Categories
ರಾಜ್ಯ

ಟಾಪ್ 3 ನ್ಯೂಸ್

ಟಾಪ್ 3 ನ್ಯೂಸ್

ಬೆಳ್ಳಂ ಬೆಳಗ್ಗೆ ರಾಜ್ಯದ ಹಲವು ಕಡೆ ಲೋಕಾಯುಕ್ತ ದಾಳಿ
– ಬೆಂಗಳೂರು : ಬಿಎಂಟಿಸಿ ಬಸ್​ ಚಾಲಕನ ಸಡನ್ ಬ್ರೇಕ್​​ಗೆ ಬಿದ್ದ ಮಹಿಳಾ ಕಂಡಕ್ಟರ್
– ಮಂಡ್ಯ : ರೈಲಿಗೆ ಸಿಲುಕಿ 17ಕ್ಕೂ ಹೆಚ್ಚು ಕುರಿಗಳು ಸಾವು

NAMMUR EXPRESS NEWS
ಬೆಳ್ಳಂ ಬೆಳಗ್ಗೆ ರಾಜ್ಯದ ಹಲವು ಕಡೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು, ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ. ಬಾಗಲಕೋಟೆ, ಬೆಳಗಾವಿ, ರಾಯಚೂರು ಸೇರಿ ಹಲವು ಕಡೆ ಲೋಕಾಯುಕ್ತ ಅಧಿಕಾರಿಗಳು ಬೆಳ್ಳಂ ಬೆಳಗ್ಗೆ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ. ಬಾಗಲಕೋಟೆಯಲ್ಲಿ ಪಿಡಿಒ ಎಸ್.ಪಿ. ಹಿರೇಮಠ ಅವರ ನಿವಾಸದ ಮೇಲೆ ದಾಳಿ ನಡೆಸಲಾಗಿದೆ. ಬಾಗಲಕೋಟೆಯ ವಿದ್ಯಾಗಿರಿಯಲ್ಲಿರುವ ಹೊಲಗೇರಿ ಗ್ರಾಮ ಪಂಚಾಯಿತಿ ಪಿಡಿಒ ಹಿರೇಮಠ ನಿವಾಸದ ಮೇಲೆ ದಾಳಿ ನಡೆಸಲಾಗಿದೆ. ಲೋಕಾಯುಕ್ತ ಡಿವೈಎಸ್ಪಿ ಸಿದ್ದೇಶ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ಐಷಾರಾಮಿ ಮನೆ, ಅಪಾರ ಪ್ರಮಾಣದ ಆಸ್ತಿ ಹೊಂದಿರುವ ಆರೋಪದ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರು ಹಿರೇಮಠ ನಿವಾಸದ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಇನ್ನೂ, ರಾಯಚೂರು, ಬೆಳಗಾವಿಯಲ್ಲೂ ಲೋಕಾಯುಕ್ತ ಅಧಿಕಾರಿಗಳು ಭ್ರಷ್ಟ ಅಧಿಕಾರಿಗಳ ಚಳಿ ಬಿಡಿಸಿದ್ದಾರೆ.

– ಬೆಂಗಳೂರು : ಬಿಎಂಟಿಸಿ ಬಸ್​ ಚಾಲಕನ ಸಡನ್ ಬ್ರೇಕ್​​ಗೆ ಬಿದ್ದ ಮಹಿಳಾ ಕಂಡಕ್ಟರ್

ಬೆಂಗಳೂರು : ಬಿಎಂಟಿಸಿ ಬಸ್ ಚಾಲಕ ದಿಢೀರ್​ ಬ್ರೇಕ್ ಹಾಕಿದ್ದಕ್ಕೆ ಆಯತಪ್ಪಿ ಮಹಿಳಾ‌ ಕಂಡಕ್ಟರ್​​ ಬಿದ್ದಿರುವಂತಹ ಘಟನೆ ಎಲೆಕ್ಟ್ರಾನಿಕ್ ಸಿಟಿ ಹಾಗೂ ಹೊಸರೋಡ್​ಗೆ ಚಲಿಸುತ್ತಿದ್ದ ಬಿಎಂಟಿಸಿ ಬಸ್​ನಲ್ಲಿ ನಡೆದಿದೆ. ಚಲಿಸುತ್ತಿದ್ದ ಬಸ್​ನಲ್ಲಿ ಮಹಿಳಾ‌ ಕಂಡಕ್ಟರ್ ಪ್ರಯಾಣಿಕರಿಗೆ ಟಿಕೆಟ್ ವಿತರಣೆ ಮಾಡುತ್ತಿದ್ದರು. ಏಕಾಏಕಿ ಬ್ರೇಕ್ ಹಾಕಿದ ಕಾರಣ ಡೋರ್ ಬಳಿ ಹೋಗಿ ಬಿದಿದ್ದಾರೆ. ಆಯತಪ್ಪಿ ಬೀಳ್ಳುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ ಆಗಿದೆ. ಮಹಿಳಾ ಕಂಡಕ್ಟರ್ ಅನ್ನು ಪ್ರಯಾಣಿಕರು ಮೇಲೆತ್ತಿದ್ದಾರೆ.

– ಮಂಡ್ಯ : ರೈಲಿಗೆ ಸಿಲುಕಿ 17ಕ್ಕೂ ಹೆಚ್ಚು ಕುರಿಗಳು ಸಾವು

ಮಂಡ್ಯ : ನಾಯಿಗಳು ಅಟ್ಟಾಡಿಸಿದ ವೇಳೆ ಕುರಿಮಂದೆ ಚದುರಿದ ಪರಿಣಾಮ 17 ಕುರಿಗಳು ರೈಲ್ವೇ ಟ್ರ್ಯಾಕ್ ದಾಟಲು ಯತ್ನಿಸಿದಾಗ ರೈಲಿಗೆ ಸಿಲುಕಿ ಸಾವನ್ನಪ್ಪಿರುವ ಘಟನೆ ತಾಲೂಕಿನ ಹೊಸಬೂದನರು ಗ್ರಾಮದ ಬಳಿ ನಡೆದಿದೆ. ಹೊಸಬೂದನೂರು ಗ್ರಾಮದ ಜಯಮ್ಮ ಅವರಿಗೆ ಸೇರಿದ 17ಕ್ಕೂ ಹೆಚ್ಚು ಕುರಿಗಳು ಮೃತಪಟ್ಟಿದ್ದು, ಸುಮಾರು 2 ಲಕ್ಷ ರೂ.ಗಳಿಗೂ ಹೆಚ್ಚು ನಷ್ಟ ಉಂಟಾಗಿದೆ ಎನ್ನಲಾಗಿದೆ. ಜಯಮ್ಮ ಅವರು ಬಯಲಿನಲ್ಲಿ ಕುರಿಗಳನ್ನು ಮೇಯಿಸಿಕೊಂಡು ಮನೆಗೆ ವಾಪಸ್ ಆಗುತ್ತಿದ್ದ ವೇಳೆ ನಾಯಿಗಳು ಅಟ್ಟಾಡಿಸಿದಾಗ ಚದುರಿದ ಕುರಿಗಳು ರೈಲಿಗೆ ಸಿಲುಕಿ ಮೃತಪಟ್ಟಿವೆ. ಸ್ಥಳಕ್ಕೆ ರೈಲ್ವೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಘಟನೆಯ ಸುದ್ದಿ ತಿಳಿದ ಶಾಸಕ ಪಿ.ರವಿಕುಮಾರ್‌ ಗೌಡ ಅವರು ಕುರಿಗಳನ್ನು ಕಳೆದುಕೊಂಡು ನಷ್ಟಕ್ಕೀಡಾಗಿರುವ ಜಯಮ್ಮ ಅವರಿಗೆ ವೈಯಕ್ತಿಕವಾಗಿ ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದಾರೆ.

Categories
ಜಾತಕ

ಈ ದಿನದ ರಾಶಿ ಭವಿಷ್ಯ ಹೇಗಿದೆ?

ಈ ದಿನದ ರಾಶಿ ಭವಿಷ್ಯ ಹೇಗಿದೆ?
– ಲಕ್ಷ್ಮಿ ಕೃಪಕಟಾಕ್ಷದಿಂದ ಯಾವ ರಾಶಿಯವರಿಗೆ ಲಾಭ? ಯಾವ ರಾಶಿಯವರಿಗೆ ನಷ್ಟ?

NAMMUR EXPRESS NEWS
ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು?

** ಮೇಷ ರಾಶಿ :
ಇಂದು ಮೇಷ ರಾಶಿಯವರಿಗೆ ಅದೃಷ್ಟ ಕೈಕೊಡಲಿದೆ. ಅತಿಯಾದ ಖರ್ಚು ಮನಸ್ಸನ್ನು ಸ್ವಲ್ಪ ತೊಂದರೆಗೊಳಿಸುತ್ತದೆ. ನೀವು ಕೆಲಸದ ಸ್ಥಳದಲ್ಲಿ ಹೆಚ್ಚು ಶ್ರಮಿಸಬೇಕಾಗಬಹುದು. ಉದ್ಯೋಗ ಸಂದರ್ಶನದಲ್ಲಿ ನೀವು ಯಶಸ್ಸನ್ನು ಪಡೆಯಬಹುದು. ನಿಮಗೆ ಸರ್ಕಾರದಿಂದ ಬೆಂಬಲ ಸಿಗುತ್ತದೆ. ನಿಮ್ಮ ಪ್ರೀತಿಪಾತ್ರರಿಂದ ನಿಮಗೆ ಬೆಂಬಲ ಸಿಗುತ್ತದೆ. ಅವಮಾನವಾಗುವ ಭಯವಿರುತ್ತದೆ.

** ವೃಷಭ ರಾಶಿ :
ವೃಷಭ ರಾಶಿಯವರಿಗೆ ಹೊಸ ಆದಾಯದ ಮೂಲಗಳು ಸೃಷ್ಟಿಯಾಗಬಹುದು. ಆದರೆ, ಆತ್ಮವಿಶ್ವಾಸದ ಕೊರತೆ ಇರುತ್ತದೆ. ಶಿಕ್ಷಣಕ್ಕೆ ಸಂಬಂಧಿಸಿದ ಕೆಲಸಗಳಲ್ಲಿ ತೊಂದರೆಗಳು ಉಂಟಾಗಬಹುದು. ಕೆಲವು ಕುಟುಂಬ ಕೆಲಸಗಳು ಮತ್ತೆ ಪ್ರಾರಂಭವಾಗಬಹುದು. ನಿಮಗೆ ಒಳ್ಳೆಯ ಸುದ್ದಿ ಸಿಗುತ್ತದೆ. ಪ್ರಯಾಣದಲ್ಲಿ ಲಾಭ ಉಂಟಾಗಲಿದೆ. ನಿಮ್ಮ ವೃತ್ತಿಪರ ಕೆಲಸವನ್ನು ಜವಾಬ್ದಾರಿಯುತವಾಗಿ ನಿರ್ವಹಿಸಿ. ಆ ವ್ಯಾಪಾರವು ಮಧ್ಯಮ ವೇಗದಲ್ಲಿ ಪ್ರಗತಿ ಹೊಂದುತ್ತದೆ.

** ಮಿಥುನ ರಾಶಿ :
ನಿಮ್ಮ ಮನಸ್ಸು ತೊಂದರೆಗೊಳಗಾಗುತ್ತದೆ. ಆತ್ಮವಿಶ್ವಾಸದ ಕೊರತೆ ಇರುತ್ತದೆ. ಉದ್ಯೋಗದಲ್ಲಿ ಬಡ್ತಿಗೆ ಅವಕಾಶಗಳು ಸಿಗಬಹುದು. ಕೆಲಸದ ಕ್ಷೇತ್ರದಲ್ಲಿ ಬೆಳವಣಿಗೆ ಕಂಡುಬರಲಿದೆ. ನಿಮಗೆ ಸ್ನೇಹಿತರಿಂದ ಬೆಂಬಲ ಸಿಗುತ್ತದೆ. ನಿಮ್ಮ ಹಿರಿಯರಿಂದ ನಿಮಗೆ ಸಂಪೂರ್ಣ ಬೆಂಬಲ ಸಿಗುತ್ತದೆ. ವ್ಯವಹಾರವು ಅದ್ಭುತವಾಗಿ ಮುಂದುವರಿಯುತ್ತದೆ. ಆದರೆ ಹಣದ ಬಗ್ಗೆ ಸ್ಮಾರ್ಟ್ ಆಗಿರುವುದು ಇಂದು ಬಹಳ ಮುಖ್ಯ. ಇಂದು, ವಾದಗಳಿಂದ ದೂರವಿರಿ.

** ಕರ್ಕಾಟಕ ರಾಶಿ :
ಇಂದು ಕರ್ಕ ರಾಶಿಯವರಿಗೆ ಧನಾತ್ಮಕವಾಗಿರಬಹುದು. ಹೂಡಿಕೆಯ ವಿಷಯಕ್ಕೆ ಬಂದರೆ, ಲೆಕ್ಕ ಹಾಕಿ ಅಪಾಯಗಳನ್ನು ತೆಗೆದುಕೊಳ್ಳಿ. ಇದು ನಿಮ್ಮನ್ನು ಸ್ವಲ್ಪ ಉದ್ವಿಗ್ನಗೊಳಿಸಬಹುದು. ನೆನಪಿಡಿ, ಕೆಲವೊಮ್ಮೆ ಅಪಾಯಗಳನ್ನು ತೆಗೆದುಕೊಳ್ಳುವುದು ಅವಶ್ಯಕ. ಇಂದು ಜಗತ್ತಿಗೆ ನಿಮ್ಮ ಸೃಜನಶೀಲ ಕಲ್ಪನೆಗಳು ಬೇಕಾಗುತ್ತವೆ. ಯಶಸ್ಸಿಗೆ ಹೊಸ ಮಾರ್ಗಗಳನ್ನು ಕಂಡುಕೊಳ್ಳುವುದು ಮುಖ್ಯ.

** ಸಿಂಹ ರಾಶಿ :
ಇಂದು ಸಿಂಹ ರಾಶಿಯ ಜನರಿಗೆ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಇಂದು ನಿಮ್ಮ ಶ್ರಮವು ಫಲ ನೀಡುತ್ತದೆ ಮತ್ತು ನೀವು ಸಮೃದ್ಧಿಯನ್ನು ನೋಡುತ್ತೀರಿ. ಉದ್ಯೋಗದಲ್ಲಿ ಬದಲಾವಣೆಯ ಸಾಧ್ಯತೆಗಳೂ ಇವೆ. ಪ್ರಗತಿಗೆ ಅವಕಾಶಗಳೂ ಇರಬಹುದು. ಕೆಲಸದ ಕ್ಷೇತ್ರದಲ್ಲಿ ಬೆಳವಣಿಗೆ ಕಂಡುಬರಲಿದೆ. ನಿಧಾನವಾಗಿ ಚಾಲನೆ ಮಾಡಿ. ಗಾಯ ಸಂಭವಿಸಬಹುದು. ನಿಮ್ಮ ವೃತ್ತಿಜೀವನಕ್ಕೆ ಬಂದಾಗ ನೀವು ಶಕ್ತಿ ಮತ್ತು ಸೃಜನಶೀಲತೆಯಿಂದ ತುಂಬಿರುತ್ತೀರಿ.

** ಕನ್ಯಾ ರಾಶಿ :
ಕನ್ಯಾ ರಾಶಿಯವರಿಗೆ ಅದೃಷ್ಟ ಒಲಿದು ಬರುತ್ತದೆ. ಇಂದು ಅಪಾಯಗಳನ್ನು ತೆಗೆದುಕೊಳ್ಳಲು ಹಿಂಜರಿಯದಿರಿ ಏಕೆಂದರೆ ಇದು ದೀರ್ಘಾವಧಿಯಲ್ಲಿ ಪ್ರಯೋಜನಕಾರಿಯಾಗಿದೆ. ನೀವು ಪ್ರೀತಿಸುವ ವ್ಯಕ್ತಿಯೊಂದಿಗೆ ಆಳವಾಗಿ ಸಂಪರ್ಕಿಸಲು ಇದು ಅದ್ಭುತ ದಿನವಾಗಿದೆ. ಹಣಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ನೀವು ಯಶಸ್ಸನ್ನು ಪಡೆಯುತ್ತೀರಿ. ಶಾಂತಿ ಮತ್ತು ವಿಶ್ರಾಂತಿ ಪಡೆಯಲು ಧ್ಯಾನ ಮಾಡಿ.

** ತುಲಾ ರಾಶಿ :
ಇಂದು ಉದ್ಯೋಗದಲ್ಲಿ ಬದಲಾವಣೆಯ ಸಾಧ್ಯತೆಗಳಿವೆ. ಪ್ರಗತಿಗೆ ಅವಕಾಶಗಳಿರಬಹುದು. ಆದಾಯ ಹೆಚ್ಚಾಗಲಿದೆ. ನಿಮ್ಮ ಮಕ್ಕಳಿಂದ ನಿಮಗೆ ಒಳ್ಳೆಯ ಸುದ್ದಿ ಸಿಗಬಹುದು. ತುಲಾ ರಾಶಿಯವರು ಸ್ವಯಂ-ಪ್ರೀತಿಯತ್ತ ಗಮನ ಹರಿಸಬೇಕು. ನೀವು ಮದುವೆಯಾಗಿ ಬಹಳ ದಿನಗಳಾಗಿದ್ದರೂ, ಒಟ್ಟಿಗೆ ಸಮಯ ಕಳೆಯುವುದು ಮುಖ್ಯ. ನೀವು ದೊಡ್ಡ ಪ್ರಭಾವವನ್ನು ಮಾಡಲು ಮತ್ತು ಪ್ರಪಂಚದ ಮೇಲೆ ನಿಮ್ಮ ಗುರುತು ಬಿಡಲು ಬಯಸುತ್ತೀರಿ. ಇಂದು ಆರೋಗ್ಯದ ಕಡೆ ಗಮನ ಹರಿಸುವುದು ಅಗತ್ಯ.

** ವೃಶ್ಚಿಕ ರಾಶಿ :
ಈ ದಿನವು ನಿಮಗೆ ಅದ್ಭುತ ದಿನವಾಗಿದೆ. ಇಂದು ಹೊಸ ಮಾರ್ಗಗಳನ್ನು ಅನ್ವೇಷಿಸಲು ಸಿದ್ಧವಾಗಿರಿ. ನೀವು ಬದ್ಧತೆಯ ಸಂಬಂಧದಲ್ಲಿದ್ದರೆ ಅಥವಾ ಇನ್ನೂ ವಿಶೇಷ ವ್ಯಕ್ತಿಯನ್ನು ಹುಡುಕುತ್ತಿದ್ದರೆ, ಇಂದು ನಿರ್ಧಾರ ತೆಗೆದುಕೊಳ್ಳಲು ಸರಿಯಾದ ದಿನವಾಗಿದೆ. ಇಂದು ಮುಂದೆ ಸಾಗಲು ಮತ್ತು ನಿಮ್ಮ ಸಾಮರ್ಥ್ಯವನ್ನು ಜಗತ್ತಿಗೆ ತೋರಿಸಲು ಹಿಂಜರಿಯದಿರಿ. ಈ ದಿನವು ಸಂತೋಷ ಮತ್ತು ಸಮೃದ್ಧಿಯಿಂದ ತುಂಬಿರುತ್ತದೆ.

** ಧನಸ್ಸು ರಾಶಿ :
ಇಂದು ನಿಮ್ಮ ವರ್ಚಸ್ಸು ಮತ್ತು ಮೋಡಿ ಬೇರೆ ಮಟ್ಟದಲ್ಲಿರಲಿದೆ. ಹಣಕಾಸಿನ ಸಮಸ್ಯೆಗಳಿಂದ ಮುಕ್ತಿ ಪಡೆಯಲು ನಿಮ್ಮ ಸಂಗಾತಿಯ ಸಹಾಯ ಪಡೆಯಿರಿ. ನಿಮ್ಮ ಕಠಿಣ ಪರಿಶ್ರಮ ಮತ್ತು ಸಮರ್ಪಣೆ ದೊಡ್ಡ ರೀತಿಯಲ್ಲಿ ಪ್ರತಿಫಲ ನೀಡುತ್ತದೆ. ಜನಸಂದಣಿಯಿಂದ ಹೊರಗುಳಿಯಲು ಹಿಂಜರಿಯದಿರಿ. ಇಂದು ಅದೃಷ್ಟ ಹೆಚ್ಚಾಗಲಿದೆ. ಆರೋಗ್ಯ ಮೊದಲಿಗಿಂತ ಉತ್ತಮವಾಗಿರುತ್ತದೆ.

** ಮಕರ ರಾಶಿ :
ಇಂದು ನೀವು ಎಚ್ಚರಿಕೆಯಿಂದ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ಇಂದು ಚಿಂತನಶೀಲವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಅವಶ್ಯಕತೆಯಿದೆ. ಸ್ವಲ್ಪ ಉದ್ವಿಗ್ನ ಪರಿಸ್ಥಿತಿ ಇರುತ್ತದೆ. ಆರ್ಥಿಕ ಪರಿಸ್ಥಿತಿ ಸುಧಾರಿಸಿದಾಗ, ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವುದು ಒಳ್ಳೆಯದು. ನಿಮ್ಮ ಪ್ರಣಯ ಕನಸುಗಳನ್ನು ನೀವು ಸುಂದರವಾದ ವಾಸ್ತವಕ್ಕೆ ತಿರುಗಿಸಬಹುದು.

** ಕುಂಭ ರಾಶಿ :
ಇಂದು ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುವ ದಿನ. ಇಂದು ನಿಮ್ಮ ಕನಸುಗಳನ್ನು ನೇರವೇರಿಸಿಕೊಳ್ಳಲು ಉತ್ಸಾಹವನ್ನು ಮುಂದುವರಿಸುವ ದಿನವಾಗಿದೆ. ನಿಮ್ಮ ಅಂತಃಪ್ರಜ್ಞೆಯನ್ನು ನಂಬಿರಿ ಮತ್ತು ಸವಾಲುಗಳಿಗೆ ಹೆದರಬೇಡಿ. ಆರೋಗ್ಯವಾಗಿರಲು, ಜಂಕ್ ಫುಡ್ ನಿಂದ ದೂರವಿರಿ. ಹಣಕ್ಕೆ ಸಂಬಂಧಿಸಿದ ನಿರ್ಧಾರಗಳನ್ನು ತೆಗೆದುಕೊಳ್ಳಲು ನೀವು ಆರ್ಥಿಕ ಸಲಹೆಗಾರರ ​​ಸಹಾಯವನ್ನು ತೆಗೆದುಕೊಳ್ಳಬೇಕಾಗಬಹುದು.

** ಮೀನ ರಾಶಿ :
ಮೀನ ರಾಶಿಯ ಜನರು ಹೆಚ್ಚಿನ ಸಮಸ್ಯೆಗಳನ್ನು ಎದುರಿಸಬಹುದು. ಇಂದು ನೀವು ಸಕಾರಾತ್ಮಕ ಭಾವನೆಗಳಿಂದ ತುಂಬಿರುತ್ತೀರಿ. ಇಂದು ನಿಮ್ಮ ಪ್ರೀತಿಯ ಜೀವನದಲ್ಲಿ ಉತ್ಸಾಹದ ದಿನವಾಗಿದೆ. ಹೊಸ ಸವಾಲುಗಳನ್ನು ಎದುರಿಸಲು ಹಿಂಜರಿಯದಿರಿ. ನಿಮ್ಮ ಉತ್ಸಾಹದಲ್ಲಿ ನಿಮ್ಮ ಖರ್ಚು ನಿಯಂತ್ರಣಕ್ಕೆ ಬರದಂತೆ ಎಚ್ಚರಿಕೆ ವಹಿಸಿ. ನಿಮ್ಮ ನೈಸರ್ಗಿಕ ಮೋಡಿ ಮತ್ತು ಸಂವಹನ ಕೌಶಲ್ಯಗಳು ಇಂದು ಸೂಕ್ತವಾಗಿ ಬರುತ್ತವೆ.

Categories
ಕರಾವಳಿ

ಮಂಗಳೂರು: ನಾಳೆ “ಮಿಡ್ಲ್ ಕ್ಲಾಸ್‌ ಫ್ಯಾಮಿಲಿ” ಕರಾವಳಿಯಾದ್ಯಂತ ತೆರೆಗೆ

ಮಂಗಳೂರು: ನಾಳೆ “ಮಿಡ್ಲ್ ಕ್ಲಾಸ್‌ ಫ್ಯಾಮಿಲಿ” ಕರಾವಳಿಯಾದ್ಯಂತ ತೆರೆಗೆ
– ಕರಾವಳಿಯಾದ್ಯಂತ ಏಕಕಾಲದಲ್ಲಿ ತೆರೆ ಕಾಣಲಿರುವ ತುಳು ಚಿತ್ರ
– ತುಳು ಸಿನೆಮಾ ಪ್ರೋತ್ಸಾಹಿಸುವ ದೃಷ್ಟಿಯಿಂದ ವಿಶೇಷ ಆಫರ್‌ ಲಭ್ಯ

NAMMUR EXPRESS NEWS
ಮಂಗಳೂರು: ಕೋಸ್ಟಲ್‌ವುಡ್‌ನ‌ಲ್ಲಿ ಯಶಸ್ವಿ ಪ್ರದರ್ಶನ ಕಂಡಿರುವ “ರಾಜ್‌ ಸೌಂಡ್ಸ್‌ ಆ್ಯಂಡ್‌ ಲೈಟ್ಸ್‌’ ಸಿನಿಮಾ ತಂಡದ ಬಹುನಿರೀಕ್ಷಿತ ಎರಡನೇ ಸಿನೆಮಾ “ಮಿಡ್ಲ್ ಕ್ಲಾಸ್‌ ಫ್ಯಾಮಿಲಿ’ ಜ.31ರಿಂದ ಕರಾವಳಿಯಾದ್ಯಂತ ಏಕಕಾಲದಲ್ಲಿ ತೆರೆ ಕಾಣಲಿದೆ. ಚಿತ್ರದ ನಿರ್ದೇಶಕ ರಾಹುಲ್‌ ಅಮೀನ್‌ ಅವರು ಮಂಗಳೂರು ಮತ್ತು ಉಡುಪಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರೋಹನ್‌ ಕಾರ್ಪೊ ರೇಶನ್‌ ಅರ್ಪಿಸುವ, ವೈಭವ್‌ ಫಿಕ್ಸ್‌ ಮತ್ತು ಮ್ಯಾಂಗೋ ಪಿಕಲ್‌ ಎಂಟರ್‌ಟೈನ್‌ಮೆಂಟ್‌ ಪ್ರೊಡಕ್ಷನ್‌, ಎಚ್‌.ಪಿ.ಆರ್‌. ಫಿಲ್ಮ್ಸ್ ಹರಿಪ್ರಸಾದ್‌ ರೈ ಸಹಯೋಗದಲ್ಲಿ ಹಾಗೂ ಆನಂದ್‌ ಎನ್‌. ಕುಂಪಲ ನಿರ್ಮಾಣದಲ್ಲಿ ಸಿನೆಮಾ ತಯಾರಾಗಿದೆ ಎಂದು ತಿಳಿಸಿದ್ದಾರೆ. ಮಂಗಳೂರಿನಲ್ಲಿ ರೂಪವಾಣಿ, ಭಾರತ್‌ ಮಾಲ್‌ನ ಬಿಗ್‌ ಸಿನೆಮಾಸ್‌, ಪಿವಿಆರ್‌, ಸಿನೆಪೊಲಿಸ್‌, ಭಾರತ್‌ ಸಿನೆಮಾಸ್‌ ದೇರಳಕಟ್ಟೆ, ಪುತ್ತೂರು, ಪಡುಬಿದ್ರಿ, ಉಡುಪಿಯಲ್ಲಿ ಕಲ್ಪನಾ, ಭಾರತ್‌ ಸಿನೆಮಾಸ್‌, ಮಣಿಪಾಲದಲ್ಲಿ ಐನಾಕ್ಸ್‌, ಭಾರತ್‌ ಸಿನೆಮಾಸ್‌, ಬೆಳ್ತಂಗಡಿಯಲ್ಲಿ ಭಾರತ್‌, ಸುರತ್ಕಲ್‌ನಲ್ಲಿ ನಟರಾಜ್‌, ಸಿನೆಗ್ಯಾಲಕ್ಸಿ, ಕಾರ್ಕಳದಲ್ಲಿ ಪ್ಲಾನೆಟ್‌, ರಾಧಿಕಾ ಥಿಯೇಟರ್‌ನಲ್ಲಿ ಸಿನೆಮಾ ಬಿಡುಗಡೆಯಾಗಲಿದೆ. “ರಾಜ್‌ ಸೌಂಡ್‌ ಆ್ಯಂಡ್‌ ಲೈಟ್ಸ್‌’ ತಂಡದ ಬಹುತೇಕ ತಂತ್ರಜ್ಞರು, ಕಲಾವಿದರು ಇದರಲ್ಲಿದ್ದಾರೆ. ವಿನೀತ್‌ ಕುಮಾರ್‌, ಸಮತಾ ಅಮೀನ್‌, ನವೀನ್‌ ಡಿ.ಪಡೀಲ್‌, ಅರವಿಂದ ಬೋಳಾರ್‌, ಭೋಜರಾಜ್‌ ವಾಮಂಜೂರು, ಚೈತ್ರಾ ಶೆಟ್ಟಿ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. ತುಳು ಸಿನೆಮಾ ಪ್ರೋತ್ಸಾಹಿಸುವ ದೃಷ್ಟಿಯಿಂದ ಮಿಡ್ಲ್ ಕ್ಲಾಸ್‌ ಫ್ಯಾಮಿಲಿ ಸಿನೆಮಾ ವೀಕ್ಷಕರಿಗೆ ರೋಹನ್‌ ಕಾರ್ಪೊ ರೇಶನ್‌ನಿಂದ ವಿಶೇಷ ಆಫರ್‌ ಪ್ರಕಟಿಸಿದೆ. “ಮಿಡ್ಲ್ ಕ್ಲಾಸ್‌ ಫ್ಯಾಮಿಲಿ’ ಸಿನೆಮಾ ಬಿಡುಗಡೆಗೊಂಡ ಎರಡು ವಾರಗಳೊಳಗೆ ಸಿನೆಮಾ ನೋಡಿ ಆ ಟಿಕೆಟ್‌ ಜತೆಗೆ ರೋಹನ್‌ ಕಾರ್ಪೊರೇಷನ್‌ ಸಂಸ್ಥೆಯನ್ನು ಸಂಪರ್ಕಿಸಿದರೆ ಸಂಸ್ಥೆಯ ನಿರ್ಮಾಣದ ಫ್ಲ್ಯಾಟ್‌ಗೆ ಶೇ.10ರ ರಿಯಾಯಿತಿ ದರದಲ್ಲಿ ಖರೀದಿ ಮಾಡಲು ಅವಕಾಶವಿದೆ ಎಂದು ರೋಹನ್‌ ಮೊಂತೇರೋ ತಿಳಿಸಿದ್ದಾರೆ.

Categories
ಕಾರ್ಕಳ

ಬೆಳುವಾಯಿಯಲ್ಲಿ ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ

ಬೆಳುವಾಯಿಯಲ್ಲಿ ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ
– ಜ.31ರಂದು ಪೌರಾಣಿಕ ಯಕ್ಷಗಾನ ಬಯಲಾಟ
– ಮೀನಾ ಸುಬ್ಬಣ್ಣ ಕನ್ನಡ ಮತ್ತು ಕುಟುಂಬಸ್ಥರ ಸ್ವಾಗತ

NAMMUR EXPRESS NEWS
ಕಾರ್ಕಳ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿ ಧರ್ಮಸ್ಥಳ ಮೇಳದವರಿಂದ ಕುಕ್ಕುಡೇಲು ಅಯ್ಯಪ್ಪ ಮಂದಿರ ಬಳಿ ಕಾಂತಾವರ ಕ್ರಾಸ್ ಬೆಳುವಾಯಿಯಲ್ಲಿ ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ ಎಂಬ ಪುಣ್ಯ ಪೌರಾಣಿಕ ಯಕ್ಷಗಾನ ಬಯಲಾಟ ಪ್ರದರ್ಶನ ನಡೆಯಲಿದೆ. ಜ.31ರಂದು ಶುಕ್ರವಾರ ರಾತ್ರಿ 7.00 ರಿಂದ ಕುಕ್ಕುಡೇಲು ಅಯ್ಯಪ್ಪ ಮಂದಿರ ಬಳಿ ಕಾಂತಾವರ ಕ್ರಾಸ್ ಬೆಳುವಾಯಿ ಸಹೃದಯಿ ಕಲಾಭಿಮಾನಿ, ಹಿತೈಷಿ ಬಂಧುಗಳು ಆಗಮಿಸಿ ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕಾಗಿ ಮೀನಾ ಸುಬ್ಬಣ್ಣ ಕನ್ನಡ ಮತ್ತು ಮಕ್ಕಳು ಹಾಗೂ ಕುಟುಂಬಸ್ಥರ ಶ್ರೀ ಚಾಮುಂಡೇಶ್ವರಿ ಕೃಪಾ ಕಾಂತಾವರ ಕ್ರಾಸ್ ಬೆಳುವಾಯಿ ಇವರು ಅಪೇಕ್ಷಿಸಿದ್ದಾರೆ.

Categories
ಚಿಕ್ಕಮಗಳೂರು

100 ಬೆಡ್ ಆಸ್ಪತ್ರೆಯಂತೂ ಆಗಿಲ್ಲ ಆಸ್ಪತ್ರೆಗೆ ವೈದ್ಯರನ್ನಾದರೂ ಕೊಡಿ..!!?

100 ಬೆಡ್ ಆಸ್ಪತ್ರೆಯಂತೂ ಆಗಿಲ್ಲ ಆಸ್ಪತ್ರೆಗೆ ವೈದ್ಯರನ್ನಾದರೂ ಕೊಡಿ..!!?
– ತಕ್ಷಣ ಇನ್ನಿಬ್ಬರು ವೈದ್ಯರನ್ನು ನೀಡಿ ಎಂದು ಡಿ.ಹೆಚ್.ಓ ಗೆ ಮನವಿ ಸಲ್ಲಿಸಿಕೆ
– ವೈದ್ಯರನ್ನು ನೇಮಿಸದಿದ್ದರೆ ಪ್ರತಿಭಟನೆಯ ಎಚ್ಚರಿಕೆ..

NAMMUR EXPRESS NEWS
ಶೃಂಗೇರಿ: ಇಲ್ಲಿನ ತಾಲೂಕು ಆಸ್ಪತ್ರೆಗೆ ಅಗತ್ಯವಿರುವ ಇಬ್ಬರು ವೈದ್ಯರನ್ನು ಕೂಡಲೇ ನೇಮಿಸಿ ಸಾರ್ವಜನಿಕರಿಗೆ ನೆರವಾಗುವಂತೆ ತಾಲೂಕಿನ ಬಿಜೆಪಿ ತಾಲೂಕು ಪ್ರಧಾನ ಕಾರ್ಯದರ್ಶಿ ನೂತನ್ ಕುಮಾರ್ ಕಿಗ್ಗಾ, ರಾಜೇಶ್ ದ್ಯಾವಂಟು, ಗಿರೀಶ್ ಹುಕ್ಳಿ, ಬಿಜೆಪಿ ಯುವ ಮೋರ್ಚಾ ತಾಲೂಕು ಅಧ್ಯಕ್ಷ ಸುನಿಲ್ ಸಂಪೆಕೊಳಲು, ಸಚಿನ್, ರೈತ ಮೋರ್ಚಾ ಅಧ್ಯಕ್ಷ ರಾಜೇಶ್ ಮೇಗಳಬೈಲ್ ಹಾಗೂ ಇತರರು ಡಿ.ಹೆಚ್.ಓ ಗೆ ಮನವಿ ಸಲ್ಲಿಸಿದ್ದಾರೆ. ತಾಲೂಕಿಗೆ 100 ಬೆಡ್ ಆಸ್ಪತ್ರೆ ಮಂಜೂರಾಗಿ ವರ್ಷಗಳೇ ಕಳೆದರೂ ಆಸ್ಪತ್ರೆಯಂತೂ ಆಗಲಿಲ್ಲ ಸದ್ಯಕ್ಕೆ ಆಗತ್ಯವಿರುವ ವೈದ್ಯರನ್ನಾದರೂ ನೀಡಿ ಎಂದಿದ್ದಾರೆ. ಸದ್ಯ ಆಸ್ಪತ್ರೆಯಲ್ಲಿ ಮೂವರು ವೈದ್ಯರು ಕಾರ್ಯನಿರ್ವಹಿಸುತ್ತಿದ್ದು ಅಗತ್ಯ ವೈದ್ಯರಿಲ್ಲದೇ ಸಾರ್ವಜನಿಕರಿಗೂ ತೀವ್ರ ತೊಂದರೆಯಾಗಿದೆ. ಕೂಡಲೇ ಆಸ್ಪತ್ರೆಗೆ ಅಗತ್ಯವಿರುವ ಇಬ್ಬರು ವೈದ್ಯರನ್ನಾದರೂ ನೇಮಿಸಿ ಸಾರ್ವಜನಿಕರಿಗಾಗುತ್ತಿರುವ ತೊಂದರೆ ತಪ್ಪಿಸುವಂತೆ ಮನವಿ ಸಲ್ಲಿಸಿದರು. ಒಂದು ವೇಳೆ ತುರ್ತಾಗಿ ವೈದ್ಯರನ್ನು ನೇಮಿಸದೇ ಇದ್ದಲ್ಲಿ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನು ನೀಡಿದ್ದಾರೆ.

Categories
ತೀರ್ಥಹಳ್ಳಿ

ತೀರ್ಥಹಳ್ಳಿಯಲ್ಲಿ ಗ್ರಾಮ ಪರಿವಾರ ದೇವರುಗಳ ಜೀರ್ಣೋದ್ಧಾರ ಕಾರ್ಯ!

ತೀರ್ಥಹಳ್ಳಿಯಲ್ಲಿ ಗ್ರಾಮ ಪರಿವಾರ ದೇವರುಗಳ ಜೀರ್ಣೋದ್ಧಾರ ಕಾರ್ಯ!
– ದೇವಸ್ಥಾನದ ಅಭಿವೃದ್ಧಿ ಕಾರ್ಯಕ್ಕೆ ಗ್ರಾಮಸ್ಥರೆಲ್ಲರ ಒಟ್ಟುಗೂಡಿ ವಿಮರ್ಶೆ!
– ಮುಂದಿನ ದೇವಸ್ಥಾನದ ಕಾರ್ಯಕ್ಕೆ ಸಹಕಾರ ನೀಡಬೇಕಾಗಿ ಈ ಮೂಲಕ ವಿನಂತಿ

NAMMUR EXPRESS NEWS
ತೀರ್ಥಹಳ್ಳಿ: ಚೌಡೇಶ್ವರಿ, ಶ್ರೀ ನಾಗಬ್ರಹ್ಮ ದೇವಸ್ಥಾನ ಜೀರ್ಣೋದ್ದಾರ ಸಮಿತಿ, ಯಡೇಹಳ್ಳಿಕೆರೆ-ಇಂದಿರಾನಗರ-ಗಾಂಧಿನಗರ-ಸಿದ್ದೇಶ್ವರ ಬಡಾವಣೆ, ತೀರ್ಥಹಳ್ಳಿಯಲ್ಲಿ ಗ್ರಾಮ ದೇವರುಗಳಾದ ಶ್ರೀ ಚೌಡೇಶ್ವರಿ ಶ್ರೀ ನಾಗಬ್ರಹ್ಮ ಪರಿವಾರ ದೇವರುಗಳ ಅನುಗ್ರಹದಿಂದ ಜೀರ್ಣೋದ್ಧಾರ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ. ಜ. 29 ರಂದು ಬುಧವಾರ ಅಪಮೃತ್ಯು ಪರಿಹಾರ, ಆರೋಗ್ಯ ಪ್ರಾಪ್ತಿ, ದೀರ್ಘಾಯುಷ್ಯ ಪ್ರಾಪ್ತಿಯ ಸಂಕಲ್ಪದಿಂದ “ಸಪ್ತ ದ್ರವ್ಯ ಮೃತ್ಯುಂಜಯ ಹೋಮ ಹಾಗೂ ಸಾಮೂಹಿಕ ಕುಂಕುಮಾರ್ಚನೆ” ಲೋಕಕಲ್ಯಾಣಾರ್ಥವಾಗಿ ನೆರವೇರಿತು. ಪ್ರಭಾವಶಾಲಿಯಾಗಿರುವ ಈ ದೇವಸ್ಥಾನದ ಗುಡ್ಡದ ತಪ್ಪಲಿನಲ್ಲಿ 200, 300 ವರ್ಷಗಳಿಂದ ಗ್ರಾಮಸ್ಥರು ಪೂಜೆ ಸಲ್ಲಿಸುತ್ತಾ ಬಂದಿದ್ದು, ಇದೀಗ ತಪ್ಪಲ್ಲಿನಲ್ಲೇ ಗ್ರಾಮಸ್ಥರು ಮೂರು ನಾಲ್ಕು ವರ್ಷಗಳ ಕೆಳಗೆ ಅತಿದೃಷ್ಟಿಯಿಂದ ಮೇಲ್ಭಾಗದ ಗುಡ್ಡ ಜರಿದು ದೇವಸ್ಥಾನ ಸಂಪೂರ್ಣ ಹಾನಿಯಾಗಿತ್ತು. ಆದ್ದರಿಂದ ಗ್ರಾಮಸ್ಥರೆಲ್ಲರೂ ಒಗ್ಗಟ್ಟಾಗಿ ದೇವಸ್ಥಾನದ ವಿಮರ್ಶೆಯನ್ನು ದೇವಸ್ಥಾನದ ಕಾರ್ಯ ಮಾಡಲು ಸಂಕಲ್ಪ ಮಾಡಿದ್ದು, ಅದೇ ಪ್ರಕಾರವಾಗಿ ಮೃತ್ಯುಂಜಯ ಹೋಮ ನಡೆಯಿತು. ಆದ್ದರಿಂದ ಮುಂದಿನ ದಿನಗಳಲ್ಲಿ ದೇವಸ್ಥಾನದ ಕಾರ್ಯ ಉತ್ತಮ ರೀತಿಯಲ್ಲಿ ನಡೆಯಲು ಹಾಗೂ ದೇವಸ್ಥಾನದ ಅಭಿವೃದ್ಧಿ ಕಾರ್ಯಕ್ಕೆ ಸಹಕಾರ ನೀಡಬೇಕಾಗಿ ಈ ಮೂಲಕ ವಿನಂತಿಸಿಕೊಳ್ಳುವ ಅಧ್ಯಕ್ಷರು ಮತ್ತು ಸದಸ್ಯರು, ಶ್ರೀ ಚೌಡೇಶ್ವರಿ, ಶ್ರೀ ನಾಗಬ್ರಹ್ಮ ದೇವಸ್ಥಾನ ಜೀರ್ಣೋದ್ಧಾರ ಸಮಿತಿ, ಯಡೇಹಳ್ಳಿಕೆರೆ-ಇಂದಿರಾನಗರ-ಗಾಂಧಿನಗರ-ಸಿದ್ದೇಶ್ವರ ಬಡಾವಣೆ, ತೀರ್ಥಹಳ್ಳಿ.
ಹೆಚ್ಚಿನ ಮಾಹಿತಿಗಾಗಿ ರಾಮದಾಸ್ ಪ್ರಭು 9449825374, ವೈ.ಬಿ. ಮಂಜುನಾಥ್ 9900827262, ಉದಯ್ ಕುಮಾರ್ ಗಾಂಧಿನಗರ 9663538399 ಸಂಪರ್ಕಿಸಬಹುದು. ಧನಸಹಾಯ ಮಾಡಲು ಇಚ್ಚಿಸುವವರುಐ. ಎಫ್ಎಸ್. ಸಿ ಕೊಡ್ CNRB0000571, ಹಾಗೂ ಖಾತೆ ಸಂಖ್ಯೆ 0571101028108 ಈ ಖಾತೆಗೆ ಕೈಯಲ್ಲಾಗುವ ಸಹಕಾರ ನೀಡಿ ದೇವಾಲಯದ ಅಭಿವೃದ್ಧಿ ಕಾರ್ಯಕ್ಕೆ ಸಹಕರಿಸಿ ಎಂದು ಈ ಮೂಲಕ ವಿನಂತಿಸಿಕೊಳ್ಳಲಾಗಿದೆ.

 

Categories
ಚಿಕ್ಕಮಗಳೂರು

ಚಿಕ್ಕಮಗಳೂರು ಟಾಪ್ 4 ನ್ಯೂಸ್..!!

ಚಿಕ್ಕಮಗಳೂರು ಟಾಪ್ 4 ನ್ಯೂಸ್..!!
– ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರ ಆಯ್ಕೆ
– ಆರೋಗ್ಯ ಪೂರ್ಣ ಸಮಾಜದ ಗುರಿ ಹೊಂದಿದ್ದ ಬಿಜಿಎಸ್ – ಶ್ರೀ ಗುಣನಾಥ ಸ್ವಾಮೀಜಿ
– ರೈಲು ಹಳಿಗೆ ಸಿಲುಕಿ ಯುವಕ ಸಾವು
– ಚಿರತೆ ದಾಳಿಗೆ ದನದ ಕರು ಬಲಿ

NAMMUR EXPRESS NEWS
ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರ ಆಯ್ಕೆ..!

ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಿಕ್ಕಮಗಳೂರು ಜಿಲ್ಲಾ ಕನ್ನಡ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅಧ್ಯಕ್ಷರ ಆಯ್ಕೆ ಮತ್ತು ಜಿಲ್ಲಾ ಮಾಸಿಕ ಸಭೆ ನಡೆಯಿತು. ಈ ಬಾರಿಯ ಜಿಲ್ಲಾ ಸಾಹಿತ್ಯ ಸಮ್ಮೇಳನವು ಮಾರ್ಚ್ 07 ಮತ್ತು 8 ರಂದು ಚಿಕ್ಕಮಗಳೂರು ಜಿಲ್ಲೆ ತರೀಕೆರೆಯ ಬಯಲು ರಂಗಮಂದಿರದಲ್ಲಿ ನಡೆಯಲಿದೆ ಎಂದು ಜಿಲ್ಲಾಧ್ಯಕ್ಷರಾದ ಸೂರಿ ಶ್ರೀನಿವಾಸ್ ತಿಳಿಸಿದರು. ಜಿಲ್ಲಾ ಸಮ್ಮೆಳನಕ್ಕೆ ಆಗಮಿಸುವುದರೊಂದಿಗೆ ತನು-ಮನ-ಧನ ಸಹಾಯ ಮಾಡಬೇಕೆಂದು ವಿನಂತಿಸಿಕೊಂಡಿದ್ದಾರೆ. ಎಲ್ಲಾ ತಾಲೂಕುಗಳಿಂದ ಸಮ್ಮೇಳನದ ಅಧ್ಯಕ್ಷರ ಆಯ್ಕೆಗಾಗಿ ಹೆಸರುಗಳು ಬಂದಿದ್ದವು,
ಕೊನೆಯದಾಗಿ ತರೀಕೆರೆ ತಾಲೂಕಿನ ರಂಗೇನಹಳ್ಳಿಯ ಡಾ ಎಂ.ಹೆಚ್. ಮರುಳಸಿದ್ದಯ್ಯ ಪಟೇಲ್ ಅವರನ್ನು ಅಂತಿಮಗೊಳಿಸಲಾಗಿದೆ.

– ಆರೋಗ್ಯ ಪೂರ್ಣ ಸಮಾಜದ ಗುರಿ ಹೊಂದಿದ್ದ ಬಿಜಿಎಸ್- ಶ್ರೀಗುಣನಾಥ ಸ್ವಾಮೀಜಿ..

ಚಿಕ್ಕಮಗಳೂರು: ಆರೋಗ್ಯ ಪೂರ್ಣ ಸಮಾಜ ನಿರ್ಮಾಣ ಮಾಡಬೇಕೆಂಬ ಉದ್ದೇಶದಿಂದ ಪರಮಪೂಜ್ಯ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಗಳು ಎಲ್ಲಾ ವರ್ಗದ ಜನರ ತಲೆಗೊಂದು ಮರ ಇರಬೇಕೆಂಬ ಸಂಕಲ್ಪ ಮಾಡಿ ಪರಿಸರ ವನಕ್ರಾಂತಿಯನ್ನು ಮಾಡಿದ್ದರು ಎಂದು ಆದಿಚುಂಚನಗಿರಿ ಶೃಂಗೇರಿ ಶಾಖಾ ಮಠದ ಗುಣನಾಥ ಸ್ವಾಮೀಜಿ ಹೇಳಿದ್ದಾರೆ.
ಜಿಲ್ಲಾ ಒಕ್ಕಲಿಗರ ಸಮುದಾಯ ಭವನದಲ್ಲಿ ಜಿಲ್ಲಾ ಒಕ್ಕಲಿಗರ ಸಂಘ ಏರ್ಪಡಿಸಿದ್ದ ಆದಿಚುಂಚನಗಿರಿ ಮಹಾ ಸಂಸ್ಥಾನದ ಜಗದ್ಗುರು ಭೈರವೈಕ್ಯ ಡಾ .ಶ್ರೀಶ್ರೀಶ್ರೀ ಬಾಲಗಂಗಾಧರನಾಥ ಮಹಾಸ್ವಾಮಿಗಳ 80ನೇ ಜಯಂತ್ಯೋತ್ಸವ, ವಿದ್ಯಾರ್ಥಿ ವೇತನ ವಿತರಣೆ ಮತ್ತು ಸನ್ಮಾನ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಹಿರಿಯ ಪರಮ ಪೂಜ್ಯರ ಹೆಸರಿನಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರೋತ್ಸಾಹಿಸುತ್ತಿರುವ ಕಾರ್ಯ ನಿಜವಾದ ಪುಣ್ಯದ ಕಾರ್ಯ, ದೇವರು ದೇವಾಲಯಗಳಿಂದ ಮಾತ್ರ ಪುಣ್ಯದ ಕಾರ್ಯ ಅಲ್ಲ ಸಮಾಜಮುಖಿ ಕಾರ್ಯಗಳಿಂದ ಮಾತ್ರ ಸಾಧ್ಯ ಎಂದರು. ಬಾಲಗಂಗಾಧರನಾಥ ಮಹಾಸ್ವಾಮಿಗಳು ದೇವಸ್ಥಾನ, ದೇವರು ಎಂಬುದಕ್ಕಿಂತ ಹೆಚ್ಚಾಗಿ ಸಮಾಜದಲ್ಲಿನ ಬಡವರು, ದೀನದಲಿತರು, ಅನಾಥರ ಸೇವೆ ಮಾಡಬೇಕೆಂದು ಹೇಳುತ್ತಿದ್ದರು ಜೊತೆಗೆ ಅದನ್ನು ಸಾಧಿಸಿ ತೋರಿಸಿ ಸಮಾಜಕ್ಕೆ ಮಾದರಿಯಾಗಿದ್ದಾರೆಂದು ಹೇಳಿದರು.

– ರೈಲು ಹಳಿಗೆ ಸಿಲುಕಿ ಯುವಕ ಸಾವು,ಆತ್ಮಹತ್ಯೆಯ ಶಂಕೆ..!??

ಚಿಕ್ಕಮಗಳೂರು: ತಾಲೂಕಿನ ಅಂಬಳೆ ಸಮೀಪದ ಹರಿಹರದಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಓಂಕಾರೇಗೌಡ ಎಂಬುವರ ಪುತ್ರ ಯತೀಶ್ (21) ರೈಲ್ವೆ ಹಳಿಗೆ ಸಿಲುಕಿ ಸಾವನ್ನಪ್ಪಿದ್ದಾನೆ. ಸೋಮವಾರ ರಾತ್ರಿ ಈ ಘಟನೆ ನಡೆದಿದ್ದು ಸ್ಥಳಕ್ಕೆ ಅರಸೀಕೆರೆ ರೈಲ್ವೇ ಪೋಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ. ಪ್ರೇಮ ವೈಫಲ್ಯದಿಂದಾಗಿ ಯುವಕ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತಪಡಿಸಿದ್ದಾರೆ.

– ಚಿರತೆ ದಾಳಿಗೆ ದನದ ಕರು ಬಲಿ..!!

ಖಾಂಡ್ಯ: ಖಾಂಡ್ಯ ಹೋಬಳಿ ಹುಯಿಗೆರೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕರಗಣೆ ಎಂಬ ಗ್ರಾಮದಲ್ಲಿ ಚಿರತೆ ದಾಳಿಗೆ ದನದ ಕರುವೊಂದು ಬಲಿಯಾಗಿದೆ. ಕೊಟ್ಟಿಗೆಯಲ್ಲಿ ಕಟ್ಟಿದ್ದ ಕರುವಿನ ಮೇಲೆ ಚಿರತೆ ದಾಳಿ ಮಾಡಿದ್ದು ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಲೆನಾಡಿನಲ್ಲಿ ದಿನೇ ದಿನೇ ಮಾನವರು ಹಾಗು ಸಾಕು ಪ್ರಾಣಿಗಳ ಮೇಲೆ ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗುತ್ತಿದ್ದು ಇದರಿಂದ ಜನರು ಆತಂಕಕ್ಕೊಳಗಾಗಿದ್ದಾರೆ. ಅರಣ್ಯ ಇಲಾಖೆ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರ ವಹಿಸಬೇಕಿದೆ.

Categories
ರಾಜ್ಯ

ಟಾಪ್ 6 ನ್ಯೂಸ್ ಕರ್ನಾಟಕ

ಟಾಪ್ 6 ನ್ಯೂಸ್ ಕರ್ನಾಟಕ
– ಅಂಕೋಲಾ : ಬ್ಯಾಂಕ್ ನ ಹ್ಯಾಕ್ ಮಾಡಿ 33 ಲಕ್ಷ ದೋಚಿದ ಸೈಬರ್‌ ಕಳ್ಳರು !
– ರಾಯಚೂರು : ಕಾಲೇಜು ವಿದ್ಯಾರ್ಥಿನಿಯ ಕತ್ತು ಕೊಯ್ದು ಬರ್ಬರ ಹತ್ಯೆ..!
– ಹಾಸನ : ಎಟಿಎಂ ಅನ್ನೇ ಕಳ್ಳತನ ಮಾಡಿದ ದುಷ್ಕರ್ಮಿಗಳು..!
– ಮೈಸೂರು: ದೇವರಿಗೆ ಬಿಟ್ಟಿದ್ದ ಗೂಳಿ ಮೇಲೆ ಮಚ್ಚಿನಿಂದ ಹಲ್ಲೆ..!
– ವಿಜಯಪುರ : ಮದ್ಯಪಾನದಲ್ಲಿ ಆ್ಯಸಿಡ್ ಬೆರೆಸಿ ಕುಡಿದ ವ್ಯಕ್ತಿ ಸಾವು
– ಹಾಸನ : ಖಾಸಗಿ ಬಸ್ ಅಡ್ಡಗಟ್ಟಿ ಲಾಂಗ್ ಬೀಸಿದ ಹಾಸನದ ಪುಡಿ ರೌಡಿ

NAMMUR EXPRESS NEWS
ಅಂಕೋಲಾ : ಆರ್‌ಟಿಜಿಎಸ್ ಮೂಲಕ ಬೇರೆ ಖಾತೆದಾರರಿಗೆ ಹೋಗಬೇಕಿದ್ದ ಹಣವನ್ನು ಸೈಬರ್‌ ಕಳ್ಳರು ಹ್ಯಾಕ್ಸ್ ಮಾಡಿ 33,42,845 ಲಕ್ಷವನ್ನು ದೋಚಿರುವ ಘಟನೆ ಅಂಕೋಲಾ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್‌ನ ಕೇಂದ್ರ ಕಚೇರಿಯಲ್ಲಿ ನಡೆದಿದೆ. ಜ.24, 27ರಂದು ನಡೆದಿದೆ ಎಂದು ಅಂದಾಜಿಸಲಾಗಿದೆ. ಕಾರವಾರದಲ್ಲಿ ಸೈಬರ್‌ ಕ್ರೈಂ ವಿಭಾಗದ ಠಾಣೆಯಲ್ಲಿ ದೂರು ದಾಖಲಾಗಿದೆ. ಅಂಕೋಲಾ ಕೇಂದ್ರ ಕಚೇರಿಯಲ್ಲಿ ಖಾತೆದಾರರಾದ ಮೀನಾಕ್ಷಿ ಕೃಷ್ಣಗೌಡರಿಂದ ವ್ಯವಸಾಯ ಸೇವಾ ಸಹಕಾರಿ ಸಂಘಕ್ಕೆ ಆರ್‌ಟಿಜಿಎಸ್ ಮಾಡಿದ ₹5 ಲಕ್ಷ, ವೆಂಕಟೇಶ್ವರ ಗ್ಯಾಸ್ ಸೆಂಟರ್‌ನಿಂದ ವೆಂಕಟೇಶ್ವರ ಗ್ಯಾಸ್ ಸೆಂಟರ್‌ಗೆ ಆರ್‌ಟಿಜಿಎಸ್‌ ₹5,46,000 ಲಕ್ಷ, ಇವರದೇ ಮತ್ತೊಂದು ಖಾತೆಗೆ ₹6,60,000 ಲಕ್ಷ, ಸವಿತಾ ವೆಂಕಟರಮಣ ನಾಯ್ಕರಿಂದ ಟಾಫೆ ಅಕ್ಸೆಸ್ ಲಿ.ಗೆ ಆರ್‌ಟಿಜಿಎಸ್ ಮಾಡಿದ ₹16, 36,895 ಲಕ್ಷ ಸೇರಿ ಒಟ್ಟು 33,42,895 ಲಕ್ಷ ಹಣವು ಖಾತೆಗೆ ಜಮೆ ಆಗದೇ ಹ್ಯಾಕ್ ಆಗಿದೆ ಎಂದು ದೂರು ನೀಡಲಾಗಿದೆ.

– ರಾಯಚೂರು : ಕಾಲೇಜು ವಿದ್ಯಾರ್ಥಿನಿಯ ಕತ್ತು ಕೊಯ್ದು ಬರ್ಬರ ಹತ್ಯೆ..!

ರಾಯಚೂರು : ಕತ್ತು ಸೀಳಿ ಎಂಎಸ್​ಸಿ ವಿದ್ಯಾರ್ಥಿನಿಯ ಬರ್ಬರ ಹತ್ಯೆ ಮಾಡಿರುವಂತಹ ಘಟನೆ ಜಿಲ್ಲೆಯ ಸಿಂಧನೂರಿನ ಹೊರ ಭಾಗದಲ್ಲಿ ನಡೆದಿದೆ. ಸಿಂಧನೂರು ಸರ್ಕಾರಿ ಕಾಲೇಜಿನಲ್ಲಿ ಎಂಎಸ್​ಸಿ ಓದುತ್ತಿದ್ದ ಶಿಫಾ ಮೃತ ವಿದ್ಯಾರ್ಥಿನಿ. ಹಾಡಹಗಲೇ ನಡುರಸ್ತೆಯಲ್ಲಿ ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿ ಮುಬಿನ್​ ಅನ್ನು ಪೊಲೀಸರು ಬಂಧಿಸಿದ್ದಾರೆ. ಕೊಲೆಗೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ. ಸಿಂಧನೂರು ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಲಿಂಗಸುಗೂರಿನ ನಿವಾಸಿಯಾಗಿರುವ ಶಿಫಾಳನ್ನು ಪರಿಚಯಸ್ಥರೇ ಹತ್ಯೆಗೈದಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ಸ್ಥಳಕ್ಕೆ ಸಿಂಧನೂರು ಪಟ್ಟಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

– ಹಾಸನ : ಎಟಿಎಂ ಅನ್ನೇ ಕಳ್ಳತನ ಮಾಡಿದ ದುಷ್ಕರ್ಮಿಗಳು..!

ಹಾಸನ: ದುಷ್ಕರ್ಮಿಗಳು ಇಂಡಿಯಾ ಒನ್ ಎಟಿಎಂ ಯಂತ್ರವನ್ನೇ ಕಳವು ಮಾಡಿರುವ ಘಟನೆ ಹಾಸನದ ಪಂಚಮುಖಿ ಬೃಹತ್ ಆಂಜನೇಯ ವಿಗ್ರಹದ ಸಮೀಪದಲ್ಲೇ ಇರುವ ಇಂಡಿಯಾ ಒನ್ ಎಟಿಎಂ ಯಂತ್ರ ಕಳ್ಳರು ಕದ್ದೊಯ್ದಿದ್ದಾರೆ. ಮೊದಲೇ ಸಂಚು ಮಾಡಿ ಎಟಿಎಂ ಪಕ್ಕದಲ್ಲಿರುವ ಮನೆಗಳ ಚಿಲಕ ಹಾಕಿ ಎಟಿಎಂಗೆ ನುಗ್ಗಿದ್ದಾರೆ. ಸೈರನ್ ಬಾರದಂತೆ ನಿಗಾ ವಹಿಸಿದ್ದು, ನಂತರ ಹಣದ ಸಮೇತ ಎಟಿಎಂ ಬಾಕ್ಸನ್ನೆ ಕದ್ದೊಯ್ದಿದ್ದಾರೆ. ಬೆಳಗಿನ ವೇಳೆ ಜನರಿಗೆ ಎಟಿಎಂ ಕಳ್ಳತನ ಆಗಿರುವ ಬಗ್ಗೆ ತಿಳಿದು ಬಂದಿದೆ.

– ಮೈಸೂರು: ದೇವರಿಗೆ ಬಿಟ್ಟಿದ್ದ ಗೂಳಿ ಮೇಲೆ ಮಚ್ಚಿನಿಂದ ಹಲ್ಲೆ

ಮೈಸೂರು: ದೇವರಿಗೆ ಹರಕೆಗೆ ಬಿಟ್ಟಿದ್ದ ಗೂಳಿ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿರುವ ಅಮಾನವೀಯ ಘಟನೆ ಮೈಸೂರಿನಲ್ಲಿ ನಡೆದಿದೆ. ಮೈಸೂರು ಜಿಲ್ಲೆಯ ಜಯಪುರ ಹೋಬಳಿಯ ಹನಗಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ದುಷ್ಕರ್ಮಿಗಳು ಗೂಳಿಯ ಹಿಂಭಾಗಕ್ಕೆ ಮಚ್ಚಿನಿಂದ ಹಲ್ಲೆ ನಡೆಸಿ ಓಡಿ ಹೋಗಿದ್ದಾರೆ. ಗಾಯಗೊಂಡ ಗೂಳಿಗೆ ಸ್ಥಳೀಯರು ಅರಿಶಿಣ ಹಚ್ಚಿ ಚಿಕಿತ್ಸೆ ಕೊಡಿಸಿದ್ದಾರೆ. ರಾಜ್ಯದಲ್ಲಿ ಗೋವುಗಳ ಮೇಲೆ ಸಾಲು ಸಾಲು ಹಲ್ಲೆ ಪ್ರಕರಣಗಳು ನಡೆಯುತ್ತಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.

– ವಿಜಯಪುರ : ಮದ್ಯಪಾನದಲ್ಲಿ ಆ್ಯಸಿಡ್ ಬೆರೆಸಿ ಕುಡಿದ ವ್ಯಕ್ತಿ ಸಾವು

ವಿಜಯಪುರ: ಬಾರ್‌ನಲ್ಲಿ ಮದ್ಯ ಸೇವನೆಗೆ ಹೋಗಿದ್ದ ವ್ಯಕ್ತಿ ನೀರು ಎಂಬುದಾಗಿ ಭಾವಿಸಿ ಮದ್ಯಕ್ಕೆ ಆ್ಯಸಿಡ್​ ಬೆರೆಸಿಕೊಂಡು ಕುಡಿದು ಸಾವನ್ನಪ್ಪಿರುವ ಘಟನೆ ವಿಜಯಪುರದಲ್ಲಿ ನಡೆದಿದೆ. ಅವರ ಸಾವಿಗೆ ಸಂಬಂಧಿಸಿದಂತೆ ಬಾರ್ ಮಾಲೀಕ, ಬಿಜೆಪಿ ಮುಖಂಡನ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ವಿಜಯಪುರದ ನಿವಾಸಿ ಮಹಮ್ಮದ್ ಶಫೀಕ್ ಮೃತ ದುರ್ದೈವಿ. ಅವರು ನಗರದ ಸಿದ್ಧಾರ್ಥ್‌ ಬಾರ್‌ಗೆ ಮದ್ಯ ಸೇವನೆಗೆ ತೆರಳಿದ್ದರು. ಈ ವೇಳೆ, ಗ್ರಾಹಕರು ಕುಳಿತುಕೊಳ್ಳುವ ಟೇಬಲ್ ಮೇಲೆ ಇಟ್ಟಿದ್ದ ಆ್ಯಸಿಡ್ಅನ್ನು ನೀರೆಂದು ಭಾವಿಸಿ ಮದ್ಯಕ್ಕೆ ಬೆರೆಸಿಕೊಂಡು ಕುಡಿದಿದ್ದಾರೆ. ಕೂಡಲೇ ಅವರಿಗೆ ಹೊಟ್ಟೆ ಉರಿ ಕಾಣಿಸಿಕೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.  ಖಾಸಗಿ ಬಸ್ ಅಡ್ಡಗಟ್ಟಿ ಲಾಂಗ್ ಬೀಸಿದ ಹಾಸನದ ಪುಡಿ ರೌಡಿ ಹಾಸನದಲ್ಲಿ ಪುಡಿರೌಡಿಯೊಬ್ಬ ಅಟ್ಟಹಾಸ ಮೆರೆದಿದ್ದಾನೆ. ಖಾಸಗಿ ಬಸ್ ತಡೆದು ಲಾಂಗ್‌ನಿಂದ ಹಲ್ಲೆಗೆ ಯತ್ನಿಸಿದ್ದಾನೆ. ಹಾಸನ ಹೊರವಲಯದ ಬೈಪಾಸ್ ರಸ್ತೆಯಲ್ಲಿ ರಾತ್ರಿ 2 ಗಂಟೆಗೆ ಈ ಘಟನೆ ನಡೆದಿದೆ. ಬೆಂಗಳೂರಿನಿಂದ ಮಂಗಳೂರಿಗೆ ತೆರಳುತ್ತಿದ್ದ ಸುಗಮಾ ಬಸ್ ದೇವರಾಯಪಟ್ಟಣ ಬಳಿ ಬಂದಾಗ KA 51 MV 8912 ನಂಬರ್‌ನ ಸ್ವಿಫ್ಟ್ ಕಾರನ್ನು ಬಸ್ಸಿನ ಮುಂದೆ ಅಡ್ಡ ಹಾಕಿದ್ದಾನೆ. ಕಾರಿನಿಂದ ಇಳಿದು ಗಲಾಟೆ ಮಾಡಿ ಬಸ್ ಗಾಜನ್ನು ಒಡೆದಿದ್ದು, ಬಸ್‌ನಲ್ಲಿದ್ದ ಪ್ರಯಾಣಿಕರು ಭಯಭೀತರಾಗಿದ್ದಾರೆ. ಬಸ್ ದೇವರಾಯಪಟ್ಟಣ ಬಳಿ ಬಂದಾಗ KA 51 MV 8912 ನಂಬರ್‌ನ ಸ್ವಿಫ್ಟ್ ಕಾರನ್ನು ಬಸ್ಸಿನ ಮುಂದೆ ಅಡ್ಡ ಹಾಕಿದ್ದಾನೆ. ಕಾರಿನಿಂದ ಇಳಿದು ಗಲಾಟೆ ಮಾಡಿ ಬಸ್ ಗಾಜನ್ನು ಒಡೆದಿದ್ದು, ಬಸ್‌ನಲ್ಲಿದ್ದ ಪ್ರಯಾಣಿಕರು ಭಯಭೀತರಾಗಿದ್ದಾರೆ.

Categories
ಕೃಷಿ

ಅಡಿಕೆ ಬೆಲೆಯಲ್ಲಿ ಬಂಪರ್ ಏರಿಕೆ…!

ಅಡಿಕೆ ಬೆಲೆಯಲ್ಲಿ ಬಂಪರ್ ಏರಿಕೆ…!
– ಮುಂದಿನ ದಿನಗಳಲ್ಲಿ ಅಡಿಕೆ ಬೆಲೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ
– ಬೆಲೆ ಏರಿಕೆಯಾಗಿದೆ ಆದರೆ ಈ ಬಾರಿ ಫಸಲು ಕಡಿಮೆ.. ತೂಕನೂ ಕಡಿಮೆ…!

NAMMUR EXPRESS NEWS
ಅಡಿಕೆ ಬೆಳೆಯಲ್ಲಿ ಬಂಪರ್ ಏರಿಕೆಯಾಗಿರುವುದರಿಂದ ರೈತರಿಗೆ ಒಂದು ಸಂತಸದ ಸುದ್ದಿ ಎಂದೇ ಹೇಳಬಹದು. ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಬೆಲೆ ಭರ್ಜರಿ ಏರಿಕೆ ಕಂಡಿದೆ. ಬೇಡಿಕೆ ಹೆಚ್ಚಾದ ಕಾರಣ ಕೆಲವು ಮಾರುಕಟ್ಟೆಯಲ್ಲಿ ರಾಶಿ ಅಡಿಕೆ 50ರಿಂದ 55 ಸಾವಿರ ರೂ.ಗಡಿ ದಾಟುವ ಸಾಧ್ಯತೆ ಹೆಚ್ಚಾಗಿದೆ. ಆದರೆ ಮಲೆನಾಡಿನಲ್ಲಿ ಈ ಭಾರಿ ಫಸಲು ಕಡಿಮೆ ಆಗಿದೆ. ಆದ್ದರಿಂದ ಬೆಲೆ ಏರಿದರೂ ಅಡಿಕೆ ಇಲ್ಲವಾಗಿದೆ. ಬೆಲೆ ಏರಿಕೆ ಆಗಿದೆ ಎಂದು ರೈತರು ಸಂತಸ ಪಡಬೇಕು ಅಥವಾ ಪಸಲು ಕಡಿಮೆ ಎಂದು ಸಂಕಷ್ಟ ಪಡಬೇಕು ಎಂಬುದು ರೈತರಿಗೆ ಚಿಂತೆಯಾಗಿದೆ.
ಅಡಿಕೆ ಬೆಲೆ ಉತ್ತಮ ಸ್ಥಿತಿಯಲ್ಲಿರುವುದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಅಡಿಕೆ ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಬೆಲೆ ಮತ್ತಷ್ಟು ಏರಿಕೆ ಕಾಣುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಶಿವಮೊಗ್ಗದಲ್ಲಿ ರಾಶಿ ಅಡಿಕೆ 51,549 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಇತ್ತೀಚಿನ ಅಡಿಕೆ ಬೆಲೆ ಏರಿಳಿತ ಉಂಟಾಗಿದೆ.

ಅಡಿಕೆ ತೂಕ ಕಡಿಮೆ: ರೈತರಿಗೆ ಭಾರಿ ನಷ್ಟ!

ಒಂದು ಕಡೆ ಅಡಿಕೆ ದರ ಏರಿಕೆಯಾದರೆ ಇನ್ನೊಂದು ಕಡೆ ವಿವಿಧ ರೋಗಗಳ ಕಾರಣ ಅಡಿಕೆಯ ತೂಕ ತುಂಬಾ ಕಡಿಮೆಯಾಗಿದೆ. ಅಡಿಕೆಗೆ ಬಂದಿರುವ ರೋಗಗಳಿಂದಾಗಿ ಅಡಿಕೆ ತೂಕ ಕಡಿಮೆಯಾಗಿರುವುದು ರೈತರಲ್ಲಿ ಆತಂಕಕ್ಕೆ ಕಾರಣವಾಗಿದೆ. ಈ ಬಗ್ಗೆ ಅಡಿಕೆ ಸಂಶೋಧನ ಕೇಂದ್ರ ಮತ್ತು ಕೃಷಿ ಇಲಾಖೆ ಸಂಶೋಧನೆ ಮಾಡಬೇಕೆಂಬ ಒತ್ತಾಯ ಕೇಳಿಬಂದಿದೆ.

ಅಡಿಕೆ ಬೆಳೆಗಾರರ ಸಮಾವೇಶದಲ್ಲಿ ಅಡಿಕೆ ಕ್ಯಾನ್ಸರ್ ಕಾರಕ ಅಲ್ಲ ಎಂದು ಸಂಶೋಧನಾ ವರದಿಯನ್ನು ಶೀಘ್ರವೇ ಸುಪ್ರೀಂಕೋರ್ಟಿಗೆ ಸಲ್ಲಿಸಲಾಗುವುದು ಎಂದು ಕೇಂದ್ರ ಸಚಿವರು ಭರವಸೆಯನ್ನು ಕೂಡ ನೀಡಿದ್ದರು. ಅಡಿಕೆ ಪುರಾತನ ಕಾಲದಿಂದಲೂ ಬಳಕೆಯಲ್ಲಿದೆ ಆದರೆ ಅದು ಕ್ಯಾನ್ಸರ್ ಕಾರಕ ಎಂಬ ಮಾತುಗಳು ಇತ್ತೀಚಿಗೆ ಕೇಳಿ ಬರುತ್ತಾ ಇದೆ. ಅಡಿಕೆ ಕ್ಯಾನ್ಸರ್ ಕಾರಕ ಅಲ್ಲ ಎಂದು ಹೇಳಿಕೆ ನೀಡಿರುವುದರಿಂದ ಇದು ಮತ್ತಷ್ಟು ರೈತರಿಗೆ ಸಂತಸ ಎಂದೇ ಹೇಳಬಹುದು.

ಇಂದಿನ ಅಡಿಕೆ ದರ ಹೀಗಿದೆ….

ಬೆಟ್ಟೆ: 40366 – 56919

ಸರಕು: 55119 – 82600

ಗೊರಬಲು: 18000 – 33089

ರಾಶಿ: 36366 – 51549

Categories
ಕರಾವಳಿ

ಕರಾವಳಿ ಟಾಪ್ ನ್ಯೂಸ್

ಕರಾವಳಿ ಟಾಪ್ ನ್ಯೂಸ್
– ಸುಳ್ಯ: ಕಾಡಲ್ಲಿ ಸಿಕ್ಕ ಹಣ್ಣು ತಿಂದು ವ್ಯಕ್ತಿ ಸಾವು!!
– ಕೋಟ: ಹೆಜ್ಜೇನು ದಾಳಿ: ಎಂಟು ಮಂದಿ ಗಂಭೀರ!
– ಬ್ರಹ್ಮಾವರ : ಕೋಳಿ ಅಂಕ ಅಡ್ಡಕ್ಕೆ ಖಾಕಿ ರೈಡ್: 12 ಮಂದಿ ಅರೆಸ್ಟ್!

NAMMUR EXPRESS NEWS
ಸುಳ್ಯ: ಕಾಡಿನಲ್ಲಿ ಸಿಗುವ ತಿನ್ನಬಹುದಾದ ಐರೋಳ್‌ ಎನ್ನುವ ಹಣ್ಣನ್ನು ತಿಂದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಸುಳ್ಯದಲ್ಲಿ ನಡೆದಿದೆ. ಅಮರಪಟ್ನೂರು ಗ್ರಾಮದ ಕುಳ್ಳಾಜೆಯಲ್ಲಿ 2023ರ ಅಕ್ಟೋಬರ್‌ನಲ್ಲಿ ಲೋಕಯ್ಯ ಹಾಗೂ ಅವರ ಮಗಳು ಲೀಲಾವತಿ ಅವರು ಐರೋಳ್‌ ಹಣ್ಣನ್ನು ತಿಂದಿದ್ದು, ಪರಿಣಾಮ ಇಬ್ಬರೂ ಅಸ್ವಸ್ಥಗೊಂಡಿದ್ದರು. ಬಳಿಕ ಔಷಧ ಪಡೆದುಕೊಂಡಿದ್ದ ಲೋಕಯ್ಯ ಅವರು ಗುಣಮುಖರಾಗಿದ್ದರು. ಲೀಲಾವತಿ ಕೆಲವು ದಿನಗಳ ಬಳಿಕ ಮೃತರಾಗಿದ್ದರು. ಆದರೀಗ ಲೋಕಯ್ಯ ಗುಣಮುಖರಾಗಿದ್ದರೂ, ಕೆಲವು ದಿನಗಳಿಂದ ಅಸೌಖ್ಯಗೊಂಡಿದ್ದು, ಮೃತರಾಗಿದ್ದಾರೆ.

– ಕೋಟ: ಹೆಜ್ಜೇನು ದಾಳಿ: ಎಂಟು ಮಂದಿ ಗಂಭೀರ!

ಕೋಟ: ಕುಂದಾಪುರ ಸಮೀಪ ಕೋಟ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಣೂರಿನಲ್ಲಿ ಏಕಏಕಿ ಹೆಜ್ಜೇನು ದಾಳಿಯಿಂದ ಇಬ್ಬರು ಮಹಿಳೆಯರೂ ಸೇರಿ ಎಂಟು ಮಂದಿ ಗಂಭೀರ ಗಾಯಗೊಂಡ ಘಟನೆ ಜ. 29 ರಂದು ನಡೆದಿದೆ. ನಾಗಬನದಲ್ಲಿ ಸರ್ಪಸಂಸ್ಕಾರ ಕಾರ್ಯಕ್ರಮ ನಡೆಯುತ್ತಿದ್ದು ಹೋಮಕುಂಡಕ್ಕೆ ಹೊಗೆ ಹಾಕಿದ ಸಂದರ್ಭ ಹೆಜ್ಜೇನುಗಳ ಹಿಂಡೊಂದು ಏಕಾಏಕಿ ದಾಳಿ ನಡೆಸಿದ್ದು, ಈ ದಾಳಿಯಿಂದ ಇಬ್ಬರು ಮಹಿಳೆಯರು ಹಾಗೂ ಐವರು ಪುರುಷರು ಗಾಯಗೊಂಡಿರುದ್ದಾರೆ ಎಂದು ತಿಳಿದು ಬಂದಿದೆ.

– ಬ್ರಹ್ಮಾವರ : ಕೋಳಿ ಅಂಕ ಅಡ್ಡಕ್ಕೆ ಖಾಕಿ ರೈಡ್ : 12 ಮಂದಿ ಅರೆಸ್ಟ್!

ಬ್ರಹ್ಮಾವರ: ಉಡುಪಿ ಜಿಲ್ಲೆಯ ಬ್ರಹ್ಮಾವರ ಕೆಂಜೂರು ಗ್ರಾಮದ ಬಲ್ಲೆಬೈಲು ಕೊಳಂಬೆ ಎಂಬಲ್ಲಿ ಕೋಳಿ ಅಂಕಕ್ಕೆ ದಾಳಿ ನಡೆಸಿದ ಪೊಲೀಸರು 12ಮಂದಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬಂಧಿತ ಆರೋಪಿಗಳನ್ನು ಪ್ರವೀಣ್ ಕುಮಾರ್ ನಾಲ್ಕೂರು (49), ಸುರೇಶ ನಡೂರು(32), ಉಮೇಶ್ ಕೆಂಜೂರು (53), ಹರೀಶ್ ಕುಮಾರ್ ಚೇರ್ಕಾಡಿ(38), ಗಣೇಶ್ ಬೊಮ್ಮರಬೆಟ್ಟು(30), ಅಜಯ್ ಹೆಬ್ರಿ(23), ಮಂಜುನಾಥ ಹೊಸೂರು(32), ದಿನೇಶ್ ಬ್ರಹ್ಮಾವರ (49), ಸದಾಶಿವ ಸಂತೆಕಟ್ಟಿ(49), ಹರೀಶ ಬ್ರಹ್ಮಾವರ (39), ರಾಘವೇಂದ್ರ ಬ್ರಹ್ಮಾವರ(34) ಎಂದು ಗುರುತಿಸಲಾಗಿದೆ. ಬ್ರಹ್ಮಾವರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.