Categories
ಸಿನಿಮಾ

ಕಾಂತಾರಕ್ಕೆ 1 ವರ್ಷದ ಸಂಭ್ರಮ!

ಕಾಂತಾರಕ್ಕೆ 1 ವರ್ಷದ ಸಂಭ್ರಮ!
– ಶೀಘ್ರದಲ್ಲೇ ಕಾಂತಾರ -2 ತೆರೆ ಮೇಲೆ ಮ್ಯಾಜಿಕ್
– ಸಾಮಾಜಿಕ ಜಾಲತಾಣ ಮೂಲಕ ಟ್ವಿಟ್

NAMMUR EXPRESS NEWS
ಬೆಂಗಳೂರು: ‘ಕಾಂತಾರ’ ರಿಷಬ್ ಶೆಟ್ಟಿ ನಿರ್ದೇಶಿಸಿ ಹಾಗೂ ನಟಿಸಿದ್ದ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ದಾಖಲೆ ನಿರ್ಮಿಸಿತ್ತು. ಕೆಜಿಎಫ್ ಚಾಪ್ಟರ್ ಪ್ಯಾನ್-ಇಂಡಿಯಾ ಮಟ್ಟದಲ್ಲಿ ಹೇಗೆ ಖ್ಯಾತಿ ಗಳಿಸಿತೋ ಅದೇ ರೀತಿ ಕಾಂತಾರ ಕೂಡ ಅಷ್ಟೇ ಎತ್ತರಕ್ಕೆ ಹೋಗಿತ್ತು. ಇಂದಿಗೆ ಸಿನಿಮಾ ಬಿಡುಗಡೆಯಾಗಿ ಒಂದು ವರ್ಷ ಕಳೆದಿದೆ. ಈ ಯಶಸ್ಸಿಗೆ ರಿಷಬ್ ಶೆಟ್ಟಿ ಪೋಸ್ಟ್ ಮೂಲಕ ಧನ್ಯವಾದ ಸೂಚಿಸಿದ್ದಾರೆ. “ಕಾಂತಾರ ಡಿವೈನ್ ಬ್ಲಾಕ್‌ಬಸ್ಟರ್ ಒಂದು ವರ್ಷದ ಸಂಭ್ರಮ. ನಾವು ಎಂದೆಂದಿಗೂ ಮೆಚ್ಚುವ ಚಿತ್ರ. ಎಪಿಕ್ ಬ್ಲಾಕ್‌ಬಸ್ಟರ್ ಆಗಿ ಪರಿವರ್ತಿಸಿದ ಪ್ರೇಕ್ಷಕರಿಗೆ ನಮ್ಮ ಹೃತ್ತೂರ್ವಕ ಕೃತಜ್ಞತೆಗಳು, ಮರೆಯಲಾಗದ ವರ್ಷ ಅದು. ಧನ್ಯವಾದಗಳು. ಈ ಅಭೂತಪೂರ್ವ ಯಶಸ್ಸಿಗೆ ಕಾರಣವಾದ ಎಲ್ಲರಿಗೂ ನಾನು ನನ್ನ ತಂಡ ಸದಾ ಚಿರಋಣಿ”ಎಂದು ರಿಷಬ್ ಬರೆದುಕೊಂಡಿದ್ದಾರೆ.

ಈ ಸಿನಿಮಾದ ಪ್ರಮುಖ ಹೈಲೈಟ್ ಎಂದರೆ ‘ವರಾಹ ರೂಪಂ’ ಹಾಡು. ಈ ಹಾಡು ವಿವಾದಕ್ಕೆ ಎಷ್ಟು ಕಾರಣವಾಗಿತ್ತೋ ಅಷ್ಟೇ ಖ್ಯಾತಿಯನ್ನು ಪಡೆಯಿತು. ಹೊಂಬಾಳೆ ಫಿಲ್ಡ್ ಕಡೆಯಿಂದ ಈಗಾಗಲೇ ಹೊಸ ಘೋಷಣೆ ಕೂಡ ಆಗಿದೆ ಆಗಿದೆ. ಒಂದು ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಈ ಚಿತ್ರದ ‘ವರಾಹ ರೂಪಂ’ ವಿಡಿಯೊ ಸಾಂಗ್ ರಿಲೀಸ್ ಮಾಡುತ್ತಿದೆ.
‘ಕಾಂತಾರ’ವನ್ನು ಕೇವಲ 16 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣ ಮಾಡಿ ವಿಶ್ವಾದ್ಯಂತ 400 ಕೋಟಿ ರೂ.ಗಳನ್ನು ಗಳಿಸಿತು. ಕಾಂತಾರ ಸಿನಿಮಾ ಸಾರ್ವಕಾಲಿಕವಾಗಿ ಕನ್ನಡದ ಎರಡನೇ ಅತಿ ಹೆಚ್ಚು ಗಳಿಕೆಯ ಚಿತ್ರವಾಗಿ ಹೊರಹೊಮ್ಮಿತು. ಈಗಾಗಲೇ ಕಾಂತಾರ 2 ಸಿನಿಮಾ ಕೆಲಸಗಳು ಭರದಿಂದ ಸಾಗಿದೆ. ವರದಿಗಳ ಪ್ರಕಾರ ಕಾಂತಾರ 2 ಸಿನಿಮಾ ಬರೋಬ್ಬರಿ 125 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣವಾಗುತ್ತಿದೆ ಎನ್ನಲಾಗಿದೆ.

ಆದರೆ ಈ ಬಗ್ಗೆ ಚಿತ್ರತಂಡ ಅಧಿಕೃತ ಮಾಹಿತಿ ಹಂಚಿಕೆ ಕಾಂತಾರ ಸಿನಿಮಾ ಹಿಟ್ ಆಗುತ್ತಿದ್ದಂತೆಯೇ ಬೇರೆ ಸಿನಿಮಾ ರಂಗದಿಂದ ರಿಷಬ್ ಶೆಟ್ಟಿಗೆ ಆಫರ್ ಬಂದಿದ್ದು ನಿಜ ಎಂದಿದ್ದಾರೆ ರಿಷಬ್. “ಬೇರೆ ಭಾಷೆಗಳಿಂದ ಹಲವು ಸಿನಿಮಾ ಅವಕಾಶಗಳು ಬಂದಿದ್ದವು. ಆದರೆ ನನಗೆ ‘ಕಾಂತಾರ’ವೇ ಆದ್ಯತೆ. ಕಾಂತಾರ’ದ ಯಶಸ್ಸಿಗೆ ಕನ್ನಡಿಗರು ಕಾರಣ. ಇವರು ನೀಡಿರುವ ಯಶಸ್ಸಿನ ಬೆನ್ನಲ್ಲೇ ಬೇರೆ ಭಾಷೆಯಲ್ಲಿ ಅವಕಾಶ ಬಂತೆಂದು ಓಡಿ ಹೋಗುವುದಿಲ್ಲ. ಹೊರಗಡೆಯಿಂದ ಬಂದ ತಂತ್ರಜ್ಞರು, ನಿರ್ದೇಶಕರು ಕನ್ನಡ ಸಿನಿಮಾ ಮಾಡಿ ಪ್ರಪಂಚದಾದ್ಯಂತ ತೆಗೆದುಕೊಂಡು ಹೋದರೆ ಅಭ್ಯಂತರವಿಲ್ಲ. ನನ್ನ ಆದ್ಯತೆ ಕನ್ನಡ ಸಿನಿಮಾ. “ಕಾಂತಾರ-2′ ಪೂರ್ಣಗೊಂಡ ಬಳಿಕ ಮುಂದಿನ ಸಿನಿಮಾಗಳ ಬಗ್ಗೆ ಯೋಚಿಸುವೆ’ ಎಂದರು ರಿಷಬ್

Categories
ತೀರ್ಥಹಳ್ಳಿ ಶಿವಮೊಗ್ಗ

10ನೇ ಬಾರಿ ಕುರ್ಚಿ ಹಿಡಿದ ಡಾ.ಮಂಜುನಾಥ ಗೌಡ!

10ನೇ ಬಾರಿ ಕುರ್ಚಿ ಹಿಡಿದ ಡಾ.ಮಂಜುನಾಥ ಗೌಡ!
– ಆರನೇ ಬಾರಿಗೆ ಡಿಸಿಸಿ ಬ್ಯಾಂಕಿಗೆ ಅವಿರೋಧ ಆಯ್ಕೆ
– ಹಳ್ಳಿ ಹಳ್ಳಿಗಳಲ್ಲೂ ಸಹಕಾರ ಸಂಘಗಳ ಅಭಿವೃದ್ಧಿಗೆ ಪ್ಲಾನ್
– ನನ್ನ ವಿರೋಧಿಗಳಿಗೂ ನನ್ನ ಧನ್ಯವಾದ..!

NAMMUR EXPRESS NEWS
ತೀರ್ಥಹಳ್ಳಿ: ಸಹಕಾರಿ ನಾಯಕ ಡಾ. ಅರ್. ಎಂ.ಮಂಜುನಾಥ ಗೌಡ ಆರನೇ ಬಾರಿಗೆ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಅಧ್ಯಕ್ಷ ಸ್ಥಾನವನ್ನು ಅವಿರೋಧವಾಗಿ ಅಲಂಕರಿಸಿದ್ದಾರೆ. ಇದರಿಂದ ಶಿವಮೊಗ್ಗ ಜಿಲ್ಲೆಯಲ್ಲಿ ಸಹಕಾರ ಕ್ಷೇತ್ರಕ್ಕೆ ಒಂದು ಹೊಸ ಕಳೆ ಆರಂಭವಾಗಿದೆ ಸಹಕಾರಿ ಕ್ಷೇತ್ರಗಳಲ್ಲಿ ಪ್ರಮುಖ ನಾಯಕರಾಗಿರುವಂತಹ ಮಂಜುನಾಥಗೌಡ ಅವರು ಶಿವಮೊಗ್ಗ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗುತ್ತಿದ್ದ ಹಿನ್ನೆಲೆಯಲ್ಲಿ 5000ಕ್ಕೂ ಹೆಚ್ಚು ಮಂದಿ ಅಭಿಮಾನಿಗಳು, ಮುಖಂಡರು, ಪ್ರಮುಖರು ಶಿವಮೊಗ್ಗದಲ್ಲಿ ಶುಕ್ರವಾರ ಅವರಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ತೀರ್ಥಹಳ್ಳಿಯಲ್ಲೂ ಕೂಡ ಅಭಿನಂದನೆ ಕಾರ್ಯಕ್ರಮ ಶೀಘ್ರದಲ್ಲಿ ಆಯೋಜನೆ ಮಾಡಲಾಗುತ್ತದೆ. ಡಾ.ಆರ್ ಎಂ ಮಂಜುನಾಥ ಗೌಡ ಅವರು ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಹಳ್ಳಿ ಹಳ್ಳಿಗಳಲ್ಲೂ ಸಹಕಾರ ಸಂಘಗಳ ಅಭಿವೃದ್ಧಿಗಾಗಿ ಕೊಡುಗೆಯನ್ನು ನೀಡಿದರು. ಈ ಹಿನ್ನೆಲೆಯಲ್ಲಿ ಅವರಿಗೆ ಮತ್ತೊಂದು ಅವಕಾಶ ದೊರೆತಿದೆ.

ಪ್ರತಿ ಹೋಬಳಿಯಲ್ಲೂ ಡಿಸಿಸಿ ಬ್ಯಾಂಕ್ ಹೊಸ ಶಾಖೆ

ಶಿವಮೊಗ್ಗ ಜಿಲ್ಲೆಯ ಪ್ರತಿ ಹೋಬಳಿಯಲ್ಲೂ ಡಿಸಿಸಿ ಬ್ಯಾಂಕ್ ಹೊಸ ಶಾಖೆಗಳನ್ನು ಆರಂಭಿಸುವುದಾಗಿ ಡಿಸಿಸಿ ಬ್ಯಾಂಕ್ ನೂತನ ಅಧ್ಯಕ್ಷ ಡಾ.ಆರ್.ಎಂ. ಮಂಜುನಾಥಗೌಡ ತಿಳಿಸಿದ್ದಾರೆ. ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಎರಡೂವರೆ ವರ್ಷಗಳ ನಂತರ ಡಿಸಿಸಿ ಬ್ಯಾಂಕ್ ಅಧ್ಯಕ್ಷನಾಗಿದ್ದೇನೆ. ಆಡಳಿತ ಮಂಡಳಿ ಸೇರಿದಂತೆ ಸಹಕಾರಿ ವಲಯದಿಂದ ನಿರೀಕ್ಷೆಗೂ ಮೀರಿದ ಪ್ರೀತಿ, ವಿಶ್ವಾಸ, ಬೆಂಬಲ ವ್ಯಕ್ತವಾಗಿದೆ. ಸಹಕಾರ ಕ್ಷೇತ್ರದ ಶಕ್ತಿ ಅನಾವರಣ ಆಗಿದೆ. ಬಹಳಷ್ಟು ಜನರು ಆರ್.ಎಂ. ಮಂಜುನಾಥ ಗೌಡ ಅವರನ್ನು ಸಹಕಾರ ಕ್ಷೇತ್ರದಿಂದ ತೆಗೆಯಬೇಕೆಂದು ಪ್ರಯತ್ನ ನಡೆಸಿದ್ದರು. ಆದರೆ, ಸಹಕಾರಿಗಳು ತೋರಿದ ಪ್ರೀತಿ ವಿಶ್ವಾಸದಿಂದ ಮತ್ತೆ ಅಧ್ಯಕ್ಷನಾಗಿದ್ದೇನೆ. ನನ್ನ ಜವಾಬ್ದಾರಿ ಹೆಚ್ಚಾಗಿದ್ದು, ಅದನ್ನು ನಿಭಾಯಿಸುವ ವಿಶ್ವಾಸವಿದೆ ಎಂದು ತಿಳಿಸಿದರು.

ಮುಂದಿನ ಐದು ವರ್ಷಗಳ ಅವಧಿಗೆ ಡಿಸಿಸಿ ಬ್ಯಾಂಕ್ ಜೊತೆಗಿರುವ ಒಂದು ಸಾವಿರಕ್ಕೂ ಅಧಿಕ ಸಹಕಾರ ಸಂಘಗಳು, 174 ಪ್ರಾಥಮಿಕ ಸಹಕಾರ ಸಂಘಗಳು, ಹಾಲು ಉತ್ಪಾದಕರ ಸಂಘಗಳು, ಆದ್ಯತಾ ಕ್ಷೇತ್ರವಾದ ಸ್ವಸಹಾಯ ಸಂಘಗಳ ಆರ್ಥಿಕ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿದ್ದು, ಐದು ದಿನಗಳಲ್ಲಿ ಯೋಜನಾ ವರದಿಯನ್ನು ನಿಮ್ಮ ಮುಂದಿಡುತ್ತೇನೆ. ಸಹಕಾರಿ ಕ್ಷೇತ್ರದಲ್ಲಿ ಎಲ್ಲಾ ರಂಗದಲ್ಲಿಯೂ ಕೆಲಸ ಮಾಡಬಹುದಾದ ಯೋಜನೆಗಳನ್ನು ರೂಪಿಸುವುದಾಗಿ ತಿಳಿಸಿದರು. ಪ್ರಾಥಮಿಕ ಸಹಕಾರ ಕೇಂದ್ರ ಗಳನ್ನು ಬಹುಉದ್ದೇಶಿತ ಸೇವಾ ಕೇಂದ್ರಗಳಾಗಿ ಬದಲಾವಣೆ ಮಾಡಲಿದ್ದು, ಒಂದೇ ಸೂರಿನಡಿ ರೈತರಿಗೆ ಹಾಗೂ ಗ್ರಾಮೀಣ ಪ್ರದೇಶದ ಜನರಿಗೆ ಅಗತ್ಯವಾದ ಎಲ್ಲಾ ಸೇವೆಗಳು ಲಭ್ಯ ಇರುತ್ತವೆ. ಗೊಬ್ಬರ, ಬೀಜ, ಸಿಮೆಂಟ್, ಪರಿಕರಗಳು, ಬೆಳೆ ಮಾರಾಟ ವ್ಯವಸ್ಥೆ ಮೊದಲಾದವುಗಳನ್ನು ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ಕಲ್ಪಿಸಲಾಗುವುದು ಎಂದರು.

ಕೇಂದ್ರ ಸರ್ಕಾರ ಕೂಡ ಸಹಕಾರ ಕ್ಷೇತ್ರಕ್ಕೆ ಅಗತ್ಯ ನೆರವು ಕಲ್ಪಿಸಿದೆ. ಪ್ರಾಥಮಿಕ ಸಹಕಾರ ಸಂಘಗಳಿಗೆ ಗ್ಯಾಸ್ ಏಜೆನ್ಸಿ, ಪೆಟ್ರೋಲ್ ಬಂಕ್ ತೆರೆಯಲು ಅವಕಾಶ ಕಲ್ಪಿಸುತ್ತಿದೆ. ಸಾಮಾನ್ಯ ಸೇವಾ ಕೇಂದ್ರಗಳಾಗಿ ಪರಿವರ್ತಿಸಲು
ಮುಂದಾಗಿದೆ. ಜನ ಔಷಧಿ ಕೇಂದ್ರಗಳನ್ನು ತೆರೆಯಲು ಅವಕಾಶ ನೀಡಲಾಗಿದೆ. ಸೂಪರ್ ಮಾರ್ಕೆಟ್ ಗಳ ರೀತಿಯೂ ಪ್ರಾಥಮಿಕ ಸಹಕಾರ ಸಂಘಗಳು ಕಾರ್ಯನಿರ್ವಹಿಸಲಿದ್ದು, ಕಡಿಮೆ ಬೆಲೆಗೆ ಗುಣಮಟ್ಟದ ವಸ್ತುಗಳು ಲಭ್ಯ ಇರುತ್ತವೆ. ಎಂದರು. ಅದಕ್ಕಿಂತ ಮೊದಲು ಕಟ್ಟಡಗಳು ಇಲ್ಲದ ಪ್ರಾಥಮಿಕ ಸಹಕಾರ ಸಂಘಗಳಿಗೆ ಸರ್ಕಾರದಿಂದ ನೆರವು ಪಡೆಯದೆ ಕಟ್ಟಡ ನಿರ್ಮಿಸುವ ಬಗ್ಗೆ ಯೋಜನೆ ರೂಪಿಸಲಾಗುವುದು. ಇನ್ನೂ ಐದು ವರ್ಷಗಳಲ್ಲಿ ನಮ್ಮ ವರ್ಕಿಂಗ್ ಕ್ಯಾಪಿಟಲ್ 5000 ಕೋಟಿ ರೂಪಾಯಿ ಮುಟ್ಟಿದರೆ ಜಿಲ್ಲೆಯಲ್ಲಿ ಬೇರೆ ವಾಣಿಜ್ಯ ಬ್ಯಾಂಕುಗಳಿಂದ ನಾವು ಮುಂದಿರುತ್ತೇವೆ ಎಂದು ತಿಳಿಸಿದರು.

Categories
ಹೊಸನಗರ

ಬಾವಿಗೆ ಹಾರಿ ಹಿರಿಯ ರಾಜಕಾರಣಿ ಆತ್ಮಹತ್ಯೆ!

ಬಾವಿಗೆ ಹಾರಿ ಹಿರಿಯ ರಾಜಕಾರಣಿ ಆತ್ಮಹತ್ಯೆ!
– ಹೊಸನಗರದ ರಿಪ್ಪಿನ ಪೇಟೆ ಬಳಿ ಘಟನೆ
– ಭದ್ರಾವತಿ: ವಿಐಎಸ್​ಎಲ್​​ ಆವರಣದಲ್ಲಿ ಕಾಣಿಸಿಕೊಂಡಿದೆ ಮತ್ತೊಂದು ಚಿರತೆ!

NAMMUR EXPRESS NEWS
ಹೊಸನಗರ: ಮಂಡಲ ಪಂಚಾಯತ್ ಮಾಜಿ ಉಪಪ್ರಧಾನ ಹಾಗೂ ಬಸವೇಶ್ವರ ವೀರಶೈವ ಸಮಾಜದ ಸ್ಥಳದಾನಿ ಡಿ.ಸಿ ಈಶ್ವರಪ್ಪ (76) ಶನಿವಾರ ಬೆಳಗ್ಗೆ ತಮ್ಮ ಮನೆಯ ಬಳಿಯಲ್ಲಿನ ಬಾವಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇತ್ತೀಚೆಗೆ ಪತ್ನಿ ಸಾವಿನಿಂದ ಮಾನಸಿಕವಾಗಿ ನೊಂದಿದ್ದ ಈಶ್ವರಪ್ಪ ಇಂದು ಬೆಳಗ್ಗೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೃತರಿಗೆ ಮೂವರು ಪುತ್ರರಿದ್ದು ಅಂತ್ಯಕ್ರಿಯೆ ಬರುವೆ ಗ್ರಾಮದ ದೊಡ್ಡಿನಕೊಪ್ಪದ ಜಮೀನಿನಲ್ಲಿ ವೀರಶೈವ ಜನಾಂಗದ ಸಂಪ್ರದಾಯದಂತೆ ಜರುಗಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ವಿಐಎಸ್​ಎಲ್​​ ಆವರಣದಲ್ಲಿ ಮತ್ತೊಂದು ಚಿರತೆ!

ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕು ವಿಐಎಸ್​ಎಲ್ ಆವರಣದಲ್ಲಿ ಕಾಣಿಸಿಕೊಂಡಿದ್ದ ಚಿರತೆ ಮರಿ ಸೆರೆಯಾದ ಬೆನ್ನಲ್ಲೆ ಮತ್ತೊಂದು ಚಿರತೆ ಅಲ್ಲಿಯೇ ಸಮೀಪ ಕ್ಯಾಮರಾದ ಕಣ್ಣಿಗೆ ಕಾಣಿಸಿಕೊಂಡಿದೆ. ಚಿರತೆಯ ಮರಿಯನ್ನು ಹುಡುಕಿಕೊಂಡು ಅದರ ತಾಯಿ ಚಿರತೆ ಬರಬಹುದು ಎಂದು ಅರಣ್ಯ ಇಲಾಖೆ ಈ ಮೊದಲೇ ಊಹಿಸಿತ್ತು. ಅಲ್ಲದೆ ಸ್ಥಳದಲ್ಲಿ ಕಾರ್ಯಾಚರಣೆಯನ್ನು ಮುಂದುವರಿಸಿತ್ತು. ಇದೀಗ ಅಲ್ಲಿ ಮತ್ತೊಂದು ಚಿರತೆ ಕಾಣಿಸಿಕೊಂಡಿರುವ ಫೋಟೊವೊಂದು ಲಭ್ಯವಾಗಿದೆ. ನೈಟ್ ಬೀಟ್ ವಾಚ್​ಮನ್​ ಕಾರ್ಖಾನೆಯ ಒಳಗಡೆ ಗಸ್ತು ತಿರುಗುತ್ತಿದ್ದ ವೇಳೆ ಚಿರತೆ ಕಾಣಿಸಿಕೊಂಡಿದೆ. ಸಿಬ್ಬಂದಿಯ ಜೀಪ್​ಗೆ ಅಡ್ಡವಾಗಿ ಚಿರತೆ ಪಾಸ್ ಆಗಿದೆ. ಸದ್ಯ ಅರಣ್ಯ ಇಲಾಖೆ ಸಿಬ್ಬಂದಿ ಈ ಭಾಗದಲ್ಲಿ ಕಾರ್ಯಾಚರಣೆ ಮುಂದುವರಿಸಿದ್ದಾರೆ.

Categories
ತೀರ್ಥಹಳ್ಳಿ

ತೀರ್ಥಹಳ್ಳಿಯಲ್ಲಿ ಇಂದು ಕಣ್ಣ ಮುಚ್ಚಾಲೆ ನಾಟಕ ಪ್ರದರ್ಶನ

ತೀರ್ಥಹಳ್ಳಿಯಲ್ಲಿ ಇಂದು ಕಣ್ಣ ಮುಚ್ಚಾಲೆ ನಾಟಕ ಪ್ರದರ್ಶನ
– ಪೌರಕಾರ್ಮಿಕರ ಗೌರವಿಸುವ ಸಾರ್ವಜನಿಕ ಕಾರ್ಯಕ್ರಮ
– ಸರ್ವರಿಗೂ ಸ್ವಾಗತ ಕೋರಿದ ಅಧ್ಯಕ್ಷೆ ಗೀತಾ ರಮೇಶ್

NAMMUR EXPRESS NEWS
ತೀರ್ಥಹಳ್ಳಿ: ಚಳಿಗಾಳಿ ಮಳೆ ಲೆಕ್ಕಿಸದೆ ನಿರಂತರವಾಗಿ ಸೈನಿಕರಂತೆ ಸೇವೆ ಸಲ್ಲಿಸುತ್ತಿರುವ ಸ್ಥಳೀಯ ಆಡಳಿತ ನಮ್ಮ ತೀರ್ಥಹಳ್ಳಿ ಪಟ್ಟಣ ಪಂಚಾಯಿತಿಯ ಆಧಾರ ಸ್ತಂಭವಾಗಿರುವ ಹೆಮ್ಮೆಯ ಪೌರಕಾರ್ಮಿಕ ನೌಕರ ಸಿಬ್ಬಂದಿ ಸೇವಕ ಸೈನಿಕರು, ದಿನಪೂರ್ತಿ ಸಾರ್ವಜನಿಕ ಸ್ಥಳಗಳು, ಬೀದಿ ಕಸಗಳನ್ನು ಗುಡಿಸಿ, ಮನೆ ಮನೆ ಕಸ ಸಂಗ್ರಹಣೆ ಮಾಡಿ, ತ್ಯಾಜ್ಯ ತೆಗೆದು ಇಡೀ ಪಟ್ಟಣವನ್ನು ಸ್ವಚ್ಛವಾಗಿಟ್ಟು ಪರಿಸರ ನೈರ್ಮಲ್ಯ ಸ್ವಚ್ಛತೆಯನ್ನು ಕಾಪಾಡುತ್ತ ಮನುಷ್ಯನ ಆರೋಗ್ಯ ರಕ್ಷಕರಾಗಿರುವ ಪೌರಕಾರ್ಮಿಕರ ಸೇವೆ ನಿಜಕ್ಕೂ ಶ್ಲಾಘನಿಯ. ಇಂತಹ ಪೌರಕಾರ್ಮಿಕ ಸೇವಕರನ್ನು ಒಂದು ದಿನ ಅವರ ದಿನಾಚರಣೆಯನ್ನು ಮಾಡಿ ನಾವೆಲ್ಲರೂ ಗೌರವ ಕೊಡೋಣ, ಅವರನ್ನ ಸೇವೆಯನ್ನ ಅಭಿನಂದಿಸಿ ಅವರಿಗೆ ಮನು ರಂಜನೆ ನೀಡಿ ಅವರನ್ನು ಮತ್ತು ಅವರ ಕುಟುಂಬದವರನ್ನು ಆನಂದಿಸುವ ಸಲುವಾಗಿ ಇಂದು ಪಟ್ಟಣ ಪಂಚಾಯಿತಿ ತೀರ್ಥಹಳ್ಳಿ ವತಿಯಿಂದ ಪಟ್ಟಣದ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ಪೌರ ಕಾರ್ಮಿಕ ದಿನಾಚರಣೆ ಹಮ್ಮಿಕೊಂಡಿದ್ದೇವೆ ಎಂದು ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಗೀತಾ ರಮೇಶ್ ತಿಳಿಸಿದ್ದಾರೆ.

ಸೆಪ್ಟೆಂಬರ್ 23ರ ಪೌರಕಾರ್ಮಿಕರ ದಿನಾಚರಣೆ ದಿನದಂದು ಎಲ್ಲಾ ಪೌರಕಾರ್ಮಿಕರಿಗೂ ನಮ್ಮ ಪಟ್ಟಣ ಪಂಚಾಯಿತಿ ಆಡಳಿತದಿಂದ ವಿವಿಧ ಕ್ರೀಡೆಗಳನ್ನು ಆಯೋಜಿಸಿದ್ದು, ಅದರಲ್ಲಿ ವಿಜೇತರಾದ ಎಲ್ಲಾ ಪೌರಕಾರ್ಮಿಕರಿಗೂ ಬಹುಮಾನ ವಿತರಣೆ ಮತ್ತು ಅವರಿಗಾಗಿ ಇಂದು ಸಂಜೆ 7 ಗಂಟೆಗೆ ಗೋಪಾಲಗೌಡರ ರಂಗಮಂದಿರದಲ್ಲಿ ತೆಕ್ಕಟ್ಟೆಯ ಪ್ರಸಿದ್ಧ ಓಂಕಾರ ಕಲಾವಿದರ ತಂಡದಿಂದ ಹಾಸ್ಯಮಯ ಕಣ್ಣ ಮುಚ್ಚಾಲೆ ಎಂಬ ನಗೆ ನಾಟಕ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು ತೀರ್ಥಹಳ್ಳಿಯ ಮಹಾಜನತೆ ಹಾಗೂ ಪಟ್ಟಣದ ನಾಗರಿಕರು ಈ ಪೌರಕಾರ್ಮಿಕ ದಿನಾಚರಣೆಯಲ್ಲಿ ಪಾಲ್ಗೊಂಡು ನಾಟಕ ಪ್ರದರ್ಶನವನ್ನು ವೀಕ್ಷಿಸುವಂತೆ ಪಟ್ಟಣ ಪಂಚಾಯಿತಿಯ ಎಲ್ಲ ಗೌರವ ಸದಸ್ಯರು ಮತ್ತು ಆಡಳಿತದ ಪರವಾಗಿ ಅಧ್ಯಕ್ಷರಾದ ಶ್ರೀಮತಿ ಗೀತಾ ರಮೇಶ್ ಅವರು ಮನವಿ ಮಾಡಿಕೊಂಡಿದ್ದಾರೆ.

Categories
ಉಡುಪಿ ಕರಾವಳಿ

ಕರಾವಳಿಯಲ್ಲಿ ವರುಣ ಅಬ್ಬರ

ಕರಾವಳಿಯಲ್ಲಿ ವರುಣ ಅಬ್ಬರ
– ಮೀನುಗರಾರಿಗೆ ಮುನ್ನೆಚ್ಚರಿಕೆ
– ಬೆಳ್ತಂಗಡಿ, ಕಾರ್ಕಳದಲ್ಲಿ ಉತ್ತಮ ಮಳೆ
– ಗಾಳಿ ಮಳೆಗೆ ಹಾರಿದ ಮನೆ ಛಾವಣಿ

NAMMUR EXPRESS NEWS
ಉಡುಪಿ: ಕಳೆದ ಕೆಲ ದಿನಗಳಿಗೆ ಹೋಲಿಸಿದರೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಶುಕ್ರವಾರ ಉತ್ತಮ ಮಳೆಯಾಗಿದೆ. ಉಭಯ ಜಿಲ್ಲೆಯ ವಿವಿಧ ಕಡೆ ಬಿಟ್ಟು ಬಿಟ್ಟು ಮಳೆಯಾಗಿದ್ದು, ವಾತಾವರಣ ತುಸು ತಂಪಾಗಿದೆ. ಮಂಗಳೂರಿನಲ್ಲಿ ಬೆಳಗ್ಗೆ ಮತ್ತು ರಾತ್ರಿ ಬಿರುಸಿನ ಮಳೆಯಾಗಿದೆ. ಬೆಳ್ತಂಗಡಿ , ಕಾರ್ಕಳ ಹಲವೆಡೆ ಉತ್ತಮ ಮಳೆ
ಬೆಳ್ತಂಗಡಿ: ಕಳೆದೊಂದು ವಾರದಿಂದ ತಾಲೂಕಿನಾದ್ಯಂತ ಸಾಧಾರಣೆ ಮಳೆಯಾ ಗುತ್ತಿದ್ದು, ಎರಡು ದಿನಗಳಿಂದ ಉತ್ತಮ ಮಳೆಯಾಗಿದೆ. ಶುಕ್ರವಾರ ಬೆಳಗ್ಗೆಯಿಂದಲೇ ಮಳೆಯಾಗಿದ್ದು ಶಿಶಿಲ, ಅರಸಿನಮಕ್ಕಿ, ಧರ್ಮಸ್ಥಳ, ಮುಂಡಾಜೆ, ಬೆಳ್ತಂಗಡಿ, ಮಡಂತ್ಯಾರು, ವೇಣೂರು, ಗೇರುಕಟ್ಟೆ, ಚಾರ್ಮಾಡಿ ಸಹಿತ ಉತ್ತಮ ಮಳೆಯಾಗಿದೆ. ಸತತ ಮಳೆಯಿಂದ ಹೆದ್ದಾರಿ ಅಗಲೀಕರಣ ಆಗುವಲ್ಲಿ ರಸ್ತೆ ಕೆಸರುಮಯವಾಗಿದೆ. ಕೆಲವೆಡೆ ಹೊಂಡಗಳಲ್ಲಿ ನೀರು ನಿಂತ ಪರಿಣಾಮ ವಾಹನಗಳಿಗೆ ಹಾನಿಯಾಗಿದೆ.

ಕಾರ್ಕಳ: ತಾಲೂಕಿನ ವಿವಿಧ ಭಾಗಗಳಲ್ಲಿ ಶುಕ್ರವಾರ ಸಾಧಾರಣ ಮಳೆಯಾಗಿದೆ. ಬೆಳಗ್ಗೆಯಿಂದ ಮಧ್ಯಾಹ್ನ ತನಕ ಬಿರುಸಿನ ಮಳೆ ಯಾಗಿದ್ದು, ಬಳಿಕ ವಿಶ್ರಾಂತಿ ಪಡೆದು ಕೊಂಡಿತ್ತು. ದಿನವಿಡಿ ಮೋಡದ ವಾತಾವರಣವಿತ್ತು. ತಣ್ಣನೆಯ ಚಳಿಯ ಅನುಭವ ಆಗುತ್ತಿತ್ತು. ಮಾಳ, ಬಜಗೋಳಿ ಸಹಿತ ವಿವಿಧ ಕಡೆ ಉತ್ತಮ ಮಳೆಯಾಗಿದೆ. ಮರ ಬಿದ್ದು ಮನೆಗೆ ಹಾನಿ ಕುಂಬಳೆ ಮಾಟೆಂಗುಳಿಯಲ್ಲಿ ಅಬ್ದುಲ್ಲ ಅವರ ಮನೆಯ ಸಿಟೌಟ್ ಮೇಲೆ ತೆಂಗಿನ ಮರ ಬಿದ್ದು ಹಾನಿಯಾಗಿದೆ. ಈ ಸಂದರ್ಭ ಯಾರೂ ಇಲ್ಲದ್ದರಿಂದ ಯಾವುದೇ ಅಪಾಯ ಸಂಭವಿಸಿಲ್ಲ. ಅಂಗಡಿಮೊಗರು ದೇಲಂ ಪಾಡಿಯಲ್ಲಿ ಬಂಡೆಕಲ್ಲು ಸಹಿತ ಗುಡ್ಡೆ ಕುಸಿತದಿಂದ ಫ್ರಾನ್ಸಿಸ್ ಕ್ರಾಸ್ತಾ ಅವರ ಮನೆ ಹಾನಿಗೀಡಾಗಿದೆ.

ಮಳೆ ಗಾಳಿಗೆ ಹಾರಿಹೋದ ತಗಡಿನ ಛಾವಣಿ :

ಮೂಡುಬಿದಿರೆ: ಮಳೆ ಗಾಳಿಯ ಬಿರುಸಿಗೆ ಮೂಡುಬಿದಿರೆ ಸ್ವರಾಜ್ಯ ಮೈದಾನದಲ್ಲಿರುವ ತಾಲೂಕು ಕ್ರೀಡಾಂಗಣದ ಪೆವಿಲಿಯನ್‌ನ ತಗಡಿನ ಛಾವಣಿ ಮೂರು ಕಡೆ ಹಾರಿ ಹೋಗಿದೆ.ಈ ಕ್ರೀಡಾಂಗಣದ ಛಾವಣಿ ಮುಂಭಾಗದಲ್ಲಿ ಅರೆ ವೃತ್ತಾಕಾರ ದಲ್ಲಿ ಇಳಿಜಾರಾಗಿರುವಂತೆ ಹಿಂಭಾಗದಲ್ಲಿ ಇಳಿಜಾರಾಗಿಲ್ಲ. ಹಾಗಾಗಿ ವೇಗವಾಗಿ ಬೀಸುವ ಗಾಳಿಗೆತಗಡಿನ ಶೀಟುಗಳು ಸುಲಭವಾಗಿ ಹಾರಿ ಹೋಗುವ ಪರಿಸ್ಥಿತಿಯಿದೆ ಎನ್ನಲಾಗಿದೆ

ಮೀನುಗಾರರಿಗೆ ಎಚ್ಚರಿಕೆ:

ಭಾರತೀಯ ಹವಾಮಾನ ಇಲಾಖೆಯು ನೀಡಿದ ಹವಾಮಾನ ಮುನ್ಸೂಚನೆಯಂತೆ ಅ.2ರ ವರೆಗೆ ಅರಬಿ ಸಮುದ್ರದಲ್ಲಿ ನಿಮ್ಮ ಒತ್ತಡ ಉಂಟಾಗಿದ್ದು, ಚಂಡಮಾರುತವಾಗಿ ಪರಿವರ್ತನೆಯಾಗುವ ಸಾಧ್ಯತೆ ಹೆಚ್ಚಾಗಿದೆ. ಈ ಅನಾಹುತವನ್ನು ತಡೆಯುವ ಸಲುವಾಗಿ ಮೀನುಗಾರರು ಮೀನುಗಾರಿಕೆ ನಡೆಸಲು ಸಮುದ್ರಕ್ಕೆ ತೆರಳದಂತೆ ಹಾಗೂ ಮೀನುಗಾರಿಕೆಗೆ ತೆರಳಿರುವ ಎಲ್ಲ ಮೀನುಗಾರಿಕೆ ದೋಣಿಗಳು ಕೂಡಲೇ ದಡ ಸೇರುವಂತೆ ಮುನ್ನೆಚ್ಚರಿಕೆ ನೀಡಲಾಗಿದೆ ಎಂದು ಮೀನುಗಾರಿಕೆ ಇಲಾಖೆಯ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.

Categories
ತೀರ್ಥಹಳ್ಳಿ

ತೀರ್ಥಹಳ್ಳಿ ಬಸ್ ಸ್ಟಾಂಡ್ ಗಣೇಶ ಇಂದು ವಿಸರ್ಜನೆ

ತೀರ್ಥಹಳ್ಳಿ ಬಸ್ ಸ್ಟಾಂಡ್ ಗಣೇಶ ಇಂದು ವಿಸರ್ಜನೆ
– ಪಟ್ಟಣದಲ್ಲಿ ಸಾವಿರಾರು ಜನ ಸೇರುವ ನಿರೀಕ್ಷೆ
– ಛತ್ರಕೇರಿಯಲ್ಲಿ ಸಂಜೆ 7 ಗಂಟೆಯಿಂದ ಪ್ರಾಣೇಶ್ ಹಾಸ್ಯ ಸಂಜೆ ಕಾರ್ಯಕ್ರಮ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಪಟ್ಟಣದ ಪ್ರತಿಷ್ಠಿತ ಗಣೇಶೋತ್ಸವಗಳಲ್ಲಿ ಒಂದಾಗಿರುವ ಮುಖ್ಯ ಬಸ್ ನಿಲ್ದಾಣದ ಗಣೇಶನ ವಿಸರ್ಜನೆ ಕಾರ್ಯಕ್ರಮ ಇಂದು ಅದ್ದೂರಿಯಾಗಿ ನಡೆಯಲಿದೆ. ಮಧ್ಯಾಹ್ನ 12:30 ಕ್ಕೆ ಮಹಾ ಪೂಜೆ ನಂತರ ವಿಸರ್ಜನಾ ಮೆರವಣಿಗೆ ಹೊರಡಲಿದೆ. ಗಣೇಶೋತ್ಸವ ಸಮಿತಿಯವರು ಈಗಾಗಲೇ ಕುಳ್ಳಪ್ಪು ಖ್ಯಾತಿಯ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ, ಪ್ರತಿದಿನ ಧಾರ್ಮಿಕ ಕಾರ್ಯಕ್ರಮ, ಅನ್ನಸಂತರ್ಪಣೆ ಸೇರಿ ಹಲವು ವಿಶೇಷ ಕಾರ್ಯಕ್ರಮ ನಡೆಸಿದ್ದು ಇಂದು ಅದ್ದೂರಿಯಾಗಿ ಗಣೇಶನ ವಿಸರ್ಜನೆ ಮಾಡುವ ಮೂಲಕ ತೆರೆ ಬೀಳಲಿದೆ.
ಇಂದಿನ ವಿಸರ್ಜನಾ ಮೆರವಣಿಗೆಯಲ್ಲಿ ಹುಲಿವೇಷ, ನಾಸಿಕ್ ಬ್ಯಾಂಡ್, ಕೀಲುಕುದುರೆ, ಡಿಜೆ ಸೇರಿದಂತೆ ಹಲವು ವೈವಿಧ್ಯಗಳ ಜೊತೆಗೆ ಸಾವಿರಾರು ಜನರು ಸೇರುವ ನಿರೀಕ್ಷೆ ಇದೆ.

ವಿಸರ್ಜನೆ ರಸ್ತೆ ಮಾರ್ಗ ಹೇಗೆ?

ಮುಖ್ಯ ಬಸ್ ನಿಲ್ದಾಣದಿಂದ ಹೊರಡುವ ಗಣೇಶೋತ್ಸವದ ಮೆರವಣಿಗೆ ಕುಶಾವತಿ, ಕೆ. ಸಿ ರಸ್ತೆ, ಮೀಲ್ಕೆರಿ ರಸ್ತೆ, ಛತ್ರಕೇರಿ ರಸ್ತೆ, ಗಾಂಧಿಚೌಕ, ಆಗುಂಬೆ ಬಸ್ ನಿಲ್ದಾಣ, ದೊಡ್ಡಮನೆಕೇರಿ, ಸೀಬಿನಕೆರೆ, ಆಗುಂಬೆ ಬಸ್ ನಿಲ್ದಾಣ, ಮಸೀದಿ ರಸ್ತೆ, ಸೊಪ್ಪುಗುಡ್ಡೆ, ಮಾರಿಕಾಂಬಾ ದೇವಸ್ಥಾನದ ರಸ್ತೆ, ರಥಬೀದಿ ಮೂಲಕ ತುಂಗಾ ನದಿಯಲ್ಲಿ ಅದ್ದೂರಿ ವಿಸರ್ಜನೆ ನಡೆಯಲಿದೆ. ಮೆರವಣಿಗೆಯು ಮಧ್ಯಾಹ್ನ 1 ಗಂಟೆ ಸುಮಾರಿಗೆ ಹೋರಡಲಿದೆ.

ಛತ್ರಕೇರಿಯಲ್ಲಿ ಸಂಜೆ 7 ಗಂಟೆಯಿಂದ ಹಾಸ್ಯ ಸಂಜೆ

ತೀರ್ಥಹಳ್ಳಿಯ ಛತ್ರಕೇರಿಯ ಶ್ರೀ ಸಿದ್ಧಿ ವಿನಾಯಕ ಸೇವಾ ಸಮಿತಿ ವತಿಯಿಂದ ಶನಿವಾರ ಸಂಜೆ 7 ಗಂಟೆಗೆ ತೀರ್ಥಹಳ್ಳಿಯ ವಿದ್ಯಾದಿರಾಜ ಸಭಾ ಭವನದಲ್ಲಿ ಅಭಿನವ ಬೀಚಿ, ಹಾಸ್ಯ ಬ್ರಹ್ಮ ಗಂಗಾವತಿ ಪ್ರಾಣೇಶ್ ಹಾಗೂ ಅವರ ವೃಂದದವರಾದ ನರಸಿಂಹ ಜೋಶಿ, ಬಸವರಾಜ ಮಹಾಮುನಿ ಇವರಿಂದ ಹಾಸ್ಯ ಸಂಜೆ ಕಾರ್ಯಕ್ರಮ ನಡೆಯಲಿದ್ದು ಸರ್ವರು ಆಗಮಿಸುವಂತೆ ಸಮಿತಿ ಕೋರಿದೆ.

Categories
ಬೆಂಗಳೂರು

ಅ.6ರಂದು ರಾಜಧಾನಿಯಲ್ಲಿ ಯಕ್ಷಗಾನದ ಕಲರವ!

ಅ.6ರಂದು ರಾಜಧಾನಿಯಲ್ಲಿ ಯಕ್ಷಗಾನದ ಕಲರವ!
– ವಿದ್ಯುನ್ಮತಿ ಕಲ್ಯಾಣ” “ರಾಜ ಯಯಾತಿ” “ಶ್ವೇತಕುಮಾರ ಚರಿತ್ರೆ” ಮೂರು ಪೌರಾಣಿಕ ಪ್ರಸಂಗ ಪ್ರದರ್ಶನ
– ಮಲೆನಾಡು, ಕರಾವಳಿ ಖ್ಯಾತ ಕಲಾವಿದರ ಸಮಾಗಮ

NAMMUR EXPRESS NEWS
ಬೆಂಗಳೂರು: ತೆಂಕು ತಿಟ್ಟು ಹಾಗೂ ಬಡಗು ತಿಟ್ಟಿನ ಹೆಸರಾಂತ ಮೇಳಗಾದ ಪಾವಂಜೆ ಮೇಳ ಹಾಗೂ ಜಲವಳ್ಳಿ ಮೇಳದ ಸಮಾಗಮದಲ್ಲಿ ಅಕ್ಟೋಬರ್ 6 ರಂದು ರಾತ್ರಿ 9.30ರಿಂದ ರವೀಂದ್ರ ಕಲಾಕ್ಷೇತ್ರದಲ್ಲಿ ಅಪರೂಪದ ಪ್ರಸಂಗಗಳೊಂದಿಗೆ ವಿಶೇಷ ಸಂಯೋಜನೆ ಮೂಲಕ ವಿದ್ಯುನ್ಮತಿ ಕಲ್ಯಾಣ, ರಾಜ ಯಯಾತಿ” “ಶ್ವೇತಕುಮಾರ ಚರಿತ್ರೆ ಮೂರು ಪೌರಾಣಿಕ ಪ್ರಸಂಗಗಳು ಪ್ರದರ್ಶನಗೊಳ್ಳುತ್ತಿದೆ.

ಖ್ಯಾತ ಕಲಾವಿದರ ಸಮಾಗಮ

ಹಿಮ್ಮೇಳದಲ್ಲಿ ಭಾಗವತರುಗಳಾದ “ಪಟ್ಲ ಸತೀಶ ಶೆಟ್ಟಿ, ಜನ್ಸಾಲೆ ರಾಘವೇಂದ್ರ ಆಚಾರ್ಯ, ಬ್ರಹ್ಮೂರು ಶಂಕರ್ ಭಟ್, ಚಂದ್ರಕಾಂತ ರಾವ್ ಮೂಡುಬೆಳ್ಳೆ, ಪ್ರಪುಲ್ಲ ಚಂದ್ರ ನೆಲ್ಯಾಡಿ, ಚಂಡೆ ಮದ್ದಳೆಯಲ್ಲಿ ಗುರುಪ್ರಸಾದ್ ಬೊಳಿಂಜಡ್ಕ, ಪ್ರಶಾಂತ ಶೆಟ್ಟಿ ವಗೆನಾಡು, ಅನಿರುದ್ಧ ಹೆಗಡೆ, ಶಶಾಂಕ್ ಆಚಾರ್ ಕಿರಿಮಂಜೇಶ್ವರ, ಸುಜನ್ ಹಾಲಾಡಿ, ಅರುಣ ಸಾಗರ, ಚಕ್ರತಾಳದಲ್ಲಿ ಪೂರ್ಣೇಶ್ ಆಚಾರ್ ಸ್ಟಾರ್ ಕಲಾವಿದರುಗಳ ಸಂಗಮ ಕಲಾಕ್ಷೇತ್ರದಲ್ಲಿ ಕಾಣಿಸಿಕೊಳ್ಳುತ್ತಿದೆ.

ತೆಂಕುತಿಟ್ಟಿನಲ್ಲಿ ವಿದ್ಯುನ್ಮತಿ ಕಲ್ಯಾಣ ಪ್ರಸಂಗ ಪ್ರದರ್ಶನಗೊಳ್ಳುತ್ತಿದ್ದು, ಜಯಂತನಾಗಿ ರಾಕೇಶ್ ರೈ ಅಡ್ಕ, ಸುಲೋಚನನಾಗಿ ಮಾನ್ಯ ಸಂತೋಷ, ವಿದ್ಯುನ್ಮತಿಯಾಗಿ ಅಕ್ಷಯ್ ಮಾರ್ನಾಡ್, ಕಾಲಜಂಘ ನಾಗಿ ರಾಧಾಕೃಷ್ಣ ನಾವುಡ, ಕುಶನಾಗಿ ದಿನೇಶ್ ಕಾವಳಕಟ್ಟೆ, ಚಿತ್ರವಾಹನನಾಗಿ ಲೋಕಶ್ ಮಚ್ಚೂರು ಅವರು ಪಾತ್ರನಿರ್ವಹಿಸುತ್ತಾ ಇದ್ದಾರೆ.
ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರಪ್ರಥಮ ಬಾರಿಗೆ ತೆಂಕು ತಿಟ್ಟಿನಲ್ಲಿ ‘ವಿದ್ಯುನ್ಮತಿ ಕಲ್ಯಾಣ’ ಪ್ರಸಂಗ ಪ್ರದರ್ಶನಗೊಳ್ಳುತ್ತಿದ್ದು, ಶೃಂಗಾರ ಪ್ರಧಾನವಾದ ಈ ಪ್ರಸಂಗದಲ್ಲಿ ಪಟ್ಲರವರ ಗಾನಸಾರಥ್ಯ ಹಾಗೂ ಶ್ರೇಷ್ಠ ಕಲಾವಿದರ ಪಾತ್ರ ನಿರ್ವಹಣೆ ಕಣ್ತುಂಬಿಕೊಳ್ಳಲು ಕಲಾಭಿಮಾನಿಗಳಲ್ಲಿ ನಿರೀಕ್ಷೆಗಳು ಸಂತೋಷ ಮೂಡಿಸಿದೆ.

ಬಡಗು ತಿಟ್ಟಿನಲ್ಲಿ “ರಾಜ ಯಯಾತಿ” ಪ್ರಸಂಗ ಪ್ರದರ್ಶನಗೊಳ್ಳುತ್ತಿದ್ದು ಯಯಾತಿಯಾಗಿ ವಿದ್ಯಾಧರ ಜಲವಳ್ಳಿ, ದೇವಯಾನಿಯಾಗಿ ಶಶಿಕಾಂತ್ ಶೆಟ್ಟಿ, ಶರ್ಮಿಷ್ಠೆಯಾಗಿ ನೀಲ್ಕೋಡು, ವೃಷಪರ್ವನಾಗಿ ತೀರ್ಥಹಳ್ಳಿ, ಶುಕ್ರಾಚಾರ್ಯನಾಗಿ ಪ್ರಸನ್ನ ಶೆಟ್ಟಿಗಾರ್, ವೃದ್ದ ಯಯಾತಿಯಾಗಿ ರಮೇಶ ಭಂಡಾರಿಯವರು ಪಾತ್ರ ನಿರ್ವಹಿಸುತ್ತಿದ್ದು, ಕಾರ್ಕಳ ನೀಲ್ಕೋಡು ಇವರ ಮುಖಾಮುಖಿ, ಒಂದೇ ಪ್ರಸಂಗದಲ್ಲಿ ಜಲವಳ್ಳಿ ತೀರ್ಥಹಳ್ಳಿಯವರ ಪಾತ್ರ ನಿರ್ವಹಣೆ ಅಪರೂಪದ ಪಾತ್ರದಲ್ಲಿ ರಮೇಶ ಭಂಡಾರಿಯವರು ಎಲ್ಲಾ ವಿಶೇಷತೆಗಳು ಕಲಾಸಕ್ತರಲ್ಲಿ ನಿರೀಕ್ಷೆಗಳು ಕುತೂಹಲ ಮೂಡಿಸಿವೆ.

ಹೆಸರಾಂತ ಯುವ ಕಲಾವಿದರ ಸಮಾಗಮದಲ್ಲಿ ಶ್ವೇತಕುಮಾರ ಮೂರನೆ ಪ್ರಸಂಗವಾಗಿ ಪ್ರದರ್ಶನಗೊಳ್ಳುತ್ತಿದ್ದು, ಶ್ವೇತಕುಮಾರನಾಗಿ ಕಿರಾಡಿ, ತ್ರಿಲೋಕ ಸುಂದರಿಯಾಗಿ ಹಿಲಿಯಾಣ, ದುರ್ಜಯನಾಗಿ ಹೆನ್ನಾಬೈಲ್, ಯಮನಾಗಿ ಮಂಕಿ, ಚಿತ್ರಗುಪ್ತನಾಗಿ ಶ್ರೀಧರ ಕಾಸರಕೋಡು, ಪ್ರೇತನಾಗಿ ಜಾರ್ಕಳ, ಕರಾಳನೇತ್ರೆಯಾಗಿ ಲೋಹಿತ್ ಶೆಟ್ಟಿಗಾರ್ ಪರ್ಕಳ, ಈಶ್ವರನಾಗಿ ನಾಗರಾಜ್ ಭಂಡಾರಿ, ಸಿತಕೇತನಾಗಿ ಕಾರ್ತಿಕ್ ಕಣ್ಣಿ, ಲೋಹಿತನೇತ್ರನಾಗಿ ರಾಜೇಶ್ ಭಂಡಾರಿ, ಶಿವೆಯಾಗಿ ರಟ್ಟಾಡಿ, ರಂಬೆಯಾಗಿ ದೇವಲ್ಕುಂದ ಪಾಲ್ಗೊಳ್ಳುತ್ತಿದ್ದು, ಹಾಸ್ಯ ಶೃಂಗಾರ ವೀರರಸ ಸಮ್ಮಿಳಿತದ ಈ ಪ್ರಸಂಗ ಬೆಳಗಿನ ಜಾವದ ರಂಗದ ಕಾವನ್ನು ಹೆಚ್ಚಿಸುವಲ್ಲಿ ಈ ಪ್ರಸಂಗದ ಆಯ್ಕೆ ಕಲಾವಿದರ ಪಾತ್ರ ಹಂಚಿಕೆ ಎಲ್ಲವೂ ಪರಿಣಾಮ ಬೀರುವಲ್ಲಿ ಯಾವ ಸಂಶಯ ಕೂಡ ಇಲ್ಲ. ಜಾರ್ಕಳರ ಪ್ರೇತ, ಕಾಸರಕೋಡು ಇವರ ಚಿತ್ರಗುಪ್ತ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸುವುದರೊಂದಿಗೆ ಮಂಕಿಯವರ ಅಪರೂಪದ ಯಮ ಕುತೂಹಲ ಮೂಡಿಸಿದೆ. ಪ್ರಪ್ರಥಮವಾಗಿ ಕಿರಾಡಿ ಹಿಲಿಯಾಣ ಇವರು ಶೃಂಗಾರ ರಸದಲ್ಲಿ ಜೊತೆಯಾಗಲಿದ್ದು, ರಾಜೇಶ್ ಭಂಡಾರಿ, ಹೆನ್ನಾಬೈಲ್, ಕಾರ್ತಿಕ್ ಕಣ್ಣಿಯವರ ವೀರರಸದ ಮುಖಾಮುಖಿ ರಂಗದ ರಂಗನ್ನು ಹೆಚ್ಚಿಸುವಲ್ಲಿ ಯಶಸ್ವಿಯಾಗುವುದು ನಿಶ್ಚಿತ.

ಇಷ್ಟೆಲ್ಲ ವಿಶೇಷತೆಗಳನ್ನು ಒಳಗೊಂಡಿರುವ ಮುಮ್ಮೇಳಕ್ಕೆ ಬಡಗಿನ ಸ್ಟಾರ್ ಕಲಾವಿದರಾದ ಜನ್ಸಾಲೆ ಬ್ರಹ್ಮೂರು ಮೂಡುಬೆಳ್ಳೆಯವರ ಗಾನ ಸಾರಥ್ಯ ಜೊತೆಯಾದರೆ ಕಲಾಕ್ಷೇತ್ರದಲ್ಲಿ ಯಕ್ಷ ಲೋಕ ಸೃಷ್ಠಿಯಾಗುವುದರಲ್ಲಿ ಯಾವುದೆ ಅನುಮಾನ ಇಲ್ಲ.

ಕಲಾವಿದರುಗಳ ದಂಡೆ ಇದ್ದಾಗ ಸಂಯೋಜನೆ ಮಾಡುವುದು ಬಹಳ ಕಷ್ಟ, ಆ ಕಷ್ಟವನ್ನು ಸವಾಲಾಗಿ ಸ್ವೀಕರಿಸಿ ಆತ್ಮೀಯರ ಸಲಹೆ ಸಹಕಾರದೊಂದಿಗೆ ಈ ವಿಶೇಷವಾದ ಸಂಯೋಜನೆ ಮಾಡಿದವರು ಮಾನಸ ಉಪಾಧ್ಯ ಅವರು.

ಮಲೆನಾಡಿನ ಹೆಸರಾಂತ ಯಕ್ಷಗಾನ ಸಂಯೋಜಕ ಹಾಗೂ ಆಯೋಜಕರಾದ ದರಲಗೋಡು ನಾಗೇಂದ್ರ ಜೋಯ್ಸ್ ಅವರ ಸಾರಥ್ಯದಲ್ಲಿ ಮಾನಸ ಉಪಾಧ್ಯ ಅವರ ಸಂಯೋಜನೆಯಲ್ಲಿ ಮೂಡಿಬರುತ್ತಿರುವ ಯಕ್ಷ ಮಾನಸ ಕಾರ್ಯಕ್ರಮ ಯಶಸ್ವಿಯಾಗುವಲ್ಲಿ ಕಲಾಸಕ್ತರಾದ ನಾವೆಲ್ಲ ಭಾಗಿಯಾಗುವುದರೊಂದಿಗೆ ಕಾರ್ಯಕ್ರಮದ ಯಶಸ್ಸಿನಲ್ಲಿ ಪಾಲುದಾರರಾಗೋಣ.

ಸಂಪರ್ಕ: 7483148947

Categories
ಬೆಂಗಳೂರು ಸಿನಿಮಾ

ಕಾವೇರಿಗಾಗಿ ಶಿವಣ್ಣ ನೇತೃತ್ವದಲ್ಲಿ ಸಿನಿಮಾ ರಂಗದ ಸಾಥ್

ಕಾವೇರಿಗಾಗಿ ಶಿವಣ್ಣ ನೇತೃತ್ವದಲ್ಲಿ ಸಿನಿಮಾ ರಂಗದ ಸಾಥ್
– ದರ್ಶನ್,ಉಪೇಂದ್ರ, ನಟ -ನಟಿಯರು ಹಾಜರ್
– ನಟ – ನಟಿಯರು ಹೇಳಿದ್ದು ಏನು..?
– ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ಸಿದ್ದರಾಮಯ್ಯ ಸರ್ಕಾರ ಸಜ್ಜು

NAMMUR EXPRESS NEWS
ಬೆಂಗಳೂರು: ಕಾವೇರಿಗಾಗಿ ಶುಕ್ರವಾರ ನಡೆದ ಕರ್ನಾಟಕ ಬಂದ್ ಯಶಸ್ವಿಯಾಗಿದೆ. ಶಿವಣ್ಣ ನೇತೃತ್ವದಲ್ಲಿ ಸಿನಿಮಾ ರಂಗದ ಸಾಥ್ ನೀಡಿದೆ. ಪ್ರಮುಖ ನಟರಾದ ದರ್ಶನ್,ಉಪೇಂದ್ರ, ನಟ -ನಟಿಯರು ಹಾಜರ್ ಆಗಿ ಬೆಂಬಲ ನೀಡಿದ್ದಾರೆ. ಈ ನಡುವೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ಸಿದ್ದರಾಮಯ್ಯ ಸರ್ಕಾರ ಸಿದ್ಧತೆ ಮಾಡಿದೆ.

ಶಿವಣ್ಣ ಹೇಳಿದ್ದು ಏನು…?

ಕರ್ನಾಟಕ ಹಾಗೂ ತಮಿಳುನಾಡು ಸರಕಾರಗಳು ಕೂಲಂಕುಷವಾಗಿ ಪರಿಶೀಲಿಸಿ ಕಾವೇರಿ ನದಿ ನೀರಿನ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕಾಗಿದೆ ಎಂದು ನಟ ಶಿವರಾಜ್‌ಕುಮಾರ್ ತಿಳಿಸಿದ್ದಾರೆ. ಕಲಾವಿದರು ಬಂದು ನಿಂತು ಧರಣಿ ನಡೆಸಿದರೆ ಪರಿಹಾರ ಸಮಸ್ಯೆ ಆಗುವುದಿಲ್ಲ.ನಾವು ಆಯ್ಕೆ ಮಾಡಿರುವ ಸರಕಾರ ಈ ವಿವಾದವನ್ನು ಬಗೆಹರಿಸಬೇಕು ಎಂದರು.ಶುಕ್ರವಾರ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಕಾವೇರಿ ನೀರಿನ ಸಮಸ್ಯೆಯ ಪರಿಹಾರಕ್ಕಾಗಿ ಸುಮಾರು ವರ್ಷಗಳ ಕಾಲದಿಂದ ಹೋರಾಟ ಮಾಡಿಕೊಂಡು ಬರಲಾಗಿದೆ. ಹೋರಾಟದಲ್ಲಿ ಯಾವಾಗಲೂ ನಂಬಿಕೆ ಮತ್ತು ವಿಶ್ವಾಸದಿಂದ ಇದ್ದರೆ ಮಾತ್ರ ಗೆಲ್ಲುವುದಕ್ಕೆ ಸಾಧ್ಯವಾಗುತ್ತದೆ.

ಆದರಿಂದ ರಾಜ್ಯ ಹಾಗೂ ತಮಿಳುನಾಡಿನ ಸರಕಾರ ಜೊತೆಗೆ ಕೇಂದ್ರ ಮಧ್ಯಸ್ಥಿಕೆ ವಹಿಸಿ ಈ ಸಮಸ್ಯೆಯನ್ನು ಆದಷ್ಟು ಬೇಗ ಬಗೆಹರಿಸಬೇಕು. ಪ್ರತಿಯೊಬ್ಬರಿಗೂ ಕಾವೇರಿ ನೀರಿನ ಮೇಲೆ ಪ್ರೀತಿ ಇರುತ್ತದೆ ಎಂದು ಅವರು ತಿಳಿಸಿದರು.ನಾವೂ ಅದರಲ್ಲಿ ಭಾಗಿಯಾಗುತ್ತೇವೆ. ಅದೇ ರೀತಿ ಈ ತರ ಸಮಸ್ಯೆ ಬಂದಾಗ ನಾವೆಲ್ಲರೂ ಸೇರಿ ಒಗ್ಗಟ್ಟಾಗಿ ಹೋರಾಟ ಮಾಡಬೇಕಾಗಿದೆ. ಆದರೆ ನಮ್ಮ ಹೋರಾಟವನ್ನು ಲಾಭಕ್ಕಾಗಿ ಪಡೆದುಕೊಳ್ಳಬಾರದು.

ತಮಿಳುನಾಡಿನ ರೈತರು ಬೇರೆಯಲ್ಲ, ಕರ್ನಾಟಕದ ರೈತರು ಬೇರೆಯಲ್ಲ. ರೈತರು ಎಲ್ಲಿದ್ದರೂ ರೈತರೆ, ಆದುದರಿಂದ ರಸ್ತೆಯಲ್ಲಿರುವ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದರೆ ಅದು ಹೋರಾಟ ಆಗುವುದಿಲ್ಲ, ಅದು ತಪ್ಪು. ಸಮಸ್ಯೆಯಿಂದ ಯಾವ ರೀತಿ ಹೊರ ಬರಬೇಕೆಂಬುದನ್ನು ಕೂಲಂಕುಷವಾಗಿ ವಿಚಾರ ಮಾಡಬೇಕಾಗಿದೆ ಹೊರತು ಈ ರೀತಿ ಹೋರಾಟ ಮಾಡುವುದು ಸರಿಯಲ್ಲ. ಯಾವುದೇ ರೀತಿಯಾದ ಹೋರಾಟ ಮಾಡಿದರೂ ಬೇರೆಯವರ ಭಾವನೆಗಳಿಗೆ ಹಾಗೂ ಮನಸ್ಸಿಗೆ ನೋವಾಗಬಾರದು ಎಂದು ತಿಳಿಸಿದರು.

ಸಮಸ್ಯೆಗಳಿಗೆ ಪರಿಹಾರ ಸಿಕ್ಕಿಲ್ಲ: ನಟ ಉಪೇಂದ್ರ

ನಾನು ಚಿತ್ರರಂಗಕ್ಕೆ ಬಂದಾಗಿನಿಂದ ಸುಮಾರು 20ರಿಂದ 25 ಬಾರಿ ಈ ವಿಚಾರವಾಗಿ ಹೋರಾಟ ಮಾಡಿದ್ದೇನೆ. ಆದರೆ ಇಂದಿಗೂ ಪರಿಹಾರ ಸಿಕ್ಕಿಲ್ಲ. ಸಮಸ್ಯೆ ಎಂದರೆ ಅದು ಇದೇ ಇರಬೇಕು. ನಾವೆಲ್ಲರೂ ವಿಚಾರವಂತರಾಗಬೇಕು. ಸ್ವಲ್ಪ ವಿಚಾರ ಮಾಡಿದರೆ ಇದರ ಹಿಂದಿನ ರಹಸ್ಯ ಏನು ಎಂಬುದು ಗೊತ್ತಾಗುತ್ತದೆ. ನಮ್ಮಸಮಸ್ಯೆಯನ್ನು ನಾವೇ ಪರಿಹರಿಸಿಕೊಳ್ಳೋಣ ಎಂದರು. ನಟ ಸಂಗೀತ ನಿರ್ದೇಶಕ ಹಂಸಲೇಖ ಮಾತನಾಡಿ, ‘ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆಯೇ ಶ್ರೇಷ್ಠ ಮಾರ್ಗ. ರಾಜಕಾರಣಿಗಳು ಪ್ರತಿಭಟನೆ ಮಾಡಿದರೆ ಆಕ್ರೋಶ ಹೊರಬರುತ್ತದೆ. ದಾಳಿಕೋರರು ಪ್ರತಿಭಟನೆ ಮಾಡಿದರೆ ಶಾಂತಿ ಮತ್ತು ಸಂಯಮದಿಂದ ಕೂಡಿರಬೇಕು’ ಎಂದರು.

ಕಾವೇರಿ ಸಮಸ್ಯೆ ಮೊದಲಿನಿಂದಲೂ ಇದೆ. 10ನೇ ಶತಮಾನದಲ್ಲಿ ಈ ಬಗ್ಗೆ ಒಂದು ಶಾಸನದಲ್ಲಿ ಪ್ರಸ್ತಾಪ ಇದೆ. ಆ ಸಮಸ್ಯೆಯನ್ನು ಬಗೆಹರಿಸುವುದು ಕಲಾವಿದರ ಕೆಲಸ ಅಲ್ಲ. ಸಿನಿಮಾದ ಮೂಲಕ ಮಾರ್ಗಸೂಚಿ ನೀಡಬಹುದು ಎಂದು ಅವರು ಹೇಳಿದರು.ಇದೆ ಸಂದರ್ಭದಲ್ಲಿ ಹಿರಿಯ ಕಲಾವಿದರಾದ ಶೃತಿ, ಪೂಜಾಗಾಂಧಿ, ದರ್ಶನ್ ಗಿರಿಜಾ ಲೋಕೇಶ್, ಉಮಾಶ್ರೀ, ಶ್ರೀನಿವಾಸಮೂರ್ತಿ, ಶ್ರೀನಾಥ್, ಸುಂದ‌ ರಾಜ್, ವಾಸಂತಿ ಸೇರಿದಂತೆ ಅನೇಕ ಸಂಖ್ಯೆಯಲ್ಲಿ ಕಲಾವಿದರು, ನಿರ್ದೇಶಕರು, ನಿರ್ಮಾಪಕರು ಭಾಗವಹಿಸಿದ್ದರು.

ಸರ್ಕಾರಗಳು ಕೂತು ಮಾತನಾಡಬೇಕು: ರಿಷಬ್ ಶೆಟ್ಟಿ

ಮತ್ತೆ ತಮಿಳುನಾಡಿಗೆ ಕಾವೇರಿ ನೀರನ್ನ ಹರಿಸಲು ಸಿಡಬ್ಲ್ಯೂಎಂಎ ಆದೇಶ ಹೊರಡಿಸಿದ ಬಗ್ಗೆ ಪ್ರತಿಕ್ರಿಯೆ ನೀಡಿದ ನಟ ರಿಷಬ್ ಶೆಟ್ಟಿ, ನಮಗೆ ನೀರಿಲ್ಲ ಬೇರೆಯವರಿಗೆ ಎಲ್ಲಿ ಕೋಡಲು ಆಗುತ್ತದೆ? ಮಳೆ ಇಲ್ಲದೆ ಡ್ಯಾಮ್‌ಗಳು ಭರ್ತಿ ಆಗಿಲ್ಲ, ನೀರು ಬಿಡುತ್ತಿರುವುದರಿಂದ ನಮ್ಮ ರೈತರಿಗೆ ಅನ್ಯಾಯವಾಗುತ್ತಿದೆ. ಸಮಸ್ಯೆಗೆ ಎರಡು ಸರ್ಕಾರ ಕೂತು ಮಾತನಾಡಬೇಕು, ರೈತರಿಗೆ ನ್ಯಾಯ ಒದಗಿಸಬೇಕು ಎಂದರು. ಸದ್ಯ ಕಾಂತಾರ 2 ಸ್ಕ್ರಿಪ್ಟ್ ಕೆಲಸದಲ್ಲಿ ನಿರತರಾಗಿರುವ ರಿಷಬ್ ಹೊರಗಡೆ ಇದ್ದು ಪ್ರತಿಭಟನೆಯಲ್ಲಿ ಭಾಗಿಯಾಗಲು ಸಾಧ್ಯವಾಗಿಲ್ಲ.

ಗಾಯದ ಮೇಲೆ ಬರೆ ಎಳೆದ ಪ್ರಾಧಿಕಾರ

ಕಾವೇರಿ ಪ್ರಾಧಿಕಾರ ಎಂದಿನಂತೆ ನೀರು ಬಿಡಲು ಮತ್ತೆ ಅದೇಶಿಸಿದೆ. 18 ದಿನ 3000 ಕ್ಯೂಸೆಕ್ಸ್ ನೀರು ಬಿಡುವಂತೆ ಹೇಳಿದೆ. ಆದ್ರೆ ಕರ್ನಾಟಕ ನೀರು ಬಿಡಲ್ಲ ಎಂದು ಪಟ್ಟು ಹಿಡಿದಿದೆ. ಅಕ್ಟೋಬರ್ 15ರವರೆಗೆ 3000 ಕ್ಯೂಸೆಕ್ಸ್ ನೀರು ಬಿಡಬೇಕಿದೆ.
ಇದೀಗ ಸಿಎಂ ಸಿದ್ದರಾಮಯ್ಯ ನಿವೃತ್ತ ನ್ಯಾಯಮೂರ್ತಿಗಳು, ಮಾಜಿ ಅಧಿಕಾರಿಗಳು, ಕನ್ನಡ ಪರ ಸಂಘಟನೆಗಳ ಜತೆ ಮಾತುಕತೆ ನಡೆಸಿ ಸುಪ್ರೀಂ ಕೋರ್ಟ್ ಮುಂದೆ ಪರಿಶೀಲನಾ ಅರ್ಜಿ ಸಲ್ಲಿಸುವುದಾಗಿ ತಿಳಿಸಿದ್ದಾರೆ.

Categories
ಉಡುಪಿ

ವಿದ್ಯುತ್ ಪ್ರವಹಿಸಿ ದಂಪತಿಗಳಿಬ್ಬರು ದಾರುಣ ಸಾವು

ವಿದ್ಯುತ್ ಶಾಕ್: ಪತಿ ಜೀವ ಉಳಿಸಲು ಹೋಗಿ ಪತ್ನಿಯೂ ಸಾವು!
– ವಿದ್ಯುತ್ ಪ್ರವಹಿಸಿ ದಂಪತಿಗಳಿಬ್ಬರು ದಾರುಣ ಸಾವು
– ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕರಣಿಕರಮನೆಯಲ್ಲಿ ಘಟನೆ

NAMMUR EXPRESS NEWS
ಬೈಂದೂರು: ವಿದ್ಯುತ್ ಶಾಕ್ ಹೊಡೆದು ಪತಿ ಜೀವ ಉಳಿಸಲು ಹೋಗಿ ಪತ್ನಿಯೂ ಸಾವು ಕಂಡಿರುವ ದಾರುಣ ಘಟನೆ ಶುಕ್ರವಾರ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕರಣಿಕರಮನೆಯಲ್ಲಿ ನಡೆದಿದೆ.  ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ವ್ಯಾಪ್ತಿಯ ಕಟ್ ಬೆಲ್ತೂರು ಗ್ರಾ‌. ಪಂ ವ್ಯಾಪ್ತಿಯ ಸುಳ್ಸೆ ನಿವಾಸಿ ಮಹಾಬಲ ಅವರು ಕೂಲಿ ಕಾರ್ಮಿಕರಾಗಿದ್ದು ಮನೆ ಸಮೀಪದ ಕರಣಿಕರಮನೆ ಎಂಬಲ್ಲಿನ ಮನೆಯೊಂದಕ್ಕೆ ಶುಕ್ರವಾರ ಕೆಲಸಕ್ಕೆ ತೆರಳಿದ್ದರು. ಮಧ್ಯಾಹ್ನ 3 ಗಂಟೆಯಾದರೂ ಮನೆಗೆ ಬಾರದಿದ್ದಾಗ ಪತ್ನಿ ಲಕ್ಷ್ಮೀ ಕರಣಿಕರಮನೆ ದಾರಿಯಲ್ಲಿ ಬಂದಿದ್ದ ವೇಳೆ ಕಾಲು ಹಾದಿ ಬಳಿಯ ತೋಡಿನಲ್ಲಿ ಮಹಾಬಲ‌ ಅವರು ವಿದ್ಯುತ್ ತಂತಿ ಹಿಡಿದುಕೊಂಡ ಸ್ಥಿತಿಯಲ್ಲಿ ಬಿದ್ದುಕೊಂಡಿದ್ದರು.

ಪತಿಯ ಜೀವವನ್ನು ಉಳಿಸಲು ಹೋಗಿ ಪತ್ನಿ ಲಕ್ಷ್ಮಿ ದುರಂತದ ಸಾವು ಕಂಡರು. ಲಕ್ಷ್ಮೀ ಕೂಗಿಕೊಂಡು ನೆರೆಕೆರೆಯವರನ್ನು ಕರೆದಿದ್ದು ಅವರು ಬರುವಷ್ಟರೊಳಗೆ ಒದ್ದೆಯಾಗಿದ್ದ ಮರದ ಕೋಲು ಹಿಡಿದು ಗಂಡನನ್ನು ವಿದ್ಯುತ್ ಶಾಕ್ ನಿಂದ ತಪ್ಪಿಸಲು ಹೋದಾಗ ಮಹಿಳೆಗೂ ವಿದ್ಯುತ್ ಪ್ರವಹಿಸಿ ಸಮೀಪದ ಕೆರೆ ಬಳಿ ಎಸೆಯಲ್ಪಟ್ಟು ಮೃತಪಟ್ಟಿದ್ದಾರೆ. ಮಹಿಳೆ ಸ್ಥಳಕ್ಕೆ ಹೋಗದಂತೆ ಸ್ಥಳೀಯರು ಕೂಗಿಕೊಂಡರೂ ಕೂಡ ಕ್ಷಣಮಾತ್ರದಲ್ಲಿ ಈ ದುರ್ಘಟನೆ ಸಂಭವಿಸಿದೆ. ತಕ್ಷಣವೇ ನಿವಾಸಿಗಳು ಮೆಸ್ಕಾಂಗೆ ಕರೆ ಮಾಡಿ ವಿದ್ಯುತ್ ಸಂಪರ್ಕ ಕಡಿತಗೊಳಿಸಲು ಮಾಹಿತಿ ನೀಡಿದ ಬಳಿಕ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಾರೆಂದು ತಿಳಿದುಬಂದಿದೆ. ಮೃತ ದಂಪತಿಗೆ ಇಬ್ಬರು ಮಕ್ಕಳಿದ್ದು, ಓರ್ವ ಪುತ್ರ ಬೆಂಗಳೂರಿನಲ್ಲಿ ಕೆಲಸ‌ ಮಾಡುತ್ತಿದ್ದು, ಓರ್ವ ಪುತ್ರಿ‌ ಮನೆಯಲ್ಲಿದ್ದಾರೆ ಎಂದು ತಿಳಿದು ಬಂದಿದೆ.

ಮೃತರಿಗೆ ಪರಿಹಾರಕ್ಕೆ ಪಟ್ಟು

ಘಟನಾ ಸ್ಥಳಕ್ಕೆ ಕುಂದಾಪುರ ಡಿವೈಎಸ್ಪಿ ಬೆಳ್ಳಿಯಪ್ಪ ಕೆ.ಯು., ಶಂಕರನಾರಾಯಣ ವೃತ್ತನಿರೀಕ್ಷಕ ಜಯರಾಮ ಗೌಡ, ಕುಂದಾಪುರ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಸ್ಥಳಕ್ಕೆ ಬೈಂದೂರು ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಭೇಟಿ ನೀಡಿದ್ದು ಕುಟುಂಬಿಕರಿಗೆ ಸಾಂತ್ವಾನ ಹೇಳಿದರು.‌ ಸ್ಥಳದಲ್ಲಿಯೇ ಮೆಸ್ಕಾಂ ಹಿರಿಯ ಅಧಿಕಾರಿಗಳ ಜೊತೆ ದೂರವಾಣಿ ಮೂಲಕ ಮಾತನಾಡಿ, ಇಬ್ಬರ ಸಾವಿಗೆ ನ್ಯಾಯಕೊಡಿಸಿ. ಘಟನೆ ಬಗ್ಗೆ ತನಿಖೆ ನಡೆಸುವುದಲ್ಲದೆ ಸೂಕ್ತ ಪರಿಹಾರ ನೀಡಲು ಸೂಚನೆ ನೀಡಿದರು. ಗ್ರಾ.ಪಂ ಮಾಜಿ ಅಧ್ಯಕ್ಷ ನಾಗರಾಜ ಪುತ್ರನ್, ಸದಸ್ಯರಾದ ಶರತ್ ಕುಮಾರ್ ಶೆಟ್ಟಿ ಬಾಳಿಕೆರೆ, ಸುಮತಿ, ಸ್ಥಳೀಯರಾದ ಶೇಖರ್ ಬಳೆಗಾರ ಭೇಟಿ ನೀಡಿದರು. ಬೈಂದೂರು ತಾಲೂಕಿನ ಈ ಭಾಗದಲ್ಲಿ ತಂತಿಗಳು ಬಹಳ ಸಡಿಲ ಗೊಂಡಿದ್ದು ಮತ್ತು ಮರಗಳ ಕೊಂಬೆಗಳ ಒಳಭಾಗದಲ್ಲಿ ಹೋಗಿರುವುದರಿಂದ ತಂತಿ ತುಂಡಾಗಿ ನೆಲ ಭಾಗಕ್ಕೆ ಬಿದ್ದಿರುವುದರಿಂದ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Categories
ಮೈಸೂರು

ರಕ್ಷಣೆಗಾಗಿ ಪೊಲೀಸ್ ಠಾಣೆಗೆ ಬಂದ ಜಿಂಕೆ!

ರಕ್ಷಣೆಗಾಗಿ ಪೊಲೀಸ್ ಠಾಣೆಗೆ ಬಂದ ಜಿಂಕೆ!
– ನಂಜನಗೂಡಿನಲ್ಲೊಂದು ಅಪರೂಪದ ಘಟನೆ
– ಹಾಡಹಗಲೇ ಜಿಂಕೆ ಓಡಾಟ ಕಂಡು ಆಶ್ಚರ್ಯಗೊಂಡ ಜನ

NAMMUR EXPRESS NEWS
ಮೈಸೂರು: ಮನುಷ್ಯರು ತಮ್ಮ ರಕ್ಷಣೆಗಾಗಿ ಪೊಲೀಸರ ಮೊರೆ ಹೋಗುವುದನ್ನು ನೋಡಿದ್ದೇವೆ, ಕೇಳಿದ್ದೇವೆ. ಪೊಲೀಸರು ಮನುಷ್ಯರಿಗಷ್ಟೇ ಅಲ್ಲ, ಪ್ರಾಣಿಗಳಿಗೂ ರಕ್ಷಕರೇ ಎಂಬಂತೆ ಇಲ್ಲೊಂದು ಜಿಂಕೆ ತನ್ನ ರಕ್ಷಣೆಗಾಗಿ ಪೊಲೀಸ್ ಠಾಣೆಗೆ ಬಂದಿದೆ. ಇಂಥದ್ದೊಂದು ಅಪರೂಪದ ಘಟನೆ ನಡೆದಿದ್ದು ಮೈಸೂರು ಜಿಲ್ಲೆಯ ನಂಜನಗೂಡಿನಲ್ಲಿ. ತನ್ನನ್ನು ಬೆನ್ನತ್ತಿದ್ದ ಬೀದಿನಾಯಿಗಳಿಂದ ಪಾರಾಗಲು ಜಿಂಕೆಯೊಂದು ಪೊಲೀಸ್ ಠಾಣೆ ಮೆಟ್ಟಿಲೇರಿದ ಕುತೂಹಲಕಾರಿ ಘಟನೆ ಬುಧವಾರ ನಡೆದಿದೆ. ಹಾಡಹಗಲೇ ಪಟ್ಟಣದಲ್ಲಿ ಜಿಂಕೆ ಓಡಾಡಿದ್ದನ್ನು ಕಂಡು ಜನರು ಆಶ್ಚರ್ಯಚಕಿತರಾಗಿದ್ದಾರೆ.
ಬುಧವಾರ ಬೆಳಗ್ಗೆ 11:10ರ ಸುಮಾರಿಗೆ ಜಿಂಕೆ ದಾರಿ ತಪ್ಪಿ ನಂಜನಗೂಡು ಪಟ್ಟಣ ಪ್ರವೇಶಿಸಿದೆ. ಜನ ಹಾಗೂ ವಾಹನ ದಟ್ಟಣೆ ಕಂಡು ವಿಚಲಿತವಾಗಿ, ಕೆಲ ಬಡಾವಣೆಗಳಲ್ಲಿ ಸುತ್ತಾಡಿದೆ. ಈ ವೇಳೆ ಬೀದಿನಾಯಿಗಳು ಅದರ ಮೇಲೆ ಮುಗಿಬಿದ್ದು, ಮೂರ್ನಾಲ್ಕು ಕಡೆ ಅದನ್ನು ಕಚ್ಚಿ ಗಾಯಗೊಳಿಸಿವೆ.

ನಾಯಿಗಳ ದಾಳಿಯಿಂದ ತತ್ತರಿಸಿದ ಜಿಂಕೆ ನೇರವಾಗಿ ಪೊಲೀಸ್ ಠಾಣೆ ಸೇರಿಕೊಂಡಿದೆ. ನಂಜನಗೂಡಿನ ಶ್ರೀಕಂಠೇಶ್ವರ (ನಂಜುಂಡೇಶ್ವರ) ದೇವಾಲಯದ ಬಳಿಯಿರುವ ಪೋಲೀಸ್ ಉಪಠಾಣೆಯ ಮುಂಭಾಗದ ಬ್ಯಾರಿಕೇಡ್ ಹಾರಿ ನೇರವಾಗಿ ಠಾಣೆಯ ಕೊಠಡಿಗೆ ಬಂದು ನಿಂತಿದೆ. ಅನಿರೀಕ್ಷಿತವಾಗಿ ಪ್ರತ್ಯಕ್ಷವಾದ ಜಿಂಕೆ ಕಂಡು ಪೊಲೀಸರು ಆಶ್ಚರ್ಯಚಕಿತರಾಗಿದ್ದಾರೆ. ಕತ್ತಿನ ಭಾಗದಲ್ಲಿ ನಾಯಿ ಕಚ್ಚಿದ್ದರಿಂದ ಸೋರುತ್ತಿದ್ದ ರಕ್ತವನ್ನು ಗಮನಿಸಿದ ಪೊಲೀಸರು, ಜಿಂಕೆಗೆ ಪ್ರಾಥಮಿಕ ಚಿಕಿತ್ಸೆಯೊಂದಿಗೆ ಸಂತೈಸಿದ್ದಾರೆ. ಅಲ್ಲದೆ, ಠಾಣೆಯ ಕೊಠಡಿಯಲ್ಲೇ ಗಾಯಕ್ಕೆ ಅರಿಶಿನದ ಪುಡಿ ಹಚ್ಚಿ ರಕ್ತ ನಿಲ್ಲುವಂತೆ ಮಾಡಿದ್ದಾರೆ. ನಂತರ ಅರಣ್ಯ ಸಿಬ್ಬಂದಿಗೆ ಮಾಹಿತಿ ನೀಡಿದ್ದು, ಕೆಲ ಸಮಯದಲ್ಲೇ ಠಾಣೆಗೆ ಬಂದ ಅರಣ್ಯ ಸಿಬ್ಬಂದಿ ಜಿಂಕೆಯನ್ನು ಕೊಂಡೊಯ್ದು ಸುರಕ್ಷಿತ ಸ್ಥಳದಲ್ಲಿ ಬಿಟ್ಟುಬಂದಿದ್ದಾರೆ.