Categories
ಸಿನಿಮಾ

ಬದುಕಿನ ಯಾತ್ರೆ ಮುಗಿಸಿದ ಸಂಚಾರಿ ವಿಜಯ್!

  • ಕನ್ನಡ ಚಿತ್ರ ರಂಗಕ್ಕೆ ಮತ್ತೊಂದು ಶಾಕ್
  • ಅಪಘಾತದಲ್ಲಿ ತೀವ್ರ ತಲೆಗೆ ಪೆಟ್ಟು ಬಿದ್ದು ಸಾವು
  • ಕರೋನಾ ಸಂಕಷ್ಟದಲ್ಲಿರುವವರಿಗೆ ಫುಡ್ ಕಿಟ್ ಕೊಟ್ಟು ವಾಪಾಸ್ ಆಗುತ್ತಿದ್ದ ವೇಳೆ ಅಪಘಾತ

NAMMUR EXPRESS
ಬೆಂಗಳೂರು: ಕನ್ನಡ ಚಿತ್ರರಂಗದ ಭರವಸೆಯ ನಟನಾಗಿದ್ದ ಸಂಚಾರಿ ವಿಜಯ್(38) ಅಪಘಾತಕ್ಕೆ ಬಲಿಯಾಗಿದ್ದಾರೆ.
ಶನಿವಾರ ರಾತ್ರಿ ನಡೆದ ರಸ್ತೆ ಅಪಘಾತದಲ್ಲಿ ವಿಜಯ್ ಮೆದುಳು ಕೆಲಸ ಮಾಡುತ್ತಿರಲಿಲ್ಲ. ಗಂಭೀರ ಗಾಯಗೊಂಡ ವಿಜಯ್ ಬೆಂಗಳೂರಿನ ಬನ್ನೇರುಘಟ್ಟ ಅಪೋಲೋ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಶನಿವಾರ ಕರೋನಾ ಸಂಕಷ್ಟದಲ್ಲಿರುವ ಜನತೆಗೆ ಫುಡ್ ಕಿಟ್ ಕೊಟ್ಟು ವಾಪಾಸ್ ಬರುತ್ತಿದ್ದ ವೇಳೆ ಬೈಕ್ ಅಪಘಾತ ಆಗಿತ್ತು. ಸೋಮವಾರ ಸಂಚಾರಿ ವಿಜಯ್ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಮಾಹಿತಿ ಹಂಚಿಕೊಂಡಿರುವ ನಟ ಕಿಚ್ಚ ಸುದೀಪ್, ನಟ ಸಂಚಾರಿ ವಿಜಯ್ ಇನ್ನಿಲ್ಲ ಎಂಬುದನ್ನು ನೆನಪಿಸಿಕೊಳ್ಳಲು ಕೂಡ ಆಗುತ್ತಿಲ್ಲ. ಲಾಕ್ ಡೌನ್ ಸಂದರ್ಭದಲ್ಲಿ ಅನೇಕ ಬಾರಿ ನಾನು ಅವರು ಭೇಟಿಯಾಗಿದ್ದೆವು. ಅಲ್ಲದೇ ಅವರ ಮುಂದಿನ ಚಿತ್ರದ ಬಗ್ಗೆಯೂ ಕುತೂಹಲ ಮೂಡಿತ್ತು. ಮುಂದಿನ ಚಿತ್ರ ಬಿಡುಗಡೆ ಮುನ್ನವೇ ಅವರು ಇನ್ನಿಲ್ಲವಾಗಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂಬುದಾಗಿ ಕೋರಿದ್ದಾರೆ.
ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರಿಗೆ, ಬ್ರೈನ್ ಸ್ಟ್ರೋಕ್ ಉಂಟಾಗಿ, ಅವರು ಮತ್ತಷ್ಟು ಗಂಭೀರ ಸ್ಥಿತಿಗೆ ತಲುಪಿದ್ದರು. ವೈದ್ಯರ ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ ಎಂದು ಕುಟುಂಬದವರಿಗೆ ತಿಳಿಸಿದ್ದಾರೆ.ಕುಟುಂಬಸ್ಥರು ನಟ ಸಂಚಾರಿ ವಿಜಯ್ ಅಂಗಾಗ ದಾನ ಮಾಡುವಂತ ನಿರ್ಧಾರವನ್ನು ಕೈಗೊಂಡಿರೋದಾಗಿ ಪ್ರಕಟಿಸಿದ್ದರು.
ಅಪ್ರತಿಮ ಕಲಾವಿದ!: ಭಾರತೀಯ ರಂಗಭೂಮಿ ಮತ್ತು ಸಿನೆಮಾ ಕಲಾವಿದರಾಗಿದ್ದು ಪ್ರಮುಖವಾಗಿ ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡುತ್ತಾರೆ, ಜೊತೆಗೆ ತಮಿಳು, ತೆಲುಗು ಮತ್ತು ಹಿಂದಿ ಸಿನೆಮಾದಲ್ಲಿಯೂ ಕೆಲಸ ಮಾಡಿದ್ದರು. 62ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ, ಇವರಿಗೆ ಕನ್ನಡದ ನಾನು ಅವನಲ್ಲ…ಅವಳು ಚಿತ್ರಕ್ಕೆ ಅತ್ಯುತ್ತಮ ನಟ ಪ್ರಶಸ್ತಿ ನೀಡಲಾಗಿದ್ದು, ಈ ಚಿತ್ರದಲ್ಲಿ ತೃತೀಯ ಲಿಂಗಿಯ ಪಾತ್ರ ನಿರ್ವಹಿಸಿದ್ದಾರೆ. ಇದೇ ಪಟ್ಟಿಯಲ್ಲಿ, ಮುಖ್ಯ ಪಾತ್ರ ನಿರ್ವಹಿಸಿದ್ದ ಮತ್ತೊಂದು ಸಿನೆಮಾ ಹರಿವು, ಅತ್ಯುತ್ತಮ ಕನ್ನಡ ಪ್ರಾದೇಶಿಕ ಚಲನಚಿತ್ರ ಪ್ರಶಸ್ತಿ ಪಡೆದಿದ್ದರು.
2007ರಲ್ಲಿ ಚಿತ್ರರಂಗ ಪ್ರವೇಶ ಮಾಡಿದ್ದ ವಿಜಯ್ ಇದೀಗ ಬಾರದ ಲೋಕಕ್ಕೆ ಪಯಣಿಸಿದ್ದಾರೆ.
ಕನ್ನಡ ಸಿನಿಮಾ ಲೋಕದ ಎಲ್ಲಾ ಗಣ್ಯರು ಸೇರಿದಂತೆ ಎಲ್ಲಾ ಕ್ಷೇತ್ರದ ಪ್ರಮುಖರು ಕಂಬನಿ ಮಿಡಿದಿದ್ದಾರೆ.

Categories
ಮಲ್ನಾಡ್

ಕಾರು ಅಪಘಾತಕ್ಕೆ ಮಹಿಳೆ ಬಲಿ!

  • ತೀರ್ಥಹಳ್ಳಿ ಬಳಿ ಸುರಾನಿಯಲ್ಲಿ ಹೊಂಡಕ್ಕೆ ಬಿದ್ದ ಕಾರು
  • ತಾಯಿ ಸಾವಿನ ಸುದ್ದಿ ಅಮೇರಿಕಾದಲ್ಲಿರುವ ಮಗನಿಗೆ ತಿಳಿಸಲು ಪರದಾಟ!
  • ಮಾನವೀಯತೆ ಮೆರೆದ ಬಾಂದ್ಯಾ ರಾಘು..!

NAMMUR EXPRESS
ತೀರ್ಥಹಳ್ಳಿ: ಮಗನೆದುರೇ ತಾಯಿ ಅಪಘಾತದಲ್ಲಿ ಮೃತಪಟ್ಟ ಘಟನೆ ತೀರ್ಥಹಳ್ಳಿ ಪಟ್ಟಣದ ಸುರಾನಿ ಬಳಿ ಸಂಭವಿಸಿದೆ.
ಕೋಣಂದೂರು ಸಮೀಪದ ಶಂಕ್ರಳ್ಳಿಯ ದರ್ಶನ್ ಚಾಲನೆ ಮಾಡುತ್ತಿದ್ದ ಕಾರು ಸುರಾನಿ ಸಮೀಪದ ಭೂತರಾಯ ಸ್ವಾಮಿ ದೇಗುಲದ ಬಳಿ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದ ಕಾರಣ ಕೋಣಂದೂರು ಸಮೀಪದ ಶಂಕರಹಳ್ಳಿಯ ಸದಾಶಿವ ಎಂಬುವರ ಪತ್ನಿ ಸುಂದರಮಾಲಾ(63) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸುಂದರಮಾಲಾ ಅವರ ಮಗ ದರ್ಶನ್ ಗಾಯಗೊಂದು ಜೆಸಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದಿದ್ದಾರೆ. ಇವರ ಇನ್ನೊರ್ವ ಪುತ್ರ ಅಮೇರಿಕಾದಲ್ಲಿದ್ದಾರೆ.
ತೀರ್ಥಹಳ್ಳಿ ಖಾಸಗಿ ಆಸ್ಪತ್ರೆಗೆ ತಮ್ಮ ಕಾರಿನಲ್ಲಿ ಬಂದು ಮನೆಗೆ ಮರಳುವಾಗ ಈ ಘಟನೆ ನಡೆದಿದೆ.
ಕಾರು ಚಾಲನೆ ಮಾಡುತ್ತಿದ್ದ ಮಗ ಸೀಟ್ ಬೆಲ್ಟ್ ಹಾಕಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ತಾಯಿ ಸೀಟ್ ಬೆಲ್ಟ್ ಹಾಕದ ಕಾರಣ ತಲೆ ಹೊಡೆದಿದ್ದರಿಂದ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.
ಇನ್ನೊರ್ವ ಮಗ ಅಮೇರಿಕಾದಲ್ಲಿದ್ದು ತಾಯಿ ಸಾವಿನ ಸುದ್ದಿ ತಿಳಿಸಲು ಸಾಧ್ಯವಾಗದ ಪರಿಸ್ಥಿತಿ ಮನಕಲಕುವಂತಿತ್ತು. ಅಲ್ಲಿ ರಾತ್ರಿಯಾಗಿದ್ದರಿಂದ ಆತ ಕರೆ ಸ್ವೀಕರಿಸಿಲ್ಲ ಎಂದು ತಿಳಿದು ಬಂದಿದ್ದು ಇದೀಗ ಗೊತ್ತಾಗಿದೆ.
ತೀರ್ಥಹಳ್ಳಿ ಸರಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ತೀರ್ಥಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪದೇ ಪದೇ ಅಪಘಾತ: ಸುರಾನಿ ಭೂತರಾಯ ಸ್ವಾಮಿ ದೇಗುಲದ ಸಮೀಪ ಪದೇ ಪದೇ ಅದೇ ಜಾಗದಲ್ಲಿ ಅಪಘಾತ ಸಂಭವಿಸುತ್ತಿದೆ. ಕಳೆದ ತಿಂಗಳು ಅದೇ ಜಾಗದಲ್ಲಿ ಪಿಕ್ ಅಪ್ ಪಲ್ಟಿ ಹೊಡೆದಿತ್ತು. ಇನ್ನು ಎರಡು ತಿಂಗಳು ಹಿಂದೆ ಗುತ್ತಿಗೆದಾರರೊಬ್ಬರ ಫೋರ್ಡ್ ಎಂಡವರ್ ಕಾರು ಅಪಘಾತ ಆಗಿತ್ತು. ರಸ್ತೆ ಪರಿಶೀಲಿಸಿ ತಡೆಗೋಡೆ ಹಾಕಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಶಾಸಕರ ಭೇಟಿ: ಘಟನಾ ಸ್ಥಳಕ್ಕೆ ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಭೇಟಿ ನೀಡಿದ್ದು ಆಸ್ಪತ್ರೆಗೂ ತೆರಳಿ ಪುತ್ರನಿಗೆ ಸಾಂತ್ವನ ಹೇಳಿದ್ದಾರೆ.
ಅಪಘಾತವಾಗಿ ಇಬ್ಬರು ಬಿದ್ದಾಗ ಅನೇಕ ಜನ ಅವರನ್ನು ತಕ್ಷಣಕ್ಕೆ ಆಸ್ಪತ್ರೆಗೆ ಕರೆ ತರಲು ಹೆದರಿದರು. ಆದರೆ ಈ ವೇಳೆ ಅದೇ ಮಾರ್ಗ ಬರುತ್ತಿದ್ದ ಯುವ ಮುಖಂಡ ಬಾಂದ್ಯಾ ರಾಘು ಅವರನ್ನು ಆಸ್ಪತ್ರೆಗೆ ಕರೆ ತಂದಿದ್ದಾರೆ. ಈ ಮೂಲಕ ಮಾನವೀಯತೆ ಮೆರೆದಿದ್ದಾರೆ.

Categories
ಮಲ್ನಾಡ್

6000 ಮಂದಿಗೆ ಆಹಾರದ ಕಿಟ್ ಭಾಗ್ಯ!

  • ತೀರ್ಥಹಳ್ಳಿಯಲ್ಲಿ ಸಂಸದ ರಾಘವೇಂದ್ರ ಚಾಲನೆ
  • ಶಾಸಕ ಜ್ಞಾನೇಂದ್ರ ನೇತೃತ್ವದಲ್ಲಿ ವಿಶೇಷ ಯೋಜನೆ
  • ಬಡವರಿಗೆ, ಕಾರ್ಮಿಕರಿಗೆ ಸಹಾಯ ಹಸ್ತ..!
  • ಮೋದಿ ಇಲ್ಲದಿದ್ದರೆ ದೇಶ ಕಷ್ಟಕ್ಕೆ ಹೋಗುತ್ತಿತ್ತು!
  • ಕರೋನಾ ಸೇವಕ ಪತ್ರಕರ್ತರಿಗೂ ವಿಶೇಷ ಕಿಟ್

NAMMUR EXPRESS
ತೀರ್ಥಹಳ್ಳಿ: ಆಟೋ ಚಾಲಕರು, ಟ್ಯಾಕ್ಸಿ ಚಾಲಕರು, ಹಮಾಲಿಗಳು, ಬಡ ಕಾರ್ಮಿಕರು, ಕ್ಷೇತ್ರದ ಬಡವರು ಸೇರಿದಂತೆ ಹಲವರಿಗೆ ಶಾಸಕ ಆರಗ ಜ್ಞಾನೇಂದ್ರ ನೇತೃತ್ವದಲ್ಲಿ ಆಹಾರದ ಕಿಟ್ ವಿತರಣೆ ನಿರಂತರವಾಗಿ ಸಾಗಿದೆ. ಈ ನಡುವೆ ಗುರುವಾರ ಶಿವಮೊಗ್ಗ ಸಂಸದ ರಾಘವೇಂದ್ರ ಅವರು ಸುಮಾರು 6000 ಕಿಟ್ ವಿತರಣೆ ಕಾರ್ಯಕ್ರಮಕ್ಕೆ ಭಾಗಿಯಾಗಿ ಚಾಲನೆ ನೀಡಿದರು.
ಪ್ರೇರಣಾ ಟ್ರಸ್ಟ್, ಸೇವಾ ಭಾರತಿ ಮತ್ತು ಪರಿವಾರ ಸಂಘಟನೆಗಳ ನೂರಾರು ಕಾರ್ಯಕರ್ತರು ಈ ಕಿಟ್ ಸಿದ್ದಪಡಿಸಿದ್ದಾರೆ.
ತೀರ್ಥಹಳ್ಳಿಯ ಶಾಂತವೇರಿ ಗೋಪಾಲ ಗೌಡ ರಂಗಮಂದಿರದಲ್ಲಿ ಸೇವಾ ಭಾರತಿ, ಪ್ರೇರಣಾ ಟ್ರಸ್ಟ್, ಪರಿವಾರ ಸಂಘಟನೆಗಳ ವತಿಯಿಂದ ಆಯೋಜಿಸಿದ್ದ ಶ್ರಮಿಕ ವರ್ಗದವರಿಗೆ ಆಹಾರದ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದ ರಾಘವೇಂದ್ರ ಅವರು,ಪ್ರಧಾನಿ ಮೋದಿ ಅವರು ಇಂತಹ ಸ್ಥಿತಿಯಲ್ಲಿ ಇಲ್ಲದಿದ್ದರೆ ಈ ದೇಶದ ಸ್ಥಿತಿ ಕಷ್ಟ ಇತ್ತು. ವಿಶ್ವದಲ್ಲೇ ಅತೀ ಹೆಚ್ಚು ಜನರಿಗೆ ಲಸಿಕೆ ಕೊಟ್ಟ ದೇಶ ನಮ್ಮದು ಎಂದು ಶಿವಮೊಗ್ಗ ಸಂಸದ ಬಿ. ವೈ. ರಾಘವೇಂದ್ರ ಹೇಳಿದ್ದಾರೆ.
ಶಿವಮೊಗ್ಗ ಜಿಲ್ಲೆಗೆ ಕರೋನಾ ನಡುವೆಯೂ ಕೇಂದ್ರ ಸರಕಾರ 5000 ಕೋಟಿ ಬಿಡುಗಡೆ ಮಾಡಿದೆ. 350 ಕೋಟಿ ಆಗುಂಬೆ ರಸ್ತೆ ಮಂಜೂರಾಗಿದ್ದು, ಘಾಟಿಯಲ್ಲಿ ಯೋಜನೆ ಬಳಿಕ ಹೆವಿ ವಾಹನಕೂಡ ಓಡಾಡಬಹುದು. ಎಲ್ಲಾ ಸೇರಿ ಕರೋನಾ ವಿರುದ್ಧ ಹೋರಾಟ ಮಾಡೋಣ ಎಂದರು.
ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ ಪ್ರತಿಯೊಬ್ಬರೂ ಕಷ್ಟದಲ್ಲಿದ್ದಾರೆ. ಬಹುತೇಕರ ಬದುಕನ್ನು ಕರೋನಾ ಬೀದಿಗೆ ಹಾಕಿದೆ. ಆಟೋ ಚಾಲಕರು, ಬಡವರು, ಕಾರ್ಮಿಕರಿಗೆ ಅನ್ನ ಇಲ್ಲ ಎನ್ನಬಾರದು. ಹೀಗಾಗಿ ಕಿಟ್ ವಿತರಣೆ ಮಾಡಿದ್ದೇವೆ. ತಾಲೂಕಿನ ಜನತೆಗೆ 3 ಲಾರಿ ಲೋಡ್ ದಿನಸಿ ತಂದಿದ್ದೇವೆ. ನಮ್ಮ ಸಹೋದರಿಯರು, ಯುವಕರು ಪ್ಯಾಕ್ ಮಾಡಿದ್ದಾರೆ. ಎಲ್ಲಾ ಸೇರಿ ಈ ಸಮಾಜದ ರಕ್ಷಣೆಗೆ ಮುಂದಾಗಬೇಕಿದೆ.
ಲಸಿಕೆ ಬಗ್ಗೆ ಅಪಪ್ರಚಾರ ಆಯಿತು. ಇದು ಮೋದಿ ವಾಕ್ಸಿನ್. ಲಸಿಕೆ ತಗೊಂಡ್ರೆ ಮಕ್ಕಳು ಆಗುವುದಿಲ್ಲ ಎಂದು ಹೇಳಿದಕ್ಕೆ ಜನ ಹೆದರಿದರು ಎಂದು ಆರೋಪಿಸಿದರು.
ಬಿಜೆಪಿ ನಾಯಕರಾದ ಭಾನುಪ್ರಕಾಶ್ ಮಾತನಾಡಿ, ದೇಶಕ್ಕೆ ಪ್ರಧಾನಿ ಮೋದಿ ಅವರು ಏಕೈಕ ಆಶಾಕಿರಣ. ಎಲ್ಲರೂ ಸೇರಿ ಕರೋನಾ ಓಡಿಸಬೇಕು. ಎಲ್ಲರಿಗೂ ಧೈರ್ಯ ತುಂಬಬೇಕು. ಬಿಜೆಪಿ ಕರೋನಾ ಸೇವೆಯಲ್ಲಿ ಓಟಿನ ಬೇಟೆ ಮಾಡುತ್ತಿಲ್ಲ ಎಂದರು.
ಶಿವಮೊಗ್ಗ ಜಿಲ್ಲಾಧ್ಯಕ್ಷ ಮೇಘರಾಜ್, ತೀರ್ಥಹಳ್ಳಿಯ ನಾಯಕರಾದ ಬಾಳೆಬೈಲು ರಾಘವೇಂದ್ರ, ಸೊಪ್ಪುಗುಡ್ಡೆ ರಾಘವೇಂದ್ರ,ಗೀತಾ ಶೆಟ್ಟಿ, ಸಿ.ಬಿ.ಈಶ್ವರ್, ನಾಗರಾಜ ಶೆಟ್ಟಿ, ಸಾಲೆಕೊಪ್ಪ ರಾಮಚಂದ್ರ, ಕಾಸರವಳ್ಳಿ ಶ್ರೀನಿವಾಸ್, ಯಶೋಧ ಮಂಜುನಾಥ, ಸಂದೇಶ್ ಜವಳಿ, ಕುಕ್ಕೆ ಪ್ರಶಾಂತ್, ಹೆದ್ದೂರು ನವೀನ್, ಚಂದವಳ್ಳಿ ಸೋಮಶೇಖರ್ ಸೇರಿದಂತೆ ಹಲವರಿದ್ದರು.
ಮಧ್ಯೆ ಕೈಕೊಟ್ಟ ವಿದ್ಯುತ್: ಕಾರ್ಯಕ್ರಮ ನಡೆಯುತ್ತಿರುವಾಗ ಪದೇ ಪದೇ ಕೈಕೊಟ್ಟ ಕಾರಣ ಸಭೆ ಗಲಿಬಿಲಿಗೆ ಕಾರಣವಾಯಿತು.
ಪತ್ರಕರ್ತರಿಗೂ ವಿಶೇಷ ಕಿಟ್!: ಕರೋನಾ ಸೇವೆಯಲ್ಲಿ ಮುಂಚೂಣಿಯಲ್ಲಿರುವ ತೀರ್ಥಹಳ್ಳಿಯ ಎಲ್ಲಾ ಪತ್ರಕರ್ತರಿಗೆ ಆರೋಗ್ಯ ದೃಷ್ಟಿಯಿಂದ ಮಾಸ್ಕ್, ಸ್ಟೀಮರ್, ಸ್ಯಾನಿಟೈಸರ್ ಸೇರಿದಂತೆ ಆಹಾರದ ಕಿಟ್ಗಳನ್ನು ಸಂಸದ ರಾಘವೇಂದ್ರ, ಶಾಸಕ ಆರಗ ಜ್ಞಾನೇಂದ್ರ ವಿತರಿಸಿದರು.
ರಾಜ್ಯದ ಎಲ್ಲಾ ಸುದ್ದಿ, ಜಾಹೀರಾತಿಗಾಗಿ “NAMMUR EXPRESS” ಫೇಸ್ಬುಕ್ ಮತ್ತು ಯೂಟ್ಯೂಬ್ ಚಾನೆಲ್ ಲೈಕ್ ಮಾಡಿ, ಸಬ್ಸ್ಕ್ರೈಬ್ ಆಗಿ. ವಾಟ್ಸಾಪ್ನಲ್ಲಿ ಸುದ್ದಿ ಪಡೆಯಲು 9481949101ಗೆ ನಿಮ್ಮ ಹೆಸರು, ಊರು, ತಾಲೂಕು ವಾಟ್ಸಾಪ್ ಮಾಡಿರಿ. ನಿಮ್ಮ ಎಲ್ಲಾ ಸ್ನೇಹಿತರು ಹಾಗೂ ಗ್ರೂಪ್ಗಳಿಗೆ ಶೇರ್ ಮಾಡಿರಿ. ಧನ್ಯವಾದಗಳು..!.

Categories
ಬೆಂಗಳೂರು

ಸೋಮವಾರದಿಂದ ಕರ್ನಾಟಕ ಅರ್ಧ ಓಪನ್..!

  • ಅನೇಕ ಚಟುವಟಿಕೆಗಳಿಗೆ ಗ್ರೀನ್ ಸಿಗ್ನಲ್
  • ಜೂ.14ರಿಂದ ಏನೇನ್ ಇರುತ್ತೆ..ಯಾವ ಜಿಲ್ಲೆಗೆ ಏನು?
  • ಯಾವ ಸೇವೆ ಇರುತ್ತೆ… ಏನಿರಲ್ಲ..ಸಂಪೂರ್ಣ ಸುದ್ದಿ!

NAMMUR EXPRESS
ಬೆಂಗಳೂರು: ರಾಜ್ಯ ಅರ್ಧ ಓಪನ್ ಆಗಲಿದೆ. ಹೌದು. ಸೋಮವಾರದಿಂದ 19 ಜಿಲ್ಲೆಗಳಲ್ಲಿ ಲಾಕ್ ಡೌನ್ ಕೊಂಚ ತೆರವು ಆಗಲಿದೆ. ಆದರೆ ಸುಖಾಸುಮ್ಮನೆ ಓಡಾಡುವ ಹಾಗಿಲ್ಲ. ಬೆಂಗಳೂರಿನಲ್ಲಿ ವೀಕೆಂಡ್ ಬಂದ್ ಆಗಲಿದೆ.
ಸೋಮವಾರದಿಂದಅನ್ ಲಾಕ್ ಬಳಿಕ ಏನೇನ್ ಇರುತ್ತೆ..ಯಾವ ಜಿಲ್ಲೆಗೆ ಏನು?:ಅಗತ್ಯ ವಸ್ತು ಖರೀದಿಗೆ ಬೆಳಿಗ್ಗೆ 6ರಿಂದ ಮಧ್ಯಾಹ್ನ2 ವರೆಗೆ ಅವಕಾಶ. ಪಾರ್ಕ್ ಬೆಳಿಗ್ಗೆ 5ರಿಂದ 10, ಬೀದಿ ಬದಿ ವ್ಯಾಪಾರಿಗಳಿಗೆ ಅವಕಾಶ. ಆಟೋ, ಟ್ಯಾಕ್ಸಿ ಓಡಾಟ. 2 ಮಂದಿ ಪ್ರಯಾಣಿಕರು ಮಾತ್ರ. ಗಾರ್ಮೆಂಟ್ಸ್ ಶೇ.30ರಷ್ಟು ಕಾರ್ಮಿಕರು ಮಾತ್ರ. ಕೈಗಾರಿಕೆಗಳು ಓಪನ್ ಆಗಲಿದ್ದು ಶೇ.50ರಷ್ಟು ಕಾರ್ಮಿಕರನ್ನು ಬಳಸಬಹುದಾಗಿದೆ. ಹೋಟೆಲ್ಗಳಲ್ಲಿ ಪಾರ್ಸೆಲ್ ಅವಕಾಶ ನೀಡಲಾಗಿದೆ. ಕಟ್ಟಡ ನಿರ್ಮಾಣ, ಕೃಷಿ ಚಟುವಟಿಕೆಗಳಿಗೆ ಅವಕಾಶ ನೀಡಲಾಗಿದೆ. ಸಿಮೆಂಟ್, ಸ್ಟೀಲ್, ಪೈಪ್ ಅಂಗಡಿಗಳು ಓಪನ್ ಆಗಲಿವೆ.
ಪ್ರತಿದಿನ ಸಂಜೆ 7ಗಂಟೆಯಿಂದ ಬೆಳಗ್ಗೆ 5ಗಂಟೆವರೆಗೆ ನೈಟ್ ಕರ್ಫ್ಯೂ ಮತ್ತು ಶುಕ್ರವಾರ ಸಂಜೆ 7ರಿಂದ ಸೋಮವಾರ ಬೆಳಗ್ಗೆ 5ರವರೆಗೆ ವೀಕೆಂಡ್ ಕರ್ಫ್ಯೂ ಜಾರಿಯಲ್ಲಿರಲಿದೆ. ಜೂನ್ 14ರಿಂದ ಈ ನಿಯಮ ಜಾರಿಗೆ ಬರಲಿದೆ.
11 ಜಿಲ್ಲೆ ಮತ್ತೆ ಲಾಕ್!: ಪಾಸಿಟಿವಿಟಿ ದರ ಕಡಿಮೆ ಇರುವ 11 ಜಿಲ್ಲೆಗಳಲ್ಲಿ ಲಾಕ್ ಡೌನ್ ಜೂ.21ರವರೆಗೆ ಲಾಕ್ ಡೌನ್ ಮುಂದುವರಿಯಲಿದೆ. ಮಾರ್ಗಸೂಚಿಯಲ್ಲಿ ಯಾವುದೇ ಬದಲಾವಣೆ ಇಲ್ಲ. ಜಿಲ್ಲಾಧಿಕಾರಿಗಳಿಗೆ ಇನ್ನು ಕಠಿಣ ಕ್ರಮ ತೆಗೆದುಕೊಳ್ಳಲು ಸೂಚಿಸಲಾಗಿದೆ.
ಯಾವ ಯಾವ ಜಿಲ್ಲೆ?: ಬೆಂಗಳೂರು ಗ್ರಾಮಾಂತರ, ಮೈಸೂರು, ಕೊಡಗು, ಚಿಕ್ಕಮಗಳೂರು, ಹಾಸನ, ಮಂಡ್ಯ, ಚಾಮರಾಜನಗರ, ದಕ್ಷಿಣ ಕನ್ನಡ, ಬೆಳಗಾವಿ, ದಾವಣಗೆರೆ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲಿ
ಮೈಸೂರು, ಬೆಳಗಾವಿ, ಶಿವಮೊಗ್ಗ, ವಿಜಯಪುರ, ಹಾಸನ, ಮಂಡ್ಯ, ದ.ಕನ್ನಡ, ಬೆಳಗಾವಿ ಜಿಲ್ಲೆಗಳಲ್ಲಿ ಜೂನ್ 21 ವರೆಗೆ ಲಾಕ್ ಡೌನ್ ಮುಂದುವರಿಕೆ ಮಾಡಲಾಗಿದೆ.
ಬೆಂಗಳೂರು ಓಪನ್: ರಾಜಧಾನಿ ಬೆಂಗಳೂರಿನಲ್ಲಿ ಜನರ ಸಂಖ್ಯೆ ಹೆಚ್ಚಿದೆ. ಸೋಮವಾರದಿಂದ ಬೆಳಿಗ್ಗೆ 6ರಿಂದ ಮಧ್ಯಾಹ್ನ 2 ಗಂಟೆವರೆಗೆ ಅವಕಾಶ ಇದೆ. ಪಾರ್ಕ್ ವಾಯು ವಿಹಾರಕ್ಕೆ 10 ಗಂಟೆವರೆಗೆ ಅವಕಾಶ ಮಾಡಿಕೊಡಲಾಗಿದೆ.
ವಲಸಿಗರು, ಬೇರೆ ಜಿಲ್ಲೆಗಳಿಂದ ಬರುತ್ತಿರುವ ಜನರನ್ನು ಪರೀಕ್ಷೆ ಮಾಡದಿದ್ದಲ್ಲಿ ಸೋಂಕು ಹೆಚ್ಚಾಗಲಿದೆ. ಬಿಬಿಎಂಪಿ ಹೀಗಾಗಿ ತಕ್ಷಣ ಕ್ರಮ ತೆಗೆದುಕೊಳ್ಳಬೇಕಿದೆ.
ಮರು ವಲಸೆ ಶುರು!: ಕರೋನಾ ಲಾಕ್ ಡೌನ್ ಕಾರಣ ತಮ್ಮ ಊರುಗಳಿಗೆ ಹೋಗಿದ್ದ ಜನ ಮತ್ತೆ ರಾಜಧಾನಿಗೆ ಬರುತ್ತಿದ್ದಾರೆ. ಕೈಗಾರಿಕೆ, ಗಾರ್ಮೆಂಟ್ಸ್, ಇತರೆ ಕಂಪನಿಗಳಿಗೆ ಅವಕಾಶ ನೀಡಿರುವ ಕಾರಣ ಜನ ಬರುತ್ತಿದ್ದಾರೆ. ರೈಲುಗಳಲ್ಲಿ ಜನ ಬರುತ್ತಿದ್ದಾರೆ. ಬಸ್ ಸೇವೆ ಶುರುವಾಗಿಲ್ಲ.

Categories
ಮಲ್ನಾಡ್

ಎಂಟು ಜಿಲ್ಲೆಯಲ್ಲಿ ಲಾಕ್ ಡೌನ್ ವಿಸ್ತರಣೆ!

  • ಜೂ.21ರವರೆಗೆ ಲಾಕ್ ಡೌನ್
  • ಕೈಗಾರಿಕೆ, ಕೃಷಿಗೆ ಅನುಮತಿ

NAMMUR EXPRESS
ಬೆಂಗಳೂರು: ಮೈಸೂರು, ಬೆಳಗಾವಿ, ಶಿವಮೊಗ್ಗ, ವಿಜಯಪುರ, ಹಾಸನ, ಮಂಡ್ಯ, ದ.ಕನ್ನಡ, ಬೆಳಗಾವಿ ಜಿಲ್ಲೆಗಳಲ್ಲಿ ಜೂನ್ 21 ವರೆಗೆ ಲಾಕ್ ಡೌನ್ ಮುಂದುವರಿಕೆ ಮಾಡಲಾಗಿದೆ. ಅನೇಕ ಚಟುವಟಿಕೆಗಳಿಗೆ ಅವಕಾಶ ಸಿಕ್ಕಿದೆ.
ಕರೋನಾ ಸೋಂಕು ಶೇಕಡಾವಾರು 5 ಬರುವವರೆಗೂ ಈ ಜಿಲ್ಲೆಗಳು ಲಾಕ್ ಆಗಲಿದೆ. ಅಗತ್ಯ ವಸ್ತುಗಳು ಹಾಗೂ ವ್ಯಾಪಾರಸ್ತರಿಗೆ, ಕಟ್ಟಡ ನಿರ್ಮಾಣ ಕಾರ್ಯ ಚಟುವಟಿಕೆಗಳನ್ನು ನಡೆಸಲು ಮತ್ತು ಹೆಚ್ಚಿನ ಸಮಯ ನೀಡುವ ವಿನಾಯಿತಿ ಜಿಲ್ಲಾಡಳಿತ, ತಾಲ್ಲೂಕು ಆಡಳಿತ, ಉಸ್ತುವಾರಿ ಸಚಿವರಿಗೆ ಅಧಿಕಾರ ನೀಡಲಾಗಿದೆ.
22 ಜಿಲ್ಲೆಗಳಲ್ಲಿ ವೀಕೆಂಡ್ ಲಾಕ್ ಡೌನ್ ಮತ್ತು ರಾತ್ರಿ ನಿಷೇಧಾಜ್ಞೆ ಜಾರಿಯಾಗುವ ಸಾಧ್ಯತೆ ಇದೆ. ಜನರ ಓಡಾಟದ ಮೇಲೆ ನಿಗಾ ಮಾಡಲಾಗುತ್ತದೆ. ಆಯಾ ಜಿಲ್ಲಾಧಿಕಾರಿಗಳಿಗೆ ಜಿಲ್ಲೆಗಳ ಹೊಣೆ ನೀಡಲಾಗಿದೆ.

Categories
ಮಲ್ನಾಡ್

ತೀರ್ಥಹಳ್ಳಿ ಸಮಾನ ಮನಸ್ಕರ ಅನ್ನ ದಾಸೋಹ!

  • ಸಾವಿರಾರು ಮಂದಿಗೆ ಪ್ರತಿ ದಿನ ಊಟ ಉಪಹಾರ
  • ಎಲ್ಲಾ ಸಾಮಾಜಿಕ ಸೇವೆಗಳಲ್ಲಿ ವೇದಿಕೆ ಕೆಲಸ
  • ಹಿರಿ, ಕಿರಿ ನಾಯಕರ, ಕಾರ್ಯಕರ್ತರ ಸಾರಥ್ಯ

NAMMUR EXPRESS
ತೀರ್ಥಹಳ್ಳಿ: ತೀರ್ಥಹಳ್ಳಿಯಲ್ಲಿ ಕರೋನಾ ಸೇವೆಯಲ್ಲಿ ಕಳೆದ ವರ್ಷದಿಂದ ಮುಂಚೂಣಿಯಲ್ಲಿರುವ ಸಂಸ್ಥೆ ಸಮಾನ ಮನಸ್ಕರ ವೇದಿಕೆ.
2020ರ ಲಾಕ್ ಡೌನ್ ವೇಳೆ ಶುರುವಾದ ಈ ವೇದಿಕೆ 25000ಕ್ಕೂ ಹೆಚ್ಚು ಮಂದಿಗೆ ಊಟ, ಕಿಟ್, ವಾಹನ, ಇತರೆ ಆರೋಗ್ಯ ಸೇವೆ ನೀಡಿತ್ತು. ಈ ವರ್ಷದ ಲಾಕ್ ಡೌನ್ ವೇಳೆಯೂ ಕಳೆದ 40 ದಿನದಿಂದ ಈ ವೇದಿಕೆ ಸೇವೆ ನೀಡುತ್ತಿದೆ. ತೀರ್ಥಹಳ್ಳಿ ಜೆಸಿ ಆಸ್ಪತ್ರೆ ಎದುರು ಕ್ಯಾಂಟೀನ್ ಅಲ್ಲಿ ಉಚಿತ ಊಟ ನೀಡಲಾಗುತ್ತಿದೆ. ತೀರ್ಥಹಳ್ಳಿಯ ಜನಸ್ನೇಹಿ ನಾಯಕ ರಾಘವೇಂದ್ರ ಸೊಪ್ಪುಗುಡ್ಡೆ ಮತ್ತು ಸಂದೇಶ ಜವಳಿ, ರಾಘವೇಂದ್ರ ಬಾಳೆಬೈಲು ಸೇರಿದಂತೆ ಹಲವರು ನೇತೃತ್ವದಲ್ಲಿ ಈ ಸೇವೆ ನಡೆಯುತ್ತಿದೆ. ರೋಟರಿ, ಲಯನ್ಸ್, ಜೆಸಿ ಸೇರಿದಂತೆ ಹಲವಾರು ಸಂಘಟನೆ, ಸಂಸ್ಥೆಗಳು, ಉದ್ಯಮಿಗಳು, ದಾನಿಗಳು ಸಹಕಾರ ಮಾಡಿದ್ದಾರೆ. ಜಾತಿ, ಧರ್ಮ, ಪಕ್ಷಬೇಧ ಮರೆತು ಎಲ್ಲಾ ಸೇವಕರು ಸೇವೆ ಮಾಡುತ್ತಿದ್ದಾರೆ. ಸಮಾನ ಮನಸ್ಕ ವೇದಿಕೆ ಮತ್ತು ಅನ್ನ ದಾಸೋಹದ ಬಗ್ಗೆ ತೀರ್ಥಹಳ್ಳಿಯ ಪ್ರಮುಖ ನಾಯಕರು, ರಂಗಾಯಣದ ನಿರ್ದೇಶಕರಾದ ಸಂದೇಶ್ ಜವಳಿ ಈ ವೀಡಿಯೋದಲ್ಲಿ ಮಾಹಿತಿ ನೀಡಿದ್ದಾರೆ. ಸೊಪ್ಪುಗುಡ್ಡೆ ರಾಘವೇಂದ್ರ ಸೇರಿದಂತೆ ಎಲ್ಲಾ ಸೇವಕರು ಜತೆಯಲ್ಲಿದ್ದಾರೆ.

Categories
ಬೆಂಗಳೂರು

ಉದ್ಯೋಗ ಆಕಾಂಕ್ಷಿಗಳಿಗೆ ಸಿಹಿಸುದ್ದಿ!

  • ಪೊಲೀಸ್ ಇಲಾಖೆಗೆ ನೇರ ನೇಮಕಾತಿ
  • 4000 ಹುದ್ದೆಗಳು ಖಾಲಿ

NAMMUR EXPRESS
ಶಿವಮೊಗ್ಗ: ಕರ್ನಾಟಕ ಪೋಲಿಸ್ ಇಲಾಖೆ ನಾಗರಿಕ ಪೊಲೀಸ್ ಕಾನ್ಸ್ಟೇಬಲ್ ನೇರ ನೇಮಕಾತಿಗೆ ಚಾಲನೆ ನೀಡಿದ್ದು, ಶಿವಮೊಗ್ಗ, ಮಂಗಳೂರು ನಗರ, ಉಡುಪಿ ಹಾಗೂ ದ.ಕ ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಒಟ್ಟು 4000 ಖಾಲಿ ಹುದ್ದೆಗಳಿದ್ದು ಅರ್ಹ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ವಿನಂತಿಸುತ್ತಿದ್ದೇವೆ. ಆಸಕ್ತ ಯುವಕರು/ಯುವತಿಯರು ಸರ್ಕಾರಿ ಉದ್ಯೋಗ ಪಡೆದುಕೊಂಡು ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಪೋಲಿಸ್ ಇಲಾಖೆಗೆ ಸೇರಿಕೊಳ್ಳಲು ಇದು ಒಳ್ಳೆಯ ಅವಕಾಶ.
ಅರ್ಹತೆ ಏನು?: ದ್ವಿತೀಯ ಪಿಯುಸಿ ಉತ್ತೀರ್ಣ.
ಪುರುಷರು 168cm ಎತ್ತರ ಇರಬೇಕು. ಮಹಿಳೆಯರು 157cm ಎತ್ತರ ಇರಬೇಕು
ವೇತನ: 23500-47650 ರೂ. ಅಂದರೆ ಸುಮಾರು 34000 ರೂ.ವೇತನ.
ಹುದ್ದೆಗಳು: 4000
ವಯೋಮಿತಿ: ಕನಿಷ್ಟ 19ವರ್ಷ
ಗರಿಷ್ಟ -ಸಾಮಾನ್ಯ ವರ್ಗ 25 ವರ್ಷ. SC /ST/ OBC
-27 ವರ್ಷ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 25.06.2021.
ಬೇಕಾಗುವ ದಾಖಲೆ
1.SSLC ಮಾರ್ಕ್ ಕಾರ್ಡ್
2.ಪಿಯುಸಿ ಮಾರ್ಕ್ ಕಾರ್ಡ್
3.ಆಧಾರ್ ಕಾರ್ಡ್
4.ಜಾತಿ ಮತ್ತು ಆದಾಯ ಪ್ರಮಾಣ ಪತ್ರ
5.ಕನ್ನಡ ಮಾಧ್ಯಮ
6.ಗ್ರಾಮೀಣ ವಿಧ್ಯಾಭ್ಯಾಸ ಪ್ರಮಾಣ ಪತ್ರ

  1. ನಾಲ್ಕುಪಾಸ್ಪೋರ್ಟ್ ಸೈಜ್ ಪೋಟೋ
    ಎಂಎನ್ಸಿ ಕಂಪನಿಯಲ್ಲಿ ಡೆವಲಪ್ಮೆಂಟ್ ಮ್ಯಾನೇಜರ್ ಹುದ್ದೆ
  • ಗೃಹಿಣಿಯರು, ನಿವೃತ್ತರು, ಬ್ಯಾಂಕಿಂಗ್ ಕ್ಷೇತ್ರದವರಿಗೂ ಅವಕಾಶ
    Required 10 Development Officers in MNC at Thirthahalli. Fixed salary 2,40,000 PA To 6,00,000 PA. Experience in Banking, insurance, marketing, financial product, NGO, Social service, Housewife can apply.
    Mobile: 9481372757.
Categories
ಮಲ್ನಾಡ್

ಶಿವಮೊಗ್ಗ, ಚಿಕ್ಕಮಗಳೂರು ಪಾಸಿಟಿವಿಟಿ ಎಷ್ಟು?

  • ಮತ್ತೆ ಮರೆಯುತ್ತಾರಾ ಜನ ಕರೋನಾ ನಿಯಮ
  • ಎಲ್ಲಿ ಎಷ್ಟೆಷ್ಟು ಕೇಸ್.. ಏನಾಗುತ್ತೆ ಬಂದ್..?
  • ಕಳ್ಳರು ಕತ್ತು ಹಿಸುಕಿದ್ದ ಅಜ್ಜಿ ನಿಧನ

NAMMUR EXPRESS
ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯಲ್ಲಿ 494 ಜನರಲ್ಲಿ ಕರೋನಾ ಸೋಂಕು ಪತ್ತೆಯಾಗಿದ್ದು 9 ಮಂದಿ ನಿಧನರಾಗಿದ್ದಾರೆ. ಜಿಲ್ಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 5905 ಆಗಿದೆ. ಶಿವಮೊಗ್ಗದಲ್ಲಿ ಶೇ.13ರಷ್ಟು ಪಾಸಿಟಿವಿಟಿ ದರ ಇದೆ. ಶಿವಮೊಗ್ಗ ಜಿಲ್ಲೆಯಲ್ಲಿ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ 888ಕ್ಕೇರಿದೆ‌. ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳಲ್ಲಿ 27 ಮಂದಿಗೆ ಸೋಂಕು ಧೃಡಪಟ್ಟಿದೆ ಎಂದು ಜಿಲ್ಲಾ ಹೆಲ್ತ್ ಬುಲೆಟಿನ್ ತಿಳಿಸಿದೆ.
ಯಾವ ತಾಲೂಕು ಎಷ್ಟು?!: ಶಿವಮೊಗ್ಗ 17, ಭದ್ರಾವತಿ 112, ಶಿಕಾರಿಪುರ 52, ತೀರ್ಥಹಳ್ಳಿ 37, ಸೊರಬ 30, ಹೊಸನಗರ 32, ಸಾಗರ 47, ಇತರೆ ಜಿಲ್ಲೆ 14 ಕೇಸ್ ಇದೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ 339 ಮಂದಿಗೆ ಕರೋನಾ ಸೋಂಕು ತಗುಲಿದೆ.
ಚಿಕ್ಕಮಗಳೂರು 68, ಕಡೂರು 94, ತರೀಕೆರೆ 101, ಎನ್. ಆರ್. ಪುರ 12, ಮೂಡಿಗೆರೆ 32, ಕೊಪ್ಪ 15, ಶೃಂಗೇರಿ 17 ಪ್ರಕರಣಗಳಿವೆ. 669 ಮಂದಿ ಗುಣಮುಖರಾಗಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಪಾಸಿಟಿವಿಟಿ ದರ 20% ಇದ್ದು ಸಾವಿನ ಸಂಖ್ಯೆ ಕಡಿಮೆಯಾಗಿದೆ.
ಜಾಗೃತಿ ಮರೆತ ಜನ!: ಮಲೆನಾಡಲ್ಲಿ ಜನ ಕರೋನಾ ಕೇಕೆ ಹಾಕಿದರೂ ಕರೋನಾ ಜಾಗೃತಿ ಮರೆಯುತ್ತಿದ್ದಾರೆ. ದಯವಿಟ್ಟು ಮತ್ತೊಮ್ಮೆ ಸಂಕಷ್ಟಕ್ಕೆ ಒಳಗಾಗಬೇಡಿ. ಮಾಸ್ಕ್ ಧರಿಸಿ. ಸಾಮಾಜಿಕ ಅಂತರ ಕಾಪಾಡಿ.
ಕಳ್ಳರು ಕುತ್ತಿಗೆ ಹಿಸುಕಿದ್ದ ಅಜ್ಜಿ ನಿಧನ!: ತೀರ್ಥಹಳ್ಳಿ ತಾಲ್ಲೂಕಿನ ಕಟ್ಟೆಹಕ್ಕಲು ಸಾಲ್ಗಡಿ ಗಣಪತಿ ದೇವಸ್ಥಾನದ ಮುಂಭಾಗದಲ್ಲಿ ವಾಸವಾಗಿದ್ದ85 ವರ್ಷದ ವೃದ್ಧೆ ಭವಾನಿಯಮ್ಮ ಶಿವಮೊಗ್ಗ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಕಳ್ಳರು ಹಣಕ್ಕಾಗಿ ಉಸಿರುಗಟ್ಟಿಸಿದ್ದರಿಂದ ಅಜ್ಜಿಯನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಗುರುವಾರ ಬೆಳಗ್ಗಿನ ಜಾವ 5 ಗಂಟೆಗೆ ನಿಧನರಾಗಿದ್ದಾರೆ. ಪ್ರಕರಣದಲ್ಲಿ ಓರ್ವ ಆರೋಪಿಯನ್ನು ಈಗಾಗಲೇ ಬಂಧಿಸಿದ್ದು ಮತ್ತೋರ್ವ ಆರೋಪಿ ನಾಪತ್ತೆಯಾಗಿದ್ದಾನೆ. ಈ ಹಿಂದೆ ಕಳ್ಳರು ಉಡುಪಿಯಲ್ಲಿ ದೇವಸ್ಥಾನದ ಕಳ್ಳತನ ಪ್ರಕರಣದಲ್ಲಿ ಸಿಕ್ಕಿ ಬಿದ್ದು ಜಾಮೀನಿನ ಮೇಲೆ ಹೊರಬಂದಿದ್ದರು ಎನ್ನಲಾಗಿದೆ.

Categories
ಮಲ್ನಾಡ್

ಕರವೇ ಸದಸ್ಯೆ ಜೀವ ತೆಗೆದ ಇಲಿ..!

  • ತೀರ್ಥಹಳ್ಳಿ ಪಟ್ಟಣದಲ್ಲಿ ನಡೆದ ದುರಂತದ ಸಾವು
  • ಮೈಮೇಲೆ ಬಿದ್ದ ಇಲಿ: ಹೆದರಿ ಹೃದಯಾಘಾತ
  • ಸಮಾಜ ಸೇವಕಿಯಾಗಿ ಕೆಲಸ ಮಾಡುತ್ತಿದ್ದ ಶಕುಂತಲಾ

NAMMUR EXPRESS
ತೀರ್ಥಹಳ್ಳಿ: ಮನೆಯ ಮಹಡಿಯ ಮೇಲಿಂದ ಇಲಿಯೊಂದು ಮೈಮೇಲೆ ಬಿದ್ದು ಕಚ್ಚಿದ ಕಾರಣ ಗಾಬರಿಗೊಂಡ ಪರಿಣಾಮ ಮಹಿಳೆಯೊಬ್ಬಳು ಹೃದಯಾಘಾತದಿಂದ ಮೃತಪಟ್ಟ ಘಟನೆ ತೀರ್ಥಹಳ್ಳಿ ಪಟ್ಟಣದಲ್ಲಿ ಬುಧವಾರ ನಡೆದಿದೆ.
ತೀರ್ಥಹಳ್ಳಿ ಪಟ್ಟಣ ಪಂಚಾಯತಿ ವ್ಯಾಪ್ತಿಯ ಕುರುವಳ್ಳಿ ಬೊಮ್ಮಸಯ್ಯನ ಅಗ್ರಹಾರದ ಆಶ್ರಯ ಬಡಾವಣೆಯಲ್ಲಿ ವಾಸವಾಗಿದ್ದ ಶಕುಂತಲಾ( 52) ಎಂಬಾಕೆ ಬೆಳಿಗ್ಗೆ ಮನೆಯಲ್ಲಿ ಇದ್ದಾಗ ಇಲಿಯೊಂದು ಮಹಡಿಯಿಂದ ಮೈ ಮೇಲೆ ಬಿದ್ದು ಕಚ್ಚಿದೆ. ಇದರಿಂದ ಗಾಬರಿಗೊಂಡು ಕುಸಿದು ಬಿದ್ದಿದ್ದಾರೆ. ತಕ್ಷಣ ಆಸ್ಪತ್ರೆಗೆ ಕರೆತಂದರೂ ದಾರಿ ಮಧ್ಯೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ತೀರ್ಥಹಳ್ಳಿ ಕರ್ನಾಟಕ ರಕ್ಷಣಾ ವೇದಿಕೆ ಮಹಿಳಾ ಘಟಕದ ಸದಸ್ಯೆಯಾಗಿದ್ದು, ತಮ್ಮ ಮೃದು ಸ್ವಭಾವದಿಂದ ಜನಮನ್ನಣೆ ಗಳಿಸಿದ್ದರು. ಸಾಮಾಜಿಕ ಕಳಕಳಿಯ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. ಇವರು ಕಾರು ಚಾಲಕರಾಗಿರುವ ಚಂದ್ರಕಾಂತ್‌ರವರ ಸಹೋದರಿಯಾಗಿದ್ದು ಓರ್ವ ಪುತ್ರ ಹಾಗೂ ಸಹೋದರ ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಕರವೇ ನಾಯಕರ ಕಂಬನಿ: ಕರವೇ ಜಿಲ್ಲಾಧ್ಯಕ್ಷರಾದ ಪಟೇಲ್ ವೆಂಕಟೇಶ್ ಹೆಗ್ಡೆ, ತಾಲೂಕು ಅಧ್ಯಕ್ಷ ಸುರೇಂದ್ರ ಯಡೂರು ಸೇರಿದಂತೆ ಅನೇಕರು ಸಂತಾಪ ವ್ಯಕ್ತಪಡಿಸಿದ್ದಾರೆ. ಎಲ್ಲಾ ಕರವೇ ಮುಖಂಡರು ಅಂತ್ಯ ಸಂಸ್ಕಾರದಲ್ಲಿ ಭಾಗಿಯಾಗಿ ಕಂಬನಿ ಮಿಡಿದಿದ್ದಾರೆ.

Categories
ಮಲ್ನಾಡ್

ಚಿಲ್ಲರೆ ದುಡ್ಡಿಗಾಗಿ ವೃದ್ದೆ ಕತ್ತು ಹಿಸುಕಿದ ಕಳ್ಳರು!

  • ಶಿವಮೊಗ್ಗದಿಂದ ಕಳ್ಳತನಕ್ಕೆ ತೀರ್ಥಹಳ್ಳಿಗೆ ಬಂದರು
  • ವೃದ್ದೆ ಸ್ಥಿತಿ ಗಂಭೀರ: ಓರ್ವನನ್ನು ಹಿಡಿದ ಸ್ಥಳೀಯರು
  • ತೀರ್ಥಹಳ್ಳಿ ತಾಲೂಕಿನ ಕಟ್ಟೆಹಕ್ಕಲು ಬಳಿ ಘಟನೆ
  • ಮದ್ಯ ಮಾರಾಟ ಮಾಡುತ್ತಿದ್ದಳೇ ಅಜ್ಜಿ..?

NAMMUR EXPRESS
ತೀರ್ಥಹಳ್ಳಿ:
ಅಂಚೆ ಕಚೇರಿಯಿಂದ ಬರುತ್ತಿದ್ದ ವೇಳೆ ಮನೆಯ ಬಳಿ ಬೈಕಲ್ಲಿ ಬಂದ ಕಳ್ಳರಿಬ್ಬರು ಆಕೆಯ ಕತ್ತು ಹಿಸುಕಿ ಹಣ ಕಸಿದು ಪರಾರಿಯಾಗುವ ಯತ್ನ ನಡೆಸಿದ ಘಟನೆ ತೀರ್ಥಹಳ್ಳಿ ತಾಲೂಕು ಕಟ್ಟೆಹಕ್ಕಲು ಬಳಿ ಗಣಪತಿಕಟ್ಟೆ ಎಂಬಲ್ಲಿ ಬುಧವಾರ ನಡೆದಿದೆ. ಘಟನೆಯಲ್ಲಿ ಅಜ್ಜಿ ಗಂಭೀರ ಗಾಯಗೊಂಡಿದ್ದು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿದ್ದಾಳೆ.


ಕಟ್ಟೆಹಕ್ಲು ಗಣಪತಿ ದೇವಸ್ಥಾನದ ಎದುರು ವಾಸವಾಗಿರುವ ವೃದ್ಧೆ ಭವಾನಿಯಮ್ಮ(85) ಅಂಚೆ ಕಛೇರಿಗೆ ಹೋಗಿ ಬರುತ್ತಿದ್ದನ್ನು ಗಮನಿಸಿದ ಇಬ್ಬರು ಕಳ್ಳರು ಬೈಕ್ನಲ್ಲಿ ಇಬ್ಬರು ಅಡ್ಡಹಾಕಿ ಕುತ್ತಿಗೆ ಹಿಸುಕಿದ್ದಾರೆ. ಈ ವೇಳೆ ಸ್ಥಳೀಯರು ನೋಡಿ ಕೂಗಿಕೊಂಡಾಗ ಓರ್ವ ಬೈಕಲ್ಲಿ ಪರಾರಿಯಾಗಿದ್ದಾನೆ. ಇನ್ನೋರ್ವ ಓಡಿ ಹೋಗಿದ್ದು, ಹೆರಂಬಾಪುರ ಬಳಿ ಸ್ಥಳೀಯರು ಸೇರಿ ಚೇಸ್ ಮಾಡಿ ಹಿಡಿದಿದ್ದಾರೆ. ಸಿಕ್ಕಿಬಿದ್ದ ಕಳ್ಳ ನಿತಿನ್ (36) ಶಿವಮೊಗ್ಗದ ಗೋಪಾಳದವನು. ಇನ್ನೊರ್ವ ಎಲ್ಲಿಯವನು ಎಂದು ತನಿಖೆ ನಡೆಯುತ್ತಿದೆ. ಇವರು ಮಂಗಳವಾರವೇ ತೀರ್ಥಹಳ್ಳಿಗೆ ಬಂದಿದ್ದರು. ಮೃಗವಧೆ ಬಳಿ ರಾತ್ರಿ ಮಲಗಿದ್ದರು ಎನ್ನಲಾಗಿದೆ.
ಘಟನೆಯಿಂದ ಗಂಭೀರ ಗಾಯಗೊಂಡ ಭವಾನಿ ಅವರನ್ನು ತೀರ್ಥಹಳ್ಳಿ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗಕ್ಕೆ ಕಳಿಸಲಾಗಿದೆ. ಆಕೆಯ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ.


ಈ ಕಳ್ಳರು ಕಟ್ಟಹಕ್ಕಲಿಗೆ ಮದ್ಯ ಸೇವಿಸಲು ಬಂದಿದ್ದರು ಎನ್ನಲಾಗಿದೆ. ಇನ್ನೊಂದು ಮಾಹಿತಿ ಪ್ರಕಾರ ವೃದ್ದೆ ಮದ್ಯ ಮಾರಾಟ ಮಾಡುತ್ತಿದ್ದಳು ಎಂಬ ಚರ್ಚೆ ಕೂಡ ನಡೆಯುತ್ತಿದೆ.


ಎಚ್ಚರ ಎಚ್ಚರ!: ಒಂಟಿ ಮನೆಗಳು, ಒಂಟಿ ಜನರ ಮೇಲೆ ಕಳ್ಳರು ಕಣ್ಣಿಡಲು ಶುರು ಮಾಡಿದ್ದಾರೆ. ಎಲ್ಲರೂ ಎಚ್ಚರ ವಹಿಸಬೇಕಿದೆ. ಪೊಲೀಸ್ ಇಲಾಖೆ ಕೂಡ ಗಮನಿಸಬೇಕಿದೆ. ಕರೋನಾ ಹಿನ್ನಲೆ ಕೆಲಸ ಇಲ್ಲ. ನಿರುದ್ಯೋಗ ಹೆಚ್ಚಿದೆ. ಇನ್ನು ಕಳ್ಳತನ, ದರೋಡೆ ಹೆಚ್ಚುವ ಸಾಧ್ಯತೆ ಇದೆ. ತಕ್ಷಣ ಸರಕಾರ ನಿರುದ್ಯೋಗ ಸಮಸ್ಯೆಯನ್ನು ನಿವಾರಣೆ ಮಾಡಬೇಕಿದೆ.

ರಾಜ್ಯದ ಎಲ್ಲಾ ಸುದ್ದಿ, ಜಾಹೀರಾತಿಗಾಗಿ “NAMMUR EXPRESS” ಫೇಸ್ಬುಕ್ ಮತ್ತು ಯೂಟ್ಯೂಬ್ ಚಾನೆಲ್ ಲೈಕ್ ಮಾಡಿ, ಸಬ್ಸ್ಕ್ರೈಬ್ ಆಗಿ. ವಾಟ್ಸಾಪ್ನಲ್ಲಿ ಸುದ್ದಿ ಪಡೆಯಲು 9481949101ಗೆ ನಿಮ್ಮ ಹೆಸರು, ಊರು, ತಾಲೂಕು ವಾಟ್ಸಾಪ್ ಮಾಡಿರಿ. ನಿಮ್ಮ ಎಲ್ಲಾ ಸ್ನೇಹಿತರು ಹಾಗೂ ಗ್ರೂಪ್ಗಳಿಗೆ ಶೇರ್ ಮಾಡಿರಿ. ಧನ್ಯವಾದಗಳು..!.