Categories
ತೀರ್ಥಹಳ್ಳಿ ಮಲ್ನಾಡ್ ಮಾಹಿತಿ ಸುದ್ದಿ

ಕೋಣಂದೂರಲ್ಲಿಂದು ಸಂಪೂರ್ಣ ಶ್ರೀದೇವಿ ಮಹಾತ್ಮೆ ಯಕ್ಷಗಾನ!

ಕೋಣಂದೂರಲ್ಲಿಂದು ಸಂಪೂರ್ಣ ಶ್ರೀದೇವಿ ಮಹಾತ್ಮೆ ಯಕ್ಷಗಾನ!
– ಸಾವಿರಾರು ಯಕ್ಷಪ್ರಿಯರ ಆಗಮನ ನಿರೀಕ್ಷೆ: ಸರ್ವ ಸಿದ್ಧತೆ
– ಸರ್ವರನ್ನು ಸ್ವಾಗತಿಸಿದ ಆಯೋಜಕ ಸಮಿತಿ

NAMMUR EXPRESS NEWS
ತೀರ್ಥಹಳ್ಳಿ: ಕೊಡಚಾದ್ರಿ ಗ್ರಾಮೀಣಾಭಿವೃದ್ಧಿ ಟ್ರಸ್ಟ್ ಸಾಂಸ್ಕೃತಿಕ ಸಮಿತಿ ವತಿಯಿಂದ ಖ್ಯಾತ ಪಟ್ಲ ಸತೀಶ್ ಶೆಟ್ಟಿ ನೇತೃತ್ವದಲ್ಲಿ ಶ್ರೀಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ ನಾಗವೃಜ ಕ್ಷೇತ್ರ ಪಾವಂಜೆ ಇವರಿಂದ ದಿನಾಂಕ ಕೋಣಂದೂರಲ್ಲಿ ಇಂದು ಸಂಜೆ 6ರಿಂದ ಸಂಪೂರ್ಣ ಶ್ರೀದೇವಿ ಮಹಾತ್ಮೆ ನಡೆಯಲಿದೆ.
ಕೊಡಚಾದ್ರಿ ಟ್ರಸ್ಟ್ ಸ್ಥಾಪಕರು, ತೀರ್ಥಹಳ್ಳಿ ನಾಯಕರು ಆದ ಡಾ. ಆರ್.ಎಂ. ಮಂಜುನಾಥ ಗೌಡ ಸರ್ವರನ್ನು ಸ್ವಾಗತಿಸಿದ್ದಾರೆ.
ಯಕ್ಷಗಾನ 6 ಗಂಟೆಯಿಂದ 11 ಗಂಟೆವರೆಗೆ ನಡೆಯಲಿದೆ. 5 ಗಂಟೆ ಕಾಲ ಮಿತಿ ಯಲ್ಲಿ ಯಕ್ಷಗಾನ ನಡೆಯಲಿದ್ದು, ಈಗಾಗಲೇ ಜನರ ಆಗಮನ ಶುರುವಾಗಿದೆ. ಪಟ್ಲ ಸತೀಶ್ ಶೆಟ್ಟಿ ಅವರ ಭಾಗವತಿಕೆ ಗಮನ ಸೆಳೆಯಲಿದೆ.
ಕೊಡಚಾದ್ರಿ ಸಾಂಸ್ಕೃತಿಕ ಸಮಿತಿ ಪ್ರಮುಖರಾದ ಮಧು ಸೂಧನ ನಾವುಡ ನೇತೃತ್ವದಲ್ಲಿ ಕೋಣಂದೂರಲ್ಲಿ ಯಕ್ಷಗಾನ ನಡೆಯಲಿದ್ದು, ವಿದ್ಯುತ್ ಅಲಂಕಾರ ಮಾಡಲಾಗಿದೆ.
ಹಿರಿಯ ಕಾಂಗ್ರೆಸ್ ನಾಯಕರಾದ ನಾರಾಯಣರಾವ್, ಶಿಮೂಲ್ ಅಧ್ಯಕ್ಷರಾದ ವಿದ್ಯಾಧರ ಗುರುಶಕ್ತಿ, ಮಧು ಸೂಧನ ನಾವುಡ, ಕಂಪದಗದ್ದೆ ಸುರೇಶ, ಕೊಲ್ಲೂರಯ್ಯ, ರಾಘವೇಂದ್ರ ಶೆಟ್ಟಿ ಸೇರಿ ಅನೇಕರು ಸ್ಥಳದಲ್ಲಿದ್ದು ಎಲ್ಲಾವ್ಯವಸ್ಥೆ ನೋಡಿಕೊಳ್ಳುತ್ತಿದ್ದಾರೆ.

ಅದ್ದೂರಿ ರಂಗ ವೇದಿಕೆ: ಪಟ್ಲ ಸತೀಶ್ ಶೆಟ್ಟಿ ಭಾಗವತಿಕೆ!

ಯಕ್ಷಗಾನದಲ್ಲಿ ಚಿನ್ನದ ಕಿರೀಟ ಧಾರಣೆಯೊಂದಿಗೆ, ಎಂಟು ಆಯುಧಗಳನ್ನು ಹಿಡಿದಿರುವ ಶ್ರೀದೇವಿಯ ಪ್ರವೇಶ, ಬೆಂಕಿಯ ಜ್ವಾಲೆಯೊಂದಿಗೆ, ಅಬ್ಬರಿಸುತ್ತಾ ಚಂಡ ಮುಂಡರ ಪ್ರವೇಶ, ಎಪ್ಪತ್ತು ಕೆಜಿ ತೂಕವುಳ್ಳ ಬೆಳ್ಳಿಯ ಉಯ್ಯಾಲೆಯಲ್ಲಿ ಶ್ರೀದೇವಿ ಆಸೀನಳಾಗಿ ತೂಗುವುದು, ರಕ್ತೇಶ್ವರಿ ಕೆನ್ನಾಲಿಗೆಯೊಂದಿಗೆ ರಾಕ್ಷಸರ ವಧೆ ಪ್ರಮುಖ ಆಕರ್ಷಣೆಯಾಗಿದೆ. ಈ ಅದ್ಧೂರಿ ಪ್ರದರ್ಶನವನ್ನು ಕಲಾಪ್ರಿಯರು ಕಣ್ತುಂಬಿಕೊಳ್ಳಬೇಕೆಂದು ಮನವಿ ಮಾಡಲಾಗಿದೆ.
ಡಾ.ಆರ್.ಎಂ.ಮಂಜುನಾಥ ಗೌಡ ಅವರು ಹಾಗೂ ಕೊಡಚಾದ್ರಿ ಗ್ರಾಮೀಣಾಭಿವೃದ್ಧಿ ಟ್ರಸ್ಟ್ ನ ಸರ್ವ ಸದಸ್ಯರು ಸಾರ್ವಜನಿಕರಿಗೆ ಆದರದ ಸ್ವಾಗತವನ್ನು ಕೋರಿದ್ದಾರೆ. ಉಪಹಾರ ವ್ಯವಸ್ಥೆ ಇರುತ್ತದೆ. ಸಾವಿರಾರು ಜನ ಸೇರುವ ನಿರೀಕ್ಷೆ ಇದೆ.

Categories
ನಮ್ಮೂರ್ ಪ್ರಾಬ್ಲಮ್ ಮಲ್ನಾಡ್ ಮಾಹಿತಿ ವಿಶೇಷ ಸುದ್ದಿ

ಶಾರದಾಂಬೆ ಮಡಿಲಿನ ಗ್ರಾಮದಲ್ಲಿ ಚುನಾವಣಾ ಬಹಿಷ್ಕಾರ!

ಶಾರದಾಂಬೆ ಮಡಿಲಿನ ಗ್ರಾಮದಲ್ಲಿ ಚುನಾವಣಾ ಬಹಿಷ್ಕಾರ!
– ನಕ್ಸಲೆಟ್ ಹೆಸರಿನಲ್ಲಿ ಸರ್ಕಾರದ ಅನುದಾನ ನಿರ್ಲಕ್ಷ
– ನೀರಿನ ಹನಿಗೂ, ದಾರಿಯ ಕಲ್ಲಿಗೂ ಹೋರಾಟ
– ದಶಕಗಳ ಜನರ ಮನವಿಗೆ ಬೆಲೆಯೇ ಇಲ್ಲ

ನಮ್ಮೂರ್ ಪ್ರಾಬ್ಲಮ್

NAMMUR EXPRESS NEWS
ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲ್ಲೂಕಿನ ಮರಕಲ್ ಗ್ರಾಮದ ಕಿಗ್ಗ ಊರಿನಿಂದ ಚೆಟ್ಟುಗುಣಿ ಗ್ರಾಮಕ್ಕೆ ಹೋಗುವ ಕಾಲುಸಂಕ ಇಂದಿಗೂ ಜನರ ಬದುಕಿನ ನಾಡಿಯಾಗಿದೆ.
ದಶಕಗಳಿಂದ ಈ ಮಾರ್ಗದ ದುರಸ್ತಿ ಬೇಡಿಕೆಗಳನ್ನು ಗ್ರಾಮಸ್ಥರು ಶಾಸಕರವರೆಗೂ ತಲುಪಿಸಿದರೂ, ಪ್ರತಿಸಾರಿ ಹಿಂತಿರುಗುವ ಉತ್ತರ ಅದು ನಕ್ಸಲೇಟು ಪ್ರದೇಶ, ಅಭಿವೃದ್ಧಿ ಸಾಧ್ಯವಿಲ್ಲ! ಎಂದು ನಿರ್ಲಕ್ಷದಿಂದ ಉತ್ತರ ಕೊಡುತ್ತಿದ್ದಾರೆ.
ಗ್ರಾಮದಲ್ಲಿ 30 ಮನೆಗಳಿದ್ದು ಆದರೆ ಜನರ ಹೋರಾಟ ಮತ್ತು ತಾಳ್ಮೆ ಕಟ್ಟೆಈಗ ಒಡೆಯುತ್ತಿದೆ. ಶಾಲಾ ಮಕ್ಕಳು, ಗರ್ಭಿಣಿಯರು ಹಾಗೂ ರೋಗಿಗಳು ಇದೇ ದುಸ್ಥಿತಿಯ ಕಾಲುಸಂಕದ ಮೇಲೆ ನಡೆಯಬೇಕಾದ ಪರಿಸ್ಥಿತಿ ಇನ್ನೂ ಮುಂದುವರಿದಿದೆ.
ಕಲ್ಲು ಮಣ್ಣು ಮಿಶ್ರಿತ, ಮಳೆಗಾಲದಲ್ಲಿ ಹಾದಿಯೇ ಮಾಯವಾಗುವ ಈ ಮಾರ್ಗವು, ಇಂದು ಮಾನವ ಹಕ್ಕುಗಳನ್ನೇ ಪ್ರಶ್ನಿಸುವ ಮಟ್ಟಕ್ಕೇರಿದೆ.
ಶಾಸಕರು ಹಾಗೂ ಜನ ನಾಯಕರು ಚುನಾವಣೆ ಸಮಯದಲ್ಲಿ ಮಾತ್ರ ಬರುತ್ತಾರೆ, ನಮ್ಮ ಕಷ್ಟ ಕೇಳುವವರು ಯಾರು? ಎಂದು ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಪ್ರತಿ ಬಾರಿ ಹೋರಾಟದ ಮನವಿ, ಮನವಿಯ ಬಳಿಕದ ಮೌನ, ಇವೇ ಚೆಟ್ಟುಗುಣಿಯ ದಿನಚರಿ. ನಾವು ಮತ ಹಾಕಿ ಏನು ಪ್ರಯೋಜನ? ಬದಲಾವಣೆ ಇಲ್ಲದಿದ್ದರೆ ಮತವಿಲ್ಲ ಎಂಬ ಘೋಷಣೆಯೊಂದಿಗೆ ಈ ಬಾರಿ ಚುನಾವಣಾ ಬಹಿಷ್ಕಾರ ಮಾಡಲು ಗ್ರಾಮಸ್ಥರು ನಿರ್ಧರಿಸಿದ್ದಾರೆ.

ಚೆಟ್ಟುಗುಣಿ ಗ್ರಾಮದ ಪರಿಸ್ಥಿತಿ ಕೇಳೋರಿಲ್ಲ

ಚೆಟ್ಟುಗುಣಿ ಗ್ರಾಮದ ಪರಿಸ್ಥಿತಿ ಅಭಿವೃದ್ಧಿಯೆಂಬ ಶಬ್ದಕ್ಕೆ ನಾಚಿಕೆ ತರಿಸುತ್ತದೆ. ಇಲ್ಲಿಯವರೆಗೂ ರಸ್ತೆ ಇಲ್ಲ, ಸಾರಿಗೆ ಇಲ್ಲ, ಕುಡಿಯುವ ನೀರಿನ ಸರಬರಾಜಿಲ್ಲ, ನೆಟ್ವರ್ಕ್ ಸಂಪರ್ಕವಿಲ್ಲ. ಮಳೆ ಬಂದರೆ ಶಾಲಾ ಮಕ್ಕಳು ತರಗತಿಗೆ ಹೋಗದೆ ಮನೆಬದಿಯಲ್ಲಿ ಕಾದು ಕುಳಿತುಕೊಳ್ಳುವ ಪರಿಸ್ಥಿತಿ ಉಂಟಾಗುತ್ತದೆ. ಅನಾರೋಗ್ಯ ಬಂದರೆ ಮೈಲ್ಗಟ್ಟಲೆ ನಡೆದು ಆಸ್ಪತ್ರೆಗೆ ತಲುಪಬೇಕು. ಇಂತಹ ಸ್ಥಿತಿಯಲ್ಲಿ, ಸರ್ಕಾರದ ಯೋಜನೆಗಳು, ಬೃಹತ್ ಘೋಷಣೆಗಳು ಎಲ್ಲವೂ ಕಾಗದದ ಅಕ್ಷರಗಳಷ್ಟೇ.

ಜನರ ತಾಳ್ಮೆಗೆ ಪರೀಕ್ಷೆ ಮಾಡಿದ ರಾಜಕಾರಣಿಗಳು!

ಗ್ರಾಮಸ್ಥರು ಹಲವು ಬಾರಿ ಗ್ರಾಮ ಪಂಚಾಯಿತಿ, ತಾಲೂಕು ಕಚೇರಿ, ಮತ್ತು ಶಾಸಕರ ಮನೆಬಾಗಿಲಿಗೆ ತೆರಳಿ ಮನವಿ ಸಲ್ಲಿಸಿದ್ದಾರೆ. ಜನರ ತಾಳ್ಮೆ ಇದೀಗ ಕೋಪಕ್ಕೆ ತಿರುಗಿದೆ. ಅಭಿವೃದ್ಧಿಯ ಹೆಸರು ಹೇಳುತ್ತಾ ಮತ ಬೇಡುವವರು, ನಮ್ಮ ಕಾಲುಸಂಕದ ಮೇಲಾದರೂ ನಡೆದು ನೋಡಲಿ ಎಂಬ ಸಿಡಿಲುಪದಗಳು ಚೆಟ್ಟುಗುಣಿ ನಿವಾಸಿಗಳಲ್ಲಿ ಕೇಳಿಬರುತ್ತಿದೆ.

ಬುಡಕಟ್ಟು ಬದುಕು, ನಾಳೆಯ ಕನಸು?

ಇಂದಿನ ಡಿಜಿಟಲ್ ಯುಗದಲ್ಲಿ ಎಲ್ಲೆಡೆ 5G ತಂತ್ರಜ್ಞಾನ ಬೆಳೆಯುತ್ತಿದೆ, ಚೆಟ್ಟುಗುಣಿಯ ಜನರು ಇನ್ನೂ 2G ಬದುಕು ನಡೆಸುತ್ತಿದ್ದಾರೆ. ನೀರಿನ ಹನಿಗೂ, ದಾರಿಯ ಕಲ್ಲಿಗೂ ಹೋರಾಟ. ಆಡಳಿತದ ದೃಷ್ಟಿಯಲ್ಲಿ ನಕ್ಸಲೆಟ್ ಪ್ರದೇಶ ಎಂಬ ಹೆಸರಿನಲ್ಲಿ ಅಭಿವೃದ್ಧಿ ನಿಷೇಧದ ಫಲವಾಗಿ ಈ ಗ್ರಾಮಸ್ಥರು ಬುಡಕಟ್ಟು ಸಮುದಾಯಗಳಂತೆಯೇ ಬದುಕು ನಡೆಸಬೇಕಾದ ಪರಿಸ್ಥಿತಿಯಲ್ಲಿದ್ದಾರೆ.

ರಾಜಕಾರಣಿಗಳ ಮೌನ, ಜನರ ಘೋಷಣೆ

ಶೃಂಗೇರಿ ಶಾಸಕರು ಸೇರಿದಂತೆ ಸ್ಥಳೀಯ ಆಡಳಿತದ ನಿರ್ಲಕ್ಷ್ಯದಿಂದ ಬೇಸತ್ತ ಗ್ರಾಮಸ್ಥರು, ಈಗ “ಮತವಿಲ್ಲ” ಎಂಬ ಶಸ್ತ್ರವನ್ನು ಆಯ್ದುಕೊಂಡಿದ್ದಾರೆ. ನಮ್ಮ ಹಾದಿ ಸರಿಪಡಿಸದವರೆಗೂ ಮತ ಹಾಕುವುದಿಲ್ಲ ಎಂಬ ಸ್ಪಷ್ಟ ನಿಲುವಿನಿಂದ ಚುನಾವಣಾ ಬಣ್ಣಕ್ಕೆ ಕಪ್ಪು ಸವರಲು ಗ್ರಾಮಸ್ಥರು ಸಜ್ಜಾಗಿದ್ದಾರೆ. ಚೆಟ್ಟುಗುಣಿ ಗ್ರಾಮವು ಇಂದು ಒಂದು ಪ್ರಶ್ನೆ ಎತ್ತುತ್ತಿದೆ. ನಮ್ಮ ಕಷ್ಟಕ್ಕೆ ಯಾರ ಉತ್ತರ?
ಜನರ ಕಣ್ಣೀರು ಒಣಗುವ ಮುನ್ನ, ಸರ್ಕಾರ ಮತ್ತು ಶಾಸಕರು ನಿಜವಾದ ಅಭಿವೃದ್ಧಿಯ ಹಾದಿ ತೋರಿಸುವ ಸಮಯ ಬಂದಿದೆ.ಇಂದು ಚೆಟ್ಟುಗುಣಿ ಎನ್ನುವ ಈ ಚಿಕ್ಕ ಹಳ್ಳಿಯ ಕೂಗು, ನಾಳೆ ರಾಜ್ಯದ ನಾಚಿಕೆಗಾಗಬಹುದು. ಆಡಳಿತ ಅಧಿಕಾರಿಗಳೇ ಎಚ್ಚರ.!

Categories
ತೀರ್ಥಹಳ್ಳಿ ನಮ್ಮೂರ್ ಪ್ರಾಬ್ಲಮ್ ಮಲ್ನಾಡ್ ಮಾಹಿತಿ ಸುದ್ದಿ

ತೀರ್ಥಹಳ್ಳಿ ತಾಲೂಕು ಆಫೀಸ್ ಮುಂದೆ ಕಳೆ ಹೊಡೆಯುವವರು ಬೇಕಾಗಿದ್ದಾರೆ…!

ತೀರ್ಥಹಳ್ಳಿ ತಾಲೂಕು ಆಫೀಸ್ ಮುಂದೆ ಕಳೆ ಹೊಡೆಯುವವರು ಬೇಕಾಗಿದ್ದಾರೆ…!
* ತಾಲೂಕು ಆಫೀಸ್ ಮುಂದಿನ ಕಸದ ತೋಪಿನಲ್ಲಿ ಅಡಗಿ ಕುಳಿತ ನಾಲ್ಕು ಮುಖದ ಸಿಂಹ
* ತಾಲೂಕು ಕಚೇರಿ ಎದುರು ಕಲೆಯನ್ನು ಹಾಳು ಮಾಡಿದ ಆಡಳಿತ!

NAMMUR EXPRESS NEWS

ವರದಿ:ಉಮೇಶ್ ದೇಮ್ಲಾಪುರ

ತೀರ್ಥಹಳ್ಳಿ: ಒಂದು ಕಾಲದಲ್ಲಿ ಅಧಿಕಾರದ ಪವಿತ್ರ ನೆಲೆ ಎಂದೇ ಕರೆಯಲ್ಪಟ್ಟ ತೀರ್ಥಹಳ್ಳಿ ತಾಲೂಕು ಕಚೇರಿ ಇಂದೀಗ ಕಳೆ-ಕಸದ ಕೋಟೆಯಾಗಿ ಮಾರ್ಪಟ್ಟಿದೆ.
ಕಚೇರಿಯ ಮುಂಭಾಗದಲ್ಲಿ ಹುಲ್ಲು, ಕಳೆ, ಕಸ ಮತ್ತು ನಿರ್ಲಕ್ಷ್ಯದ ಗಿಡಗಳು ಸ್ಪರ್ಧೆ ನಡೆಸುತ್ತಿವೆ. ಒಳಗೆ ಹೋಗುವ ಮುನ್ನವೇ ಸಾರ್ವಜನಿಕರಿಗೆ ತೋರುವ ದೃಶ್ಯ ಇದು ಕಚೇರಿ ಅಲ್ಲ, ಪಾಳು ಬಿದ್ದ ಪಾರ್ಕ್ ಎಂಬ ಭಾವನೆ ಮೂಡಿಸುತ್ತಿದೆ.
ಮಲೆನಾಡಿನ ಸೊಬಗನ್ನು ತೋರಿಸಲು ಒಬ್ಬ ಶ್ರೇಷ್ಠ ಕಲಾವಿದನು ತಮ್ಮ ಶ್ರಮದಿಂದ ಪುತ್ತಳಿಗಳನ್ನು ಉಚಿತವಾಗಿ ನಿರ್ಮಿಸಿ ಕೊಟ್ಟಿದ್ದರೂ, ಅದರ ಮುಂದಿನ ಭಾಗದ ಕಳೆ-ಕಸವು ಆ ಕಲೆಯನ್ನೇ ಮುಚ್ಚಿ ಹಾಕಿದೆ. ತೇಜಸ್ಸು ತೋರುವ ಶಿಲ್ಪಗಳು ಈಗ ಕಳೆಗಳಲ್ಲಿ ಮಣ್ಣಿನ ಬಣ್ಣ ಪಡೆದು, ಕಲಾವಿದನ ಕನಸು ಕಳೆದುಹೋಗಿದೆ. ಕಲೆಗೆ ಗೌರವ ಕೊಡಬೇಕಾದ ತಶೀಲ್ದಾರ್ ಕಚೇರಿಯವರು, ಕಲೆ ಕಾಣದೆ “ಕಳೆ”ಯಲ್ಲೇ ಮುಳುಗಿರುವಂತಾಗಿದೆ. ಅದನ್ನು ಯಾವುದಾರೂ ಸಂಸ್ಥೆಗೆ ಕೊಟ್ಟಲ್ಲಿ ಅದರ ನಿರ್ವಹಣೆ ಮಾಡುತ್ತದೆ. ಆದರೆ ಆ ಬಗ್ಗೆಯೂ ಕಾಳಜಿ ಇಲ್ಲ.
ತೀರ್ಥಹಳ್ಳಿ ತಾಲೂಕು ಕಚೇರಿಯ ಒಳಗೆ ಕಾಲಿಟ್ಟರೆ ಕಸ ಕಡ್ಡಿಗಳು ಸಮಯಕ್ಕೆ ಸರಿಯಾಗಿ ಹಾಜರಾಗದ ಅಧಿಕಾರಿಗಳ ಶಾಂತ ನಿದ್ರೆ ದೃಶ್ಯ ನಿಮ್ಮನ್ನು ಸ್ವಾಗತಿಸುತ್ತದೆ.

ಸರಕಾರಿ ಕಚೇರಿನಾ ಅಥವಾ ಕಸದ ವಿಲೇವಾರಿ ಸ್ಥಳಾನಾ.?

ದಿನದ ಪೂರ್ತಿ ಕೆಲಸದ ಬದಲು, ಕಚೇರಿ ಮಂಟಪದಲ್ಲಿ ಚಹಾ–ಕಥೆ–ನಿದ್ದೆ ಎಂಬ ಅಧಿಕೃತ ನಿಯಮ ಬೇರೂರಿದೆ.
ಸಾರ್ವಜನಿಕರು ತಶೀಲ್ದಾರ್‌ರನ್ನು ಹುಡುಕುವುದಕ್ಕೂ ಮುಂಚೆ ಕಚೇರಿಯೇ ಎಲ್ಲಿ ಇದೆ ಎಂದು ಹುಡುಕಬೇಕಾದ ಪರಿಸ್ಥಿತಿ! ಆಫೀಸ್ ಅಕ್ಕ ಪಕ್ಕ ಮರದ ಕಟ್ಟಿಗೆಗಳು ಕೆಲಸ ಮುಗಿದರೂ ಇನ್ನೂ ತಾಲೂಕು ಕಚೇರಿ ವರಂಡದಲ್ಲಿಯೇ ಹಲವು ದಿನಗಳಿಂದ ಇರುವ ಜಲ್ಲಿ ಮರಳಿನ ಮೂಟೆಗಳು, ಹಂಚು, ಮರದ ನಾಟ, ಹಳೆ ಬೀಗಹಾಕಿದ ಕಟ್ಟಡ, ಯಾವುದೋ ಕಾಲದ ತುಕ್ಕು ಹಿಡಿದು ಯಾವಾಗ ಸಾರ್ವಜನಿಕರ ತಲೆಯ ಮೇಲೆ ಬೀಳಲಿ ಎಂದು ಹವಣಿಸಿ ನಿಂತಿರುವ ಫ್ಲೆಕ್ಸ್ ಬೋರ್ಡ್ ಗಳು,ಕಚೇರಿಯೊಳಗಿನ ವಾತಾವರಣ ನೋಡಿ, ಸಾರ್ವಜನಿಕರಲ್ಲಿ ಪ್ರಶ್ನೆ ಮೂಡುತಿದೆ. ಇದು ಸರಕಾರಿ ಕಚೇರಿನಾ ಅಥವಾ ಕಸದ ವಿಲೇವಾರಿ ಸ್ಥಳಾನಾ.?. ಕಾನೂನು ಪ್ರಕಾರ ಅದನ್ನು ವಿಲೇ ಮಾಡಿ ಇಲ್ಲವೇ ಯಾವುದೊ ಅನಾಥ ಆಶ್ರಮಕ್ಕೋ.. ಸರ್ಕಾರಿ ಶಾಲೆ ಅಭಿವೃದ್ಧಿಗೋ ನೀಡಲಿ ಎಂಬ ಅಭಿಪ್ರಾಯ ಕೇಳಿ ಬಂದಿದೆ.
ಸಾರ್ವಜನಿಕರು ಈ ದೃಶ್ಯ ನೋಡಿ ನಿಟ್ಟುಸಿರು ಬಿಡುವ ಪರಿಸ್ಥಿತಿ ಉಂಟಾಗಿದೆ,

ತಾಲೂಕು ಕೇಂದ್ರದಲ್ಲೇ ಸ್ವಚ್ಛ ಭಾರತ ಮಾಯ!

ಕಡಿಮೆ ಕೆಲಸ, ಹೆಚ್ಚು ವಿಶ್ರಾಂತಿ ಎಂಬ ಮಂತ್ರ ಪಾಲಿಸುವ ತೀರ್ಥಹಳ್ಳಿ ತಾಲೂಕು ಸಿಬ್ಬಂದಿ, ನಿಜಕ್ಕೂ ತಮ್ಮದೇ ರೀತಿಯಲ್ಲಿ ಸ್ವಚ್ಛ ಭಾರತ್ ಅಭಿಯಾನ ಕ್ಕೆ ಹೊಸ ಅರ್ಥ ನೀಡಿದ್ದಾರೆ. ಕಸ ತೆಗೆದು ಹಾಕುವ ಬದಲು ಕಸದ ಜೊತೆ ಸಹಬಾಳ್ವೆ ನಡೆಸುವ ಕಲೆಯನ್ನೇ ಬೆಳೆಸಿದ್ದಾರೆ!
ತಾಲೂಕಿನ ಕೇಂದ್ರ ಕಚೇರಿಯ ಈ ದುಸ್ಥಿತಿ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾಕ್ಷಿ. ಸಿಬ್ಬಂದಿ ಕಳೆ ತೆಗೆದು ಹಾಕುವ ಬದಲು ನಿದ್ದೆ ಬಿಡಿಸಿದರೆ ಸಾಕು, ಕಚೇರಿಗೂ ಜೀವ ಬರಬಹುದು. ಒಟ್ಟಿನಲ್ಲಿ ಕಲೆ, ಸಾಹಿತ್ಯದ ತವರು ತೀರ್ಥಹಳ್ಳಿ ಐಕಾನಿಕ್ ಆಗಿ ಸ್ಥಳೀಯ ಕಲಾವಿದರು, ಸಂಘ ಸಂಸ್ಥೆ ಬಳಸಿಕೊಂಡು ಹೊಸ ರೂಪ ಕೊಡಬೇಕಿದೆ. ಈ ಬಗ್ಗೆ ತಹಸೀಲ್ದಾರ್ ಮಾತ್ರ ಅಲ್ಲ, ಶಾಸಕರು, ಅಧಿಕಾರಿಗಳು ಗಮನ ನೀಡಬೇಕಿದೆ.

Categories
death ಅಪಘಾತ ರಾಜ್ಯ

ದೆಹಲಿಯಲ್ಲಿ ಉಗ್ರರ ಅಟ್ಟಹಾಸ: ಮೂವರು ಡಾಕ್ಟರ್ ಅರೆಸ್ಟ್!

ದೆಹಲಿಯಲ್ಲಿ ಉಗ್ರರ ಅಟ್ಟಹಾಸ: ಮೂವರು ಡಾಕ್ಟರ್ ಅರೆಸ್ಟ್!
– 13 ಮಂದಿ ಜನರ ಬಲಿ ಪಡೆದ ಕಾರು ಬಾಂಬ್ ಸ್ಫೋಟ
– ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ ಘಟನೆ: ಎಲ್ಲೆಡೆ ಸಂತಾಪ

ಪ್ರಾಣ ತೆತ್ತ ಜೀವಗಳಿಗೆ ಭಾವಪೂರ್ಣ ಶ್ರದ್ದಾಂಜಲಿ

NAMMUR EXPRESS NEWS
ನವ ದೆಹಲಿ: ನವ ದೆಹಲಿಯಲ್ಲಿ ಉಗ್ರರು ಅಟ್ಟಹಾಸ ಮೆರೆದಿದ್ದಾರೆ. ಇಡೀ ದೇಶವೇ ಬೆಚ್ಚಿ ಬಿದ್ದಿದೆ. ಉಗ್ರರು ನಡೆಸಿದ ಕಾರ್ ಬಾಂಬ್ ಸ್ಪೋಟಿಸಿದ್ದು 13 ಜನ ಬಲಿ ಆಗಿದ್ದಾರೆ.
ನವ ದೆಹಲಿ ಮೆಟ್ರೋ ನಿಲ್ದಾಣದ ಒಳಭಾಗದ ಗಾಜುಗಳು ಸ್ಫೋಟದಿಂದಾಗಿ ಪುಡಿಪುಡಿಯಾಗಿವೆ. ಘಟನಾ ಸ್ಥಳದಲ್ಲಿ ಸುಮಾರು 22ಕ್ಕೂ ಹೆಚ್ಚು ವಾಹನಗಳು, ಬೈಕ್‌ಗಳು ಮತ್ತು ಸುತ್ತಮುತ್ತಲ ಅಂಗಡಿಗಳು ತೀವ್ರವಾಗಿ ಹಾನಿಗೊಳಗಾಗಿವೆ. ಈ ಘಟನೆಯಲ್ಲಿ 13 ಮಂದಿ ಸಾವನ್ನಪ್ಪಿದ್ದು, ಅನೇಕರು ಗಾಯಗೊಂಡಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಜೈಷೆ ಮಹಮದ್ ಸಂಘಟನೆ ಸೇರಿದ ಪುಲ್ವಾಮ ದಾಳಿ ಮಾಡಿದ ಕಾರು ಮಾದರಿ ದಾಳಿ ಇದಾಗಿದ್ದು, ಫಾರಿದಾಬಾದಿನ ಮೂವರು ವೈದ್ಯರಾದ
ಡಾ. ಅದೀಲ್ ಅಹ್ಮದ್, ಡಾ. ಮುಜಾಮಿಲ್ ಶಕೀಲ್, ಡಾ. ಶಾಹಿನ್ ಎಂಬ ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.
ಸ್ಫೋಟದಲ್ಲಿ ವಾಹನ, ಆಟೋ ಸೇರಿದಂತೆ ಹಲವು ವಾಹನಗಳು ಧಗಧಗಿಸಿವೆ. ಕಾರ್‌ನಲ್ಲಿ ಸ್ಫೋಟಕಗಳನ್ನು ಸಾಗಿಸುವಾಗ ಸಂಭವಿಸಿರಬಹುದು ಎಂದು ದೆಹಲಿ ಪೊಲೀಸರು ಮೇಲ್ನೋಟಕ್ಕೆ ಶಂಕಿಸಿದ್ದಾರೆ.
ಇನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಗಾಯಾಳುಗಳನ್ನು ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ. ಎನ್‌ಐಎ, ಎನ್‌ಎಸ್‌ಜಿ ಮತ್ತು ಬಾಂಬ್ ಸ್ಕ್ವಾಡ್ ತಂಡಗಳು ಸ್ಥಳದಲ್ಲಿ ಪರಿಶೀಲನೆ ನಡೆಸಿವೆ.

ಘಟನೆ ನಡೆದಿದ್ದು ಹೇಗೆ?

ದೆಹಲಿ ಮೆಟ್ರೋ ನಿಲ್ದಾಣದ ಗೇಟ್‌ ನಂಬರ್‌ 1 ರಲ್ಲಿ ನಿಂತಿದ್ದ ಕಾರು ಏಕಾಏಕಿ ಸ್ಫೋಟವಾಗಿತ್ತು. ಸ್ಫೋಟದ ತೀವ್ರತೆಗೆ ಹಲವು ವಾಹನಗಳು ಹೊತ್ತಿ ಉರಿದಿವೆ. ಕಾರು, ಗೂಡ್ಸ್‌ ವಾಹನ, ಆಟೋ ಸೇರಿದಂತೆ ಹಲವು ವಾಹನಗಳು ಧಗಧಗಿಸಿವೆ. ಕಾರ್‌ನಲ್ಲಿ ಸ್ಫೋಟಕಗಳನ್ನು ಸಾಗಿಸುವಾಗ ಸಂಭವಿಸಿರಬಹುದು ಎಂದು ದೆಹಲಿ ಪೊಲೀಸರು ಮೇಲ್ನೋಟಕ್ಕೆ ಶಂಕಿಸಿದ್ದಾರೆ.
ದೆಹಲಿಯ ಸುಭಾಷ್ ಮಾರ್ಗದ ಟ್ರಾಫಿಕ್ ಸಿಗ್ನಲ್ ಸ್ಫೋಟಗೊಂಡ ಕಾರಿನ (ಸಂಖ್ಯೆ HR 26, 7674) ಸುಳಿವು ಪತ್ತೆಯಾಗಿದ್ದು, ಹರಿಯಾಣ ಮೂಲದ ಸಲ್ಮಾನ್ ಎಂಬಾತನನ್ನ ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ.
ಪೊಲೀಸರ ಪ್ರಾಥಮಿಕ ವಿಚಾರಣೆ ವೇಳೆ ತಾನು ಮೊಹಮ್ಮದ್ ನದೀಮ್ ಅನ್ನೋರಿಗೆ ಕಾರು ಮಾರಾಟ ಮಾಡಿರುವುದಾಗಿ ಸಲ್ಮಾನ್ ಹೇಳಿದ್ದಾನೆ. ಸದ್ಯ ವಶಕ್ಕೆ ಪಡೆದಿರುವ ದೆಹಲಿ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಘಟನೆ ಬಗ್ಗೆ ಸಾರ್ವಜನಿಕವಾಗಿ ಆಕ್ರೋಶ ವ್ಯಕ್ತವಾಗುತ್ತಿದೆ.

Categories
ಬೆಂಗಳೂರು ರಾಜ್ಯ

ಮುಖ್ಯಮಂತ್ರಿಯಾಗಿ ಡಿಕೆಶಿ ಪದಗ್ರಹಣಕ್ಕೆ ಸಜ್ಜು!?

ಮುಖ್ಯಮಂತ್ರಿಯಾಗಿ ಡಿಕೆಶಿ ಪದಗ್ರಹಣಕ್ಕೆ ಸಜ್ಜು!?
– ನವೆಂಬರ್ ಕ್ರಾಂತಿ ಆಗುತ್ತಾ…?…ಹಲವು ಕುತೂಹಲ
– ಡಿಕೆಶಿಗೆ ನಾಲ್ಕು ದಿನ ಶುಭ ದಿನಾಂಕ ಕೊಟ್ಟ ಗುರೂಜಿ

NAMMUR EXPRESS NEWS
ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಡಿಕೆಶಿ ಪದಗ್ರಹಣಕ್ಕೆ ಸಜ್ಜು..ನವೆಂಬರ್ ಕ್ರಾಂತಿ ಆಗುತ್ತಾ…..ಹಲವು ಕುತೂಹಲ..ಡಿಕೆಶಿಗೆ ನಾಲ್ಕು ದಿನ ಶುಭ ದಿನಾಂಕ ಕೊಟ್ಟ ಗುರೂಜಿ…!
ಹೀಗೊಂದು ಚರ್ಚೆ ರಾಜಕಾರಣದಲ್ಲಿ ಕೇಳಿ ಬರುತ್ತಿದೆ. ಸಿದ್ದರಾಮಯ್ಯ ಆಪ್ತ ಸಚಿವರು ಎಷ್ಟೇ ಅಪಸ್ವರ ಎತ್ತಿದರೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಿ ನ.21 ಇಲ್ಲವೇ 26ಕ್ಕೆ ಅಧಿಕಾರ ವಹಿಸಿ ಕೊಳ್ಳುವ ಮುಹೂರ್ತ ಫಿಕ್ಸ್ ಆಗಿದೆ ಎನ್ನಲಾಗುತ್ತಿದೆ.
ನಿರ್ದಿಷ್ಟ ದಿನ ಮತ್ತು ಶುಭ ಗಳಿಗೆಯ ಮಾಹಿತಿಯನ್ನು ಶಿವಕುಮಾರ್, ಭಕ್ತಿ- ಭಾವದಿಂದ ನಂಬಿರುವ ತುಮಕೂರು ಜಿಲ್ಲೆಯ ಮಠದ ಗುರುಗಳು, 21 ಹಾಗೂ 26 ಸೇರಿದಂತೆ ನಾಲ್ಕು ದಿನಗಳ ಶುಭ ಗಳಿಗೆಯ ಮುಹೂರ್ತ ದಿನಗಳ ನಿಗದಿಪಡಿಸಿದ್ದಾರೆ.
ಬರುವ ನವೆಂಬರ್ 20ಕ್ಕೆ ಸಿದ್ದ ರಾಮಯ್ಯ ಮುಖ್ಯಮಂತ್ರಿಯಾಗಿ ಎರಡೂವರೆ ವರ್ಷ ಅವಧಿ ಪೂರ್ಣಗೊಳ್ಳಲಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿ ಕೊಳ್ಳುವುದಕ್ಕೂ ಮುನ್ನ ವರಿಷ್ಠರ ಸಮ್ಮುಖದಲ್ಲಿ ತಲಾ ಎರಡೂವರೆ ವರ್ಷಗಳ ಅಧಿಕಾರಾವಧಿ ಸೂತ್ರ ರೂಪಿಸಲಾಗಿತ್ತು. ಅವರ ಅಧಿಕಾರಾವಧಿ ಪೂರ್ಣಗೊಳ್ಳುವ ರಾಜ್ಯದ 34ನೇ ಮುಖ್ಯಮಂತ್ರಿ ಪದಗ್ರಹಣಕ್ಕೆ ಮುಹೂರ್ತ ನಿಗದಿ. ನ.11ಕ್ಕೆ ದೆಹಲಿಗೆ ಡಿಸಿಎಂ ಡಿಕೆಶಿ ಭೇಟಿ; ಈಗಾಗಲೇ ವರಿಷ್ಠರೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ ಎನ್ನಲಾಗಿದೆ.
ಸಮಯ ಹತ್ತಿರವಾಗುತ್ತಿದ್ದಂತೆ ಶಿವಕುಮಾರ್, ಕಳೆದ ಎರಡು ತಿಂಗಳಿನಲ್ಲಿ ಎರಡು- ಮೂರು ಬಾರಿ ಖಾಸಗಿ ಕಾರ್ಯಕ್ರಮ ಹೆಸರಿನಲ್ಲಿ ದೆಹಲಿಗೆ ತೆರಳಿ ವರಿಷ್ಠರನ್ನು ತೆರೆಮರೆಯಲ್ಲಿ ಭೇಟಿ ಮಾಡಿದ್ದರು.
ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿದಂತೆ ಹಲವು ಹಿರಿಯ ಮುಖಂಡ ರು ನೀಡಿರುವ ಭರವಸೆಯಂತೆ ಶಿವಕುಮಾರ್ ಮುಖ್ಯಮಂತ್ರಿ ಯಾಗಿ ಅಧಿಕಾರ ಸ್ವೀಕರಿಸಲು ವೇದಿಕೆ ಸಿದ್ಧಪಡಿಸಿಕೊಳ್ಳುತ್ತಿದ್ದಾರೆ. ಕಳೆದ ಎರಡು-ಮೂರು ದಿನಗಳ ಹಿಂದೆ ಹಠಾತ್ತನೆ ದೆಹಲಿಗೆ ತೆರಳಿದ್ದ ಶಿವ ಕುಮಾರ್ ಕೆಲವು ನಾಯಕರನ್ನು ಭೇಟಿ ಮಾಡಿದ್ದರು, ಇದರ ನಂತರ ಮುಖ್ಯಮಂತ್ರಿ ಗಾದಿಗೇರುವುದು ಖಾತ್ರಿಯಾಗಿದೆ. ಈ ಎಲ್ಲಾ ಬೆಳವಣಿಗೆ ಹಿನ್ನೆಲೆಯಲ್ಲಿ ರಾಜ್ಯದ 34ನೇ ಮುಖ್ಯಮಂತ್ರಿ ಯಾಗಿ ಶಿವಕುಮಾರ್ ಅಧಿಕಾರ ಸ್ವೀಕರಿಸಲು ಅಣಿಯಾಗಿದ್ದಾರೆ ಎನ್ನಲಾಗಿದೆ.
ಈ ಬೆಳವಣಿಗೆಗೆ ಪುಷ್ಟಿ ಎಂಬಂತೆ ಶಿವಕುಮಾರ್ ಅವರ ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಂ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಪೋಸ್ಟ್ ಒಂದು ಹಾಕಿದ್ದು, ಅದರಲ್ಲಿ ಸಂಕ್ಷಿಪ್ತವಾಗಿ ವ್ಯಕ್ತಿ ಪರಿಚಯವನ್ನು ಇಂಗ್ಲೀಷ್‌ನಲ್ಲಿ ನೀಡಲಾಗಿದೆ.
ಬಿಹಾರ ವಿಧಾನಸಭಾ ಚುನಾ ವಣೆಯ ಎರಡನೇ ಹಾಗೂ ಕೊನೆಯ ಹಂತದ ಮತದಾನ ನಡೆ ಯುವ ನ.11 ರಂದು ಶಿವಕುಮಾರ್ ದೆಹಲಿಗೆ ತೆರಳಲಿದ್ದಾರೆ. ಚುನಾವಣಾ ಪ್ರಚಾರ ಮುಗಿದು ಎಲ್ಲ ಮಷ್ಠ ನಾಯಕರು ದೆಹಲಿಗೆ ಹಿಂದಿರು ಗಿರುತ್ತಾರೆ. ಇದೇ ಸಮಯದಲ್ಲೇ ಅಧಿಕಾರ ಹಸ್ತಾಂತರ ಹಾಗೂ ಅಧಿಕಾರ ಸ್ವೀಕಾರ ಸಮಯ ಸೇರಿದಂತೆ ಎಲ್ಲವೂ ನಿಗದಿ ಯಾಗಲಿದೆ ಎಂದು ಮೂಲಗಳು ತಿಳಿಸಿವೆ.

Categories
ಕರಾವಳಿ ಕಾರ್ಕಳ ಕುಂದಾಪುರ ದಕ್ಷಿಣ ಕನ್ನಡ ಮಂಗಳೂರು

ಕರಾವಳಿ ಟಾಪ್ ನ್ಯೂಸ್

ಕರಾವಳಿ ಟಾಪ್ ನ್ಯೂಸ್

* ಬೆಳ್ತಂಗಡಿ: ಧರ್ಮಸ್ಥಳ ಪ್ರಕರಣ; ನಾಲ್ವರಿಗೆ ಮರು ನೋಟೀಸ್

* ಕಾಪು: ಅಕ್ರಮ ಪಟಾಕಿ ದಾಸ್ತಾನು; ಪೊಲೀಸರಿಂದ ದಾಳಿ

* ಕಾರ್ಕಳ: ಕುಡಿತದ ಚಟಕ್ಕೆ ಬಿದ್ದು, ವ್ಯಕ್ತಿ ಆತ್ಮಹತ್ಯೆ

* ಭಟ್ಕಳ: ಟೆಂಡರ್ ಹೆಸರಿನಲ್ಲಿ ಹಣ ಪಡೆದು ವಂಚನೆ

•ಬಂಟ್ವಾ‌ಳ: ಆ್ಯಂಬುಲೆನ್ಸ್ ಸಂಚಾರಕ್ಕೆ ಅಡ್ಡಿ; ವ್ಯಕ್ತಿಯ ಬಂಧನ

* ಮೂಡಬಿದರೆ: ಬಾವಿಗೆ ಬಿದ್ದು ಯುವಕ ಸಾವು

•ಪುತ್ತೂರು: ಕೋಳಿ ಅಂಕದ ಮೇಲೆ ದಾಳಿ

* ಕಡಬ: ಘಟ್ಟದ ಕೆಳಗೆ ಮುಗುಚಿ ಬಿದ್ದ ದಿಬ್ಬಣದ ವಾಹನ

* ಮಂಗಳೂರು: ಕಾರ್ಖಾನೆಯ ತ್ಯಾಜ್ಯದಿಂದ ಎದುರಾಗಿದೆ ಸಮಸ್ಯೆ

* ಬೈಂದೂರು: ಮಂಕಿ ಪಾರ್ಕ್ ಗೆ ಸಾರ್ವಜನಿಕರಿಂದ ಬೇಡಿಕೆ

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್

* ಬೆಳ್ತಂಗಡಿ: ಧರ್ಮಸ್ಥಳ ಪ್ರಕರಣ; ನಾಲ್ವರಿಗೆ ಮರು ನೋಟಸ್

ಬೆಳ್ತಂಗಡಿ: ಧರ್ಮಸ್ಥಳ ಬುರುಡೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಕಳೆದ ಕೆಲವು ದಿನಗಳ ಹಿಂದೆ, ಅಂದರೆ ಅಕ್ಟೋಬರ್ 27ರಂದು ವಿಚಾರಣೆಗೆ ಹಾಜರಾಗುವಂತೆ ಎಸ್ಐಟಿ ತಂಡವು ನಾಲ್ವರಿಗೆ ನೋಟಿಸ್ ನೀಡಿದ್ದು, ನಾಲ್ವರ ಪರವಿರುವ ನ್ಯಾಯವಾದಿಗಳು ಎಸ್ಐಟಿ ಕಛೇರಿಗೆ ಆಗಮಿಸಿ, ಅಧಿಕಾರಿಗಳ ಬಳಿ ವಿಚಾರಣೆಗೆ ಸಮಯಾವಕಾಶವನ್ನು ಕೇಳಲಾಗಿದ್ದರಿಂದ ವಿಚಾರಣೆಗೆ ಹಾಜರಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಅನುಮತಿ ನೀಡಿದ ಅಧಿಕಾರಿಗಳು ಮಹೇಶ್ ಶೆಟ್ಟಿ ತಿಮರೋಡಿಗೆ ಏಳು ದಿನಗಳು ಮತ್ತು ಉಳಿದ ಮೂವರಿಗೆ ಮೂರು ದಿನಗಳ ಕಾಲಾವಕಾಶ ನೀಡಿದ್ದರು. ಇದೀಗ ಸಮಯ ಮುಗಿದಿದ್ದು, ವಿಚಾರಣೆಗೆ ಹಾಜರಾಗುವಂತೆ ಮರು ನೋಟಿಸ್ ನೀಡಲಾಗಿದೆ. ಮರು ನೋಟಿಸ್ ನಲ್ಲಿ ಅಕ್ಟೋಬರ್ 31ರಂದು ವಿಠಲ ಶೆಟ್ಟಿ, ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣನವರ್, ಮತ್ತು ಜಯಂತ್ ಟಿ ನವೆಂಬರ್ ಮೂರರಂದು ವಿಚಾರಣೆಗೆ ಹಾಜರಾಗುವಂತೆ ತಿಳಿಸಲಾಗಿದೆ. ಉಜಿರೆಯ ತಿಮರೋಡಿ ಮನೆ ಮತ್ತು ವಿಠಲ ಗೌಡ ಮನೆಯ ಬಾಗಿಲಿಗೆ ಹಾಗೂ ಬೆಂಗಳೂರಿನಲ್ಲಿ ಜಯಂತ್ ಟಿ ಮತ್ತು ಗಿರೀಶ್ ಮಟ್ಟಣ್ಣನವರ್ ಮನೆಗಳ ಬಾಗಿಲಿಗೆ ನೋಟಿಸ್ ಅಂಟಿಸಲಾಗಿದೆ ಎನ್ನುವ ಮಾಹಿತಿ ಲಭಿಸಿದೆ. ಆದರೆ ಸುಜಾತ ಭಟ್ ಮಾತ್ರ ಅಕ್ಟೋಬರ್ 27ರಂದೇ ಎಸ್ಐಟಿ ಕಛೇರಿಗೆ ಆಗಮಿಸಿ, ವಿಚಾರಣೆಯನ್ನು ಎದುರಿಸಿ ತೆರಳಿದ್ದರು ಎನ್ನಲಾಗಿದೆ.

* ಕಾಪು: ಅಕ್ರಮ ಪಟಾಕಿ ದಾಸ್ತಾನು; ಪೊಲೀಸರಿಂದ ದಾಳಿ

ಕಾಪು: ಮನೆಯಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಪಟಾಕಿಗಳನ್ನು ಅಕ್ರಮವಾಗಿ ದಾಸ್ತಾನು ಇರಿಸಿದ ಹಿನ್ನೆಲೆಯಲ್ಲಿ, ಪೊಲೀಸರು ದಾಳಿ ನಡೆಸಿದ ಘಟನೆ, ಕಳೆದೆರಡು ದಿನಗಳ ಹಿಂದೆ ಮೂಡಬೆಟ್ಟು ಗ್ರಾಮದಲ್ಲಿ ನಡೆದಿದೆ. ಮೂಡಬೆಟ್ಟು ದೇವಸ್ಥಾನದ ಕಡೆಗೆ ತೆರಳುವ ರಸ್ತೆಯಲ್ಲಿರುವ ಕ್ಲೇರಾ ಮೆಂಡೋನ್ಸ್ ಎನ್ನುವವರ ಮನೆಯಲ್ಲಿ ಪಟಾಕಿಗಳನ್ನು ಅಕ್ರಮವಾಗಿ ದಾಸ್ತಾನು ಇರಿಸಲಾಗಿದ್ದು, ಆರೋಪಿಯಾದ ಗೌತಮ್ ಪ್ರಭುವನ್ನು ಸೆರೆಹಿಡಿದಿದ್ದಾರೆ. ಈ ಸಂದರ್ಭದಲ್ಲಿ ಒಟ್ಟು ಎರಡು ಲಕ್ಷ ರೂಪಾಯಿಯಷ್ಟು ಬೆಲೆ ಬಾಳುವ, ವಿವಿಧ ಕಂಪನಿಗಳಿಗೆ ಸೇರಿದ ಪಟಾಕಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

* ಕಾರ್ಕಳ: ಕುಡಿತದ ಚಟಕ್ಕೆ ಬಿದ್ದು, ವ್ಯಕ್ತಿ ಆತ್ಮಹತ್ಯೆ

ಕಾರ್ಕಳ: ಇರ್ವತ್ತೂರು ಗ್ರಾಮದ ಮಹೇಶ್ ಶೆಟ್ಟಿ ಎನ್ನುವವರಿಗೆ ಕುಡಿತದ ಚಟ ವಿಪರೀತವಾಗಿದ್ದು, ಇದರಿಂದ ಬೇಸತ್ತ ಪತ್ನಿ ಮನೆಯನ್ನು ಬಿಟ್ಟು ಹೋಗಿದ್ದರು. ಕುಡಿತದ ಚಟಕ್ಕೆ ಬಲಿಯಾಗಿ ಮತ್ತು ಪತ್ನಿ ತನ್ನನ್ನು ಬಿಟ್ಟು ಹೋಗಿರುವ ಕಾರಣ, ಮನನೊಂದು ಮಹೇಶ್ ಶೆಟ್ಟಿ ಕಳೆದೆರಡು ದಿನಗಳ ಹಿಂದೆ, ರಾತ್ರಿಯ ಸಮಯದಲ್ಲಿ ಮನೆಯ ಸಮೀಪದಲ್ಲಿದ್ದ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುವ ಮೂಲಕ ಸಾವಿಗೆ ಶರಣಾಗಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಕಾರ್ಕಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

* ಭಟ್ಕಳ: ಟೆಂಡರ್ ಹೆಸರಿನಲ್ಲಿ ಹಣ ಪಡೆದು ವಂಚನೆ

ಭಟ್ಕಳ: ವ್ಯಕ್ತಿಯೊಬ್ಬರು ತನಗೆ ಟೆಂಡರ್ ಲಭಿಸಿದ್ದು, ಅದರಲ್ಲಿ ಬರುವ ಲಾಭಾಂಶದಲ್ಲಿ ಸ್ವಲ್ಪ ಪ್ರಮಾಣ ನಿಮಗೆ ನೀಡುತ್ತೇನೆ ಎಂದು ನಂಬಿಸಿ, ಮತ್ತೊಬ್ಬ ವ್ಯಕ್ತಿಯಿಂದ ಹಣ ಪಡೆದು ವಂಚಿಸಿದ ಘಟನೆ ಬೆಳಕಿಗೆ ಬಂದಿದೆ. ಆರೋಪಿಯಾದ ಆಸೀಫ್ ಇಕ್ಬಾಲ್, ಕಳೆದ ಎರಡು ವರ್ಷಗಳ ಹಿಂದೆ, ಮೊಹಮ್ಮದ್ ಶಭಿ ಎನ್ನುವವರಿಗೆ ಮೆಟ್ರೋ ಇನ್ಫೋಟೆಕ್ ಪ್ರೈವೇಟ್ ಲಿಮಿಟೆಡ್ ಎಂಬ ಹೆಸರಿನ ಕಂಪನಿಯ ನಕಲಿ ದಾಖಲೆಗಳನ್ನು ತೋರಿಸಿ, ಇದರ ಪ್ರಾಜೆಕ್ಟ್ 2025ರಲ್ಲಿ ಪ್ರಾರಂಭವಾಗಲಿದ್ದು, 25 ಲಕ್ಷದಷ್ಟು ಹಣವನ್ನು ಹೂಡಿಕೆ ಮಾಡಿದರೆ, ಅದರ ಮೂರು ಪಟ್ಟು ಹಣ ಮರಳಿ ಲಭಿಸುತ್ತದೆ ಎಂದು ತಿಳಿಸಿದ್ದಾರೆ. ಇದನ್ನು ನಂಬಿದ ಮೊಹಮ್ಮದ್ ಶಭಿ ಅವರು ಮೊದಲಿಗೆ 5 ಲಕ್ಷ ರೂಪಾಯಿ ನೀಡಿ, 2023ರ ಜೂನ್ ತಿಂಗಳಿನಲ್ಲಿ 13 ಲಕ್ಷ, ನಂತರ ಒಂದು ಲಕ್ಷ, ಎರಡು ಲಕ್ಷ ಹೀಗೆ ಹಂತ ಹಂತವಾಗಿ ಸುಮಾರು 21 ಲಕ್ಷದಷ್ಟು ಹಣವನ್ನು ನೀಡಿದ್ದಾರೆ. 2025 ಬಂದರೂ, ಪ್ರಾಜೆಕ್ಟ್ ಕುರಿತು ಯಾವುದೇ ಮಾಹಿತಿ ಲಭಿಸದೆ ಕೇಳಿದಾಗ ಆರೋಪಿ ಪ್ರತಿಕ್ರಿಯಿಸಲಿಲ್ಲ. ಕೊಟ್ಟ ಹಣವನ್ನಾದರೂ ಮರಳಿ ನೀಡು ಎಂದರೂ, ಹಿಂತಿರುಗಿಸದೆ ವಂಚಿಸಿದ್ದಾರೆ ಎಂದು ಮೊಹಮ್ಮದ್ ಶಭಿ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಮೊಹಮ್ಮದ್ ಶಭಿ ಅವರ ದೂರಿನ ಆಧಾರದ ಮೇಲೆ ಭಟ್ಕಳ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ.

* ಬಂಟ್ವಾಳ: ಆ್ಯಂಬುಲೆನ್ಸ್ ಸಂಚಾರಕ್ಕೆ ಅಡ್ಡಿ ; ವ್ಯಕ್ತಿಯ ಬಂಧನ

ಬಂಟ್ವಾಳ: ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆಯನ್ನು ಆ್ಯಂಬುಲೆನ್ಸ್ ನಲ್ಲಿ ಕರೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ, ಸ್ಕೂಟಿ ಸವಾರನೊಬ್ಬ ಸಂಚಾರಕ್ಕೆ ಅಡ್ಡಿ ಪಡಿಸಿದ ಘಟನೆ ನಡೆದಿದೆ. ಮಹಿಳೆಯನ್ನು ಪುತ್ತೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಮಂಗಳೂರಿನ ಆಸ್ಪತ್ರೆಗೆ ಆ್ಯಂಬುಲೆನ್ಸ್ ಮೂಲಕ ಕರೆದೊಯ್ಯಲಾಗುತ್ತಿತ್ತು. ಆಗ ಬಿ.ಸಿ. ರಸ್ತೆಯ ಎಸ್ ಜಿ ವೃತ್ತದಿಂದ ಆ್ಯಂಬುಲೆನ್ಸ್ ಮುಂಭಾಗದಲ್ಲಿ, ಸ್ಕೂಟಿಯಲ್ಲಿ ಹೋಗುತ್ತಿದ್ದ ಮೊಹಮ್ಮದ್ ಮನ್ಸೂರ್ ಎನ್ನುವ ವ್ಯಕ್ತಿಯು, ಆ್ಯಂಬುಲೆನ್ಸ್ ನ ಶಬ್ದ ಕೇಳಿ ಬಂದರೂ, ದಾರಿಯನ್ನು ಬಿಟ್ಟುಕೊಡದೆ ಸಂಚಾರಕ್ಕೆ ಅಡ್ಡಿಪಡಿಸಿದ್ದಾನೆ. ವಿಚಾರ ತಿಳಿಯುತ್ತಿದ್ದಂತೆ ಬಂಟ್ವಾಳದ ಪೊಲೀಸರು ಮೊಹಮ್ಮದ್ ಮನ್ಸೂರ್ ನನ್ನು ಪತ್ತೆ ಹಚ್ಚಿ, ಬಂಧಿಸಿದ್ದಾರೆ. ಈ ದೃಶ್ಯವನ್ನು ಮೊಬೈಲ್ ನಲ್ಲಿ ಚಿತ್ರೀಕರಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಮೊಹಮ್ಮದ್ ಮನ್ಸೂರ್ ವಿರುದ್ಧ ಬಂಟ್ವಾಳ ಪೊಲೀಸ್ ಠಾಣೆಯಲ್ಲಿ ಕಾಲಂ 110, 125 ಬಿಎನ್ಎಸ್ ಅನ್ವಯ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ.

* ಮೂಡಬಿದರೆ: ಬಾವಿಗೆ ಬಿದ್ದು ಯುವಕ ಸಾವು

ಮೂಡಬಿದರೆ: ಯುವಕನೊಬ್ಬ ಬಾವಿಗೆ ಬಿದ್ದು ಮೃತಪಟ್ಟ ಘಟನೆ, ಪಡುಮಾರ್ನಾಡು ಗ್ರಾಮದ ಮೊಡಂದೇಲು ಎನ್ನುವಲ್ಲಿ ಕಳೆದೆರಡು ದಿನಗಳ ಹಿಂದೆ ನಡೆದಿದೆ. ಸಮೀಪದಲ್ಲಿ ನಡೆಯುತ್ತಿದ್ದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಬಾಲಕೃಷ್ಣ ಶೆಟ್ಟಿ ಅವರು, ಮರಳಿ ಬರುತ್ತಿದ್ದ ಸಂದರ್ಭದಲ್ಲಿ ತಡೆಗೋಡೆ ಇರದ ಕಾರಣ, ಬಾವಿ ಇರುವುದು ಅವರ ಗಮನಕ್ಕೆ ಬಂದಿಲ್ಲ. ಪರಿಣಾಮವಾಗಿ ಬಾಲಕೃಷ್ಣ ಶೆಟ್ಟಿ ಅವರು ಆಯಾತಪ್ಪಿ ಬಾವಿಯೊಳಗೆ ಬಿದ್ದಿದ್ದಾರೆ. ಘಟನೆ ನಡೆದ ಎರಡು ದಿನಗಳ ನಂತರ ಈ ವಿಚಾರ ಬೆಳಕಿಗೆ ಬಂದಿದೆ. ಇದಕ್ಕೆ ಸಂಬಂಧಿಸಿದಂತೆ ಮೂಡಬಿದರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

* ಪುತ್ತೂರು: ಕೋಳಿ ಅಂಕದ ಮೇಲೆ ದಾಳಿ

ಪುತ್ತೂರು: ಪೊಲೀಸರಿಗೆ ಖಚಿತವಾದ ಮಾಹಿತಿ ಬಂದ ಹಿನ್ನೆಲೆಯಲ್ಲಿ, ಕೋಳಿ ಅಂಕದ ಮೇಲೆ ದಾಳಿ ನಡೆಸಿದ ಘಟನೆ, ಬೆಳ್ಳಿಪ್ಪಾಡಿ ಗ್ರಾಮದ ಕಠಾರ ಸಮೀಪದ ಗುಡ್ಡವೊಂದರಲ್ಲಿ ನಡೆದಿದೆ. ಪೊಲೀಸರು ಆಗಮಿಸುತ್ತಿದ್ದಂತೆ ಕೋಳಿ ಅಂಕದಲ್ಲಿ ಭಾಗಿಯಾಗಿದ್ದವರು ಸ್ಥಳದಿಂದ ಪರಾರಿಯಾಗಿದ್ದಾರೆ. ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಪುತ್ತೂರಿನ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

* ಕಡಬ: ಘಟ್ಟದ ಕೆಳಗೆ ಮುಗುಚಿ ಬಿದ್ದ ದಿಬ್ಬಣದ ವಾಹನ

ಕಡಬ: ಮದುವೆಗೆ ಹೊರಟಿದ್ದ ವಾಹನವೊಂದು ಮುಗುಚಿ ಬಿದ್ದ ಘಟನೆ, ಕಳೆದೆರಡು ದಿನಗಳ ಹಿಂದೆ ಬಿಸಿಲೆ ಘಾಟ್ ನಲ್ಲಿ ನಡೆದಿದೆ. ಸಕಲೇಶಪುರ ತಾಲ್ಲೂಕಿನ ವನಗೂರಿನಿಂದ, ಮದುವೆಗೆಂದು ಕುಕ್ಕೆ ಸುಬ್ರಹ್ಮಣ್ಯಕ್ಕೆ ತೆರಳುತ್ತಿದ್ದಾಗ, ವಾಹನವು ಚಾಲಕನ ನಿಯಂತ್ರಣ ತಪ್ಪಿ, ಸುಮಾರು 20 ಅಡಿ ಎತ್ತರದಿಂದ ಕೆಳಗೆ ಉರುಳಿದೆ. ವಾಹನದಲ್ಲಿ 30 ಜನರಿದ್ದು, ಅವರಲ್ಲಿ 20 ಜನರಿಗೆ ಗಾಯಗಳಾಗಿದ್ದು, ಅದರಲ್ಲೂ ಏಳು ಜನರಿಗೆ ಗಂಭೀರ ಗಾಯಗಳಾಗಿವೆ ಎನ್ನುವ ಮಾಹಿತಿ ಲಭಿಸಿದೆ. ಶಿವರಾಜ್ ಎನ್ನುವವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎನ್ನಲಾಗಿದೆ. ರಸ್ತೆಯ ಪಕ್ಕದಲ್ಲಿ ಚರಂಡಿ ತೆಗೆಯಲಾಗಿದ್ದು, 15 ದಿನಗಳಾದರೂ ಇನ್ನೂ ಮುಚ್ಚಿಲ್ಲ, ಹಾಗೆಯೇ ದುರಸ್ತಿ ಮಾಡದೆ ಬಿಟ್ಟಿರುವ ಜಾಗದಲ್ಲಿ, ಯಾವುದೇ ಫಲಕವನ್ನು ಸಹ ಅಳವಡಿಸದಿರುವುದು ಅಪಘಾತಕ್ಕೆ ಕಾರಣವಾಗಿದೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ. ಮೊದಲೇ ಬಿಸಿಲೆ ಘಾಟ್ ನ ರಸ್ತೆ ಕಿರಿದಾಗಿದ್ದು, ಚರಂಡಿಯನ್ನು ಸಹ ತೆರೆಯಲಾಗಿರುವುದು ಅಪಘಾತಗಳಿಗೆ ಕಾರಣವಾಗುತ್ತಿದೆ. ಹೀಗಾಗಿ ಆದಷ್ಟು ಬೇಗ ತಡೆಗೋಡೆಯನ್ನು ನಿರ್ಮಿಸಲು ಸಂಬಂಧಿತ ವ್ಯಕ್ತಿಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹ ಪಡಿಸಿದ್ದಾರೆ.‌ ಘಟನೆಗೆ ಸಂಬಂಧಿಸಿದಂತೆ ಹಾಸನ ಜಿಲ್ಲೆಯ ಯಳಸೂರು ಗ್ರಾಮದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.‌

* ಮಂಗಳೂರು: ಕಾರ್ಖಾನೆಯ ತ್ಯಾಜ್ಯದಿಂದ ಎದುರಾಗಿದೆ ಸಮಸ್ಯೆ

ಮಂಗಳೂರು: ಕಾರ್ಖಾನೆಯ ಘಟಕದಿಂದ ಹೊರಹೊಮ್ಮುವ ತ್ಯಾಜ್ಯ ನೀರನ್ನು, ಸಾರ್ವಜನಿಕ ತೋಡಿಗೆ ಬಿಡುತ್ತಿರುವುದರಿಂದ ಸ್ಥಳೀಯರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿರುವುದು, ಕಾವಳಪಡೂರು ಗ್ರಾಮದ ಬಂಗೇರಕೆರೆ ಎನ್ನುವಲ್ಲಿ ಬೆಳಕಿಗೆ ಬಂದಿದೆ. ಘಟಕದಲ್ಲಿ ವಸ್ತುಗಳನ್ನು ಉತ್ಪಾದಿಸಿದ ನಂತರ, ಅದರಿಂದ ಉಳಿದುಕೊಳ್ಳುವ ತ್ಯಾಜ್ಯ ಮತ್ತು ಮಲಿನವಾದ ನೀರನ್ನು ಈ ರೀತಿ ಹೊರಬಿಡುತ್ತಿರುವುದರಿಂದ ಕೃಷಿ ಜಮೀನುಗಳ ಚಟುವಟಿಕೆಗೆ ಅಡಚಣೆಯುಂಟಾಗಿದೆ. ಇದರಿಂದ ಸುತ್ತಮುತ್ತಲು ವಾಸವಾಗಿರುವ ಜನರಿಗೆ ದುರ್ವಾಸನೆ ಬರುವುದಷ್ಟೇ ಅಲ್ಲದೆ, ಜಾನುವಾರುಗಳ ಆರೋಗ್ಯದ ಮೇಲೂ ತೀವ್ರತರವಾದ ಆರೋಗ್ಯದ ಸಮಸ್ಯೆ ಉಂಟಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಇಂತಹ ಅಕೃತ್ಯವನ್ನು ತಡೆಹಿಡಿಯಬೇಕೆಂದು ಆಗ್ರಹಪಡಿಸಿದ್ದಾರೆ. ಕಾವಳಪಾಡೂರು ಮತ್ತು ಇರ್ವತ್ತೂರು ಗ್ರಾಮ ಪಂಚಾಯಿತಿಯ ಅಧ್ಯಕ್ಷರು, ಪಿಡಿಒ, ಸ್ಥಳೀಯ ವಾರ್ಡ್ ನ ಸದಸ್ಯರು ಪರಿಶೀಲನೆಯನ್ನು ನಡೆಸಿ, ಕಾರ್ಖಾನೆಗೆ ವೈಜ್ಞಾನಿಕವಾಗಿ ವಿಲೇವರಿ ಮಾಡಬೇಕೆಂದು ಆದೇಶವನ್ನು ಹೊರಡಿಸಿದ್ದರು. ಆದರೆ ಇದುವರೆಗೆ ಕಾರ್ಖಾನೆಯು ಯಾವುದೇ ಕ್ರಮವನ್ನು ಕೈಗೊಂಡಿಲ್ಲ. ಹೀಗಾಗಿ ಸಾರ್ವಜನಿಕರು ಕಾರ್ಖಾನೆಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಪಂಚಾಯಿತಿಗೆ ಪತ್ರ ಬರೆದಿದ್ದಾರೆ.

* ಬೈಂದೂರು: ಮಂಕಿ ಪಾರ್ಕ್ ಗೆ ಸಾರ್ವಜನಿಕರಿಂದ ಬೇಡಿಕೆ

ಬೈಂದೂರು: ಕರಾವಳಿಯ ಬಹುತೇಕ ಭಾಗಗಳಲ್ಲಿ ಮಂಗನ ಕಾಟ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ಇದರ ಬೆನ್ನಲ್ಲೇ ಬೈಂದೂರು ತಾಲ್ಲೂಕಿನ ಹಲವು ಭಾಗಗಳಲ್ಲಿ ಕೃಷಿ ಮತ್ತು ಜನರ ದೈನಂದಿನ ಚಟುವಟಿಕೆಗಳಿಗೆ ಮಂಗಗಳ ಉಪಟಳ ವಿಪರೀತವಾಗಿದೆ. ಒಂದೆಡೆ ಮಳೆಯ ತೀವ್ರತೆಯಿಂದಾಗಿ ಬೆಳೆಯ ಪ್ರಮಾಣ ಕಡಿಮೆಯಾಗಿದ್ದು, ಉಳಿದ ಬೆಳೆಯನ್ನು ಮಂಗಗಳ ಕಣ್ಣಿಗೆ ಬೀಳದಂತೆ ರಕ್ಷಣೆ ಮಾಡುವುದೇ ಹರಸಾಹಸವಾಗಿದೆ.‌ ಮಂಗಗಳು ಗುಂಪು ಗುಂಪಾಗಿ ತೋಟಗಳಿಗೆ ಮುತ್ತಿಗೆ ಹಾಕುತ್ತಿದ್ದು, ತೆಂಗಿನ ಮರ ಹತ್ತಿ ಎಳನೀರನ್ನು ಕುಡಿದು ಕೆಳಕ್ಕೆ ಎಸೆಯುತ್ತಿವೆ, ಒಳ್ಳೆಯ ತೆಂಗಿನ ಫಸಲನ್ನು ನಾಶ ಮಾಡುತ್ತಿವೆ. ಅಷ್ಟೇ ಅಲ್ಲದೆ ಅಡಿಕೆ ತೋಟಗಳಿಗೂ ಸಹ ನುಗ್ಗಿ, ಹಿಂಗಾರವನ್ನು ಹಾಳು ಮಾಡುತ್ತಿದೆ. ಇದರೊಂದಿಗೆ ಬಾಳೆಮರದ ಕಂದು, ಪಪ್ಪಾಯಿ, ಪೇರಲೆ, ತರಕಾರಿಗಳನ್ನು ಸಹ ಧ್ವಂಸ ಮಾಡುತ್ತಿವೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಮಂಕಿ ಪಾರ್ಕ್ ವೊಂದನ್ನು ನಿರ್ಮಿಸಿ, ಮಂಗಗಳಿಗೆ ಪುನರ್ವಸತಿ ಕಲ್ಪಿಸಬೇಕೆಂದು ಆಗ್ರಹಪಡಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖಾಧಿಕಾರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಿದ್ದಾರೆ.

Categories
ತೀರ್ಥಹಳ್ಳಿ ಮಲ್ನಾಡ್

ರಾಷ್ಟ್ರಮಟ್ಟದಲ್ಲಿ ಛಾಪು ಮೂಡಿಸಿದ ವಾಗ್ದೇವಿ ಪಿಯು ಕಾಲೇಜು!

ರಾಷ್ಟ್ರಮಟ್ಟದಲ್ಲಿ ಛಾಪು ಮೂಡಿಸಿದ ವಾಗ್ದೇವಿ ಪಿಯು ಕಾಲೇಜು!
– ಕಬಡ್ಡಿಯಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ವಾಗ್ದೇವಿ ಪಿಯು ಕಾಲೇಜಿನ ಅಮೂಲ್ಯ ಕೆ.ಪಿ
– ಸಾಧಕ ವಿದ್ಯಾರ್ಥಿನಿಗೆ ಅಭಿನಂದನೆ ಸಲ್ಲಿಸಿದ ಆಡಳಿತ ಮಂಡಳಿ

NAMMUR EXPRESS NEWS
ತೀರ್ಥಹಳ್ಳಿ: ಶಿವಮೊಗ್ಗ ಜಿಲ್ಲೆಯ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ಪದವಿಪೂರ್ವ ಕಾಲೇಜುಗಳ ಕಬಡ್ಡಿ ಪಂದ್ಯಾವಳಿಯಲ್ಲಿ
ವಾಗ್ದೇವಿ ಕಾಲೇಜಿನ ವಿದ್ಯಾರ್ಥಿನಿಯಾದ ಕುಮಾರಿ ಅಮೂಲ್ಯ ಕೆಪಿ ಇತ್ತೀಚಿಗೆ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ)ಇವರು ತುಮಕೂರು ಜಿಲ್ಲೆಯಲ್ಲಿ ನಡೆಸಿದ  ಪದವಿ ಪೂರ್ವ ಕಾಲೇಜುಗಳ 2025-26 ನೇ ಸಾಲಿನ ರಾಜ್ಯಮಟ್ಟದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿಯಲ್ಲಿ ಅತ್ಯುತ್ತಮವಾಗಿ ಆಟವನ್ನುಪ್ರರ‍್ಶಿಸಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ವಿದ್ಯಾರ್ಥಿನಿ ಕೊಂಡ್ಲೂರು ಗ್ರಾಮದ ಕೊಗ್ರಿ ನಿವಾಸಿಗಳಾದ ಶ್ರೀ ಅನ್ನಪೂರ್ಣ ಮತ್ತು ಪೂರ್ಣೇಶ್ ದಂಪತಿಗಳ ಪುತ್ರಿಯಾಗಿದ್ದು ಪ್ರಥಮ ಪಿಯುಸಿ ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ.
ಇವಳ ಈ ಸಾಧನೆಯನ್ನು ತರ‍್ಥಹಳ್ಳಿ ತಾಲ್ಲೂಕಿನ ಜನತೆ ವಾಗ್ದೇವಿ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು
ಹಾಗೂ ಸದಸ್ಯರು, ಉಪನ್ಯಾಸಕ ವೃಂದ ಮತ್ತು ಪೋಷಕರು ಅಭಿನಂದಿಸಿ ರಾಷ್ಟ್ರಮಟ್ಟದಲ್ಲಿ ಚಿನ್ನದ ಪದಕವನ್ನು ಮುಡಿಗೇರಿಸಿಕೊಳ್ಳಲಿ ಎಂದು ಶುಭ ಹಾರೈಸಿರುತ್ತಾರೆ.

ಅಮೂಲ್ಯ ಸಾಧನೆಗೆ ಶುಭಾಶಯಗಳು

Categories
ಕೊಪ್ಪ ಚಿಕ್ಕಮಗಳೂರು ಶೃಂಗೇರಿ

ಕಾಡಾನೆ ದಾಳಿ ಮೃತರ ಕುಟುಂಬಕ್ಕೆ ಪರಿಹಾರ ಚೆಕ್ ವಿತರಣೆ

ಕಾಡಾನೆ ದಾಳಿ ಮೃತರ ಕುಟುಂಬಕ್ಕೆ ಪರಿಹಾರ ಚೆಕ್ ವಿತರಣೆ

* ಕಾಡಾನೆ ದಾಳಿಗೆ ಮೃತಪಟ್ಟಿದ್ದ ಹರೀಶ್ ಹಾಗೂ ಉಮೇಶ್
* ಇಬ್ಬರನ್ನು ಕೊಂದ ಕಾಡಾನೆ ಪತ್ತೆ, ಸೆರೆಗೆ ಆದೇಶ

NAMMMUR EXPRESS NEWS
ಶೃಂಗೇರಿ: ತಾಲೂಕಿನ ಕೆರೆಕಟ್ಟೆ ಗ್ರಾ ಪಂ ಯ ಕೆರೆಗದ್ದೆ ಗ್ರಾಮದಲ್ಲಿ ಕಾಡಾನೆ ದಾಳಿಯಿಂದ ಇಬ್ಬರು ಮೃತಪಟ್ಟ ಘಟನೆ ಸಂಬಂಧ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅರಣ್ಯ ಇಲಾಖೆಯ ನಿರ್ಲಕ್ಷ್ಯ ಮತ್ತು ಅಧಿಕಾರಿಗಳ ನಿಷ್ಕ್ರಿಯತೆಯ ಬಗ್ಗೆ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದರು. ಮೃತರ ಕುಟುಂಬಗಳಿಗೆ ನ್ಯಾಯ ಮತ್ತು ಸೂಕ್ತ ಪರಿಹಾರ ನೀಡುವಂತೆ ಒತ್ತಾಯಿಸಿದ್ದಾರೆ.
ಪ್ರತಿಭಟನಾಕಾರರು ಅರಣ್ಯ ಸಚಿವರು, ಜಿಲ್ಲಾಧಿಕಾರಿಗಳು ಮತ್ತು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ತಕ್ಷಣ ಸ್ಥಳಕ್ಕೆ ಭೇಟಿ ನೀಡುವಂತೆ ಆಗ್ರಹಿಸಿ ಪ್ರತಿಭಟಿಸಿದರು. ಅರಣ್ಯ ಇಲಾಖೆ ವನ್ಯಜೀವಿ ನಿರ್ವಹಣೆಯಲ್ಲಿ ವಿಫಲವಾಗಿದೆ ಎಂದು ದೂರಿದರು. ಡಿ.ಎಫ್.ಓ ಜನರ ವಿಶ್ವಾಸ ಕಳೆದುಕೊಂಡಿದ್ದು,ಪ್ರಾಣಿಗಳಿಗೆ ಹಾನಿಯಾದರೆ ಕಾನೂನು ಕ್ರಮ ತೆಗೆದುಕೊಳ್ಳುವ ಸರ್ಕಾರ, ಮನುಷ್ಯ ಜೀವಕ್ಕೆ ಯಾವುದೇ ಬೆಲೆ ನೀಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

* ಮೃತರ ಕುಟುಂಬಕ್ಕೆ ಪರಿಹಾರ ಚೆಕ್ ವಿತರಣೆ
ಸ್ಥಳಕ್ಕಾಗಮಿಸಿದ ಡಿ ಸಿ,ಎಸ್ಪಿ,ಅರಣ್ಯ ಇಲಾಖೆಯ ಅಧಿಕಾರಿಗಳು,ಶಾಸಕ ಟಿ ಡಿ ರಾಜೇಗೌಡ ಪ್ರತಿಭಟನಾ ನಿರತರ ಅಹವಾಲು ಕೇಳಿ ಮೃತರ ಕುಟುಂಬಕ್ಕೆ ಸರ್ಕಾರ ನಿಗದಿಪಡಿಸಿದ 20 ಲಕ್ಷ ಹಾಗೂ ಶಾಸಕ ರಾಜೇಗೌಡ ವತಿಯಿಂದ 1ಲಕ್ಷ ಹಾಗೂ ಚಿಕ್ಕಮಗಳೂರು ಬಿಜೆಪಿ ಜಿಲ್ಲಾಧ್ಯಕ್ಷ ದೇವರಾಜ್‌ ಶೆಟ್ಟಿ ಅವರಿಂದ ಎರಡು ಕುಟುಂಬಕ್ಕೆ ತಲಾ 50,000 ಸಾವಿರ ಪರಿಹಾರವನ್ನು ನೀಡಿದ್ದಾರೆ. ಜೊತೆಗೆ ಎರಡು ಕುಟುಂಬಗಳಿಗೆ 2ಲಕ್ಷ ಪರಿಹಾರದಲ್ಲಿ 4000 ದಂತೆ ಪ್ರತಿ ತಿಂಗಳು ನೀಡಲಾಗುತ್ತದೆ.

* ಇಬ್ಬರನ್ನು ಕೊಂದ ಕಾಡಾನೆ ಪತ್ತೆ, ಸೆರೆಗೆ ಆದೇಶ
ದಾಳಿ ಮಾಡಿದ ನಿನ್ನೆ ರಾತ್ರಿ 7:30 ರ ಸುಮಾರಿಗೆ ದಾಳಿ ಮಾಡಿದ ಸ್ಥಳದಿಂದ ಸ್ವಲ್ಪವೇ ದೂರದಲ್ಲಿರುವ ಶೀರ್ಲು ಎಂಬಲ್ಲಿ ಬಸ್ ಸ್ಟಾಪ್‌ನ ಪಕ್ಕದಲ್ಲಿ ಕಾಣಿಸಿಕೊಂಡು ಗ್ರಾಮಸ್ಥರಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿತ್ತು.ವಿಷಯ ತಿಳಿದ ಅರಣ್ಯ ಇಲಾಖೆಯ ಸಿಬ್ಬಂದಿಗಳು ಸ್ಥಳಕ್ಕಾಗಮಿಸಿ ಆನೆಯನ್ನು ಓಡಿಸುವ ಪ್ರಯತ್ನ ಮಾಡಿದರು ಆದರೆ ಕಾಡಿನೊಳಗೆ ಆನೆ ಹೋಗಿದ್ದು,ಬೆಳಗಿನ ಜಾವ ಶೀರ್ಲು ಗ್ರಾಮದ ಪ್ರದೀಪ್‌ರವರ ತೋಟಕ್ಕೆ ನುಗ್ಗಿ ಅಡಿಕೆ,ಬಾಳೆ ಬೆಳೆ ನಾಶ ಮಾಡಿದೆ.
ಪ್ರತಿಭಟನೆ ಸಮಯದಲ್ಲಿ ಸೇರಿದ್ದ ಪ್ರತಿಭಟನಾಕಾರರು ದಾಳಿ ಮಾಡಿದ ಕಾಡಾನೆಯನ್ನು ಸೆರೆಹಿಡಿಯುವಂತೆ ಸರ್ಕಾರವನ್ನು ಆಗ್ರಹಿಸಿದ್ದರು,ಅದರಂತೆ ನಿನ್ನೆ ರಾತ್ರಿಯೇ ಕಾಡಾನೆ ಸೆರೆಗೆ ಆದೇಶಿಸಿದ್ದು,ಬೆಳಿಗ್ಗೆ ಅರವಳಿಕೆ ತಜ್ಞನರ ತಂಡ ಆಗಮಿಸಿದ್ದು,ದುಬಾರೆ ಹಾಗೂ ಸಕ್ರೇಬೈಲಿನಿಂದ ಕುಮ್ಕಿ ಆನೆಗಳು ಬರಬೇಕಿದೆ.ಆನೆಗಳು ಸಂಜೆ ಹೊತ್ತಿಗೆ ಬರುವ ನಿರೀಕ್ಷೆಯಿದ್ದು ನಂತರ ಕಾರ್ಯಚರಣೆ ಪ್ರಾರಂಭವಾಗಲಿದೆ,ಅಷ್ಟರೊಳಗೆ ಕಾಡಾನೆ ಇನ್ನೆಲ್ಲಿ ದಾಳಿ ಮಾಡಿ ಅವಾಂತರ ಸೃಷ್ಠಿಸಿ,ಬಲಿ ಪಡೆಯತ್ತೋ ಎಂಬ ಆತಂಕ ಗ್ರಾಮಸ್ಥರಲ್ಲಿ ಮನೆಮಾಡಿದೆ.

Categories
ಜ್ಯೋತಿಷ್ಯ ದಿನ ರಾಶಿ ಭವಿಷ್ಯ ರಾಜ್ಯ

ಈ ದಿನದ ರಾಶಿ ಭವಿಷ್ಯ ಹೇಗಿದೆ?

ಈ ದಿನದ ರಾಶಿ ಭವಿಷ್ಯ ಹೇಗಿದೆ?
– ಶನಿ ದೇವರ ಕೃಪೆಯಿಂದ ಯಾವ ರಾಶಿಯವರಿಗೆ ಲಾಭ? ಯಾವ ರಾಶಿಯವರಿಗೆ ನಷ್ಟ?

NAMMUR EXPRESS NEWS
ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು?

** ಮೇಷ ರಾಶಿ :
​ಮೇಷ ರಾಶಿಯವರಿಗೆ ಈ ದಿನ ಶುಭ ಮತ್ತು ಯಶಸ್ಸು ತುಂಬಿರುತ್ತದೆ. ನಿಮಗೆ ಉತ್ತಮ ಉದ್ಯೋಗಾವಕಾಶಗಳು ಸಿಗುತ್ತವೆ. ನಿಮ್ಮ ಆದಾಯ ಮತ್ತು ಖರ್ಚುಗಳನ್ನು ಸಮತೋಲನದಲ್ಲಿಟ್ಟುಕೊಳ್ಳಬೇಕಾಗುತ್ತದೆ, ಇಲ್ಲದಿದ್ದರೆ ಅನಗತ್ಯ ಖರ್ಚುಗಳು ಹೆಚ್ಚಾಗುವ ಸಾಧ್ಯತೆಯಿದೆ. ಇಂದು ನೀವು ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನು ತಪ್ಪಿಸಬೇಕು, ಏಕೆಂದರೆ ಇದು ನಷ್ಟಗಳಿಗೆ ಕಾರಣವಾಗಬಹುದು.

** ವೃಷಭ ರಾಶಿ :
ವೃಷಭ ರಾಶಿಯವರಿಗೆ ಇಂದು ಕೆಲಸದಲ್ಲಿ ಯಶಸ್ಸಿನ ದಿನ. ಆದರೆ ನೀವು ಅದಕ್ಕಾಗಿ ಶ್ರಮಿಸಬೇಕಾಗಬಹುದು. ಹೆಚ್ಚುವರಿ ಆದಾಯದ ಮೂಲಗಳು ಸೃಷ್ಟಿಯಾಗುತ್ತವೆ, ಇದು ನಿಮ್ಮ ಆದಾಯವನ್ನು ಹೆಚ್ಚಿಸುತ್ತದೆ ಮತ್ತು ನಿಮ್ಮ ಆರ್ಥಿಕ ಪರಿಸ್ಥಿತಿ ಮೊದಲಿಗಿಂತ ಉತ್ತಮವಾಗಿರುತ್ತದೆ. ವ್ಯವಹಾರದಲ್ಲಿರುವವರು ಹಣಕಾಸಿನ ವಹಿವಾಟುಗಳಲ್ಲಿ ಎಚ್ಚರಿಕೆಯಿಂದಿರಬೇಕು. ನಿಮ್ಮ ಸಂಗಾತಿಯಿಂದ ನಿಮಗೆ ಉತ್ತಮ ಮತ್ತು ಸಂಪೂರ್ಣ ಬೆಂಬಲ ಸಿಗುತ್ತದೆ.

** ಮಿಥುನ ರಾಶಿ :
ಮಿಥುನ ರಾಶಿಯವರಿಗೆ ಇಂದು ಒಳ್ಳೆಯ ದಿನ. ಹಣಕಾಸಿನ ಪ್ರಯತ್ನಗಳು ಯಶಸ್ವಿಯಾಗುತ್ತವೆ ಮತ್ತು ಲಾಭದ ಅವಕಾಶಗಳು ಹೆಚ್ಚಾಗುತ್ತವೆ. ಆದರೆ, ನೀವು ಸಣ್ಣ ವಿಷಯಗಳಲ್ಲಿ ಸಿಲುಕಿಕೊಳ್ಳುವುದನ್ನು ತಪ್ಪಿಸಬೇಕು. ಆಸ್ತಿಯನ್ನು ಖರೀದಿಸುವ ಬಗ್ಗೆ ಯೋಚಿಸುತ್ತಿರುವವರಿಗೆ ಇಂದು ಉತ್ತಮ ವ್ಯವಹಾರ ಸಿಗಬಹುದು. ಉದ್ಯೋಗಿ ವ್ಯಕ್ತಿಗಳು ಇಂದು ಕೆಲವು ಉತ್ತಮ ಉದ್ಯೋಗದ ಕೊಡುಗೆಗಳನ್ನು ಕೇಳಬಹುದು.

** ಕರ್ಕಾಟಕ ರಾಶಿ :
ಕರ್ಕಾಟಕ ರಾಶಿಯವರು ಇಂದು ಕೆಲವು ಸವಾಲುಗಳನ್ನು ಎದುರಿಸಬಹುದು. ಈ ಸಮಯದಲ್ಲಿ, ನೀವು ಕೆಲವು ವಿಷಯಗಳನ್ನು ಬಹಳ ವಿವೇಕದಿಂದ ಯೋಚಿಸಬೇಕಾಗುತ್ತದೆ. ದೀರ್ಘಕಾಲದಿಂದ ಕೆಲಸ ಬಾಕಿ ಇರುವವರು ಇಂದು ಪೂರ್ಣಗೊಳ್ಳಬಹುದು. ನಿಮ್ಮ ಆರ್ಥಿಕ ಪರಿಸ್ಥಿತಿಯಲ್ಲಿ ಇಂದು ಗಮನಾರ್ಹ ಬದಲಾವಣೆಗಳು ಸಂಭವಿಸಬಹುದು.

** ಸಿಂಹ ರಾಶಿ :
ಸಿಂಹ ರಾಶಿಯವರು ಇಂದು ಇತರರ ವ್ಯವಹಾರಗಳಲ್ಲಿ ಅನಗತ್ಯವಾಗಿ ಭಾಗಿಯಾಗುವುದನ್ನು ತಪ್ಪಿಸಬೇಕು. ಈ ದಿನವು ನಿಮಗೆ ಕೆಲಸದಲ್ಲಿ ಒಳ್ಳೆಯದಾಗಿರುವುದಿಲ್ಲ, ಏಕೆಂದರೆ ನೀವು ಕೆಲವು ತೊಂದರೆಗಳನ್ನು ಎದುರಿಸಬಹುದು. ವೈವಾಹಿಕ ಜೀವನದಲ್ಲಿ, ಪ್ರೀತಿ ಮತ್ತು ವಿಶ್ವಾಸ ಬಲವಾಗಿರುತ್ತದೆ. ನಿಮ್ಮ ಮಾತು ಮತ್ತು ಕೋಪದಲ್ಲಿ ನೀವು ಸಂಯಮವನ್ನು ತೋರಿಸಬೇಕಾಗುತ್ತದೆ.

** ಕನ್ಯಾ ರಾಶಿ :
ಇಂದು ನಿಮ್ಮ ಆದಾಯದ ಮೂಲಗಳು ಹೆಚ್ಚಾಗಬಹುದು, ಆದರೆ ನಿಮ್ಮ ಶತ್ರುಗಳು ಸಹ ಹೆಚ್ಚಾಗಬಹುದು. ಇದಲ್ಲದೆ, ನೀವು ನಿಮ್ಮ ಆರೋಗ್ಯದ ಬಗ್ಗೆ ಜಾಗರೂಕರಾಗಿರಬೇಕು. ರಾಜಕೀಯದಲ್ಲಿ ನಿಮ್ಮ ನಿರಂತರ ಪ್ರಯತ್ನಗಳು ಫಲ ನೀಡಬಹುದು. ನಿಮಗೆ ಉನ್ನತ ಸ್ಥಾನ ಸಿಗಬಹುದು. ಹೊಸ ಅವಕಾಶಗಳು ಸಿಗಬಹುದು. ಗೌರವ ಹೆಚ್ಚಾಗಬಹುದು ಮತ್ತು ನಿಮಗೆ ಹೆಚ್ಚುವರಿ ಜವಾಬ್ದಾರಿಗಳನ್ನು ನೀಡಬಹುದು.

** ತುಲಾ ರಾಶಿ :
​ತುಲಾ ರಾಶಿಯವರಿಗೆ ಇಂದು ಶುಭ ದಿನ. ನಿಮ್ಮ ಕುಟುಂಬದ ಸದಸ್ಯರಿಂದ ನಿಮಗೆ ಒಳ್ಳೆಯ ಸುದ್ದಿ ಬರಬಹುದು. ಹಳೆಯ ಸ್ನೇಹಿತರನ್ನು ಭೇಟಿಯಾಗಬಹುದು. ಇಂದು ನೀವು ಬೇರೆಯವರ ಬಳಿ ಕೆಲಸ ಮಾಡಬೇಕಾಗಬಹುದು. ಹೆಚ್ಚುವರಿಯಾಗಿ, ನಿಮಗೆ ತಿಳಿದಿರುವ ಯಾರಾದರೂ ಸಾಲ ಕೇಳುತ್ತಾ ನಿಮ್ಮ ಬಳಿಗೆ ಬರಬಹುದು. ನಿಮ್ಮ ರಾಜಕೀಯ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಹೊಸ ಸಂಪರ್ಕಗಳಿಂದ ನೀವು ಪ್ರಯೋಜನ ಪಡೆಯುತ್ತೀರಿ.

** ವೃಶ್ಚಿಕ ರಾಶಿ :
ವೃಶ್ಚಿಕ ರಾಶಿಯವರು ಇಂದು ಉತ್ಸಾಹದಿಂದ ತುಂಬಿರುತ್ತಾರೆ. ಕೆಲಸದಲ್ಲಿ ನಿಮ್ಮ ಇಚ್ಛೆಯಂತೆ ಕೆಲಸ ಮಾಡಲು ನಿಮಗೆ ಸಾಧ್ಯವಾಗುತ್ತದೆ. ಮನೆಯಲ್ಲಿ ಕೆಲವು ಶುಭ ಅಥವಾ ಧಾರ್ಮಿಕ ಕಾರ್ಯಕ್ರಮಗಳು ಇರಬಹುದು, ಇದಕ್ಕೆ ಗಮನಾರ್ಹ ಖರ್ಚು ಬೇಕಾಗಬಹುದು. ನೀವು ಅನಗತ್ಯವಾಗಿ ಆತುರಪಡಬೇಕಾಗಬಹುದು. ನೀವು ಯಾವುದೇ ಅಪಾಯಕಾರಿ ಉದ್ಯಮಗಳನ್ನು ತಪ್ಪಿಸಬೇಕು. ಆರ್ಥಿಕವಾಗಿ, ಇಂದು ಖರ್ಚಿನ ದಿನವಾಗಿರುತ್ತದೆ.

** ಧನಸ್ಸು ರಾಶಿ :
ಧನು ರಾಶಿಯವರಿಗೆ ಇಂದು ಮಿಶ್ರ ದಿನವಾಗಿರುತ್ತದೆ. ನೀವು ಕೆಲವು ವಿಷಯಗಳಲ್ಲಿ ಯಶಸ್ಸನ್ನು ಅನುಭವಿಸಬಹುದು, ಆದರೆ ಇತರ ವಿಷಯಗಳಲ್ಲಿ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ವಿದ್ಯಾರ್ಥಿಗಳು ತಮ್ಮ ಅಧ್ಯಯನ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಹೆಚ್ಚು ಶ್ರಮಿಸಬೇಕಾಗುತ್ತದೆ. ವ್ಯವಹಾರದಲ್ಲಿ ತೊಡಗಿರುವವರು ಉತ್ತಮ ಲಾಭವನ್ನು ಪಡೆಯಬಹುದು.

** ಮಕರ ರಾಶಿ :
ಮಕರ ರಾಶಿಯವರಿಗೆ ಇಂದು ಒಳ್ಳೆಯ ದಿನವಾಗಿರುತ್ತದೆ. ನೀವು ಕೆಲವು ಒಳ್ಳೆಯ ಸುದ್ದಿಗಳನ್ನು ಕೇಳಬಹುದು. ಈ ಸಮಯದಲ್ಲಿ ಅಪೂರ್ಣ ಕಾರ್ಯಗಳು ಪೂರ್ಣಗೊಳ್ಳುತ್ತವೆ. ಇತರರೊಂದಿಗೆ ಪಾಲುದಾರಿಕೆಯಲ್ಲಿರುವವರು ದೀರ್ಘಕಾಲದಿಂದ ಬಾಕಿ ಇರುವ ಒಪ್ಪಂದವನ್ನು ಅಂತಿಮಗೊಳಿಸಬಹುದು. ನೀವು ಹಣಕಾಸಿನ ವಹಿವಾಟುಗಳಲ್ಲಿ ಜಾಗರೂಕರಾಗಿರಬೇಕು. ಆರ್ಥಿಕ ಲಾಭಗಳು ಹೆಚ್ಚಾಗುತ್ತವೆ ಮತ್ತು ನೀವು ಎಲ್ಲೋ ಹೆಚ್ಚುವರಿ ಹಣವನ್ನು ಪಡೆಯಬಹುದು.

** ಕುಂಭ ರಾಶಿ :
ಕುಂಭ ರಾಶಿಯವರಿಗೆ ಇಂದು ಸಾಮಾನ್ಯ ದಿನವಾಗಿರುತ್ತದೆ. ಉದ್ಯೋಗದಲ್ಲಿರುವವರು ಕೆಲಸದಲ್ಲಿ ಹೆಚ್ಚಿನ ಕೆಲಸದ ಒತ್ತಡವನ್ನು ಎದುರಿಸಬೇಕಾಗುತ್ತದೆ, ಇದು ವಿವಿಧ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಇಂದು, ನೀವು ಹೆಚ್ಚುವರಿ ಆದಾಯ ಮತ್ತು ಆರ್ಥಿಕ ಲಾಭವನ್ನು ಪಡೆಯಬಹುದು. ಆದರೆ, ನೀವು ನಿಮ್ಮ ಆದಾಯ ಮತ್ತು ಖರ್ಚುಗಳನ್ನು ಸಮತೋಲನಗೊಳಿಸಬೇಕಾಗುತ್ತದೆ.

** ಮೀನ ರಾಶಿ :
ಮೀನ ರಾಶಿಯವರು ತಮ್ಮ ಅಪೂರ್ಣ ಕಾರ್ಯಗಳ ಮೇಲೆ ಗಮನಹರಿಸಲು ಇಂದು ಸಮಯ ತೆಗೆದುಕೊಳ್ಳಬೇಕು. ಪ್ರಸ್ತುತ ಆರ್ಥಿಕ ನಿರ್ಬಂಧಗಳ ಬಗ್ಗೆ ಚಿಂತಿತರಾಗಿರುವವರು ಪರಿಹಾರವನ್ನು ಕಂಡುಕೊಳ್ಳಬಹುದು. ಇಂದು ನೀವು ನಿಮ್ಮ ಆಸ್ತಿಯಿಂದ ಪ್ರಯೋಜನ ಪಡೆಯುತ್ತೀರಿ. ಆದಾಗ್ಯೂ, ಯಾವುದೇ ಒಪ್ಪಂದಗಳನ್ನು ಅಂತಿಮಗೊಳಿಸುವಾಗ ಜಾಗರೂಕರಾಗಿರಿ. ಕೆಲವು ಮಕ್ಕಳಿಗೆ ಸಂಬಂಧಿಸಿದ ಸಮಸ್ಯೆಗಳು ನಿಮ್ಮನ್ನು ವಿಚಲಿತಗೊಳಿಸಬಹುದು.