Categories
ತೀರ್ಥಹಳ್ಳಿ ಪ್ರತಿಭೆಗಳು ಪ್ರಶಸ್ತಿ ಮಲ್ನಾಡ್ ಶಿವಮೊಗ್ಗ

ತೀರ್ಥಹಳ್ಳಿ: ಸಜನಾಗೆ ಸಮಾಜಶಾಸ್ತ್ರ ವಿಭಾಗದಲ್ಲಿ ಪ್ರಥಮ ಸ್ಥಾನ

ತೀರ್ಥಹಳ್ಳಿ: ಸಜನಾಗೆ ಸಮಾಜಶಾಸ್ತ್ರ ವಿಭಾಗದಲ್ಲಿ ಪ್ರಥಮ ಸ್ಥಾನ
•ಆಟೋ ಚಾಲಕನ ಮಗಳಿಗೆ ಒಲಿದ ಐದು ಚಿನ್ನದ ಪದಕಗಳು

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್

ತೀರ್ಥಹಳ್ಳಿ: ಕುವೆಂಪು ವಿಶ್ವವಿದ್ಯಾನಿಲಯದ 35ನೇ ಘಟಿಕೋತ್ಸವ ಕಾರ್ಯಕ್ರಮವು ಬುಧವಾರದಂದು ನಡೆದಿದ್ದು, ಸಾವಿರಾರು ಜನ ವಿದ್ಯಾರ್ಥಿಗಳು ಪದವಿ ಮತ್ತು ಸ್ನಾತಕೋತ್ತರ ಪದವಿ ಪ್ರಮಾಣ ಪತ್ರವನ್ನು ಪಡೆದುಕೊಂಡಿದ್ದು, ನೂರಾರು ವಿದ್ಯಾರ್ಥಿಗಳು ತಮ್ಮ ಪರಿಶ್ರಮ ಮತ್ತು ಶೈಕ್ಷಣಿಕ ಸಾಧನೆಯ ಮೂಲಕ ಚಿನ್ನದ ಪದಕ ಗಳಿಸಿದ್ದಾರೆ. ಈ ಸಂದರ್ಭದಲ್ಲಿ ತೀರ್ಥಹಳ್ಳಿ ಮೂಲದ ಆಟೋ ಚಾಲಕರ ಮಗಳಾದ ಎಸ್. ಸಜನಾ ಅವರು ಸಮಾಜಶಾಸ್ತ್ರ ವಿಭಾಗದಲ್ಲಿ 2024-25ನೇ ಸಾಲಿನಲ್ಲಿ ಪ್ರಥಮ ಸ್ಥಾನವನ್ನು ಪಡೆದುಕೊಳ್ಳುವುದರ ಮೂಲಕ ಐದು ಚಿನ್ನದ ಪದಕಗಳಿಗೆ ಕೊರಳೊಡ್ಡಿ, ಪೋಷಕರಿಗೆ ಕೀರ್ತಿಯನ್ನು ತಂದಿದ್ದಾರೆ. ಸಜನಾ ಅವರು ರಂಜದಕಟ್ಟೆಯ ನಿವಾಸಿಯಾದ ಶ್ರೀಮತಿ ಸವಿತಾ ಮತ್ತು ಆಟೋ ಚಾಲಕರಾದ ಶ್ರೀನಿವಾಸ್ ಅವರ ಪುತ್ರಿಯಾಗಿದ್ದಾರೆ.

Categories
inspiration ಪ್ರತಿಭೆಗಳು ಪ್ರಶಸ್ತಿ ಮಂಗಳೂರು ರಾಜ್ಯ ರಾಷ್ಟ್ರೀಯ ವಾರ್ತೆ

ಭರತ ನಾಟ್ಯದ ನಾಟ್ಯ ರಾಣಿ ರೆಮೋನಾ!

ಭರತ ನಾಟ್ಯದ ನಾಟ್ಯ ರಾಣಿ ರೆಮೋನಾ!
– ತಂದೆ ಕಳೆದುಕೊಂಡರೂ ಅಮ್ಮನ ನೆರಳಲ್ಲಿ ಬೆಳೆದು ಸಾಧನೆ
– ಯುವ ಜನತೆಗೆ ಮಾದರಿ ಆದಳು ಮಂಗಳೂರು ಹುಡುಗಿ

ರೆಮೋನಾ ಪೆರೆರ ಕರಾವಳಿ ಭಾಗದಲ್ಲಿ ಮಾತ್ರವಲ್ಲ ಇಡೀ ರಾಜ್ಯದಲ್ಲಿ ತನ್ನ ಕಲೆ ಮೂಲಕವೇ ಗುರುತಿಸಿಕೊಂಡ ಪ್ರತಿಭಾವಂತೆ. ಈಕೆ ಸತತ 170 ಗಂಟೆಗಳ ಕಾಲ ನೃತ್ಯವನ್ನು ಪ್ರದರ್ಶಿಸುವ ಮೂಲಕ, ವಿಶ್ವ ದಾಖಲೆ ನಿರ್ಮಿಸಿದ ಸಾಧಕಿ.

ತಂದೆಯ ಕಳೆದುಕೊಂಡವಳಿಗೆ ತಾಯಿಯೇ ಪ್ರೇರಣೆ!

ರೆಮೋನಾ ಪೆರೆರ ಅವರು 2005ರ ನವೆಂಬರ್ 4ರಂದು ಜನಿಸಿದರು. ತಾಯಿಯ ಗರ್ಭದಲ್ಲಿರುವಾಗಲೇ ತಂದೆಯನ್ನು ಕಳೆದುಕೊಂಡ ರೆಮೋನಾಗೆ ಆ ಕೊರತೆ ಬಾರದಂತೆ ತಂದೆ ತಾಯಿ ಎರಡೂ ಆಗಿ ಬೆಳೆಸಿದವರು ಅಮ್ಮ.‌ ಎರಡೂವರೆ ವರ್ಷದ ಪುಟ್ಟ ಕಂದಮ್ಮನಿರುವಾಗಲೇ ನೃತ್ಯದ ಮೇಲೆ ಒಲವು ಮೂಡಿತು. ತನ್ನ ಮೂರನೇ ವರ್ಷದಿಂದಲೇ ಸೌರಭಾ ಕಲಾ ಪರಿಷತ್ತಿನ ಡಾ.ಶ್ರೀವಿದ್ಯಾ ಅವರ ಬಳಿ ಭರತನಾಟ್ಯ ಅಭ್ಯಾಸಕ್ಕೆ ತೊಡಗಿಕೊಂಡರು ರೆಮೋನಾ. ಪ್ರಾರಂಭಿಕ ಅಂತ ತುಂಬಾ ಕಠಿಣವಾಗಿತ್ತು. ಸಾಕಷ್ಟು ಅವಮಾನಗಳನ್ನು ಎದುರಿಸಿದರು. ತನಗೆ ಇದು ಯಾಕೆ ಸಾಧ್ಯವಿಲ್ಲ ನೋಡಿಯೇ ಬಿಡೋಣ ಎಂದು ಛಲ ತೊಟ್ಟರು. ಇದಕ್ಕೆ ಮೂಲ ಪ್ರೇರಣೆ ತಾಯಿ. ನೃತ್ಯ ಕಲೆಯನ್ನು ಪರಿಚಯಿಸುವ ಮೂಲಕ ತಾಯಿಯು ತನ್ನ ಮಗಳು ನೃತ್ಯಗಾರ್ತಿಯಾಗುವಂತೆ, ಜೊತೆಗೆ ರೆಮೋನಾಗೆ ಭಾರತದ ಕಲೆ ಸಂಸ್ಕೃತಿ ಬಗ್ಗೆ ವಿಶೇಷ ಆಸಕ್ತಿ ಮತ್ತು ಅಭಿಮಾನವಿದ್ದುದು, ಕಲೆಯ ಪ್ರಕಾರಗಳಲ್ಲಿ ಒಂದಾದ ನೃತ್ಯದ ಕಡೆ ಗಮನಹರಿಸುವಂತೆ ಮಾಡಿತು.

ಸತತ ಅಭ್ಯಾಸ..

2019ರಲ್ಲಿ ರಂಗಪ್ರವೇಶವನ್ನು ಮಾಡಿದ ರೆಮೋನಾ ದಿನಕ್ಕೆ ಐದರಿಂದ ಆರು ಗಂಟೆಗಳ ಕಾಲ ನೃತ್ಯಾಭ್ಯಾಸವನ್ನು ಮಾಡುತ್ತಾರೆ. ಬೆಳಿಗ್ಗೆ ಆರರಿಂದ ಏಳರವರೆಗೆ ನೃತ್ಯಾಭ್ಯಾಸದ ಬಳಿಕ ಕಾಲೇಜು ತರಗತಿಗಳನ್ನು ಮುಗಿಸಿ ಮರಳಿ ಮನೆಗೆ ಬಂದ ನಂತರ ಸಂಜೆ ಆರರಿಂದ, ರಾತ್ರಿ ಒಂಭತ್ತರವರೆಗೆ ಅಭ್ಯಾಸವನ್ನು ಮುಂದುವರಿಸುತ್ತಾರೆ.‌ ಇದೇ ಅವರ ಯಶಸ್ಸಿನ ಗುಟ್ಟಾಗಿದೆ. ಕೇವಲ ಭರತನಾಟ್ಯವಷ್ಟೇ ಅಲ್ಲದೆ ಯಕ್ಷಗಾನ, ಹುಲಿವೇಷ, ಪಾಶ್ಚಾತ್ಯ ನೃತ್ಯ ಮತ್ತು ಸಾಹಸಿ ನೃತ್ಯಗಳಲ್ಲೂ ಸಹ ತೊಡಗಿಸಿಕೊಂಡಿದ್ದಾರೆ. ತಾಯಿಯು ತನ್ನ ಕನಸನ್ನು ಮಗಳ ಮೂಲಕ ಸಾಕಾರಗೊಳಿಸಿಕೊಂಡಿದ್ದಾರೆ.

ಅಣ್ಣನ ಆಸರೆ: ಡಿಗ್ರಿ ವಿದ್ಯಾಭ್ಯಾಸ

ರೆಮೋನಾಳ ಕೇಶವಿನ್ಯಾಸ, ವಸ್ತ್ರವಿನ್ಯಾಸ, ಕಾರ್ಯಕ್ರಮಗಳನ್ನು ನಿಗದಿಪಡಿಸುವುದು ತಾಯಿಯಾದರೆ, ಲಂಡನ್ ನಲ್ಲಿ ಪ್ರಮುಖ ಬಾಣಸಿಗರಾಗಿ ಕಾರ್ಯನಿರ್ವಹಿಸುತ್ತಿರುವ ಅಣ್ಣ ಈಕೆಯ ನ್ಯೂಟ್ರಿಷಿಯನ್ ಆಗಿದ್ದಾರೆ. ಮಂಗಳೂರಿನ ಸಂತ ಅಲೋಷಿಯಸ್ ಕಾಲೇಜಿನಲ್ಲಿ ಅಂತಿಮ ವರ್ಷದ ಬಿಎ ವ್ಯಾಸಂಗ ಮಾಡುತ್ತಿರುವ ರೆಮೋನಾ ವಿದ್ಯಾಭ್ಯಾಸದ ಜೊತೆಗೆ, ನೃತ್ಯಭ್ಯಾಸವನ್ನು ಸರಿದೂಗಿಸಿಕೊಂಡು ಹೋಗುತ್ತಿದ್ದಾರೆ. ಮನುಷ್ಯ ಮನಸ್ಸು ಮಾಡಿದರೆ ಏನನ್ನು ಬೇಕಾದರೂ ಸಾಧಿಸಬಹುದು ಎನ್ನುವುದಕ್ಕೆ ಇದೊಂದು ಉತ್ತಮ ನಿದರ್ಶನ.

ದೇಶದ ಎಲ್ಲೆಡೆ ನೂರಾರು ಪ್ರದರ್ಶನ

ರೆಮೋನಾ ಬೇರೆ ಬೇರೆ ರಾಜ್ಯಗಳಲ್ಲಿ ಮತ್ತು ದೇಶಗಳಲ್ಲಿ ಸಾವಿರಾರು ನೃತ್ಯ ಪ್ರದರ್ಶನಗಳನ್ನು ನೀಡಿದ್ದು, 2015ರಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್, 2017ರಲ್ಲಿ ಗೋಲ್ಡನ್ ಬುಕ್ ಆಫ್ ರೆಕಾರ್ಡ್ ಲಂಡನ್, ಭಾರತ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್, ಕನ್ನಡ ರಾಜ್ಯೋತ್ಸವ ಪ್ರಶಸ್ತಿ, 2021 ರಲ್ಲಿ ರಾಜ್ಯ ಸರ್ಕಾರದ ಬಾಲ ಪುರಸ್ಕಾರ ಮತ್ತು 2022 ರಲ್ಲಿ ಪ್ರಧಾನಮಂತ್ರಿ ಅತ್ಯುತ್ತಮ ಬಾಲ ಪುರಸ್ಕಾರ ಇನ್ನು ಹಲವಾರು ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ. ಇದಕ್ಕೆ ಕಳಶಪ್ರಾಯವೆಂಬಂತೆ ಇದೇ ವರ್ಷದ ಜುಲೈ 21 ರಿಂದ 28ರ ವರೆಗೆ ಸತತ ಏಳು ದಿನಗಳ ಕಾಲ 170 ಗಂಟೆ ನೃತ್ಯ ಮಾಡುವ ಮೂಲಕ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ನಲ್ಲಿ ತಮ್ಮ ಹೆಸರನ್ನು ದಾಖಲಿಸಿದ್ದಾರೆ.

ನೃತ್ಯವೇ ತನ್ನ ಉಸಿರಾಗಿರುವ ರೆಮೋನಾಗೆ ತನ್ನ ಎರಡನೇ ತಾಯಿಯಂತಿರುವ ನೃತ್ಯ ಗುರುಗಳಾದ ಶ್ರೀ ವಿದ್ಯಾ ಅವರಂತೆ ನಾಟ್ಯದಲ್ಲಿ ಪಿಎಚ್ಡಿ ಮಾಡಬೇಕೆಂಬ ಮಹತ್ತರ ಉದ್ದೇಶವಿದೆ. ತಾನು ಕಾರ್ಯಕ್ರಮಗಳನ್ನು ನೀಡುವ ಸಂದರ್ಭದಲ್ಲಿ ತರಗತಿಗಳಿಗೆ ಹಾಜರಾಗದೆ, ರಜೆ ಹಾಕುವ ಸನ್ನಿವೇಶಗಳು ಬಹಳಷ್ಟು ಸಲ ಎದುರಾದಾಗಲೂ ಕಾಲೇಜಿನ ಉಪನ್ಯಾಸಕರು ಮತ್ತು ಸಿಬ್ಬಂದಿಗಳು ಸಹಕಾರ ನೀಡುವುದು, ಸ್ನೇಹಿತರು ಅಂದಿನ ದಿನ ನಡೆದ ತರಗತಿಯ ನೋಟ್ಸ್ ಗಳನ್ನು ಕಳುಹಿಸುವ ಮೂಲಕ ನೆರವಾಗುವುದನ್ನು ರೆಮೋನಾ ಮನಸಾರೆ ನೆನೆದು, ಅವರಿಗೆ ಕೃತಜ್ಞತೆಯನ್ನು ಸಲ್ಲಿಸುತ್ತಾರೆ. ಪರಿಶ್ರಮ ಪಟ್ಟಲ್ಲಿ ಮುಂದೆ ಫಲ ಸಿಗುವುದು ಖಚಿತ ಎನ್ನುವುದಕ್ಕೆ ರೆಮೋನಾ ಯುವಜನತೆಗೆ ಮಾದರಿಯಾಗಿದ್ದಾರೆ.

ಏನಿದು ಸಾಧನೆ?

ನಿರಂತರ 7 ದಿನಗಳ ಕಾಲ ನೃತ್ಯದ ಮೂಲಕ, ಮಂಗಳೂರು ಅಲೋಶಿಯಸ್ ಕಾಲೇಜಿನ ವಿದ್ಯಾರ್ಥಿನಿ ರೆಮೋನಾ ಎವೆಟ್ ಪಿರೇರಾ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಸಾಧನೆ ಮಾಡಿದ್ದಾರೆ. ಏಳೂ ದಿನವೂ 170 ಗಂಟೆ ಭರತನಾಟ್ಯದಲ್ಲಿ ಪ್ರತೀ ಮೂರು ಗಮಟೆಗೊಮ್ಮೆ ಕೇವಲ 15 ನಿಮಿಷ ವಿಶ್ರಾಂತಿ ಪಡೆದು ನಿರಂತರವಾಗಿ ನೃತ್ಯ ಮಾಡಿದ್ದಾರೆ ರೆಮೋನಾ.

Categories
ಉತ್ತರ ಕನ್ನಡ ಪ್ರಶಸ್ತಿ ರಾಜ್ಯ

ಉತ್ತರ ಕನ್ನಡ ಜಿಲ್ಲಾ ಪ್ರಮುಖ ಸುದ್ದಿ

ಉತ್ತರ ಕನ್ನಡ ಜಿಲ್ಲಾ ಪ್ರಮುಖ ಸುದ್ದಿ

ಬಂಗಾರಮಕ್ಕಿ ಕ್ಷೇತ್ರಕ್ಕೆ ಕ್ರಿಕೆಟಿಗ ಕೆ.ಎಲ್. ರಾಹುಲ್ ಭೇಟಿ
– ಮಲೆನಾಡಿನ ಪ್ರಸಿದ್ಧ ಕಾರಣಿಕ ಕ್ಷೇತ್ರದ ಮಹಿಮೆ

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಹೊನ್ನಾವರ: ಭಾರತೀಯ ಅಂತರಾಷ್ಟ್ರೀಯ ಕ್ರಿಕೆಟ್ ತಂಡದ ತಾರೆ ಹಾಗೂ ಕನ್ನಡಿಗ ಕೆ.ಎಲ್. ರಾಹುಲ್ ಅವರು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಸುಪ್ರಸಿದ್ಧ ಪುಣ್ಯಕ್ಷೇತ್ರವಾದ ಗೆರುಸೊಪ್ಪಾದ ಬಂಗಾರಮಕ್ಕಿಗೆ ಭಾನುವಾರ ಭೇಟಿ ನೀಡಿ ದೇವರ ಆಶೀರ್ವಾದ ಪಡೆದರು.

ಕ್ಷೇತ್ರಕ್ಕೆ ಆಗಮಿಸಿದ ಅವರು, ಇಲ್ಲಿನ ಆರಾಧ್ಯ ದೈವ ಶ್ರೀ ವೀರಾಂಜನೇಯ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು. ನಂತರ ಕ್ಷೇತ್ರದ ಧರ್ಮದರ್ಶಿಗಳಾದ ಶ್ರೀ ಮಾರುತಿ ಗುರೂಜಿಯವರನ್ನು ಖುದ್ದಾಗಿ ಭೇಟಿ ಮಾಡಿದ ರಾಹುಲ್, ಅವರೊಟ್ಟಿಗೆ ಕೆಲ ಹೊತ್ತು ಸಮಾಲೋಚನೆ ನಡೆಸಿ, ಆಶೀರ್ವಾದ ಪಡೆದುಕೊಂಡರು. ಸ್ಟಾರ್ ಕ್ರಿಕೆಟಿಗನ ಭೇಟಿ ಕ್ಷೇತ್ರದ ಭಕ್ತರು ಹಾಗೂ ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ.

ನವ ದೆಹಲಿಯಲ್ಲಿ ಚಿನ್ನ ಗೆದ್ದ ಕನ್ನಡದ ಹುಡುಗ!
– ಸಮರ್ಥ್ ಜೆ ರಾವ್ ಅವರಿಗೆ ಅಖಿಲ ಭಾರತ ನಾಗರಿಕ ಸೇವಾ ಚೆಸ್ ಪಂದ್ಯಾವಳಿಯಲ್ಲಿ ಪ್ರಶಸ್ತಿ

ನವದೆಹಲಿ: ಅಂತಾರಾಷ್ಟ್ರೀಯ ಚೆಸ್ ಕ್ರೀಡಾಪಟು ಸಮರ್ಥ್ ಜೆ ರಾವ್ ಅವರು ನವದೆಹಲಿಯ ತ್ಯಾಗರಾಜ್ ಸ್ಟೇಡಿಯಂನಲ್ಲಿ ಇತ್ತೀಚಿಗೆನಡೆದ ಅಖಿಲ ಭಾರತ ನಾಗರಿಕ ಸೇವಾ ಚೆಸ್(AICS2025-26) ಪಂದ್ಯಾವಳಿಯಲ್ಲಿ ಪ್ರಾದೇಶಿಕ ಕ್ರೀಡಾ ಮಂಡಳಿ ಬೆಂಗಳೂರು ತಂಡವನ್ನು ಪ್ರತಿನಿಧಿಸಿ ಭಾಗವಹಿಸಿದರು.

ತಂಡ ಚಾಂಪಿಯನ್‌ಶಿಪ್‌ನಲ್ಲಿ ಅವರು 6 ಸುತ್ತುಗಳಲ್ಲಿ 5.5 ಅಂಕಗಳನ್ನು ಗಳಿಸಿದರು ಮತ್ತು ಅವರ ತಂಡ 13ನೇ ಸ್ಥಾನವನ್ನು ಪಡೆದುಕೊಂಡಿತು. ವೈಯಕ್ತಿಕ ಚಾಂಪಿಯನ್‌ಶಿಪ್‌ನಲ್ಲಿ, ಸಮರ್ಥ್ 9 ಸುತ್ತುಗಳಲ್ಲಿ 7 ಅಂಕಗಳನ್ನು ಗಳಿಸಿ ಅಂತಿಮ ಶ್ರೇಯಾಂಕದಲ್ಲಿ 5ನೇ ಸ್ಥಾನವನ್ನು ಪಡೆದರು.

ಇದಲ್ಲದೆ, ಅವರು ಅತ್ಯುತ್ತಮ ವಿಶೇಷ ಸಾಮರ್ಥ್ಯವುಳ್ಳ ಆಟಗಾರನಿಗೆ ನೀಡಲಾಗುವ ಚಿನ್ನದ ಪದಕವನ್ನು ಗೆದ್ದಿದ್ದಾರೆ. ಸಮರ್ಥ್ ಅವರ ಈ ಸಾಧನೆಯು ಅವರ ಕಠಿಣ ಪರಿಶ್ರಮ ಮತ್ತು ಚೆಸ್ ಆಟದ ಬಗ್ಗೆ ಅವರ ಸಮರ್ಪಣೆಗೆ ಸಾಕ್ಷಿಯಾಗಿದೆ. ಅವರ ಈ ಯಶಸ್ಸು ಕರ್ನಾಟಕ ರಾಜ್ಯಕ್ಕೆ ಮತ್ತು ಪ್ರಾದೇಶಿಕ ಕ್ರೀಡಾ ಮಂಡಳಿ ಬೆಂಗಳೂರಿಗೆ ಹೆಮ್ಮೆ ತಂದಿದೆ.

Categories
ಚಿಕ್ಕಮಗಳೂರು ಜಿಲ್ಲಾ ವಾರ್ತೆ ಪ್ರಶಸ್ತಿ ಮಲ್ನಾಡ್

ಗೋಪಾಲ್ ಯಡಗೆರೆ ಅವರಿಗೆ ಸಾಹಿತ್ಯ ಸಿರಿ ಪ್ರಶಸ್ತಿ

ಗೋಪಾಲ್ ಯಡಗೆರೆ ಅವರಿಗೆ ಸಾಹಿತ್ಯ ಸಿರಿ ಪ್ರಶಸ್ತಿ
– ಫೆ. 21,22ರಂದು ನರಸಿಂಹರಾಜಪುರ 10ನೇ ಕನ್ನಡ ಸಾಹಿತ್ಯ ಸಮ್ಮೇಳನ
– ಪತ್ರಿಕರ್ತ, ಸಾಹಿತಿಯಾಗಿ ಮಲೆನಾಡಿಗೆ ಕೊಡುಗೆ ನೀಡಿರುವ ಗೋಪಾಲ್

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ನರಸಿಂಹರಾಜಪುರ: ನರಸಿಂಹರಾಜಪುರ ತಾಲ್ಲೂಕಿನ ಹತ್ತನೇ ಕನ್ನಡ ಸಾಹಿತ್ಯ ಸಮ್ಮೇಳನವು ಫೆಬ್ರವರಿ 21ರ ಶನಿವಾರ ಹಾಗೂ 22ರ ಭಾನುವಾರದಂದು ಬೆಳ್ಳೂರಿನಲ್ಲಿ ನಡೆಯಲಿದ್ದು, ಇದರ ಅಂಗವಾಗಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಕೊಡಮಾಡುವ ‘ಸಾಹಿತ್ಯ ಸಿರಿ’ ಪ್ರಶಸ್ತಿಗೆ ಈ ಬಾರಿ ಹಿರಿಯ ಪತ್ರಕರ್ತರು ಹಾಗೂ ಸಾಹಿತಿಗಳಾದ ಗೋಪಾಲ್ ಎಸ್. ಯಡೆಗೆರೆ ಅವರು ಭಾಜನರಾಗಿದ್ದಾರೆ.
ಗೋಪಾಲ್ ಎಸ್. ಯಡಗೆರೆ ಅವರು ಮೂಲತಃ ನರಸಿಂಹರಾಜಪುರ ತಾಲ್ಲೂಕಿನ ಯಡಗೆರೆಯವರಾಗಿದ್ದು, 1988 ರಲ್ಲಿ ಪತ್ರಿಕೋದ್ಯಮ ಕ್ಷೇತ್ರವನ್ನು ಪ್ರವೇಶಿಸಿ, ಉದಯವಾಣಿಯ ಶಿವಮೊಗ್ಗ ಜಿಲ್ಲಾ ಹಿರಿಯ ವರದಿಗಾರರಾಗಿ ಕರ್ತವ್ಯ ನಿರ್ವಹಿಸಿದ್ದು, ಪ್ರಸ್ತುತ ಶಿವಮೊಗ್ಗದ ಕನ್ನಡ ಪ್ರಭ ಪತ್ರಿಕೆಯ ವಿಶೇಷ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 2021ರಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿಯು ಸದಸ್ಯರನ್ನಾಗಿ ನೇಮಕ ಮಾಡಿತ್ತು. ಈಗಾಗಲೇ ಗೋಪಾಲ್ ಎಸ್ ಅವರ ನಾನಾಗದ ನಾನು ಎನ್ನುವ ಕವನಸಂಕಲನ ಮತ್ತು ಸೋಲನ್ನು ಸೋಲಿಸು ಹಾಗೂ ಮಿಸ್ಸಿಂಗ್ ಕಾಲ್ ಎನ್ನುವ ಕೃತಿಗಳನ್ನು ರಚಿಸಿದ್ದಾರೆ. ಗೋಪಾಲ್ ಎಸ್ ಅವರ ಲೇಖನಗಳು ಉದಯವಾಣಿ, ಕನ್ನಡ ಪ್ರಭ, ತರಂಗ,ತುಷಾರಗಳಲ್ಲಿ ಪ್ರಕಟಗೊಂಡಿವೆ. ಮಲೆನಾಡಿನ ಹಿರಿಯ ಪತ್ರಕರ್ತರಾಗಿದ್ದಾರೆ.

Categories
Uncategorized ಕಾರ್ಯಕ್ರಮಗಳು ಚಿಕ್ಕಮಗಳೂರು ತೀರ್ಥಹಳ್ಳಿ ಪ್ರಶಸ್ತಿ ಮಲ್ನಾಡ್ ವ್ಯವಹಾರ ಶಿವಮೊಗ್ಗ

ಸೆ.24ರಂದು ಪ್ರಾಥಮಿಕ ಶಾಲಾ ಶಿಕ್ಷಕರ ಸೌಹಾರ್ದ ಮಹಾಸಭೆ!

ಸೆ.24ರಂದು ಪ್ರಾಥಮಿಕ ಶಾಲಾ ಶಿಕ್ಷಕರ ಸೌಹಾರ್ದ ಮಹಾಸಭೆ!
– ಪ್ರತಿಭಾ ಪುರಸ್ಕಾರ-ಸನ್ಮಾನ ಕಾರ್ಯಕ್ರಮ: ಸರ್ವರಿಗೂ ಸ್ವಾಗತ
– ರಾಜ್ಯದ ಮೂಲೆ ಮೂಲೆಯಿಂದ ತೀರ್ಥಹಳ್ಳಿಗೆ ಶಿಕ್ಷಕರ ಆಗಮನ

NAMMUR EXPRESS NEWS
ತೀರ್ಥಹಳ್ಳಿ: ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸೌಹಾರ್ದ ಸಹಕಾರಿ ಸಂಘದಿಂದ ಸೆ. 24ರ ಬುಧವಾರ ಬೆಳಿಗ್ಗೆ 10 ಗಂಟೆಗೆ ಟಿಎಸ್‌ಟಿ ಕನ್ವೆನ್ನನ್ ಹಾಲ್ ಶಿಕ್ಷಕರ ಸೌಹಾರ್ದ ಭವನದಲ್ಲಿ 11ನೇ ಮಹಾಸಭೆ, ಪ್ರತಿಭಾ ಪುರಸ್ಕಾರ ಹಾಗೂ ನಿವೃತ್ತ ಶಿಕ್ಷಕರಿಗೆ ಸನ್ಮಾನಕಾರ್ಯ ಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಸಭೆಯನ್ನು ಎಂಎಡಿಬಿ ಅಧ್ಯಕ್ಷ ಆ‌ರ್.ಎಂ.ಮಂಜುನಾಥಗೌಡರು ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಶಾಸಕರಾದ ಆರಗ ಜ್ಞಾನೇಂದ್ರ, ಬೇಳೂರು ಗೋಪಾಲಕೃಷ್ಣ, ಮಾಜಿ ಸಚಿವ ಕಿಮ್ಮನೆ ರತ್ನಾಕ‌ರ್, ಶಿವಮೊಗ್ಗ ಹಾಲು ಒಕ್ಕೂಟದ ಅಧ್ಯಕ್ಷ ವಿದ್ಯಾಧರ್, ಕ.ರಾ.ಸೌ.ಸಂ.ಸ.ನಿ ಉಪಾಧ್ಯಕ್ಷ ಪ್ರಸನ್ನಕುಮಾ‌ರ್ ಎ.ಆರ್., ಮ್ಯಾಮ್ ಕೋಸ್ ಉಪಾಧ್ಯಕ್ಷ ಮಹೇಶ್ ಹುಲ್ಕುಳಿ,ಸಹ್ಯಾದ್ರಿ ವಿವಿಧೋದ್ದೇಶ ಸಹಕಾರಿಯ ಅಧ್ಯಕ್ಷ ಹೆಚ್‌.ಎನ್‌. ವಿಜಯದೇವ್, ಪ.ಪಂ.ಅಧ್ಯಕ್ಷ ರೆಹಮತ್ ಉಲ್ಲಾ ಅಸಾದಿ, ಉಪಾಧ್ಯಕ್ಷೆ ಗೀತಾ ರಮೇಶ್, ಕ.ರಾ.ಪ್ರಾ.ಶಾ.ಶಿ.ಸಂಘದ ಅಧ್ಯಕ್ಷ ಚಂದ್ರಶೇಖರ್ ನುಗ್ಗಲಿ, ಬೆಂಗಳೂರು ಕ.ರಾ. ಪ್ರಾ.ಶಾ.ಶಿ. ಸಂಘದ ಪ್ರಧಾನ ಕಾರ್ಯದರ್ಶಿ ಚೇತನ್ ಹೆಚ್.ಎಸ್., ಶಾ.ಶಿ.ಇಲಾಖೆ ಉಪನಿರ್ದೇಶಕರಾದ ಎಸ್.ಆರ್.ಮಂಜುನಾಥ್, ಕೃಷ್ಣಮೂರ್ತಿ ಹೆಚ್.ಆರ್., ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ರಮೇಶ್, ನಾಗೇಂದ್ರಪ್ಪ, ಗಣೇಶ್ ವೈ., ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರಾಘವೇಂದ್ರ ಎಸ್‌. ಪಾಲ್ಗೊಳ್ಳುವರು. ಕ.ರಾ.ಪ್ರಾ.ಶಾ.ಶಿ.ಸಂಘ ಸಹಕಾರಿ ನಿ., ತೀರ್ಥಹಳ್ಳಿಯ ಅಧ್ಯಕ್ಷ ಮಹಾಬಲೇಶ್ವರ ಹೆಗಡೆ ಅಧ್ಯಕ್ಷತೆ ವಹಿಸುವರು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಎಲ್ಲಾ ಜಿಲ್ಲೆಯ ಹಾಗೂ ಎಲ್ಲಾ ತಾಲ್ಲೂಕುಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಉಪಸ್ಥಿತರಿರುವರು.
ಸಮಾರಂಭಕ್ಕೆ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಮುಖ್ಯಕಾರ್ಯನಿರ್ವಹಣಾಧಿಕಾರಿ ಸ್ವಾಗತಿಸಿದ್ದಾರೆ.

Categories
ಉಡುಪಿ ಕರಾವಳಿ ಪ್ರತಿಭೆಗಳು ಪ್ರಶಸ್ತಿ ಮಂಗಳೂರು

ಉಡುಪಿಯ 1 ವರ್ಷದ ಮಗು ಸೂಪರ್ ಟ್ಯಾಲೆಂಟೆಡ್!

ಉಡುಪಿಯ 1 ವರ್ಷದ ಮಗು ಸೂಪರ್ ಟ್ಯಾಲೆಂಟೆಡ್!
– ಕಮಲಶಿಲೆ ಸುಧಾಕರ್, ಸುಚೇತ ದಂಪತಿ ಪುತ್ರಿ ರಿತನ್ಯಾ
– ‘ಸೂಪರ್ ಟ್ಯಾಲೆಂಟೆಡ್ ಕಿಡ್’ ಎಂಬ ಪ್ರತಿಷ್ಠಿತ ಬಿರುದು

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಉಡುಪಿ: ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬ ಕನ್ನಡದ ಪ್ರಸಿದ್ಧ ಗಾದೆಯೊಂದಿದೆ. ಇದನ್ನು ಸಾಮಾನ್ಯವಾಗಿ ಮಕ್ಕಳ ಮತ್ತು ದೈಹಿಕವಾಗಿ ಸಾಮಾನ್ಯರಂತೆ ಇಲ್ಲದೆ ತಮ್ಮ ಮಾನಸಿಕ ಸ್ಥೈರ್ಯದಿಂದ ಗೆದ್ದವರ ವಿಚಾರದಲ್ಲಿ ಈ ಮಾತನ್ನು ಹೆಚ್ಚಾಗಿ ಬಳಸಲಾಗುತ್ತದೆ. ಇದೀಗ ಈ ಗಾದೆಯನ್ನು ಅರ್ಥಪೂರ್ಣಗೊಳಿಸಿರುವ ಸಾಲಿಗೆ ರಿತನ್ಯಾ ಸೇರ್ಪಡೆಗೊಂಡಿದ್ದಾಳೆ.

ಕಮಲಶಿಲೆ ಎಂಬ ಪುಟ್ಟ ಗ್ರಾಮದ ಸುಧಾಕರ್ ಮತ್ತು ಸುಚೇತ ಅವರ ಮಗಳೇ ರಿತನ್ಯಾ. ವಯಸ್ಸು ಕೇವಲ ಒಂದು ವರ್ಷ ನಾಲ್ಕು ತಿಂಗಳು. ತನ್ನ ವಯಸ್ಸಿಗೂ ಮೀರಿದ ಭೌದ್ಧಿಕ ಸಾಮರ್ಥ್ಯ ಮತ್ತು ಮನೆಯಲ್ಲಿ ಬಳಸುವ ಎಲ್ಲಾ ವಸ್ತುಗಳ ಕುರಿತು ಅರಿವನ್ನು ಮೂಡಿಸಿಕೊಂಡು, ಅವುಗಳನ್ನು ಹೇಳುವ ಮುಖಾಂತರ ತನ್ನ ಪ್ರತಿಭೆಯನ್ನು ಪ್ರದರ್ಶಿಸಿದ್ದಾಳೆ. ಅಂದರೆ 21 ಜಾತಿಯ ಪಕ್ಷಿಗಳು, 28 ಪ್ರಾಣಿಗಳು, 15 ಮಾನವನ ದೇಹದ ಭಾಗಗಳು, 20 ಹಣ್ಣುಗಳು, 10 ಜಲಚರಗಳು, 6 ಕೀಟಗಳು, 23 ತರಕಾರಿಗಳು ಮತ್ತು 65ಕ್ಕೂ ಹೆಚ್ಚು ಗೃಹೋಪಯೋಗಿ ವಸ್ತುಗಳನ್ನು ಗುರುತಿಸುವಷ್ಟು ಚತುರೆಯಾಗಿದ್ದಾಳೆ.

ಈ ಹಿನ್ನೆಲೆಯಲ್ಲಿ ಅಂತರ್ ರಾಷ್ಟ್ರೀಯ ದಾಖಲೆಗಳ ಪುಸ್ತಕವು ರಿತನ್ಯಾಳಿಗೆ ‘ಸೂಪರ್ ಟ್ಯಾಲೆಂಟೆಡ್ ಕಿಡ್’ ಎಂಬ ಪ್ರತಿಷ್ಠಿತ ಬಿರುದನ್ನು ನೀಡಿದ್ದಲ್ಲದೆ, ‘ಒಂದು ಮಿಲಿಯನ್ ನಲ್ಲಿ ಒಂದು’ ಎನ್ನುವ ಹೆಸರಿನ ಪ್ರಶಸ್ತಿಯನ್ನು ನೀಡಿ, ದಾಖಲೆ ಪುಸ್ತಕದಲ್ಲಿ ಈಕೆಯ ಹೆಸರನ್ನು ನಮೂದಿಸಿದೆ.

Categories
ಪ್ರಶಸ್ತಿ

ಮಕ್ಕಳ ಸೇವಾ ಕ್ಷೇತ್ರದ ಸಾಧನೆಗೆ ಸುದರ್ಶನ್ ತಾಯಿಮನೆಗೆ ರಾಜ್ಯ ಪ್ರಶಸ್ತಿ

ಮಕ್ಕಳ ಸೇವಾ ಕ್ಷೇತ್ರದ ಸಾಧನೆಗೆ ಸುದರ್ಶನ್ ತಾಯಿಮನೆಗೆ ರಾಜ್ಯ ಪ್ರಶಸ್ತಿ
– ಬೆಂಗಳೂರಲ್ಲಿ ಇಂದು ಪ್ರಶಸ್ತಿ ಪ್ರದಾನ: ಶುಭಾಶಯಗಳು
– ಮಕ್ಕಳ ಸೇವೆ, ಶಿಕ್ಷಣಕ್ಕೆ ದಶಕಗಳ ಕಾಲ ಸೇವೆ

NAMMUR EXPRESS NEWS
ತೀರ್ಥಹಳ್ಳಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕರ್ನಾಟಕ ಸರ್ಕಾರದಿಂದ ನೀಡಲಾಗುವ 2024-25ನೇ ಸಾಲಿನ “ರಾಜ್ಯ ಪ್ರಶಸ್ತಿಗೆ”ಮಕ್ಕಳ ಕ್ಷೇತ್ರದಲ್ಲಿ ಹಲವಾರು ವರ್ಷಗಳಿಂದ ಅವಿಸ್ಮರಣೀಯ ಸೇವೆ ಸಲ್ಲಿಸುತ್ತಿರುವ ಸುದರ್ಶನ್ ತಾಯಿಮನೆ ಇವರು ಭಾಜನರಾಗಿದ್ದು, ಬೆಂಗಳೂರಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ವಿತರಣೆ ಮಾಡಲಾಗುತ್ತಿದೆ. ತಾಯಿಮನೆ ಆಶ್ರಮದ ಮೂಲಕ ನೂರಾರು ಅನಾಥ ಮಕ್ಕಳಿಗೆ ಆಶ್ರಯ, ಶಿಕ್ಷಣ ನೀಡಿದ ಸೇವಕನಿಗೆ ಪ್ರಶಸ್ತಿ ಸಿಕ್ಕಿರುವುದು ಮಲೆನಾಡಲ್ಲಿ ಸಂತಸ ತಂದಿದೆ.

ನಮ್ಮೂರ್ ಎಕ್ಸ್ ಪ್ರೆಸ್ ವತಿಯಿಂದ ಶುಭಾಶಯಗಳು

Categories
ಪ್ರಶಸ್ತಿ

ಆರೋಗ್ಯ ಜ್ಯೋತಿ ಅವಾರ್ಡ್ಸ್‌ ಕರ್ನಾಟಕ -2024 ಪ್ರಶಸ್ತಿ

ಆರೋಗ್ಯ ಜ್ಯೋತಿ ಅವಾರ್ಡ್ಸ್‌ ಕರ್ನಾಟಕ -2024 ಪ್ರಶಸ್ತಿ
– ಅರೋಗ್ಯ ಕ್ಷೇತ್ರಗಳ ವಿವಿಧ ವಿಭಾಗಗಳ ಸಾಧಕರನ್ನು ಗುರುತಿಸಿ ಗೌರವ
– ಗಣ್ಯರ ಉಪಸ್ಥಿತಿಯಲ್ಲಿ 100ಕ್ಕೂ ಹೆಚ್ಚು ಸಾಧಕರಿಗೆ ಪ್ರಶಸ್ತಿ ಪ್ರದಾನ

NAMMUR EXPRESS NEW
ಬೆಂಗಳೂರು: ಸದಾ ಸಮಾಜಮುಖಿ ಸೇವೆಯಲ್ಲಿ ತೊಡಗಿಕೊಂಡಿರುವ ಪ್ರತಿಷ್ಠಿತ ಬೆಂಗಳೂರಿನ ರಾಘವಿ ಚಾರಿಟೇಬಲ್‌ ಟ್ರಸ್ಟ್‌ ಮತ್ತು ಸೇವಾ ಫೌಂಡೇಶನ್‌ ಮಾಲೀಕ ರಾಘವೇಂದ್ರ ಸುಂಟ್ರಹಳ್ಳಿ ಹಾಗೂ ಶ್ರೀ ಲಕ್ಷ್ಮೀ ಗ್ರೂಪ್‌ ಆಫ್ ಆಸ್ಪತ್ರೆಗಳು ಹಾಗೂ ಇನ್ನಿತರ ವೈದ್ಯಕೀಯ ಹಲವು ಸಂಸ್ಥೆಗಳ ಸಹಭಾಗಿತ್ವದಲ್ಲಿ ಆರೋಗ್ಯ ಕ್ಷೇತ್ರಗಳಲ್ಲಿನ ವಿವಿಧ ವಿಭಾಗಗಳ ಸಾಧಕರನ್ನು ಗುರುತಿಸಿ ನ.24 ರಂದು ಬೆಂಗಳೂರು ನಗರದ ಗಾಂಧಿ ಭವನದಲ್ಲಿ ಬೆಳಗ್ಗೆ10 ಗಂಟೆಗೆ ಆರೋಗ್ಯ ಜ್ಯೋತಿ ಅವಾರ್ಡ್ಸ್‌ ಕರ್ನಾಟಕ -2024 ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಿತು. ಪ್ರಶಸ್ತಿ ಪ್ರದಾನವೂ ರಾಜ್ಯದಲ್ಲಿರುವ ಆಸ್ಪತ್ರೆಗಳಲ್ಲಿ 30ಕ್ಕೂ ಹೆಚ್ಚು ವಿಭಾಗದ ಸಿಬ್ಬಂದಿ ವರ್ಗಗಳ ವಿನೂತನ ಕಾರ್ಯಕ್ರಮ ಜರುಗಿದ್ದು, ಇದರಲ್ಲಿ ವಿಶೇಷವಾಗಿ ಆಯಮ್ಮಂದಿರು, ವಾರ್ಡ್‌ ಬಾಯ್‌, ಸೇರಿದಂತೆ ನರ್ಸಿಂಗ್‌, ಪ್ಯಾರಾ ಮೆಡಿಕಲ್‌ ಸಪೋರ್ಟಿಂಗ್‌ ಸ್ಟಾಪ್‌ , ಟೆಕ್ನಿಕಲ್‌ ಸ್ಟಾಫ್ ಹಾಗೂ ವೈದ್ಯರು ಸೇರಿದಂತೆ ಎಲ್ಲಾ ವಿಭಾಗಗಳನ್ನು ಗುರುತಿಸುವ ಬಹುದೊಡ್ಡ ಕಾರ್ಯಕ್ರಮ ನಡೆಸಲಾಯಿತು.

ಹಳ್ಳಿಯಿಂದ ಬಂದ ರಾಘವೇಂದ್ರ ಸುಂಟ್ರಹಳ್ಳಿ ಅವರ ಸಾಧನೆ ಹಾದಿ!

ರಾಘವೇಂದ್ರ ಸುಂಟ್ರಹಳ್ಳಿ, ಚಂದ್ರಗುತಿ ಹೋಬಳಿ,ಸೊರಬ ತಾಲೂಕು, ಶಿವಮೊಗ್ಗ ಜಿಲ್ಲಾ, ಒಬ್ಬ ಹಳ್ಳಿ ಹುಡುಗ ಬೆಂಗಳೂರು ಆಸ್ಪತ್ರೆಯಲ್ಲಿ ಉದ್ಯೋಗ ಮಾಡಿಕೊಂಡು,ಹಲವಾರು ಸಾಮಾಜಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು,ರಾಜ್ಯದಲ್ಲಿ ಎಲ್ಲಾ ಜಿಲ್ಲೆಗಳಿಗೂ ಭೇಟಿಯಾಗಿ ಹಲವಾರು ಸಾಮಾಜಿಕ ಕಾರ್ಯಗಳನ್ನು ಮಾಡಿಕೊಂಡು ಬಂದಿದ್ದಾರೆ. ಅದೇ ರೀತಿ ಆರೋಗ್ಯ ಕ್ಷೇತ್ರದಲ್ಲಿ ಹಲವಾರು ಉಚಿತ ಶಿಬಿರಗಳನ್ನು ಮಾಡುವುದರೊಂದಿಗೆ ರೋಗಿಗಳಿಗೆ ಸಹಕಾರ ಮಾಡಿದ್ದಾರೆ.

ಅರೋಗ್ಯ ಕ್ಷೇತ್ರದಲ್ಲಿ ಸೇವೆ ಮಾಡಿದವರಿಗೆ ಪ್ರಶಸ್ತಿ

ಆರೋಗ್ಯ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುವ ರಾಜ್ಯದಲ್ಲಿರುವ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಯ ಸಿಬ್ಬಂದಿಗಳಿಗಾಗಿ ರಾಘವಿ ಚಾರಿಟೇಬಲ್ ಟ್ರಸ್ಟ್ ಮತ್ತು ಸೇವಾ ಫೌಂಡೇಶನ್ ಮುಖೇನ ಆರೋಗ್ಯ ಜ್ಯೋತಿ ಅವಾರ್ಡ್ 2024 ಸುಮಾರು ನೂರಕ್ಕೂ ಹೆಚ್ಚು ಅವಾರ್ಡ್ ಗಳನ್ನ ಆನ್ಲೈನ್ ಅಪ್ಲಿಕೇಶನ್ ಮುಖಾಂತರ ಗುರುತಿಸಿ ಗೌರವಿಸಲಾಯಿತು.
ಪೂಜ್ಯ ಗುರುಗಳಾದ ಯೋಗೇಂದ್ರ ಶ್ರೀಗಳು,ಸಾಗರದ ಶಾಸಕರಾದ ಬೇಳೂರು ಗೋಪಾಲಕೃಷ್ಣ,ಸಚಿವರಾದ ದಿನೇಶ್ ಗುಂಡೂರಾವ್, ಪ್ರಿಯಾಂಕ ಉಪೇಂದ್ರ, ಕಾರುಣ್ಯ ರಾಮ್ , ಶ್ರೀ ಲಕ್ಷ್ಮಿ ಗ್ರೂಪ್ ಆಫ್ ಆಸ್ಪತ್ರೆಯ ಮಾಲೀಕರಾದ ಡಾ. ಸಾಂಬಶಿವ,ಡಿ ಜಯಮಾಲಾ ರವರು, ಇನ್ನು ಹಲವು ಗಣ್ಯ ವ್ಯಕ್ತಿಗಳ ಉಪಸ್ಥಿತಿಯಲ್ಲಿ ಅತ್ಯಂತ ಯಶಸ್ವಿನಿಂದ ಕಾರ್ಯಕ್ರಮ ಜರುಗಿತು.

Categories
ಪ್ರಶಸ್ತಿ

ಎಸ್.ಎನ್.ವಿಶ್ವನಾಥ್ ಅವರಿಗೆ “ಸಹಕಾರ ರತ್ನ” ಪ್ರಶಸ್ತಿ

ಎಸ್.ಎನ್.ವಿಶ್ವನಾಥ್ ಅವರಿಗೆ “ಸಹಕಾರ ರತ್ನ” ಪ್ರಶಸ್ತಿ

– 71ನೇ ಅಖಿಲ ಭಾರತ ಸಹಕಾರ ಸಪ್ತಾಹದ ಸಮಾರಂಭ
– ಸಹಕಾರ ಕ್ಷೇತ್ರದ ಅನುಪಮ ಸೇವೆಗೆ “ಸಹಕಾರ ರತ್ನ” ಪ್ರಶಸ್ತಿ ಗೌರವ

ಶುಭಾಶಯಗಳು

ಹಿಮಗಿರಿ ಸೌಹಾರ್ದ ಸಹಕಾರ ನಿಯಮಿತ, ಕೊಪ್ಪ

71ನೇ ಅಖಿಲ ಭಾರತ ಸಹಕಾರ ಸಪ್ತಾಹದ ಸಮಾರಂಭವು ನ.17 ರಂದು ಭಾನುವಾರ ಬೆಳಗ್ಗೆ 10.00ಗಂಟೆಗೆ ಹುಬ್ಬಳ್ಳಿ ಬೈಪಾಸ್ ರಸ್ತೆ, ತೋಟಗಾರಿಕಾ ವಿಶ್ವವಿದ್ಯಾಲಯ ಪಕ್ಕದ ಮೈದಾನ, ನವನಗರ, ಬಾಗಲಕೋಟಿಯಲ್ಲಿ ಆಯೋಜಿಸಲಾಗಿದೆ.
ಹಿಮಗಿರಿ ಸೌಹಾರ್ದ ಸಹಕಾರ ನಿಯಮಿತ ಕೊಪ್ಪದ ಅಧ್ಯಕ್ಷರಾದ ಎಸ್ ಎನ್ ವಿಶ್ವನಾಥ್ ಅವರು ಕರ್ನಾಟಕ ರಾಜ್ಯ ಸಹಕಾರ ಚಳುವಳಿಯಲ್ಲಿ ಮತ್ತು ಸಹಕಾರ ಕ್ಷೇತ್ರಕ್ಕೆ ಅನುಪಮ ಸೇವೆಯನ್ನು ಸಲ್ಲಿಸಿದ್ದು,ಕರ್ನಾಟಕ ರಾಜ್ಯ ಸಹಕಾರ ಚಳುವಳಿಯು ಈ ಸೇವೆಯನ್ನು ಗುರುತಿಸಿ, ಇವರಿಗೆ “ಸಹಕಾರ ರತ್ನ” ಪ್ರಶಸ್ತಿ ಪ್ರದಾನ ಮಾಡಿ, ಗೌರವಿಸಲು ಕರ್ನಾಟಕ ಸರ್ಕಾರವು ತೀರ್ಮಾನಿಸಿದೆ.

ಹಾರ್ದಿಕ ಶುಭಾಶಯ ಕೋರುವರು

ರಾಮಸ್ವಾಮಿ ಶೆಟ್ಟಿಗದ್ದೆ, ಉಪಾಧ್ಯಕ್ಷರು
ವಿಕಾಸ್ ಬೇಗಾನೆ, ನಿರ್ದೇಶಕರು
ಅಜಿತ್ ಕಲ್ಕುಳಿ, ನಿರ್ದೇಶಕರು

ಮತ್ತು ಸಿಬ್ಬಂದಿ ವರ್ಗದವರು.

Categories
ಪ್ರಶಸ್ತಿ

ನೇರಳಕಟ್ಟೆಯ ಹೆಮ್ಮೆಯ ಕಲಾವಿದರು ರವಿರಾಜ್ ಶೆಟ್ಟರು!!

ನೇರಳಕಟ್ಟೆಯ ಹೆಮ್ಮೆಯ ಕಲಾವಿದರು ರವಿರಾಜ್ ಶೆಟ್ಟರು!!

* ನಮ್ಮ ಸಂಸ್ಕೃತಿ, ಪರಂಪರೆ, ಸಂಪ್ರದಾಯವನ್ನು ಉಳಿಸಿ ಬೆಳೆಸುತ್ತಿರುವ ಕಲಾವಿದ!
* ಯಕ್ಷಗಾನ ಕ್ಷೇತ್ರ ಭಜನಾ ಕ್ಷೇತ್ರಗಳಲ್ಲಿ ಬೇರೆ ಬೇರೆ ಸಂಘಟನೆಗಳಿಂದ ಸನ್ಮಾನ!

NAMMUR EXPRESS NEWS
ಭೂಮಿ ಮೇಲಿನ ಪ್ರತಿಯೊಬ್ಬ ವ್ಯಕ್ತಿಗೂ ತಾನು ಜೀವನದಲ್ಲಿ ಏನನ್ನಾದರೂ ಸಾಧನೆ ಮಾಡಬೇಕು ಎನ್ನುವ ಮಹತ್ತರ ಕನಸು ಕೂಡ ಇರುತ್ತದೆ. ಆದರೆ, ಜವಾಬ್ದಾರಿಗಳು ಆ ಕನಸಿನ ಹಾದಿಗೆ ಅಡ್ಡಗೋಡೆಯಾಗಿ ನಿಂತು ಬಿಟ್ಟಿರುತ್ತದೆ. ಇಂತದ್ದೇ ಸಾಧನೆಯ ಕನಸು ಹೊತ್ತು ಹಳ್ಳಿಗಾಡಿನ ಪ್ರದೇಶದಲ್ಲಿ ಇದ್ದು ಸ್ವ- ಪ್ರಯತ್ನದಿಂದ ಮೇಲೆದ್ದು ಬಂದ ಯುವಕ  ರವಿರಾಜ್. ಶೆಟ್ಟಿ ಅಸೋಡಿಯ ಜೀವನದ ಕಥೆಯಾಗಿದೆ.ನೇರಳಕಟ್ಟೆ ಗುಡ್ರಿಯ ಕೊರಗಯ್ಯ ಶೆಟ್ಟಿ ಹಾಗೂ ಮೂಕಾಂಬಿಕಾ  ಶೆಟ್ಟಿ ದಂಪತಿಯ ಐದು ಜನ ಮಕ್ಕಳಲ್ಲಿ ರವಿರಾಜ್ ಶೆಟ್ಟಿಯವರು ಕೊನೆಯವರು. ಪದವಿವರೆಗೆ ವ್ಯಾಸಂಗ ಮಾಡಿದ್ದು, ಪ್ರಸ್ತುತ ಗುರುಕುಲ ವಿದ್ಯಾಸಂಸ್ಥೆ ವಕ್ವಾಡಿ ಕೋಟೇಶ್ವರದಲ್ಲಿ ಉದ್ಯೋಗಿಯಾಗಿದ್ದು. ಸಣ್ಣ ವಯಸ್ಸಿನಿಂದಲೂ ಭಜನೆ, ನಾಟಕ, ಯಕ್ಷಗಾನ ಅಂದರೆ ಸೆಳೆತ. ಅಪಹಾಸ್ಯದ ಮಾತುಗಳಿಂದ ಛಲ ಬಿಡದ ಶೆಟ್ಟರು ನೆಂಪು ಕಾಲೇಜು ದಿನಗಳಲ್ಲಿ ನೇರಳಕಟ್ಟೆಯ ರಾಘವೇಂದ್ರ ಉಡುಪ ಸರ್ ರವರ ಸಹಕಾರದಿಂದ
ಶ್ರೀ ಯಕ್ಷಭಾರತಿ ಸಾಂಸ್ಕೃತಿಕ ಕಲಾಕೇಂದ್ರ ವಂಡ್ಸೆ (ನೆಂಪು). ಈ ಟ್ರಸ್ಟ್ ನ ಮೂಲಕ ಬೈಲೂರು ಸುಬ್ರಮಣ್ಯ ಐತಾಳ್ ಗುರುಗಳಾಗಿ ಪಡೆದು ಪ್ರಥಮ ರಂಗ ಪ್ರವೇಶವನ್ನು ಮಾಡುತ್ತಾರೆ. ನಂತರ ದಿನಗಳಲ್ಲಿ ಹವ್ಯಾಸಿ ಯಕ್ಷ ಕಲಾ ಬಳಗ ನಾಯಕವಾಡಿ – ಗುಜ್ಜಾಡಿಯಲ್ಲಿ ಹೆಮ್ಮಾಡಿ ರಾಮಚಂದ್ರ ಭಟ್ ರಿಂದ ಯಕ್ಷಗಾನ ಹೆಜ್ಜೆ ಕಲಿತು  ಪುರುಷ ಪಾತ್ರಗಳಾದ  ಅಕ್ರೂರ, ಈಶ್ವರ, ಮಂತ್ರಿ, ನಾರದ, ರಾಜನ ವೇಷ ಹೀಗೆ ಸಾತ್ವಿಕ ಪಾತ್ರ ಪೋಷಣೆಯನ್ನು ಮಾಡುತ್ತ, ಹಾಸ್ಯದ ಪಾತ್ರಗಳಾದ  ದಾರುಕ, ದೂತ ಪಾತ್ರಗಳನ್ನು ನಿರ್ವಹಿಸುತ್ತಾರೆ.
ತನ್ನ ಮನೆಯಲ್ಲಿ ಪೂರ್ವಜರು ಮಾಡಿಕೊಂಡು ಬಂದಿರುವ ಸಂಪ್ರದಾಯಬದ್ಧ ವದಂತಹ ಕುಳಿತು ಭಜನೆ ತನ್ನ ಸಂಬಂಧಿಕರ ಅಣ್ಣನಾಗಿರುವ ಭಾಸ್ಕರ್ ಶೆಟ್ಟಿಯವರಿಂದ ಕಲಿತು- ದಿನಾಂಪ್ರತಿ ಇವಾಗಲು ಸಹ ಮನೆಯಲ್ಲಿ ಸಂಜೆಯ ಹೊತ್ತಿನಲ್ಲಿ ಭಜನೆ ಮಾಡುತ್ತಾರೆ. ತದ ನಂತರ ಬೆಳ್ಳಾಲ ಭಜನೆ ತಂಡದವರಿಂದ ಕುಣಿತ ಭಜನೆಯನ್ನು ಕಲಿತು. ಪ್ರಸ್ತುತವಾಗಿ ಕುಂದಾಪುರ ತಾಲ್ಲೂಕು ಭಜನಾ ಒಕ್ಕೂಟದ ಸಂಘಟನಾ ಕಾರ್ಯದರ್ಶಿಯಾಗಿ ಸಹ ಕಾರ್ಯನಿರ್ವಹಿಸುತ್ತಿದ್ದಾರೆ. ಕಾಲಕ್ರಮೇಣವಾಗಿ 11 ವರ್ಷಗಳಿಂದ ಶ್ರೀ ಸ್ವಾಮಿ ಭಜನಾ ಮಂಡಳಿ ಹಂದಕುಂದ ನೇರಳಕಟ್ಟೆ. ಈ ತಂಡದ ಒಬ್ಬ ಕಿರಿಯ ವಯಸ್ಸಿನಲ್ಲೇ ಸುಶ್ರಾವ್ಯ ಕಂಠದ ಏರು ಶ್ರುತಿಯ ಭಜಕನಾಗಿ, ಶ್ರೀ ರಾಮನ ಶ್ಲೋಕದ ಮೂಲಕ ಜನ ಮನ್ನಣೆಯನ್ನು ಗಳಿಸಿದ್ದಾರೆ. ಈ ತನ್ನ ಭಜನೆಯ ಪ್ರೋತ್ಸಾಹಕ್ಕೆ ತನ್ನ ಹಂದಕುಂದ ಭಜನೆತಂಡದ ಸರ್ವಭಜನೆ ಕಲಾವಿದರನ್ನು, ಬೆಳ್ಳಾಲ ಭಜನೆ ತಂಡ ,ದೇವಲ್ಕುಂದ ಭಜನೆ ತಂಡ , ಕುಳ್ಳಂಬಳ್ಳಿ ಭಜನೆ ತಂಡ , ಕೆರಾಡಿ, ಮೋರ್ಟ್ ಭಜನೆ ತಂಡ,ಜಾಡ್ಕಟ್ಟು ಭಜನೆ ತಂಡ  ಹಾಗೂ ಕುಂದಾಪುರ ತಾಲೂಕು ಭಜನೆ ಒಕ್ಕೂಟದವರನ್ನು ಸಹ ಕಾರಣಿ ಕರ್ತರು ಎನ್ನುತ್ತಾರೆ.
ಇವೆಲ್ಲದರ ನಡುವೆಯೂ ಶೆಟ್ಟರು 2018 ರಲ್ಲಿ ಯಕ್ಷಗಾನ ಪ್ರಸಂಗದ ಕಥೆಯನ್ನು ರಚಿಸಿ, ಸೌಕೂರು ಮೇಳದಲ್ಲಿ ಕೋಡಿ ವಿಶ್ವನಾಥ ಗಾಣಿಗರ ಸoಯೋಜನೆಯಲ್ಲಿ ಶಾಂತವಾಸುದೇವ ಪೂಜಾರಿ ಆನಗಳ್ಳಿ ಸಹಕಾರದಿಂದ “ಮಾತಾoತರಂಗ” ಪ್ರಸಂಗದ ಮೂಲಕ 100 ರ ಮೇಲೆ ಪ್ರಯೋಗ ಕಂಡು ರಾಜ್ಯವ್ಯಾಪಿ ಪ್ರದರ್ಶನ ಕಂಡು ಯಕ್ಷಾಭಿಮಾನಿಗಳ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ನಂತರ “ಜನ್ಮದಾತೆ” ಪ್ರಸಂಗವನ್ನು ಕೂಡ ಸೌಕೂರು ಮೇಳಕ್ಕೆ ನೀಡಿರುತ್ತಾರೆ. ಮುಂದಿನ ದಿನಗಳಲ್ಲಿ ಇವರ ಕಥಾ ಹಂದರದ “ತುಳಸಿ-ವೇದ ವಿಲಾಸ”, “ಸತ್ಯ ಚಂದ್ರಮ” ಎಂಬ ಪ್ರಸಂಗವು ಕೂಡ ಪ್ರದರ್ಶನ ಕಾಣಲಿದೆ. ವೇದಿಕೆಯ ಕಾರ್ಯಕ್ರಮಗಳಾದ ನಿರೂಪಣೆ, ಸನ್ಮಾನ ಪತ್ರಗಳ ವಾಚನೆ, 89.5 FM ರೇಡಿಯೋ ಕುಂದಾಪುರ ಕಾರ್ಯಕ್ರಮಗಳಲ್ಲೂ ಭಾಗವಹಿಸುವ ಕಲಾವಿದರಾಗಿದ್ದಾರೆ.ಕ್ರೀಡಾ ಕ್ಷೇತ್ರದಲ್ಲೂ ಕೂಡ ಇರುವ ಇವರು. ಜೊತೆಗೆ ಸಾಮಾಜಿಕ ಜಾಲತಾಣಗಳ ಮೂಲಕ ಅನೇಕ ಯಕ್ಷಗಾನ ಕಲಾವಿದರುಗಳನ್ನು ಹಾಗೇ ಬೇರೆ ಬೇರೆ ಕಲೆಯಲ್ಲಿ ಇರುವ ಕಲಾವಿದರುಗಳನ್ನು ಗುರುತಿಸಿ, ಪ್ರಚಾರಕ್ಕೆ ತರುವ ಮೂಲಕ ಕಲೆಯನ್ನು,ಕಲಾವಿದರನ್ನು ಉನ್ನತವಾದ ಮಟ್ಟಕ್ಕೆ ತರುವಲ್ಲಿ ಶ್ರಮಿಸುತ್ತಿರುವ ವ್ಯಕ್ತಿಯಾಗಿದ್ದಾರೆ. ಸಕಲ ಕಲೆಯನ್ನು ಪರಂಗತ ಮಾಡಿಕೊಂಡು “ಕಲಾ ಚಿಂತಕ” ರಾಗಿ ಗುರುತಿಸಿಕೊಂಡಿದ್ದಾರೆ.
ತನ್ನ ಕೈಯಲ್ಲಿ ಆದಷ್ಟು ಯಕ್ಷಗಾನ ಕಾರ್ಯಕ್ರಮಗಳಿಗೆ  ಹಾಗೂ ಅನಾಥಾಶ್ರಮಗಳಿಗೆ ಧನ ಸಹಾಯವನ್ನು ಮಾಡಿದ್ದಾರೆ, ಮಾಡುತ್ತಿದ್ದಾರೆ. ತಮ್ಮ ಪ್ರೋತ್ಸಾಹಕ್ಕೆ ಶೆಟ್ಟರು ಮುಖ್ಯವಾಗಿ ಮನೆಯವರು, ಊರಿನವರ ಸಹಕಾರವನ್ನು ನೆನೆಯುತ್ತಿರುತ್ತಾರೆ. ಹಾಗೆಯೇ  ನಮ್ಮ ಸಂಸ್ಕೃತಿ, ಪರಂಪರೆ, ಸಂಪ್ರದಾಯವನ್ನು ಎತ್ತಿ ಹಿಡಿಯುವ ಇವರಿಗೆ ಈಗಾಗಲೇ ಯಕ್ಷಗಾನ ಕ್ಷೇತ್ರ ಭಜನಾ ಕ್ಷೇತ್ರಗಳಲ್ಲಿ ಬೇರೆ ಬೇರೆ ಸಂಘಟನೆಗಳಿಂದ ಸನ್ಮಾನ ಆಗಿದ್ದು, ಮುಂದಿನ ದಿನಗಳಲ್ಲಿ ಕಲಾ ಕ್ಷೇತ್ರದಲ್ಲಿ ಇನ್ನಷ್ಟು ಹೊಸ ತನವನ್ನು ಮಾಡುವoತಾಲಿ, ಇನ್ನಷ್ಟು ಪ್ರಶಸ್ತಿ, ಪುರಸ್ಕಾರಗಳು ದೊರೆಯಲಿ ಎಂದು ಈ ಮೂಲಕ ಶುಭ ಹಾರೈಸುತ್ತಿದ್ದೇವೆ.