Categories
ರಾಜಕೀಯ

ರೈತರ ಪರವಾಗಿ ನ.7ರಿಂದ “ಕಲ್ಯಾಣ ನಡಿಗೆ”!

  • ಕಸ್ತೂರಿ ರಂಗನ್ ವರದಿ ವಿರುದ್ಧ ಪಾದಯಾತ್ರೆ
  • ಮಂಜುನಾಥ ಗೌಡರ ಎರಡನೇ ಇನ್ನಿಂಗ್ಸ್ ಶುರು!?

ತೀರ್ಥಹಳ್ಳಿ: ಕಸ್ತೂರಿ ರಂಗನ್ ವರದಿಯನ್ನು ಅಸಮರ್ಪಕವಾಗಿ ಜಾರಿ ಮಾಡುವ ಮೂಲಕ ಮಲೆನಾಡಿನ ಜನರ ಬದುಕಿನ ಮೇಲೆ ಬರೆ ಎಳೆಯಲು ಹೊರಟಿರುವ ಸರ್ಕಾರಗಳ ವಿರುದ್ಧ ಇದೀಗ ಕಸ್ತೂರಿ ರಂಗನ್ ವರದಿ ವಿರೋಧಿ ಹೋರಾಟ ಸಮಿತಿ ಪಾದಯಾತ್ರೆ ಹೋರಾಟಕ್ಕೆ ಮುಂದಾಗಿದೆ.


ಸಹಕಾರಿ ನಾಯಕ ಡಾ.ಆರ್.ಎಂ.ಮಂಜುನಾಥ ಗೌಡರ ನಾಯಕತ್ವದಲ್ಲಿ ನ.7ರ ಬೆಳಗ್ಗೆ 8ರಿಂದ ಪಾದಯಾತ್ರೆ ಬಿದರಗೋಡು ಶ್ರೀರಾಮ ಮಂದಿರದಿಂದ ಶುರುವಾಗಲಿದೆ. ನ.8 ಮತ್ತು 9ರಂದು ಪಾದಯಾತ್ರೆ ನಡೆದು ನ.9ರ ಬೆಳಿಗ್ಗೆ ತೀರ್ಥಹಳ್ಳಿ ತಾಲೂಕು ಕಚೇರಿ ಮುಂಭಾಗ ಬಹಿರಂಗ ಸಭೆ ನಡೆಯಲಿದೆ.


ಪಾದಯಾತ್ರೆ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಮಂಜುನಾಥ ಗೌಡ, 2018ರಲ್ಲಿ ವಿಧಾನಸಭಾ ಚುನಾವಣೆ ಸಂದರ್ಭ ಶಾಂತವೇರಿ ಗೋಪಾಲ ಗೌಡರ ಊರಿಂದ ಪಾದಯಾತ್ರೆ ಮಾಡಿದ್ದೇವೆ. ಕಸ್ತೂರಿ ರಂಗನ್ ವರದಿ ವಿರುದ್ದ ಕೇರಳ ಮಾದರಿ ನಿಯಮ ಜಾರಿ ಹೋರಾಟ, ಎಸಿಎಫ್ ಕಚೇರಿ ಎದುರು ಹೋರಾಟ ಮಾಡಿದ್ದೇವೆ. ಎಲ್ಲೆಡೆ ಹೋರಾಟ ನಡೆಯುತ್ತಿದ್ದರೂ ಸರ್ಕಾರಗಳು ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ ಎಂದು ದೂರಿದರು.


ಕಸ್ತೂರಿ ರಂಗನ್ ವರದಿ ಆಘಾತಕಾರಿ. ಮಲ್ಟಿ ನ್ಯಾಷನಲ್ ಕಂಪನಿ ಒತ್ತಡದಿಂದ ರೈತರನ್ನು, ಬಗರ್ ಹುಕುಂ ಒತ್ತುವರಿದಾರರನ್ನು ಒಕ್ಕಲೆಬ್ಬಿಸುವ ಕೆಲಸ ನಡೆಯುತ್ತಿದೆ. ಯಾವ ಸರ್ಕಾರ ಈ ಬಗ್ಗೆ ಕ್ರಮ ಕೈಗೊಂಡಿಲ್ಲ. ವರದಿ ತಿದ್ದುಪಡಿ ಆಗಿಲ್ಲ. ಕೇರಳ ಮಾದರಿ ಆಗಬೇಕು. ಯಾವ ರೈತರಿಗೂ ತೊಂದರೆ ಆಗಬಾರದು. ರಾಜ್ಯದ ಜನತೆಗೆ ತೊಂದರೆ ಆಗಿದೆ,ಪಕ್ಷಾತೀತವಾಗಿ ಮಾಡಬೇಕೆಂದು ಈ ಹೋರಾಟ ಮಾಡುತ್ತಿದ್ದೇವೆ. ರಾಜ್ಯದ ಪ್ರಮುಖರು, ರೈತರ ನಾಯಕರು ಪಾಲ್ಗೊಳ್ಳಲಿದ್ದಾರೆ. ಈ ಹೋರಾಟ ಸರ್ಕಾರದ ವಿರೋಧಿ ಅಲ್ಲ, ಯೋಜನೆ ಹಾನಿ ಬಗ್ಗೆ ರೈತರಿಗೆ ಮನವರಿಕೆ ಮಾಡಿ ಕೊಡುವುದಾಗಿದೆ ಎಂದು ಹೇಳಿದರು.


ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಉದ್ಘಾಟನೆ ಮಾಡಲಿದ್ದಾರೆ. ಯುವ ನಾಯಕ ಮಧು ಬಂಗಾರಪ್ಪ, ಹಿರಿಯ ರೈತ ಹೋರಾಟಗಾರ ಕಡಿದಾಳ್ ಶಾಮಣ್ಣ ಸೇರಿದಂತೆ ಅನೇಕರು ಭಾಗಿಯಾಗಲಿದ್ದಾರೆ. ಯೋಜನೆ ಬಗ್ಗೆ ಗೋಷ್ಠಿಗಳನ್ನು ಕೂಡ ಆಯೋಜನೆ ಮಾಡಲಾಗುವುದು. ಇದು ಗಿಮಿಕ್ ಪಾದಯಾತ್ರೆ ಅಲ್ಲ, ನ್ಯಾಯಯುತ ಹೋರಾಟ ಎಂದು ಅವರು ಹೇಳಿದರು.


ಶೆಟ್ಟಿಹಳ್ಳಿ, ಶರಾವತಿ ಸೇರಿ ಅನೇಕ ಕಡೆ ತೊಂದರೆ ಆಗಿದೆ. ಇನ್ನು ಮುಂದೆ ನಮ್ಮೂರು ಕೂಡ ಹೀಗೆ ಆಗಲಿದೆ. ಹಿರಿಯ ಹೋರಾಟಗಾರರು, ಯುವ ಜನತೆ ಭಾಗಿಯಾಗಬೇಕು ಎಂದು ಮನವಿ ಮಾಡಿದ್ದಾರೆ.


ವರದಿ ವಿರೋಧಿಸಿ ಜನವರಿಯಲ್ಲಿ ಹೊಸನಗರದ ನಿಟ್ಟೂರಿನಿಂದ ಒಂದು ಪಾದಯಾತ್ರೆ ಹಮ್ಮಿಕೊಳ್ಳಲು ನಿರ್ಧಾರ ಮಾಡಲಾಗಿದೆ. ಸಾರ್ವಜನಿಕ ಹೋರಾಟಕ್ಕೆ ಧುಮುಕುತ್ತೇನೆ. ನಿರಂತರ ಹೋರಾಟ ಮಾಡುತ್ತೇನೆ. ಜನರ ಜತೆ ಇರುತ್ತೇನೆ. ಶಾಸಕರು, ಸಂಸದರ ದಪ್ಪ ಚರ್ಮಕ್ಕೆ ಮುಟ್ಟಲಿ ಎಂಬುದು ನಮ್ಮ ಉದ್ದೇಶ. ವರದಿ ತಿದ್ದುಪಡಿ ಆಗಲೇಬೇಕು. ಇದಕ್ಕೆ ನಾನು ಹೋರಾಟಕ್ಕೆ ಮುಂದಾಗಿದ್ದೇನೆ. ವರದಿಯ ವಿರೋಧ ಇಲ್ಲ. ಇರುವ ಅರಣ್ಯ ಉಳಿಸಿಕೊಂಡು ರೈತರ ಪರ ಇರೋಣ. ಮಲೆನಾಡು ಉಳಿಬೇಕು, ರೈತರು ಬದುಕಬೇಕು ಎಂದರು.


ಡಿಸಿಸಿ ಬ್ಯಾಂಕ್ ಬಿಟ್ಟು ಜನರ ಜತೆಗೆ ಸಾರ್ವಜನಿಕ ವೇದಿಕೆಗೆ ಬಂದಿದ್ದೇನೆ. ಇನ್ನು ಸಕ್ರಿಯವಾಗಿ ಜನರ ಜತೆ ಇರುತ್ತೇನೆ ಎಂದು ಗೌಡರು ಹೇಳಿದರು. ಜೆಡಿಎಸ್ ಪಕ್ಷದ ಅಧ್ಯಕ್ಷ ಸುಂದರೇಶ್, ಕೊಲ್ಲೂರಯ್ಯ, ರಾಮಕೃಷ್ಣ, ಸುಷ್ಮಾ ಸಂಜಯ್, ಹೆಬ್ಬುಲಿಗೆ ಉಮೇಶ್, ಇಲಿಯಾಸ್, ರಾಘವೇಂದ್ರ ಶೆಟ್ಟಿ, ಕಲಗೋಡು ರತ್ನಾಕರ್, ಜಿನಾ ವಿಕ್ಟರ್, ಮಟ್ಟಿನಮನೆ ರಾಮಚಂದ್ರ, ರಫೀಕ್, ಶಿವು, ನಾಗರಾಜ್ ಪೂಜಾರಿ, ಬಿ. ಟಿ. ಬಸವರಾಜ್, ವಿಕ್ರಂ ಶೆಟ್ಟಿ, ಅರುಣ್ ಆರಗ ಇತರರು ಇದ್ದರು.

Categories
ಮಲ್ನಾಡ್

ಮಳೆ..ಬಿಸಿಲು..ಚಳಿ..!

  • ಮಲೆನಾಡಿನಲ್ಲಿ ಹವಾಮಾನದ ಆತಂಕ
  • ಅಡಿಕೆ ಕೊಯ್ಲು ಶುರು: ಕೃಷಿಕರಿಗೆ ಸಂಕಟ!

ಮಲೆನಾಡು: ಕಳೆದ ಕೆಲವು ವಾರಗಳಿಂದ ಮಲೆನಾಡಿನಲ್ಲಿ ಹವಾಮಾನ ವೈಪರಿತ್ಯ ಜನರನ್ನು ಕಂಗಾಲಾಗಿಸಿದೆ. ಒಂದು ಕಡೆ ಪದೇ ಪದೇ ಮಳೆ. ಇತ್ತ ಚಳಿ, ಮಧ್ಯಾಹ್ನ ಬಿಸಿಲು ಮತ್ತು ಉರಿ ಶಕೆ ಮಲೆನಾಡು ಭಾಗದ ಕೃಷಿಕರಿಗೆ ಆತಂಕ ತಂದಿದೆ.


ಶನಿವಾರ, ಭಾನುವಾರ ಕೂಡ ಮಲೆನಾಡಿನ ಬಹುತೇಕ ಕಡೆ ಮಳೆಯಾಗಿದೆ. ಈಗಾಗಲೇ ಅಡಿಕೆ ಮತ್ತು ಕೆಲವೆಡೆ ಭತ್ತದ ಕೊಯ್ಲು ಶುರುವಾಗಿದೆ. ಒಂದು ಕಡೆ ಕರೋನಾ ಕಾರಣದಿಂದ ಕೆಲವು ಕೆಲಸಗಳು ನಿಂತಿವೆ. ಇದೀಗ ಮಳೆ ಕಾರಣ ಅಡಿಕೆ ಕೊಯ್ಲು ತಡವಾಗಿ ಅಡಿಕೆ ತೋಟಗಳಲ್ಲಿ ಅಡಿಕೆ ಗೋಟಾಗಿ ಉದುರುತ್ತಿದೆ. ಇನ್ನೊಂದು ಕಡೆ ಅಡಿಕೆ ಮತ್ತು ಕಾಳು ಮೆಣಸಿಗೆ ರೋಗ ಬಾಧೆ ರೈತರಿಗೆ ದೊಡ್ಡ ತಲೆನೋವಾಗಿದೆ.


ಕಳೆದ ಕಲೆವು ವಾರಗಳಿಂದ ಮಳೆ, ಮೋಡ ರೈತರನ್ನು ಗೊಂದಲದಲ್ಲಿಟ್ಟಿದೆ. ಹೀಗಾಗಿ ಆನೇಕ ರೈತರು ಅಡಿಕೆ ಕೊನೆ ತೆಗೆದಿಲ್ಲ. ಇನ್ನು ಹಲವರು ತೆಗದರೂ ಒಣಗಿಸಲು ಸಾಧ್ಯವಾಗುತ್ತಿಲ್ಲ. ಮಳೆಯ ಕಾರಣ ರೈತನಿಗೆ ಎಲ್ಲಾ ರೀತಿಯಲ್ಲೂ ಸಂಕಟ ಶುರುವಾಗಿದೆ.
ಮಳೆ, ಚಳಿ, ಶಕೆಯಿಂದ ಕಾಯಲೆಗಳು ಜಾಸ್ತಿಯಾಗುತ್ತಿವೆ. ಹೀಗಾಗಿ ಆರೋಗ್ಯದ ಬಗ್ಗೆ ಗಮನವಹಿಸುವುದು ಅಗತ್ಯ.

Categories
ಮಲ್ನಾಡ್

ತೀರ್ಥಹಳ್ಳಿ ಟಿಎಪಿಸಿಎಂಎಸ್ “ಚುನಾವಣೆ ರಂಗು”!

  • ಸಹಕಾರ ಭಾರತಿಗೆ ಬೆಂಬಲ ನೀಡಲು ಆರಗ ಮನವಿ
  • ರೈತರ ಅಭಿವೃದ್ಧಿಗೆ ಮತ್ತೆ ನಾಗರಾಜ ಶೆಟ್ಟಿ ಸಾರಥ್ಯ?

ತೀರ್ಥಹಳ್ಳಿ: ತೀರ್ಥಹಳ್ಳಿ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಚುನಾವಣೆ ನ.5ರಂದು ನಡೆಯಲಿದ್ದು, ಸಹಕಾರ ಭಾರತಿಯ 8 ಮಂದಿಗೆ ಷೇರುದಾರರು ಬೆಂಬಲ ನೀಡಬೇಕೆಂದು ಶಾಸಕ ಆರಗ ಜ್ಞಾನೇಂದ್ರ ಷೇರುದಾರರಲ್ಲಿ ಮನವಿ ಮಾಡಿದ್ದಾರೆ.
ತೀರ್ಥಹಳ್ಳಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಆರಗ ಅವರು, ಟಿಎಪಿಸಿಎಂಎಸ್ ಸುಮಾರು 30 ವರ್ಷದಿಂದ ಉತ್ತಮ ಕೆಲಸ ಮಾಡುತ್ತಿದೆ. ಹಿರಿಯ ಸಹಕಾರಿ ನರಸಿಂಹ ನಾಯಕ, ನಾಗರಾಜ್ ಶೆಟ್ಟಿ ಸಾರಥ್ಯದಲ್ಲಿ ತಾಲೂಕಿನ ಟಿಎಪಿಸಿಎಂಎಸ್ ರೈತರ ಪರವಾಗಿ ಬೆಳೆದು ನಿಂತಿದೆ. ರಾಜ್ಯದಲ್ಲಿ ಬೃಹತ್ ಸಹಕಾರಿ ಸಂಸ್ಥೆಯಾಗಿ ಮಾದರಿಯಾಗಿದೆ. ಸಂಸ್ಥೆಯ ಅಭಿವೃದ್ಧಿಗೆ ಸಹಕಾರಿ ಭಾರತಿ ತಂಡ ಕೆಲಸ ಮಾಡುತ್ತಿದೆ. ಹೀಗಾಗಿ ಸಹಕಾರ ಭಾರತಿ ತಂಡದ ಅಭ್ಯರ್ಥಿಗಳನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.

ಹಗರಣದ ಕೂಪದಿಂದ ಅಭಿವೃದ್ಧಿಯೆಡೆಗೆ!: ತೀರ್ಥಹಳ್ಳಿ ತಾಲೂಕು ಸೊಸೈಟಿ ಹಿಂದೆ ಹೇಗಿತ್ತು. ಟೇಬಲ್ ಕುರ್ಚಿ ಮಾರಿ ಸಂಬಳ ಕೊಡುವ ಸ್ಥಿತಿ ಇತ್ತು. ಹಗರಣಗಳ ರಾಶಿ ಕೂಡಿಡಲಾಗಿತ್ತು. ಸಾಲಗಳ ಪಟ್ಟಿ ಬೆಳೆದಿತ್ತು. ಪ್ರತಿಷ್ಠೆಗಾಗಿ ಅನೇಕರು ಕುರ್ಚಿಗೆ ಬಂದು ಕೂತಿದ್ದರು. ಹಣ ಹಗರಣದ ದೋಷಾರೋಪ ಇತ್ತು. ನಾನು ಮತ್ತು ಕಡಿದಾಳ್ ದಿವಾಕರ್ ಸೇರಿ ಆಯ್ದ ಸಹಕಾರಿಗಳನ್ನು ಅವಿರೋಧ ಆಯ್ಕೆ ಮಾಡಿದ್ದೆವು. ಬೆನಕ ಭಟ್, ನಾಗರಾಜ್ ಶೆಟ್ಟಿ, ನಾರಾಯಣ ರಾವ್, ಸುಧಾಕರ್ ನಾಕುಂಜಿ ಸೇರಿ ಪಕ್ಷಾತೀತ ಸಹಕಾರಿಗಳ ಕೆಲಸದಿಂದ ಸಹಕಾರಿ ಬೆಳೆಯಿತು ಎಂದು ಆರಗ ಹೇಳಿದರು.


ಅಭಿವೃದ್ಧಿ ಶಕೆ: ತೀರ್ಥಹಳ್ಳಿ ಟಿಎಪಿಸಿಎಂಎಸ್‍ನಿಂದ ಒಳ್ಳೆಯ ಕಲ್ಯಾಣ ಮಂಟಪ ನಿರ್ಮಾಣವಾಗಿದೆ. ಎಸ್ಬಿಐ ಬಿಲ್ಡಿಂಗ್, ಟಿಎಪಿಎಂಸಿಎಸ್ ಮಳಿಗೆ ಲಾಭ ತರುತ್ತಿವೆ. ಬಾಡಿಗೆಯಿಂದಲೇ ಸಿಬ್ಬಂದಿ ಸಂಬಳ ಆಗುತ್ತಿದೆ. ನರಸಿಂಹ ನಾಯಕ ಬಳಿಕ ನಾಗರಾಜ್ ಶೆಟ್ಟರ ಸೇವೆ, ಮಾರ್ಕೆಟ್ ನಿಯಂತ್ರಣ ಸಂಸ್ಥೆಯನ್ನು ಲಾಭದತ್ತ ತಂದು ನಿಲ್ಲಿಸಿದೆ. ಈಗ ನಾಗರಾಜ ಶೆಟ್ಟರ ನಾಯಕತ್ವವನ್ನು ಪಕ್ಷಮೀರಿ ಪ್ರೀತಿ ಮಾಡುತ್ತಾರೆ. ಹೀಗಾಗಿ ಸಹಕಾರಿ ಭಾರತಿ ತಂಡವನ್ನು ತಾವೆಲ್ಲರೂ ಬೆಂಬಲಿಸಲು ಮನವಿ ಮಾಡಿದ್ದಾರೆ.


ಅಭ್ಯರ್ಥಿಗಳು ಯಾರು ಯಾರು?: ಸಹಕಾರ ಭಾರತಿ ತಂಡವನ್ನು ಗೆಲ್ಲಿಸಿ ರೈತರ ಪರ ಕೆಲಸ ಮಾಡಲು ಅವಕಾಶ ಮಾಡಿಕೊಡಬೇಕು. ನ. 5ರಂದು ಎಲ್ಲಾ ಷೇರುದಾರರು ಆಗಮಿಸಿ ನಾಗರಾಜ ಶೆಟ್ಟರ ನಾಯಕತ್ವದಲ್ಲಿ ಸ್ಪರ್ಧೆ ಮಾಡಿರುವ 1. ಗಿರಿಯಪ್ಪ ಗೌಡ ಜೆ(ಸಾಮಾನ್ಯ), 2.ಚಂದ್ರಶೇಖರ್ ಎಂ.ವಿ(ಹಿಂದುಳಿದ ವರ್ಗ ಎ), 3.ನಾಗರತ್ನ ಮುರುಘರಾಜ್( ಮಹಿಳಾ ಮೀಸಲು), 4.ನಾಗರಾಜ ಶೆಟ್ಟಿ(ಸಾಮಾನ್ಯ), 5.ಪವಿತ್ರ ಚಂದ್ರ( ಮಹಿಳಾ ಮೀಸಲು), 8. ಮೋಹನ್ ಟಿ(ಪರಿಶಿಷ್ಟ ಜಾತಿ ಮೀಸಲು), 10.ರಾಜಕಮಲ್ ಎಚ್(ಸಾಮಾನ್ಯ), 14. ಶಿವಕುಮಾರ್ ಕಾನುಕೊಪ್ಪ ಕೆ.ಎಸ್( ಹಿಂದುಳಿದ ಪ್ರವರ್ಗ-ಬಿ) ಈ ಮೇಲ್ಕಂಡ ಅಭ್ಯರ್ಥಿಗಳನ್ನು ಬೆಂಬಲಿಸುವಂತೆ ಆರಗ ಮನವಿ ಮಾಡಿದ್ದಾರೆ.


ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ನಾಯಕರಾದ ನಾಗರಾಜ ಶೆಟ್ಟಿ, ಬಿಜೆಪಿ ಅಧ್ಯಕ್ಷ ರಾಘವೇಂದ್ರ ನಾಯಕ್ ಬಾಳೆಬೈಲು, ಸಹಕಾರ ಭಾರತಿ ಪ್ರಮುಖರಾದ ಕಲ್ಕುಳಿ ಮಹೇಶ್, ಬಸವರಾಜ ಹೊದಲ ಇದ್ದರು.

Categories
ಮಲ್ನಾಡ್

ಗೋಪಾಲ ಗೌಡರಿಗೆ ಮಾಲೆ ಹಾಕಿ ರಾಜ್ಯೋತ್ಸವ!

  • ಸೀಬಿನಕೆರೆ ಎಸ್.ಕೆ.ಫ್ರೆಂಡ್ಸ್ ತಂಡದಿಂದ ಆಯೋಜನೆ

ತೀರ್ಥಹಳ್ಳಿ: ತೀರ್ಥಹಳ್ಳಿಯ ಸಮಾಜವಾದಿ ನಾಯಕ ಶಾಂತವೇರಿ ಗೋಪಾಲಗೌಡ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ತೀರ್ಥಹಳ್ಳಿಯ ಸೀಬಿನಕೆರೆ ಎಸ್.ಕೆ.ಫ್ರೆಂಡ್ಸ್ ಸರಳವಾಗಿ ರಾಜ್ಯೋತ್ಸವ ಆಚರಣೆ ಮಾಡಿದರು.


ಆಸಿಫ್ ಸೀಬಿನಕೆರೆ ನಾಯಕತ್ವದಲ್ಲಿ ಧ್ವಜಾರೋಹಣ ನೆರವೇರಿಸಲಾಯಿತು. ಪ್ರತಿ ವರ್ಷ ಕನ್ನಡ ರಾಜ್ಯೋತ್ಸವ ಸೇರಿ ಒಂದಲ್ಲ ಒಂದು ಜನಪರ ಕಾರ್ಯಕ್ರಮ ಆಯೋಜಿಸುವ ಮೂಲಕ ಸೀಬಿನಕೆರೆ ಎಸ್.ಕೆ.ಫ್ರೆಂಡ್ಸ್ ತಾಲೂಕಿನಲ್ಲೇ ಹೆಸರು ಗಳಿಸಿದೆ.


ಕಾರ್ಯಕ್ರಮದಲ್ಲಿ ಡಿವೈಎಸ್‍ಪಿ ಸಂತೋಷ್, ಯುವ ನಾಯಕ ಕೇಳೂರು ಮಿತ್ರ, ಯುವ ಪತ್ರಕರ್ತ ಅಗ್ನಿಮಿತ್ರ ಹೊಳ್ಳ, ಮಾಜಿ ಪಟ್ಟಣ ಪಂಚಾಯತ್ ಸದಸ್ಯರಾದ ನಯನಾ ಶೆಟ್ಟಿ, ಶಬ್ನಂ, ಆಸಿಫ್ ಸೀಬಿನಕೆರೆ ಹಾಜರಿದ್ದು ಕನ್ನಡ ತಾಯಿಗೆ ನಮನ ಸಲ್ಲಿಸಿದರು.
ಸೀಬಿನಕೆರೆ ಎಸ್.ಕೆ.ಫ್ರೆಂಡ್ಸ್‍ನ ಇದಾಯತ್ ಮೆಜೆಸ್ಟಿಕ್, ಹರೀಶ್, ರಾಘು, ಸಚಿನ್, ಪ್ರಸನ್ನ, ಜಾವಿದ್, ಪ್ರಶಾಂತ್ ಸಾಲಿಯಾನ್, ಶಬರೀಶ್, ಅರುಣ್ ಡಿಸೋಜಾ, ಮೂರ್ತಿ ಗೌಡ, ಸುಬ್ಬಯ್ಯ ಗೌಡ, ಚೇತನ್, ರವೀಶ್ ಸೇರಿದಂತೆ ಎಸ್.ಕೆ.ಫ್ರೆಂಡ್ಸ್‍ನ ಎಲ್ಲಾ ಸದಸ್ಯರು, ಸ್ಥಳೀಯರು ಹಾಜರಿದ್ದರು.

Categories
ಮಲ್ನಾಡ್

ಸ್ಮಶಾನದಲ್ಲೇ ನೇಣಿಗೆ ಶರಣಾದ ವ್ಯಕ್ತಿ!

  • ಕೊಪ್ಪ ತಾಲೂಕಿನ ಜಯಪುರ ಬಳಿ ಘಟನೆ
    ಕುಡಿತದ ಚಟಕ್ಕೆ ತೀರ್ಥಹಳ್ಳಿಯ ಕಾರ್ಮಿಕ ಆತ್ಮಹತ್ಯೆ!

ಕೊಪ್ಪ: ವ್ಯಕ್ತಿಯೊಬ್ಬ ಸ್ಮಶಾನದಲ್ಲೇ ನೇಣಿಗೆ ಶರಣಾದ ಘಟನೆ ಕೊಪ್ಪ ತಾಲೂಕಿನ ಜಯಪುರ ಸಮೀಪದ ಗುಬ್ಬಿಬೈಲು ಎಂಬಲ್ಲಿ ವರದಿಯಾಗಿದೆ.
ಕೊಳೆತ ಸ್ಥಿತಿಯಲ್ಲಿ ಶವ ಪತ್ತೆಯಾಗಿದ್ದು, ಸುಮಾರು 55 ವರ್ಷ ವಯಸ್ಸಿನ ವ್ಯಕ್ತಿ ಎಂದು ಪೊಲೀಸರು ತಿಳಿಸಿದ್ದಾರೆ. ಸೌದೆ ತರಲು ಸ್ಥಳೀಯರು ಹೋಗಿದ್ದಾಗ ಘಟನೆ ಬೆಳಕಿಗೆ ಬಂದಿದೆ. ಕೊಪ್ಪ ಎಸ್ಸೈ ಗುರಣ್ಣ ಮುಂದಿನ ತನಿಖೆ ನಡೆಸುತ್ತಿದ್ದಾರೆ. ಜಯಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಕಾರ್ಮಿಕ ಆತ್ಮಹತ್ಯೆ: ಕರೋನಾ ಸಂಕಷ್ಟದಿಂದ ಎಲ್ಲಾ ಉದ್ಯಮಗಳು ತಲೆಕೆಳಗಾಗಿವೆ. ಉದ್ಯಮ, ವ್ಯವಹಾರ ನಡೆಸುವುದೇ ಕಷ್ಟಕರವಾಗಿದೆ. ಹೀಗಾಗಿ ಎಲ್ಲೆಡೆ ಆತ್ಮಹತ್ಯೆಗಳ ಸರಣಿ ಜನರನ್ನು ಭಯಭೀತರನ್ನಾಗಿಸಿದೆ. ಈ ನಡುವೆ ಕೆಲಸ ಇಲ್ಲದೆ, ಜತೆಗೆ ಕುಡಿತದ ಚಟಕ್ಕೆ ದಾಸನಾದ ಗಾರೆ ಕೆಲಸಗಾರನೊಬ್ಬ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೀರ್ಥಹಳ್ಳಿಯ ಗಾಂಧಿ ನಗರದಲ್ಲಿ ಶನಿವಾರ ರಾತ್ರಿ ಸಂಭವಿಸಿದೆ. ರಾಘವೇಂದ್ರ(ಗುಂಡ) ಮೃತ ವ್ಯಕ್ತಿ. ಸುಮಾರು 42 ವರ್ಷದ ರಾಘವೇಂದ್ರ ಗಾರೆ ಕೆಲಸ ಮಾಡಿಕೊಂಡು ಬದುಕು ನಡೆಸುತ್ತಿದ್ದ. ಮನೆಯಲ್ಲಿ ಕಿರಿಕಿರಿ ಮಾಡುತ್ತಿದ್ದ ಎನ್ನಲಾಗಿದೆ. ಈತ ಮನೆಯ ರೂಮಿನಲ್ಲಿ ನೇಣಿಗೆ ಶರಣಾಗಿದ್ದಾನೆ. ಪತ್ನಿ ಮತ್ತು ಮಕ್ಕಳು ತಾಯಿ ಮನೆಗೆ ಹೋಗಿದ್ದಾಗ ಘಟನೆ ನಡೆದಿದೆ. ತಾಯಿ ಮನೆಯಲ್ಲಿದ್ದರು. ತೀರ್ಥಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Categories
ಅಂತಾರಾಷ್ಟ್ರೀಯ ಸುದ್ದಿ

ದೇಶದಲ್ಲಿ ದಾಖಲೆ ಬರೆದ ಚಳಿ!

  • ದೆಹಲಿಯಲ್ಲಿ 58 ವರ್ಷಗಳಲ್ಲೇ ಅತೀ ಹೆಚ್ಚು ಚಳಿ, ಮಂಜು

ನವ ದೆಹಲಿ: ಒಂದು ಕಡೆ ಕರೋನಾ, ಇನ್ನೊಂದು ಕಡೆ ತಾಪಮಾನ ಏರಿಳಿತ. ಇದು ದೇಶದ ಜನರನ್ನು ಕಂಗೆಡಿಸಿದೆ. ಈ ನಡುವೆ ರಾಜಧಾನಿ ದೆಹಲಿಯಲ್ಲಿ ಚಳಿ ಮತ್ತೆ ದಾಖಲೆ ಬರೆದಿದ್ದು, 58 ವರ್ಷಗಳಲ್ಲೇ ಈ ಅಕ್ಟೋಬರ್ ತಿಂಗಳಲ್ಲಿ ಕನಿಷ್ಠ ತಾಪಮಾನ ದಾಖಲಾಗಿದೆ. ಇದು ಕರೋನಾ ಭಯವನ್ನು ಮತ್ತಷ್ಟು ಹೆಚ್ಚಿಸಿದೆ. ಜೊತೆಗೆ ಬದುಕು ಕಷ್ಟಕರವಾಗಲಿದೆ.
ದೆಹಲಿಯಲ್ಲಿ ಅಕ್ಟೋಬರ್ ತಿಂಗಳಿನಲ್ಲಿ ಸರಾಸರಿ 17.2 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ಇದು 58 ವರ್ಷಗಳಲ್ಲೆ ಅತ್ಯಂತ ಕನಿಷ್ಠ ತಾಪಮಾನವಾಗಿದೆ. ಇದಕ್ಕೂ ಮುನ್ನ 1962ರ ಅಕ್ಟೋಬರ್‍ನಲ್ಲಿ ದೆಹಲಿಯಲ್ಲಿ ಸರಾಸರಿ ಕನಿಷ್ಠ ತಾಪಮಾನ 16.9 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. 1937ರ ಅ.31ರಂದು ಇದುವರೆಗಿನ ಕನಿಷ್ಠ ತಾಪಮಾನ ದಾಖಲೆ ಎನ್ನಲಾಗಿರುವ 9.4 ಡಿಗ್ರಿ ಸೆಲ್ಸಿಯಸ್ ವರದಿಯಾಗಿತ್ತು. ಬಳಿಕ 1994ರಲ್ಲಿ 12.3 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ಬಳಿಕ ಅಂಥಹ ಕನಿಷ್ಠ ತಾಪಮಾನ ದೆಹಲಿಯಲ್ಲಿ ದಾಖಲಾಗಿರಲಿಲ್ಲ. ಆದರೆ ಕಳೆದ ಗುರುವಾರ ನಗರದಲ್ಲಿನ ಕನಿಷ್ಠ ತಾಪಮಾನ 12.5 ಡಿಗ್ರಿ ಸೆಲ್ಸಿಯಸ್‍ಗೆ ದಿಢೀರ್ ಕುಸಿತ ಕಂಡಿತ್ತು. ಡಿಸೆಂಬರ್ ಹೊತ್ತಿಗೆ ಮತ್ತಷ್ಟು ತಾಪಮಾನ ಇಳಿಕೆಯಿಂದಾಗಿ ಸ್ಥಳೀಯರಿಗೆ ಶೀತಗಾಳಿಯ ಪರಿಣಾಮ ಅನಾರೋಗ್ಯ ಹೆಚ್ಚುವ ಆತಂಕವನ್ನು ಆರೋಗ್ಯ ತಜ್ಞರು ವ್ಯಕ್ತಪಡಿಸಿದ್ದಾರೆ. ಮುಂದಿನ ಒಂದು ವಾರದಿಂದ 10 ದಿನಗಳ ಕಾಲ ದೆಹಲಿಯಲ್ಲಿ ಕನಿಷ್ಠ ತಾಪಮಾನ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಇತ್ತ ಕರೋನಾ ಏರಿಕೆಯಾಗುವ ಸಾಧ್ಯತೆಯೂ ಇದೆ.

Categories
ಬೆಂಗಳೂರು

ಕರ್ನಾಟಕ ಕರೋನಾದಲ್ಲಿ ನಂ.2!

  • ಮಹಾರಾಷ್ಟ್ರ ಬಳಿಕ ರಾಜ್ಯಕ್ಕೆ ಸ್ಥಾನ
  • ಕೊಂಚ ಯಾಮಾರಿದರೂ ಅಪಾಯ ಕಟ್ಟಿಟ್ಟಬುತ್ತಿ!

ಬೆಂಗಳೂರು: ವಿಶ್ವದಲ್ಲೇ ಸಾವಿನ ಸಂಖ್ಯೆಯಲ್ಲಿ ನಂ.2 ಸ್ಥಾನ ಗಳಿಸಿದ ಭಾರತ ಎಂಬ ಸುದ್ದಿ ಆತಂಕ ಸೃಷ್ಟಿಸಿರುವಾಗಲೇ ಕರ್ನಾಟಕ ಸೋಂಕಿತರ ಸಂಖ್ಯೆಯಲ್ಲಿ ರಾಜ್ಯ ದೇಶದಲ್ಲಿಯೇ 2ನೇ ಸ್ಥಾನಕ್ಕೆ ಬಂದಿದೆ. ಇದು ರಾಜ್ಯದಲ್ಲಿ ಕರೋನಾ ಇನ್ನು ತನ್ನ ಆರ್ಭಟ ಹೆಚ್ಚಿಸುತ್ತಿರುವ ಲಕ್ಷಣವಾಗಿದೆ.


ಶನಿವಾರ ಕರ್ನಾಟಕದಲ್ಲಿ 3014 ಹೊಸ ಕೋವಿಡ್ ಪ್ರಕರಣ ದಾಖಲಾಗುವ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 8,23,412ಕ್ಕೆ ಏರಿಕೆಯಾಗಿದೆ. ಶನಿವಾರ ರಾಜ್ಯದಲ್ಲಿ 28 ಜನರು ಮಾತ್ರ ಮೃತಪಟ್ಟಿದ್ದಾರೆ. 6 ತಿಂಗಳಿನಲ್ಲಿ ಮೊದಲ ಬಾರಿಗೆ ರಾಜ್ಯದಲ್ಲಿ ಅತಿ ಕಡಿಮೆ ಕೋವಿಡ್ ಸೋಂಕಿತರು ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಇದುವರೆಗೂ 1,11,68 ಜನರು ಮೃತಪಟ್ಟಿದ್ದಾರೆ.ರಾಜ್ಯದಲ್ಲಿ ಅಕ್ಟೋಬರ್ 31ರಂದು 3014 ಹೊಸ ಪ್ರಕರಣ ಪತ್ತೆಯಾಗಿದೆ.
ರಾಜ್ಯದಲ್ಲಿ 7,468 ಜನರು ಗುಣಮುಖರಾಗಿದ್ದಾರೆ. ಇದುವರೆಗೂ ರಾಜ್ಯದಲ್ಲಿ ಗುಣಮುಖರಾದವರ ಸಂಖ್ಯೆ 7,57,208 ಆಗಿದೆ. ದೇಶದಲ್ಲಿ ಕೋವಿಡ್ ಸೋಂಕಿತರು ಹೆಚ್ಚು ಇರುವ ರಾಜ್ಯಗಳಲ್ಲಿ ಮಹಾರಾಷ್ಟ್ರ (16,78,406) ಮೊದಲ ಸ್ಥಾನದಲ್ಲಿದೆ. ಕರ್ನಾಟಕ (8,23,412) 2ನೇ ಸ್ಥಾನದಲ್ಲಿದೆ. ಮೂರನೇ ಸ್ಥಾನದಲ್ಲಿ ಆಂಧ್ರ ಪ್ರದೇಶವಿದ್ದು 8,23,348 ಒಟ್ಟು ಸೋಂಕಿತರಿದ್ದಾರೆ. ಹೀಗಾಗಿ ಕರೋನಾ ಬಗ್ಗೆ ನಿರ್ಲಕ್ಷ್ಯ ಸಲ್ಲದು.