಸಭೆಗಳಲ್ಲಿ ಅವರ ಪಕ್ಷದ ಮುಖಂಡರು ಮತ್ತು ಪಿಎಗಳನ್ನು ಸಭಾ ನಡುವಳಿಕೆಗಳಲ್ಲಿ ಭಾಗವಹಿಸುವಂತೆ ಮಾಡಿ ತಾರತಮ್ಯ ಮಾಡುವುದನ್ನು ಈ ಸಭೆ ಪ್ರಸ್ತಾಪಿಸಿದರು .
ಮೋದಿ ನೇತೃತ್ವದ ಕೇಂದ್ರ ಸರ್ಕಾರ ಬಿಜೆಪಿಯೇತರ ಸರ್ಕಾರಗಳಿಗೆ ಜಿಎಸ್ಸಿ ಪಾಲು ಸೇರಿದಂತೆ ಇತರೆ ಅನುದಾನಗಳಲ್ಲಿ ತಾರತಮ್ಯ ನೀತಿ ಅನುಸರಿಸುತ್ತಿದ್ದು ಇದರಿಂದ ರಾಜ್ಯಗಳ ಅಬಿವೃದ್ಧಿಗೆ ತೊಡಕಾಗುತ್ತಿರುವುದರಿಂದ ಅನುದಾನದಲ್ಲಿ ಅಸಮಾನತೆ ಮಾಡುತ್ತಿರುವ ಕೇಂದ್ರ ಸರ್ಕಾರ, ಕಾಶ್ಮೀರದ ಪಹಲ್ಗವ್ ನಡೆದ ಪಾಕಿಸ್ತಾನ ಬೆಂಬಲಿತ ಭಯೊತ್ಪಾದನೆಗೆ ವ್ಯತಿರಿಕ್ತವಾಗಿ ಪಾಕಿಸ್ತಾನದ ವಿರುದ್ಧ ಯಶಸ್ವಿಯಾಗಿ ಅಪರೇಷನ್ ಸಿಂಧೂರದ ಹೆಸರಿನಲ್ಲಿ ಯುದ್ಧ ಸಾರಿದ್ದ ಭಾರತದ ನಿಲುವನ್ನು ಬೆಂಬಲಿಸಿದ್ದು ಕೇಂದ್ರ ಸರ್ಕಾರವನ್ನು ಅಭಿನಂದಿಸುತ್ತೇವೆ. ಆದರೆ ಹತ್ಯೆಗೊಳಗಾದ ಇಪ್ಪತ್ತಾರು ಜನರ ಪತ್ನಿಯರಿಗೆ ಕನಿಷ್ಟ ಒಂದು ಕೋಟಿ ರೂ ಪರಿಹಾರ ನೀಡದಿರುವುದು ಮತ್ತು ಅಮೇರಿಕಾ ಅಧ್ಯಕ್ಷ ಟ್ರಂಪ್ ಇವರ ಒತ್ತಡಕ್ಕೆ ಒಳಗಾಗಿ ಪಾಕಿಸ್ತಾನದ ಮೇಲೆ ಧಾಳಿಗೆ ಕದನ ವಿರಾಮ ಘೋಷಿಸಿದ ನಿಲುವನ್ನು ನಾವು ಖಂಡಿಸುತ್ತೇವೆ ಎಂದು ಕಾಂಗ್ರೆಸ್ ನಾಯಕರು ಹೇಳಿದರು.
ಬಿಜೆಪಿ ಸರ್ಕಾರ ಹಾಗೂ ಆರಗ ಜ್ಞಾನೇಂದ್ರ ಅವರು ಈ ತೀರ್ಥಹಳ್ಳಿ ಕ್ಷೇತ್ರವನ್ನು ಲೂಟಿ ಮಾಡುತ್ತಿದ್ದಾರೆ. ಆರ್ ಎಸ್ ಎಸ್ ಬಿಜೆಪಿಯ ಸಂಘ ಈಗ ಲೂಟಿ ಮಾಡುತ್ತಿದೆ. ಮರಳು ದಂಧೆಯಿಂದ ಸಾಕಷ್ಟು ರೀತಿಯ ಪ್ರಗತಿಯನ್ನು ಕಾಣುತ್ತಾ ಇದ್ದಾರೆ ಇದರಿಂದ ಬಿಜೆಪಿಯ ಕೆಲವಷ್ಟು ಪುಂಡರಿಗೆ ಸಹಾಯ ಮಾಡುತ್ತಿದ್ದಾರೆ. ಒಬ್ಬ ರೈತರಿಗೂ ಕೂಡ ಹಕ್ಕು ಪತ್ರವನ್ನು ವಿತರಣೆ ಮಾಡಿಲ್ಲ. ಇದರಿಂದ ರೈತರಿಗೆ ಸಾಕಷ್ಟು ತೊಂದರೆ ಎಂದು ಕಾಂಗ್ರೆಸ್ ನಾಯಕರು ಪ್ರತಿಭಟನೆ ವೇಳೆ ಹೇಳಿದ್ದಾರೆ.
ಸಭೆ ಹಾಗೂ ಪ್ರತಿಭಟನೆಯಲ್ಲಿ ಮಾಜಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್, ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷರಾದ ಪ್ರಸನ್ನ ಕುಮಾರ್, ಕಡ್ತೂರು ದಿನೇಶ್, ವಿಶ್ವನಾಥ್ ಶೆಟ್ಟಿ, ಡಾಕ್ಟರ್ ಸುಂದರೇಶ್, ಕೆಸ್ತೂರ್ ಮಂಜುನಾಥ್, ಹುಂಚದ ಕಟ್ಟೆ ಆದರ್ಶ್, ತಾಲೂಕು ಗ್ಯಾರೆಂಟಿ ಅನುಷ್ಠಾನದ ಸಚೀಂದ್ರ ಹೆಗಡೆ, ಪೂರ್ಣೇಶ್ ಕೆಳಕೆರೆ, ತುಪ್ಪದಮನೆ ವಿನಾಯಕ್, ಹಸಿರುಮನೆ ಮಹಾಬಲೇಶ್, ಹಾಗೂ ಪಕ್ಷದ ಪ್ರಮುಖ ನಾಯಕರು ಮತ್ತು ಪಕ್ಷದ ಕಾರ್ಯಕರ್ತರು ಉಪಸ್ಥಿತಿ ಇದ್ದರು.

Categories
ರಾಜ್ಯ

ಹಾಸನ ಜಿಲ್ಲೆಯಲ್ಲಿ 40 ದಿನಕ್ಕೆ 22 ಮಂದಿಗೆ ಹಾರ್ಟ್ ಅಟ್ಯಾಕ್!

ಹಾಸನ ಜಿಲ್ಲೆಯಲ್ಲಿ 40 ದಿನಕ್ಕೆ 22 ಮಂದಿಗೆ ಹಾರ್ಟ್ ಅಟ್ಯಾಕ್!
– ಸೋಮವಾರ ಇಂದು ಒಂದೇ ದಿನ ಮೂವರು ಬಲಿ
– ಏನಿದು ವಿಚಿತ್ರ ಘಟನೆ: ಕಾರಣ ಏನು…?

NAMMUR EXPRESS NEWS
ಹಾಸನ : ಹಾಸನದಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಆತಂಕ ಹೆಚ್ಚಾಗಿದೆ. ಇಂದು ಒಂದೇ ದಿನದಲ್ಲಿ ಮಧ್ಯಾಹ್ನದ ಒಳಗೆ 3 ಸಾವಿನ ಪ್ರಕರಣ ಹೊರಬಿದ್ದಿದೆ. ಇದೀಗ ತಾನೆ ಚನ್ನರಾಯಪಟ್ಟಣ ತಾಲ್ಲೂಕಿನ ಡಿ ಗ್ರೂಪ್ ನೌಕರ ಕುಮಾರ್‌(53) ಮೃತಪಟ್ಟ ಬಗ್ಗೆ ವರದಿಯಾಗಿದೆ. ಕಳೆದ 40 ದಿನಗಳಲ್ಲಿ ಇಂದಿನವರೆಗೆ ಒಟ್ಟು 22 ಜನ ಹೃದಯಘಾತಕ್ಕೆ ಬಲಿಯಾಗಿದ್ದಾರೆ. ಅಲ್ಲದೆ ಇಂದು ಒಂದೇ ದಿನ ಜಿಲ್ಲೆಯಲ್ಲಿ ಒಟ್ಟು ನಾಲ್ವರು ಹೃದಯಾಘಾತದಿಂದ ಸಾವನಪ್ಪಿದ್ದಾರೆ.
ಇಂದು ಬೆಳ್ಳಂಬೆಳಿಗ್ಗೆಯೇ ಹಾಸನ ಜಿಲ್ಲೆಯ ಬೇಲೂರು ತಾಲೂಕಿನಲ್ಲಿ ಮಹಿಳೆ ಒಬ್ಬರು ಮನೆಯಲ್ಲಿಯೇ ಕುಸಿದು ಬಿದ್ದು ಸಾವನಪ್ಪಿದ್ದಾರೆ. ಬೇಲೂರು ಪಟ್ಟಣದ ಜೆಪಿ ನಗರದ ಲೇಪಾಕ್ಷಿ (50) ಎನ್ನುವವರು ಬೆಳಿಗ್ಗೆ ಮನೆಯಲ್ಲಿದ್ದಾಗಲೇ ಸುಸ್ತು ಎಂದು ಕುಸಿದು ಬಿದಿದ್ದರು. ಆಸ್ಪತ್ರೆಗೆ ಬರುವ ಮೊದಲೇ ಮಹಿಳೆ ಮೃತಪಟ್ಟಿದ್ದಾರೆ. ಹೊಳೆನರಸೀಪುರದಲ್ಲಿ ಟೀ ಕುಡಿಯುತ್ತಿರುವಾಗಲೇ ಪ್ರಾಧ್ಯಾಪಕ ಒಬ್ಬರು ಹೃದಯಘಾತದಿಂದ ಸಾವನ್ನಪ್ಪಿರುವ ಘಟನೆ ನಡೆದಿದೆ. ಹೊಳೆನರಸೀಪುರದಲ್ಲಿ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದ ಮುತ್ತಯ್ಯ (58) ಸಾವನಪ್ಪಿದ್ದಾರೆ.
ಜನರಾಯಪಟ್ಟಣದಲ್ಲಿ ಜಮೀನಿನಲ್ಲಿ ಉಳುಮೆ ಮಾಡುವಾಗಲೇ ಯೋಧ ಸಾವನ್ನಪ್ಪಿದ್ದಾರೆ. ಮೃತ ಯೋಧನನ್ನು ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಕೆಂಬಾಳು ಗ್ರಾಮದ ಲೋಹಿತ್ (38) ಎಂದು ತಿಳಿದುಬಂದಿದೆ. ಚನ್ನರಾಯಪಟ್ಟಣ ತಾಲ್ಲೂಕಿನ ಡಿ ಗ್ರೂಪ್ ನೌಕರ ಕುಮಾರ್(53) ಮೃತಪಟ್ಟ ಬಗ್ಗೆ ವರದಿಯಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹೃದಯಾಘಾತದಿಂದ ಮೃತಪಡುತ್ತಿರುವ ಪ್ರಕರಣ ನನ್ನ ಗಮನಕ್ಕೂ ಬಂದಿದೆ. ಆದಷ್ಟು ಬೇಗ ಈ ಹೃದಯಾಘಾತಕ್ಕೆ ಕಾರಣ ಏನಿರಬಹುದು ಎಂಬುದಕ್ಕೆ ತಜ್ಞರ ಸಮಿತಿ ರಚಿಸಲಾಗುವುದು ಎಂದು ಹೇಳಿದ್ದಾರೆ.

Categories
ಕರಾವಳಿ

ಮಂಗಳೂರು ಏರ್ಪೋರ್ಟ್: ಬಾಂಬ್ ಮೇಲ್!

ಕರಾವಳಿ ಟಾಪ್ ನ್ಯೂಸ್

ಮಂಗಳೂರು ಏರ್ಪೋರ್ಟ್: ಬಾಂಬ್ ಮೇಲ್!

* ಸುಬ್ರಹ್ಮಣ್ಯ: ಐಎಎಸ್ ಅಧಿಕಾರಿ ಅಣ್ಣಾಮಲೈ ಭೇಟಿ..!
* ಮಂಗಳೂರು: ವಿಮಾನ ನಿಲ್ದಾಣಗಳಿಗೆ ಬಾಂಬ್ ಬೆದರಿಕೆ

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಸುಬ್ರಹ್ಮಣ್ಯ : ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾದ ಕುಕ್ಕೆ ಸುಬ್ರಹ್ಮಣ್ಯಕ್ಕೆ ತಮಿಳುನಾಡಿನ ಐಎಎಸ್ ಅಧಿಕಾರಿ ಕೆ. ಅಣ್ಣಾಮಲೈ ಅವರು ಕುಟುಂಬ ಸಮೇತರಾಗಿ ಭೇಟಿ ನೀಡಿ ದೇವರ ದರ್ಶನ ಪಡೆದರು. ಬಳಿಕ ನರಸಿಂಹ ಸುಬ್ರಹ್ಮಣ್ಯ ಮಠದಲ್ಲಿ ಆಶ್ಲೇಷಾ ಬಲಿ ಪೂಜೆಯನ್ನು ನೆರವೇರಿಸಿದರು. ಪರಶುರಾಮನಿಂದ ಸೃಷ್ಟಿಯಾದ, ಸುಮಾರು ಐದು ಸಾವಿರ ವರ್ಷಗಳ ಇತಿಹಾಸವಿರುವ ಈ ದೇವಾಲಯಕ್ಕೆ ಕಳೆದ ಹತ್ತು ಹದಿನೈದು ವರ್ಷಗಳಿಂದ ಭೇಟಿ ನೀಡುತ್ತಿರುವ ಇವರು “ದೇಶದ ಜನರ ಒಳಿತಿಗಾಗಿ ಆಶ್ಲೇಷಾ ನಕ್ಷತ್ರದ ಶುಭದಿನದಂದು ಕುಟುಂಬ ಸಮೇತನಾಗಿ ಬಂದು ಪೂಜೆಯನ್ನು ಸಲ್ಲಿಸಿದ್ದೇನೆ” ಎಂದು ಮಾಧ್ಯಮಗಳಿಗೆ ತಿಳಿಸಿದರು.

ಮಂಗಳೂರು: ಮಂಗಳೂರು ಸೇರಿದಂತೆ ಕೆಲವು ವಿಮಾನ ನಿಲ್ದಾಣಗಳ ನಿರ್ದೇಶಕರಿಗೆ ಇಮೇಲ್ ಗಳ ಮೂಲಕ ಬಂದ ಸಂದೇಶ ಜನರಲ್ಲಿ ಆತಂಕ ಮೂಡಿಸಿದೆ.‌ ಸಂದೇಶದಲ್ಲಿ ಬಾಂಬ್ ಬೆದರಿಕೆ ಒಡ್ಡಲಾಗಿದೆ. ಕೇವಲ ಮಂಗಳೂರು ಅಷ್ಟೇ ಅಲ್ಲದೆ ಹುಬ್ಬಳ್ಳಿ, ಬೆಳಗಾವಿ ಮತ್ತು ಬೆಂಗಳೂರು ವಿಮಾನ ನಿಲ್ದಾಣಗಳ ನಿರ್ದೇಶಕರಿಗೂ ಈ ರೀತಿಯ ಸಂದೇಶ ರವಾನೆಯಾಗಿದೆ ಎಂದು ತಿಳಿದುಬಂದಿದೆ. ಈಗಾಗಲೇ ಬಿಗಿ ಭದ್ರತೆಯಲ್ಲಿರುವ ಬಜ್ಪೆ ವಿಮಾನ ನಿಲ್ದಾಣದಲ್ಲಿ ಮತ್ತಷ್ಟು ಭದ್ರತೆಯನ್ನು ತೀವ್ರಗೊಳಿಸಿದ್ದು, ನಿಲ್ದಾಣದ ಆವರಣಕ್ಕೆ ಬರುವ ಪ್ರತಿಯೊಬ್ಬ ವ್ಯಕ್ತಿಯನ್ನು ಹೆಚ್ಚಿನ ಪ್ರಮಾಣದಲ್ಲಿ ತನಿಖೆಗೆ ಒಳಪಡಿಸಲಾಗುತ್ತಿದೆ. ಮತ್ತು ಮುಂಜಾಗ್ರತಾ ಕ್ರಮವಾಗಿ ಬಜ್ಪೆ ಪೊಲೀಸರು ಬಾಂಬ್ ನಿಷ್ಕ್ರಿಯ ದಳ, ಶ್ವಾನ ದಳ, ಆಂತರಿಕ ಭದ್ರತಾ ಸಿಬ್ಬಂದಿ ಮತ್ತು ಗುಪ್ತಚರ ಇಲಾಖೆಯನ್ನು ನೇಮಿಸಿ ವಿಮಾನ ನಿಲ್ದಾಣದ ಸುತ್ತಮುತ್ತ ನಿಗಾ ವಹಿಸಲಾಗಿದೆ ಎಂಬ ಮಾಹಿತಿ ತಿಳಿದುಬಂದಿದೆ. ಇದೇ ರೀತಿ ಉಳಿದ ವಿಮಾನ ನಿಲ್ದಾಣಗಳಲ್ಲಿ ಬಿಗಿ ಭದ್ರತೆ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ.

Categories
ತೀರ್ಥಹಳ್ಳಿ

ಕುಪ್ಪಳಿ ಸರ್ಕಲ್ ಈಗ ಕಸದ ಕೊಂಪೆ!

ಲೋಕಲ್ ನ್ಯೂಸ್: ತೀರ್ಥಹಳ್ಳಿ

ಕುಪ್ಪಳಿ ಸರ್ಕಲ್ ಈಗ ಕಸದ ಕೊಂಪೆ!
– ಪಾರ್ಟಿ ಮಾಡುವ ಜಾಗ ಆಗ್ತಿದೆ ಬಸ್ ನಿಲ್ದಾಣ…

ದೇವಂಗಿಯಲ್ಲಿ ಬಿಜೆಪಿ ಕಾರ್ಯಕರ್ತರು ಹಿತೈಷಿಗಳ ಸಭೆ
– ಕುಪ್ಪಳ್ಳಿ ಮಹಾಶಕ್ತಿ ಕೇಂದ್ರದ ವತಿಯಿಂದ ವಿಕಸಿತಾ ಭಾರತದ ಸಂಕಲ್ಪ ಸಭೆ

ಆರಗ ಎಮ್ ಐ ಓ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಆರೋಗ್ಯ ವಿಮೆಗೆ ಚಾಲನೆ
– ತಾಲೂಕು ಮೊಗವೀರ ಮಹಾಜನ ಸಂಘದ ಸದಸ್ಯರಿಗೆ ಅನುಕೂಲ

 

NAMMUR EXPRESS NEWS
ನರೇಂದ್ರ ಮೋದಿ ಸರ್ಕಾರಕ್ಕೆ 11 ವರ್ಷ ಪೂರೈಸಿದ ಹಿನ್ನಲೆಯಲ್ಲಿ ಗಾಜನೂರಿನಲ್ಲಿ ಭಾನುವಾರ ಬೆಳ್ಳಿಗೆ 9 ಘಂಟೆಗೆ ಬಿಜೆಪಿ ಕಾರ್ಯಕರ್ತರು ಹಿತೈಷಿಗಳ ಸಭೆ ನಡೆಯಿತು. ಸಭೆಯನ್ನು ಉದ್ದೇಶಿಸಿ ಶಾಸಕ ಆರಗ ಜ್ಞಾನೇಂದ್ರವರು, ಮಂಡಲ ಬಿಜೆಪಿ ಅಧ್ಯಕ್ಷರಾದ ಹೆದ್ದೂರು ನವೀನ್ ಅವರು,ಜಿಲ್ಲಾ ಪ್ರದಾನ್ ಕಾರ್ಯದರ್ಶಿ ಹರಿಕೃಷ್ಣರವರು, ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಅಶೋಕ್ ಮೂರ್ತಿಯವರು ಮಾತನಾಡಿದರು, ಸಭೆಯ ಅಧ್ಯಕ್ಷತೆಯನ್ನು ಕಡೇಕಲ್ಲು ಅಜೇಯ್ ವಹಿಸಿದ್ದರು, ಶಿವಾನಂಜಪ್ಪ, ರವೀಂದ್ರ, ಗಾಜಾನೂರು ಹೊಸಳ್ಳಿ, ಮತ್ತೂರು ಪಂಚಾಯತ್ ಅಧ್ಯಕ್ಷರು ಹಾಜರಿದ್ದರು.
ಬಿಜೆಪಿ ಕುಪ್ಪಳ್ಳಿ ಮಹಾಶಕ್ತಿ ಕೇಂದ್ರದ ವತಿಯಿಂದ ನಡೆದ ವಿಕಸಿತಾ ಭಾರತದ ಸಂಕಲ್ಪ ಸಭೆ ದೇವಂಗಿಯಲ್ಲಿ ನಡೆಯಿತು.ಶಾಸಕರಾದ ಆರಗ ಜ್ಞಾನೇಂದ್ರ, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷರಾದ ಮೇಘರಾಜ್, ಬಿಜೆಪಿ ತಾಲೂಕ್ ಅಧ್ಯಕ್ಷರಾದ ಹೆದ್ದೂರು ನವೀನ್ ಸಭೆ ಉದ್ದೇಶಿಸಿ ಮಾತನಾಡಿದರು, ಸುಮಾರು 300 ಜನ ಪ್ರಮುಖ ಕಾರ್ಯಕರ್ತರು ಸೇರಿದ್ದ ಸಭೆ ಅಧ್ಯಕ್ಷತೆಯನ್ನು ಹಾರೋಗೋಳಿಗೆ ವಾಸು ವಹಿಸಿದ್ದರು, ಸಭೆಯಲ್ಲಿ ದೇವಂಗಿ ಪಂಚಾಯತ್ ಅಧ್ಯಕ್ಷರಾದ ಗಿರಿಜಾ, ಚಂದವಳ್ಳಿ ಸೋಮಶೇಖರ್, ಕಾಸರವಳ್ಳಿ ಶ್ರೀನಿವಾಸ್, ಕುಕ್ಕೆ ಪ್ರಶಾಂತ್, ಮೋಹನ್ ಭಟ್, ರಕ್ಷಿತ್ ಮೇಗರವಳ್ಳಿ, ಸಂತೋಷ್ ದೇವಾಡಿಗ, ಪ್ರದೀಪ್ ಈ ಸಭೆಯಲ್ಲಿ ಉಪಸ್ಥಿತರಿದ್ದರು.

ಆರಗ ಎಮ್ ಐ ಓ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಆರೋಗ್ಯ ವಿಮೆಗೆ ಚಾಲನೆ
– ತಾಲೂಕು ಮೊಗವೀರ ಮಹಾಜನ ಸಂಘದ ಸದಸ್ಯರಿಗೆ ಅನುಕೂಲ

ತೀರ್ಥಹಳ್ಳಿ: ತಾಲೂಕು ಮೊಗವೀರ ಮಹಾಜನ ಸಂಘ (ರಿ) ತೀರ್ಥಹಳ್ಳಿ ಇವರು ಕಳೆದ ಒಂದು ದಶಕಗಳಿಂದ ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್(ರಿ) ಅಂಬಲಪಾಡಿ – ಉಡುಪಿ ಇದರ ಪ್ರವರ್ತಕರಾದ ಮೊಗವೀರ ಕುಲರತ್ನ ನಾಡೋಜ ಡಾ.ಜಿ.ಶಂಕರ್ ರವರ ಮಾಹಿತಿ, ಮಾರ್ಗದರ್ಶನ ಸಹಕಾರಗಳೊಂದಿಗೆ ಸಮಾಜ ಭಾಂದವರ ಆರೋಗ್ಯ ಸುಧಾರಣೆಗಾಗಿ ಮಣಿಪಾಲ ಆರೋಗ್ಯ ಕಾರ್ಡು ಹಾಗೂ ರಕ್ತದಾನ ಶಿಬಿರಗಳಂತಹ ಸಮಾಜಮುಖಿ ಕಾರ್ಯಗಳನ್ನು ನೆರವೇರಿಸಿಕೊಂಡು ಬರುತ್ತಿದ್ದಾರೆ. ಈ ವರ್ಷ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಸೊಪ್ಪುಗುಡ್ಡೆ ರಾಘವೇಂದ್ರರವರು ಸರ್ವ ಸದಸ್ಯರ ಅಭಿಮತದಿಂದ ಸಮಾಜ ಭಾಂದವರ ಇನ್ನು ಹೆಚ್ಚಿನ ಆರೋಗ್ಯ ಸುಧಾರಣೆಗಾಗಿ ನೂತನ ಆರೋಗ್ಯ ವಿಮೆಗೆ ಚಾಲನೆ ನೀಡಿರುತ್ತಾರೆ. ದಿನಾಂಕ 22 -6- 2025 ರ ಭಾನುವಾರ ತೀರ್ಥಹಳ್ಳಿಯ ಮಾಧವ ಮಂಗಲ ಸಭಾಭವನದಲ್ಲಿ ನಡೆದ ನೂತನವಾಗಿ ನಿರ್ಮಾಣಗೊಂಡ ಶ್ರೀ ಮಹಾಲಕ್ಷ್ಮೀ ಸಭಾಭವನದ ಲೋಕಾರ್ಪಣೆ ‘ವಾರ್ಷಿಕ ಮಹಾಸಭೆ, ಸಮಾಜದ ಶಾಲಾ ವಿದ್ಯಾರ್ಥಿ ಸಮೂಹಕ್ಕೆ ಉಚಿತ ನೋಟ್ ಬುಕ್ ವಿತರಣೆ ಹಾಗೂ ವಿದ್ಯಾರ್ಥಿ ವೇತನ ನೀಡುವ ಕಾರ್ಯಕ್ರಮದಲ್ಲಿ ಸಮಾಜದ ಹಲವಾರು ಜನರ ಕ್ಯಾನ್ಸರ್ ಕಾಯಿಲೆಗೆ ಉಚಿತ ಆರೋಗ್ಯ ಸುಧಾರಿಸುವ ಸಲುವಾಗಿ ಆರಗದಲ್ಲಿರುವ ಮಂಗಳೂರು ಆಂಕೋಲಾಜಿ ಕ್ಯಾನ್ಸರ್ ಆಸ್ಪತ್ರೆಯಲ್ಲಿ (ಎಮ್ ಐ ಒ) ಓರ್ವ ಸದಸ್ಯರಿಗೆ 3 ಲಕ್ಷ ರೂಗಳ ಉಚಿತ ಚಿಕಿತ್ಸೆಗಾಗಿ ಆರೋಗ್ಯ ವಿಮೆ ಒಪ್ಪಂದದ ಮಹತ್ಕಾರ್ಯಕ್ಕೆ ಚಾಲನೆ ನೀಡಲಾಯಿತು. ಈ ಬಗ್ಗೆ ಮಂಗಳೂರು ಸಂಜೀವಿನಿ ಕ್ಯಾನ್ಸರ್ ಸೇವಾ ಟ್ರಸ್ಟ್ ನವರಿಗೆ 1 ಲಕ್ಷ 5 ಸಾವಿರದ ಚೆಕ್ ಅನ್ನು ಸಮಾಜ ಭಾಂದವರ ಪರವಾಗಿ ನೀಡಲಾಯಿತು. ಕ್ಯಾನ್ಸರ್ ರೋಗಕ್ಕೆ ಚಿಕಿತ್ಸೆ ಪಡೆಯಲು ಈ ಆಸ್ಪತ್ರೆಗೆ ಹೋಗುವವರು ತೀರ್ಥಹಳ್ಳಿಯ ಮಾಧವ ಮಂಗಲ ಸಭಾಭವನದ ಕಛೇರಿಯಲ್ಲಿ ಕ್ಯಾನ್ಸರ್ ಆಸ್ಪತ್ರೆಗೆ ನೀಡುವ ಆರೋಗ್ಯ ವಿಮಾ ಪತ್ರವನ್ನು ತೆಗೆದುಕೊಂಡು ಹೋಗಬೇಕಾಗಿದೆ. ತೀರ್ಥಹಳ್ಳಿ ತಾಲೂಕು ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಸೊಪ್ಪುಗುಡ್ಡೆ ರಾಘವೇಂದ್ರರವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ (ರಿ) ಅಂಬಲಪಾಡಿ-ಉಡುಪಿ ಇದರ ಪ್ರವರ್ತಕರಾದ ನಾಡೋಜ ಡಾ.ಜಿ.ಶಂಕರ್, ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ ಕೋಟ್ಯಾನ್, ಉಡುಪಿ ಜಿಲ್ಲಾ ಮೊಗವೀರ ಯುವ ಸಂಘಟನೆ ಅಧ್ಯಕ್ಷ ಜಯಂತ್ ಅಮೀನ್, ನಿಕಟಪೂರ್ವ ಅಧ್ಯಕ್ಷ ಶಿವರಾಮ್ ಕೋಟ, ತೀರ್ಥಹಳ್ಳಿ ತಾಲೂಕು ಮೊಗವೀರ ಮಹಾಜನ ಸಂಘದ ನೂತನ ಅಧ್ಯಕ್ಷ ಶ್ರೀನಿವಾಸ್ ಬಾಳೆಬೈಲು, ಶಿವಮೊಗ್ಗ ಮೊಗವೀರ ಸಂಘದ ಅಧ್ಯಕ್ಷ ಕೆ.ವಿ. ಅಣ್ಣಪ್ಪ, ಶೃಂಗೇರಿ ಮೊಗವೀರ ಸಂಘದ ಅಧ್ಯಕ್ಷ ನವೀನ್ ಹೊಳೆಗದ್ದೆ, ಧಾರ್ಮಿಕ ಪ್ರವರ್ಚನಕಾರ ದಾಮೋದರ ಶರ್ಮ, ಆರಗ ಎಮ್ ಐ ಒ ಕ್ಯಾನ್ಸರ್ ಆಸ್ಪತ್ರೆಯ ವೈದ್ಯರುಗಳಾದ ಡಾ|| ಸುರೇಶ್ ಡಾII ದಿವ್ಯ ಜ್ಯೋತಿ ಡಾ|| ಸುಹಾಸ್ ಹಾಗೂ ಮೊಗವೀರ ಮಹಾಜನ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಕುಪ್ಪಳಿ ಸರ್ಕಲ್ ಈಗ ಕಸದ ಕೊಂಪೆ!

ತೀರ್ಥಹಳ್ಳಿ: ರಾಷ್ಟ್ರಕವಿ ಕುವೆಂಪುರವರ ಕವಿಮನೆಗೆ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 169ರ ಕುಪ್ಪಳಿ ಬಸ್ ನಿಲ್ದಾಣದ ಸರ್ಕಲ್ ಇದೀಗ ಕಸದ ಕೊಂಪೆಯಾಗಿದೆ. ಈ ಹಿಂದೆ ಕುಪ್ಪಳಿ ಪರಿಸರ ಹಾಳಾಗುತ್ತದೆ ಎಂಬ ಕಾರಣವನ್ನು ನೀಡಿ ಕವಿಮನೆ ಪಕ್ಕದಲ್ಲಿದ್ದ ಕ್ಯಾಂಟೀನ್ ಕ್ಲೋಸ್ ಮಾಡಿರುವುದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ ಇದೀಗ ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಬಾಟಲಿಗಳು, ಜೋಳದ ಸಿಪ್ಪೆ, ಪ್ಲಾಸ್ಟಿಕ್ ಲೋಟ, ಐಸ್ ಕ್ರೀಂ ಕವರ್ ಗಳನ್ನು ಬಿಸಾಕಿ ಪರಿಸರವನ್ನು ಹಾಳು ಮಾಡುತ್ತಿದ್ದರೂ ಸಹ ದೇವಂಗಿ ಗ್ರಾಮ ಪಂಚಾಯಿತಿಯಾಗಲಿ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನವಾಗಲಿ ಯಾವುದೇ ರೀತಿಯ ಕ್ರಮ ಕೈಗೊಳ್ಳದೇ ಇರುವುದು ಪ್ರತಿನಿತ್ಯ ಇಲ್ಲಿಗೆ ರಾಜ್ಯ ಹಾಗೂ ದೇಶದ ವಿವಿಧ ಭಾಗಗಳಿಂದ ಆಗಮಿಸುವ ಪ್ರವಾಸಿಗರ ಮುಂದೆ ಊರಿನ‌ ಮಾನ ಹರಾಜು ಹಾಕಿದಂತಾಗಿದೆ. ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಜನತೆ ಅಗ್ರಹಿಸಿದ್ದಾರೆ.

Categories
ರಾಜ್ಯ

ಪೊಲೀಸ್ ಹುದ್ದೆ ಆಕಾಂಕ್ಷಿಗಳಿಗೆ ಗುಡ್ ನ್ಯೂಸ್..!!

ಪೊಲೀಸ್ ಹುದ್ದೆ ಆಕಾಂಕ್ಷಿಗಳಿಗೆ ಗುಡ್ ನ್ಯೂಸ್..!!
– ಪೊಲೀಸ್‌ ಸಿಬ್ಬಂದಿ ಶೀಘ್ರವೇ ನೇಮಕ
– ಇಲಾಖೆಯ ಶೇ.15 ಹುದ್ದೆ ಭರ್ತಿಗೆ ಸಿಎಂ ಸಿದ್ದರಾಮಯ್ಯ ಸೂಚನೆ

NAMMUR EXPRESS NEWS
ಬೆಂಗಳೂರು: ಪೊಲೀಸ್ ಇಲಾಖೆಯಲ್ಲಿ ಹಲವು ವರ್ಷಗಳಿಂದ ಖಾಲಿ ಇರುವ ಶೇ.15.64 ಹುದ್ದೆಗಳನ್ನು, ಒಳಮೀಸಲಾತಿ ಬಳಿಕ ಹಂತ ಹಂತವಾಗಿ ಭರ್ತಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಕಳೆದ ಒಂದು ವರ್ಷದ ಪೊಲೀಸ್ ಇಲಾಖೆಯ ಕಾರ್ಯಕ್ಷಮತೆಯ ಮೌಲ್ಯ ಮಾಪನ, ಇಲಾಖೆಯ ಬೇಡಿಕೆಗಳು, ಸರ್ಕಾರದ ನೆರವಿನ ಬಗ್ಗೆ ಸಭೆಯಲ್ಲಿ ಚರ್ಚೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ರಾಜ್ಯದಲ್ಲಿ ಕಳೆದ 2 ವರ್ಷದಲ್ಲಿ ಅಪರಾಧ ಪ್ರಕರಣಗಳ ಸಂಖ್ಯೆ, ಕೊಲೆ, ದರೋಡೆ, ಮನೆ ಗಳ್ಳತನ ಸೇರಿ ಇತರೆ ಅಪರಾಧಗಳು ಕಡಿಮೆ ಆಗಿದೆ. ಸೈಬರ್ ಅಪರಾಧಗಳು ಹೆಚ್ಚುತ್ತಿದ್ದರೆ, ಸೈಬರ್ ವಂಚಕರ ಪತ್ತೆಯ ಪ್ರಮಾಣ ಕಡಿಮೆ ಆಗುತ್ತಿದೆ. ಆದ್ದರಿಂದ ತನಿಖೆಯ ಗುಣಮಟ್ಟ ಹೆಚ್ಚಿಸುವ ಸೂಚನೆ ನೀಡಿದ್ದೇನೆ. ಅಪರಾಧಿಗಳನ್ನು ಕ್ಷಿಪ್ರವಾಗಿ ಪತ್ತೆಹಚ್ಚಿ ಅವರಿಗೆ ಕಾನೂನು ರೀತಿಯ ಕ್ರಮ ಆಗುವಂತೆ ಮಾಡಬೇಕು. ಹಾಗೂ ಹಿರಿಯ ಅಧಿಕಾರಿಗಳು ತಮ್ಮ ಕಚೇರಿ ಬಿಟ್ಟು ಆಯಾ ಪೊಲೀಸ್ ಠಾಣೆಗಳಿಗೆ ನಿಯಮಿತವಾಗಿ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಎಂದರು. ಪೊಲೀಸರು ಆರೋಪ ಪಟ್ಟಿಯನ್ನು ಸೂಕ್ತ ಸಮಯಕ್ಕೆ ಸಲ್ಲಿಸುವ ಜೊತೆಗೆ ಎಫ್‌ಐಆರ್ ಅನ್ನು ತಕ್ಷಣ ದಾಖಲಿಸಿ ತನಿಖೆಯ ಗುಣಮಟ್ಟ ಹೆಚ್ಚಿಸು ನಿಟ್ಟಿನಲ್ಲಿ ಕೆಲಸ ಮಾಡಬೇಕು. ಪೊಲೀಸ್ ಇಲಾಖೆ ಡ್ರಗ್ಸ್ ಮುಕ್ತ ರಾಜ್ಯ ಮಾಡಲು ಎಲ್ಲಾ ರೀತಿಯ ಕ್ರಮ ಕೈಗೊಳ್ಳಬೇಕು. ಡ್ರಗ್ ಮಾರುವವರ ಅಂಗಡಿ, ವ್ಯಾಪಾರದ ಲೈಸೆನ್ಸ್ ರದ್ದುಗೊಳಿಸುವ ಅಗತ್ಯ ಬಿದ್ದರೆ ರದ್ದುಮಾಡಿ ಎಂದು ಸೂಚನೆ ನೀಡಿದರು.

ಪ್ರಚೋದನೆ, ದ್ವೇಷ ಭಾಷಣ ಮಾಡುವವರ ವಿರುದ್ಧ ಸ್ವಯಂಪ್ರೇರಿತ ಪ್ರಕರಣವನ್ನು ಕಡ್ಡಾಯವಾಗಿ ದಾಖಲಿಸಿ, ಈ ಬಗ್ಗೆ ದೂರು ಬಂದ ತಕ್ಷಣ ಕ್ರಮಕೈಗೊಳ್ಳಬೇಕು. ರೈತರು, ಮಹಿಳೆಯರು, ಮಕ್ಕಳು ಮತ್ತು ಹಿರಿಯ ನಾಗರಿಕರ ವಿರುದ್ಧ ದೌರ್ಜನ್ಯಗಳು ನಡೆಯದಂತೆ ಕಟ್ಟುನಿಟ್ಟಿನ ಕ್ರಮ ವಹಿಸಬೇಕು. ಹಾಗೂ ಪೊಲೀಸ್ ಗಸ್ತು ಹೆಚ್ಚಿಸಬೇಕು. ಬಾಲ್ಯವಿವಾಹ, ಪೋಕೋ, ಆತ್ಯಾಚಾರ, ಭ್ರೂಣಹತ್ಯೆಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾಡಳಿತ ಜೊತೆ ಸೇರಿ ಕೆಲಸ ಪೊಲೀಸರು ಕೆಲಸ ಮಾಡಬೇಕು ಎಂದರು.

Categories
ಚಿಕ್ಕಮಗಳೂರು

ಕರ್ತವ್ಯನಿರತ ಫಾರೆಸ್ಟ್ ಗಾರ್ಡ್ ನಾಪತ್ತೆ,ತೀವ್ರ ಶೋಧ

ಚಿಕ್ಕಮಗಳೂರು ಟಾಪ್ ನ್ಯೂಸ್

* ಕರ್ತವ್ಯನಿರತ ಫಾರೆಸ್ಟ್ ಗಾರ್ಡ್ ನಾಪತ್ತೆ,ತೀವ್ರ ಶೋಧ
* ಎರಡು ಪ್ರತ್ಯೇಕ ಘಟನೆ ಪ್ರವಾಸಿಗರ ಮಾರಿಮಾರಿ
* ಕೆಲಸದಲ್ಲಿರುವಾಗಲೇ ಸೆಕ್ಯುರಿಟೀಗಾರ್ಡ್‌ಗೆ ಹೃದಯಾಘಾತ

NAMMMUR EXPRESS NEWS

* ಕರ್ತವ್ಯನಿರತ ಫಾರೆಸ್ಟ್ ಗಾರ್ಡ್ ನಾಪತ್ತೆ,ತೀವ್ರ ಶೋಧ
ಚಿಕ್ಕಮಗಳೂರು : 3 ದಿನದ ಹಿಂದೆ ಫಾರೆಸ್ಟ್ ಗಾರ್ಡ್‌ವೊಬ್ಬರು ನಾಪತ್ತೆಯಾದ ಘಟನೆ ಜಿಲ್ಲೆಯ ಕಡೂರು ತಾಲೂಕಿನಲ್ಲಿ ನಡೆದಿದೆ.
ಮೂಲತಃ ಮಡಿಕೇರಿ ಮೂಲದ ಶರತ್ (33) ನಾಪತ್ತೆಯಾಗಿರುವ ಫಾರೆಸ್ಟ್ ಗಾರ್ಡ್.
3 ದಿನದಿಂದ ಪೊಲೀಸರು ಕಡೂರು ತಾಲೂಕಿನ ಸಖರಾಯಪಟ್ಟಣದ ಅರಣ್ಯದಲ್ಲಿ ಹುಡುಕಾಟ ನಡೆಸುತ್ತಿದ್ದಾರೆ.
ನಾಪತ್ತೆಯಾಗಿರುವ ಗಾರ್ಡ್‌ಗಾಗಿ ಪೊಲೀಸರು ಅರಣ್ಯದಲ್ಲಿ ಹುಡುಕಾಟ ನಡೆಸುತ್ತಿದ್ದು, ನೀಲಗಿರಿ ಪ್ಲಾಂಟೇಷನ್‌ನಲ್ಲಿ ಆತನ ಬೈಕ್, ಜರ್ಕಿನ್ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.
ಸಖರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

* ಎರಡು ಪ್ರತ್ಯೇಕ ಪ್ರಕರಣ,ಪ್ರವಾಸಿಗರ ಮಾರಾಮಾರಿ
ಮೂಡಿಗೆರೆ/ಚಿಕ್ಕಮಗಳೂರು: ಎರಡು ಪ್ರತ್ಯೇಕ ಘಟನೆಯಲ್ಲಿ ಕುಡಿದ ಮತ್ತಿನಲ್ಲಿ ಮಾರಾಮಾರಿ ನಡೆದಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.
ನಡುರಸ್ತೆಯಲ್ಲೇ ಪ್ರವಾಸಿಗರ ಬಡಿದಾಡಿಕೊಂಡಿರುವ ಘಟನೆ ಮೂಡಿಗೆರೆ ಪಟ್ಟಣದ ಬಸ್ ಸ್ಟ್ಯಾಂಡ್ ರಸ್ತೆಯಲ್ಲಿ ನಡೆದಿದೆ.
ಭಾನುವಾರ (ಜೂ.29) ರಾತ್ರಿ 11 ಗಂಟೆ ಸಮಾರಿಗೆ ಈ ಘಟನೆ ನಡೆದಿದ್ದು, ನಡುರಸ್ತೆಯಲ್ಲೇ ಪ್ರವಾಸಿಗರು ಹಿಗ್ಗಾಮುಗ್ಗ ಹೊಡೆದಾಡಿಕೊಂಡಿದ್ದಾರೆ. ಸ್ಥಳೀಯರು ಗಲಾಟೆ ಬಿಡಿಸಲು ಎಷ್ಟೇ ಪ್ರಯತ್ನಿಸಿದರು ಮತ್ತೆ-ಮತ್ತೆ ಪ್ರವಾಸಿಗರ ಬಡಿದಾಡಿಕೊಂಡಿರುವುದುದು ವಿಡಿಯೋದಲ್ಲಿ ಸೆರೆಯಾಗಿದೆ. ಮೂವರು ಯುವಕರು ಹೊಡೆದಾಡಿಕೊಂಡಿದ್ದು, ಪ್ರವಾಸಿಗರ ಗಲಾಟೆಯ ಬಗ್ಗೆ ಮೂಡಿಗೆರೆ ಪೊಲೀಸರಿಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಇನ್ನೊಂದು ಘಟನೆಯಲ್ಲಿ ಕುಡಿದ ಮತ್ತಿನಲ್ಲಿ ಎರಡು ಗುಂಪುಗಳ ಮಧ್ಯೆ ಮಾರಾಮಾರಿ ನಡೆದಿದೆ. ಚಿಕ್ಕಮಗಳೂರು ನಗರದ ಟೌನ್ ಕ್ಯಾಂಟೀನ್ ಸರ್ಕಲ್ ನಲ್ಲಿಈ ಘಟನೆ ನಡೆದಿದೆ.
ನಶೆಯ ಏಟಿನಲ್ಲಿ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿದ್ದು, ಘಟನೆಯಲ್ಲಿ ಅಜಯ್ (23) ಯತೀಶ್ (23) ಎನ್ನುವವರಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ.
ಇಬ್ಬರನ್ನು ಹಾಸನ ಆಸ್ಪತ್ರೆಗೆ ರವಾನಿಸಲಾಗಿದೆ.
ಅಜಯ್ ತಲೆಗೆ 7-8 ಕಡೆ ಮಚ್ಚಿನ ಏಟು ಬಿದ್ದಿದ್ದು, ಸ್ಥಿತಿ ತೀವ್ರ ಗಂಭೀರವಾಗಿದೆ. ಯತೀಶ್ ಎಡಗೈಗೆ ಗಂಭೀರ ಗಾಯವಾಗಿದ್ದು, ನರಗಳು ಕಟ್ ಆಗಿವೆ ಎನ್ನಲಾಗಿದೆ.
ಬಸವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಲಾಗಿದೆ.

* ಕೆಲಸದಲ್ಲಿರುವಾಗಲೇ ಸೆಕ್ಯುರಿಟೀಗಾರ್ಡ್‌ಗೆ ಹೃದಯಾಘಾತ
ಚಿಕ್ಕಮಗಳೂರು : ಕೆಲಸ ನಿರ್ವಹಿಸುತ್ತಿರುವಾಗಲೇ ಸೆಕ್ಯೂರಿಟಿ ಗಾರ್ಡ್ ಒಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ರವಿವಾರ ನಡೆದಿದೆ.
ನಗರದ ಬೇಲೂರು ರಸ್ತೆಯಲ್ಲಿರುವ ಬೈಕ್ ಶೋ ರೂಂ ನಲ್ಲಿ ಕೆಲಸ ಮಾಡುತ್ತಿದ್ದ ಹಿರೇಗೌಜದ ಶಿವಮೂರ್ತಿ (50) ಎನ್ನುವವರು ಕುಳಿತಲ್ಲೇ ಹೃದಯಘಾತದಿಂದ ಸಾವನ್ನಪ್ಪಿದ್ದಾರೆ.
ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Categories
ಕಾರ್ಕಳ

ಬೆಳ್ಮಣ್ಣ್ ಗ್ರಾಮೀಣ ಕಾಂಗ್ರೆಸ್ ಸಮಿತಿ ಪುನರ್ ಸಭೆ — ನೂತನ ಅಧ್ಯಕ್ಷರ ನೇಮಕ

ಬೆಳ್ಮಣ್ಣ್ ಗ್ರಾಮೀಣ ಕಾಂಗ್ರೆಸ್ ಸಮಿತಿ ಪುನರ್ ಸಭೆ — ನೂತನ ಅಧ್ಯಕ್ಷರ ನೇಮಕ

ಬೆಳ್ಮಣ್ಣ್, ಜೂನ್ 29:
ಬೆಳ್ಮಣ್ಣ್ ಗ್ರಾಮೀಣ ಕಾಂಗ್ರೆಸ್ ಸಮಿತಿಯ ಪುನರ್ ಸಭೆ ಮಂಗಳವಾರ ಸಂಜೆ 5 ಗಂಟೆಗೆ ಬೆಳ್ಮಣ್ಣ್ ಉಮೇಶ್ ಶೆಟ್ಟಿಯವರ ನಿವಾಸದಲ್ಲಿ ಸಮಿತಿಯ ಅಧ್ಯಕ್ಷ ಪ್ರಭಾಕರ್ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಭೆಯಲ್ಲಿ ಕಾಂಗ್ರೆಸ್ ಮುಖಂಡ ಉದಯ್ ಶೆಟ್ಟಿ ಮುನಿಯಾಲು ಮತ್ತು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದ್ ರಾವ್ ಉಪಸ್ಥಿತರಿದ್ದು, ಪಕ್ಷದ ಸಂಘಟನಾ ಕಾರ್ಯದ ಮೇಲೆ ಮಾರ್ಗದರ್ಶನ ನೀಡಿದರು.

ಸಭೆಯಲ್ಲಿ ಗ್ರಾಮೀಣ ಸಮಿತಿಯ ವಿವಿಧ ಘಟಕಗಳಿಗೆ ಹಾಗೂ 6 ಬೂತ್‌ಗಳಿಗೆ ನೂತನ ಅಧ್ಯಕ್ಷರನ್ನು ನೇಮಿಸಿ ಜವಾಬ್ದಾರಿಗಳನ್ನು ನೀಡಲಾಯಿತು. ಪೂರ್ಣ ಪ್ರಮಾಣದ ಸಮಿತಿ ರಚನೆಯ ನಂತರ ಬೆಳ್ಮಣ್ಣ್ ವಲಯದ ಬೃಹತ್ ಕಾಂಗ್ರೆಸ್ ಸಮಾವೇಶ ಆಯೋಜಿಸುವ ನಿರ್ಧಾರ ಕೈಗೊಳ್ಳಲಾಯಿತು.

ಈ ಸಂದರ್ಭದಲ್ಲಿ ರಾಜ್ಯ ಕೃಷಿ ಘಟಕದ ಕಾರ್ಯದರ್ಶಿ ಉದಯ್ ಶೆಟ್ಟಿ, ಹಿಂದುಳಿದ ವರ್ಗ ಘಟಕದ ಅಧ್ಯಕ್ಷ ಅನಿಲ್ ಪೂಜಾರಿ, ಕಾನೂನು ಘಟಕದ ಅಧ್ಯಕ್ಷ ರೆಹಮ್ಮತ್ತುಲ್ಲಾ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಭಾನು ಭಾಸ್ಕರ್, ಮಹಿಳಾ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಅನಿತಾ ಡಿ’ಸೋಜಾ, ಮಾಜಿ ಜಿ.ಪಂ ಸದಸ್ಯ ಸುಪ್ರೀತ್ ಶೆಟ್ಟಿ, ಸ್ಥಳೀಯ ನಾಯಕ ಉಮೇಶ್ ಶೆಟ್ಟಿ, ಶುಭಕರ್ ನಂದಳಿಕೆ, ಹೇಮಂತ್ ಆಚಾರ್ಯ, ಗ್ರಾ.ಪಂ ಸದಸ್ಯ ಪೌಸ್ಟೀನ್ ಹಾಗೂ ಹಲವಾರು ಹಿರಿಯ ಮತ್ತು ಕಿರಿಯ ಗ್ರಾಮೀಣ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.

ವಲಯ ಉಸ್ತುವಾರಿ ಕುಶ ಮೂಲ್ಯ ಪ್ರಾಸ್ತಾವಿಕವಾಗಿ ಮಾತನಾಡಿ ಸಭೆಗೆ ಸ್ವಾಗತಿಸಿದರು. ಬ್ಲಾಕ್ ವಕ್ತಾರ ಪ್ರದೀಪ್ ಬೇಲಾಡಿ ಕಾರ್ಯಕ್ರಮ ನಿರೂಪಿಸಿದರು ಹಾಗೂ ಅಜಿತ್ ಸೂಡ ಧನ್ಯವಾದ ಅರ್ಪಿಸಿದರು.

Categories
ವಿಶೇಷ ಸುದ್ದಿ

ಮನಸ್ಸಿನ ಹಸಿರಗಮನ– ಮುಂಗಾರು ಮತ್ತು ಪಶ್ಚಿಮ ಘಟ್ಟಗಳ ಒಡನಾಟ

ಮನಸ್ಸಿನ ಹಸಿರಗಮನ– ಮುಂಗಾರು ಮತ್ತು ಪಶ್ಚಿಮ ಘಟ್ಟಗಳ ಒಡನಾಟ

ಮೌನದ ಸಂಗಾತಿಯಾದ ಮನಸ್ಸು ಕೆಲವೊಮ್ಮೆ ಜನಸಂಚಾರದಿಂದ ದೂರ ಹೋಗಿ ಏಕಾಂತವನ್ನು ತದ್ವಿರುಹಿಸಿಕೊಳ್ಳುತ್ತದೆ. ಅಂತಹ ಕ್ಷಣಗಳಲ್ಲಿ ಅದು ಅಜ್ಞಾತ ತಾಣಗಳತ್ತ, ತನ್ನೊಳಗಿನ ಶಾಂತಿಯನ್ನು ಹುಡುಕಲು ಹೊರಡುತ್ತದೆ. ಅದು ಬರೀ ಊರೇನಲ್ಲ… ಒಂದು ಭಾವನೆ, ಒಂದು ಅನುಭವ, ಒಂದು ನಿಶ್ಶಬ್ದ ಸಂವಾದ.
ಅದೇ ರೀತಿ, ಒಂದು ಮುಂಗಾರು ಅಂಕುಡೊಂಕಾದ ಟಾರು ರಸ್ತೆಯು ನನ್ನ ಪಯಣಕ್ಕೆ ಸನ್ನದ್ಧವಾಯಿತು. ರಸ್ತೆಯ ಇಳಿಜಾರಿನಲ್ಲಿ ಮಳೆ ಹನಿಗಳು ನೃತ್ಯವಾಡುತ್ತಿದ್ದವು. ಬೈಕ್‌ನ ಮೋಟರ್ ಎಂಜಿನ್ ಶಬ್ದಕ್ಕೂ ಮಳೆಯ ಸ್ಪರ್ಶವೂ ಒಟ್ಟಾಗಿ ಒಂದು ಮ್ಯೂಸಿಕ್‌ನಂತೆ ಮನಸ್ಸನ್ನು ಹಿಡಿದಿಟ್ಟಿತು. ಸುತ್ತಲೂ ಹರಡಿದ ಹಸಿರು, ಮಿತಿಮೀರಿ ಹಬ್ಬಿದ ಮರಗಳು, ಪಶ್ಚಿಮ ಘಟ್ಟಗಳ ದಟ್ಟ ಕಾಡುಗಳು — ಈ ಎಲ್ಲವೂ ನನ್ನನ್ನು ಆಲಿಂಗಿಸಿ ಆಕರ್ಷಿಸುತ್ತಿದ್ದವು.

ಪ್ರತಿ ತಿರುವಿಗೂ ಪ್ರಕೃತಿಯ ಹೊಸ ಮುಖ. ಎಲ್ಲಿ ನಿಂತರೂ ಆ ಹಸಿರಿನ ಸ್ಮಿತವಾಣಿಯ ಸ್ವಾಗತ. ಹನಿ ಹನಿಯಾಗಿ ಗಾಳಿಯಲ್ಲಿ ಹೊಳಪಿಸುತ್ತಿದ್ದ ನೀರಿನ ಕಣಗಳು, ಹಿಮ್ಮೆಟ್ಟಿದ ಮೋಡಗಳ ನಡುವೆ ತಲೆದೋರಿದ ಹತ್ತಿದ ಬೆಟ್ಟಗಳು — ಈ ದೃಶ್ಯಾವಳಿಯು ಕೇವಲ ಕಣ್ಣಿಗೆ ಸೀಮಿತವಲ್ಲ, ಹೃದಯವನ್ನೂ ತೊಡಗಿಸಿಕೊಂಡಿತ್ತು.
ಮರದ ಎಲೆಗಳ ನಡುವೆ ಮಳೆ ಹನಿಗಳ ತಾಳ, ಪಕ್ಕದಲ್ಲಿ ಹರಿಯುವ ಹೊಳೆಯ ನದಿಯ ಗುನುಗು, ದೂರದಲ್ಲಿ ಹಾರುವ ಪಕ್ಷಿಗಳ ಕರೆ, ಈ ಪ್ರಪಂಚವು ಕವಿತೆಯೊಂದು ಓದುತ್ತಿರುವಂತೆ ತೋರಿತು. ಆ ಘಳಿಗೆ ಮನಸ್ಸು ಕೇವಲ ಪ್ರವಾಸಿಗನದಲ್ಲ, ಒಂದು ಭಾಗವಾಗಿತ್ತು ಈ ನೈಸರ್ಗಿಕ ತಾಣದ.
ಏನು ಬೇಕಿತ್ತು ಇನ್ನಷ್ಟು? ಬೈಕನ್ನು ನಿಲ್ಲಿಸಿ, ಒಂದು ಹುಮ್ಮಸ್ಸಿನಿಂದ ಗಾಳಿಯನ್ನು ಉಸಿರಾಡಿದ ಕ್ಷಣದಲ್ಲಿ ಮನಸ್ಸು ಹೇಳಿದ ಮಾತು — “ಇದೇ ನಿಜವಾದ ಸುಂದರತೆ, ಇದೇ ನಿಜವಾದ ಮೌನ.”
ಪಶ್ಚಿಮ ಘಟ್ಟದ ಮಡಿಲಲ್ಲಿ ನೆಲಗೊಳ್ಳುವ ಈ ಮಳೆಗಾಲದ ಸವಿನೆನಪಿಗೆ ಸ್ಪಷ್ಟವಿಲ್ಲದ ಮರಳುಗಾಡುಗಳು ಇಲ್ಲ. ಇದೆಲ್ಲವೂ ಒಂದು ಜೀವಂತ ಕಲೆಯಂತೆ. ಮನಸ್ಸು ಈ ತಾಣದೊಂದಿಗೆ ಮಾತಾಡಿದರೆ, ಪ್ರತಿಕ್ರಿಯೆ ವಾಕ್ಯಗಳಲ್ಲಿ ಅಲ್ಲ — ಹಸಿರಿನಲ್ಲಿ, ನೆಲದ ತಂಪಿನಲ್ಲಿ, ಗಾಳಿಯ ತಡಕಿನಲ್ಲಿ.
ಇಂತಹ ಪ್ರಯಾಣಗಳು ನೆನಪುಗಳ ಸಾಲಿನಲ್ಲಿ ಉಳಿಯುವುದಿಲ್ಲ — ಅವು ಮನಸ್ಸಿಗೆ ರೂಪ ನೀಡುವ ಕ್ಷಣಗಳು.

ರಾಂ ಅಜೆಕಾರು ಕಾರ್ಕಳ