Categories
ಜಿಲ್ಲಾ ವಾರ್ತೆ

ಜೈಲು ಸೇರಿದ ಮುರುಘಾ ಶ್ರೀ..!
-14 ದಿನ ನ್ಯಾಯಾಂಗ ಬಂಧನ: ಚಿತ್ರದುರ್ಗದಲ್ಲಿ ಹೈಅಲರ್ಟ್

  • ಶ್ರೀ ನಡೆದು ಬಂದ ಹಾದಿ.. ಸಮಾಜ ಸೇವೆಯಿಂದ ಚಿತ್ರದುರ್ಗ ಜೈಲಿಗೆ

NAMMUR EXPRESS NEWS
ಚಿತ್ರದುರ್ಗ: ಚಿತ್ರದುರ್ಗದ ಪೊಲೀಸರು, ವಿದ್ಯಾರ್ಥಿನಿಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದ ಹಿನ್ನೆಲೆಯಲ್ಲಿ ಮುರುಘಾ ಶ್ರೀಗಳನ್ನು ಬಂಧಿಸಿದ್ದಾರೆ. ಜೊತೆಗೆ ನ್ಯಾಯಾಲಯ ಸ್ವಾಮೀಜಿಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಿದೆ. ಈ ನಡುವೆ ಚಿತ್ರದುರ್ಗದಲ್ಲಿ ಹೈಅಲರ್ಟ್ ಘೋಷಿಸಲಾಗಿದೆ. ಭಾರೀ ಪೊಲೀಸ್ ಪಹರೆ ಹಾಕಲಾಗಿದೆ.
ಗುರುವಾರ ರಾತ್ರಿ ಚಿತ್ರದುರ್ಗದ ಮಠದಲ್ಲೇ ಸ್ವಾಮೀಜಿಯನ್ನು ಪೊಲೀಸರು ಬಂಧಿಸಿದ್ದಾರೆ. ಒಡನಾಡಿ ಸಂಸ್ಥೆಯಿಂದ ಮಠದ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ಮೈಸೂರಿನ ನಜರಾಬಾದ್ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾದ 7 ದಿನದ ಬಳಿಕ ಮುರುಘಾ ಶ್ರೀಗಳನ್ನು ಬಂಧಿಸಲಾಗಿದೆ.
ರಾತ್ರಿಯೇ ಕೋರ್ಟ್ ಹಾಜರು!: ಮುರುಘಾ ಶರಣರನ್ನು ಬಂಧಿಸಿ ಮಧ್ಯರಾತ್ರಿಯೇ ಚಿತ್ರದುರ್ಗದ 1ನೇ ಹೆಚ್ಚುವರಿ ಸೆಷನ್ಸ್ ಕೋರ್ಟ್ ನ್ಯಾಯಧೀಶರಾದ ಕೋಮಲಾ ಅವರ ಮುಂದೆ ಹಾಜರುಪಡಿಸಲಾಯಿತು. ನ್ಯಾಯಾಧೀಶರು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೊಪ್ಪಿಸುವಂತೆ ಆದೇಶ ನೀಡಿದ ಬಳಿಕ ಮುರುಘಾ ಶರಣರನ್ನು ಚಿತ್ರದುರ್ಗ ಜಿಲ್ಲಾ ಕಾರಾಗೃಹಕ್ಕೆ ಕಳುಹಿಸಲಾಗಿದೆ.

ರಾಜ್ಯದ ಪ್ರಮುಖ ಮಠದಲ್ಲಿ ಒಂದು!

ಚಿತ್ರದುರ್ಗದಲ್ಲಿರುವ ಜಗದ್ಗುರು ಮುರುಘ ರಾಜೇಂದ್ರ ಬೃಹನ್ಮಠವು ಕರ್ನಾಟಕದ ಪ್ರಸಿದ್ಧ ಮಠ. ರಾಜ್ಯದ ಬಹುತೇಕ ಎಲ್ಲ ಜಿಲ್ಲೆಗಳಲ್ಲಿಯೂ ಮಠಕ್ಕೆ ಭಕ್ತರಿದ್ದಾರೆ. ಲಿಂಗಾಯತ ಪರಂಪರೆಯ ಮಠವಾದರೂ ವಿವಿಧ ಜಾತಿ ಮತ್ತು ಧರ್ಮಗಳಲ್ಲಿಯೂ ಪ್ರಭಾವ ಹೊಂದಿದೆ. ಸಮಾಜ ಸುಧಾರಣೆ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಬಹುಕಾಲದಿಂದ ಸಕ್ರಿಯವಾಗಿದ್ದು, ಕರ್ನಾಟಕದ ಅಭಿವೃದ್ಧಿಗೆ ತನ್ನದೇ ಆದ ಕೊಡುಗೆ ಕೊಟ್ಟಿದೆ. 17ನೇ ಶತಮಾನದಲ್ಲಿ ಚಿತ್ರದುರ್ಗದ ಪಾಳಯಗಾರ ಬಿಚ್ಚುಗತ್ತಿ ಭರಮಣ್ಣ ನಾಯಕನ ಆಳ್ವಿಕೆಯ ಅವಧಿಯಲ್ಲಿ ರಾಜಾಶ್ರಯ ಪಡೆದ ಮಠಕ್ಕೆ ನಂತರದ ದಿನಗಳಲ್ಲಿ ಪ್ರತಿ ಆಡಳಿತಗಾರರು ಗೌರವ ಸಲ್ಲಿಸಿದರು.
ಸ್ವಾತಂತ್ರ್ಯ ನಂತರದ ಕರ್ನಾಟಕ ರಾಜಕಾರಣದಲ್ಲಿ ಯಾವುದೇ ಪಕ್ಷವನ್ನು ಅಧಿಕಾರಕ್ಕೆ ತರುವ ಅಥವಾ ಇಳಿಸುವ ಸಾಮರ್ಥ್ಯವನ್ನು ಎನಿಸಿದ ವೀರಶೈವ ಲಿಂಗಾಯತ ಸಮುದಾಯ ಹಲವು ಬಾರಿ ಪ್ರದರ್ಶಿಸಿದೆ. ಇದೇ ಸಮುದಾಯಕ್ಕೆ ಸೇರಿದ ಮಠವನ್ನು ನಿರ್ಲಕ್ಷಿಸಲು ಅಥವಾ ಮೂಲೆಗುಂಪು ಮಾಡಲು ಯಾವೊಂದು ಪಕ್ಷವೂ ಧೈರ್ಯ ಮಾಡಲಿಲ್ಲ. ಆದರೆ ಮಠವು ರಾಜಕಾರಣಕ್ಕಿಂತಲೂ ಹೆಚ್ಚಾಗಿ ಸಾಮಾಜಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದರಿಂದ ಸಹಜವಾಗಿಯೇ ಭಕ್ತಿಯೊಂದಿಗೆ ಜನರು ಗೌರವ, ಪ್ರೀತಿಗಳೂ ದೊರೆತವು.

ಸ್ವಾಮೀಜಿ ಈಗ ಕೈದಿ ನಂ 2261!

ಪೊಕ್ಸೋ ಪ್ರಕರಣದಲ್ಲಿ ಆರೋಪಿಯಾಗಿ ಸ್ವಾಮಿಜಿ ಈಗ ಚಿತ್ರದುರ್ಗ ಜೈಲಿನ ವಿಚಾರಣಾಧೀನ ಕೈದಿ ನಂ 2261.
ಮುರುಘಾ ಮಠದ ಹಾಲಿ ಪೀಠಾಧ್ಯಕ್ಷ ಶಿವಮೂರ್ತಿ ಮುರುಘಾ ಶರಣರ ವಿರುದ್ಧ ಈವರೆಗೆ ಆರೋಪಗಳು ಇರಲಿಲ್ಲ. ಸ್ವಾಮೀಜಿ ಆಪ್ತರಾಗಿದ್ದ ಬಸವರಾಜನ್ ಈ ಹಿಂದೆಯೂ ಹಲವು ಆರೋಪಗಳನ್ನು ಮಾಡಿದ್ದರಾದರೂ, ಪರಿಸ್ಥಿತಿ ವಿಕೋಪಕ್ಕೆ ಹೋಗಿರಲಿಲ್ಲ. ಆದರೆ ಇದೀಗ ಮಠದ ಆಶ್ರಯದಲ್ಲಿದ್ದ ಮಕ್ಕಳೇ ಸ್ವಾಮೀಜಿ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಮಾಡುವುದರೊಂದಿಗೆ ಅವರ ಘನತೆಗೆ ಧಕ್ಕೆ ಬಂದಿದೆ. ಇಂತಹ ಆರೋಪ ಎದುರಿಸುವ ರಾಜ್ಯದ ಹಲವೆಡೆ ಭಕ್ತರು ಒತ್ತಾಯಿಸುತ್ತಿದ್ದಾರೆ.

ಮಠದಲ್ಲೇ ಶಿಷ್ಯರಾಗಿ ಪೀಠ ಅಲಂಕರಿಸಿದರು!

ಚಿತ್ರದುರ್ಗ ತಾಲೂಕಿನ ಗೊಡಬನಾಳ್ ಗ್ರಾಮದಲ್ಲಿ ನವೆಂಬರ್ 4, 1958ರಂದು ಗುರುಮೂರ್ತೆಪ್ಪ – ಮುರುಗೆಮ್ಮ ದಂಪತಿಯ ಮಗನಾಗಿ ಶಿವಮೂರ್ತಿ ಮುರುಘಾ ಶರಣರು ಜನಿಸಿದರು. ಇವರ ಪೋಷಕರು ಮುರುಘಾ ಮಠದ ಭಕ್ತರಾಗಿದ್ದರು. ಬಾಲ್ಯದಲ್ಲೇ ಶಿಕ್ಷಣಕ್ಕಾಗಿ ಮಠದ ಆಶ್ರಯ ದೊರೆಯಿತು. ಮುರುಘಾಮಠದ ಅಂದಿನ ಪೀಠಾಧ್ಯಕ್ಷರಾಗಿದ್ದ ಮಲ್ಲಿಕಾರ್ಜುನ ಮುರುಘ ರಾಜೇಂದ್ರ ಸ್ವಾಮೀಜಿಗೆ ಇವರ ನಡವಳಿಕೆ ಮತ್ತು ಬುದ್ಧಿವಂತಿಕೆ ಇಷ್ಟವಾಯಿತು. ಹೀಗಾಗಿ ಮಠದ ಅಧಿಕಾರ ವಲಯದಲ್ಲಿ ಶಿವಮೂರ್ತಿ ಮುರುಘಾ ಶರಣರು ಹಂತಹಂತವಾಗಿ ಮೇಲೇರುತ್ತಾ ಬಂದರು. 1978ರಲ್ಲಿ ಶಿರಸಿ ರುದ್ರದೇವರ ಮಠದ ಮರಿದೇವರು, 1982ರಲ್ಲಿ ಶಿರಸಿ ರುದ್ರದೇವರ ಮಠದ ಪಟ್ಟಾಧಿಕಾರಿ, 1984ರಲ್ಲಿ ಹಾವೇರಿ ಮಠದ ಪೀಠಾದ್ಯಕ್ಷರಾದರು. ಚಿತ್ರದುರ್ಗ ಮುರುಘಾಮಠದ ಪೀಠಾಧ್ಯಕ್ಷರಾಗಿ ಜನವರಿ 31, 1991ರಲ್ಲಿ ಅಧಿಕಾರ ಸ್ವೀಕರಿಸಿದರು.

ತಳ ಸಮುದಾಯದವರಿಗೂ ನ್ಯಾಯ ಕೊಟ್ಟವರು!

ಕರ್ನಾಟಕದ ಹಲವು ಸಮುದಾಯಗಳಿಗೆ ಗುರುಪೀಠಗಳನ್ನು ಆರಂಭಿಸುವ ಮೂಲಕ ಸಾಮಾಜಿಕ ಕ್ರಾಂತಿಗೆ ಶಿವಮೂರ್ತಿ ಮುರುಘಾ ಶರಣರು ಮುನ್ನುಡಿ ಬರೆದರು. ತಮ್ಮನ್ನು ತಾವು ಜಗದ್ಗುರುಗಳು ಎಂದು ಕರೆಸಿಕೊಳ್ಳಲಿಲ್ಲ. ಶರಣ ಸಂಸ್ಕೃತಿಯ ಪ್ರತೀಕವಾಗಿ ತಮ್ಮನ್ನು ತಾವು ‘ಶರಣ’ ಎಂದೇ ಕರೆದುಕೊಂಡರು. ಬೆಳ್ಳಿಸಿಂಹಾಸನ ಹಾಗೂ ಅಡ್ಡಪಲ್ಲಕ್ಕಿಗಳನ್ನು ತಿರಸ್ಕರಿಸಿ ‘ನಾನು ಸಾಮಾನ್ಯರಲ್ಲಿ ಸಾಮಾನ್ಯ, ಬಸವ ಧರ್ಮದ ಅನುಯಾಯಿ’ ಎಂದು ಘೋಷಿಸಿಕೊಂಡರು. ಜಾತಿ ಭೇದ ಮಾಡದೆ ಸಮಾಜದ ಎಲ್ಲಾ ವರ್ಗದ ಜನರನ್ನು ಮಠದೊಳಗೆ ಕರೆತಂದರು. ಹಲವು ಸಮುದಾಯಗಳಿಗೆ ರಾಜಕೀಯ ಶಕ್ತಿಯನ್ನೂ ತುಂಬಿದರು. ಇವರ ಆಡಳಿತ ಅವಧಿಯಲ್ಲಿ ಮುರುಘಾ ಮಠದ ಪ್ರಭಾವ ಮತ್ತು ಚಟುವಟಿಕೆಗಳು ದೊಡ್ಡಮಟ್ಟದಲ್ಲಿ ಬೆಳೆದವು. ಈ ಬೆಳವಣಿಗೆಯ ಹಿಂದೆ ಬಸವರಾಜನ್ ಅವರ ಪರಿಶ್ರಮ ಮತ್ತು ಆಲೋಚನೆಗಳೂ ಕೆಲಸ ಮಾಡಿದ್ದವು. ಇನ್ನು ದಲಿತ ಕೇರಿಗಳಿಗೆ ತಾವೇ ಹೋದರು.

ಮಠದೊಳಗಿನ ರಾಜಕೀಯವೇ ಕಾರಣವಾಯ್ತಾ..?!

ಬಹುಕಾಲದ ಒಡನಾಡಿಗಳಾಗಿದ್ದ ಬಸವರಾಜನ್ ಹಾಗೂ ಶಿವಮೂರ್ತಿ ಮುರುಘಾ ಶರಣರ ನಡುವೆ 2007ರಲ್ಲಿ ಮೊದಲ ಬಾರಿಗೆ ಭಿನ್ನಾಭಿಪ್ರಾಯ ತಾರಕಕ್ಕೇರಿತ್ತು. ಮಠದ ಹಣ, ಆಸ್ತಿ ಕಬಳಿಕೆ, ವೆಚ್ಚಕ್ಕೆ ಸಂಬಂಧಿಸಿದ ವಿಚಾರಗಳಲ್ಲಿ ಒಬ್ಬರು ಇನ್ನೊಬ್ಬರ ಮಾತು ಕೇಳುವ ಸ್ಥಿತಿಯಲ್ಲಿ ಇರಲಿಲ್ಲ. ತೀವ್ರ ಅಸಮಾಧಾನದಿಂದ 2007ರಲ್ಲಿ ಬಸವರಾಜನ್ ಮಠದಿಂದ ಹೊರ ನಡೆದಿದ್ದರು.
2008ರಲ್ಲಿ ಬಸವರಾಜನ್ ಚಿತ್ರದುರ್ಗ ಕ್ಷೇತ್ರದಿಂದ ಜೆಡಿಎಸ್ ಶಾಸಕರಾಗಿ ಆಯ್ಕೆಯಾದರು. ನಂತರ ಕಳೆದ ಮಾರ್ಚ್ 7ರಂದು ಬಸವರಾಜನ್ ದಿಢೀರ್ ಮಠಕ್ಕೆ ಮರುಪ್ರವೇಶ ಮಾಡಿದ್ದುಮತ್ತೆ ಅವರಿಗೆ ಮಠದ ಆಡಳಿತಾಧಿಕಾರಿ ಹುದ್ದೆ ನೀಡಲಾಯಿತು. ಇಬ್ಬರೂ ಒಗ್ಗೂಡಿ ಮಠದ ಅಭಿವೃದ್ಧಿಗೆ ಶ್ರಮಿಸುವುದಾಗಿ ಘೋಷಿಸಿದರು. ಎಸ್​ಜೆಎಂ ವಿದ್ಯಾಪೀಠದ ಕಾರ್ಯದರ್ಶಿ ಹುದ್ದೆಯನ್ನೂ ಬಸವರಾಜನ್ ಅವರಿಗೆ ನೀಡಲಾಗಿತ್ತು. ಮತ್ತೆ ಇಬ್ಬರ ಸಂಬಂಧದಲ್ಲಿ ಬಿರುಕು ಕಾಣಿಸಿಕೊಂಡಿತ್ತು. ಮಠದ ಹಾಸ್ಟೆಲ್​ನಿಂದ ನಾಪತ್ತೆಯಾದ ಬಾಲಕಿಯರನ್ನು ಬಸವರಾಜನ್ ಬೆಂಗಳೂರಿನಿಂದ ಕರೆತಂದಿದ್ದರು. ಸ್ವಾಮೀಜಿ ವಿರುದ್ಧ ಬಾಲಕಿಯರು ಆರೋಪ ಮಾಡಲು, ಅವರನ್ನು ಮೈಸೂರಿಗೆ ಒಡನಾಡಿ ಸಂಸ್ಥೆಗೆ ತಲುಪಿಸಲು ಬಸವರಾಜನ್ ಅವರೇ ಕಾರಣ ಎನ್ನಲಾಗುತ್ತಿದೆ.

ನಿತ್ಯಾನಂದ ಸೇರಿ ಅನೇಕರು ಜೈಲು ಸೇರಿದ್ದರು!

ರಾಜ್ಯದಲ್ಲಿ ಈ ಹಿಂದೆ ಅತ್ಯಾಚಾರ ಆರೋಪಗಳು ಅನೇಕ ಸ್ವಾಮೀಜಿಗಳ ಬಂದಿದ್ದು ಕೆಲವರು ಜೈಲು ಕೂಡ ಸೇರಿದ್ದರು. ಬಿಡದಿ ಮಠದ ನಿತ್ಯಾನಂದ ವಿರುದ್ಧ ಮಠದ ಭಕ್ತೆಯೇ ದೂರು ನೀಡಿ ಜೈಲು ಸೇರಿದ್ದರು. ಇನ್ನು ರಾಘವೇಶ್ವರ ಶ್ರೀಗಳ ವಿರುದ್ಧವೂ ದೂರು ದಾಖಲಾಗಿತ್ತು.

Categories
ಬೆಂಗಳೂರು

ರಾಜ್ಯಕ್ಕೆ ಸೆ.2ಕ್ಕೆ ಮೋದಿ ಭೇಟಿ

  • ಒಂದೂವರೆ ಲಕ್ಷಕ್ಕೂ ಹೆಚ್ಚು ಜನ ಸೇರುವ ನಿರೀಕ್ಷೆ
  • ಇಂದಿರಾಗಾಂಧಿ ಬಳಿಕ ಪ್ರಧಾನಿ ಮೋದಿ ಮಂಗಳೂರಿಗೆ!

NAMMUR EXPRESS NEWS
ಬೆಂಗಳೂರು: ಶುಕ್ರವಾರ ರಾಜ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಆಗಮಿಸಲಿದ್ದಾರೆ. ಹೀಗಾಗಿ ಮಂಗಳೂರು ನಗರ ಹೊರವಲಯದ ಬಂಗ್ರಕೂಳೂರಿನ ಗೋಲ್ಡ್ ಪಿಂಚ್ ಸಿಟಿ ಮೈದಾನದಲ್ಲಿ ಕಾರ್ಯಕ್ರಮಕ್ಕೆ ಸಿದ್ಧತೆ ನಡೆಯುತ್ತಿದೆ.
ಕಾರ್ಯಕ್ರದಲ್ಲಿ ಒಂದೂವರೆ ಲಕ್ಷಕ್ಕೂ ಹೆಚ್ಚು ಜನ ಸೇರುವ ನಿರೀಕ್ಷೆಯಿದ್ದು, 25 ಎಕರೆ ಪ್ರದೇಶದಲ್ಲಿ ಬೃಹತ್ ಪೆಂಡಾಲ್ ಅಳವಡಿಸಲಾಗುತ್ತಿದೆ. ಶುಕ್ರವಾರ ಮಧ್ಯಾಹ್ನ 12:55ಕ್ಕೆ ವಿಶೇಷ ವಿಮಾನದ ಮೂಲಕ ಕೊಚ್ಚಿಯಿಂದ ಮಂಗಳೂರು ಏರ್‌ಪೋರ್ಟ್‌ಗೆ ಮೋದಿ ಬಂದಿಳಿಯಲಿದ್ದಾರೆ. ಅಲ್ಲಿಂದ ಹೆಲಿಕಾಪ್ಟರ್ ಮೂಲಕ ಎನ್.ಎಂ.ಪಿ.ಎ ಹೆಲಿಪ್ಯಾಡ್‌ಗೆ ಬಂದು ಬಳಿಕ ಸಮಾವೇಶ ನಡೆಯುವ ಸ್ಥಳಕ್ಕೆ ಆಗಮಿಸಲಿದ್ದಾರೆ.
ಇಂದಿರಾ ಗಾಂಧಿ ಬಳಿಕ 40 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಪ್ರಧಾನಿಯೊಬ್ಬರು ಮಂಗಳೂರಿನಲ್ಲಿ ನಡೆಯುತ್ತಿರುವ ಸರ್ಕಾರಿ ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದಾರೆ. ಎನ್‌ಎಂಪಿಟಿ, ಎಂಆರ್ ಪಿ ಎಲ್ ರಾಜ್ಯ ಮೀನುಗಾರಿಕೆ ಇಲಾಖೆಯ ಯೋಜನೆಯ ಶಿಲಾನ್ಯಾಸ, ಲೋಕಾರ್ಪಣೆಯನ್ನು ಪ್ರಧಾನಿ ಮಾಡಲಿದ್ದಾರೆ. ಈ ಎಸ್.ಪಿ.ಜಿ ಅಧಿಕಾರಿಗಳು ಮೂರು ದಿನಗಳಿಂದ ಮಂಗಳೂರಿನಲ್ಲೇ ಮೊಕ್ಕಾಂ ಹೂಡಿದ್ದಾರೆ. ಸಮಾವೇಶಕ್ಕೆ ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳಿಂದ ಕಾರ್ಯಕರ್ತರನ್ನು ಕರೆತರಲು 1461 ಬಸ್, 200 ಟಿಟಿ ಬುಕ್ಕಿಂಗ್ ಮಾಡಲಾಗಿದೆ.

Categories
ಬೆಂಗಳೂರು

ಗಣೇಶ ಉತ್ಸವಕ್ಕೆ ಮಳೆ ಅಡ್ಡಿ!

  • ರಾಜ್ಯದಲ್ಲಿ ಇನ್ನೆರಡು ದಿನ ಗುಡುಗು ಸಹಿತ ಮಳೆ
  • ರಾಜಧಾನಿ ದಾಖಲೆ ಮಳೆ: 1890ರ ಬಳಿಕ ಹೆಚ್ಚು ಮಳೆ
  • ರಾಮನಗರ, ಕೋಲಾರ ಸೇರಿ ಹಲವೆಡೆ ಭಾರೀ ಹಾನಿ
  • ಆಶ್ರಯ ಕೇಂದ್ರದಲ್ಲಿ ಜನರಿಗೆ ಆಶ್ರಯ: ಸಾವಿರಾರು ಕೋಟಿ ಬೆಳೆ ನಾಶ

NAMMUR EXPRESS NEWS
ಬೆಂಗಳೂರು: ಕರ್ನಾಟಕದಾದ್ಯಂತ ಇನ್ನೆರಡು ದಿನ ಭಾರೀ ಮಳೆಯಾಗಲಿದೆ. ಈಗಾಗಲೇ ಕಳೆದೊಂದು ವಾರದಿಂದ ಸುರಿಯುತ್ತಿರುವ ಮಳೆ ರಾಜ್ಯದ ಹಲವೆಡೆಭಾರೀ ಹಾನಿ ಸೃಷ್ಟಿ ಮಾಡಿದೆ.
ರಾಜಧಾನಿ ಬೆಂಗಳೂರಿನಲ್ಲಿ ಕೂಡ ಪ್ರವಾಹದ ಆತಂಕ ಇದೆ. ರಾಜಧಾನಿ ದಾಖಲೆ ಮಳೆಯಾಗಿದ್ದು 1890ರ ಬಳಿಕ ಹೆಚ್ಚು ಮಳೆಯಾಗಿದೆ.
ಕರ್ನಾಟಕದ ಕರಾವಳಿ, ಮಲೆನಾಡು, ಉತ್ತರ ಕರ್ನಾಟಕ ಸೇರಿದಂತೆ ಹಲವು ಭಾಗಗಳಲ್ಲಿ ಸೆ.2ರವರೆಗೂ ಮಳೆ ಸುರಿಯುವ ನಿರೀಕ್ಷೆಯಿದೆ. ಬೆಂಗಳೂರಿನಲ್ಲೂ ಈ ವಾರಪೂರ್ತಿ ಸಂಜೆಯ ಬಳಿಕ ಮಳೆ ಆರ್ಭಟಿಸುವ ಸಾಧ್ಯತೆಯಿದೆ.
ಇನ್ನೆರಡು ದಿನಗಳ ಕಾಲ ಕರ್ನಾಟಕದಲ್ಲಿ ನಿರಂತರ ಮಳೆಯಾಗಲಿದ್ದು, ಬೆಳಗಾವಿ, ಗದಗ, ಬೆಂಗಳೂರು, ಹಾವೇರಿ, ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಧಾರವಾಡ, ಬಳ್ಳಾರಿ, ದಾವಣಗೆರೆ, ಚಿತ್ರದುರ್ಗ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ ಮತ್ತು ರಾಮನಗರ ಜಿಲ್ಲೆಗಳಿಗೆ ಗುರುವಾರ ಹಳದಿ ಅಲರ್ಟ್ ಘೋಷಿಸಲಾಗಿದೆ. ಮುಂದಿನ 24 ಗಂಟೆಗಳಲ್ಲಿ ರಾಜ್ಯದ ಉತ್ತರ ಒಳನಾಡಿನ ಬೆಳಗಾವಿ, ಬೀದರ್, ಕಲಬುರ್ಗಿ, ಯಾದಗಿರಿ ಹಾಗೂ ದಕ್ಷಿಣ ಒಳನಾಡಿನ ಕೊಡಗು, ಚಿಕ್ಕಮಗಳೂರು ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಕರಾವಳಿಯ ಎಲ್ಲಾ ಜಿಲ್ಲೆಗಳ ಮತ್ತು ಮತ್ತು ದಕ್ಷಿಣ ಒಳನಾಡಿನ ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಹಾಸನ, ಮಂಡ್ಯ, ಮೈಸೂರು, ರಾಮನಗರ ಮತ್ತು ಶಿವಮೊಗ್ಗದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ.
ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಉಡುಪಿಯಲ್ಲಿ ಗುರುವಾರ ಗುಡುಗು ಸಹಿತ ಭಾರೀ ಮಳೆಯಾಗಲಿದೆ. ಕರ್ನಾಟಕದ ಕರಾವಳಿ ಭಾಗ ಮತ್ತು ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಭಾರೀ ಮಳೆ ಸುರಿಯಲಿದೆ. ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಕೋಲಾರ, ಚಿಕ್ಕಮಗಳೂರು, ಶಿವಮೊಗ್ಗ, ರಾಮನಗರ ಸೇರಿದಂತೆ ಬಹುತೇಕ ಎಲ್ಲ ಕಡೆಗಳಲ್ಲಿ ಇನ್ನೆರಡು ದಿನ ಜೋರಾಗಿ ಮಳೆ ಅಬ್ಬರಿಸಲಿದೆ. ಈ ಜಿಲ್ಲೆಗಳಿಗೆ ಸೆ. 2ರವರೆಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

Categories
ಜಿಲ್ಲಾ ವಾರ್ತೆ

ಮಾಜಿ ಡಿ.ಸಿ.ಎಂ ಲಕ್ಷ್ಮಣ ಸವದಿ ಕಾರು ಅಪಘಾತ!

  • ಕೂದಲೆಳೆ ಅಂತರದಲ್ಲಿ ಪಾರಾದ ಸವದಿ
  • ವಿಜಯಪುರದಲ್ಲಿ ಅಅಪಘಾತಕ್ಕೆ ಮೂವರು ಬಲಿ
  • ಕಲಬುರಗಿಯ ಚಿಂಚೋಳಿಯಲ್ಲಿ ಭೂಕಂಪನ

NAMMUR EXPRESS NEWS
ಬೆಳಗಾವಿ: ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ ಕಾರು ಅಪಘಾತವಾಗಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಲಕ್ಷ್ಮಣ್ ಸವದಿ ಪಾರಾಗಿದ್ದಾರೆ. ಬೆಳಗಾವಿ ಜಿಲ್ಲೆಯ ಹಾರುಗೇರಿ ಪಟ್ಟಣದ ಹೊರವಲಯದಲ್ಲಿ ಈ ಘಟನೆ ನಡೆದಿದ್ದು ಅಥಣಿಯಿಂದ ಗೋಕಾಕ ಕಡೆಗೆ ಹೋಗುವಾಗ ಈ ಕಾರು ಅಪಘಾತ ನಡೆದಿದೆ. ಲಕ್ಷ್ಮಣ ಸವದಿ ಅವರ ಜತೆಗೆ ಕಾರಿನಲ್ಲಿ ನಾಲ್ಕು ಜನ ಪ್ರಯಾಣಿಸುತ್ತಿದ್ದರು.
ಕಿಯಾ ಕಂಪನಿಯ ಕಾರ್ನಿವಾಲ್ ಲಿಮೋಸಿನ್ ಹೆಸರಿನ ಐಶಾರಾಮಿ ಕಾರು ಇದಾಗಿದ್ದು ಏರ್ ಬ್ಯಾಗ್ ಇದ್ದ ಕಾರಣ ಭಾರಿ ಅನಾಹುತ ತಪ್ಪಿದೆ. ಅಪಘಾತಗೊಂಡು ಕಾರು ಪಲ್ಟಿಯಾದ ಬಳಿಕ ಸನ್ ರೂಪ್ ಮೂಲಕ ಲಕ್ಷ್ಮಣ ಸವದಿ ಹೊರ ಬಂದಿದ್ದಾರೆ. ವಾಹನದಲ್ಲಿ ಇದ್ದ ಲಕ್ಷ್ಮಣ ಸವದಿ,ಆಪ್ತ ಸಹಾಯಕ ಮತ್ತು ಚಾಲಕ ಸೇರಿದಂತೆ ಮೂರು ಜನ ಅಪಾಯದಿಂದ ಪಾರಾಗಿದ್ದಾರೆ.
ಇನ್ನು ಅಪಘಾತದ ಬಳಕ ಲಕ್ಷ್ಮಣ ಸವದಿ ಅವರನ್ನು ಹಾರೂಗೇರಿ ಪಟ್ಟಣದ ಮಲ್ಲಿಕಾರ್ಜುನ ನಾರಗೊಂಡ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು. ಅಪಘಾತದಲ್ಲಿ ಎದೆ ಭಾಗಕ್ಕೆ ಪೆಟ್ಟು ಬಿದ್ದ ಸಂಶಯದ ಹಿನ್ನಲೆಯಲ್ಲಿ ಎಕ್ಸ್ ರೇ ಪರೀಕ್ಷೆ ನಡೆಸಲಾಯಿತು. ಆ ಬಳಿಕ ಲಕ್ಷ್ಮಣ ಸವದಿ ಪುತ್ರ ಚಿದಾನಂದ ಸವದಿ ಮಾದ್ಯಮಗಳಿಗೆ ಸ್ಪಷ್ಟನೆ ನೀಡಿದ್ದಾರೆ.
ಅಪಘಾತಕ್ಕೆ ಮೂವರು ಬಲಿ!: ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲೂಕಿನ ಕುಪಕಡ್ಡಿ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ 218ರಲ್ಲಿ ಅಪಘಾತ ಸಂಭವಿಸಿದ ಅಪಘಾತಕ್ಕೆ ಮೂವರು ಬಲಿಯಾಗಿದ್ದಾರೆ.
ಕಲಬುರಗಿ ಮೂಲದ ಕಿಯಾ ಕಾರಿನಲ್ಲಿದ್ದ 7 ಜನರ ಪೈಕಿ ಇಬ್ಬರು ಮಹಿಳೆಯರು, ಓರ್ವ ಮಗು ಸಾವನ್ನಪ್ಪಿದೆ. ಮತ್ತೊಂದು ಬಲೇನೋ ಕಾರಿನಲ್ಲಿದ್ದ ವಿಜಯಪುರ ಮೂಲದವರಿಗೆ ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ.
ಲಘು ಭೂಕಂಪನ: ಕಲಬುರಗಿ ಜಿಲ್ಲೆಯಲ್ಲಿ ಮತ್ತೆ ಭೂಕಂಪನ ಆಗಿದೆ. ಚಿಂಚೋಳಿ ತಾಲೂಕಿನ ನಾಲ್ಕು ಗ್ರಾಮಗಳಲ್ಲಿ ಭಾರೀ ಶಬ್ಧದೊಂದಿಗೆ ಲಘು ಭೂ ಕಂಪನದ ಅನುಭವವಾಗಿದೆ. ಭಯಭೀತರಾಗಿ ಜನರು ಮನೆಯಿಂದ ಹೊರಗೋಡಿ ಬಂದಿದ್ದಾರೆ. ಬುಧವಾರ ರಾತ್ರಿ 11 ಸುಮಾರಿಗೆ ಭೂಕಂಪಿಸಿದೆ. ಚಿಂಚೋಳಿ ತಾಲೂಕಿನ ಚಿಮ್ಮಾಇದ್ಲಾಯಿ, ದಸ್ತಾಪುರ, ಐಪಿ ಹೋಸಳ್ಳಿ ಹಾಗೂ ಸುಲೇಪೆಟ್‍ನಲ್ಲಿ ಕಂಪನದ ಅನುಭವವಾಗಿದೆ.