Categories
Uncategorized

ಹೊಸ ವರ್ಷಕ್ಕೆ ಜಿ.ಪಂ, ತಾ. ಪಂ ಚುನಾವಣೆ ಪಕ್ಕಾ! – ಚುನಾವಣೆ ನಡೆಸಲು ಆಯೋಗದ ಸಿದ್ಧತೆ: ಅಧಿಕಾರಿಗಳಿಗೆ ಆದೇಶ – 125 ಕೋಟಿ ರೂ. ಚುನಾವಣೆ ವಸ್ತು ಖರೀದಿಗೆ ಬಿಡುಗಡೆ

ಬೆಂಗಳೂರು: 2027ರ ಜನವರಿ ತಿಂಗಳಿನಲ್ಲಿ ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆ ಬಹುತೇಕ ಪಕ್ಕಾ ಎನ್ನಲಾಗುತ್ತಿದೆ.
ಚುನಾವಣೆಗೆ ಸಂಬಂಧಿಸಿದಂತೆ ಚುನಾವಣಾ ಆಯೋಗವು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಚುನಾವಣಾಧಿಕಾರಿಗಳು ಮತ್ತು ಸಹಾಯಕ ಚುನಾವಣಾಧಿಕಾರಿಗಳ ನೇಮಕಾತಿ ಪ್ರಕ್ರಿಯೆಯನ್ನು ಪ್ರಾರಂಭಿಸುವಂತೆ ಚುನಾವಣಾ ಆಯೋಗವು ತಿಳಿಸಿದೆ. ಈ ಆಯೋಗದ ಆದೇಶದಂತೆ ನಿರ್ದೇಶನದ ಪ್ರಕಾರ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳಿಗೆ ಸಹಾಯಕ ಆಯುಕ್ತರ ಹುದ್ದೆಯ ಅಥವಾ ಅದಕ್ಕೆ ಸಮನಾದ ಶ್ರೇಣಿಯನ್ನು ಹೊಂದಿರುವ ಅಧಿಕಾರಿಗಳನ್ನು ಚುನಾವಣಾಧಿಕಾರಿಗಳಾಗಿ ನೇಮಿಸಬೇಕಿದೆ. ಅದೇ ರೀತಿ ತಾಲ್ಲೂಕು ಮಟ್ಟದಲ್ಲಿ ತಹಶೀಲ್ದಾರರನ್ನು ಅಥವಾ ಅದಕ್ಕೆ ಸಮನಾದ ಶ್ರೇಣಿಯನ್ನು ಹೊಂದಿರುವಂತಹ ಚುನಾವಣಾಧಿಕಾರಿಗಳನ್ನು ನೇಮಿಸಬೇಕಿದೆ. ಅಷ್ಟೇ ಅಲ್ಲದೆ ಜಿಲ್ಲಾಧಿಕಾರಿಗಳು ಈ ವಿಚಾರವಾಗಿ ಸಭೆಗಳನ್ನು ನಡೆಸಿ ನೇಮಕಗೊಳ್ಳುವ ಚುನಾವಣಾಧಿಕಾರಿಗಳಿಗೆ ಅಗತ್ಯವಾಗಿರುವಂತಹ ತರಬೇತಿಗಳನ್ನು ನೀಡಬೇಕೆಂದು ಈ ಮೂಲಕ ತಿಳಿಸಲಾಗಿದೆ.

125 ಕೋಟಿ ಚುನಾವಣೆ ವಸ್ತು ಖರೀದಿಗೆ ಬಿಡುಗಡೆ

ಚುನಾವಣೆಗೆ ಸಂಬಂಧಿಸಿದಂತೆ ಚುನಾವಣಾ ಆಯೋಗವು ರಾಜ್ಯಾದ್ಯಂತ ಲಭ್ಯವಿರುವ ಮತಪೆಟ್ಟಿಗೆಗಳ ಪರಿಶೀಲನೆ ಮತ್ತು ಆಡಿಟ್ ಅನ್ನು ಪೂರ್ಣಗೊಳಿಸಿದ್ದು, ಈ ಸಂದರ್ಭದಲ್ಲಿ ಸುಮಾರು 80 ಕೋಟಿಗೂ ಹೆಚ್ಚಿನ ಮೌಲ್ಯದ ಮತಪೆಟ್ಟಿಗೆಗಳು ಮರುಬಳಕೆಗೆ ಯೋಗ್ಯವಾಗಿದೆ ಎನ್ನುವುದು ತಿಳಿದುಬಂದಿದೆ. ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆಯನ್ನು ನಡೆಸಲು ಬೇಕಾಗಿರುವಂತಹ ಹೆಚ್ಚುವರಿ ಮತಪೆಟ್ಟಿಗೆಗಳು ಮತ್ತು ಇತರ ಚುನಾವಣಾ ಸಾಮಗ್ರಿಗಳ ಖರೀದಿಗಾಗಿ ರಾಜ್ಯ ಸರ್ಕಾರವು ಚುನಾವಣಾ ಆಯೋಗಕ್ಕಾಗಿ ಇತ್ತೀಚೆಗೆ 125 ಕೋಟಿ ರೂಪಾಯಿಗಳಷ್ಟು ಹಣವನ್ನು ಬಿಡುಗಡೆಗೊಳಿಸಿದೆ ಎನ್ನಲಾಗಿದೆ.

Categories
Uncategorized

•ನರಸಿಂಹರಾಜಪುರ: ಕೊಟ್ಟ ಸಾಲ ಕೇಳಿದ್ದಕ್ಕೆ ಕತ್ತಿಯಿಂದ ಹಲ್ಲೆ! •ಚಿಕ್ಕಮಗಳೂರು: ನರ್ಸಿಂಗ್ ವಿದ್ಯಾರ್ಥಿ ನಾಪತ್ತೆ •ಹೊಸನಗರ: ಮಹಿಳೆಗೆ ಕಚ್ಚಿದ ನಾಗರಹಾವು: ಮಹಿಳೆ ಸಾವು •ಸಾಗರ: ಬುದ್ಧಿಮಾಂದ್ಯ ವ್ಯಕ್ತಿಯ ಮೇಲೆ ಚಾಕುವಿನಿಂದ ಹಲ್ಲೆ

ನರಸಿಂಹರಾಜಪುರ: ವ್ಯಕ್ತಿಯೊಬ್ಬರು ತಮ್ಮ ಪರಿಚಯಸ್ಥರಿಂದ ಕೊಡಿಸಿದ್ದ 50.000ರೂಪಾಯಿ ಸಾಲದ ಹಣವನ್ನು ಮರಳಿ ಕೇಳಿದ್ದಕ್ಕೆ ಅವರ ಮೇಲೆ ಕತ್ತಿಯಿಂದ ಹಲ್ಲೆ ನಡೆಸಿದ ಘಟನೆ, ಬಾಳೆಹೊನ್ನೂರು ವ್ಯಾಪ್ತಿಯಲ್ಲಿ ನಡೆದಿದೆ. ಮುದುಗುಣಿ ಗ್ರಾಮದ ನಿವಾಸಿಯಾದ ರಾಜು ಅವರು ಕಳೆದ 5 ತಿಂಗಳ ಹಿಂದೆ ತಮ್ಮ ಪರಿಚಯಸ್ಥರಾದ ಕಾಡುಸಿಗಸೆ ಗ್ರಾಮದ ಚಂದ್ರೇಗೌಡ ಅವರಿಂದ ತಮ್ಮ ಗ್ರಾಮದ ನಿವಾಸಿಯಾದ ಸುರೇಶ್ ಎನ್ನುವವರಿಗೆ ಹಣದ ಅವಶ್ಯಕತೆ ಇರುವ ಹಿನ್ನೆಲೆಯಲ್ಲಿ 50.000 ರೂಪಾಯಿಗಳಷ್ಟು ಹಣವನ್ನು ಸಾಲವಾಗಿ ಕೊಡಿಸಿದ್ದರು ಎನ್ನಲಾಗಿದೆ. ಕಳೆದೆರಡು ದಿನಗಳ ಹಿಂದೆ ರಾಜು ಅವರು ಸುರೇಶ ಅವರನ್ನು ಭೇಟಿಯಾದ ಸಂದರ್ಭದಲ್ಲಿ ಸಾಲದ ವಿಚಾರವನ್ನು ಪ್ರಸ್ತಾಪಿಸಿ, ಹಣವನ್ನು ಹಿಂತಿರುಗಿಸುವಂತೆ ಕೇಳಿಕೊಂಡಿದ್ದಾರೆ. ಇದಕ್ಕೆ ಪ್ರತಿಯಾಗಿ ಸುರೇಶ್ ಅವರು ನಾಳೆ ಹಣವನ್ನು ಹಿಂತಿರುಗಿಸುವುದಾಗಿ ತಿಳಿಸಿದ್ದರು. ಮರುದಿನ ಸುರೇಶ್ ಅವರು ಹರಿಪ್ರಸಾದ್ ಎನ್ನುವವರನ್ನು ಜೊತೆಗೆ ಕರೆದುಕೊಂಡು ಬಂದು ರಾಜು ಅವರ ಮನೆಯ ಬಳಿ ಗಲಾಟೆ ನಡೆಸಿದ್ದಾರೆ. ಅಷ್ಟೇ ಅಲ್ಲದೆ ಸಾಲದ ಹಣವನ್ನು ಮರಳಿ ಕೇಳಿದ್ದಕ್ಕಾಗಿ ರಾಜು ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಕತ್ತಿಯಿಂದ ಅವರ ಮೇಲೆ ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿದ್ದಾರೆ ಎನ್ನುವ ಸಂಗತಿ ತಿಳಿದುಬಂದಿದೆ. ಇದಕ್ಕೆ ಸಂಬಂಧಿಸಿದಂತೆ ರಾಜು ಅವರು ಪೊಲೀಸರಿಗೆ ದೂರು ನೀಡಿದ್ದು, ದೂರಿನ ಆಧಾರದ ಮೇಲೆ ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

•ಹೊಸನಗರ: ಮಹಿಳೆಗೆ ಕಚ್ಚಿದ ನಾಗರಹಾವು

ಹೊಸನಗರ: ಅಡಿಕೆ ತೋಟದ ಕೆಲಸದಲ್ಲಿ ನಿರತರಾಗಿದ್ದ ಮಹಿಳೆಗೆ ನಾಗರಹಾವೊಂದು ಕಚ್ಚಿರುವ ಘಟನೆ, ಕಳೆದೆರಡು ದಿನಗಳ ಹಿಂದೆ ನಗರ ಸಮೀಪದ ಕಟ್ಟಿಕೊಪ್ಪ ಗ್ರಾಮದ ದೊಡ್ಡಿಮನೆಯಲ್ಲಿ ನಡೆದಿದೆ. ತಮ್ಮ ಪತಿಯೊಂದಿಗೆ ಅಡಿಕೆ ತೋಟದಲ್ಲಿ ಅಡಿಕೆ ಮತ್ತು ಸೋಗೆಗಳನ್ನು ಆರಿಸುತ್ತಿದ್ದ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. ಕೈಬೆರಳಿಗೆ ನಾಗರಹಾವು ಕಚ್ಚಿದೊಡನೆ ಮಹಿಳೆಯು ಅಸ್ವಸ್ಥಗೊಂಡಿದ್ದು, ತಕ್ಷಣ ಅವರನ್ನು ತೀರ್ಥಹಳ್ಳಿಯ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದಾರೆ ಎನ್ನಲಾಗಿದೆ. ಅಲ್ಲಿ ಚಿಕಿತ್ಸೆಗೆ ಸ್ಪಂದಿಸದ ಹಿನ್ನೆಲೆಯಲ್ಲಿ ಕೂಡಲೇ ಅವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತಾದರೂ, ಆಸ್ಪತ್ರೆಗೆ ತಲುಪುವುದರ ಒಳಗಾಗಿ ಮಾರ್ಗಮಧ್ಯದಲ್ಲೇ ಸಾವನ್ನಪ್ಪಿದರು ಎನ್ನುವ ಮಾಹಿತಿ ಲಭಿಸಿದೆ. ಮೃತ ಮಹಿಳೆಯನ್ನು ಶ್ರೀಲತಾ ಎಂದು ಗುರುತಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಶ್ರೀಲತಾ ಅವರ ಪತಿ ಡಿ.ವಿ.ನಾಗರಾಜ್ ಅವರು ನೀಡಿರುವ ಹೇಳಿಕೆಯ ಆಧಾರದ ಮೇಲೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

•ಚಿಕ್ಕಮಗಳೂರು: ನರ್ಸಿಂಗ್ ವಿದ್ಯಾರ್ಥಿ ನಾಪತ್ತೆ

ಚಿಕ್ಕಮಗಳೂರು: ಹಾಸ್ಟೆಲ್ ನಿಂದ ಹೊರಗೆ ಹೋದ ನರ್ಸಿಂಗ್ ವಿದ್ಯಾರ್ಥಿಯೊಬ್ಬ ನಾಪತ್ತೆಯಾಗಿರುವ ಘಟನೆಯೊಂದು ನಡೆದಿದೆ. ನಾಪತ್ತೆಯಾಗಿರುವ ವಿದ್ಯಾರ್ಥಿಯನ್ನು ಮೂಡಿಗೆರೆ ತಾಲ್ಲೂಕಿನ ಕೊಟ್ಟಿಗೆಹಾರ ಸಮೀಪದ ತರುವೆ ಗ್ರಾಮದ ನಿವಾಸಿಯಾದ ರಕ್ಷಿತ್ ಟಿ.ಎಸ್ ಎಂದು ಹೇಳಲಾಗಿದೆ. ರಕ್ಷಿತ್ ಚಿಕ್ಕಮಗಳೂರಿನ ಸಿಐಎಂಎಸ್ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿಎಸ್ಸಿ ನರ್ಸಿಂಗ್ ಅನ್ನು ವ್ಯಾಸಂಗ ಮಾಡುತ್ತಿದ್ದು, ಸರ್ಕಾರಿ ವೃತ್ತಿಪರ ಕಾಲೇಜಿನ ಬಾಲಕರ ವಸತಿ ನಿಲಯದಲ್ಲಿ ವಾಸವಾಗಿದ್ದರು ಎನ್ನಲಾಗಿದೆ. ನವೆಂಬರ್ 7ರ ಶನಿವಾರದಂದು ಮಧ್ಯಾಹ್ನ 12:30ರ ಸುಮಾರಿಗೆ ಹಾಸ್ಟೆಲ್ ನಿಂದ ಹೊರಗೆ ಹೋದ ರಕ್ಷಿತ್ ಮರಳಿ ಹಾಸ್ಟೆಲ್ ಗಾಗಲಿ ತನ್ನ ಮನೆಗಾಗಲಿ ಮರಳಿ ಬಂದಿಲ್ಲ ಎನ್ನುವ ಮಾಹಿತಿ ಲಭಿಸಿದೆ. ಹಾಸ್ಟೆಲ್ ನ ಸಿಸಿಟಿವಿ ಕ್ಯಾಮೆರಾದಲ್ಲಿ ರಕ್ಷಿತ್ ಹೊರಹೋಗಿರುವುದು ದಾಖಲಾಗಿದ್ದು, ಹಿಂತಿರುಗಿರುವುದು ಪತ್ತೆಯಾಗಿಲ್ಲ. ಅಲ್ಲದೆ ಹಾಸ್ಟೆಲ್ ನಿಂದ ಹೊರಹೋದ ದಿನ ರಾತ್ರಿ ರಕ್ಷಿತ್ ತನ್ನ ಸ್ನೇಹಿತರಿಗೆ ಕರೆ ಮಾಡಿ ಮಾತನಾಡಿದ್ದು, ಬಳಿಕ ಮೊಬೈಲ್ ಕೂಡ ಸ್ವಿಚ್ ಆಫ್ ಮಾಡಿಕೊಂಡಿದ್ದಾನೆ. ಕುಟುಂಬದವರಿಗೂ ಆತ ಸಂಪರ್ಕಿಸಿಲ್ಲ ಎನ್ನುವ ಸಂಗತಿ ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ನವೆಂಬರ್ 11ರ ಬುಧವಾರದಂದು ರಕ್ಷಿತ್ ಅವರ ಸಹೋದರ ಪೊಲೀಸರಿಗೆ ದೂರು ನೀಡಿದ್ದು, ದೂರಿನ ಆಧಾರದ ಮೇಲೆ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

•ಸಾಗರ: ಬುದ್ಧಿಮಾಂದ್ಯ ವ್ಯಕ್ತಿಯ ಮೇಲೆ ಚಾಕುವಿನಿಂದ ಹಲ್ಲೆ

ಸಾಗರ: ಬುದ್ಧಿಮಾಂದ್ಯ ವ್ಯಕ್ತಿಯ ಮೇಲೆ ಇಬ್ಬರು ಅಪರಿಚಿತ ವ್ಯಕ್ತಿಗಳು ಚಾಕುವಿನಿಂದ ಹಲ್ಲೆ ನಡೆಸಿರುವ ಘಟನೆ, ಬುಧವಾರದಂದು ಜೋಸೆಫ್ ನಗರದ ರಸ್ತೆಯಲ್ಲಿ ನಡೆದಿದೆ. ಬುದ್ಧಿಮಾಂದ್ಯ ವ್ಯಕ್ತಿಯು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ, ಬೈಕ್ ನಲ್ಲಿ ಆಗಮಿಸಿದ ಇಬ್ಬರು ಅಪರಿಚಿತ ವ್ಯಕ್ತಿಗಳಲ್ಲಿ, ಹಿಂಬದಿಯಲ್ಲಿ ಕುಳಿತಿದ್ದ ವ್ಯಕ್ತಿಯು ಚಾಕು ತೋರಿಸಿ, ಹಲ್ಲೆ ನಡೆಸಿ, ಬೆದರಿಸಿದ್ದಾನೆ ಎನ್ನಲಾಗಿದೆ. ಬಳಿಕ ಅಪರಿಚಿತ ವ್ಯಕ್ತಿಗಳು ಅಲ್ಲಿಂದ ಪರಾರಿಯಾಗಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ. ಅಸಹಾಯಕ ವ್ಯಕ್ತಿಯ ಮೇಲೆ ಏಕಾಏಕಿ ದಾಳಿ ನಡೆದಿರುವುದು ಸ್ಥಳೀಯರಲ್ಲಿ ಆತಂಕವನ್ನುಂಟು ಮಾಡಿದ್ದು, ಇಂತಹ ದುಷ್ಕರ್ಮಿಗಳನ್ನು ಕೂಡಲೇ ಪತ್ತೆ ಹಚ್ಚಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಪೊಲೀಸರಿಗೆ ಆಗ್ರಹಪಡಿಸಿದ್ದಾರೆ.

Categories
Uncategorized

ಬೆಳ್ತಂಗಡಿ: ನೇತ್ರಾವತಿ ಸ್ನಾನಘಟ್ಟದ ಬಳಿ ತಲೆಬುರುಡೆ ಪತ್ತೆ •ಬೆಳ್ತಂಗಡಿ: ಕ್ರೆಡಿಟ್ ಕೋಆಪರೇಟಿವ್ ಸಿಬ್ಬಂದಿ ಆತ್ಮಹತ್ಯೆ •ಬಂಟ್ವಾಳ: ವ್ಯಕ್ತಿಗೆ ಜೀಪಿನಿಂದ ಡಿಕ್ಕಿ ಹೊಡೆದು ಕೊಲೆಗೆ ಯತ್ನ •ಬೈಂದೂರು: ಅಕ್ರಮ ಕೆಂಪುಕಲ್ಲು ಗಣಿಗಾರಿಕೆ; ವಾಹನಗಳು ವಶ

ಬೆಳ್ತಂಗಡಿ: ರಾಜ್ಯ ಹೆದ್ದಾರಿ ರಸ್ತೆಯ ಪಕ್ಕದಲ್ಲಿರುವ ನೇತ್ರಾವತಿ ಸ್ನಾನಘಟ್ಟದ ಮುಂಭಾಗದಲ್ಲಿ ತಲೆಬುರುಡೆಯೊಂದು ಪತ್ತೆಯಾಗಿರುವ ಘಟನೆ, ಗುರುವಾರದಂದು ಸಂಜೆಯ ಹೊತ್ತಿಗೆ ಧರ್ಮಸ್ಥಳ ಗ್ರಾಮದಲ್ಲಿ ನಡೆದಿದೆ. ಮಾಹಿತಿ ಲಭ್ಯವಾಗುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಧರ್ಮಸ್ಥಳ ಪೊಲೀಸರು, ಸೀನ್ ಆಫ್ ಕ್ರೈಂ ಆಫೀಸರ್ ಗಳ ತಂಡವು ಪರಿಶೀಲನೆಯನ್ನು ನಡೆಸಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ. ಈ ತಲೆಬುರುಡೆ ಯಾವ ವ್ಯಕ್ತಿಯದು ಅದು ಇಲ್ಲಿಗೆ ಹೇಗೆ ಬಂದಿತು ಎನ್ನುವುದರ ಕುರಿತು ಸ್ಪಷ್ಟವಾಗಿ ತಿಳಿದುಬಂದಿಲ್ಲ. ಈ ಹಿನ್ನೆಲೆಯಲ್ಲಿ ಪೊಲೀಸರು ತೀವ್ರ ರೀತಿಯ ಕಾರ್ಯಾಚರಣೆಯನ್ನು ಕೈಗೊಂಡಿದ್ದು, ವರದಿಯ ಬಳಿಕ ಹೆಚ್ಚಿನ ಸಂಗತಿ ತಿಳಿದುಬರಬೇಕಿದೆ.

•ಬೆಳ್ತಂಗಡಿ: ಕ್ರೆಡಿಟ್ ಕೋಆಪರೇಟಿವ್ ಸಿಬ್ಬಂದಿ ಆತ್ಮಹತ್ಯೆ

ಬೆಳ್ತಂಗಡಿ: ಕ್ರೆಡಿಟ್ ಕೋಆಪರೇಟಿವ್ ನ ಸಿಬ್ಬಂದಿಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ, ಬುಧವಾರದಂದು ಬಾಳೆಹಿತ್ತಿಲು ಗ್ರಾಮದಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ವೆಂಕಟರಮಣ ಕ್ರೆಡಿಟ್ ಕೋಆಪರೇಟಿವ್ ಬ್ಯಾಂಕ್ ನ ಬೆಳ್ತಂಗಡಿ ಶಾಖೆಯಲ್ಲಿ ಪಿಗ್ಗಿ ಸಂಗ್ರಹಕಾರರಾಗಿ ಕಾರ್ಯನಿರ್ವಹಿಸುತ್ತಿದ್ದ, ಬಾಳೆಹಿತ್ತಿಲು ನಿವಾಸಿಯಾದ ಪುನೀತ್ ಅಲಿಯಾಸ್ ಪುರುಷೋತ್ತಮ ಗೌಡ ಎಂದು ಗುರುತಿಸಲಾಗಿದೆ. ದೀಪಾವಳಿ ಹಬ್ಬವನ್ನು ಸಂಬಂಧಿಕರು ಮತ್ತು ಸಹೋದರರೊಂದಿಗೆ ಉತ್ಸಾಹದಿಂದ ಆಚರಿಸಿ, ಅವರೊಂದಿಗೆ ಕಾಲ ಕಳೆದ ಪುನೀತ್ ಅವರು, ನವೆಂಬರ್ 11ರ ಬುಧವಾರದಂದು ರಾತ್ರಿ ಮನೆಯ ಸಮೀಪದಲ್ಲಿರುವ ತೋಟದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ. ಆತ್ಮಹತ್ಯೆಗೆ ಕಾರಣವೇನು ಎನ್ನುವುದು ಸ್ಪಷ್ಟವಾಗಿ ತಿಳಿದುಬಂದಿಲ್ಲ. ಘಟನೆಗೆ ಸಂಬಂಧಿಸಿದಂತೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸಾವಿನ ಸತ್ಯವನ್ನು ಬಹಿರಂಗಪಡಿಸಲು ತೀವ್ರ ರೀತಿಯ ತನಿಖೆಯನ್ನು ಕೈಗೊಂಡಿದ್ದಾರೆ.

•ಬಂಟ್ವಾಳ: ವ್ಯಕ್ತಿಗೆ ಜೀಪಿನಿಂದ ಢಿಕ್ಕಿ ಹೊಡೆದು ಕೊಲೆಗೆ ಯತ್ನ

ಬಂಟ್ವಾಳ: ವ್ಯಕ್ತಿಯೊಬ್ಬರನ್ನು ಜೀಪಿನಿಂದ ಢಿಕ್ಕಿ ಹೊಡೆದು ಕೊಲೆ ಮಾಡಲು ಯತ್ನಿಸಿದ ಆರೋಪಿಯನ್ನು ಪೊಲೀಸರು ಬಂಧಿಸಿರುವ ಘಟನೆ, ಮಾಣಿ ಜಂಕ್ಷನ್ ಬಳಿ ನಡೆದಿದೆ. ಮಾಣಿ ನಿವಾಸಿಯಾದ ವಿಕೇಶ್ ಅವರು ರಸ್ತೆ ಬದಿಯಲ್ಲಿ ನಿಂತುಕೊಂಡಿದ್ದ ಸಂದರ್ಭದಲ್ಲಿ ಜಗದೀಶ್ ಜೈನ್ ಎನ್ನುವ ವ್ಯಕ್ತಿಯು ಈ ಕೃತ್ಯವನ್ನು ಎಸಗಿದ್ದಾರೆ ಎನ್ನಲಾಗಿದೆ.‌ ವಿಕೇಶ್ ಅವರು ಪ್ರಾಣಾಪಾಯದಿಂದ ಪಾರಾಗಲು ಪ್ರಯತ್ನಿಸುವಾಗ ಜೀಪಿನ ಬ್ಯಾನೆಟ್ ಮೇಲೆ ಹಾರಿ, ಮಣ್ಣಿನ ಮೇಲೆ ಬಿದ್ದಿದ್ದಾರೆ. ಪರಿಣಾಮವಾಗಿ ವಿಕೇಶ್ ಅವರ ಕಾಲಿಗೆ ಗಾಯಗಳಾಗಿವೆ ಎನ್ನುವ ಮಾಹಿತಿ ಲಭಿಸಿದೆ. ವಿಕೇಶ್ ಅವರ ಸಂಬಂಧಿಯಾದ ತೀರ್ಥಪ್ರಸಾದ್ ಅವರಿಗೂ ಢಿಕ್ಕಿ ಹೊಡೆಯಲು ಜಗದೀಶ್ ಜೈನ್ ಅವರು ಪ್ರಯತ್ನಿಸಿದ್ದಾರೆ ಎನ್ನುವ ಸಂಗತಿ ತಿಳಿದುಬಂದಿದೆ. ಅಪಘಾತ ಸಂಭವಿಸುತ್ತಿದ್ದಂತೆ ಜನರು ಸೇರುವುದನ್ನು ಗಮನಿಸಿದ ಜಗದೀಶ್ ಜೈನ್ ವಿಕೇಶ್ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಜೀವ ಬೆದರಿಕೆ ಹಾಕಿ ಅಲ್ಲಿಂದ ತೆರಳಿದ್ದಾನೆ. ಈ ಹಿನ್ನೆಲೆಯಲ್ಲಿ ವಿಕೇಶ್ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಜಗದೀಶ್ ಜೈನ್ ನನ್ನು ಬಂಧಿಸಿ, ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ. ನ್ಯಾಯಾಲಯವು ಆತನಿಗೆ ನ್ಯಾಯಾಂಗ ಬಂಧನವನ್ನು ವಿಧಿಸಿದೆ.

•ಬೈಂದೂರು: ಅಕ್ರಮ ಕೆಂಪುಕಲ್ಲು ಗಣಿಗಾರಿಕೆ; ವಾಹನಗಳು ವಶ

ಬೈಂದೂರು: ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ಕೆಂಪುಕಲ್ಲು ಗಣಿಗಾರಿಕೆ ನಡೆಸಿದ ಪರಿಣಾಮವಾಗಿ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿರುವ ಘಟನೆ, ಕಾಲ್ತೋಡು ಗ್ರಾಮದಲ್ಲಿ ನಡೆದಿದೆ. ಪೊಲೀಸರ ಸಹಕಾರದೊಂದಿಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಉಡುಪಿ ಜಿಲ್ಲಾ ಭೂವಿಜ್ಞಾನಿಗಳಾದ ಕುಮಾರ್ ಬಿ ಅವರು ಕಾಲ್ತೋಡು ಗ್ರಾಮದ ಬ್ಯಾಟಿಯಾಣಿಯಲ್ಲಿನ ರಬ್ಬರ್ ತೋಟದ ಹಿಂಭಾಗದಲ್ಲಿರುವ ಸರ್ಕಾರಿ ಜಾಗಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಆರೋಪಿಗಳು ಸುಮಾರು 14 ಮೀಟರ್ ಉದ್ದ, 8 ಮೀಟರ್ ಅಗಲ ಮತ್ತು 1 ಮೀಟರ್ ಆಳದ ಪ್ರದೇಶದಲ್ಲಿ ನೆಲವನ್ನು ಅಗೆದು ಸುಮಾರು 294 ಮೆಟ್ರಿಕ್ ಟನ್ ಕೆಂಪುಕಲ್ಲುಗಳನ್ನು ಅಕ್ರಮವಾಗಿ ತೆಗೆದು ಸಾಗಿಸಿರುವುದು ಬೆಳಕಿಗೆ ಬಂದಿದೆ. ಇದರಿಂದಾಗಿ ಸರ್ಕಾರಕ್ಕೆ ಸುಮಾರು 4.65.405 ರೂಪಾಯಿಗಳಷ್ಟು ನಷ್ಟ ಸಂಭವಿಸಿದೆ ಎನ್ನುವ ಮಾಹಿತಿ ಲಭಿಸಿದೆ. ಈ ಸಂದರ್ಭದಲ್ಲಿ ಅಕ್ರಮ ಗಣಿಗಾರಿಕೆಗೆ ಬಳಸಿದ ಒಂದು ಟಿಲ್ಲರ್ ಯಂತ್ರ, ಎರಡು ಕಲ್ಲುಗಳನ್ನು ಎತ್ತುವ ಟ್ರಾಲಿಗಳು ಮತ್ತು ಕಲ್ಲು ಸಾಗಾಟಕ್ಕೆ ಬಳಸಲು ನಿಲ್ಲಿಸಿದ್ದಂತಹ ಟಿಪ್ಪರ್ ಲಾರಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಅಪರಾಧ ಕ್ರಮ 166/2026ರ ಅನ್ವಯ ಭಾರತೀಯ ನ್ಯಾಯ ಸಂಹಿತೆ ಕಲಂ 3೦3(2) ಹಾಗೂ ಎಂಎಂಡಿಆರ್ ಕಾಯ್ದೆಯ ಕಲಂ 4 ಮತ್ತು 21ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

Categories
Uncategorized

ಎನ್.ಆರ್ ಪುರ ಬಸ್‌ ನಿಲ್ದಾಣ ಶೌಚಾಲಯದಲ್ಲೇ ಹೆಣ್ಣು ಮಗುವಿಗೆ ಜನ್ಮ! – ದೊಡ್ಡ ಮಗಳನ್ನು ಹಾಸ್ಟೆಲ್ ಬಿಡಲು ಬಂದಿದ್ದ ಮಹಿಳೆಗೆ ಮಗು ಜನನ – ವೈದ್ಯರು ಮತ್ತು ಸಿಬ್ಬಂದಿಯಿಂದ ಆರೈಕೆಗೆ ಮೆಚ್ಚುಗೆ

ಎನ್.ಆರ್ ಪುರ: ನರಸಿಂಹರಾಜಪುರ ಪಟ್ಟಣದ ಬಸ್‌ ನಿಲ್ದಾಣದ ಸಾರ್ವಜನಿಕ ಶೌಚಾಲಯದಲ್ಲೇ ಮಹಿಳೆಯೊಬ್ಬರು ಹೆಣ್ಣು ಮಗುವಿಗೆ ಜನ್ಮ ನೀಡಿದ ಘಟನೆ ಗುರುವಾರ ನಡೆದಿದೆ.
ತರೀಕೆರೆ ತಾಲ್ಲೂಕಿನ ಕಲ್ಲೇನಹಳ್ಳಿ ಗ್ರಾಮದ ನಿವಾಸಿ ಗೀತಾ (32) ಹೆಣ್ಣು ಮಗುವಿಗೆ ಜನ್ಮ ನೀಡಿದ ಮಹಿಳೆ. ಅವರು ಗುರುವಾರ ಬೆಳಿಗ್ಗೆ ತಮ್ಮಮಗಳನ್ನು ಕೊಪ್ಪದ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಬಿಡಲು ಗ್ರಾಮದಿಂದ ಬಂದಿದ್ದರು. ಮಗಳನ್ನು ಶಾಲೆಗೆ ಬಿಟ್ಟು ಮಧ್ಯಾಹ್ನ ಊರಿಗೆ ಮರಳಲು ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ನರಸಿಂಹರಾಜಪುರದ ಬಸ್ ನಿಲ್ದಾಣದಲ್ಲಿ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಈ ವೇಳೆ ಮೂತ್ರ ವಿಸರ್ಜನೆಗೆಂದು ಸಾರ್ವಜನಿಕ ಶೌಚಾಲಯಕ್ಕೆ ತೆರಳಿದಾಗ ಅಲ್ಲಿಯೇ ಹೆರಿಗೆಯಾಗಿದೆ. ವಿಷಯ ತಿಳಿದ ಶೌಚಾಲಯದ ನಿರ್ವಹಣಾ ಸಿಬ್ಬಂದಿ ಸಮಾಜ ಸೇವಕಿ ಜುಬೇದಾ ಅವರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಧಾವಿಸಿದ ಜುಬೇದಾ ಅವರು ತಾಯಿ ಮತ್ತು ಮಗುವನ್ನು ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲು ನೆರವಾಗಿದ್ದಾರೆ.
ಆಸ್ಪತ್ರೆಗೆ ಪೊಲೀಸರು ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ. ಆಸ್ಪತ್ರೆಯಲ್ಲಿ ತೀವ್ರ ರಕ್ತಸ್ರಾವವಾಗಿದ್ದರಿಂದ ತಾಯಿ ಮತ್ತು ಮಗುವಿಗೆ ಚಿಕಿತ್ಸೆ ನೀಡಲಾಗಿದೆ. ಮಗು 3.6 ಕೆ.ಜಿ. ತೂಕವಿದ್ದು ಸದ್ಯ ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ.

Categories
Uncategorized

ಅಡಿಕೆ ದರ 50.000 ರೂ.ಗೆ ಏರಿಕೆ! – ಎಲ್ಲಾ ಮಾದರಿ ಅಡಿಕೆ ದರದಲ್ಲಿ ಏರಿಕೆ – ಅಡಿಕೆ ಬೆಳೆಗಾರರ ಮೊಗದಲ್ಲಿ ಹೊಸ ಭರವಸೆ

ಶಿವಮೊಗ್ಗ: ಅಡಿಕೆ ದರದಲ್ಲಿ ಕೊಂಚ ಏರಿಕೆ ಕಾಣುತ್ತಿದೆ. ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಡಿಕೆಯ ದರ ನವೆಂಬರ್ 5ರ ಗುರುವಾರದ ದರದಲ್ಲಿ ಈ ಹಿಂದೆ 49.169 ರೂಪಾಯಿಯಷ್ಟಿದ್ದ ರಾಶಿ, ಇಡಿ ಅಡಿಕೆ ದರವು ಇದೀಗ 50.000ದ ಗಡಿ ದಾಟಿದೆ.
ಇನ್ನುಳಿದಂತೆ ಸರಕು/ಹಸ ಅಡಿಕೆ ದರವು ಕ್ವಿಂಟಲ್ ಗೆ ಕನಿಷ್ಠ 55.50, ಗರಿಷ್ಠ 93.29 ಮತ್ತು ಮಾದರಿ ದರ 83.30, ಬೆಟ್ಟೆ ಅಡಿಕೆ ದರ ಕ್ವಿಂಟಲ್ ಗೆ ಕನಿಷ್ಠ 51.574, ಗರಿಷ್ಠ 58.66 ಮತ್ತು ಮಾದರಿ ದರ 57.65, ರಾಶಿ ಇಡಿ ಅಡಿಕೆ ದರ ಕ್ವಿಂಟಲ್ ಗೆ ಕನಿಷ್ಠ 42.೦೦, ಗರಿಷ್ಠ 50.೦೦ ಮತ್ತು ಮಾದರಿ ದರ 47.58, ಗೊರಬಲು ಅಡಿಕೆ ದರ ಕ್ವಿಂಟಲ್ ಗೆ ಕನಿಷ್ಠ 19.೦೦, ಗರಿಷ್ಠ 39.39 ಮತ್ತು ಮಾದರಿ ದರ 36. 41, ಹೊಸ ರಾಶಿ ಇಡಿ ಅಡಿಕೆ ದರ ಕ್ವಿಂಟಲ್ ಗೆ ಕನಿಷ್ಠ 45.19, ಗರಿಷ್ಠ 48.78 ಮತ್ತು ಮಾದರಿ ಬೆಲೆ 47.58 ರೂಪಾಯಿಗಳಷ್ಟು ಏರಿಕೆ ಕಂಡಿದೆ. ಅಡಿಕೆ ದರ ಏರಿಕೆ ಕಾಣುತ್ತಿರುವುದು ರೈತರಲ್ಲಿ ಹೊಸ ಭರವಸೆ ಮೂಡಿಸಿದೆ.

Categories
Uncategorized

•ಕಡೂರು: ಟೈರ್ ಸಿಡಿದು ಓರ್ವ ದುರ್ಮರಣ •ನರಸಿಂಹರಾಜಪುರ: ಯುವಕ ಆತ್ಮಹತ್ಯೆಗೆ ಶರಣು •ಹೊಸನಗರ: ರೆಸ್ಟೋರೆಂಟ್ ನಲ್ಲಿ ಮಚ್ಚು ತೋರಿಸಿ ಬೆದರಿಕೆ – ಚಿಕ್ಕಮಗಳೂರು: ಪ್ರೀತಿಸುವುದಾಗಿ ನಂಬಿಸಿ ಗರ್ಭಿಣಿ: ಓರ್ವ ಅರೆಸ್ಟ್!

ಕಡೂರು: ವಾಹನದ ಹಿಂಬದಿಯ ಟಯರ್ ಸಿಡಿದು, ಓರ್ವ ವ್ಯಕ್ತಿ ಮೃತಪಟ್ಟಿರುವ ಘಟನೆ ಗುರುವಾರದಂದು ಚಟ್ನಹಳ್ಳಿ ಸಮೀಪದಲ್ಲಿ ನಡೆದಿದೆ. ಉತ್ತರ ಪ್ರದೇಶ ಮೂಲದ ಗಿಡ್ಡು, ವಸೀಮ್ ಮತ್ತು ನರೇನ್ ಎನ್ನುವ ವ್ಯಕ್ತಿಗಳು ಕಳೆದ ಒಂದು ತಿಂಗಳಿನಿಂದ ಭದ್ರಾವತಿಯ ಸಮೀಪದಲ್ಲಿರುವ ಸಿಮೆಂಟ್ ಉತ್ಪನ್ನಗಳ ಖಾಸಗಿ ಘಟಕ ಒಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದರು ಎನ್ನಲಾಗಿದೆ. ಬುಧವಾರದಂದು ಬೆಳಿಗ್ಗೆ ಮೂವರೂ ಕಡೂರಿನ ಮತ್ತೊಂದು ಘಟಕಕ್ಕೆ ತೆರಳಿ ಅಲ್ಲಿ ಸಿಮೆಂಟ್ ಬೆಂಚ್ ಮತ್ತು ಕಾಂಪೌಂಡ್ ಸ್ಲ್ಯಾಬ್ ಗಳನ್ನು ವಾಹನದಲ್ಲಿ ತುಂಬಿಸಿಕೊಂಡು, ಭದ್ರಾವತಿಯತ್ತ ತೆರಳುತ್ತಿದ್ದ ಸಂದರ್ಭದಲ್ಲಿ, ವಾಹನದ ಹಿಂಬದಿಯ ಟಯರ್ ಏಕಾಏಕಿ ಸಿಡಿದಿದೆ. ಪರಿಣಾಮವಾಗಿ ವಾಹನದಲ್ಲಿದ್ದ ಮೂವರೂ ಸಿಮೆಂಟ್ ಸ್ಲ್ಯಾಬ್ ಗಳ ಸಮೇತ ಕೆಳಗೆ ಬಿದ್ದಿದ್ದು, ಒಬ್ಬ ವ್ಯಕ್ತಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಮತ್ತೋರ್ವ ವ್ಯಕ್ತಿಗೆ ಬಲಗಾಲಿಗೆ ಗಾಯಗಳಾಗಿವೆ ಎನ್ನುವ ಮಾಹಿತಿ ಲಭಿಸಿದೆ. ವಸೀಮ್ ಎನ್ನುವವರಿಗೆ ತಲೆಗೆ ಮತ್ತು ಬಲಗಾಲಿಗೆ ತೀವ್ರ ರೀತಿಯ ಗಾಯಗಳಾಗಿದ್ದು, ತಕ್ಷಣ ಮೂವರನ್ನು ತರೀಕೆರೆಯ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಥಮ ಚಿಕಿತ್ಸೆ ಕೊಡಿಸಿ, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ವಸೀಮ್ ಅವರು ಮೃತಪಟ್ಟಿದ್ದಾರೆ ಎನ್ನುವ ಸಂಗತಿ ತಿಳಿದುಬಂದಿದೆ.

•ನರಸಿಂಹರಾಜಪುರ: ಯುವಕ ಆತ್ಮಹತ್ಯೆಗೆ ಶರಣು!

ನರಸಿಂಹರಾಜಪುರ: ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ, ಗುರುವಾರದಂದು ರಾವೂರ ಗ್ರಾಮದಲ್ಲಿ ನಡೆದಿದೆ. ಬುಧವಾರ ಸಂಜೆ ಮನೆಬಿಟ್ಟು ತೆರಳಿದ್ದ ಯುವಕನು ರಾತ್ರಿಯಾದರೂ ಹಿಂತಿರುಗಿ ಬಾರದ ಹಿನ್ನೆಲೆಯಲ್ಲಿ ಹುಡುಕಾಟ ನಡೆಸಿದಾಗ, ಭದ್ರಾ ಹಿನ್ನೀರಿನ ಬಳಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಮೃತ ಯುವಕನನ್ನು ಜಿ.ಆರ್.ಮಿಲ್ ರಸ್ತೆಯ ನಿವಾಸಿ ಸೈಯದ್ ಸಾಹಿಲ್ ಎಂದು ಗುರುತಿಸಲಾಗಿದೆ. ಯುವಕನ ಆತ್ಮಹತ್ಯೆಗೆ ಕಾರಣವೇನು ಎನ್ನುವುದು ಸ್ಪಷ್ಟವಾಗಿ ತಿಳಿದುಬಂದಿಲ್ಲ. ಸೈಯದ್ ಸಾಹಿಲ್ ಅವರ ದೊಡ್ಡಪ್ಪ ಸೈಯದ್ ಜಬೀವುಲ್ಲಾ ಅವರು ನೀಡಿರುವ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿದೆ.

ಹೊಸನಗರ: ರೆಸ್ಟೋರೆಂಟ್ ನಲ್ಲಿ ಮಚ್ಚು ತೋರಿಸಿ ಬೆದರಿಕೆ

•ಹೊಸನಗರ: ರೆಸ್ಟೋರೆಂಟ್ ಒಂದರಲ್ಲಿ ಸಿಗರೇಟ್ ವಿಚಾರಕ್ಕೆ ಮಾತುಕತೆ ನಡೆದು, ಬಳಿಕ ಅದು ಹಲ್ಲೆಗೆ ತಿರುಗಿದ ಘಟನೆ, ಕಳೆದೆರಡು ದಿನಗಳ ಹಿಂದೆ ನಗರ ಸಮೀಪದಲ್ಲಿ ನಡೆದಿದೆ. ಇಲ್ಲಿನ ನೂಲಿಗೇರಿ ಬಾರ್ ಆ್ಯಂಡ್ ರೆಸ್ಟೋರೆಂಟ್ ಗೆ ಊಟಕ್ಕೆ ಆಗಮಿಸಿದ ಅಪರಿಚಿತ ವ್ಯಕ್ತಿಗಳು, ಊಟದ ಬಳಿಕ ಸಿಗರೇಟ್ ಅನ್ನು ಕೇಳಿದ್ದಾರೆ ಎನ್ನಲಾಗಿದೆ. ಈ ವಿಚಾರವಾಗಿ ರೆಸ್ಟೋರೆಂಟ್ ಮಾಲೀಕರು ಮತ್ತು ಅಪರಿಚಿತ ವ್ಯಕ್ತಿಗಳ ನಡುವೆ ವಾಗ್ವಾದ ನಡೆದಿದ್ದು, ಬಳಿಕ ಅಪರಿಚಿತ ವ್ಯಕ್ತಿಗಳಲ್ಲಿ ಓರ್ವ ರೆಸ್ಟೋರೆಂಟ್ ನಿಂದ ಹೊರಗೆ ತೆರಳಿ ಮಚ್ಚನ್ನು ತೆಗೆದುಕೊಂಡು ಬಂದು ರೆಸ್ಟೋರೆಂಟ್ ನ ಮಾಲೀಕರಾದ ಆದಿರಾಜ್ ಅವರಿಗೆ ಬೆದರಿಕೆ ಹಾಕಿದ್ದಾನೆ ಎನ್ನುವ ಮಾಹಿತಿ ಲಭಿಸಿದೆ. ಈ ಹಿನ್ನೆಲೆಯಲ್ಲಿ ಆದಿರಾಜ್ ಅವರು ಪಿಎಸ್ಐ ಶಿವಾನಂದ ಕೋಳಿ ಅವರಿಗೆ ದೂರು ನೀಡಿದ್ದು, ದೂರಿನ ಆಧಾರದ ಮೇಲೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು, ಮೂವರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ ಎನ್ನುವ ಸಂಗತಿ ತಿಳಿದುಬಂದಿದೆ.‌

ಪ್ರೀತಿಸುವುದಾಗಿ ನಂಬಿಸಿ ಗರ್ಭಿಣಿ: ಓರ್ವ ಅರೆಸ್ಟ್!

ಚಿಕ್ಕಮಗಳೂರು: ಅಪ್ರಾಪ್ತ ಬಾಲಕಿಯನ್ನು ಪ್ರೀತಿಸುವುದಾಗಿ ನಂಬಿಸಿ
ಲೈಂಗಿಕ ದೌರ್ಜನ್ಯ ಎಸಗಿದ ಪರಿಣಾಮ ಆಕೆ ಗರ್ಭಿಣಿಯಾಗಿರುವ ಆರೋಪದಡಿ ಯುವಕನ ವಿರುದ್ಧ ಆಲ್ಲೂರು ಪೊಲೀಸ್‌ ಠಾಣೆಯಲ್ಲಿ ಪೋಕ್ಸ ಪ್ರಕರಣ ದಾಖಲಾಗಿದೆ. 17 ವರ್ಷದ ಬಾಲಕಿಯ ತಾಯಿ ನೀಡಿದ ದೂರಿನ ಪ್ರಕಾರ, ಭಟ್ರುಗದ್ದೆ ನಿವಾಸಿ ರಮೇಶ್ ಎಂಬಾತನಿಗೆ ಬಾಲಕಿಯ ಪರಿಚಯವಾಗಿದ್ದು, ಆಗಾಗ ಮನೆಗೆ ಬಂದು ಹೋಗುತ್ತಿದ್ದ ಎನ್ನಲಾಗಿದೆ. ಕಳೆದ ಒಂದೂವರೆ ವರ್ಷದಿಂದ ಇಬ್ಬರೂ ಪ್ರೀತಿಸುತ್ತಿದ್ದು, ಮದುವೆಯಾಗುವ ನಿರ್ಧಾರ ಮಾಡಿಕೊಂಡಿದ್ದರು ಎನ್ನಲಾಗಿದೆ.
ಸುಮಾರು ಆರು ತಿಂಗಳ ಹಿಂದೆ ಬಾಲಕಿಯ ಪೋಷಕರು ಕೆಲಸಕ್ಕೆ ತೆರಳಿದ್ದ ಸಂದರ್ಭದಲ್ಲಿ ಮನೆಗೆ ಬಂದಿದ್ದ ರಮೇಶ್ ಮದುವೆಯಾಗುವ ಭರವಸೆ ನೀಡಿ ಬಾಲಕಿಯೊಂದಿಗೆ ಲೈಂಗಿಕ ಸಂಪರ್ಕ ಬೆಳೆಸಿದ್ದಾನೆ. ನಂತರವೂ ಪೋಷಕರು ಮನೆಯಲ್ಲಿ ಇಲ್ಲದ ಸಮಯದಲ್ಲಿ ಹಲವು ಬಾರಿ ಲೈಂಗಿಕ ಸಂಪರ್ಕ ಬೆಳೆಸಿದ್ದರಿಂದ ಬಾಲಕಿ ಗರ್ಭಿಣಿಯಾಗಿದ್ದಾಳೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಮಗಳ ಆರೋಗ್ಯದಲ್ಲಿ ಬದಲಾವಣೆ ಕಂಡು ಅನುಮಾನಗೊಂಡ ತಾಯಿ ವಿಚಾರಿಸಿದಾಗ ಘಟನೆ ಬೆಳಕಿಗೆ ಬಂದಿದೆ.

Categories
Uncategorized

•ಉಡುಪಿ: ಸಮಾಜ ಸೇವಕ ವಿಶು ಶೆಟ್ಟಿಗೆ ಬಸ್ ಡಿಕ್ಕಿ! •ಮಂಗಳೂರು: ಕರಾವಳಿಗೆ ಒರಿಸ್ಸಾದಿಂದ ಗಾಂಜಾ..! •ಬೆಳ್ತಂಗಡಿ: ಆಟೋ -ಬೈಕ್ ಅಪಘಾತ; ಸವಾರ ಸಾವು •ಬೈಂದೂರು: ತಲವಾರಿನಿಂದ ಕೊಲೆಗೆ ಯತ್ನ; ಕೇಸ್!

ಉಡುಪಿ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಬಸ್ ವ್ಯಕ್ತಿಯೊಬ್ಬರಿಗೆ ಢಿಕ್ಕಿ ಹೊಡೆದಿರುವ ಘಟನೆ, ಗುರುವಾರದಂದು ನಿಟ್ಟೂರಿನ ಸಮೀಪದಲ್ಲಿ ನಡೆದಿದೆ. ವ್ಯಕ್ತಿಯು ತಮ್ಮ ಬೈಕ್ ನಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ, ವೇಗವಾಗಿ ಬಂದ ವೋಲ್ವೋ ಬಸ್ ಅವರಿಗೆ ಢಿಕ್ಕಿ ಹೊಡೆದಿರುವುದಷ್ಟೇ ಅಲ್ಲದೆ, ಅಪಘಾತದ ಬಳಿಕ ನಿಲ್ಲಿಸದೆ ಮುಂದೆ ಸಾಗಿದೆ ಎನ್ನಲಾಗಿದೆ. ಅಪಘಾತಕ್ಕೆ ಒಳಗಾದ ವ್ಯಕ್ತಿಯನ್ನು ಉಡುಪಿಯ ಸಮಾಜ ಸೇವಕರಾದ ವಿಶು ಶೆಟ್ಟಿ ಅಂಬಲಪಾಡಿ ಎಂದು ಗುರುತಿಸಲಾಗಿದೆ. ಅಪಘಾತದ ಪರಿಣಾಮವಾಗಿ ವಿಶು ಶೆಟ್ಟಿ ಅವರಿಗೆ ಕೈ ಮತ್ತು ಕಾಲುಗಳಿಗೆ ಪೆಟ್ಟಾಗಿದ್ದು, ಇದನ್ನು ಗಮನಿಸಿದ ಅಂಬಲಪಾಡಿ ಸುರೇಶ್ ಅವರು ತಕ್ಷಣ ವಿಶು ಶೆಟ್ಟಿ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿ, ಚಿಕಿತ್ಸೆ ಕೊಡಿಸಿದ್ದಾರೆ ಎನ್ನುವ ಸಂಗತಿ ತಿಳಿದುಬಂದಿದೆ. ಚಿಕಿತ್ಸೆಯನ್ನು ನೀಡಿದ ವೈದ್ಯರು ಅವರಿಗೆ 20 ದಿನಗಳ ಕಾಲ ವಿಶ್ರಾಂತಿ ತೆಗೆದುಕೊಳ್ಳಲು ಸೂಚಿಸಿದ್ದಾರೆ.

•ಮಂಗಳೂರು: ಒರಿಸ್ಸಾದಿಂದ ಕರಾವಳಿಗೆ ಗಾಂಜಾ!

ಮಂಗಳೂರು: ಒರಿಸ್ಸಾ ರಾಜ್ಯದಿಂದ ಗಾಂಜಾವನ್ನು ಆಮದು ಮಾಡಿಕೊಂಡು, ನಗರದಲ್ಲಿ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿರುವ ಘಟನೆ, ಬುಧವಾರದಂದು ನಡೆದಿದೆ. ಗಂಜಿಮಠ ಕೈಗಾರಿಕಾ ಪ್ರದೇಶದಲ್ಲಿದ್ದ ಆರೋಪಿಯು ಪೊಲೀಸರನ್ನು ಕಂಡೊಡನೆ ಪರಾರಿಯಾಗಲು ಯತ್ನಿಸಿದ್ದಾನೆ. ಇದನ್ನು ಗಮನಿಸಿದ ಪೊಲೀಸರು ಆತನನ್ನು ಸೆರೆಹಿಡಿದು ವಿಚಾರಣೆಗೆ ಒಳಪಡಿಸಿದಾಗ ಒರಿಸ್ಸಾದಿಂದ ಕಡಿಮೆ ಬೆಲೆಗೆ ಗಾಂಜಾ ಸಿಗುತ್ತಿದ್ದು, ಅದನ್ನು ಖರೀದಿಸಿ ಇಲ್ಲಿಗೆ ತಂದು ಮಾರಾಟ ಮಾಡಲು ಗ್ರಾಹಕರಿಗಾಗಿ ಕಾಯುತ್ತಿದ್ದೇನೆ ಎನ್ನುವ ಸತ್ಯ ಸಂಗತಿಯನ್ನು ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ. ಆರೋಪಿಯನ್ನು ಒರಿಸ್ಸಾದ ಬಾಲೇಶ್ವರ್ ಜಿಲ್ಲೆಯ ಅಂಬಪೂಂಜ ಫಿಶ್ ಲೇಕ್ ನಿವಾಸಿ, ಪ್ರಸ್ತುತ ತೆಂಕ ಎಡಪದವು ಗ್ರಾಮದ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿರುವ ಸೂರ್ಯಕಾಂತ ಜೇನಾ ಎಂದು ಗುರುತಿಸಲಾಗಿದೆ. ತಕ್ಷಣ ಅವನನ್ನು ಬಂಧಿಸಿದ ಪೊಲೀಸರು, ಆತನ ಬಳಿಯಿದ್ದ 257 ಗ್ರಾಂ ತೂಕದ ಸುಮಾರು 10.000 ರೂಪಾಯಿಗಳಷ್ಟು ಬೆಲೆಬಾಳುವ ಗಾಂಜಾವನ್ನು, 1500ರೂಪಾಯಿ ನಗದು ಹಣವನ್ನು, ಮೊಬೈಲ್ ಮತ್ತು ಗಾಂಜಾ ಮಾರಾಟ ಮಾಡಲು ಬಳಸಿದ 300 ರೂಪಾಯಿ ಮೌಲ್ಯದ ಬ್ಯಾಗ್ ಅನ್ನು ವಶಪಡಿಸಿಕೊಂಡಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ. ಘಟನೆಗೆ ಸಂಬಂಧಿಸಿದಂತೆ ಬಜಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

•ಬೆಳ್ತಂಗಡಿ: ಆಟೋ ಮತ್ತು ಬೈಕ್ ನಡುವೆ ಅಪಘಾತ; ಸವಾರ ಸಾವು

ಬೆಳ್ತಂಗಡಿ: ಬೈಕ್ ಮತ್ತು ಆಟೋ ನಡುವೆ ಭೀಕರ ಅಪಘಾತ ಸಂಭವಿಸಿ ಯುವಕನೊಬ್ಬ ಮೃತಪಟ್ಟಿರುವ ಘಟನೆ, ಮೂಡುಕೋಡಿ ಪಂಜಲಬೈಲು ಸಮೀಪದಲ್ಲಿ ನಡೆದಿದೆ. ಯುವಕನು ವೇಣೂರಿನ ಚಿನ್ನಾಭರಣ ಮಳಿಗೆಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಕೆಲಸ ಮುಗಿಸಿಕೊಂಡು ಮನೆಗೆ ಹಿಂತಿರುಗುತ್ತಿದ್ದ ಸಂದರ್ಭದಲ್ಲಿ ಎದುರಿನಿಂದ ಬಂದ ಆಟೋ ಏಕಾಏಕಿ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ. ಢಿಕ್ಕಿಯ ರಭಸಕ್ಕೆ ರಸ್ತೆಗೆ ಎಸೆಯಲ್ಪಟ್ಟ ಯುವಕನಿಗೆ ತಲೆ ಸೇರಿದಂತೆ ದೇಹದ ಹಲವಾರು ಭಾಗಗಳಲ್ಲಿ ಗಂಭೀರ ರೀತಿಯ ಗಾಯಗಳಾಗಿದ್ದವು ಎನ್ನುವ ಮಾಹಿತಿ ಲಭಿಸಿದೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಯುವಕನನ್ನು ಸ್ಥಳೀಯರು ತಕ್ಷಣ ಸಮೀಪದ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಲು ಪ್ರಯತ್ನಿಸಿದರಾದರೂ, ಅದು ಫಲಕಾರಿಯಾಗದೆ ಆಸ್ಪತ್ರೆ ತಲುಪುವುದರ ಒಳಗಾಗಿ ಯುವಕ ಮೃತಪಟ್ಟಿದ್ದನು ಎನ್ನುವ ಸಂಗತಿ ತಿಳಿದುಬಂದಿದೆ. ಮೃತ ದುರ್ದೈವಿ ಯುವಕನನ್ನು ಪೆರಾಡಿ ಗ್ರಾಮದ ಸ್ವಸ್ತಿಕ್ ಎಂದು ಗುರುತಿಸಲಾಗಿದೆ. ಮಾಹಿತಿ ಲಭಿಸುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆಯನ್ನು ನಡೆಸಿ, ಅಪಘಾತಕ್ಕೆ ಒಳಗಾದ ಎರಡೂ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಅತಿವೇಗ ಮತ್ತು ನಿರ್ಲಕ್ಷ್ಯ ಚಾಲನೆ ಅಡಿಯಲ್ಲಿ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

•ಬೈಂದೂರು: ತಲವಾರಿನಿಂದ ಕೊಲೆಗೆ ಯತ್ನ; ಕೇಸ್!

ಬೈಂದೂರು: ವ್ಯಕ್ತಿಯನ್ನು ಅಡ್ಡಗಟ್ಟಿ ತಲವಾರು ಬೀಸಿ ಕೊಲೆ ಮಾಡಲು ಯತ್ನಿಸಿದ ಘಟನೆ, ನಾವುಂದದಲ್ಲಿ ನಡೆದಿದೆ. ಜಿ.ಎಂ.ಸತ್ತಾರ್ ಎನ್ನುವ ವ್ಯಕ್ತಿಯು ಸ್ಕೂಟರ್ ನಲ್ಲಿ ಕೋಯನಗರದಲ್ಲಿರುವ ತಮ್ಮ ಮನೆಯಿಂದ ನಾವುಂದ ಕಡೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ತಂಗಿ ಖತೀಜಾ ಅವರ ಮನೆಯ ಮುಂಭಾಗಕ್ಕೆ ಬರುತ್ತಿದ್ದಂತೆ ಸ್ಕೂಟರ್ ನಲ್ಲಿ ಆಗಮಿಸಿದ ಮೂವರು ವ್ಯಕ್ತಿಗಳು ಸತ್ತಾರ್ ಅವರ ಸ್ಕೂಟರ್ ಗೆ ತಮ್ಮ ಬೈಕ್ ಅನ್ನು ಅಡ್ಡ ತಂದು ನಿಲ್ಲಿಸಿದ್ದಾರೆ. ಬಳಿಕ ಬೈಕ್ ನಲ್ಲಿದ್ದ ತಲವಾರು ತೆಗೆದುಕೊಂಡು “ನಿನ್ನನ್ನು ಇಲ್ಲಿಯೇ ಕಡಿದು ಕೊಂದು ಮುಗಿಸುತ್ತೇವೆ” ಎಂದು ಹೇಳಿ ಸತ್ತಾರ್ ಅವರ ಕಡೆಗೆ ತಲವಾರನ್ನು ಬೀಸಿದ್ದಾರೆ ಎನ್ನಲಾಗಿದೆ. ಸತ್ತಾರ್ ಅವರು ಇದರಿಂದ ತಪ್ಪಿಸಿಕೊಳ್ಳಲು ತಂಗಿ ಖತೀಜಾ ಅವರ ಮನೆಯೊಳಗಡೆ ಓಡಿ ಹೋಗಿದ್ದಾರೆ. ಅವರನ್ನು ಬೆನ್ನಟ್ಟಲು ಮೂವರು ಆರೋಪಿಗಳು ಖತೀಜ ಅವರ ಮನೆಯ ಕಾಂಪೌಂಡ್ ಅನ್ನು ಅತಿಕ್ರಮವಾಗಿ ಪ್ರವೇಶಿಸಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ. ನಂತರ ಆರೋಪಿಗಳು “ಈಗ ತಪ್ಪಿಸಿಕೊಂಡಿದ್ದೀಯಾ ರಾತ್ರಿ ನಿನ್ನನ್ನು ಕೊಲೆ ಮಾಡಿ ಮುಗಿಸುತ್ತೇವೆ” ಎಂದು ಬೆದರಿಕೆ ಹಾಕಿ ಅಲ್ಲಿಂದ ತೆರಳಿದ್ದಾರೆ ಎನ್ನುವ ಸಂಗತಿ ತಿಳಿದುಬಂದಿದೆ. ಆರೋಪಿಗಳನ್ನು ಸವದ್ ಮತ್ತು ಅವನ ಸಹಚರರು ಎಂದು ಗುರುತಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ.

Categories
Uncategorized

ರಾಜ್ಯದ ‘ಗೃಹಲಕ್ಷ್ಮಿ’ಯರಿಗೆ ದೀಪಾವಳಿಗೆ ಭರ್ಜರಿ ಗಿಫ್ಟ್! – ಮಹಿಳೆಯರ ಅಕೌಂಟ್ಗೆ 2000 ಅಲ್ಲ 6000! – ₹7,405.86 ಕೋಟಿ ಹಣ ಬಿಡುಗಡೆ

ಬೆಂಗಳೂರು: ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ರಾಜ್ಯ ಸರ್ಕಾರದಿಂದ ದೀಪಾವಳಿ ಹಬ್ಬಕ್ಕೆ ಬಂಪರ್ ಗುಡ್ ನ್ಯೂಸ್ ಸಿಕ್ಕಿದೆ. ಗೃಹಲಕ್ಷ್ಮಿ ಯೋಜನೆಯ 34, 35 ಮತ್ತು 36ನೇ ಕಂತುಗಳನ್ನು ಸರ್ಕಾರ ಒಟ್ಟಿಗೆ ಬಿಡುಗಡೆ ಮಾಡಲಿದೆ. ಇದಕ್ಕಾಗಿ ಒಟ್ಟು ₹7,405.86 ಕೋಟಿ ಹಣವನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಒಮ್ಮೆಲೆ ಬಿಡುಗಡೆ ಮಾಡಲಿದ್ದಾರೆ ಎಂದು ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ದಿನೇಶ್ ಗೂಳಿಗೌಡ ತಿಳಿಸಿದ್ದಾರೆ. ಗೃಹಲಕ್ಷ್ಮಿಯರಿಗೆ ದೀಪಾವಳಿ ಧಮಾಕಾ
ಸರ್ಕಾರದ 5 ಗ್ಯಾರಂಟಿಗಳಲ್ಲಿ ಗೃಹಲಕ್ಷ್ಮಿ ಯೋಜನೆ ಕೂಡ ಒಂದಾಗಿದೆ. ಪ್ರತಿ ತಿಂಗಳು ರಾಜ್ಯದ ಪ್ರತಿ ಮನೆಯ ಮಹಿಳೆಯರ ಅಕೌಂಟ್ಗೆ 2000 ರೂಪಾಯಿ ಜಮೆ ಮಾಡಲಾಗ್ತಿದೆ. ಗೃಹಲಕ್ಷ್ಮಿ ಮರುಪರಿಶೀಲನೆ ಘೋಷಣೆ ಬಳಿಕ ಗೃಹಲಕ್ಷ್ಮಿ ಹಣ ಬರುತ್ತೋ ಇಲ್ವೋ ಅನ್ನೋ ಗೊಂದಲ ಮಹಿಳೆಯರಲ್ಲಿ ಮನೆ ಮಾಡಿತ್ತು. ಇದೀಗ ಮೂರು ಕಂತಿನ ಹಣವನ್ನ ಒಟ್ಟಿಗೆ ನೀಡಲು ಸರ್ಕಾರ ಮುಂದಾಗಿದೆ.
ಗೃಹಲಕ್ಷ್ಮೀ ಯೋಜನೆಯಡಿ ಈಗಾಗಲೇ 33 ಕಂತುಗಳ ಹಣ ಫಲಾನುಭವಿಗಳ ಖಾತೆಗೆ ಜಮೆಯಾಗಿದೆ. ಇದೀಗ 34ನೇ ಕಂತಿನ 2,500 ಕೋಟಿ ರೂ, 35ನೇ ಕಂತಿನ 2,452.93 ಕೋಟಿ ರೂ ಹಾಗೂ 36ನೇ ಕಂತಿನ 2,452.93 ಕೋಟಿ ರೂ ಹಣವನ್ನು ಒಟ್ಟಿಗೆ ಬಿಡುಗಡೆ ಮಾಡಲು ಡಿಕೆ ಶಿವಕುಮಾರ್ ಆದೇಶ ಮಾಡಿದ್ದಾರೆ.

– ಹೈಕೋರ್ಟ್ಗೆ ಮಾಹಿತಿ ನೀಡಿದ ರಾಜ್ಯ ಸರ್ಕಾರ

ಇದಕ್ಕೂ ಮೊದಲು ತೀವ್ರ ಆರ್ಥಿಕ ಕೊರತೆಯಿಂದಾಗಿ 2025ರ ಫೆಬ್ರವರಿ ಮತ್ತು ಮಾರ್ಚ್ ತಿಂಗಳ ‘ಗೃಹಲಕ್ಷ್ಮಿ’ ಯೋಜನೆಯ ಅಂದಾಜು 4,000 ಕೋಟಿ ರೂ. ಹಣ ಬಾಕಿ ಉಳಿಸಿಕೊಳ್ಳಲಾಗಿದೆ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ತಿಳಿಸಿದೆ. ಬಜೆಟ್ ಲಭ್ಯತೆ ಆಧರಿಸಿದ ಈ ನೆರವನ್ನು ಕಾನೂನುಬದ್ಧ ಹಕ್ಕಾಗಿ ಕೇಳಲಾಗದು ಎಂದಿರುವ ಸರ್ಕಾರ, ಮೃತಪಟ್ಟ 1.08 ಲಕ್ಷ ಫಲಾನುಭವಿಗಳಿಗೆ 115 ಕೋಟಿ ರೂ. ಜಮೆಯಾಗಿದ್ದನ್ನು ಒಪ್ಪಿಕೊಂಡಿದ್ದು, ಈಗಾಗಲೇ 15.24 ಕೋಟಿ ರೂ. ವಸೂಲಿ ಮಾಡಿರುವುದಾಗಿ ಹೇಳಿದೆ.

Categories
Uncategorized

ಬೆಳಕಿನ ಹಬ್ಬ… ಯಾವತ್ತು ಏನೇನು..?- ಒಂದು ವಾರಗಳ ಕಾಲ ದೀಪಾವಳಿ ಸಂಭ್ರಮ

 

ಬೆಳಕಿನ ಹಬ್ಬ ದೀಪಾವಳಿ ಸಂಭ್ರಮ ಶುರುವಾಗಿದೆ, ಆರು ದಿನಗಳ ಕಾಲ ಬೇರೆ ಬೇರೆ ಹೆಸರು ಮತ್ತು ವಿಧಾನಗಳಲ್ಲಿ ಹಬ್ಬ ಆಚರಿಸಲ್ಪಡುತ್ತಿದೆ. ಯಾವತ್ತು ಏನೇನಿದೆ..? ಇಲ್ಲಿದೆ ಮಾಹಿತಿ.

ಯಾವತ್ತು ಏನೇನು…?

– ನವೆಂಬರ್ 7ರ ಶನಿವಾರದಂದು ನೀರು ತುಂಬುವ ಹಬ್ಬ
– ನವೆಂಬರ್ 8ರ ಭಾನುವಾರದಂದು ಅಭ್ಯಂಜನ ಸ್ನಾನ ಅಥವಾ ನರಕ ಚತುರ್ದಶಿ ಹಾಗೂ ಧನಲಕ್ಷ್ಮೀ ಪೂಜೆ ನಡೆಯಲಿದೆ.
– ನವೆಂಬರ್ 9ರ ಸೋಮವಾರದಂದು ಅಮಾವಾಸ್ಯೆ ಅಥವಾ ಧಾನ್ಯಲಕ್ಷ್ಮೀ ಪೂಜೆ ನೆರವೇರಲಿದ್ದು ಅಂದು ಕೆಲವೆಡೆ ಗೋಪೂಜೆಯನ್ನು ಆಚರಿಸುತ್ತಿದ್ದಾರೆ.
ನವೆಂಬರ್ 10ರ ಮಂಗಳವಾರದಂದು ಕೂಡ ಬಲಿಪಾಡ್ಯಮಿ ಅಂಗವಾಗಿ ಗೋಪೂಜೆ ನೆರವೇರಲಿದೆ.
ನವೆಂಬರ್ 11ರ ಬುಧವಾರದಂದು ಹಬ್ಬದ ಕರಿ ಅಥವಾ ಭಗಿನೀ ಗೃಹೇ ಭೋಜನಂ ಎಂದು ಕೆಲವು ಸಮುದಾಯದವರು ಈ ಹಬ್ಬವನ್ನು ಆಚರಿಸಲಿದ್ದಾರೆ.
ನವೆಂಬರ್ 12ರ ಗುರುವಾರದಂದು ಅಂತಿಮವಾಗಿ ವರ್ಷ ತುಡುಕು ಅಥವಾ ಕದಿರು ತರುವದನ್ನು ಬೆಳಿಗ್ಗೆ 7.30ರಿಂದ 9:೦೦ ಗಂಟೆಯ ಒಳಗೆ ಅಥವಾ ಬೆಳಿಗ್ಗೆ 10.30ರಿಂದ ಮಧ್ಯಾಹ್ನ 1:30ರ ಒಳಗೆ ಆಚರಿಸಲಾಗುವುದು.

ಸಮಸ್ತ ಜನತೆಗೆ ದೀಪಾವಳಿ ಶುಭಾಶಯಗಳು

Categories
Uncategorized

7 ಜನರ ಕೊಂದ ಸೈಕೋ ಕಿಲ್ಲರ್..!! – ಬೆಂಗಳೂರಿನಲ್ಲಿ ರುಬ್ಬು ಗುಂಡಲ್ಲಿ 7 ಮಂದಿಯ ಕೊಲೆ! – ‘ದೃಶ್ಯಂ’ ಮೀರಿಸಿದ ನರಮೇಧ: ರಾಕ್ಷಸನಾದ ಡ್ರೈವರ್ – ಕಸದ ಚೀಲದಲ್ಲಿ ಹೆಣ ತುಂಬಿ ವಿವಿಧ ಬೆಟ್ಟದಲ್ಲಿ ಎಸೆದ! – ಸರಣಿ ಕೊಲೆಗೆ ಪಿಯುಸಿ ಓದುತ್ತಿರುವ ಮಗಳ ಸಾಥ್..?!

ಬೆಂಗಳೂರಿನ ಇತಿಹಾಸದಲ್ಲೇ ಭೀಕರ ಕೊಲೆ ಪ್ರಕರಣವೊಂದು ನಡೆದಿದ್ದು, ಓರ್ವನೇ ಪತ್ನಿ ಸೇರಿ ಕುಟುಂಬದ 7 ಮಂದಿಯನ್ನು 15 ವರ್ಷಗಳ ಅಂತರದಲ್ಲಿ ಕೊಲೆ ಮಾಡಿದ್ದಾನೆ.
ಸಿನಿಮಾ ಕ್ರೈಂ ಥ್ರಿಲ್ಲರ್‌ಗಳನ್ನೂ ಮೀರಿಸುವಂತೆ ಹಂತ ಹಂತವಾಗಿ 20 ದಿನಗಳಲ್ಲಿ ಒಂದೇ ಮನೆಯಲ್ಲಿ 7 ಮಂದಿಯ ಕೊಲೆಯಾಗಿದೆ. ಕೊಲೆ ಮಾಡಿದ್ದು ಒಬ್ಬ ಕಾರು ಚಾಲಕ!. ಅದೂ ಅವರ ಮನೆಯವರನ್ನೇ..!
ಅಚ್ಚರಿ ಆದ್ರೂ ಸತ್ಯ. ಪತ್ನಿ, ಅತ್ತೆ, ಇಬ್ಬರು ಭಾವ-ಮೈದುನರು, ಇಬ್ಬರು ಸೊಸೆಯಂದಿರು ಹಾಗೂ ಕೇವಲ 7 ವರ್ಷದ ಮುಗ್ಧ ಕಂದನನ್ನು ಕೊಲೆ ಮಾಡಿ ಹೆಣಗಳನ್ನು ಚೀಲದಲ್ಲಿ ತುಂಬಿ, ಕಾರಿನಲ್ಲಿಟ್ಟುಕೊಂಡು ಕರ್ನಾಟಕದಿಂದ ತಮಿಳುನಾಡಿನ ಗಡಿಯವರೆಗೂ ಬೆಟ್ಟ-ಗುಡ್ಡಗಳಲ್ಲಿ ಕಸದಂತೆ ಎಸೆದು ಬಂದಿದ್ದಾನೆ. ಈ ನರಹಂತಕ ಕ್ಯಾಬ್ ಡ್ರೈವರ್ ಇಂದು ಶೇಖರ್!

ಸಂಸಾರದ ದ್ವೇಷಕ್ಕೆ ಹಂತಕನ 2 ತಿಂಗಳ ರಕ್ತಸಿಕ್ತ ಸ್ಕೆಚ್!

ಶ್ರೀರಾಮಪುರದ ನಿವಾಸಿ ಸುನೀತಾ (ವಿಕಾಸಸೌಧದಲ್ಲಿ ಹೊರಗುತ್ತಿಗೆ ಟೈಪಿಸ್ಟ್) ಜೊತೆ ಇಂದು ಶೇಖರ್ ಮದುವೆಯಾಗಿ 20 ವರ್ಷಗಳಾಗಿದ್ದವು. ಆದರೆ ಶೇಖರ್‌ನಲ್ಲಿ ಒಂದು ವಿಚಿತ್ರ ಕೀಳರಿಮೆ ಕಾಡುತ್ತಿತ್ತು. ಪತ್ನಿಗಿಂತ ತಾನು ವಯಸ್ಸಾದವನಂತೆ ಕಾಣುತ್ತೇನೆ ಎಂಬ ಕೊರಗು ಒಂದೆಡೆಯಾದರೆ, ಪತ್ನಿ ಸದಾ ತವರು ಮನೆಯವರ ಸಂಪರ್ಕದಲ್ಲಿದ್ದಾಳೆ, ಅವರೇ ನಮ್ಮ ಸಂಸಾರಕ್ಕೆ ಅಡ್ಡಿ ಎಂಬ ಆಕ್ರೋಶ ಹೊಗೆಯಾಡುತ್ತಿತ್ತು. ಇಡೀ ಕುಟುಂಬವನ್ನೇ ಸರ್ವನಾಶ ಮಾಡಲು ಈತ ಬರೋಬ್ಬರಿ ಎರಡು ತಿಂಗಳಿನಿಂದ ‘ಪರ್ಫೆಕ್ಟ್ ಮರ್ಡರ್’ ಪ್ಲಾನ್ ಮಾಡಿದ್ದ.

ರಾಜಾಜಿನಗರದ ಟೆರೇಸ್ ಮೇಲಿನ ಡೆತ್ ಚೇಂಬರ್!

ರಾಜಾಜಿನಗರದ ಭಾಷ್ಯಂ ಸರ್ಕಲ್ ಬಳಿಯ ಕಟ್ಟಡವೊಂದರ ಟೆರೇಸ್ ಮೇಲಿದ್ದ ಸಣ್ಣ ಬಾಡಿಗೆ ರೂಮ್‌ ತೆಗೆದುಕೊಂಡಿದ್ದ. ಅಕ್ಟೋಬರ್ 16ರಂದು ಮೊದಲು ಪತ್ನಿ ಸುನೀತಾಳನ್ನು ಹತ್ಯೆ ಮಾಡಿದ. ಆಕೆಯ ಮುಖಕ್ಕೆ ರುಬ್ಬುಗುಂಡಿನಿಂದ ಜಜ್ಜಿ ಪ್ರಾಣ ತೆಗೆದ. ಬಳಿಕ ಹೆಣವನ್ನು ಕಾರಿನಲ್ಲಿ ತುಂಬಿಕೊಂಡು ಹೋಗಿ ನಂದಿಬೆಟ್ಟದ ಬಳಿ ಎಸೆದು ಬಂದ. ಅಕ್ಕಪಕ್ಕದವರಿಗೆ “ಪತ್ನಿ ಫ್ರೆಂಡ್ಸ್ ಜೊತೆ ಟ್ರಿಪ್ ಹೋಗಿದ್ದಾಳೆ” ಎಂದು ನಂಬಿಸಿದ. ಸುತ್ತಮುತ್ತ ಯಾರೂ ಇಲ್ಲದ, ಕೆಳಗಿನ ಮನೆಯವರಿಗೆ ಕಿಂಚಿತ್ತೂ ಸದ್ದು ಕೇಳಿಸದ ಜಾಗವನ್ನೇ ಹತ್ಯಾಕಾಂಡಕ್ಕೆ ಆಯ್ದುಕೊಂಡಿದ್ದ.
ಬಾಮೈದ ಶಿವಕುಮಾರ್ ಅನ್ನು “ಬಾ ಮಚ್ಚಾ ಎಣ್ಣೆ ಪಾರ್ಟಿ ಮಾಡೋಣ” ಎಂದು ಕರೆಸಿ, ಮದ್ಯದಲ್ಲಿ ಅಮಲು ಬರುವ ಮಾತ್ರೆಗಳನ್ನು ಬೆರೆಸಿ ಪ್ರಜ್ಞೆ ತಪ್ಪಿಸಿದ. ನಂತರ ರುಬ್ಬುಗುಂಡೆತ್ತಿ ಮುಖ ಜಜ್ಜಿ ಕೊಲೆ ಮಾಡಿದ. ಅತ್ತೆ ರೂಪವತಿ, ಬಾಮೈದ ಶಂಕರ್, ಸೊಸೆಯಂದಿರಾದ ದಿವ್ಯಾ ಮತ್ತು ನಳಿನಿ ಎಲ್ಲರೂ ಕನ್ಯಾಕುಮಾರಿ, ಆಲ್ ಇಂಡಿಯಾ ಟ್ರಿಪ್ ಹೋಗೋಣ, 15 ದಿನ ನೆಮ್ಮದಿಯಾಗಿ ಯಾತ್ರೆ ಮುಗಿಸಿಕೊಂಡು ಬರೋಣ” ಎಂದು ಪುಸಲಾಯಿಸಿದ. ಮನೆಗೆ ಬಂದ ಹೆಣ್ಣುಮಕ್ಕಳಿಗೆ ಟೀ, ಜ್ಯೂಸ್‌ನಲ್ಲಿ ನಿದ್ರೆ ಮಾತ್ರೆ ಬೆರೆಸಿ ಕೊಟ್ಟು, ಅವರು ಪ್ರಜ್ಞೆ ತಪ್ಪುತ್ತಿದ್ದಂತೆ ಕಲ್ಲು ಎತ್ತಿ ಹಾಕಿ ಕೊಂದು ಹಾಕಿದ. ಇನ್ನು ಕೇವಲ 7 ವರ್ಷದ ಪುನೀತ್ (ಶಂಕರ್ ಮಗ) ಎಂಬ ಕಂದಮ್ಮನನ್ನೂ ಬಿಡದೆ ನಿರ್ದಯವಾಗಿ ಮುಗಿಸಿದ. ಪ್ರತಿಯೊಂದು ಕೊಲೆಯ ನಂತರವೂ ಕೆಮಿಕಲ್ ಹಾಕಿ ನೆಲದ ರಕ್ತ ತೊಳೆಯುತ್ತಿದ್ದ, ಆ ರಕ್ತಸಿಕ್ತ ರುಬ್ಬುಗುಂಡನ್ನು ಸ್ವಚ್ಛವಾಗಿ ತೊಳೆದಿಟ್ಟ.

ಹೆಣಗಳ ಸಾಗಾಟಕ್ಕೆ 11 ವರ್ಷದ ಬಾಲಕನ ಬಳಕೆ!

ಈ ಇಡೀ ಕೃತ್ಯದ ಅತ್ಯಂತ ಬೆಚ್ಚಿಬೀಳಿಸುವ ಅಂಶವೆಂದರೆ— ನಳಿನಿಯ 11 ವರ್ಷದ ಮಗ ಯತೀನ್‌ನನ್ನು ಈತ ಜೊತೆಯಲ್ಲೇ ಇಟ್ಟುಕೊಂಡಿದ್ದ!
ಪ್ರತಿ ಬಾರಿ ರಕ್ತಸಿಕ್ತ ಚೀಲವನ್ನು ಕಾರಿನ ಡಿಕ್ಕಿಗೆ ಹಾಕುವಾಗ, ಮುಗ್ಧ ಬಾಲಕ “ಮಾವಾ, ಇದೇನು?” ಎಂದು ಕೇಳಿದರೆ, “ಇದು ಮನೆಯ ಕಸದ ಚೀಲ ಕಣೋ” ಎನ್ನುತ್ತಿದ್ದ. “ಉಳಿದವರೆಲ್ಲಾ ಎಲ್ಲಿ ಮಾವಾ?” ಎಂದರೆ, “ಅವರೆಲ್ಲಾ ಆಲ್ ಇಂಡಿಯಾ ಟೂರ್ ಹೋಗಿದ್ದಾರೆ, ಮೂರು ತಿಂಗಳು ಬರಲ್ಲ. ಕಸ ಎಸೆದು ನಿನ್ನನ್ನೂ ಕರ್ಕೊಂಡು ಹೋಗ್ತೀನಿ” ಎಂದು ನಂಬಿಸಿದ್ದ.
ನಂದಿಬೆಟ್ಟ, ಸ್ಕಂದಗಿರಿಯ ದಟ್ಟ ಪೊದೆಗಳು, ಹಾಸನದ ಕಡಿದಾದ ಕಣಿವೆ-ಬಂಡೆಗಳು, ಚಾರ್ಮಾಡಿ ಘಾಟ್ ಹಾಗೂ ತಮಿಳುನಾಡಿನ ಸೇಲಂ ಗಡಿಯವರೆಗೂ ಕಾರು ಚಲಾಯಿಸಿ ಹೆಣಗಳನ್ನು ಒಂದೊಂದಾಗಿ ಎಸೆದು ಬಂದಿದ್ದ. ಕೊನೆಗೆ ಆ 11 ವರ್ಷದ ಬಾಲಕನನ್ನು ಬೆಂಗಳೂರಿನ ಹಲಸೂರು ಗೇಟ್ ಬಳಿ ನಡುರಸ್ತೆಯಲ್ಲೇ ಬಿಟ್ಟು ಪರಾರಿಯಾಗಿದ್ದ!.

ತನಿಖೆ ಹಳ್ಳಹಿಡಿಸಲು ಹೈಟೆಕ್ ಪ್ಲಾನ್ ಮಾಡುತ್ತಿದ್ದ ಹಂತಕ!

ಕೊಲೆಯಾದ ಎಲ್ಲ ಏಳು ಜನರ ಮೊಬೈಲ್‌ಗಳನ್ನು ತನ್ನ ಬಳಿಯೇ ಇಟ್ಟುಕೊಂಡಿದ್ದ ಈ ಹಂತಕ, ಬಂಧುಗಳಿಗೆ ಯಾರ ಮೇಲೂ ಅನುಮಾನ ಬಾರದಿರಲು ಕೊಲೆಯಾದ ದಿವ್ಯಾಳ ಮೊಬೈಲ್‌ನಿಂದ ಆಕೆಯ ಅಕ್ಕ ಉಷಾಗೆ ಸುದೀರ್ಘ ಸಂದೇಶ ಕಳುಹಿಸಿದ್ದ.

ಸೈಕೋ ಕಿಲ್ಲರ್ ಲಾಕ್ ಆಗಿದ್ದು ಹೇಗೆ?

ನಳಿನಿ ಮತ್ತು ದಿವ್ಯಾ ನಾಪತ್ತೆಯಾಗಿದ್ದಾರೆ ಎಂದು ತಾಯಂದಿರು ಶ್ರೀರಾಮಪುರ ಠಾಣೆಗೆ ಮಿಸ್ಸಿಂಗ್ ದೂರು ನೀಡಿದಾಗ ಪೊಲೀಸರು ಅಲರ್ಟ್ ಆದರು. ಎಲ್ಲರ ಮೊಬೈಲ್ ಟ್ರೇಸ್ ಮಾಡಿದಾಗ, ವಿಚಿತ್ರವೆಂದರೆ ಕನ್ಯಾಕುಮಾರಿ ಯಾತ್ರೆಯಲ್ಲಿದ್ದಾರೆ ಎನ್ನಲಾದ ಎಲ್ಲಾ ಮೊಬೈಲ್‌ಗಳೂ ಬೆಂಗಳೂರಿನ ಸುತ್ತಮುತ್ತಲಿನ ಒಂದೇ ಲೊಕೇಶನ್‌ನಲ್ಲಿ ಆಕ್ಟಿವ್ ಆಗಿರುವುದು ಪತ್ತೆಯಾಯಿತು!
ಅನುಮಾನಗೊಂಡ ಪೊಲೀಸರು ಶೇಖರ್‌ನನ್ನು ವಶಕ್ಕೆ ಪಡೆದು ಬೆಂಡೆತ್ತಿದಾಗ, ರಾಜಧಾನಿಯನ್ನೇ ಬೆಚ್ಚಿಬೀಳಿಸಿದ ಏಳು ಜನರ ಸರಣಿ ನರಮೇಧದ ಕರಾಳ ರಹಸ್ಯ ಹೊರಬಿದ್ದಿದೆ!.

ಯಾರು ಈ ಇಂದು ಶೇಖರ್? ಕ್ರೈಂ ಹಿನ್ನೆಲೆ ಏನು?

ಕೇವಲ ಕ್ಯಾಬ್ ಚಾಲಕನಲ್ಲ; 2018ರಲ್ಲೇ ಮಾದನಾಯಕನಹಳ್ಳಿ ಠಾಣೆಯಲ್ಲಿ ದರೋಡೆ (ರಾಬರಿ) ಕೇಸ್‌ನಲ್ಲಿ ಜೈಲು ಸೇರಿದ್ದ. ಕಾರು ಗಾಡಿ ಓಡಿಸುತ್ತಾ, ಪೊಲೀಸರ ಜೊತೆ ಸಂಪರ್ಕ ಬೆಳೆಸಿಕೊಂಡಿದ್ದ. ಪೊಲೀಸರು ಕೇಸ್ ಹೇಗೆ ಭೇದಿಸುತ್ತಾರೆ, ಸಾಕ್ಷ್ಯ ನಾಶ ಹೇಗೆ ಮಾಡುತ್ತಾರೆ ಎಂಬುದನ್ನು ಮೊದಲೇ ಕಲಿತಿದ್ದ. ಈತನ ಡೈರಿಯಲ್ಲಿ ಐಪಿಎಸ್, ಎಸ್ಪಿ, ಎಸಿಪಿ, ಇನ್ಸ್‌ಪೆಕ್ಟರ್‌ಗಳ ನಂಬರ್‌ಗಳೇ ತುಂಬಿವೆ. ತಾನು ಬಾಡಿಗೆಗಿದ್ದ ಮನೆಯನ್ನೇ ಲಪಟಾಯಿಸಲು ವೃದ್ಧ ಮಾಲೀಕನಿಂದ ಸಹಿ ಪಡೆದು ವಂಚಿಸಿದ್ದ, ಆ ನೋವಿನಲ್ಲೇ ಆ ಮಾಲೀಕ ಮೃತಪಟ್ಟಿದ್ದ.

ಬೆಟ್ಟ-ಘಾಟಿಗಳಲ್ಲಿ ಹೆಣಗಳಿಗಾಗಿ ತೀವ್ರ ಶೋಧ!

ಸದ್ಯಕ್ಕೆ 7 ವರ್ಷದ ಬಾಲಕ ಪುನೀತ್ ಮೃತದೇಹ ಮಾತ್ರ ಪತ್ತೆಯಾಗಿದ್ದು, ಉಳಿದ 6 ಮೃತದೇಹಗಳಿಗಾಗಿ ಮೂವರು ಎಸಿಪಿಗಳ ನೇತೃತ್ವದ ವಿಶೇಷ ತಂಡಗಳು ಸ್ಕಂದಗಿರಿ, ಹಾಸನ, ಚಾರ್ಮಾಡಿ ಘಾಟ್ ಹಾಗೂ ತಮಿಳುನಾಡಿನ ಕಣಿವೆಗಳಲ್ಲಿ ಹಗಲಿರುಳು ಕಾರ್ಯಾಚರಣೆ ನಡೆಸುತ್ತಿವೆ. ಹಂತಕ ಪೊಲೀಸರನ್ನೂ ದಿಕ್ಕುತಪ್ಪಿಸಲು ಒಂದೊಂದು ಬಾರಿ ಒಂದೊಂದು ಜಾಗದ ಹೆಸರು ಹೇಳುತ್ತಿದ್ದಾನೆ.
ಸಂಬಂಧಗಳನ್ನೇ ನಂಬಿ ಬಂದ ಇಡೀ ಕುಟುಂಬವನ್ನೇ ರುಬ್ಬುಗುಂಡಿನಲ್ಲಿ ಜಜ್ಜಿ ಕೊಂದ ಈ ರಕ್ಕಸನಿಗೆ ಕಾನೂನಿನ ಅಡಿಯಲ್ಲಿ ಗಲ್ಲು ಶಿಕ್ಷೆಯೇ ಆಗಬೇಕು ಎಂಬ ಆಕ್ರೋಶ ಸಾರ್ವಜನಿಕ ವಲಯದಲ್ಲಿ ಭುಗಿಲೆದ್ದಿದೆ.

ಸರಣಿ ಕೊಲೆಗೆ ಪಿಯುಸಿ ಓದುತ್ತಿರುವ ಮಗಳ ಸಾಥ್..?!

ಭೀಕರ ಹತ್ಯೆ ಪ್ರಕರಣದಲ್ಲಿ ಆರೋಪಿ ಇಂದುಶೇಖರ್‌ಗೆ ಪಿಯುಸಿ ಓದುತ್ತಿರುವ ಮಗಳು ಕೂಡ ಸಾಥ್ ನೀಡಿರುವ ಶಂಕೆ ವ್ಯಕ್ತವಾಗಿದೆ. ಮಗಳನ್ನು ಮಾತ್ರ ಬಿಟ್ಟು ಉಳಿದವರೆಲ್ಲರನ್ನೂ ಆರೋಪಿ ಕೊಲೆ ಮಾಡಿದ್ದು, 20 ದಿನಗಳಿಂದ ಕೊಲೆ ನಡೆಯುತ್ತಿದ್ದರೂ ಮಗಳು ಮೌನವಾಗಿದ್ದಳು. ಕಳೆದ 4 ದಿನಗಳಿಂದ ಮನೆ ಬಳಿಯೇ ಓಡಾಟ ನಡೆಸುತ್ತಿದ್ದಳು. ಹೀಗಾಗಿ ತಂದೆಯ ಕೊಲೆ ಕೃತ್ಯಕ್ಕೆ ಆಕೆಯೂ ಸಹಕಾರ ನೀಡಿದ್ದಳಾ? ಇಬ್ಬರೂ ಪ್ಲಾನ್ ಮಾಡಿ ಕುಟುಂಬವನ್ನೇ ಮುಗಿಸಿದ್ರಾ ಎಂಬ ಪ್ರಶ್ನೆ ಉದ್ಭವಿಸಿದೆ. ಅಲ್ಲದೆ ಮಗಳ ಮೂಲಕವೇ ಒಬ್ಬೊಬ್ಬರನ್ನೇ ಮನೆಗೆ ಕರೆಸಿಕೊಂಡು ಇಂದುಶೇಖರ್ ಕೊಲೆ ಮಾಡಿರೋದು ಕೂಡ ಸಂಶಯಕ್ಕೆ ಎಡೆಮಾಡಿಕೊಟ್ಟಿದೆ.