Categories
ತೀರ್ಥಹಳ್ಳಿ ಶಿಕ್ಷಣ

ಸಾರ್ಥಕ ಸೇವೆ ಸಲ್ಲಿಸಿದ ಶಿಕ್ಷಕ ರಾಮಪ್ಪ ಚಲುವಾದಿ

ಸಾರ್ಥಕ ಸೇವೆ ಸಲ್ಲಿಸಿದ ಶಿಕ್ಷಕ ರಾಮಪ್ಪ ಚಲುವಾದಿ
– ನಿವೃತ್ತ ಶಿಕ್ಷಕ ರಾಮಪ್ಪ ಅವರನ್ನು ಸನ್ಮಾನಿಸಿ ಬೀಳ್ಕೊಡುಗೆ
– ಭಾರತೀಪುರ ಸರ್ಕಾರಿ ಶಾಲೆ ಮುಖ್ಯ ಶಿಕ್ಷಕರಾಗಿ ಸೇವೆ

NAMMUR EXPRESS NEWS
ತೀರ್ಥಹಳ್ಳಿ: ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಭಾರತೀಪುರದಲ್ಲಿ ಮುಖ್ಯ ಶಿಕ್ಷಕರಾಗಿ ಕಾರ್ಯ ನಿರ್ವಹಿಸಿದ ರಾಮಪ್ಪ ಚಲುವಾದಿಯವರು ಡಿ.31ರಂದು ವೃತ್ತಿಯಿಂದ ನಿವೃತ್ತರಾಗುತ್ತಿದ್ದಾರೆ. ಹೊಸನಗರದ ಕವರಿ ಕಿರಿಯ ಪ್ರಾಥಮಿಕ ಪಾಠಶಾಲೆಯಿಂದ ವೃತ್ತಿ ಜೀವನ ಆರಂಭಿಸಿದ ಶ್ರೀಯುತ ರಾಮಪ್ಪ ಚಲುವಾದಿಯವರು ಇಪ್ಪತ್ತೈದು ವರ್ಷಗಳ ಹಿಂದೆ ಪ್ರಾಥಮಿಕ ಶಾಲಾ ಸಹ ಶಿಕ್ಷರಾಗಿ ವೃತ್ತಿಗೆ ಪಾದಾರ್ಪಣೆ ಮಾಡಿರುತ್ತಾರೆ. ಹೊಸನಗರ, ಮೇಗರವಳ್ಳಿ ಹಾಗೂ ಭಾರತೀಪುರದ ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಕರಾಗಿ ಸುದೀರ್ಘ ಸೇವೆ ಸಲ್ಲಿಸಿದ್ದಾರೆ.

ತೀರ್ಥಹಳ್ಳಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಗಣೇಶ್ವೈ ರವರು ಮತ್ತು ಈಸಿಓ ಜ್ಯೋತಿ ರರಿಂದ ಗೌರವ ಸಮರ್ಪಣೆ

‘ಈ ಅವಧಿಯಲ್ಲಿ ಅನೇಕ ವಿದ್ಯಾರ್ಥಿಗಳ ಭವಿಷ್ಯ ನಿರ್ಮಾಣಕ್ಕೆ ಶ್ರಮವಹಿಸಿದ್ದು ಎಷ್ಟೋ ಮಕ್ಕಳು ಡಾಕ್ಟರ್, ಇಂಜಿನಿಯರ್ ಆಗಿದ್ದಾರೆ. ಆ ಬಗ್ಗೆ ನನಗೆ ಹೆಮ್ಮೆ‌ಇದೆ’ ಎಂದು ಅವರ ಸೇವೆಯನ್ನು ಸ್ಮರಿಸಿಕೊಳ್ಳುತ್ತಾ ರಾಮಪ್ಪ ಚಲವಾದಿ ಮಾತನಾಡಿದರು.

ನಿವೃತ್ತಿ ಹೊಂದುತ್ತಿರುವ ಹಿನ್ನಲೆಯಲ್ಲಿ ಡಿ.30 ರಂದು ಭಾರತೀಪುರದ ಪ್ರಾಥಮಿಕ ಶಾಲೆಯಲ್ಲಿ ಬೀಳ್ಕೊಡುಗೆ ಸಮಾರಂಭವನ್ನು ಹಮ್ಮಿಕೊಂಡಿದ್ದು, ಶಾಲೆಯ ಎಸ್ ಡಿ ಎಮ್ ಸಿ ಸದಸ್ಯರು, ಗ್ರಾಮ ಪಂಚಾಯತಿ ಅಧ್ಯಕ್ಷರು ಮತ್ತು ಸದಸ್ಯರು, ಗ್ರಾಮಸ್ಥರು, ರಾಮಪ್ಪ ಚಲುವಾದಿಯವರನ್ನು ಸನ್ಮಾನಿಸಿ ಗೌರವಿಸಿದ್ದಾರೆ.

ಶಿಕ್ಷಕರ ಸಂಘದ ಮಹಾಬಲೇಶ್ವರ ಹೆಗಡೆಯವರು ಮಾತನಾಡಿ, ಇಪ್ಪತ್ತೈದು ವರ್ಷಗಳ ಸುದೀರ್ಘ ಸೇವೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕಾರ್ಯಕ್ರಮದಲ್ಲಿ ಪೋಷಕರು ಮತ್ತು ಮಕ್ಕಳು ಉಪಸ್ಥಿತರಿದ್ದು ಸೇವೆಗೆ ಕೃತಜ್ಞತೆ ಸಲ್ಲಿಸಿ, ನೆನಪಿನ ಕಾಣಿಕೆಯೊಂದಿಗೆ ಬೀಳ್ಕೊಟ್ಟಿದ್ದಾರೆ. ಅವರ ನಿವೃತ್ತ ಜೀವನ ಶುಭಕರವಾಗಿರಲೆಂದು ನಮ್ಮೂರ್ ಎಕ್ಸ್‌ಪ್ರೆಸ್‌ ಹಾರೈಸುತ್ತದೆ.

Categories
ಶಿವಮೊಗ್ಗ ಹೊಸನಗರ

ಯಡೂರು ಸೊಸೈಟಿಗೆ ದಾಖಲೆಯ ಸಾಧನೆ ಹೆಜ್ಜೆ!

ಯಡೂರು ಸೊಸೈಟಿಗೆ ದಾಖಲೆಯ ಸಾಧನೆ ಹೆಜ್ಜೆ!
– ಯಡೂರು ಸೊಸೈಟಿ ನೂತನ ಕಟ್ಟಡ ಉದ್ಘಾಟನೆ
– ಸಚಿವ ಮಧು ಬಂಗಾರಪ್ಪ, ಆರಗ, ಕಿಮ್ಮನೆ, ಆರ್.ಎಂ ಸಾಥ್
– ಸೊಸೈಟಿ ಸಾಧನೆಗೆ ಗಣ್ಯರ ಮೆಚ್ಚುಗೆ: ಅರ್ಥಪೂರ್ಣ ಕಾರ್ಯಕ್ರಮ

NAMMUR EXPRESS NEWS
ಯಡೂರು /ಹೊಸನಗರ: ಯಡೂರಿನ ಕೃಷಿ ಪ್ರಾಥಮಿಕ ಸಹಕಾರ ಸಂಘದ ನೂತನ ಕಟ್ಟಡ ಶನಿವಾರ ಉದ್ಘಾಟನೆಗೊಂಡಿದೆ. ಶಿಕ್ಷಣ ಸಚಿವ, ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಉದ್ಘಾಟನೆ ಮಾಡಿದ್ದು ಈ ಸಂದರ್ಭದಲ್ಲಿ ಪ್ರಮುಖ ನಾಯಕರಾದ ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ , ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಸಹಕಾರಿ ನಾಯಕ ಮಂಜುನಾಥ್ ಗೌಡ ಸೇರಿದಂತೆ ಬಹುತೇಕ ನಾಯಕರು, ಸೊಸೈಟಿ ಅಧ್ಯಕ್ಷರು, ಸ್ಥಳೀಯರು ಹಾಜರಿದ್ದರು. ಇದು ಯಡೂರು ಸೊಸೈಟಿಯ ಸಾಧನೆಗೆ ಮೈಲಿಗಲ್ಲಾಗಿದೆ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಕಟ್ಟಡದ ಉದ್ಘಾಟನಾ ಸಮಾರಂಭದ ಬಳಿಕ ಶ್ರೀ ಗುತ್ತಿರೇಣುಕಾಂಬ ಸಭಾ ಭವನದಲ್ಲಿ ಸಭಾ ಕಾರ್ಯಕ್ರಮ ನಡೆಯಿತು.

ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಮಾತನಾಡಿ, ಸೊಸೈಟಿ ಕಟ್ಟಡಕ್ಕೆ ಅಂದಿನ ಸಹಕಾರ ಸಚಿವರು ನನ್ನ ಮಾತನ್ನು ಸ್ವೀಕರಿಸಿ ತಕ್ಷಣ ಹಣ ಮಂಜೂರು ಆದೇಶ ನೀಡಿದ್ದರು. ಅದರಿಂದ ಅನುಕೂಲವಾಗಿದೆ ಎಂದರು. ಆರಗ ಜ್ಞಾನೇಂದ್ರ ಮಾತನಾಡುತ್ತಾ, ವ್ಯವಹಾರವನ್ನು ಸರಿಯಾಗಿ ನೋಡಿಕೊಂಡರೆ ಅದರಿಂದ ಆಗುವ ಅನುಕೂಲಗಳನ್ನು ನಾವೇ ಪಡೆಯಬಹುದು. ಸಾಲ ತೆಗೆದುಕೊಳ್ಳುವ ಮತ್ತು ಕಟ್ಟುವ ಕ್ರಮ ಸರಿಯಾಗಿದ್ದಷ್ಟೂ ಒಳ್ಳೆಯದು ಎಂದಿದ್ದಾರೆ.

ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಡಾ.ಆರ್ ಎಂ ಮಂಜುನಾಥ ಗೌಡರು, ಮೂರು ಲಕ್ಷಗಳವರೆಗೆ ಇದ್ದಂತಹ ಬಡ್ಡಿರಹಿತ ಸಾಲವನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಐದು ಲಕ್ಷಕ್ಕೆ ಏರಿಸುವ ಜೊತೆಗೆ ವಿವಿಧ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ರೈತ ಸಹಕಾರಿ ಯೋಜನೆಗಳನ್ನು ಕಲ್ಪಿಸುವ ಮೂಲಕ ಚುನಾವಣೆಯ ಭರವಸೆಗಳನ್ನು ಈಡೇರಿಸಿದ್ದಾರೆ. ಇವುಗಳ ಪ್ರಯೋಜನವನ್ನು ರೈತರು ಪಡೆದುಕೊಳ್ಳಬೇಕು ಎಂದರು.

ಜಿಪಂ ಸಿಇಒ ಲೋಖಂಡೆ, ಸೊಸೈಟಿ ಅಧ್ಯಕ್ಷರಾದ ಶಶಾಂಕ್ ಕೊಳವಾಡಿ, ಪ್ರಮುಖರಾದ ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ. ಎಂ. ಪರಮೇಶ್ವರ್, ಜೆ. ಎನ್ ಸುಧೀರ್, ಡಿಸಿಸಿ ಬ್ಯಾಂಕ್ ಪ್ರಭಾರ ಸಿಇಒ ವಾಸುದೇವ್, ಸುಳುಗೋಡು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರುತಿ ಶೇಷಾದ್ರಿ, ಯಡೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಯಪ್ರಕಾಶ್, ಮಾಸ್ತಿಕಟ್ಟೆ ಖೈರಗುಂದ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕೆ. ಬಿ. ಕೃಷ್ಣಮೂರ್ತಿ, ನಿರ್ದೇಶಕರಾದ ನಾಗೇಶ್ ಗೌಡ, ಮಂಜುನಾಥ ಹೊಸಗದ್ದೆ, ಟೀಕಪ್ಪ ಗೌಡ ಹುಮ್ಮಡಗಲ್ಲು , ಪುರುಷೋತ್ತಮ ಜಗನಕೊಪ್ಪ, ರಮೇಶ್ ಅಚ್ಚುಮನೆ, ಪ್ರಶಾಂತ ಹಂದಿಗೆಮನೆ, ವಿನೋದ ರಾಜಶೇಖರ ಗಿಣಿಕಲ್ಲು, ಸತ್ಯ ಪ್ರೇಮ ಯೋಗೇಂದ್ರ ಮೇಲಿನಬೈಸೆ, ಸರಸ್ವತಿ ರತ್ನಾಕರ್ ಕೊಳವಾಡಿ, ಯಶೋದ ಚಂದ್ರಶೇಖರ್ ಸುಳಗೋಡು, ಶಿವಕುಮಾರ್ ಎಸ್ ಕ್ಷೇತ್ರ ಅಧಿಕಾರಿಗಳು, ವೃತ್ತಿಪರ ನಿರ್ದೇಶಕರು, ಸೊಸೈಟಿ ಮಾಜಿ ಅಧ್ಯಕ್ಷರಾದ ಮಹೇಶ್ ಮಾಗಲು, ನಿರ್ದೇಶಕರಾದ ಮಹಮ್ಮದ್ ಶರೀಫ್, ಸೊಸೈಟಿ ಸಿಇಒ ಸಂತೋಷ್ ಹೊಸಗದ್ದೆ, ಕೆ ಆರ್ ಚೇತನ,, ವಿಜೇತ್ ಗೌಡ ಕೊಳೂರು ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.

ಸಹಕಾರ ರಂಗದಲ್ಲಿ ರಾಜಕೀಯ ಮಾಡಬಾರದು

ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ನೂತನ ಕಟ್ಟಡ ಉದ್ಘಾಟನೆ ಮಾಡಿ ಬಳಿಕ ಸಭಾ ಕಾರ್ಯಕ್ರಮದಲ್ಲಿ ಗೌರವ ಸ್ವೀಕರಿಸಿ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಇನ್ನೂ ರೈತರು ಉಳಿದಿರುವುದಕ್ಕೆ ಕಾರಣವೇ ಈ ಸಹಕಾರಿ ಸಂಘಗಳು. ಜಾಗ ಮಂಜೂರಾತಿಗೆ ಕಾರಣರಾದ ಮಾಜಿ ಸಚಿವ ಮಹದೇವಪ್ರಸಾದ್ ಅವರ ಸಹಕಾರವನ್ನು ಸ್ಮರಿಸುತ್ತಾ, ರಾಜಕಾರಣ ಮಾಡದೇ ಸಂಘಗಳನ್ನು ಉಳಿಸಿಕೊಂಡ ಬಂದಿರುವ ಬಗ್ಗೆ, ಈ ಸಂಘಗಳು ಒದಗಿಸುವ ಸಹಕಾರಗಳ ಬಗ್ಗೆ ಸಂತೋಷ ವ್ಯಕ್ತಪಡಿಸಿದರು.
ಮುಂದಿನ ದಿನಗಳಲ್ಲಿ ಶಾಲಾ ಸೌಲಭ್ಯ ಮತ್ತು ನಿರ್ವಹಣೆಯ ಬಗ್ಗೆಯೂ ಹೆಚ್ಚಿನ ಒತ್ತು ಕೊಡುವುದಾಗಿ ಹೇಳುತ್ತಾ ಶುಭ ಕೋರಿದರು.

Categories
ತೀರ್ಥಹಳ್ಳಿ

ಕಡ್ತೂರು ಶಾಲೆಯಲ್ಲಿ ವಿಶ್ವಮಾನವ ದಿನಾಚರಣೆ ರಂಗು!

ಕಡ್ತೂರು ಶಾಲೆಯಲ್ಲಿ ವಿಶ್ವಮಾನವ ದಿನಾಚರಣೆ ರಂಗು!
– ಕುವೆಂಪು ಸಾಹಿತ್ಯ ಸೇವೆ ಬಣ್ಣಿಸಿದ ಗಣ್ಯರು
– ಸಾಧಕ ಗಣ್ಯರು, ಸಂಘ ಸಂಸ್ಥೆಗಳು, ಗಣ್ಯರಿಗೆ ಸನ್ಮಾನ
– ಕ್ರಿಯೇಟಿವ್ ಶಿಕ್ಷಣ ಸಂಸ್ಥೆ ಸಂಸ್ಥಾಪಕ ಅಶ್ವಥ್ ಅವರಿಂದ ಉದ್ಘಾಟನೆ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕಿನ ಕಡ್ತೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಯಶಸ್ವಿಯಾಗಿ ವಿಶ್ವಮಾನವ ದಿನಾಚರಣೆಯನ್ನು ಆಚರಿಸಲಾಗಿದ್ದು ತಾಲೂಕಿನಲ್ಲೇ ಮಾದರಿ ಕಾರ್ಯಕ್ರಮವೊಂದಕ್ಕೆ ನಾಂದಿ ಹಾಡಿತು. ಮಲೆನಾಡಿನ ಅನೇಕ ಸಾಧಕರಿಗೆ ವಿಶ್ವ ಮಾನವ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಇಡೀ ಕಾರ್ಯಕ್ರಮ ಹಲವು ಹೊಸತುಗಳಿಗೆ ಸಾಕ್ಷಿಯಾಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಕ್ರಿಯೇಟಿವ್ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರಾದ ಅಶ್ವಥ್ ಎಸ್ ಎಲ್ ನಡೆಸಿಕೊಟ್ಟರು. ಬಳಿಕ ಮಾತನಾಡಿದ ಅವರು ವಿಶ್ವಮಾನವ ದಿನಾಚರಣೆ ಎಂದರೆ ವಿಶೇಷವಾಗಿ ಮಲೆನಾಡಿನಲ್ಲಿ ಬಹಳ ಹೆಮ್ಮೆಯನ್ನು ನೀಡುವಂತಹ ಕಾರ್ಯಕ್ರಮ. ಯಾಕೆಂದರೆ ಇದೇ ಮಲೆನಾಡಿನ ಮಣ್ಣಲ್ಲಿ ಜನಿಸಿದ ಕವಿ, ಜಗದ ಕವಿಯಾಗಿ,ಯುಗದ ಕವಿಯಾಗಿ ಇಡೀ ಜಗತ್ತಿಗೆ ವಿಶ್ವಮಾನವ ಸಂದೇಶವನ್ನು ನೀಡಿದಂತಹ ಕುವೆಂಪುರವರ ಜನ್ಮದಿನ. ಶ್ರೇಷ್ಠ ವ್ಯಕ್ತಿಯ ಜನ್ಮ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಲಾಗಿದೆ ಎಂದರು.

ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಎನ್ ಜಿ ವೆಂಕಟೇಶ್ ನಡಬೂರು ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಪ್ರಿನ್ಸಿಪಾಲರಾದ ಎಲ್ ಪದ್ಮನಾಬ್ ಅವರು ಕುವೆಂಪುರವರ ಸಾಹಿತ್ಯ ಮತ್ತು ಬರಹಗಳು, ಕನ್ನಡ ಸಾಹಿತ್ಯ ಪರಿಷತ್ ಸದಸ್ಯರಾದ ಕೀಗಡಿ ಪುಟ್ಟಸ್ವಾಮಿ ಅವರು ಕುವೆಂಪುರವರ ಬದುಕು, ಉಪನ್ಯಾಸಕರಾದ ಪ್ರಕಾಶ್ ಹೆಚ್ ಎ ವಿಶ್ವಮಾನವ ಸಂದೇಶದ ಬಗ್ಗೆ ಮಾತನಾಡಿದರು.

ಕಾರ್ಯಕ್ರಮದಲ್ಲಿ ಸಾಧಕರಾದ ಲಯನ್ಸ್ ಇಂಟರ್ನ್ಯಾಷನಲ್ ಜಿಲ್ಲಾ ಸಂಪುಟ ಕಾರ್ಯದರ್ಶಿ ರವಿರಾಜ್ ನಾಯಕ್, ದಾನಿ ಪುಷ್ಪನಂದ್, ಅರುಣ್ ಗುಡ್ಡೆಕೇರಿ, ಆಗುಂಬೆ ಎಜು ಕಾರ್ಯದರ್ಶಿ ರವಿಕುಮಾರ್, ಲಯನ್ಸ್ ಕ್ಲಬ್ ಅಧ್ಯಕ್ಷರಾದ ವೀಣಾ ಗಿರೀಶ್, ಆಗು ಎಜುಸ್ಕೊ ಕಾರ್ಯಾಧ್ಯಕ್ಷರಾದ ಸುಧೀಂದ್ರ ಮಲ್ಯ, ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಅಧ್ಯಕ್ಷರಾದ ರೇಣುಕಾ ಹೆಗ್ಡೆ, ಕಡ್ತೂರು ಸರ್ಕಾರಿ ಪ್ರೌಢಶಾಲೆ ಎಸ್‌ಡಿಎಂಸಿ ಗೌರವಾಧ್ಯಕ್ಷರಾದ ಶ್ರೀನಿವಾಸ್ ಗೌಡ್ರು ಹಾಗೂ ಎಸ್ ಡಿ ಎಂ ಸಿ ಅಧ್ಯಕ್ಷರಾದ ಕೃಷ್ಣಮೂರ್ತಿ ಸಂಪಗೋಡು, ಹಳೇಕೆಸಲೂರು ಎಸ್ ಡಿ ಎಂ ಸಿ ಅಧ್ಯಕ್ಷರಾದ ಮಹೇಶ್ ಕೆ ಎಸ್, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಗಣೇಶ್ ವೈ, ಅರೆಹಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸವಿತಾ ಸುರೇಂದ್ರ ಹಾಗೂ ಸದಸ್ಯರಾದ ಯಶಸ್ವಿ, ಗಣೇಶ್ ಕೆ ಸಿ ಹಾಜರಿದ್ದರು.

ಹಲವು ಸಂಘ ಸಂಸ್ಥೆಗಳ ಸಹಯೋಗ

ಕನ್ನಡ ಸಾಹಿತ್ಯ ಪರಿಷತ್ತು, ಆಗುಂಬೆ ಹೋಬಳಿ ಘಟಕ ಕಮ್ಮರಡಿ, ಲಯನ್ಸ್ ಕ್ಲಬ್ ಆಗುಂಬೆ, ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ತೀರ್ಥಹಳ್ಳಿ, ಹಾಗು ಆಗುಎಜುಸ್ಕೋ ಆಗುಂಬೆ ವತಿಯಿಂದ ಕಡ್ತೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಈ ಕಾರ್ಯಕ್ರಮ ನಡೆಯಿತು. ಸ್ಪರ್ಧೆಯಲ್ಲಿ ಗೆಲುವು ಸಾಧಿಸಿದ ಮಕ್ಕಳಿಗೆ ಸನ್ಮಾನ ಮಾಡಲಾಯಿತು. ಗಣ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು. ಶಿಕ್ಷಕ ಜಯಪ್ರಕಾಶ್ ಶೆಟ್ಟಿ ಅವರನ್ನು ಇದೇ ವೇದಿಕೆಯಲ್ಲಿ ಸನ್ಮಾನಿಸಲಾಯಿತು.

ತೀರ್ಥಹಳ್ಳಿ ತಾಲೂಕಿನ ಸಾಧಕರಿಗೆ ಸನ್ಮಾನ

ವಿ ಟೆಕ್ ಇಂಜಿನಿಯರ್ಸ್ ಸಂಸ್ಥಾಪಕರಾದ ವಿಶ್ವನಾಥ್ ಕುಂಟುವಳ್ಳಿ, ಹೊಸೂರು ಗುಡ್ಡೆಕೇರಿ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕರಾದ ವೀರೇಶ್ ಟಿ, ಬೇಕಪ್ಪ ಗೌಡ್ರು ಮುನ್ನಗಾರ್, ಆಗಸರಕೋಣೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರಾದ ಜ್ಯೋತಿ, ಚಲನಚಿತ್ರ ನಿರ್ದೇಶಕರಾದ ನವನ್ ಶ್ರೀನಿವಾಸ್, ಆಗುಂಬೆ ಆರಕ್ಷಕರಾದ ಸುನಿಲ್ ಕುಮಾರ್ ಎಸ್ ವಿ, ವಾಗ್ದೇವಿ ಚಾರಿಟೇಬಲ್ ಟ್ರಸ್ಟ್ (ರಿ ) ತೀರ್ಥಹಳ್ಳಿ, ದೇಶಕ್ಕಾಗಿ ನಾವು ತೀರ್ಥಹಳ್ಳಿ, ಘಟಕ ಕೆ ಲಲಿತಮ್ಮ ಚಾರಿಟೇಬಲ್ ಟ್ರಸ್ಟ್ (ರಿ) ಮೇಗರವಳ್ಳಿ, ಎಸ್ ಎಸ್ ಎಫ್ ಆಂಬುಲೆನ್ಸ್ ತಂಡ ಕಮ್ಮರಡಿ, ಸಮರ್ಪಣ ತಂಡ ರಾಮಕೃಷ್ಣಪುರ, ವಿನೋದ್ ಡಿಸೈನ್ ಮೇಕರ್ಸ್ ಆರ್ಕಿಟೆಕ್ಸ್ ಇಂಟೀರಿಯರ್ಸ್ ಬೆಂಗಳೂರು ಇವರಿಗೆ ವಿಶ್ವಮಾನವ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಪ್ರಶಸ್ತಿ ಸ್ವೀಕರಿಸಿದ ಸರ್ವರಿಗೂ ನಮ್ಮೂರ್ ಎಕ್ಸ್‌ಪ್ರೆಸ್‌ ವತಿಯಿಂದ ಹಾರ್ದಿಕ ಶುಭಾಶಯಗಳು.

 

Categories
ತೀರ್ಥಹಳ್ಳಿ

ತೀರ್ಥಹಳ್ಳಿಗೆ ಆಗಮಿಸಿದ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಶ್ರೀಪಾದರು

ತೀರ್ಥಹಳ್ಳಿಗೆ ಆಗಮಿಸಿದ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಶ್ರೀಪಾದರು
– ಸ್ವಾಮೀಜಿಗಳಿಗೆ ತೀರ್ಥಹಳ್ಳಿ ಜನರ ಅದ್ಧೂರಿ ಸ್ವಾಗತ!
– ಮೆರವಣಿಗೆಯಲ್ಲಿ ಪುತ್ತಿಗೆ ಮಠಕ್ಕೆ ಆಗಮನ

NAMMUR EXPRESS NEWS:
ತೀರ್ಥಹಳ್ಳಿ: ನಾಲ್ಕನೇ ಬಾರಿಗೆ ಉಡುಪಿ ಪರ್ಯಾಯದಲ್ಲಿ ಪೀಠಾರೋಹಣಗೊಳ್ಳುತ್ತಿರುವ ಪುತ್ತಿಗೆ ಮಠಾಧೀಶರಾದ ಸುಗುಣೇಂದ್ರತೀರ್ಥ ಶ್ರೀಪಾದರು, ತಮ್ಮ ಶಿಷ್ಯರಾದ ಕಿರಿಯ ಪಟ್ಟದ ಪರಮ ಪೂಜ್ಯ ಶ್ರೀ ಶ್ರೀ ಸುಶೀಂದ್ರ ತೀರ್ಥ ಶ್ರೀಪಾದಂಗಳರೊಡನೆ ತೀರ್ಥಹಳ್ಳಿಗೆ ಡಿ.31ರಂದು ಆಗಮಿಸಿದ್ದು ಪೂರ್ಣಕುಂಭ ಸ್ವಾಗತ ಮಾಡಲಾಯಿತು.

ಶ್ರೀಪಾದಂಗಳವರನ್ನು ಶಾಸಕರಾದ ಆರಗ ಜ್ಞಾನೇಂದ್ರ, ಕಾರ್ಯಕ್ರಮದ ಸಂಚಾಲಕರಾದ ಸೊಪ್ಪುಗುಡ್ಡೆ ರಾಘವೇಂದ್ರ, ತಹಶಿಲ್ದಾರ್ ಜಕ್ಕಣ್ಣ ಗೌಡರ್, ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ಗೀತಾ ರಮೇಶ್, ಪಟ್ಟಣ ಪಂಚಾಯಿತಿ ಸದಸ್ಯರಾದ ಮಂಜುಳಾ ನಾಗೇಂದ್ರ, ಮೇಲಿನ ಕುರವಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಯು ಡಿ ವೆಂಕಟೇಶ್, ಆರ್‌ಎಸ್‌ ಬಿ ಸಮಾಜದ ಅಧ್ಯಕ್ಷರಾದ ಸುಮಾ ರಾಮಚಂದ್ರ, ಅಶೋಕ್ ನಾಯಕ್, ಸೇರಿದಂತೆ ಅನೇಕ ಗಣ್ಯರು ಹಾಗೂ ಭಕ್ತಾದಿಗಳು ಬರಮಾಡಿಕೊಂಡರು. ಧರ್ಮಸ್ಥಳ ಸ್ವಸಹಾಯ ಸಂಘದ ಭಜನಾ ಮಂಡಳಿ ಮತ್ತು ಆರ್ ಎಸ್ ಬಿ ಸಮಾಜದ ಮಹಿಳಾ ಕಾರ್ಯ ಕರ್ತರು ಕೊಪ್ಪ ಸರ್ಕಲ್ ನಿಂದ ಕುರುವಳ್ಳಿಯ ಪುತ್ತಿಗೆ ಮಠದವರೆಗೆ ಪೂರ್ಣ ಕುಂಭ ಮೆರವಣಿಗೆಯೊಂದಿಗೆ ಗುರುಗಳನ್ನು ಭವ್ಯವಾಗಿ ಸ್ವಾಗತಿಸಿದರು.
ಶಾಸಕರಾದ ಆರಗ ಜ್ಞಾನೇಂದ್ರ ಮಾತನಾಡಿ, ಶ್ರೀಗಳು ನಮ್ಮವರು. ತೀರ್ಥಹಳ್ಳಿಯ ಅರ್ಧ ಆಸ್ತಿ ಪುತ್ತಿಗೆ ಮಠದ್ದು. ಹೊಸ ಸೇತುವೆಗೂ ಜಾಗವನ್ನು ಬಿಟ್ಟು ಕೊಟ್ಟಿದ್ದಾರೆ. ತೀರ್ಥಹಳ್ಳಿಗೂ ಪುತ್ತಿಗೆ ಮಠಕ್ಕೂ ಅವಿನಾಭಾವ ಸಂಬಂಧವಿದೆ ಎಂದರು.

ಮಾಜಿ ಸಚಿವರಾದ ಕಿಮ್ಮನೆ ರತ್ನಾಕರ್ ಮಾತನಾಡುತ್ತಾ ಅಯೋಧ್ಯೆಯಲ್ಲಿ ರಾಮನ ಪ್ರತಿಷ್ಠಾಪನೆ ಮಾಡುತ್ತಿದ್ದೇವೆ. ನಾನು ಹಿಂದೂ ಧರ್ಮದಲ್ಲೇ ಹುಟ್ಟಿದ್ದೇನೆ. ಮನುಷ್ಯರನ್ನು ಬೇರೆ ಮಾಡುವ ಧರ್ಮವನ್ನು ಧರ್ಮ ಎನ್ನಲು ಸಾಧ್ಯವಿಲ್ಲ. ಮನುಷ್ಯ ಮನುಷ್ಯರ ನಡುವಿನ ಬೇದ ಮರೆತು ಧರ್ಮವನ್ನು ರಾಜಕೀಯದಿಂದ ದೂರ ಇಟ್ಟರೆ ಖಂಡಿತ ಧರ್ಮ ಉಳಿಯುತ್ತದೆ ಎಂದರು. ಕಾರ್ಯಕ್ರಮದಲ್ಲಿ
ಭಕ್ತರಿಗೆ ತೀರ್ಥ ಪ್ರಸಾದ ಮತ್ತು ಭೋಜನದ ವ್ಯವಸ್ಥೆ ಮಾಡಲಾಗಿತ್ತು.

ಪ್ರತಿ ಮನೆಯಲ್ಲಿ ಭಗವದ್ಗೀತೆ ಇರಬೇಕು

ತೀರ್ಥಹಳ್ಳಿ ಪಟ್ಟಣದ ಕುರುವಳ್ಳಿಯ ರಾಜಾಪುರ ಸಾರಸ್ವತ ಬ್ರಾಹ್ಮಣ ಸಮುದಾಯ ಭವನದಲ್ಲಿ ನಡೆದ ಸಾಮೂಹಿಕ ಪಾದ ಪೂಜೆ ಹಾಗೂ ಅನುಗ್ರಹ ಸಂದೇಶ ಕಾರ್ಯಕ್ರಮದಲ್ಲಿ ಮಾತನಾಡಿ ತೀರ್ಥಹಳ್ಳಿ ನಮ್ಮ ಮೂಲಸ್ಥಾನ, ವಿಶ್ವದಾದ್ಯಂತ ತಿರುಗಾಟ ನಡೆಸಿ ಮೂಲಸ್ಥಾನಕ್ಕೆ ಬಂದಿರುವುದು ಸಂತಸದ ವಿಷಯ.ಲೋಕ ಕಲ್ಯಾಣಕ್ಕಾಗಿ ಕೋಟಿಗೀತ ಲೇಖನ ಯಜ್ಞವನ್ನು ಮಾಡುತ್ತಿದ್ದೇವೆ. ಇದರಿಂದ ಭಗವದ್ಗೀತೆ ಬರೆದು ಉಡುಪಿ ಕೃಷ್ಣನಿಗೆ ತಲುಪಿಸುವ ಕೆಲಸ ನಡೆಯುತ್ತಿದೆ. ಪ್ರತಿಯೊಂದು ಮನೆಯಲ್ಲೂ ಭಗವದ್ಗೀತೆ ಇರಬೇಕು ಎಂದು ಪುತ್ತಿಗೆ ಮಠದ ಪೂಜ್ಯರಾದ ಶ್ರೀ ಶ್ರೀ ಸುಗುಣೆಂದ್ರ ತೀರ್ಥ ಸ್ವಾಮಿಗಳು ಹೇಳಿದರು.

Categories
ರಾಜ್ಯ

ಮದ್ಯಪ್ರಿಯರಿಗೆ ಶಾಕ್: ಓಟಿ-ಬಿಪಿಯ ರೇಟು ಹೆಚ್ಚಳ

ಮದ್ಯಪ್ರಿಯರಿಗೆ ಶಾಕ್: ಓಟಿ-ಬಿಪಿಯ ರೇಟು ಹೆಚ್ಚಳ
– 72 ಸಾವಿರಕ್ಕೆ ಏರಲಿದೆ ಚಿನ್ನದ ಬೆಲೆ
– ಡಿ.31ಕ್ಕೆ ಹೋಟೆಲ್ ರೂಮ್ ಬೆಲೆ ₹7 ಲಕ್ಷ!

NAMMUR EXPRESS NEWS
ಮದ್ಯಪ್ರಿಯರ ಫೇವರೇಟ್ ಬ್ರಾಂಡ್ ಆಗಿರುವ ಓಲ್ಡ್ ಟ್ಯಾವರ್ನ್ ಹಾಗೂ ಬ್ಯಾಗ್ ಪೈಪರ್‌ನ 180 ಎಂ.ಎಲ್ ಪೌಚ್‌ನ ಬೆಲೆಯಲ್ಲಿ ಏರಿಕೆಯಾಗಿದೆ. ಓಲ್ಡ್ ಟ್ಯಾವರ್ನ್ ಗೆ 100 ರೂಪಾಯಿ ಇದ್ದುದನ್ನು 125ಕ್ಕೆ ಹಾಗೂ ಬಿಪಿ 125ರೂ ಇದ್ದದ್ದು 160ಕ್ಕೆ ಏರಿಕೆಯಾಗಿದೆ. ಮೊದಲೇ ಬೆಲೆ ಏರಿಕೆಯಿಂದ ಕಂಗಾಲಾಗಿರುವ ಮದ್ಯಪ್ರಿಯರಿಗೆ ಹೊಸ ವರ್ಷದ ಆರಂಭದಲ್ಲೇ ದರ ಏರಿಕೆ ಬಿಸಿ ಬಾಧಿಸಿದೆ.

72 ಸಾವಿರಕ್ಕೆ ಏರಲಿದೆ ಚಿನ್ನದ ಬೆಲೆ!

ನವದೆಹಲಿ: ಹೊಸ ವರ್ಷದಲ್ಲಿ ಬಂಗಾರದ ಬೆಲೆ 10 ರಿಂದ 72 ಸಾವಿರ ರೂ.ವರೆಗೆ ತಲುಪಬಹುದು ಎಂದು ಅಂದಾಜಿಸಲಾಗಿದೆ. ಹಲವು ದೇಶಗಳ ಕೇಂದ್ರೀಯ ಬ್ಯಾಂಕ್‌ಗಳು, ಅದರಲ್ಲೂ ಪ್ರಮುಖವಾಗಿ ಅಮೆರಿಕದ ಫೆಡರಲ್ ರಿಸರ್ವ್ ರೂಪಿಸುವ ಹಣಕಾಸು ನೀತಿಗಳು ಬೆಲೆ ಏರಿಕೆಗೆ ಮುಖ್ಯ ಅಂಶವಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. 2023ರಲ್ಲಿ ಸದೃಢವಾದ ಶೇ.15ರಷ್ಟು ಗಳಿಕೆಯ ಕಾರ್ಯಕ್ರಮತೆಯನ್ನು ಆಧರಿಸಿ ಸಂಕೀರ್ಣವಾದ ಬೃಹತ್ ಆರ್ಥಿಕ ಪರಿಸರದೊಳಗೆ ಚಿನ್ನ 2024ರಲ್ಲಿಯೂ ತನ್ನ ಸ್ಥಾನ ಇನ್ನಷ್ಟು ಭದ್ರಪಡಿಸಿಕೊಳ್ಳಲಿದೆ. ಬಡ್ಡಿ ದರವನ್ನು ಏರಿಸುವ ನೀತಿಯ ಸುಳಿವು ಕೊಟ್ಟಿರುವ ಅಮೆರಿಕ ಫೆಡರಲ್ ರಿಸರ್ವ್, ತನ್ನ ನೀತಿಯ ನಿಲುವನ್ನು ಸ್ಪಷ್ಟಪಡಿಸಿದೆ.

31ಕ್ಕೆ ಹೋಟೆಲ್ ರೂಮ್ ಬೆಲೆ ₹7 ಲಕ್ಷ!

ರಾಜಸ್ಥಾನದ ಸವಾಯಿ ಮಾಧೋಪುರದಲ್ಲಿರುವ ಸಿಕ್ಸ್ ಸೆನ್ಸ್ ಫೋರ್ಟ್ ಬರ್ವಾಡಾದಲ್ಲಿ ಡಿ.31ರಂದು ಕೊಠಡಿಗಳ ಸಾಮಾನ್ಯ ಶುಲ್ಕ 1,20,000 ರೂ.ವಿಧಿಸಿದ್ದು, ಈ ಹೋಟೆಲ್‌ನಲ್ಲಿ ಮಹಾರಾಜ ಸೂಟ್‌ ಗಾಗಿ 7 ಲಕ್ಷ ರೂಪಾಯಿ ನೀಡಿ ಬುಕ್ಕಿಂಗ್ ಮಾಡಿದ್ದಾರೆ. ದೆಹಲಿ, ಜೈಪುರ ಮತ್ತು ಉದಯಪುರದಲ್ಲಿರುವ ಲೀಲಾ ಪ್ಯಾಲೇಸ್ ಹೋಟೆಲ್‌ಗಳು ಮತ್ತು ರೆಸಾರ್ಟ್‌ಗಳ ಬಾಡಿಗೆಗಳು ದಾಖಲೆಯ ಗರಿಷ್ಠ ಮಟ್ಟದಲ್ಲಿವೆ. ಲೀಲಾ ಪ್ಯಾಲೇಸ್ ಉದಯಪುರದಲ್ಲಿ ಡಿ.31ಕ್ಕೆ ಯಾವುದೇ ಕೊಠಡಿಗಳು ಲಭ್ಯವಿಲ್ಲ. ಈ ಹೋಟೆಲ್‌ನಲ್ಲಿ ಕ್ರಿಸ್‌ಮಸ್‌ ದಿನದಂದು ಒಂದು ರಾತ್ರಿ ತಂಗಲು 1,06,200 ರೂ. ಶುಲ್ಕ ವಿಧಿಸಿತ್ತು. ಈಗ ಹೊಸ ವರ್ಷದಂದು ಅದರ ದರ ಮತ್ತಷ್ಟು ಹೆಚ್ಚಾಗಿದೆ. ಡಬಲ್ ಟ್ರೇಯ ಹಿಲ್ಟನ್ ಗೋವಾ ರೆಸಾರ್ಟ್ ಕ್ಯಾಂಡೋಲಿಮ್ ಮತ್ತು ಹಿಲ್ಟನ್ ಗೋವಾ ಅರ್ಪೋರಾ ಬಾಗಾದ ಪ್ರಾಪರ್ಟಿಗಳಲ್ಲಿ ಡಿ.31ಕ್ಕೆ ಯಾವುದೇ ಕೊಠಡಿಗಳು ಲಭ್ಯವಿಲ್ಲ. ಸರಾಸರಿ ಹೋಟೆಲ್ ಬಾಡಿಗೆ ದರಗಳು ಹಿಂದಿನ ವರ್ಷಗಳಿಗಿಂತ ಶೇ.40ರಷ್ಟು ಹೆಚ್ಚಾಗಿದೆ. ಫೇರ್ ಮಾಂಟ್ ಜೈಪುರದಲ್ಲಿ ಹೋಟೆಲ್ ಬುಕಿಂಗ್ ಪ್ಯಾಕೇಜ್‌ಗಳು ಕನಿಷ್ಠ 65,000 ರೂ. ಮತ್ತು ತೆರಿಗೆಗಳಿಂದ ಪ್ರಾರಂಭವಾಗಿವೆ. ಉದಯಪುರದ ಅವರ ಝಾನಾ ಲೇಕ್ ರೆಸಾರ್ಟ್‌ ನಲ್ಲಿ ಎರಡು ರಾತ್ರಿ ತಂಗುವ ದರ 55 ಸಾವಿರ ದಾಟಿದ್ದು, ಮ್ಯಾರಿಯೊಟ್ ಮನ್ಸೂರಿ ವಾಲ್‌ನಟ್ ಗ್ಲೋವ್ ರೆಸಾರ್ಟ್‌ ನಲ್ಲಿ 32 ಸಾವಿರ ರೂ.ಗೆ ರೂಮ್ ಬುಕ್ ಮಾಡಲಿಗಿದ್ದು ಯಾವುದೇ ಕೊಠಡಿ ಲಭ್ಯವಿಲ್ಲ ಎಂದು ಮೂಲಗಳಿಂದ ತಿಳಿದು ಬಂದಿದೆ.

Categories
ಹೊಸನಗರ

ಹೊಸನಗರ ಮಾರಿಕಾಂಬಾ ದೇವಿಅದ್ಧೂರಿ ಜಾತ್ರೆ

ಹೊಸನಗರ ಮಾರಿಕಾಂಬಾ ದೇವಿಅದ್ಧೂರಿ ಜಾತ್ರೆ
– ಫೆಬ್ರವರಿ 6ರಿಂದ ಫೆಬ್ರವರಿ 14ರವರೆಗೆ ಜಾತ್ರೆ
– ವಿಶೇಷ ಪೂಜೆ…ಮನರಂಜನೆಗಳ ಹಬ್ಬ

NAMMUR EXPRESS NEWS
ಹೊಸನಗರ: ಹೊಸನಗರ ಪಟ್ಟಣದ ಗ್ರಾಮ ದೇವತೆ ಶ್ರೀ ಮಾರಿಕಾಂಬದೇವಿ ಅಮ್ಮನವರ ವರ್ಷಾವಧಿ ಜಾತ್ರಾ ಮಹೋತ್ಸವವನ್ನು 2024ರ ಫೆಬ್ರವರಿ 6ರಿಂದ ಫೆಬ್ರವರಿ 14ರವರೆಗೆ ಅದ್ಧೂರಿಯಾಗಿ ನಡೆಸಲು ಜಾತ್ರಾಸಮತಿ ನಿರ್ಧರಿಸಿದೆ. ಗ್ರಾಮ ದೇವತೆಯಾದ ಶ್ರೀದೇವಿ ಮಾರಿಕಾಂಬ ಅಮ್ಮನವರಿಗೆ ಫೆಬ್ರವರಿ 6ರಂದು ತವರುಮನೆ ಹಳೆಯ ಸಾಗರ ರಸ್ತೆಯ ಶ್ರೀ ದುರ್ಗಾಂಬ ದೇವಸ್ಥಾನದಲ್ಲಿ ವಿಶೇಷ ಪ್ರತಿಷ್ಠಾಪನಾ ಪೂಜೆ ಹಾಗೂ ಫೆಬ್ರವರಿ 14ರಂದು ರಾತ್ರಿ ಗಂಡನ ಮನೆಯಾದ ಮಾರಿಗುಡ್ಡದ ಈ ಮಾರಿಕಾಂಬ ದೇವಸ್ಥಾನದಲ್ಲಿ ರಾತ್ರಿ 12:00 ಗಂಟೆಗೆ ವಿಶೇಷ ವಿಸರ್ಜನಾ ಪೂಜೆಯ ನಂತರ ಜಾತ್ರೆಯು ಸಂಪನ್ನಗೊಳ್ಳಲಿದೆ. ಈ ಅದ್ಧೂರಿ ಜಾತ್ರೆ ಪ್ರಯುಕ್ತ ಮನರಂಜನೆಗಾಗಿ, ಅಮ್ಯೂಸ್ಮೆಂಟ್ ಅವರಿಂದ ಜಾಯಿಂಟ್ ವೀಲ್ ಕೊಲಂಬಸ್ ಬ್ರೇಕ್ ಡ್ಯಾನ್ಸ್, ಡ್ಯೂಮ್ ಡ್ರ್ಯಾಗನ್ ಟ್ರೈನ್ ಮಕ್ಕಳ ರೈಲು ನೃತ್ಯ ಸಂಗೀತ, ನಾಟಕ, ಆರ್ಕೆಸ್ಟ್ರಾ ಮೊದಲಾದ ವಿಶೇಷ ಮನೋರಂಜನಾ ಕಾರ್ಯಕ್ರಮಗಳನ್ನು ಹಮ್ಮಿ ಕೊಂಡಿರುವುದಾಗಿ ಜಾತ್ರಾ ಸಮಿತಿಯವರು ತಿಳಿಸಿದ್ದಾರೆ.

ಹೊಸನಗರದಲ್ಲಿ ಹೊಸ ವರ್ಷದ ಫೆಬ್ರುವರಿ 6ರ ಮಂಗಳವಾರದಿಂದ ಆರಂಭವಾಗುವ ಪೂಜೆ ಮತ್ತು ಜಾತ್ರೆ, ಫೆಬ್ರವರಿ 14ರ ಬುಧವಾರದವರೆಗೆ ಅದ್ಧೂರಿಯಾಗಿ ನಡೆಯಲಿದ್ದು, ಶ್ರೀದೇವಿಗೆ ವಿಶೇಷ ಪೂಜೆ ಪುರಸ್ಕಾರ ಸೇವೆಗಳು ನಡೆಯಲಿವೆ.‌ ಜಾತ್ರೆ ಪೂರ್ವಭಾವಿ ಸಮಿತಿಯ ಸಭೆಯು ಡಿ.27ರಂದು ನಡೆದಿದ್ದು ಈ ಮೇಲಿನ ತೀರ್ಮಾನ ಕೈಗೊಂಡಿರುತ್ತಾರೆ. ಈ ಸಭೆಯಲ್ಲಿ ಜಾತ್ರಾ ಸಮಿತಿಯ ಹೆಚ್ ಜಿ ಲಕ್ಷ್ಮಿ, ನಾರಾಯಣ ರಾವ್ ಪಿ, ಮನೋಹರ ಟಿ ಆರ್, ಸುನಿಲ್ ಎಚ್, ಶ್ರೀನಿವಾಸ ಕಾಮತ್ ಎಚ್ಎನ್, ಶ್ರೀಪತಿ ರಾವ್ ಎನ್, ಶ್ರೀಧರ್ ಉಡುಪ ಎನ್, ವಿಜೇಂದ್ರ ಶೇಟ್, ವಾದಿರಾಜ್ ಕೆ ಎಸ್, ಗುರುರಾಜ ಡಿ ಎಂ, ಸದಾಶಿವ ಶೆಟ್ಟಿ ಟಿ ಎನ್, ಪ್ರಕಾಶ್ ಕುಮಾರ ಗೌಡ ಹೆಚ್, ಆರ್ ವಿಜಯಾನಂದ, ನಿತ್ಯಾನಂದ ಎಚ್ ಎಲ್, ದತ್ತಾತ್ರೇಯ ನಾಗರಾಜ, ದತ್ತಾತ್ರೀ ಉಡುಪ ಏವಿ, ಮಲ್ಲಿಕಾರ್ಜುನ ಮೊದಲಾದವರು ಉಪಸ್ಥಿತರಿದ್ದರು.

Categories
ರಾಜ್ಯ

ಯುವ ನಿಧಿ ಯೋಜನೆಗೆ ನೋಂದಣಿ: ಜನವರಿ ತಿಂಗಳಿಗೆ ಬರುತ್ತೆ ಹಣ…!

ಯುವ ನಿಧಿ ಯೋಜನೆಗೆ ನೋಂದಣಿ: ಜನವರಿ ತಿಂಗಳಿಗೆ ಬರುತ್ತೆ ಹಣ…!
– ಏನೇನು ಮಾನದಂಡ?: ಯುವನಿಧಿ ಯೋಜನೆಗೆ ಯಾರು ಅರ್ಹರು..?
– ಯುವನಿಧಿ ಟೋಲ್ ಫ್ರೀ ಸಂಖ್ಯೆ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಿ!

NAMMUR EXPRESS NEWS
ರಾಜ್ಯ ಸರಕಾರ ನಿರುದ್ಯೋಗಿ ಯುವಕ, ಯುವತಿಯರಿಗಾಗಿ ಯುವನಿಧಿ ಯೋಜನೆಯನ್ನು ಜಾರಿ ಮಾಡಿದೆ. ಕರ್ನಾಟಕ ಸರಕಾರದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ ಯುವ ನಿಧಿ ಯೋಜನೆಯ ಮೂಲಕ ಯುವಜನತೆಗೆ ಆರ್ಥಿಕ ನೆರವು ನೀಡಲಾಗುತ್ತಿದೆ. ಈ ಯೋಜನೆಯನ್ನು ಡಿಸೆಂಬರ್‌ 26ರಿಂದಲೇ ಕರ್ನಾಟಕದಲ್ಲಿ ಜಾರಿಗೆ ಬಂದಿದೆ. ಯುವನಿಧಿ ಯೋಜನೆಗೆ ಸೇರ್ಪಡೆ ಆಗಲು ನಿರ್ದಿಷ್ಟ ಮಾನದಂಡವನ್ನು ನೀಡಲಾಗಿದೆ. ಪ್ರಮುಖವಾಗಿ 2022-23ನೇ ಸಾಲಿನಲ್ಲಿ ಪದವಿ ಹಾಗೂ ಡಿಪ್ಲೊಮೋ ಶಿಕ್ಷಣ ಪಡೆದುಕೊಂಡವರು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಉತ್ತೀರ್ಣರಾದ ನಂತರ 6 ತಿಂಗಳ ಕಾಲ ಉದ್ಯೋಗ ಸಿಗದೇ ಇರುವ ಯುವತಿ, ಯುವತಿಯರಿಗೆ ದೊರಕದ ಯುವಕ, ಯುವತಿಯರು ಗರಿಷ್ಠ 2 ವರ್ಷಗಳ ಅವಧಿಗೆ ಈ ಯೋಜನೆಯಡಿ ಆರ್ಥಿಕ ನೆರವು ಪಡೆಯಬಹುದಾಗಿದೆ. ಪದವೀಧರರಿಗೆ ಪ್ರತೀ ತಿಂಗಳು 3 ಸಾವಿರ ಹಾಗೂ ಡಿಪ್ಲೊಮಾ ಶಿಕ್ಷಣ ಪಡೆದವರಿಗೆ ಪ್ರತೀ ತಿಂಗಳು 1,500 ರೂ.ಗಳ ನಿರುದ್ಯೋಗ ಭತ್ಯೆ ದೊರೆಯಲಿದೆ.

ಜನವರಿ ತಿಂಗಳಿಗೆ ಬರುತ್ತೆ ಹಣ…!

2024 ಜನವರಿ ಮಾಹೆಯಿಂದ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ನೇರವಾಗಿ ಡಿಬಿಟಿ ಮುಖಾಂತರ ಬ್ಯಾಂಕ್‌ ಖಾತೆಗೆ ಹಣ ವರ್ಗಾವಣೆ ಆಗಲಿದೆ. ಯುವನಿಧಿ ಯೋಜನೆಗೆ ಅರ್ಜಿ ಸಲ್ಲಿಸಿದ ನಂತರದಲ್ಲಿ ಉದ್ಯೋಗ ದೊರೆತರೆ ಅಂತಹ ಸಂದರ್ಭದಲ್ಲಿ ಈ ಯೋಜನೆಯ ಹಣ ಸ್ಥಗಿತವಾಗಲಿದೆ. ಅಲ್ಲದೇ ಗರಿಷ್ಠ 2 ವರ್ಷಗಳ ಅವಧಿಗೆ ಮಾತ್ರವೇ ಈ ಯೋಜನೆಯ ಲಾಭ ದೊರೆಯಲಿದೆ. ಯೋಜನೆಗೆ ಸೇರ್ಪಡೆಯಾಗಿ ಸುಳ್ಳು ಮಾಹಿತಿಯನ್ನು ನೀಡುವವರ ವಿರುದ್ದ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಸರಕಾರ ತಿಳಿಸಿದೆ.

ಸುಮಾರು 5 ಲಕ್ಷ ಮಂದಿಗೆ ಸೌಲಭ್ಯ

ಕರ್ನಾಟಕ ರಾಜ್ಯದಲ್ಲಿ ಒಟ್ಟು 5 ಲಕ್ಷ 29 ಸಾವಿರ ಯುವಕ ಹಾಗೂ ಯುವತಿಯರು ಇದ್ದಾರೆ. ಈ ಪೈಕಿ 4 ಲಕ್ಷ 21 ಸಾವಿರ ಮಂದಿ ಪದವೀಧರರು ಹಾಗೂ 48 ಸಾವಿರ ಮಂದಿ ಡಿಪ್ಲೊಮೊ ಪದವೀಧರರಿದ್ದಾರೆ. ಈಗಾಗಲೇ ಯುವನಿಧಿ ಯೋಜನೆಗೆ ಅರ್ಜಿ ಸಲ್ಲಿಸಲು ಅವಕಾಶವನ್ನು ಕಲ್ಪಿಸಲಾಗಿದೆ. ಆನ್‌ಲೈನ್‌ ಮೂಲಕ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಯುವನಿಧಿ ಯೋಜನೆಯ ಜಾರಿಯ ಬೆನ್ನಲ್ಲೇ ಕರ್ನಾಟಕ ಸರಕಾರ ಉದ್ಯೋಗ ಮೇಳ ಆಯೋಜನೆಗೆ ಸಜ್ಜಾಗಿದೆ. ನಿರುದ್ಯೋಗಿಗಳಿಗ ನಿರುದ್ಯೋಗ ಭತ್ಯೆಯ ಜೊತೆಗೆ ಅವರಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಇರುವ ಉದ್ಯೋಗಳಿಗೆ ಕೌಶಲ್ಯ ತರಬೇತಿಯನ್ನು ನೀಡಿ, ಉದ್ಯೋಗ ದೊರಕಿಸಿ ಕೊಡುವ ಉದ್ದೇಶವನ್ನು ರಾಜ್ಯ ಸರಕಾರ ಹೊಂದಿದೆ.

ಯುವನಿಧಿ ಯೋಜನೆಗೆ ಯಾರು ಅರ್ಹರು?

ಯುವ ನಿಧಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಲು 2023 ರಲ್ಲಿ ಪದವಿ / ಡಿಪ್ಲೋಮಾ ಉತ್ತೀರ್ಣರಾಗಿರಬೇಕು. ಶಿಕ್ಷಣವನ್ನು ಪೂರೈಸಿ ಕನಿಷ್ಠ 6 ತಿಂಗಳ ಅವಧಿಯಲ್ಲಿ ಸರಕಾರಿ ಅಥವಾ ಖಾಸಗಿ ಉದ್ಯೋಗವನ್ನು ಪಡೆದುಕೊಳ್ಳದೇ ಇರುವವರು ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಉದ್ಯೋಗ ಪಡೆದವರು ಮಾತ್ರವಲ್ಲದೇ ಉನ್ನತ ಶಿಕ್ಷಣವನ್ನು ಮುಂದುವರಿಸಿರುವವರಿಗೆ ಕೂಡ ಈ ಯೋಜನೆಯಡಿಯಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿಲ್ಲ. ಉನ್ನತ ವಿದ್ಯಾಭ್ಯಾಸ ಮುಂದುವರೆಸದೇ ಇರುವವರು. ಅಷ್ಟೇ ಅಲ್ಲಾ ಕರ್ನಾಟಕದಲ್ಲಿ ಶಿಕ್ಷಣವನ್ನು ಪಡೆದವರಿಗೆ ಮಾತ್ರವೇ ಯುವನಿಧಿ ಯೋಜನೆಯ ಅಡಿಯಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿದೆ.

ಯುವನಿಧಿ ಯೋಜನೆಯ ಅಡಿಯಲ್ಲಿ ನೋಂದಣಿ ಮಾಡಲು ಕಡ್ಡಾಯವಾಗಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ, ಪದವಿ ಹಾಗೂ ಡಿಪ್ಲೋಮಾ ಪ್ರಮಾಣ ಪತ್ರಗಳನ್ನು ಸಲ್ಲಿಕೆ ಮಾಡಬೇಕಾಗಿದೆ. ಅರ್ಹ ಅಭ್ಯರ್ಥಿಗಳು ಸೇವಾ ಸಿಂಧು ಪೋರ್ಟಲ್‌ https://sevasindhugs.karnataka.gov.in ಮುಖಾಂತರ ಯುವ ನಿಧಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಯುವನಿಧಿ ಯೋಜನೆಗೆ ಉಚಿತವಾಗಿ ಅರ್ಜಿ ಸಲ್ಲಿಸಲು ರಾಜ್ಯ ಸರಕಾರ ಅವಕಾಶವನ್ನು ಕಲ್ಪಿಸಿದೆ. ಬೆಂಗಳೂರು ಒನ್‌, ಕರ್ನಾಟಕ ಒನ್‌, ಗ್ರಾಮ ಒನ್‌ ಮತ್ತು ಬಾಪೂಜಿ ಸೇವಾ ಕೇಂದ್ರಗಳಲ್ಲಿಯೂ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಯೋಜನೆಗೆ ಅರ್ಜಿ ಸಲ್ಲಿಸುವ ಕುರಿತ ಯಾವುದೇ ಗೊಂದಲಗಳಿದ್ದರೂ ಕೂಡ ಟೋಲ್‌ ಫ್ರೀ ಸಂಖ್ಯೆ 1800 599 9918 ಸಂಪರ್ಕಿಸಬಹುದಾಗಿದೆ

Categories
ಉಡುಪಿ ಮಂಗಳೂರು

ನಾಲ್ವರನ್ನು ಕೊಂದ ಆರೋಪಿಗೆ ಜೈಲೇ ಗತಿ!

ನಾಲ್ವರನ್ನು ಕೊಂದ ಆರೋಪಿಗೆ ಜೈಲೇ ಗತಿ!
– ಪ್ರವೀಣ್‌ ಜಾಮೀನು ಅರ್ಜಿ ತಿರಸ್ಕರಗೊಳಿಸೋದ ಕೋರ್ಟ್
– ಕುಂದಾಪುರ: ಅನ್ನ ಭಾಗ್ಯ ಅಕ್ಕಿ ಸಾಗಾಟ ಮಾಡುವಾಗ ಸಿಕ್ಕಿ ಬಿದ್ದ ಖದೀಮರು!
– ಮಂಗಳೂರು: ವಿವಿ ಕುಲಪತಿಯ ಹೆಸರಿನಲ್ಲಿ ನಕಲಿ ವಾಟ್ಸ್‌ಆ್ಯಪ್!

NAMMUR EXPRESS NEWS
ಉಡುಪಿ: ಉಡುಪಿಯ ನೇಜಾರಿನಲ್ಲಿ ನಡೆದ ಒಂದೇ ಕುಟುಂಬದ ನಾಲ್ವರ ಕಗ್ಗೋಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪ್ರವೀಣ್ ಚೌಗುಲೆ ಸಲ್ಲಿಸಿರುವ ಜಾಮೀನು ಅರ್ಜಿಯನ್ನು ತಿರಸ್ಕರಿಸಿ ಉಡುಪಿಯ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶ ನೀಡಿದೆ. ನ್ಯಾಯಾಂಗ ಬಂಧನದಲ್ಲಿರುವ ಆರೋಪಿ ಪ್ರವೀಣ್ ಚೌಗುಲೆ ಜಾಮೀನು ಕೋರಿ ಡಿ.14ರಂದು ಅರ್ಜಿಯನ್ನು ಸಲ್ಲಿಸಿದ ವಕೀಲ ಎಸ್.ಎನ್.ರಾಜೇಶ್ ಅವರು ಸಲ್ಲಿಸಿದ್ದರು. ಇದಕ್ಕೆ ಸರಕಾರಿ ಅಭಿಯೋಜಕ ಪ್ರಕಾಶ್ ಚಂದ್ರ ಶೆಟ್ಟಿ ಆಕ್ಷೇಪಣೆ ಸಲ್ಲಿದ್ದರು. ಕುರಿತು ಪ್ರತಿವಾದವನ್ನು ಆಲಿಸಿದ ನ್ಯಾಯಾಧೀಶ ದಿನೇಶ್ ಹೆಗ್ಡೆ, ಅರೋಪಿಯ ಜಾಮೀನು ಅರ್ಜಿಯನ್ನು ವಜಾಗೊಳಿಸಿ ಈ ಆದೇಶವನ್ನು ನೀಡಿದರು.

ಅನ್ನ ಭಾಗ್ಯದ ಅಕ್ಕಿ ಸಾಗಾಟ ಮಾಡುವಾಗ ಸಿಕ್ಕಿ ಬಿದ್ದ ಖದೀಮರು!

ಕುಂದಾಪುರ: ಅನ್ನ ಭಾಗ್ಯದ ಅಕ್ಕಿಯನ್ನು ಗೂಡ್ಸ್ ರಿಕ್ಷಾದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಆರೋಪದಲ್ಲಿ ಓರ್ವನನ್ನು ಆಹಾರ ನಿರೀಕ್ಷಕರ ನೇತೃತ್ವದ ತಂಡ ಖಾರ್ವಿಕೇರಿ ಎಂಬಲ್ಲಿ ಬಂಧಿಸಿದ ಘಟನೆ ನಡೆದಿದೆ. ಬಂಧಿತ ಆರೋಪಿಯನ್ನು ಕುಂದಾಪುರ ಮೇರಿಯ ಕೃಷ್ಣ ಎಂದು ಗುರುತಿಸಲಾಗಿದೆ. ಡಿ.28ರಂದು ಮಧ್ಯಾಹ್ನ ವೇಳೆ ಗೂಡ್ಸ್ ರಿಕ್ಷಾದಲ್ಲಿ ಅನ್ನಭಾಗ್ಯದ ಅಕ್ಕಿಯನ್ನು ಸಾಗಿಸುತ್ತಿದ್ದ ವೇಳೆ ಸಿಕ್ಕಿಬಿದ್ದಿದ್ದಾನೆ. ಕುಂದಾಪುರ ಆಹಾರ ನಿರೀಕ್ಷಕ ಸುರೇಶ ಎಚ್.ಎಸ್. ಖಚಿತ ಮಾಹಿತಿಯಂತೆ ಕುಂದಾಪುರ ಎಸ್.ಐ ವಿನಯ್ ಕೊರ್ಲಹಳ್ಳಿ ಹಾಗೂ ಸಿಬ್ಬಂದಿಯವರೊಂದಿಗೆ ಅಕ್ರಮವಾಗಿ ಅಕ್ಕಿ ಸಾಗಿಸುತ್ತಿದ್ದ ರಿಕ್ಷಾವನ್ನು ತಡೆದು ನಿಲ್ಲಿಸಿ ಪರಿಶೀಲಿಸಿದರು. ರಿಕ್ಷಾದಲ್ಲಿದ್ದ ಒಟ್ಟು 200 ಕೆ.ಜಿ ಅಕ್ಕಿಯನ್ನು ವಾಹನ ಸಹಿತ ವಶಪಡಿಸಿಕೊಂಡರು. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಂಗಳೂರು ವಿ.ವಿ ಕುಲಪತಿಯ ಹೆಸರಿನಲ್ಲಿ ನಕಲಿ ವಾಟ್ಸ್‌ಆ್ಯಪ್ : ಕೇಸ್

ಮಂಗಳೂರು: ವಿಶ್ವವಿದ್ಯಾನಿಲಯದ ಪ್ರಭಾರ ಕುಲಪತಿ ಪ್ರೊ. ಜಯರಾಜ್ ಅಮೀನ್ ಅವರು ತನ್ನ ಹೆಸರಲ್ಲಿ ವಾಟ್ಸ್ಆ್ಯಪ್ ನಕಲಿ ಸಂದೇಶವನ್ನು ರವಾನಿಸುತ್ತಿರುವ ಬಗ್ಗೆ ನಗರದ ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಡಿ.30ರ ಮಧ್ಯಾಹ್ನದಿಂದ ಕುಲಪತಿಯ ಛಾಯಾಚಿತ್ರ ಬಳಸಿಕೊಂಡು ಮೊಬೈಲ್‌ವೊಂದರಿಂದ ಕೆಲವು ಪ್ರಾಧ್ಯಾಪಕರಿಗೆ ಸಂದೇಶಗಳನ್ನು ರವಾನಿಸಲಾಗಿದೆ. ಈ ಬಗ್ಗೆ ತನಿಖೆ ನಡೆಸುವಂತೆ ಪ್ರಭಾರ ಕುಲಪತಿ ಒತ್ತಾಯಿಸಿದ್ದಾರೆ.

Categories
ತೀರ್ಥಹಳ್ಳಿ

ಹಳೆ ವರ್ಷದ ನೆನಪುಗಳಿಗೆ ತೆರೆಎಳೆಯುವ ಸಮಯ..!

ಹಳೆ ವರ್ಷದ ನೆನಪುಗಳಿಗೆ ತೆರೆಎಳೆಯುವ ಸಮಯ..!
– ಬಂದೇ ಬಿಡ್ತು ಹೊಸ ವರ್ಷ : ಹೊಸ ಹರ್ಷ
– ಸಂಭ್ರಮದ ವೇಳೆ ಇರಲಿ ಎಚ್ಚರ, ಜಾಗೃತಿ
– ಸಮಸ್ತರಿಗೂ ಹೊಸ ವರ್ಷದ ಶುಭಾಶಯಗಳು

NAMMUR EXPRESS NEWS
ಇನ್ನೇನು ಹಳೆಯ ವರ್ಷಕ್ಕೆ ತೆರೆ ಎಳೆಯುವ ಸಮಯ ಬಂದಾಯ್ತು. ಹೊಸ ವರ್ಷಕ್ಕೆ ಬಾಗಿಲು ತೆರೆಯಲು ಸಿದ್ಧರಾಗಿ ನಿಂತ ಈ ಸಂದರ್ಭದಲ್ಲಿ ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು. ಸಂಭ್ರಮ ತಪ್ಪೇನಲ್ಲ. ಅದನ್ನು ಅಸಂಬದ್ಧವಾಗಿ ಸಂಭ್ರಮಿಸುವುದು ತಪ್ಪು. ಅಜಾಗರೂಕತೆಯಿಂದ ನಡೆದುಕೊಳ್ಳುವುದು ತಪ್ಪು. ರಾತ್ರಿ ಪಬ್ ಮತ್ತು ಕ್ಲಬ್ ಗಳಲ್ಲಿ ಆಚರಿಸುವ ಈ ಹೊಸವರ್ಷ ಎಷ್ಟೋ ಗಲಾಟೆಗಳಲ್ಲಿ, ಹೊಡೆದಾಟಗಳಲ್ಲಿ ಕೊನೆಯಾಗುತ್ತದೆ. ಅತೀ ಮದ್ಯಪಾನದ ನಂತರವೂ ವಾಹನ ಚಾಲನೆ ಬಹಳಷ್ಟು ಅಪಘಾತಕ್ಕೆ ಕಾರಣವಾಗುತ್ತದೆ. ಆರೋಗ್ಯ ಹಾನಿಗೆ ಕಾರಣವಾಗುತ್ತದೆ.

ಹೊಸ ವರ್ಷ ವೀಕೆಂಡ್ ಬಂದಿರುವುದು ಇನ್ನಷ್ಟು ಮೆರುಗು ತಂದಿದೆ. ಜನರು ಇಷ್ಟವಾದ ಸ್ಥಳದಲ್ಲಿ ಹೊಸ ವರ್ಷವನ್ನು ಬರಮಾಡಿಕೊಳ್ಳಲು ಸಿದ್ಧರಾಗಿದ್ದಾರೆ. ಹಳೆಯ ವರ್ಷದ ತಪ್ಪು ಸರಿಗಳ ವಿಮರ್ಶೆ ಮಾಡಿಕೊಳ್ಳುತ್ತಾ, ಹಳೆಯ ಪಾಠವನ್ನೇ ಆಗಲಿ, ಸಂಭ್ರಮವನ್ನೇ ಆಗಲಿ ನೆನಪಿಸಿಕೊಳ್ಳುತ್ತಾ, ಹೊಸ ವರ್ಷದ ಯೋಜನೆಗಳನ್ನು ರೂಪಿಸಿಕೊಂಡು ನಡೆಯುವಂತಾಗಲಿ. ಕಳೆದ ವರ್ಷಕ್ಕೊಂದು ಸಿಹಿ ವಿದಾಯದ ಜೊತೆ ಹೊಸ ವರ್ಷವನ್ನು ಸ್ವಾಗತಿಸೋಣ. ಹೊಸ ವರ್ಷದಲ್ಲಿ ಒಂದಷ್ಟು ಒಳ್ಳೆ ಕೆಲಸ ಮಾಡೋಣ. ಸಂಭ್ರಮ ಸಂಭ್ರಮವಾಗಿಯೇ ಉಳಿಯಲಿ ಎಂದು ಹಾರೈಸುತ್ತಾ ಎಲ್ಲರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು.

ನಮ್ಮೂರ್ ಎಕ್ಸ್‌ಪ್ರೆಸ್‌ ನ್ಯೂಸ್
ನಿಮ್ಮ ಸುದ್ದಿಯ ಜೊತೆಗಾರ...

Categories
ರಾಜ್ಯ

ಟಾಪ್ ನ್ಯೂಸ್ ಕರ್ನಾಟಕ

– ತೀರ್ಥಹಳ್ಳಿ – ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿಗೆ ಎಂಟ್ರಿಯಾದ ಕಾಡಾನೆ!!
– ಮಾಲು ಸಮೇತ ಸಿಕ್ಕಿಬಿದ್ದ ಗಾಂಜಾ ಮಾರಾಟಗಾರ!
– ಪ್ರೆಸ್ಟೀಜ್ ಅಪಾರ್ಟ್ ಮೆಂಟ್ ಸ್ವಿಮ್ಮಿಂಗ್ ಪೂಲ್ ಗೆ ಪ್ರಸರಿಸಿದ ವಿದ್ಯುತ್: ಬಾಲಕಿ ಸಾವು!
– ಮದ್ಯದ ನಶೆ: ಅಪಾರ್ಟ್​ಮೆಂಟ್​ನಿಂದ ಬಿದ್ದು ಯುವತಿ ಸಾವು!
– ಕರ್ತವ್ಯ ಲೋಪ ಮಾಡಿದ ಇಬ್ಬರು ಕಾನ್ ಸ್ಟೇಬಲ್ ಸಸ್ಪೆಂಡ್!
– ನಿಂತ ಲಾರಿಯೊಂದರಲ್ಲಿ ಪೂರ್ಣ ಕೊಳೆತ ಶವ ಪತ್ತೆ!

NAMMUR EXPRESS NEWS
ತೀರ್ಥಹಳ್ಳಿ: ಮಲೆನಾಡ ಭಾಗದಲ್ಲಿ ಕಾಡಾನೆಗಳು ಕಾಣಿಸಿಕೊಳ್ಳುತ್ತಿದ್ದು, ಈಗ ರಾಷ್ಟ್ರೀಯ ಹೆದ್ದಾರಿಗೆ ಎಂಟ್ರಿಯಾಗಿವೆ. ಸಕ್ರೆಬೈಲ್ ಬಿಡಾರದ ಬಳಿ ಕಾಣಿಸಿದ ಕಾಡಾನೆ ಅಲ್ಲಿನ ತೋಟವೊಂದರಲ್ಲಿ ಕಾಣಿಸಿಕೊಂಡು ನಂತರ ರಸ್ತೆಗೆ ಬಂದು ನಿಂತ ಕಾರಣ ವಾಹನ ಸವಾರರು ನಿಂತಲ್ಲಿಯೇ ನಿಲ್ಲಬೇಕಾದ ಸನ್ನಿವೇಶ ಉಂಟಾಯಿತು. ಒಂದು ಗಂಟೆಗಳ ಕಾಲ ಈ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಸಕ್ರೆಬೈಲ್ ಆನೆಗಳ ಸಹಾಯದೊಂದಿಗೆ ಮಾವುತರು, ಕಾವಾಡಿಗಳು ಕಾಡಾನೆಯನ್ನು ಕಾಡಿಗೆ ಓಡಿಸಿದರು, ರಸ್ತೆ ದಾಟಿದ ನಂತರದಲ್ಲಿ ಕಾಡಾನೆ ಕಾಡಿಗೆ ತೆರಳಿದೆ. ಈ ಭಾಗದಲ್ಲಿ ಮತ್ತೆ ಕಾಡಾನೆಗಳು ರಸ್ತೆಗೆ ಇಳಿಯುವ ಸಾಧ್ಯತೆ ಇದ್ದು ಅರಣ್ಯ ಇಲಾಖೆ ಎಚ್ಚರವಹಿಸಬೇಕಿದೆ.

ಮಾಲು ಸಮೇತ ಸಿಕ್ಕಿಬಿದ್ದ ಗಾಂಜಾ ಮಾರಾಟಗಾರ!

ಶಿವಮೊಗ್ಗ: ಮಾದಕ ವಸ್ತು ಗಾಂಜಾ ಮಾರಾಟಗಾರರ ವಿರುದ್ಧ ಕ್ರಮ ಜರುಗಿಸುವ ನಿಟ್ಟಿನಲ್ಲಿ ಕಾರ್ಯಾಚರಣೆ ಕೈಗೊಂಡಿದ್ದ ವಿನೋಬನಗರ ಪೊಲೀಸ್ ಸ್ಟೇಷನ್​ ಪೊಲೀಸರು ದಿನಾಂಕ: 29-12-2023 ರಂದು ನವುಲೆಯ ಇಂದಿರಾಗಾಂಧಿ ಬಡಾವಣೆಯಲ್ಲಿ ಮಾದಕ ವಸ್ತು ಗಾಂಜಾವನ್ನು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದವನ ಮೇಲೆ ರೇಡ್ ಮಾಡಿದ್ದಾರೆ.
ಈ ವೇಳೆ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿ ಸಲ್ಮಾನ್ ಖಾನ್, 22 ವರ್ಷ, ಚೆನ್ನಗಿರಿ, ದಾವಣಗೆರೆ ಜಿಲ್ಲೆ ಈತನನ್ನು ವಶಕ್ಕೆ ಪಡೆದು, ಅಂದಾಜು ಮೌಲ್ಯ 1,00,000/- ರೂ ಗಳ 2 ಕೆ.ಜಿ. 53 ಗ್ರಾಂ ತೂಕದ ಒಣ ಗಾಂಜಾ, ತೂಕ ಮಾಡುವ ಯಂತ್ರ, ಮೊಬೈಲ್ ಫೋನ್ ಮತ್ತು ರೂ 500/- ನಗದು ಹಣವನ್ನು ಅಮಾನತುಪಡಿಸಿಕೊಂಡಿದ್ದಾರೆ ಅಲ್ಲದೆ, ಆರೋಪಿತನ ವಿರುದ್ಧ ವಿನೋಬನಗರ ಪೊಲೀಸ್ ಠಾಣೆ ಗುನ್ನೆ ಸಂಖ್ಯೆ 0271/2023 ಕಲಂ 20(ಬಿ), 8(ಸಿ) NDPS ಕಾಯ್ದೆ ರೀತ್ಯಾ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಪ್ರೆಸ್ಟೀಜ್ ಅಪಾರ್ಟ್ ಮೆಂಟ್ ಸ್ವಿಮ್ಮಿಂಗ್ ಪೂಲ್ ಗೆ ಪ್ರಸರಿಸಿದ ವಿದ್ಯುತ್: ಬಾಲಕಿ ಸಾವು!

ಬೆಂಗಳೂರು: ಬೆಂಗಳೂರಿನ ವರ್ತೂರಿನಲ್ಲಿರೋ ಪ್ರತಿಷ್ಠಿತ ಪ್ರೆಸ್ಟೀಜ್ ಅಪಾರ್ಟ್ ಮೆಂಟ್ ನಲ್ಲಿ ರಾತ್ರಿ ಸ್ವಿಮ್ಮಿಂಗ್ ಪೂಲ್ ಗೆ ಆಟವಾಡಲು ಬಂದ 10 ವರ್ಷದ ಬಾಲಕಿ ಮಾನ್ಯ, ವಿದ್ಯುತ್ ಪ್ರವಹಿಸಿ ಬಾರದಲೋಕಕ್ಕೆ ಪಯಣಿಸಿದ್ದಾಳೆ. ಬಾಳಿ ಬದುಕಬೇಕಿದ್ದ ಕಂದಮ್ಮನ ಬಲಿ ಪಡೆದ ಅಪಾರ್ಟ್ ಮೆಂಟ್ ಮ್ಯಾನೇಜ್ ಮೆಂಟ್ ವಿರುದ್ಧ ಅಪಾರ್ಟ್ ಮೆಂಟ್ ನಿವಾಸಿಗಳು ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ದಾರೆ.

ಇನ್ನು ಸ್ವಿಮ್ಮಿಂಗ್ ಪೂಲ್ ನಲ್ಲಿ ಮುಳುಗಿ ಬಾಲಕಿ ಸಾವನ್ನಪ್ಪಿದ್ದಾಳೆ ಅಂತಾ ಎಫ್ ಐಆರ್ ನಲ್ಲಿ ಪೊಲೀಸರು ಉಲ್ಲೇಖಿಸಿದ್ರೆ, ಇತ್ತ ಅಪಾರ್ಟ್ ಮೆಂಟ್ ನಿವಾಸಿಗಳು ಹಾಗೂ ಮೃತ ಬಾಲಕಿಯ ತಂದೆ ಕರೆಂಟ್ ಶಾಕ್ ನಿಂದಲೇ ಬಾಲಕಿ ಮೃತಪಟ್ಟಿದ್ದಾಳೆ ಎಂದು ಆರೋಪ ಮಾಡ್ತಿದ್ದಾರೆ. ಇವೆಲ್ಲದರ ಮಧ್ಯೆ ನಿವಾಸಿಗಳು ಸ್ವಿಮ್ಮಿಂಗ್ ಪೂಲ್ ನಲ್ಲಿ ಕರೆಂಟ್ ಟೆಸ್ಟ್ ಮಾಡಿರೋ ವಿಡಿಯೋ ಪ್ರಕರಣದಲ್ಲಿ ಸಂಚಲನ ಮೂಡಿಸಿದೆ.

ಮದ್ಯದ ನಶೆ: ಅಪಾರ್ಟ್​ಮೆಂಟ್​ನಿಂದ ಬಿದ್ದು ಯುವತಿ ಸಾವು!

ಬೆಂಗಳೂರು: ಅಪಾರ್ಟ್​ಮೆಂಟ್​ನಿಂದ ಬಿದ್ದು ಇಂಜಿನಿಯರ್​ ಮೃತಪಟ್ಟ ಘಟನೆ ಕೆ.ಆರ್.ಪುರದ ಅಯ್ಯಪ್ಪನಗರದಲ್ಲಿ ನಡೆದಿದೆ. ಖಾಸಗಿ ಕಂಪನಿಯಲ್ಲಿ ಇಂಜಿನಿಯರ್ ಆಗಿದ್ದ ದಿಪಾಂಶು ಶರ್ಮಾ ಎಂಬುವವರು ಗುರುವಾರ ರಾತ್ರಿ ಕಂಠ ಪೂರ್ತಿ ಕುಡಿದು ಪಾರ್ಟಿ ಮಾಡಿ ಶುಕ್ರವಾರ ಬೆಳಗ್ಗೆ 6:45ರ ವೇಳೆ ತನ್ನ ಮನೆಗೆ ಹಿಂತಿರುಗಿದ್ದರು. ದಿಪಾಂಶು ಶರ್ಮಾ ತನ್ನ ಅಪಾರ್ಟ್​ಮೆಂಟ್​ನ 33ನೇ ಫ್ಲೋರ್​ನ ಬಾಲ್ಕನಿಗೆ ತೆರಳಿದ್ದಾರೆ. ಈ ವೇಳೆ ಮದ್ಯದ ನಶೆಯಲ್ಲೇ ಬಾಲ್ಕನಿಯಿಂದ ಆಯತಪ್ಪಿ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ. ಕೆ.ಆರ್.ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

– ಕರ್ತವ್ಯ ಲೋಪ ಮಾಡಿದ ಇಬ್ಬರು ಕಾನ್ ಸ್ಟೇಬಲ್ ಸಸ್ಪೆಂಡ್!

ಕೊಪ್ಪ: ಚಿಕ್ಕಮಗಳೂರು ಜಿಲ್ಲೆಯಲ್ಲಿ ಜನಸ್ನೇಹಿ ಪೊಲೀಸ್ ವ್ಯವಸ್ಥೆಗೆ ಸಾಕಷ್ಟು ಕ್ರಮ ಕೈಗೊಂಡಿದ್ದಾರೆ. 6 ತಿಂಗಳ ಹಿಂದೆ ಕಾನ್ ಸ್ಟೇಬಲ್ ಸಿದ್ದೇಶ್, ಲಿಂಗದಹಳ್ಳಿ ಠಾಣೆಯಿಂದ, ಮತ್ತು ಹೆಡ್ ಕಾನ್ ಸ್ಟೆಬಲ್ ಉಮಾಶಂಕರ್ ತರೀಕೆರೆ ಠಾಣೆಯಿಂದ ಅಮಾನತುಗೊಂಡಿದ್ದರು. ನಂತರ ಕೊಪ್ಪ ಠಾಣೆಗೆ ವರ್ಗಾವಣೆಯಾಗಿದ್ದು. ಕಾನ್ ಸ್ಟೇಬಲ್ ಸಿದ್ದೇಶ್ ತಮ್ಮ ಹಳೇ ಚಾಳಿಯನ್ನು ಮುಂದುವರಿಸಿ ಜನರಿಂದ ವಸೂಲಿ ದಂಧೆ ಮಾಡುತಿದ್ದು, ಉಮಾಶಂಕರ್ ಮದ್ಯಸೇವಿಸಿ ರೌಡಿಶೀಟರ್ ಗಳ ಜೊತೆ ಸೇರಿಕೊಂಡು ಗುಂಪು ಗಲಾಟೆಯಲ್ಲಿ ತೊಡಗಿದ್ದರು. ವಸೂಲಿ ದಂಧೆಯಲ್ಲಿ ತೊಡಗಿದ್ದ ಸಿದ್ದೇಶ್ ಮತ್ತು ದುರ್ವರ್ತನೆ ತೋರಿದ ಉಮಾಶಂಕರ್ ಅವರನ್ನು ಶುಕ್ರವಾರ ರಾತ್ರಿ ಸಸ್ಪೆಂಡ್ ಮಾಡಲಾಗಿದೆ.

ಕೊಪ್ಪ ಪಿಎಸ್ಐ ಕೌಶಿಕ್ ಅವರ ವರದಿ ಆಧರಿಸಿ DYSP ಅನಿಲ್ ಈ ಎರಡು ಪ್ರತ್ಯೇಕ ಪ್ರಕರಣದಲ್ಲಿ ಕೊಪ್ಪ ಪೊಲೀಸ್ ಠಾಣೆಯ ಇಬ್ಬರು ಕಾನ್ ಸ್ಟೇಬಲ್ ಗಳನ್ನು ಅಮಾನತು ಮಾಡಿರುವುದು ಸಾರ್ವಜನಿಕ ವಲಯದಲ್ಲೂ ಮೆಚ್ಚುಗೆ ವ್ಯಕ್ತವಾಗಿದೆ.

ನಿಂತ ಲಾರಿಯೊಂದರಲ್ಲಿ ಪೂರ್ಣ ಕೊಳೆತ ಶವ ಪತ್ತೆ!

ಶಿವಮೊಗ್ಗ : ನಗರದ ಬಿ.ಹೆಚ್. ರಸ್ತೆಗೆ ಹೊಂದಿಕೊಂಡಂತಿರುವ ವೀರಭದ್ರೇಶ್ವರ ಟಾಕೀಸ್​ ಬಳಿಯ ಜಾಗದಲ್ಲಿ ಲಾರಿಯೊಂದನ್ನ ನಿಲ್ಲಿಸಲಾಗಿತ್ತು. ಅಲ್ಲಿ ಶುಕ್ರವಾರ ಸುಮಾರು 30-40 ವಯಸ್ಸಿನ ವ್ಯಕ್ತಿಯ ಶವವೊಂದು ಪತ್ತೆಯಾಗಿದೆ. ಈ ವಿಚಾರ 15-20 ದಿನಗಳ ನಂತರ ಬೆಳಕಿಗೆ ಬಂದಿದೆ. ಪೂರ್ಣ ಕೊಳೆತ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆಯಾಗಿದ್ದು, ಶವವು ಪೂರ್ಣ ಸ್ಥಿತಿಯಲ್ಲಿ ಕೊಳೆತಿದ್ದು ಹುಳ ತುಂಬಿದೆ. ವಿಪರೀತ ವಾಸನೆ ಬಂದ ಹಿನ್ನೆಲೆಯಲ್ಲಿ ಜನರು ಲಾರಿಯ ಬಳಿಯಲ್ಲಿ ಚೆಕ್ ಮಾಡಿದ್ದಾರೆ. ಈ ವೇಳೆ ಲಾರಿಯಲ್ಲಿ ಶವ ಇರುವುದು ಗೊತ್ತಾಗಿದೆ. ಹಲವು ದಿನಗಳಿಂದ ಲಾರಿ ಅಲ್ಲಿಯೆ ನಿಂತಿತ್ತು ಎನ್ನಲಾಗಿದೆ.

ಇನ್ನೂ ಈ ಸಂಬಂಧ ಕೋಟೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದು, ಸುಮಾರು 5.3 ಅಡಿ ಎತ್ತರ, ಸಾಧಾರಣ ಮೈಕಟ್ಟು, ಬಾಕಿಯಂತೆ ಪೂರ್ಣ ದೇಹ ಕೊಳೆತಿದ್ದು, ಚಹರೆ, ಮುಖ ಗುರುತಾಗುವುದಿಲ್ಲ. ಮೈಮೇಲೆ ಮಾಸಲು ಬಣ್ಣದ ಟೀ ಶರ್ಟ್, ಕಪ್ಪು ಪ್ಯಾಂಟ್ ಧರಿಸಿರುತ್ತಾರೆ ಎಂದು ಕೋಟೆ ಠಾಣೆ ಪ್ರಕಟಣೆಯಲ್ಲಿ ತಿಳಿಸಲಾಗಿದ್ದು, ಅಪರಿಚಿತ ವ್ಯಕ್ತಿಯ ವಾರಸ್ಸುದಾರರು ಯಾರಾದರೂ ಇದ್ದಲ್ಲಿ ಕೋಟೆ ಪೊಲೀಸ್ ಠಾಣೆ ದೂ.ಸಂ.:08182-261415 ನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಸಬ್ ಇನ್ಸ್‍ಪೆಕ್ಟರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.