ಚಿಕ್ಕಮಗಳೂರು: ನಾಡಹಬ್ಬ ದಸರಾ ಸೇರಿದಂತೆ ರಾಜ್ಯ ಸರ್ಕಾರಕ್ಕೆ ಸಂಬಂಧಿಸಿದಂತಹ ಕಾರ್ಯಕ್ರಮಗಳನ್ನು ಆಯೋಜಿಸುವವರು ಕನಿಷ್ಠ ಒಂದು ತಿಂಗಳು ಮುಂಚಿತವಾಗಿ ಅನುಮತಿಯನ್ನು ಪಡೆಯಬೇಕು. ಅಲ್ಲದೆ ಕಾರ್ಯಕ್ರಮಕ್ಕೆ ಕನಿಷ್ಠ 20 ದಿನಗಳು ಇರುವಾಗ ಅದಕ್ಕೆ ಪೂರಕವಾದಂತಹ ತಾಲೀಮನ್ನು ನಡೆಸಬೇಕು ಎಂದು ರಾಜ್ಯದ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವರಾದ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.
ಚಿಕ್ಕಮಗಳೂರು ನಗರದಲ್ಲಿ 10ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಅರಣ್ಯ ಇಲಾಖೆಯ ನೂತನ ಕಟ್ಟಡ ಸಂಕೀರ್ಣವನ್ನು ಉದ್ಘಾಟನೆ ಮಾಡಿ ಮಾತನಾಡಿದರು.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಾನವ- ವನ್ಯಜೀವಿ ಸಂಘರ್ಷವನ್ನು ತಡೆಗಟ್ಟಲು ಈ ವರ್ಷದಿಂದ ಸುಮಾರು 20 ಕಿಲೋಮೀಟರ್ ಉದ್ದದ ಬ್ಯಾರಿಕೇಡಿಂಗ್ ನಿರ್ಮಾಣದ ಕುರಿತು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿದ್ದು, ಈಗಾಗಲೇ ಇದಕ್ಕೆ ಸಂಬಂಧಿಸಿದ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಅಗತ್ಯವಾಗಿರುವಂತಹ ಇತರ ಪ್ರದೇಶಗಳಲ್ಲಿಯೂ ಹಂತಹಂತವಾಗಿ ಕಾಮಗಾರಿಗಳನ್ನು ಆರಂಭಿಸುವ ಮೂಲಕ ಬ್ಯಾರಿಕೇಡಿಂಗ್ ಅನ್ನು ನಿರ್ಮಿಸಲಾಗುವುದು. ಅಲ್ಲದೆ ಆನೆಗಳ ಸಾಂಪ್ರದಾಯಿಕ ಸಂಚಾರ ಮಾರ್ಗಗಳಲ್ಲಿ ಸಾರ್ವಜನಿಕರ ಜಮೀನುಗಳು ಇರುವುದರಿಂದ ಕೆಲವು ಪ್ರದೇಶಗಳಲ್ಲಿ ಕಾರಿಡಾರ್ ಗಳ ನಿರ್ಮಾಣಕ್ಕೆ ಅಡೆಚಣೆಯುಂಟಾಗಿದ್ದು, ಈ ಸಮಸ್ಯೆಯನ್ನು ಪರಿಹರಿಸಲು ಜಮೀನುಗಳನ್ನು ಸರ್ಕಾರವೇ ಸ್ವಾಧೀನ ಪಡಿಸಿಕೊಳ್ಳುವುದು ಅಥವಾ ಭೂಮಾಲೀಕರಿಗೆ ಪರ್ಯಾಯ ಜಮೀನುಗಳನ್ನು ಒದಗಿಸುವಂತಹ ಪ್ರಸ್ತಾವನೆಯನ್ನು ಕೂಡ ಸಿದ್ಧಪಡಿಸಲಾಗಿದೆ.
ಆನೆಗಳ ಸಂಚಾರಕ್ಕೆ ಸೂಕ್ತ ಕಾರಿಡಾರ್ ಗಳನ್ನು ನಿರ್ಮಿಸಿದ್ದೇ ಆದಲ್ಲಿ ಜನವಸತಿ ಪ್ರದೇಶಗಳಿಗೆ ಅವು ಪ್ರವೇಶಿಸುವುದು ಮತ್ತು ಗದ್ದೆ ತೋಟಗಳಿಗೆ ನುಗ್ಗಿ ಬೆಳೆಗಳನ್ನು ನಾಶ ಮಾಡುವುದನ್ನು ನಿಯಂತ್ರಿಸಬಹುದು” ಎಂದು ತಿಳಿಸಿದರು.
ಚಿಕ್ಕಮಗಳೂರು ಶಾಸಕ ಎಚ್.ಡಿ.ತಮ್ಮಯ್ಯ, ಶೃಂಗೇರಿ ಕ್ಷೇತ್ರದ ಶಾಸಕರಾದ ಟಿ.ಡಿ.ರಾಜೇಗೌಡ, ಮೂಡಿಗೆರೆ ಶಾಸಕಿ ನಯನಾ ಮೊಟ್ಟಮ್ಮ, ವಿಧಾನಪರಿಷತ್ತಿನ ಸದಸ್ಯರಾದ ಗಾಯಿತ್ರಿ ಶಾಂತೇಗೌಡ ಮತ್ತು ಆರತಿ ಕೃಷ್ಣ, ಕೆಫೆಕ್ಟ್ ಬಿ.ಎಚ್.ಹರೀಶ್, ಜಿಲ್ಲಾ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಎನ್.ಸಿ.ಶಿವಾನಂದ ಸ್ವಾಮಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಎಚ್.ಪಿ.ಮಂಜೇಗೌಡ, ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷರಾದ ಎ.ಎನ್.ಮಹೇಶ್, ರಾಜ್ಯ ಅರಣ್ಯ ಇಲಾಖೆಯ ಮುಖ್ಯಸ್ಥೆ ಮೀನಾಕ್ಷಿ, ಸಿಸಿಎಫ್ ಯಶ್ ಪಾಲ್ ಹಾಗೂ ಜಿಲ್ಲಾ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.