Categories
Uncategorized

ತೆಂಗಿನ ಕಾಯಿ ಈ ಸಲ ದುಬಾರಿ! – ತೆಂಗಿಗೆ ಕೀಟ ಬಾಧೆ: ಭಾರೀ ಇಳುವರಿ ನಷ್ಟ! – ತೆಂಗಿನ ಎಣ್ಣೆಗೆ ರೋಗ ನಿರೋಧಕ ಶಕ್ತಿ

ತುಮಕೂರು/ ಶಿವಮೊಗ್ಗ: ಕೀಟ ಬಾಧೆ ಮತ್ತು ವಿಪರೀತ ರೋಗದಿಂದ ಶೇ. 30 ರಿಂದ 40 ರಷ್ಟು ಬೆಳೆ ನಾಶವಾಗಿದ್ದು, ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ತೆಂಗಿನ ಇಳುವರಿ ಕಡಿಮೆ ಕಾರಣ ತೆಂಗಿನಕಾಯಿ ಹಾಗೂ ಕೊಬರಿ ಬೆಲೆ ಏರಿಕೆ ಸಾಧ್ಯತೆ ಇದೆ.

ತೆಂಗಿಗೆ ಮಸಿ ರೋಗ, ಕಪ್ಪು ತಲೆ ಹುಳು, ಬಿಳಿ ನೊಣ, ಕೆಂಪು ಮೂತಿ ಹುಳು, ಗೆದ್ದಲು ಕಾಟದಿಂದ ತೆಂಗಿನ ತೋಟಗಳು ಈಗ ನಾಶದ ಭೀತಿಗೆ ತಲುಪಿವೆ.

ಸಂಶೋಧನೆ ಪ್ರಕಾರ ತೆಂಗಿನ ಎಣ್ಣೆ ಆರೋಗ್ಯಕ್ಕೆ ಉತ್ತಮವಾಗಿದೆ. ಸರ್ಕಾರ ಶೇ. 90 ರ ಸಹಾಯ ಧನದಡಿ ತೆಂಗಿನ ಎಣ್ಣೆಯನ್ನು ಪಡಿತರದಾರರಿಗೆ ಪೂರೈಸಬೇಕು. ಜತೆಗೆ ಶಾಲೆಗಳಲ್ಲಿ ಬಿಸಿ ಊಟ ತಯಾರಿಕೆಗೆ ತೆಂಗಿನ ಎಣ್ಣೆ ಬಳಸಲು ಕ್ರಮಕೈಗೊಳ್ಳಬೇಕು ರೈತರು ಮನವಿ ಮಾಡಿದ್ದಾರೆ.

ಅತಿ ಸಣ್ಣ ರೈತರು ತೆಂಗು ಬೆಳೆದಿದ್ದಾರೆ. ಆದರೆ ಅವರಿಂದ ರಸಗೊಬ್ಬರ, ಕೀಟ ಬಾಧೆ, ರೋಗ ಕಡಿಮೆ ಮಾಡುವ ಔಷಧಿ ಸಿಂಪಡಿಸಲು ಕಷ್ಟಕರವಾಗಿರುತ್ತದೆ. ಸರ್ಕಾರ ತೆಂಗು ಬೆಳೆಗಾರರಿಗೆ ಪೋಷಕಾಂಶ ನೀಡುವುದು, ರೋಗ ನಿಯಂತ್ರಣ ಮಾಡುವ ಪ್ರಕ್ರಿಯೆಯನ್ನು ಮಾಡಿದರೆ ಸಂಪೂರ್ಣ ಹತೋಟಿಗೆ ತರಲು ಸಾಧ್ಯ ಎಂದು ರೈತರು ಅಗ್ರಹಿಸಿದ್ದಾರೆ.

 

 

ತೆಂಗಿನ ಎಣ್ಣೆಗೆ ರೋಗ ನಿರೋಧಕ ಶಕ್ತಿ!

ಎಣ್ಣೆ ಉತ್ಪಾದನೆಗೆ ತೆಂಗು ಉಪಯುಕ್ತವಾಗಿದೆ. ಇದರಿಂದ ತೆಂಗಿಗೆ ಶಾಶ್ವತ ಬೆಲೆ ಸಿಗುತ್ತದೆ, ಇದಕ್ಕೆ ಅಂತಾರಾಷ್ಟ್ರೀಯ ಬೇಡಿಕೆ ಸಾಕಷ್ಟು ಇದೆ. ತೆಂಗಿನ ಎಣ್ಣೆ ಹೃದ್ರೋಗ, ಚರ್ಮರೋಗ ಸೇರಿದಂತೆ 60 ಸಮಸ್ಯೆಗಳಿಗೆ ರಾಮ ಬಾಣ ಇದ್ದಂತೆ, ಆರೋಗ್ಯ ದೃಷ್ಟಿಯಿಂದ ತೆಂಗಿನ ಎಣ್ಣೆ ಒಳ್ಳೆಯದು. ಆದರೆ ಸರ್ಕಾರ ಬೆಳೆ ಮತ್ತು ಬೆಲೆ ಬಗ್ಗೆ ಗಮನ ಹರಿಸಬೇಕು ಎಂಬ ಒತ್ತಾಯ ಕೇಳಿ ಬಂದಿದೆ.

Categories
ಇತರೆ ಸುದ್ದಿ ಕೃಷಿ

ಗೃಹಲಕ್ಷ್ಮಿಗೆ ಮುಖ ಚಹರೆ ಬಯೋಮೆಟ್ರಿಕ್ ಕಡ್ಡಾಯ! – ಅಕ್ರಮ ತಡೆದು ಅರ್ಹರಿಗೆ ಮಾತ್ರ ಸೌಲಭ್ಯ ನೀಡಲು ಪ್ಲಾನ್ – ಮನೆ ಮನೆ ಸರ್ವೇ: ಮನೆಗೆ ಬರ್ತಾರೆ ಸಿಬ್ಬಂದಿ!

ಬೆಂಗಳೂರ: ಗೃಹಲಕ್ಷ್ಮಿ ಯೋಜನೆ ಸೌಲಭ್ಯವು ಫಲಾನುಭವಿಗಳಿಗೆ ಮಾತ್ರ ತಲುಪುವುದನ್ನು ಖಚಿತಪಡಿಸಿಕೊಳ್ಳಲು ರಾಜ್ಯ ಸರ್ಕಾರ ಬಯೋ ಮೆಟ್ರಿಕ್ ಹಾಗೂ ಫೇಸ್ ಅಥೆಂಟಿಕೇಶನ್ ಮೂಲಕ ಸಮಗ್ರ ಮರುಪರಿಶೀಲನೆ ನಡೆಸಲು ಆದೇಶ ಹೊರಡಿಸಿದೆ.
ಯೋಜನೆಯಡಿ 2023ರ ಆಗಸ್ಟ್‌ನಿಂದ ಇದುವರೆಗೆ 1.24 ಕೋಟಿ ಫಲಾನುಭವಿಗಳಿಗೆ 32 ಕಂತುಗಳಲ್ಲಿ ಒಟ್ಟು ₹76,951.13 ಕೋಟಿ ಧನಸಹಾಯ ವಿತರಿಸಲಾ ಗಿದೆ. ಆದರೆ ಈ ಅವಧಿಯಲ್ಲಿ ಕೆಲ ಫಲಾನುಭವಿಗಳು ಮೃತಪಟ್ಟಿರುವುದು, ವಲಸೆ ಹೋಗಿರುವುದು ಹಾಗೂ ಫಲಾನುಭವಿಗಳು ಅಥವಾ ಅವರ ಪತಿ ಆದಾಯ ತೆರಿಗೆ ಮತ್ತು ಜಿಎಸ್‌ಟಿ ವ್ಯಾಪ್ತಿಗೆ ಬಂದಿರುವ ಪ್ರಕರಣಗಳು ಬೆಳಕಿಗೆ ಬಂದಿವೆ. ಈ ಹಿನ್ನೆಲೆಯಲ್ಲಿ ಅನರ್ಹರನ್ನು ಕೈಬಿಟ್ಟು ಅರ್ಹರಿಗೆ ಮಾತ್ರ ಸೌಲಭ್ಯ ಮುಂದುವರಿಸಲು ಸುಮಾರು ₹20 ಕೋಟಿ ವೆಚ್ಚದಲ್ಲಿ ಮರುಪರಿಶೀಲನಾ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ದಿನೇಶ್‌ ಗೂಳಿಗೌಡ ತಿಳಿಸಿದ್ದಾರೆ.

ಮನೆ ಮನೆ ಸರ್ವೇ: ಮನೆಗೆ ಬರ್ತಾರೆ ಸಿಬ್ಬಂದಿ!

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಆ.30ರಿಂದ 1 ತಿಂಗಳ ಅವಧಿಯಲ್ಲಿ ಮನೆಮನೆಗೆ ಭೇಟಿ ನೀಡಿ ಪರಿಶೀಲಿಸಲಾಗುವುದು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಈ ಕಾರ್ಯದ ಉಸ್ತುವಾರಿ ವಹಿಸಿ ಕೊಳ್ಳಲಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ಗ್ರಾಪಂ ಸಿಬ್ಬಂದಿ ಹಾಗೂ ನಗರ ಪ್ರದೇಶಗಳಲ್ಲಿ ಕಂದಾಯ ನಿರೀಕ್ಷಕರು, ಬಿಲ್ ಕಲೆಕ್ಟರ್‌ಗಳು ಮತ್ತು ಅಂಗನವಾಡಿ ಕಾರ್ಯಕರ್ತೆಯರನ್ನು ಗಣತಿದಾರರನ್ನಾಗಿ ನೇಮಿಸಲಾಗುತ್ತದೆ.

ಏನೇನು ದಾಖಲೆ ಬೇಕು?

ಫಲಾನುಭವಿಗಳಿಂದ ಅರ್ಜಿ ನಮೂನೆಭರ್ತಿ ಮಾಡಿಸಿಕೊಳ್ಳುವ ಜತೆಗೆ ಮೊಬೈಲ್ ಆ್ಯಪ್ ಮೂಲಕ ಫೋಟೋ, ಜಿಪಿಎಸ್ ಸ್ಥಳ ಮಾಹಿತಿ, ಮತದಾರರ ಗುರುತಿನ ಚೀಟಿ ವಿವರ, ಸ್ಥಳದಲ್ಲೇ ಫೇಸ್ ಅಥೆಂಟಿಕೇಶನ್ ದಾಖಲಿಸಲಾಗುತ್ತದೆ. ಮುಖ ದೃಢೀಕರಣ ಸಾಧ್ಯವಾಗದಿದ್ದರೆ ಸಮೀಪದ ನ್ಯಾಯಬೆಲೆ ಅಂಗಡಿ ಅಥವಾ ಒನ್ ಕೇಂದ್ರಗಳಲ್ಲಿ ಬಯೋಮೆಟ್ರಿಕ್ ಮೂಲಕ ಪರಿಶೀಲನೆಗೆ ಅವಕಾಶ ಕಲ್ಪಿಸಲಾಗಿದೆ.

Categories
Uncategorized

ಪ್ರತಿ ಮನೆಯವರು ಓದಲೇಬೇಕಾದ ಸುದ್ದಿ! – ಇ ಕೆವೈಸಿ ಗೆ ಆಗಸ್ಟ್ 31 ಕೊನೆಯ ದಿನ – ಗೃಹಲಕ್ಷ್ಮೀ ಫಲಾನುಭವಿಗಳ ಪಟ್ಟಿ ಮತ್ತೊಮ್ಮೆ ಪರಿಶೀಲನೆ

ಬೆಂಗಳೂರು: ಎಲ್‌ಪಿಜಿ ಸಿಲಿಂಡರ್ ಗೆ ಸಂಬಂಧಿಸಿದ ಇ-ಕೆವೈಸಿ ಪ್ರಕ್ರಿಯೆಗೆ ಆಗಸ್ಟ್ 31ರ ಸೋಮವಾರ ಕೊನೆಯ ದಿನವಾಗಿದ್ದು, ಅವಧಿ ಮುಗಿಯುವುದರ ಒಳಗಾಗಿ ಗ್ರಾಹಕರು ಅದನ್ನು ಪೂರ್ಣಗೊಳಿಸಿಕೊಳ್ಳಬೇಕೆಂದು ಈ ಮೂಲಕ ತಿಳಿಸಲಾಗಿದೆ. ಎಲ್‌ಪಿಗೆ ಸಬ್ಸಿಡಿ ಮುಂದುವರಿಯಬೇಕಾದರೆ ಇ-ಕೆವೈಸಿ ಕಡ್ಡಾಯ. ಒಂದು ವೇಳೆ ಆಗಸ್ಟ್ 31ರ ಒಳಗಾಗಿ ಗ್ರಾಹಕರು ಆಧಾರ್ ಜೋಡಣೆ ಮಾಡದಿದ್ದಲ್ಲಿ ಕೇಂದ್ರ ಸರ್ಕಾರದ ಉಜ್ವಲ ಯೋಜನೆಯಿಂದ ಲಭ್ಯವಾಗುವ ಸಬ್ಸಿಡಿಯಿಂದ ವಂಚಿತರಾಗುತ್ತಾರೆ ಎನ್ನುವ ಎಚ್ಚರಿಕೆಯನ್ನು ತೈಲ ಕಂಪನಿಗಳು ನೀಡಿವೆ. ಈ ಹಿನ್ನೆಲೆಯಲ್ಲಿ ಕಳೆದ ಎರಡು ವಾರಗಳಿಂದ ಗ್ಯಾಸ್ ಏಜೆನ್ಸಿಗಳ ಮುಂದೆ ಜನರು ಸಾಲುಗಟ್ಟಿ ನಿಂತು ಇ-ಕೆವೈಸಿ ಮಾಡಿಸಿಕೊಳ್ಳುತ್ತಿದ್ದಾರೆ ಎನ್ನುವ ಸಂಗತಿ ತಿಳಿದುಬಂದಿದೆ. ಪ್ರಸ್ತುತ 14.2ಕೆಜಿ ಗೃಹಬಳಕೆ ಸಿಲಿಂಡರ್ ಗೆ 945ರೂಪಾಯಿ ಬೆಲೆ ಇದ್ದು, ಇ-ಕೆವೈಸಿ ಮಾಡಿಸಿಕೊಂಡಲ್ಲಿ ಉಜ್ವಲ ಯೋಜನೆಯ ಫಲಾನುಭವಿಗಳಿಗೆ 300ರೂಪಾಯಿಗಳಷ್ಟು ಸಬ್ಸಿಡಿ ದೊರೆಯಲಿದೆ. ಹೀಗಾಗಿ ಸರ್ಕಾರವು ನೀಡಿರುವ ಗಡುವನ್ನು ಉಪಯೋಗಿಸಿಕೊಂಡು ಗ್ರಾಹಕರು ಇ-ಕೆವೈಸಿ ಅನ್ನು ಪೂರ್ಣಗೊಳಿಸಿಕೊಳ್ಳಬೇಕು, ಗಡುವು ಮುಗಿದ ಬಳಿಕ ಇದಕ್ಕೆ ಮತ್ತೊಮ್ಮೆ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ಗೃಹಲಕ್ಷ್ಮೀ ಫಲಾನುಭವಿಗಳ ಪಟ್ಟಿ ಮತ್ತೊಮ್ಮೆ ಪರಿಶೀಲನೆ

ಬೆಂಗಳೂರು: ರಾಜ್ಯ ಸರ್ಕಾರವು ಹೊರಡಿಸಿರುವ ಗೃಹಲಕ್ಷ್ಮೀ ಯೋಜನೆ ಅಡಿಯಲ್ಲಿ ಪ್ರತಿ ತಿಂಗಳು 2000 ರೂಪಾಯಿಗಳನ್ನು ಪಡೆಯುತ್ತಿರುವ ಫಲಾನುಭವಿಗಳ ಪಟ್ಟಿಯನ್ನು ಮತ್ತೊಮ್ಮೆ ಪರಿಶೀಲಿಸಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ತಯಾರಿ ನಡೆಸಿದೆ. ಅನರ್ಹರು ಮತ್ತು ಮೃತಪಟ್ಟವರ ಹೆಸರಿನಲ್ಲಿ ಹಣ ವರ್ಗಾವಣೆಗೊಳ್ಳುತ್ತಿರುವುದು ಬೆಳಕಿಗೆ ಬಂದಿರುವ ಹಿನ್ನೆಲೆಯಲ್ಲಿ ಇಲಾಖೆಯು ಈ ನಿರ್ಣಯವನ್ನು ಕೈಗೊಂಡಿದೆ ಎನ್ನಲಾಗಿದೆ. ಗೃಹಲಕ್ಷ್ಮೀ ಯೋಜನೆಗೆ ಹೆಸರನ್ನು ನೋಂದಣಿ ಮಾಡಿಸಿಕೊಂಡಿರುವ ಸುಮಾರು 1.24ಕೋಟಿ ಫಲಾನುಭವಿಗಳ ಮಾಹಿತಿಯನ್ನು ಪರಿಶೀಲಿಸುವ ಉದ್ದೇಶವನ್ನು ಹೊಂದಿರುವ ಸರ್ಕಾರವು ಸೆಪ್ಟೆಂಬರ್ ಬಳಿಕ ಈ ಪ್ರಕ್ರಿಯೆಯನ್ನು ಕೈಗೆತ್ತಿಕೊಳ್ಳಲಿದೆ ಎನ್ನುವ ಮಾಹಿತಿ ಲಭಿಸಿದೆ. ಈ ಹಿನ್ನೆಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಮೊಬೈಲ್ ಆ್ಯಪ್ ಮತ್ತು ಸಂಬಂಧಿತ ವೆಬ್ ಪೋರ್ಟಲ್ ಅನ್ನು ಮತ್ತಷ್ಟು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮವನ್ನು ಕೈಗೊಂಡಿದೆ. ಇದರಿಂದಾಗಿ ಫಲಾನುಭವಿಗಳ ಮಾಹಿತಿಗಳನ್ನು ಮತ್ತು ಅಗತ್ಯ ದಾಖಲೆಗಳನ್ನು ಡಿಜಿಟಲ್ ವ್ಯವಸ್ಥೆಯ ಮೂಲಕ ಮತ್ತಷ್ಟು ಶೀಘ್ರವಾಗಿ ಪರಿಶೀಲಿಸಲು ಸಾಧ್ಯವಾಗುತ್ತದೆ ಎಂದು ಆಲೋಚಿಸಲಾಗಿದೆ. ಇದರೊಂದಿಗೆ ಅಧಿಕಾರಿಗಳು ಅಥವಾ ನಿಯೋಜಿತ ಸಿಬ್ಬಂದಿಗಳು ಫಲಾನುಭವಿಗಳ ಮನೆಗಳಿಗೆ ತೆರಳಿ ದಾಖಲೆಗಳನ್ನು ಪರಿಶೀಲಿಸುವ ಸಾಧ್ಯತೆ ಕೂಡ ಇದೆ ಎನ್ನುವ ಮಾಹಿತಿ ಮೂಲಗಳಿಂದ ಲಭಿಸಿದೆ. ಅಲ್ಲದೆ ಫಲಾನುಭವಿಗಳ ಗುರುತನ್ನು ಖಚಿತಪಡಿಸಿಕೊಳ್ಳಲು ಬಯೋಮೆಟ್ರಿಕ್ ಮತ್ತು ಫೇಸ್ ಅಥೆಂಟಿಕೇಷನ್ ನಂತಹ ತಂತ್ರಜ್ಞಾನವನ್ನು ಕೂಡ ಬಳಸುವ ಕುರಿತು ಚಿಂತನೆ ನಡೆಸಲಾಗಿದೆ. ಮರುಪರಿಶೀಲನೆಯ ಸಂದರ್ಭದಲ್ಲಿ ಫಲಾನುಭವಿಗಳು ಕುಟುಂಬದ ವಿವರಗಳನ್ನು ದೃಢಪಡಿಸಲು ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ಬ್ಯಾಂಕ್ ಖಾತೆಯ ವಿವರ, ಪತಿಯ ಹೆಸರು ಮತ್ತು ಆಧಾರ ಸಂಖ್ಯೆ, ಪಡಿತರ ಚೀಟಿಯ ವಿವರ, ಕುಟುಂಬದ ತೆರಿಗೆ ಪಾವತಿ ಮಾಹಿತಿ ಮತ್ತು ಅಗತ್ಯವಿದ್ದಲ್ಲಿ ಇತರೆ ದಾಖಲೆಗಳನ್ನು ನೀಡಬೇಕೆಂದು ತಿಳಿಸಲಾಗಿದೆ. ಯಾವ ದಾಖಲೆಗಳನ್ನು ಕಡ್ಡಾಯವಾಗಿ ಸಲ್ಲಿಸಬೇಕು ಎನ್ನುವುದು ಸರ್ಕಾರದ ಅಧಿಕೃತ ಮಾರ್ಗಸೂಚಿ ಪ್ರಕಟವಾದ ಬಳಿಕವಷ್ಟೇ ಸ್ಪಷ್ಟವಾಗಲಿದೆ ಎನ್ನಲಾಗಿದೆ.

Categories
Uncategorized

ಕಸ್ತೂರಿ ರಂಗನ್ ವರದಿ ವಿರುದ್ಧ ಹೋರಾಟ ಜೋರು! – ಮಂಜುನಾಥ ಗೌಡ ನೇತೃತ್ವದಲ್ಲಿ ಕಾರಣಗಿರಿಯಿಂದ ಪಾದಯಾತ್ರೆ – ಸಾವಿರಾರು ರೈತರು ಹಾಜರ್: ಹಚ್ಚಿತು ಹೋರಾಟದ ಕಿಚ್ಚು – ವಿಜಯೇಂದ್ರ ನೇತೃತ್ವದಲ್ಲಿ ಶಿವಮೊಗ್ಗದಲ್ಲಿ ಪ್ರಮುಖರ ಸಭೆ

ಹೊಸ ನಗರ: ಕಸ್ತೂರಿ ರಂಗನ್ ವರದಿ ಜಾರಿ ನೀತಿಯನ್ನು ವಿರೋಧಿಸಿ ಸಹಕಾರ ನಾಯಕರು ಆದ ಡಾ.ಆರ್ ಎಂ ಮಂಜುನಾಥಗೌಡ ನೇತೃತ್ವದಲ್ಲಿ ಕಾರಣಗಿರಿಯಿಂದ ಹೊಸನಗರದವರೆಗೆ ಪಾದಯಾತ್ರೆಗೆ ಭಾರೀ ಜನ ಸ್ಪಂದನೆ ವ್ಯಕ್ತವಾಗಿದೆ.
ಪ್ರತಿಭಟನೆಯಲ್ಲಿ ಶಾಸಕ ಬೇಳೂರು ಗೋಪಾಲಕೃಷ್ಣ,ಎಂಎಡಿಬಿ ಅಧ್ಯಕ್ಷ ಆರ್ ಎಂ ಮಂಜುನಾಥ್ ಗೌಡ, ತೀರ್ಥಹಳ್ಳಿ ಶಾಸಕ ಅರಗ ಜ್ಞಾನೇಂದ್ರ ಸೇರಿದಂತೆ ಹಲವಾರು ನಾಯಕರು ಭಾಗಿಯಾದರು. ಮಲೆನಾಡಿನ ಈ ಜ್ವಲoತ ಸಮಸ್ಯೆ ವಿರೋಧಿಸಿ ನಡೆಸುತ್ತಿರುವ ಪ್ರತಿಭಟನೆಯಲ್ಲಿ ಸಾವಿರಾರು ಜನ ಭಾಗಿಯಾಗಿದ್ದರು.
ಕೇಂದ್ರ ಸರ್ಕಾರವು ಕಸ್ತೂರಿ ರಂಗನ್ ವರದಿಗೆ ಸಂಬಂಧಿಸಿದಂತೆ ಹೊರಡಿಸಿರುವ ಅಧಿ ಸೂಚನೆಯನ್ನು ಕುರಿತು ವಿರೋಧ ವ್ಯಕ್ತಪಡಿಸಿ ಹೊಸನಗರ ತಾಲ್ಲೂಕು ಪಶ್ಚಿಮ ಘಟ್ಟ ರೈತ ಸಹಕಾರಿ ವೇದಿಕೆ ಈ ಪ್ರತಿಭಟನೆಗೆ ಕರೆ ನೀಡಿತ್ತು. ಪಶ್ಚಿಮ ಘಟ್ಟ ರೈತ ಸಹಕಾರಿ ವೇದಿಕೆ ಶಿವಮೊಗ್ಗದ ಅಧ್ಯಕ್ಷರಾದ ಆರ್.ಎಂ. ಮಂಜುನಾಥಗೌಡ ಮತ್ತು ಸಂಚಾಲಕರಾದ ಬಿ.ಆರ್. ಜಯಂತ್ ಅವರ ನೇತೃತ್ವದಲ್ಲಿ ಮಲೆನಾಡು ಪ್ರದೇಶ ಮತ್ತು ರೈತರ ರಕ್ಷಣೆಯನ್ನು ಒಳಗೊಂಡಂತೆ ಹಲವಾರು ಅಂಶಗಳನ್ನು ಆಧರಿಸಿ ಕಾರಣಗಿರಿ ಶ್ರೀಸಿದ್ಧಿವಿನಾಯಕ ದೇವಸ್ಥಾನದಿಂದ ಪಾದಯಾತ್ರೆ ಮತ್ತು ಬಹಿರಂಗ ಸಭೆ ನಡೆಯಿತು. ಪಕ್ಷಾತೀತವಾಗಿ ಎಲ್ಲರೂ ಒಗ್ಗಟ್ಟಿನಿಂದ ಹೋರಾಟ ನಡೆಸಿ, ಕಸ್ತೂರಿ ರಂಗನ್ ವರದಿ ಜಾರಿಯಿಂದ ಮುಂದೆ ಎದುರಾಗಬಹುದಾದ ಸಮಸ್ಯೆಗಳನ್ನು ತಡೆಗಟ್ಟಿ, ಮಲೆನಾಡಿನ ಹಿತರಕ್ಷಣೆಯನ್ನು ಕಾಪಾಡಬೇಕೆಂದು ಕರೆ ನೀಡಲಾಯಿತು
ಪ್ರಮುಖರಾದ ಕಲಗೋಡು ರತ್ನಾಕರ್, ವಿದ್ಯಾಧರ ಗುರುಶಕ್ತಿ, ಚಂದ್ರ ಮೌಳಿ, ಶ್ವೇತಾ ಬಂಡಿ, ಸುಬ್ರಮಣ್ಯ ಮಾಸ್ತಿಕಟ್ಟೆ, ಮುರಳಿಧರ್ ಸೇರಿ ಅನೇಕರು ಹಾಜರಿದ್ದರು.

ವಿಜಯೇಂದ್ರ ನೇತೃತ್ವದಲ್ಲಿ ಶಿವಮೊಗ್ಗದಲ್ಲಿ ಪ್ರಮುಖರ ಸಭೆ

ಶಿವಮೊಗ್ಗ: ಕಸ್ತೂರಿ ರಂಗನ್ ವರದಿ ಕರಡು ಜಾರಿ ಹಾಗೂ ಅದರಿಂದ ಮಲೆನಾಡು ಭಾಗದ ಜನರ ಮೇಲಾಗುವ ಪರಿಣಾಮಗಳ ಕುರಿತು, ಶಿವಮೊಗ್ಗದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ.ವೈ. ವಿಜಯೇಂದ್ರ ಅವರ ನೇತೃತ್ವದಲ್ಲಿ ನಡೆದ ಶಿವಮೊಗ್ಗ ವಿಭಾಗ ಮಟ್ಟದ (ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕನ್ನಡ ಜಿಲ್ಲೆಗಳು) ಪಕ್ಷದ ಪ್ರಮುಖರ ವಿಶೇಷ ಸಭೆ ನಡೆಯಿತು.
​ಪಶ್ಚಿಮ ಘಟ್ಟಗಳ ಪರಿಸರ ಸಂರಕ್ಷಣೆಯ ಜೊತೆಗೆ ಮಲೆನಾಡಿನ ಜನರ ಜೀವನೋಪಾಯ, ಮೂಲಭೂತ ಹಕ್ಕುಗಳು ಹಾಗೂ ಹಿತಾಸಕ್ತಿಗಳನ್ನು ಕಾಯುವುದು ನಮ್ಮ ಮೊದಲ ಆದ್ಯತೆಯಾಗಿದೆ. ಪರಿಸರ ರಕ್ಷಣೆ ಮತ್ತು ಜನರ ಕಲ್ಯಾಣ — ಎರಡಕ್ಕೂ ಸಮತೋಲನದ ಶಾಶ್ವತ ಪರಿಹಾರ ಕಂಡುಕೊಳ್ಳಲು ಪಕ್ಷ ಬದ್ಧವಾಗಿದೆ ಎಂದು ನಾಯಕರು ಹೇಳಿದ್ದಾರೆ

Categories
Uncategorized

ಮಹಾ ಪ್ರವಾಹ: ನೀರಲ್ಲಿ ಕೊಚ್ಚಿ ಹೋದ ನೂರಾರು ಜನ! – ನೇಪಾಳ ಟಿಬೆಟ್ ನಲ್ಲಿ ಭೀಕರ ಪ್ರವಾಹ; 350 ಮಂದಿ ಸಾವು – 2000ಕ್ಕೂ ಹೆಚ್ಚು ಮಂದಿ ನಾಪತ್ತೆ: ಅಲ್ಲೇ ಭೂಕಂಪ..! – ಕಾನ್ಪುರದಲ್ಲಿ ವಿಮಾನ ಪತನ; ಕನ್ನಡಿಗ ಪೈಲೆಟ್ ನ ದುರಂತ ಅಂತ್ಯ

ಕಠ್ಮಂಡು: ನೇಪಾಳ ಟಿಬೇಟ್ ಗಡಿ ಪ್ರದೇಶದಲ್ಲಿ ಭೀಕರ ಪ್ರವಾಹ ಸಂಭವಿಸಿದ್ದು, ಜಗತ್ತಿನ ಹಲವು ದೇಶಗಳಲ್ಲಿ ಆತಂಕವನ್ನು ಸೃಷ್ಟಿಸಿದೆ. ಹಲವು ದೇಶಗಳ ಸಾವಿರಾರು ಪ್ರವಾಸಿಗರು ಇಲ್ಲಿ ಸಿಲುಕಿದ್ದಾರೆ. ಭಾರತ ಸೇರಿ ಕನ್ನಡಿಗರು ಕೂಡ ಅಪಾಯದಲ್ಲಿದ್ದಾರೆ. ಎಲ್ಲಿ ನೋಡಿದರೂ ಹೆಣಗಳ ರಾಶಿ. ಮುಳುಗಿ ಕೆಸರಲ್ಲಿ ಸಿಲುಕಿದ ಊರುಗಳು ಕಾಣುತ್ತಿವೆ.
ಪ್ರವಾಹ ಮತ್ತು ಹಿಮಬಂಡೆ ಕುಸಿತದ ಪರಿಣಾಮದಿಂದಾಗಿ ಸುಮಾರು 350 ಮಂದಿ ಸಾವನ್ನಪ್ಪಿರುವ ಕುರಿತು ಮಾಹಿತಿ ಲಭಿಸಿದೆ. ಅಲ್ಲದೆ 1500 ಜನ ನಾಪತ್ತೆ ಆಗಿದ್ದಾರೆ ಎಂದು ಸಂಬಂಧಿತ ಅಧಿಕಾರಿಗಳು ತಿಳಿಸಿದ್ದಾರೆ. ಪ್ರವಾಹದಿಂದಾಗಿ ಹಾನಿಗೊಳಗಾದ ಪ್ರದೇಶಗಳಲ್ಲಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದ್ದು, ಮಳೆಯ ತೀವ್ರತೆ ಹೆಚ್ಚಾದಲ್ಲಿ ನೀರಿನ ಮಟ್ಟ ಮತ್ತಷ್ಟು ಏರಿಕೆಯಾಗಬಹುದು ಎನ್ನುವಂತಹ ಭಯದ ವಾತಾವರಣ ಸೃಷ್ಟಿಯಾಗಿದೆ. ಹೀಗಾಗಿ ರಕ್ಷಣಾ ತಂಡಗಳು ಹೆಚ್ಚಿನ ಮತ್ತು ವಿಶೇಷ ರೀತಿಯ ಎಚ್ಚರಿಕೆಯನ್ನು ವಹಿಸಿ ಕಾರ್ಯಾಚರಣೆಯನ್ನು ಕೈಗೊಂಡಿದ್ದಾರೆ. ಮೃತರ ಸಂಖ್ಯೆ ಕೂಡ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎನ್ನುವಂತಹ ಆತಂಕಕಾರಿ ವರದಿ ಹೊರಬಿದ್ದಿದೆ.
ಪ್ರವಾಸ, ಉದ್ಯೋಗ, ಆಪ್ತರ ಭೇಟಿ ಸೇರಿದಂತೆ ಹಲವಾರು ಕಾರಣಗಳಿಗಾಗಿ ನೇಪಾಳಕ್ಕೆ ತೆರಳಿರುವ ಸುಮಾರು 300 ಜನ ಭಾರತೀಯರು ನಾಪತ್ತೆಯಾಗಿದ್ದಾರೆ. ಸುಮಾರು 100 ಜನ ಭಾರತೀಯರನ್ನು ಪತ್ತೆಹಚ್ಚಲಾಗಿದೆ. ನಾಪತ್ತೆಯಾದವರ ಅಂತಿಮ ಸಂಖ್ಯೆ ಅಧಿಕೃತವಾಗಿ ತಿಳಿಸಿಲ್ಲ.
ಪ್ರವಾಹ ಪೀಡಿತ ಪ್ರದೇಶಗಳಲ್ಲಿ ನೇಪಾಳ ಸೇನೆ ಮತ್ತು ಪೊಲೀಸರು ಸೇರಿದಂತೆ ಸುಮಾರು 10೦೦೦ಕ್ಕೂ ಹೆಚ್ಚು ಸಿಬ್ಬಂದಿಗಳು ರಕ್ಷಣೆ ಮತ್ತು ಶೋಧನಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಇನ್ನು ನೇಪಾಳದಲ್ಲಿ ಸಂಕಷ್ಟಕ್ಕೆ ಒಳಗಾಗಿರುವ ಭಾರತೀಯರಿಗಾಗಿ ನೆರವು ಮತ್ತು ಮಾಹಿತಿಯನ್ನು ಒದಗಿಸುವ ಸಲುವಾಗಿ ಭಾರತ ಸರ್ಕಾರ ಮತ್ತು ನೇಪಾಳದ ಅಧಿಕಾರಿಗಳು ಪರಸ್ಪರ ಸಮನ್ವಯದೊಂದಿಗೆ ರಕ್ಷಣೆ ಮತ್ತು ಪರಿಹಾರ ಕಾರ್ಯಗಳನ್ನು ಕೈಗೊಂಡಿದ್ದು, ಕಠ್ಮಂಡುವಿನಲ್ಲಿರುವ ಭಾರತೀಯ ರಾಯಭಾರ ಕಛೇರಿ ತುರ್ತು ಸಹಾಯವಾಣಿ ವ್ಯವಸ್ಥೆಯನ್ನು ಮಾಡಲಾಗಿದೆ.
ಪ್ರವಾಹ ಪೀಡಿತ ಭಾರತೀಯರು ಅಥವಾ ಅವರ ಕುಟುಂಬಸ್ಥರು +9779851316807, +9779709107500 ಸಂಖ್ಯೆಗಳ ಮೂಲಕ ಸಂಪರ್ಕಿಸಿ ಮಾಹಿತಿಯನ್ನು ಪಡೆಯಬಹುದಾಗಿದೆ.

ಕಾನ್ಪುರದಲ್ಲಿ ವಿಮಾನ ಪತನ; ಕನ್ನಡಿಗ ಪೈಲೆಟ್ ನ ದುರಂತ ಅಂತ್ಯ

ಉತ್ತರ ಪ್ರದೇಶ: ತರಬೇತಿ ವಿಮಾನವೊಂದು ಧಾರುಣವಾಗಿ ಪತನಗೊಂಡಿರುವ ಘಟನೆ ಗುರುವಾರದಂದು ಕಾನ್ಪುರದ ಗಂಗಾ ನದಿಯ ದಡದಲ್ಲಿ ನಡೆದಿದೆ. ಪರಿಣಾಮವಾಗಿ ಕರ್ನಾಟಕ ಮೂಲದ ಪೈಲೆಟ್ ಅಭಿಷೇಕ್ ಪೂಜಾರಿ ಮತ್ತು ಗುಜರಾತ್ ಮೂಲದ ಸಚಿನ್ ಭಾಟಿಯಾ ಇಬ್ಬರು ದುರಂತ ರೀತಿಯಲ್ಲಿ ಅಂತ್ಯ ಕಂಡಿದ್ದಾರೆ. ಗಾರ್ಗ್ ಏವಿಯೇಷನ್ ನಿರ್ವಹಿಸುತ್ತಿರುವ ಟೆಕ್ನಮ್ ವಿಮಾನವು ಬೆಳಿಗ್ಗೆ 11:30ರ ಸುಮಾರಿಗೆ ಟೇಕ್ ಆಫ್ ಆಗಿತ್ತು. ಟೇಕ್ ಆಫ್ ಆದ ಕೆಲವೇ ನಿಮಿಷಗಳಲ್ಲಿ ಕತ್ರಿ ಪ್ರದೇಶದ ನಾಥಪೂರ್ವ ಎನ್ನುವ ಗ್ರಾಮದಲ್ಲಿ ವಿಮಾನವು ಪತನಗೊಂಡಿತು ಎನ್ನುವ ಮಾಹಿತಿಯನ್ನು ಪೊಲೀಸ್ ಆಯುಕ್ತರಾದ ರಘುಬೀರ್ ಲಾಲ್ ಅವರು ಪಿಟಿಐಗೆ ನೀಡಿದ್ದಾರೆ.

Categories
Uncategorized

ಸೆಪ್ಟೆಂಬರ್ ಅಲ್ಲಿ ಬ್ಯಾಂಕ್ ಸಾಲು ಸಾಲು ರಜೆ! – ಬ್ಯಾಂಕ್ ಗ್ರಾಹಕರೇ ಗಮನಿಸಿ.. ಈಗಲೇ ಬ್ಯಾಂಕ್ ವ್ಯವಹಾರ ಮಾಡಿಕೊಳ್ಳಿ – ಇಂಟರ್ನೆಟ್ ಬ್ಯಾಂಕ್, ಯುಪಿಐ ಇರುತ್ತೆ

ಬೆಂಗಳೂರು: ಬ್ಯಾಂಕ್ ಗೆ ಸಂಬಂಧಿಸಿದಂತಹ ಕೆಲಸಗಳಿದ್ದರೆ ಗ್ರಾಹಕರು ಸೆಪ್ಟೆಂಬರ್ ತಿಂಗಳ ದಿನಾಂಕಗಳನ್ನು ಪರಿಶೀಲಿಸಿಕೊಂಡು ತಮ್ಮ ಕೆಲಸಗಳನ್ನು ಮುಗಿಸಿಕೊಳ್ಳಬೇಕಿದೆ.
ಏಕೆಂದ್ರೆ ಸೆಪ್ಟೆಂಬರ್ ತಿಂಗಳಿನಲ್ಲಿ ಹಬ್ಬಗಳು, ಪ್ರಾದೇಶಿಕ ರಜೆಗಳು ಮತ್ತು ವಾರದ ರಜೆಗಳು ಸೇರಿದಂತೆ ಸಾಲು ಸಾಲು ರಜೆಗಳಿವೆ. ಭಾರತೀಯ ರಿಸರ್ವ್ ಬ್ಯಾಂಕ್ ಬಿಡುಗಡೆಗೊಳಿಸಿರುವ ಕ್ಯಾಲೆಂಡರ್ ಅನ್ವಯ ಸಾರ್ವಜನಿಕ ಮತ್ತು ಖಾಸಗಿ ವಲಯದ ಬ್ಯಾಂಕ್ ಗಳ ಶಾಖೆಗಳಿಗೆ ಆಯಾ ರಾಜ್ಯ ಮತ್ತು ನಗರಗಳಿಗೆ ಅನುಗುಣವಾಗಿ ರಜೆಗಳು ಅನ್ವಯಗೊಳ್ಳಲಿದೆ.

ಯಾವತ್ತು ಯಾವತ್ತು ರಜೆ?

ಸೆಪ್ಟೆಂಬರ್ 12ರ ಎರಡನೇ ಶನಿವಾರ ಮತ್ತು ಸೆಪ್ಟೆಂಬರ್ 26ರ ನಾಲ್ಕನೇ ಶನಿವಾರ ಹಾಗೂ ಎಂದಿನಂತೆ ಭಾನುವಾರಗಳು ಬ್ಯಾಂಕ್ ಗಳಿಗೆ ಸಾಮಾನ್ಯವಾಗಿ ರಜೆ ಇರುತ್ತದೆ. ಇದರೊಂದಿಗೆ ಸೆಪ್ಟೆಂಬರ್ 4ರ ಶುಕ್ರವಾರದಂದು ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಕೆಲವು ನಗರಗಳ ಬ್ಯಾಂಕ್ ಗಳಿಗೆ ಅಂದು ರಜೆ ಇರುತ್ತದೆ. ಮತ್ತು ಸೆಪ್ಟೆಂಬರ್ 14ರ ಸೋಮವಾರದಂದು ಗಣೇಶ ಚತುರ್ಥಿಯ ಪ್ರಯುಕ್ತ ಬೆಂಗಳೂರು, ಮುಂಬೈ ಮತ್ತು ಚೆನ್ನೈ ಸೇರಿದಂತೆ ಕೆಲವು ಪ್ರಮುಖ ನಗರಗಳ ಬ್ಯಾಂಕ್ ಶಾಖೆಗಳಿಗೆ ರಜೆಯನ್ನು ಘೋಷಿಸಲಾಗಿದೆ. ಅಷ್ಟೇ ಅಲ್ಲದೆ ಸೆಪ್ಟೆಂಬರ್ 15ರ ಮಂಗಳವಾರದಂದು ಸಂವತ್ಸರಿ ಅಥವಾ ನುಖೈ ಹಬ್ಬ, ಸೆಪ್ಟೆಂಬರ್ 21ರ ಸೋಮವಾರದಂದು ಶ್ರೀನಾರಾಯಣ ಗುರು ಜಯಂತಿ, ಸೆಪ್ಟೆಂಬರ್ 22ರ ಮಂಗಳವಾರದಂದು ಕರ್ಮ ಪೂಜೆ ಮತ್ತು ಸೆಪ್ಟೆಂಬರ್ 23ರ ಬುಧವಾರದಂದು ಮಹಾರಾಜ ಹರಿ ಸಿಂಗ್ ಜನ್ಮದಿನದ ಹಿನ್ನೆಲೆಯಲ್ಲಿ ಆಯಾ ರಾಜ್ಯಗಳಲ್ಲಿ ಬ್ಯಾಂಕ್ ಗಳಿಗೆ ರಜೆ ಇರಲಿವೆ ಎಂದು ತಿಳಿಸಲಾಗಿದೆ.

ಇಂಟರ್ನೆಟ್ ಬ್ಯಾಂಕ್, ಯುಪಿಐ ಇರುತ್ತೆ!

ರಜೆಗಳಿದ್ದರೂ ಸಹ ಯುಪಿಐ ಪಾವತಿ, ಮೊಬೈಲ್ ಬ್ಯಾಂಕಿಂಗ್, ಇಂಟರ್ ನೆಟ್ ಬ್ಯಾಂಕಿಂಗ್ ಮತ್ತು ಎಟಿಎಂ ಸೇವೆಗಳು ಲಭ್ಯವಿರುವುದರಿಂದ ಗ್ರಾಹಕರು ಸಣ್ಣಪುಟ್ಟ ವ್ಯವಹಾರಗಳನ್ನು ಆನ್ ಲೈನ್ ಮೂಲಕ ಮುಗಿಸಿಕೊಳ್ಳಲು ಮತ್ತು ಚೆಕ್ ಕ್ಲಿಯರೆನ್ಸ್, ನಗದು ವ್ಯವಹಾರ, ಖಾತೆ ಸಂಬಂಧಿತ ದಾಖಲೆಗಳು ಸೇರಿದಂತೆ ಇನ್ನಿತರ ವ್ಯವಹಾರಗಳಿಗೆ ಸಂಬಂಧಿಸಿದಂತಹ ಅನಿವಾರ್ಯತೆಗಳಿದ್ದಲ್ಲಿ ಅಂತಹ ಕೆಲಸಗಳನ್ನು ನೇರವಾಗಿ ಬ್ಯಾಂಕ್ ಶಾಖೆಗಳಿಗೆ ತೆರಳಿ ರಜಾ ದಿನಗಳ ದಿನಾಂಕವನ್ನು ಗಮನದಲ್ಲಿಟ್ಟುಕೊಂಡು ಪೂರೈಸಿಕೊಳ್ಳಬೇಕೆಂದು ಈ ಮೂಲಕ ತಿಳಿಸಲಾಗಿದೆ

Categories
Uncategorized

ತೀರ್ಥಹಳ್ಳಿ ರೋಟರಿ, ಜೇಸಿಐ ಸೇವಾ ಹೆಜ್ಜೆ! – ಯಡೂರು ಸರ್ಕಾರಿ ಶಾಲೆಗೆ ರೋಟರಿ ಸಂಸ್ಥೆಯಿಂದ ಧ್ವನಿವರ್ಧಕ – ಆಗಸ್ಟ್ 28ರ ಸಂಜೆ ಜೆಸಿಐ ಭಾರತದ ರಾಷ್ಟ್ರೀಯ ಅಧ್ಯಕ್ಷ ಆರ್.ಪಿ.ಪಿ. ಭರತ್ ಆಚಾರ್ಯ ಆಗಮನ – ತೀರ್ಥಹಳ್ಳಿಯಲ್ಲಿ ಜೆಸಿಐ ಸೇವಾ ಯೋಜನೆಗೆ ಚಾಲನೆ

 

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ತೀರ್ಥಹಳ್ಳಿ: ತಾಲೂಕಿನ ಯಡೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ರೋಟರಿ ಕ್ಲಬ್ ತೀರ್ಥಹಳ್ಳಿ ಹಾಗೂ ದಾನಿಗಳ ಸಹಯೋಗದಲ್ಲಿ ನೂತನ ತಂತ್ರಜ್ಞಾನದ ಸುಸಜ್ಜಿತ ಧ್ವನಿವರ್ಧಕ ವ್ಯವಸ್ಥೆಯನ್ನು ಕೊಡುಗೆಯಾಗಿ ನೀಡಲಾಯಿತು.
ಆಗಸ್ಟ್ 25ರಂದು ನಡೆದ ಕಾರ್ಯಕ್ರಮದಲ್ಲಿ ಬೆಂಗಳೂರಿನ ದಾನಿ ಶ್ರೀ ನಂಜೇಗೌಡರು ಹಾಗೂ ರೋಟರಿ ಸಂಸ್ಥೆಯ ಸಹಯೋಗದಲ್ಲಿ ಸುಮಾರು 40 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವ ಶಾಲೆಗೆ ಧ್ವನಿವರ್ಧಕ ವ್ಯವಸ್ಥೆಯನ್ನು ವಿದ್ಯುಕ್ತವಾಗಿ ಉದ್ಘಾಟಿಸಲಾಯಿತು.
ಸುಮಾರು 117 ವರ್ಷಗಳ ಇತಿಹಾಸ ಹೊಂದಿರುವ ಯಡೂರು ಶಾಲೆ ಈ ಭಾಗದ ಅನೇಕ ಮಹನೀಯರಿಗೆ ವಿದ್ಯಾಭ್ಯಾಸ ನೀಡಿದೆ. ಸುತ್ತಮುತ್ತಲಿನ ಹಲವು ಗ್ರಾಮಗಳಿಂದ ವಿದ್ಯಾರ್ಥಿಗಳು ಈ ಶಾಲೆಗೆ ಆಗಮಿಸಿ ಶಿಕ್ಷಣ ಪಡೆಯುತ್ತಿದ್ದ ಕಾಲವಿತ್ತು. ನಂತರ ಸುತ್ತಮುತ್ತಲಿನ ಪ್ರದೇಶಗಳು ಮುಳುಗಡೆಯಾಗಿ ಜನಸಂಖ್ಯೆ ವಿರಳವಾದರೂ, ಶಾಲೆಯು ತನ್ನ ಸ್ವಂತ ಶ್ರಮ ಹಾಗೂ ಸ್ಥಳೀಯರ ಸಹಕಾರದಿಂದ ಮುನ್ನಡೆಯುತ್ತಾ ಬಂದಿದೆ.
ರೋಟರಿ ಕ್ಲಬ್ ತೀರ್ಥಹಳ್ಳಿ ವತಿಯಿಂದ ಶಾಲೆಗೆ ಹಲವು ಬಾರಿ ನೋಟ್‌ಬುಕ್‌ಗಳು ಹಾಗೂ ವಿವಿಧ ಶಾಲಾ ಪರಿಕರಗಳನ್ನು ನೀಡಲಾಗಿದೆ. ಸಭೆ-ಸಮಾರಂಭಗಳ ಸಂದರ್ಭದಲ್ಲಿ ಧ್ವನಿವರ್ಧಕ ವ್ಯವಸ್ಥೆ ಕಲ್ಪಿಸುವುದು ಶಾಲಾ ಸಮಿತಿಗೆ ಕಷ್ಟಕರವಾಗಿದ್ದ ಹಿನ್ನೆಲೆಯಲ್ಲಿ, ಈ ಸಮಸ್ಯೆಯನ್ನು ಮನಗಂಡು ದಾನಿ ನಂಜೇಗೌಡರು ಹಾಗೂ ರೋಟರಿ ಸಂಸ್ಥೆಯ ಸಹಯೋಗದಲ್ಲಿ ನೂತನ ಧ್ವನಿವರ್ಧಕ ವ್ಯವಸ್ಥೆಯನ್ನು ಒದಗಿಸಲಾಗಿದೆ. ರೋಟರಿ ಸಂಸ್ಥೆಯ ಜಿಲ್ಲಾ ಚೇರ್‌ಮನ್ ರೊ. ಕೆ.ಪಿ.ಎಸ್. ಸ್ವಾಮಿ ಮಾತನಾಡಿ, ಧ್ವನಿವರ್ಧಕ ವ್ಯವಸ್ಥೆಯನ್ನು ವಿದ್ಯಾರ್ಥಿಗಳ ಶೈಕ್ಷಣಿಕ ಹಾಗೂ ಇತರ ಚಟುವಟಿಕೆಗಳಿಗೆ ಅನುಕೂಲವಾಗುವ ರೀತಿಯಲ್ಲಿ ಸದುಪಯೋಗಪಡಿಸಿಕೊಳ್ಳಬೇಕು. ವ್ಯವಸ್ಥೆ ಒದಗಿಸುವ ಭರವಸೆ ನೀಡಿದ್ದ ದಾನಿ ನಂಜೇಗೌಡರು ಅತಿ ಶೀಘ್ರದಲ್ಲಿ ಅದನ್ನು ಶಾಲೆಗೆ ತಂದುಕೊಟ್ಟಿರುವುದು ಶ್ಲಾಘನೀಯ ಎಂದರು. ಶಾಲೆಯ ಹಳೆಯ ವಿದ್ಯಾರ್ಥಿ ವೆಂಕಟೇಶ್ ಹೆಗಡೆ, ಯಡೂರು ಮಾತನಾಡಿದರು. ರೋಟರಿ ಕ್ಲಬ್ ತೀರ್ಥಹಳ್ಳಿ ಅಧ್ಯಕ್ಷ ರೊ. ಎನ್.ಎಚ್.ಸಿ. ರಮೇಶ್ ಮಾತನಾಡಿ, ದಾನಿಗಳು ಹಾಗೂ ರೋಟರಿ ಸಂಸ್ಥೆಯ ನೆರವಿನಿಂದ ಈ ವ್ಯವಸ್ಥೆ ಕಲ್ಪಿಸಲಾಗಿದೆ. ಶಾಲಾ ಮಕ್ಕಳು ಇದರ ಸದುಪಯೋಗ ಪಡೆದುಕೊಂಡು ಶೈಕ್ಷಣಿಕ ಚಟುವಟಿಕೆಗಳಲ್ಲಿ ಉತ್ತಮವಾಗಿ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.

ತೀರ್ಥಹಳ್ಳಿಯಲ್ಲಿ ಜೆಸಿಐ ಸೇವಾ ಯೋಜನೆಗೆ ಚಾಲನೆ
ಆಗಸ್ಟ್ 28ರ ಸಂಜೆ ಜೆಸಿಐ ಭಾರತದ ರಾಷ್ಟ್ರೀಯ ಅಧ್ಯಕ್ಷ ಆರ್.ಪಿ.ಪಿ. ಭರತ್ ಆಚಾರ್ಯ ಆಗಮನ

ಜೆಸಿಐ ಭಾರತದ ರಾಷ್ಟ್ರೀಯ ಅಧ್ಯಕ್ಷರಾದ ಆರ್.ಪಿ.ಪಿ. ಭರತ್ ಆಚಾರ್ಯ ಅವರು ರಾಷ್ಟ್ರೀಯ ಅಧ್ಯಕ್ಷರ ಅಧಿಕೃತ ಭೇಟಿಯ ಅಂಗವಾಗಿ ಆಗಸ್ಟ್ 28ರ ಶುಕ್ರವಾರ ತೀರ್ಥಹಳ್ಳಿಗೆ ಆಗಮಿಸಲಿದ್ದಾರೆ.
ಮಧ್ಯಾಹ್ನ 2.30ಕ್ಕೆ ತೀರ್ಥಹಳ್ಳಿಗೆ ಆಗಮಿಸಲಿರುವ ಅವರು, ಡಾ. ಯು.ಆರ್. ಅನಂತಮೂರ್ತಿ ಪ್ರೌಢಶಾಲೆಯಲ್ಲಿ ಜೆಸಿಐ ತೀರ್ಥಹಳ್ಳಿ ಸಂಸ್ಥೆಯು ನ್ಯಾಷನಲ್ ಸಂಸ್ಥೆ ಸಹಕಾರದೊಂದಿಗೆ ಒದಗಿಸಿರುವ ಸ್ಮಾರ್ಟ್ ಕ್ಲಾಸ್‌ನ್ನು ಉದ್ಘಾಟಿಸಲಿದ್ದಾರೆ. ಬಳಿಕ ಜಯಚಾಮರಾಜೇಂದ್ರ ಆಸ್ಪತ್ರೆಗೆ ಭೇಟಿ ನೀಡಲಿರುವ ಅವರು, ಅಲ್ಲಿನ ಡಯಾಲಿಸಿಸ್ ಕೇಂದ್ರಕ್ಕೆ ಅಗತ್ಯ ಸಲಕರಣೆಗಳನ್ನು ಹಸ್ತಾಂತರಿಸಲಿದ್ದಾರೆ.
ಸಂಜೆ 4.15ಕ್ಕೆ ಬಾಳೇಬೈಲಿನ ರವೀಂದ್ರ ಶೆಟ್ಟಿ ಉದ್ಯಾನವನದಲ್ಲಿ ಜೆಸಿಐ ತೀರ್ಥಹಳ್ಳಿ ಸಂಸ್ಥೆಯು ನ್ಯಾಷನಲ್ ಇನ್ಫ್ರಾಸ್ಟ್ರಕ್ಷರ್ಸ್ ಸಂಸ್ಥೆ ಸಹಕಾರದೊಂದಿಗೆ ಸಾರ್ವಜನಿಕರ ಅನುಕೂಲಕ್ಕಾಗಿ ಒದಗಿಸಿರುವ ಆಟದ ಸಲಕರಣೆ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಲೋಕಾರ್ಪಣೆಗೊಳಿಸಲಿದ್ದಾರೆ.
ನಂತರ ಮಲ್ನಾಡ್ ಕ್ಲಬ್ ಸಭಾಂಗಣದಲ್ಲಿ ನಡೆಯಲಿರುವ ಮಲ್ಟಿ ಲಾಮ್ ಎನ್.ಪಿ. ವಿಸಿಟ್ ಸಭೆಯಲ್ಲಿ ರಾಷ್ಟ್ರೀಯ ಅಧ್ಯಕ್ಷರು ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮದಲ್ಲಿ ಸಿಇಡಿ ಟು ಎನ್.ಪಿ. ಜೆಎಫ್‌ಎಸ್ ಅನುಷ್ ಗೌಡ, ವಲಯಾಧ್ಯಕ್ಷ ಜೆಎಫ್‌ಎಸ್ ಮಧುಸೂದನ್ ನಾವಡ, ವಲಯ ಉಪಾಧ್ಯಕ್ಷ ಜೆಎಫ್‌ಎಂ ಅಭಿಜಿತ್ ಹಿರಿಯ ಹಾಗೂ ಜೆಸಿಐ ತೀರ್ಥಹಳ್ಳಿ ಅಧ್ಯಕ್ಷ ಜೆಎಫ್‌ಎಂ ನಟೇಶ್ ಕಾಮತ್ ಸೇರಿದಂತೆ ಜೆಸಿಐ ಪದಾಧಿಕಾರಿಗಳು ಉಪಸ್ಥಿತರಿರಲಿದ್ದಾರೆ.

Categories
Uncategorized

ಹೆಲಿಕಾಪ್ಟರ್ ಪತನ: ಕರಾವಳಿ ಮೂಲದ ಪೈಲಟ್ ಸಾವು •ಮಂಗಳೂರು: ಮಾದಕ ವಸ್ತು ಸೇವನೆ; ನಾಲ್ವರ ಬಂಧನ •ಬಂಟ್ವಾಳ: ಬದುಕಿರುವಾಗಲೇ ವ್ಯಕ್ತಿಗೆ ಶ್ರದ್ಧಾಂಜಲಿ ಅರ್ಪಣೆ! •ಬೆಳ್ತಂಗಡಿ: ಅತ್ಯಾಚಾರವೆಸಗಿದ ಆರೋಪಿ ಬಂಧನ

ಉಡುಪಿ: ಉತ್ತರ ಪ್ರದೇಶದ ಕಾನ್ಪುರದಲ್ಲಿ ಆಗಸ್ಟ್ 27ರಂದು ಖಾಸಗಿ ತರಬೇತಿ ವಿಮಾನ ಅಪಘಾತದಲ್ಲಿ ಉಡುಪಿ ಮೂಲದ ತರಬೇತಿ ಪೈಲಟ್ ಅಭಿಷೇಕ್ ಪೂಜಾರಿ(22) ಮೃತಪಟ್ಟಿದ್ದಾರೆ.
ಅಭಿಷೇಕ್ ಪೂಜಾರಿ ಅವರು ಉಡುಪಿ ಜಿಲ್ಲೆಯ ಕಣಜಾರು ಗ್ರಾಮದ ಕಾಡೆಬರ್ಕೆ ನಿವಾಸಿ ಮೂಲದವರಾಗಿದ್ದು, ಈ ಪ್ರದೇಶವು ಹಿರಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಗೆ ಒಳಪಡುತ್ತದೆ. ಲಭ್ಯ ಮಾಹಿತಿಯ ಪ್ರಕಾರ, ಅವರು ಕಳೆದ ಸುಮಾರು ಎರಡೂವರೆ ವರ್ಷಗಳಿಂದ ಉತ್ತರ ಪ್ರದೇಶದ ಕಾನ್ಪುರದಲ್ಲಿ ಖಾಸಗಿ ತರಬೇತಿ ಪೈಲಟ್ ಆಗಿ ತರಬೇತಿ ಪಡೆಯುತ್ತಿದ್ದರು. ಅಭಿಷೇಕ್ ಅವರ ತಂದೆ ಪ್ರಭಾಕರ್ ಪೂಜಾರಿ ಹಾಗೂ ತಾಯಿ ಶಶಿಕಲಾ ಪೂಜಾರಿ ಅವರು ಮಹಾರಾಷ್ಟ್ರದ ಮುಂಬೈನಲ್ಲಿ ವಾಸವಾಗಿದ್ದಾರೆ. ಅಭಿಷೇಕ್ ಅವರು ತಮ್ಮ ಕುಟುಂಬದೊಂದಿಗೆ ಆಗಾಗ ಕಣಜಾರು ಗ್ರಾಮದ ಕಾಡೆಬರ್ಕೆಯಲ್ಲಿರುವ ತಮ್ಮ ತಾಯಿಯ ಸಹೋದರ ಜೀವನ್ ಕುಮಾರ್ ಅವರ ಮನೆಗೆ ಭೇಟಿ ನೀಡುತ್ತಿದ್ದರು. ಅಪಘಾತದ ಮಾಹಿತಿ ತಿಳಿದ ಕುಟುಂಬಸ್ಥರು ಕಾನ್ಪುರಕ್ಕೆ ತೆರಳಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಕಾನೂನು ಪ್ರಕ್ರಿಯೆಗಳು ಮುಂದುವರಿದಿವೆ.

ಮಂಗಳೂರು: ಮಾದಕ ವಸ್ತು ಸೇವನೆ; ನಾಲ್ವರ ಬಂಧನ

ಮಂಗಳೂರು: ಮಾದಕ ವಸ್ತು ಸೇವಿಸಿದ ಆರೋಪಿಗಳನ್ನು ಬಂಧಿಸಿದ ಘಟನೆ, ಬುಧವಾರದಂದು ಕುಂಟಿಕಾನದಲ್ಲಿ ನಡೆದಿದೆ. ಗಸ್ತು ಕರ್ತವ್ಯದಲ್ಲಿದ್ದ ಪೊಲೀಸರು ನಾಲ್ವರು ಯುವಕರು ಸಿಗರೇಟ್ ಸೇದುತ್ತಾ ಅನುಮಾನಾಸ್ಪದವಾಗಿ ನಿಂತಿರುವುದನ್ನು ಗಮನಿಸಿ, ವಿಚಾರಿಸಿದ ಮಾದಕ ವಸ್ತು ಸೇವನೆಯ ಅಮಲಿನಲ್ಲಿರುವುದನ್ನು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಬಳಿಕ ಅವರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ ಮಾದಕ ವಸ್ತು ಸೇವಿಸಿರುವುದು ದೃಢಪಟ್ಟಿದೆ. ಆರೋಪಿಗಳನ್ನು ಕಾರವಾರದ ಸದಾಶಿವಗಡ ನಿವಾಸಿ ರಿಫಾಕತ್ ತಮೀಮ್, ಬೆಂಗಳೂರು ಮೂಲದ ಸಿದ್ಧರಾಮಪ್ಪ, ಗಾರ್ಡನ್ ಲಿಂಗರಾಜಪುರದ ಕೈತ್ ಡ್ಯಾರನ್ ಅಗೇರ, ಫಳ್ನೀರ್ ಕಂಕನಾಡಿಯ ಜೋಶುವಾ ಶನಾನ್ ಟೋರಿಸ್, ಕೇರಳ ಮಲಪ್ಪುರಂ ಮೂಲದ ಸಂಜು ಸ್ಯಾಮುವೆಲ್ ಎಂದು ಗುರುತಿಸಲಾಗಿದೆ. ಆರೋಪಿಗಳ ವಿರುದ್ಧ ಎನ್ ಡಿಪಿಎಸ್ ಕಾಯ್ದೆ ಅಡಿಯಲ್ಲಿ ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

•ಬಂಟ್ವಾಳ: ಬದುಕಿರುವಾಗಲೇ ವ್ಯಕ್ತಿಗೆ ಶ್ರದ್ಧಾಂಜಲಿ ಅರ್ಪಣೆ

ಬಂಟ್ವಾಳ: ಬದುಕಿರುವ ವ್ಯಕ್ತಿಯನ್ನು ಮೃತಪಟ್ಟಿದ್ದಾನೆ ಎಂದು ಹೇಳಿ ಸಾಮಾಜಿಕ ಜಾಲತಾಣಗಳಲ್ಲಿ ಸುದ್ಧಿಯನ್ನು ಹಬ್ಬಿಸಿದ ಘಟನೆ, ಬಿ.ಸಿ.ರಸ್ತೆಯಲ್ಲಿ ನಡೆದಿದೆ‌. ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಯುವಕನು ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಫಲಕಾರಿಯಾಗುವುದಿಲ್ಲ ಎಂದು ವೈದ್ಯರು ಘೋಷಿಸಿದ ಹಿನ್ನೆಲೆಯಲ್ಲಿ ಈ ಪ್ರಮಾದ ಉಂಟಾಗಿದೆ ಎನ್ನಲಾಗಿದೆ. ಯುವಕನನ್ನು ಆ್ಯಂಬುಲೆನ್ಸ್ ಮೂಲಕ ಮನೆಗೆ ಕರೆತಂದೊಡನೆ ಆತ ಸಾವನ್ನಪ್ಪಿದ್ದಾನೆ ಎಂಬ ಸುದ್ಧಿ ಎಲ್ಲೆಡೆ ಹರಡಿದೆ. ಇದರಿಂದ ಕಂಗಾಲಾದ ಯುವಕನ ಮನೆಯವರು “ಆತನ ಸ್ಥಿತಿ ಗಂಭೀರವಾಗಿರುವ ಕಾರಣ ಮನೆಗೆ ಕರೆತಂದಿದ್ದೇವೆ” ಎಂದು ಸ್ಪಷ್ಟಪಡಿಸಿದ್ದಾರೆ ಎನ್ನುವ ಸಂಗತಿ ತಿಳಿದುಬಂದಿದೆ. ಪ್ರಸ್ತುತ ಯುವಕನಿಗೆ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎನ್ನುವ ಮಾಹಿತಿ ಮೂಲಗಳಿಂದ ಲಭಿಸಿದೆ.

•ಬೆಳ್ತಂಗಡಿ: ಅತ್ಯಾಚಾರವೆಸಗಿದ ಆರೋಪಿ ಬಂಧನ

ಬೆಳ್ತಂಗಡಿ: 16ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಕಳೆದ ವರ್ಷ ಸೆಪ್ಟೆಂಬರ್ ತಿಂಗಳಿನಿಂದ ನವೆಂಬರ್ ತಿಂಗಳವರೆಗೆ ಆರೋಪಿಯು ಬಾಲಕಿಯ ಮೇಲೆ ಅತ್ಯಾಚಾರವೆಸಗಿ, ಜೀವ ಬೆದರಿಕೆ ಹಾಕಿದ್ದ ಎನ್ನಲಾಗಿದೆ. ಇದರಿಂದಾಗಿ ಬಾಲಕಿ ಈ ವಿಚಾರವನ್ನು ಯಾರಿಗೂ ಹೇಳಿರಲಿಲ್ಲ ಎನ್ನುವ ಮಾಹಿತಿ ಲಭಿಸಿದೆ. ಬಳಿಕ ಬಾಲಕಿಯು ಗರ್ಭಿಣಿಯಾಗಿದ್ದು, ಆಗಸ್ಟ್ 22ರಂದು ಹೆಣ್ಣು ಮಗುವಿಗೆ ಜನ್ಮ ನೀಡಿರುವ ಸಂಗತಿ ಬೆಳಕಿಗೆ ಬಂದಿದೆ. ಇದಕ್ಕೆ ಸಂಬಂಧಿಸಿದಂತೆ ಬಾಲಕಿಯ ಪೋಷಕರು ಪೊಲೀಸರಿಗೆ ದೂರು ನೀಡಿದ್ದು, ದೂರಿನ ಆಧಾರದ ಮೇಲೆ ಪ್ರಕರಣವನ್ನು ದಾಖಲಿಸಿಕೊಂಡ ಧರ್ಮಸ್ಥಳ ಠಾಣೆಯ ಪೊಲೀಸರು ತೀವ್ರ ಕಾರ್ಯಾಚರಣೆಯನ್ನು ನಡೆಸಿ, ದೊಡ್ಡಬಳ್ಳಾಪುರದ ತನ್ನ ಸ್ವಗ್ರಾಮದಿಂದ ತಲೆಮರೆಸಿಕೊಂಡು ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಹಿಂದೂಪುರಕ್ಕೆ ಪರಾರಿಯಾಗಲು ಪ್ರಯತ್ನಿಸಿದಾಗ ಬಂಧಿಸಿದ್ದಾರೆ. ಆರೋಪಿಯನ್ನು ಶ್ರೀಕಾಂತ್ ಎಂದು ಗುರುತಿಸಲಾಗಿದೆ. ಬಂಧನದ ಬಳಿಕ ಆರೋಪಿಯನ್ನು ಮಂಗಳೂರಿನ ಪೋಕ್ಸೋ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆತನಿಗೆ ನ್ಯಾಯಾಂಗ ಬಂಧನವನ್ನು ವಿಧಿಸಿದೆ.

Categories
Uncategorized

ಹೊಟೇಲ್ ಕ್ಲೀನ್ ಇಲ್ಲದಿದ್ರೆ ದಂಡ, ಶಿಕ್ಷೆ! – ಅಡುಗೆ ಮನೆ, ಪಾತ್ರೆ, ಆಹಾರ ಸ್ವಚ್ಛತೆಗೆ ಆಧ್ಯತೆ – ಹೋಟೆಲ್ ಅಲ್ಲಿ ಪಾಲಿಸಬೇಕಾದ ನಿಯಮ ಏನೇನು?

ಬೆಂಗಳೂರು: ಸರ್ಕಾರದ ಆರೋಗ್ಯ ಇಲಾಖೆಯು ರಾಜ್ಯಾದ್ಯಂತ ನಡೆಸುತ್ತಿರುವ ವಿಶೇಷ ತಪಾಸಣಾ ಅಭಿಯಾನದ ಸಂದರ್ಭದಲ್ಲಿ ಹಲವಾರು ಹೊಟೇಲ್ ಮತ್ತು ಆಹಾರ ಉದ್ಯಮದಲ್ಲಿ ಸ್ವಚ್ಛತೆ, ಆಹಾರ ಸುರಕ್ಷತೆ ಮತ್ತು ನೈರ್ಮಲ್ಯಕ್ಕೆ ಸಂಬಂಧಿಸಿದಂತಹ ಹಲವಾರು ಲೋಪದೋಷಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಆಯುಕ್ತಾಲಯವು ರಾಜ್ಯದ ಎಲ್ಲಾ ಆಹಾರ ಉದ್ದಿಮೆದಾರರಿಗೆ ಕಟ್ಟುನಿಟ್ಟಿನ ಮಾರ್ಗಸೂಚಿ ಮತ್ತು ಸಲಹೆಯನ್ನು ಹೊರಡಿಸಿದೆ.
ತಪಾಸಣೆಯ ಸಂದರ್ಭದಲ್ಲಿ ಪತ್ತೆಯಾಗಿರುವಂತಹ ಲೋಪದೋಷಗಳನ್ನು ಸರಿಪಡಿಸಿಕೊಳ್ಳಲು ಹೊಟೇಲ್ ಸೇರಿದಂತೆ ಇತರೆ ಆಹಾರ ಉದ್ದಿಮೆದಾರರಿಗೆ ಕಾಲಾವಕಾಶವನ್ನು ನೀಡಲಾಗಿದ್ದು, ಈ ಅವಧಿಯಲ್ಲಿಯೇ ಅಗತ್ಯ ಕ್ರಮಗಳನ್ನು ಕೈಗೊಂಡು ಆಹಾರ ಸುರಕ್ಷತಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ತಿಳಿಸಲಾಗಿದೆ.
ಒಂದು ವೇಳೆ ನೀಡಿರುವಂತಹ ಅವಧಿಯ ಬಳಿಕವೂ ಮರುತಪಾಸಣೆಯ ಸಂದರ್ಭದಲ್ಲಿ ನಿಯಮವನ್ನು ಉಲ್ಲಂಘಿಸಿ ಲೋಪದೋಷಗಳು ಮುಂದುವರಿದದ್ದೇಯಾದಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2026ರ ಅಡಿಯಲ್ಲಿ ಕಠಿಣ ಕಾನೂನು ಕ್ರಮವನ್ನು ಕೈಗೊಳ್ಳಲಾಗುತ್ತದೆ ಎಂದು ಆಯುಕ್ತಾಲಯವು ಎಚ್ಚರಿಕೆಯನ್ನು ನೀಡಿದೆ.

ಹೋಟೆಲ್ ಅಲ್ಲಿ ಏನೇನು ಕಡ್ಡಾಯ?

ಆಹಾರ ಉದ್ದಿಮೆದಾರರು ಎಫ್ಎಸ್ಎಸ್ಎಐ ಪರವಾನಗಿ ಅಥವಾ ನೋಂದಣಿಯನ್ನು ಹೊಂದಿರಬೇಕಿದೆ. ಇದರೊಂದಿಗೆ ಪರವಾನಗಿ ಸಂಬಂಧಿತ ಷರತ್ತುಗಳು ಮತ್ತು ಆಹಾರ ಸುರಕ್ಷತಾ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಿದೆ. ಅಲ್ಲದೆ ಸಾರ್ವಜನಿಕರ ಸುರಕ್ಷತೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಆಹಾರದ ಗುಣಮಟ್ಟಕ್ಕೆ ಆದ್ಯತೆ, ಕಚ್ಚಾ ವಸ್ತುಗಳ ಖರೀದಿ ಮತ್ತು ಸಂಗ್ರಹಣೆ, ಅವಧಿ ಮೀರಿದ ಆಹಾರಗಳ ವಿಲೇವಾರಿ, ಅಡುಗೆಮನೆಯ ಸ್ವಚ್ಛತೆ, ಪಾತ್ರೆ ಮತ್ತು ಉಪಕರಣಗಳ ಸ್ವಚ್ಛತೆ, ಕೀಟ ನಿಯಂತ್ರಣ, ತಾಪಮಾನ ನಿಯಂತ್ರಣ, ಸಿಬ್ಬಂದಿಯ ವೈಯಕ್ತಿಕ ಸ್ವಚ್ಛತೆ, ಸುರಕ್ಷಿತ ನೀರು ಮತ್ತು ಐಸ್, ಲೇಬಲಿಂಗ್ ಮತ್ತು ಆಹಾರ ಪ್ರದರ್ಶನ, ಆಹಾರ ತ್ಯಾಜ್ಯ ನಿರ್ವಹಣೆಯಂತಹ ಅಂಶಗಳನ್ನು ಅಳವಡಿಸಿಕೊಳ್ಳಲು ಈ ಮೂಲಕ ತಿಳಿಸಲಾಗಿದೆ.

Categories
Uncategorized

ಚಿಕ್ಕಮಗಳೂರು: ಬಾಲಕನನ್ನು ಬೆನ್ನಟ್ಟಿದ ಕಾಡಾನೆ •ಶಿವಮೊಗ್ಗ: ಎಸ್ಎಸ್ಎಲ್ ಸಿ ವಿದ್ಯಾರ್ಥಿ ನೀರುಪಾಲು •ಕಳಸ: ಚರಂಡಿ ಸ್ಲ್ಯಾಬ್ ಮುರಿದು ವ್ಯಾಪಾರಿಗೆ ಗಂಭೀರ ಗಾಯ •ಸಾಗರ: ಆತ್ಮಹತ್ಯೆಗೆ ಯತ್ನಿಸಿದ ಯುವತಿಯನ್ನು ರಕ್ಷಿಸಿದ ಪೊಲೀಸರು

ಚಿಕ್ಕಮಗಳೂರು: ಆಟವಾಡುತ್ತಿದ್ದ ಬಾಲಕನನ್ನು ಕಾಡಾನೆಯೊಂದು ಬೆನ್ನಟ್ಟಿದ ಘಟನೆ, ಹರವಿನಗುಂಡಿ ಗ್ರಾಮದಲ್ಲಿ ನಡೆದಿದೆ. ಕಾಫಿ ತೋಟದ ಲೇಬರ್ ಲೈನ್ ಮುಂಭಾಗದಲ್ಲಿ ಬಾಲಕ ಆಟವಾಡುತ್ತಿದ್ದ ಸಂದರ್ಭದಲ್ಲಿ ಒಂಟಿ ಸಲಗವೊಂದು ಏಕಾಏಕಿ ಪ್ರತ್ಯಕ್ಷಗೊಂಡು, ಬಾಲಕನತ್ತ ಧಾವಿಸಿ ಬಂದಿದೆ. ಬಳಿಕ ಕಾಡಾನೆಯು ಕೂಡಲೇ ರಸ್ತೆಯಲ್ಲಿ ಮುನ್ನುಗ್ಗಿದ್ದರಿಂದ ಬಾಲಕನು ಅದೃಷ್ಟದಿಂದಾಗಿ ಕೂದಲೆಳೆಯ ಅಂತರದಿಂದ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎನ್ನುವ ಮಾಹಿತಿ ಲಭಿಸಿದೆ. ಇತ್ತೀಚಿನ ಕೆಲವು ದಿನಗಳಿಂದ ಕಾಡಂಚಿನ ಪ್ರದೇಶಗಳು ಮತ್ತು ಕಾಫಿತೋಟಗಳ ನಡುವೆ ಪುಂಡಾನೆಗಳು ಬೀಡುಬಿಟ್ಟಿದ್ದು, ಸುತ್ತಮುತ್ತಲಿನ ಪ್ರದೇಶಗಳ ಜನರಲ್ಲಿ ತೀವ್ರ ರೀತಿಯ ಆತಂಕವನ್ನು ಸೃಷ್ಟಿಸಿದೆ. ಪರಿಣಾಮವಾಗಿ ಸ್ಥಳೀಯರು ಮತ್ತು ತೋಟದ ಕಾರ್ಮಿಕರು ಕೆಲಸಕ್ಕೆ ತೆರಳಲು ಭಯಪಡುವಂತಹ ಪರಿಸ್ಥಿತಿ ಎದುರಾಗಿದೆ. ಮಾಹಿತಿ ಲಭಿಸುತ್ತಿದ್ದಂತೆ ಅರಣ್ಯ ಇಲಾಖೆಯವರು ಸಾರ್ವಜನಿಕರಿಗೆ ಮತ್ತು ಗ್ರಾಮಸ್ಥರಿಗೆ ಅನಗತ್ಯವಾಗಿ ಮತ್ತು ಒಂಟಿಯಾಗಿ ಸಂಚಾರ ನಡೆಸದೆ ಎಚ್ಚರಿಕೆಯಿಂದಿರುವಂತೆ ಸೂಚನೆಯನ್ನು ನೀಡಿದ್ದಾರೆ ಎನ್ನುವ ಸಂಗತಿ ತಿಳಿದುಬಂದಿದೆ.

•ಶಿವಮೊಗ್ಗ: ಎಸ್ಎಸ್ಎಲ್ ಸಿ ವಿದ್ಯಾರ್ಥಿ ನೀರು ಪಾಲು

ಶಿವಮೊಗ್ಗ: ಈಜಲು ತೆರಳಿದ್ದ ಎಸ್ಎಸ್ಎಲ್ ಸಿ ವಿದ್ಯಾರ್ಥಿಯೊಬ್ಬ ನೀರು ಪಾಲಾಗಿರುವ ಘಟನೆ, ಬುಧವಾರದಂದು ಅಬ್ಬಲಗೆರೆ ಸಮೀಪದ ಈಶ್ವರವನದ ತುಂಗಾ ಚಾನೆಲ್ ನಲ್ಲಿ ನಡೆದಿದೆ. ಈದ್ ಮಿಲಾದ್ ಹಬ್ಬದ ಪ್ರಯುಕ್ತ ಶಾಲೆಗೆ ರಜೆ ಇರುವ ಕಾರಣದಿಂದಾಗಿ ಗೋಪಾಳದ ಖಾಸಗಿ ಶಾಲೆಯೊಂದರಲ್ಲಿ ಓದುತ್ತಿದ್ದ ಆರು ಜನ ವಿದ್ಯಾರ್ಥಿಗಳು ಬೊಮ್ಮನಕಟ್ಟೆಯಿಂದ ಅಬ್ಬಲಗೆರೆ ಸಮೀಪದಲ್ಲಿ ಹರಿಯುವ ತುಂಗಾ ಚಾನೆಲ್ ಗೆ ಈಜಲೆಂದು ಬಂದಿದ್ದಾರೆ. ಈ ಸಂದರ್ಭದಲ್ಲಿ ಆರು ವಿದ್ಯಾರ್ಥಿಗಳಲ್ಲಿ ಇಬ್ಬರು ವಿದ್ಯಾರ್ಥಿಗಳು ನೀರಿನ ಪಾಲಾಗಿದ್ದಾರೆ. ಇದನ್ನು ಗಮನಿಸಿದ ಎತ್ತಿಗೆ ಮೈತೊಳೆಯುತ್ತಿದ್ದ ಜನರು ವಿದ್ಯಾರ್ಥಿಗಳತ್ತ ಎತ್ತಿಗೆ ಕಟ್ಟಿದ ಹಗ್ಗವನ್ನೇ ಎಸೆದಿದ್ದು, ಇದನ್ನು ಹಿಡಿದುಕೊಂಡ ಓರ್ವ ವಿದ್ಯಾರ್ಥಿಯನ್ನು ಅಲ್ಲಿದ್ದವರು ಎಳೆದು ದಡಕ್ಕೆ ತಂದಿದ್ದಾರೆ. ಬೊಮ್ಮನಕಟ್ಟೆಯ ನಿವಾಸಿಯಾದ ಕೃಷ್ಣ ಎನ್ನುವವನು ಕರೆಂಟ್ ಕಂಬವನ್ನು ಹಿಡಿದುಕೊಳ್ಳಲು ಮುಂದಾಗಿದ್ದು, ಅದಕ್ಕೆ ಸುತ್ತಿದ ಹೂವಿನ ದಾರ ಸಿಕ್ಕಿದೆಯಾದರೂ ನೀರಿನ ರಭಸಕ್ಕೆ ಆತನು ಕೊಚ್ಚಿಕೊಂಡು ಹೋಗಿದ್ದಾನೆ ಎನ್ನುವ ಮಾಹಿತಿ ಲಭಿಸಿದೆ. ಸುಮಾರು 100-150 ಅಡಿ ದೂರ ಹೋಗುವವರೆಗೂ ಸ್ಥಳೀಯರು ಕೃಷ್ಣನನ್ನು ಕಾಪಾಡುವ ಪ್ರಯತ್ನ ನಡೆಸಿದರೂ ಯಾವುದೇ ಪ್ರಯೋಜನವಾಗಲಿಲ್ಲ ಎನ್ನಲಾಗಿದೆ. ಬಳಿಕ ಅಗ್ನಿಶಾಮಕ ದಳಕ್ಕೆ ಮಾಹಿತಿಯನ್ನು ನೀಡಿದ್ದು, ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕದಳದ ಸಿಬ್ಬಂದಿಗಳು ಕೃಷ್ಣನ ಹುಡುಕಾಟಕ್ಕಾಗಿ ಕಾರ್ಯಾಚರಣೆಯನ್ನು ಮುಂದುವರಿಸಿದ್ದಾರೆ ಎನ್ನುವ ಸಂಗತಿ ತಿಳಿದುಬಂದಿದೆ.

•ಕಳಸ: ಚರಂಡಿ ಸ್ಲ್ಯಾಬ್ ಮುರಿದು ವ್ಯಾಪಾರಿಗೆ ಗಂಭೀರ ಗಾಯ

ಕಳಸ: ಚರಂಡಿಯ ಮೇಲೆ ಹಾಕಿರುವ ಸ್ಲ್ಯಾಬ್ ಮೇಲೆ ವ್ಯಕ್ತಿಯೊಬ್ಬ ನಡೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ, ಆಕಸ್ಮಿಕವಾಗಿ ಸ್ಲ್ಯಾಬ್ ಮುರಿದು ಬಿದ್ದಿರುವ ಘಟನೆ, ಮುಖ್ಯ ರಸ್ತೆಯಲ್ಲಿ ನಡೆದಿದೆ. ಪರಿಣಾಮವಾಗಿ ಕ್ಯಾಂಟೀನ್ ವ್ಯಾಪಾರಿ ಆದ ಮಂಜುನಾಥ್ ಅವರು ಗಂಭೀರವಾಗಿ ಗಾಯಗೊಂಡಿದ್ದು, ತಲೆಗೆ 10 ಹೊಲಿಗೆಗಳನ್ನು ಹಾಕಲಾಗಿದ್ದು, ಮಂಜುನಾಥ್ ಅವರು ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ. ರಸ್ತೆ ಬದಿಯ ಚರಂಡಿಯ ಸ್ಲ್ಯಾಬ್ ಮುರಿದು ಅಪಾಯಕ್ಕೆ ಆಹ್ವಾನ ನೀಡುತ್ತಿದ್ದರೂ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಗಮನಹರಿಸದೆ ನಿರ್ಲಕ್ಷ್ಯ ವಹಿಸುತ್ತಿರುವುದೇ ಇಂತಹ ಅನಾಹುತಗಳಿಗೆ ಕಾರಣವಾಗಿದೆ ಎಂದು ಸ್ಥಳೀಯ ವರ್ತಕರು ಆಡಳಿತ ವ್ಯವಸ್ಥೆ ಮತ್ತು ಶಾಸಕಿ ಮೋಟಮ್ಮ ಅವರ ವಿರುದ್ಧ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಅಲ್ಲದೆ ಜನಪ್ರತಿನಿಧಿಗಳಿಗೆ ಅಭಿವೃದ್ಧಿ ಮತ್ತು ಮೂಲ ಸೌಕರ್ಯಗಳ ಕುರಿತು ಕಿಂಚಿತ್ತು ಕಾಳಜಿ ಇಲ್ಲ ಎಂದು ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

•ಸಾಗರ: ಆತ್ಮಹತ್ಯೆಗೆ ಯತ್ನಿಸಿದ ಯುವತಿಯನ್ನು ರಕ್ಷಿಸಿದ ಪೊಲೀಸರು

ಸಾಗರ: ಆತ್ಮಹತ್ಯೆಗೆ ಪ್ರಯತ್ನಿಸಿದ ಯುವತಿಯನ್ನು ಪೊಲೀಸರು ರಕ್ಷಿಸಿರುವ ಘಟನೆ, ಬುಧವಾರದಂದು ಬಿದರೂರು ಚಾನೆಲ್ ಬಳಿ ನಡೆದಿದೆ. ತುಮಕೂರು ಮೂಲದ ಯುವತಿಯು ತನ್ನ ಸ್ನೇಹಿತೆಯೊಂದಿಗೆ ಜಗತ್ಪ್ರಸಿದ್ಧ ಜೋಗ ಜಲಪಾತವನ್ನು ವೀಕ್ಷಿಸಲು ಬಂದ ಸಂದರ್ಭದಲ್ಲಿ ಈ ಪ್ರಯತ್ನ ನಡೆಸಿದ್ದಾಳೆ ಎನ್ನಲಾಗಿದೆ. ಯುವತಿಯು ಅನುಮಾನಾಸ್ಪದವಾಗಿ ಓಡಾಡುತ್ತಿರುವುದನ್ನು ಅಲ್ಲಿ ಮೀನು ಹಿಡಿಯಲು ಬಂದಿದ್ದವರು ಗಮನಿಸಿದ್ದು, ಕೂಡಲೇ 112ಕ್ಕೆ ಕರೆ ಮಾಡಿ ವಿಚಾರ ತಿಳಿಸಿದ್ದಾರೆ. ಮಾಹಿತಿ ಲಭಿಸುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಇಆರ್ ವಿ ಅಧಿಕಾರಿ ಅಣ್ಣಪ್ಪ, ಪೊಲೀಸ್ ಸಿಬ್ಬಂದಿಗಳಾದ ಸಂದೀಪ್, ಪುರುಷೋತ್ತಮ್ ಮತ್ತು ಚಾಲಕ ರಾಘವೇಂದ್ರ ಅವರು ಯುವತಿಯನ್ನು ಕೂಡಲೇ ರಕ್ಷಿಸಿ, ಠಾಣೆಗೆ ಕರೆದುಕೊಂಡು ಹೋಗಿ ವಿಚಾರಣೆ ನಡೆಸಿದ್ದಾರೆ ಎನ್ನಲಾಗಿದೆ. ಆಗ ಯುವತಿಯು ಪ್ರೇಮ ವೈಫಲ್ಯದಿಂದಾಗಿ ಮಾನಸಿಕವಾಗಿ ನೊಂದು ಈ ನಿರ್ಧಾರವನ್ನು ತೆಗೆದುಕೊಂಡಿರುವುದಾಗಿ ಹೇಳಿದ್ದಾಳೆ ಎನ್ನುವ ಸಂಗತಿ ತಿಳಿದುಬಂದಿದೆ. ವಿಚಾರಣೆಯ ಬಳಿಕ ಪೊಲೀಸರು ಯುವತಿಯ ಪೋಷಕರನ್ನು ಸಂಪರ್ಕಿಸಿ, ಮಾಹಿತಿ ನೀಡಿ ಬಳಿಕ ಆಕೆಯನ್ನು ಸುರಕ್ಷಿತವಾಗಿ ಕಳುಹಿಸಿಕೊಟ್ಟಿದ್ದಾರೆ.‌ ಪೊಲೀಸರ ಈ ಕಾರ್ಯಕ್ಕೆ ಜಿಲ್ಲಾ ಪೊಲೀಸ್ ಇಲಾಖೆಯ ವತಿಯಿಂದ ಅಭಿನಂದನೆಗಳನ್ನು ಸಲ್ಲಿಸಲಾಗಿದೆ.