Categories
ಕರಾವಳಿ

ಯುವ ಮುಖಂಡನ ಹತ್ಯೆ: ನಿಷೇಧಾಜ್ಞೆ!

  • ಮೂರು ತಾಲೂಕಲ್ಲಿ ಬಂದ್ ಘೋಷಿಸಿದ ಸಂಘಟನೆಗಳು
  • ಹಿಂದೂ ನಾಯಕನ ಸಾವಿನ ತನಿಖೆ ಶುರು
  • ಪೊಲೀಸ್ ತಂಡ ರಚನೆ: ಆರಗ ಜ್ಞಾನೇಂದ್ರ

NAMMUR EXPRESS NEWS
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನ ಬೆಳ್ಳಾರೆಯಲ್ಲಿ ಪ್ರವೀಣ್ ಎಂಬ ಬಿಜೆಪಿ ಯುವ ಮೋರ್ಚಾ ಮುಖಂಡನ ಹತ್ಯೆ ನಡೆದಿದೆ. ದಕ್ಷಿಣ ಕನ್ನಡ ಜಿಲ್ಲಾ ಯುವ ಮೋರ್ಚಾ ಕಾರ್ಯಕಾರಿಣಿ ಸದಸ್ಯ ಪ್ರವೀಣ್ ನೆಟ್ಟಾರು (32) ಕೊಲೆಯಾದ ದುರ್ದೈವಿ. ಪ್ರವೀಣ್ ನೆಟ್ಟಾರು ಬೆಳ್ಳಾರೆಯಲ್ಲಿ ಕೋಳಿ ಅಂಗಡಿ ನಡೆಸುತ್ತಿದ್ದರು. ಬೆಳ್ಳಾರೆ ಪೇಟೆಯಲ್ಲಿ ತನ್ನ ಅಂಗಡಿಯನ್ನು ಮುಚ್ಚುತ್ತಿದ್ದಾಗ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ದಾಳಿ ಮಾಡಿದ್ದಾರೆ.
ದಾಳಿಯಿಂದ ಗಂಭೀರ ಗಾಯಗೊಂಡಿದ್ದ ಪ್ರವೀಣ್ ನೆಟ್ಟಾರು ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಪ್ರವೀಣ್ ನೆಟ್ಟಾರು ಸಾವನ್ನಪ್ಪಿದ್ದಾರೆ.ದುಷ್ಕರ್ಮಿಗಳು ಹತ್ಯೆಗೈದು ಪರಾರಿಯಾಗಿದ್ದಾರೆ. ಬೆಳ್ಳಾರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಆರೋಪಿಗಳಿಗಾಗಿ ಬಲೆ ಬೀಸಿರುವ ಪೊಲೀಸರು ಕೇರಳ ಗಡಿ ಪ್ರದೇಶ ಹಾಗೂ ಪುತ್ತೂರಿನ ಸುತ್ತಮುತ್ತ ನಾಕಾಬಂದಿ ಹಾಕಿದ್ದಾರೆ. ನಾಕಾಬಂದಿ ಹಾಕಿ ಕೊಲೆ ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಪುತ್ತೂರಿನಾದ್ಯಂತ 144 ಸೆಕ್ಷನ್ ಜಾರಿ:
ಪುತ್ತೂರಿನಲ್ಲಿ ಪ್ರವೀಣ್ ಹತ್ಯೆ ಹಿನ್ನಲೆ ಪರಿಸ್ಥಿತಿ ಬಿಗಡಾಯಿಸಿದ್ದು, ಪುತ್ತೂರಿನಾದ್ಯಂತ 144 ಸೆಕ್ಷನ್ ಜಾರಿ ಮಾಡುವಂತೆ ಡಿಜಿ ಐಜಿಪಿ ಪ್ರವೀಣ್ ಸೂದ್ ರಿಂದ ದಕ್ಷಿಣ ಕನ್ನಡ ಜಿಲ್ಲಾ ಎಸ್ ಪಿ ಗೆ ಸೂಚನೆ ನೀಡಲಾಗಿದೆ. ಯಾವುದೇ ಕಾರಣಕ್ಕೂ ಕಾನೂನು ಸಮಸ್ಯೆ ಆಗದಂತೆ ನೋಡಿಕೊಳ್ಳಲು ಹೇಳಲಾಗಿದೆ. ಹೆಚ್ಚುವರಿ ಪೊಲೀಸ್ ಸಿಬ್ಬಂದಿ ಬೇಕಾದರೆ ಪಕ್ಕದ ಜಿಲ್ಲೆ ಅಥವಾ ಮಂಗಳೂರು ನಗರದಿಂದ ನಿಯೋಜನೆ ಮಾಡುವಂತೆ ಡಿಜಿ ಪ್ರವೀಣ್ ಸೂದ್ ಸೂಚನೆ ನೀಡಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಬೆಳ್ಳಾರೆಯಲ್ಲಿ ಮಸೂದ್ ಎಂಬ ಯುವಕನ ಕೊಲೆಯಾಗಿತ್ತು. ಕ್ಷುಲ್ಲಕ ಕಾರಣಕ್ಕೆ ಕಾಸರಗೋಡು ನಿವಾಸಿ ಮಸೂದ್(18) ಮೇಲೆ ಅಭಿಲಾಶ್, ಸುನೀಲ್, ಸುಧೀರ್, ಶಿವ, ರಂಜಿತ್, ಸದಾಶಿವ, ಜಿಮ್ ರಂಜಿತ್, ಭಾಸ್ಕರ ಎಂಬವರು ಹಲ್ಲೆ ನಡೆಸಿದ್ದರು. ಜು.19 ರಂದು ಸುಧೀರ್ ಎಂಬಾತ ಮಸೂದ್ ಕೈ ತಾಗಿದ ಕಾರಣಕ್ಕೆ ಹಲ್ಲೆ ನಡೆಸಿದ್ದ. ಆ ಬಳಿಕ ಸ್ಥಳೀಯ ಹನೀಫ್ ಎಂಬವನ ಮೂಲಕ ಮಸೂದ್‌ನನ್ನು ರಾಜಿ ಮಾತುಕತೆಗೆ ಕರೆದಿದ್ದಾರೆ. ಹೀಗಾಗಿ ಮಸೂದ್ ಸೂಚಿಸಿದ ಸ್ಥಳಕ್ಕೆ ಬಂದಿದ್ದ ವೇಳೆ ಬಾಟಲಿಯಿಂದ ತಲೆಗೆ ಹಲ್ಲೆ ನಡೆಸಿದ್ದು, ಚಿಕಿತ್ಸೆ ಫಲಿಸದೇ ಮಸೂದ್ ಸಾವನ್ನಪ್ಪಿದ್ದ. ಹೀಗಾಗಿ ಮಸೂದ್ ಹತ್ಯೆಗೆ ಪ್ರತೀಕಾರವಾಗಿ ಬಿಜೆಪಿ ಮುಖಂಡನ ಕೊಲೆ ಶಂಕೆ ವ್ಯಕ್ತವಾಗಿದೆ.
ಪ್ರವೀಣ್ ತಲೆಗೆ ತಲವಾರಿನಿಂದ ಮೂರು ಬಲವಾದ ಏಟು ಬಿದ್ದಿದೆ ಎನ್ನಲಾಗಿದೆ. ಹಂತಕರು ಆತನ ಬೆನ್ನಿಗೆ ಚೂರಿಯಿಂದ ಒಂದು ಬಾರಿ ಇರಿದಿದ್ದಾರೆ. ಸದ್ಯ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಪೋಸ್ಟ್ ಮಾರ್ಟಂ ಮುಕ್ತಾಯವಾಗಿದ್ದು, ಬುಧವಾರ ಅಂತ್ಯಕ್ರಿಯೆ ನಡೆಯಲಿದೆ.
ಪ್ರವೀಣ್ ಅಂತಿಮ ಯಾತ್ರೆ ನಡೆಸಲು ಬಿಜೆಪಿ ಕಾರ್ಯಕರ್ತರು, ಹಿಂದೂ ಪರ ಸಂಘಟನೆ ಕಾರ್ಯಕರ್ತರು ತಯಾರಿ ನಡೆಸಿದ್ದಾರೆ. ಸರಕಾರಿ ಆಸ್ಪತ್ರೆಯಿಂದ ದರ್ಬೆ ಸರ್ಕಲ್ ಮೂಲಕ ಬೆಳ್ಳಾರೆಗೆ ಮೃತದೇಹ ತರಲು ನಿರ್ಧರಿಸಲಾಗಿದೆ. ಪಕ್ಷದ ಕಾರ್ಯಕರ್ತನ ಅಂತಿಮ ಯಾತ್ರೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಏಳೂ ಶಾಸಕರು ಹಾಗೂ ಸಚಿವರು ಭಾಗಿಯಾಗಬೇಕೆಂದು ಹಿಂದೂ ಕಾರ್ಯಕರ್ತರು ಪಟ್ಟು ಹಿಡಿದಿದ್ದಾರೆ.
ಹಿಂದೂ ಪರ ಸಂಘಟನೆಗಳು ಸ್ವಯಂ ಪ್ರೇರಿತ ಬಂದ್ ಗೆ ಕರೆ ನೀಡಿದ್ದು ಇದೀಗ ಮುಂಜಾನೆ ಬಸ್ ಮೇಲೆ ಕಲ್ಲು ತೂರಾಟ ನಡೆದಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ,ಸುಳ್ಯ ,ಕಡಬ ಉಪ್ಪಿನಂಗಡಿ , ಬೆಳ್ತಂಗಡಿ ನೆಲ್ಯಾಡಿ, ಈ ಭಾಗದಲ್ಲಿ ಸ್ವಯಂ ಬಂದ್ಗೆ ವಿಶ್ವ ಹಿಂದೂ ಪರಿಷದ್ ಬಜರಂಗದಳ , ಜಾಗರಣ ವೇದಿಕೆ ವತಿಯಿಂದ ಜಂಟಿ ಕರೆ ನೀಡಲಾಗಿದೆ

ಪೊಲೀಸ್ ತಂಡ ರಚನೆ: ಶೀಘ್ರ ದುಷ್ಕರ್ಮಿಗಳ ಬಂಧನ

ಸುಳ್ಯದ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಅವರನ್ನು ದುಷ್ಕರ್ಮಿಗಳು ಬರ್ಬರ ಹತ್ಯೆ ಮಾಡಿರುವುದು ಅತ್ಯಂತ ಖಂಡನೀಯ. ಇಂತಹ ಅಮಾನವೀಯ ಕೃತ್ಯ ಎಸಗಿರುವ ದುಷ್ಕರ್ಮಿಗಳನ್ನು ಶೀಘ್ರವಾಗಿ ಬಂಧಿಸಲಾಗುವುದು, ಮೃತ ಪ್ರವೀಣ ಆತ್ಮಕ್ಕೆ ಶಾಂತಿ ಸಿಗಲಿ, ದೇವರು ಅವರ ಕುಟುಂಬಕ್ಕೆ ನೋವು ಭರಿಸುವ ಶಕ್ತಿ ನೀಡಲಿ ಓಂ ಶಾಂತಿಃ
ಹಂತಕರನ್ನು ಪತ್ತೆ ಹಚ್ಚಲು ಈಗಾಗಲೇ ಪೊಲೀಸ್ ತಂಡ ಕಾರ್ಯಚರಣೆ ಕೈಗೊಂಡಿದೆ. ಈ ಸಂದರ್ಭದಲ್ಲಿ, ಸಾರ್ವಜನಿಕರು ಶಾಂತಿಯಿಂದ ವರ್ತಿಸಿ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಪೊಲೀಸರಿಗೆ ಸಹಕರಿಸಬೇಕೆಂದು ವಿನಂತಿಸುತ್ತೇನೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
[9:47 PM, 7/27/2022] Shilpa S: ಕುರ್ಚಿ ಮಾತಿಗೆ ಕಾಂಗ್ರೆಸ್ ಪಕ್ಷದ ವರ್ಚಸ್ಸು ಡೌನ್!

  • ಗೆಲ್ಲುವ ಮೊದಲೇ ನಾಯಕರ ಗೊಂದಲದ ಮಾತು
  • ಬಿಜೆಪಿ ಸೇರಿ ಪ್ರತಿ ಪಕ್ಷದವರಿಗೆ ಪುಕ್ಕಟ್ಟೆ ಆಹಾರ
  • ಕಾಂಗ್ರೆಸ್ ಪಕ್ಷದಲ್ಲಿ ಸರಿ ಇಲ್ಲ: ಕಾರ್ಯಕರ್ತರ ಬೇಸರ

NAMMUR EXPRESS NEWS
ಬೆಂಗಳೂರು: ರಾಜ್ಯದಲ್ಲಿ ಚುನಾವಣೆ ಹತ್ತಿರ ಬರುತ್ತಿದೆ. ಒಂದು ಕಡೆ ಬಿಜೆಪಿ ಸಂಘಟನೆ ಹಳ್ಳಿ ಹಳ್ಳಿ, ಬೂತ್ ಮಟ್ಟದಲ್ಲಿ ಗಟ್ಟಿಯಾಗಿದೆ. ಆದರೆ ಕಾಂಗ್ರೆಸ್ ನಾಯಕರು ತಮ್ಮ ಕಾಲು ತಾವು ಎಳೆದುಕೊಳ್ಳುತ್ತಲೇ, ಬೇಡದ ಹೇಳಿಕೆ ನೀಡಿ ಪಕ್ಷದ ವರ್ಚಸ್ಸಿಗೆ ಡ್ಯಾಮೇಜ್ ಮಾಡುತ್ತಲೇ ಚುನಾವಣೆಗೆ ಎದುರಾಗುತ್ತಿದ್ದಾರೆ.
ಹೈಕಮಾಂಡ್ ಕೂಡ ಧೈರ್ಯವಾಗಿ ಏನೂ ಹೇಳದ ಪರಿಸ್ಥಿತಿಯಲ್ಲಿದೆ. ಇದು ಸಧ್ಯಕ್ಕೆ ಬಿಜೆಪಿಗೆ ಪ್ಲಸ್ ಆಗಲಿದೆ.
ನಾಯಕರ ಈ ಗೊಂದಲ ಕಾರ್ಯಕರ್ತರು, ಮುಖಂಡರಿಗೆ ಇರುಸು ಮುರುಸು ಆಗಲು ಕಾರಣವಾಗಿದೆ.

ಸಿಎಂ ಕುರ್ಚಿಗೆ ಹಲವರ ಟವೆಲ್

ಬಿಜೆಪಿ ಕಾಲೆಳೆದಿದ್ದು ಹೀಗೆ!: ಕಾಣದ ಸಿಎಂ ಕುರ್ಚಿಗೆ ಕಾಂಗ್ರೆಸ್ ನಾಯಕರ ಮನ ಹಂಬಲಿಸುತ್ತಿದೆ. ಉತ್ಸವ, ವ್ಯಕ್ತಿಯಾರಾಧನೆ, ನಕಲಿ ಗಾಂಧಿ ಕುಟುಂಬದ ಋಣ ಸಂದಾಯದ ಮುಖೇನ ಸಿಎಂ ಕುರ್ಚಿಗೆ ಟವೆಲ್ ಹಾಕಿ ಕಾಯ್ದಿರಿಸುವ ಪ್ರಯತ್ನದಲ್ಲಿದ್ದಾರೆ ‘ ಎಂದು ಬಿಜೆಪಿ ವ್ಯಂಗ್ಯವಾಡಿದೆ. ಈ ಕುರಿತು ಟ್ವಿಟ್ ಮಾಡಿರುವ ಬಿಜೆಪಿ, ನಾಲ್ಕು ಕಾಲಿನ ಸಿಎಂ ಕುರ್ಚಿಗೆ ಕಾಂಗ್ರೆಸ್ ಪಕ್ಷದ ಅಷ್ಟ ದಿಕ್ಕುಗಳಿಂದ ದಾಳಿಯಾಗುತ್ತಿದೆ ಎಂದು ಲೇವಡಿ ಮಾಡಿದೆ.
‘ಖಾಲಿ ಇರದ ಸಿಎಂ ಕುರ್ಚಿಗಾಗಿ ಕಾಂಗ್ರೆಸ್ ನಾಯಕರು ಕದನ ನಡೆಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ಸಭೆ ಸಮಾರಂಭಗಳ ಕುರ್ಚಿಗಳಷ್ಟೆ ಖಾಲಿ ಬಿದ್ದಿವೆ. ಕಾಂಗ್ರೆಸ್ಸಿಗರೇ, ನಿಮ್ಮೊಳಗೆ ಖಾಲಿ ಕುರ್ಚಿಗಳನ್ನು ಮೊದಲು ಭರ್ತಿ ಮಾಡಿಕೊಳ್ಳಿ’ ಎಂದು ಬಿಜೆಪಿ ಟ್ವಿಟಿಸಿದೆ.
ಕಾಂಗ್ರೆಸ್ ಪಕ್ಷದಲ್ಲಿ ಈಗ ಕುರ್ಚಿ ಕಲಹ ಪರ್ವ ಆರಂಭಗೊಂಡಿದೆ. ಒಂದೆಡೆ ಯುವ ಕಾಂಗ್ರೆಸ್ ಕಾರ್ಯಕರ್ತರು, ಚಿಕ್ಕಮಗಳೂರು ಚಿತ್ರದುರ್ಗದಲ್ಲಿ ಕುರ್ಚಿ ಹಿಡಿದು ಮಾರಾಮಾರಿ ನಡೆಸುತ್ತಿದ್ದಾರೆ. ಮತ್ತೊಂದೆಡೆ, ಹಿರಿಯ ಕಾಂಗ್ರೆಸ್ ನಾಯಕರು, ಎಲ್ಲೆಂದರಲ್ಲಿ, ಮರಿಚೀಕೆ ಸಿಎಂ ಕುರ್ಚಿಗಾಗಿ ಕಾದಾಡುತ್ತಿದ್ದಾರೆ ಬಿಜೆಪಿ ಕುಟುಕಿದೆ.

Categories
ರಾಜಕೀಯ

ಜಮೀರ್ ಅಹಮದ್ ವಿರುದ್ಧ ಒಕ್ಕಲಿಗರ ಸಿಟ್ಟು

  • ಒಕ್ಕಲಿಗರ ಕ್ಷಮೆ ಕೇಳುವಂತೆ ತೀರ್ಥಹಳ್ಳಿ ತಾಲ್ಲೂಕು ಒಕ್ಕಲಿಗರ ಸಂಘದ ಅಗ್ರಹ

NAMMUR EXPRESS NEWS
ತೀರ್ಥಹಳ್ಳಿ: ಶಾಸಕರಾದ ಜಮೀರ್ ಅಹಮದ್ ರವರು ಅನವಶ್ಯಕವಾಗಿ ಒಕ್ಕಲಿಗ ಜನಾಂಗದವರನ್ನು ರಾಜಕೀಯ ವಿಚಾರವಾಗಿ ಎಳೆದು ತರುತ್ತಿರುವುದು ವಿಷಾಧನೀಯ ಸಂಗತಿ, ನಮ್ಮ ಒಕ್ಕಲಿಗ ಸಮಾಜ ಹಿಂದಿನಿಂದಲೂ ಸಹ ಒಕ್ಕಲುತನವನ್ನು ಮಾಡಿ ಇಡೀ ದೇಶಕ್ಕೆ ಅನ್ನ ನೀಡುತ್ತಾ ದೇಶದಲ್ಲಿ ಕೃಷಿ ಪ್ರಧಾನ ಕಸುಬನ್ನಾಗಿ ಮಾಡಿಕೊಂಡು ದೇಶದ ಕೃಷಿ ಪ್ರಗತಿಗೆ ಅನನ್ಯ ನೆರವು ನೀಡಿದೆ. ಅಲ್ಲದೆ ಸಮಾಜದ ಹಲವು ಪ್ರಮುಖರು ಆಡಳಿತಾತ್ಮಕವಾಗಿ, ರಾಜಕೀಯವಾಗಿ, ಆರ್ಥಿಕ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಅನನ್ಯ ಸಾಧನೆ ಮಾಡಿ ನಾಡಿಗೆ ಕೊಡುಗೆಯನ್ನು ನೀಡಿದ್ದಾರೆ. ನಾಡಪ್ರಭು ಕೆಂಪೇಗೌಡರು ಬೆಂಗಳೂರು ನಗರ ನಿರ್ಮಾತೃಗಳಾಗಿ ಇಂದಿಗೂ ಸಹ ಮಾದರಿ ನಗರವನ್ನಾಗಿ ಇಡೀ ಪ್ರಪಂಚದ ಭೂಪಟದಲ್ಲಿಯೇ ಬೆಂಗಳೂರು ನಗರ ಗುರುತಿಸುವಿಕೆಗೆ ಕಾರಣಕರ್ತರಾಗಿದ್ದಾರೆ. ಇಂತಹ ಒಕ್ಕಲಿಗ ಸಮುದಾಯದ ಬಗ್ಗೆ ಮಾನ್ಯ ಶಾಸಕರಾದ ಜಮೀ‌ರ್ ಆಹಮದ್ ರವರು ಕೇವಲವಾಗಿ ಮಾತನಾಡುವುದು ಅವರಿಗೆ ಶೋಭೆಯಲ್ಲ. ಇದನ್ನು ಸಮಾಜ ಖಂಡಿಸುತ್ತಾ ಮುಂದೆ ಸಮುದಾಯದ ವಿರುದ್ಧ ಇಂತಹ ಹೇಳಿಕೆ ನೀಡಿದ್ದು, ಸಮುದಾಯದ ವತಿಯಿಂದ ತಮ್ಮ ವಿರುದ್ಧ ಪ್ರತಿಭಟನೆ ಮಾಡುವುದು ಅನಿವಾರ್ಯವೆಂದು ತೀರ್ಥಹಳ್ಳಿ ಒಕ್ಕಲಗರ ಸಂಘ ಹಾಗೂ ಸಮುದಾಯದ ವತಿಯಿಂದ ತಿಳಿಯಬಯಸುತ್ತೇವೆ. ಇದುವರೆಗೂ ಸಹ ನಮ್ಮ ಒಕ್ಕಲಿಗ ಸಮಾಜ ಜನಾಂಗ ಬೇಧವಿಲ್ಲದೇ, ಧರ್ಮ ಬೇಧವಿಲ್ಲದೆ ಸರ್ವರೊಂದಿಗೆ ಸಹಬಾಳ್ವೆ ನಡೆಸುತ್ತಿರುವುದನ್ನು ಅಮೀರ್ ಅಹಮದ್‌ರವರು ಗಮನಿಸದೇ ಇರುವುದು ಅವರ ತಪ್ಪುಕಲ್ಪನೆಯ ಪರಮಾವಧಿ ಎಂದು ತೀರ್ಥಹಳ್ಳಿ ತಾಲ್ಲೂಕು ಒಕ್ಕಲಿಗರ ಸಂಘ ಭಾವಿಸುತ್ತದೆ ಹಾಗೂ ತಮ್ಮ ಹೇಳಿಕೆ ಬಗ್ಗೆ ಸಮಾಜದ ಕ್ಷಮೆ ಕೇಳಬೇಕೆಂದು ಪತ್ರಿಕಾ ಹೇಳಿಕೆಯ ಮೂಲಕ ಒತ್ತಾಯಿಸುತ್ತಿದೆ.

Categories
ರಾಜಕೀಯ

ವಾಹನಗಳನ್ನು ತಡೆದು ದಾಖಲೆ ಪರಿಶೀಲಿಸದಂತೆ ಡಿಜಿಪಿ ಆದೇಶ

  • ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಅನ್ವಯ

NAMMUR EXPRESS NEWS
ಬೆಂಗಳೂರು : ಚಾಲಕರ ದಾಖಲೆಗಳ ಪರಿಶೀಲನೆಗಾಗಿ ವಾಹನಗಳನ್ನು ಪದೇ ಪದೇ ತಡೆದು ನಿಲ್ಲಿಸದಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಮತ್ತೊಮ್ಮೆ ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ, ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು ಈ ಹಿಂದಿನ ಆದೇಶವನ್ನು ಪಾಲನೆ ಮಾಡದೆ ವಾಹನ ಚಾಲಕರಿಗೆ ಅನಗತ್ಯವಾಗಿ ತೊಂದರೆ ಕೊಟ್ಟರೆ ಅಂಥವರ ಮೇಲೆ ಶಿಸ್ತು ಕ್ರಮ ತೆಗೆದುಕೊಳ್ಳಲಾಗುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ರಾಜ್ಯದ ಪ್ರತಿಯೊಂದು ಜಿಲ್ಲೆಗಳಿಗೆ ಈ ಆದೇಶ ಅನ್ವಯವಾಗಲಿದೆ, ಇದರನ್ವಯ ಮದ್ಯಪಾನ ಸೇವಿಸಿ ಯಾರಾದರೂ ವಾಹನ ಚಾಲನೆ ಮಾಡುವುದು ಕಂಡು ಬಂದರೆ ಅಂತಹ ವಾಹನಗಳನ್ನು ತಡೆದು ತಪಾಸಣೆ ನಡೆಸಬೇಕು, ಉಳಿದಂತೆ ದಾಖಲೆಗಳ ಪರಿಶೀಲನೆ ನೆಪದಲ್ಲಿ ಸಾರ್ವಜನಿಕರಿಗೆ ಪದೇ ಪದೇ ತೊಂದರೆ ಕೊಟ್ಟರೆ ಆದೇಶ ಉಲ್ಲಂಘಿಸಿದವರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ಕೊಟ್ಟಿದ್ದಾರೆ.
ಸಂಚಾರ ನಿಯಮ ಉಲ್ಲಂಘನೆ ಮಾಡದಿದ್ದರೂ ಸಂಚಾರಿ ಪೊಲೀಸ್ ಸುಖ ಸುಮ್ಮನೆ ದಾಖಲೆ ಪರಿಶೀಲನೆ ನೆಪದಲ್ಲಿ ವಾಹನಗಳನ್ನು ನಿಲ್ಲಿಸಿ ತಪಾಸಣೆ ಮಾಡಲು ಮುಂದಾಗುತ್ತಿದ್ದರು ಎಂಬ ಆರೋಪವಿದೆ, ಕೆಲ ದಿನಗಳ ಹಿಂದೆ ಮಧ್ಯಪಾನ ಮಾಡಿ ವಾಹನ ಚಲಾಯಿಸುವವರು ಮತ್ತು ಸಂಚಾರ ನಿಯಮ ಉಲ್ಲಂಘನೆ ಮಾಡುವವರ ವಾಹನಗಳನ್ನು ಮಾತ್ರ ತಪಾಸಣೆ ಮಾಡಿ, ಸುಖ ಸುಮ್ಮನೆ ವಾಹನಗಳನ್ನು ರಸ್ತೆಯಲ್ಲಿ ನಿಲ್ಲಿಸಿ ವಾಹನ ತಪಾಸಣೆ ಮಾಡದಂತೆ ಸೂದ್ ಸೂಚಿಸಿದ್ದರು.

Categories
ಶಿಕ್ಷಣ

ಅಯ್ಯೋ…ಕಾಲ ಕೆಟ್ಟೋಯ್ತಪ್ಪೋ..!.

  • ಎಣ್ಣೆ ಹೊಡೆದು ಕಾಲೇಜಿಗೆ ಬಂದ ವಿದ್ಯಾರ್ಥಿಗಳು!
  • ಶಿವಮೊಗ್ಗದ ಪ್ರತಿಷ್ಠಿತ ಕಾಲೇಜಿನ ವಿಡಿಯೋ ವೈರಲ್
  • ಮಂಗಳೂರು ಕಿಸ್ಸಿಂಗ್ ಪ್ರಕರಣ: 8 ಮಂದಿ ಅರೆಸ್ಟ್
  • ಒಂದೇ ಕಾಲೇಜಿನ ನಾಲ್ವರು ವಿದ್ಯಾರ್ಥಿನಿಯರು ನಾಪತ್ತೆ!

NAMMUR EXPRESS NEWS
ಶಿವಮೊಗ್ಗ/ಮಂಗಳೂರು: ಶಿವಮೊಗ್ಗ ಜಿಲ್ಲೆಯ ಪ್ರತಿಷ್ಠಿತ ಖಾಸಗಿ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಹಾಡಹಗಲೇ ಮದ್ಯ ಸೇವಿಸಿ ಕಾಲೇಜಿನ ಮುಂದೆಯೇ ಬಿದ್ದು ಒದ್ದಾಡುತ್ತಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಜೊತೆಗೆ ಇಡೀ ವಿದ್ಯಾರ್ಥಿ ವರ್ಗ ತಲೆ ತಗ್ಗಿಸುವಂತಾಗಿದೆ.
ಮೂವರು ಕಾಲೇಜು ವಿದ್ಯಾರ್ಥಿಗಳು ಮದ್ಯ ಸೇವಿಸಿ ಗಾಳಿಯಲ್ಲಿ ತೂರಾಡುತ್ತಿದ್ದು, ಕಾಲನ್ನು ಮುಂದೆಯೂ ಹಾಕಲಾರದೆ, ಹಿಂದೆಯೂ ಹಾಕಲಾರದೆ ನಶೆಯಲ್ಲಿ ವಿದ್ಯಾರ್ಥಿಗಳು ಒದ್ದಾಡುತ್ತಿದ್ದಾರೆ. ಮತ್ತಿನಲ್ಲಿ ಕ್ಯಾಂಪಸ್‌ನಲ್ಲಿ ಎಲ್ಲಂದರಲ್ಲಿ ವಾಲಾಡುತ್ತಾ ಬಿದ್ದಿದ್ದಾರೆ. ಇದನ್ನು ಸಹಪಾಠಿ ವಿದ್ಯಾರ್ಥಿಗಳಿಂದ ವಿಡಿಯೋ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಒಂದು ಕಾಲೇಜು ಸಂಸ್ಥೆಯ ಹೆಸರಿನ ಟ್ಯಾಗ್ ಲೈನ್‌ನಲ್ಲಿ ವೈರಲ್ ಮಾಡಲಾಗಿದೆ.
ಪೊಲೀಸರು ತನಿಖೆ ನಡೆಸಿದ್ದು, ತನಿಖೆಯಲ್ಲಿ ವಿದ್ಯಾರ್ಥಿಗಳು ಸಾಗರ ರಸ್ತೆಯಲ್ಲಿರುವ ಬಾರ್ ಒಂದರಲ್ಲಿ ಮದ್ಯ ಸೇವನೆ ಮಾಡಿಕೊಂಡು ಬಸ್ ಹತ್ತಲು ಕಾಲೇಜಿನ ಹತ್ತಿರ ಬಂದಾಗ ಕಾಲೇಜಿನ ಗೇಟ್ ನಲ್ಲಿ ತಡೆದು ಅವರ ಪೋಷಕರಿಗೆ ಈ ವಿಚಾರವನ್ನು ತಿಳಿಸಿ, ಕಾಲೇಜು ಆಡಳಿತ ಮಂಡಳಿಯು ಪೋಷಕರೊಂದಿಗೆ ವಿದ್ಯಾರ್ಥಿಗಳಿಗೆ ಈ ವಿಷಯವಾಗಿ ಸಮಾಲೋಚನೆ ನಡೆಸಿದ್ದಾರೆ ಎನ್ನಲಾಗಿದೆ.
ಮಂಗಳೂರಿನ ವಿದ್ಯಾರ್ಥಿಗಳ ಕಿಸ್ಸಿಂಗ್ ವಿಡಿಯೋ ವೈರಲ್ ಆದ ಬೆನ್ನಲ್ಲೇ ಈ ಘಟನೆ ನಡೆದಿರುವುದು ಇಡೀ ವಿದ್ಯಾರ್ಥಿ ಹಾಗೂ ಪೋಷಕ ವರ್ಗ ತಲೆ ತಗ್ಗಿಸುವಂತೆ ಮಾಡಿದೆ. ಮಂಗಳೂರಿನ ಪ್ರತಿಷ್ಠಿತ ಖಾಸಗಿ ಕಾಲೇಜು ವಿದ್ಯಾರ್ಥಿಗಳು ಕಿಸ್ಸಿಂಗ್ ಮಾಡಿರುವ ವಿಡಿಯೋ ಕೂಡ ವೈರಲ್ ಆಗಿತ್ತು. ಕಿಸ್ಸಿಂಗ್ ವಿದ್ಯಾರ್ಥಿ ವಿದ್ಯಾರ್ಥಿನಿಯರು ಕಿಸ್ಸಿಂಗ್ ಸ್ಪರ್ಧೆ ಮಾಡಿದ್ದು, ವಿಡಿಯೋ ಮಾಡಿದ ವಿದ್ಯಾರ್ಥಿಯ ಬಂಧನ ಮಾಡಲಾಗಿದೆ. ಕಿಸ್ಸಿಂಗ್‌ನಲ್ಲಿ ತೊಡಗಿದ್ದ ವಿದ್ಯಾರ್ಥಿಗಳು ಪಿಯುಸಿ ಶಿಕ್ಷಣ ಪಡೆಯುತ್ತಿದ್ದರು ಎನ್ನಲಾಗಿದೆ. ಮಂಗಳೂರಿನ ಬಾವುಟಗುಡ್ಡೆಯಲ್ಲಿರುವ ಪ್ರತಿಷ್ಠಿತ ಖಾಸಗಿ ಕಾಲೇಜಿನ ವಿದ್ಯಾರ್ಥಿಗಳು ತಮ್ಮ ಸಹಪಾಠಿಗಳ ಎದುರೇ ಕಿಸ್ ಮಾಡಿರುವುದು ಭಾರೀ ಸಂಚಲನ ಮೂಡಿಸಿದ್ದು
ಪಂದ್ಯದ ನಿಯಮದಂತೇ ವಿದ್ಯಾರ್ಥಿ, ವಿದ್ಯಾರ್ಥಿನಿ ಎಲ್ಲರ ಎದುರೇ ಚುಂಬನ ಮಾಡಿದ್ದು, ಇದನ್ನು ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿದೆ. ಪ್ರತಿಷ್ಠಿತ ಖಾಸಗಿ ಕಾಲೇಜಿನ ಕಿಸ್ಸಿಂಗ್ ಸ್ಪರ್ಧೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹಲವರ ಆಕ್ರೋಶಕ್ಕೂ ಕಾರಣವಾಗಿತ್ತು. ಈ ವಿದ್ಯಾರ್ಥಿಗಳು ಅನೈತಿಕ ಸಂಬಂಧ ಕೂಡ ಇದ್ದಿದ್ದು ಬಯಲಾಗಿದೆ.
ನಾಲ್ವರು ವಿದ್ಯಾರ್ಥಿನಿಯರು ನಾಪತ್ತೆ!: ರಾಯಚೂರು ಜಿಲ್ಲೆಯಲ್ಲಿ ನಾಲ್ವರು ಪಿಯು ವಿದ್ಯಾರ್ಥಿನಿಯರು ಕಾಲೇಜಿಗೆ ಚಕ್ಕರ್ ಹಾಕಿ ಏಕಾಏಕಿ ನಾಪತ್ತೆಯಾಗಿದ್ದು ಇದೀಗ ಇಬ್ಬರನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಇವರು ಗೋವಾ ಪ್ರವಾಸ ಹೋಗಿದ್ದರು ಎನ್ನಲಾಗಿದೆ.

ಪೋಷಕರು, ಕಾಲೇಜು, ನಿಯಮ ನಿಯಂತ್ರಣ ಬೇಕು!

ಯುವ ಸಮುದಾಯ ಹಾದಿ ತಪ್ಪಿದೆ. ಯಾವುದೇ ಜೀವನದ ಗುರಿ ಇಲ್ಲದೆ ಅನೇಕರು ಸಾಮಾಜಿಕ ಜಾಲ ತಾಣ, ಚಟ, ಬೇಡದ ವಿಷಯಕ್ಕೆ ಹೆಚ್ಚು ಗಮನ ಕೊಡಲಾಗುತ್ತಿದೆ. ಶಿಕ್ಷಣ, ಅಧ್ಯಯನ, ಸಾಧನೆ, ಸಾಮಾಜಿಕ ಮೌಲ್ಯ ಇಂದಿನ ಯುವ ಜನತೆಯಲ್ಲಿ ಮಾಯವಾಗಿದೆ. ಪೋಷಕರು, ಶಿಕ್ಷಕರು, ಸಮಾಜ ಮಕ್ಕಳು, ಯುವ ಜನತೆಯನ್ನು ನಿಯಂತ್ರಣ ಮಾಡದಿದ್ದಲ್ಲಿ ದೇಶಕ್ಕೆ ಭವಿಷ್ಯ ಮಂಕಾಗಲಿದೆ. ಜೊತೆಗೆ ವಯುಕ್ತಿಕ ಸುಖಿ ಬದುಕು ಬೀದಿಗೆ ಬರಲಿದೆ. ಮೊಬೈಲ್, ಸೋಶಿಯಲ್ ಮೀಡಿಯಾ, ಬೇಡದ ಆಕರ್ಷಣೆಗೆ ಕಡಿವಾಣ ಬೇಕಿದೆ.

Categories
ರಾಜಕೀಯ

ಪಶ್ಚಿಮ ಘಟ್ಟ ತಪ್ಪಲಿನ ಜನ 1 ವರ್ಷ ಸೇಫ್!

  • ಕಸ್ತೂರಿ ರಂಗನ್ ವರದಿ ಜಾರಿಗೆ ಒಂದು ವರ್ಷ ಸಮಯ ಕೊಟ್ಟ ಕೇಂದ್ರ
  • ಸಿಎಂ, ಗೃಹ ಸಚಿವ ಆರಗ ನೇತೃತ್ವದಲ್ಲಿ ನಿಯೋಗ

NAMMUR EXPRESS NEWS
ಬೆಂಗಳೂರು: ಮಲೆನಾಡಿನ ರೈತರ ಪಾಲಿಗೆ ತೂಗುಗತ್ತಿಯಾಗಿರುವ
ಕಸ್ತೂರಿ ರಂಗನ್ ವರದಿಯನ್ನು ಅನುಷ್ಠಾನ ಮಾಡದಂತೆ ಹಾಗೂ ರೈತರ ಕೋರಿಕೆಯಂತೆ
ಪ್ರತ್ಯಕ್ಷ ಸರ್ವೇ ನಡೆಸುವಂತೆ ಕೇಂದ್ರ ಅರಣ್ಯ ಸಚಿವರಾದ ಭೂಪೆಂದ್ರ ಯಾದವ್ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿ ಅವರ ನೇತೃತ್ವದ ರಾಜ್ಯ ನಿಯೋಗದೊಂದಿಗೆ ಭೇಟಿಮಾಡಿ ಚರ್ಚೆ ನಡೆಸಲಾಯಿತು. ಗೃಹ ಸಚಿವ ಆರಗ ಜ್ಞಾನೇಂದ್ರ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಲೋಕಸಭಾ ಸದಸ್ಯ ರಾಘವೇಂದ್ರ, ಮಾಜಿ ಸಚಿವ ಸಿ.ಟಿ ರವಿ, ಸಿಎಂ ರಾಜಕೀಯ ಕಾರ್ಯದರ್ಶಿ ಜೀವರಾಜ್, ಮೈಸೂರು ಸಂಸದ ಪ್ರತಾಪ್ ಸಿಂಹ, ಸಾಗರ ಶಾಸಕ ಹಾಲಪ್ಪ ಮತ್ತಿತರರ ನಿಯೋಗದ ಮನವಿಯನ್ನು ಪುರಸ್ಕರಿಸಿದ ಭೂಪೆಂದರ್ ಯಾದವ್ ಅವರು ಸಮಿತಿ ರಚಿಸಿ, ಎಲ್ಲ ರಾಜ್ಯಗಳ ಸಲಹೆಗಳನ್ನು ಸ್ವೀಕರಿಸಿ, ರೈತರ ಹಿತ ಕಾಯುವ ವರದಿಯನ್ನು ಮುಂದಿನ ಒಂದು ವರ್ಷದ ಒಳಗಾಗಿ ಸಚಿವಾಲಯಕ್ಕೆ ಸಲ್ಲಿಸಲು ಸೂಚಿಸಿದ್ದಾರೆ. ಅಲ್ಲಿಗೆ ಈ ವರದಿಗೆ ಒಂದು ವರ್ಷ ತಡೆ ಬೀಳಲಿದೆ.
ಮಲೆನಾಡು ಸೇರಿ ರಾಜ್ಯದಲ್ಲಿ ಈ ವಿವಾದ ಬುಸುಗುಟ್ಟುವ ಹಿನ್ನೆಲೆ ಇದೀಗ ಕೇಂದ್ರ ರಾಜ್ಯದ ಮನವಿಗೆ ಸ್ಪಂದಿಸಿದೆ.

ರಾಜ್ಯದ ಹೊಣೆ ಇನ್ನಾದರೂ ಆಗುತ್ತಾ..?
ಪಶ್ಚಿಮ ಘಟ್ಟದ ಸುಮಾರು 1500 ಗ್ರಾಮಗಳು ಈ ವರದಿಯ ವ್ಯಾಪ್ತಿಯಲ್ಲಿದೆ. ಈಗಾಗಲೇ ನೂರಾರು ವರ್ಷಗಳಿಂದ ಬದುಕು ಕಟ್ಟಿಕೊಂಡವರ ಬದುಕು ಬೀದಿಗೆ ಬೀಳಲಿದೆ. ಉದ್ಯಮ, ಪ್ರವಾಸ ಎಲ್ಲದಕ್ಕೂ ಬ್ರೇಕ್ ಬೀಳಲಿದೆ. ಇನ್ನಾದರೂ ರಾಜ್ಯ ಸರ್ಕಾರ ಜನರ ಕಣ್ಣು ಒರೆಸುವ ತಂತ್ರ ಬಿಟ್ಟು ಜನಹಿತ ವರದಿ ತಯಾರಿಸಿ ಕೇಂದ್ರಕ್ಕೆ ನೀಡಬೇಕಿದೆ.

ನಮ್ಮೂರ್ ಎಕ್ಸ್ಪ್ರೆಸ್ ಮಾಧ್ಯಮ ಕೂಡ ಈ ವರದಿ ವಿರುದ್ಧ ಬಹು ದೊಡ್ಡ ಆಂದೋಲನ ಆಯೋಜಿಸುವ ನಿರ್ಧಾರ ಮಾಡಿತ್ತು.

Categories
ಬೆಂಗಳೂರು

ಜುಲೈ 28 ರಂದು ‘ಪುಣ್ಯಕೋಟಿ ದತ್ತು ಯೋಜನೆ’ಗೆ ಚಾಲನೆ

  • ದೇಶದಲ್ಲೇ ಪ್ರಥಮ ಪ್ರಯತ್ನಕ್ಕೆ ರಾಜ್ಯ ಸರ್ಕಾರದಿಂದ ಸ್ಪಂದನೆ

NAMMUR EXPRESS NEWS
ಬೆಂಗಳೂರು: ಗೋಶಾಲೆಗಳಿಂದ ಜಾನುವಾರುಗಳನ್ನು ದತ್ತು ಪಡೆಯುವುದನ್ನು ಉತ್ತೇಜಿಸಲು ರಾಜ್ಯ ಸರ್ಕಾರವು ಜುಲೈ 28 ರಂದು ಹಸು ದತ್ತು ಯೋಜನೆಯನ್ನು ಪ್ರಾರಂಭಿಸಲಿದೆ ಎಂದು ಪಶುಸಂಗೋಪನಾ ಸಚಿವ ಪ್ರಭು ಭಮಲಾ ಚವ್ಹಾಣ್ ಹೇಳಿದ್ದಾರೆ.
“ಜಾನುವಾರುಗಳನ್ನು ಸಂರಕ್ಷಿಸಲು ಗೋಶಾಲೆಗಳಲ್ಲಿ ಅವುಗಳನ್ನು ಸಾಕುವ ಮತ್ತು ಪೋಷಣೆ ಮಾಡುವ ಉದ್ದೇಶದಿಂದ ಸಾರ್ವಜನಿಕರು ಮತ್ತು ಖಾಸಗಿ ಸಂಸ್ಥೆಗಳು ಗೋವುಗಳನ್ನು ದತ್ತು ಪಡೆಯಲು ಅನುಕೂಲವಾಗುವ ನಿಟ್ಟಿನಲ್ಲಿ ಸರಕಾರವು ದೇಶದಲ್ಲೇ ಪ್ರಥಮ ಬಾರಿಗೆ ‘ಪುಣ್ಯಕೋಟಿ ದತ್ತು ಯೋಜನೆ’ ಆರಂಭಿಸಲು ಉತ್ಸುಕವಾಗಿದೆ” ಎಂದು ಅವರು ಹೇಳಿದ್ದಾರೆ.
ಜುಲೈ 28ಕ್ಕೆ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ಒಂದು ವರ್ಷ ಪೂರ್ಣಗೊಳ್ಳಲಿದ್ದು, ಅದೇ ದಿನ ಲೋಕಾರ್ಪಣೆ ಸಮಾರಂಭ ನಡೆಯಲಿದೆ.100 ಸರಕಾರಿ ಗೋಶಾಲೆಗಳನ್ನು ಹಂತಹಂತವಾಗಿ ಆರಂಭಿಸಲಾಗುತ್ತಿದ್ದು, ಈ ಎಲ್ಲಾ ಗೋಶಾಲೆಗಳಲ್ಲಿ ದೇಸೀ ಮತ್ತು ಮಿಶ್ರತಳಿ ಜಾನುವಾರು, ನಿರ್ಗತಿಕ, ದಣಿದ, ವೃದ್ಧ, ರೋಗಗ್ರಸ್ತ, ರೈತರಿಂದ ಕೈಬಿಟ್ಟ ಹಸು, ಗಂಡು ಕರುಗಳು ಮತ್ತು ನ್ಯಾಯಾಲಯ ಮತ್ತು ಪೊಲೀಸ್ ಕಸ್ಟಡಿಗಳಲ್ಲಿ ವಶಪಡಿಸಿಕೊಂಡಿರುವ ಜಾನುವಾರುಗಳಿಗೆ ಆಶ್ರಯ ನೀಡಿ ಪೋಷಣೆ ಮಾಡಲಾಗುತ್ತಿದೆ ಎಂದು ಸಚಿವರು ತಿಳಿಸಿದ್ದಾರೆ.

Categories
ಆರೋಗ್ಯ

ಕರೋನಾ ಬಳಿಕ ವಿಶ್ವದಲ್ಲಿ ಈಗ ಮಂಕಿ ಫಾಕ್ಸ್ ಭೀತಿ!

  • ಜಾಗತಿಕ ತುರ್ತು ಪರಿಸ್ಥಿತಿ ಘೋಷಿಸಿದ ವಿಶ್ವ ಸಂಸ್ಥೆ
  • ಭಾರತ, ಕರ್ನಾಟಕದಲ್ಲಿಯೂ ಅಪಾಯ ಹುಷಾರ್..!

NAMMUR EXPRESS NEWS
ವಿಶ್ವ ಆರೋಗ್ಯ ಸಂಸ್ಥೆಯು ಮಂಕಿಪಾಕ್ಸ್ ಅನ್ನು ಏಕಾಏಕಿ ಜಾಗತಿಕ ತುರ್ತುಸ್ಥಿತಿ ಎಂದು ಘೋಷಿಸಿದೆ. ಇಲ್ಲಿಯವರೆಗೆ, 70ಕ್ಕೂ ಹೆಚ್ಚು ದೇಶಗಳಲ್ಲಿ ಮಂಕಿಪಾಕ್ಸ್ ಪ್ರಕರಣಗಳು ಕಂಡುಬಂದಿದೆ.
ಡಬ್ಲ್ಯೂ.ಎಚ್.ಓ ಮಹಾನಿರ್ದೇಶಕ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್, ಯುಎನ್ ಆರೋಗ್ಯ ಸಂಸ್ಥೆಯ ಮೌಲ್ಯಮಾಪನವು ಅಪಾಯವು ಹೆಚ್ಚಾಗಿರುವ ಯುರೋಪಿಯನ್ ಪ್ರದೇಶವನ್ನು ಹೊರತುಪಡಿಸಿ, ಜಾಗತಿಕವಾಗಿ ಎಲ್ಲಾ ಪ್ರದೇಶಗಳಲ್ಲಿ ಮಂಕಿಪಾಕ್ಸ್ ತುರ್ತು ಪರಿಸ್ಥಿತಿ ಘೋಷಣೆ ಮಾಡಿದ್ದಾರೆ.
ಈ ಎಲ್ಲಾ ಕಾರಣಗಳಿಗಾಗಿ, ಜಾಗತಿಕ ಮಂಕಿಪಾಕ್ಸ್ ಏಕಾಏಕಿ ಅಂತರರಾಷ್ಟ್ರೀಯ ಕಾಳಜಿಯ ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿಯನ್ನು ಪ್ರತಿನಿಧಿಸುತ್ತದೆ ಎಂದು ನಾನು ನಿರ್ಧರಿಸಿದ್ದೇನೆ” ಎಂದು ಡಬ್ಲ್ಯೂ.ಎಚ್.ಓ ಮುಖ್ಯಸ್ಥರು ಹೇಳಿದ್ದಾರೆ.
ಜುಲೈ 20 ರಂದು, ಡಬ್ಲ್ಯೂ.ಎಚ್.ಓ ಈ ವರ್ಷ 70 ಕ್ಕೂ ಹೆಚ್ಚು ದೇಶಗಳು ಮತ್ತು ಪ್ರಾಂತ್ಯಗಳಿಂದ ಸುಮಾರು 14,000 ಮಂಕಿಪಾಕ್ಸ್ ಪ್ರಕರಣಗಳು ವರದಿಯಾಗಿದೆ. 5 ಸಾವುಗಳು ವರದಿಯಾಗಿದ್ದವು. ಈ ಎಲ್ಲ ಸಾವುಗಳು ಆಫ್ರಿಕಾದಲ್ಲಿ ಸಂಭವಿಸಿವೆ ಎಂದೂ ಡಬ್ಲ್ಯೂ.ಎಚ್.ಓ ಹೇಳಿದೆ . ಮಂಕಿಪಾಕ್ಸ್ ಪ್ರಕರಣಗಳು ಹೆಚ್ಚುತ್ತಿರುವ ದೇಶಗಳಲ್ಲಿ ಚಿಕಿತ್ಸೆಗೆ ಕಡಿಮೆ ಅವಕಾಶಗಳನ್ನು ಹೊಂದಿವೆ. ಆದ್ದರಿಂದ ಏಕಾಏಕಿ ಪತ್ತೆಹಚ್ಚಲು ಕಷ್ಟವಾಗುತ್ತದೆ ಮತ್ತು ಸೋಂಕು ಕಡಿಮೆ ಮಾಡಲು ಕಷ್ಟವಾಗುತ್ತದೆ ಎಂದಿದ್ದಾರೆ.

Categories
ರಾಜಕೀಯ

ಕನ್ನಡಿಗರಿಗೆ ಉದ್ಯೋಗ: ಹೊಸ ನೀತಿ ಜಾರಿ

  • ಕರ್ನಾಟಕ ಉದ್ಯೋಗ ನೀತಿ 2022-25ಕ್ಕೆ ಸಚಿವ ಸಂಪುಟ ಸಭೆ ಒಪ್ಪಿಗೆ
  • ಹೆಚ್ಚುವರಿ ಉದ್ಯೋಗ ಸೃಷ್ಟಿಯ ಪ್ರಮಾಣ
  • ಸ್ಟಾರ್ಟ್ ಆಪ್ ಕಂಪನಿಗಳಿಗೆ ನೆರವು ನೀಡಿ..!

NAMMUR EXPRESS NEWS
ಬೆಂಗಳೂರು: ಕರ್ನಾಟಕ ಉದ್ಯೋಗ ನೀತಿ 2022-25 ಕ್ಕೆ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಎಲ್ಲಾ ರೀತಿಯ ಉದ್ಯಮಗಳು ಬಂಡವಾಳ ಹೂಡಿಕೆ ವಿಸ್ತರಣೆ ಮಾಡುವ ಸಂದರ್ಭ ಹೆಚ್ಚುವರಿ ಉದ್ಯೋಗಗಳನ್ನು ಸೃಷ್ಟಿಸಬೇಕು ಮತ್ತು ಅವುಗಳನ್ನು ಕನ್ನಡಿಗರಿಗೆ ನೀಡಬೇಕು ಎಂಬ ಅಂಶವನ್ನು ಸೇರಿಸಿದೆ. ಆದ್ರೆ ಉದ್ಯೋಗದಾತ ಸಣ್ಣ ಕಂಪನಿಗಳಿಗೆ ಸರ್ಕಾರದ ನೆರವು ಏನೂ ಸಾಲದಾಗಿದೆ.
ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯ ಬಳಿಕ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ ಸಿ ಮಾಧುಸ್ವಾಮಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ವಿವರ ನೀಡಿದರು, ಹೆಚ್ಚುವರಿ ಉದ್ಯೋಗ ಸೃಷ್ಟಿಯ ಪ್ರಮಾಣ ಶೇ.2.5 ರಿಂದ ಶೇ 3 ರಷ್ಟು ಆಗಲಿದೆ.
ಕೈಗಾರಿಕೆಗಳನ್ನು ಬಂಡವಾಳ ಹೂಡಿಕೆಯ ಪ್ರಮಾಣದ ಆಧಾರದ ಮೇಲೆ ಮಧ್ಯಮ ಬೃಹತ್ ಆಲ್ಟ್ರಾ ಮೆಗಾ ಮತ್ತು ಸೂಪರ್ ಮೆಗಾ ಕೈಗಾರಿಕೆಗಳೆಂದು ವರ್ಗೀಕರಿಸಲಾಗಿದೆ, ಹೂಡಿಕೆ ವಿಸ್ತರಣೆಯ ಸಂದರ್ಭದಲ್ಲಿ ಹೂಡಿಕೆ ಮೊತ್ತದ ಆಧಾರದಲ್ಲಿ ಹೆಚ್ಚುವರಿ ಯಾಗಿ ಎಷ್ಟು ಹುದ್ದೆಗಳನ್ನು ಸೃಷ್ಟಿ ಮಾಡಬೇಕು ಎಂಬ ಸಂಖ್ಯೆಗಳನ್ನು ನೀತಿಯಲ್ಲಿ ಸೂಚಿಸಲಾಗಿದೆ ಎಂದರು.
ಕನ್ನಡಿಗರು ಅಥವಾ ಸ್ಥಳೀಯರಿಗೆ ಎ ಬಿ ಸಿ ಮತ್ತು ಡಿ ದರ್ಜೆಯ ಹುದ್ದೆಗಳಲ್ಲಿ ಉದ್ಯೋಗ ನೀಡಬೇಕು. ಈ ಹಿಂದೆ ಕೇವಲ ಸಿ ಮತ್ತು ಡಿ ದರ್ಜೆಯ ಹುದ್ದೆಗಳಿಗೆ ಮಾತ್ರ ನೀಡಲಾಗುತ್ತಿತ್ತು, ಇನ್ನು ಮುಂದೆ ಎ ಮತ್ತು ಬಿ ದರ್ಜೆಗಳ ಉದ್ಯೋಗ ನೀಡುವುದು ಕಡ್ಡಾಯ, ಉದ್ಯೋಗ ನೀಡುವ ಸಂಬಂಧ ಸರ್ಕಾರದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗುತ್ತದೆಯೋ ಇಲ್ಲವೋ ಎಂಬ ಬಗ್ಗೆ ಸರ್ಕಾರವೇ ಪರಿಶೀಲನೆ ನಡೆಸುತ್ತದೆ ಎಂದು ಮಾಧುಸ್ವಾಮಿ ಹೇಳಿದರು.
ಹೆಚ್ಚುವರಿ ಉದ್ಯೋಗ ಸೃಷ್ಟಿಯ ಪ್ರಮಾಣ: ಮಧ್ಯಮ ಗಾತ್ರದ ಉದ್ಯಮಗಳು ಪ್ರತಿ ₹10 ಕೋಟಿ ಹೂಡಿಕೆಯ ಮೇಲೆ ಏಳು ಉದ್ಯೋಗಗಳ ಬದಲಿಗೆ 10 ಉದ್ಯೋಗಗಳನ್ನು ಸೃಷ್ಟಿಸಬೇಕು. ಅಂದರೆ ಪ್ರತಿ ₹10 ಕೋಟಿ ಉದ್ಯಮಕ್ಕೆ ಇನ್ನು ಮುಂದೆ ತಲಾ ಹತ್ತು ಉದ್ಯೋಗಗಳನ್ನು ಸೃಷ್ಟಿಸಬೇಕು.
ಬೃಹತ್ ಉದ್ಯಮಗಳಲ್ಲಿ ಕನಿಷ್ಠ ಉದ್ಯೋಗದ ಮಿತಿಯನ್ನು 50 ರಿಂದ 60ಕ್ಕೆ ಹೆಚ್ಚಿಸಲಾಗಿದೆ. ಹೆಚ್ಚುವರಿ ಉದ್ಯೋಗದ ಅಗತ್ಯತೆಯನ್ನು ಪ್ರತಿ ₹50 ಕೋಟಿ ಹೂಡಿಕೆಗೆ 35 ರಿಂದ 50ಕ್ಕೆ ಅಂದರೆ ₹50 ಕೋಟಿಗೆ 50 ಉದ್ಯೋಗಗಳನ್ನು ಸೃಷ್ಟಿಸಬೇಕು ಎಂದು ಅವರು ತಿಳಿಸಿದರು.
ಮೆಗಾ ಉದ್ಯಮಗಳಲ್ಲಿ ಕನಿಷ್ಠ ಉದ್ಯಮಗಳ ಮಿತಿಯನ್ನು 200 ರಿಂದ 260 ಕ್ಕೆ ಹೆಚ್ಚಿಸಲಾಗಿದೆ. ಹೆಚ್ಚುವರಿ ಉದ್ಯೋಗದ ಅಗತ್ಯತೆಯನ್ನು ಪ್ರತಿ ₹50 ಕೋಟಿ ಹೂಡಿಕೆಗೆ 35 ರಿಂದ 50ಕ್ಕೆ ಅಂದರೆ ₹50 ಕೋಟಿಗೆ 50 ಉದ್ಯೋಗಗಳನ್ನು ಸೃಷ್ಟಿಸಬೇಕು.
ಅಲ್ಟ್ರಾ ಮೆಗಾ ಉದ್ಯಮಗಳಲ್ಲಿ ಕನಿಷ್ಠ ಉದ್ಯೋಗ ಮಿತಿಯನ್ನು 400 ರಿಂದ 510 ಕ್ಕೆ ಹೆಚ್ಚಿಸಲಾಗಿದೆ ಇಲ್ಲೂ ಕೂಡ ಪ್ರತಿ ₹50 ಕೋಟಿ ಹೂಡಿಕೆಗೆ 35 ರಿಂದ 50ಕ್ಕೆ ಅಂದರೆ ₹50 ಕೋಟಿಗೆ 50 ಉದ್ಯೋಗಗಳನ್ನು ಸೃಷ್ಟಿಸಬೇಕು. ಸೂಪರ್ ಮೆಗಾ ಉದ್ಯಮಗಳಲ್ಲಿ ಕನಿಷ್ಠ ಉದ್ಯೋಗ ಮಿತಿಯನ್ನು 750 ರಿಂದ 1,000 ಹೆಚ್ಚಿಸಲಾಗಿದೆ.ಪ್ರತಿ ₹50 ಕೋಟಿ ಹೂಡಿಕೆಗೆ 35 ರಿಂದ 50ಕ್ಕೆ ಅಂದರೆ ₹50 ಕೋಟಿಗೆ 50 ಉದ್ಯೋಗಗಳನ್ನು ಸೃಷ್ಟಿಸಬೇಕು. ಹೆಚ್ಚುವರಿಯಾಗಿ ಸೃಷ್ಟಿಸುವ ಉದ್ಯೋಗಗಳನ್ನು ಕನ್ನಡಿಗರಿಗೆ ಸ್ಥಳೀಯರಿಗೆ ನೀಡಬೇಕು ಎಂದು ಹೇಳಿದರು.
ಕಂಪನಿಗಳಿಂದ ಕೌಶಲ್ಯ ತರಬೇತಿ ಸಂಸ್ಥೆ ಸ್ಥಾಪನೆಗೆ ಪ್ರೋತ್ಸಾಹಕಗಳನ್ನು ನೀಡಬೇಕು, ರಾಜ್ಯದಲ್ಲಿ ಉದ್ಯೋಗದ ಡೇಟಾಬೇಸ್ ಅನ್ನು ರಚಿಸಿ ನಿರ್ವಹಿಸಬೇಕು ಎಂಬ ಅಂಶವನ್ನು ನೀತಿಯಲ್ಲಿ ಸೇರಿಸಲಾಗಿದೆ ಎಂದು ಮಾಧುಸ್ವಾಮಿ ಹೇಳಿದರು.

Categories
ವ್ಯವಹಾರ

ಐಟಿಆರ್ ಸಲ್ಲಿಕೆ ಗಡುವು ವಿಸ್ತರಣೆ ಆಲೋಚನೆ ಇಲ್ಲ!

  • ಜುಲೈ 31ಕ್ಕೆ ಅಂತ್ಯ: ನಿಮ್ಮ ಆದಾಯ ತೆರಿಗೆ ಕಟ್ಟಿ..

NAMMUR EXPRESS NEWS
ನವದೆಹಲಿ: ಆದಾಯ ತೆರಿಗೆ ವಿವರ ಸಲ್ಲಿಕೆಯ ಗಡುವು ಇದೇ ತಿಂಗಳ 31ಕ್ಕೆ ಅಂತ್ಯವಾಗಲಿದ್ದು ಅದನ್ನು ವಿಸ್ತರಿಸುವ ಆಲೋಚನೆ ಸರ್ಕಾರದ ಮುಂದೆ ಸದ್ಯಕ್ಕೆ ಇಲ್ಲ ಎಂದು ರೆವೆನ್ಯೂ ಕಾರ್ಯದರ್ಶಿ ತರುಣ್ ಬಜಾಜ್ ಹೇಳಿದ್ದಾರೆ.
2021-22ನೇ ಹಣಕಾಸು ವರ್ಷಕ್ಕೆ ಜುಲೈ 20ರವರೆಗೆ 2.3 ಕೋಟಿಗೂ ಅಧಿಕ ರಿಟರ್ನ್ಸ್ ಗಳು ಸಲ್ಲಿಕೆ ಆಗಿವೆ, ರಿಟರ್ನ್ ಸಲ್ಲಿಕೆ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಪ್ರತಿ ಬಾರಿಯೂ ರಿಟರ್ನ್ಸ್ ಸಲ್ಲಿಕೆ ಅವಧಿಯು ವಿಸ್ತರಣೆ ಆಗುತ್ತದೆ ಎಂದು ಜನರು ಭಾವಿಸುತ್ತಾರೆ, ಹೀಗಾಗಿ ಆರಂಭದಲ್ಲಿ ರಿಟರ್ನ್ಸ್ ಸಲ್ಲಿಕೆ ಪ್ರಮಾಣ ಕಡಿಮೆ ಇರುತ್ತದೆ, ಆದರೆ ಈಗ ದಿನವೂ 15 ಲಕ್ಷದಿಂದ 18 ಲಕ್ಷ ರಿಟರ್ನ್ಸ್ ಸಲ್ಲಿಕೆ ಆಗುತ್ತಿದೆ, ಈ ಸಂಖ್ಯೆಯು ನಿಧಾನವಾಗಿ 25 ಲಕ್ಷದಿಂದ 30 ಲಕ್ಷಕ್ಕೆ ಏರಿಕೆ ಆಗಲಿದೆ ಎಂದು ಬಜಾಜ್ ಹೇಳಿದ್ದಾರೆ.
2020-21ನೇ ಹಣಕಾಸು ವರ್ಷದಲ್ಲಿ 5.89 ಕೋಟಿ ರಿಟರ್ನ್ಸ್ ಸಲ್ಲಿಕೆ ಆಗಿತ್ತು.

Categories
ಬೆಂಗಳೂರು

ಕಚೇರಿಗೆ ತಡವಾಗಿ ಬರುವ ಸರ್ಕಾರಿ ನೌಕರರಿಗೆ ಶಾಕ್!

  • ಬೇಜವಾಬ್ದಾರಿ ನೌಕರರ ವಿರುದ್ಧ ಶಿಸ್ತು ಕ್ರಮ
  • ಬೆಳಗ್ಗೆ 10 ಗಂಟೆ ಕಡ್ಡಾಯ: ಹೊರಗೆ ಹೋಗಬೇಕಾದ್ರೆ ಪರ್ಮಿಷನ್ ತಗೋಬೇಕು!

NAMMUR EXPRESS NEWS
ಬೆಂಗಳೂರು: ರಾಜ್ಯ ಸರ್ಕಾರಿ ನೌಕರರು ನಿಗದಿತ ಸಮಯಕ್ಕೆ ಕಚೇರಿಗೆ ಹಾಜರಾಗದಿದ್ದರೆ ಸೂಕ್ತ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಎಚ್ಚರಿಸಿದ್ದಾರೆ. ಬೆಳಿಗ್ಗೆ 10 ಗಂಟೆಗೆ ಕಡ್ಡಾಯವಾಗಿ ಕಚೇರಿಗೆ ಆಗಮಿಸಬೇಕು’ ಎಂದು ಅವರು ಹೊರಡಿಸಿರುವ ಸುತ್ತೋಲೆಯಲ್ಲಿ ಸ್ಪಷ್ಟಪಡಿಸಿದ್ದಾರೆ. ‘ನೌಕರರು ಕಚೇರಿ ವೇಳೆ ಪೂರ್ಣಗೊಳ್ಳುವವರೆಗೂ ತಮಗೆ ನಿಗದಿಪಡಿಸಿದ ಸ್ಥಾನದಲ್ಲಿ ಇದ್ದು ಕರ್ತವ್ಯ ನಿರ್ವಹಿಸಬೇಕು. ಅನ್ಯ ಕರ್ತವ್ಯದ ಮೇಲೆ ಹೊರಗೆ ತೆರಳಬೇಕಾದಲ್ಲಿ ಚಲನ-ವಲನ ವಹಿಯಲ್ಲಿ ನಮೂದಿಸಿ ಮೇಲಾಧಿಕಾರಿಗಳ ಪೂರ್ವಾನುಮತಿ ಪಡೆಯಬೇಕು. ಇಲ್ಲದಿದ್ದಲ್ಲಿ ಸಂಬಂಧಿಸಿದ ಸಕ್ಷಮ ಪ್ರಾಧಿಕಾರ ಸೂಕ್ತ ಶಿಸ್ತು ಕ್ರಮ ಕೈಗೊಳ್ಳಬೇಕು’ ಎಂದು ತಿಳಿಸಲಾಗಿದೆ.
ಸರ್ಕಾರದ ಈ ನಿಯಮ ಜನರಲ್ಲಿ ನಿಟ್ಟುಸಿರು ಬಿಡುವಂತೆ ಮಾಡಿದೆ. ಸರ್ಕಾರಿ ಕಚೇರಿಗಳಲ್ಲಿ ಮೇಲಿನ ಅಧಿಕಾರಿಗಳಿಂದ ಹಿಡಿದು ಸಣ್ಣ ನೌಕರ ಕೂಡ ಕಚೇರಿ ಸಮಯದಲ್ಲಿ ಸರಿಯಾಗಿ ಇರುವುದಿಲ್ಲ. ಇದರಿಂದಜನತೆಗೆ ಭಾರೀ ತೊಂದರೆ ಆಗುತ್ತಿತ್ತು. ಈಗ ಸರ್ಕಾರ ಇತ್ತ ಗಮನ ಹರಿಸಿದ್ದು ಸಂತಸ ತಂದಿದೆ.