ಮಂಗಳೂರಿನಲ್ಲಿ ಜನ ಮನ ಸೆಳೆದ ಹಲಸು, ಮಾವು ಮೇಳ..!
– ಮಾವು ಝೆಡ್ ಹಲಸು ಸೇರಿ ವಿವಿಧ ಖ್ಯಾದ್ಯ ಖರೀದಿಗೆ ಡಿಮ್ಯಾಂಡ್
– ಕೃಷಿ ಮಾರಾಟಗಾರರ ಸಮಾಗಮ: ಸಾವಿರಾರು ಜನರ ಭೇಟಿ
– ಕಲ್ಕೂರ ಪ್ರತಿಷ್ಠಾನ, ಸಾವಯವ ಕೃಷಿಕ ಗ್ರಾಹಗ ಬಳಗ ಅಯೋಜನೆ
NAMMUR EXPRESS NEWS
ಮಂಗಳೂರು: ಕಲ್ಕೂರ ಪ್ರತಿಷ್ಠಾನ ಮಂಗಳೂರು, ಸಾವಯವ ಕೃಷಿಕ ಗ್ರಾಹಗ ಬಳಗ ಸಹಯೋಗದೊಂದಿಗೆ ಮಂಗಳೂರಿನಲ್ಲಿ ಹಲಸು ಮತ್ತು ಮಾವು ಮೇಳ ಜನ ಮನ ಸೆಳೆಯಿತು. ತುಳುನಾಡಿನ ಸಂಸ್ಕೃತಿಯನ್ನು ಪ್ರತಿನಿಧಿಸುವ ಸಾವಯವ ಕೃಷಿಕರು ಬೆಳೆದ ಬಗೆ ಬಗೆಯ ವಿಶಿಷ್ಟ ತಳಿಗಳ ಸಮೃದ್ಧ ಫಲಗಳಾದ ‘ಮಾವು-ಹಲಸು’ ಹಾಗೂ ಅದರ ಇನ್ನಿತರ ಉತ್ಪನ್ನಗಳು ಒಂದೇ ಸೂರಿನಡಿಯಲ್ಲಿ ಖರೀದಿಸುವ ಸುವರ್ಣಾವಕಾಶವನ್ನು ಸಾವಿರಾರು ಜನರು ಬಳಸಿಕೊಂಡರು.
ವೈವಿಧ್ಯಮಯ ತಳಿಗಳ ಮಾವು ಹಾಗೂ ಹಲಸಿನ ಮಾರಾಟ, ಬಹು ಬಗೆಯ ಹಲಸಿನ ಖಾದ್ಯಗಳು, ಹಲಸಿನ ಹೋಳಿಗೆ, ಐಸ್ಕ್ರೀಂ, ವಿವಿಧ ತಳಿಗಳ ಮಾವು ಹಾಗೂ ಹಲಸಿನ ಗಿಡಗಳ ಮಾರಾಟ, ದೇಸಿ ತರಕಾರಿ ಬೀಜಗಳು ಮತ್ತು ಸಸಿ, ಉಪ್ಪಿನಕಾಯಿ, ಹಪ್ಪಳ ಇತ್ಯಾದಿಗಳ ಪ್ರದರ್ಶನ ಹಾಗೂ ಮಾರಾಟ ನಡೆಯಿತು.
ಜೂನ್ 29 ಶನಿವಾರ ಮತ್ತು 30 ರವಿವಾರ ಬೆಳಿಗ್ಗೆ 7 ರಿಂದ ಸಂಜೆ 7ರ ತನಕ ಮಂಜುಪ್ರಾಸಾದ, ಮಲ್ಲಿಕಾ ಬಡಾವಣೆ, ಕದ್ರಿ ಕಂಬಳ ರಸ್ತೆ, ಮಂಗಳೂರು ಇಲ್ಲಿ ಈ ಮೇಳ ನಡೆಯಿತು. ಶಾಸಕ ವೇದವ್ಯಾಸ ಕಾಮತ್ ಸೇರಿ ರಾಜಕೀಯ, ಕೃಷಿ, ಧಾರ್ಮಿಕ, ಉದ್ಯಮ, ಸಂಘಟನೆ ಕ್ಷೇತ್ರದ ಗಣ್ಯರು ಭಾಗಿಯಾದರು. ಎಸ್. ಪ್ರದೀಪ ಕುಮಾರ ಕಲ್ಕೂರ ಅಧ್ಯಕ್ಷರು, ಕಲ್ಕೂರ ಪ್ರತಿಷ್ಠಾನ, ಸಾವಯವ ಕೃಷಿಕ ಗ್ರಾಹಕ ಬಳಗದ ರತ್ನಾಕರ ಕುಳಾಯಿ, ಪ್ರಮುಖರಾದ ಶಿವಪ್ರಸಾದ್ ಪ್ರಭು, ಜನಾರ್ದನ ಹಂದೆ, ಡಾ. ಮಂಜುಳಾ ಶೆಟ್ಟಿ ಉಪಸ್ಥಿತರಿದ್ದರು
ಎಡನೀರು ಮಠದ ಶ್ರೀ ಸಚ್ಚಿದಾನಂದ ಸ್ವಾಮೀಜಿ ಭೇಟಿ
ಹಿರಿಯರು ಅನುಸರಿಸಿದ ಆಹಾರ ಪದ್ದತಿಯಿಂದ ವಿಮುಖರಾದ ಕಾರಣ ನಾವಿಂದು ಹಲವು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಸ್ವಾವಲಂಬನೆ ಹಾಗೂ ಆರೋಗ್ಯಕರ ಬದುಕಿಗೆ ಸಾವಯವ ಕೃಷಿ ನಮಗೆ ವರದಾನವಾಗಿದೆ ಎಂದು ಎಡನೀರು ಮಠದ ಶ್ರೀ ಸಚ್ಚಿದಾನಂದ ಸ್ವಾಮೀಜಿ ನುಡಿದರು.ಹಿರಿಯ ಸಾಮಾಜಿಕ ಕಾರ್ಯ ಕರ್ತೆ ಆರೂರು ಲಕ್ಷ್ಮೀ ರಾವ್ ಮೇಳ ಉದ್ಘಾಟಿಸಿದರು. ಹೋಟೆಲ್ ಉದ್ಯಮಿ ವೆಂಕಟರಮಣ ಪೋತಿ ಮಾರಾಟ ಮಳಿಗೆ ಉದ್ಘಾಟಿಸಿದರು.ಕಟೀಲು ಕ್ಷೇತ್ರದ ಪ್ರಧಾನ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ ಶುಭ ಹಾರೈಸಿದರು.
ಕೃಷಿ ತಜ್ಞ ಶ್ರೀಪಡ್ರೆ ಸಾವಯವ ಜಾಗೃತಿ ಸಂದೇಶ ನೀಡಿದರು. ಡಾ.ಮುರಳೀಧರ ಯಡಿಯಾಳ್ ಹಲಸು ಮತ್ತು ಮಾವಿನ ಬಗ್ಗೆ ವೈಜ್ಞಾನಿಕ ವಿಶ್ಲೇಷಣೆ ನೀಡಿದರು. ಕಾರ್ಪೋರೇಟರ್ ಶಕಿಲಾ ಕಾವ, ಶಾರದಾ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಎಂ.ಬಿ.ಪುರಾಣಿಕ್, ಶರವು ರಾಘವೇಂದ್ರ ಶಾಸ್ತ್ರಿ, ಡಾ.ಜೀವರಾಜ್ ಸೊರಕೆ, ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್.ಪ್ರದೀಪ್ ಕುಮಾರ್ ಕಲ್ಕೂರ ಸ್ವಾಗತಿಸಿದರು. ಸುಧಾಕರ ರಾವ್ ಪೇಜಾವರ ಮತ್ತು ದಯಾನಂದ ಕಟೀಲ್ ಕಾರ್ಯಕ್ರಮ ನಿರೂಪಿಸಿದರು.
