ಕರಾವಳಿ ಟಾಪ್ ನ್ಯೂಸ್
•ಉಳ್ಳಾಲ: ದಕ್ಷಿಣ ಕನ್ನಡ ಜಿಲ್ಲೆಯ ತಾಲ್ಲೂಕುಗಳಿಗೆ ರಜೆ ಘೋಷಣೆ
•ಬಂಟ್ವಾಳ: ಕಂಗೊಳಿಸುತ್ತಿದೆ ನವೀಕರಣಗೊಂಡ ರೈಲ್ವೆ ನಿಲ್ದಾಣ
•ಮಂಗಳೂರು: ಕಳಸದ ಮರು ಸ್ಥಾಪನೆ.
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
•ಉಳ್ಳಾಲ: ದಕ್ಷಿಣ ಕನ್ನಡ ಜಿಲ್ಲೆಯ ತಾಲ್ಲೂಕುಗಳಿಗೆ ರಜೆ ಘೋಷಣೆ
ಉಳ್ಳಾಲ: ಕಳೆದೆರಡು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯ ಹಿನ್ನೆಲೆಯಲ್ಲಿ, ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ಸೇರಿದಂತೆ ಪುತ್ತೂರು, ಮೂಲ್ಕಿ, ಮೂಡಬಿದರೆ ಹಾಗೂ ಬಂಟ್ವಾಳ ತಾಲ್ಲೂಕಿನ ಅಂಗನವಾಡಿ, ಶಾಲಾ ಕಾಲೇಜುಗಳಿಗೆ ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ರಜೆಯನ್ನು ಘೋಷಿಸುವಂತೆ, ಆಯಾ ತಾಲ್ಲೂಕಿನ ತಹಶೀಲ್ದಾರರು ಆದೇಶಿಸಿದ್ದಾರೆ. ಮಳೆಯು ಹೆಚ್ಚಾಗಿರುವ ಕಾರಣ ಹವಾಮಾನ ಇಲಾಖೆಯು ಆರೆಂಜ್ ಅಲರ್ಟ್ ಅನ್ನು ಘೋಷಿಸಿದೆ. ಅಲ್ಲದೆ ಪೋಷಕರಿಗೆ ಮಕ್ಕಳು ಸಮುದ್ರ ತೀರ, ತಗ್ಗು ಪ್ರದೇಶ ಮತ್ತು ನದಿಯ ತೀರದ ಸಮೀಪಕ್ಕೆ ತೆರಳದಂತೆ ನೋಡಿಕೊಳ್ಳಿ ಎಂದು ಹಾಗೂ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆಯನ್ನು ನೀಡಿದ್ದಾರೆ. ಈ ಸಂದರ್ಭದಲ್ಲಿ ತಾಲ್ಲೂಕು ಮಟ್ಟದ ಕೇಂದ್ರ ಕಚೇರಿಗಳಲ್ಲಿ ಅಧಿಕಾರಿಗಳು ಕಡ್ಡಾಯವಾಗಿ ಕರ್ತವ್ಯದಲ್ಲಿ ಇರಬೇಕೆಂದು ಹಾಗೂ ವಿವಿಧ ಸಂಬಂಧಿತ ಹುದ್ದೆಗಳಿಗೆ, ಜಿಲ್ಲಾಡಳಿತದಿಂದ ನೇಮಕಗೊಂಡಿರುವ ನೋಡಲ್ ಅಧಿಕಾರಿಗಳು ಸಾರ್ವಜನಿಕರ ದೂರುಗಳಿಗೆ ಸ್ಪಂದಿಸಬೇಕು ಎಂಬ ಸೂಚನೆಯನ್ನು ಸಹ ನೀಡಲಾಗಿದೆ.
• ಬಂಟ್ವಾಳ: ಕಂಗೊಳಿಸುತ್ತಿದೆ ನವೀಕರಣಗೊಂಡ ರೈಲ್ವೆ ನಿಲ್ದಾಣ
ಬಂಟ್ವಾಳ: ಕಳೆದ ವರ್ಷ ಫೆಬ್ರವರಿ ತಿಂಗಳಲ್ಲಿ ಪ್ರಧಾನಮಂತ್ರಿಗಳು ವರ್ಚುವಲ್ ಮುಖಾಂತರ, ಶಿಲಾನ್ಯಾಸವನ್ನು ನೆರವೇರಿಸಿದ್ದ ಬಂಟ್ವಾಳ ರೈಲ್ವೆ ನಿಲ್ದಾಣವು, ನವೀಕರಣಗೊಂಡು ಉದ್ಘಾಟನೆಗೆ ಸಜ್ಜಾಗಿದೆ. ಅಮೃತ್ ಭರತ್ ಯೋಜನೆ ಅಡಿಯಲ್ಲಿ, ಸುಮಾರು 28.49 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ಬಂಟ್ವಾಳ ರೈಲ್ವೆ ನಿಲ್ದಾಣವು, ಸುಸಜ್ಜಿತವಾದ ದ್ವಿಪಥ ರಸ್ತೆ, ಉದ್ಯಾನ, ದ್ವಿಚಕ್ರ ವಾಹನಗಳು, ಕಾರ್ ಗಳು ಮತ್ತು ಆಟೋಗಳ ನಿಲುಗಡೆಗೆ ಆಧುನಿಕ ಸ್ಪರ್ಶವನ್ನೊಳಗೊಂಡ ಪ್ರತ್ಯೇಕ ವ್ಯವಸ್ಥೆ, ನವೀನ ಮಾದರಿಯ ಬೀದಿ ದೀಪಗಳು, ವಿಸ್ತಾರವಾದ ಪ್ಲಾಟ್ ಫಾರ್ಮ್ ಗಳನ್ನು ಹೊಂದಿದೆ. ಈಗಾಗಲೇ ಡಿಆರ್ ಎಂ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ರೈಲ್ವೆ ನಿಲ್ದಾಣಕ್ಕೆ ಆಗಮಿಸಿ, ಕಾಮಗಾರಿಯ ಕುರಿತು ಪರಿಶೀಲನೆ ನಡೆಸಿದ್ದಾರೆ. ಕಾಮಗಾರಿಯೂ ಬಹುತೇಕ ಪೂರ್ಣಗೊಂಡಿದ್ದು, ಸೆಪ್ಟೆಂಬರ್ ತಿಂಗಳಿನಲ್ಲಿ ಉದ್ಘಾಟನೆಯಾಗುವ ಸಾಧ್ಯತೆ ಇದೆ ಎಂಬ ಮಾಹಿತಿ ತಿಳಿದುಬಂದಿದೆ. ಇತ್ತೀಚೆಗೆ ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರಲ್ಲದೆ ಅಪರಿಚಿತರು ಬಂದು ಸಾರ್ವಜನಿಕರಿಗೆ ತೊಂದರೆ ನೀಡುತ್ತಿರುವ ಸಂಗತಿ ತಿಳಿದು ಬಂದ ಹಿನ್ನೆಲೆಯಲ್ಲಿ, ನೂತನ ರೈಲ್ವೆ ನಿಲ್ದಾಣವು ಉದ್ಘಾಟನೆಗೊಂಡ ಬಳಿಕ, ಪ್ರಯಾಣಿಕರ ಸುರಕ್ಷತೆಯ ಹಿತದೃಷ್ಟಿಯಿಂದ ರೈಲ್ವೆ ಪೊಲೀಸರನ್ನು ನಿಯೋಜಿಸಲು ನಿರ್ಧರಿಸಲಾಗಿದೆ ಎನ್ನಲಾಗಿದೆ.
•ಮಂಗಳೂರು: ಕಳಸದ ಮರು ಸ್ಥಾಪನೆ
ಮಂಗಳೂರು: 2016ರಲ್ಲಿ ಪಂಪ್ ವೆಲ್ ಮೇಲ್ಸೇತುವೆಯ ನಿರ್ಮಾಣದ ಸಂದರ್ಭದಲ್ಲಿ ತೆರವುಗೊಳಿಸಿದ, ಮಂಗಳೂರಿಗೆ ಕಿರೀಟದಂತಿದ್ದ ಕಳಶವನ್ನು ಮಂಗಳವಾರದಂದು ಮಹಾವೀರ ವ್ರತ್ತದಲ್ಲಿ ಮರುಸ್ಥಾಪನೆ ಮಾಡಲಾಗಿದೆ. 43 ಸೆಂಟ್ಸ್ ಜಾಗದ ಮಹಾವೀರ ವೃತ್ತದಲ್ಲಿ, 2006ರಲ್ಲಿ ಈ ಕಲಶವು ನಿರ್ಮಾಣವಾಗಿತ್ತು. 2016ರಲ್ಲಿ ಮೇಲ್ಸೇತುವೆ ನಿರ್ಮಾಣದ ಸಂದರ್ಭದಲ್ಲಿ ಇದನ್ನು ತೆರವುಗೊಳಿಸಿ, ಹೊರ ಠಾಣೆಯ ಬಳಿಯ ಖಾಲಿ ಜಾಗವೊಂದರಲ್ಲಿ ತಾತ್ಕಾಲಿಕವಾಗಿ ಇರಿಸಲಾಗಿತ್ತು. ಸೋಮವಾರ ರಾತ್ರಿ ಆರಂಭಿಸಲಾದ ಸ್ಥಳಾಂತರ ಪ್ರಕ್ರಿಯೆಯು ಮಂಗಳವಾರದಂದು ನಸುಕಿನ ಜಾಗ 4:30ರ ಸುಮಾರಿಗೆ ಪೂರ್ಣಗೊಂಡಿತು. ಪೊಲೀಸ್ ಇಲಾಖೆ, ಮೆಸ್ಕಾಂ ಸಿಬ್ಬಂದಿ ಮತ್ತು ಕೆಲ ಸ್ಥಳೀಯ ಯುವಕರ ಸಹಕಾರದಿಂದ ಕಳಶವನ್ನು ಮರುಸ್ಥಾಪನೆ ಮಾಡಲಾಗಿದೆ ಎನ್ನುವ ಸಂಗತಿ ತಿಳಿದುಬಂದಿದೆ. “ಕಳೆದ ಎರಡು ತಿಂಗಳ ಹಿಂದೆಯೇ ಸ್ಥಾಪನೆಗೆ ಸ್ಥಳವನ್ನು ಗುರುತಿಸಲಾಗಿದ್ದು, ಮಳೆಯ ಕಾರಣದಿಂದಾಗಿ ಮರುಸ್ಥಾಪನೆ ವಿಳಂಬವಾಯಿತು. ಮುಂದಿನ ಎರಡು ತಿಂಗಳ ಒಳಗಾಗಿ ಕಳಶವನ್ನು ಮತ್ತಷ್ಟು ಸುಂದರಗೊಳಿಸುವ ಮೂಲಕ ಉದ್ಘಾಟನೆಯನ್ನು ಕೈಗೊಂಡು, ಮಹಾವೀರರ ಸಂದೇಶವನ್ನು ಜನರಿಗೆ ತಲುಪಿಸುವ ಕಾರ್ಯವನ್ನು ಕೈಗೊಳ್ಳುತ್ತೇವೆ” ಎಂದು ಮಂಗಳೂರು ಜೈನ್ ಸಮಿತಿಯ ಅಧ್ಯಕ್ಷರಾದ ಪುಷ್ಪರಾಜ್ ಜೈನ್ ಅವರು ತಿಳಿಸಿದ್ದಾರೆ.
One reply on “ಕರಾವಳಿ ಟಾಪ್ ನ್ಯೂಸ್”
ಕಲಶ ಅಂತ ಹೇಳುವುದು ಮತ್ತು ಬರೆಯುವುದು ಕಳಸ ಅಂತ ತಪ್ಪು